Tag: air base

  • ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ – 2 ಸ್ಫೋಟ, ಇಬ್ಬರಿಗೆ ಗಾಯ

    ಜಮ್ಮು ವಾಯು ನೆಲೆ ಮೇಲೆ ಡ್ರೋನ್ ದಾಳಿ – 2 ಸ್ಫೋಟ, ಇಬ್ಬರಿಗೆ ಗಾಯ

    ಜಮ್ಮು:  ಭಾರತದ ಸೇನೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಡ್ರೋನ್ ದಾಳಿ ನಡೆದಿದೆ.   ಭಾನುವಾರ ನಸುಕಿನ ವೇಳೆಯಲ್ಲಿ ಜಮ್ಮು ವಾಯು ನೆಲೆಯ ಮೇಲೆ ಎರಡು ಡ್ರೋನ್ ಮೂಲಕ ಸ್ಫೋಟಕವನ್ನು ಸ್ಫೋಟಿಸಲಾಗಿದೆ.

    ಟೆಕ್ನಿಕಲ್ ಪ್ರದೇಶದಲ್ಲಿರುವ ಕಟ್ಟಡದ ಮೇಲ್ಭಾಗದಲ್ಲಿ ಬೆಳಗ್ಗೆ 1:45ಕ್ಕೆ ಮೊದಲ ಸ್ಫೋಟ ಸಂಭವಿಸಿದೆ. ಈ ಸ್ಫೋಟ ಸಂಭವಿಸಿದ 5 ನಿಮಿಷದಲ್ಲಿ ತೆರೆದ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ಮೇಲ್ಭಾಗ ಒಡೆದು ಹೋಗಿದೆ.

    ಈ ಸ್ಫೋಟದಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ವರದಿಯಾಗಿದೆ. ವಿಮಾನ ನಿಲ್ದಾಣದ ಮೇಲೆ ಡ್ರೋನ್ ಮೂಲಕ ಸುಧಾರಿತ ಸ್ಫೋಟಕ ಸಾಧನ(ಐಇಡಿ) ಬಳಸಿ ಸ್ಫೋಟ ನಡೆಸಿರಬಹುದು ಎಂದು ಶಂಕಿಸಲಾಗಿದೆ.

    ರಾಷ್ಟ್ರೀಯ ಬಾಂಬ್ ದತ್ತಾಂಶ ಕೇಂದ್ರದ ತಜ್ಞರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿಯ ಮೇಲೆ ಡ್ರೋನ್ ದಾಳಿ – ಹೊತ್ತಿ ಉರಿದ ಘಟಕಗಳು

    ಜಮ್ಮು ವಿಮಾನ ನಿಲ್ದಾಣಕ್ಕೆ ಸತ್ವಾರಿ ವಿಮಾನ ನಿಲ್ದಾಣ ಎಂದು ಕರೆಯಲಾಗುತ್ತದೆ. ಇಲ್ಲಿ ನಾಗರಿಕ ವಿಮಾನಗಳು ಲ್ಯಾಂಡ್ ಆದರೂ ಏರ್ ಟ್ರಾಫಿಕ್ ಕಟ್ರೋಲ್(ಎಟಿಸಿ) ಭಾರತೀಯ ವಾಯುಪಡೆಯ ನಿಯಂತ್ರಣದಲ್ಲಿದೆ.

    ಈ ವಿಮಾನ ನಿಲ್ದಾಣ ಜಮ್ಮು ತಾವಿ ರೈಲು ನಿಲ್ದಾಣದಿಂದ 6 ಕಿ.ಮೀ, ಪಂಜಾಬ್‍ನ ಪಠಾಣ್‍ಕೋಟ್ ವಿಮಾನ ನಿಲ್ದಾಣದಿಂದ 110 ಕಿ.ಮೀ ಮತ್ತು ರಾಷ್ಟ್ರೀಯ ಹೆದ್ದಾರಿ 1 ರಿಂದ 1 ಕಿ.ಮೀ ದೂರದಲ್ಲಿದೆ.

    ಭಾರತದ ಗಡಿಯಲ್ಲಿ ಪಾಕಿಸ್ತಾನ ಕಡಿಮೆ ಬೆಲೆ ಚೀನಿ ಡ್ರೋನ್ ಮೂಲಕ ಶಸ್ತ್ರಾಸ್ತ್ರವನ್ನು ಮೇಲಿನಿಂದ ಕೆಳಗಡೆ ಉದುರಿಸುತ್ತಿದ್ದ ಪ್ರಕರಣಗಳು ವರದಿಯಾಗಿದ್ದವು. ಈ ವೇಳೆ ಹಲವು ಡ್ರೋನ್‍ಗಳನ್ನು ಹೊಡೆದು ಉರುಳಿಸುವ ಮೂಲಕ ಭಾರತದ ಸೇನಾಪಡೆಗಳು ಪಾಕಿಸ್ತಾನಕ್ಕೆ ತಿರುಗೇಟು ನೀಡಿದ್ದವು.

  • ಕಾರ್ಗಿಲ್ ವಿಜಯ್ ದಿವಸ್ – ಏಷ್ಯಾದ ಅತಿದೊಡ್ಡ ನೌಕೆ ವೀಕ್ಷಿಸಿದ ವಿದ್ಯಾರ್ಥಿಗಳು

    ಕಾರ್ಗಿಲ್ ವಿಜಯ್ ದಿವಸ್ – ಏಷ್ಯಾದ ಅತಿದೊಡ್ಡ ನೌಕೆ ವೀಕ್ಷಿಸಿದ ವಿದ್ಯಾರ್ಥಿಗಳು

    ಕಾರವಾರ: ಕಾರ್ಗಿಲ್ ವಿಜಯ್ ದಿವಸದ ಆಚರಣೆಯ ಅಂಗವಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಅರಗಾದಲ್ಲಿರುವ ಕದಂಬ ನೌಕಾನೆಲೆಯಲ್ಲಿ ಇಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೌಕ ಹಡಗುಗಳನ್ನು ವೀಕ್ಷಿಸಲು ಅವಕಾಶ ಮಾಡಿಕೊಡಲಾಯಿತು.

    ಜಿಲ್ಲೆಯ ಜನರಲ್ಲದೇ ಹೊರರಾಜ್ಯದ ಜನರು ಇಂದು ಕಾರವಾರದ ಕದಂಬ ನೌಕಾನೆಲೆಗೆ ಆಗಮಿಸಿ ಐ.ಎನ್.ಎಸ್. ವಿಕ್ರಮಾದಿತ್ಯ ಹಾಗೂ ಸುವರ್ಣ ಯುದ್ಧ ನೌಕೆಯನ್ನು ವೀಕ್ಷಿಸುವ ಮೂಲಕ ಕಣ್ತುಬಿಂಕೊಂಡರು.

    ಪ್ರತಿ ವರ್ಷದಲ್ಲಿ ಒಂದು ಬಾರಿ ಮಾತ್ರ ಸಾರ್ವಜನಿಕರಿಗೆ ಏಷ್ಯಾದ ಅತಿದೊಡ್ಡ ಹಡಗು ವಿಕ್ರಮಾದಿತ್ಯ ಹಾಗೂ ನೌಕಾನೆಲೆಯನ್ನು ನೋಡಲು ಅವಕಾಶ ಕಲ್ಪಿಸಲಾಗುತ್ತದೆ. ಇಂದು ಒಂದೇ ದಿನದಲ್ಲಿ 15 ಸಾವಿರಕ್ಕೂ ಹೆಚ್ಚು ಜನರು ನೌಕಾನೆಲೆಗೆ ಭೇಟಿ ನೀಡಿದರು.

  • ಉಗ್ರನ ಜೇಬಿನಲ್ಲಿ ಮ್ಯಾಪ್ – ಮೇ 23 ರಂದು ಭಾರೀ ದಾಳಿಗೆ ಸ್ಕೆಚ್!

    ಉಗ್ರನ ಜೇಬಿನಲ್ಲಿ ಮ್ಯಾಪ್ – ಮೇ 23 ರಂದು ಭಾರೀ ದಾಳಿಗೆ ಸ್ಕೆಚ್!

    ಶ್ರೀನಗರ: ಕಳೆದ ಗುರುವಾರ ಶೋಪಿಯಾನ್‍ನಲ್ಲಿ ಯೋಧರ ಗುಂಡಿನ ದಾಳಿಗೆ ಹತನಾದ ಉಗ್ರನ ಜೇಬಿನಲ್ಲಿ ಸಿಕ್ಕ ಮ್ಯಾಪ್ ಒಂದು ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ನಡೆಯಬೇಕಿದ್ದ ಭಾರಿ ಅನಾಹುತವನ್ನು ತಪ್ಪಿಸಿದೆ.

    ಮೇ 23 ಲೋಕಸಭಾ ಚುನಾವಣೆಯ ಫಲಿತಾಂಶದ ದಿನವನ್ನೇ ಗುರಿಯಾಗಿಸಿಕೊಂಡು ಭಯೋತ್ಪಾದಕರು ಹಲವಾರು ದಾಳಿಯನ್ನು ಕಾಶ್ಮೀರದಲ್ಲಿ ಮಾಡಲಿದ್ದಾರೆ ಎಂದು ಭಾರತೀಯ ಗುಪ್ತಚರ ಇಲಾಖೆ ಭದ್ರತಾ ಪಡೆಗಳಿಗೆ ಮಾಹಿತಿ ನೀಡಿತ್ತು.

    ಈ ಮಾಹಿತಿಗೆ ಪೂರಕ ಎಂಬಂತೆ ಗುರುವಾರ ಸೇನೆಯ ಗುಂಡಿನ ದಾಳಿಗೆ ಬಲಿಯದ ಉಗ್ರನ ಜೇಬಿನಲ್ಲಿ ನಕ್ಷೆ ದೊರಕಿದೆ. ಈ ಮ್ಯಾಪ್‍ನ ಪ್ರಕಾರ ಶ್ರೀನಗರ ಮತ್ತು ಅವಂತಿಪೋರದಲ್ಲಿರುವ ಭಾರತೀಯ ವಾಯುಪಡೆಯ ನಲೆಗಳ ಮೇಲೆ ಮೇ 23 ರಂದು ದಾಳಿ ಮಾಡಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ.

    ಮೇ 14 ರಂದು ನಡೆದ ಸಭೆಯಲ್ಲಿ ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆಯ ರಿಯಾಜ್ ನೈಕೂ, ಜೈಶ್-ಇ- ಮೊಹಮ್ಮದ್ ಉಗ್ರಸಂಘಟನೆಯ ಇಬ್ಬರು ಉಗ್ರರು ಮತ್ತು ಲಷ್ಕರ್-ಇ-ತೊಯ್ಬಾ ಸಂಘಟನೆಯ ರಿಯಾಜ್ ದಾರ್ ಎಂಬ ನಾಲ್ಕು ಉಗ್ರರು ಸೇರಿಕೊಂಡು ವಾಯು ನೆಲೆಗಳ ಮೇಲೆ ದಾಳಿ ಮಾಡಲು ಸಂಚು ಮಾಡಿದ್ದರು ಎಂದು ತಿಳಿದುಬಂದಿದೆ.

    ಪುಲ್ವಾಮ ಮತ್ತು ಶೋಪಿಯಾನ್‍ನಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ 6 ಮಂದಿ ಉಗ್ರರನ್ನು ಕೊಲ್ಲಲಾಗಿತ್ತು. ಆ ಸಮಯದಲ್ಲಿ ಈ ಮಾಹಿತಿಯು ಹೊರಬಂದಿದೆ. ಈ ಗುಂಡಿನ ಕಾಳಗದಲ್ಲಿ 2 ಜನ ಭಾರತೀಯ ಯೋಧರು ವೀರಮರಣ ಅಪ್ಪಿದ್ದರು.