Tag: air strikes

  • ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

    ಇಸ್ರೇಲ್‌ ಕೆಣಕಿ ತಪ್ಪು ಮಾಡಿತೇ ಇರಾನ್‌? – ಉಭಯ ರಾಷ್ಟ್ರಗಳ ಸೇನಾ ಸಾಮರ್ಥ್ಯ ನೋಡಿದ್ರೆ ಮೈ ನಡುಗುತ್ತೆ!

    ಇಸ್ರೇಲ್‌ ಮೇಲಿನ ದಾಳಿಗೆ ಒಂದು ವರ್ಷ ಪೂರೈಸಿದೆ. ಗಾಜಾಪಟ್ಟಿಯಲ್ಲಿದ್ದ ಹಮಾಸ್‌ ಬಂಡುಕೋರರ ಗುಂಪು 2023ರ ಅಕ್ಟೋಬರ್‌ 7ರಂದು ಇಸ್ರೇಲ್‌ ಮೇಲೆ ನಡೆಸಿದ ಅಪ್ರಚೋದಿತ ದಾಳಿ ಇಂದು ಲಕ್ಷಾಂತರ ಜನರ ನೆಮ್ಮದಿ ಕಸಿದಿದೆ. ಸಾವಿರಾರು ಜನರ ಜೀವ ತೆಗೆದಿದೆ. ಕಳೆದ ಒಂದು ವರ್ಷದಲ್ಲಿ ಇಸ್ರೇಲ್‌, ಹಮಾಸ್‌ ಹಾಗೂ ಹಿಜ್ಬುಲ್ಲಾ ನಡುವಿನ ಭೀಕರ ಯುದ್ಧದಲ್ಲಿ ಸುಮಾರು 50 ಸಾವಿರ ಮಂದಿ ಜೀವ ಕಳೆದುಕೊಂಡಿದ್ದಾರೆ.

    ಆ ದಿನ ಕೇವಲ 20 ನಿಮಿಷದ ಹಮಾಸ್‌ ಉಗ್ರರು ಇಸ್ರೇಲ್‌ ಮೇಲೆ ಪುಂಖಾನುಪುಂಖವಾಗಿ 5 ಸಾವಿರ ರಾಕೆಟ್‌ಗಳನ್ನು ಹಾರಿಸಿದ್ದರು. ಇಸ್ರೇಲ್‌ನ ಬಲಾಢ್ಯ ಕ್ಷಿಪಣಿ ವಿರೋಧಿ ವ್ಯವಸ್ಥೆ ಐರನ್‌ ಡೋಮ್‌ ಇಷ್ಟು ಅಗಾಧ ಪ್ರಮಾಣದ ರಾಕೆಟ್‌ ಮಳೆಗೆ ನಿಷ್ಪರಿಣಾಮಕಾರಿ ಎನ್ನಿಸಿಕೊಂಡಿತು. ಅಲ್ಲದೇ, ಹಮಾಸ್‌ 1,000ಕ್ಕೂ ಅಧಿಕ ಉಗ್ರರೊಂದಿಗೆ ದಕ್ಷಿಣ ಇಸ್ರೇಲ್‌ನ ಅನೇಕ ಪ್ರದೇಶಗಳಲ್ಲಿ ಭೂದಾಳಿ ನಡೆಸಿತು. ಬುಲ್ಡೋಜರ್‌ನಿಂದ ಇಸ್ರೇಲ್‌ನ ಗಡಿಯನ್ನು ಛಿದ್ರಗೊಳಿಸಿತು. ಇನ್ನೂ ಹಲವು ಉಗ್ರರು ಸಮುದ್ರ ಮಾರ್ಗದಲ್ಲಿ ಸ್ಪೀಡ್‌ ಬೋಟ್‌ಗಳ ಮೂಲಕ ಇಸ್ರೇಲನ್ನು ನುಸುಳಿದರು ಕೆಲವರು ಪ್ಯಾರಾಗ್ಲೈಡಿಂಗ್‌ ಮೂಲಕ ಇಸ್ರೇಲೊಳಗಿಳಿದು ರಂಪಾಟ ಎಬ್ಬಿಸಿದರು. ಈ ಏಕಕಾಲದ ಆಕ್ರಮಣ ನಿಲ್ಲಿಸಲು ಇಸ್ರೇಲ್‌ಗೆ ಆ ಕ್ಷಣಕ್ಕೆ ಸಾಧ್ಯವಾಗಲೇ ಇಲ್ಲ.

    ಪರಿಣಾಮ, ಇಸ್ರೇಲ್‌ ತನ್ನ 1200 ಪ್ರಜೆಗಳನ್ನು ಕಳೆದುಕೊಂಡಿತು. ಹಮಾಸ್‌ನ ಜೀಪುಗಳಲ್ಲಿ ಕೈಕಾಲು ಕಟ್ಟಿ ಕರೆದೊಯ್ದ 250 ಇಸ್ರೇಲಿಗರನ್ನು ಬಿಡಿಸಿಕೊಳ್ಳಲು ಇಸ್ರೇಲ್‌ ಅಂದು ಶುರುಮಾಡಿದ ಯುದ್ಧ ಇಂದಿಗೂ ಮುಗಿದಿಲ್ಲ. ಸದ್ಯಕ್ಕೆ ಮುಗಿಯುವ ಲಕ್ಷಣವೂ ಕಾಣಿಸುತ್ತಿಲ್ಲ. ಹಮಾಸ್‌ ಒಬ್ಬರಲ್ಲ ಅದರ ಹಿಂದೆ ಪ್ಯಾಲೆಸ್ತೀನ್‌, ಹಿಜ್ಬುಲ್ಲಾ, ಲೆಬನಾನ್‌, ಇರಾಕ್‌ ಹಾಗೂ ಸಿರಿಯಾದ ಉಗ್ರ ಸಂಘಟನೆಗಳು, ಹೌತಿ ಬಂಡುಕೋರರು… ಇಸ್ರೇಲನ್ನು ಕಟ್ಟಿಹಾಕಲು ಶತ್ರುಗಳೆಲ್ಲ ಒಗ್ಗೂಡುತ್ತಲೇ ಇದ್ದಾರೆ. ಇರಾನ್‌ನ ಸುಪ್ರೀಂ ಲೀಡರ್‌ ಕೂಡ ಇಸ್ರೇಲ್‌ ಸೋಲಿಸಲು ಇತ್ತೀಚೆಗೆ ಕರೆ ಕೊಟ್ಟಿದ್ದಾರೆ. ಅದಕ್ಕೆ ಪ್ರತ್ಯುತ್ತರವಾಗಿ ಈಗ ಇಸ್ರೇಲ್‌ ದಿನದಿಂದ ದಿನಕ್ಕೆ ತನ್ನ ಆಕ್ರಮಣದ ತೀವ್ರತೆಯನ್ನು ಹೆಚ್ಚಿಸುತ್ತಲೇ ಇದೆ. ಭಾನುವಾರ (ಅ.6) ಕೂಡ ಕೇವಲ ಒಂದು ಗಂಟೆ ಅವಧಿಯಲ್ಲಿ 120 ಹಿಜ್ಬುಲ್ಲಾ ಉಗ್ರ ನೆಲೆಗಳನ್ನು ಧ್ವಂಸಮಾಡಿದೆ.

    ಇರಾನ್‌ ಯುದ್ಧಕ್ಕೆ ಎಂಟ್ರಿಯಾಗಿದ್ದು ಹೇಗೆ?

    ಹಿಜ್ಬುಲ್ಲಾ ಸೇನೆಯ ಮುಖ್ಯಸ್ಥ ಹಸನ್‌ ನಸ್ರಲ್ಲಾನನ್ನೂ ಇಸ್ರೇಲ್‌ ಹತ್ಯೆಗೈದಾಗ ಪರೋಕ್ಷವಾಗಿ ಇವರನ್ನೆಲ್ಲ ಬೆಂಬಲಿಸುತ್ತಿದ್ದ ಇರಾನ್‌ ನೇರವಾಗಿ ಇಸ್ರೇಲ್‌ ವಿರುದ್ಧ ತೊಡೆ ತಟ್ಟಿತ್ತು. ಏಕಾಏಕಿ 180ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಹಾರಿಸಿ, ಇಸ್ರೇಲನ್ನು ಗಾಬರಿಗೊಳಿಸಲೂ ಇರಾನ್‌ ಯತ್ನಿಸಿದ್ದು ಸ್ವತಃ ಇಸ್ರೇಲನ್ನು ಮತ್ತಷ್ಟು ಕೆರಳಿಸಿದೆ. ಆದ್ರೆ ಇಸ್ರೇಲ್‌ ಕ್ಷಿಪಣಿ ಹಾರಿಸುವುದಕ್ಕೆ 2 ಗಂಟೆ ಮುಂಚಿತವಾಗಿಯೇ ಅಮೆರಿಕ ದಾಳಿಯ ಸುಳಿವು ಕೊಟ್ಟಿತ್ತು ಎಂಬುದು ಗಮನಾರ್ಹ. ಹಾಗಾಗಿ ಈ ಯುದ್ಧದ ಬೆಂಕಿಗೆ ತುಪ್ಪ ಸವರುವಂತೆ ಅತ್ತ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ʻಇರಾನ್‌ನ ಅಣ್ವಸ್ತ್ರ ಕೇಂದ್ರದ ದಾಳಿ ಮಾಡಿ,ʼ ಎಂಬ ಸಲಹೆಯನ್ನು ಇಸ್ರೇಲ್‌ಗೆ ಕೊಟ್ಟಿರುವುದು ಯುದ್ಧದ ತೀವ್ರತೆಯನ್ನು ತೆರೆದಿಟ್ಟಿದೆ.

    ಸ್ನೇಹಿತರಾಗಿದ್ದವರೀಗ ಬದ್ಧ ವೈರಿಗಳು

    ಹೌದು. 1948ರ ಮೇ 14. ಪ್ಯಾಲೆಸ್ತೀನ್‌ನಿಂದ ಇಸ್ರೇಲ್‌ ಬೇರ್ಪಟ್ಟು ಹೊಸ ಯಹೂದಿ ದೇಶ ಉದಯವಾಯಿತು. ಆ ಸಮಯದಲ್ಲಿ ಇಸ್ರೇಲ್‌ ಎಂಬ ಶಿಶುವಿನ ಜತೆಗೆ ನಿಂತ ಏಕೈಕ ಇಸ್ಲಾಮಿಕ್‌ ರಾಷ್ಟ್ರ ಇರಾನ್‌. 1948ರಲ್ಲಿ ಅರಬ್‌ ರಾಷ್ಟ್ರಗಳು ಇಸ್ರೇಲ್‌ ವಿರುದ್ಧ ಯುದ್ಧ ಆರಂಭಿಸಿದರೂ, ಆ ಯುದ್ಧದಲ್ಲಿ ಇರಾನ್‌ ಭಾಗವಹಿಸಲಿಲ್ಲ. ಇಸ್ರೇಲ್‌ ಗೆದ್ದ ಬಳಿಕ ಇರಾನ್‌ ಅದರೊಂದಿಗೆ ಸಂಬಂಧ ಬೆಸೆಯಿತು. ಇರಾನ್‌ನಲ್ಲಿ ಮೊಹಮ್ಮದ್‌ ರಜಾ ಶಾ ಪಹ್ಲವಿ ಆಳ್ವಿಕೆಯಲ್ಲಿ ಈ ಎರಡೂ ರಾಷ್ಟ್ರಗಳು ಮಿತ್ರರು. ಆ ವೇಳೆ, ಪಶ್ಚಿಮ ಏಷ್ಯಾದಲ್ಲಿ ಇರಾನ್‌ ಅತಿದೊಡ್ಡ ಯಹೂದಿ ಸಮುದಾಯಕ್ಕೆ ನೆಲೆ ಕಲ್ಪಿಸಿದ್ದ ರಾಷ್ಟ್ರ. ಉಭಯ ದೇಶಗಳ ನಡುವೆ ಆಮದು ಮತ್ತು ರಫ್ತು ವ್ಯವಹಾರ ಜೋರಾಗಿತ್ತು. ಇಸ್ರೇಲ್‌ ತನ್ನಲ್ಲಿನ ಶಸ್ತ್ರಾಸ್ತ್ರ ತಂತ್ರಜ್ಞಾನ ಮತ್ತು ಕೃಷಿ ಉತ್ಪನ್ನಗಳನ್ನು ಇರಾನ್‌ಗೆ ಕಳುಹಿಸುತ್ತಿದ್ದರೆ, ಅದಕ್ಕೆ ಪ್ರತಿಯಾಗಿ ಇರಾನ್‌ ಶೇ.40ರಷ್ಟು ತೈಲವನ್ನು ಇಸ್ರೇಲ್‌ಗೆ ನೀಡುತ್ತಿತ್ತು. ಇಷ್ಟೇ ಅಲ್ಲ, ಇರಾನ್‌ನ ಗುಪ್ತಚರ ಸಂಸ್ಥೆ SAVAK, ತರಬೇತಿ ಪಡೆದಿದ್ದೇ ಇಸ್ರೇಲಿ ಗುಪ್ತಚರ ಸಂಸ್ಥೆ ಮೊಸಾದ್‌ನ ಕೈಯಲ್ಲಿ ಅನ್ನೋದು ವಿಶೇಷ.

    ಆದ್ರೆ 1960ರ ದಶಕದಲ್ಲಿ, ಇರಾನ್‌ನಲ್ಲಿ ಇಸ್ಲಾಮಿಕ್‌ ರಾಷ್ಟ್ರದ ಬೇಡಿಕೆ ತೀವ್ರವಾಯಿತು. ಧಾರ್ಮಿಕ ನಾಯಕ ಅಯಾತೊಲ್ಲಾ ರುಹೊಲ್ಲಾ ಖಮೇನಿ ಇರಾನ್‌ ಅನ್ನು ಮುಸ್ಲಿಂ ರಾಷ್ಟ್ರವನ್ನಾಗಿಸಲು ಹೋರಾಟ ತೀವ್ರಗೊಳಿಸಿದ. 1964ರಲ್ಲಿ ಈ ಧ್ವನಿಗೆ ಅಪಾರ ಜನಬೆಂಬಲ ವ್ಯಕ್ತವಾದಾಗ ರಜಾ ಶಾ ಪಹ್ಲವಿಗೆ ಇರಾನನ್ನು ತೊರೆಯುವಂತೆ ಖಮೇನಿ ಆದೇಶಿಸಿದ. ಕಡೆಗೂ 1969ರಲ್ಲಿ ಪಹ್ಲವಿಯನ್ನು ಅಧಿಕಾರದಿಂದ ಕೆಳಗಿಳಿಸಲಾಯಿತು. ಇದರೊಂದಿಗೆ ಇರಾನ್‌ನಲ್ಲಿ ಇಸ್ಲಾಮಿಕ್‌ ರಾಜ್ಯ ಸ್ಥಾಪನೆಯಾಯಿತು. ಷರಿಯಾ ಕಾನೂನೂ ಜಾರಿಗೆ ಬಂತು. ಇದರೊಂದಿಗೆ ಇರಾನ್‌ನ ಖಮೇನಿ ಸರ್ಕಾರವು ಯಹೂದಿ ರಾಜ್ಯವಾದ ಇಸ್ರೇಲ್‌ನೊಂದಿಗೆ ಎಲ್ಲನಂಟನ್ನೂ ಕಡಿದುಕೊಂಡಿತು. ಉಭಯ ದೇಶಗಳ ನಡುವಿನ ವಿಮಾನ ಮಾರ್ಗವನ್ನೇ ಸಂಪೂರ್ಣವಾಗಿ ಮುಚ್ಚಲಾಯಿತು.

    ಇಸ್ರೇಲ್‌-ಇರಾನ್‌ ಸೇನಾಬಲ ಮೈ ನಡುಗಿಸುತ್ತೆ

    ಇಸ್ರೇಲ್‌ ಶಕ್ತಿಶಾಲಿ ರಾಷ್ಟ್ರವೇ ಆದರೂ ಇರಾನ್‌ ಸಹ ಸರಿಸಮನಾಗಿ ಶಸ್ತ್ರಾಸ್ತ್ರಗಳನ್ನು ಹೊಂದಿದೆ. ಹಾಗಾಗಿ ಮಿಲಿಟರಿ ಶಕ್ತಿಯಲ್ಲಿ ಒಬ್ಬರಿಗಿಂತ ಮತ್ತೊಬ್ಬರು ಕಡಿಮೆಯೇನಿಲ್ಲ ಅಂತಲೇ ಹೇಳಬಹುದು. ಇತ್ತೀಚಿನ ಗ್ಲೋಬಲ್‌ ಫೈರ್‌ ವರದಿ ಪ್ರಕಾರ, ವಾಯು ಸೇನೆ ಮತ್ತು ರಕ್ಷಣಾ ವ್ಯವಸ್ಥೆಯಲ್ಲಿ ಇರಾನ್‌ 14ನೇ ಸ್ಥಾನದಲ್ಲಿದ್ದರೆ, ಇಸ್ರೇಲ್‌ 17ನೇ ಸ್ಥಾನದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

    ರಕ್ಷಣಾ ಬಲ ಹೇಗಿದೆ ನೋಡಿ?

    ಇರಾನ್‌ 1996 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1397 ಪ್ರಸ್ತುತ ಯುದ್ಧಕ್ಕೆ ಸಿದ್ಧವಾಗಿವೆ. ಇಸ್ರೇಲ್ 1,370 ಟ್ಯಾಂಕ್‌ಗಳನ್ನು ಹೊಂದಿದೆ, ಅವುಗಳಲ್ಲಿ 1,096 ಯುದ್ಧಕ್ಕೆ ಸಿದ್ಧವಾಗಿವೆ. ಇರಾನ್ 65,765 ಮಿಲಿಟರಿ ವಾಹನಗಳನ್ನು ಹೊಂದಿದ್ದು, ಅದರಲ್ಲಿ 46 ಸಾವಿರಕ್ಕೂ ಹೆಚ್ಚು ಸಕ್ರಿಯವಾಗಿವೆ. ಇನ್ನೂ ಇಸ್ರೇಲ್ 43,407 ಮಿಲಿಟರಿ ವಾಹನಗಳನ್ನು ಹೊಂದಿದೆ, ಅದರಲ್ಲಿ 34,736 ಸಕ್ರಿಯವಾಗಿವೆ. ಸ್ವಯಂ ಚಾಲಿತ ಪಿರಂಗಿಗಳ ಬಗ್ಗೆ ನೋಡಿದ್ರೆ, ಇರಾನ್‌ 580 ಫಿರಂಗಿ ಹೊಂದಿದ್ದು, ಅದರಲ್ಲಿ 406 ಸಕ್ರಿಯ ಸೇವೆಯಲ್ಲಿವೆ. ಇಸ್ರೇಲ್ 650 ಸ್ವಯಂ ಚಾಲಿತ ಫಿರಂಗಿಗಳನ್ನು ಹೊಂದಿದ್ದು, ಅದರಲ್ಲಿ 540 ಯುದ್ಧಕ್ಕೆ ಸಿದ್ಧವಾಗಿದೆ. ಸ್ವಯಂಚಾಲಿತವಲ್ಲದ ಫಿರಂಗಿಗಳಲ್ಲಿ ಇರಾನ್ 2050, ಇಸ್ರೇಲ್ ಕೇವಲ 300 ಹೊಂದಿದೆ. ಇಲ್ಲದೇ ಮಲ್ಟಿ ರಾಕೆಟ್‌ ಲಾಂಚರ್‌ಗಳ ಪೈಕಿ ಇರಾನ್‌ ಬಳಿ 775 ಮಲ್ಟಿ ಲಾಂಚರ್‌ ಇದ್ದರೆ, ಇಸ್ರೇಲ್‌ ಬಳಿ ಕೇವಲ 150 ರಾಕೆಟ್‌ ಲಾಂಚರ್‌ಗಳಿವೆ.

    ಸೈನಿಕರ ಬಲದಲ್ಲಿ ಇರಾನ್‌ 11.80 ಲಕ್ಷ ಸೈನಿಕರನ್ನು ಹೊಂದಿದೆ. ಈ ಪೈಕಿ 3.50 ಲಕ್ಷ ಮೀಸಲು ಸೇನಾ ಪಡೆ, 2.20 ಲಕ್ಷ ಸೈನಿಕರ ಪ್ಯಾರಾ ಮಿಲಿಟರಿ ಪಡೆಯನ್ನು ಹೊಂದಿದೆ. ಇಸ್ರೇಲ್‌ 6.70 ಲಕ್ಷ ಸೈನಿಕರ ಬಲ ಹೊಂದಿದೆ. ಈ ಪೈಕಿ ಇಸ್ರೇಲ್ 4.65 ಲಕ್ಷ ಮೀಸಲು ಪಡೆ, 35 ಸಾವಿರ ಪ್ಯಾರಾ ಮಿಲಿಟರಿ ಪಡೆ ಸೈನಿಕರನ್ನು ಹೊಂದಿದೆ. ಇದಲ್ಲದೇ ಇರಾನ್‌ ಬಳಿ 42 ಸಾವಿರ ಜೆಟ್‌ಮೆನ್‌ಗಳಿದ್ದರೆ, ಇಸ್ರೇಲ್‌ 89 ಸಾವಿರ ಜೆಟ್‌ಮೆನ್‌ ಬಲ ಹೊಂದಿದೆ. ಜೊತೆಗೆ ಇರಾನ್ ಒಟ್ಟು 18,500 ನೌಕಾ ಸಿಬ್ಬಂದಿ ಹೊಂದಿದ್ದರೆ, ಇಸ್ರೇಲ್ 19,500 ನೌಕಾದಳ ಸಿಬ್ಬಂದಿಯನ್ನು ಹೊಂದಿದೆ.

    ವಾಯುಪಡೆಯಲ್ಲಿ ಆನೆ ಬಲ

    ವಾಯು ರಕ್ಷಣಾ ವ್ಯವಸ್ಥೆಯಲ್ಲಿ ಇಸ್ರೇಲ್‌ ಇರಾನ್‌ಗಿಂತಲೂ ಹೆಚ್ಚು ಶಕ್ತಿಶಾಲಿಯಾಗಿದೆ. ಇರಾನ್‌ ಬಳಿ 551 ವಿಮಾನಗಳನ್ನು ಹೊಂದಿದ್ದು, ಅದರಲ್ಲಿ 358 ಸಕ್ರಿಯವಾಗಿವೆ. ಆದ್ರೆ ಇಸ್ರೇಲ್ 612 ಮೀಸಲು ಹೊಂದಿದ್ದು, 490 ವಿಮಾನ ಸಕ್ರಿಯವಾಗಿದೆ. ಇರಾನ್ 186 ಯುದ್ಧ ವಿಮಾನ ಹೊಂದಿದ್ದು, ಈ ಪೈಕಿ 121 ಮಂದಿ ಸದಾ ದಾಳಿಗೆ ಸಿದ್ಧರಾಗಿದ್ದಾರೆ. ಇಸ್ರೇಲ್ 241 ಯುದ್ಧವಿಮಾನಗಳನ್ನು ಹೊಂದಿದ್ದು, ಅದರಲ್ಲಿ 193 ದಾಳಿಗೆ ಸಿದ್ಧವಾಗಿವೆ.

    ಇಸ್ರೇಲ್‌ನ ಸೈಬರ್‌ ಅಸ್ತ್ರಗಳೇ ಇರಾನ್‌ಗೆ ಸವಾಲು

    * 2010ರ ಸುಮಾರಿಗೆ ಇರಾನ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿರುವುದನ್ನು ಗಮನಿಸಿದ ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್‌, ಶತ್ರುರಾಷ್ಟ್ರದ ಒಂದೊಂದು ಹೆಜ್ಜೆಯನ್ನು ವಿಫಲಗೊಳಿಸತೊಡಗಿತು. ಮುಖ್ಯವಾಗಿ ಇಸ್ರೇಲ್‌ ನೀಡಿದ ಸೈಬರ್‌ ದಾಳಿಯ ಏಟುಗಳಿಗೆ ಇರಾನ್‌ ಹೈರಾಣಾಯಿತು.
    * 2010, ಜೂನ್‌: ಬುಶೆಹರ್‌ ಪರಮಾಣು ಸ್ಥಾವರ ಕಂಪ್ಯೂಟರ್‌ಗಳು ಸ್ಟಕ್ಸ್ನೆಟ್ ವೈರಸ್‌ನ ದಾಳಿಗೆ ಗುರಿಯಾದವು. ಇದು 14 ಸ್ಥಾವರಗಳ 30 ಸಾವಿರಕ್ಕೂ ಹೆಚ್ಚು ಕಂಪ್ಯೂಟರ್‌ಗಳ ಮೇಲೆ ಪರಿಣಾಮ ಬೀರಿತು. ಇದರ ಹಿಂದೆ ಮೊಸಾದ್‌ ಕೈವಾಡ ಇದೆಯೆನ್ನುವುದು ಇರಾನ್‌ ಆರೋಪ.
    * 2011, ಏಪ್ರಿಲ್‌: ಇರಾನ್‌ನ ಭದ್ರತಾ ಸಂಸ್ಥೆಯ ಮುಖ್ಯಸ್ಥ ಘೋಲಮ್ರೆಜಾ ಜಲಾಲಿ ಪ್ರಕಾರ, ಇಸ್ರೇಲ್‌ ಸೃಷ್ಟಿಸಿದ ‘ಸ್ಟಾರ್ಸ್‌’ ಹೆಸರಿನ ವೈರಸ್‌ ಇರಾನ್‌ನ ಸರ್ಕಾರಿ ದಾಖಲೆಗಳನ್ನೇ ನಕಲು ಮಾಡಿತು.
    * 2012, ಏಪ್ರಿಲ್‌: ವೈಪರ್‌ ಮಾಲ್ವೇರ್‌ ಇರಾನ್‌ನ ಪೆಟ್ರೋಲಿಯಂ ಸಚಿವಾಲಯ ಮತ್ತು ನ್ಯಾಷನಲ್‌ ಇರಾನಿಯನ್‌ ಆಯಿಲ್‌ ಕಂಪನಿಯ ಕಂಪ್ಯೂಟರ್‌ಗಳಲ್ಲಿದ್ದ ಡೇಟಾವನ್ನೆಲ್ಲ ಅಳಿಸಿಹಾಕಿತ್ತು. ಹೀಗೆ ಇನ್ನೂ ಅನೇಕ ಉದಾಹರಣೆಗಳಿವೆ.

    ಕದನ ವಿರಾಮಕ್ಕೂ ಕ್ಯಾರೆ ಎನ್ನದೇ ಯುದ್ಧದಲ್ಲಿ ಮುನ್ನುಗ್ಗುತ್ತಿರುವ ಇಸ್ರೇಲ್‌ ಒಂದು ಕಡೆಯಾದ್ರೆ, ಇಸ್ರೇಲ್‌ ಅನ್ನೂ ಸೋಲಿಸಲೇಬೇಕೆಂದು ಪಣ ತೊಟ್ಟಿರುವ ಅದರ ಶತ್ರು ರಾಷ್ಟ್ರಗಳು ಮತ್ತೊಂದು ಕಡೆ ಇದೆ. ಇದರ ತಾರ್ಕಿತ ಅಂತ್ಯ ಎಲ್ಲಿಗೆ ಒಯ್ಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

  • 120ಕ್ಕೂ ಹೆಚ್ಚು ಉಗ್ರ ತಾಣಗಳು ಧ್ವಂಸ – ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ ಹತ್ಯೆ

    120ಕ್ಕೂ ಹೆಚ್ಚು ಉಗ್ರ ತಾಣಗಳು ಧ್ವಂಸ – ಇಸ್ರೇಲ್‌ ದಾಳಿಗೆ ಹಿಜ್ಬುಲ್ಲಾದ ಮತ್ತೊಬ್ಬ ಟಾಪ್‌ ಲೀಡರ್‌ ಹತ್ಯೆ

    ಬೈರೂತ್: ಒಂದು ವರ್ಷ ಕಳೆದರೂ ಇಸ್ರೇಲ್‌-ಹಮಾಸ್‌-ಹಿಜ್ಬುಲ್ಲಾ (Israel Hezbollah War) ನಡುವೆ ಸೇಡು, ಪ್ರತೀಕಾರದ ದಾಳಿಗಳು ತೀವ್ರಗೊಳ್ಳುತ್ತಿವೆ. ಬೈರೂತ್‌ ನಗರದ ಮೇಲೆ ಇಸ್ರೇಲ್‌ನ ಪಡೆಗಳು ವೈಮಾನಿಕ ದಾಳಿ ಮುಂದುವರಿಸಿವೆ. ಇರಾನ್‌ ಸುಪ್ರೀಂ ಲೀಡರ್‌ ಇಸ್ರೇಲ್‌ ವಿರುದ್ಧ ಗುಡುಗಿದ ಬಳಿಕ ಇಸ್ರೇಲ್‌ ತನ್ನ ವಾಯುದಾಳಿಯನ್ನು ಮತ್ತಷ್ಟು ತೀವ್ರಗೊಳಿಸಿದೆ.

    ಅದರಂತೆ ಸೋಮವಾರ ನಡೆಸಿದ ವೈಮಾನಿಕ ದಾಳಿಯಲ್ಲಿ ಹಿಜ್ಬುಲ್ಲಾದ ಲಾಜಿಸ್ಟಿಕ್‌ ಘಟಕದ ಮುಖ್ಯಸ್ಥ ಸುಹೇಲ್‌ ಹುಸೇನ್‌ ಹುಸೇನಿ ಅವರನ್ನು ಹತ್ಯೆ ಮಾಡಿರುವುದಾಗಿ ಇಸ್ರೇಲ್‌ ರಕ್ಷಣಾ ಪಡೆ ಮಂಗಳವಾರ (ಇಂದು) ಹೇಳಿಕೊಂಡಿದೆ. ಇದನ್ನೂ ಓದಿ: ಒಂದೇ ಗಂಟೆಯೊಳಗೆ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ತಾಣಗಳನ್ನು ಧ್ವಂಸ ಮಾಡಿದ ಇಸ್ರೇಲ್

    ಸೇನಾ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಇಸ್ರೇಲ್‌, ಸೋಮವಾರ ಅಂದ್ರೆ ಅಕ್ಟೋಬರ್‌ 7ರಂದು ಯುದ್ಧದ ವರ್ಷಾಚರಣೆ ವೇಳೆ ಬೈರೂತ್‌ನಲ್ಲಿ ನಡೆಸಿದ ದಾಳಿಯಲ್ಲಿ ಹುಸೇನಿಯನ್ನು ಹತ್ಯೆಗೈಯಲಾಗಿದೆ ಎಂದು ಹೇಳಿದೆ. ಆದ್ರೆ ಹಿಜ್ಬುಲ್ಲಾ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನೂ ಓದಿ: ತಾಂತ್ರಿಕ ದೋಷದಿಂದ ಯಡವಟ್ಟು; ಏಕಕಾಲಕ್ಕೆ ಕ್ವಾಂಟಾಸ್ ಫ್ಲೈಟ್‌ನ ಎಲ್ಲಾ ಟಿವಿ ಸ್ಕ್ರೀನ್‌ನಲ್ಲಿ ಸೆಕ್ಸ್‌ ವೀಡಿಯೋ ಪ್ರಸಾರ!

    ಸೋಮವಾರ (ಅ.7) ಇಸ್ರೇಲ್‌ ಒಂದು ಗಂಟೆ ಅವಧಿಯಲ್ಲಿ 120ಕ್ಕೂ ಹೆಚ್ಚು ಹಿಜ್ಬುಲ್ಲಾ ಉಗ್ರರ ನೆಲೆಗಳನ್ನ ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ದಕ್ಷಿಣ ಲೆಬನಾನ್‌ನಲ್ಲಿ ಒಂದು ಗಂಟೆಯೊಳಗೆ 120ಕ್ಕೂ ಹೆಚ್ಚು ಭಯೋತ್ಪಾದಕರ ಅಡಗುದಾಣಗಳನ್ನು ಧ್ವಂಸ ಮಾಡಲಾಗಿತ್ತು.

    ಇದಕ್ಕೂ ಮುನ್ನಾದಿನ ಗಾಜಾದಲ್ಲಿನ (Gaza) ಮಸೀದಿಯ (Mosque) ಮೇಲೆ ಇಸ್ರೇಲ್‌ (Israel) ವಾಯುಪಡೆ ನಡೆಸಿದ್ದ ವೈಮಾನಿಕ ದಾಳಿಯಿಂದ 26 ಮಂದಿ ಸಾವಿಗೀಡಾಗಿದ್ದರು. ಈ ಬೆನ್ನಲ್ಲೇ ಹಮಾಸ್‌ ಕೂಡ ಕೌಂಟರ್‌ ಅಟ್ಯಾಕ್‌ ಮಾಡಿತ್ತು. ಇಸ್ರೇಲ್‌ ವೈಮಾನಿಕ ದಾಳಿ ಬೆನ್ನಲ್ಲೇ ಗಾಜಾದಿಂದ ರಾಕೆಟ್‌ಗಳನ್ನು (Rocket Fired) ಹಾರಿಸಿತ್ತು. ಇದನ್ನೂ ಓದಿ: ವಾಯುದಾಳಿಗೆ ಕೌಂಟರ್‌ ಅಟ್ಯಾಕ್‌ – ದಕ್ಷಿಣ ಇಸ್ರೇಲ್‌ ಕಡೆಗೆ ಹೊರಟ ಸ್ಫೋಟಕ ತುಂಬಿದ ರಾಕೆಟ್‌

  • ನಿರಾಶ್ರಿತರಿದ್ದ ಡೇರೆಗಳ ಮೇಲೆ ಇಸ್ರೇಲ್‌ ವಾಯುದಾಳಿ; 45 ಮಂದಿ ಸಾವು

    ನಿರಾಶ್ರಿತರಿದ್ದ ಡೇರೆಗಳ ಮೇಲೆ ಇಸ್ರೇಲ್‌ ವಾಯುದಾಳಿ; 45 ಮಂದಿ ಸಾವು

    ಟೆಲ್‌ ಅವಿವ್‌: ದಕ್ಷಿಣ ಗಾಜಾದ (Gaza) ರಫಾದಲ್ಲಿನ (Rafah) ನಿರಾಶ್ರಿತರ ಡೇರೆಗಳ ಮೇಲೆ ಇಸ್ರೇಲ್‌ (Israel) ನಡೆಸಿದ ವಾಯುದಾಳಿಗೆ ಕನಿಷ್ಠ 45 ಮೃತಪಟ್ಟಿದ್ದಾರೆ.

    ದಕ್ಷಿಣ ನಗರವಾದ ರಫಾದಿಂದ ಸ್ಥಳಾಂತರಗೊಂಡವರ ಶಿಬಿರದ ಮೇಲೆ ಇಸ್ರೇಲಿ ನಡೆಸಿದ ದಾಳಿಯಲ್ಲಿ ಕನಿಷ್ಠ 23 ಮಹಿಳೆಯರು, ಮಕ್ಕಳು ಮತ್ತು ವೃದ್ಧರು ಸೇರಿದಂತೆ ಕನಿಷ್ಠ 45 ಪ್ಯಾಲೆಸ್ಟೀನಿಯಾದವರು ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ಮಿಜೋರಾಂನಲ್ಲಿ ಭಾರೀ ಮಳೆ- ಕಲ್ಲುಕ್ವಾರಿ ಕುಸಿದು 10 ಮಂದಿ ದುರ್ಮರಣ, ಹಲವರು ನಾಪತ್ತೆ

    ಸಚಿವಾಲಯವು ಇಸ್ರೇಲ್‌ನ ಮಿಲಿಟರಿ ದಾಳಿಯಿಂದ ಸತ್ತವರ ಸಂಖ್ಯೆ 36,050 ಕ್ಕೆ ಏರಿಕೆಯಾಗಿದ್ದು, 81,026 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿಸಿದೆ.

    ಹಮಾಸ್ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡಿದೆ ಎಂದು ಇಸ್ರೇಲ್‌ ಸೇನೆಯು ತಿಳಿಸಿದೆ. ಕಳೆದ ರಾತ್ರಿ ಗಾಜಾ ಪಟ್ಟಿಯಲ್ಲಿನ ಪ್ಯಾಲೇಸ್ಟಿನಿಯನ್ ನಾಗರಿಕರ ಮೇಲಿನ ಭೀಕರ ದಾಳಿ ಪರಿಣಾಮವನ್ನು ಪರಿಶೀಲಿಸುತ್ತಿದೆ ಎಂದು ಇಸ್ರೇಲ್ ಹೇಳಿದೆ. ಇದನ್ನೂ ಓದಿ: ರಸ್ತೆ ದಾಟುವಾಗ ಕಾರು ಡಿಕ್ಕಿ – ಅಮೆರಿಕದಲ್ಲಿ ತೆಲಂಗಾಣ ಮೂಲದ ಯುವತಿ ಸಾವು

    ಆಕ್ರಮಿತ ಪಶ್ಚಿಮ ದಂಡೆಯಲ್ಲಿ ಇಸ್ರೇಲಿಗಳನ್ನು ಗುರಿಯಾಗಿಸಿ ನಡೆಸಲಾಗಿದ್ದ ಹಲವು ದಾಳಿಗಳಿಗೆ ಜವಾಬ್ದಾರರಾಗಿರುವ ಇಬ್ಬರು ಹಮಾಸ್ ಉಗ್ರಗಾಮಿಗಳನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ ಸ್ಪಷ್ಟಪಡಿಸಿದೆ.

  • ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಉಗ್ರರು ಬಲಿ: ಕೇಂದ್ರ ಸಚಿವ ವಿಕೆ ಸಿಂಗ್

    ಏರ್ ಸ್ಟ್ರೈಕ್‍ನಲ್ಲಿ ಸುಮಾರು 250 ಉಗ್ರರು ಬಲಿ: ಕೇಂದ್ರ ಸಚಿವ ವಿಕೆ ಸಿಂಗ್

    ನವದೆಹಲಿ: ಪುಲ್ವಾಮಾ ಭಯೋತ್ಪಾದಕ ದಾಳಿ ಪ್ರತಿಕಾರವಾಗಿ ಭಾರತ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದ ದಾಳಿಯಲ್ಲಿ ಸುಮಾರು 250 ಉಗ್ರರು ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ರಕ್ಷಣಾಖಾತೆ ರಾಜ್ಯ ಸಚಿವ ವಿಕೆ ಸಿಂಗ್ ಹೇಳಿದ್ದಾರೆ.

    ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಭಾರತೀಯ ವಾಯುಸೇನೆ ಪಾಕಿಸ್ತಾನ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಸುಮಾರು 250 ಉಗ್ರರು ಸಾವನ್ನಪ್ಪಿರುವ ಸಾಧ್ಯತೆ ಇದೆ. ಭಾರತ ಏರ್ ಸ್ಟ್ರೈಕ್ ಉಗ್ರರ ನೆಲೆಗಳ ಮೇಲೆ ಮಾತ್ರ ನಡೆಸುವ ಉದ್ದೇಶ ಹೊಂದಿತ್ತು. ಏಕೆಂದರೆ ಜನವಸತಿ ಪ್ರದೇಶದಲ್ಲಿ ದಾಳಿ ನಡೆಸಿದರೆ ನಾಗರಿಕರು ಸಾವನ್ನಪ್ಪುವ ಕಾರಣದಿಂದ ಈ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಅದ್ದರಿಂದ ಜನವಸತಿಯಿಂದ ದೂರ ನಿರ್ಮಾಣ ಮಾಡಲಾಗಿದ್ದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಸ್ಪಷ್ಟನೆ ನೀಡಿದರು.

    ಅಮಿತ್ ಶಾ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬಾಲಕೋಟ್ ಕಟ್ಟಡದಲ್ಲಿ ನೆಲೆಸಿದ್ದ ವ್ಯಕ್ತಿಗಳನ್ನು ಆಧಾರಿಸಿ ಅವರು ಹೇಳಿಕೆ ಕೊಟ್ಟಿದ್ದಾರೆ. ಅವರು ಅಧಿಕೃತವಾಗಿ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಲ್ಲ. ಅಷ್ಟು ಮಂದಿ ಸಾವನ್ನಪ್ಪಿರಬಹುದು ಎಂದು ಅಂದಾಜಿನಲ್ಲಿ ಹೇಳಿದ್ದಾರೆ ಅಷ್ಟೇ ಎಂದು ತಿಳಿಸಿದರು.

    ಕಾಂಗ್ರೆಸ್ ಪಕ್ಷದ ವಕ್ತಾರರದ ದಿಗ್ವಿಜಯ್ ಸಿಂಗ್ ಏರ್ ಸ್ಟ್ರೈಕ್ ನಡೆಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಅಲ್ಲದೇ ಪುಲ್ವಾಮಾ ದಾಳಿ ಒಂದು ಘಟನೆ ಆಕ್ಸಿಡೆಂಟ್ ಮಾತ್ರ ಎಂದು ಶಂಕೆ ವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ವಿಕೆ ಸಿಂಗ್ ತಿರುಗೇಟು ನೀಡಿ ದಿಗ್ವಿಜಯ್ ಸಿಂಗ್ ಸೇರಿಂದತೆ ಏರ್ ಸ್ಟ್ರೈಕ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಬಗ್ಗೆ ಕಿಡಿಕಾರಿದ್ದಾರೆ. ನಾನು ದಿಗ್ವಿಜಯ್ ಸಿಂಗ್‍ರನ್ನು ಗೌರವದಿಂದ ಪ್ರಶ್ನೆ ಮಾಡುತ್ತಿದ್ದೇನೆ. ರಾಜೀವ್ ಗಾಂಧಿ ಅವರ ಹತ್ಯೆ ಅಪಘಾತವೇ ಅಥವಾ ಉಗ್ರರ ದಾಳಿಯೇ ಎಂದು ಪ್ರಶ್ನಿಸಿದರು.

    ಗುಜರಾತ್‍ನಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಅಮಿತ್ ಶಾ, ಭಾರತದ ವಾಯುಪಡೆ ಬಾಲಕೋಟ್ ಮೇಲೆ ನಡೆಸಿದ ದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ. ಉರಿಯಲ್ಲಿ ಉಗ್ರರ ದಾಳಿ ಬಳಿಕ ಭಾರತ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಉಗ್ರರು ಅಲರ್ಟ್ ಆಗಿದ್ದರಿಂದ ವಾಯು ದಾಳಿ ನಡೆಸಲಾಗಿದೆ. ಪುಲ್ವಾಮಾ ದಾಳಿಯ ಬಳಿಕ ಫೆಬ್ರವರಿ 26 ರಂದು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಏರ್ ಸ್ಟ್ರೈಕ್ ನಡೆಸಲು ಅನುಮತಿ ನೀಡಿತ್ತು. ಭಾರತ ಯಶಸ್ವಿಯಾಗಿ ಉಗ್ರರ ತಾಣಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿ ಯಾವುದೇ ಹಾನಿಗೆ ಒಳಗಾಗದೇ ಭಾರತಕ್ಕೆ ಹಿಂದಿರುಗಿತ್ತು ಎಂದು ಹೇಳಿದ್ದರು.

    ಏರ್ ಸ್ಟ್ರೈಕ್ ನಲ್ಲಿ ಎಷ್ಟು ಮಂದಿ ಸಾವನ್ನಪ್ಪಿದ್ದಾರೆ ಎನ್ನುವ ಪ್ರಶ್ನೆಗೆ ವಾಯುಸೇನೆ ಉತ್ತರ ನೀಡಿರಲಿಲ್ಲ. ಏರ್ ಚೀಫ್ ಮಾರ್ಷಲ್ ಧನೋವಾ ಅವರು ಸತ್ತವರ ಹೆಣವನ್ನು ಲೆಕ್ಕಹಾಕುವುದು ನಮ್ಮ ಕೆಲಸವಲ್ಲ. ನಮಗೆ ಏನು ಗುರಿಯನ್ನು ನೀಡಲಾಗಿತ್ತೋ ಆ ಗುರಿಯನ್ನು ಯಶಸ್ವಿಯಾಗಿ ಹೊಡೆದು ಹಾಕಿದ್ದೇವೆ ಎಂದು ಹೇಳಿದ್ದರು.

    ಕೇಂದ್ರ ಸರ್ಕಾರ ಅಧಿಕೃತವಾಗಿ ಎಷ್ಟು ಮಂದಿ ಉಗ್ರರು ಸಾವನ್ನಪ್ಪಿದ್ದಾರೆ ಎನ್ನುವುದನ್ನು ತಿಳಿಸಿರಲಿಲ್ಲ. ಈ ಮಧ್ಯೆ ಅಮಿತ್ ಶಾ 250 ಮಂದಿ ಸಾವನ್ನಪ್ಪಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಹೀಗಾಗಿ ಕಾಂಗ್ರೆಸ್ ನಾಯಕರು ಕಿಡಿಕಾರಿ, ದೇಶದ ರಕ್ಷಣಾ ಮಾಹಿತಿ ಬಿಜೆಪಿ ಪಕ್ಷದ ಅಧ್ಯಕ್ಷರ ಕೈಗೆ ಹೇಗೆ ಸಿಕ್ಕಿತ್ತು ಎಂದು ಪ್ರಶ್ನಿಸಿದ್ದರು. ಈಗ ಏರ್ ಸ್ಟ್ರೈಕ್ ನಡೆದ ಬಳಿಕ ಇದೇ ಮೊದಲ ಬಾರಿಗೆ ವಿಕೆ ಸಿಂಗ್ 250 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳುವ ಮೂಲಕ ಕೇಂದ್ರ ಸರ್ಕಾರ ನೀಡಬೇಕಾದ ಉತ್ತರವನ್ನು ನೀಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಮ್ಮ ವಾಯು ಸೇನೆಗಿಂತಲೂ ಐಎಎಫ್ ಬಗ್ಗೆ ಜಾಸ್ತಿ ಸರ್ಚ್ ಮಾಡಿದ್ರು ಪಾಕ್ ನೆಟ್ಟಿಗರು

    ತಮ್ಮ ವಾಯು ಸೇನೆಗಿಂತಲೂ ಐಎಎಫ್ ಬಗ್ಗೆ ಜಾಸ್ತಿ ಸರ್ಚ್ ಮಾಡಿದ್ರು ಪಾಕ್ ನೆಟ್ಟಿಗರು

    ನವದೆಹಲಿ: ಪುಲ್ವಾಮಾ ದಾಳಿಯ ಪ್ರತ್ಯುತ್ತರವಾಗಿ ಭಾರತೀಯ ವಾಯು ಪಡೆ (ಐಎಎಫ್) ಮಂಗಳವಾರ ನಡೆಸಿದ ಸರ್ಜಿಕಲ್ ಸ್ಟ್ರೈಕ್ 2 ಟ್ವಿಟ್ಟರ್ ನಲ್ಲಿ ವಿಶ್ವದ ನಂಬರ್ ಒನ್ ಟ್ರೆಂಡಿಂಗ್‍ನಲ್ಲಿತ್ತು. ಗೂಗಲ್ ಟ್ರೆಂಡ್ ನಲ್ಲೂ ಪಾಕಿಸ್ತಾನ ವಾಯು ಪಡೆ (ಪಿಎಎಫ್)ಗಿಂತಲೂ ಐಎಎಫ್ ನಂಬರ್ ಒನ್ ಸ್ಥಾನ ಪಡೆದಿದೆ.

    ಪಾಕಿಸ್ತಾನದ ಹೆಚ್ಚಿನ ಜನರು ಗೂಗಲ್‍ನಲ್ಲಿ ಪಿಎಎಫ್, ಐಎಎಫ್, ಬಾಲಕೋಟ್, ಸರ್ಜಿಕಲ್ ಸ್ಟ್ರೈಕ್ ಹಾಗೂ ಎಲ್‍ಓಸಿ ಕುರಿತಾಗಿ ಸರ್ಚ್ ಮಾಡಿದ್ದಾರೆ. ತಮ್ಮ ದೇಶದ ವಾಯು ಪಡೆಗಿಂತ ಹೆಚ್ಚಾಗಿ ಐಎಎಫ್ ಬಗ್ಗೆ ಹೆಚ್ಚಿನ ಜನರು ಸರ್ಚ್ ಮಾಡಿದ್ದಾರೆ. ಈ ಮೂಲಕ ಪಾಕಿಸ್ತಾನದಲ್ಲಿಯೂ ಐಎಎಫ್ ಟ್ರೆಂಡಿಂಗ್‍ನಲ್ಲಿತ್ತು.

    ಫೆಬ್ರವರಿ 25ರಂದು ಸಂಜೆ 5.30ರಿಂದ ಫೆ.26ರ ಸಂಜೆ 5.30 ರವರೆಗೂ ಗೂಗಲ್‍ನಲ್ಲಿ ಪಾಕಿಸ್ತಾನದ ಜನರು ಹೆಚ್ಚಾಗಿ ಬಾಲಕೋಟ್ ದಾಳಿಯ ಬಗ್ಗೆ ಸರ್ಚ್ ಮಾಡಿದ್ದಾರೆ. ಅದರ ನಂತರದ ಸ್ಥಾನದಲ್ಲಿ ಎಲ್‍ಓಸಿ, ಐಎಎಫ್ ಟ್ರೆಂಡಿಂಗ್‍ನಲ್ಲಿತ್ತು

    ಭಾರತೀಯರು ಸರ್ಜಿಕಲ್ ಸ್ಟ್ರೈಕ್ ಕುರಿತು ಹೆಚ್ಚಾಗಿ ಹುಡುಕಾಡಿದ್ದಾರೆ. ಅದರ ನಂತರ ಟ್ರೆಂಡಿಂಗ್‍ನಲ್ಲಿರುವುದು, ಐಎಎಫ್ ಹಾಗೂ ಬಾಲಕೋಟ್. ಭಾರತೀಯರು ಪಾಕಿಸ್ತಾನದ ವಾಯು ಪಡೆಯನ್ನು ಕಡೆಗಣಿಸಿದ್ದಾರೆ. ಏಕೆಂದರೆ ಅದು ಎಲ್‍ಓಸಿಗಿಂತ ಕಡಿಮೆ ಪ್ರಮಾಣದಲ್ಲಿ ಸರ್ಚ್ ಆಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಯಾಣಿಕರಿಗೆ ಉಚಿತ ಸೇವೆ ನೀಡಿ ಸರ್ಜಿಕಲ್ ಸ್ಟ್ರೈಕ್ 2 ಸಂಭ್ರಮಿಸಿದ ಆಟೋ ಡ್ರೈವರ್

    ಪ್ರಯಾಣಿಕರಿಗೆ ಉಚಿತ ಸೇವೆ ನೀಡಿ ಸರ್ಜಿಕಲ್ ಸ್ಟ್ರೈಕ್ 2 ಸಂಭ್ರಮಿಸಿದ ಆಟೋ ಡ್ರೈವರ್

    ನವದೆಹಲಿ: ಪುಲ್ವಾಮಾ ದಾಳಿಯ ಪ್ರತಿಕಾರ ತೀರಿಸಿಕೊಂಡ ಹಿನ್ನಲೆಯಲ್ಲಿ ದೇಶವ್ಯಾಪಿ ಸಂತೋಷ ಮನೆ ಮಾಡಿದೆ. ಕೆಲವರು ಪಟಾಕಿ ಸಿಡಿಸಿ, ಸ್ವೀಟ್ ಹಂಚಿ ಸರ್ಜಿಕಲ್ ಸ್ಟ್ರೈಕ್ 2 ಅನ್ನು ಸಂಭ್ರಮಿಸಿದ್ದಾರೆ. ಆದರೆ ದೆಹಲಿಯ ಆಟೋ ಡ್ರೈವರ್ ಒಬ್ಬರು ವಿನೂತನ ರೀತಿಯಲ್ಲಿ ಸಂಭ್ರಮಾಚರಣೆ ಮಾಡಿದ್ದಾರೆ.

    ಆಟೋ ಚಾಲಕ ಮನೋಜ್ ಅವರು ಫೆಬ್ರವರಿ 26ರಂದು (ಮಂಗಳವಾರ) ತಮ್ಮ ಆಟೋದಲ್ಲಿ ಪ್ರಯಾಣಿಸಿದ್ದ ಪ್ರಯಾಣಿಕರಿಗೆಲ್ಲ ಉಚಿತವಾಗಿ ಸೇವೆ ಒದಗಿಸಿದ್ದಾರೆ. ಜೊತೆಗೆ ತಮ್ಮ ಆಟೋದಲ್ಲಿ, ಹುತಾತ್ಮ ಯೋಧರಿಗೆ ನಮನ ಸಲ್ಲಿಸಲು ಹಾಗೂ ಭಾರತೀಯ ವಾಯು ಪಡೆ ಇಂದು ನಡೆಸಿದ ಸರ್ಜಿಕಲ್ ಸ್ಟ್ರೈಕ್ 2 ನಿಂದಾಗಿ ಎಲ್ಲರಿಗೂ ಉಚಿತ ಪ್ರಯಾಣ ಎಂದು ಬ್ಯಾನರ್ ಹಾಕಿದ್ದಾರೆ. ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ಈ ಕುರಿತು ಪ್ರತಿಕ್ರಿಯೆ ನೀಡಿರುವ ಮನೋಜ್ ಅವರು, ಉಚಿತ ಆಟೋ ಸೇವೆಗಿಂತ ಹೆಚ್ಚೇನೂ ಮಾಡಲು ನನ್ನಿಂದ ಸಾಧ್ಯವಿಲ್ಲ. ಹೀಗಾಗಿ ನನ್ನ ಆಟೋದಲ್ಲಿ ಮಂಗಳವಾರ ಪ್ರಯಾಣಿಸುವ ಎಲ್ಲ ಪ್ರಯಾಣಿಕರಿಗೆ ಯಾವುದೇ ರೀತಿ ದರ ವಿಧಿಸುತ್ತಿಲ್ಲ. ಇದು ನನಗೆ ಹೆಚ್ಚು ಖುಷಿ ತಂದಿದೆ ಎಂದು ಹೇಳಿದ್ದಾರೆ.

    ಭಾರತೀಯ ವಾಯು ಪಡೆ ಮಂಗಳವಾರ ಮುಂಜಾನೆ 3.45ರ ಸುಮಾರಿಗೆ ಮೊದಲು ಬಾಲಕೋಟ್ ಮೇಲೆ ದಾಳಿ ಮಾಡಿತ್ತು. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿತ್ತು. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ದಾಳಿ ಮಾಡಿದೆ. ಇದನ್ನು ಓದಿ: ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಬಾಲಕೋಟ್ ನೆಲೆಯಲ್ಲಿ 300 ಉಗ್ರರು, ತರಬೇತುದಾರರು ಹಾಗೂ ಜೈಶ್ ಸಂಘಟನೆಯ ಕಮಾಂಡೋಗಳು ಬಲಿಯಾಗಿದ್ದಾರೆ. ಜೊತೆಗೆ ಈ ದಾಳಿಯಲ್ಲಿ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಅಜರ್ ಮಸೂದ್‍ನ ಭಾಮೈದ ಅಜರ್ ಯೂಸುಫ್ ಅಲಿಯಾಸ್ ಉಸ್ತಾದ್ ಘೋರಿ ಹತ್ಯೆಯಾಗಿದ್ದಾನೆ ಎಂದು ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ಮೂರ್ಖ ನಿರ್ಧಾರಕ್ಕೆ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಾಗಿರಲಿ: ಓವೈಸಿ

    ಪಾಕಿಸ್ತಾನದ ಮೂರ್ಖ ನಿರ್ಧಾರಕ್ಕೆ ಉತ್ತರ ನೀಡಲು ಭಾರತೀಯ ಸೇನೆ ಸಿದ್ಧವಾಗಿರಲಿ: ಓವೈಸಿ

    – ವಾಯು ಪಡೆ, ಕೇಂದ್ರ ಸರ್ಕಾರಕ್ಕೆ ಧನ್ಯವಾದ

    ಹೈದರಾಬಾದ್: ಪಾಕಿಸ್ತಾನ ಮೂರ್ಖ ನಿರ್ಧಾರಗಳನ್ನ ಕೈಗೊಂಡರೆ ಅದನ್ನು ಎದುರಿಸಲು ನಮ್ಮ ಸೇನೆ ಸಿದ್ಧವಾಗಿರಬೇಕು ಎಂದು ಆಲ್ ಇಂಡಿಯಾ ಮಜ್ಲಿಸೆ ಇತ್ತೆಹದುಲ್ ಮುಸ್ಲಿಂ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

    ಹೈದರಾಬಾದ್‍ನಲ್ಲಿ ಮಾತನಾಡಿದ ಅವರು, ನಾವು ಊಹಿಸಿದಂತೆ ಭಾರತ ಸರ್ಕಾರ ಹಾಗೂ ವಾಯು ಪಡೆ ಪುಲ್ವಾಮಾ ದಾಳಿಗೆ ಪ್ರತ್ಯುತ್ತರ ನೀಡಿದೆ. ವಾಯುಸೇನೆಗೆ ನಮ್ಮ ಅಭಿನಂದನೆ. ಕೇಂದ್ರ ಸರ್ಕಾರವು ದಿಟ್ಟ ನಿರ್ಧಾವನ್ನು ಕೈಗೊಂಡಿದೆ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಓವೈಸಿ ತಿಳಿಸಿದರು.  ಇದನ್ನೂ ಓದಿ:ಭಾರತದಿಂದ 50 ಉಗ್ರರ ಹತ್ಯೆ: ದಾಳಿ ಒಪ್ಪಿಕೊಂಡ ಪಾಕ್ ಸೇನೆ

    ವಿಶ್ವಸಂಸ್ಥೆಯ ವಿಧಿ 51ರಂತೆ ಭಾರತವು ತನ್ನ ಗಡಿಯನ್ನು ಮತ್ತು ರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಂಡಿದೆ. ಸ್ವಯಂ ರಕ್ಷಣೆಗೆ ದಾಳಿ ಮಾಡುವ ಹಕ್ಕನ್ನು ಭಾರತ ಹೊಂದಿದೆ. ಕೇಂದ್ರ ಸರ್ಕಾರವು ಉಗ್ರರಿಗೆ ತಕ್ಕ ಪಾಠ ಕಲಿಸಲು ಸೂಕ್ತ ದಾಳಿ ನಡೆಸಬೇಕೆಂದು ನಾವು ಬಹುದಿನಗಳಿಂದ ಕಾಯುತ್ತಿದ್ದೇವು. ದಾಳಿ ಮಾಡಿದವರು ಮಸೂದ್ ಅಜರ್, ಲಷ್ಕರ್ ಅದು ಯಾರೇ ಆಗಿರಲಿ ನಾನು ಅವುಗಳನ್ನು ತಾಲಿಬಾನ್‍ಗಳು ಎಂತಲೇ ಕರೆಯುತ್ತೇನೆ. ಇಂತಹ ಸೈತಾನ್‍ಗಳನ್ನು ಸರ್ಕಾರ ಹೊಡೆದು ಹಾಕಬೇಕು ಎಂದು ಕಿಡಿಕಾರಿದರು.

    ನಾನು ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಯಾವುದೇ ಬಗ್ಗೆ ಪ್ರಶ್ನೆ ಮಾಡಲ್ಲ. ಉಗ್ರರನ್ನು ಹೊಡೆದು ಹಾಕುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳುವ ಸರ್ಜಿಕಲ್ ಸ್ಟ್ರೈಕ್‍ಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಸ್ಪಷ್ಟನೆ ನೀಡಿದರು. ಇದನ್ನೂ ಓದಿ:ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಕತ್ತಲಾಗಿದ್ದರಿಂದ ಪ್ರತಿ ದಾಳಿ ನಡೆಸಲಿಲ್ಲ: ಪಾಕಿಸ್ತಾನ ರಕ್ಷಣಾ ಸಚಿವ

    ಕತ್ತಲಾಗಿದ್ದರಿಂದ ಪ್ರತಿ ದಾಳಿ ನಡೆಸಲಿಲ್ಲ: ಪಾಕಿಸ್ತಾನ ರಕ್ಷಣಾ ಸಚಿವ

    ಇಸ್ಲಾಮಾಬಾದ್: ಭಾರತೀಯ ವಾಯು ಪಡೆ ಏರ್‌ ಸ್ಟ್ರೈಕ್ ದಾಳಿ ನಡೆಸಿದಾಗ ಕತ್ತಲಾಗಿತ್ತು. ಹೀಗಾಗಿ ಪ್ರತಿದಾಳಿ ಮಾಡಲು ಸಾಧ್ಯವಾಗಲಿಲ್ಲ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಪರ್ವೇಜ್ ಖಟಕ್ ತಿಳಿಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ 2 ದಾಳಿಯಿಂದ ತತ್ತರಿಸಿದ್ದ ಪಾಕಿಸ್ತಾನ ಇಂದು ಸುದ್ದಿಗೋಷ್ಠಿ ಕರೆದು ಭಾರತದ ವಿರುದ್ಧ ಪ್ರತಿದಾಳಿ ನಡೆಸುತ್ತೇವೆ ಎಂದು ಹೇಳಿದೆ. ಈ ವೇಳೆ ಮಾಧ್ಯಮದವರು, ದಾಳಿಯ ವೇಳೆ ಪಾಕಿಸ್ತಾನ ವಾಯು ಪಡೆಯ ಏನು ಮಾಡುತ್ತಿತ್ತು? ಯಾಕೆ ಪ್ರತಿ ದಾಳಿ ನಡೆಸಲಿಲ್ಲ ಎಂದು ಪ್ರಶ್ನೆ ಕೇಳಿದ್ದಾರೆ.

    ಮಾಧ್ಯಮಗಳ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ದಾಳಿಯು ಮುಂಜಾನೆ ಸುಮಾರು 3 ಗಂಟೆಯ ವೇಳೆ ನಡೆದಿದೆ. ಭಾರತೀಯ ವಾಯು ಪಡೆಯು ಗಡಿಯನ್ನು ದಾಟಿ 5 ರಿಂದ 6 ಕಿ.ಮೀ. ಒಳಗಡೆ ಪ್ರವೇಶಿಸಿ, ಬಾಂಬ್ ಹಾಕಿದ್ದಾರೆ. ರಾತ್ರಿ ದಾಳಿ ನಡೆದಿದ್ದರಿಂದ ಎಷ್ಟು ನಷ್ಟವಾಗಿದೆ ಎಂದು ತಿಳಿದಿಲ್ಲ. ಈ ವೇಳೆ ನಮ್ಮ ಏರ್‍ಫೋರ್ಸ್ ಸಿದ್ಧವಾಗಿತ್ತು. ಆದರೆ ಕತ್ತಲಾಗಿದ್ದರಿಂದ ಯುದ್ಧ ವಿಮಾನ ಹಾರಾಟ ಸಾಧ್ಯವಾಗಲಿಲ್ಲ ಎಂದು ಹೇಲಿದ್ದಾರೆ.

    https://twitter.com/justgtin/status/1100385235928199170

    ದಾಳಿಗೆ ಪ್ರತ್ಯುತ್ತರ ನೀಡಲು ನಮ್ಮ ವಾಯು ಪಡೆ ಸಿದ್ಧವಾಗಿದ್ದು, ನಮ್ಮ ಆದೇಶಕ್ಕಾಗಿ ಕಾಯುತ್ತಿದ್ದಾರೆ. ಸದ್ಯದಲ್ಲಿಯೇ ಭಾರತೀಯ ವಾಯುಪಡೆಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದ್ದಾರೆ.

    ಇದೇ ವೇಳೆ ಪಕ್ಕದಲ್ಲೇ ಕುಳಿತಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಷಾಹ್ ಮೊಹಮ್ಮದ್ ಖುರೇಷಿ ಮಾತನಾಡಿ, ದಾಳಿಯ ಕುರಿತು ರಕ್ಷಣಾ ಸಚಿವಾಲಯದ ಜೊತೆಗೆ ಚರ್ಚೆ ಮಾಡಿದ್ದೇನೆ. ಪಾಕಿಸ್ತಾನ ವಾಯು ಪಡೆ ಪ್ರತಿದಾಳಿಗೆ ಸಿದ್ಧವಾಗಿದ್ದು, ಇದು ಬಹುರೂಪದ ದಾಳಿಯಾಗಿರುತ್ತದೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ಪಾಕಿಸ್ತಾನದ ಮೊಂಡು ವಾದವನ್ನು ಬಯಲು ಮಾಡಿದ್ರು ಬಾಲಕೋಟ್ ನಿವಾಸಿಗಳು

    ನವದೆಹಲಿ: ಭಾರತೀಯ ವಾಯು ಪಡೆ ದಾಳಿಗೆ ಯಾವುದೇ ಹಾನಿ ಸಂಭವಿಸಿಲ್ಲವೆಂದು ಪಾಕಿಸ್ತಾನ ಮೊಂಡುವಾದ ಮುಂದುವರಿಸಿತ್ತು. ಆದರೆ ಬಾಲಕೋಟ್ ನಿವಾಸಿಗಳು ಏರ್ ಸ್ಟ್ರೈಕ್‍ನಿಂದ ಭಾರೀ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹೇಳುವ ಮೂಲಕ ಪಾಕ್ ಮೊಂಡುವಾದವನ್ನು ಬಯಲು ಮಾಡಿದ್ದಾರೆ.

    ಯುದ್ಧದ ರೀತಿಯಲ್ಲಿ ಇಂದು 3 ಗಂಟೆ ಸುಮಾರು ಭಾರೀ ಪ್ರಮಾಣದಲ್ಲಿ ಶಬ್ಧ ಕೇಳಿ ಬಂತು. ಅದು ಹವಾಮಾನ ವೈಪರಿತ್ಯದಂತೆ ನಮ್ಮನ್ನು ತಲ್ಲಣಗೊಳಿಸಿತ್ತು. ಇದರಿಂದಾಗಿ ಇಡೀ ರಾತ್ರಿ ನಾವು ನಿದ್ರಿಸಲು ಸಾಧ್ಯವಾಗಲಿಲ್ಲ. ಶಬ್ಧ ಕೇಳಿಬಂದ 5 ರಿಂದ 10 ನಿಮಿಷದಲ್ಲಿ ಮೂರು ಸ್ಫೋಟಗಳು ಸಂಭವಿಸಿದವು. ಪರಿಣಾಮ ಕಟ್ಟಡಗಳು ನೆಲ ಸಮವಾದವು. ಈ ಘಟನೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದನ್ನು ನಾವು ನೋಡಿದ್ದೇವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದಾರೆ. ಇದನ್ನು ಓದಿ: ಪಾಕಿಸ್ತಾನಕ್ಕೆ ಅಮೇರಿಕ 1 ಡಾಲರ್ ಆರ್ಥಿಕ ನೆರವನ್ನು ನೀಡಬಾರದು: ನಿಕ್ಕಿ ಹ್ಯಾಲೆ

    ಅಷ್ಟೇ ಅಲ್ಲದೆ ದಾಳಿಯ ಅವಶೇಷಗಳನ್ನು ಮಾಧ್ಯಮಗಳಿಗೆ ತೋರಿಸಿದ್ದಾರೆ. ಈ ಮೂಲಕ ದಾಳಿಯಿಂದ ಪಾಕಿಸ್ತಾನದ ಮೊಂಡುವಾದ ಬಯಲಾಗಿದ್ದು, ಪ್ರಧಾನಿ ಇಮ್ರಾನ್ ಖಾನ್ ಉನ್ನತಮಟ್ಟದ ಅಧಿಕಾರಿಗಳ ಸಭೆ ಕರೆದು ಸುದೀರ್ಘ ಚರ್ಚೆ ನಡೆಸಿದ್ದಾರೆ.

    ಸರ್ಜಿಕಲ್ ಸ್ಟ್ರೈಕ್ 2 ದಾಳಿಯ ಕುರಿತು ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದ ಪಾಕಿಸ್ತಾನದ ಮೇಜರ್ ಜನರಲ್ ಆಸೀಫ್ ಗಫೂರ್, ಭಾರತದ ವಾಯು ಸೇನೆಯ ದಾಳಿಯಿಂದ ಯಾವುದೇ ಹಾನಿಯಾಗಿಲ್ಲ. ಭಾರತದ ಯುದ್ಧ ವಿಮಾನಗಳು ನಮ್ಮಿಂದ ತಪ್ಪಿಸಿಕೊಳ್ಳುವ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಹಾಕಿದೆ ಎಂದು ಹೇಳಿ ಮೊಂಡುತನ ಪ್ರದರ್ಶನ ಮಾಡಿದ್ದರು. ಇದನ್ನು ಓದಿ: ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ಭಾರತದ ವಾಯುಸೇನೆಯ ವಿಮಾನಗಳು ಗಡಿ (ಎಲ್‍ಓಸಿ)ಯನ್ನು ಉಲ್ಲಂಘಿಸಿದ್ದವು, ಕೂಡಲೇ ನಾವು ದಾಳಿ ಮಾಡುತ್ತಿದ್ದಂತೆ ಮರಳಿ ಹೋಗಿವೆ. ಭಾರತದ ಯುದ್ಧ ವಿಮಾನಗಳು ಮುಜಾಫರಬಾದ್ ಬಳಿ ಒಳನುಸಳಲು ಪ್ರಯತ್ನ ನಡೆಸಿದ್ದವು. ಪಾಕಿಸ್ತಾನದ ಪ್ರತಿ ದಾಳಿಗೆ ಹೆದರಿದ ಕೂಡಲೇ ತಪ್ಪಿಸಿಕೊಳ್ಳುವ ಗಡಿಬಿಡಿಯಲ್ಲಿ ಬಾಲಕೋಟ್ ಬಳಿಯ ನಿರ್ಜನ ಪ್ರದೇಶದಲ್ಲಿ ಬಾಂಬ್ ಹಾಕಿ ಹೋಗಿವೆ ಎಂದು ತಮ್ಮ ಎಂದಿನ ವಿತ್ತಂಡವಾದವನ್ನು ಮುಂದಿಟ್ಟಿದ್ದಾರೆ. ಗಫೂರ್ ಬೆಳಗ್ಗೆ 5.12ಕ್ಕೆ ಟ್ವೀಟ್ ಮಾಡಿದ ಬಳಿಕ ಸರಣಿ ಟ್ವೀಟ್ ಮಾಡಿದ್ದರು. ಇದನ್ನು ಓದಿ: ಕವಿತೆ ಬರೆದು ವಾಯುಪಡೆಗೆ ಗೌರವ ಸಲ್ಲಿಸಿ #AlwaysReady ಎಂದ ಭಾರತೀಯ ಸೇನೆ!

    ಪಾಕಿಸ್ತಾನ ಈ ರೀತಿಯ ಹೇಳಿಕೆ ನೀಡುವುದು ಇದೇ ಮೊದಲೆನಲ್ಲ. ಉರಿ ದಾಳಿ ನಡೆದ ಬಳಿಕ ನಡೆದ ಸರ್ಜಿಕಲ್ ಸ್ಟ್ರೈಕ್ ಸಂದರ್ಭದಲ್ಲೂ ಏನು ಆಗಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲದೇ ವಿದೇಶಿ ಮಾಧ್ಯಮಗಳನ್ನು ಕರೆಸಿ ಭಾರತದ ಯಾವುದೇ ದಾಳಿ ನಡೆಸಿಲ್ಲ ಎಂದು ಹೇಳಿತ್ತು. ಬಳಿಕ ವಿದೇಶಿ ಮಾಧ್ಯಮಗಳೇ ಪಾಕಿಸ್ತಾನ ಸುಳ್ಳು ಹೇಳಿದೆ. ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉಗ್ರರನ್ನು ಹೊಡೆದು ಉರುಳಿಸಿವೆ ಎಂದು ವರದಿ ಮಾಡಿತ್ತು.

    ಮೊದಲಿಗೆ ಮುಂಜಾನೆ 3.45ರ ಸುಮಾರಿಗೆ ವಾಯುಸೇನೆ ಬಾಲ್‍ಕೋಟ್ ಮೇಲೆ ದಾಳಿ ಮಾಡಿದೆ. ಬಳಿಕ ಮುಂಜಾನೆ 3.48ಕ್ಕೆ ಮುಜಾಫರಬಾದ್ ಮೇಲೆ ದಾಳಿ ಮಾಡಲಾಗಿದೆ. ಕೊನೆಗೆ ಮುಂಜಾನೆ 3.58ಕ್ಕೆ ಚಕೋಟಿ ಉಗ್ರರ ತರಬೇತಿ ಕೇಂದ್ರಗಳ ಮೇಲೆ ಭಾರತೀಯ ವಾಯುಸೇನೆ ದಾಳಿ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ಸರ್ಜಿಕಲ್ ಸ್ಟ್ರೈಕ್ 2: ವಾಯುಸೇನೆಗೆ ಅಭಿನಂದಿಸಿ ನಾವು ಹೆಮ್ಮೆ ಪಡಬೇಕು ಯಾಕೆ?

    ನವದೆಹಲಿ: ಉಗ್ರರ ವಿರುದ್ಧ ಹೋರಾಡಬೇಕಾದರೆ ನಮಗೆ ಸಾಕ್ಷ್ಯ ನೀಡಿ. ಪ್ರಬಲ ಸಾಕ್ಷ್ಯವನ್ನು ಕೊಟ್ಟರೆ ನಾವು ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಎಂದಿದ್ದ ಪಾಕಿಸ್ತಾನಕ್ಕೆ ಭಾರತ ಸಾಕ್ಷ್ಯ ಸಮೇತ ಉತ್ತರವನ್ನು ನೀಡಿದೆ.

    ಹೌದು. ಇಲ್ಲಿಯವರೆಗೆ ಭಾರತ ಮಾತಿನ ಮೂಲಕ ಪ್ರತಿಕ್ರಿಯೆ ನೀಡುತಿತ್ತು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮರ್ಯಾದೆಯನ್ನು ಕಳೆಯುವ ಪ್ರಯತ್ನವನ್ನು ನಡೆಸುತಿತ್ತು. ಉರಿ ಮತ್ತು ಪುಲ್ವಾಮಾ ದಾಳಿ ಬಳಿಕ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ನಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಟ್ಟಿದೆ. ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲಿದೆ ಎನ್ನುವುದನ್ನು ಮೊದಲೇ ಅರಿತ ಭಾರತ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ವಾಯುದಾಳಿ ನಡೆಸಿ ಪಾಕಿಸ್ತಾನಕ್ಕೆ ಶಾಕ್ ನೀಡಿದೆ.

    ಉಗ್ರರು ಒಳ ನುಸುಳುವ ಸಮಯದಲ್ಲಿ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ಗುಂಡಿನ ದಾಳಿ ಆರಂಭಿಸುತ್ತದೆ. ಈ ವೇಳೆ ಭಾರತ ಸಹ ಪ್ರತಿದಾಳಿ ನಡೆಸುತ್ತದೆ. ಭಾರತ ಸೈನಿಕರ ಗಮನವನ್ನು ಸೆಳೆದು ಪಾಕಿಸ್ತಾನ ಉಗ್ರರು ಕಾಶ್ಮೀರ ಪ್ರವೇಶಿಸಲು ಸಹಾಯ ಮಾಡುತ್ತಿರುತ್ತದೆ. ಈ ವಿಚಾರ ಭಾರತಕ್ಕೆ ಗೊತ್ತಿದ್ದರೂ ದಾಳಿ ನಡೆಸಲು ಧೈರ್ಯ ತೋರಿರಲಿಲ್ಲ. ಆದರೆ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ಬಳಿಕ ಭಾರತೀಯರ ಆಕ್ರೋಶದ ಕಟ್ಟೆ ಒಡೆದಿತ್ತು. ಯಾವ ರೀತಿ ದಾಳಿ ನಡೆಸಿ ಉಗ್ರರನ್ನು ಹೆಡೆಮುರಿ ಕಟ್ಟಿ ಹಾಕುತ್ತಿರಿ ಎಂದು ಜನ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದರು. ಜನರ ಆಕ್ರೋಶ ಕಟ್ಟೆ ಒಡೆಯುತ್ತಿದ್ದಂತೆ ಸರ್ಕಾರ ಉಗ್ರರನ್ನು ಹೀಗೆಯೇ ಬಿಟ್ಟರೆ ಆಗುವುದಿಲ್ಲ ಎಂದು ಅರಿತ ಗಡಿಯನ್ನು ದಾಟಿ ದಾಳಿ ನಡೆಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದು ಇಂದು ಮುಹೂರ್ತ ಫಿಕ್ಸ್ ಮಾಡಿತ್ತು. ಈ ಪ್ಲಾನ್ ಯಶಸ್ವಿಯಾಗಿದ್ದು ಭಾರತ ತನ್ನ ಗಡಿಯನ್ನು ದಾಟಿ ದಾಳಿ ನಡೆಸಲು ತಯಾರಾಗುತ್ತಿದ್ದ ಉಗ್ರರನ್ನು ಅವರ ನೆಲದಲ್ಲೇ ಹತ್ಯೆ ಮಾಡಿ ತನ್ನ ಪರಾಕ್ರಮವನ್ನು ತೋರಿಸಿದೆ.

    ಕಾರಣ 1:
    ಬಾಲ್‍ಕೋಟ್ ನಲ್ಲಿ ಜೈಶ್-ಇ-ಮೊಹಮ್ಮದ್ (ಜೆಇಎಂ) ನ ದೊಡ್ಡ ತರಬೇತಿ ಶಿಬಿರವನ್ನು ವಾಯುಸೇನೆ ಬಾಂಬ್ ದಾಳಿ ನಡೆಸಿ ಧ್ವಂಸ ಮಾಡಿದೆ. ಈ ಹಿಂದೆ ಉರಿ ಸೇನಾ ನೆಲೆಯ ಮೆಲೆ ದಾಳಿ ನಡೆದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರ ಒಳಗಡೆ ಹೆಲಿಕಾಪ್ಟರ್ ಸಹಾಯದಿಂದ ನುಗ್ಗಿ ಭೂ ಸೇನೆಯ ಸೈನಿಕರು ಉಗ್ರರನ್ನು ಸಂಹಾರ ಮಾಡಿದ್ದರು. ಆದರೆ ಮೊದಲ ಬಾರಿಗೆ ವಾಯುಸೇನೆ ಬಾಂಬ್ ಬಳಸಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಮೌಲಾನಾ ಯೂಸುಫ್ ಅಝರ್ (ಅಲಿಯಾಸ್ ಉಸ್ತಾದ್ ಘೌರಿ), ಜೆಇಎಂ ಮುಖ್ಯಸ್ಥ ಮಸೂದ್ ಅಝರ್‍ನ ಸೋದರ ಸಂಬಂಧಿ ನಡೆಸುತ್ತಿದ್ದ ಬಾಲಕೋಟ್ ಅಡಗುದಾಣದ ಮೇಲೆಯೇ ದಾಳಿ ನಡೆದಿದೆ. ಮೂರು ದಾಳಿಯಲ್ಲಿ ಭಯೋತ್ಪಾದಕರು, ತರಬೇತುದಾರರು ಮತ್ತು ಹಿರಿಯ ಕಮಾಂಡರ್‍ಗಳು ಸೇರಿ ಒಟ್ಟು 350ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಭಾರತ ಪಾಕಿಸ್ತಾನ ಸೇರಿದಂತೆ ವಿಶ್ವಕ್ಕೆ ತನ್ನ ವಾಯುಸೇನೆಯ ಶಕ್ತಿಯನ್ನು ತೋರಿಸಿದೆ.

    ಕಾರಣ 2 :
    ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿ ಶಿಬಿರಗಳ ಮೇಲೆ ದಾಳಿ ಭಾರತೀಯ ವಾಯುಸೇನೆ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಿದೆ. 1971 ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಇದೇ ರೀತಿಯ ದಾಳಿ ನಡೆದಿತ್ತು. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲೂ ವಾಯುಸೇನೆಯ ವಿಮಾನ ಬಳಸಿ ದಾಳಿ ಮಾಡಲಾಗಿತ್ತು. ಆದರೆ ಈ ವೇಳೆ ಯಾವುದೇ ಕಾರಣಕ್ಕೂ ಗಡಿ ನಿಯಂತ್ರಣ ರೇಖೆಯನ್ನು ದಾಟದಂತೆ ಸೂಚನೆ ಬಂದಿತ್ತು. ಆದರೆ ಈ ಬಾರಿ ಸೇನೆಗೆ ಸರ್ಕಾರ ಸಂಪೂರ್ಣ ಅನುಮತಿ ನೀಡಿತ್ತು. ಪುಲ್ವಾಮಾ ದಾಳಿ ಬಳಿಕ ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ಭಾರತ ಗಡಿನಿಯಂತ್ರಣ ರೇಖೆಯನ್ನು ದಾಟಿ ನಮ್ಮ ನೆಲದ ಮೇಲೆ ಬಂದು ದಾಳಿ ಮಾಡಿದೆ ಎನ್ನುವುದನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ.

    ಕಾರಣ 3 :
    ಭಾರತ ಹೇಗೆ ಬಜೆಟ್ ನಲ್ಲಿ ಮಿಲಿಟರಿ ಶಕ್ತಿ ಹೆಚ್ಚಿನ ಹಣವನ್ನು ಮೀಸಲಿಡುತ್ತದೋ ಅದೇ ರೀತಿಯಾಗಿ ಪಾಕಿಸ್ತಾನ ಸಹ ಬಜೆಟ್‍ನಲ್ಲಿ ಹಣವನ್ನು ಮೀಸಲಿಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಪಾಕಿಸ್ತಾನ ಖರೀದಿಸಿದೆ. ಪುಲ್ವಾಮಾ ದಾಳಿ ಬಳಿಕ ಭಾರತ ಪ್ರತಿದಾಳಿ ನಡೆಸಲಿದೆ ಎನ್ನುವುದನ್ನು ಅರಿತ ಪಾಕಿಸ್ತಾನ ಗಡಿಯಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು. ಈ ನಡುವೆ ಮೋದಿ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಹಿಂದಿನ ಎಲ್ಲ ಬಾಕಿಗಳನ್ನು ತೀರಿಸಿಯೇ ತೀರಿಸುತ್ತೇವೆ ಎಂದು ಗುಡುಗಿದ್ದರು. ಹೀಗಾಗಿ ಪಾಕಿಸ್ತಾನ ತನ್ನ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿತ್ತು. ಇಷ್ಟೆಲ್ಲ ಅಲರ್ಟ್ ಘೋಷಿಸಿದರೂ ಭಾರತ ಮಂಗಳವಾರ ಬೆಳಗ್ಗೆ ಪಾಕ್ ಸೈನಿಕರ ಕಣ್ಣು ತಪ್ಪಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಪ್ರಪಂಚವೇ ನಿಬ್ಬೆರಾಗುವಂತೆ ಮಾಡಿ ತನ್ನ ಶಕ್ತಿಯನ್ನು ತೋರಿಸಿದೆ.

    ಭಾರತದಿಂದ ಪ್ರತೀಕಾರದ ಮಾತು ಬರುತ್ತಿದ್ದಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ನಾವು ಯಾವುದೇ ದಾಳಿ ಎದುರಿಸಲು ಸಿದ್ಧ ಎಂದು ಹೇಳಿದ್ದರು. ಕಳೆದ ಶುಕ್ರವಾರ ಪಾಕಿಸ್ತಾನದ ಸೇನೆಯ ವಕ್ತಾರ ಮೇಜರ್ ಜನರಲ್ ಗಫೂರ್ ಮಾತನಾಡಿ, ಪಾಕಿಸ್ತಾನದ ಸೇನಾ ಪಡೆಗಳು ನಿಮ್ಮಿಂದ ಎಂದಿಗೂ ಆಶ್ಚರ್ಯಪಡುವುದಿಲ್ಲ. ಆದರೆ ನಾನು ನಿಮಗೆ ಭರವಸೆ ನೀಡುತ್ತೇವೆ. ನಾವು ನಿಮ್ಮನ್ನು ಅಚ್ಚರಿಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳಿಗೆ ಭಾರತ ತಲೆ ಕೆಡಿಸಿಕೊಳ್ಳದೇ ಪ್ಲಾನ್ ಮಾಡಿ ದಾಳಿ ನಡೆಸಿ ಪಾಕಿಸ್ತಾನಕ್ಕೆ ಭಾರೀ ಮುಜುಗರವನ್ನುಂಟು ಮಾಡಿದೆ.

    ಕಾರಣ 4 :
    ಭಾರತದ ಮೇಲೆ ನೇರವಾಗಿ ಯುದ್ಧ ಮಾಡಿದರೆ ನಮಗೆ ಸೋಲು ಖಚಿತ ಎನ್ನುವುದು ಪಾಕಿಸ್ತಾನಕ್ಕೆ ಗೊತ್ತಿದೆ. ಹೀಗಾಗಿ ಅದು ಉಗ್ರರನ್ನು ಛೂ ಬಿಡುವ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡುತ್ತಿದೆ. ಉರಿ ದಾಳಿ ಬಳಿಕವೇ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉತ್ತರ ನೀಡಿ ಭಯೋತ್ಪಾದನೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿತ್ತು. ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತೊಂದು ದಾಳಿ ನಡೆಸಬಹುದು ಎಂದು ಪಾಕಿಸ್ತಾನ ತನ್ನ ಗಡಿಯಲ್ಲಿದ್ದ ಉಗ್ರರ ಕೇಂದ್ರಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಿತ್ತು. ಪಾಕ್ ಈ ಉಗ್ರರನ್ನು ಕಾಪಾಡುತ್ತಿದ್ದರೂ ಭಾರತ ಈಗ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದೆ. ಇಲ್ಲಿಯವರೆಗೆ ಉಗ್ರರ ವಿಚಾರದಲ್ಲಿ ನಾವು ಕಟು ಮಾತಿನಲ್ಲಿ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದರೆ ಈಗ ನಮ್ಮಲ್ಲಿರುವ ರಕ್ಷಣಾ ಪಡೆಗಳ ಮೂಲಕ ಪ್ರತಿ ಉತ್ತರ ನೀಡುತ್ತೇವೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv