Tag: AirCrash

  • ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಪತ್ತೆ – ಹೇಗೆ ಕೆಲಸ ಮಾಡುತ್ತೆ? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಕ್ಯಾಲಿಕಟ್‌: ಕೇರಳ ವಿಮಾನ ದುರಂತ ಪ್ರಕರಣದ ತನಿಖೆ ನಡೆಸುತ್ತಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಅಧಿಕಾರಿಗಳಿಗೆ ಬ್ಲ್ಯಾಕ್‌ ಬಾಕ್ಸ್‌ ಸಿಕ್ಕಿದೆ.

    ದುಬೈನಿಂದ ಹೊರಟಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಟೇಬಲ್‌ಟಾಪ್‌ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಲ್ಯಾಂಡ್‌ ಆಗಿ 35 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ 18 ಮಂದಿ ಮೃತಪಟ್ಟಿದ್ದಾರೆ. 137 ಮಂದಿ ಪ್ರಾಣಾಪಾಯದಿಂದ ಪಾರಾಗಿದ್ದು, 22 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ. ಇಬ್ಬರು ಪೈಲಟ್‌ ಮೃತಪಟ್ಟಿದ್ದು, 4 ಮಂದಿ ವಿಮಾನ ಸಿಬ್ಬಂದಿ ಪಾರಾಗಿದ್ದಾರೆ.

    ಏನಿದು ಬ್ಲ್ಯಾಕ್‌ ಬಾಕ್ಸ್‌?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ. . ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ಹಿಂಭಾಗದಲ್ಲಿ ಯಾಕೆ?
    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.  ಇದನ್ನೂ ಓದಿ: ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು 

    ಎರಡು ಪ್ರತ್ಯೇಕ ಪೆಟ್ಟಿಗೆಗಳಿವೆ
    1. ಫ್ಲೈಟ್ ಡೇಟಾ ರೆಕಾರ್ಡರ್ – ಈ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ಮಾಡಲಾಗುತ್ತದೆ.

    2. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್: ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲಿಸುತ್ತದೆ. ಯಾವುದೇ ಅಪಘಾತ ಸಂಭವಿಸುವ ಮೊದಲು ಎಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್‌ ಧ್ವನಿಯನ್ನು ದಾಖಲಿಸುತ್ತದೆ. ಇದನ್ನೂ ಓದಿ: ವಿಮಾನ ದುರಂತ- ಮೃತಪಟ್ಟವರಲ್ಲಿ ಓರ್ವನಿಗೆ ಕೊರೊನಾ ಪಾಸಿಟಿವ್

    ಹೇಗೆ ಕಾರ್ಯನಿರ್ವಹಿಸುತ್ತದೆ?
    ಇದು ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲಾಕ್‌ ಬಾಕ್ಸ್‌ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್‌ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್‌ ಹೊರ ಸೂಸುತ್ತಿರುತ್ತದೆ.

    ಬಳಕೆ ಆಗಿದ್ದು ಯಾವಾಗ?
    1953-54ರ ವರ್ಷದಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿತ್ತು. ಯಾಕೆ ಈ ಅಪಘಾತಗಳು ಸಂಭವಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲು ಮತ್ತು ಮುಂದೆ ಅಪಘಾತ ತಡೆಯಲು ಬ್ಲ್ಯಾಕ್‌ಬಾಕ್ಸ್‌ ಅನ್ನು ಅಭಿವೃದ್ಧಿ ಪಡಿಸಲಾಯಿತು. ಈ ಮೊದಲು ಇದು ಕೆಂಪು ಬಣ್ಣದ್ದಲ್ಲಿತ್ತು. ಹೀಗಾಗಿ ಇದನ್ನು ʼಕೆಂಪು ಮೊಟ್ಟೆ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಳಿಕ ಬಾಕ್ಸ್‌ ಒಳಗಡೆ ಇರುವ ಗೋಡೆಗಳು ಕಪ್ಪು ಬಣ್ಣದ್ದಲ್ಲಿದ್ದ ಕಾರಣ ಇದನ್ನು ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಯಿತು. ವಿಮಾನ ಅಪಘಾತಕ್ಕೆ ನಿಖರ ಕಾರಣವನ್ನು ಈ ಬ್ಲ್ಯಾಕ್‌ ಬಾಕ್ಸ್‌ ನೀಡದೇ ಇದ್ದರೂ ತನಿಖೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸತ್ಯ.

  • ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಮರಳಿ ಮನೆಗೆ – ಟೇಕಾಫ್‌ ಮೊದಲು ಕುಟುಂಬದೊಂದಿಗೆ ಫೇಸ್‌ಶೀಲ್ಡ್‌ ಹಾಕಿ ಸೆಲ್ಫಿ, ಪ್ರಯಾಣಿಕ ಸಾವು

    ಕ್ಯಾಲಿಕಟ್‌: ಕೊರೊನಾ ವೈರಸ್‌ನಿಂದಾಗಿ ಸ್ವದೇಶ ಬರಲು ಹರಸಾಹಸ ಪಟ್ಟು ಕೊನೆಗೆ ವಂದೇಭಾರತ್‌ ಮಿಷನ್‌ ಅಡಿ ಟಿಕೆಟ್‌ ಪಡೆದು ಕುಟುಂಬದೊಂದಿಗೆ ಕೇರಳಕ್ಕೆ ಬರುತ್ತಿದ್ದ ವ್ಯಕ್ತಿಯೊಬ್ಬರು ವಿಮಾನ ದುರಂತಕ್ಕೆ ಬಲಿಯಾಗಿದ್ದಾರೆ.

    ಕ್ಯಾಲಿಕಟ್‌ ಮೂಲದ 35 ವರ್ಷದ ಶರಫು ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದು ಪತ್ನಿ ಅಮೀನಾ, ಮಗಳು ಈಶಾ ಫಾತಿಮಾ ಜೊತೆ ದುಬೈನಿಂದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ಹತ್ತಿದ್ದರು.

    ವಿಮಾನ ಟೇಕಾಫ್‌ ಆಗುವುದಕ್ಕೆ ಮೊದಲು ಫೇಸ್‌ಶೀಲ್ಡ್‌, ಪಿಪಿಇ ಕಿಟ್‌, ಮುಖಕ್ಕೆ ಮಾಸ್ಕ್‌ ಧರಿಸಿ ಪತ್ನಿ, ಪುತ್ರಿಯ ಜೊತೆ ಸೆಲ್ಫಿ ಕ್ಲಿಕ್‌ ಮಾಡಿ ‘ಮರಳಿ ಮನೆಗೆʼ ಎಂದು ಬರೆದು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದರು.

    ವೈದ್ಯಕೀಯ ತುರ್ತು ಕಾರಣ ನೀಡಿ ಕೊನೆಗೆ ಶರಫು ಕುಟುಂಬಕ್ಕೆ ವಂದೇ ಭಾರತ್‌ ಮಿಶನ್‌ ಅಡಿ ಸ್ವದೇಶಕ್ಕೆ ಬರಲು ಟಿಕೆಟ್‌ ಸಿಕ್ಕಿತ್ತು. ಶರಫು ಪತ್ನಿ ಆರೋಗ್ಯ ಸ್ಥಿರವಾಗಿದ್ದು, ಪುತ್ರಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ ಎಂದು ಅಧಿಕಾರಿಗಳು ಹೇಳಿದ್ದಾರೆ.

    ಶರಫ್‌ ಸ್ನೇಹಿತ ಶಫಿ ಎಂಬವರು ಈ ಪೋಸ್ಟ್‌ಗೆ ಕಮೆಂಟ್‌ ಮಾಡಿ, ಕೇರಳಕ್ಕೆ ಹೋಗುವ ಮೊದಲು ನನ್ನ ಹೋಟೆಲಿಗೆ ಬಂದಿದ್ದ. ಮನಸ್ಸು ಬಹಳ ಗೊಂದಲದಲ್ಲಿತ್ತು. ಮುಂದೆ ಏನೋ ಆಗಬಹುದು ಎಂಬುದರ ಕುರಿತು ಆತನಿಗೆ ನ್ಸೂಚನೆ ಸಿಕ್ಕಿರಬೇಕು ಎಂದು ನಾನು ಭಾವಿಸುತ್ತೇನೆ. ನನಗೆ ಆತ ಹಣವನ್ನು ನೀಡಿ, ಉದ್ಯೋಗವಿಲ್ಲದವರಿಗೆ ಆಹಾರವನ್ನು ನೀಡಲು ಇದನ್ನು ಬಳಸಬೇಕು ಎಂದು ಹೇಳಿದ್ದ. ಕೊರೊನಾ ಸಮಯದಲ್ಲಿ ಶರಫು ಅವರು ಬಡವರಿಗೆ ಹಣ ನೀಡುವ ಮೂಲಕ ಸಹಾಯ ಮಾಡಿದ್ದ ಎಂದು ಬರೆದುಕೊಂಡಿದ್ದಾರೆ.

  • ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    ಮಂಗಳೂರು ದುರಂತದ ಬಳಿಕ ಎಚ್ಚರಿಸಿದ್ದೆ, ಆದ್ರೆ ನಿರ್ಲಕ್ಷಿಸಿದ್ರು – ವಾಯು ಸುರಕ್ಷಾ ತಜ್ಞ

    – ರನ್‌ ವೇ ಬಫರ್‌ ಜೋನ್‌ ಕಡಿಮೆಯಿದೆ
    – ಇದು ಕೊಲೆಗೆ ಸಮನಾದ ಕ್ರಿಮಿನಲ್‌ ಕೃತ್ಯ

    ಚೆನ್ನೈ: ಮಂಗಳೂರು ವಿಮಾನ ದುರಂತದ ಬಳಿಕ ನಾನು ಕಲ್ಲಿಕೋಟೆ ವಿಮಾನ ನಿಲ್ದಾಣದಲ್ಲೂ ಅಪಾಯವಾಗಬಹುದು ಎಂದು ವರದಿಯಲ್ಲಿ ಎಚ್ಚರಿಕೆ ನೀಡಿದ್ದೆ. ಆದರೆ ನನ್ನ ಎಚ್ಚರಿಕೆಯನ್ನು ನಿರ್ಲಕ್ಷಿಸಲಾಯಿತು ಎಂದು ವಾಯು ಸುರಕ್ಷಾ ತಜ್ಞ, ಕ್ಯಾಪ್ಟನ್‌ ಮೋಹನ್‌ ರಂಗನಾಥನ್‌ ಹೇಳಿದ್ದಾರೆ.

    ಕಲ್ಲಿಕೋಟೆ ವಿಮಾನ ದುರಂತದ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಅವರು, ಕಲ್ಲಿಕೋಟೆ ವಿಮಾನ ನಿಲ್ದಾಣ ಟೇಬಲ್‌ ಟಾಪ್‌ ಆಗಿದ್ದು, ರನ್‌ವೇಯ ಬಫರ್‌ ಜೋನ್‌ ಬಹಳ ಕಡಿಮೆಯಿದೆ. ನಿಯಮಗಳ ಪ್ರಕಾರ ರನ್‌ವೇ ಕೊನೆಯಲ್ಲಿ 240 ಮೀಟರ್ ಉದ್ದದ ಬಫರ್‌ ಜೋನ್‌ ಇರಬೇಕು. ಆದರೆ ಇಲ್ಲಿ ಕೇವಲ 90 ಮೀಟರ್‌ ಉದ್ದವಿದೆ. ಇನ್ನೊಂದು ಬದಿಯಲ್ಲಿ 100 ಮೀಟರ್‌ ಇರಬೇಕಿತ್ತು. ಆದರೆ ಇಲ್ಲಿ ಕೇವಲ 75 ಮೀಟರ್‌ ಇದೆ ಎಂದು ಹೇಳಿದರು.

