Tag: air force

  • ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕ, ನರ್ಸಿಂಗ್ ವೃತ್ತಿಗೆ ಬಂದಿದ್ದಕ್ಕೆ ಹೆಮ್ಮೆ – ಹೂಮಳೆಗೆ ಸಿಬ್ಬಂದಿ ಸಂತಸ

    ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕ, ನರ್ಸಿಂಗ್ ವೃತ್ತಿಗೆ ಬಂದಿದ್ದಕ್ಕೆ ಹೆಮ್ಮೆ – ಹೂಮಳೆಗೆ ಸಿಬ್ಬಂದಿ ಸಂತಸ

    ಬೆಂಗಳೂರು: ದೇಶಕ್ಕಾಗಿ ಕೊರೊನಾ ತೊಲಗಿಸಲು ನಾವು ಸೇವೆ ಮಾಡಿದ್ದಕ್ಕೂ ಸಾರ್ಥಕವಾಯಿತು. ನಮ್ಮ ಸೇವೆಯನ್ನು ಗುರುತಿಸಿ ಇಂದು ಭಾರತೀಯ ವಾಯು ಸೇನೆ ಗೌರವ ಸರ್ಮಪಿಸಿದೆ. ನಿಜಕ್ಕೂ ಇದು ಹೆಮ್ಮೆಯ ವಿಚಾರವಾಗಿದೆ ಎಂದು ವಿಕ್ಟೋರಿಯ ಆಸ್ಪತ್ರೆಯ ನರ್ಸ್ ಮತ್ತು ವೈದ್ಯರು ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ನರ್ಸ್, ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನರ್ಸಿಂಗ್ ಆಫಿಸರ್ ಆಗಿ ಕೆಲಸ ಮಾಡಿದ್ದು, ಈ ವೃತ್ತಿಗೆ ಬಂದಿದ್ದಕ್ಕೂ ಹೆಮ್ಮೆಯಾಗುತ್ತದೆ. ನರ್ಸಿಂಗ್ ತುಂಬಾ ಜವಾಬ್ದಾರಿಯುತ ಕೆಲಸವಾಗಿದೆ. ಇಡೀ ದೇಶವೇ ಕೊರೊನಾ ಸಮಸ್ಯೆ ಬಗೆಹರಿಸಲು ಕಷ್ಟಪಡುತ್ತಿದೆ. ಈ ವೇಳೆ ನಾವು ಕೊರೊನಾ ವಿರುದ್ಧ ಹೋರಾಡಲು ಸೇವೆ ಸಲ್ಲಿಸುತ್ತಿದ್ದೀವಿ ಅನ್ನೋದು ತುಂಬಾ ಸಂತಸವಾಗುತ್ತಿದೆ ಎಂದರು.

    ಇಂದು ಕಮಾಂಡರ್ ಕೂಡ ಈ ರೀತಿ ನಮಗೆ ಗೌರವ ಸಲ್ಲಿಸಿದ್ದಾರೆ. ನಿಜಕ್ಕೂ ಇದು ತುಂಬಾ ಖುಷಿಯಾದ ವಿಚಾರ. ಸಾಮಾನ್ಯ ದಿನ ಕೆಲಸ ಮಾಡುವುದು ಬೇರೆ, ಆದರೆ ಕೊರೊನಾ ರೋಗಿಗಳನ್ನು ನೋಡಿಕೊಳ್ಳುವ ಮೂಲಕ ಇನ್ನೂ ನಮ್ಮ ಜವಾಬ್ದಾರಿಯನ್ನ ಹೆಚ್ಚಿಸಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ ಎಂದು ಪೊಲೀಸರು, ವೈದ್ಯರು ಮತ್ತು ಮಾಧ್ಯಮದವರಿಗೆ ನರ್ಸ್ ಧನ್ಯವಾದ ತಿಳಿಸಿದರು.

    ಇತರೆ ನರ್ಸ್, ವೈದ್ಯರು ಮಾತನಾಡಿ, ಭಾರತೀಯ ವಾಯು ಸೇನೆ ನಮ್ಮ ಸೇವೆಯನ್ನು ಗುರುತಿಸಿ ಇಂದು ಗೌರವ ಸಲ್ಲಿಸಿದೆ. ಈ ಮೂಲಕ ನಾವು ಇಂತಹ ಕಷ್ಟದ ಸಂದರ್ಭದಲ್ಲಿ ಕೆಲಸ ಮಾಡಿದ್ದಕ್ಕೂ ಸಾರ್ಥಕ ಅನ್ನಿಸುತ್ತಿದೆ ಎಂದರು.

    ನಾನು ಒಂದೂವರೆ ತಿಂಗಳಿಂದ ಕೊರೊನಾ ಕರ್ತವ್ಯ ನಿರ್ವಹಿಸುತ್ತಿದ್ದೇವೆ. ಇಂದು ಭಾರತೀಯ ಸೇನೆ ಗೌರವ ಸಲ್ಲಿಸಿದ್ದರಿಂದ ನಮಗೆ ಸ್ಫೂರ್ತಿ ಸಿಕ್ಕಿದಂತಾಗಿದೆ. ಇನ್ನೂ ಹೆಚ್ಚಾಗಿ ಕೆಲಸ ಮಾಡಲು ಉತ್ತೇಜನ ಸಿಕ್ಕಿದಂತಾಗಿದೆ ಎಂದು ಸಂತಸಪಟ್ಟರು.

    ನಾವು ನಮ್ಮ ಮಕ್ಕಳು, ಪತಿ ಎಲ್ಲರನ್ನೂ ಬಿಟ್ಟು ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೇವೆ. ಒಂದು ರೀತಿ ನಾವು ಕೊರೊನಾ ಕ್ವಾರಂಟೈನ್‍ನಲ್ಲಿದ್ದೇವೆ. ನನ್ನ ಸೇವೆಯನ್ನು ಗುರುತಿಸಿ ಭಾರತೀಯ ವಾಯು ಸೇನೆ ಗೌರವ ಸಲ್ಲಿಸಿದ್ದು, ತುಂಬಾ ಹೆಮ್ಮೆಯಾಗುತ್ತಿದೆ ಎಂದು ನರ್ಸ್ ಮತ್ತು ವೈದ್ಯರು ಹರ್ಷ ವ್ಯಕ್ತಪಡಿಸಿದರು.

  • ವಿಕ್ಟೋರಿಯಾ ಆಸ್ಪತ್ರೆ ಮೇಲೆ ಹೂ ಮಳೆ – ಹೆಲ್ತ್ ವಾರಿಯರ್ಸ್‌ಗಳಿಗೆ ವಾಯುಸೇನೆಯಿಂದ ಸೆಲ್ಯೂಟ್

    ವಿಕ್ಟೋರಿಯಾ ಆಸ್ಪತ್ರೆ ಮೇಲೆ ಹೂ ಮಳೆ – ಹೆಲ್ತ್ ವಾರಿಯರ್ಸ್‌ಗಳಿಗೆ ವಾಯುಸೇನೆಯಿಂದ ಸೆಲ್ಯೂಟ್

    ಬೆಂಗಳೂರು: ನಮ್ಮನ್ನು ರಕ್ಷಿಸಲು ಕೊರೊನಾ ಹಿಮ್ಮೆಟ್ಟಿಸಲು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಹೆಲ್ತ್ ವಾರಿಯರ್ಸ್‌ಗೆ ಈಗಾಗಲೇ ಚಪ್ಪಾಳೆ ತಟ್ಟುವ ಮೂಲಕ ಜನರು ಗೌರವ ಸಲ್ಲಿಸಿದ್ದಾರೆ. ಇದೀಗ ಇಡೀ ದೇಶದಲ್ಲಿ ಆಸ್ಪತ್ರೆಗಳ ಮೇಲೆ ಹೂಮಳೆ ಸುರಿಸುವ ಮೂಲಕ ಕೊರೊನಾ ವಾರಿಯರ್ಸ್‌ಗೆ ವಾಯು ಸೇನೆ ಗೌರವ ಸಲ್ಲಿಸಿದೆ.

    ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮೇಲೆ ಭಾರತೀಯ ಸೇನೆಯಿಂದ ಹೂ ಮಳೆ ಸುರಿಸಿ ಗೌರವ ಸಮರ್ಪಣೆ ಮಾಡಿದೆ. ವಾಯು ಪಡೆಯ ಸಿ 130 ಜೆ ಹರ್ಕ್ಯುಲೆಸ್ ಮತ್ತು ಎಮ್ ಐ 17 ಹೆಲಿಕಾಪ್ಟರ್ ವಿಕ್ಟೋರಿಯಾ ಆಸ್ಪತ್ರೆಯ ಹೆಲ್ತ್ ವಾರಿಯರ್ಸ್‌ಗೆ ಮೇಲೆ ಹೂ ಮಳೆ ಸುರಿದಿದೆ.

    ವಾಯು ಸೇನೆ ಬರುವ ಮೊದಲು ಡಾಕ್ಟರ್‌ಗಳು, ನರ್ಸ್‌ಗಳು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ ಆಸ್ಪತ್ರೆ ಬಿಲ್ಡಿಂಗ್‍ನಿಂದ ಹೊರಭಾಗದಲ್ಲಿ ನಿಂತಿದ್ದರು. ಈ ವೇಳೆ ಹೂ ಮಳೆ ಸುರಿಯಲಾಗಿದೆ. ಇತ್ತ ವೈದ್ಯರು ಹಾಗೂ ದಾದಿಯರು ಕೂಡ ಚಪ್ಪಾಳೆ ತಟ್ಟಿ ವಾಯುಸೇನೆಯನ್ನು ಸ್ವಾಗತಿಸಿದ್ದು, ಆಸ್ಪತ್ರೆ ಹೂವಿನಿಂದ ತುಂಬಿದೆ.

    ಈ ವಿಶೇಷ ಗೌರವದಿಂದ ಕೊರೊನಾ ವಾರಿಯರ್ಸ್ ಮಂದಹಾಸ ಬೀರಿದ್ದಾರೆ. ಹೂ ಮಳೆ ಗೌರವ ಮುಗಿದ ಮೇಲೆ ಸಿಬ್ಬಂದಿ ಹಿಪ್ ಹಿಪ್ ಹುರೇ ಎಂದು ಘೋಷಣೆ ಕೂಗಿದ್ದಾರೆ. ಪುಷ್ಪ ಮಳೆಯಿಂದ ಆರೋಗ್ಯ ಸಿಬ್ಬಂದಿ ಖುಷಿಯಾಗಿದ್ದಾರೆ. ಇನ್ನೂ ಕಮಾಂಡ್ ಆಸ್ಪತ್ರೆ ಮೇಲೂ ಸುಮಾರು 8 ನಿಮಿಷಗಳ ಕಾಲ ವಾಯು ಸೇನೆ ಹೂ ಮಳೆ ಸುರಿಸಿದೆ.

    ಇಡೀ ದೇಶವನ್ನು ಫುಲ್ ಟೈಂ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಮುಂದಾಗಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಇಂದು ದೇಶದ ಎಲ್ಲ ಹೆಲ್ತ್ ವಾರಿಯರ್ಸ್ ಗೌರವ ಸಲ್ಲಿಸುತ್ತಿದೆ. ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಯುವ ಮೂಲಕ ವಾಯುಸೇನೆ ಗೌರವ ಸಲ್ಲಿಸುತ್ತಿದೆ. ಇನ್ನೂ ಎಲ್ಲ ನೌಕಾ ನೆಲೆಗಳಲ್ಲಿ ದೀಪ ಹಚ್ಚಿ ಮೌಂಟೇನ್ ಬ್ಯಾಂಡ್ ನುಡಿಸುವ ಮೂಲಕ ಗೌರವ ಸಲ್ಲಿಸಲು ಭಾರತೀಯ ಸೇನೆ ಸಿದ್ಧವಾಗಿದೆ.

  • ಭಾರತದ ಪಾಲಿಗೆ ಇಂದು ಮತ್ತೊಂದು ಐತಿಹಾಸಿಕ ದಿನ – ವಾಯು, ನೌಕಾ ಸೇನೆಯಿಂದ ಹೆಲ್ತ್ ವಾರಿಯರ್ಸ್‌ಗೆ ಗೌರವ

    ಭಾರತದ ಪಾಲಿಗೆ ಇಂದು ಮತ್ತೊಂದು ಐತಿಹಾಸಿಕ ದಿನ – ವಾಯು, ನೌಕಾ ಸೇನೆಯಿಂದ ಹೆಲ್ತ್ ವಾರಿಯರ್ಸ್‌ಗೆ ಗೌರವ

    – ಉತ್ತರ ಧ್ರುವದಿಮ್ ದಕ್ಷಿಣ ಧ್ರುವದವರೆಗೆ ಹೆಲಿಕಾಪ್ಟರ್‌ನಿಂದ ಹೂಮಳೆ

    ನವದೆಹಲಿ: ನಮ್ಮನ್ನು ರಕ್ಷಿಸಲು, ಕೊರೊನಾ ಹಿಮ್ಮೆಟ್ಟಿಸಲು ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ನಡೆಸುತ್ತಿರುವ ಹೆಲ್ತ್ ವಾರಿಯರ್ಸ್‌ಗೆ ಈಗಾಗಲೇ ಚಪ್ಪಾಳೆ ತಟ್ಟುವ ಮೂಲಕ ಜನರು ಗೌರವ ಸಲ್ಲಿಸಿದ್ದಾರೆ. ಆದರೆ ಇಂದು ಇಡೀ ದೇಶವನ್ನೇ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ವಿಶೇಷ ಗೌರವ ಸಲ್ಲಿಸಲು ಮುಂದಾಗಿವೆ.

    ಈ ಬಾರಿ ಸಾಮಾನ್ಯ ಜನರ ಬದಲು, ಇಡೀ ದೇಶವನ್ನು ಫುಲ್ ಟೈಂ ಕಾಯುವ ಮೂರು ಸೇನೆಗಳು ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಮುಂದಾಗಿದೆ. ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಇಂದು ದೇಶದ ಎಲ್ಲ ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲಿದೆ.

    ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಹೆಲಿಕಾಪ್ಟರ್‌ನಿಂದ ಹೂವಿನ ಮಳೆ ಸುರಿಯುವ ಮೂಲಕ ವಾಯುಸೇನೆ ಗೌರವ ಸಲ್ಲಿಸಲಾಗುತ್ತದೆ. ಇನ್ನೂ ಎಲ್ಲ ನೌಕಾ ನೆಲೆಗಳಲ್ಲಿ ದೀಪ ಹಚ್ಚಿ ಮೌಂಟೇನ್ ಬ್ಯಾಂಡ್ ನುಡಿಸುವ ಮೂಲಕ ಗೌರವ ಸಲ್ಲಿಸಲು ಭಾರತೀಯ ಸೇನೆ ಸಿದ್ಧವಾಗಿದೆ ಎಂದು 3 ಸೇನೆಗಳ ಮುಖ್ಯಸ್ಥ ಬಿಪಿನ್ ರಾವತ್ ತಿಳಿಸಿದ್ದಾರೆ.

    ಇಂದಿನ ಐತಿಹಾಸಿಕ ಕಾರ್ಯಕ್ರಮದ ಪ್ರಮುಖಕಾಂಶಗಳೇನು?
    * ಬೆಳಗ್ಗೆ 9 ಗಂಟೆಗೆ ದೆಹಲಿಯ ಪೊಲೀಸ್ ಯುದ್ಧ ಮೆಮೊರಿಯಲ್ ಮೇಲೆ ಪುಷ್ಪವೃಷ್ಟಿ
    * ಬೆಳಗ್ಗೆ 10-10:30 ನಡುವೆ ದೆಹಲಿ ವಿವಿಧ ಕೊರೊನಾ ಆಸ್ಪತ್ರೆಗಳ ಮೇಲೆ ಹೂಮಳೆ
    * ದೆಹಲಿ ಏಮ್ಸ್, ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆ, ಜಿಟಿಬಿ ಆಸ್ಪತ್ರೆ, ಲೋಕನಾಯಕ್ ಆಸ್ಪತ್ರೆ, ಆರ್.ಎಂ.ಎಲ್, ಸಬ್ದರ್‍ಜಂಗ್, ಗಂಗಾ ರಾಮ್, ಬಾಬಾ ಸಾಹೇಬ್ ಅಂಬೇಡ್ಕರ್ ಮ್ಯಾಕ್ಸ್ ಸಾಕೇತ್, ರೋಹಿನಿ, ಅಪೋಲೋ, ಇಂದ್ರಪ್ರಸ್ಥ, ಸೇನಾ ಆಸ್ಪತ್ರೆ ಮೇಲೆ ಹೂಮಳೆ


    * ಮಧ್ಯಾಹ್ನ 3:45ಕ್ಕೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ, ಸೇನಾ ಆಸ್ಪತ್ರೆ ಮೇಲೆ ಹೂಮಳೆ
    * ಶ್ರೀನಗರದಿಂದ ತಿರುವನಂತಪುರಂವರೆಗೆ ಹಾಗೂ ಅಸ್ಸಾಂನ ದಿಬ್ರುಗಡ್‍ದಿಂದ ಗುಜರಾತ್‍ನ ಕಛ್‍ವರೆಗೆ ಇರುವ ಎಲ್ಲ ಪ್ರಮುಖ ಕೋವಿಡ್ 19 ಪ್ರಮುಖ ಆಸ್ಪತ್ರೆಗಳಿಗೆ ವಾಯುಸೇನೆ ಪುಷ್ಪನಮನ
    * ಸಂಜೆ ನೌಕಾಸೇನೆಯಿಂದ ಎಲ್ಲಾ ನೌಕಾನೆಲೆಯಲ್ಲಿ, ಹಡಗುಗಳಲ್ಲಿ ದೀಪ ಉರಿಸುವುದು
    * ನೌಕಾನೆಲೆಗಳಲ್ಲಿ ಮೌಂಟೇನ್ ಬ್ಯಾಂಡ್ ನುಡಿಸುವುದು

    ಪ್ರತಿ ಬಾರಿ ನಾವು ಗೌರವಿಸುವ ಮೂರು ಸೇನೆಗಳು ಇಂದು ಸ್ವತಃ ಹೆಲ್ತ್ ವಾರಿಯರ್ಸ್‌ಗೆ ಗೌರವ ಸಲ್ಲಿಸಲು ಮುಂದಾಗಿರವುದು ವಿಶೇಷ. ಈ ದಿನ ಭಾರತದ ಪಾಲಿಗೆ ಐತಿಹಾಸಿಕ ದಿನವಾಗಲಿದೆ.

  • ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಕಾಡ್ಗಿಚ್ಚು ನಂದಿಸಲು ವಾಯುಸೇನೆ ಸಿದ್ಧ- ರಾಜ್ಯ ಮುಖ್ಯ ಕಾರ್ಯದರ್ಶಿಗೆ ಏರ್ ಮಾರ್ಷಲ್ ಪತ್ರ

    ಚಾಮರಾಜನಗರ: ರಾಜ್ಯದ ಅರಣ್ಯ ಪ್ರದೇಶಗಳಿಗೆ ಬೆಂಕಿ ಬಿದ್ದರೆ ಅದನ್ನು ನಂದಿಸುವ ಕಾರ್ಯಾಚರಣೆಗೆ ಸಹಕರಿಸಲು ವಾಯುಸೇನೆ ಸಿದ್ಧವಾಗಿದೆ. ಈ ಕುರಿತು ವಾಯುಸೇನೆಯ ಸೀನಿಯರ್ ಏರ್ ಸ್ಟಾಫ್ ಆಫೀಸರ್ ಏರ್ ಮಾರ್ಷಲ್ ಟಿ.ಡಿ. ಜೋಸೆಫ್ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ವಿಜಯಭಾಸ್ಕರ್ ಗೆ ಪತ್ರ ಬರೆದಿದ್ದಾರೆ.

    ದುರ್ಗಮ ಅರಣ್ಯ ಸೇರಿದಂತೆ ಕ್ಲಿಷ್ಟಕರ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ಬಿದ್ದರೆ ಅಲ್ಲಿಗೆ ಅರಣ್ಯ ಸಿಬ್ಬಂದಿ ತೆರಳಿ ಬೆಂಕಿ ನಂದಿಸುವುದು ಕಷ್ಟವಾಗಲಿದೆ. ಅಂತಹ ಸಂದರ್ಭದಲ್ಲಿ ವಾಯುಸೇನೆಯ ಹೆಲಿಕಾಪ್ಟರ್ ಗಳನ್ನು ಕಳುಹಿಸಿಕೊಡುವಂತೆ ಹಾಗೂ ಸದಾ ಸನ್ನದ್ಧವಾಗಿ ಇರಿಸುವಂತೆ ಕ್ರಮ ಕೈಗೊಳ್ಳಲು ಮುಖ್ಯಕಾರ್ಯದರ್ಶಿಗಳಿಗೆ ಅರಣ್ಯ ಇಲಾಖೆ ವಿನಂತಿಸಿತ್ತು.

    ಈ ಹಿನ್ನೆಲೆಯಲ್ಲಿ ಬೆಂಕಿ ನಂದಿಸುವುದಕ್ಕೆ ಸಹಕಾರ ಕೋರಿ ಮುಖ್ಯಕಾರ್ಯದರ್ಶಿಗಳು ವಾಯುಸೇನೆಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ವಾಯುಸೇನೆ ಅಧಿಕಾರಿಗಳು ಬೆಂಕಿ ನಂದಿಸುವ ಕಾರ್ಯಾಚರಣೆಗೆ ಸದಾ ಸಿದ್ಧವಿರುವುದಾಗಿ ತಿಳಿಸಿದ್ದಾರೆ.

    ಕಳೆದ ವರ್ಷ ಬೇಸಿಗೆ ಸಂದರ್ಭದಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿಗೆ ಬಂಡೀಪುರ ಹೊತ್ತಿ ಉರಿದಿತ್ತು. ನಾಲ್ಕು ಸಾವಿರ ಹೆಕ್ಟೆರ್‍ಕ್ಕೂ ಹೆಚ್ಚು ಅರಣ್ಯ ಪ್ರದೇಶ ಬೆಂಕಿಗೆ ಆಹುತಿಯಾಗಿತ್ತು. ದೊಡ್ಡ ಪ್ರಾಣಿಗಳು ಬೆಂಕಿಯಿಂದ ಬಚಾವಾದರೂ ಅಪರೂಪದ ಸರಿಸೃಪಗಳು ಸುಟ್ಟು ಭಸ್ಮವಾಗಿದ್ದವು. ಬೆಂಕಿ ನಂದಿಸಲು ಅರಣ್ಯ ಸಿಬ್ಬಂದಿ ಹರಸಾಹಸ ನಡೆಸಿದ್ದರು. ಕೊನೆಗೆ ವಾಯುಪಡೆಯ ಹೆಲಿಕಾಪ್ಟರ್ ಮೂಲಕ ಬೆಂಕಿಗೆ ನಂದಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

    ಈ ಹಿನ್ನೆಲೆಯಲ್ಲಿ ಬಂಡೀಪುರದದಲ್ಲಿ ಈ ಬಾರಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಆಕಸ್ಮಿಕ ಬೆಂಕಿ ಬಿದ್ದರೂ ಹರಡದಂತೆ ಬೆಂಕಿ ರೇಖೆ ನಿರ್ಮಾಣ, ಬೆಂಕಿ ಬೀಳದಂತೆ ರಸ್ತೆಯ ಇಕ್ಕೆಲಗಳಲ್ಲಿ ವಾಟರ್ ಸ್ಪ್ರೇ ಮಾಡಿ ಹಸಿರು ಚಿಗುರುವಂತೆ ಮಾಡುವುದು, ಬೆಂಕಿ ಬಿದ್ದ ತಕ್ಷಣ ಅಧಿಕಾರಿಗಳ ಮೊಬೈಲ್‍ಗಳಿಗೆ ಎಚ್ಚರಿಕಾ ಸಂದೇಶ ರವಾನೆ, ಅರಣ್ಯ ಸಿಬ್ಬಂದಿಯ ನಿರಂತರ ಗಸ್ತು ಹೀಗೆ ಹತ್ತು ಹಲವು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

  • ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿದ್ದ ಮೂವರು ನೌಕಾ ಅಧಿಕಾರಿಗಳ ಬಂಧನ

    ಪಾಕಿಸ್ತಾನದ ಹನಿಟ್ರ್ಯಾಪ್‍ಗೆ ಸಿಲುಕಿದ್ದ ಮೂವರು ನೌಕಾ ಅಧಿಕಾರಿಗಳ ಬಂಧನ

    ಕಾರವಾರ: ಮೋಹಕ ಜಾಲದಲ್ಲಿ ಬಿದ್ದು ಪಾಕಿಸ್ತಾನಕ್ಕೆ ಭಾರತೀಯ ಯುದ್ಧ ನೌಕೆಗಳ ಚಲನ ವಲನ ಮಾಹಿತಿ ನೀಡುತ್ತಿದ್ದ ಪ್ರಕರಣದ ಸಂಬಂಧ ಮೂವರು ನೌಕಾ ಅಧಿಕಾರಿಗಳನ್ನು ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ.

