Tag: air force

  • ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನ ಅವಶೇಷಗಳು ಪತ್ತೆ

    ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನ ಅವಶೇಷಗಳು ಪತ್ತೆ

    ನವದೆಹಲಿ: ಕಳೆದ 8 ದಿನಗಳ ಹಿಂದೆ ನಾಪತ್ತೆಯಾಗಿದ್ದ ವಾಯುಸೇನೆಯ ಎಎನ್-32 ವಿಮಾನದ ಅವಶೇಷಗಳು ಪತ್ತೆಯಾಗಿರುವ ಮಾಹಿತಿ ವಾಯುಸೇನೆಯಿಂದ ತಿಳಿದು ಬಂದಿದೆ.

    ಏರ್ ಫೋರ್ಸ್ ನ ಮಿಗ್-17 ಹೆಲಿಕಾಪ್ಟರ್ ಗಳು ವಿಮಾನದ ಪತ್ತೆಗಾಗಿ ಹುಡುಕಾಟ ನಡೆಸಿದ್ದು, ಈ ವೇಳೆ ವಿಮಾನದ ಅವಶೇಷ ಅರುಣಾಚಲ ಪ್ರದೇಶದ ಉತ್ತರ ಲಿಪೋ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಕುರಿತು ವಾಯುಸೇನೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ನೀಡಿದೆ. ಅಲ್ಲದೇ ಸುತ್ತಮುತ್ತಲಿನ ಪ್ರದೇಶದಲ್ಲಿ ಹೆಚ್ಚಿನ ಹುಡುಕಾಟವನ್ನು ಮುಂದುವರಿಸಲಾಗಿದೆ ಎಂದು ಮಾಹಿತಿ ನೀಡಿದೆ.

    ಎಎನ್-32 ವಿಮಾನ ಜೂನ್ 03 ರಂದು ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆನಚುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ಈ ವೇಳೆ ವಿಮಾನದಲ್ಲಿ ಎಂಟು ಸಿಬ್ಬಂದಿ ಸೇರಿದಂತೆ ಐವರು ಪ್ರಯಾಣಿಕರು ವಿಮಾನದಲ್ಲಿದ್ದರು.

    ವಿಮಾನ ನಾಪತ್ತೆಯಾದ ಬಳಿಕ ಭಾರತ ಭೂಸೇನೆ, ವಾಯುಸೇನೆ, ಸಿ-130ಜೆ ಹಾಗೂ ಮಿಗ್ 17 ಹೆಲಿಕಾಪ್ಟರ್ ಗಳನ್ನು ಬಳಕೆ ಮಾಡಿ ಕಾರ್ಯಾಚರಣೆ ನಡೆಸಿತ್ತು. ಸದ್ಯ ವಾಯುಸೇನೆ ವಿಮಾನದಲ್ಲಿದ್ದ ಪ್ರಯಾಣಿಕರ ಬಗ್ಗೆ ಯಾವುದೇ ಸ್ಪಷ್ಟನೆಯನ್ನ ನೀಡಿಲ್ಲ. ನಾಪತ್ತೆಯಾಗಿರುವ ಬಗ್ಗೆ ಅವರ ಕುಟುಂಬ ಸದಸ್ಯರು ಮಾಹಿತಿ ಪಡೆಯಲು ಕಾದುಕುಳಿತ್ತಿದ್ದಾರೆ. ಶನಿವಾರವಷ್ಟೇ ವಾಯುಸೇನೆ ನಾಪತ್ತೆಯಾದ ವಿಮಾನ ಬಗ್ಗೆ ಮಾಹಿತಿ ನೀಡಿದರೆ 5 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು.

  • ವಿಮಾನ ನಾಪತ್ತೆಯಾಗಿ 7 ದಿನ-ಸುಳಿವು ನೀಡಿದವರಿಗೆ ಬಹುಮಾನ

    ವಿಮಾನ ನಾಪತ್ತೆಯಾಗಿ 7 ದಿನ-ಸುಳಿವು ನೀಡಿದವರಿಗೆ ಬಹುಮಾನ

    ನವದೆಹಲಿ: ಕಳೆದ ಏಳು ದಿನದಿಂದ ನಾಪತ್ತೆಯಾಗಿರುವ ವಾಯುಸೇನೆಯ ಎಎನ್-32 ವಿಮಾನ ಇದುವರೆಗೂ ಪತ್ತೆಯಾಗಿಲ್ಲ. ಈ ಸಂಬಂಧ ವಿಮಾನದ ಸುಳಿವು ನೀಡಿ ದವರಿಗೆ 5 ಲಕ್ಷ ರೂ. ಹಣವನ್ನು ಬಹುಮಾನವಾಗಿ ನೀಡಲಾಗುವುದು ಎಂದು ಏರ್ ಮಾರ್ಷಲ್ ಆರ್.ಡಿ. ಮಾಥೂರ್ ಘೋಷಣೆ ಮಾಡಿದ್ದಾರೆ.

    ಎಎನ್-32 ಜೂನ್ 3ರಂದು ಅಸ್ಸಾಂನ ಜೋರಹಾಟ್ ವಾಯುನೆಲೆಯಿಂದ ಟೇಕಾಫ್ ಆಗಿತ್ತು. ಅರುಣಾಚಲ ಪ್ರದೇಶದ ಮೆನಚುಕಾ ಏರ್ ಫೀಲ್ಡ್ ನಿಂದ ಎತ್ತರಕ್ಕೆ ಹಾರುತ್ತಿದ್ದಂತೆ ವಿಮಾನ ಸಂಪರ್ಕ ಕಳೆದುಕೊಂಡಿತ್ತು. ನೆರೆಯ ಚೀನಾ ಗಡಿ ಸಮೀಪವೇ ವಿಮಾನ ಸಂಪರ್ಕ ಕಳೆದುಕೊಂಡಿದ್ದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಸಂಪರ್ಕ ಕಳೆದುಕೊಂಡಿರುವ ವಿಮಾನದಲ್ಲಿ ಎಂಟು ಜನ ಸಿಬ್ಬಂದಿ ಸೇರಿದಂತೆ ಐವರು ಪ್ರಯಾಣಿಸುತ್ತಿದ್ದರು.

    ವಿಮಾನದ ಸುಳಿವು ನೀಡಿದ ವ್ಯಕ್ತಿ ಅಥವಾ ತಂಡಕ್ಕೆ 5 ಲಕ್ಷ ರೂ. ಬಹುಮಾನ ಸಿಗಲಿದೆ. ಸುಳಿವು ಸಿಕ್ಕಲ್ಲಿ 0378-3222164, 9436499477, 9402077267, 9402132477 ಈ ನಂಬರ್ ಗಳಿಗೆ ಸಂಪರ್ಕಿಸಬೇಕು. ವಾತಾವರಣದ ಏರುಪೇರು ನಡುವೆಯೂ ಭೂ ಸೇನೆ, ವಾಯು ಸೇನೆ, ಸಿ-130ಜೆ, ಹೆಲಿಕಾಪ್ಟರ್ ಸಹಾಯದೊಂದಿಗೆ ಕಾಣೆಯಾಗಿರುವ ವಿಮಾನಕ್ಕಾಗಿ ಹುಡುಕಾಟ ನಡೆಸಿದ್ದೇವೆ. ಸಿಯಾಂಗ್ ಜಿಲ್ಲೆಯ ಸುಮಾರು 2500 ಕಿ.ಮೀ. ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದೆ ಎಂದು ವಾಯುಸೇನೆಯ ವಕ್ತಾರ ವಿಂಗ್ ಕಮಾಂಡರ್ ರತ್ನಾಕರ್ ಸಿಂಗ್ ತಿಳಿಸಿದ್ದಾರೆ.

    ಭೂ ಮಾರ್ಗದಲ್ಲಿ ಹುಡುಕಾಟ ನಡೆಸುತ್ತಿರುವ ಸಿಬ್ಬಂದಿ ವಿಮಾನ ಪತನ ಹೊಂದಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಇದುವರೆಗೂ ಸಿಬ್ಬಂದಿಗೆ ವಿಮಾನದ ಅವಶೇಷಗಳು ಲಭ್ಯವಾಗಿಲ್ಲ. ಹೀಗಾಗಿ ವಿಮಾನ ಹುಡುಕಾಟದ ಕಾರ್ಯ ಮುಂದುವರಿದಿದೆ. ಉಪಗ್ರಹಗಳ ಮೂಲಕ ಕಾರ್ಯಾಚರಣೆ ನಡೆದಿದೆ ಎಂದು ವರದಿಯಾಗಿದೆ.

    ಎಎನ್ 32 ರಷ್ಯಾದ ಟ್ವಿನ್ ಟರ್ಬೋಪ್ರೊಪ್ ಎಂಜಿನ್ ಹೊಂದಿದ್ದು, 1983 ರಲ್ಲಿ ವಾಯುಸೇನೆಗೆ ಸೇರ್ಪಡೆಗೊಂಡಿತ್ತು. ನಾಪತ್ತೆಯಾದ ವಿಮಾನದ ದಾರಿ ಬಹಳ ಕಠಿಣವಾಗಿದ್ದು, ಬೆಟ್ಟ ಗುಡ್ಡ ಮತ್ತು ಭಾರೀ ಅರಣ್ಯವಿದೆ. ಮೆಚುಕಾ ವಾಯುನೆಲೆಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡುವುದು ಬಹಳ ಕಷ್ಟ ಎಂದು ವರದಿಯಾಗಿದೆ.

    2016ರಲ್ಲಿ ವಾಯುಸೇನೆ ಎಎನ್ 32 ವಿಮಾನ ಪತನಗೊಂಡಿತ್ತು. ಅಂಡಮಾನ್ ನಿಕೋಬಾರ್ ದ್ವೀಪಕ್ಕೆ ತೆರಳಲು ಚೆನ್ನೈ ನಿಂದ ಟೇಕಾಫ್ ಆಗಿದ್ದ ವಿಮಾನ ನಾಪತ್ತೆಯಾಗಿತ್ತು. ಬಂಗಾಳ ಕೊಲ್ಲಿಯಲ್ಲಿ ವಿಮಾನ ಹುಡುಕುವ ಕಾರ್ಯಾಚರಣೆ ನಡೆದರೂ ಯಾವುದೇ ಅವಶೇಷ ಸಿಕ್ಕಿರಲಿಲ್ಲ. ವಿಮಾನದಲ್ಲಿದ್ದ ಎಲ್ಲ 29 ಮಂದಿ ಮೃತಪಟ್ಟಿದ್ದಾರೆ ಎಂದು ಘೋಷಣೆ ಮಾಡಲಾಗಿತ್ತು.

  • ನಾಪತ್ತೆಯಾಗಿರುವ ಮಗನನ್ನು ಪತ್ತೆ ಹಚ್ಚಲು ಹೊರಟ ತಂದೆ

    ನಾಪತ್ತೆಯಾಗಿರುವ ಮಗನನ್ನು ಪತ್ತೆ ಹಚ್ಚಲು ಹೊರಟ ತಂದೆ

    ನವದೆಹಲಿ: ನಾಪತ್ತೆಯಾಗಿರುವ ವಾಯುಸೇನೆ ವಿಮಾನದಲ್ಲಿದ್ದ ಫ್ಲೈಟ್ ಲೆಫ್ಟಿನೆಂಟ್ ಶೀಘ್ರವೇ ಮನೆಗೆ ಮರಳುತ್ತಾನೆ ಎನ್ನುವ ನಿರೀಕ್ಷೆಯಲ್ಲಿ ಕುಟುಂಬದ ಸದಸ್ಯರು ಈಗ ದಿನದೂಡುತ್ತಿದ್ದಾರೆ.

    13 ಜನರನ್ನು ಹೊತ್ತ ಭಾರತೀಯ ವಾಯುಪಡೆಯ ಎಎನ್-32 ವಿಮಾನ ಸೋಮವಾರ ಮಧ್ಯಾಹ್ನ ಕಾಣೆಯಾಗಿತ್ತು. ಈ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಪಂಜಾಬ್‍ನ ಪಟಿಯಾಲ ಜಿಲ್ಲೆಯ ಮೋಹಿತ್ ಗಾರ್ಗ್ ಅವರು ಭಾರತೀಯ ವಾಯುಪಡೆಯಲ್ಲಿ ಫ್ಲೈಟ್ ಲೆಫ್ಟಿನೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

    ಮೋಹಿತ್ ಅವರ ತಾಯಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಕಾರಣ ಮಗ ಕಾಣೆಯಾಗಿರುವ ವಿಚಾರವನ್ನು ಕುಟುಂಬದ ಸದಸ್ಯರು ತಾಯಿಗೆ ಇಲ್ಲಿಯವರೆಗೆ ತಿಳಿಸಿಲ್ಲ. ಮೋಹಿತ್ ಅವರು ಐದು ವರ್ಷದಿಂದ ಅಸ್ಸಾಂ ರಾಜ್ಯದ ಜೋರ್ಹತ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.

    ಕಳೆದ ವರ್ಷ ಅಸ್ತ ಗಾರ್ಗ್ ಅವರನ್ನು ಮೋಹಿತ್ ಮದುವೆಯಾಗಿದ್ದರು. ಕೊನೆಯದಾಗಿ ದೀಪಾವಳಿ ಹಬ್ಬದ ಸಮಯದಲ್ಲಿ ಮನೆಗೆ ಬಂದಿದ್ದ ಮೋಹಿತ್ ನಂತರ ಬಂದಿರಲಿಲ್ಲ.

    ಈಗ ಮಗನನ್ನು ಹುಡುಕಲು ತಂದೆ ಸುರೇಂದ್ರಪಾಲ್ ಗಾರ್ಗ್ ಜೋರ್ಹತ್‍ಗೆ ಹೋಗಿದ್ದಾರೆ. ನನಗೆ ನನ್ನ ಮಗ ವಾಪಸ್ ಬೇಕು. ಮೋಹಿತ್ ಸಿಗುವ ತನಕ ಹುಡುಕುತ್ತೇನೆ. ನಾನು ಇದನ್ನು ಬಿಟ್ಟರೆ ಈಗ ಬೇರೆ ಏನೂ ಹೇಳುವುದಿಲ್ಲ. ನನ್ನ ಮಗನ ಬಗ್ಗೆ ಯಾವ ಮಾಹಿತಿಯೂ ಸಿಕ್ಕಿಲ್ಲ. ನನಗೆ ನನ್ನ ಮಗ ವಾಪಸ್ ಬೇಕು ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಮೋಹಿತ್ ಅವರ ಹಿರಿಯ ಸಹೋದರ ಆಶ್ವಿನ್, ಈ ರೀತಿಯ ಘಟನೆ ಮುಂದೆ ನಡೆಯಬಾರದು. ನಮ್ಮ ಸೇನೆಗೆ ನೀಡುವ ಉಪಕರಣಗಳು ಆಧುನಿಕವಾಗಿರಬೇಕು ಮತ್ತು ಸಮಯಕ್ಕೆ ತಕ್ಕಂತೆ ನವೀಕರಣವಾಗಿರಬೇಕು. ಈ ದೇಶವನ್ನು ರಕ್ಷಿಸುವ ಸೈನಿಕರನ್ನು ಸುರಕ್ಷಿತವಾಗಿ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಹೇಳಿದರು.

    ಮೂರು ದಿನ ಕಳೆದರೂ ಯಾವುದೇ ಮಾಹಿತಿ ಸಿಗದ ಕಾರಣ ಅವರ ಚಿಕ್ಕಪ್ಪ ರಿಷಿಪಾಲ್ ಗಾರ್ಗ್ ಅವರು ಮೋಹಿತ್ ಪತ್ನಿ ಅಸ್ತ ಗಾರ್ಗ್ ಅವರನ್ನು ಕರೆದುಕೊಂಡು ಜೋರ್ಹತ್ ಹೋಗಿದ್ದಾರೆ. ಏನಾದರೂ ಪವಾಡ ನಡೆದು ತಮ್ಮ ಮಗ ಮನೆಗೆ ವಾಪಸ್ ಬರಲಿ ಎಂದು ಕುಟುಂಬದ ಸದಸ್ಯರು ಈಗ ದೇವರನ್ನು ಬೇಡಿಕೊಳ್ಳುತ್ತಿದ್ದಾರೆ.

    ಭಾರತೀಯ ವಾಯು ಪಡೆಯ ಸರಕು ಸಾಗಾಟ ವಿಮಾನದಲ್ಲಿ 8 ಮಂದಿ ಸಿಬ್ಬಂದಿ ಮತ್ತು 5 ಮಂದಿ ಪ್ರಯಾಣಿಕರಿದ್ದರು. ಅರುಣಾಚಲ ಪ್ರದೇಶದ ಮೆಚುಕಾ ವಾಯುನೆಲೆಯಿಂದ ಸೋಮವಾರ ಮಧ್ಯಾಹ್ನ 12.25ಕ್ಕೆ ಟೇಕಾಫ್ ಆಗಿದ್ದ ವಿಮಾನ 35 ನಿಮಿಷಗಳ ಕಾಲ ಸಂಪರ್ಕದಲ್ಲಿತ್ತು. ಆದರೆ ಮಧ್ಯಾಹ್ನ 1 ಗಂಟೆಯ ವೇಳೆ ಸಂಪರ್ಕ ಕಳೆದುಕೊಂಡಿದೆ. ಮೂರು ದಿನಗಳಿಂದಲೂ ವಿಮಾನಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

  • ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ

    ಪಾಕಿನಿಂದ ಹಾರಿ ಬಂದ ವಿಮಾನವನ್ನು ಬಲವಂತವಾಗಿ ಇಳಿಸಿದ ವಾಯುಸೇನೆ

    ನವದೆಹಲಿ: ಪಾಕಿಸ್ತಾನದಿಂದ ಹಾರಿ ಬಂದ ಜಾರ್ಜಿಯದ ಸರಕು ಸಾಗಾಣೆ ವಿಮಾನವನ್ನು ಭಾರತೀಯ ವಾಯುಸೇನೆ ಬಲವಂತವಾಗಿ ಇಳಿಸಿದ ಘಟನೆ ಜೈಪುರದಲ್ಲಿ ನಡೆದಿದೆ.

    ಜಾರ್ಜಿಯಾದ ಆಂಟೋನೋವ್ ಎಎನ್-12 ಹೆಸರಿನ ಬೃಹತ್ ಸರಕು ವಿಮಾನವು ಟಿಬಿಲಿಸಿಯಿಂದ ಕರಾಚಿ ಮಾರ್ಗವಾಗಿ ದೆಹಲಿಯಲ್ಲಿ ಇಳಿಯಬೇಕಿತ್ತು. ಆದರೆ ಏರ್ ಟ್ರಾಫಿಕ್ ಸರ್ವಿಸಸ್(ಎಟಿಎಸ್) ನೀಡಿದ್ದ ಅಧಿಕೃತ ಮಾರ್ಗವನ್ನು ಬದಲಾಯಿಸಿ ಶುಕ್ರವಾರ ಮಧ್ಯಾಹ್ನ 3:30 ವೇಳೆಗೆ ಗುಜರಾತಿನ ಕಛ್ ವಾಯು ನೆಲೆಯನ್ನು ವಿಮಾನ ಪ್ರವೇಶಿಸಿತ್ತು.

    70 ಕಿ.ಮೀ ದೂರದಲ್ಲಿ ಭಾರತದ ವಾಯುಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ ಕೂಡಲೇ ಭಾರತದ ವಾಯುಪಡೆ ಕೂಡಲೇ ಜಾಗೃತಗೊಂಡಿತ್ತು. ನಿಯಂತ್ರಣ ಕೊಠಡಿಗಳಿಂದ ರೇಡಿಯೊ ಕರೆಗಳನ್ನು ಮಾಡಿದರೂ ವಿಮಾನದ ಪೈಲಟ್ ಯಾವುದೇ ಪ್ರತಿಕ್ರಿಯೆ ನೀಡದೇ ಮುನ್ನುಗ್ಗಿಸುತ್ತಿದ್ದ.

    ವಿಮಾನದಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಉತ್ತರ ಭಾರತದ್ಯಾಂತ ಅಲರ್ಟ್ ಘೋಷಿಸಲಾಯಿತು. ಕೂಡಲೇ ರಾಜಸ್ಥಾನ ಜೋಧ್‍ಪುರ ಮತ್ತು ಉತ್ತರ ಪ್ರದೇಶದಲ್ಲಿರುವ ರಾಯ್‍ಬರೇಲಿ ವಾಯು ನೆಲೆಯಿಂದ ಎರಡು ಸುಖೋಯ್ ಯುದ್ಧ ವಿಮಾನಗಳನ್ನು ಕಳುಹಿಸಿ 27 ಸಾವಿರ ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದ ಕಾರ್ಗೋ ವಿಮಾನವನ್ನು ಬಲವಂತವಾಗಿ ಸಂಜೆ 4:30ಕ್ಕೆ ಜೈಪುರದಲ್ಲಿ ಇಳಿಸಲಾಯಿತು.

    ವಿಮಾನ ಲ್ಯಾಂಡ್ ಆಗುತ್ತಿದ್ದಂತೆ ಇಬ್ಬರು ಪೈಲಟ್, ಆರು ಸಿಬ್ಬಂದಿಯನ್ನು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ ಅಧಿಕಾರಿಗಳು, ಗುಪ್ತಚರ ದಳದ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.  ವಿಮಾನ ವಾಯು ಮಾರ್ಗವನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಬಲವಂತವಾಗಿ ಇಳಿಸಿಲಾಗಿತ್ತು. ಇದು ಗಂಭೀರವಾದ ಉಲ್ಲಂಘನೆ ಅಲ್ಲ. ವಿಚಾರಣೆ ಬಳಿಕ  ಸಿಬ್ಬಂದಿಯನ್ನು ಬಿಡುಗಡೆ ಮಾಡಲಾಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಒಂದು ವೇಳೆ ವಿಮಾನ ಜೈಪುರದಲ್ಲಿ ಲ್ಯಾಂಡ್ ಆಗದೇ ಇದ್ದರೆ ಯುದ್ಧ ವಿಮಾನಗಳು ಸರಕು ವಿಮಾನವನ್ನು ಹೊಡೆದು ಉರುಳಿಸಲು ಮುಂದಾಗಿತ್ತು.

  • ಪ್ರಚಂಡ ಫೋನಿಗೆ ಐವರು ಬಲಿ, ತರಗೆಲೆಯಂತಾದ ಮರಗಳು – ವಿಡಿಯೋ ನೋಡಿ

    ಪ್ರಚಂಡ ಫೋನಿಗೆ ಐವರು ಬಲಿ, ತರಗೆಲೆಯಂತಾದ ಮರಗಳು – ವಿಡಿಯೋ ನೋಡಿ

    – 15 ಜಿಲ್ಲೆಗಳ 12 ಲಕ್ಷ ಮಂದಿ ಸ್ಥಳಾಂತರ
    – 10 ಸಾವಿರ ಗ್ರಾಮದ ಮೇಲೆ ಪರಿಣಾಮ

    ಭುವನೇಶ್ವರ: ನಿರೀಕ್ಷೆಯಂತೆ ಫೋನಿ ಚಂಡ ಮಾರುತ ಇಂದು ಬೆಳಗ್ಗೆ 9 ಗಂಟೆಯ ವೇಳೆ ಪುರಿ ಸಮುದ್ರ ತೀರಕ್ಕೆ ಅಪ್ಪಳಿಸಿದೆ. ಗಂಟೆಗೆ 170ರಿಂದ 180 ಕಿಲೋ ಮೀಟರ್, ಗರಿಷ್ಠ 200 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಮಳೆಯಾಗುತ್ತಿದೆ. ಒಡಿಶಾ, ಪಶ್ಚಿಮ ಬಂಗಾಳದಲ್ಲಿ ಈಗಾಗಲೇ ಹೈ ಅಲರ್ಟ್ ಘೋಷಣೆಯಾಗಿದ್ದು, 5 ಮಂದಿ ಮೊದಲ ದಿನವೇ ಬಲಿಯಾಗಿದ್ದಾರೆ.

    ಪ್ರಚಂಡ ಬಿರುಗಾಳಿಗೆ ತರಗೆಲೆಯಂತಾದ ಮರಗಳು, ಕರೆಂಟ್ ಕಂಬಗಳು ಪುರಿ ರಸ್ತೆಗೆ ಉರುಳಿ ಬಿದ್ದಿವೆ. ಇನ್ನೂ ಸಣ್ಣ ಪುಟ್ಟ ವಸ್ತುಗಳೆಲ್ಲಾ ಆಗಸದಲ್ಲಿ ಹಾರುತ್ತಿವೆ. ಸುಮಾರು 10 ಸಾವಿರ ಗ್ರಾಮಗಳಲ್ಲಿ ಫೋನಿ ಎಫೆಕ್ಟ್ ಆಗುತ್ತಿದೆ. ಸಮುದ್ರದಲ್ಲಿ ರಕ್ಕಸ ಗಾತ್ರದ ಅಲೆಗಳು ಏಳುತ್ತಿದೆ.

    ಮುನ್ನೆಚ್ಚರಿಕಾ ಕ್ರಮವಾಗಿ ಸಮುದ್ರ ತೀರದಲ್ಲಿರುವ 15 ಜಿಲ್ಲೆಗಳ ಸುಮಾರು 12 ಲಕ್ಷ ಜನರನ್ನು ಸ್ಥಳಾಂತರ ಮಾಡಲಾಗಿದೆ. ಜನರು ರಸ್ತೆಯಲ್ಲಿ ಓಡಾಡಲು ಸಾಧ್ಯವಾಗದೇ ಒಬ್ಬೊಬ್ಬರ ಕೈಯನ್ನು ಹಿಡಿದುಕೊಂಡು ತಮ್ಮ ಮನೆಗೆ ಸೇರಿಕೊಳ್ಳುತ್ತಿದ್ದಾರೆ.

    ರಣಭೀಕರ ಬಿರುಗಾಳಿಗೆ ಧಾರಾಕಾರ ಮಳೆಯಾಗುತ್ತಿದ್ದು, ಕಬ್ಬಿಣದ ವಸ್ತುಗಳು, ಮರಗಳು ಸುಲಭವಾಗಿ ತೇಲಿಕೊಂಡು ಹೋಗುತ್ತಿದೆ. 1999ರ ನಂತರ ಒಡಿಶಾದಲ್ಲಿ ಇಷ್ಟೊಂದು ಪ್ರಮಾಣದ ಗಾಳಿಯೊಂದಿಗೆ ಮಳೆಯಾಗುತ್ತಿದೆ ಎಂದು ಅಲ್ಲಿನ ಜನತೆ ಪ್ರತಿಕ್ರಿಯೆ ನೀಡಿದ್ದಾರೆ.

    ಒಡಿಶಾ-ಆಂಧ್ರ ಕರಾವಳಿ ತೀರದಲ್ಲಿ ಸಂಚರಿಸುವ 103 ರೈಲು ಸೇವೆಯನ್ನು ರದ್ದು ಮಾಡಲಾಗಿದೆ. ಜೊತೆಗೆ ವಿಮಾನ ಹಾರಾಟವನ್ನು ಬಂದ್ ಮಾಡಲಾಗಿದೆ. ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ 18 ಗಂಟೆಗಳ ಕಾಲ ಎಲ್ಲ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿದೆ. ನೌಕಾದಳ, ವಾಯುಸೇನೆ, ಕರಾವಳಿ ಭದ್ರತಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಗಳಿಂದ ಜನರ ರಕ್ಷಣಾ ಕಾರ್ಯ ನಡೆಸುತ್ತಿದೆ.

  • ಏರ್ ಸ್ಟ್ರೈಕ್ ಬಳಿಕ ಪಾಕ್ ಗಡಿಯಲ್ಲಿ ಭಾರತದ ಯುದ್ಧ ವಿಮಾನಗಳ ಸಮರಾಭ್ಯಾಸ

    ಏರ್ ಸ್ಟ್ರೈಕ್ ಬಳಿಕ ಪಾಕ್ ಗಡಿಯಲ್ಲಿ ಭಾರತದ ಯುದ್ಧ ವಿಮಾನಗಳ ಸಮರಾಭ್ಯಾಸ

    ನವದೆಹಲಿ: ಜಮ್ಮು ಕಾಶ್ಮೀರದ ಹಾಗು ಪಂಜಾಬ್ ಗಡಿ ಪ್ರದೇಶದಲ್ಲಿ ಭಾರತ ವಾಯು ಪಡೆಯ ಯುದ್ಧ ವಿಮಾನಗಳು ಗುರುವಾರ ರಾತ್ರಿ ಸಮರಾಭ್ಯಾಸ ನಡೆಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

    ರಾತ್ರಿಯ ವೇಳೆಯಲ್ಲಿ ಅಭ್ಯಾಸ ನಡೆದಿದ್ದು, ತುರ್ತು ಪರಿಸ್ಥಿತಿ ವೇಳೆ ತಕ್ಷಣ ದಾಳಿ ನಡೆಸುವ ಸಿದ್ಧತೆಯ ಉದ್ದೇಶದಿಂದ ಅಭ್ಯಾಸ ನಡೆಸಲಾಗಿದೆ ಎಂಬ ಮಾಹಿತಿ ಲಭಿಸಿದೆ. ಐಎಎಫ್ ಕೆಲ ಯುದ್ಧ ವಿಮಾನಗಳು ಅಭ್ಯಾಸದಲ್ಲಿ ತೊಡಗಿತ್ತು. ಈ ವೇಳೆ ಸೇನೆ ಕಾಂಬಾಂಟ್ ಡ್ರಿಲ್ ನಡೆಸಿತ್ತು ಎಂಬ ಮಾಹಿತಿ ಲಭಿಸಿದೆ.

    ಅಭ್ಯಾಸ ನಡೆಸಿದ ಪರಿಣಾಮ ಗಡಿ ಪ್ರದೇಶದ ಜನರು ಭಾರೀ ಶಬ್ದ ಕೇಳಿ ಬಂದಿದ್ದರಿಂದ ಜನರು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿದ ಅಮೃತಸರ ಪೊಲೀಸರು, ಯಾವುದೇ ರೀತಿಯ ಅನಾಹುತ ನಡೆದಿಲ್ಲ. ಜನರು ಭಯಪಡುವ ಅಗತ್ಯವಿಲ್ಲ. ಗಾಳಿಸುದ್ದಿಗಳನ್ನು ನಂಬಬೇಡಿ ಎಂದು ತಿಳಿಸಿದ್ದರು.

    ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲು 1971ರ ಬಳಿಕ ಮೊದಲ ಬಾರಿಗೆ ವಾಯುಪಡೆಯನ್ನು ಬಳಕೆ ಮಾಡಲಾಗಿತ್ತು. ಈ ದಾಳಿಯ ಬಳಿಕ ಸೇನೆ ಅಭ್ಯಾಸದಲ್ಲಿ ತೊಡಗಿದೆ. ಆ ಬಳಿಕ ಐಎಎಫ್ ಯಾವುದೇ ಸಂದರ್ಭವನ್ನು ಎದುರಿಸಲು ಕೂಡ ಹೈ ಅಲರ್ಟ್ ಆಗಿದೆ.

    ಪಾಕಿಸ್ತಾನದ ವಾಯು ಸೇನೆ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದ ಪರಿಣಾಮ ಪ್ರತಿದಾಳಿಗೆ ಮುಂದಾಗಿತ್ತು. ಆದರೆ ಪಾಕ್ ಸೇನೆಯ ಪ್ರಯತ್ನವನ್ನು ಭಾರತ ವಾಯುಸೇನೆ ಹಿಮ್ಮೆಟ್ಟಿತ್ತು. ಭಾರತ ಮಿಗ್ 29 ಜೆಟ್ ಪಾಕ್‍ನ ಎಫ್-16 ಅತ್ಯಾಧುನಿಕ ಯುದ್ಧ ವಿಮಾನವನ್ನು ಹೊಡೆದುರುಳಿಸಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಸ್ಟ್ರೈಕ್ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗ್ತೀರಾ: ಸಿಬಲ್‍ಗೆ ರಾಜ್ಯವರ್ಧನ್ ಸವಾಲ್

    ಏರ್ ಸ್ಟ್ರೈಕ್ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗ್ತೀರಾ: ಸಿಬಲ್‍ಗೆ ರಾಜ್ಯವರ್ಧನ್ ಸವಾಲ್

    ನವದೆಹಲಿ: ಭಾರತದ ವಾಯುಪಡೆ ನಡೆಸಿರುವ ಏರ್ ಸ್ಟ್ರೈಕ್ ದಾಳಿಗೆ ಸಾಕ್ಷಿ ತರಲು ಪಾಕಿಸ್ತಾನಕ್ಕೆ ಹೋಗುತ್ತಿರಾ ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಅವರಿಗೆ ಸವಾಲ್ ಎಸೆದಿದ್ದಾರೆ.

    ಫಬ್ರವರಿ 26ರಂದು ಭಾರತದ ವಾಯುಪಡೆ ನಡೆಸಿರುವ ಏರ್ ಸ್ಟ್ರೈಕ್‍ಗೆ ವಿಪಕ್ಷಗಳು ಸಾಕ್ಷಿ ಕೇಳುತ್ತಿವೆ. ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಸಹ ವಾಯುದಾಳಿಗೆ ಸರ್ಕಾರ ಸಾಕ್ಷಿ ನೀಡಬೇಕು. ಮೋದಿ ಸರ್ಕಾರ ವಾಯುಸೇನೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದರು. ಕಪಿಲ್ ಸಿಬಲ್ ಹೇಳಿಕೆಗೆ ಕೇಂದ್ರ ಸಚಿವರು ತಿರುಗೇಟು ನೀಡಿದ್ದಾರೆ.

    ಕಪಿಲ್ ಸಿಬಲ್ ಜಿ, ನೀವು ನಮ್ಮ ಗುಪ್ತಚರದಳ ಮತ್ತು ವಾಯುಸೇನೆಯ ಶಕ್ತಿಯ ಬಗ್ಗೆ ನಿಮಗೆ ನಂಬಿಕೆಯಿಲ್ಲ. ಬದಲಾಗಿ ಅಂತರಾಷ್ಟ್ರೀಯ ಮಾಧ್ಯಮಗಳು ಬಿತ್ತರಿಸುವ ಸುದ್ದಿಗಳ ಮೇಲೆ ನೀವು ಹೆಚ್ಚು ನಂಬಿಕೆಯನ್ನು ಹೊಂದಿದ್ದೀರಿ. ವಾಯುದಾಳಿಯಲ್ಲಿ ಯಾವುದೇ ಪ್ರಾಣಪಾಯ ಆಗಿಲ್ಲ ಅಂದ್ರೆ ನಿಮ್ಮ ಮುಖದ ಮೇಲೆ ನಗು ಕಾಣುತ್ತದೆ. ಇವಿಎಂ ವಿರುದ್ಧ ಸಾಕ್ಷ್ಯಾಧಾರಕ್ಕಾಗಿ ಲಂಡನ್ ವರೆಗೂ ಹೋಗಿ ಬಂದಿದ್ದೀರಿ. ಇದೀಗ ಏರ್ ಸ್ಟ್ರೈಕ್ ಸಾಕ್ಷಿಗಾಗಿ ಬಾಲಕೋಟ್‍ಗೆ ಹೋಗಲು ಸಿದ್ಧರಿದ್ದೀರಾ ಎಂದು ರಾಜ್ಯವರ್ಧನ್ ಸಿಂಗ್ ಪ್ರಶ್ನೆ ಮಾಡಿದ್ದಾರೆ.

    ಸಿಬಲ್ ಟ್ವೀಟ್: ಮೋದಿ ಜೀ, ಅಂತರಾಷ್ಟ್ರೀಯ ಮಾಧ್ಯಮಗಳು ಬಾಲಕೋಟ್ ನಲ್ಲಿ ಯಾವುದೇ ಉಗ್ರರು ಹತರಾಗಿರುವ ವರದಿ ಆಗಿಲ್ಲ ಎಂದು ಹೇಳುತ್ತಿವೆ. ಹಾಗಾದ್ರೆ ಅವರೆಲ್ಲರೂ ಪಾಕಿಸ್ತಾನದ ಬೆಂಬಲಿಗರಾ? ನೀವು ಭಯೋತ್ಪದನೆ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದೀರಾ ಎಂದು ಕಪಿಲ್ ಸಿಬಲ್ ತಮ್ಮ ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಏರ್ ಸ್ಟ್ರೈಕ್ ನಡೆದ ಸ್ಥಳದಲ್ಲಿ 300 ಮೊಬೈಲ್!

    ಏರ್ ಸ್ಟ್ರೈಕ್ ನಡೆದ ಸ್ಥಳದಲ್ಲಿ 300 ಮೊಬೈಲ್!

    ನವದೆಹಲಿ: ಭಾರತೀಯ ವಾಯುಪಡೆ ಬಾಲಕೋಟ್ ಮೇಲೆ ದಾಳಿ ನಡೆಸುವ ಸ್ಥಳದಲ್ಲಿ 300 ಮೊಬೈಲ್ ಗಳು ಆ್ಯಕ್ಟಿವ್ ಆಗಿದ್ದವು ಎಂದು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಖಚಿತಪಡಿಸಿದೆ.

    ಫೆಬ್ರವರಿ 26ರಂದು ದಾಳಿ ನಡೆದ ಸ್ಥಳದಲ್ಲಿ 300 ಮೊಬೈಲ್ ಫೋನ್ ಗಳು ಕಾರ್ಯನಿರತವಾಗಿದ್ದವು. ದಾಳಿಗೂ ಮುನ್ನ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ ಭಾರತದ ವಾಯುಪಡೆಗೆ 300 ಜನರು ಮೊಬೈಲ್ ಬಳಸುತ್ತಿರುವ ಖಚಿತ ಮಾಹಿತಿಯನ್ನು ನೀಡಿತ್ತು. ಪಾಕಿಸ್ತಾನದ ಪಖ್ತುನಖ್ವಾ ಪ್ರಾಂತ್ಯದ ಖೈಬರ್ ಉಗ್ರರ ನೆಲೆಯಲ್ಲಿ 300 ಮೊಬೈಲ್ ಫೋನ್‍ಗಳು ಆ್ಯಕ್ಟೀವ್ ಇರೋದನ್ನ ಎನ್‍ಟಿಆರ್‍ಓ ದೃಢಪಡಿಸಿತ್ತು. ಖಚಿತ ಮಾಹಿತಿಯ ಮೇರೆಗೆ ಭಾರತದ ವಾಯಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಇದನ್ನೂ ಓದಿ: ದಾಳಿ ಮಾಡಿದ್ದು ನಿಜ, ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲ್ಸವಲ್ಲ: ಏರ್ ಚೀಫ್ ಮಾರ್ಷಲ್

    ವಾಯುದಾಳಿಗೂ ಮುನ್ನ ಕೆಲದಿನಗಳಿಂದ ಬಾಲಕೋಟ್ ಉಗ್ರರ ಶಿಬಿರದಲ್ಲಿ 300 ಉಗ್ರರು ಮೊಬೈಲ್ ಬಳಕೆ ಮಾಡುತ್ತಿದ್ದನ್ನು ಎನ್‍ಟಿಆರ್‍ಓ ಖಚಿತ ಮಾಡಿಕೊಂಡಿತ್ತು. ಎನ್‍ಟಿಆರ್‍ಓ ನೀಡಿದ ಸೂಚನೆಯ ಮೇರೆಗೆ ಫಬ್ರವರಿ 26ರ ಬೆಳಗಿನ ಜಾವ ಸುಮಾರು 3 ಗಂಟೆಗೆ ಭಾರತದ ವಾಯುಪಡೆ ದಾಳಿ ನಡೆಸುವ ಮೂಲಕ ಬಾಲಕೋಟ್, ಮುಜಾಫರ್‍ಬಾದ್ ಮತ್ತಿ ಚಿಕೋಟಿ ಉಗ್ರ ಶಿಬಿರಗಳನ್ನು ಧ್ವಂಸಗೊಳಿತ್ತು. ಇದನ್ನೂ ಓದಿ: ಪಾಕ್ ಡ್ರೋನ್ ಹೊಡೆದುರುಳಿಸಿದ ಏರ್ ಫೋರ್ಸ್

    ವಾಯುದಾಳಿ ಬಳಿಕ ಎಷ್ಟು ಜನರು ಉಗ್ರರನ್ನು ಸಾವನ್ನಪ್ಪಿದ್ದಾರೆ ಎಂಬುದರ ಬಗ್ಗೆ ಇದೂವರೆಗೂ ನಿಖರ ಅಂಕಿ ಅಂಶಗಳು ಲಭ್ಯವಾಗಿರಲಿಲ್ಲ. ಇಂದು ಸುದ್ದಿಗೋಷ್ಠಿ ನಡೆಸಿದ್ದ ವಾಯುಪಡೆಯ ಮುಖ್ಯಸ್ಥ ಬಿ.ಎಸ್ ಧನೋವಾ, ನೀಡಿದ್ದ ಗುರಿಗಳನ್ನು ವಾಯುಸೇನೆ ಹೊಡೆದು ಹಾಕಿದ್ದು ನಿಜ. ಆದರೆ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಕಾಡಿನಲ್ಲಿ ಬಾಂಬ್ ಹಾಕುವ ಅಗತ್ಯ ನಮಗೆ ಏನಿತ್ತು. ನಮಗೆ ಏನು ಗುರಿ ನೀಡಲಾಗಿತ್ತೋ ಆ ಗುರಿಯನ್ನು ಹೊಡೆದಿದ್ದೇವೆ. ಅರಣ್ಯದಲ್ಲಿ ಬಾಂಬ್ ಹಾಕಿದ್ದರೆ ಪಾಕಿಸ್ತಾನ ಯಾಕೆ ನಮ್ಮ ಮೇಲೆ ದಾಳಿ ನಡೆಸಬೇಕಿತ್ತು. ಪಾಕ್ ಪ್ರಧಾನಿ ಏಕೆ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಪ್ರಶ್ನಿಸಿದ್ದರು. ಇದನ್ನೂ ಓದಿ: ಏರ್ ಸ್ಟ್ರೈಕ್ ಮಾಡಿದ್ದು ಉಗ್ರರ ಮೇಲೋ? ಮರಗಳ ಮೇಲೋ?: ಸಿಧು ಟಾಂಗ್

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕ್ ಡ್ರೋನ್ ಹೊಡೆದುರುಳಿಸಿದ ಏರ್ ಫೋರ್ಸ್

    ಪಾಕ್ ಡ್ರೋನ್ ಹೊಡೆದುರುಳಿಸಿದ ಏರ್ ಫೋರ್ಸ್

    ಜೈಪುರ: ಭಾರತ ಭೂ ಪ್ರದೇಶವನ್ನು ಪ್ರವೇಶ ಮಾಡಿದ್ದ ಪಾಕಿಸ್ತಾನದ ಡ್ರೋನನ್ನು ಭಾರತೀಯ ವಾಯುಪಡೆ ರಾಜಸ್ಥಾನದ ಬಿಕಾನೇರ್ ಪ್ರದೇಶದಲ್ಲಿ ಹೊಡೆದುರುಳಿಸಿದೆ.

    ಮೂಲಗಳ ಪ್ರಕಾರ ಸೋಮವಾರ ಬೆಳಗ್ಗೆ 11.30ರ ಸಮಯದಲ್ಲಿ ಭಾರತ ಗಡಿ ಪ್ರದೇಶವನ್ನು ದಾಟಿ ಪಾಕಿಸ್ತಾನದ ಡ್ರೋನ್ ಆಗಮಿಸಿತ್ತು. ಕೂಡಲೇ ಎಚ್ಚೆತ್ತ ಭಾರತ ವಾಯುಪಡೆ ಡ್ರೋನ್ ಹೊಡೆದುರುಳಿಸಲು ಯಶಸ್ವಿಯಾಗಿದೆ.

    ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನೀಡಿರುವ ಮಾಹಿತಿಯಂತೆ 11.30ರ ಸಮಯದಲ್ಲಿ ಪಾಕಿಸ್ತಾನದ ಘರ್ಸನಾ ಗಡಿ ಭಾಗದಲ್ಲಿ 2 ಬಾಂಬ್ ಬ್ಲಾಸ್ಟ್ ಆಗಿರುವುದು ಖಚಿತವಾಗಿದ್ದು, ಡ್ರೋನ್ ಅವಶೇಷಗಳು ಭಾರತದ ಗಡಿ ಭಾಗದಲ್ಲಿ ಬಿದ್ದಿದೆ. ಆದರೆ ಈ ವರದಿಯನ್ನು ಪಾಕಿಸ್ತಾನ ಮಾಧ್ಯಮಗಳು ಅಲ್ಲಗೆಳೆದಿವೆ.

    ರಾಷ್ಟ್ರಿಯ ಮಾಧ್ಯಮ ನೀಡಿರುವ ಮಾಹಿತಿಯ ಅನ್ವಯ ಪಾಕಿಸ್ತಾನದ ಡ್ರೋನ್ ಭಾರತ ಗಡಿ ಪ್ರವೇಶ ಮಾಡಿರುವುದನ್ನು ರೆಡಾರ್ ಗಳು ಪತ್ತೆ ಮಾಡಿದ್ದು, ಈ ವೇಳೆ ಸುಖೋಯ್ 30ಎಂಕೆಐ ವಿಮಾನ ಬಳಸಿ ಡ್ರೋನ್ ಹೊಡೆದುರುಳಿಸಲಾಗಿದೆ.

    ಇತ್ತ ಪಾಕಿಸ್ತಾನ ಸೇನೆ ತನ್ನ ಉದ್ಧಟತನವನ್ನು ಮುಂದುವರಿಸಿದ್ದು, ಜಮ್ಮು ಕಾಶ್ಮೀರದ ಪೂಂಚ್ ವಲಯದಲ್ಲಿ ಗುಂಡಿನ ದಾಳಿ ನಡೆಸಿದೆ. ಅಲ್ಲದೇ ಕಳೆದ ಒಂದು ವಾರದ ಅವಧಿಯಲ್ಲಿ 57 ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದಾಳಿ ಮಾಡಿದ್ದು ನಿಜ, ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲ್ಸವಲ್ಲ: ಏರ್ ಚೀಫ್ ಮಾರ್ಷಲ್

    ದಾಳಿ ಮಾಡಿದ್ದು ನಿಜ, ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲ್ಸವಲ್ಲ: ಏರ್ ಚೀಫ್ ಮಾರ್ಷಲ್

    ಕೊಯಮತ್ತೂರು: ಬಾಲಕೋಟ್ ಮೇಲಿನ ಏರ್ ಸ್ಟ್ರೈಕ್ ನಡೆಸಿದ ಬಗ್ಗೆ ಎದ್ದ ಪ್ರಶ್ನೆಗಳಿಗೆ ವಾಯುಸೇವೆ ಮುಖ್ಯಸ್ಥ ಬಿ.ಎಸ್ ಧನೋವಾ ಕೊಯಮತ್ತೂರಲ್ಲಿ ಸುದ್ದಿಗೋಷ್ಠಿ ನಡೆಸಿ ಉತ್ತರ ನೀಡಿದ್ದಾರೆ.

    ಏರ್ ಸ್ಟ್ರೈಕ್ ನಡೆದ ಬಳಿಕ ಎಷ್ಟು ಉಗ್ರರು ಹತ್ಯೆಯಾಗಿದ್ದಾರೆ ಸಾಕ್ಷ್ಯ ನೀಡಿ ಎಂದಿದ್ದ ಪ್ರತಿಪಕ್ಷಗಳಿಗೆ ಉತ್ತರ ಎನ್ನುವಂತೆ ಬಿ. ಎಸ್ ಧನೋವಾ ಅವರು, ನೀಡಿದ್ದ ಗುರಿಗಳನ್ನು ವಾಯುಸೇನೆ ಹೊಡೆದು ಹಾಕಿದ್ದು ನಿಜ. ಆದರೆ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಕಾಡಿನಲ್ಲಿ ಬಾಂಬ್ ಹಾಕುವ ಅಗತ್ಯ ನಮಗೆ ಏನಿತ್ತು ಎಂದು ಪ್ರಶ್ನಿಸಿದ್ದಾರೆ.

    ನಮಗೆ ಏನು ಗುರಿ ನೀಡಲಾಗಿತ್ತೋ ಆ ಗುರಿಯನ್ನು ಹೊಡೆದಿದ್ದೇವೆ. ಅರಣ್ಯದಲ್ಲಿ ಬಾಂಬ್ ಹಾಕಿದ್ದರೆ ಪಾಕಿಸ್ತಾನ ಯಾಕೆ ನಮ್ಮ ಮೇಲೆ ದಾಳಿ ನಡೆಸಬೇಕಿತ್ತು. ಅವರ ಪ್ರಧಾನಿ ಏಕೆ ಪ್ರತಿಕ್ರಿಯೆ ನೀಡುತ್ತಿದ್ದರು ಎಂದು ಪ್ರಶ್ನಿಸಿದರು.

    ನೀಡಿದ್ದ ಗುರಿ ಸರಿಯಾಗಿ ದಾಳಿ ಮಾಡಿದ್ದೇವಾ ಇಲ್ಲವೋ ಎನ್ನುವುದು ಮಾತ್ರ ನಮ್ಮ ಕೆಲಸ. ಅದನ್ನು ಹೊರತು ಪಡಿಸಿ ಹೆಣಗಳನ್ನು ಲೆಕ್ಕ ಹಾಕುವುದು ನಮ್ಮ ಕೆಲಸವಲ್ಲ. ಆ ಕೆಲಸ ಏನಿದ್ದರೂ ಸರ್ಕಾರ ಮಾಡುತ್ತದೆ ಎಂದರು.

    ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಬಗ್ಗೆ ಮಾತನಾಡಿ, ಅಭಿನಂದನ್ ಅವರ ಆರೋಗ್ಯ ಸ್ಥಿತಿ ನೋಡಿ ಅವರು ಮತ್ತೆ ಕೆಲಸಕ್ಕೆ ಹಾಜರಾಗಬಹುದಾ ಇಲ್ಲವಾ ಎಂಬುದು ತಿಳಿಯಲಿದೆ. ಅವರು ಸಂಪೂರ್ಣವಾಗಿ ಫಿಟ್ ಆಗಿದ್ದರೆ ಅವರು ಪೈಲಟ್ ಆಗಿ ಮುಂದುವರಿಯಬಹುದು ಎಂದು ಹೇಳಿದರು.

    ನಾವು ದಾಳಿಗೆ ಸಿದ್ಧರಾದಾಗ ಯಾವ ವಿಮಾನ ಬೇಕು ಯಾವುದು ಬೇಡ ಎನ್ನುವುದನ್ನು ಪ್ಲಾನ್ ಮಾಡುತ್ತೇವೆ. ಶತ್ರುಗಳು ನಮ್ಮ ಮೇಲೆ ಬಂದಾಗ ಯಾವ ವಿಮಾನವನ್ನು ಕಳುಹಿಸಬೇಕು ಎನ್ನುವುದನ್ನು ನಾವು ಪ್ಲಾನ್ ಮಾಡಲು ಸಾಧ್ಯವಿಲ್ಲ. ನಮ್ಮ ಬಳಿ ಇರುವ ಎಲ್ಲ ವಿಮಾನಗಳು ಶತ್ರುಗಳನ್ನು ನಾಶ ಮಾಡುವ ಸಾಮಥ್ರ್ಯವನ್ನು ಹೊಂದಿದೆ ಎಂದರು.

    ನಮ್ಮ ಮಿಗ್-21 ಜೆಟ್ ಯುದ್ಧ ವಿಮಾನ ಸಮರ್ಥವಾಗಿದೆ. ಮಿಗ್-21 ಅದ್ಭುತವಾದ ಏರ್‍ಕ್ರಾಫ್ಟ್. ಈ ಯುದ್ಧ ವಿಮಾನವನ್ನು ಅಪ್‍ಗ್ರೇಡ್ ಮಾಡಲಾಗಿದೆ. ಈ ವಿಮಾನದಲ್ಲಿ ಅದ್ಭುತವಾದ ರಡಾರ್ ಇದೆ ಹಾಗೂ ಏರ್ ಟು ಏರ್ ಮಿಸೈಲ್ ವೆಪನ್ ಸಿಸ್ಟಮ್ ಇದೆ ಎಂದು ತಿಳಿಸಿದ್ದಾರೆ.

    ಪ್ರಸ್ತುತ ಗಡಿಯಲ್ಲಿ ನಡೆಯುತ್ತಿರುವ ಪರಿಸ್ಥಿತಿಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಉತ್ತರಿಸಿದರು.

    ನಮ್ಮ ವಿರುದ್ಧ ಮಾಡಿದ ದಾಳಿ ವೇಳೆ ಅವರು ಎಫ್ 16 ವಿಮಾನವನ್ನು ಬಳಸಿದ್ದಾರೆ. ಯಾಕೆಂದರೆ ಎಫ್ 16 ನಲ್ಲಿ ಬಳಸುವ ಎಎಂಆರ್‍ಎಎಎಂ ಕ್ಷಿಪಣಿ ನಮ್ಮ ಭೂ ಪ್ರದೇಶದಲ್ಲಿ ಬಿದ್ದಿದೆ. ಅವರ ಎಫ್ 16 ವಿಮಾನವನ್ನು ನಾವು ಹೊಡೆದು ಹಾಕಿದ್ದೇವೆ ಎಂದು ತಿಳಿಸಿದರು.

    ಅಮೆರಿಕ ಮತ್ತು ಪಾಕಿಸ್ತಾನ ಮಧ್ಯೆ ಯಾವ ರೀತಿಯ ಒಪ್ಪಂದ ನಡೆದಿದೆ ಎನ್ನುವುದು ಗೊತ್ತಿಲ್ಲ. ಬೇರೆ ದೇಶದ ವಿರುದ್ಧದ ಎಫ್ 16 ಬಳಕೆ ಮಾಡಬಾರದು ಎನ್ನುವ ಒಪ್ಪಂದ ಇದ್ದರೆ ಪಾಕಿಸ್ತಾನ ಉಲ್ಲಂಘನೆ ಮಾಡಿದೆ ಎಂದು ಹೇಳಬಹುದು ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv