Tag: air force

  • ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ನವದೆಹಲಿ: ಪಾಕಿಸ್ತಾನದ ಗೂಢಚಾರಿಕಾ ಸಂಸ್ಥೆ ಐಎಸ್‍ಐ ಗೆ ಮಾಹಿತಿ ಸೋರಿಕೆ ಮಾಡಿದ ಆರೋಪದಡಿ ಭಾರತೀಯ ವಾಯುಪಡೆಯ ಅಧಿಕಾರಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

    ವಾಯುಪಡೆ ವಿಂಗ್ ಕಾಮಾಂಡರ್ ಆರುಣ್ ಮರ್ವಾಹಾ (51) ಬಂಧಿತ ಅಧಿಕಾರಿ. ಪಾಕಿಸ್ತಾನ ಐಎಸ್‍ಐ ನ ಇಬ್ಬರು ಏಜೆಂಟ್‍ಗಳು ತಾವು ಮಹಿಳೆಯರೆಂದು ಬಿಂಬಿಸಿ ಹನಿಟ್ರ್ಯಾಪ್ ಮಾಡಿ ವಾಟ್ಸಪ್ ಮೂಲಕ ವಾಯುಪಡೆಯ ಪ್ರಮುಖ ದಾಖಲೆಗಳನ್ನ ಪಡೆದಿದ್ದಾರೆ ಎಂದು ವರದಿಯಾಗಿದೆ.

    ಕಾಮಾಂಡರ್ ಆರುಣ್ ದೆಹಲಿಯ ಐಎಎಫ್ ಮುಖ್ಯಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಪ್ರಸ್ತುತ ಇವರ ವಿರುದ್ಧ ಅಫಿಶಿಯಲ್ ಸೀಕ್ರೆಟ್ಸ್ ಆ್ಯಕ್ಟ್ ಅಡಿ ಪ್ರಕರಣ ದಾಖಲಾಗಿದೆ. ಆರೋಪ ಸಾಬೀತಾದರೆ 14 ವರ್ಷಗಳ ಜೈಲು ಶಿಕ್ಷೆ ವಿಧಿಸುವ ಸಾಧ್ಯತೆಗಳಿದೆ. ಆರುಣ್ ಮುಂದಿನ ವರ್ಷ ಕೆಲಸದಿಂದ ನಿವೃತ್ತಿ ಹೊಂದಬೇಕಿತ್ತು ಎಂದು ವರದಿಯಾಗಿದೆ.

    ಮಹಿಳೆಯರ ಹೆಸರಲ್ಲಿ ನಕಲಿ ಖಾತೆ ಹೊಂದಿದ್ದ ಪಾಕಿಸ್ತಾನದ ಐಎಸ್‍ಐ ಏಜೆಂಟ್‍ಗಳ ಜೊತೆ ಅಧಿಕಾರಿ ಫೇಸ್‍ಬುಕ್ ನಲ್ಲಿ ಕೆಲ ತಿಂಗಳ ಹಿಂದೆ ಸ್ನೇಹ ಬೆಳೆಸಿಕೊಂಡಿದ್ದರು. ನಂತರ ವಾಟ್ಸಪ್‍ನಲ್ಲಿ ನಿರಂತರ ಚಾಟ್ ಮಾಡುತ್ತಿದ್ದರು. ಸಲಿಗೆಯ ಸಂದೇಶಗಳನ್ನ ವಿನಿಮಯ ಮಾಡಿಕೊಂಡಿದ್ದರು. ಏಜೆಂಟ್‍ಗಳು ಅಧಿಕಾರಿಯ ವಿಶ್ವಾಸ ಗಳಿಸಿದ ಬಳಿಕ, ಅಶ್ಲೀಲ ಫೋಟೋಗಳಿಗೆ ಬದಲಿಯಾಗಿ ರಹಸ್ಯ ಮಾಹಿತಿಯುಳ್ಳ ದಾಖಲೆಗಳನ್ನ ಅಧಿಕಾರಿಯಿಂದ ಪಡೆದಿದ್ದಾರೆ. ಅಧಿಕಾರಿ ಹಂಚಿಕೊಂಡ ಮಾಹಿತಿ ಸೈಬರ್ ವಾರ್ ಫೇರ್, ಸ್ಪೇಸ್ ಮತ್ತು ವಿಶೇಷ ಕಾರ್ಯಾಚರಣೆಗಳದ್ದಾಗಿದೆ ಎಂದು ವರದಿಯಾಗಿದೆ.

    ವಾಯುಪಡೆಯ ಹಿರಿಯ ಅಧಿಕಾರಿಯೊಬ್ಬರು ಕೆಲವು ವಾರಗಳ ಹಿಂದೆ ಈ ಬಗ್ಗೆ ಪತ್ತೆ ಮಾಡಿದ ನಂತರ ಆಂತರಿಕ ತನಿಖೆಗೆ ಆದೇಶಿಸಿದ್ದರು. ಇದರಲ್ಲಿ ಆರುಣ್ ಅವರ ಪಾತ್ರವಿರುವುದು ಸಾಬೀತಾದ ಬಳಿಕ ವಾಯುಪಡೆ ದೆಹಲಿ ಪೊಲೀಸರಿಗೆ ಮಾಹಿತಿ ನೀಡಿದೆ. 10 ದಿನಗಳ ವಿಚಾರಣೆಯ ಬಳಿಕ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪ್ರಕರಣವನ್ನ ಪೊಲೀಸರಿಗೆ ಹಸ್ತಾಂತರಿಸಿದೆ.

    ಗುರುವಾರ ಆರುಣ್ ರನ್ನು ಬಂಧಿಸಿರುವ ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ವಿಚಾರಣೆ ನಡೆಸಿದ ನ್ಯಾಯಾಲಯ, ಅರುಣ್ ಅವರನ್ನ 5 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದೆ. ಕಟ್ಟಡದೊಳಗೆ ಮೊಬೈಲ್ ಬಳಕೆ ನಿಷೇಧವಿದ್ದರೂ ಬಂಧನದ ವೇಳೆ ಅರುಣ್ ಮೊಬೈಲ್‍ನೊಂದಿಗೆ ಕಚೇರಿಯತ್ತ ಹೆಜ್ಜೆ ಹಾಕುತ್ತಿದ್ದರು. ಪಾಕಿಸ್ತಾನದ ಇನ್ನೂ ದೊಡ್ಡ ಬೇಹುಗಾರಿಕೆಯಲ್ಲಿ ಅರುಣ್ ಪಾತ್ರವಿದೆಯಾ ಎಂಬ ಬಗ್ಗೆ ವಾಯುಪಡೆಯ ಕೌಂಟರ್ ಇಂಟೆಲಿಜೆನ್ಸ್ ವಿಭಾಗ ಪರಿಶೀಲನೆ ನಡೆಸುತ್ತಿದೆ.

  • ಭಾರತೀಯ ವಾಯುಪಡೆಯ 85ನೇ ದಿನಾಚರಣೆ: ನೀವು ತಿಳಿಯಲೇಬೇಕಾದ ವಿಚಾರಗಳು ಇಲ್ಲಿವೆ

    ಭಾರತೀಯ ವಾಯುಪಡೆಯ 85ನೇ ದಿನಾಚರಣೆ: ನೀವು ತಿಳಿಯಲೇಬೇಕಾದ ವಿಚಾರಗಳು ಇಲ್ಲಿವೆ

    ನವದೆಹಲಿ: ದೇಶದ ರಕ್ಷಣೆಗೆ ಪ್ರತಿಕ್ಷಣ ಸಿದ್ಧವಾಗಿರುವ ರಕ್ಷಣಾ ವ್ಯವಸ್ಥೆಯಲ್ಲಿ ವಾಯು ಸೇನೆಯ ಪಾತ್ರ ಅತ್ಯಂತ ಮಹತ್ವದಾಗಿದೆ. ಭಾನುವಾರ ಭಾರತೀಯ ವಾಯುಪಡೆ ಸ್ಥಾಪನೆಯಾಗಿ 85 ವರ್ಷಗಳು ಕಳೆದಿರುವ ಸಂದರ್ಭದಲ್ಲಿ ವಾಯುಪಡೆ ಭಾರತ ರಕ್ಷಣಾ ಕ್ಷೇತ್ರದಲ್ಲಿ ಸಾಧಿಸಿರುವ ಮಹತ್ವ ಹಾಗೂ ಐತಿಹಾಸಿಕ ಹಿನ್ನೆಲೆ ತಿಳಿಸುವ ಪ್ರಮುಖ ಮಾಹಿತಿಗಳು ಇಲ್ಲಿದೆ.

    85ನೇ ವಾಯುಪಡೆಯ ದಿನಚಾರಣೆ ಪ್ರಯುಕ್ತ ವಿಶೇಷ ಏರ್‍ಶೋಗಳು ಮತ್ತು ಮಿಲಿಟರಿ ಪ್ಯಾರಡೆಸ್‍ಗಳನ್ನು ದೇಶಾದ್ಯಂತ ಇರುವ ಇಂಡಿಯಾನ್ ಏರ್‍ಫೋರ್ಸ್ (ಐಎಎಫ್) ನಿಲ್ದಾಣಗಳಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮ ಆಚರಣೆಯ ಮುಖ್ಯ ಸಮಾರಂಭವನ್ನು ಉತ್ತರ ಪ್ರದೇಶದ ಘಜಿಯಾಬಾದ್‍ನ ಭಾರತೀಯ ವಾಯುನೆಲೆಯಲ್ಲಿ ಆಯೋಜಿಸಲಾಗಿದೆ. ಈ ಸಮಾರಂಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ವಾಯುಪಡೆಯ ಸೈನಿಕರನ್ನು ಸ್ಮರಿಸಿ ಗೌರವ ನೀಡುವ ಕಾರ್ಯಕ್ರಮ ನಡೆಯುತ್ತವೆ.

    ಭಾರತೀಯ ವಾಯುಪಡೆ ದಿನಾಚರಣೆಯನ್ನು ಮೊಟ್ಟಮೊದಲು 1932ರಲ್ಲಿ ಅಕ್ಟೋಬರ್ 8 ರಂದು ಆರಂಭಿಸಲಾಯಿತು. 1933ರಲ್ಲಿ ಐಎಎಫ್‍ನ ಕೇವಲ 6 ಪರಿಣಿತ ಅಧಿಕಾರಿಗಳು ಹಾಗೂ 19 ಏರ್‍ಮೆನ್ ಸಿಬ್ಬಂದಿ ಸೇರಿದಂತೆ ನಾಲ್ಕು ವೆಸ್ಟ್ ಲ್ಯಾಂಡ್ ವಾಪಿಟ್ ಐಐಎ ವಿಮಾನಗಳನ್ನು ಮಾತ್ರಗಳನ್ನು ಹೊಂದಿತ್ತು. ಅಲ್ಲದೆ 1933 ಏಪ್ರಿಲ್ 1 ರಂದು ತನ್ನ ಮೊದಲ ಸ್ಕ್ವಾಡ್ರನ್ ವಿಮಾನವನ್ನು ಸಿದ್ಧಪಡಿಸಿತ್ತು.

    ಎರಡನೇ ವಿಶ್ವ ಯುದ್ಧದ ಆರಂಭದಲ್ಲಿ 16 ಅಧಿಕಾರಿಗಳು 662 ಸಿಬ್ಬಂದಿಯನ್ನು ಹೊಂದಿತ್ತು. ಯುದ್ಧ ಕೊನೆಗೊಂಡಾಗ ಐಎಎಫ್ ಸಾಮರ್ಥ್ಯ  28,500 ಕ್ಕೆ ಹೆಚ್ಚಳವಾಗಿತ್ತು. 1945ರ ಮಾರ್ಚ್‍ನಲ್ಲಿ ಐಎಎಫ್ ಸಾಧನೆಗಳನ್ನು ಪರಿಗಣಿಸಿ `ರಾಯಲ್’ ಎಂಬ ಬಿರುದನ್ನು ನೀಡಲಾಯಿತು.

    ರಾಯಲ್ ಇಂಡಿಯನ್ ಏರ್‍ಫೋರ್ಸ್(ಆರ್‍ಐಎಎಫ್) 1946ರಲ್ಲಿ ತನ್ನ ಮೊದಲ ಟ್ರಾನ್ಸ್ ಪೋರ್ಟ್ ವಿಭಾಗವನ್ನು ಪಡೆಯಿತು. 1950ರಲ್ಲಿ ಸರ್ಕಾರ ವಾಯು ಸೇನೆಯ ಹೆಸರಿನಲ್ಲಿದ್ದ ರಾಯಲ್ ಎಂಬ ಪದವನ್ನು ತೆಗೆದುಹಾಕಿತು. 1950 ನಂತರ ಐಎಎಫ್ ದೇಶದ ಪ್ರಮುಖ ನಾಲ್ಕು ಯುದ್ಧಗಳಲ್ಲಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಿದೆ

    ಇದರಲ್ಲಿ ಮೂರು ಯುದ್ಧಗಳು ಪಾಕಿಸ್ತಾನದ ವಿರುದ್ಧ ನಡೆದರೆ, ಒಂದು ಯುದ್ಧ ಚೀನಾ ವಿರುದ್ಧ ನಡೆದಿದೆ. ಯುದ್ಧಗಳನ್ನು ಹೊರತುಪಡಿಸಿ ಐಎಎಫ್ 1999ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಕಾರ್ಗಿಲ್ ಯುದ್ಧದಲ್ಲಿ `ಆಪರೇಷನ್ ವಿಜಯ್’ ಕಾರ್ಯಚರಣೆಯನ್ನು ಕೈಗೊಂಡಿತ್ತು. 1984 ರಲ್ಲಿ ಕಾಶ್ಮೀರದ ಸಿಯಾಚಿನ್‍ನಲ್ಲಿ ಪಾಕಿಸ್ತಾನದ ವಿರುದ್ಧ ಆಪರೇಷನ್ ಮೇಘದೂತ್ ಎಂಬ ಕಾರ್ಯಚರಣೆಯನ್ನು ಕೈಗೊಂಡಿತ್ತು. 1998ರಲ್ಲಿ ಮಾಲ್ಡೀವ್ಸ್‍ನಲ್ಲಿ ಉಂಟಾದ ಎಲ್‍ಟಿಟಿಇ ಪಡೆಗಳ ಸಂಘರ್ಷವನ್ನು ತಡೆಯಲು ಆಪರೇಷನ್ ಕ್ಯಾಕ್ಟಸ್, 1987 ರಲ್ಲಿ ಶ್ರೀಲಂಕಾದಲ್ಲಿ ಉಂಟಾದ ತಮಿಳ್ ಟೈಗರ್ ಉಗ್ರರನ್ನು ಸದೆಬಡೆಯಲು ಆಪರೇಷನ್ ಪೂಮಾಲೈ ಕಾರ್ಯಚರಣೆಯನ್ನು ಕೈಗೊಂಡಿತ್ತು.

    ಅಲ್ಲದೇ ದೇಶದಲ್ಲಿ ಉಂಟಾಗುವ ಪ್ರಕೃತಿ ವಿಕೋಪಗಳ ಸಮಯದಲ್ಲಿ, ಭಯೋತ್ಪಾದಕ ದಾಳಿ ಮತ್ತು ಗಲಭೆಗಳು ನಡೆದಾಗ ರಕ್ಷಣಾ ಕಾರ್ಯಚಾರಣೆಯನ್ನು ಕೈಗೊಳ್ಳುತ್ತದೆ. ವಿಶ್ವಸಂಸ್ಥೆಯು 1961-1962ರಲ್ಲಿ ವಾಯುಸೇನೆಯನ್ನು ಕಾಂಗೋ ಶಾಂತಿ ಪಾಲನಾ ಪಡೆಯನ್ನಾಗಿ ಕಳುಹಿಸಿತ್ತು.

     

  • ಭಾರತೀಯ ವಾಯುಪಡೆಯ ಮೊದಲ ಏರ್ ಮಾರ್ಷಲ್ ಅರ್ಜನ್ ಸಿಂಗ್ ವಿಧಿವಶ

    ಭಾರತೀಯ ವಾಯುಪಡೆಯ ಮೊದಲ ಏರ್ ಮಾರ್ಷಲ್ ಅರ್ಜನ್ ಸಿಂಗ್ ವಿಧಿವಶ

    ನವದೆಹಲಿ: ಅಪ್ರತಿಮ ಸಾಧನೆ ಮೆರೆದ ಭಾರತೀಯ ವಾಯುಪಡೆಯ ಮಾರ್ಷಲ್ ಅರ್ಜನ್ ಸಿಂಗ್ (98) ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾಗಿದ್ದಾರೆ.

    ಇಂದು ಬೆಳಗ್ಗೆ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅರ್ಜುನ್ ಸಿಂಗ್ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರ್ಷಲ್ ಅರ್ಜನ್ ಸಿಂಗ್ 1965ರ ಭಾರತ- ಪಾಕಿಸ್ತಾನ ಯುದ್ಧದಲ್ಲಿ ಅಪ್ರತಿಮ ಸಾಧನೆಯನ್ನು ಮೆರೆದಿದ್ದರು. ಭಾರತೀಯ ವಾಯುಪಡೆಯ ಮೊದಲ ಸರ್ವಶ್ರೇಷ್ಠ ಮಾರ್ಷಲ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

    ಅರ್ಜನ್ ಸಿಂಗ್ ಆಸ್ಪತ್ರೆಗೆ ದಾಖಲಾಗುತ್ತಿದ್ದಂತೆ ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ವಾಯುಪಡೆ ಮುಖ್ಯಸ್ಥ ಬಿಎಸ್ ಧನೋಯಾ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. 1965 ರ ಯುದ್ಧದಲ್ಲಿ ಭಾರತೀಯ ವಾಯುಪಡೆಯ ನೇತೃತ್ವವಹಿಸಿದ್ದ ಸಿಂಗ್ ಅವರು, ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

  • ಚೀನಾ ಗಡಿಯ ಬಳಿ ವಾಯುಸೇನೆಯ ಸುಖೋಯ್-30 ಯುದ್ಧ ವಿಮಾನ ನಾಪತ್ತೆ

    ಚೀನಾ ಗಡಿಯ ಬಳಿ ವಾಯುಸೇನೆಯ ಸುಖೋಯ್-30 ಯುದ್ಧ ವಿಮಾನ ನಾಪತ್ತೆ

    ನವದೆಹಲಿ: ಭಾರತೀಯ ವಾಯುಸೇನೆಗೆ ಸೇರಿದ ಯುದ್ಧ ವಿಮಾನ ಸುಖೋಯ್-30 ನಾಪತ್ತೆಯಾಗಿದೆ.

    ಇಂದು ಬೆಳಿಗ್ಗೆ ಅಸ್ಸಾಂನ ತೇಜ್‍ಪುರ್ ಬಳಿ ಚೀನಾ ಗಡಿಯ ಸಮೀಪ ಹಾರಾಟ ನಡೆಸುತ್ತಿದ್ದ ವೇಳೆ ವಿಮಾನ ನಾಪತ್ತೆಯಾಗಿದೆ. ಬೆಳಿಗ್ಗೆ 9.30ಕ್ಕೆ ಟೇಕ್ ಆಫ್ ಆದ ವಿಮಾನ ಅರುಣಾಚಲಪ್ರದೇಶದ ದೌಲಾಸಾಂಗ್ ಪ್ರದೇಶದ ಬಳಿ ವಿಮಾನ ಕಾಣೆಯಾಗಿದೆ. ವಿಮಾನ ಕೊನೆಯ ಬಾರಿ ಸಂಪರ್ಕಕ್ಕೆ ಸಿಕ್ಕಿದ್ದು ಸುಮಾರು 11.30ರ ವೇಳೆಗೆ ತೇಜ್‍ಪುರ್‍ನಿಂದ 60 ಕಿ.ಮೀ ದೂರದಲ್ಲಿದ್ದಾಗ ಎಂದು ವರದಿಯಾಗಿದೆ.

    ವಿಮಾನದಲ್ಲಿ ಇಬ್ಬರು ಪೈಲಟ್‍ಗಳಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ತೇಜ್‍ಪುರ್ ವಾಯುಪಡೆ ನಿಲ್ದಾಣ ಚೀನಾ ಗಡಿಯಿಂದ ಸುಮಾರು 172 ಕಿ.ಮೀ ದೂರದಲ್ಲಿದೆ.

    ಇದೇ ವರ್ಷ ಮಾರ್ಚ್ ನಲ್ಲಿ ಸುಖೋಯ್-30 ಯುದ್ಧವಿಮಾನ ರಾಜಸ್ಥಾನದ ಬರ್ಮರ್ ವಾಯುನೆಲೆ ಬಳಿ ಅಪಘಾತಕ್ಕೀಡಾಗಿತ್ತು. ವಿಮಾನದಲ್ಲಿದ್ದ ಇಬ್ಬರು ಪೈಲೆಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದರು.

    ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

  • ಯಾವುದೇ ಸಮಯದಲ್ಲಿ ಯುದ್ಧ ನಡೆಯಬಹುದು, ಎಲ್ಲದಕ್ಕೂ ಸಿದ್ಧವಾಗಿರಿ: ಏರ್ ಚೀಫ್ ಮಾರ್ಷಲ್ ಪತ್ರ

    ಯಾವುದೇ ಸಮಯದಲ್ಲಿ ಯುದ್ಧ ನಡೆಯಬಹುದು, ಎಲ್ಲದಕ್ಕೂ ಸಿದ್ಧವಾಗಿರಿ: ಏರ್ ಚೀಫ್ ಮಾರ್ಷಲ್ ಪತ್ರ

    ನವದೆಹಲಿ: ಯಾವುದೇ ಕ್ಷಣದಲ್ಲಿ ಯುದ್ಧ ಎದುರಾಗುವ ಸಾಧ್ಯತೆ ಇದ್ದು ನೀವೆಲ್ಲರೂ ಸಿದ್ಧವಾಗಿರಿ ಎಂದು ಏರ್ ಚೀಫ್ ಮಾರ್ಷಲ್ ಬಿಎಸ್ ಧನೋವಾ ವಾಯುಪಡೆಯ ಪ್ರತಿಯೊಬ್ಬ ಅಧಿಕಾರಿಗೆ ವೈಯಕ್ತಿಕ ಪತ್ರ ಬರೆದಿದ್ದಾರೆ.

    ಈಗ ಇರುವ ಪರಿಸ್ಥಿತಿಯನ್ನು ಅವಲೋಕಿಸಿದರೆ, ನೆರೆ ರಾಷ್ಟ್ರಗಳ ಬಾಹ್ಯ ಬೆದರಿಕೆಯನ್ನು ನಾವು ಎದುರಿಸುತ್ತಿದ್ದೇವೆ. ಹೀಗಾಗಿ ಯಾವುದೇ ಸಮಯದಲ್ಲೂ ಕಾರ್ಯಾಚರಣೆ ನಡೆಸಲು ಸಿದ್ಧವಾಗಿರಿ ಎಂದು ಪತ್ರದಲ್ಲಿ ಬರೆದಿದ್ದಾರೆ.

    ವಾಯು ಸೇನೆಯ 12 ಸಾವಿರ ಅಧಿಕಾರಿಗಳಿಗೆ ಈ ಪತ್ರವನ್ನು ತಲುಪಿಸಲಾಗಿದೆ. ಈ ಪತ್ರದಲ್ಲಿ ನೆರೆ ರಾಷ್ಟ್ರಗಳಿಂದ ಭಾರತ ಎದುರಿಸುತ್ತಿರುವ ಯುದ್ಧ ಭಯವನ್ನು ಬಿಎಸ್ ಧನೋವಾ ಉಲ್ಲೇಖಿಸಿದ್ದಾರೆ. ಅಷ್ಟೇ ಅಲ್ಲದೇ ಈ ವಿಚಾರದಲ್ಲಿ ತರಬೇತಿಯನ್ನು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ವಾಯುಸೇನೆಯ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಈ ರೀತಿಯ ಪತ್ರ ಬರೆಯಲಾಗಿದೆ. ಈ ಮೊದಲು ಮೇ 1, 1950ರಲ್ಲಿ ಜನರಲ್ ಕಾರ್ಯಪ್ಪ ಮತ್ತು ಫೆಬ್ರವರಿ 1,1986ರಲ್ಲಿ ಜನರಲ್ ಸುಂದರ್ಜಿ ಎಲ್ಲ ಅಧಿಕಾರಿಗಳಿಗೆ ಪತ್ರ ಬರೆದಿದ್ದರು.

    ಈ ವಿಚಾರದ ಬಗ್ಗೆ ವಾಯುಸೇನೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಆಂತರಿಕ ಸಂವಹನಕ್ಕಾಗಿ ಈ ಪತ್ರ ಬರೆಯಲಾಗಿದೆ ಎಂದು ಹೇಳಿ ಈ ಪತ್ರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.