    ವಿಮಾನ ನಿಲ್ದಾಣದಲ್ಲಿ ವಿಮಾನಗಳು ಲ್ಯಾಂಡ್‌ ಆಗುವಾಗ ಏನಾದರೂ ದೋಷ ಉಂಟಾದರೆ ಅಥವಾ ನಿಗದಿತ ಜಾಗದಲ್ಲಿ ಲ್ಯಾಂಡ್‌ ಆಗದೇ ಮುಂದಕ್ಕೆ ಹೋಗಿ ಲ್ಯಾಂಡ್‌ ಆದಾಗ ವಿಮಾನ ರನ್‌ವೇಗಿಂತಲೂ ಮುಂದಕ್ಕೆ ಸಾಗುತ್ತದೆ. ರನ್‌ವೇಗಿಂತಲೂ ವಿಮಾನ ಮುಂದಕ್ಕೆ ಹೋದಾಗ ಅಪಾಯ ಆಗದೇ ಇರಲು ಬಫರ್‌ ಜೋನ್‌ ನಿರ್ಮಿಸಲಾಗುತ್ತದೆ. ಈ ವಲಯವನ್ನು ರನ್‌ವೇ ರೀತಿಯಾಗಿ ನಿರ್ಮಿಸುತ್ತಾರೆ. ಆದರೆ ರನ್‌ವೇಯಲ್ಲಿ ಇರುವಂತೆ ಮಧ್ಯದಲ್ಲಿ ಯಾವುದೇ ಬಿಳಿಯಾದ ಪಟ್ಟಿಗಳು ಇರುವುದಿಲ್ಲ.

    ಮಳೆ ಬಂದಾಗ ಟೇಬಲ್‌ ಟಾಪ್‌ ವಿಮಾನ ನಿಲ್ದಾಣದಲ್ಲಿ ಇಳಿಸಲು ಸರಿಯಾದ ಮಾರ್ಗಸೂಚಿಗಳು ಇಲ್ಲ. ಈ ಕಾರಣಕ್ಕೆ ಈ ರೀತಿಯ ಘಟನೆಗಳು ಸಂಭವಿಸುತ್ತದೆ. ರನ್‌ವೇಯಲ್ಲಿ ಯಾವುದೇ ಸುರಕ್ಷತಾ ಜಾಗವಿಲ್ಲ. 9 ವರ್ಷದದ ಹಿಂದೆಯೇ ಈ ಬಗ್ಗೆ ವರದಿ ನೀಡಿ ಎಚ್ಚರಿಕೆ ನೀಡಿದ್ದೆ. ಆದರೆ ಅವರು ವಿಮಾನ ನಿಲ್ದಾಣಕ್ಕೆ ಯಾವುದೇ ಅಪಾಯವಿಲ್ಲ. ಸುರಕ್ಷಿತವಾಗಿದೆ ಎಂದು ಹೇಳಿದರು ಎಂದು ರಂಗನಾಥನ್‌ ತಿಳಿಸಿದರು.

    ಇಲ್ಲಿ ದುರಂತ ಸಂಭವಿಸಿ ಸಾವನ್ನಪ್ಪಿದ್ದರೆ ಇದು ಕೊಲೆಗೆ ಸಮನಾದ ಕ್ರಿಮಿನಲ್‌ ಕೃತ್ಯ. ಈ ವಿಮಾನ ನಿಲ್ದಾಣ ಎರಡು ಬದಿಗಳಲ್ಲಿ 200 ಅಡಿ ಆಳದ ಕಣಿವೆಯಿದೆ. ವಿಮಾನಯಾನ ಸಂಸ್ಥೆಗಳು ಇಲ್ಲಿ ಕುರುಡಾಗಿ ವರ್ತಿಸುತ್ತದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ(ಡಿಜಿಸಿಎ) ಈ ಬಗ್ಗೆ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದರು.

    ಎತ್ತರ ಪ್ರದೇಶದಲ್ಲಿ ಇರುವ ಕಾರಣ ಅಪಾಯವಾಗಬಹುದು ಎಂಬ ಕಾರಣಕ್ಕೆ ಕೆಲ ಅಂತರಾಷ್ಟ್ರೀಯ ವಿಮಾನಯಾನ ಕಂಪನಿಗಳು ಇಲ್ಲಿ ದೊಡ್ಡ ವಿಮಾನಗಳ ಲ್ಯಾಂಡಿಂಗ್‌ ನಿಲ್ಲಿಸಿದ್ದವು. ಬೋಯಿಂಗ್‌ 777, ಏರ್‌ಬಸ್‌ ಎ330ಗಳು ರನ್‌ವೇ ಕಡಿಮೆಯಿದೆ ಎಂಬ ಕಾರಣ ನೀಡಿ ಈ ವಿಮಾನಗಳ ಸೇವೆಯನ್ನು ಸ್ಥಗಿತಗೊಳಿಸಿದ್ದವು.

    ಕಲ್ಲಿಕೋಟೆ ರನ್‌ವೇ 2,860 ಮೀಟರ್‌ ಉದ್ದವಿದೆ. ದೇಶದಲ್ಲಿ ಅತಿ ಉದ್ದವಿರುವ ದೆಹಲಿ ವಿಮಾನ ನಿಲ್ದಾಣದ ರನ್‌ವೇ 4,430 ಮೀಟರ್‌ ಉದ್ದವಿದೆ. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

  • ನಮ್ಮನ್ನು ಬದುಕಿಸಿ ಅವರು ಪ್ರಾಣ ತ್ಯಾಗ ಮಾಡಿದರು- ಪೈಲಟ್ ಶ್ಲಾಘಿಸಿದ ಪ್ರಯಾಣಿಕರು

    ನಮ್ಮನ್ನು ಬದುಕಿಸಿ ಅವರು ಪ್ರಾಣ ತ್ಯಾಗ ಮಾಡಿದರು- ಪೈಲಟ್ ಶ್ಲಾಘಿಸಿದ ಪ್ರಯಾಣಿಕರು

    ತಿರುವನಂತಪುರಂ: ಕೇರಳದ ಕೋಯಿಕ್ಕೋಡ್ ಕರಿಪುರ ವಿಮಾನ ನಿಲ್ದಾಣದಲ್ಲಿ ನಡೆದ ದುರಂತದಲ್ಲಿ ಬದುಕುಳಿದ ಪ್ರಯಾಣಿಕರು ಪೈಲಟ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ.

    ಶುಕ್ರವಾರ ರಾತ್ರಿ ನಡೆದ ಈ ದುರ್ಘಟನೆಯಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವಗಳನ್ನು ಕಾಪಾಡಿದರು. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆಯೇ ಆಗುವ ಅನಾಹುತ ತಪ್ಪಿಸಿ ನಮ್ಮನ್ನು ಉಳಿಸುವ ಮೂಲಕ ತಮ್ಮ ಪ್ರಾಣ ತ್ಯಾಗ ಮಾಡಿದರು ಎಂದು ಏರ್ ಇಂಡಿಯಾ ಪ್ರಯಾಣಿಕರು ಪೈಲಟ್ ಅನ್ನು ಶ್ಲಾಫಿಸಿದರು.

    ಧೈರ್ಯಶಾಲಿ ಪೈಲಟ್ ಹಾಗೂ ಸ್ಥಳೀಯ ನಿವಾಸಿಗಳು ನಡೆಯುತ್ತಿದ್ದ ಭಾರೀ ದುರಂತವನ್ನು ತಪ್ಪಿಸಿದ್ದಾರೆ. ವಿಮಾನ ಅಪಘಾತಕ್ಕೀಡಾದ ಕೂಡಲೇ ಜನರು ಸ್ಥಳಕ್ಕೆ ದೌಡಾಯಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದುರಂತದಲ್ಲಿ ಬದುಕುಳಿದವರು ತಿಳಿಸಿದ್ದಾರೆ. ಇದನ್ನೂ ಓದಿ: ಏರ್ ಇಂಡಿಯಾ ವಿಮಾನ ಇಬ್ಭಾಗವಾದ್ರೂ ಬದುಕುಳಿದ ಪುಟ್ಟ ಕಂದಮ್ಮ

    ಭಾರೀ ಮಳೆಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಹವಾಮಾನ ಕೆಟ್ಟದಾಗಿದೆ ಎಂದು ಪೈಲಟ್ ವಿಮಾನವನ್ನು ಇಳಿಸುವ ಮೊದಲೇ ಎಚ್ಚರಿಕೆ ನೀಡಿದ್ದರು. ಅಲ್ಲದೆ ಎರಡು ಬಾರಿ ಸುರಕ್ಷಿತವಾಗಿ ವಿಮಾನವನ್ನು ಇಳಿಸಲು ಪ್ರಯತ್ನಿಸಿದರೂ ನಿಯಂತ್ರಣ ಕಳೆದುಕೊಂಡರು. ಪರಿಣಾಮ ರನ್ ವೇ ಯಿಂದ ಜಾರಿ 33 ಅಡಿ ಕಂದಕಕ್ಕೆ ಜಾರಿ ಎರಡು ಭಾಗವಾಯಿತು ಎಂದು ದುರಂತದಲ್ಲಿ ಸಣ್ಣಪುಟ್ಟ ಗಾಯಗೊಂಡವರು ತಿಳಿಸಿದರು.

    ಘಟನೆಯಲ್ಲಿ ಇಬ್ಬರು ಪೈಲಟ್ ಸೇರಿ ಕನಿಷ್ಠ 20 ಮಂದಿ ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. 100ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಯಾಣಿಕರೆಲ್ಲರೂ ಕೊರೊನಾ ವೈರಸ್‍ನಿಂದಾಗಿ ದುಬೈನಲ್ಲಿ ಸಿಲುಕಿದವರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರನ್ನು ಹೊತ್ತು ಏರ್ ಇಂಡಿಯಾ ವಿಮಾನ ಕರಿಪುರ ವಿಮಾನ ನಿಲ್ದಾಣ ತಲುಪುತ್ತಿದ್ದಂತೆಯೇ ರನ್ ವೇಯಿಂದ ಜಾರಿ 33 ಅಡಿ ಕಂದಕಕ್ಕೆ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ.

    1981ರಲ್ಲಿ ವಾಯಪಡೆಗೆ ಸೇರಿದ್ದ ಪೈಲಟ್ ದೀಪಕ್ ವಸಂತ್ ಸಾಠೆ(59) 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್‍ಎಎಲ್‍ನಲ್ಲಿ ಇರುವ ಏರ್ ಏರ್ ಫೋರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್ ಲೀಡರ್ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು. ಇದನ್ನೂ ಓದಿ: ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಗ್‌ಗೆ ಪ್ರಯತ್ನಿಸಿದ್ರು

    ಸುತ್ತಲೂ ಆಳ ಕಣಿವೆ ಇದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. 2010ರಲ್ಲಿ ಮಂಗಳೂರಿನಲ್ಲಿ ಕೂಡ ಇದೇ ರೀತಿ ವಿಮಾನ ದುರಂತ ಸಂಭವಿಸಿದ 158 ಮಂದಿ ಮೃತಪಟ್ಟಿದ್ದರು. ಈ ಮೂಲಕ ಇದೀಗ ಟೇಬಲ್ ಟಾಪ್ ವಿಮಾನ ನಿಲ್ದಾಣದಲ್ಲಿ ನಡೆದ ಎರಡನೇ ದುರಂತ ಇದಾಗಿದೆ.

  • ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    ಯುದ್ಧವಿಮಾನವನ್ನು ಹಾರಿಸಿದ್ದ ಪೈಲಟ್‌ ಸಾಠೆ 2 ಬಾರಿ ಲ್ಯಾಂಡಿಂಗ್‌ಗೆ ಪ್ರಯತ್ನಿಸಿದ್ರು

    – ರಾಷ್ಟ್ರಪತಿಯಿಂದ ಚಿನ್ನದ ಪದಕ
    – 30 ವರ್ಷಗಳ ಅಪಘಾತ ರಹಿತ ಚಾಲನೆ

    ಕಲ್ಲಿಕೋಟೆ: ಲ್ಯಾಂಡಿಂಗ್‌ ವೇಳೆ ರನ್‌ವೇಯಿಂದ ಜಾರಿ 2 ತುಂಡಾದ ವಿಮಾನವನ್ನು ಹಾರಿಸುತ್ತಿದ್ದ ಪೈಲಟ್‌ ದೀಪಕ್‌ ವಸಂತ ಸಾಠೆ ಯುದ್ಧ ವಿಮಾನಗಳ ಹಾರಾಟದ ಅನುಭವವನ್ನು ಪಡೆದಿದ್ದರು.

    ಹೌದು. ದುಬೈಯಿಂದ 184 ಪ್ರಯಾಣಿಕರನ್ನು ಕರೆತರುತ್ತಿದ್ದ ಏರ್‌ಇಂಡಿಯಾ ಎಕ್ಸ್‌ ಪ್ರೆಸ್‌ ವಿಮಾನವನ್ನು ದೀಪಕ್‌ ವಸಂತ ಸಾಠೆ ಎರಡು ಬಾರಿ ವಿಮಾನ ನಿಲ್ದಾಣಕ್ಕೆ ಸುತ್ತು ಹೊಡೆಸಿದ್ದರು. ಆದರೆ ಪ್ರತಿಕೂಲ ಹವಾಮಾನದ ಸಮಸ್ಯೆಯ ಮಧ್ಯೆಯೂ ವಿಮಾನವನ್ನು ಟೇಬಲ್‌ ಟಾಪ್‌ ರನ್‌ವೇಯಲ್ಲಿ ಇಳಿಸಿದರೂ ಅದು 35 ಅಡಿ ಕಂದಕಕ್ಕೆ ಜಾರಿ ಬಿದ್ದು ಗೋಡೆಗೆ ಡಿಕ್ಕಿ ಹೊಡೆದು ಇಬ್ಭಾಗವಾಗಿದೆ.

    ಪುಣೆಯ ನ್ಯಾಷನಲ್‌ ಡಿಫೆನ್ಸ್‌ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾಗಿದ್ದ ಸಾಠೆ ಮಿಗ್‌ 21 ಯುದ್ಧವಿಮಾನವನ್ನು ಹಾರಿಸಿದ್ದರು. ವಾಯುಪಡೆಯಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ್ದಕ್ಕೆ ಅವರಿಗೆ ರಾಷ್ಟ್ರಪತಿಯಿಂದ ಚಿನ್ನದ ಪದಕ ಸಹ ಸಿಕ್ಕಿತ್ತು. ಹೈದರಾಬಾದ್‌ನಲ್ಲಿರುವ ಏರ್‌ಫೋರ್ಸ್‌ ಅಕಾಡೆಮಿಯಲ್ಲಿದ್ದಾಗ ಅವರು ಸ್ವಾರ್ಡ್‌ ಆಫ್‌ ಆನರ್‌ ಅನ್ನು ತಮ್ಮ ಮುಡಿಗೇರಿಸಿಕೊಂಡಿದ್ದರು.

    1981ರಲ್ಲಿ ವಾಯಪಡೆಗೆ ಸೇರಿದ್ದ ಸಾಠೆ 22 ವರ್ಷಗಳ ಕಾಲ ವಾಯುಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಬೆಂಗಳೂರಿನ ಎಚ್‌ಎಎಲ್‌ನಲ್ಲಿ ಇರುವ ಏರ್‌ ಪೋರ್ಸ್‌ ಟ್ರೈನಿಂಗ್‌ ಅಕಾಡೆಮಿಯಲ್ಲಿ ತರಬೇತಿ ನೀಡುತ್ತಿದ್ದರು. ಸ್ಕ್ವಾಡ್ರನ್‌ ಲೀಡರ್‌ ಆಗಿ ನಿವೃತ್ತಿ ಪಡೆದ ಬಳಿಕ ನಾಗರಿಕ ವಿಮಾನ ಸೇವೆಗೆ ಸೇರ್ಪಡೆಯಾಗಿದ್ದರು.

    ಬೋಯಿಂಗ್‌ 737 ವಿಮಾನಗಳ ಹಾರಾಟದಲ್ಲಿ ಅಪಾರ ಅನುಭವ ಹೊಂದಿದ್ದ ಇವರು 30 ವರ್ಷಗಳ ಕಾಲ ಅಪಘಾತರಹಿತ ಪೈಲಟ್‌ ಆಗಿ ಗುರುತಿಸಿಕೊಂಡಿದ್ದರು. ಮುಂಬೈ ನಿವಾಸಿಯಾಗಿದ್ದ ಇವರು ಕಳೆದ 18 ವರ್ಷಗಳಿಂದ ಏರ್‌ ಇಂಡಿಯಾದಲ್ಲಿ ಪೈಲಟ್‌ ಆಗಿದ್ದರು. ಏರ್‌ ಇಂಡಿಯಾದಲ್ಲಿ ಸೇವೆಗೆ ಸೇರಿದ ನಂತರ ಅವರು ಏರ್‌ಬಸ್‌310 ಗಳ ಹಾರಾಟವನ್ನು ಯಶಸ್ವಿಯಾಗಿ ನಡೆಸಿದ್ದರು.

    ಸಾಠೆ ಅವರಿಗೆ ಇಬ್ಬರು ಪುತ್ರರಿದ್ದು, ಒಬ್ಬರು ಬೆಂಗಳೂರಿನಲ್ಲಿದ್ದರೆ ಇನ್ನೊಬ್ಬರು ಅಮೆರಿಕದಲ್ಲಿದ್ದಾರೆ. ಶೀಘ್ರವೇ ಇವರು ಕಲ್ಲಿಕೋಟೆಗೆ ತಲುಪಲಿದ್ದಾರೆ ಎಂದು ವರದಿಯಾಗಿದೆ.

    ಸುತ್ತಲೂ ಆಳ ಕಣಿವೆಯಿ ಇದ್ದು, ಬೆಟ್ಟದ ತುದಿಯಲ್ಲಿ ರನ್ ವೇ ಇರುವ ನಿಲ್ದಾಣಗಳನ್ನು ಟೇಬಲ್ ಟಾಪ್ ವಿಮಾನ ನಿಲ್ದಾಣ ಎಂದು ಗುರುತಿಸಲಾಗುತ್ತದೆ. ಈ ರೀತಿಯ ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಸುವುದು ಬಹಳ ಸವಾಲಿನ ಕೆಲಸ. ಕಲ್ಲಿಕೋಟೆ ದುರ್ಘಟನೆಯಲ್ಲಿ 19 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ.