Tag: Air India Crash

  • ಏರ್ ಇಂಡಿಯಾ ದುರಂತ | ತನಿಖಾ ವರದಿ ಬಹಿರಂಗಕ್ಕೂ ಮುನ್ನವೇ ವಿದೇಶಿ ಮಾಧ್ಯಮಗಳಲ್ಲಿ ಪ್ರಕಟ – ಕೇಂದ್ರಕ್ಕೆ ಪ್ರಿಯಾಂಕಾ ಚತುರ್ವೇದಿ ಪತ್ರ

    ಏರ್ ಇಂಡಿಯಾ ದುರಂತ | ತನಿಖಾ ವರದಿ ಬಹಿರಂಗಕ್ಕೂ ಮುನ್ನವೇ ವಿದೇಶಿ ಮಾಧ್ಯಮಗಳಲ್ಲಿ ಪ್ರಕಟ – ಕೇಂದ್ರಕ್ಕೆ ಪ್ರಿಯಾಂಕಾ ಚತುರ್ವೇದಿ ಪತ್ರ

    ನವದೆಹಲಿ: ಏರ್ ಇಂಡಿಯಾ ಅಪಘಾತದ (Air India Crash) ಪ್ರಾಥಮಿಕ ತನಿಖೆಯ ವರದಿಯ ಬಿಡುಗಡೆ ಮುನ್ನವೇ ವಿದೇಶಿ ಮಾಧ್ಯಮಗಳಲ್ಲಿ ಪ್ರಕಟ ಆಗಿರುವ ಬಗ್ಗೆ ಶಿವಸೇನಾ ಸಂಸದೆ ಪ್ರಿಯಾಂಕಾ ಚತುರ್ವೇದಿ (Priyanka Chaturvedi) ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

    ಭಾರತದ ಅಧಿಕೃತ ವರದಿ ಬಿಡುಗಡೆಗೂ ಮುನ್ನವೇ ಏರ್ ಇಂಡಿಯಾ ವಿಮಾನ 171 ರ ಅಪಘಾತ ವರದಿ ವಿದೇಶದಲ್ಲಿ ಹೇಗೆ ಸೋರಿಕೆಯಾಯಿತು? ವರದಿ ಬಿಡುಗಡೆ ಅಪಾರದರ್ಶಕವಾಗಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಕೇಂದ್ರ ವಿಮಾನಯಾನ ಸಚಿವ ಕೆ ರಾಮಮೋಹನ್ ನಾಯ್ಡು ( K Rammohan Naidu) ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಫ್ಯುಯೆಲ್ ಸ್ವಿಚ್ ನಿರ್ವಹಿಸುವಾಗ ಜಾಗ್ರತೆ – ಪೈಲಟ್‍ಗಳಿಗೆ ಆದೇಶಿಸಿದ ಇತಿಹಾದ್ ಏರ್‌ಲೈನ್ಸ್‌

    ವಿಮಾನ ಅಪಘಾತ ಮತ್ತು ಅದರ ಮಧ್ಯಂತರ ವರದಿಯ ಸುತ್ತಲಿನ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮೂಕ ಪ್ರೇಕ್ಷಕರಾಗಿರಲು ಸಾಧ್ಯವಿಲ್ಲ ಎಂದು ಎಕ್ಸ್‌ನಲ್ಲಿ ಅವರು ಬರೆದುಕೊಂಡಿದ್ದಾರೆ. ಅಲ್ಲದೇ ಪತ್ರವನ್ನು ಹಂಚಿಕೊಂಡಿದ್ದಾರೆ.

    ಭಾರತದಲ್ಲಿ ಔಪಚಾರಿಕವಾಗಿ ಸಂಬಂಧಪಟ್ಟ ಪಾಲುದಾರರಿಗೆ ಮತ್ತು ಸಾರ್ವಜನಿಕರಿಗೆ ಮಾಹಿತಿ ನೀಡುವ ಮೊದಲೇ ವಾಲ್ ಸ್ಟ್ರೀಟ್ ಜರ್ನಲ್‌ನಂತಹ ಮಾಧ್ಯಮಗಳಲ್ಲಿ ತನಿಖೆಯ ಪ್ರಮುಖ ವಿವರಗಳು ಬಂದಿವೆ. ಇದು ಮಾಹಿತಿ ಗೌಪ್ಯತೆಯಲ್ಲಿ ಆದ ಗಂಭೀರ ಲೋಪವಾಗಿದೆ. ವಿದೇಶಿ ಸಂಸ್ಥೆಗಳು ಹೇಗೆ ಮಾಹಿತಿ ಪಡೆದುಕೊಂಡವು ಎಂದು ಅವರು ಪ್ರಶ್ನಿಸಿದ್ದಾರೆ.

    ಇಂತಹ ಮಾಹಿತಿ ಸೋರಿಕೆಗಳು ಭಾರತದ ವಾಯುಯಾನ ಸುರಕ್ಷತಾ ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಹಾಳುಮಾಡುತ್ತವೆ. ಅಲ್ಲದೇ ತಮ್ಮನ್ನು ಆರೋಪಗಳಿಂದ ರಕ್ಷಿಸಿಕೊಳ್ಳಲು ಸಾಧ್ಯವಾಗದ ಜೀವಂತವಾಗಿಲ್ಲದ ಪೈಲಟ್‌ಗಳ ಮೇಲೆ ಅಪಪ್ರಚಾರ ಮಾಡುವ ಊಹಾಪೋಹಗಳನ್ನು ಸೃಷ್ಟಿಸುತ್ತವೆ ಎಂದು ಅವರು ಕಟುವಾಗಿ ವಾದಿಸಿದ್ದಾರೆ.

    ವರದಿಯನ್ನು ಮಾಧ್ಯಮಗಳ ಮುಂದೆ ಬಿಡುಗಡೆ ಮಾಡದೇ, ಹಠಾತ್ ತಡರಾತ್ರಿ ಬಿಡುಗಡೆ ಮಾಡಿರುವುದು ತನಿಖೆಯ ಪಾರದರ್ಶಕತೆಯ ಬಗ್ಗೆ ಅನುಮಾನಗಳನ್ನು ಹೆಚ್ಚಿಸಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದ್ದಾರೆ.

    ಜೂನ್ 12 ರಂದು ಅಹಮದಾಬಾದ್‌ನಲ್ಲಿ (Ahmedabad) ಟೇಕಾಫ್‌ ಆಗಿದ್ದ ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನ ಕೆಲವೇ ಕ್ಷಣಗಳಲ್ಲಿ ಪತನಗೊಂಡಿತ್ತು. ಅವಘಡಕ್ಕೆ ಕಾಕ್‌ಪಿಟ್‌ನಲ್ಲಿನ ಎರಡೂ ಇಂಧನ ನಿಯಂತ್ರಣ ಸ್ವಿಚ್‌ಗಳು ‘RUN’ ನಿಂದ ‘CUTOFF’ ಗೆ ಬಂದಿದ್ದು ಕಾರಣ ಎಂದು AAIB 15 ಪುಟಗಳ ಪ್ರಾಥಮಿಕ ತನಿಖೆಯ ವರದಿ ನೀಡಿತ್ತು. ಇದನ್ನೂ ಓದಿ: ಮುಂಬೈ ಏರ್‌ಪೋರ್ಟ್‌ನಲ್ಲಿ ಆಕಾಸ ಏರ್ ವಿಮಾನಕ್ಕೆ ಟ್ರಕ್‌ ಡಿಕ್ಕಿ

  • ನೀವು ಯಾಕೆ ಇಂಧನ ಸ್ಥಗಿತಗೊಳಿಸಿದ್ದೀರಿ? – ದುರಂತಕ್ಕೀಡಾದ ಏರ್ ಇಂಡಿಯಾ ಪೈಲಟ್‌ಗಳ ಸಂಭಾಷಣೆ

    ನೀವು ಯಾಕೆ ಇಂಧನ ಸ್ಥಗಿತಗೊಳಿಸಿದ್ದೀರಿ? – ದುರಂತಕ್ಕೀಡಾದ ಏರ್ ಇಂಡಿಯಾ ಪೈಲಟ್‌ಗಳ ಸಂಭಾಷಣೆ

    ನವದೆಹಲಿ: ಅಹಮದಾಬಾದ್‌ನಲ್ಲಿ 270 ಜನರನ್ನು ಬಲಿ ಪಡೆದ ಏರ್ ಇಂಡಿಯಾ ವಿಮಾನ ದುರಂತ ಕುರಿತು ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ (ಎಎಐಬಿ) 15 ಪುಟಗಳ ಪ್ರಾಥಮಿಕ ವರದಿಯನ್ನು ಪ್ರಕಟಿಸಿದೆ.

    ‘ನೀವು ಯಾಕೆ ಇಂಧನ ಸ್ಥಗಿತಗೊಳಿಸಿದ್ದೀರಿ?’ ಎಂದು ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್‌ನಲ್ಲಿ ಒಬ್ಬ ಪೈಲಟ್ ಇನ್ನೊಬ್ಬರನ್ನು ಕೇಳುತ್ತಿರುವುದು ರೆಕಾರ್ಡ್ ಆಗಿದೆ. ಇನ್ನೊಬ್ಬ ಪೈಲಟ್ ತಾನು ಹಾಗೆ ಮಾಡಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇಬ್ಬರೂ ಪೈಲಟ್‌ಗಳ ಸಂಭಾಷಣೆ ಅದರಲ್ಲಿದೆ. ಇದನ್ನೂ ಓದಿ: Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    ಜೂ.12 ರಂದು ಬೋಯಿಂಗ್ ಡ್ರೀಮ್‌ಲೈನರ್ 787-8 ಅಪಘಾತಕ್ಕೀಡಾಗಲು ಕಾರಣ ಏನೆಂಬುದು ಯಕ್ಷ ಪ್ರಶ್ನೆಯಾಗಿತ್ತು. ವಿಮಾನದ ಎರಡು ಎಂಜಿನ್‌ಗಳಿಗೆ ಇಂಧನ ಪೂರೈಕೆ ಸ್ಥಗಿತಗೊಂಡಿದ್ದೇ ಅಪಘಾತಕ್ಕೆ ಕಾರಣ ಎಂಬುದು ತನಿಖೆಯಿಂದ ತಿಳಿದುಬಂದಿದೆ.

    ವಿಮಾನವು ಹಾರಾಟದ ಸಮಯದಲ್ಲಿ ಗರಿಷ್ಠ ವೇಗ ಪಡೆದುಕೊಂಡ ಹೊತ್ತಿಗೆ ಎಂಜಿನ್-1 ಮತ್ತು ಎಂಜಿನ್-2ಕ್ಕೆ ಇಂಧನ ಪೂರೈಕೆ ಸ್ಥಗಿತಗೊಂಡಿದೆ. ಇದು ‘ರನ್’ ಸ್ಥಿತಿಯಿಂದ ‘ಕಟ್‌ಆಫ್’ ಸ್ಥಿತಿಗೆ ತಲುಪಿದೆ. ಈ ಎರಡೂ ಎಂಜಿನ್‌ಗಳು ಒಂದು ಸೆಕೆಂಡು ಅಂತರದಲ್ಲಿ ತಮ್ಮ ಕಾರ್ಯ ಸ್ಥಗಿತಗೊಳಿಸಿವೆ. ಕಾಕ್‌ಪಿಟ್‌ನ ಸಂಭಾಷಣೆಯು ಬ್ಲ್ಯಾಕ್‌ಬಾಕ್ಸ್‌ನಲ್ಲಿ ದಾಖಲಾಗಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

  • Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    Air India Crash | ವಿಮಾನ ದುರಂತಕ್ಕೂ ಮುನ್ನವೇ ಏರ್‌ ಇಂಡಿಯಾಕ್ಕೆ ಎಚ್ಚರಿಕೆ ನೀಡಿತ್ತು ಅಮೆರಿಕ

    – ಮುಂದುವರಿದಿದೆ ತನಿಖೆ; ಬೌಸರ್‌ಗಳ ಪರೀಕ್ಷೆ

    ಅಹಮದಾಬಾದ್‌: ಕಳೆದ ಜೂನ್ 12ರಂದು ಅಹ್ಮದಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ (Air India Crash) ಸಂಬಂಧಿಸಿದಂತೆ ಎಎಐಬಿ ಪ್ರಾಥಮಿಕ ವರದಿ (AAIB Initial Report) ಬಿಡುಗಡೆಯಾಗಿದೆ. 15 ಪುಟಗಳ ವರದಿ ಸರ್ಕಾರಕ್ಕೆ ಸಲ್ಲಿಕೆಯಾಗಿದ್ದು ಬ್ಲ್ಯಾಕ್ ಬಾಕ್ಸ್ ಸೇರಿ ಇತರೆ ಸಾಕ್ಷ್ಯಗಳ ಆಧಾರದ ಮೇಲೆ ವಿಮಾನ ದುರಂತಕ್ಕೆ ಕಾರಣ ಕಂಡುಕೊಳ್ಳಲಾಗಿದೆ.

    ಇಂಧನ ಪೂರೈಸುತ್ತಿದ್ದ ಸ್ವಿಚ್‌ಗಳು ಆಫ್
    ಜೂನ್ 12ರಂದು ಅಹ್ಮದಬಾದ್ ನಲ್ಲಿ ನಡೆದ ಏರ್ ಇಂಡಿಯಾ ವಿಮಾನ ದುರಂತಕ್ಕೆ ಸಂಬಂಧಿಸಿದಂತೆ ಮೊದಲ ತನಿಖಾ ವರದಿ ಬಿಡುಗಡೆಯಾಗಿದೆ. ವಿಮಾನ ಟೇಕ್-ಆಫ್ ಆದ ಕೆಲವೇ ಕ್ಷಣಗಳಲ್ಲಿ ಎರಡೂ ಎಂಜಿನ್‌ಗಳಿಗೆ ಇಂಧನ ಪೂರೈಸುತ್ತಿದ್ದ ಸ್ವಿಚ್‌ಗಳು ಆಫ್ (Fuel Cutoff) ಆಗಿದ್ದವು. ಇದಾದ ನಂತರ ಪೈಲಟ್‌ಗಳ ನಡುವೆ ಗೊಂದಲ ಉಂಟಾಯಿತು ಎಂದು ವರದಿ ಹೇಳಿದೆ. ಇದನ್ನೂ ಓದಿ: Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    ವಿಮಾನ ಅಪಘಾತ ತನಿಖಾ ಬ್ಯೂರೋ ಈ ವರದಿಯನ್ನು ಬಿಡುಗಡೆ ಮಾಡಿದೆ. ಟೇಕ್-ಆಫ್ ಸಮಯದಲ್ಲಿ ಸಹ-ಪೈಲಟ್ ವಿಮಾನವನ್ನು ನಿಯಂತ್ರಿಸುತ್ತಿದ್ದರೆ, ಮುಖ್ಯ ಪೈಲಟ್ ಮೇಲ್ವಿಚಾರಣೆ ಮಾಡುತ್ತಿದ್ದರು. ವಿಮಾನವು ಗರಿಷ್ಠ 180 ನಾಟ್ಸ್ ವೇಗ ತಲುಪಿದ ತಕ್ಷಣ, ಇಂಧನ ಸ್ವಿಚ್‌ಗಳು ಒಂದರ ನಂತರ ಒಂದು ಆಫ್ ಆಗಿವೆ. ಇದರ ಪರಿಣಾಮವಾಗಿ, ಎಂಜಿನ್‌ಗಳಿಗೆ ಇಂಧನ ಪೂರೈಕೆ ನಿಂತು ಅವುಗಳ ಕಾರ್ಯಕ್ಷಮತೆ ಕುಸಿಯಿತು ಎಂದು ವರದಿ ಹೇಳಿದೆ. ಇದನ್ನೂ ಓದಿ: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್‌ಗೆ ಜೀವ ಬೆದರಿಕೆ – ದೂರು ದಾಖಲು

    ಕಾಕ್‌ಪಿಟ್ ನಲ್ಲಿ ಪೈಲಟ್‌ಗಳ ನಡುವೆ ನಡೆದ ಸಂಭಾಷಣೆಯೂ ರೆಕಾರ್ಡ್ ಆಗಿದ್ದು ಅದರಲ್ಲಿ ಒಬ್ಬ ಪೈಲಟ್ ಇಂಧನ ಆಫ್ ಮಾಡಿದ್ದು ಯಾಕೆ? ಎಂದು ಕೇಳಿದರೆ, ಇನ್ನೊಬ್ಬ ನಾನು ಮಾಡಿಲ್ಲ ಎಂದು ಉತ್ತರಿಸಿದ್ದಾನೆ. ತುರ್ತು ಪರಿಸ್ಥಿತಿ ಅರಿವಿಗೆ ಬರುತ್ತಿದ್ದಂತೆಯೇ ವಿಮಾನದ ಸ್ವಯಂಚಾಲಿತ ವ್ಯವಸ್ಥೆಯನ್ನು ಸಕ್ರಿಯಗೊಳಿಸಲು ಪ್ರಯತ್ನಿಸಲಾಯಿತು. ಆದಾಗ್ಯೂ, ರಾಮ್ ಏರ್ ಟರ್ಬೈನ್ ಅಂದರೆ, ತುರ್ತು ಫ್ಯಾನ್ ಮತ್ತು ಎಪಿಯುನಂತಹ ವ್ಯವಸ್ಥೆಗಳನ್ನು ಸಕ್ರಿಯಗೊಳಿಸಿದ ನಂತರವೂ, ವಿಮಾನವನ್ನು ಅಪಘಾತದಿಂದ ರಕ್ಷಿಸಲು ಪೈಟಲ್​ಗಳಿಗೆ ಸಾಧ್ಯವಾಗಲಿಲ್ಲ. ಈ ಸಂಭಾಷಣೆ ನಡುವೆಯೇ ಪೈಲಟ್‌ ಮೇ ಡೇ ಘೋಷಿಸಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ವಿಮಾನ ಪತನವಾಗಿದೆ. ಇದನ್ನೂ ಓದಿ:  ದೆಹಲಿಯಲ್ಲಿ ಕುಸಿದು ಬಿದ್ದ 4 ಅಂತಸ್ತಿನ ಕಟ್ಟಡ – 14 ತಿಂಗಳ ಮಗು ಸೇರಿ 8 ಮಂದಿ ರಕ್ಷಣೆ

    ಮುಂದುವರಿದಿದೆ ತನಿಖೆ; ಬೌಸರ್‌ಗಳ ಪರೀಕ್ಷೆ
    ವಿಮಾನಕ್ಕೆ ಇಂಧನ ತುಂಬಲು ಬಳಸಿದ ವಾಹನಗಳು (ಬೌಸರ್‌ಗಳು) ಮತ್ತು ಟ್ಯಾಂಕ್‌ಗಳಿಂದ ಇಂಧನದ ಮಾದರಿಗಳನ್ನು ತೆಗೆದು, ಅವುಗಳನ್ನು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಯಿತು ಎಂದು ವಿಮಾನ ಅಪಘಾತ ತನಿಖಾ ಬ್ಯೂರೋ ಹೇಳಿದೆ. ಈ ಪರೀಕ್ಷೆಯ ನಂತರ, ಇಂಧನದ ಗುಣಮಟ್ಟವು ಯಾವುದೇ ದೋಷವಿಲ್ಲದೆ, ತೃಪ್ತಿಕರವಾಗಿತ್ತು ಎಂದು ದೃಢಪಡಿಸಲಾಗಿದೆ. ಆದ್ರೆ, ವಿಮಾನದ ಕೆಲವು ನಿರ್ದಿಷ್ಟ ಭಾಗಗಳಿಂದ (ಉದಾಹರಣೆಗೆ, ಎಪಿಯು ಫಿಲ್ಟರ್ ಮತ್ತು ಎಡ ರೆಕ್ಕೆಯ ರಿಫ್ಯೂಯಲ್/ಜೆಟ್ಟಿಸನ್ ವಾಲ್ವ್) ಬಹಳ ಕಡಿಮೆ ಪ್ರಮಾಣದ ಇಂಧನದ ಮಾದರಿಗಳು ಮಾತ್ರ ಸಿಕ್ಕಿವೆ. ಈ ಕಡಿಮೆ ಪ್ರಮಾಣದ ಮಾದರಿಗಳನ್ನು ಪರೀಕ್ಷಿಸಲು ವಿಶೇಷ ಸೌಲಭ್ಯಗಳಿರುವ ಬೇರೆ ಪ್ರಯೋಗಾಲಯದ ಅಗತ್ಯವಿದೆ.

    ಏರ್ ಇಂಡಿಯಾಕ್ಕೆ ಮೊದಲೇ ಎಚ್ಚರಿಸಿತ್ತು ಅಮೆರಿಕ
    ಬೋಯಿಂಗ್‌ ಡ್ರೀಮ್ ಲೈನರ್ ವಿಮಾನದಲ್ಲಿ ಇಂಧನ ಸ್ವಿಚ್‌ಗಳಲ್ಲಿ ಸಮಸ್ಯೆ ಇರುವ ಬಗ್ಗೆ ಈ ಹಿಂದೆ ಅಮೆರಿಕ ಗುರುತಿಸಿತ್ತು. ಇದರ ಬೆನ್ನಲೆ ಬೋಯಿಂಗ್‌ ಎಲ್ಲ ಏರ್‌ಲೈನ್‌ಗಳಿಗೆ ಎಚ್ಚರಿಕೆ ನೀಡಿತ್ತು. 7 ವರ್ಷಗಳ ಹಿಂದೆಯೇ ಯುಎಸ್‌ನ FAA ಸಂಸ್ಥೆ 737 ಜೆಟ್‌ಗಳ ಫ್ಯುಯೆಲ್ ಕಂಟ್ರೋಲ್ ಸ್ವಿಚ್ ಬಗ್ಗೆ ಎಚ್ಚರಿಕೆ ನೀಡಿತ್ತು. ಅದರ ಭಾಗವಾಗಿ ಏರ್ ಇಂಡಿಯಾಗೂ ಈ ಮಾಹಿತಿಯನ್ನು ನೀಡಿತ್ತು. ಈ ಸ್ವಿಚ್‌ಗಳ ಬಗ್ಗೆ ಗಮನ ಹರಿಸಲು ಹೇಳಿತ್ತು. ಹೀಗಾಗೀ ಇದರಲ್ಲಿ ನಿರ್ಲಕ್ಷ್ಯ ಯಾರದು ಎನ್ನುವ ಪ್ರಶ್ನೆಯೂ ಉದ್ಬವಿಸಿದೆ.

    ಸದ್ಯ ವಿಮಾನ ಅಪಘಾತ ತನಿಖಾ ಬ್ಯೂರೋ ತಂಡವು ಈಗ ಆರಂಭಿಕವಾಗಿ ಸಿಕ್ಕಿರುವ ಮಾಹಿತಿಗಳನ್ನು ಆಧರಿಸಿ, ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ಸಂಗ್ರಹಿಸುತ್ತಿದೆ. ಜೊತೆಗೆ, ವಿಮಾನದಲ್ಲಿ ಅಳವಡಿಸಲಾಗಿರುವ ಫ್ಲೈಟ್ ರೆಕಾರ್ಡರ್‌ನಿಂದ ಡೇಟಾ ವಿಶ್ಲೇಷಿಸಲಾಗುತ್ತಿದೆ. ಈ ವಿಶ್ಲೇಷಣೆಯು ಅಪಘಾತಕ್ಕೆ ನಿಖರ ಕಾರಣವನ್ನು ಕಂಡುಹಿಡಿಯಲು ಸಹಾಯ ಮಾಡುತ್ತದೆ.

  • Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    Air India Crash | 2 ಎಂಜಿನ್‌ಗಳಿಗೆ ಇಂಧನ ಪೂರೈಕೆ ಆಗದಿದ್ದೇ ದುರಂತಕ್ಕೆ ಕಾರಣ – AAIB ಪ್ರಾಥಮಿಕ ವರದಿ ಬಹಿರಂಗ

    – 15 ಪುಟಗಳ ವರದಿಯಲ್ಲಿ ಹಲವು ಅಂಶಗಳು ಬಹಿರಂಗ

    ಅಹಮದಾಬಾದ್‌: ದೇಶಾದ್ಯಂತ ಸಂಚಲನ ಮೂಡಿಸಿದ್ದ ಅಹಮದಾಬಾದ್‌ ಏರ್ ಇಂಡಿಯಾ ವಿಮಾನ ದುರಂತದಲ್ಲಿ (Air India Plane Crash) 260 ಜನ ಸಾವನ್ನಪ್ಪಿದ್ದರು. ಈ ಘಟನೆಯ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಪ್ರಾಥಮಿಕ ವರದಿ ಬಹಿರಂಗಗೊಂಡಿದ್ದು, ಹಲವು ಅಂಶಗಳು ಬೆಳಕಿಗೆ ಬಂದಿವೆ. ಬೋಯಿಂಗ್ 787 ಡ್ರೀಮ್‌ಲೈನರ್‌ ವಿಮಾನದಲ್ಲಿ ಏನೆಲ್ಲಾ ಆಯ್ತು ಅನ್ನೋದನ್ನ 15 ಪುಟಗಳ ವರದಿ ಬಹಿರಂಗಪಡಿಸಿದೆ.

    ವಿಮಾನ ಅಪಘಾತ ತನಿಖಾ ಬ್ಯೂರೋ ವರದಿಯಲ್ಲಿ ಪೈಲಟ್‌ಗಳ ಕಾಕ್‌ಪಿಟ್‌ (Cockpit) ಧ್ವನಿ ರೆಕಾರ್ಡಿಂಗ್‌ ಡೇಟಾವನ್ನ ಉಲ್ಲೇಖಿಸಲಾಗಿದೆ. ಇದರಲ್ಲಿ ವಿಮಾನವು ವಾಯುಪ್ರದೇಶಕ್ಕೆ ತಲುಪಿದ ಕೆಲವೇ ಸೆಕೆಂಡುಗಳಲ್ಲಿ ಡ್ಯುಯಲ್-ಎಂಜಿನ್ ಸ್ಥಗಿತಗೊಂಡಿರುವುದು ಅಪಘಾತಕ್ಕೆ ಕಾರಣ ಎಂದು ಸೂಚಿಸಲಾಗಿದೆ. ಅಪಘಾತಕ್ಕೆ ಕೆಲ ಸೆಕೆಂಡುಗಳಿಗೂ ಮುನ್ನ ನಡೆದ ಸಂಭಾಷಣೆಯ ಒಂದು ಭಾಗದಲ್ಲಿ ಇದು ತಿಳಿದಿದೆ. ಜೊತೆಗೆ ವಿಮಾನವು 8 ಡಿಗ್ರಿ ಮೂಗು ಮೇಲಕ್ಕೆತ್ತಿದ ಸ್ಥಿತಿಯಲ್ಲಿತ್ತು. ಆದರೆ ಇಂಜಿನ್‌ಗಳು ಆಫ್ ಆಗಿದ್ದವು. ಇದರಿಂದ ವಿಮಾನವು ಏರಲು ಸಾಧ್ಯವಾಗಲಿಲ್ಲ ಎಂದು ವರದಿ ತಿಳಿದಿದೆ. ಇದನ್ನೂ ಓದಿ: ತಾಮ್ರದ ಮೇಲೆ 50%, ಔಷಧ ಆಮದಿನ ಮೇಲೆ 200% ಸುಂಕದ ಎಚ್ಚರಿಕೆ – ಭಾರತದ ಮೇಲೆ ಏನು ಪರಿಣಾಮ?

    ಟೇಕ್ ಆಫ್ ಆದ 3 ಸೆಕೆಂಡ್‌ಗಳ ನಂತರ, ಎರಡೂ ಇಂಜಿನ್‌ಗಳ ಫ್ಯೂಯಲ್ ಕಂಟ್ರೋಲ್ ಸ್ವಿಚ್‌ಗಳು ರನ್‌ ನಿಂದ ಕಟ್‌ಆಫ್‌ಗೆ ಬದಲಾದವು. ಇದರಿಂದಾಗಿ ಥ್ರಸ್ಟ್ ಇದ್ದಕ್ಕಿದ್ದಂತೆ ಕಡಿಮೆಯಾಯಿತು. ಅಲ್ಲದೇ ಒಂದು ಪೈಲಟ್ ʻನೀವು ಏಕೆ ಕಟ್ ಆಫ್ ಮಾಡಿದ್ರಿ?ʼ ಎಂದು ಕೇಳುವುದು ಕೇಳಿಸುತ್ತದೆ. ಅದಕ್ಕೆ ಇನ್ನೊಬ್ಬ ಪೈಲಟ್ ʻನಾನು ಮಾಡಿಲ್ಲʼ ಎಂದು ಉತ್ತರಿಸುತ್ತಾರೆ. ಇದರಿಂದ ತಾಂತ್ರಿಕ ದೋಷ ಅಥವಾ ಆಕಸ್ಮಿಕವಾಗಿ ಸ್ವಿಚ್ ಆಫ್ ಆಗಿರಬಹುದು ಎಂದು ಶಂಕಿಸಲಾಗಿದೆ. ʻWhy did you cutoff?ʼ ಮತ್ತು ʻI did not do so,ʼ ಎಂಬ ಮಾತುಗಳು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಮತ್ತೆ ಉದ್ಯೋಗಕ್ಕೆ ಮರಳಿದ ರಿಷಿ ಸುನಕ್ – 70 ಗಂಟೆ ಕೆಲ್ಸ ಮಾಡಿ ಎಂದು ನೆಟ್ಟಿಗರ ಅಪಹಾಸ್ಯ

    ಇನ್ನೂ ಫ್ಲೈಟ್ ಡೇಟಾ ರೆಕಾರ್ಡರ್‌ ಪ್ರಕಾರ, ಇಂಜಿನ್-1 ಅನ್ನು ಸ್ವಯಂಚಾಲಿತವಾಗಿ ಮರುಪ್ರಾರಂಭಿಸಲು ಪ್ರಯತ್ನಿಸಿ, ಅದು ಯಶಸ್ವಿಯಾಯಿತು. ಆದ್ರೆ ಇಂಜಿನ್ 2 ಅನ್ನು ಮರುಪ್ರಾರಂಭಿಸಲು ಸಾಧ್ಯವಾಗಲಿಲ್ಲ. ಈ ಕಾರಣಕ್ಕಾಗಿ ರಾಮ್ ಏರ್ ಟರ್ಬೈನ್ (RAT) ಅನ್ನು ತುರ್ತು ವಿದ್ಯುತ್ ಮೂಲವಾಗಿ ಬಳಸಲಾಗಿತ್ತು. ಇದು ಟೇಕ್ ಆಫ್ ಆದ ತಕ್ಷಣವೇ ಕಾರ್ಯನಿರ್ವಹಿಸಲು ಪ್ರಾರಂಭಿಸಿತು. ಇದರಿಂದ ಅಗತ್ಯ ಸಿಸ್ಟಮ್‌ಗಳಿಗೆ ವಿದ್ಯುತ್ ಸಂಪೂರ್ಣವಾಗಿ ಸ್ಥಗಿತಗೊಂಡಿತು ಎಂದು ವರದಿ ತಿಳಿಸಿದೆ. RAT ಅಂದರೆ ವಿಮಾನದಲ್ಲಿನ ಎಲೆಕ್ಟ್ರಿಕಲ್ ವ್ಯವಸ್ಥೆ ಕೈಕೊಟ್ಟಾಗ ಉಪಯೋಗಿಸುವ ಒಂದು ಸಾಧನ. ಇದನ್ನೂ ಓದಿ: ಕೆನಡಾ ಮೇಲೆ 35% ಸುಂಕ ವಿಧಿಸಿದ ಟ್ರಂಪ್ – ಪ್ರತೀಕಾರಕ್ಕೆ ಮುಂದ್ರಾದ್ರೆ ಇನ್ನಷ್ಟು ಸುಂಕ ವಿಧಿಸುವುದಾಗಿ ವಾರ್ನಿಂಗ್‌

    ಮೇ ಡೇ ಕೊನೆಯ ಸಂದೇಶ
    ವಿಮಾನವು ಏರ್‌ಪೋರ್ಟ್‌ನ ಹೊರಗಿನ ಕಟ್ಟಡಗಳಿಗೆ ಡಿಕ್ಕಿ ಹೊಡೆಯುವ ಕೆಲವೇ ಸೆಕೆಂಡುಗಳ ಮೊದಲು, 08:09:05 ಯುಟಿಸಿ ಗೆ ತುರ್ತು ಕರೆ ಮಾಡಲಾಯಿತು. ಈ ವೇಳೆ ಮೇ ಡೇ ಎಂಬ ಸಂದೇಶವನ್ನು ಪೈಲಟ್‌ ಕೊಟ್ಟಿದ್ದರು.

    ಕಳೆದ ಜುಲೈ 12ರಂದು ಅಹಮದಾಬಾದ್‌ ಏರ್‌ಪೋರ್ಟ್‌ನಲ್ಲಿ ನಡೆದ ದುರಂತದಲ್ಲಿ 260ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಇದನ್ನೂ ಓದಿ: ಮ್ಯಾನ್ಮಾರ್‌ನಲ್ಲಿ ಬೌದ್ಧ ವಿಹಾರದ ಮೇಲೆ ವೈಮಾನಿಕ ದಾಳಿಗೆ 23 ಮಂದಿ ಬಲಿ

  • Air India Crash | 215 ಡಿಎನ್‌ಎ ಮ್ಯಾಚ್‌ – 198 ಮೃತದೇಹ ಹಸ್ತಾಂತರ

    Air India Crash | 215 ಡಿಎನ್‌ಎ ಮ್ಯಾಚ್‌ – 198 ಮೃತದೇಹ ಹಸ್ತಾಂತರ

    ಅಹಮದಾಬಾದ್‌: ಏರ್‌ ಇಂಡಿಯಾವಿಮಾನ ದುರಂತದಲ್ಲಿ (Air India Crash) ಮೃತಪಟ್ಟವರ ಪೈಕಿ ಈವರೆಗೆ ಒಟ್ಟು 215 ಮಂದಿ ಗುರುತು ಪತ್ತೆಯಾಗಿದ್ದು, 198 ಮೃತ ದೇಹಗಳನ್ನ ಸಂಬಂಧಪಟ್ಟ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಅಹಮದಾಬಾದ್ ಸಿವಿಲ್ ಹಾಸ್ಪಿಟಲ್ ಅಧೀಕ್ಷಕ ರಾಕೇಶ್ ಜೋಶಿ ತಿಳಿಸಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಜೋಶಿ, ಒಟ್ಟು 215 ಡಿಎನ್‌ಎ (DNA) ವರದಿಗಳು ಮ್ಯಾಚ್‌ ಆಗಿವೆ. ಈ ಪೈಕಿ 198 ಮೃತದೇಹಗಳನ್ನ ಹಸ್ತಾಂತರಿಸಲಾಗಿದೆ. ಈ ಪೈಕಿ 149 ಭಾರತೀಯರು, 7 ಪೋರ್ಚುಗೀಸ್‌, 32 ಬ್ರಿಟಿಷ್‌ ಮತ್ತಿ ಕೆನಡಿಯನ್‌ ಪ್ರಜೆಗಳ ಮೃತದೇಹಗಳು ಪತ್ತೆಯಾಗಿವೆ ಎಂದು ಮಾಹಿತಿ ನೀಡಿದ್ದಾರೆ.

    15 ಮೃತದೇಹಗಳನ್ನು ಏರ್‌ ಅಂಬುಲೆನ್ಸ್‌ ಹಾಗೂ 183 ಮೃತದೇಹಗಳನ್ನು ರೋಡ್‌ ಅಂಬುಲೆನ್ಸ್‌ ಮೂಲಕ ಸಾಗಿಸಲಾಗಿದೆ. ಇದೆಲ್ಲವೂ ಸೇರಿ ಒಟ್ಟಾರೆ 222 ಮೃತದೇಹಗಳನ್ನು ಪತ್ತೆಹಚ್ಚಲಾಗಿದೆ. 8 ಮಂದಿ ಮೃತದೇಹಗಳ ಗುರುತು ಮಾತ್ರ ಪತ್ತೆಯಾಗಿಲ್ಲ ಎಂದು ವಿವರಿಸಿದ್ದಾರೆ.

    ಬ್ಲ್ಯಾಕ್‌ ಬಾಕ್ಸ್‌ ಅಮೆರಿಕಗೆ ರವಾನೆ
    ಸದ್ಯ ಪತನವಾಗಿರುವ ಏರ್‌ ಇಂಡಿಯಾ ಬೋಯಿಂಗ್-787 ವಿಮಾನದ ಬ್ಲ್ಯಾಕ್‌ ಬಾಕ್ಸ್‌ ಅನ್ನು ಡಿಕೋಡ್‌ ಮಾಡಲು ಅಮೆರಿಕಕ್ಕೆ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಜೂನ್‌ 13ರಂದು ಬಿಜೆ ಮೆಡಿಕಲ್‌ ಹಾಸ್ಟೆಲಿನ ಮೇಲ್ಛಾವಣಿಯಲ್ಲಿದ್ದ ಏರ್‌ ಇಂಡಿಯಾ ವಿಮಾನದ ಬ್ಲ್ಯಾಕ್‌ ಬಾಕ್ಸ್‌ (Black Box) ಅನ್ನು‌ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ವಶಪಡಿಸಿಕೊಂಡಿತ್ತು. ಆದ್ರೆ ಬ್ಲ್ಯಾಕ್‌‌ ಬಾಕ್ಸ್‌ಗೆ ಬೆಂಕಿ ಬಿದ್ದು ಬಾಹ್ಯವಾಗಿ ಹಾನಿಯಾಗಿದೆ. ಇದರಿಂದ ಸ್ಥಳೀಯ ತನಿಖಾಧಿಕಾರಿಗಳಿಂದ ಮಾಹಿತಿ ಹೊರ ತೆಗೆಯಲು ಸಾಧ್ಯವಾಗಿಲ್ಲ. ಈ ಹಿನ್ನೆಲೆ ಡೇಟಾ ರಿಕವರಿಗಾಗಿ ಬ್ಲ್ಯಾಕ್‌ಬಾಕ್ಸ್‌ ಅನ್ನು ಅಮೆರಿಕಾಗೆ ರವಾನೆ ಮಾಡಲಾಗಿದೆ ಎಂದು ತಿಳಿದುಬಂದಿದೆ.

  • Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

    Ahmedabad Tragedy | ಡಿಎನ್‌ಎ ಮ್ಯಾಚ್ – 3 ದಿನಗಳ ಬಳಿಕ ವಿಜಯ್ ರೂಪಾನಿ ಮೃತದೇಹದ ಗುರುತು ಪತ್ತೆ

    – ರಾಜಕೋಟ್‌ನಲ್ಲಿ ಅಂತ್ಯ ಸಂಸ್ಕಾರಕ್ಕೆ ಸಿದ್ಧತೆ

    ಅಹಮದಾಬಾದ್‌: ಇಲ್ಲಿನ ಮೇಘನಿ ನಗರದಲ್ಲಿ ಏರ್‌ ಇಂಡಿಯಾ ವಿಮಾನ ದುರಂತ (Air India Crash) ಸಂಭವಿಸಿದ ಮೂರು ದಿನಗಳ ನಂತರ ಗುಜರಾತ್‌ನ ಮಾಜಿ ಸಿಎಂ ವಿಜಯ್‌ ರೂಪಾನಿ (Vijay Rupani) ಅವರ ಮೃತದೇಹದ ಗುರುತು ಪತ್ತೆಯಾಗಿದೆ. ಅಪಘಾತ ಸ್ಥಳದಲ್ಲಿ ಪತ್ತೆಯಾದ ಮೃತದೇಹದೊಂದಿಗೆ ಡಿಎನ್‌ಎ ಮ್ಯಾಚ್ ಆಗಿದ್ದು, ಮೃತದೇಹ ಹಸ್ತಾಂತರಕ್ಕೆ ತಯಾರಿ ನಡೆದಿದೆ.

    ಈ ಕುರಿತು ರಾಜ್ಯದ ಗೃಹ ಸಚಿವ ಹರ್ಷ್ ಸಾಂಘವಿ (Harsh Sanghavi )ಮಾಹಿತಿ ನೀಡಿದ್ದಾರೆ. ಇಂದು ಬೆಳಗ್ಗೆ 11:10ಕ್ಕೆ ಬಂದ ಡಿಎನ್‌ಎ ವರದಿಯಲ್ಲಿ ರೂಪಾನಿ ಅವರ ಡಿಎನ್‌ಎಗೆ ಮ್ಯಾಚ್‌ (DNA Match) ಆಗಿದೆ ಎಂದು ತಿಳಿಸಿದ್ದಾರೆ.

    ರೂಪಾನಿ ಅವರ ಸಹೋದರಿಯಿಂದ ಸ್ಯಾಂಪಲ್‌ ಪಡೆದು ಡಿಎನ್‌ಎ ಪರೀಕ್ಷೆ ಮಾಡಲಾಗಿತ್ತು. ಪರೀಕ್ಷೆ ವೇಳೆ ಡಿಎನ್‌ಎ ಮಾಚ್‌ ಆಗಿದ್ದು ಮೂರು ದಿನಗಳ ಬಳಿಕ ಮೃತದೇಹದ ಗುರುತು ಪತ್ತೆಯಾಗಿದೆ. ಸದ್ಯ ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರದಲ್ಲೇ ಅವರು ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ. ಬಂದ ಬಳಿಕ ಮೃತದೇಹ ಹಸ್ತಾಂತರಿಸಲಾಗುತ್ತದೆ. ಹಾಲಿ ಸಿಎಂ ಭೂಪೇಂದ್ರ ಪಟೇಲ್‌ ಸಹ ಕುಟುಂಬಸ್ಥರೊಂದಿಗೆ ಇರಲಿದ್ದಾರೆ.

    ರಾಜಕೋಟ್‌ನಲ್ಲಿ ವಿಜಯ್ ರೂಪಾನಿ ಅವರ ಅಂತ್ಯಕ್ರಿಯೆ ನಡೆಸಲು ಕುಟುಂಬಸ್ಥರು ಈಗಾಗಲೇ ಸಕಲ ತಯಾರಿ ಮಾಡಿಕೊಂಡಿದ್ದಾರೆ.

    ಏರ್ ಇಂಡಿಯಾ ವಿಮಾನ ಪತನ ದುರಂತದಲ್ಲಿ ಮೃತಪಟ್ಟವರ ಮೃತದೇಹಗಳಿಗಾಗಿ ಸಂಬಂಧಿಕರು ಇನ್ನೂ ಕಾಯುತ್ತಿದ್ದಾರೆ. ಸಿವಿಲ್ ಆಸ್ಪತ್ರೆಯಲ್ಲಿ ಹತ್ತಾರು ಕುಟುಂಬಗಳ ಕುಟುಂಬಸ್ಥರು ಮೃತದೇಹಕ್ಕಾಗಿ ಕಾಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಡಿಎನ್‌ಎ ಮ್ಯಾಚ್ ಮಾಡುವ ಕಾರ್ಯ ನಡೆಯುತ್ತಿದೆ. ಶನಿವಾರದವರೆಗೆ 31 ಮೃತ ದೇಹಗಳ ಡಿಎನ್‌ಎ ಮ್ಯಾಚ್ ಆಗಿದ್ದು, 12 ಮೃತದೇಹಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿತ್ತು. ಇಂದು ಇನ್ನಷ್ಟು ಮೃತದೇಹಗಳನ್ನು ಹಸ್ತಾಂತರಿಸುವ ಪ್ರಕ್ರಿಯೆ ನಡೆಯಲಿದೆ.