Tag: Air Attack

  • ವಾಯು ದಾಳಿಯಲ್ಲಿ 250ಕ್ಕೂ ಅಧಿಕ ಉಗ್ರರ ಸಾವು: ಅಮಿತ್ ಶಾ

    ವಾಯು ದಾಳಿಯಲ್ಲಿ 250ಕ್ಕೂ ಅಧಿಕ ಉಗ್ರರ ಸಾವು: ಅಮಿತ್ ಶಾ

    ಅಹಮದಾಬಾದ್: ಭಾರತದ ವಾಯುಪಡೆ ಬಾಲಕೋಟ್ ಮೇಲೆ ನಡೆಸಿದ ದಾಳಿಯಲ್ಲಿ 250ಕ್ಕೂ ಹೆಚ್ಚು ಉಗ್ರರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಗುಜರಾತ್ ನಲ್ಲಿ ಹೇಳಿದ್ದಾರೆ.

    ಉರಿಯಲ್ಲಿ ಉಗ್ರರ ದಾಳಿ ಬಳಿಕ ಭಾರತ ಪ್ರತೀಕಾರವಾಗಿ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು. ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನದ ಉಗ್ರರು ಅಲರ್ಟ್ ಆಗಿದ್ದರಿಂದ ವಾಯು ದಾಳಿ ನಡೆಸಲಾಯ್ತು. ಪುಲ್ವಾಮಾ ದಾಳಿಯ ಬಳಿಕ ಫೆಬ್ರವರಿ 26ರಂದು ವಾಯುದಾಳಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಏರ್ ಸ್ಟ್ರೈಕ್ ನಡೆಸಲು ಅನುಮತಿ ನೀಡಿತ್ತು. ಭಾರತ ಯಶಸ್ವಿಯಾಗಿ ಉಗ್ರರ ತಾಣಗಳನ್ನು ಯಶಸ್ವಿಯಾಗಿ ಧ್ವಂಸಗೊಳಿಸಿ ಯಾವುದೇ ಹಾನಿಗೆ ಒಳಗಾಗದೇ ಭಾರತಕ್ಕೆ ಹಿಂದಿರುಗಿತ್ತು ಎಂದು ಅಮಿತ್ ಶಾ ಏರ್ ಸರ್ಜಿಕಲ್ ಸ್ಟ್ರೈಕ್ ಬಗೆಗಿನ ಮಾಹಿತಿ ಹೊರಹಾಕಿದರು.

    ವಾಯುದಾಳಿಗೆ ಪ್ರತಿಯಾಗಿ ಪಾಕಿಸ್ತಾನ ಮರು ದಾಳಿ ನಡೆಸಿತ್ತು. ಪಾಕ್ ಹಿಮ್ಮೆಟ್ಟಿಸುವ ವೇಳೆ ನಮ್ಮ ವಿಂಗ್ ಕಮಾಂಡರ್ ಅಭಿನಂದನ್ ಪಾಕಿಸ್ತಾನದಲ್ಲಿ ಸೆರೆಗೆ ಒಳಗಾದರು. ಆದರೆ ನರೇಂದ್ರ ಮೋದಿ ಸರ್ಕಾರ 48 ಗಂಟೆಯಲ್ಲಿ ಅಭಿನಂದನ್ ಅವರನ್ನು ಭಾರತಕ್ಕೆ ಕರೆತಂದಿದೆ. ವಿಶ್ವದಲ್ಲಿಯೇ ಮೊದಲ ಬಾರಿಗೆ ಶತ್ರು ದೇಶದಲ್ಲಿದ್ದ ಯೋಧನನ್ನು ಇಷ್ಟು ಬೇಗ ಕರೆತಂದಿದ್ದು ಭಾರತ ಎಂದು ತಿಳಿಸಿದರು.

    ಸೂರತ್ ಸಮಾವೇಶದಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುವಾಗ, ಮಮತಾ ಬ್ಯಾನರ್ಜಿ ಸಾಕ್ಷಿ ಕೇಳ್ತಾರೆ, ರಾಹುಲ್ ಗಾಂಧಿ ರಾಜಕೀಯ ಮಾಡ್ತಾರೆ, ಅಖಿಲೇಶ್ ಯಾದವ್ ತನಿಖೆಗೆ ಆಗ್ರಹಿಸುತ್ತಾರೆ. ಇವರೆಲ್ಲರ ಹೇಳಿಕೆ ನಾಚಿಕೆ ತರಿಸುತ್ತದೆ. ನಿಮ್ಮ ಈ ರೀತಿಯ ಹೇಳಿಕೆಗಳಿಗೆ ಶತ್ರು ರಾಷ್ಟ್ರ ಪಾಕಿಸ್ತಾನಿಗಳು ನಗುತ್ತಿದ್ದಾರೆ. ಮೋದಿ ಮತ್ತು ವಾಯುಪಡೆಗೆ ನೀವು ಬೆಂಬಲ ನೀಡದಿದ್ದರೂ ಪರವಾಗಿಲ್ಲ, ಈ ರೀತಿಯ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಿ ಎಂದು ವಿಪಕ್ಷ ನಾಯಕರಿಗೆ ಚಾಟಿ ಬೀಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಸಾವು..?

    ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಸಾವು..?

    -ರಕ್ತಕಾರಿ ಸತ್ತ ಪಾಪಿ ಉಗ್ರ..?

    ನವದೆಹಲಿ: ಮೋಸ್ಟ್ ವಾಂಟೆಡ್ ಉಗ್ರ ಮಸೂದ್ ಅಜರ್ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದ್ದು, ಅಧಿಕೃತ ಘೋಷಣೆ ಹೊರಬೀಳಬೇಕಿದೆ.

    ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಮಸೂದ್ ಅಜರ್ ಪಾಕಿಸ್ತಾನದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಪಾಕ್ ಮಾಧ್ಯಮಗಳು ಸುದ್ದಿ ಬಿತ್ತರಿಸಿದ್ದವು. ಚಿಕಿತ್ಸೆ ಫಲಕಾರಿಯಾಗದೆ ಅಜರ್ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗುತ್ತಿದೆ. ಮಸೂದ್ ಅಜರ್ ನನ್ನು ಉಳಿಸಿಕೊಳ್ಳಲು ಕುತಂತ್ರಿ ಪಾಕ್ ಮತ್ತೊಂದು ನಾಟಕ ಶುರುಮಾಡಿಕೊಂಡಿದೆಯೇ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.

    ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್, ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯ ಸ್ಥಾಪಕನಾಗಿದ್ದ ಮಸೂದ್ ಅಜರ್ ಸಾವಿನ ವಿಚಾರ ಖಚಿತವಾಗಬೇಕಿದೆ. ಎರಡು ದಿನಗಳ ಹಿಂದೆ ಪಾಕಿಸ್ತಾನದ ವಿದೇಶಾಂಗ ಸಚಿವ ಖುರೇಷಿ, ಒಂದು ವೇಳೆ ಭಾರತ ಖಚಿತ ಸಾಕ್ಷಿಗಳನ್ನು ನೀಡಿದ್ರೆ ಆತನನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.

