Tag: air india

  • ಲಂಡನ್‌ ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

    ಲಂಡನ್‌ ಹೋಟೆಲ್‌ನಲ್ಲಿ ಏರ್‌ ಇಂಡಿಯಾ ಮಹಿಳಾ ಸಿಬ್ಬಂದಿ ಮೇಲೆ ಹಲ್ಲೆ

    ಲಂಡನ್‌: ಏರ್ ಇಂಡಿಯಾ (Air India) ಕ್ಯಾಬಿನ್ ಸಿಬ್ಬಂದಿಯ ಮೇಲೆ ಲಂಡನ್‌ನಲ್ಲಿರುವ ಹೋಟೆಲ್‌ನಲ್ಲಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.

    ಪ್ರಮುಖ ಅಂತಾರಾಷ್ಟ್ರೀಯ ಹೋಟೆಲ್‌ನಲ್ಲಿ ಯಾರೋ ಅಕ್ರಮವಾಗಿ ಒಳನುಗ್ಗಿ ಹಲ್ಲೆ ನಡೆಸಿರುವ ಬಗ್ಗೆ ಬೇಸರ ಹೊರಹಾಕಿರುವ ಏರ್‌ಲೈನ್ಸ್‌, ವೃತ್ತಿಪರ ಸಮಾಲೋಚನೆ ಸೇರಿದಂತೆ ನಮ್ಮ ಸಹೋದ್ಯೋಗಿ ಮತ್ತು ಅವರ ತಂಡಕ್ಕೆ ನಾವು ಸಾಧ್ಯವಿರುವ ಎಲ್ಲ ಬೆಂಬಲವನ್ನು ಒದಗಿಸುತ್ತೇವೆ ಎಂದು ತಿಳಿಸಿದೆ. ಇದನ್ನೂ ಓದಿ: ಮುಸ್ಲಿಮರಿಗೆ ಜಾತ್ಯತೀತ ನಾಗರಿಕ ಸಂಹಿತೆ ಸ್ವೀಕಾರಾರ್ಹವಲ್ಲ: ಮುಸ್ಲಿಂ ಮಂಡಳಿ

    ಪ್ರಕರಣ ಸಂಬಂಧ ಲಂಡನ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಸಿಬ್ಬಂದಿಯ ಗೌಪ್ಯತೆಯನ್ನು ಗೌರವಿಸಬೇಕು ಎಂದು ಏರ್ ಇಂಡಿಯಾ ವಿನಂತಿಸಿದೆ. ಘಟನೆಯ ಕೂಲಂಕಷ ತನಿಖೆ ಬಗ್ಗೆ ಕ್ರಮವಹಿಸಿರುವ ಬಗ್ಗೆಯೂ ಏರ್‌ಲೈನ್ಸ್‌ ಮಾಹಿತಿ ನೀಡಿದೆ.

    ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆಯೇ ಎಂಬ ವರದಿಗಳ ಬಗ್ಗೆ ವಿಮಾನಯಾನ ಸಂಸ್ಥೆಯು ಅಧಿಕೃತವಾಗಿ ಪ್ರತಿಕ್ರಿಯಿಸಿಲ್ಲ. ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ – ಸಂತ್ರಸ್ತರಿಗೆ ಮರೀಚಿಕೆಯಾಗಿಯೇ ಉಳಿದ ಉದ್ಯೋಗದ ಭರವಸೆ

  • ಒಂದೇ ರನ್‌ವೇಯಲ್ಲಿ ಲ್ಯಾಂಡಿಂಗ್‌, ಟೇಕಾಫ್‌- ಮುಂಬೈಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿತು ದುರಂತ

    ಒಂದೇ ರನ್‌ವೇಯಲ್ಲಿ ಲ್ಯಾಂಡಿಂಗ್‌, ಟೇಕಾಫ್‌- ಮುಂಬೈಯಲ್ಲಿ ಕೂದಲೆಳೆ ಅಂತರದಲ್ಲಿ ತಪ್ಪಿತು ದುರಂತ

    ಮುಂಬೈ: ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Mumbai Airport) ಸ್ವಲ್ಪ ಹೆಚ್ಚು ಕಡಿಮೆಯಾಗಿದ್ದರೂ ದೊಡ್ಡ ದುರಂತ ಸಂಭವಿಸುವ ಸಾಧ್ಯತೆ ಇತ್ತು. ಶನಿವಾರ ಸಂಜೆ ಒಂದೇ ರನ್‌ವೇಯಲ್ಲಿ (Runway) ಏರ್‌ ಇಂಡಿಯಾ (Air India) ವಿಮಾನ ಟೇಕಾಫ್‌ ಆದರೆ ಇಂಡಿಗೋ (IndiGo) ವಿಮಾನ ಲ್ಯಾಂಡಿಂಗ್‌ ಆಗಿದೆ.

    ಏರ್‌ ಇಂಡಿಯಾ ವಿಮಾನ ತಿರುವನಂತಪುರಂಗೆ ಟೇಕಾಫ್‌ ಆಗುತ್ತಿತ್ತು. ಈ ಸಂದರ್ಭದಲ್ಲಿ ಇಂದೋರ್‌ನಿಂದ ಆಗಮಿಸಿದ ಇಂಡಿಗೋ ವಿಮಾನಕ್ಕೆ ತಪ್ಪಾಗಿ ರನ್‌ವೇಯಲ್ಲಿ ಲ್ಯಾಂಡಿಂಗ್‌ ಮಾಡಲು ಅನುಮತಿ ಸಿಕ್ಕಿದೆ.


    ಅನುಮತಿ ಸಿಕ್ಕಿದ ಕಾರಣ ಪೈಲಟ್‌ ರನ್‌ವೇಯಲ್ಲಿ ಟಚ್‌ಡೌನ್‌ ಆಗುತ್ತಿದ್ದಾಗ ಏರ್‌ ಇಂಡಿಯಾ ಜಸ್ಟ್‌ ಟೇಕಾಫ್‌ ಆಗಿತ್ತು. ಒಂದು ವೇಳೆ ಏರ್‌ ಇಂಡಿಯಾ ಟೇಕಾಫ್‌ ಕೆಲ ಸೆಕೆಂಡ್‌ ವಿಳಂಬವಾಗಿದ್ದರೆ ಹಿಂದಿನಿಂದ ಏರ್‌ ಇಂಡಿಯಾ ವಿಮಾನ ಡಿಕ್ಕಿ ಹೊಡೆಯುವ ಸಾಧ್ಯತೆ ಇತ್ತು.

    ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನಾಗರಿಕ ವಿಮಾನಯಾನ ನಿರ್ದೇಶನಾಲಯ ತನಿಖೆಗೆ ಆದೇಶಿಸಿದೆ. ಇಂಡಿಗೋ ವಿಮಾನಕ್ಕೆ ಲ್ಯಾಂಡಿಂಗ್‌ ಮಾಡಲು ಅನುಮತಿ ನೀಡಿದ್ದ ಎಟಿಸಿ ಸಿಬ್ಬಂದಿಯನ್ನು ತನಿಖೆ ಮುಗಿಯುವರೆಗೂ ಕೆಲಸದಿಂದ ತೆಗೆಯಲಾಗಿದೆ.

  • ಅನಾರೋಗ್ಯ ಕಾರಣ ನೀಡಿ ಸಿಬ್ಬಂದಿ ಸಾಮೂಹಿಕ ರಜೆ – ಏರ್ ಇಂಡಿಯಾದ 86 ವಿಮಾನ ಹಾರಾಟ ರದ್ದು

    ಅನಾರೋಗ್ಯ ಕಾರಣ ನೀಡಿ ಸಿಬ್ಬಂದಿ ಸಾಮೂಹಿಕ ರಜೆ – ಏರ್ ಇಂಡಿಯಾದ 86 ವಿಮಾನ ಹಾರಾಟ ರದ್ದು

    ನವದೆಹಲಿ: ಅನಾರೋಗ್ಯ ಕಾರಣ ನೀಡಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ (Air India Express)) ಸಿಬ್ಬಂದಿ ಸಾಮೂಹಿಕ ರಜೆ ಹಾಕಿರುವ ಪರಿಣಾಮ ಏರ್‌ ಇಂಡಿಯಾದ 86 ಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದುಗೊಂಡಿದೆ.

    ಸುಮಾರು 300 ಹಿರಿಯ ಕ್ಯಾಬಿನ್ ಸಿಬ್ಬಂದಿ ಕೊನೆಯ ಕ್ಷಣದಲ್ಲಿ ಅನಾರೋಗ್ಯದ ಕಾರಣ ನೀಡಿ ಕರ್ತವ್ಯಕ್ಕೆ ಗೈರಾಗಿದ್ದಾರೆ. ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಹೀಗಾಗಿ ಅಂತರರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳ ಕಾರ್ಯಾಚರಣೆ ರದ್ದುಗೊಳಿಸಲಾಗಿದೆ. ಇದನ್ನೂ ಓದಿ: ಕೋವಿಡ್‌ ಲಸಿಕೆಯನ್ನು ಜಾಗತಿಕವಾಗಿ ಹಿಂತೆಗೆದುಕೊಳ್ಳಲು ಮುಂದಾದ ಅಸ್ಟ್ರಾಜೆನೆಕಾ

    ಸಂಬಳದ ವಿಚಾರದಲ್ಲಿ ಅಸಮಾಧಾನ ಹೊಂದಿರುವ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿದ್ದಾರೆ. ಯಾವುದೇ ನೋಟಿಸ್‌ ನೀಡದೇ ಕೆಲಸಕ್ಕೆ ಗೈರಾಗಿದ್ದಾರೆ. ಅನಾರೋಗ್ಯ ಕಾರಣ ನೀಡಿ ಸಾಮೂಹಿಕವಾಗಿ ಸಿಬ್ಬಂದಿ ರಜೆ ಹಾಕಿದ್ದಾರೆ.

    ಈ ಅನಿರೀಕ್ಷಿತ ಅಡಚಣೆಗಾಗಿ ನಾವು ನಮ್ಮ ಅತಿಥಿಗಳಿಗೆ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇವೆ. ಈಗ ಎದುರಾಗಿರುವ ಪರಿಸ್ಥಿತಿಯು, ಇದುವರೆಗೆ ನಾವು ಒದಗಿಸಿರುವ ಸೇವೆಯ ಗುಣಮಟ್ಟವನ್ನು ಪ್ರತಿಬಿಂಬಿಸುವುದಿಲ್ಲ ಎಂದು ಪ್ರಯಾಣಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಾಜತಾಂತ್ರಿಕ ಬಿಕ್ಕಟ್ಟಿನ ನಡುವೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ನಾಳೆ ಭಾರತಕ್ಕೆ ಭೇಟಿ

    ರದ್ದತಿಯಿಂದ ತೊಂದರೆ ಅನುಭವಿಸುತ್ತಿರುವ ಪ್ರಯಾಣಿಕರಿಗೆ ಹಣ ಮರುಪಾವತಿ ಮಾಡಲಾಗುವುದು. ಪ್ರಯಾಣಕ್ಕೆ ದಿನಾಂಕವನ್ನು ಮರು ಹೊಂದಾಣಿಕೆ ಮಾಡಿಕೊಡಲಾಗುವುದು ಎಂದು ಏರ್‌ಲೈನ್ಸ್‌ ತಿಳಿಸಿದೆ.

  • ಏ.30 ರವರೆಗೆ  ಇಸ್ರೇಲ್‌ಗೆ ಏರ್ ಇಂಡಿಯಾ ಸೇವೆ ಸ್ಥಗಿತ

    ಏ.30 ರವರೆಗೆ ಇಸ್ರೇಲ್‌ಗೆ ಏರ್ ಇಂಡಿಯಾ ಸೇವೆ ಸ್ಥಗಿತ

    ನವದೆಹಲಿ: ಇಸ್ರೇಲ್ ಮತ್ತು ಇರಾನ್ (Israel and Iran) ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಿರುವುದರಿಂದ ಏಪ್ರಿಲ್ 30 ರವರೆಗೆ ಟೆಲ್ ಅವಿವ್‌ಗೆ (Tel Aviv) ಮತ್ತು ಅಲ್ಲಿಂದ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸಿದೆ.

    ಈ ಸಂಬಂಧ ಮಾಹಿತಿ ಹಂಚಿಕೊಂಡಿರುವ ಏರ್‌ ಇಂಡಿಯಾ (Air India), ಮಧ್ಯಪ್ರಾಚ್ಯದಲ್ಲಿನ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ನಮ್ಮ ವಿಮಾನಗಳನ್ನು 30 ಏಪ್ರಿಲ್ ರವರೆಗೆ ಸ್ಥಗಿತಗೊಳಿಸಲಾಗುವುದು. ನಾವು ನಿರಂತರವಾಗಿ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ. ಈ ಸಮಯದಲ್ಲಿ ಟೆಲ್ ಅವಿವ್‌ಗೆ ಮತ್ತು ಅಲ್ಲಿಂದ ಪ್ರಯಾಣಕ್ಕಾಗಿ ಬುಕಿಂಗ್‌ಗಳನ್ನು ದೃಢಪಡಿಸಿದ ನಮ್ಮ ಪ್ರಯಾಣಿಕರಿಗೆ ಬೆಂಬಲವನ್ನು ನೀಡುತ್ತಿದ್ದೇವೆ. ಏರ್ ಇಂಡಿಯಾದಲ್ಲಿ ನಮ್ಮ ಗ್ರಾಹಕರು ಮತ್ತು ಸಿಬ್ಬಂದಿಯ ಸುರಕ್ಷತೆಯು ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದೆ.

    ಕಳೆದ ಭಾನುವಾರವಷ್ಟೇ ಏರ್ ಇಂಡಿಯಾ ಅಧಿಕಾರಿಯೊಬ್ಬರು ದೆಹಲಿ ಮತ್ತು ಟೆಲ್ ಅವೀವ್ ನಡುವಿನ ನೇರ ವಿಮಾನಗಳನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ ಎಂದು ಹೇಳಿದ್ದರು. ಇದನ್ನೂ ಓದಿ: ಇರಾನ್, ಇಸ್ರೇಲ್‍ಗೆ ಪ್ರಯಾಣಿಸದಂತೆ ನಾಗರಿಕರಿಗೆ ಕೇಂದ್ರದ ಸಲಹೆ

    ಟಾಟಾ ಸಮೂಹ-ಮಾಲೀಕತ್ವದ ವಾಹಕವು ಸುಮಾರು ಐದು ತಿಂಗಳ ಅಂತರದ ನಂತರ ಮಾರ್ಚ್ 3 ರಂದು ಇಸ್ರೇಲಿ ರಾಜಧಾನಿಗೆ ಸೇವೆಗಳನ್ನು ಮರುಪ್ರಾರಂಭಿಸಿತು. ಇಸ್ರೇಲಿ ನಗರದ ಮೇಲೆ ಹಮಾಸ್ ದಾಳಿಯ ಹಿನ್ನೆಲೆಯಲ್ಲಿ 2023 ರ ಅಕ್ಟೋಬರ್ 7 ರಿಂದ ಏರ್ ಇಂಡಿಯಾ ಟೆಲ್ ಅವೀವ್‌ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಿತು.

  • ದಕ್ಷಿಣ ಭಾರತದ ಏವಿಯೇಷನ್‌ ಹಬ್‌ ಆಗುತ್ತಾ ಬೆಂಗ್ಳೂರು ಏರ್‌ಪೋರ್ಟ್‌?- ಏನಿದು ಏವಿಯೇಷನ್‌ ಹಬ್‌?

    ದಕ್ಷಿಣ ಭಾರತದ ಏವಿಯೇಷನ್‌ ಹಬ್‌ ಆಗುತ್ತಾ ಬೆಂಗ್ಳೂರು ಏರ್‌ಪೋರ್ಟ್‌?- ಏನಿದು ಏವಿಯೇಷನ್‌ ಹಬ್‌?

    – ಬೆಂಗಳೂರು ವಿಮಾನ ನಿಲ್ದಾಣವನ್ನು ಏರ್‌ ಇಂಡಿಯಾ ಹೇಗೆ ಪರಿವರ್ತಿಸುತ್ತೆ?

    ಬೆಂಗಳೂರು ವಿಮಾನ ನಿಲ್ದಾಣವನ್ನು ದಕ್ಷಿಣ ಭಾರತದ ಪ್ರಮುಖ ಏವಿಯೇಷನ್ ಹಬ್ (ವಾಯುಯಾನ ಕೇಂದ್ರ) ಆಗಿ ಅಭಿವೃದ್ಧಿಪಡಿಸುವುದಾಗಿ ಏರ್ ಇಂಡಿಯಾ ಘೋಷಿಸಿದೆ. ಈ ಸಂಬಂಧ ಏರ್ ಇಂಡಿಯಾ ಜೊತೆ ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರ ಒಪ್ಪಂದಕ್ಕೆ ಸಹಿ ಹಾಕಿದೆ. ಪ್ರಸ್ತುತ, ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇಂಡಿಗೋ ಮತ್ತು ಏರ್ ಇಂಡಿಯಾದಂತಹ ಪ್ರಮುಖ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ದೇಶದ ಅತಿದೊಡ್ಡ ಅಂತಾರಾಷ್ಟ್ರೀಯ ಕೇಂದ್ರವಾಗಿದೆ. ಆ ಸಾಲಿಗೆ ಬೆಂಗಳೂರು ಏರ್‌ಪೋರ್ಟ್ ಸೇರಿಸುವ ಪ್ರಯತ್ನ ನಡೆದಿದೆ.

    ಅಷ್ಟಕ್ಕೂ ಏನಿದು ಏವಿಯೇಷನ್ ಹಬ್? ಭಾರತದಲ್ಲಿ ಈಗ ಎಷ್ಟು ವಾಯುಯಾನ ಕೇಂದ್ರಗಳಿವೆ? ಏವಿಯೇಷನ್ ಹಬ್‌ನಿಂದ ಪ್ರಯೋಜನವೇನು ಎಂಬ ಪ್ರಶ್ನೆಗಳಿಗೆ ವಿವರ ಇಲ್ಲಿದೆ.

    ಏವಿಯೇಷನ್ ಹಬ್
    ಪ್ರಯಾಣಿಕರ ದಟ್ಟಣೆ ಮತ್ತು ವಿಮಾನ ಕಾರ್ಯಾಚರಣೆಗಳನ್ನು ಕೇಂದ್ರೀಕರಿಸಲು ಒಂದು ಅಥವಾ ಹೆಚ್ಚಿನ ವಿಮಾನಯಾನ ಸಂಸ್ಥೆಗಳು ಬಳಸುವ ವಿಮಾನ ನಿಲ್ದಾಣವೇ ಏವಿಯೇಷನ್ ಹಬ್. ಇದನ್ನ ಏರ್‌ಲೈನ್ ಹಬ್ ಅಥವಾ ಹಬ್ ವಿಮಾನ ನಿಲ್ದಾಣ ಅಂತಲೂ ಕರೆಯಲಾಗುತ್ತದೆ. ಪ್ರಯಾಣಿಕರು ತಾವು ಹೋಗಬಯಸುವ ವಿಶ್ವದ ವಿವಿಧ ನಗರಗಳಿಗೆ ನೇರ ಸಂಪರ್ಕ ಕಲ್ಪಿಸುವ ಕೇಂದ್ರಗಳಾಗಿ ಕಾರ್ಯನಿರ್ವಹಿಸುತ್ತವೆ. ಇದು ಹಬ್ ಮತ್ತು ಸ್ಪೋಕ್ ವ್ಯವಸ್ಥೆಯ ಭಾಗವಾಗಿದೆ. ಪ್ರಮುಖ ಅಂತಾರಾಷ್ಟ್ರೀಯ ನಗರಗಳ ನಡುವೆ ನೇರ ಸಂಪರ್ಕವನ್ನು ಒದಗಿಸುವ ಒಂದು ಅಥವಾ ಎರಡು ಪ್ರಮುಖ ವಿಮಾನಯಾನ ಸಂಸ್ಥೆಗಳೊಂದಿಗೆ ಈ ಹಬ್‌ಗಳನ್ನು ಗುರುತಿಸಲಾಗಿದೆ.

    ವಿಮಾನ ನಿಲ್ದಾಣದಲ್ಲಿ ದಕ್ಷ ಹಾಗೂ ಸುರಕ್ಷಿತ ಕಾರ್ಯಾಚರಣೆ ನಡೆಸುವುದು ಇದರ ಮುಖ್ಯ ಉದ್ದೇಶ. ಆಗ ಗ್ರಾಹಕರಿಗೆ ಉತ್ತಮ ಅನುಭವ ಸಿಗುತ್ತದೆ. ಈ ಉದ್ದೇಶದಿಂದ ಭಾರತದಲ್ಲಿ ವಾಯು ಸಂಪರ್ಕ ವಿಸ್ತರಿಸಲು ಏರ್ ಇಂಡಿಯಾ ಮುಂದಾಗಿದೆ.

    ವಿಮಾನಯಾನ ಸಂಶೋಧನಾ ಸಂಸ್ಥೆಯಾದ ಒಎಜಿ, ಲಂಡನ್ ಹೀಥ್ರೂವನ್ನು (2023 ಕ್ಕೆ) ವಿಶ್ವದ ಅತ್ಯಂತ ಹೆಚ್ಚು ಸಂಪರ್ಕಿತ ವಿಮಾನ ನಿಲ್ದಾಣವೆಂದು ಗುರುತಿಸಿದೆ. ಇದರ ಜೊತೆಗೆ ನ್ಯೂಯಾರ್ಕ್‌ನ ಜೆಎಫ್‌ಕೆ ವಿಮಾನ ನಿಲ್ದಾಣ, ನೆದರ್‌ಲ್ಯಾಂಡ್‌ನ ಆಮ್‌ಸ್ಟರ್‌ಡ್ಯಾಮ್ ವಿಮಾನ ನಿಲ್ದಾಣ, ಮಲೇಷ್ಯಾದ ಕೌಲಾಲಂಪುರ್ ವಿಮಾನ ನಿಲ್ದಾಣ ಮತ್ತು ಟೋಕಿಯೊದ ಹನೇಡಾ ವಿಮಾನ ನಿಲ್ದಾಣವನ್ನೂ ಗುರುತಿಸಲಾಗಿದೆ.

    ಹಬ್ ಅನ್ನು ಸ್ಥಾಪಿಸುವ ಪ್ರಮುಖ ಅಂಶವೆಂದರೆ, ಕನಿಷ್ಠ ಒಂದು ಏರ್‌ಲೈನ್‌ನ ಪ್ರಾಬಲ್ಯವನ್ನು ಹೊಂದಿರುವುದು. ಉದಾಹರಣೆಗೆ: ಹೀಥ್ರೂ ವಿಮಾನ ನಿಲ್ದಾಣದಲ್ಲಿ ಲಂಡನ್ ಹೀಥ್ರೂನಿಂದ ಕಾರ್ಯನಿರ್ವಹಿಸುವ ಒಟ್ಟು ವಿಮಾನಗಳ ಸಂಖ್ಯೆಯಲ್ಲಿ ಬ್ರಿಟಿಷ್ ಏರ್ವೇಸ್ 50% ಪಾಲನ್ನು ಹೊಂದಿದೆ. ಜೆಕೆಎಫ್ ವಿಮಾನ ನಿಲ್ದಾಣದಲ್ಲಿ ಡೆಲ್ಟಾ ಏರ್‌ಲೈನ್ 34% ಪಾಲನ್ನು ಹೊಂದಿದೆ. ಕೆಎಲ್‌ಎಂ-ರಾಯಲ್ ಏರ್‌ಲೈನ್, ಆಮ್‌ಸ್ಟರ್‌ಡ್ಯಾಮ್ ಶಿಪೋಲ್ ವಿಮಾನ ನಿಲ್ದಾಣದಲ್ಲಿ 53% ಪಾಲನ್ನು ಹೊಂದಿದೆ. ಕೌಲಾಲಂಪುರದಿಂದ ವಿಮಾನಗಳಲ್ಲಿ ಏರ್ ಏಷ್ಯಾ 34% ಪಾಲನ್ನು ಹೊಂದಿದೆ.

    ವಿಮಾನ ನಿಲ್ದಾಣ ಕೇಂದ್ರವು ಅಂತಾರಾಷ್ಟ್ರೀಯ-ಅಂತಾರಾಷ್ಟ್ರೀಯ ಅಥವಾ ಅಂತಾರಾಷ್ಟ್ರೀಯ-ದೇಶೀಯ ಸಂಪರ್ಕಕ್ಕೆ (2 ಮಾರ್ಗಗಳ ನಡುವೆ) ಕನಿಷ್ಠ ಸಾರಿಗೆ ಸಮಯ ಒದಗಿಸಬೇಕು. ಪ್ರತಿ ವರ್ಷ 90% ಪ್ರಯಾಣಿಕರ ಸಾಮರ್ಥ್ಯವನ್ನು ಹೊಂದಿರುವ ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು 50 ಗೇಟ್‌ಗಳನ್ನು ಹೊಂದಿರುವ ಮೂರು ಪ್ರಮುಖ ಟರ್ಮಿನಲ್‌ಗಳನ್ನು ಹೊಂದಿದೆ. ಪ್ರತಿಯೊಂದು ಟರ್ಮಿನಲ್‌ಗಳ ನಡುವೆ 30 ನಿಮಿಷಗಳ ವರೆಗೆ ಟ್ರಾನ್ಸ್‌ಫರ್‌ ಸಮಯವನ್ನು ಸುಗಮಗೊಳಿಸುತ್ತದೆ.

    ದಕ್ಷಿಣ ಭಾರತದಲ್ಲಿ ಏವಿಯೇಷನ್ ಹಬ್ ಯಾಕೆ?
    ದಕ್ಷಿಣ ಭಾರತದಿಂದ ನೇರ ದೀರ್ಘ ಪ್ರಯಾಣದ ಮಾರ್ಗಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಮುಂದಿನ ದಿನಗಳಲ್ಲಿ ಇದನ್ನು ಪೂರೈಸಲು ಏರ್ ಇಂಡಿಯಾ ಉದ್ದೇಶಿಸಿದೆ. ಈ ಪಾಲುದಾರಿಕೆಯು ಎಂಆರ್‌ಓ ಪರಿಸರ ವ್ಯವಸ್ಥೆಯನ್ನು ಉತ್ತೇಜಿಸಲಿದೆ. ಜೊತೆಗೆ ಹೊಸ ಉದ್ಯೋಗಾವಕಾಶಗಳನ್ನೂ ಸೃಷ್ಟಿಸುತ್ತದೆ.

    ಬೆಂಗಳೂರು ಏರ್‌ಪೋರ್ಟ್‌ಗೆ ಒಲಿದ ಅವಕಾಶ!
    ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಪ್ರಯಾಣಿಕರು ಪ್ರಯಾಣಿಸುವ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಹೊಂದಿದೆ. ಈ ಒಪ್ಪಂದದೊಂದಿಗೆ ವಿಶ್ವದ ದೊಡ್ಡ ದೊಡ್ಡ ನಗರಗಳಿಗೆ ನೇರ ವಿಮಾನ ಸಂಪರ್ಕ ಸಾಧ್ಯವಾಗುತ್ತದೆ. ಅಷ್ಟೇ ಅಲ್ಲದೇ, ಪ್ರಯಾಣಿಕರಿಗೆ ಉತ್ತಮ ಪ್ರಯಾಣದ ಅನುಭವ ಕೂಡ ದೊರೆಯಲಿದೆ.

    1,200 ಹೊಸ ಉದ್ಯೋಗ ಸೃಷ್ಟಿ
    ಈ ಕಾರಣದಿಂದಾಗಿ ಏರ್ ಇಂಡಿಯಾವು ಕರ್ನಾಟಕ ಸರ್ಕಾರದೊಂದಿಗೆ ಸಹಿ ಹಾಕಿದೆ. ವಿಮಾನ ನಿಲ್ದಾಣದಲ್ಲಿ ನಿರ್ವಹಣೆ, ದುರಸ್ತಿ ಮತ್ತು ಉತ್ತಮ ಸೌಲಭ್ಯ ಒದಗಿಸುವ ಕೆಲಸ ಮಾಡಲಿದೆ. ಈ ಒಪ್ಪಂದದಿಂದಾಗಿ ರಾಜ್ಯದಲ್ಲಿ ಹೆಚ್ಚು ನುರಿತ ವ್ಯಕ್ತಿಗಳಿಗೆ 1,200 ಹೊಸ ಉದ್ಯೋಗಾವಕಾಶಗಳನ್ನೂ ಒದಗಿಸಲು ಸಾಧ್ಯವಾಗಲಿದೆ. 2023 ರಲ್ಲಿ ಬೆಂಗಳೂರು ವಿಮಾನ ನಿಲ್ದಾಣವು 3.72 ಕೋಟಿ ಪ್ರಯಾಣಿಕರನ್ನು ಹೊಂದಿತ್ತು.

    ಭಾರತದಲ್ಲಿ ಹಬ್‌
    ಭಾರತದ ಮೂಲಕ ವಿದೇಶಗಳ ವಿವಿಧ ಪ್ರಮುಖ ನಗರಗಳಿಗೆ ನೇರ ಸಂಪರ್ಕ ಸಾಧಿಸಲು ಕೇಂದ್ರ ಸರ್ಕಾರವು ದೇಶದಲ್ಲಿ ಏವಿಯೇಷನ್ ಹಬ್‌ಗಳನ್ನು ಅಭಿವೃದ್ಧಿಪಡಿಸಲು ಕ್ರಮಕೈಗೊಂಡಿದೆ. ಭಾರತದ ಅತಿ ದೊಡ್ಡ ಮತ್ತು ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿರುವ ದೆಹಲಿಯಲ್ಲಿ ಈ ಯೋಜನೆ ಜಾರಿಯಲ್ಲಿದೆ. 2022-23 (ಏಪ್ರಿಲ್-ಮಾರ್ಚ್) 4,29,964 ವಿಮಾನಗಳ ಕಾರ್ಯಾಚರಣೆ ಮತ್ತು 6.52 ಕೋಟಿ ಪ್ರಯಾಣಿಕರ ದಟ್ಟಣೆಯನ್ನು ನಿರ್ವಹಿಸಿದೆ.

    ಕೇಂದ್ರದ ರಾಷ್ಟ್ರೀಯ ವಿಮಾನಯಾನ ಹಬ್ ನೀತಿಯ ಪ್ರಕಾರ, ದುಬೈ ಮತ್ತು ದೋಹಾ ವಿಮಾನ ನಿಲ್ದಾಣಗಳಿಗೆ ಅನುಗುಣವಾಗಿ ದೆಹಲಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಕೇಂದ್ರವಾಗಿಸಲು ಸರ್ಕಾರವು ಸಮಿತಿಯನ್ನು ರಚಿಸಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳ ನಡುವೆ ತಡೆರಹಿತ ಸಂಪರ್ಕ ಸಾಧಿಸಲು, ಭದ್ರತಾ ತಪಾಸಣೆ ಹಾಗೂ ವಲಸೆಯ ಅಡಚಣೆಯಂತಹ ಸವಾಲುಗಳಿಗೆ ಈ ನೀತಿಯು ಪರಿಹಾರವಾಗಿದೆ.

  • ಇಸ್ರೆಲ್, ಇರಾನ್ ಉದ್ವಿಗ್ನತೆ – ಟೆಲ್ ಅವೀವ್‍ಗೆ ಏರ್ ಇಂಡಿಯಾ ಹಾರಾಟ ಸ್ಥಗಿತ

    ಇಸ್ರೆಲ್, ಇರಾನ್ ಉದ್ವಿಗ್ನತೆ – ಟೆಲ್ ಅವೀವ್‍ಗೆ ಏರ್ ಇಂಡಿಯಾ ಹಾರಾಟ ಸ್ಥಗಿತ

    ನವದೆಹಲಿ: ಇಸ್ರೇಲ್ (Israel) ಮತ್ತು ಇರಾನ್ (Iran) ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟೆಲ್ ಅವೀವ್‍ಗೆ (Tel Aviv) ವಿಮಾನಗಳ ಹಾರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಏರ್ ಇಂಡಿಯಾ (Air India) ನಿರ್ಧರಿಸಿದೆ.

    ದೆಹಲಿ ಮತ್ತು ಟೆಲ್ ಅವೀವ್ ನಡುವಿನ ನೇರ ವಿಮಾನ ಸಂಚಾರವನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ರಾಯಭಾರಿ ಕಚೇರಿ ಮಾರ್ಗಸೂಚಿ ಬಿಡುಗಡೆ

    ಏರ್ ಇಂಡಿಯಾ ವಿಮಾನವು ದೆಹಲಿಯಿಂದ (Delhi) ಇಸ್ರೇಲ್‍ಗೆ ವಾರದಲ್ಲಿ ನಾಲ್ಕು ದಿನಗಳು ಹಾರಾಟ ನಡೆಸುತ್ತಿತ್ತು. ಇದೀಗ ತಾತ್ಕಾಲಿಕವಾಗಿ ಆ ಹಾರಾಟವನ್ನು ಸ್ಥಗಿತಗೊಳಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

    ಟಾಟಾ ಸಮೂಹದ ಮಾಲೀಕತ್ವದ ಏರ್ ಇಂಡಿಯಾ, ಸುಮಾರು ಐದು ತಿಂಗಳ ಅಂತರದ ನಂತರ ಮಾರ್ಚ್ 3 ರಿಂದು ಟೆಲ್ ಅವಿವ್‍ಗೆ ಸೇವೆಗಳನ್ನು ಮರುಪ್ರಾರಂಭಿಸಿತ್ತು. ಇಸ್ರೇಲಿ ನಗರದ ಮೇಲೆ ಹಮಾಸ್ ದಾಳಿಯ ಹಿನ್ನೆಲೆಯಲ್ಲಿ ಏರ್ ಇಂಡಿಯಾ 2023ರ ಅಕ್ಟೋಬರ್ 7 ರಿಂದ ಟೆಲ್ ಅವೀವ್‍ಗೆ ಮತ್ತು ಅಲ್ಲಿಂದ ಹೊರಡುವ ವಿಮಾನಗಳನ್ನು ಸ್ಥಗಿತಗೊಳಿಸಿತ್ತು. ಇದನ್ನೂ ಓದಿ: ಇರಾನ್‌ ವೈಮಾನಿಕ ದಾಳಿ; ಇಸ್ರೇಲ್‌ನ ಶಾಲಾ-ಕಾಲೇಜುಗಳು ಬಂದ್‌

  • ದಕ್ಷಿಣ ಭಾರತದ ‘ಪ್ರೀಮಿಯರ್ ಏವಿಯೇಷನ್ ಹಬ್’ ಆಗಿ ಬೆಂಗಳೂರು ಅಭಿವೃದ್ಧಿಪಡಿಸಲು ಏರ್ ಇಂಡಿಯಾದೊಂದಿಗೆ BIAL ಒಪ್ಪಂದ

    ದಕ್ಷಿಣ ಭಾರತದ ‘ಪ್ರೀಮಿಯರ್ ಏವಿಯೇಷನ್ ಹಬ್’ ಆಗಿ ಬೆಂಗಳೂರು ಅಭಿವೃದ್ಧಿಪಡಿಸಲು ಏರ್ ಇಂಡಿಯಾದೊಂದಿಗೆ BIAL ಒಪ್ಪಂದ

    ಬೆಂಗಳೂರು/ಚಿಕ್ಕಬಳ್ಳಾಪುರ: ಭಾರತದ ಪ್ರಮುಖ ಜಾಗತಿಕ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾ ಮತ್ತು ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್ ಲಿಮಿಟೆಡ್ (BIAL) ದಕ್ಷಿಣ ಭಾರತದ ಪ್ರಮುಖ ವಾಯುಯಾನ ಕೇಂದ್ರವಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಮಹತ್ವದ ಒಪ್ಪಂದ ಮಾಡಿಕೊಂಡಿವೆ.

    ಈ ಮೂಲಕ ಭಾರತದಲ್ಲಿ ಮುಂದಿನ ಕೆಲವು ವರ್ಷಗಳಲ್ಲಿ ವಿಮಾನಯಾನ ಸಂಪರ್ಕವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದು, ಈ ಒಪ್ಪಂದವು ಭಾರತೀಯ ವಾಯುಯಾನ ಉದ್ಯಮದಲ್ಲಿ ಮಹತ್ವದ ಮೈಲಿಗಲ್ಲಾಗಿದೆ. ಏರ್ ಇಂಡಿಯಾ (ಇತರ ಟಾಟಾ ಗ್ರೂಪ್ ಏರ್‌ಲೈನ್ಸ್ – AIX ಮತ್ತು ವಿಸ್ತಾರಾ ಜೊತೆಗೆ) ಮತ್ತು BIAL ಮುಂದಿನ ಐದು ವರ್ಷಗಳಲ್ಲಿ ಅಂತಾರಾಷ್ಟ್ರೀಯ ಸಂಪರ್ಕ, ಕಾರ್ಯಾಚರಣೆಯ ದಕ್ಷತೆ ಮತ್ತು ಪ್ರಯಾಣಿಕರ ಅನುಭವವನ್ನು ಹೆಚ್ಚಿಸುವ ಗುರಿ ಹೊಂದಿದೆ. ಇದನ್ನೂ ಓದಿ: ‘ಕೆಂಪೇಗೌಡ’ ಚಿತ್ರದ ಬಜೆಟ್ 60 ಕೋಟಿ ರೂಪಾಯಿ: ಫಿಕ್ಸ್ ಆಗಿದ್ದಾರೆ ಹೀರೋ

    ಇದು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIAB ಅಥವಾ BLR ವಿಮಾನ ನಿಲ್ದಾಣ) ವರ್ಧಿತ ನೆಟ್‌ವರ್ಕ್ ಮೂಲಕ ಟಾಟಾ ಗ್ರೂಪ್ ಏರ್‌ಲೈನ್ಸ್, ಏರ್ ಇಂಡಿಯಾ ಮತ್ತು ವಿಸ್ತಾರಾ ಪ್ರೀಮಿಯಂ ಹಾಗೂ ಪ್ರಯಾಣಿಕರಿಗೆ ಮೀಸಲಾದ ದೇಶೀಯ ವಿಶ್ರಾಂತಿ ಕೋಣೆ ನಿರ್ಮಿಸುವುದು ಸೇರಿದಂತೆ ಇತರೆ ಸೌಕರ್ಯಗಳನ್ನು ಒಳಗೊಂಡಿದೆ.

    ಈ ಒಪ್ಪಂದದ ಭಾಗವಾಗಿ, BLR ವಿಮಾನ ನಿಲ್ದಾಣದಲ್ಲಿ ಸಮಗ್ರ ನಿರ್ವಹಣೆ, ದುರಸ್ತಿ ಮತ್ತು ಕೂಲಂಕಷ (MRO) ಸೌಲಭ್ಯಗಳನ್ನು ಸ್ಥಾಪಿಸಲು ಏರ್ ಇಂಡಿಯಾ ಕರ್ನಾಟಕ ಸರ್ಕಾರದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ (MOU) ಸಹಿ ಹಾಕಿದೆ. ಇದು ಬೆಂಗಳೂರಿನಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಏರ್ ಇಂಡಿಯಾದ ಬದ್ಧತೆಯನ್ನು ಒತ್ತಿ ಹೇಳುತ್ತದೆ. ಅಷ್ಟೇ ಅಲ್ಲದೇ, ಮುಂದಿನ ದಿನಗಳಲ್ಲಿ ದಕ್ಷಿಣ ಭಾರತದಿಂದ ನೇರ ದೀರ್ಘ-ಪ್ರಯಾಣದ ಮಾರ್ಗಗಳಿಗೆ ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತನ್ನ ಜಾಗತಿಕ ಹೆಜ್ಜೆ ಗುರುತನ್ನು ವಿಸ್ತರಿಸುತ್ತಿದೆ. ಈ ಪಾಲುದಾರಿಕೆಯು MRO ಪರಿಸರ ವ್ಯವಸ್ಥೆಯನ್ನು ಉತ್ತೇಜಿಸುತ್ತದೆ. ಜೊತೆಗೆ ರಾಜ್ಯದಲ್ಲಿ ಹೆಚ್ಚು ನುರಿತ ವ್ಯಕ್ತಿಗಳಿಗೆ 1,200 ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಯೋಜಿಸಲಾಗಿದೆ. ಇದನ್ನೂ ಓದಿ: ಕಾರಿಗೆ ಡಿಕ್ಕಿ ಹೊಡೆದು ಬಿದ್ದವನ ಮೇಲೆ ಬಸ್ ಹರಿದಿದೆ: ಶೋಭಾ ಕರಂದ್ಲಾಜೆ

    ಏರ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್, ಬೆಂಗಳೂರು ವಾಯು ಸಂಪರ್ಕ ಕೇಂದ್ರದ ಹಬ್‌ ಆಗಿದ್ದು, ವಿಮಾನಯಾನ ಹಾಗೂ ವಿಮಾನ ನಿಲ್ದಾಣದಲ್ಲಿನ ದಕ್ಷ ಕಾರ್ಯಾಚರಣೆಯಿಂದ ಗ್ರಾಹಕರು ಉತ್ತಮ ಅನುಭವ ಪಡೆಯುತ್ತಿದ್ದಾರೆ. ವಿಮಾನ ನಿಲ್ದಾಣದ ಅನುಭೂತಿಯನ್ನು ಇನ್ನಷ್ಟು ಹೆಚ್ಚಿಸಲು ಹಾಗೂ ವಾಯು ಸಂಪರ್ಕವನ್ನು ವಿಸ್ತರಿಸಲು ಮುಂದಾಗಿದ್ದೇವೆ. ಇದಕ್ಕಾಗಿ ಪ್ರಮುಖ MRO ಕೇಂದ್ರವನ್ನು ನಿರ್ಮಿಸುವ ದೃಷ್ಟಿಯಿಂದ BIAL ನೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಈ ಪಾಲುದಾರಿಕೆಯು ಏರ್ ಇಂಡಿಯಾ ಬೆಳವಣಿಗೆಯಲ್ಲಿ ಮಹತ್ವದ ಮೈಲಿಗಲ್ಲಾಗಲಿದೆ ಎಂದರು.

    ಬೆಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮರಾರ್ ಮಾತನಾಡಿ, ದಕ್ಷಿಣ ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವಾಗಿ BLR ವಿಮಾನ ನಿಲ್ದಾಣವು ದಕ್ಷಿಣ ಮತ್ತು ಮಧ್ಯ ಭಾರತದಲ್ಲಿ ಪ್ರಾಥಮಿಕ ಅಂತಾರಾಷ್ಟ್ರೀಯ ಗೇಟ್‌ವೇ ಆಗಿ ತನ್ನ ಸ್ಥಾನವನ್ನು ಬಲಪಡಿಸಿಕೊಂಡಿದೆ. ಈ ಸಹಯೋಗದ ಮೂಲಕ ಭಾರತೀಯ ವಾಯುಮಾರ್ಗಗಳ ಹಬ್‌ ಆಗಿ ಅಭಿವೃದ್ಧಿಪಡಿಸುವ ನಾಗರಿಕ ವಿಮಾನಯಾನ ಸಚಿವಾಲಯದ ದೃಷ್ಟಿಕೋನದಲ್ಲಿ ಹೊಂದಿಕೆಯಾಗಲಿದೆ. ಇದರಿಂದ ನಮ್ಮ ಪ್ರಯಾಣಿಕರ ಪ್ರಯಾಣದ ಅನುಭವವನ್ನು ಇನ್ನಷ್ಟು ಹೆಚ್ಚಿಸುವ ನಮ್ಮ ಬದ್ಧತೆಗೆ ಸಾಕ್ಷಿಯಾಗಿದೆ. ಬೆಂಗಳೂರಿನಿಂದ ಹೊರಹೋಗುವ ಅರ್ಧದಷ್ಟು ಅಂತಾರಾಷ್ಟ್ರೀಯ ಪ್ರಯಾಣಿಕರು ಮತ್ತು ನಮ್ಮ ಕ್ಯಾಚ್‌ಮೆಂಟ್ ಹೆಡ್‌ ಟು ಯೂರೋಪ್, ಉತ್ತರ ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಪೂರ್ವಕ್ಕೆ ಹೋಗಬಹುದು, ಏರ್ ಇಂಡಿಯಾದೊಂದಿಗಿನ ನಮ್ಮ ಮೈತ್ರಿಯು ಈ ಗುರಿಯತ್ತ ಗಣನೀಯ ಏರಿಕೆಯನ್ನು ಸಾಧಿಸಲಿದೆ. ಮುಂದಿನ ಐದು ವರ್ಷಗಳಲ್ಲಿ BLR ವಿಮಾನ ನಿಲ್ದಾಣದಿಂದ ದೀರ್ಘ-ಪ್ರಯಾಣದ ಮಾರ್ಗಗಳ ಗಮನಾರ್ಹ ಪಾಲನ್ನು ಹೊಂದುವ ಗುರಿಯನ್ನು ಹೊಂದಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಚುನಾವಣೆಗಾಗಿ ಇಲ್ಲಿಗೆ ಬಂದಿದ್ದೀರಿ, ಇಲ್ದಿದ್ರೆ ನಿವೆಲ್ಲಿ ಬರ್ತಿದ್ರಿ- ಯತೀಂದ್ರಗೆ ರೈತರಿಂದ ತರಾಟೆ

  • ಏರ್‌ ಇಂಡಿಯಾಗೆ 80 ಲಕ್ಷ ದಂಡ ವಿಧಿಸಿದ ಡಿಜಿಸಿಎ

    ಏರ್‌ ಇಂಡಿಯಾಗೆ 80 ಲಕ್ಷ ದಂಡ ವಿಧಿಸಿದ ಡಿಜಿಸಿಎ

    ನವದೆಹಲಿ: ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯವು (DGCA) ಏರ್ ಇಂಡಿಯಾಗೆ (Air India) 80 ಲಕ್ಷ ರೂ. ದಂಡ ವಿಧಿಸಿದೆ. ವಿಮಾನದ ಕರ್ತವ್ಯದ ಸಮಯದ ಮಿತಿಗಳು ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ದಂಡ ಹಾಕಿದೆ.

    ವಿಮಾನದ ಕರ್ತವ್ಯ ಸಮಯದ ಮಿತಿಗಳು (ಎಫ್‌ಡಿಟಿಎಲ್) ಮತ್ತು ವಿಮಾನ ಸಿಬ್ಬಂದಿಯ ಆಯಾಸ ನಿರ್ವಹಣಾ ವ್ಯವಸ್ಥೆ (ಎಫ್‌ಎಂಎಸ್)ಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಲಾಗಿದೆ ಎಂದು ವಿಮಾನಯಾನ ನಿಯಂತ್ರಕ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: 6 ಬಾರಿ ಸಂಸದರಾಗಿ ಆಯ್ಕೆಯಾಗಿರುವ ಭರ್ತೃಹರಿ ಮಹತಾಬ್‌ ರಾಜೀನಾಮೆ

    ಡಿಜಿಸಿಎ ಈ ವರ್ಷದ ಜನವರಿ ತಿಂಗಳಲ್ಲಿ ಏರ್ ಇಂಡಿಯಾ ಲಿಮಿಟೆಡ್‌ನ ಸ್ಪಾಟ್ ಆಡಿಟ್ ಅನ್ನು ನಡೆಸಿತ್ತು. ಡಿಜಿಸಿಎ ಆಡಿಟ್ ಸಮಯದಲ್ಲಿ ಸಾಕ್ಷ್ಯವನ್ನು ಸಂಗ್ರಹಿಸಿತ್ತು. ವಾಯುಯಾನದಲ್ಲಿ ಉನ್ನತ ಮಟ್ಟದ ಸುರಕ್ಷತೆಯನ್ನು ಖಾತ್ರಿಪಡಿಸುವ ಪೂರ್ವಭಾವಿ ಹೆಜ್ಜೆಯಾಗಿ, ಎಫ್‌ಡಿಟಿಎಲ್ ಮತ್ತು ಎಫ್‌ಎಂಎಸ್ ನಿಯಮಗಳಿಗೆ ಸಂಬಂಧಿಸಿದಂತೆ ಆಪರೇಟರ್‌ನ ನಿಯಂತ್ರಕ ಅನುಸರಣೆಯನ್ನು ಪರಿಶೀಲಿಸಿತ್ತು. ನಿಯಮ ಉಲ್ಲಂಘಿಸಿರುವುದು ಸ್ಪಾಟ್‌ ಆಡಿಟ್‌ನಿಂದ ತಿಳಿದುಬಂದಿದೆ.

    ವರದಿಗಳ ವಿಶ್ಲೇಷಣೆಯು, M/s ಏರ್ ಇಂಡಿಯಾ ಲಿಮಿಟೆಡ್ 60 ವರ್ಷಕ್ಕಿಂತ ಮೇಲ್ಪಟ್ಟ ಎರಡೂ ವಿಮಾನ ಸಿಬ್ಬಂದಿಯೊಂದಿಗೆ ಕೆಲವು ನಿದರ್ಶನಗಳಲ್ಲಿ ಒಟ್ಟಿಗೆ ಹಾರಾಟ ನಡೆಸುತ್ತಿದೆ ಎಂದು ಬಹಿರಂಗಪಡಿಸಿತು. ಇದು ನಿಯಮ 28 A ನ ಉಪ ನಿಯಮ (2) ರ ಉಲ್ಲಂಘನೆಯಾಗಿದೆ ಎಂದು ಡಿಜಿಸಿಎ ತಿಳಿಸಿದೆ. ಇದನ್ನೂ ಓದಿ: ಪತಿಯ ಬಂಧನದ ಬೆನ್ನಲ್ಲೇ ಮೋದಿ ವಿರುದ್ಧ ಸಿಡಿದೆದ್ದ ಕೇಜ್ರಿವಾಲ್‌ ಪತ್ನಿ

    ಭಾರತದಲ್ಲಿ ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸುರಕ್ಷತೆಯನ್ನು ನಿರ್ವಹಿಸಲು DGCA ಬದ್ಧವಾಗಿದೆ. ಈ ಜಾರಿ ಕ್ರಮವು ಅದರ ಬದ್ಧತೆಗೆ ಅನುಗುಣವಾಗಿದೆ ಎಂದು ಹೇಳಿದೆ.

  • ಆಸನಗಳು ಬಹುತೇಕ ಭರ್ತಿ – ಬೆಂಗಳೂರು ಟು ಅಯೋಧ್ಯೆ ವಿಮಾನ ಪ್ರಯಾಣಕ್ಕೆ ಭರ್ಜರಿ ಸ್ಪಂದನೆ

    ಆಸನಗಳು ಬಹುತೇಕ ಭರ್ತಿ – ಬೆಂಗಳೂರು ಟು ಅಯೋಧ್ಯೆ ವಿಮಾನ ಪ್ರಯಾಣಕ್ಕೆ ಭರ್ಜರಿ ಸ್ಪಂದನೆ

    ಬೆಂಗಳೂರು: ರಾಮ ಮಂದಿರ (Ram Mandir) ಲೋಕಾರ್ಪಣೆಯಾದ ಬಳಿಕ ಬೆಂಗಳೂರು (Bengaluru) ಮತ್ತು ಅಯೋಧ್ಯೆ (Ayodhya) ನಡುವಿನ ವಿಮಾನ ಪ್ರಯಾಣದ (Flight Travel) ಬೇಡಿಕೆ ಹೆಚ್ಚಾಗುತ್ತಿದೆ.

    ಕಳೆದ ನಾಲ್ಕು ವಾರಗಳಿಂದ ಎರಡು ನಗರಗಳ ನಡುವೆ ಸಂಚರಿಸುವ ವಿಮಾನದಲ್ಲಿ ಆಸನಗಳು ಬಹುತೇಕ ಭರ್ತಿಯಾಗುತ್ತಿದ್ದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿಯ ಟೆಂಪಲ್‌ ಟೂರಿಸಂಗೆ (Temple Tourism) ಭರ್ಜರಿ ಸ್ಪಂದನೆ ಸಿಕ್ಕಿದೆ.

    ಏರ್ ಇಂಡಿಯಾ ಎಕ್ಸ್‌ಪ್ರೆಸ್ ಮತ್ತು ಸ್ಪೈಸ್‌ಜೆಟ್ ಈ ಮಾರ್ಗದಲ್ಲಿ ಪ್ರತಿದಿನ ವಿಮಾನ ಸೇವೆ ನೀಡುತ್ತಿವೆ. ಕಡಿಮೆ ಸೀಟ್ ಬುಕ್‌ ಆಗಿದೆ ಎಂಬ ಕಾರಣ ನೀಡಿ ಇಲ್ಲಿಯವರೆಗೆ ಒಂದು ದಿನವೂ ವಿಮಾನದ ಸೇವೆಯನ್ನು ರದ್ದು ಮಾಡಿಲ್ಲ ಎಂದು ಈ ಕಂಪನಿಗಳು ಮಾಧ್ಯಮಕ್ಕೆ ತಿಳಿಸಿವೆ.

    ಜನವರಿ 22ರ ಹಿಂದಿನ ಬೇಡಿಕೆಗೆ ಹೋಲಿಸಿದರೆ ಅಯೋಧ್ಯೆಗೆ ಬುಕ್ಕಿಂಗ್‌ ಮಾಡುವವರ ಪ್ರಮಾಣ 100% ಏರಿಕೆಯಾಗಿದೆ. ಏಕಮುಖ ಸಂಚಾರಕ್ಕೆ 7,000 ರಿಂದ 11,000 ರೂಪಾಯಿಗಳ ನಡುವೆ ದರವಿದ್ದರೂ ಭಾರೀ ಬೇಡಿಕೆ ವ್ಯಕ್ತವಾಗುತ್ತಿದೆ ಎಂದು ಉದ್ಯಮದ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 100 ಸ್ಥಾನವನ್ನೂ ಗೆಲ್ಲಲ್ಲ: ಖರ್ಗೆ ಭವಿಷ್ಯ

    ತೀರ್ಥಯಾತ್ರೆಗಳು ಮತ್ತು ಧಾರ್ಮಿಕ ಪ್ರವಾಸಗಳಲ್ಲಿ ಆಸಕ್ತಿ ಹೊಂದಿರುವ ಪ್ರಯಾಣಿಕರಿಂದ ಉತ್ತಮ ಬೇಡಿಕೆ ವ್ಯಕ್ತವಾಗುತ್ತಿದೆ. ಇದು ಸ್ಥಿರವಾದ ಬೆಳವಣಿಗೆಯನ್ನು ಸೂಚಿಸುತ್ತದೆ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಕ್ತಾರರು ತಿಳಿಸಿದ್ದಾರೆ. ಜನವರಿ 17 ರಿಂದ ಏರ್‌ ಇಂಡಿಯಾ ಸೇವೆ ಆರಂಭವಾಗಿದ್ದು ಇಲ್ಲಿಯವರೆಗೆ ಕಡಿಮೆ ಪ್ರಯಾಣಿಕರ ಕೊರತೆಯನ್ನು ಅನುಭವಿಸಿಲ್ಲ.

    ನೇರ ವಿಮಾನಗಳ ಜೊತೆಗೆ ಗ್ರಾಹಕರು ಲಕ್ನೋದವರೆಗೆ ವಿಮಾನದಲ್ಲಿ ತೆರಳಿ ನಂತರ ಅಯೋಧ್ಯೆಗೆ ರಸ್ತೆಯ ಮೂಲಕ ತೆರಳುತ್ತಿದ್ದಾರೆ. ಗಮನಿಸಲೇಬೇಕಾದ ಸಂಗತಿಯೆನೆಂದರೆ ಈ ಬೇಡಿಕೆ ಹಿರಿಯರ ವಿಭಾಗಕ್ಕೆ ಮಾತ್ರ ಸೀಮಿತವಾಗಿಲ್ಲ. ಯುವ ಜನತೆಯೂ ಅಯೋಧ್ಯೆ ವಿಮಾನ ಹತ್ತುತ್ತಿದ್ದಾರೆಂದು ಥಾಮಸ್‌ ಕುಕ್‌ ಭಾರತದ ಮುಖ್ಯಸ್ಥ ರಾಜೀವ್ ಕಾಳೆ ಹೇಳಿದ್ದಾರೆ. ಇದನ್ನೂ ಓದಿ: ಶಾಲೆಯಲ್ಲಿ ಧರ್ಮ ಅವಹೇಳನ ಆರೋಪ- ಮೀಡಿಯಾಗೆ ಹೇಳಿಕೆ ಕೊಟ್ಟ ಶಿಕ್ಷಕಿ ವಜಾ, ವಿದೇಶದಿಂದ ಬೆದರಿಕೆ

    ಬೆಂಗಳೂರು ಮಾತ್ರವಲ್ಲದೇ ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಮತ್ತು ಬೆಳಗಾವಿಯಂತಹ ಇತರ ನಗರಗಳಲ್ಲಿ ಸಹ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಾಮನ ಜೀವನಕ್ಕೆ ಸಂಬಂಧಿಸಿದ ಸ್ಥಳಗಳಾದ ಹಂಪಿ, ರಾಮೇಶ್ವರಂ ಮತ್ತು ಮಧುರೈ ಸೇರಿದಂತೆ ಹಲವು ಧಾರ್ಮಿಕ ಕ್ಷೇತ್ರಗಳಿಗೆ ತೆರಳುವ ಪ್ರಯಾಣಿಕರ ಸಂಖ್ಯೆ ಈಗ ಹೆಚ್ಚಾಗುತ್ತಿದೆ.

     

  • ಬೆಂಗಳೂರು-ಅಯೋಧ್ಯೆ ಏರ್ ಇಂಡಿಯಾ ವಿಮಾನದಲ್ಲಿ ರಾಮಜಪ, ಭಜನೆ

    ಬೆಂಗಳೂರು-ಅಯೋಧ್ಯೆ ಏರ್ ಇಂಡಿಯಾ ವಿಮಾನದಲ್ಲಿ ರಾಮಜಪ, ಭಜನೆ

    – ಬೋರ್ಡಿಂಗ್ ಗೇಟಲ್ಲಿ ಜೈಶ್ರೀರಾಮ್ ಘೋಷಣೆ

    ಬೆಂಗಳೂರು: ದೇಶದೆಲ್ಲೆಡೆ ಅಯೋಧ್ಯೆ ರಾಮಮಂದಿರದಲ್ಲಿನ (Ayodhya Ram Mandir) ಪ್ರಾಣ ಪ್ರತಿಷ್ಠೆ ಸಮಾರಂಭದ ಸಂಭ್ರಮ ಮನೆ ಮಾಡಿದೆ. ಎಲ್ಲೆಲ್ಲೂ ಶ್ರೀರಾಮ ಜಪ, ಭಜನೆ (Ram Bhajan) ಮೊಳಗುತ್ತಿದೆ. ದೇಶದ ಕೋಟ್ಯಂತರ ಭಾರತೀಯ ಶ್ರೀರಾಮನ ಸ್ಮರಿಸುತ್ತಿದ್ದಾರೆ.

    ಇದಕ್ಕೆ ಸಾಕ್ಷಿ ಎಂಬಂತೆ, ಬೆಂಗಳೂರಿನಿಂದ ಅಯೋಧ್ಯೆಗೆ (Bengaluru-Ayodhya Flight) ಹೊರಟಿದ್ದ ಭಕ್ತರ ತಂಡವೊಂದು ವಿಮಾನದಲ್ಲಿ ರಾಮಜಪ ಮಾಡಿ ಗಮನ ಸೆಳೆಯಿತು. ಬೆಂಗಳೂರು-ಅಯೋಧ್ಯೆ ಏರ್ ಇಂಡಿಯಾ ವಿಮಾನದಲ್ಲಿ ರಾಮಜಪ, ಭಜನೆ ಕೇಳಿಬಂತು. ಇದನ್ನೂ ಓದಿ: Ayodhya Ram Mandir: ಗರ್ಭಗುಡಿ ಪ್ರವೇಶಿಸಿದ ರಾಮಲಲ್ಲಾ ವಿಗ್ರಹ – ಇಂದು ಮೂರ್ತಿ ಪ್ರತಿಷ್ಠಾಪನೆ

    ವಿಮಾನ ನಿಲ್ದಾಣದ ಬೋರ್ಡಿಂಗ್‌ ಗೇಟಲ್ಲಿ ಭಕ್ತರು ‘ಜೈ ಶ್ರೀರಾಮ್‌’ ಎಂದು ಘೋಷಣೆ ಕೂಗಿದ್ದಾರೆ. ಅಲ್ಲದೇ ರಾಮಭಜನೆ ಮಾಡುತ್ತಾ ವಿಮಾನ ಏರಿದ ದೃಶ್ಯಗಳ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ.

    ಢಕ್ಕೆ ಭಾರಿಸುತ್ತ, ಕಂಸಾಳೆ ಸದ್ದು ಮಾಡುತ್ತ, ‘ಶ್ರೀರಾಮ.. ಜಯ ರಾಮ.. ಜಯ ಜಯ ರಾಮ’ ಎಂದು ಭಜಿಸುತ್ತಾ ಭಕ್ತರು ವಿಮಾನ ಏರಿದ್ದಾರೆ. ಮತ್ತೆ ಒಂದು ಕಡೆ ನಿಂತು ‘ಭೋಲೊ ಭಾರತ್‌ ಮಾತಾಕಿ’, ‘ರಾಮಚಂದ್ರ ಮಹಾರಾಜ್‌ಕೀ’, ‘ಅಯೋಧ್ಯಾ ವಾಸಿಕೀ’ ಜೈ ಎಂದು ಘೋಷಣೆ ಕೂಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ಬಾಲರಾಮನಿಗೆ ಬೆಂಗ್ಳೂರಿನಿಂದ ತುಳಸಿಮಾಲೆಯ ಸೇವೆ!

    ತಂಡದಲ್ಲಿ ಕೆಲವರು ಸಾಂಪ್ರದಾಯಿಕ ಉಡುಪಿನಲ್ಲೇ ಬೆಂಗಳೂರಿನಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ತಲೆಗೆ ಕೇಸರಿ ಬಣ್ಣದ ಪೇಟ ಧರಿಸಿದ್ದಾರೆ. ಕೆಲವರು ಕೇಸರಿ ಪಂಚೆ ಉಟ್ಟು ವಿಮಾನ ಏರಿದ್ದಾರೆ.

    ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಬೆಂಗಳೂರು, ಕೋಲ್ಕತ್ತಾ ಮತ್ತು ಅಯೋಧ್ಯೆ ನಡುವೆ ಪ್ರಯಾಣಕ್ಕೆ ಮೊದಲ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನಕ್ಕೆ ಬುಧವಾರ ಹಸಿರು ನಿಶಾನೆ ತೋರಿದ್ದರು. ಇದನ್ನೂ ಓದಿ: ರಾಮಮಂದಿರ ಪ್ರವೇಶಿಸಿದ ರಾಮಲಲ್ಲಾ ಮೂರ್ತಿ

    ಇದೇ ಜನವರಿ 22 ರಂದು ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠೆ ಸಮಾರಂಭ ಜರುಗಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಈ ಸುಸಂದರ್ಭಕ್ಕೆ ಸಾಕ್ಷಿಯಾಗಲು ರಾಮಭಕ್ತರು ಕಾತರರಾಗಿದ್ದಾರೆ.