    ಪಾಕಿಸ್ತಾನದ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಧಿಸಿದಂತೆ ಕೇಂದ್ರ ಗುಪ್ತಚರ ಸಂಸ್ಥೆಗಳೊಂದಿಗೆ ಆಂಧ್ರಪ್ರದೇಶದ ಪೊಲೀಸರು ತನಿಖೆ ನಡೆಸುತ್ತಿದೆ. ಹೀಗಾಗಿ ವಿಶಾಖಪಟ್ಟಣದಲ್ಲಿರುವ ಈಸ್ಟರ್ನ್ ಕಮಾಂಡ್‍ಗೆ ಸೇರಿದ ರಾಜೇಶ್, ಲೋಕಂಡ್ ಮತ್ತು ನಿರಂಜನ ಎಂಬವರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಐಎಸ್‍ಐ ಏಜೆಂಟ್‍ಗಳ ಹನಿಟ್ರ್ಯಾಪ್‍ಗೆ ಒಳಗಾಗಿ ದಾಖಲೆಗಳನ್ನು ನೀಡಿದ ಐಎಎಫ್ ಅಧಿಕಾರಿಯ ಬಂಧನ

    ಹನಿಟ್ರ್ಯಾಪ್ ಪ್ರಕರಣದಲ್ಲಿ ಈ ಹಿಂದೆ ನೌಕಾ ನೆಲೆಯ ಎಂಟು ಮಂದಿ ಸೇಲರ್‌ಗಳು ಸಿಕ್ಕಿಬಿದ್ದಿದ್ದರು. ಈ ಪೈಕಿ ಇಬ್ಬರು ಕಾರವಾರದಲ್ಲಿರುವ ನೌಕಾನೆಲೆಗೆ ಸೇರಿದ್ದರು. ಈಗ ಮತ್ತೆ ಇಬ್ಬರು ಅಧಿಕಾರಿಗಳನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    ಪಾಕಿಸ್ತಾನದ ಗುಪ್ತಚರ ಸಂಸ್ಥೆ (ಐಎಸ್‍ಐ) ಸಾಮಾಜಿಕ ಜಾಲತಾಣದ ಮೂಲಕ ಭಾರತೀಯ ನೌಕಾಪಡೆಯ ಸಿಬ್ಬಂದಿಯನ್ನು ಮೋಹಕ ಜಾಲದಲ್ಲಿ ಸಿಲುಕಿಸಿತ್ತು. ಬಳಿಕ ಭಾರತದ ನೌಕಾನೆಲೆ ಹಾಗೂ ಯುದ್ಧ ನೌಕೆಗಳ ಮಾಹಿತಿಯನ್ನು ಪಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿರುವ ತನಿಖಾ ಸಂಸ್ಥೆ ಮೂವರನ್ನು ವಶಕ್ಕೆ ಪಡೆದಿದೆ.

    ನೌಕಾದಳದ ಮಾಹಿತಿ ಸೋರಿಕೆ ಹಿನ್ನೆಲೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಆ್ಯಂಡ್ರಾಯ್ಡ್ ಫೋನ್‍ಗಳನ್ನು ನಿಷೇಧಿಸಲಾಗಿತ್ತು. ಅಷ್ಟೇ ಅಲ್ಲದೆ ಕಾರವಾರ ಕದಂಬ ನೌಕಾನೆಲೆಯಲ್ಲಿ ಗುಪ್ತ ಮಾಹಿತಿ ಹಂಚಿಕೆ ಸಂಬಂಧ ತನಿಖೆ ಸಹ ನಡೆಸಲಾಗುತ್ತಿದೆ.

  • ವಾಯುಸೇನೆಯಲ್ಲಿದ್ದ ಮಗನ ಸಾವನ್ನು ಮರೆಯಲು ಸ್ಲಂ ಮಕ್ಕಳಿಗೆ ಶಿಕ್ಷಣ ಕೊಡ್ತಿರುವ ದಂಪತಿ

    ವಾಯುಸೇನೆಯಲ್ಲಿದ್ದ ಮಗನ ಸಾವನ್ನು ಮರೆಯಲು ಸ್ಲಂ ಮಕ್ಕಳಿಗೆ ಶಿಕ್ಷಣ ಕೊಡ್ತಿರುವ ದಂಪತಿ

    ಇಟಾನಗರ: ಭಾರತೀಯ ವಾಯು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಮಗನನ್ನು ವಿಮಾನ ಅಪಘಾತದಲ್ಲಿ ಕಳೆದುಕೊಂಡ ದಂಪತಿ ಈಗ ಸ್ಲಂ ಮಕ್ಕಳ ಏಳಿಗೆಗಾಗಿ ಶ್ರಮಿಸುವ ಜೊತೆ ಆ ಮಕ್ಕಳಲ್ಲಿ ಮಗನನ್ನು ಕಾಣುತ್ತಿದ್ದಾರೆ.

    ಘಾಜಿಯಾಬಾದ್ ನಿವಾಸಿಗಳಾದ ನಿವೃತ್ತ ಗ್ರೂಪ್ ಕ್ಯಾಪ್ಟನ್ ಶರದ್ ತೆವಾರಿ ಮತ್ತು ಸಾಮಾಜಿಕ ಕಾರ್ಯಕರ್ತೆ ಸವಿತಾ ತೆವಾರಿ ದಂಪತಿ ಸ್ಲಂ ಮಕ್ಕಳಿಗಾಗಿ ಶ್ರಮಿಸುತ್ತಿದ್ದಾರೆ. ಇವರ ಮಗ ಶಿಶಿರ್ ತೆವಾರಿ ಅವರು ಭಾರತೀಯ ವಾಯುಸೇನೆಯಲ್ಲಿ ಸ್ಕ್ವಾಡ್ರನ್ ಲೀಡರ್ ಆಗಿದ್ದರು. ದುರಾದೃಷ್ಟವಶಾತ್ 2017ರ ಅ. 6ರಂದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಎಂಐ-17 ವಿ5(Mi-17 V5) ವಿಮಾನ ಅಪಘಾತದಲ್ಲಿ ಶಿಶಿರ್ ಹುತಾತ್ಮರಾಗಿದ್ದರು.

    ಮಗನ ಅಗಲಿಕೆಯ ನೋವು ಮರೆಯಲು ತೆವಾರಿ ದಂಪತಿ ಶಿಕ್ಷಣದಿಂದ ವಂಚಿತರಾಗಿರುವ ಸ್ಲಂ ಮಕ್ಕಳಿಗೆ ಶಿಕ್ಷಣ ಕೊಟ್ಟು, ಸಾಮಾಜದಲ್ಲಿ ಒಳ್ಳೆಯ ಪ್ರಜೆಗಳನ್ನಾಗಿ ಮಾಡಬೇಕು ಎಂದು ಪಣತೊಟ್ಟರು. 2018ರ ಆಗಸ್ಟ್ 15 ರಂದು ದಂಪತಿ ದೆಹಲಿಯ ಯಮುನಾ ಖಾದರ್ ಸ್ಲಂನ 100 ಬಡಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ಆರಂಭಿಸಿದರು. ಇದೇ ಉದ್ದೇಶದಿಂದ ಶಹೀದ್ ಸ್ಕ್ವಾಡ್ರನ್ ಲೀಡರ್ ಶಿಶಿರ್ ತೆವಾರಿ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ನ್ನು ಶುರುಮಾಡಿದರು. ಬಡ ಮಕ್ಕಳು ಕೂಡ ಶಿಕ್ಷಣ ಪಡೆದು ತಮ್ಮ ಮಗನಂತೆ ಮುಂದೆ ದೇಶ ಸೇವೆ ಮಾಡುವ ವ್ಯಕ್ತಿಗಳಾಗಿ ಹೊರಹೊಮ್ಮಲಿ ಎಂದು ಆಶಿಸಿದರು. ಸದ್ಯ ದಂಪತಿ 350 ಸ್ಲಂ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ.

    ತೆವಾರಿ ದಂಪತಿಗೆ ಸ್ಲಂ ಮಕ್ಕಳ ಶಿಕ್ಷಣದ ಬಗ್ಗೆ ಇರುವ ಕಾಳಜಿ ನೋಡಿದ ಸ್ಲಂ ಕಮಿಟಿ ಈ ಪ್ರದೇಶದಲ್ಲಿ ಶಾಲೆ ತೆರೆಯಲು ಅವರಿಗೆ ಅವಕಾಶ ನೀಡಿತ್ತು. ಅಷ್ಟೇ ಅಲ್ಲದೆ ತೆವಾರಿ ದಂಪತಿ ಕಾರ್ಯ ನೋಡಿ ಅವರ ಸಂಬಂಧಿಕರು, ಸ್ನೇಹಿತರು ಕೂಡ ಅವರೊಂದಿಗೆ ಕೈಜೋಡಿಸಿದ್ದಾರೆ. ಈ ಸ್ಲಂ ಮಕ್ಕಳಿಗಾಗಿ ತೆರೆದ ಶಾಲೆಯಲ್ಲಿ ವಾರಕ್ಕೆ 5 ದಿನಗಳು ಮಾತ್ರ ಪಾಠ ನಡೆಯುತ್ತದೆ. ಪ್ರಸ್ತುತವಾಗಿ 1ನೇ ತರಗತಿಯಿಂದ 12ನೇ ತರಗತಿವರೆಗೆ 350 ಮಕ್ಕಳು ಶಾಲೆಯಲ್ಲಿ ಕಲಿಯುತ್ತಿದ್ದಾರೆ. ಈ ಬಡ ಮಕ್ಕಳಿಗೆ ಪಾಠ ಹೇಳಿಕೊಡಲು, ಹೋಂವರ್ಕ್ ಮಾಡಿಸಲು 25 ಮಂದಿ ಸ್ವಯಂ ಸೇವಕರು ದಂಪತಿಗೆ ಸಹಾಯ ಮಾಡುತ್ತಿದ್ದಾರೆ. ಗಣಿತ, ಸಮಾಜ ವಿಜ್ಞಾನ ಮತ್ತು ವಿಜ್ಞಾನ ವಿಷಯಗಳನ್ನೂ ಸಹ ಶಾಲೆಯಲ್ಲಿ ಮಕ್ಕಳಿಗೆ ಹೇಳಿಕೊಡಲಾಗುತ್ತದೆ ಎಂದು ಶರದ್ ಅವರು ತಿಳಿಸಿದರು.

    ಸ್ಲಂ ಮಕ್ಕಳಿಗೆ ಶಿಕ್ಷಣ ಪಡೆಯುವ ಅವಕಾಶ ಸಿಗುವುದು ತೀರಾ ಕಡಿಮೆ. ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ, ಬಡ ಪೋಷಕರು ಜೀವನ ನಡೆಸಲು ಮಕ್ಕಳನ್ನು ಕೂಡ ಕೆಲಸಕ್ಕೆ ಕಳಿಸುತ್ತಾರೆ. ಅಲ್ಲದೆ ಸ್ಲಂ ಪ್ರದೇಶಗಳಲ್ಲಿ ಅನಾರೋಗ್ಯವು ಹೆಚ್ಚಾಗಿರುತ್ತದೆ. ಹೊತ್ತಿನ ಊಟಕ್ಕೆ ಕಷ್ಟಪಡುವ ಮಂದಿ ಆರೋಗ್ಯದ ಕಡೆ ಸರಿಯಾಗಿ ಗಮನ ಕೊಡುವುದಿಲ್ಲ. ಆದ್ದರಿಂದ ಇಂತಹ ಮಕ್ಕಳಿಗೆ ಉಚಿತ ಶಿಕ್ಷಣ ನೀಡಲು ನಿರ್ಧರಿಸಿದೆವು. ನಮ್ಮಲ್ಲಿರುವ ಜ್ಞಾನ ಮತ್ತು ಸಂಪತ್ತನ್ನು ಈ ಮಕ್ಕಳಿಗೆ ಧಾರೆ ಎರೆಯಲು ಶ್ರಮಿಸುತ್ತಿದ್ದೇವೆ ಎಂದು ಶರದ್ ಅವರು ಹೇಳಿದರು.

    ಪ್ರೌಢ ಶಿಕ್ಷಣದ ಬಳಿಕ ಓದಲು ಇಚ್ಛಿಸದ ಹೆಣ್ಣುಮಕ್ಕಳಿಗೆ ಈ ಶಾಲೆಯಲ್ಲಿ ಬಟ್ಟೆ ಹೊಲಿಯುವ ತರಬೇತಿಯನ್ನು ನೀಡಲಾಗುತ್ತಿದೆ. ಸ್ಲಂ ಪ್ರದೇಶಗಳಲ್ಲಿ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇವೆ. ಆದ್ದರಿಂದ ಆಗಾಗ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಇಲ್ಲಿ ಮಾಡಲಾಗುತ್ತದೆ. ಈ ಮೂಲಕ ಇಲ್ಲಿನ ಮಕ್ಕಳು ಮಾತ್ರವಲ್ಲ ಜನರಲ್ಲಿ ಕೂಡ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ.

    ಕಳೆದ 1 ವರ್ಷ ನಾವು ಸ್ವಚ್ಛತೆ, ನೈರ್ಮಲ್ಯ ಹೀಗೆ ಪ್ರಮುಖ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಿದ್ದೇವೆ. ಶಾಲೆ ಆರಂಭಿಸಿದ ಕೆಲವು ತಿಂಗಳ ಬಳಿಕ ದಂಪತಿ ತಮ್ಮ ಟ್ರಸ್ಟ್‍ನ ಚಟುವಟಿಕೆಗಳನ್ನು ವಿಸ್ತರಿಸಿಸದೆವು. ಮೊದಲು ಕೇವಲ ಮೆಟ್ರೋ ಶೆಡ್‍ನ ಕೆಳಗೆ 50ಕ್ಕೂ ಹೆಚ್ಚು ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದರು. ಆ ಬಳಿಕ ಬೇರೆ ಸ್ಲಂ ಪ್ರದೇಶಗಳಲ್ಲಿನ ಮಕ್ಕಳಿಗೂ ಶಿಕ್ಷಣ ಕೊಡಬೇಕೆಂದು ತೀರ್ಮಾನಿಸಿದೆವು. ಇಲ್ಲಿ ಶಿಕ್ಷಣ ಕಲಿತ ಮಕ್ಕಳು ತಮ್ಮ ಮಗನಂತೆ ದೇಶಕ್ಕಾಗಿ ಕೊಡುಗೆ ನೀಡಬೇಕು. ಲಾಯರ್, ಎಂಜಿನಿಯರ್, ಪೈಲಟ್, ಜರ್ನಲಿಸ್ಟ್, ಯೋಧನಾಗಿ ಉತ್ತಮ ಪ್ರಜೆಗಳನ್ನಾಗಿ ಮಾಡಬೇಕು ಎಂಬ ಆಶಯವನ್ನು ಸವಿತಾ ಹೊಂದಿದ್ದಾರೆ.

    ನಮ್ಮ ಮಗ ಶಿಶಿರ್‍ನ ಶೌರ್ಯ ಮತ್ತು ತತ್ವವೇ ನಮಗೆ ಪ್ರೇರಣೆ. ನಮ್ಮ ಮಗನಿಗೆ ಗೌರವ ಸಲ್ಲಿಸಲು ಈ ಮಾರ್ಗವನ್ನು ನಾವು ಆಯ್ದುಕೊಂಡೆವು. ನಮ್ಮ ಮಗ ನಮ್ಮ ಕೆಲಸ ನೋಡಿ ಹೆಮ್ಮೆ ಪಡುತ್ತಾನೆ ಎಂದು ನಾನು ನಂಬಿದ್ದೇನೆ ಎಂದು ಸವಿತಾ ಅವರು ಖುಷಿಯನ್ನು ಹಂಚಿಕೊಂಡರು.

  • ವಾಯುಸೇನೆಯ ಮುಖ್ಯಸ್ಥರಾಗಲಿದ್ದಾರೆ ಬೆಂಗ್ಳೂರಿನ ಮಾಜಿ ಮುಖ್ಯ ತರಬೇತಿ ಕಮಾಂಡರ್

    ವಾಯುಸೇನೆಯ ಮುಖ್ಯಸ್ಥರಾಗಲಿದ್ದಾರೆ ಬೆಂಗ್ಳೂರಿನ ಮಾಜಿ ಮುಖ್ಯ ತರಬೇತಿ ಕಮಾಂಡರ್

    ನವದೆಹಲಿ: ಬೆಂಗಳೂರಿನ ಮಾಜಿ ಚೀಫ್ ಟ್ರೇನಿಂಗ್ ಕಮಾಂಡರ್ ಏರ್ ಮಾರ್ಷಲ್ ಆರ್ ಕೆಎಸ್ ಭಡೌರಿಯಾ ಅವರು ಭಾರತೀಯ ವಾಯು ಸೇನೆಯ ಮುಖ್ಯಸ್ಥರಾಗಲಿದ್ದಾರೆ.

    ಪ್ರಸ್ತುತ ವಾಯು ಸೇನೆಯ ಉಪಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಭಡೌರಿಯಾ ಅವರನ್ನು ವಾಯು ಸೇನೆಯ ಮುಖ್ಯಸ್ಥರನ್ನಾಗಿ ನೇಮಿಸಲಾಗುತ್ತಿದೆ. ಭಡೌರಿಯಾ ಅವರು ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಾಯು ಸೇನಾ ಮೆಡಲ್ ಪಡೆದಿದ್ದಾರೆ. ಎಡಿಸಿಯ ಸುಪ್ರೀಂ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ.

    ಏರ್ ಚೀಫ್ ಮಾರ್ಷಲ್ ಬೀರೇಂದ್ರ ಸಿಂಗ್ ಧನೋವಾ ಅವರು 25ನೇ ಭಾರತೀಯ ವಾಯು ಸೇನೆಯ ಮುಖ್ಯಸ್ಥರಾಗಿದ್ದರು. ಸೆಪ್ಟೆಂಬರ್ 30ರಂದು ಧನೋವಾ ಅವರು ನಿವೃತ್ತಿ ಹೊಂದಲಿದ್ದು, ಈ ಹಿನ್ನೆಲೆ ಭಡೌರಿಯಾ ಅವರನ್ನು ಅವರ ಜಾಗಕ್ಕೆ ನೇಮಿಸಲಾಗಿದೆ.

    ಭಡೌರಿಯಾ ಅವರು ಈ ವರೆಗೆ 4,250 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿದ್ದಾರೆ. ಒಟ್ಟು 26 ವಿವಿಧ ಯುದ್ಧ ವಿಮಾನಗಳು ಹಾಗೂ ಸಾಗಣಿಕಾ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ. ಅಲ್ಲದೆ, ಪ್ರಾಯೋಗಿಕ ಪರೀಕ್ಷಾ ಪೈಲೆಟ್, ಕ್ಯಾಟ್ ‘ಎ’ ಅರ್ಹ ಫ್ಲೈಯಿಂಗ್ ಇನ್‍ಸ್ಟ್ರಕ್ಟರ್ ಹಾಗೂ ಪೈಲೆಟ್ ಅಟ್ಯಾಕ್ ಇನ್‍ಸ್ಟ್ರಕ್ಟರ್ ಅನುಭವ ಹೊಂದಿದ್ದಾರೆ. ಈ ಹಿಂದೆ ಫ್ರೆಂಚ್ ವಾಯುಪಡೆಯ ಮಾಂಟ್-ಡಿ-ಮಾರ್ಸನ್ ವಾಯುನೆಲೆಯಲ್ಲಿ ರಫೇಲ್ ವಿಮಾನವನ್ನು ಸಹ ಭಡೌರಿಯಾ ಹಾರಿಸಿದ್ದರು. ಭಡೌರಿಯಾ ಅವರು 1980ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್‍ಗೆ ನಿಯೋಜನೆಗೊಂಡಿದ್ದರು.

  • ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ಜೀವ ಉಳಿಸಿದ ವಾಯು ಸೇನೆ- ವಿಡಿಯೋ ವೈರಲ್

    ಪ್ರವಾಹದಲ್ಲಿ ಸಿಲುಕಿದ್ದ ನಾಲ್ವರ ಜೀವ ಉಳಿಸಿದ ವಾಯು ಸೇನೆ- ವಿಡಿಯೋ ವೈರಲ್

    ಶ್ರೀನಗರ: ಜಮ್ಮುವಿನ ತಾವಿ ನದಿಗೆ ಏಕಾಏಕಿ ನೀರು ಹರಿಸಿದ ಪರಿಣಾಮ ಇಲ್ಲಿನ ಸೇತುವೆ ಬಳಿ ಕುಳಿತಿದ್ದ ನಾಲ್ಕು ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ್ದರು. ಈ ಬಗ್ಗೆ ಭಾರತೀಯ ವಾಯು ಸೇನೆಗೆ ಮಾಹಿತಿ ತಿಳಿದು ಸಂತ್ರಸ್ತರನ್ನು ಯೋಧರು ಕೂಡಲೇ ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಣೆ ಮಾಡಿದ್ದಾರೆ.

    ವಾಯು ಸೇನೆಯ ಈ ಸಾಹಸದ ವಿಡಿಯೋ ಇದೀಗ ವೈರಲ್ ಆಗಿದ್ದು, ಯೋಧರ ಕಾರ್ಯವನ್ನು ಎಲ್ಲರು ಹಾಡಿ ಹೊಗಳಿದ್ದಾರೆ. ಉತ್ತರ ಭಾರತದಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಮ್ಮುವಿನ ತಾವಿ ನದಿಗೆ ಏಕಾಏಕಿ ನೀರು ಹರಿದು ಬಂದಿದೆ. ಈ ಹಿನ್ನೆಲೆ ತಾವಿ ನದಿಯ ಸೇತುವೆ ಬಳಿ ಕುಳಿತಿದ್ದ ಹಲವರು ಅಪಾಯಕ್ಕೆ ಸಿಲುಕಿದ್ದರು. ಆಗ ಅಲ್ಲಿ ಕರ್ತವ್ಯನಿರತರಾಗಿದ್ದ ಭಾರತೀಯ ಸೇನೆಯ ಯೋಧರು ಕೂಡಲೇ ವಿಚಾರವನ್ನು ನಿಯಂತ್ರಣ ಕೊಠಡಿಗೆ ತಿಳಿಸಿದ್ದಾರೆ. ಈ ಬಗ್ಗೆ ತಿಳಿಯುತ್ತಿದ್ದಂತೆಯೇ ವಾಯು ಸೇನೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ಹೆಲಿಕಾಪ್ಟರ್ ರವಾನಿಸಿ ಸಂತ್ರಸ್ತರ ರಕ್ಷಿಸಿದ್ದಾರೆ.

    ಸ್ಥಳಕ್ಕೆ ಆಗಮಿಸಿದ ತಂಡ ಹೆಲಿಕಾಪ್ಟರ್‍ನಲ್ಲಿದ್ದ ಹಗ್ಗದ ಮೂಲಕ ಓರ್ವ ಯೋಧ ಕೆಳಗಡೆ ಇಳಿದು ಅಪಾಯಕ್ಕೆ ಸಿಲುಕಿದ್ದವರಿಗೆ ಹಗ್ಗ ಕಟ್ಟಿ ಅದರ ಮೂಲಕ ಮೇಲಕ್ಕೆ ಕರೆದುಕೊಂಡಿದ್ದಾರೆ.

