Tag: aircraft

  • ಫಿಲಿಪೈನ್ಸ್ ಮಿಲಿಟರಿ ವಿಮಾನ ದುರಂತ – 29 ಜನ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

    ಫಿಲಿಪೈನ್ಸ್ ಮಿಲಿಟರಿ ವಿಮಾನ ದುರಂತ – 29 ಜನ ಸಾವು, 40ಕ್ಕೂ ಹೆಚ್ಚು ಜನರಿಗೆ ಗಾಯ

    – ಸೈನಿಕರನ್ನು ಬೇರೆಡೆ ಸಾಗಿಸುವಾಗ ಅವಘಡ

    ಮನಿಲಾ: ಸೈನಿಕರನ್ನು ಸ್ಥಳಾಂತರ ಮಾಡುವಾಗ ಫಿಲಿಪೈನ್ ಮಿಲಿಟರಿ ವಿಮಾನ ಅಪಘಾತಕ್ಕೀಡಾಗಿದ್ದು, 29 ಜನ ಸಾವನ್ನಪ್ಪಿದ್ದಾರೆ. 40ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಫಿಲಿಪೈನ್ಸ್‍ನ ಸುಲುನ ಜೊಲೊ ದ್ವೀಪದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವ ಅವಘಡ ಸಂಭವಿಸಿದೆ. ವಿಮಾನದಲ್ಲಿ ಒಟ್ಟು 92 ಜನ ಪ್ರಯಾಣಿಸುತ್ತಿದ್ದರು. ಸಿ-130 ಹೆರ್ಕುಲೆಸ್ ಟ್ರಾನ್ಸ್ ಪೋರ್ಟ್ ವಿಮಾನದ ಮೂಲಕ ಸೈನಿಕರನ್ನು ಸ್ಥಳಾಂತರಿಸಲಾಗುತ್ತಿತ್ತು. ಸುಲುನ ಜೊಲೊ ದ್ವೀಪದಲ್ಲಿ ವಿಮಾನವನ್ನು ಲ್ಯಾಂಡ್ ಮಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. 40 ಜನರು ಗಾಯಗೊಂಡಿದ್ದು, 17 ಜನರ ದೇಹವನ್ನು ಹೊರ ತೆಗೆಯಲಾಗಿದೆ ಎಂದು ರಕ್ಷಣಾ ಕಾರ್ಯದರ್ಶಿ ಡೆಲ್ಫಿನ್ ಲೊರೆಂಜಾನಾ ತಿಳಿಸಿದ್ದಾರೆ.

    ವಿಮಾನ ಸಂಪೂರ್ಣವಾಗಿ ಧ್ವಂಸಗೊಂಡಿದ್ದು, ತೀವ್ರಗತಿಯಲ್ಲಿ ಬೆಂಕಿ ಹೊತ್ತಿಕೊಂಡಿದೆ. ಅಪಘಾತವಾದ ಸ್ಥಳದ ಸುತ್ತ ದಟ್ಟ ಹೊಗೆ ಆವರಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳು ವೈರಲ್ ಆಗಿವೆ.

    ಸಶಸ್ತ್ರ ಪಡೆಯ ಮುಖ್ಯಸ್ಥರಾದ ಜನರಲ್ ಸಿರಿಲಿಟೊ ಸೊಬೆಜಾನಾ ಈ ಕುರಿತು ವಿವರಿಸಿದ್ದು, ದಕ್ಷಿಣ ದ್ವೀಪ ಮಿಂಡಾನಾವೊದ ಕಾಗಾಯನ್ ಡಿ ಓರೊದಿಂದ ವಿಮಾನದ ಮೂಲಕ ಸೈನಿಕರನ್ನು ಸ್ಥಳಾಂತರಿಸಲಾಗುತ್ತಿತ್ತು. ಜೊಲೊದಲ್ಲಿ ವಿಮಾನ ಲ್ಯಾಂಡ್ ಆಗುತ್ತಿದ್ದಾಗ ರನ್ ವೇ ತಪ್ಪಿದೆ. ಹೀಗಾಗಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದಾರೆ.

    ಈ ವೇಳೆ ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಲು ಯತ್ನಿಸಲಾಯಿತು, ಆದರೆ ಸಾಧ್ಯವಾಗಲಿಲ್ಲ. ಅಂತ್ಯಂತ ದುರದೃಷ್ಟಕರ ಘಟನೆ. ರಕ್ಷಣಾ ಕಾರ್ಯಚರಣೆ ಪ್ರಗತಿಯಲ್ಲಿದ್ದು, ಹೆಚ್ಚಿನ ಜೀವಗಳನ್ನು ಉಳಿಸಲು ಪಾರ್ಥಿಸುತ್ತಿದ್ದೇವೆ. ರಕ್ಷಣೆ ಮಾಡಿದ 40 ಜನರಿಗೆ ಹತ್ತಿರದ 11ನೇ ಇನ್‍ಫ್ಯಾಂಟ್ರಿ ಡಿವಿಶನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಅವಘಡಕ್ಕೆ ನಿರ್ದಿಷ್ಟ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುವುದು. ಸದ್ಯ ನಾವು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದೇವೆ ಎಂದು ಲೆಫ್ಟಿನೆಂಟ್ ಕರ್ನಲ್ ಮೇನಾರ್ಡ್ ಮರಿಯಾನೊ ಮಾಹಿತಿ ನೀಡಿದ್ದಾರೆ.

    ಬಹುತೇಕರು ಬೇಸಿಕ್ ಮಿಲಿಟರಿ ತರಬೇತಿ ಪಡೆದ ಪದವೀಧರರಾಗಿದ್ದಾರೆ. ಭಯೋತ್ಪಾದನೆ ಹೆಚ್ಚಿರುವ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ವಿರುದ್ಧ ಹೋರಾಡುವ ಜಂಟಿ ಕಾರ್ಯಪಡೆಯ ಭಾಗವಾಗಿ ರೆಸ್ಟಿವ್ ದ್ವೀಪಕ್ಕೆ ಸೈನಿಕರನ್ನು ನಿಯೋಜಿಸಲಾಗಿತ್ತು ಎಂದು ಮರಿಯಾನೊ ತಿಳಿಸಿದ್ದಾರೆ.

  • 100 ಮಂದಿ ಪ್ರಯಾಣಿಕರಿದ್ದ ವಿಮಾನ ಅಪಹರಣದ ಸಂಚು ವಿಫಲ

    100 ಮಂದಿ ಪ್ರಯಾಣಿಕರಿದ್ದ ವಿಮಾನ ಅಪಹರಣದ ಸಂಚು ವಿಫಲ

    ಟೆಹರಾನ್: 100 ಮಂದಿ ಪ್ರಯಾಣಿಕರಿದ್ದ ಇರಾನ್ ವಿಮಾನವನ್ನು ಅಪಹರಿಸಲು ರೂಪಿಸಿದ್ದ ಸಂಚು ವಿಫಲವಾಗಿದೆ.

    ಅಹ್ವಾಜ್‍ನಿಂದ ಮಷಾದ್‍ಗೆ ತೆರಳುತ್ತಿದ್ದ ವಿಮಾನವನ್ನು ಅಪಹರಿಸಲು ಸಂಚು ರೂಪಿಸಿದ್ದ ವ್ಯಕ್ತಿಯನ್ನು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾಪ್ರ್ಸ್(ಐಆರ್‌ಜಿಸಿ) ಬಂಧಿಸಿದೆ.

     

    ಆರೋಪಿ ವಿಮಾನವನ್ನು ಅಪಹರಿಸಿ ಪರ್ಷಿಯನ್ ಕೊಲ್ಲಿಯ ದಕ್ಷಿಣ ತೀರದಲ್ಲಿ ಇಳಿಸಲು ಮುಂದಾಗಿದ್ದ. ಆತನ ಬಳಿ ಇದ್ದ ಪಿಸ್ತೂಲ್ ಅನ್ನು ವಶ ಪಡಿಸಿಕೊಳ್ಳಲಾಗಿದೆ.

    ವಿಮಾನವನ್ನು ಇಸ್ಫಾಹಾನ್ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ಪ್ರಯಾಣಿಕರೆಲ್ಲರೂ ರಕ್ಷಿಸಲಾಗಿದೆ. ಪ್ರಯಾಣಿಕರಿಗೆ ಮತ್ತೊಂದು ವಿಮಾನಯಾನ ವ್ಯವಸ್ಥೆಯನ್ನು ಕಲ್ಪಿಸಿಕೊಡಲಾಗಿದೆ. ಸದ್ಯ ಘಟನೆ ಕುರಿತಂತೆ ಐಆರ್‌ಜಿಸಿ ತನಿಖೆ ನಡೆಸಲಾರಂಭಿಸಿದೆ.

  • ಹೆದ್ದಾರಿಯಲ್ಲೇ ಲ್ಯಾಂಡ್ ಆದ ಎನ್‍ಸಿಸಿ ವಿಮಾನ

    ಹೆದ್ದಾರಿಯಲ್ಲೇ ಲ್ಯಾಂಡ್ ಆದ ಎನ್‍ಸಿಸಿ ವಿಮಾನ

    ನವದೆಹಲಿ: ತಾಂತ್ರಿಕ ತೊಂದರೆಯಿಂದಾಗಿ ಎನ್‍ಸಿಸಿಯ ಲಘು ಟ್ರೈನಿಂಗ್ ವಿಮಾನವೊಂದು ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್ ಆಗಿದೆ.

    ಈ ಘಟನೆ ಇಂದು ಮಧ್ಯಾಹ್ನ ನಡೆದಿದ್ದು, ಎನ್‍ಸಿಸಿಯ ಲಘು ತರಬೇತಿ ವಿಮಾನವೊಂದು ದೆಹಲಿಯ ಗಾಜಿಯಾಬಾದ್‍ನ ಸದಾರ್ಪುರ್ ಗ್ರಾಮದ ಸಮೀಪದ ಪೆರಿಫೆರಲ್ ಎಕ್ಸ್ ಪ್ರೆಸ್ ಹೈವೇ ಬಳಿ ತುರ್ತು ಭೂಸ್ಪರ್ಶ ಮಾಡಿದೆ. ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಲಘು ವಿಮಾನವನ್ನು ದೆಹಲಿ ಸಮೀಪದ ಹೆದ್ದಾರಿ ಮೇಲೆಯೇ ತುರ್ತು ಲ್ಯಾಂಡ್ ಮಾಡಲಾಗಿದೆ ಎನ್ನಲಾಗಿದೆ.

    ಲಘು ವಿಮಾನದ ಮುಂಭಾಗದಲ್ಲಿ ಎನ್‍ಸಿಸಿ (ನ್ಯಾಷನಲ್ ಕೆಡೆಟ್ ಕಾಪ್ರ್ಸ್)ಯ ಚಿಹ್ನೆ ಇರುವುದು ಕಂಡುಬಂದಿದೆ. ಲಘು ವಿಮಾನದ ಎಡಭಾಗದ ರೆಕ್ಕೆ ಮುರಿದ ಹೋದ ಕಾರಣ ಹೀಗೆ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನದಲ್ಲಿದ್ದ ಪೈಲಟ್ ಪ್ರಾಣಾಪಾಯದಿಂದ ಪಾರಾಗಿದ್ದು, ಭಾರತೀಯ ವಾಯುಪಡೆ ಪೈಲಟ್ ಅನ್ನು ರಕ್ಷಿಸಿದೆ.

  • ಎಎನ್-32 ವಿಮಾನ ಪತನ: 13 ಜನರ ಪೈಕಿ 7 ಮೃತ ದೇಹಗಳು ಪತ್ತೆ

    ಎಎನ್-32 ವಿಮಾನ ಪತನ: 13 ಜನರ ಪೈಕಿ 7 ಮೃತ ದೇಹಗಳು ಪತ್ತೆ

    ನವದೆಹಲಿ: ಜೂ.3ರಂದು ಅರುಣಾಚಲ ಪ್ರದೇಶದ ಪರ್ವತ ಪ್ರದೇಶದಲ್ಲಿ ಪತನವಾಗಿದ್ದ ಭಾರತೀಯ ವಾಯುಪಡೆಯ ಎಎನ್-32 ವಿಮಾನದಲ್ಲಿದ್ದ 13 ಜನರ ಪೈಕಿ 7 ಜನರ ಮೃತದೇಹವನ್ನು ವಾಯು ಪಡೆ ಪತ್ತೆ ಹಚ್ಚಿದೆ.

    ಕಾಣೆಯಾದ ವಿಮಾನದ ಅವಶೇಷಗಳನ್ನು ಜೂ.11ರಂದು ಎಂಐ-17 ಹೆಲಿಕಾಪ್ಟರ್ ಮೂಲಕ ಪತ್ತೆ ಹಚ್ಚಲಾಗಿತ್ತು. ನಂತರ ಶವಗಳನ್ನು ಹಾಗೂ ಒಂದು ವೇಳೆ ಅದೃಷ್ಟವಶಾತ್ ಬದುಕುಳಿದವರನ್ನು ಹುಡುಕುವ ಬೃಹತ್ ಕಾರ್ಯಾಚರಣೆಯನ್ನು ಭಾರತೀಯ ವಾಯು ಸೇನೆ ಪ್ರಾರಂಭಿಸಿತ್ತು.

    ಇದು ಸೋವಿಯತ್ ಅಭಿವೃದ್ಧಿಪಡಿಸಿದ, ಎರಡು ಎಂಜಿನ್‍ನ ಟರ್ಬೋಪ್ರಾಪ್ ಟ್ರಾನ್ಸ್‍ಪೋರ್ಟ್ ವಿಮಾನವಾಗಿದ್ದು, ಅಸ್ಸಾಂನ ಜೊಹ್ರಾತ್‍ನಿಂದ ಮೆಚುಕಾದ ಮಿಲಿಟರಿ ಲ್ಯಾಂಡಿಂಗ್ ಸ್ಟ್ರಿಪ್‍ಗೆ ಹಾರಾಟ ನಡೆಸುತ್ತಿದ್ದಾಗ ಜೂ.3ರಂದು ಮಧ್ಯಾಹ್ನ 1 ಗಂಟೆಗೆ ರಡಾರ್‍ನಿಂದ ಸಂಪರ್ಕ ಕಳೆದುಕೊಂಡಿತ್ತು.

    ಪತನವಾದ ಎಎನ್-32 ವಿಮಾನದ ಅವಶೇಷಗಳನ್ನು ಪತ್ತೆ ಹಚ್ಚಿದ ಎರಡು ದಿನಗಳ ನಂತರ ಭಾರತೀಯ ವಾಯು ಸೇನೆ ವಿಮಾನದಲ್ಲಿದ್ದ ಯಾರೂ ಬದುಕುಳಿದರಲು ಸಾಧ್ಯವಿಲ್ಲ ಎಂದು ಹೇಳಿತ್ತು. ಅಲ್ಲದೆ ಮೃತ ದೇಹ ಹಾಗೂ ಅವಶೇಷವನ್ನು ಜೋಹ್ರಾತ್‍ನ ವಾಯು ನೆಲೆಗೆ ತರಲಾಗುವುದು ಎಂದು ವಾಯು ಪಡೆ ತಿಳಿಸಿದೆ.

    ಅಮೀದ್ ಪರ್ವತದ 12,000 ಅಡಿ ಎತ್ತರದಲ್ಲಿ ವಿಮಾನದ ಅವಶೇಷ ಪತ್ತೆಯಾಗಿದ್ದು, ಪರ್ವತದ ಭಾಗದಲ್ಲಿ ಹವಾಮಾನ ವೈಪರಿತ್ಯ ಹಾಗೂ ಮೋಡಗಳಿದ್ದರಿಂದ ದಿಕ್ಕು ಸರಿಯಾಗಿ ಕಾಣದೆ ಎಎನ್-32 ವಿಮಾನವು ಪತನವಾಗಿತ್ತು. ವಿಮಾನದಲ್ಲಿದ್ದ ಪ್ರಮುಖ ಕಾಕ್‍ಪಿಟ್ ವಾಯ್ಸ್ ರೆಕಾರ್ಡರ್(ಸಿವಿಆರ್), ವಿಮಾನದ ಡಾಟಾ ರೆಕಾರ್ಡರ್ ಹಾಗೂ ಬ್ಲ್ಯಾಕ್ ಬಾಕ್ಸ್‍ಗಳನ್ನು ಕಳೆದ ವಾರವೇ ವಾಯು ಪಡೆ ಪತ್ತೆ ಹಚ್ಚಿ ವಶಕ್ಕೆ ಪಡೆದಿದೆ. ಬ್ಲ್ಯಾಕ್ ಬಾಕ್ಸ್‍ಗೆ ಹಾನಿಯಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ. ಅಲ್ಲದೆ ವಿಮಾನ ಪತನಕ್ಕೆ ನಿರ್ದಿಷ್ಟ ಕಾರಣವೇನು ಎಂಬುದನ್ನು ಪತ್ತೆ ಹಚ್ಚಲು ಸಮಯಾವಕಾಶದ ಅಗತ್ಯವಿದೆ ಎಂದು ವಾಯು ಪಡೆಯ ಮೂಲಗಳು ತಿಳಿಸಿವೆ.

    ಪತನವಾದ ವಿಮಾನದಲ್ಲಿದ್ದ 13 ಜನರ ಸಂಬಂಧಿಕರು ಒಂದು ವಾರದಿಂದ ಜೊಹ್ರಾತ್ ಬೇಸ್ ಕ್ಯಾಂಪ್‍ನಲ್ಲಿ ಕಾಯುತ್ತ ಕುಳಿತಿದ್ದು, ವಾಯುಪಡೆಯ ವಿಮಾನದಲ್ಲಿ ಎಂಟು ಜನ ಸಿಬ್ಬಂದಿ ಮತ್ತು ಐವರು ಪ್ರಯಾಣಿಕರಿದ್ದರು. ವಾಯುಪಡೆಯ ಸಿಬ್ಬಂದಿ ತಂಡಗಳು ಹಾಗೂ ಸ್ಥಳೀಯ ಪರ್ವತಾರೋಹಿಗಳು ಮೃತದೇಹಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ನಿರಂತರ ಮಳೆ ಹುಡುಕಾಟದ ಕಾರ್ಯಾಚರಣೆಗೆ ಸವಾಲು ಅಡ್ಡಿಯುಂಟು ಮಾಡುತ್ತಿದೆ.

    ಪತನವಾದ ವಿಮಾನ ಜೋಹ್ರಾತ್‍ನಿಂದ ಹಾರಾಟ ಪ್ರಾರಂಭಿಸಿದಾಗ ಲೆಫ್ಟಿನೆಂಟ್ ಆಶಿಶ್ ತನ್ವಾರ್ ಅವರು ಏರ್ ಟ್ರಾಫಿಕ್ ಕಂಟ್ರೋಲರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇವರ ಪತ್ನಿ ಸಂಧ್ಯಾ ತನ್ವಾರ್ ಸಹ ಭಾರತೀಯ ವಾಯು ಸೇನೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ನಾಪತ್ತೆಯಾಗಿರುವ ಮಗನನ್ನು ಪತ್ತೆ ಹಚ್ಚಲು ಹೊರಟ ತಂದೆ

    ನಾಪತ್ತೆಯಾಗಿರುವ ಮಗನನ್ನು ಪತ್ತೆ ಹಚ್ಚಲು ಹೊರಟ ತಂದೆ

    ನವದೆಹಲಿ: ನಾಪತ್ತೆಯಾಗಿರುವ ವಾಯುಸೇನೆ ವಿಮಾನದಲ್ಲಿದ್ದ ಫ್ಲೈಟ್ ಲೆಫ್ಟಿನೆಂಟ್ ಶೀಘ್ರವೇ ಮನೆಗೆ ಮರಳುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ಕುಟುಂಬದ ಸದಸ್ಯರು ಈಗ ದಿನದೂಡುತ್ತಿದ್ದಾರೆ.

    13 ಜನರನ್ನು ಹೊತ್ತ ಭಾರತೀಯ ವಾಯುಪಡೆಯ ಎಎನ್-32 ವಿಮಾನ ಸೋಮವಾರ ಮಧ್ಯಾಹ್ನ ಕಾಣೆಯಾಗಿತ್ತು. ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಪಂಜಾಬ್‍ನ ಪಟಿಯಾಲ ಜಿಲ್ಲೆಯ ಮೋಹಿತ್ ಗಾರ್ಗ್ ಅವರು ಭಾರತೀಯ ವಾಯುಪಡೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

    ಮೋಹಿತ್ ಅವರ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಮಗ ಕಾಣೆಯಾಗಿರುವ ವಿಚಾರವನ್ನು ಕುಟುಂಬದ ಸದಸ್ಯರು ತಾಯಿಗೆ ಇಲ್ಲಿಯವರೆಗೆ ತಿಳಿಸಿಲ್ಲ. ಮೋಹಿತ್ ಅವರು ಐದು ವರ್ಷದಿಂದ ಅಸ್ಸಾಂ ರಾಜ್ಯದ ಜೋರ್ಹತ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

    ಕಳೆದ ವರ್ಷ ಅಸ್ತ ಗಾರ್ಗ್ ಅವರನ್ನು ಮೋಹಿತ್ ಮದುವೆಯಾಗಿದ್ದರು. ಕೊನೆಯದಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಮನೆಗೆ ಬಂದಿದ್ದ ಮೋಹಿತ್ ನಂತರ ಬಂದಿರಲಿಲ್ಲ.

    ಈಗ ಮಗನನ್ನು ಹುಡುಕಲು ತಂದೆ ಸುರೇಂದ್ರಪಾಲ್ ಗಾರ್ಗ್ ಜೋರ್ಹತ್‍ಗೆ ಹೋಗಿದ್ದಾರೆ. ನನಗೆ ನನ್ನ ಮಗ ವಾಪಸ್ ಬೇಕು. ಮೋಹಿತ್ ಸಿಗುವ ತನಕ ಹುಡುಕುತ್ತೇನೆ. ನಾನು ಇದನ್ನು ಬಿಟ್ಟರೆ ಈಗ ಬೇರೆ ಏನೂ ಹೇಳುವುದಿಲ್ಲ. ನನ್ನ ಮಗನ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ನನಗೆ ನನ್ನ ಮಗ ವಾಪಸ್ ಬೇಕು ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮೋಹಿತ್ ಅವರ ಹಿರಿಯ ಸಹೋದರ ಆಶ್ವಿನ್, ಈ ರೀತಿಯ ಘಟನೆ ಮುಂದೆ ನಡೆಯಬಾರದು. ನಮ್ಮ ಸೇನೆಗೆ ನೀಡುವ ಉಪಕರಣಗಳು ಆಧುನಿಕವಾಗಿರಬೇಕು ಮತ್ತು ಸಮಯಕ್ಕೆ ತಕ್ಕಂತೆ ನವೀಕರಣವಾಗಿರಬೇಕು. ಈ ದೇಶವನ್ನು ರಕ್ಷಿಸುವ ಸೈನಿಕರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

    ಮೂರು ದಿನ ಕಳೆದರೂ ಯಾವುದೇ ಮಾಹಿತಿ ಸಿಗದ ಕಾರಣ ಅವರ ಚಿಕ್ಕಪ್ಪ ರಿಷಿಪಾಲ್ ಗಾರ್ಗ್ ಅವರು ಮೋಹಿತ್ ಪತ್ನಿ ಅಸ್ತ ಗಾರ್ಗ್ ಅವರನ್ನು ಕರೆದುಕೊಂಡು ಜೋರ್ಹತ್ ಹೋಗಿದ್ದಾರೆ. ಏನಾದರೂ ಪವಾಡ ನಡೆದು ತಮ್ಮ ಮಗ ಮನೆಗೆ ವಾಪಸ್ ಬರಲಿ ಎಂದು ಕುಟುಂಬದ ಸದಸ್ಯರು ಈಗ ದೇವರನ್ನು ಬೇಡಿಕೊಳ್ಳುತ್ತಿದ್ದಾರೆ.

    ಭಾರತೀಯ ವಾಯು ಪಡೆಯ ಸರಕು ಸಾಗಾಟ ವಿಮಾನದಲ್ಲಿ 8 ಮಂದಿ ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಸೋಮವಾರ ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ 35 ನಿಮಿಷಗಳ ಕಾಲ ಸಂಪರ್ಕದಲ್ಲಿತ್ತು. ಆದರೆ ಮಧ್ಯಾಹ್ನ 1 ಗಂಟೆಯ ವೇಳೆ ಸಂಪರ್ಕ ಕಳೆದುಕೊಂಡಿದೆ. ಮೂರು ದಿನಗಳಿಂದಲೂ ವಿಮಾನಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

  • ಈಗ ಅಧಿಕೃತ, ಭಾರತದ ಹೊಡೆತಕ್ಕೆ ಬಿತ್ತು ಎಫ್ 16 ವಿಮಾನ

    ಈಗ ಅಧಿಕೃತ, ಭಾರತದ ಹೊಡೆತಕ್ಕೆ ಬಿತ್ತು ಎಫ್ 16 ವಿಮಾನ

    ನವದೆಹಲಿ: ಪಾಪಿಸ್ತಾನದ ಮತ್ತೊಂದು ಸುಳ್ಳು ಬಯಲಾಗಿದೆ. ಭಾರತದ ವಾಯುಸೇನೆಯ ಹೊಡೆತ ತಿಂದು ಬಿದ್ದ ಎಫ್ 16 ವಿಮಾನದ ಫೋಟೋಗಳು ಲಭ್ಯವಾಗಿದೆ.

    ಬುಧವಾರ ಮಧ್ಯಾಹ್ನ ಭಾರತ ವಿದೇಶಾಂಗ ಇಲಾಖೆ ಸುದ್ದಿಗೋಷ್ಠಿ ನಡೆಸಿ ಭಾರತದ ಗಡಿ ದಾಟಿ ಬಂದಿದ್ದ ಪಾಕಿಸ್ತಾನ ವಿಮಾನಗಳ ಮೇಲೆ ದಾಳಿ ನಡೆಸಿದ್ದೇವೆ. ನಮ್ಮ ದಾಳಿ ವೇಳೆ ಪಾಕಿಸ್ತಾನ ವಿಮಾನ ಎಫ್ 16 ವಿಮಾನ ಪತನಗೊಂಡಿದೆ ಎಂದು ಹೇಳಿಕೆ ನೀಡಿತ್ತು.

    ಭಾರತ ಅಧಿಕೃತವಾಗಿ ಹೇಳಿಕೆ ನೀಡಿದ್ದರೂ ಪಾಕಿಸ್ತಾನ ಮಾತ್ರ ನಮಗೆ ಏನು ಆಗಿಲ್ಲ. ಯಾವುದೇ ವಿಮಾನ ಪತನವಾಗಿಲ್ಲ ಎಂದು ಹೇಳಿಕೆ ನೀಡಿತ್ತು. ಆದರ ಈಗ ಪಾಕಿಸ್ತಾನ ನೆಲದಲ್ಲಿ ಬಿದ್ದ ಎಫ್ 16 ಫೋಟೋಗಳು ಲಭ್ಯವಾಗಿದೆ.

    ಪಾಕ್ ಆಕ್ರಮಿತ ಕಾಶ್ಮೀರದ ಭಾಗದಲ್ಲಿ ಈ ವಿಮಾನ ಬಿದ್ದಿದೆ. ಬಿದ್ದ ವಿಮಾನದ ಭಾಗಗಳು ಪಾಕ್ ಸೇನಾಧಿಕಾರಿಗಳು ತರಾತುರಿಯಲ್ಲಿ ಟ್ರಕ್ ಗೆ ತುಂಬಿಸಿದ್ದಾರೆ.

    ಪಾಕಿಸ್ತಾನದ ವಿರುದ್ಧ ಪ್ರತಿದಾಳಿ ನಡೆಸುವ ಸಮಯದಲ್ಲಿ ನಮ್ಮ ಮಿಗ್ ವಿಮಾನ ಪತನವಾಗಿದೆ. ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಭಾರತ ಒಪ್ಪಿಕೊಂಡಿತ್ತು. ಆದರೆ ಪಾಕಿಸ್ತಾನ ನಮಗೆ ಏನು ಆಗಿಲ್ಲ ಎಂಬಂತೆ ವರ್ತಿಸಿತ್ತು. ಪತನಗೊಂಡ ಎಫ್ 16 ವಿಮಾನದ ಪೈಲಟ್ ಪ್ಯಾರಾಚೂಟ್ ಮೂಲಕ ಪಾರಾದ ದೃಶ್ಯ ಮಾಧ್ಯಮಗಳಿಗೆ ಸಿಕ್ಕಿತ್ತು.

    ಜಗತ್ತು ಬದಲಾಗುತ್ತಿದೆ ಸುಳ್ಳು ಹೇಳಿದರೂ ಸಿಕ್ಕಿ ಬೀಳುತ್ತೇವೆ ಎನ್ನುವ ಸ್ವಲ್ಪ ಪರಿಜ್ಞಾನ ಇಲ್ಲದಂತೆ ಪಾಕ್ ವರ್ತಿಸುತ್ತಿದೆ. ಬುಧವಾರ ಬೆಳಗ್ಗೆ ಪಾಕಿಸ್ತಾನದ ಮೇಜರ್ ಜನರಲ್ ಅಸಿಫ್ ಗಫೂರ್ ಟ್ವೀಟ್ ಮಾಡಿ ನಮ್ಮ ಬಳಿ ಇಬ್ಬರು ಭಾರತದ ವಾಯು ಸೇನಾ ಪೈಲಟ್ ಗಳು ಇದ್ದಾರೆ ಎಂದು ಹೇಳಿದ್ದರು.

    ಗಫೂರ್ ಟ್ವೀಟ್ ಬೆನ್ನಲ್ಲೇ ರೇಡಿಯೋ ಪಾಕಿಸ್ತಾನದ ಇಬ್ಬರು ಭಾರತದ ಪೈಲಟ್‍ಗಳನ್ನು ನಾವು ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ಇಬ್ಬರನ್ನು ಉತ್ತಮವಾಗಿ ನೋಡಿಕೊಳ್ಳುತ್ತೇವೆ. ಒಬ್ಬರಿಗೆ ಉತ್ತಮವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದೇವೆ ಎಂದು ಗಫೂರ್ ಅವರ ಹೇಳಿಕೆಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿತ್ತು.

    ಮಧ್ಯಾಹ್ನ ಭಾರತ ಸುದ್ದಿಗೋಷ್ಠಿ ನಡೆಸಿ, ನಮ್ಮ ಒಬ್ಬರು ಪೈಲಟ್ ನಾಪತ್ತೆಯಾಗಿದ್ದಾರೆ ಎಂದು ಹೇಳಿತ್ತು. ಭಾರತದಿಂದ ಅಧಿಕೃತ ಹೇಳಿಕೆ ಬಂದಲ್ಲೇ ಪಾಕಿಸ್ತಾನ ಸಂಜೆ ಉಲ್ಟಾ ಹೊಡೆದು ನಮ್ಮ ಬಳಿ ಒಬ್ಬರು ಪೈಲಟ್ ಕಸ್ಟಡಿಯಲ್ಲಿ ಇದ್ದಾರೆ ಎಂದು ಮೇಜರ್ ಜನರಲ್ ಗಫೂರ್ ಟ್ವೀಟ್ ಮಾಡಿ ತಿಳಿಸಿದ್ದರು. ಆರಂಭದ ಟ್ವೀಟ್ ನಲ್ಲಿ ಅಸಿಫ್ ಗಫೂರ್, ಗಡಿ ನಿಯಂತ್ರಣ ರೇಖೆಯನ್ನು ದಾಟಿದ್ದ ಭಾರತೀಯ ವಾಯು ಪಡೆಯ ಎರಡು ಯುದ್ಧ ವಿಮಾನಗಳನ್ನು ನಾವು ಹೊಡೆದು ಹಾಕಿದ್ದೇವೆ ಎಂದು ಹೇಳಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 4ರ ಮಗನ ಪಾಸ್‍ಪೋರ್ಟ್ ನಲ್ಲಿ ಪ್ರವಾಸ ಕೈಗೊಂಡ 44 ವರ್ಷದ ತಂದೆ!

    4ರ ಮಗನ ಪಾಸ್‍ಪೋರ್ಟ್ ನಲ್ಲಿ ಪ್ರವಾಸ ಕೈಗೊಂಡ 44 ವರ್ಷದ ತಂದೆ!

    ಬ್ರಿಟನ್: 44 ವರ್ಷದ ತಂದೆ ತನ್ನ 4 ವರ್ಷದ ಮಲ ಮಗನ ಪಾಸ್‍ಪೋರ್ಟ್ ಬಳಸಿ ಯುಕೆಯಿಂದ ಪೊಲ್ಯಾಂಡ್ ವರೆಗೂ ಪ್ರಯಾಣಿಸಿರುವ ಘಟನೆ ಬ್ರಿಟನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದಿದೆ.

    ಮ್ಯಾಥ್ಯೂ ಸುಟೊನ್ ಎಂಬವನು ಮಗನ ಪಾಸ್‍ಪೋರ್ಟ್ ನಿಂದ ಪ್ರಯಾಣಿಸಿದ ವ್ಯಕ್ತಿ. ನನ್ನ ಪಾಸ್‍ಪೋರ್ಟ್ ತರುವ ಬದಲು ನನ್ನ ಮಗನ ಪಾಸ್‍ಪೋರ್ಟ್ ತಂದಿರುವೆ ಎಂದು ಸುಟೊನ್ ಎಸ್‍ಡಬ್ಲ್ಯೂಎನ್‍ಎಸ್ ಬಳಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

    ಸುಟೊನ್ ತನ್ನ ಕುಟುಂಬದ ಜೊತೆ ಪ್ರವಾಸಕ್ಕೆ ಪ್ಲಾನ್ ಮಾಡಿದ್ದನು. ಅದರಂತೆ ವಿಜ್ ವಿಮಾನದಲ್ಲಿ ಪೊಲ್ಯಾಂಡ್‍ನ ಪೊಜ್ನಾನ್‍ಗೆ ಪ್ರಯಾಣ ಮಾಡುತ್ತಿದ್ದರು. ಈ ವೇಳೆ ವಿಮಾನದ ಭದ್ರತಾ ಸಿಬ್ಬಂದಿ ಪಾಸ್‍ಪೋರ್ಟ್ ಕೇಳಿದಾಗ ತನ್ನ ಪಾಸ್‍ಪೋರ್ಟ್ ತರುವ ಬದಲು ತನ್ನ 4 ವರ್ಷದ ಮಲಮಗನ ಪಾಸ್‍ಪೋರ್ಟ್ ತಂದಿದ್ದಾರೆ. ಇದನ್ನು ತಿಳಿದ ಸಿಬ್ಬಂದಿಗಳು ಸುಟೊನ್ ಅನ್ನು ವಿಚಾರಣೆ ನಡೆಸಿದ್ದಾರೆ.

    ತಕ್ಷಣವೇ ಸುಟೊನ್ ತನ್ನ ಮನೆಗೆ ಫೋನ್ ಮಾಡಿ ತನ್ನ ಪಾಸ್‍ಪೋರ್ಟ್ ಫೋಟೋ ಕಳುಹಿಸವಂತೆ ಹೇಳಿದ್ದಾರೆ. ಬಳಿಕ ಸಿಬ್ಬಂದಿಗೆ ತನ್ನ ಡ್ರೈವಿಂಗ್ ಲೈಸನ್ಸ್ ಹಾಗೂ ಫೋಟೊವನ್ನು ತೋರಿಸಿ ಬಿಡಿಸಿಕೊಂಡಿರುವುದಾಗಿ ಸುಟೊನ್ ತಿಳಿಸಿದರು.

    ಈ ಘಟನೆಯಿಂದಾಗಿ ವಿಮಾನ ಭದ್ರತಾ ಸಿಬ್ಬಂದಿ ಅಧಿಕಾರಿಗಳ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಹೊತ್ತಿ ಉರಿದ ವಿಮಾನಕ್ಕೆ 101 ಮಂದಿ ಬಲಿ

    ಹೊತ್ತಿ ಉರಿದ ವಿಮಾನಕ್ಕೆ 101 ಮಂದಿ ಬಲಿ

    ಹವಾನಾ: ಕ್ಯೂಬಾದ ರಾಜಧಾನಿ ಹವಾನಾದಲ್ಲಿ ವಿಮಾನ ಅಪಘಾತ ಸಂಭವಿಸಿ 100ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.

    ಹವಾನಾದ ಜೋಸ್ ಮರ್ತಿ ಅಂತಾರಾಷ್ಷ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ಅದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ. ವಿಮಾನ ಅಪಘಾತಕ್ಕೀಡಾಗುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. 104 ಜನ ಪ್ರಯಾಣಿಕರಲ್ಲಿ ಬದುಕುಳಿದಿರುವುದು 3 ಜನ ಮಾತ್ರ. ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

    ಸುಮಾರು 39 ವರ್ಷ ಹಳೆಯ ಬೋಯಿಂಗ್ 737 ವಿಮಾನ ಇದಾಗಿತ್ತು. ಮೆಕ್ಸಿಕನ್ ಏರ್ ಲೈನ್ಸ್ ಗೆ ಸೇರಿದ ವಿಮಾನವಾಗಿದ್ದು ಕ್ಯೂಬಾನಾ ಏವಿಯೇಶನ್ ಗೆ ಲೀಸ್ ಕೊಡಲಾಗಿತ್ತು ಎಂದು ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ.

    ಚಾರ್ಟ್‍ರ್ ವಿಮಾನವಾಗಿದ್ದು ವಿಮಾನ ನಿಲ್ದಾಣದಿಂದ 6 ಮೈಲಿಗಳ ದೂರದಲ್ಲಿ ಪತನಗೊಂಡಿದೆ. ಅಗ್ನಿಶಾಮಕ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿದ್ದಾರೆ ಆದರೆ ಆ ವೇಳೆಗೆ ವಿಮಾನ ಸಂಪೂರ್ಣ ಸುಟ್ಟು ಹೋಗಿದೆ.

    ಹಲವು ಮಂದಿ ಘಟನೆಯಲ್ಲಿ ಮೃತಪಟ್ಟಿದ್ದಾರೆ. ಬೆಂಕಿಯನ್ನು ನಂದಿಸಲಾಗಿದ್ದು ಪರಿಹಾರ ಕಾರ್ಯ ಬಿರುಸಿನಿಂದ ಸಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಕ್ಯೂಬಾ ಅಧ್ಯಕ್ಷ ಮಿಗ್ಯುಯೆಲ್ ಡಯಾಸ್ ಕ್ಯಾನೆಲ್ ಹೇಳಿದ್ದಾರೆ.

  • ವಿಮಾನದ ಶೌಚಾಲಯದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆ

    ವಿಮಾನದ ಶೌಚಾಲಯದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆ

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2 ಕೆ.ಜಿ 116 ಗ್ರಾಂ ಚಿನ್ನ ಪತ್ತೆಯಾಗಿದೆ.

    ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ ವೇಳೆ ವಿಮಾನದಲ್ಲಿ 2 ಕೆ.ಜಿ 116 ಗ್ರಾಂ ತೂಕದ 66.67 ಲಕ್ಷ ರೂ. ಮೌಲ್ಯದ ಚಿನ್ನ ಪತ್ತೆಯಾಗಿದೆ.

    ಎಸ್‍ಜಿ 479 ಸ್ಪೈಸ್ ಜೆಟ್ ವಿಮಾನದ ಶೌಚಾಲಯದಲ್ಲಿ ಚಿನ್ನ ಪತ್ತೆಯಾಗಿದ್ದು, ಈ ವಿಮಾನ ಮುಂಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿತ್ತು. ಈ ವೇಳೆ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳ ಕಾರ್ಯಾಚರಣೆ ನಡೆಸಿದ್ದರು.

    ಆಗ 2 ಕೆಜಿ 116 ಗ್ರಾಂ ಚಿನ್ನದ ಬಿಲ್ಲೆ ಪತ್ತೆಯಾಗಿದೆ. ಸದ್ಯಕ್ಕೆ ಅಧಿಕಾರಿಗಳು ಚಿನ್ನವನ್ನು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.

  • ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ- 102 ಪ್ರಯಾಣಿಕರು ಪಾರು

    ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ- 102 ಪ್ರಯಾಣಿಕರು ಪಾರು

    ಕೊಚ್ಚಿ: 102 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನೊಳಗೊಂಡ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಇಂದು ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅವಘಡ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

    ವಿಮಾನ ಲ್ಯಾಂಡ್ ಆಗುವ ವೇಳೆ ಪಾರ್ಕಿಂಗ್ ವೇ ಕಡೆಗೆ ಸಮೀಪಿಸುತ್ತಿದ್ದಂತೆ ಪಥವನ್ನು ಬದಲಿಸಿದೆ. ಈ ಅವಘಡದಿಂದಾಗಿ ಬೋಯಿಂಗ್ 737-800 ವಿಮಾನದ ನೋಸ್ ವೀಲ್ ಜಖಂ ಆಗಿದೆ.

    ಘಟನೆಯಿಂದ ಪ್ರಯಾಣಿಕರರಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲಾ ಪ್ರಯಾಣಿಕರನ್ನ ಏಣಿ ಮೂಲಕ ಕೆಳಗಿಳಿಸಲಾಯ್ತು ಎಂದು ಕೊಚಿನ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಲಿಮಿಟೆಡ್‍ನ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಸದ್ಯ ಈ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಘಟನೆಯ ಬಗ್ಗೆ ಆಂತರಿಕ ತನಿಖೆ ಹಾಗೂ ನಾಗರೀಕ ವಿಮಾನಯಾನ ನಿರ್ದೇಶನಾಲಯದಿಂದ್ಲೂ ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ.