Tag: air india

  • ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌!

    ಜಸ್ಟ್‌ 10 ನಿಮಿಷ, ಟ್ರಾಫಿಕ್‌ನಲ್ಲಿ ಸಿಲುಕಿ ಲಕ್ಕಿ ಲೇಡಿ ಬಚಾವ್‌!

    ಅಹಮದಾಬಾದ್: ಮಹಿಳೆಯೊಬ್ಬರು ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಏರ್‌ ಇಂಡಿಯಾ  (Air India) ವಿಮಾನ ಅಪಘಾತದಿಂದ ಪಾರಾಗಿದ್ದಾರೆ.

    ಅಹಮದಾಬಾದ್‌ನ (Ahmedabad) ಭೂಮಿ ಚೌಹಾಣ್ ಲಂಡನ್‌ಗೆ ಹೊರಟಿದ್ದರು. ಆದರೆ, ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಅಹಮದಾಬಾದ್ ವಿಮಾನ ನಿಲ್ದಾಣವನ್ನು 10 ನಿಮಿಷ ತಡವಾಗಿ ತಲುಪಿದ್ದರು. ಇದರಿಂದ ಅವರಿಗೆ ವಿಮಾನ ಏರಲು ಅನುಮತಿ ನಿರಾಕರಿಸಲಾಗಿತ್ತು. ಇದಾದ ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತದ (Air India Flight Crash) ಸುದ್ದಿ ಬಂದಿದ್ದು, ಮಹಿಳೆ, ಮಾಧ್ಯಮಗಳ ಮುಂದೆ ಗದ್ಗದಿತರಾಗಿದ್ದಾರೆ. ಇದನ್ನೂ ಓದಿ: ಪತನಗೊಂಡ ವಿಮಾನ ಅವ್ಯವಸ್ಥೆಯಿಂದ ಕೂಡಿತ್ತು- 2 ಗಂಟೆ ಮೊದಲು ಪ್ರಯಾಣಿಸಿದ್ದ ಪ್ರಯಾಣಿಕನ ಆಕ್ರೋಶ

    ಈ ವಿಚಾರ ಕೇಳಿ ನನಗೆ ಭಯವಾಗಿ ಕೈಕಾಲುಗಳು ನಡುಗಲು ಪ್ರಾರಂಭಿಸಿದವು. ನಾನು ತುಂಬಾ ಹೊತ್ತು ಅದೇ ಆಘಾತದಲ್ಲಿದ್ದೆ. ಕೇವಲ 10 ನಿಮಿಷ ತಡವಾಗಿ ಬಂದಿದ್ದರಿಂದ ವಿಮಾನ ತಪ್ಪಿಸಿಕೊಂಡು ಬದುಕುಳಿದೆ. ನನ್ನ ನೆಚ್ಚಿನ ದೇವರಾದ ಗಣಪತಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನನ್ನ ಗಣಪತಿ ಬಪ್ಪಾ ನನ್ನನ್ನು ಉಳಿಸಿದ ಎಂದು ಹೇಳಿಕೊಂಡಿದ್ದಾರೆ.

    ಭೂಮಿ ತಮ್ಮ ಪತಿಯೊಂದಿಗೆ ಲಂಡನ್‌ನಲ್ಲಿ ವಾಸವಾಗಿದ್ದರು. ರಜೆ ಇದ್ದ ಕಾರಣ ಭಾರತಕ್ಕೆ ಬಂದಿದ್ದರು. ಅವರ ಪತಿ ಈಗ ಬ್ರಿಟನ್‌ನಲ್ಲಿದ್ದಾರೆ. ಭೂಮಿ ಎರಡು ವರ್ಷಗಳ ಹಿಂದೆ ಲಂಡನ್‌ಗೆ ತೆರಳಿದ್ದರು. ಇದಾದ ಬಳಿಕ ಮೊದಲ ಬಾರಿಗೆ ಅವರು ಭಾರತಕ್ಕೆ ಬಂದಿದ್ದರು.

    ಅಪಘಾತಗೊಂಡ ಈ ವಿಮಾನದಲ್ಲಿ ಸುಮಾರು 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಮೂಲಗಳ ಪ್ರಕಾರ 200ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

  • ಪತನಗೊಂಡ ವಿಮಾನ ಅವ್ಯವಸ್ಥೆಯಿಂದ ಕೂಡಿತ್ತು- 2 ಗಂಟೆ ಮೊದಲು ಪ್ರಯಾಣಿಸಿದ್ದ ಪ್ರಯಾಣಿಕನ ಆಕ್ರೋಶ

    ಪತನಗೊಂಡ ವಿಮಾನ ಅವ್ಯವಸ್ಥೆಯಿಂದ ಕೂಡಿತ್ತು- 2 ಗಂಟೆ ಮೊದಲು ಪ್ರಯಾಣಿಸಿದ್ದ ಪ್ರಯಾಣಿಕನ ಆಕ್ರೋಶ

    ನವದೆಹಲಿ: ದುರಂತಕ್ಕೀಡಾದ ಏರ್‌ ಇಂಡಿಯಾ (Air India) ವಿಮಾನ ಟೇಕಾಫ್‌ ಆಗುವ ಮೊದಲೇ ಸರಿ ಇರಲಿಲ್ಲ, ಅವ್ಯವಸ್ಥೆಯಿಂದ ಕೂಡಿತ್ತು ಎಂದು ಪ್ರಯಾಣಿಕರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಆಕಾಶ್ ವತ್ಸಾ ಎಂಬವರು ದೆಹಲಿಯಿಂದ (Delhi) ಅಹಮದಾಬಾದ್‌ಗೆ AI-171 ವಿಮಾನದಲ್ಲಿ ಬಂದಿದ್ದರು. ತಮ್ಮ ಪ್ರಯಾಣದ ವೇಳೆ ಕೆಟ್ಟ ಅನುಭವ ಆಗಿತ್ತು ಎಂದು ಅವರು ಎಕ್ಸ್‌ನಲ್ಲಿ ಬರೆದು ಸಿಟ್ಟು ಹೊರಹಾಕಿದ್ದರು. ಇದನ್ನೂ ಓದಿ: ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

    ಪೋಸ್ಟ್‌ನಲ್ಲಿ ಏನಿದೆ?
    ಅಹಮದಾಬಾದ್‌ನಲ್ಲಿ(Ahmedabad) ಗುರುವಾರ ಮಧ್ಯಾಹ್ನ ಪತನಗೊಂಡ ಏರ್‌ ಇಂಡಿಯಾ ವಿಮಾನದಲ್ಲಿ 2 ಗಂಟೆ ಮೊದಲು ಪ್ರಯಾಣಿಸಿದ್ದೆ. ಅಲ್ಲಿನ ಅವ್ಯವಸ್ಥೆಯ ದೃಶ್ಯಗಳನ್ನು ಸೆರೆಹಿಡಿದು ಏರ್‌ ಇಂಡಿಯಾಗೆ ಟ್ವೀಟ್‌ ಮಾಡಬೇಕು ಎಂದುಕೊಂಡಿದ್ದೆ. ಅಷ್ಟರಲ್ಲೇ ವಿಮಾನ ಪತನಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ಭಾರತದಲ್ಲಿ ನನ್ನ ಕೊನೆಯ ರಾತ್ರಿ – ವಿಮಾನ ಹತ್ತುವ ಮುನ್ನ ಬ್ರಿಟನ್‌ ಪ್ರಯಾಣಿಕನ ಭಾವುಕ ಪೋಸ್ಟ್‌

    ವಿಮಾನ ಕೆಲವೊಂದು ಅವ್ಯವಸ್ಥೆಯನ್ನು ನಾನು ಹಂಚಿಕೊಂಡಿದ್ದೇನೆ. ಹವಾನಿಯಂತ್ರಿತ ವ್ಯವಸ್ಥೆ, ಮನರಂಜನಾ ಪರದೆ ನಿರ್ವಹಿಸುವ ರಿಮೋಟ್‌ ಕೆಲಸ ಮಾಡುತ್ತಿರಲಿಲ್ಲ. ಹೀಗೆ ಹಲವು ಅವ್ಯವಸ್ಥೆಗಳನ್ನು ದೃಶ್ಯ ಸಹಿತ ಪಟ್ಟಿ ಕಳುಹಿಸಬೇಕು ಎಂದುಕೊಂಡಿದ್ದೆ. ಇವುಗಳ ಬಗ್ಗೆ ಈಗಲೂ ನಾನು ಮಾಹಿತಿ ನೀಡಲು ಸಿದ್ಧ. ನನ್ನ ಎಕ್ಸ್‌ ಖಾತೆಯನ್ನು ಸಂಪರ್ಕಿಸಿ ಎಂದು ಅವರು ಬರೆದುಕೊಂಡಿದ್ದಾರೆ.

    ಅಹಮದಾಬಾದ್‌ನಿಂದ ಲಂಡನ್‌ಗೆ ಮಧ್ಯಾಹ್ನ 1:39ಕ್ಕೆ ಟೇಕಾಫ್‌ ಆಗಿದ್ದ ಏರ್‌ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡು ಸಮೀಪದ ಮೇಘನಿ ನಗರದ ವಸತಿ ಪ್ರದೇಶದಲ್ಲಿವ ಮೆಡಿಕಲ್‌ ಹಾಸ್ಟೆಲ್‌ನ ಅಡುಗೆ ಮನೆ ಮೇಲೆ ಬಿದ್ದಿತ್ತು.

  • ಭಾರತದಲ್ಲಿ ನನ್ನ ಕೊನೆಯ ರಾತ್ರಿ – ವಿಮಾನ ಹತ್ತುವ ಮುನ್ನ ಬ್ರಿಟನ್‌ ಪ್ರಯಾಣಿಕನ ಭಾವುಕ ಪೋಸ್ಟ್‌

    ಭಾರತದಲ್ಲಿ ನನ್ನ ಕೊನೆಯ ರಾತ್ರಿ – ವಿಮಾನ ಹತ್ತುವ ಮುನ್ನ ಬ್ರಿಟನ್‌ ಪ್ರಯಾಣಿಕನ ಭಾವುಕ ಪೋಸ್ಟ್‌

    ಅಹಮದಾಬಾದ್‌: ಲಂಡನ್ ಮೂಲದ ಜೇಮೀ ಮೀಕ್ ತಮ್ಮ ಗುಜರಾತ್ ಭೇಟಿ ಮುಗಿಸಿ, ಸ್ವದೇಶಕ್ಕೆ ಮರಳುವ ಮುನ್ನ ಭಾರತದಲ್ಲಿನ ತಮ್ಮ ಅನುಭವಗಳನ್ನು ಇನ್ಸ್ಟಾದಲ್ಲಿ ಪೋಸ್ಟ್‌ ಮಾಡಿದ್ದರು. ದುರಾದೃಷ್ಟವಶಾತ್‌ ಅವರಿದ್ದ ಏರ್‌ ಇಂಡಿಯಾ (Air India) ವಿಮಾನ ಅಹಮದಾಬಾದ್‌ನಿಂದ (Ahmedabad) ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ (Plane Crash) ಪತನಗೊಂಡಿದೆ.

    ಪೋಸ್ಟ್‌ನಲ್ಲಿ, ಭಾರತದಲ್ಲಿನ ತಮ್ಮ ಅದ್ಭುತ ಅನುಭವಗಳನ್ನು ತಮ್ಮ ಗೆಳೆಯ ಫಿಯೊಂಗಲ್ ಗ್ರೀನ್‌ಲಾ-ಮೀಕ್ ಅವರೊಂದಿಗೆ ಹಂಚಿಕೊಂಡಿದ್ದರು. ಅಲ್ಲದೇ ಬುಧವಾರ ರಾತ್ರಿ ಇಂದು ಭಾರತದಲ್ಲಿ ನನ್ನ ಕೊನೆ ರಾತ್ರಿ ಎಂದು ಬೇಸರದಲ್ಲಿ ಹೇಳಿಕೊಂಡಿದ್ದರು. ಇದನ್ನೂ ಓದಿ: Ahmedabad Plane Crash | ಮಂಗಳೂರು ಮೂಲದ ಕ್ಲೈವ್‌ ಕುಂದರ್‌ ಸಹ ಪೈಲಟ್‌!

    ಜೇಮೀ ಸ್ವದೇಶಕ್ಕೆ ಮರಳಲು ಅಹಮದಾಬಾದ್‌ ವಿಮಾನ ನಿಲ್ದಾಣದಿಂದ ವಿಮಾನ ಹತ್ತುವ ಕೆಲವೇ ನಿಮಿಷಗಳ ಮುನ್ನ ಮತ್ತೊಂದು ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಭಾರತಕ್ಕೆ ವಿದಾಯ ಎಂದು ಹೇಳಿಕೊಂಡಿದ್ದರು.

    ಅಪಘಾತಗೊಂಡ ಈ ವಿಮಾನದಲ್ಲಿ ಸುಮಾರು 10 ಮಂದಿ ಸಿಬ್ಬಂದಿ ಸೇರಿ 242 ಜನ ಇದ್ದರು. ಅದರಲ್ಲಿ 133 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಇನ್ನೂ, ಜೇಮೀ ಮತ್ತು ಫಿಯೊಂಗಲ್ ಬದುಕುಳಿದ ಬಗ್ಗೆಯಾಗಲಿ, ಸಾವನ್ನಪ್ಪಿರುವ ಬಗ್ಗೆಯಾಗಲಿ ಮಾಹಿತಿ ಲಭ್ಯವಾಗಿಲ್ಲ. ಜೇಮೀ ಭಾರತದ ಯೋಗದ ಬಗ್ಗೆ ವಿಶೇಷ ಒಲವು ಹೊಂದಿದ್ದರು ಎಂದು ತಿಳಿದು ಬಂದಿದೆ.

    ಮೂಲಗಳ ಪ್ರಕಾರ ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಸಾವನ್ನಪ್ಪಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಬಿಡುಗಡೆಯಾಗಿಲ್ಲ. ಇದನ್ನೂ ಓದಿ: ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

  • Ahmedabad Plane Crash | ಮಂಗಳೂರು ಮೂಲದ ಕ್ಲೈವ್‌ ಕುಂದರ್‌ ಸಹ ಪೈಲಟ್‌!

    Ahmedabad Plane Crash | ಮಂಗಳೂರು ಮೂಲದ ಕ್ಲೈವ್‌ ಕುಂದರ್‌ ಸಹ ಪೈಲಟ್‌!

    ನವದೆಹಲಿ: ಪತನಗೊಂಡ ಏರ್‌ ಇಂಡಿಯಾ (Air India) ವಿಮಾನದಲ್ಲಿ ಮಂಗಳೂರು ಮೂಲದ ಕ್ಲೈವ್ ಕುಂದರ್ (Clive Kunder) ಸಹ ಪೈಲಟ್‌ ಆಗಿದ್ದರು ಎಂಬ ವಿಚಾರ ಈಗ ತಿಳಿದು ಬಂದಿದೆ.

    ಫೆಡರಲ್ ವಾಯುಯಾನ ನಿಯಮಗಳ ಪ್ರಕಾರ ಪ್ರಯಾಣಿಕ ಮತ್ತು ಸರಕು ವಿಮಾನಗಳ ಹಾರಾಟಕ್ಕೆ ಕನಿಷ್ಠ ಇಬ್ಬರು ಪೈಲಟ್‌ಗಳು ಇರಬೇಕು. ಇದನ್ನೂ ಓದಿ: ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

    ಕ್ಲೈವ್ ಕುಂದರ್ ಮುಂಬೈನಲ್ಲಿ ನೆಲೆಸಿದ್ದು ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ತರಬೇತಿ ಪಡೆದಿದ್ದರು. ಒಟ್ಟು 1,100 ಗಂಟೆಗಳ ವಿಮಾನ ಹಾರಾಟದ ಅನುಭವವನ್ನು ಹೊಂದಿದ್ದರು.

     

    ಕ್ಲೈವ್ ಕುಂದರ್ ಅವರು 8,200 ಗಂಟೆಗಳಿಗಿಂತ ಹೆಚ್ಚು ಹಾರಾಟದ ಅನುಭವ ಹೊಂದಿರುವ ಅನುಭವಿ ಪೈಲಟ್‌ ಕ್ಯಾಪ್ಟನ್ ಸುಮೀತ್ ಸಭರ್ವಾಲ್ ಅವರಿಗೆ ಸಹಾಯ ಮಾಡುತ್ತಿದ್ದರು.

    ಅಹಮದಾಬಾದ್‌ನಿಂದ ಲಂಡನ್‌ಗೆ ಮಧ್ಯಾಹ್ನ 1:39ಕ್ಕೆ ಟೇಕಾಫ್‌ ಆಗಿದ್ದ ಏರ್‌ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದ ಪತನಗೊಂಡು ಸಮೀಪದ ಮೇಘನಿ ನಗರದ ವಸತಿ ಪ್ರದೇಶದಲ್ಲಿವ ಮೆಡಿಕಲ್‌ ಹಾಸ್ಟೆಲ್‌ನ ಅಡುಗೆ ಮನೆ ಮೇಲೆ ಬಿದ್ದಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌,? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಇಬ್ಬರು ಪೈಲಟ್‌, 10 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈಗಾಗಲೇ 130ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಿದೆ.

    ಆಸ್ಪತ್ರೆಗೆ ಸೇರಿದ ಹಲವು ಮಂದಿಯ ಸ್ಥಿತಿ ಗಂಭೀರವಾಗಿದೆ. ವಿಮಾನ ಮೆಡಿಕಲ್‌ ಕಾಲೇಜಿನ ಹಾಸ್ಟೆಲಿನ ಅಡುಗೆ ಮನೆ ಮೇಲೆ ಬಿದ್ದಿದೆ. ಮಧ್ಯಾಹ್ನ ವಿದ್ಯಾರ್ಥಿಗಳು ಊಟ ಮಾಡುವ ಸಮಯದಲ್ಲೇ  ಕಟ್ಡಡದ ಮೇಲೆ ಬಿದ್ದ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ.

  • ಏರ್ ಇಂಡಿಯಾ ವಿಮಾನ ದುರಂತದಿಂದ ದಿಗ್ಭ್ರಮೆಗೊಂಡಿದ್ದೇನೆ: ಮೋದಿ

    ಏರ್ ಇಂಡಿಯಾ ವಿಮಾನ ದುರಂತದಿಂದ ದಿಗ್ಭ್ರಮೆಗೊಂಡಿದ್ದೇನೆ: ಮೋದಿ

    ನವದೆಹಲಿ: ಅಹಮದಾಬಾದ್‌ನಲ್ಲಿ (Ahmedabad) ಏರ್ ಇಂಡಿಯಾ (Air India) ವಿಮಾನ ದುರಂತಕ್ಕೆ ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಸಂತಾಪ ಸೂಚಿಸಿದ್ದಾರೆ.

    ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ದುರಂತದಿಂದ ದಿಗ್ಭ್ರಮೆಗೊಂಡಿದ್ದೇನೆ. ಇದರಿಂದ ಎಲ್ಲರಿಗೂ ಅತೀವ ನೋವು ಉಂಟಾಗಿದೆ. ದುರಂತದಲ್ಲಿ ಸಿಲುಕಿರುವವರಿಗೆ ನೆರವು ನೀಡುವ ವಿಚಾರವಾಗಿ ಸಚಿವರು ಹಾಗೂ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅಲ್ಲದೇ ನಿರಂತರವಾಗಿ ಅವರ ಜೊತೆ ಸಂಪರ್ಕದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬಿಜೆ ಮೆಡಿಕಲ್ ಆಸ್ಪತ್ರೆಗೆ ಬಡಿದ ಏರ್ ಇಂಡಿಯಾ ವಿಮಾನ – 7 ವಿದ್ಯಾರ್ಥಿಗಳ ಸಾವು ಶಂಕೆ

    ಇನ್ನೂ ಅವಘಡದ ಕುರಿತು ಅವರು, ಕೇಂದ್ರ ನಾಗರಿಕ ವಿಮಾನಯಾನ ಸಚಿವ ರಾಮಮೋಹನ್ ನಾಯ್ಡು ಅವರೊಂದಿಗೆ ಮಾತನಾಡಿದ್ದು, ವಿಮಾನ ಅಪಘಾತದ ಕುರಿತು ಮಾಹಿತಿ ಪಡೆದಿದ್ದಾರೆ.

    ಏನಿದು ಘಟನೆ?
    ಟೇಕಾಫ್ ನಂತರ ಎಂಜಿನ್‌ನಲ್ಲಿ ತಾಂತ್ರಿಕದೋಷ ಉಂಟಾದ ಪರಿಣಾಮ 242 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನ ಅಹಮದಾಬಾದ್‌ನ ವಿಮಾನ ನಿಲ್ದಾಣದ ಬಳಿಯ ಬಿಜೆ ಮೆಡಿಕಲ್ ಕಾಲೇಜಿನ ಮೇಲೆ ಪತನಗೊಂಡಿದೆ. ವಿಮಾನ ನಿಲ್ದಾಣದಿಂದ ಕೇವಲ 2 ಕಿ.ಮೀ ದೂರದ ಮೇಘಾನಿ ಪ್ರದೇಶದಲ್ಲಿ ವಿಮಾನ ಪತನಗೊಂಡಿದ್ದು, ಆಕಾಶದಲ್ಲಿ ದಟ್ಟ ಹೊಗೆ ಆವರಿಸಿದೆ.

    ಅಲ್ಲದೇ ಬಿಜೆ ಮೆಡಿಕಲ್ ಕಾಲೇಜು ಹಾಸ್ಟೆಲ್‌ಗೆ ವಿಮಾನ ಬಡಿದ್ದಿದ್ದು, ಭಾರೀ ಸಾವು-ನೋವಿನ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ 7 ಅಗ್ನಿಶಾಮಕ ಹಾಗೂ ಎನ್‌ಡಿಆರ್‌ಎಫ್ ತಂಡದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಈವರೆಗೂ 133 ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ.ಇದನ್ನೂ ಓದಿ: ವಿಮಾನ ಪತನ – ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸಾವು

  • ವಿಮಾನ ಪತನ –  ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸಾವು

    ವಿಮಾನ ಪತನ – ಗುಜರಾತ್‌ ಮಾಜಿ ಸಿಎಂ ವಿಜಯ್‌ ರೂಪಾನಿ ಸಾವು

    ಅಹಮದಾಬಾದ್‌: ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ (Former Gujarat CM Vijay Rupani) ವಿಮಾನ ದುರಂತದಲ್ಲಿ (Plane Crash)  ಮೃತಪಟ್ಟಿದ್ದಾರೆ.

    ಲಂಡನ್‌ಗೆ ಪ್ರಯಾಣಿಸುತ್ತಿದ್ದ ವಿಜಯ್‌ ರೂಪಾನಿ 12ನೇ ಸೀಟಿನಲ್ಲಿ ಕುಳಿತುಕೊಂಡಿದ್ದರು. ಲಂಡನ್‌ನಲ್ಲಿರುವ ಮಗಳ ಮನೆಗೆ ತೆರಳಲು ರೂಪಾನಿ ವಿಮಾನ ಹತ್ತಿದ್ದರು. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

     

    ಇಬ್ಬರು ಪೈಲಟ್‌, 10 ಸಿಬ್ಬಂದಿ ಸೇರಿ ಒಟ್ಟು 242 ಮಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಈಗಾಗಲೇ 130ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು ಸಾವಿನ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆ ಆಗುತ್ತಿದೆ.

    ಆಸ್ಪತ್ರೆಗೆ ಸೇರಿದ ಹಲವು ಮಂದಿಯ ಸ್ಥಿತಿ ಗಂಭೀರವಾಗಿದೆ. ವಿಮಾನ ಮೆಡಿಕಲ್‌ ಕಾಲೇಜಿನ ಹಾಸ್ಟೆಲಿನ ಅಡುಗೆ ಮನೆ ಮೇಲೆ ಬಿದ್ದಿದೆ. ಮಧ್ಯಾಹ್ನ ವಿದ್ಯಾರ್ಥಿಗಳು ಊಟ ಮಾಡುವ ಸಮಯದಲ್ಲೇ ಪತನ ಗೊಂಡಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಪೈಲಟ್‌ಗೆ ಇತ್ತು 8,200 ಗಂಟೆಗಳ ಹಾರಾಟದ ಅನುಭವ

  • Photo Gallery | ಏರ್‌ ಇಂಡಿಯಾ ವಿಮಾನ ಪತನ – ಭೀಕರ ಅಪಘಾತದ ದೃಶ್ಯ ಫೋಟೋಗಳಲ್ಲಿ ಸೆರೆ …

    Photo Gallery | ಏರ್‌ ಇಂಡಿಯಾ ವಿಮಾನ ಪತನ – ಭೀಕರ ಅಪಘಾತದ ದೃಶ್ಯ ಫೋಟೋಗಳಲ್ಲಿ ಸೆರೆ …

    ಅಹಮಾದಾಬಾದ್‌ನ ಸರ್ದಾರ್‌ ವಲ್ಲಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ತೆರಳಬೇಕಿದ್ದ ಏರ್‌ ಇಂಡಿಯಾ ವಿಮಾನ ಟೇಕಾಫ್‌ ಆದ ಕೆಲವೇ ನಿಮಿಷಗಳಲ್ಲಿ ಪತನಗೊಂಡಿದೆ. 242 ಮಂದಿ ಪ್ರಯಾಣಿಕರಿದ್ದ ಈ ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ಭಾರೀ ಸ್ಪೋಟ ಸಂಭವಿಸಿದ್ದು, ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವಿಮಾನದ ಅವಶೇಷಗಳು ವಿಮಾನ ನಿಲ್ದಾಣದ ಸುತ್ತಲೂ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆ ಆರಂಭಗೊಂಡಿದೆ. ಗುಜರಾತ್‌ನಲ್ಲಿ ಸಂಭವಿಸಿದ ಅತಿದೊಡ್ಡ ವಿಮಾನ ಅಪಘಾತ ಇದೆಂದು ಬಣ್ಣಿಸಲಾಗುತ್ತಿದೆ. ಅಪಘಾತದ ಭೀಕರ ದೃಶ್ಯ ಹೇಗಿತ್ತು ಅನ್ನೋದನ್ನು ದೃಶ್ಯಗಳಲ್ಲಿ ಗಮನಿಸಬಹುದಾಗಿದೆ.

  • ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

    ಹಕ್ಕಿ ಡಿಕ್ಕಿಯಿಂದ ಟೇಕಾಫ್‌ ವೇಗ ಕಳೆದುಕೊಂಡು ವಿಮಾನ ಪತನ – ತಜ್ಞರು ಹೇಳೋದು ಏನು?

    ನವದೆಹಲಿ: ಹಕ್ಕಿ ಡಿಕ್ಕಿಯಾಗಿ (Bird Hit) ಅಹಮಾದಬಾದ್‌ನಲ್ಲಿ (Ahmedabad) ಏರ್‌ ಇಂಡಿಯಾ (Air India) ವಿಮಾನ ಪತನಗೊಂಡಿತಾ (Plane Crash) ಎಂಬ ಶಂಕೆ ವ್ಯಕ್ತವಾಗಿದೆ.

    ವಿಮಾನ ನಿಲ್ದಾಣದಿಂದ ಟೇಕಾಫ್‌ ಆಗುವಾಗ ವಿಮಾನದ ಎಂಜಿನ್‌ಗೆ ಪಕ್ಷಿ ಬಡಿದ ಕಾರಣ ಈ ದುರಂತ ಸಂಭವಿಸಬರಬಹುದು ಎಂದು ಅನುಮಾನ ವ್ಯಕ್ತವಾಗಿದೆ. ಟೇಕಾಫ್‌ ಆಗುವಾಗ ಎಂಜಿನ್‌ಗೆ ಪಕ್ಷಿ ಬಡಿದಾಗ ವಿಮಾನ ಮುಂದಕ್ಕೆ ಹೋಗಬೇಕಾದ ವೇಗ ಅಟೋಮ್ಯಾಟಿಕ್‌ ಆಗಿ ತಗ್ಗುತ್ತದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

    ಸಾಧಾರಣವಾಗಿ ವಿಮಾನದ ಒಂದು ಎಂಜಿನ್‌ಗೆ ಪಕ್ಷಿ ಬಡಿದರೆ ಇನ್ನೊಂದು ಎಂಜಿನ್‌ ಮೂಲಕ ಚಾಲನೆ ಮಾಡಿ ಸಮೀಪದ ನಿಲ್ದಾಣದಲ್ಲಿ ಪೈಲಟ್‌ ತುರ್ತು ಲ್ಯಾಂಡ್‌ ಮಾಡುತ್ತಾರೆ. ಆದರೆ ಇಲ್ಲಿ ಎರಡು ಎಂಜಿನಿಗೆ ಪಕ್ಷಿ ಬಡಿದ ಕಾರಣ ವಿಮಾನ ವೇಗವನ್ನು ಕಳೆದುಕೊಂಡು ಪತನ ಹೊಂದಿರಬಹುದು ಎಂಬ ಅನುಮಾನವನ್ನು ಹಲವರು ವ್ಯಕ್ತಪಡಿಸಿದ್ದಾರೆ. ಈ ರೀತಿ ಎರಡು ಎಂಜಿನಿಗೆ ಪಕ್ಷಿ ಬಡಿಯುವುದು ಅಪರೂಪದಲ್ಲಿ ಅಪರೂಪ.

    ವಿಮಾನ ಟೇಕಾಫ್‌ ಆಗಿತ್ತು. ಅದರ ಲ್ಯಾಂಡಿಂಗ್ ಗೇರ್ ಮೇಲಕ್ಕೆತ್ತುವ ಮೊದಲೇ ವಿಮಾನವನ್ನು ಕೆಳಗಿಳಿಯಲು ಪ್ರಾರಂಭಿಸಲಾಗಿತ್ತು. ವಿಮಾನದ ಇಂಜಿನ್ ಶಕ್ತಿಯನ್ನು ಕಳೆದುಕೊಂಡರೆ ಮಾತ್ರ ಹೀಗಾಗುತ್ತದೆ. ತನಿಖೆಯಿಂದ ನಿಖರವಾದ ಕಾರಣ ತಿಳಿಯುವ ಸಾಧ್ಯತೆಯಿದೆ.

    ಅಹಮದಾಬಾದ್ ಏರ್‌ಪೋರ್ಟ್‌ನಲ್ಲಿ ಮೊದಲಿಂದಲೂ ಹಕ್ಕಿಗಳ ಸಮಸ್ಯೆ ಇದೆ ಎಂದು ವರದಿಯಾಗುತ್ತಿದೆ.

    ಅಹಮದಾಬಾದ್‌ನಿಂದ ಲಂಡನ್‌ನ ಗ್ಯಾಟ್ವಿಕ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ಮಧ್ಯಾಹ್ನ 1:39 ಸುಮಾರಿಗೆ ಟೇಕಾಫ್ ಆದ ಸ್ವಲ್ಪ ಸಮಯದಲ್ಲೇ ಅಪಘಾತಕ್ಕೀಡಾಗಿದೆ. ಈ ವಿಮಾನದಲ್ಲಿ 10 ಸಿಬ್ಬಂದಿ ಸೇರಿ, 242 ಜನರಿದ್ದರು. ಅದರಲ್ಲಿದ್ದ 110 ಮಂದಿ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌,? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ವಿಮಾನದ ಬ್ಲಾಕ್‌ ಬಾಕ್ಸ್‌ ಪರಿಶೀಲನೆ ಬಳಿಕ ಈ ಅವಘಡಕ್ಕೆ ನಿಖರ ಕಾರಣ ತಿಳಿಯಲಿದೆ. ಅಧಿಕಾರಿಗಳು ವಿಮಾನ ದುರಂತದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದನ್ನೂ ಓದಿ: ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌,? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

  • ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

    ʻಮೇ ಡೇʼ – ವಿಮಾನ ಪತನಕ್ಕೂ ಮುನ್ನ ಎಟಿಸಿಗೆ ಪೈಲಟ್‌ ಕೊಟ್ಟ ಕೊನೆಯ ಸಂದೇಶ

    ಅಹಮದಾಬಾದ್‌: ʻಮೇ ಡೇ..ʼ ಇದು ಲಂಡನ್‌ಗೆ ತೆರಳುತ್ತಿದ್ದ ಏರ್‌ ಇಂಡಿಯಾದ (Air India) B787 ವಿಮಾನ ಅಹಮದಾಬಾದ್‌ನಲ್ಲಿ ಪತನಗೊಳ್ಳುವ ಕೆಲವೇ ಕ್ಷಣಕ್ಕೂ ಮುನ್ನ ಪೈಲಟ್‌ ಏರ್‌ ಟ್ರಾಫಿಕ್‌ ಕಂಟ್ರೋಲ್‌ (ATC)ಗೆ ಕಳುಹಿಸಿದ ಕೊನೆಯ ಸಂದೇಶ ಇದಾಗಿತ್ತು.

    ಹೌದು. ರನ್‌ ವೇ 23ರಿಂದ‌ ವಿಮಾನ ಟೇಕಾಫ್‌ ಆಗಿತ್ತು. ಹಾರಿದ ಮೂರ್ನಾಲ್ಕು ನಿಮಿಷಗಳಲ್ಲೇ ಪೈಲಟ್‌ ʻಮೇ ಡೇ.. ಮೇ ಡೇ..ʼ (MAYDAY) ಎಂದು ಎಟಿಸಿಗೆ ಕೊನೆಯ ಸಂದೇಶ ಕೊಟ್ಟಿದ್ದರು. MAYDAY ಅಂದ್ರೆ ವಿಮಾನ ಡೇಂಜರ್‌ನಲ್ಲಿದ್ದು ತುರ್ತು ಅವಶ್ಯಕತೆ ಬಗ್ಗೆ ಎಮರ್ಜೆನ್ಸಿ ಕರೆ ಮಾಡುವುದು. ಎಟಿಸಿ ಮತ್ತೆ ಕರೆ ಮಾಡಿದಾಗ ವಾಪಸ್‌ ಪ್ರತಿಕ್ರಿಯೆ ಬಂದಿರಲಿಲ್ಲ. ಪೈಲಟ್‌ ಮೇ ಡೇ ಸಂದೇಶ ಕೊಟ್ಟ ಕೆಲವೇ ಕ್ಷಣಗಳಲ್ಲಿ ವಿಮಾನ ಪತನಗೊಂಡಿತ್ತು ಎಂದು ವರದಿಗಳು ತಿಳಿಸಿವೆ.

    ಅಹಮಾದಾಬಾದ್‌ನ ಸರ್ದಾರ್‌ ವಲ್ಲಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್‌ ಆದ ಏರ್‌ ಇಂಡಿಯಾ ವಿಮಾನ ಲಂಡನ್‌ಗೆ (London) ತೆರಳಬೇಕಿತ್ತು. ಈ ವಿಮಾನದಲ್ಲಿ ಒಟ್ಟು 242 ಪ್ರಯಾಣಿಕರಿದ್ದು, ಗುಜರಾತ್‌ ಮಾಜಿ ಮುಖ್ಯಮಂತ್ರಿ ವಿಜಯ್‌ ರೂಪಾನಿ ಕೂಡ ಇದೇ ವಿಮಾನದಲ್ಲಿದ್ದರು ಎಂದು ಹೇಳಲಾಗುತ್ತಿದೆ. 169 ಭಾರತೀಯರು, 53 ಯುಕೆ ಪ್ರಯಾಣಿಕರು, ಪೋರ್ಚುಗೀಸ್‌ ದೇಶದ 7, ಓರ್ವ ಕೆನಡಿಯನ್‌ ವಿಮಾನದಲ್ಲಿದ್ದರು. ಆದ್ರೆ ತಾಂತ್ರಿಕ ದೋಷದಿಂದ ವಿಮಾನ ಪತನಗೊಂಡಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

    ವಿಮಾನ ನೆಲಕ್ಕಪ್ಪಳಿಸುತ್ತಿದ್ದಂತೆ ಭಾರೀ ಸ್ಪೋಟ ಸಂಭವಿಸಿದ್ದು, ಬೆಂಕಿಯಲ್ಲಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ವಿಮಾನದ ಅವಶೇಷಗಳು ವಿಮಾನ ನಿಲ್ದಾಣದ ಸುತ್ತಲೂ ಬಿದ್ದಿದ್ದು, ರಕ್ಷಣಾ ಕಾರ್ಯಚರಣೆ ಆರಂಭಗೊಂಡಿದೆ.

    ಇನ್ನೂ ಪತನಗೊಂಡಿರುವ ಏರ್‌ ಇಂಡಿಯಾ ವಿಮಾನದ ಕ್ಯಾಪ್ಟನ್ ಸುಮೀತ್ ಸಭರ್ವಾಲ್, ಬರೋಬ್ಬರಿ 8,200 ಗಂಟೆಗಳ ಹಾರಾಟ ಅನುಭವ ಹೊಂದಿದ್ದರು. ಅದೇ ರೀತಿ ಸಹ-ಪೈಲಟ್‌ಗೆ 1,100 ಗಂಟೆಗಳ ಹಾರಾಟದ ಅನುಭವವಿತ್ತು. ಎಟಿಸಿ ಪ್ರಕಾರ, ವಿಮಾನವು ಅಹಮದಾಬಾದ್‌ನ ಸರ್ದಾರ್‌ ವಲ್ಲಭಾಯಿ ಪಟೇಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇ 23ರಿಂದ ಟೇಕಾಫ್‌ ಆಗಿತ್ತು.

  • ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಏರ್‌ ಇಂಡಿಯಾ ವಿಮಾನ ಪತನ – ಏನಿದು ಬ್ಲ್ಯಾಕ್‌ಬಾಕ್ಸ್‌? ಬೆಂಕಿಯಲ್ಲಿ ಸುಟ್ಟು ಹೋಗಲ್ಲ ಯಾಕೆ?

    ಯಾವುದೇ ವಿಮಾನ/ ಹೆಲಿಕಾಪ್ಟರ್‌ ಪತನವಾದರೂ ಪತನದ ತನಿಖೆಯಲ್ಲಿ ಬ್ಲ್ಯಾಕ್‌ ಬಾಕ್ಸ್‌ (Black Box) ಪ್ರಮುಖ ಪಾತ್ರ ವಹಿಸುತ್ತದೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲಾ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ. ಹೀಗಾಗಿ ಇಲ್ಲಿ ಏನಿದು ವಿಮಾನ ಬ್ಲ್ಯಾಕ್‌ ಬಾಕ್ಸ್‌? ಹೇಗೆ ಕಾರ್ಯನಿರ್ವಹಿಸುತ್ತದೆ ಇತ್ಯಾದಿ ವಿಚಾರಗಳನ್ನು ಇಲ್ಲಿ ನೀಡಲಾಗಿದೆ.

    ಏನಿದು ಬ್ಲ್ಯಾಕ್‌ ಬಾಕ್ಸ್‌?
    ವಿಮಾನದಲ್ಲಿ ಧ್ವನಿಗ್ರಹಣಕ್ಕೆ ಬಳಸಲಾಗುವ ಎರಡು ಸಾಧನಗಳನ್ನು ತಾಂತ್ರಿಕ ಭಾಷೆಯಲ್ಲಿ ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಗುತ್ತದೆ. ಬ್ಲ್ಯಾಕ್ ಬಾಕ್ಸ್ ಅನ್ನು ‘ಫ್ಲೈಟ್ ಡಾಟಾ ರೆಕಾರ್ಡರ್’ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಬಾಕ್ಸ್ ಹಾರಾಟದ ಸಮಯದಲ್ಲಿನ ವಿಮಾನದ ಎಲ್ಲಾ ಚಟುವಟಿಕೆಗಳನ್ನು ದಾಖಲಿಸುತ್ತದೆ. ಎಲ್ಲ ರೀತಿಯ ವಿಮಾನಗಳಲ್ಲಿ ಬ್ಲ್ಯಾಕ್‌ ಬಾಕ್ಸ್‌ ಅನ್ನು ಕಡ್ಡಾಯವಾಗಿ ಅಳವಡಿಸಲಾಗುತ್ತದೆ.

    ವಿಮಾನ ಅಪಘಾತವಾದಾಗ ಅದಕ್ಕೆ ಕಾರಣ ಪತ್ತೆ ಹಚ್ಚಲು ನೆರವಾಗಲೆಂದೇ 5 ಕೆಜಿ ತೂಕದ ರೆಕಾರ್ಡಿಂಗ್ ಸಾಧನವನ್ನು ಅಳವಡಿಸಲಾಗುತ್ತದೆ. ಭದ್ರತೆಯ ದೃಷ್ಟಿಯಿಂದ ಕಪ್ಪು ಪೆಟ್ಟಿಗೆಯನ್ನು ಸಾಮಾನ್ಯವಾಗಿ ವಿಮಾನದ ಹಿಂಭಾಗದಲ್ಲಿ ಇಡಲಾಗುತ್ತದೆ. ಈ ಪೆಟ್ಟಿಗೆಯನ್ನು ಟೈಟಾನಿಯಂ ಲೋಹದಿಂದ ಮಾಡಲಾಗಿದ್ದು, ಟೈಟಾನಿಯಂ ಪೆಟ್ಟಿಗೆಯಲ್ಲಿ ಸುತ್ತುವರಿಯಲಾಗಿದೆ. ಇದು ಎಷ್ಟು ಶಕ್ತಿಶಾಲಿಯೆಂದರೆ ಸಮುದ್ರದಲ್ಲಿ ಬಿದ್ದರೆ ಅಥವಾ ಎತ್ತರದಿಂದ ಬಿದ್ದರೂ ಯಾವುದೇ ಆಘಾತವನ್ನು ತಡೆದುಕೊಳ್ಳುವ ಶಕ್ತಿಯನ್ನು ಹೊಂದಿದೆ.

     

    ಹಿಂಭಾಗದಲ್ಲಿ ಯಾಕೆ?
    ಅಪಘಾತದ ಸಂಭವಿಸಿದಾಗ ಹಿಂಭಾಗದಲ್ಲಿ ಅದರಲ್ಲೂ ಬಾಲದ ಕಡೆ ಪೆಟ್ಟು ಬೀಳುವುದು ಕಡಿಮೆ. ಯಾಕೆಂದರೆ ಬಾಲ ಎತ್ತರದಲ್ಲಿರುತ್ತದೆ. ಈ ಕಾರಣಕ್ಕೆ ಬಾಲದಲ್ಲಿ ಅಳವಡಿಸಲಾಗಿರುತ್ತದೆ. ವಿಮಾನದ ಎಂಜಿನ್‌ಗೆ ಜೋಡಿಸಲಾದ ಜನರೇಟರ್ ನಿಂದ ಬ್ಲ್ಯಾಕ್ ಬಾಕ್ಸ್ ಚಾರ್ಜ್ ಆಗುತ್ತದೆ.

    ಎರಡು ಪ್ರತ್ಯೇಕ ಪೆಟ್ಟಿಗೆಗಳಿವೆ
    1. ಫ್ಲೈಟ್ ಡೇಟಾ ರೆಕಾರ್ಡರ್ – ಈ ಪೆಟ್ಟಿಗೆಯಲ್ಲಿ ನಿರ್ದೇಶನ, ಎತ್ತರ, ಇಂಧನ, ವೇಗ, ಕ್ಯಾಬಿನ್ ತಾಪಮಾನ ಇತ್ಯಾದಿಗಳ ಬಗ್ಗೆ ಮಾಹಿತಿ ಇರುತ್ತದೆ. ಕೊನೆಯ 25 ಗಂಟೆಗಳ ಕಾಲದ ಒಟ್ಟು 88 ಮಾಹಿತಿಗಳ ಡೇಟಾವನ್ನು ಸಂಗ್ರಹಿಸುತ್ತದೆ. 1,100 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ 1 ಗಂಟೆ, 260 ಡಿಗ್ರಿ ಸೆಲ್ಶಿಯಸ್‌ ತಾಪಮಾನ ಇದ್ದರೆ ಇದ್ದರೆ 10 ಗಂಟೆಗಳ ಕಾಲ ಡೇಟಾವನ್ನು ತಡೆದಿಟ್ಟುಕೊಳ್ಳಬಹುದು. ತನಿಖಾಧಿಕಾರಿಗಳಿಗೆ ಸುಲಭವಾಗಿ ಗುರುತಿಸಲು ಕೆಂಪು ಅಥವಾ ಗುಲಾಬಿ ಬಣ್ಣದಲ್ಲಿ ಈ ಪೆಟ್ಟಿಗೆಯನ್ನು ಮಾಡಲಾಗುತ್ತದೆ.

    2. ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್: ಈ ಬಾಕ್ಸ್ ಕೊನೆಯ ಎರಡು ಗಂಟೆಗಳ ವಿಮಾನದ ಧ್ವನಿಯನ್ನು ದಾಖಲಿಸುತ್ತದೆ. ಯಾವುದೇ ಅಪಘಾತ ಸಂಭವಿಸುವ ಮೊದಲು ಎಂಜಿನ್, ತುರ್ತು ಎಚ್ಚರಿಕೆ, ಕ್ಯಾಬಿನ್ ಮತ್ತು ಕಾಕ್‌ಪಿಟ್‌ ಧ್ವನಿಯನ್ನು ದಾಖಲಿಸುತ್ತದೆ.

    ಹೇಗೆ ಕಾರ್ಯನಿರ್ವಹಿಸುತ್ತದೆ?
    ಇದು ಯಾವುದೇ ವಿದ್ಯುತ್ ಇಲ್ಲದೆ 30 ದಿನಗಳವರೆಗೆ ಬ್ಲಾಕ್‌ ಬಾಕ್ಸ್‌ ಕೆಲಸ ಮಾಡಬಹುದು. ಪತ್ತೆ ಕಾರ್ಯ ಸುಲಭವಾಗಲು ಸುಮಾರು 30 ದಿನಗಳವರೆಗೆ ಸಿಗ್ನಲ್‌ ಹೊರಸೂಸುತ್ತಿರುತ್ತದೆ. ಈ ಧ್ವನಿಯನ್ನು ತನಿಖಾಧಿಕಾರಿಗಳು ಸುಮಾರು 2-3 ಕಿಲೋಮೀಟರ್ ದೂರದಿಂದ ಗುರುತಿಸಬಹುದು. 14 ಸಾವಿರ ಅಡಿ ಆಳದ ಸಮದ್ರದಲ್ಲಿದ್ದರೂ ಸಿಗ್ನಲ್‌ ಹೊರ ಸೂಸುತ್ತಿರುತ್ತದೆ.

    ಬಳಕೆ ಆಗಿದ್ದು ಯಾವಾಗ?
    1953-54ರ ವರ್ಷದಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿತ್ತು. ಯಾಕೆ ಈ ಅಪಘಾತಗಳು ಸಂಭವಿಸುತ್ತದೆ ಎಂಬುದನ್ನು ಪತ್ತೆ ಹಚ್ಚಲು ಮತ್ತು ಮುಂದೆ ಅಪಘಾತ ತಡೆಯಲು ಬ್ಲ್ಯಾಕ್‌ಬಾಕ್ಸ್‌ ಅನ್ನು ಅಭಿವೃದ್ಧಿ ಪಡಿಸಲಾಯಿತು. ಈ ಮೊದಲು ಇದು ಕೆಂಪು ಬಣ್ಣದ್ದಲ್ಲಿತ್ತು. ಹೀಗಾಗಿ ಇದನ್ನು ʼಕೆಂಪು ಮೊಟ್ಟೆ’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಬಳಿಕ ಬಾಕ್ಸ್‌ ಒಳಗಡೆ ಇರುವ ಗೋಡೆಗಳು ಕಪ್ಪು ಬಣ್ಣದ್ದಲ್ಲಿದ್ದ ಕಾರಣ ಇದನ್ನು ‘ಬ್ಲ್ಯಾಕ್ ಬಾಕ್ಸ್’ ಎಂದು ಕರೆಯಲಾಯಿತು. ವಿಮಾನ ಅಪಘಾತಕ್ಕೆ ನಿಖರ ಕಾರಣವನ್ನು ಈ ಬ್ಲ್ಯಾಕ್‌ ಬಾಕ್ಸ್‌ ನೀಡದೇ ಇದ್ದರೂ ತನಿಖೆಯಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದು ಸತ್ಯ.