    ಹೀಗೆ ಸೇತುವೆ ಬಳಿ ಇದ್ದ ಎಲ್ಲರನ್ನೂ ಏರ್ ಲಿಫ್ಟ್ ಮೂಲಕ ರಕ್ಷಣೆ ಮಾಡಲಾಗಿದೆ. ಈ ವೇಳೆ ಸೇನೆಯ ಸಾಹಸವನ್ನು ಸ್ಥಳೀಯರು ತಮ್ಮ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಈ ವಿಡಿಯೋ ಸದ್ಯ ಎಲ್ಲೆಡೆ ವೈರಲ್ ಆಗಿದ್ದು, ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಜನರನ್ನು ರಕ್ಷಿಸುವ ಸೇನೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  • ದಿಢೀರ್ ಭೂಸ್ಪರ್ಶ – ಬಸ್ ತಳ್ಳಿದಂತೆ ಹೆಲಿಕಾಪ್ಟರ್ ತಳ್ಳಿದ ಸ್ಥಳೀಯರು

    ದಿಢೀರ್ ಭೂಸ್ಪರ್ಶ – ಬಸ್ ತಳ್ಳಿದಂತೆ ಹೆಲಿಕಾಪ್ಟರ್ ತಳ್ಳಿದ ಸ್ಥಳೀಯರು

    ಬಳ್ಳಾರಿ: ಇಂಧನ ಖಾಲಿಯಾಗಿ ತುರ್ತು ಲ್ಯಾಂಡಿಂಗ್ ಆದ ಹೆಲಿಕಾಪ್ಟರ್ ಅನ್ನು ಸ್ಥಳೀಯರು ಬಸ್ ತಳ್ಳಿದಂತೆ ತಳ್ಳಿರುವ ಘಟನೆ ಸಂಡೂರು ತಾಲೂಕಿನ ಎಸ್.ಆರ್. ಪುರದಲ್ಲಿ ನಡೆದಿದೆ.

    ನೆರೆ ಸಂತ್ರಸ್ತರ ರಕ್ಷಣೆಗೆ ನೆರವಾಗಲೆಂದು ಬೆಂಗಳೂರಿನಿಂದ ಬೆಳಗಾವಿ ಕಡೆ ವಾಯುಸೇನೆಯ ಹೆಲಿಕಾಪ್ಟರ್ ಹೊರಟಿತ್ತು. ಮಾರ್ಗ ಮಧ್ಯೆ ಇಂಧನ ಕಡಿಮೆ ಇದೆ ಎನ್ನುವುದು ಪೈಲಟ್‍ಗೆ ಗೊತ್ತಾಗಿದೆ. ಕೂಡಲೇ ಪೈಲಟ್ ಸುರಕ್ಷಿತವಾಗಿ ಖಾಲಿ ಭೂಮಿಯಲ್ಲಿ ತುರ್ತು ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ್ದಾರೆ.

    ಹೆಲಿಕಾಪ್ಟರ್ ಲ್ಯಾಂಡ್ ಆದ ವಿಚಾರ ತಿಳಿದು ಗ್ರಾಮಸ್ಥರು ತಂಡೋಪತಂಡವಾಗಿ ಸ್ಥಳಕ್ಕೆ ಆಗಮಿಸಿದ್ದಾರೆ. ಈ ವಿಚಾರ ಗೊತ್ತಾಗಿ ಕುಡುತಿನಿ ಪಿಎಸ್‍ಐ ಮೊಹಮ್ಮದ್ ರಫಿ ನೇತೃತ್ವದಲ್ಲಿ ಪೊಲೀಸರು ಜಿಂದಾಲ್ ಫ್ಯಾಕ್ಟರಿಗೆ ತೆರಳಿ ವೈಮಾನಿಕ ಇಂಧನವನ್ನು ತಂದು ಹೆಲಿಕಾಪ್ಟರಿಗೆ ತುಂಬಿಸಿದ್ದಾರೆ.

    ಇಂಧನ ತುಂಬಿಸಿದ್ದರೂ ಹೆಲಿಕಾಪ್ಟರ್ ಮಣ್ಣಿನಲ್ಲಿ ಸ್ವಲ್ಪ ಹೂತು ಹೋಗಿತ್ತು. ಹೀಗಾಗಿ ಗ್ರಾಮಸ್ಥರು ಹೆಲಿಕಾಪ್ಟರ್ ಅನ್ನು ಬಸ್ಸು ತಳ್ಳಿದಂತೆ ದೂಡಿದ್ದಾರೆ. ಬಳಿಕ ಹೆಲಿಕಾಪ್ಟರ್ ಬೆಳಗಾವಿ ಕಡೆ ಪ್ರಯಾಣ ಬೆಳೆಸಿತು. ತುರ್ತು ಕರೆ ಬಂದ ಹಿನ್ನೆಲೆಯಲ್ಲಿ ರಕ್ಷಣಾ ಕಾರ್ಯಕ್ಕೆ ಹೋಗುವ ಭರದಲ್ಲಿ ಸಿಬ್ಬಂದಿ ಇಂಧನ ಎಷ್ಟಿದೆ ಎನ್ನುವುದನ್ನು ಪರಿಶೀಲನೆ ಮಾಡದ ಪರಿಣಾಮ ಭೂ ಸ್ಪರ್ಶ ಮಾಡಿತ್ತು.

     

  • 114 ಯುದ್ಧ ವಿಮಾನಗಳ ಖರೀದಿಗೆ ಸಿದ್ಧತೆ-ವಿಶ್ವದಲ್ಲೇ ಬೃಹತ್ ಡೀಲ್‍ಗೆ ಮುಂದಾದ ಭಾರತ

    114 ಯುದ್ಧ ವಿಮಾನಗಳ ಖರೀದಿಗೆ ಸಿದ್ಧತೆ-ವಿಶ್ವದಲ್ಲೇ ಬೃಹತ್ ಡೀಲ್‍ಗೆ ಮುಂದಾದ ಭಾರತ

    ನವದೆಹಲಿ: ಯುದ್ಧ ವಿಮಾನ ಖರೀದಿಸುವ ನಿಟ್ಟಿನಲ್ಲಿ ಭಾರತ ಮಹತ್ವದ ಹೆಜ್ಜೆಯನ್ನಿಟ್ಟಿದ್ದು, 114 ಯುದ್ಧ ವಿಮಾನಗಳ ಖರೀದಿಗೆ ಮುಂದಾಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ದೊಡ್ಡ ಡೀಲ್‍ಗೆ ಭಾರತ ಮುಂದಾಗಿದೆ.

    114 ವಿಮಾನಗಳನ್ನು ಖರೀದಿಸುವ ಕುರಿತು ಈಗಾಗಲೇ ಬಿಡ್ಡಿಂಗ್ ಆಹ್ವಾನಿಸಲು ಸಿದ್ಧತೆ ಮಾಡಿಕೊಂಡಿದ್ದು, ಇದು ವಿಶ್ವದಲ್ಲೇ ಬೃಹತ್ ಡೀಲ್ ಆಗಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಳೆಯ ಯುದ್ಧ ವಿಮಾನಗಳನ್ನು ಬದಲಿಸುವುದು ಹಾಗೂ ಹೊಸದಾಗಿ ಹೆಚ್ಚು ವಿಮಾನಗಳನ್ನು ಖರೀದಿಸುವ ಮೂಲಕ ದೇಶದ ಸಶಸ್ತ್ರ ಪಡೆಗಳ ಸಾಮಥ್ರ್ಯವನ್ನು ಹೆಚ್ಚಿಸಲು ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

    ಈ ಬೃಹತ್ ಡೀಲ್‍ನ ಬೆಲೆ ಸುಮಾರು 15 ಬಿಲಿಯನ್ ಯುಎಸ್ ಡಾಲರ್‍ಗಿಂತ ಹೆಚ್ಚಾಗಿದೆ. ಇದಕ್ಕಾಗಿ ಅಧಿಕಾರಿಗಳು ವಿವಿಧ ತಯಾರಿಸಿ ನಡೆಸಿದ್ದಾರೆ. ಬೋಯಿಂಗ್ ಕಂ., ಲಾಕ್‍ಹೀಡ್ ಮಾರ್ಟೀನ್ ಕಾರ್ಪೋರೇಷನ್ ಹಾಗೂ ಸ್ವೀಡನ್‍ನ ಸಾಬ್ ಎಬಿ ಸೇರಿದಂತೆ ವಿವಿಧ ಪ್ರಮುಖ ಯುದ್ಧ ನೌಕೆಗಳ ಉತ್ಪಾದಕರನ್ನು ರಕ್ಷಣಾ ಅಧಿಕಾರಿಗಳು ಸೆಳೆಯುತ್ತಿದ್ದಾರೆ. ಇವುಗಳಲ್ಲಿ ಶೇ.85ರಷ್ಟು ಉತ್ಪಾದನೆ ಭಾರತದಲ್ಲೇ ಆಗಬೇಕು ಎಂದು ಕಳೆದ ವರ್ಷವೇ ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

    ದೇಶದ ರಕ್ಷಣಾ ಪಡೆಗಳನ್ನು ಅಧುನಿಕರಣಗೊಳಿಸುವುದು ಪ್ರಧಾನಿ ಮೋದಿ ಅವರಿಗೆ ಸವಾಲಾಗಿ ಪರಿಣಮಿಸಿದ್ದು, ನೆರೆಯ ಚೀನಾ ಹಾಗೂ ಪಾಕಿಸ್ತಾನಗಳಿಂದ ಬೆದರಿಕೆ ಎದುರಾದರೂ ಮೊದಲ ಅವಧಿಯಲ್ಲಿ ಯಾವುದೇ ಹೊಸ ಪ್ರಮುಖ ಶಸ್ತ್ರಾಸ್ತ್ರ ಒಪ್ಪಂದಗಳಿಗೆ ಸಹಿ ಹಾಕಲಿಲ್ಲ. ಇತ್ತೀಚೆಗೆ ಸೋವಿಯತ್ ನಿರ್ಮಿತ ಭಾರತ ಹಳೆಯ ಮಿಗ್-21 ಯುದ್ಧ ವಿಮಾನ ಪಾಕಿಸ್ತಾನದ ಅಧುನಿಕ ಎಫ್-16 ಯುದ್ಧ ವಿಮಾನವನ್ನೇ ಹೊಡೆದುರುಳಿಸಿತ್ತು.

    ಖರೀಸುವ ಪ್ರಕ್ರಿಯೆ ಪ್ರಾರಂಭ
    ವಿವಿಧ ಯುದ್ಧ ವಿಮಾನಗಳ ಉತ್ಪಾದಕರಿಂದ ಬಿಡ್ಡಿಂಗ್ ಆಹ್ವಾನಿಸಲು ಈಗಾಗಲೇ ಭಾರತೀಯ ವಾಯು ಸೇನೆಯ ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಈ ಕುರಿತು ಕಿರಿಯ ರಕ್ಷಣಾ ಸಚಿವ ಶ್ರೀಪಾದ್ ನಾಯಕ್ ಅವರು ಸಂಸತ್‍ನಲ್ಲಿ ಪ್ರಸ್ತಾಪಿಸಿದ್ದು, ಟ್ಯಾಂಕ್‍ಗಳು, ಶಸ್ತ್ರಸಜ್ಜಿತ ವಾಹನಗಳನ್ನು ಖರೀದಿಸಲು ದಾಖಲೆಗಳನ್ನು ಸಿದ್ಧಪಡಿಸುತ್ತಿದ್ದು, ವಿದೇಶಿ ಹಡಗು ನಿರ್ಮಾಣ ಮಾಡುವವರಿಂದ ಭಾರತದಲ್ಲಿ ಜಲಾಂತರ್ಗಾಮಿ ನೌಕೆಗಳನ್ನು ತಯಾರಿಸಲು ಕೇಳಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

    ಹಿಂದೂ ಮಹಾಸಾಗರ ಪ್ರದೇಶದಲ್ಲಿ ಕಡಲ ಗಡಿಯ ಭದ್ರತೆ ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಭಾರತ ನೌಕಾಪಡೆ ಹಾಗೂ ಕರಾವಳಿ ಕಾವಲುಗಾರರಿಗೆ ಯುದ್ಧ ನೌಕೆಗಳು ಹಾಗೂ ಹಡಗುಗಳನ್ನು ಖರೀದಿಸಲು ಬಿಡ್ ಕರೆಯಲಾಗಿದೆ. 150(2.2ಬಿಲಿಯನ್ ಡಾಲರ್) ಬಿಲಿಯನ್ ಮೌಲ್ಯದ 6 ಕ್ಷಿಪಣಿ ಯುದ್ಧ ನೌಕೆಗಳು ಹಾಗೂ ಇತರ ಸಣ್ಣ ಹಡಗುಗಳ ನಿರ್ಮಾಣಕ್ಕೆ ಮುಂದಾಗಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸುವಂತೆ ಪ್ರಧಾನಿ ಮೋದಿ ಆಡಳಿತ ಸೋಮವಾರ 7 ಶಿಪ್‍ಯಾರ್ಡ್ ಗಳಿಗೆ ತಿಳಿಸಿದೆ ಎಂದು ನಾಯಕ್ ತಿಳಿದ್ದಾರೆ.

    ಭಾರತೀಯ ವಾಯು ಸೇನೆ ಹಾಗೂ ನೌಕಾಪಡೆಗೆ ಒಟ್ಟು 400 ಸಿಂಗಲ್ ಹಾಗೂ ಡಬಲ್ ಎಂಜಿನ್ ಯುದ್ಧ ವಿಮಾನಗಳ ಅಗತ್ಯವಿದೆ ಎಂದು ಸರ್ಕಾರ ತಿಳಿಸಿದೆ.

    ಬೋಯಿಂಗ್‍ಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರ ನಡೆಸುವ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್(ಎಚ್‍ಎಎಲ್) ಹಾಗೂ ಮಹೀಂದ್ರಾ ಡಿಫೆನ್ಸ್ ಸಿಸ್ಟಮ್ಸ್ ಲಿ., ಫೈಟರ್ ಜೆಟ್‍ಗಳ ಖರೀದಿಗೆ ಎಫ್/ಎ-18, ಲಾಕ್‍ಹೀಡ್ ತನ್ನ ಎಫ್-21 ಜೆಟ್‍ಗಳಿಗಾಗಿ ಟಾಟಾ ಗ್ರೂಪ್‍ನೊಂದಿಗೆ ಜಂಟಿಯಾಗಿ ಬಿಡ್ ಮಾಡಲಿದೆ. ಸಾಬ್ ತನ್ನ ಗ್ರಪೆನ್ ಜೆಟ್‍ಗಳನ್ನು ತಯಾರಿಸಲು ಗೌತಮ್ ಅದಾನಿಯೊಂದಿಗೆ ಕೈ ಜೋಡಿಸಲಿದೆ.

    2015ರಲ್ಲಿ 11 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ 126 ರಫೇಲ್ ಯುದ್ಧ ವಿಮಾನಗಳನ್ನು ಡಸಾಲ್ಟ್ ಏವಿಯೇಷನ್‍ನೊಂದಿಗಿನ ಆದೇಶವನ್ನು ರದ್ದುಗೊಳಿಸಿದ ನಂತರ ಮತ್ತೆ ರಫೇಲ್ ಖರೀದಿಸಲು ಒಂದು ದಶಕವೇ ಬೇಕಾಯಿತು. ಕಳೆದ ಬಾರಿಯ ಮೋದಿ ಸರ್ಕಾರದ ಆಡಳಿತಾವಧಿಯಲ್ಲಿ 36 ಜೆಟ್‍ಗಳನ್ನು ಪ್ರತ್ಯೇಕವಾಗಿ ಖರೀದಿಸಲಾಯಿತು. ಆದರೆ, ಈ ಬಾರಿಯ ಟೆಂಡರ್‍ನಲ್ಲಿ ಆಯ್ಕೆಯಾದವರು ಒಪ್ಪಂದ ಮಾಡಿಕೊಂಡ ಮೂರು ವರ್ಷಗಳಲ್ಲಿ ಮೊದಲ ಜೆಟ್‍ನಲ್ಲಿ ಹಸ್ತಾಂತರಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ.