Tag: air india

  • ಏರ್ ಇಂಡಿಯಾದ ಬಿಸಿನೆಸ್ ಕ್ಲಾಸ್ ನಲ್ಲಿ ತಿಗಣೆ ಕಾಟ!

    ಏರ್ ಇಂಡಿಯಾದ ಬಿಸಿನೆಸ್ ಕ್ಲಾಸ್ ನಲ್ಲಿ ತಿಗಣೆ ಕಾಟ!

    ಮುಂಬೈ: ತಿಗಣೆಗಳ ಕಾಟದಿಂದಾಗಿ ಬೇಸತ್ತು ಹೋದ ಏರ್ ಇಂಡಿಯಾ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಿಗಣೆ ಕಚ್ಚಿಸಿಕೊಂಡಿರುವ ಫೋಟೋಗಳನ್ನು ಪ್ರಕಟಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಸೌಮ್ಯ ಶೆಟ್ಟಿ ಎಂಬ ಪ್ರಯಾಣಿಕರು ತನ್ನ ಮೂವರು ಮಕ್ಕಳೊಂದಿಗೆ ಅಮೆರಿಕದಿಂದ ಮುಂಬೈಗೆ ಏರ್ ಇಂಡಿಯಾ ವಿಮಾನದ ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಬೆಳೆಸಿದ್ದರು. ಈ ಪ್ರಯಾಣದಲ್ಲಿ ಅವರು ಎದುರಿಸಿದ ತಿಗಣೆ ಕಾಟವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ನನ್ನ ಪುಟ್ಟ ಮಕ್ಕಳಿಗೆ ಆರಾಮದಾಯಕವಾಗಿರುತ್ತದೆ ಎಂದು ಅವರನ್ನು ಬಿಸಿನೆಸ್ ಕ್ಲಾಸ್ ನಲ್ಲಿ ಕರೆದೊಯ್ಯಲು ನಿಶ್ಚಯಿಸಿದೆ. ಆದರೆ ಏರ್ ಇಂಡಿಯಾ ಇಷ್ಟು ನೋವಿನ ಪ್ರಯಾಣ ನೀಡುತ್ತದೆ ಎಂದು ಊಹಿಸಿರಲಿಲ್ಲ. ತಿಗಣೆಗಳು ನಮ್ಮ ಕೈ, ಕಾಲು, ಕುತ್ತಿಗೆ ಹಾಗೂ ದೇಹದ ಅನೇಕ ಭಾಗಗಳಲ್ಲಿ ಕಚ್ಚಿ ಗಾಯಗೊಳಿಸಿವೆ ಎಂದು ದೂರಿದ್ದಾರೆ.

    https://twitter.com/saumshetty/status/1020295314878750721

    ವಿಮಾನದಲ್ಲಿರುವಾಗಲೇ ತಿಗಣೆ ಸಮಸ್ಯೆ ಬಗ್ಗೆ ಸಿಬ್ಬಂದಿಗೆ ಹೇಳಿದರೂ, ಅದೇ ಸೀಟ್ ನಲ್ಲೇ ಮಲಗುವಂತೆ ಸೂಚಿಸಿದ್ದರು. ಇನ್ನೇನು ಮುಂಬೈಗೆ ಬಂದಿಳಿಯಬೇಕು ಎನ್ನುವಾಗ ಮಾತ್ರ ಸೀಟ್ ಬದಲಾವಣೆ ಮಾಡಿಕೊಟ್ಟರು ಎಂದು ಆರೋಪಿಸಿದ್ದಾರೆ.

    ಏರ್ ಇಂಡಿಯಾ ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣಿಸಿದ ಮತ್ತೊಬ್ಬ ಪ್ರಯಾಣಿಕರು ತಿಗಣೆ ಕಾಟದ ಬಗ್ಗೆ ಟ್ವಿಟರ್ ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರವೀಣ್ ಟಾನ್ಸೆಕರ್ ಎಂಬವರು ಟ್ವೀಟ್ ನಲ್ಲಿ ವಿಮಾನಯಾನ ಸಚಿವ ಸುರೇಶ್ ಪ್ರಭು ಅವರನ್ನು ಟ್ಯಾಗ್ ಮಾಡಿ, ಈಗಷ್ಟೇ ನನ್ನ ಕುಟುಂಬದ ಜತೆ ನ್ಯೂಯಾರ್ಕ್ ನಿಂದ ಏರ್ ಇಂಡಿಯಾ 144 ಬಿಸಿನೆಸ್ ಕ್ಲಾಸ್ ನಲ್ಲಿ ಪ್ರಯಾಣ ಮುಗಿಸಿದೆ. ನಮ್ಮ ಎಲ್ಲಾ ಸೀಟುಗಳು ತಿಗಣೆಗಳಿಂದ ಮುತ್ತಿಕೊಂಡಿದ್ದವು. ನಾನು ರೈಲಿನಲ್ಲಿ ತಿಗಣೆಗಳಿರುವುದನ್ನು ಕೇಳಿದ್ದೆನೆ. ಆದರೆ ಸರ್, ನಮ್ಮ ಮಹಾರಾಜ (ಬಿಸಿನೆಸ್) ಕ್ಲಾಸ್ ನಲ್ಲಿಯೂ ತಿಗಣೆಯಿರುವುದು ನೋಡಿ ನನಗೆ ಆಶ್ಚರ್ಯವಾಯಿತು ಎಂದು ಬರೆದು ಅಸಮಾಧಾನವನ್ನು ಹೊರಹಾಕಿದ್ದಾರೆ.

    ಪ್ರವೀಣ್ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ, ತೊಂದರೆಯಿಂದಾಗಿ ಕ್ಷಮೆಯಿರಲಿ, ಮಾಹಿತಿ ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು. ಈ ತಪ್ಪನ್ನು ಸರಿಪಡಿಸಲಾಗುತ್ತದೆ ಎಂದು ರೀ ಟ್ವೀಟ್ ಮಾಡಿದೆ.

  • ರಿಯಾದ್ ಹೋಟೆಲ್‍ನಲ್ಲಿ ಭಾರತದ ಪೈಲಟ್ ಸಾವು

    ರಿಯಾದ್ ಹೋಟೆಲ್‍ನಲ್ಲಿ ಭಾರತದ ಪೈಲಟ್ ಸಾವು

    ರಿಯಾದ್: ಸೌದಿ ಅರೇಬಿಯಾದ ರಿಯಾದ್ ಹೋಟೆಲ್‍ವೊಂದರಲ್ಲಿ ಏರ್ ಇಂಡಿಯಾ ಪೈಲಟ್‍ವೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

    ರಿತ್ವಿಕ್ ತಿವಾರಿ(27) ಮೃತಪಟ್ಟ ಪೈಲೆಟ್. ರಿತ್ವಿಕ್ ಹೋಟೆಲ್‍ನ ಜಿಮ್‍ನಲ್ಲಿ ವರ್ಕೌಟ್ ಮಾಡುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.

    ರಿತ್ವಿಕ್ ಹೋಟೆಲ್‍ನಲ್ಲಿರುವ ಜಿಮ್‍ನ ಶೌಚಾಲಯದಲ್ಲಿ ಬುಧವಾರ ಬೆಳಗ್ಗೆ ಕುಸಿದು ಬಿದ್ದಿದ್ದರು. ಕೂಡಲೇ ರಿತ್ವಿಕ್‍ರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಷ್ಟರಲ್ಲೇ ರಿತ್ವಿಕ್ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆಂದು ಕೌನ್ಸಿಲರ್ ಅನಿಲ್ ನೌಟಿಯಾಲ್ ತಿಳಿಸಿದ್ದಾರೆ.

    ಆಸ್ಪತ್ರೆಯ ಎಲ್ಲ ರಿಪೋರ್ಟ್‍ಗಳು ಪರಿಶೀಲಿಸಿದ್ದಾಗ ರಿತ್ವಿಕ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂಬುದು ತಿಳಿದು ಬಂದಿದೆ. ಸದ್ಯ ಭಾರತದ ರಾಯಭಾರಿ ಸಿಬ್ಬಂದಿ ರಿತ್ವಿಕ್ ಅವರ ಕುಟುಂಬದ ಜೊತೆ ಸಂಪರ್ಕದಲ್ಲಿದ್ದಾರೆ ಎಂದು ಅನಿಲ್ ಹೇಳಿದ್ದಾರೆ.

    ನಾವು ರಿತ್ವಿಕ್ ಕುಟುಂಬದವರ ಜೊತೆ ಸಂಪರ್ಕದಲ್ಲಿದ್ದೇವೆ. ರಿತ್ವಿಕ್ ಮೃತದೇಹ ಭಾರತಕ್ಕೆ ಕಳುಹಿಸುವ ಮೊದಲು ಎಲ್ಲ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಾಗಿದೆ ಎಂದು ಅನಿಲ್ ನೌಟಿಯಾಲ್ ತಿಳಿಸಿದ್ದಾರೆ.

  • ಶೀಘ್ರವೇ ಭಾರತಕ್ಕೂ ಲಗ್ಗೆಯಿಡಲಿವೆ ಬಿಕಿನಿ ಏರ್ ಲೈನ್ಸ್!

    ಶೀಘ್ರವೇ ಭಾರತಕ್ಕೂ ಲಗ್ಗೆಯಿಡಲಿವೆ ಬಿಕಿನಿ ಏರ್ ಲೈನ್ಸ್!

    ನವದೆಹಲಿ: ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿರೋ ವಿಯೆಟ್ನಾಂನ ವಿಯೆಟ್ಜೆಟ್ ಸದ್ಯದಲ್ಲೇ ಭಾರತಕ್ಕೂ ಬರಲಿದೆ ಎಂದು ವಿಮಾನಯಾನ ಸಂಸ್ಥೆ ಫೋಷಿಸಿದೆ.

    ಈ ವಿಮಾನ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ. ವಾರದಲ್ಲಿ ನಾಲ್ಕು ದಿನಗಳ ಕಾಲ ಇದು ಹಾರಾಟ ನಡೆಸಲಿದೆ. ಒಟ್ಟಿನಲ್ಲಿ ಜುಲೈ ಅಥವಾ ಅಗಸ್ಟ್ ನಲ್ಲಿ ಬಿಕಿನಿ ಏರ್ ಲೈನ್ಸ್ ವಿಮಾನ ದೆಹಲಿಯಿಂದ ಹಾರಾಟ ಆರಂಭಿಸಲಿದೆ ಎಂಬುದಾಗಿ ವರದಿಯಾಗಿದೆ.

    ಈ ವಿಮಾನದಲ್ಲಿರೋ ಗಗನಸಖಿಯರೆಲ್ಲ ಕೇವಲ ಬಿಕಿನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಈ ಬಿಕಿನಿ ಸುಂದರಿಯರೀಗ ಭಾರತಕ್ಕೂ ಆಗಮಿಸುತ್ತಿರುವುದು ಪ್ರಯಾಣಿಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.

    ಇದು ನಿರಂತರ ವಿಮಾನವಾಗಿರುವುದರಿಂದ ಹೆಚ್ಚಿನ ನಿಲ್ದಾಣಗಳಲ್ಲಿ ಲ್ಯಾಂಡಿಂಗ್ ಆಗಲ್ಲ. ಅಂದರೆ ಪ್ರಯಾಣಿಕರು ಮಾರ್ಗ ಮಧ್ಯೆ ಬೇರೆ ಬೇರೆ ವಿಮಾನಗಳನ್ನು ಬದಲಿಸಬೇಕಾಗಿಲ್ಲ. ಈ ವಿಮಾನ ಪ್ರಸ್ತುತ ಭಾರತ ಮತ್ತು ವಿಯೆಟ್ನಾಂ ನಡುವೆ ಇದೆ. ಈ ವಿಮಾನ ಥೈಲ್ಯಾಂಡ್, ಸಿಂಗಾಪುರ್ ಅಥವಾ ಮಲೇಶಿಯಾ ಮೂಲಕ ಪ್ರಯಾಣಿಕರನ್ನು ಕರೆದೊಯ್ಯುತ್ತದೆ.

    ವಿಯೆಟ್ನಾಂ ಏರ್ ಲೈನ್ ವಾರ್ಷಿಕ ಕ್ಯಾಲೆಂಡರ್ ಕೂಡ ಪ್ರಕಟಿಸುತ್ತಿದೆ. ಇದು ವಿಮಾನದ ಮಾಡೆಲ್ ಗಳು, ಪೈಲಟ್ ಗಳು ಮತ್ತು ನೆಲ ಸಿಬ್ಬಂದಿಗಳ ವಿವರಗಳನ್ನು ತಿಳಿಸುತ್ತದೆ. ಜನರು ನಮ್ಮನ್ನು ಬಿಕಿನಿಯ ಚಿತ್ರದೊಂದಿಗೆ ಸಂಯೋಜಿಸುವಾಗ ನಾವು ಅಸಮಾಧಾನ ಹೊಂದಿಲ್ಲ. ಜನರಿಗೆ ಸಂತೋಷವನ್ನುಂಟು ಮಾಡಿದರೆ ನಾವು ಸಂತೋಷ ವಾಗಿರುತ್ತೇವೆ ಎಂದು ವಿಯೆಟ್ಜೆಟ್ ವ್ಯವಸ್ಥಾಪಕ ನಿರ್ದೇಶಕ ಲುಯು ಡುಕ್ ಖಾನ್ ತಿಳಿಸಿದ್ದಾರೆ.


    ಅಷ್ಟೇ ಅಲ್ಲದೇ ಕ್ಯಾಲೆಂಡರ್ ಮತ್ತು ಬಿಕಿನಿಯನ್ನು ವಿಯೆಟ್ನಾಂನ ಸಂಪ್ರದಾಯವಾದ ಸಂಸ್ಕೃತಿಯಲ್ಲಿನ ಚಿತ್ರಗಳು ಎಂದು ವಿಯೆಟ್ಜೆಟ್ ನ ಬಿಲಿಯನೇರ್ ಮಹಿಳಾ ಸಿಇಓ ಥಿ ಫುಂಗ್ ಥೊವೊ ಕೂಡಾ ಹೇಳಿದ್ದಾರೆ.

  • ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ- 102 ಪ್ರಯಾಣಿಕರು ಪಾರು

    ಏರ್ ಇಂಡಿಯಾ ವಿಮಾನ ಲ್ಯಾಂಡಿಂಗ್ ವೇಳೆ ಅವಘಡ- 102 ಪ್ರಯಾಣಿಕರು ಪಾರು

    ಕೊಚ್ಚಿ: 102 ಪ್ರಯಾಣಿಕರು ಹಾಗೂ 6 ಸಿಬ್ಬಂದಿಯನ್ನೊಳಗೊಂಡ ಏರ್ ಇಂಡಿಯಾ ಎಕ್ಸ್‍ಪ್ರೆಸ್ ವಿಮಾನ ಇಂದು ಬೆಳಗ್ಗೆ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗುವ ವೇಳೆ ಅವಘಡ ಸಂಭವಿಸಿದ್ದು, ಭಾರೀ ಅನಾಹುತವೊಂದು ತಪ್ಪಿದೆ.

    ವಿಮಾನ ಲ್ಯಾಂಡ್ ಆಗುವ ವೇಳೆ ಪಾರ್ಕಿಂಗ್ ವೇ ಕಡೆಗೆ ಸಮೀಪಿಸುತ್ತಿದ್ದಂತೆ ಪಥವನ್ನು ಬದಲಿಸಿದೆ. ಈ ಅವಘಡದಿಂದಾಗಿ ಬೋಯಿಂಗ್ 737-800 ವಿಮಾನದ ನೋಸ್ ವೀಲ್ ಜಖಂ ಆಗಿದೆ.

    ಘಟನೆಯಿಂದ ಪ್ರಯಾಣಿಕರರಿಗೆ ಯಾವುದೇ ಹಾನಿಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಎಲ್ಲಾ ಪ್ರಯಾಣಿಕರನ್ನ ಏಣಿ ಮೂಲಕ ಕೆಳಗಿಳಿಸಲಾಯ್ತು ಎಂದು ಕೊಚಿನ್ ಇಂಟರ್‍ನ್ಯಾಷನಲ್ ಏರ್‍ಪೋರ್ಟ್ ಲಿಮಿಟೆಡ್‍ನ ವಕ್ತಾರರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಸದ್ಯ ಈ ವಿಮಾನದ ಹಾರಾಟವನ್ನು ಸ್ಥಗಿತಗೊಳಿಸಲಾಗಿದ್ದು, ಘಟನೆಯ ಬಗ್ಗೆ ಆಂತರಿಕ ತನಿಖೆ ಹಾಗೂ ನಾಗರೀಕ ವಿಮಾನಯಾನ ನಿರ್ದೇಶನಾಲಯದಿಂದ್ಲೂ ತನಿಖೆ ಆರಂಭವಾಗಿದೆ ಎಂದು ವರದಿಯಾಗಿದೆ.

  • ಗಾಯಕ್‍ವಾಡ್ ಎಫೆಕ್ಟ್: ವಿಮಾನ ಹಾರಾಟ ವಿಳಂಬಕ್ಕೆ ಕಾರಣರಾದ್ರೆ ದಂಡ ವಿಧಿಸಲಿದೆ ಏರ್ ಇಂಡಿಯಾ!

    ಗಾಯಕ್‍ವಾಡ್ ಎಫೆಕ್ಟ್: ವಿಮಾನ ಹಾರಾಟ ವಿಳಂಬಕ್ಕೆ ಕಾರಣರಾದ್ರೆ ದಂಡ ವಿಧಿಸಲಿದೆ ಏರ್ ಇಂಡಿಯಾ!

    ನವದೆಹಲಿ: ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಮೇಲೆ ಶಿವಸೇನಾ ಸಂಸದ ರವೀಂದ್ರ ಗಾಯಕ್‍ವಾಡ್ ಚಪ್ಪಲಿಯಿಂದ ಹಲ್ಲೆ ಮಾಡಿದ ಪ್ರಕರಣದ ಬೆನ್ನಲ್ಲೇ ಇನ್ಮುಂದೆ ವಿಮಾನ ಹಾರಾಟ ವಿಳಂಬವಾಗಲು ಕರಣವಾಗೋ ಪ್ರಯಾಣಿಕರಿಗೆ ಭಾರೀ ದಂಡ ವಿಧಿಸಲು ಏರ್ ಇಂಡಿಯಾ ತೀರ್ಮಾನಿಸಿದೆ.

    ಇದಕ್ಕಾಗಿ ಏರ್ ಇಂಡಿಯಾ ಹೊಸ ನಿಯಮವನ್ನ ರೂಪಿಸಿದ್ದು, 1 ಗಂಟೆವರೆಗೆ ತಡವಾದ್ರೆ 5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಒಂದು ವೇಳೆ 1 ರಿಂದ 2 ಗಂಟೆ ತಡವಾದ್ರೆ 10 ಲಕ್ಷ ರೂ. ಹಾಗೂ 2 ಗಂಟೆಗೂ ಮೀರಿ ತಡವಾದ್ರೆ ಬರೋಬ್ಬರಿ 15 ಲಕ್ಷ ರೂ ದಂಡ ವಿಧಿಸಲಿದೆ.

    ಈಗಾಗಲೇ ಏರ್ ಇಂಡಿಯಾ ಸಂಸ್ಥೆ ಲಾಗ್‍ಬುಕ್‍ನಲ್ಲಿ ಕೆಲವು ಬದಲಾವಣೆಗಳನ್ನೂ ಮಾಡಿದೆ. ಈ ಹೊಸ ವ್ಯವಸ್ಥೆಯಡಿ ವಿಮಾನ ಹೊರಡುವುದು ತಡವಾದ್ರೆ, ಅದರಲ್ಲೂ ಪ್ರಯಾಣಿಕರ ದುರ್ನಡತೆಯ ಸಂದರ್ಭದಲ್ಲಿ ತಡವಾಗಲು ಕಾರಣವೇನು ಎಂಬುದನ್ನು ಇತರೆ ಎಲ್ಲಾ ಮಾಹಿತಿಯನ್ನ ಒದಗಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಳೆದ ಮಾರ್ಚ್‍ನಲ್ಲಿ ಪುಣೆ- ದೆಹಲಿ ವಿಮಾನದಲ್ಲಿ ತನ್ನನ್ನು ಬ್ಯುಸಿನೆಸ್ ಕ್ಲಾಸ್‍ನಿಂದ ಎಕಾನಮಿ ಕ್ಲಾಸ್‍ಗೆ ವರ್ಗಾಯಿಸಿದ್ದಕ್ಕೆ ಕೋಪಗೊಂಡ ಗಾಯಕ್‍ವಾಡ್ ಏರ್ ಇಂಡಿಯಾದ ಹಿರಿಯ ಅಧಿಕಾರಿಯೊಬ್ಬರ ಮೇಲೆ ಚಪ್ಪಲಿಯಿಂದ ಹೊಡೆದಿದ್ದರು. ಹೀಗಾಗಿ 6 ವಿಮಾನಯಾನ ಸಂಸ್ಥೆಗಳು ಗಾಯಕ್‍ವಾಡ್ ಪ್ರಯಾಣದ ಮೇಲೆ ನಿಷೇಧ ಹೇರಿದ್ದವು. ಬಳಿಕ ನಿಷೇಧವನ್ನ ಹಿಂಪಡೆಯಲಾಗಿತ್ತು. ಗಾಯಕ್‍ವಾಡ್ ಅವರ ಈ ಅವಾಂತರದಿಂದ ವಿಮಾನ ಒಂದೂವರೆ ಗಂಟೆ ತಡವಾಗಿ ಹೊರಟಿತ್ತು.

  • ಶಿವಸೇನೆ ಸಂಸದನ ಆರ್ಭಟಕ್ಕೆ ಬ್ರೇಕ್: ಇನ್ಮುಂದೆ ಈ ವಿಮಾನಗಳಲ್ಲಿ ಹಾರುವಂತಿಲ್ಲ

    ಶಿವಸೇನೆ ಸಂಸದನ ಆರ್ಭಟಕ್ಕೆ ಬ್ರೇಕ್: ಇನ್ಮುಂದೆ ಈ ವಿಮಾನಗಳಲ್ಲಿ ಹಾರುವಂತಿಲ್ಲ

    ಮುಂಬೈ: ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡರಿಗೆ ಖಾಸಗಿ ವಿಮಾನಯಾನ ಸಂಸ್ಥೆಗಳು ನಿಷೇಧ ಹೇರಿದೆ. ಗುರುವಾರ ಏರ್ ಇಂಡಿಯಾದ ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದು ಅಧಿಕಾರ ದರ್ಪವನ್ನು ತೋರಿದ್ದ ಹಿನ್ನೆಲೆಯಲ್ಲಿ ಇಂಡಿಯನ್ ಏರ್‍ಲೈನ್ಸ್ ಫೆಡರೇಷನ್(ಎಫ್‍ಐಎ) ಅಡಿಯಲ್ಲಿ ಬರುವ ಖಾಸಗಿ ಕಂಪೆನಿಗಳು ಗಾಯಕ್ವಾಡ್ ಅವರಿಗೆ ತಮ್ಮ ಸಂಸ್ಥೆಯಲ್ಲಿ ಟಿಕೆಟ್ ನೀಡದೇ ಇರಲು ನಿರ್ಧಾರವನ್ನು ಕೈಗೊಂಡಿದೆ ಎಂದು ಮೂಲಗಳು ಹೇಳಿವೆ.

    ಎಫ್‍ಐಎ ಸದಸ್ಯರಾಗಿರುವ ಜೆಟ್ ಏರ್‍ವೇಸ್, ಗೋ ಏರ್, ಇಂಡಿಗೋ, ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗಳು ರವೀಂದ್ರ ಅವರ ಮೇಲೆ ಕಠಿಣ ಕ್ರಮವನ್ನು ತಗೆದುಕೊಂಡಿದೆ ಎಂದು ಎಫ್‍ಐಎ ವಕ್ತಾರರೊಬ್ಬರು ತಿಳಿಸಿದ್ದಾರೆ.

    ಸಿಬ್ಬಂದಿಗೆ ಹೊಡೆದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ರವೀಂದ್ರ ಗಾಯಕ್ವಾಡ್ ಅವರ ಹೆಸರನ್ನು ಕಪ್ಪುಪಟ್ಟಿಗೆ ಸೇರಿಸಿದೆ. ಏರ್ ಇಂಡಿಯಾದ ಅಧಿಕಾರಿಯೊಬ್ಬರು ಈ ವಿಚಾರವನ್ನು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಆದರೆ ಬ್ಲಾಕ್‍ಲಿಸ್ಟ್ ಅವಧಿ ಎಲ್ಲಿಯವರೆಗೆ ಇರಲಿದೆ ಎನ್ನುವುದು ತಿಳಿದು ಬಂದಿಲ್ಲ.

    ಉಸ್ಮನಾ ಬಾದ್ ಲೋಕಸಭಾ ಕ್ಷೇತ್ರದ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾದ ನಿವೃತ್ತ ಅಂಚಿನಲ್ಲಿರೋ ತಮ್ಮ ತಂದೆ ವಯಸ್ಸಿನ ಏರ್ ಇಂಡಿಯಾದ ಸಿಬ್ಬಂದಿ ಸುಕುಮಾರ್ ಅವರಿಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದರು. ಬಳಿಕ ವಿಮಾನದಲ್ಲಿ ಸೀಟ್ ಬದಲಾವಣೆ ವಿಚಾರದಲ್ಲಿ ಗಲಾಟೆ ನಡೆದಾಗ ಹೊಡೆದಿದ್ದೇನೆ ಅಂತ ಪೌರುಷ ತೋರಿದ್ದರು.

    ರವೀಂದ್ರ ಗಾಯಕ್ವಾಡ್ ಪುಣೆಯಿಂದ ದೆಹಲಿಯತ್ತ ಹೊರಟಿದ್ದರು. ನಾನು ಬಿಸಿನೆಸ್ ಕ್ಲಾಸ್ ಟಿಕೆಟ್ ಬುಕ್ ಮಾಡಿದ್ದು, ಆದ್ರೆ ನನ್ನ ಎಕನಾಮಿ ಕ್ಲಾಸ್ ಸೀಟ್‍ನಲ್ಲಿ ಕೂರಿಸಿದ್ದಾರೆ ಎಂದು ಏರ್ ಇಂಡಿಯಾ ವಿರುದ್ಧ ಆರೋಪ ಮಾಡಿದ್ದರು. ಘಟನೆ ಬಗ್ಗೆ ಮಾತಾನಾಡಿರೋ ಹಲ್ಲೆಗೊಳಗಾದ ಸಿಬ್ಬಂದಿ ಸುಕುಮಾರ್ ಈ ದೇಶವನ್ನು ಆ ದೇವರೇ ಕಾಪಾಡಬೇಕು ಅಂತಾ ಬೇಸರ ವ್ಯಕ್ತಪಡಿಸಿದ್ದರು.

    ಏರ್ ಇಂಡಿಯಾ ರವೀಂದ್ರ ಗಾಯಕ್ವಾಡ್ ವಿರುದ್ಧ ಎರಡು ಎಫ್‍ಐಆರ್ ಗಳನ್ನು ದಾಖಲಿಸಿದೆ. ಒಂದು ತಮ್ಮ ಸಿಬ್ಬಂದಿ ಹಲ್ಲೆ ಮಾಡಿದ್ದು ಮತ್ತು 40 ನಿಮಿಷ ವಿಮಾನ ಪ್ರಯಾಣಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ದೂರು ದಾಖಲಿಸಿದೆ.

     

  • 25 ಬಾರಿ ಚಪ್ಪಲಿಯಲ್ಲಿ ಏರ್ ಇಂಡಿಯಾದ ಸಿಬ್ಬಂದಿಗೆ ಹೊಡೆದ ಶಿವಸೇನಾ ಸಂಸದ

    25 ಬಾರಿ ಚಪ್ಪಲಿಯಲ್ಲಿ ಏರ್ ಇಂಡಿಯಾದ ಸಿಬ್ಬಂದಿಗೆ ಹೊಡೆದ ಶಿವಸೇನಾ ಸಂಸದ

    ನವದೆಹಲಿ: ಮಾಧ್ಯಮಗಳ ವಿರುದ್ಧ ಸಿಡಿದೇಳೋ.. ನಾವು ಜನರ ಸೇವೆ ಮಾಡೋಕೆ ಅಂತಾನೇ ಬಂದಿದ್ದೇವೆ ಅನ್ನೋ ಜನನಾಯಕರು ಜನರ ಮೇಲೆ ದರ್ಪ, ಧಿಮಾಕು ತೋರಿದ್ದಾರೆ. ಇದಕ್ಕೆ ಮಹಾರಾಷ್ಟ್ರ ಇವತ್ತು ಸಾಕ್ಷಿಯಾಗಿದೆ.

    ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಏರ್ ಇಂಡಿಯಾದ ನಿವೃತ್ತ ಅಂಚಿನಲ್ಲಿರೋ ತಮ್ಮ ತಂದೆ ವಯಸ್ಸಿನ ಸಿಬ್ಬಂದಿಯೊಬ್ಬರಿಗೆ 25 ಬಾರಿ ಚಪ್ಪಲಿಯಲ್ಲಿ ಹೊಡೆಯುವ ಮೂಲಕ ದರ್ಪ ಮೆರೆದಿದ್ದಾರೆ. ಇಷ್ಟೇ ಅಲ್ಲ, ವಿಮಾನದಲ್ಲಿ ಸೀಟ್ ಬದಲಾವಣೆ ವಿಚಾರದಲ್ಲಿ ಗಲಾಟೆ ನಡೆದಾಗ ಹೊಡೆದಿದ್ದೇನೆ ಅಂತ ಪೌರುಷ ತೋರಿದ್ದಾರೆ.

    ನಾನು ಬಿಸಿನೆಸ್  ಕ್ಲಾಸ್ ಟಿಕೆಟ್ ಬೇಕೆಂದು ಕೇಳಿದ್ದು, ಏರ್ ಇಂಡಿಯಾ ಎಕಾನಮಿ ಕ್ಲಾಸ್ ಟಿಕೆಟ್ ಅನ್ನು ಕೊಟ್ಟಿರುವುದಾಗಿ ಆರೋಪಿಸಿದ್ದಾರೆ. ಪುಣೆಯಿಂದ ನವದೆಹಲಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಈ ಘಟನೆ ನಡೆದಿದೆ.

    ಘಟನೆ ಬಗ್ಗೆ ಮಾತಾಡಿರೋ ಹಲ್ಲೆಗೊಳಗಾದ ಸಿಬ್ಬಂದಿ ಸುಕುಮಾರ್ ಈ ದೇಶವನ್ನು ಆ ದೇವರೇ ಕಾಪಾಡಬೇಕು ಅಂತಾ ಬೇಸರ ವ್ಯಕ್ತಪಡಿಸಿದ್ದಾರೆ. ಘಟನೆ ಬಗ್ಗೆ ವಿಮಾನಯಾನ ಇಲಾಖೆ ತನಿಖೆಗೆ ಆದೇಶಿಸಿದೆ.