    ಫೆಬ್ರವರಿ 26ರಂದು ಭಾರತೀಯ ವಾಯುಪಡೆ ನಡೆಸಿದ ದಾಳಿಯಲ್ಲಿ ಗಾಯಗೊಂಡಿದ್ದ ಮಸೂದ್ ಅಜರ್ ನನ್ನು ಪಾಕಿಸ್ತಾನ ರಹಸ್ಯವಾಗಿ ಆತನನ್ನು ಸೇನಾಸ್ಪತ್ರೆಗೆ ದಾಖಲಿಸಿತ್ತು. ಆದ್ರೆ ಸ್ಥಳೀಯರಿಗೆ ಲಿವರ್ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದಾನೆಂದು ರಹಸ್ಯವನ್ನು ಪಾಕ್ ಸರ್ಕಾರ ಮರೆಮಾಡಿತ್ತು ಎಂಬ ಮಾತುಗಳು ಕೇಳಿಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾಮನಿಂದ ರಾವಣ, ಕೃಷ್ಣನಿಂದ ಕಂಸ, ಇದೀಗ ಮೋದಿಯಿಂದ ಮಸೂದ್ ಸಂಹಾರ: ಮಹಾಭಾರತ ನಟ

    ರಾಮನಿಂದ ರಾವಣ, ಕೃಷ್ಣನಿಂದ ಕಂಸ, ಇದೀಗ ಮೋದಿಯಿಂದ ಮಸೂದ್ ಸಂಹಾರ: ಮಹಾಭಾರತ ನಟ

    ಮುಂಬೈ: ರಾಮನಿಂದ ರಾವಣ, ಕೃಷ್ಣನಿಂದ ಕಂಸ, ಇದೀಗ ಪ್ರಧಾನಿ ಮೋದಿಯಿಂದ ಉಗ್ರ ಮಸೂದ್ ಅಜರ್ ನ ಸಂಹಾರ ಎಂದು ಮಹಾಭಾರತ ಧಾರಾವಾಹಿಯ ನಟ ಗಜೇಂದ್ರ ಸಿಂಗ್ ಚೌಹಾಣ್ ಹೇಳಿದ್ದಾರೆ.

    ವಾಯುಪಡೆ ಪಾಕಿಸ್ತಾನದಲ್ಲಿರುವ ಉಗ್ರರ ತರಬೇತಿ ಶಿಬಿರಗಳನ್ನು ಧ್ವಂಸಗೊಳಿಸಿದ ಖುಷಿಯನ್ನು ಹಂಚಿಕೊಂಡಿದ ಹಾಸ್ಯ ನಟ ರಾಜು ಶ್ರೀವಾತ್ಸವ್, ಈಗಾಗಲೇ 370 ಉಗ್ರರನ್ನು ಹೊಡೆದುರುಳಿಸಲಾಗಿದೆ. ಉತ್ತರ ಪ್ರದೇಶ ಮತ್ತು ಬಿಹಾರನಿಂದ ನಾಲ್ಕೈದು ರೈಲುಗಳನ್ನು ಬಿಟ್ಟರೇ ನಮ್ಮವರೇ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸಬಲ್ಲರು. ಅಲ್ಲಿರುವ ಉಗ್ರರನ್ನು ನಾಶ ಮಾಡುವ ಸಾಮಥ್ರ್ಯವನ್ನು ನಮ್ಮವರು ಹೊಂದಿದ್ದಾರೆ.

    ಪುಲ್ವಾಮಾದಲ್ಲಿ ಜೈಶ್-ಎ-ಮೊಹಮ್ಮದ್ ಸಂಘಟನೆಯ ಆತ್ಮಾಹುತಿ ಬಾಂಬರ್ ಆದಿಲ್ ನಡೆಸಿದ ದಾಳಿಯಲ್ಲಿ 44 ಯೋಧರು ಹುತಾತ್ಮರಾಗಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಕಾರವಾಗಿ ಫೆ.26ರಂದು ಗಡಿ ನಿಯಂತ್ರಣ ರೇಖೆ ದಾಟಿ ಉಗ್ರರ ನೆಲೆಗಳಾದ ಬಾಲಕೋಟ್, ಮುಜಾಫರ್ ಬಾದ್ ಮತ್ತು ಚಿಕೋಟಿಯಲ್ಲಿಯ ಶಿಬಿರಗಳನ್ನು ಧ್ವಂಸಗೊಳಿಸಿದ್ದರು. ಪುಲ್ವಾಮಾ ದಾಳಿಯಾದ 12ನೇ ದಿನಕ್ಕೆ ಪ್ರತಿಕಾರವನ್ನು ಭಾರತ ತೀರಿಸಿಕೊಂಡಿತ್ತು.

    ಬಾಲಕೋಟ್ ನಲ್ಲಿ ಮೂರು ತಿಂಗಳು ತರಬೇತಿ ಪಡೆದುಕೊಂಡ ಉಗ್ರರು ಭಾರತ ಪ್ರವೇಶಿಸಿ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದರು. ಗನ್ ಹಿಡಿಯುವುದು ಸೇರಿದಂತೆ ಪ್ರಾಥಮಿಕ ತರಬೇತಿ ಪಡೆದ ಉಗ್ರರನ್ನು ಬಾಲಕೋಟ್ ಗೆ ರವಾನಿಸಲಾಗುತ್ತಿತ್ತು ಬಾಲಕೋಟ್ ನಲ್ಲಿ ಉಗ್ರರಿಗೆ ಎಕೆ-47, ಪಿಕಾ, ಎಲ್‍ಎಂಜಿ, ರಾಕೆಟ್ ಉಡಾವಣೆ, ಯುಬಿಜಿಎಲ್ ಮತ್ತು ಗ್ರೆನೆಡ್ ಬಳಕೆಯ ತರಬೇತಿಯನ್ನು ನೀಡಲಾಗುತ್ತಿತ್ತು. ಇದೇ ವೇಳೆ ಈಜು, ಕುದುರೆ ಸವಾರಿ ಮತ್ತು ಕತ್ತಿ ವರಸೆಯನ್ನು ಕಲಿಸಲಾಗುತ್ತಿತ್ತು. ಈ ಉಗ್ರರ ತರಬೇತಿ ಶಿಬಿರವನ್ನು ‘ಮದ್ರಸಾ ಆಯೇಷಾ ಸಾದಿಕ್’ ಹೆಸರಿನಲ್ಲಿ ನಿರ್ವಹಣೆ ಮಾಡಲಾಗುತ್ತಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತ, ಪಾಕಿಸ್ತಾನ ವಾಯು ಮಾರ್ಗಗಳು ಬಂದ್!

    ಭಾರತ, ಪಾಕಿಸ್ತಾನ ವಾಯು ಮಾರ್ಗಗಳು ಬಂದ್!

    ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಎರಡು ದೇಶಗಳ ವಾಯು ಮಾರ್ಗದಲ್ಲಿ ಹಾರಾಟ ನಡೆಸುವ ವಿಮಾನಗಳ ಸಂಚಾರ ಬಂದ್ ಆಗಿದೆ.

    ಶ್ರೀನಗರ, ಜಮ್ಮು, ಲೇಹ್, ಚಂಡೀಗಢ, ಅಮೃತಸರ, ಧರ್ಮಶಾಲಾ, ಡೆಹ್ರಡೂನ್‍ನಲ್ಲಿ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿದೆ.

    ಮುಂದಿನ ಮೇ ತಿಂಗಳವರೆಗೆ ಬಂದ್ ಮಾಡಿದ್ದು, ಪರ್ಯಾಯ ಮಾರ್ಗ ಉಪಯೋಗಿಸುತ್ತಿದೆ. ಮೇ 27ರ ರಾತ್ರಿ 11.55ರವರೆಗೆ ಭಾರತ ತನ್ನ ವಾಯುಮಾರ್ಗ ಬಂದ್ ಮಾಡಿದೆ.

    ಪಾಕಿಸ್ತಾನ ಈಗ ಮುಲ್ತಾನ್, ಲಾಹೋರ್, ಫೈಸಲಾಬಾದ್, ಸಿಯಾಲಟ್ ಕೋಟ್ ನಲ್ಲಿ ವಿಮಾನ ನಿಲ್ದಾಣದಲ್ಲಿ ಸಂಪೂರ್ಣ ವಾಣಿಜ್ಯ ವಿಮಾನಗಳ ಹಾರಾಟವನ್ನು ಬಂದ್ ಮಾಡಿದೆ. ದಿಢೀರ್ ಎಂದು ನಿಲ್ದಾಣಗಳು ಬಂದ್ ಆಗಿದ್ದರಿಂದ ಮಾರ್ಗವನ್ನು ಬದಲಿಸಲಾಗಿದೆ. ಕೆಲ ವಿಮಾನಗಳು ಇಂಧನ ಕೊರತೆಯಿಂದಾಗಿ ಹಾರಾಟ ನಡೆಸಿಲ್ಲ. ಎರಡು ದೇಶಗಳ ವಾಯುಮಾರ್ಗ ಬಂದ್ ಆಗಿದ್ದರಿಂದ ಅಂತರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ಏರುಪೇರಾಗಿದೆ.

    ಪಾಕಿಸ್ತಾನ ತನ್ನ ವಾಯುಮಾರ್ಗವನ್ನು ಕರಾಚಿ ಮತ್ತು ಲಾಹೋರ್ ಎಂದು ಎರಡು ಭಾಗವಾಗಿ ವಿಂಗಡಿಸಿದೆ. ಸದ್ಯ ಲಾಹೋರ್ ಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಸದ್ಯದ ಮಾಹಿತಿ ಪ್ರಕಾರ ಪಾಕಿಸ್ತಾನ ಫೆ.28 ರಾತ್ರಿ 11.59ರವರೆಗೆ ತನ್ನ ವಾಯುಮಾರ್ಗವನ್ನು ಬಂದ್ ಮಾಡಿದೆ.

    ಇಂದು ಬೆಳಗ್ಗೆ ಕಾಶ್ಮೀರದ ಬುದ್ಗಾಮ್ ಜಿಲ್ಲೆಯಲ್ಲಿ ಭಾರತೀಯ ವಾಯುಸೇನೆಯ ಜೆಟ್ ಪತನಗೊಂಡಿದ್ದು, ಇಬ್ಬರು ಪೈಲಟ್ ಗಳು ಸಾವನ್ನಪ್ಪಿದ್ದಾರೆ. ಭಾರತದ ವಾಯುಸೇನೆಯ ಸರ್ಜಿಕಲ್ ಸ್ಟ್ರೈಕ್ ಬಳಿಕ ಪ್ರತಿದಾಳಿ ನಡೆಸಿದ್ದ ಪಾಕಿಸ್ತಾನದ ಎಫ್ -16 ವಿಮಾನ ಇಂದು ಬೆಳಗ್ಗೆ ಗಡಿ ನಿಯಂತ್ರಣ ರೇಖೆಯನ್ನು ಪ್ರವೇಶಿಸಿತ್ತು. ಗಡಿಯನ್ನು ದಾಟಿ 3 ಕಿ.ಮೀ ಪ್ರವೇಶಿಸಿದ ವಿಮಾನವನ್ನು ಭಾರತ ಹೊಡೆದು ಉರುಳಿಸಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

    ತಾತ್ಕಲಿಕವಾಗಿ ಎಲ್ಲ ನಾಗರೀಕ ವಿಮಾನಗಳ ಹಾರಾಟವನ್ನು ನಿಲ್ಲಿಸಲಾಗಿದೆ ಎಂದು ಶ್ರೀನಗರದ ಏರ್ ಪೋರ್ಟ್ ಅಧಿಕಾರಿಗಳು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಎಲ್ಲವನ್ನು ಮೊದ್ಲೇ ಹೇಳಲ್ಲ, ಮುಂದೆ ನಿಮ್ಗೆ ಗೊತ್ತಾಗುತ್ತೆ: ಪ್ರಧಾನಿ ಮೋದಿ

    ಎಲ್ಲವನ್ನು ಮೊದ್ಲೇ ಹೇಳಲ್ಲ, ಮುಂದೆ ನಿಮ್ಗೆ ಗೊತ್ತಾಗುತ್ತೆ: ಪ್ರಧಾನಿ ಮೋದಿ

    ನವದೆಹಲಿ: ಇಂದು ನಾನು ಎಲ್ಲವನ್ನು ಮೊದಲೇ ಹೇಳಲು ಹೋಗುವುದಿಲ್ಲ. ಮುಂದಿನ ದಿನಗಳಲ್ಲಿ ನಿಮಗೆ ಎಲ್ಲವೂ ಗೊತ್ತಾಗಲಿದೆ. ಇಂದು ಭಾರತಕ್ಕೆ ದೊಡ್ಡ ಜಯ ಸಿಕ್ಕಿದೆ ಎಂದು ವಾಯುದಾಳಿಯ ವಿಜಯದ ಸಂತೋಷವನ್ನು ಪರೋಕ್ಷವಾಗಿ ಪ್ರಧಾನಿ ಮೋದಿ ಯುವಕರೊಂದಿಗೆ ಹಂಚಿಕೊಂಡರು.

    ದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ `ನ್ಯಾಷನಲ್ ಯೂತ್ ಫೆಸ್ಟಿವಲ್’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪ್ರಧಾನಿ, ಯುವ ಪೀಳಿಗೆ ಜೊತೆ ಸಂವಾದ ನಡೆಸಿದರು. ಸಂವಾದಕ್ಕೂ ಮುನ್ನ ಮಾತನಾಡಿ ಅವರು, ಇಂದಿನ ಯುವಕರು ಪ್ರತಿಯೊಂದರಲ್ಲಿಯೂ ಹೊಸತನವನ್ನು ಹುಡುಕುತ್ತಾರೆ. ಇಂದಿನ ಪೀಳಿಗೆಯವರು ತುಂಬಾ ಚಾಣಕ್ಷರಾಗಿರುತ್ತಾರೆ. ಕೆಲವರಿಗೆ ವಯಸ್ಸು ಆಗುತ್ತಿದೆ ಆದ್ರೆ ಬುದ್ಧಿ ಬೆಳೆಯಲ್ಲ ಅಂತಹವರನ್ನು ನಾವೆಲ್ಲ ನೋಡಿದ್ದೇವೆ. ನಿಮ್ಮ ಮನೆಯಲ್ಲಿರುವ ಮಕ್ಕಳನ್ನೇ ನೋಡಿ, ನಿಮಗಿಂತ ಚುರುಕಾಗಿರುತ್ತವೆ ಎಂದರು.

    ಇಂದಿನ ಯುವ ಪೀಳಿಗೆ ಮಲ್ಟಿ ಟಾಸ್ಕಿಂಗ್ ಗಾಗಿ ಸಿದ್ಧವಿರುತ್ತದೆ. ಹಾಗಾಗಿ ಹಲವು ಕೆಲಸಗಳನ್ನು ಏಕಕಾಲದಲ್ಲಿ ಮಾಡಿ ಯಶಸ್ವಿಯಾಗುತ್ತಾರೆ. ಗುರಿಗಳನ್ನು ಬೇಗ ತಲುಪುವುದಕ್ಕಾಗಿ ಹೆಚ್ಚಿನ ಶ್ರಮ ಹಾಕುತ್ತಾರೆ. ಇದುವೇ ಹೊಸ ಭಾರತದ ಆಧಾರವಾಗಿದೆ. ಹಾಗಾಗಿ ಯುವಕರಿಗೆ ಎಲ್ಲ ವಿಭಾಗದಲ್ಲಿ ಅವಕಾಶ ಸಿಗಬೇಕು ಮತ್ತು ಪ್ರೋತ್ಸಾಹ ದೊರೆಯಬೇಕು. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಜೈಶ್ ಉಗ್ರರಿಬ್ಬರನ್ನು ಹತ್ಯೆಗೈದ ಭದ್ರತಾ ಪಡೆ

    ಜೈಶ್ ಉಗ್ರರಿಬ್ಬರನ್ನು ಹತ್ಯೆಗೈದ ಭದ್ರತಾ ಪಡೆ

    ಶ್ರೀನಗರ: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ್ದ ಇಬ್ಬರು ಉಗ್ರರನ್ನು ಭಾರತದ ಭದ್ರತಾ ಪಡೆ ಎನ್‍ಕೌಂಟರ್ ಮಾಡಿದೆ. ಇಂದು ಬೆಳಗ್ಗೆ ಜಮ್ಮು ಮತ್ತು ಕಾಶ್ಮೀರದ ಶೊಪಿಯಾನ್ ಎಂಬಲ್ಲಿ ಈ ಎನ್‍ಕೌಂಟರ್ ನಡೆದಿದೆ.

    ಶೊಪಿಯಾನ್ ಜಿಲ್ಲೆಯಲ್ಲಿ ಇಂದು ಬೆಳಗ್ಗಿನ ಜಾವದಿಂದಲೇ ಗುಂಡಿನ ಸದ್ದು ಕೇಳತೊಡಗಿತ್ತು. ಬೆಳಗ್ಗೆ 4.20ಕ್ಕೆ ಆರಂಭವಾದ ಗುಂಡಿನ ದಾಳಿ 8.30ಕ್ಕೆ ಅಂತ್ಯಗೊಂಡಿದೆ. ಗುಂಡಿನ ದಾಳಿಯಲ್ಲಿ ಮೂವರು ಉಗ್ರರನ್ನ ಎನ್ ಕೌಂಟರ್ ಮಾಡಲಾಗಿದೆ. ದಾಳಿ ನಡೆದ ಪ್ರದೇಶದಲ್ಲಿ ಕೆಟ್ಟೆಚ್ಚರ ವಹಿಸಲಾಗಿದೆ. ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

    ಈ ಗುಂಡಿನ ದಾಳಿಯಲ್ಲಿ ಭಾರತೀಯ ಐವರು ಯೋಧರು ಗಾಯಗೊಂಡಿದ್ದು, ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಿಲಿಟರಿ ಆಸ್ಪತ್ರೆಗೆ ರವಾನಿಸಲಾಗಿದೆ. ಇನ್ನುಳಿದ ಮೂವರು ಯೋಧರ ಆರೋಗ್ಯ ಸ್ಥಿರವಾಗಿದೆ. ಉಗ್ರರು ಶೊಪಿಯಾನ್ ಜಿಲ್ಲೆಯಲ್ಲಿ ಅಡಗಿರುವ ಖಚಿತ ಮಾಹಿತಿ ಮೇರೆಗೆ ಸಿಆರ್ ಪಿಎಫ್ ಮತ್ತು ವಿಶೇಷ ತನಿಖಾ ತಂಡ ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿತ್ತು. ಉಗ್ರರು ಗುಂಡಿನ ದಾಳಿ ನಡೆಸುತ್ತಿರುವಾಗಲೇ ನಮ್ಮ ಯೋಧರು ಸಹ ಪ್ರತಿದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

    ಎಲ್‍ಒಸಿ(ಗಡಿ ನಿಯಂತ್ರಣಾ ರೇಖೆ) ಯ ಸುಮಾರು 50 ಕಡೆಗಳಲ್ಲಿ ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ನಿರಂತರವಾಗಿ ಶೆಲ್ ದಾಳಿ ಕೂಡ ಮಾಡಿದೆ. ಪಾಕಿಸ್ತಾನ ಸೇನೆಯ ಉದ್ಧಟತನಕ್ಕೆ ಭಾರತ ಕೂಡ ಅದೇ ದಾಟಿಯಲ್ಲಿ ಉತ್ತರ ನೀಡುತ್ತಿದೆ. ಪಾಕ್ ಸೇನೆಯ ಮೇಲೆ ನಿರಂತರ ಗುಂಡಿನ ದಾಳಿ ನಡೆಸಿದೆ. ಮಂಗಳವಾರ ಸಂಜೆ 5.30ಕ್ಕೆ ಫಿರಂಗಿ ಮೂಲಕ ದೊಡ್ಡ ಶೆಲ್ ದಾಳಿ ಪ್ರಾರಂಭಿಸುವ ಮೂಲಕ ಅಖನೂರ್, ನೌಶೇರಾ, ಕೃಷ್ಣಾ ಘಾಟಿ ಸೆಕ್ಟರ್ ಗಳಲ್ಲಿ ಪಾಕ್ ಪುಂಡಾಟ ಮೆರೆಯುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಉಗ್ರರನ್ನು ಚೆಂಡಾಡಿದ ಭಾರತಕ್ಕೆ ಪಾಕ್ ಚಾಲೆಂಜ್

    ಉಗ್ರರನ್ನು ಚೆಂಡಾಡಿದ ಭಾರತಕ್ಕೆ ಪಾಕ್ ಚಾಲೆಂಜ್

    ಇಸ್ಲಾಂಬಾದ್: ಫೆಬ್ರವರಿ 26ರ ಬೆಳಗ್ಗಿನ ಜಾವ ಪಾಕಿಸ್ತಾನದಲ್ಲಿರುವ ಜೈಷ್ ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸುವ ಮೂಲಕ ಪುಲ್ವಾಮ ದಾಳಿಗೆ ಪ್ರತಿಕಾರ ತೆಗೆದುಕೊಂಡಿದೆ. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪಾಕಿಸ್ತಾನ ಸೇನೆಯೆ ವಕ್ತಾರ ಆಸಿಫ್ ಗಫೂರ್ ಭಾರತಕ್ಕೆ ಚಾಲೆಂಜ್ ಹಾಕಿದ್ದಾರೆ.

    ಸುದ್ದಿಗೋಷ್ಠಿಯಲ್ಲಿ ಭಾರತದ ಮಾಧ್ಯಮಗಳ ಕೆಲ ಸುದ್ದಿಯ ಚಿತ್ರಗಳನ್ನು ಪ್ರದರ್ಶಿಸಿದ ಆಸಿಫ್ ಗಫೂರ್, ಭಾರತೀಯ ವಾಯುಸೇನೆ ಬಾಲ್ ಕೋಟ್, ಮುಜಾಫರ್‍ಬಾದ್ ಮತ್ತು ಚಿಕೋಟಿಯಲ್ಲಿ ದಾಳಿ ನಡೆಸಿದೆಯಂತೆ. ಬರೋಬ್ಬರಿ 21 ನಿಮಿಷಗಳ ಕಾಲ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಈ ಕಾರ್ಯಾಚರಣೆ ನಡೆಸಿವೆ ಎಂದು ನೆರೆಯ ದೇಶದ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸುತ್ತಿವೆ. ಇದೊಂದು ದೊಡ್ಡ ಸುಳ್ಳಾಗಿದ್ದು, ಧೈರ್ಯವಿದ್ದರೆ ಪಾಕ್ ವಾಯುನೆಲೆಯಲ್ಲಿ ಭಾರತದ ವಿಮಾನಗಳು ಹಾರಾಟ ನಡೆಸಲಿ ಎಂದು ಆಸಿಫ್ ಗಫೂರ್ ಚಾಲೆಂಜ್ ಹಾಕಿದ್ದಾರೆ.

    ವಾಯುಸೇನೆಯ ಜೆಟ್‍ಗಳು ಯಾವಾಗಲೂ ಹಾರಾಡುವುದಿಲ್ಲ. ಆದ್ರೆ ಗಡಿರೇಖೆಯ ನಮ್ಮ ನಿಗಾ ಯಾವಾಗಲೂ ಇರುತ್ತದೆ. ಫೆಬ್ರವರಿ 14ರ ಬಳಿಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.

    ಭಾರತ ಪಾಕಿಸ್ತಾನದ ಸೈನಿಕರು ಇಲ್ಲದ ಜಾಗದಲ್ಲಿ ದಾಳಿ ನಡೆಸಲು ಸಂಚು ರೂಪಿಸಿತ್ತು. ಸೈನಿಕರಲ್ಲದ ಸಾಮಾನ್ಯ ಜನರು ವಾಸವಾಗಿರುವ ಸ್ಥಳದಲ್ಲಿ ಬಾಂಬ್ ಹಾಕಲು ಪ್ಲಾನ್ ಮಾಡಿತ್ತು. ಸಾಮಾನ್ಯ ಜನರ ಮೇಲೆ ದಾಳಿ ನಡೆಸುವ ಮೂಲಕ ನಾವು ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿಕೊಳ್ಳಲು ಭಾರತ ಪ್ಲಾನ್ ಮಾಡಿತ್ತು ಎಂದು ಗಫೂರ್ ಆರೋಪಿಸಿದ್ದಾರೆ.

    ಭಾರತದ ಯುದ್ಧವಿಮಾನಗಳು ನಮ್ಮತ್ತ ಪ್ರವೇಶಿಸುತ್ತಿದ್ದಂತೆ ನಮ್ಮವರು ದಾಳಿ ನಡೆಸಿದಾಗ ತರಾತುರಿಯಲ್ಲಿ ಖಾಲಿ ಜಾಗದಲ್ಲಿ ಬಾಂಬ್ ಎಸೆದು ಪರಾರಿಯಾದ್ರು. ಭಾರತ ತಾವು 200ರಿಂದ 300 ಉಗ್ರರನ್ನು ಕೊಂದಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ 5 ಪ್ರಮುಖ ಕಾರಣಗಳು

    ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ 5 ಪ್ರಮುಖ ಕಾರಣಗಳು

    ನವದೆಹಲಿ: ಬಾಲ್‍ಕೋಟ್ ಜೈಷ್ ಉಗ್ರ ಸಂಘಟನೆಯ ಪ್ರಮುಖ ಕೇಂದ್ರ. ಅಲ್ಲಿ ಉಗ್ರರ ತರಬೇತಿ, ತರಬೇತುದಾರರು, ಶಸ್ತ್ರಾಸ್ತ್ರ ಸಂಗ್ರಹ ಮಾಡಲಾಗಿತ್ತು ಅಂತ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಹೇಳಿದ್ದರು. ಅಲ್ಲದೆ ಈ ಕ್ಯಾಂಪನ್ನು ಉಡಾಯಿಸದೇ ಹೋಗಿದ್ದಲ್ಲಿ ಭಾರತದಲ್ಲಿ ಮತ್ತಷ್ಟು ಆತ್ಮಾಹುತಿ ದಾಳಿ ನಡೀತಿತ್ತು ಎಂದು ಆತಂಕ ವ್ಯಕ್ತಪಡಿಸಿದ್ದರು. ಪಾಕಿಸ್ತಾನದ ನೆಲದಲ್ಲೇ ಉಗ್ರ ಸಂಹಾರ ನಡೆಸಿರೋದರ ಹಿಂದಿದೆ ಐದು ಪ್ರಮುಖ ಕಾರಣಗಳಿವೆ.

    1. ಉಗ್ರರಿಗೆ ಪಾಕಿಸ್ತಾನದ ಯಾವುದೇ ತಾಣ ಸುರಕ್ಷಿತವಲ್ಲ
    ಭಾರತ ಇದೇ ಮೊದಲ ಬಾರಿಗೆ ವೈಮಾನಿಕ ದಾಳಿ ಬಗ್ಗೆ ಹಾಕಿಕೊಂಡಿದ್ದ ತನ್ನ ಮಾನಸಿಕ ಬೇಲಿಯನ್ನು ಮೀರಿ ಹೊರ ಬಂತು. 12 ಎಐಎಫ್ ಫೈಟರ್ ಜೆಟ್‍ಗಳು ಪಾಕ್ ವೈಮಾನಿಕ ಪ್ರದೇಶಕ್ಕೆ ನುಗ್ಗಿ ಬಾಲಕೋಟ್, ಚಕೋಟಿ, ಮುಜಾಫರ್‍ಬಾದ್‍ನಲ್ಲಿ ಉಗ್ರರನ್ನು ಸಂಹರಿಸಿದವು. ಅಷ್ಟೇ ಅಲ್ಲ, ಸುರಕ್ಷಿತವಾಗಿ ವಾಪಸ್ ಬಂದವು. ಈ ಮೂಲಕ ಪಾಕಿಸ್ತಾನದಲ್ಲಿರುವ ಯಾವ ಸ್ಥಳವೂ ಉಗ್ರರಿಗೆ ಸುರಕ್ಷಿತವಲ್ಲ. ಅದು ಇಸ್ಲಾಮಾಬಾದ್ ಇರಬೋದು ಅಥವಾ ರಾವಲ್‍ಪಿಂಡಿ ಇರಬೋದು ಅನ್ನೋ ಕಠಿಣ ಸಂದೇಶ ರವಾನಿಸಿತ್ತು.

    2. ಯಾವ ಬೆದರಿಕೆಗೂ ಬಗ್ಗಲ್ಲವೆಂದು ಪಾಕ್‍ಗೆ ಪಾಠ
    ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತ ಯಾವುದೇ ಕ್ಷಣದಲ್ಲಿಯೂ ಪ್ರತಿಕಾರ ತೀರಿಸಬಹುದು ಎಂದು 2 ದಿನಗಳ ಹಿಂದಷ್ಟೇ ಪಾಕ್ ಸೇನಾ ಮುಖ್ಯಸ್ಥ ಮೇಜರ್ ಜನರಲ್ ಆಸಿಫ್ ಗಫೂರ್ ಹೇಳಿದ್ರು. ಆದರೆ, ಪಾಕ್ ಗಡಿ ದಾಟಿ ಬಂದ ಭಾರತೀಯ ಸೇನೆಯನ್ನು ಸುಮ್ಮನೆ ಬಿಡಲ್ಲ. ನಮ್ಮ ಬಳಿಯೂ ಅಣ್ವಸ್ತ್ರ ಇದೆ ಎಂದು ಬೆದರಿಕೆಯೊಡ್ಡಿದ್ದರು. ಇದ್ಯಾವುದಕ್ಕೂ ಕ್ಯಾರೇ ಎನ್ನದ ವಾಯುಸೇನೆ 12 ಜೆಟ್‍ಗಳ ಮೂಲಕ ಅವರ ನೆಲಕ್ಕೆ ನುಗ್ಗಿ ಉಗ್ರಾಘಾತ ಮಾಡಿ ಬಂದಿವೆ. ಈ ಮೂಲಕ ನೀವು ಏನ್ ಬೇಕಾದರೂ ಮಾಡಿ ಯಾವ ಬೆದರಿಕೆಗೂ ಬಗ್ಗಲ್ಲ ಅಂತ ಸೇನೆ ಹೇಳಿ ಬಂದಿದೆ.

    3. ಉಗ್ರರ ಕ್ಯಾಂಪ್‍ಗಳೇ ಟಾರ್ಗೆಟ್
    ಪಾಕಿಸ್ತಾನದ ಜೈಷ್ ಉಗ್ರರು ಅಡಗುವ ಪ್ರದೇಶಗಳು ಜನಸಂದಣಿಯಿಂದ ಕೂಡಿರುತ್ತವೆ. ಲಾಹೋರ್ ಬಳಿಯ ಜೈಶ್ ಹೆಡ್‍ಕ್ವಾಟ್ರಸ್ ಮುಂದಕ್ಕೆ ಅಥವಾ ದಕ್ಷಿಣ ಪಂಜಾಬ್‍ನ ಬಹವಾಲ್‍ಪುರದ ಕೇಂದ್ರಗಳು ಇದಕ್ಕೆ ಉದಾಹರಣೆ. ಕೈಬರ್ ಪಖ್ತುಂಖ್ವಾದ ಉಗ್ರ ತರಬೇತಿ ಕೇಂದ್ರ ದಟ್ಟ ಅರಣ್ಯದಲ್ಲಿದೆ. ಹಾಗಾಗಿ ಇದನ್ನೇ ಉಡೀಸ್ ಮಾಡುವ ಎಂದು ತಳಮಟ್ಟದಲ್ಲಿ ದಾಳಿ ನಡೆಸುವ ಸಾಮಥ್ರ್ಯದೊಂದಿಗೆ 12 ಜೆಟ್‍ಗಳು ಉಗ್ರರ ಕ್ಯಾಂಪ್‍ಗಳನ್ನು ಟಾರ್ಗೆಟ್ ಮಾಡಿದವು. ಹೀಗಾಗಿ ಜನರ ಜೀವಹಾನಿಗೆ ಆಸ್ಪದವೇ ಕೊಡಲಿಲ್ಲ.

    4. ಭಾರತದ ತಾಂತ್ರಿಕ ಶ್ರೇಷ್ಠತೆ ಪ್ರದರ್ಶನ
    ಪಾಕಿಸ್ತಾನದ ಹದ್ದಿನ ಕಣ್ಣನ್ನು ತಪ್ಪಿಸಿ ಒಳನುಗ್ಗಿದ ಭಾರತೀಯ ಸೇನೆಯ ಯಶಸ್ಸಿನ ಜೊತೆಗೆ ನಮ್ಮ ದೇಶದ ಐಎಎಫ್‍ನ ತಾಂತ್ರಿಕ ಶ್ರೇಷ್ಠತೆ ಕೂಡ ಸಾಬೀತಾಗಿದೆ. ಅಮೆರಿಕದಲ್ಲಿ ಸಿದ್ಧಪಡಿಸಲಾದ ಪಾಕಿಸ್ತಾನದ ರಡಾರ್ ರಕ್ಷಣೆಯನ್ನು ಭೇದಿಸಿದ ಮಿರಾಜ್ ಜೆಟ್‍ಗಳು ಕಣ್ಮುಚ್ಚಿ ಕಣ್ತೆರೆಯುವಂತೆ ಮಿಂಚಿನ ಸಂಚಾರದ ದಾಳಿ ಮಾಡಿ ಉಗ್ರರ ಹೆಡೆಮುರಿ ಕಟ್ಟಿದೆ. ಈ ಮೂಲಕ ತನ್ನ ಟೆಕ್ನಿಕಲ್ ಸುಪಿರಿಯಾರಿಟಿಯನ್ನು ಜಗತ್ತಿಗೇ ಪ್ರದರ್ಶಿಸಿದೆ.

    5. ಜಾಗತಿಕ ಮಟ್ಟದಲ್ಲಿ ಭಾರತಕ್ಕಿಲ್ಲ ಆತಂಕ
    ಜಾಗತಿಕ ಮಟ್ಟದಲ್ಲೂ ವಿರೋಧ ಕಟ್ಟಿಕೊಳ್ಳಬಾರದು. ಉಗ್ರರನ್ನು ಸುಮ್ಮನೆ ಬಿಡಬಾರದು ಎಂದು ನಡೆಸಿದ ಏರ್ ಸ್ಟ್ರೈಕ್ ಸಕ್ಸಸ್ ಆಗಿದೆ. ಯಾಕಂದ್ರೆ, ವಿಶ್ವದ ಯಾವ ದೇಶವೂ ಸಹ ಭಾರತದ ದಾಳಿಯ ಬಗ್ಗೆ ಆಕ್ಷೇಪ ಎತ್ತಿಲ್ಲ. ಜೊತೆಗೆ ಭಾರತ ಈ ದಾಳಿಯನ್ನು ಯುದ್ಧ ಎಂದು ಒಪ್ಪಿಕೊಂಡಿಲ್ಲ. ನಾವು ಯಾವುದೇ ಯುದ್ಧ ಸಾರುತ್ತಿಲ್ಲ, ದಾಳಿಯನ್ನಷ್ಟೇ ಮಾಡಿದ್ದೇವೆ ಎಂದು ಭಾರತ ಸ್ಪಷ್ಟಪಡಿಸಿದೆ. ಅಷ್ಟರ ಮಟ್ಟಿಗೆ ನಮ್ಮ ಯೋಧರು ತಮ್ಮ ಟಾರ್ಗೆಟ್, ಆಪರೇಷನ್ ಅನ್ನು ಫಿನಿಶ್ ಮಾಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

    ರಾತ್ರಿ ವಿಮಾನಗಳ ಶಬ್ಧ ಹೆಚ್ಚಿತ್ತು, ದಿಢೀರ್ ಒಂದು ಶಬ್ಧ ಬಂತು – ಬಾಲಕೋಟ್ ನಿವಾಸಿಗಳ ಪ್ರತಿಕ್ರಿಯೆ

    ಬಾಲಕೋಟ್: ಭಾರತದ ವಾಯು ಸೇನೆಯ ದಾಳಿಗೆ ಒಳಗಾದ ಬಾಲಕೋಟ್ ನಿವಾಸಿಗಳು ಇಂದು ಬೆಳಗಿನ ಜಾವದ ಅನುಭವವನ್ನು ಮಾಧ್ಯಮದ ಜೊತೆ ಹಂಚಿಕೊಂಡಿದ್ದಾರೆ. ಯುದ್ಧ ವಿಮಾನಗಳ ಹಾರಾಟದ ಸದ್ದು ಜೋರಾಗಿದ್ದರಿಂದ ಅಲ್ಲಿಯ ನಿವಾಸಿಗಳು ನಿದ್ದೆಯಿಂದ ಎದ್ದು ಭಯದಲ್ಲಿ ಕಾಲ ಕಳೆದಿದ್ದಾರೆ.

    ಬೆಳಗಿನ ಜಾವ 3 ಗಂಟೆಗೆ ದೊಡ್ಡ ದೊಡ್ಡ ಸದ್ದುಗಳು ಕೇಳುತ್ತಿತ್ತು. ಮೊದಲಿಗೆ ವಿಮಾನಗಳು ಹಾರಾಟ ಎಂದು ನಿರ್ಲಕ್ಷ್ಯ ಮಾಡಲಾಗಿತ್ತು. ಸಮಯ ಕಳೆದಂತೆ ವಿಮಾನಗಳ ಸದ್ದು ಹೆಚ್ಚಾಗತೊಡಗಿತು. ಭಯದಿಂದ ರಾತ್ರಿ ನಿದ್ದೆಯ ಮಾಡಲಿಲ್ಲ. ಕೊನೆಗೆ ದಿಢೀರ್ ಅಂತಾ ಎಲ್ಲ ಶಬ್ಧ ನಿಂತು ಹೋಯ್ತು. ಬಾಲಕೋಟ್ ಬಳಿಯ ಕಂಗಡ್ ಎಂಬಲ್ಲಿ ಬಾಂಬ್ ಹಾಕಲಾಗಿದೆ ಎಂದು ಅಲ್ಲಿಯ ನಮ್ಮ ಸಂಬಂಧಿಕರು ತಿಳಿಸಿದರು ಎಂದು ಬಾಲಕೋಟ್ ನಿವಾಸಿ ಮೊಹಮ್ಮದ್ ಆದಿಲ್ ಹೇಳಿದ್ದಾರೆ.

    ಬೆಳಗ್ಗೆ ನಾವೆಲ್ಲ ಕಂಗಡ್ ಪ್ರದೇಶಕ್ಕೆ ಹೋದಾಗ ಅಲ್ಲಿ ದೊಡ್ಡ ಕಂದಕಗಳು ಉಂಟಾಗಿದ್ದವು. ನಾಲ್ಕೈದು ಮನೆಗಳಿಗೆ ಹಾನಿಯಾಗಿದ್ದು, ಓರ್ವ ಗಾಯಗೊಂಡಿದ್ದನು ಎಂದು ತಾವು ನೋಡಿದ್ದನ್ನು ಮೊಹಮ್ಮದ್ ಆದಿಲ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

    ಬೆಳಗಿನ ಜಾವ ಮೂರು ಗಂಟೆಯಿಂದ ಆಗಸದಲ್ಲಿ ವಿಮಾನಗಳ ಹಾರಾಟ ಹೆಚ್ಚಾಯ್ತು. ಮೊದಲಿಗೆ ಗುಂಡು ಹಾರುವ ಸದ್ದು ಕೇಳಿತು. ಇದಾದ ಕೆಲವೇ ನಿಮಿಷಗಳಲ್ಲಿ ಮೂರು ಬಾರಿ ದೊಡ್ಡ ಶಬ್ಧ ಕೇಳಿಸಿತು. ಮೂರನೇ ಬಾರಿಗೆ ದೊಡ್ಡ ಸದ್ದು ಕೇಳಿದ ಕೂಡಲೇ ಎಲ್ಲವೂ ಶಾಂತವಾಯ್ತು ಎಂದು ಬಾಲಕೋಟ್‍ನ ಮತ್ತೋರ್ವ ನಿವಾಸಿ ವಾಜಿದ್ ಶಾ ಮಾಧ್ಯಮಕ್ಕೆ ತಿಳಿಸಿದ್ದಾರೆ.

    https://www.youtube.com/watch?v=rfZHzL93mzs

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ದೇಶ ಸುರಕ್ಷಿತರ ಕೈಯಲ್ಲಿದೆ, ದೇಶಕ್ಕಿಂತ ದೊಡ್ಡದು ಏನಿಲ್ಲ: ವಾಯು ದಾಳಿ ಬಳಿಕ ಮೋದಿ ಮೊದಲ ಭಾಷಣ

    ದೇಶ ಸುರಕ್ಷಿತರ ಕೈಯಲ್ಲಿದೆ, ದೇಶಕ್ಕಿಂತ ದೊಡ್ಡದು ಏನಿಲ್ಲ: ವಾಯು ದಾಳಿ ಬಳಿಕ ಮೋದಿ ಮೊದಲ ಭಾಷಣ

    ಜೈಪುರ: ಪಕ್ಷಕ್ಕಿಂತಲೂ ದೇಶ ದೊಡ್ಡದು. ದೇಶಕ್ಕಿಂತ ದೊಡ್ಡದು ಏನಿಲ್ಲ. ಈ ಮಣ್ಣಿನಾಣೆಗೂ ದೇಶಕ್ಕೆ ಹಾನಿಯಾಗಲು ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಪಾಕ್ ಮೇಲೆ ವಾಯು ದಾಳಿ ನಡೆದ ಬಳಿಕ ಪ್ರಧಾನಿ ಮೋದಿ ಇಂದು ರಾಜಸ್ಥಾನದ ಚುರುವಿನಲ್ಲಿ ಬಿಜೆಪಿಯ ಸಮಾವೇಶದಲ್ಲಿ ಮಾತನಾಡಿದರು. ಇಂದು ನಿಮ್ಮೆಲ್ಲರ ಜೋಶ್ ನನಗೆ ಅರ್ಥವಾಗುತ್ತಿದೆ. ಇಂದು ನಮ್ಮ ದೇಶ ಸುರಕ್ಷಿತವಾಗಿದ್ದು, ಸುರಕ್ಷಿತರ ಕೈಯಲ್ಲಿದೆ ಎಂದು ಹೇಳಲು ನನಗೆ ಖುಷಿಯಾಗುತ್ತಿದೆ ಎಂದರು.

    2014ರಲ್ಲಿ ಮೊದಲ ಬಾರಿಗೆ ನನ್ನ ಹೃದಯದ ಮಾತನ್ನು ನಿಮ್ಮ ಮುಂದೆ ಹೇಳಿದ್ದೆ. ಇಂದು ಇನ್ನೊಮ್ಮೆ 2014ರ ನನ್ನ ಮಾತುಗಳನ್ನು ನಿಮ್ಮ ಮುಂದೆ ಹೇಳುತ್ತೇನೆ. ದೇಶಕ್ಕಿಂತ ದೊಡ್ಡದು ಏನಿಲ್ಲ. ಈ ಮಣ್ಣಿನಾಣೆಗೂ ದೇಶಕ್ಕೆ ಹಾನಿಯಾಗಲು ಬಿಡಲ್ಲ. ನಾನು ಯಾವತ್ತು ದೇಶ ತಲೆ ತಗ್ಗಿಸುವ ಕೆಲಸ ಮಾಡಲ್ಲ ಎಂದು ಈ ಭಾರತದ ಪ್ರಧಾನ ಸೇವಕನಾದ ನಾನು ಚುರು ಭೂಮಿಯಲ್ಲಿ ಭಾರತ ಮಾತೆಗೆ ವಾಗ್ದಾನ ಮಾಡುತ್ತೇನೆ ಎಂದು ಹೇಳಿದರು.

    ಒನ್ ರ‍್ಯಾಂಕ್ ಒನ್ ಪೆನ್ಷನ್ (ಏಕ ಶ್ರೇಣಿ ಏಕ ಪಿಂಚಣಿ) ಜಾರಿ ಮಾಡಿದ್ದೇವೆ. ನಿನ್ನೆ ಸೈನಿಕರ ನೆನಪಿಗಾಗಿ ಸ್ಮಾರಕವನ್ನು ಅರ್ಪಿಸಲಾಗಿದೆ. ಎರಡು ದಿನಗಳ ಹಿಂದೆ ರೈತರಿಗಾಗಿ ಆರಂಭಿಸಿದ ಯೋಜನೆಯನ್ನು ಬಾಬಾ ಗೊರಖಪುರನಾಥನ ಆಶೀರ್ವಾದದೊಂದಿಗೆ ಪಿಎಂ ಕಿಸಾನ್ ಮಹತ್ವದ ಯೋಜನೆಯನ್ನು ಉತ್ತರ ಪ್ರದೇಶದಲ್ಲಿ ಆರಂಭಿಸಲಾಗಿದೆ. ಅಂದು ಒಂದು ಬಟನ್ ಒತ್ತುವ ಮೂಲಕ 12 ಕೋಟಿಗೂ ಅಧಿಕ ಸಣ್ಣ ರೈತರ ಖಾತೆಗೆ ನೇರವಾಗಿ ಹಣ ಜಮೆಯಾಗಿದೆ. ಎರಡು ದಿನದ ಹಿಂದೆ ಯೋಜನೆಯ ಮೊದಲ ಕಂತು ವರ್ಗಾವಣೆ ಮಾಡಲಾಗಿದೆ ಎಂದು ತಿಳಿಸಿದರು.

    ಚುರುವಿನಲ್ಲಿ 50 ಲಕ್ಷಕ್ಕೂ ಅಧಿಕ ರೈತರಿಗೆ ಈ ಯೋಜನೆಯ ಲಾಭ ಸಿಗಲಿದೆ. ಆದ್ರೆ ಇದೂವರೆಗೂ ರಾಜಸ್ಥಾನದ ಯಾವ ರೈತರಿಗೂ ಹಣ ಜಮೆ ಆಗಿಲ್ಲ ಎಂದು ಹೇಳಲು ನನಗೆ ದುಃಖವಾಗುತ್ತಿದೆ. ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಸರ್ಕಾರಗಳು ರೈತರ ದತ್ತಾಂಶಗಳನ್ನು ನೀಡಿದ್ದರಿಂದ ಹಣ ವರ್ಗಾವಣೆಯಾಯ್ತು. ಆದ್ರೆ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ರೈತರ ದತ್ತಾಂಶ ನೀಡಲು ಹಿಂದೇಟು ಹಾಕುತ್ತಿದೆ. ರೈತರ ವಿಷಯದಲ್ಲಿಯೂ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಕೇಂದ್ರ ಸರ್ಕಾರ ನೀಡಿರುವ ಹಣದಿಂದ ರೈತರಿಗೆ ಸಹಾಯವಾಗಲಿದೆ. ರೈತರಿಗಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ. ಇಲ್ಲಿಯ ಸರ್ಕಾರ ಕೇಂದ್ರದ ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸೇರ್ಪಡೆಯಾಗುತ್ತಿಲ್ಲ. ಕಾಂಗ್ರೆಸ್ ರಾಜಕೀಯ ಏನಿದ್ರೂ, ನಾವು ಮಾತ್ರ ರೈತರಿಗೆ ಹಣ ಮುಟ್ಟಿಸಿಯೇ ತೀರುತ್ತೇನೆ ಎಂದು ಮೋದಿ ವಾಗ್ದಾನ ಮಾಡಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv