Tag: AIIMS Hospital

  • ವರ್ಷದ ಹಿಂದೆ ಮದುವೆಯಾಗಿದ್ದ ಮಾಜಿ ಏಮ್ಸ್ ವೈದ್ಯೆ ಶವವಾಗಿ ಪತ್ತೆ

    ವರ್ಷದ ಹಿಂದೆ ಮದುವೆಯಾಗಿದ್ದ ಮಾಜಿ ಏಮ್ಸ್ ವೈದ್ಯೆ ಶವವಾಗಿ ಪತ್ತೆ

    – ಮಗಳಿಗೆ ಡ್ರಗ್ಸ್ ಸೇವಿಸುವಂತೆ ಒತ್ತಾಯ
    – ತಂದೆಯಿಂದ ವರದಕ್ಷಿಣೆ ಕಿರುಕುಳ ಆರೋಪ

    ನವದೆಹಲಿ: ಮಾಜಿ ಏಮ್ಸ್ ಆಸ್ಪತ್ರೆಯ ವೈದ್ಯೆ ಶವವಾಗಿ ಪತ್ತೆಯಾದ ಘಟನೆ ಗುರುಗ್ರಾಮದ ಅಪಾರ್ಟ್ ಮೆಂಟ್‍ನಲ್ಲಿ ನಡೆದಿದೆ.

    ಶೋನಮ್ ಮೋತಿಸ್ ಮೃತಪಟ್ಟ ವೈದ್ಯೆ. 2017ರಲ್ಲಿ ಶೋನಮ್ ಏಮ್ಸ್ ಆಸ್ಪತ್ರೆಗೆ ಸೇರಿದ್ದರು. ಶೋನಮ್‍ಗೆ ಆಕೆಯ ಪತಿ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ಕಿರುಕುಳ ನೀಡಿದ್ದಾರೆ. ಅಲ್ಲದೆ ಆಕೆ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದನೆ ನೀಡಿದ್ದಾರೆ. ಪೊಲೀಸರು ಶೋನಮ್ ಹಾಗೂ ಅವರ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿಕೊಂಡಿದ್ದು, ಇದುವರೆಗೂ ಯಾರನ್ನು ಬಂಧಿಸಿಲ್ಲ ಎಂದು ರಾಜಸ್ಥಾನ ಮೂಲದ ಕೋಟಾ ನಿವಾಸಿಯಾಗಿರುವ ಶೋನಮ್ ತಂದೆ ಓಂಕಾರ್ ಲಾಲ್ ಮೋತಿಸ್ ತಿಳಿಸಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಓಂಕಾರ್ ಲಾಲ್, ನನ್ನ ಅಳಿಯ ಶಿಖರ್ ಮೋರ್ ಮಾದಕ ವ್ಯಸನಿಯಾಗಿದ್ದು, ನನ್ನ ಮಗಳ ಮೇಲೆ ಹಲ್ಲೆ ಮಾಡಿ ಕಿರುಕುಳ ನೀಡುತ್ತಿದ್ದನು. ಕಳೆದ ವರ್ಷ ಮೇ 11ರಂದು ಇಬ್ಬರ ಮದುವೆ ನಡೆದಿತ್ತು. ಮದುವೆಯಾದ ಬಳಿಕ ಶಿಖರ್ ಹಾಗೂ ಆತನ ಮನೆಯವರು ನನ್ನ ಮಗಳಿಗೆ ವರದಕ್ಷಿಣೆ ನೀಡುವಂತೆ ಕಿರುಕುಳ ನೀಡಿದ್ದರು. ಅಲ್ಲದೆ ಶಿಖರ್ ನನ್ನ ಮಗಳಿಗೆ ಡ್ರಗ್ಸ್ ಸೇವಿಸುವಂತೆ ಬಲವಂತ ಮಾಡುತ್ತಿದ್ದನು ಎಂದು ಆರೋಪಿಸಿದ್ದಾರೆ.

    ಒಂದು ಸಂದರ್ಭದಲ್ಲಿ ಶಿಖರ್ ನನ್ನ ಮಗಳ ಕಾಲನ್ನು ಮುರಿದು ಹಾಕಿದ್ದ. ನಿರಂತರ ಕಿರುಕುಳದಿಂದ ನನ್ನ ಮಗಳು ಮಾನಸಿಕವಾಗಿ ಹಾಗೂ ದೈಹಿಕವಾಗಿ ಅಸ್ವಸ್ಥಳಾಗಿದ್ದಳು ಎಂದು ತಂದೆ ದೂರಿದ್ದಾರೆ.

    ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯ ಪವನ್ ಚೌಧರಿ ಪ್ರತಿಕ್ರಿಯಿಸಿ, ಹಲವಾರು ಮಾತ್ರೆಗಳು ಹಾಗೂ ಇಂಜೆಕ್ಷನ್‍ಗಳು ಶೋಹನ್ ದೇಹದ ಬಳಿ ಹರಡಿಕೊಂಡಿವೆ. ಆಕೆ ಹೆಚ್ಚು ಪ್ರಮಾಣದ ಅರಿವಳಿಕೆಗಳನ್ನು ತೆಗೆದುಕೊಂಡಿರಬಬಹುದು ಎಂದು ಹೇಳಿದ್ದಾರೆ.

    ಸಾವಿನ ಹಿಂದಿನ ನಿಜವಾದ ಕಾರಣ ತಿಳಿಯಲು ವೈದ್ಯರು ಸ್ಯಾಂಪಲ್‍ಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸೋಮವಾರ ಬೆಳಗ್ಗೆ ಪೋಷಕರು ಶೋನಮ್‍ಗೆ ಕರೆ ಮಾಡಿದ್ದಾರೆ. ಆದರೆ ಆಕೆ ಕರೆ ಸ್ವೀಕರಿಸಲಿಲ್ಲ. ಹೀಗಾಗಿ ಅವರ ತಂದೆ ಭದ್ರತಾ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಈ ವೇಳೆ ಭದ್ರತಾ ಸಿಬ್ಬಂದಿ ನಿಮ್ಮ ಮಗಳು ಬೆಳಗ್ಗೆಯಿಂದ ಮನೆಯಿಂದ ಹೊರ ಬಂದಿಲ್ಲ ಎಂದು ಹೇಳಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ಆಕೆಯ ಅಪಾರ್ಟ್ ಮೆಂಟ್ ಬಳಿ ಬಂದಾಗ ಮೃತದೇಹ ಪತ್ತೆಯಾಗಿದೆ.

    ಮೃತದೇಹ ಪತ್ತೆ ಆಗುತ್ತಿದ್ದಂತೆ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ವಲ್ಪ ಸಮಯದವರೆಗೆ ಶೋನಮ್ ನಮ್ಮ ಜೊತೆ ಕೋಟಾದಲ್ಲಿ ವಾಸಿಸುತ್ತಿದ್ದಳು. ನಂತರ ಆಕೆ ದೆಹಲಿಗೆ ಹೋದಾಗ ಶಿಖರ್ ಆಕೆಯನ್ನು ಸ್ವೀಕರಿಸಲಿಲ್ಲ. ಸೆಪ್ಟೆಂಬರ್ ನಲ್ಲಿ ಶೋನಮ್ ಏಮ್ಸ್ ಆಸ್ಪತ್ರೆಯಲ್ಲಿ ಬಿಟ್ಟು ಗುರುಗ್ರಾಮ ಫೋರ್ಟಿಸ್ ಆಸ್ಪತ್ರೆಯಲ್ಲಿ ಕೆಲಸಕ್ಕೆ ಸೇರಿದ್ದಳು. ಆದರೆ ಅವಳು ಒಂದು ವಾರದಲ್ಲಿಯೇ ಹುದ್ದೆಗೆ ರಾಜೀನಾಮೆ ನೀಡಿ ಗುರುಗ್ರಾಮದಲ್ಲಿಯೇ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು ಎಂದು ತಂದೆ ಓಂಕಾರ್ ಲಾಲ್ ತಿಳಿಸಿದ್ದಾರೆ.

    ಈ ಬಗ್ಗೆ ಗುರುಗ್ರಾಮದ ಪೊಲೀಸರು ಶುಶಾಂತ್ ಲೋಕ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಯಾವುದೇ ಡೆತ್‍ನೋಟ್ ಸಿಕ್ಕಿಲ್ಲ. ಸದ್ಯ ಪೊಲೀಸರು ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದಾರೆ.

  • ದೆಹಲಿಯ ಏಮ್ಸ್ ಆಸ್ಪತ್ರೆಯ ಕಟ್ಟಡದಲ್ಲಿ ಬೆಂಕಿ- 34 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

    ದೆಹಲಿಯ ಏಮ್ಸ್ ಆಸ್ಪತ್ರೆಯ ಕಟ್ಟಡದಲ್ಲಿ ಬೆಂಕಿ- 34 ಅಗ್ನಿಶಾಮಕ ವಾಹನಗಳಿಂದ ಕಾರ್ಯಾಚರಣೆ

    ನವದೆಹಲಿ: ನಗರದ ಪ್ರಸಿದ್ಧ ಏಮ್ಸ್ ಆಸ್ಪತ್ರೆಯ ಕಟ್ಟಡದ ಎಮರ್ಜೆನ್ಸಿ ವಾರ್ಡ್ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 34 ಅಗ್ನಿಶಾಮಕ ವಾಹನಗಳು ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಯುತ್ತಿವೆ.

    34 ಅಗ್ನಿಶಾಮಕ ವಾಹನಗಳು ಕಾರ್ಯಾಚರಣೆ ನಡೆಸಿದರೂ ಸಹ ಬೆಂಕಿ ಹತೋಟಿಗೆ ಬರುತ್ತಿಲ್ಲ. ಅಗ್ನಿಯು ಕ್ರಮೇಣವಾಗಿ ಕಟ್ಟಡವನ್ನು ಆವರಿಸಿಕೊಳ್ಳುತ್ತಿದೆ. ಬೆಂಕಿಯ ವ್ಯಾಪಕತೆ ಹೆಚ್ಚಿದ್ದರೂ ಸಹ ಈವರೆಗೆ ಯಾವುದೇ ಸಾವು ನೋವು ಸಂಭವಿಸಿರುವ ಕುರಿತು ವರದಿಯಾಗಿಲ್ಲ. ಆಸ್ಪತ್ರೆಯ ತುರ್ತು ವಾರ್ಡ್ ಬಳಿಯ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿಯು ಕಟ್ಟಡದಿಂದ ಜನರನ್ನು ಸ್ಥಳಾಂತರಿಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕಟ್ಟಡವು ರೋಗಿಗಳಿಲ್ಲದ ಬ್ಲಾಕ್ ಆಗಿದ್ದು, ವೈದ್ಯರ ಕೊಠಡಿ ಹಾಗೂ ಸಂಶೋಧನಾ ಪ್ರಯೋಗಾಲಯಗಳನ್ನು ಒಳಗೊಂಡಿದೆ. ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಹೊಗೆಯು ಎರಡನೇ ಮಹಡಿ ಸೇರಿದಂತೆ ಕಟ್ಟಡದ ತುಂಬ ಆವರಿಸಿಕೊಂಡಿದೆ. ಆಸ್ಪತ್ರೆಯ ಮೇಲ್ಭಾಗದಿಂದ ದಟ್ಟವಾದ ಹೊಗೆ ಕಂಡು ಬರುತ್ತಿದೆ ಎಂದು ಅಗ್ನಿಶಾಮಕದ ಹಿರಿಯ ಸಿಬ್ಬಂದಿ ತಿಳಿಸಿದ್ದಾರೆ.

    ಸುಮಾರು 5 ಗಂಟೆ ಹೊತ್ತಿಗೆ ಆಸ್ಪತ್ರೆಯ ಪಿಸಿ ಹಾಗೂ ಬೋಧಕ ವಿಭಾಗದ ಕಟ್ಟಡದಲ್ಲಿ ಬೆಂಕಿ ಹೊತ್ತಿಕೊಂಡಿರುವ ಕುರಿತು ಕರೆ ಬಂತು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಸ್ಥಳಕ್ಕೆ ದೌಡಾಯಿಸಿದೆವು ಎಂದು ದೆಹಲಿ ಅಗ್ನಿಶಾಮಕ ದಳದ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

    ಮಾಜಿ ಹಣಕಾಸು ಸಚಿವ ಅರುಣ್ ಜೇಟ್ಲಿ ಸಹ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ಬೇರೆ ಕಟ್ಟಡದಲ್ಲಿ ದಾಖಲಾಗಿದ್ದಾರೆ. ಜೇಟ್ಲಿ ಅವರು ಆಗಸ್ಟ್ 9ರಿಂದ ಇನ್ಸೆಂಟಿವ್ ಕೇರ್ ಯುನಿಟ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ದಾಖಲಾಗಿರುವ ಕಟ್ಟಡಕ್ಕೂ ಹಾಗೂ ಬೆಂಕಿ ಹೊತ್ತಿಕೊಂಡಿರುವ ಕಟ್ಟಡಕ್ಕೂ ತುಂಬಾ ಅಂತರವಿದೆ ಎಂದು ತಿಳಿಸಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ.

  • ಅಮಿತ್ ಶಾಗೆ ಹಂದಿಜ್ವರ – ಏಮ್ಸ್ ಆಸ್ಪತ್ರೆಗೆ ದಾಖಲು

    ಅಮಿತ್ ಶಾಗೆ ಹಂದಿಜ್ವರ – ಏಮ್ಸ್ ಆಸ್ಪತ್ರೆಗೆ ದಾಖಲು

    ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಎಚ್1ಎನ್1 ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿ ಮಾಹಿತಿ ನೀಡಿರುವ ಅಮಿತ್ ಶಾ, ನಾನು ಎಚ್1ಎನ್1 ಸೋಂಕಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದೇನೆ. ದೇವರ ದಯೆ ಹಾಗೂ ನಿಮ್ಮ ಅಶೀರ್ವಾದಿಂದ ಬಹುಬೇಗ ಗುಣಮುಖನಾಗುತ್ತೇನೆ ಎಂದು ಬರೆದುಕೊಂಡಿದ್ದಾರೆ.

    ಸದ್ಯ ಅಮಿತ್ ಶಾ ಉಸಿರಾಟ ತೊಂದರೆ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದು, ಏಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ರಾತ್ರಿ ಸುಮಾರು 9 ಗಂಟೆ ವೇಳೆಗೆ ಅಮಿತ್ ಶಾ ಆಸ್ಪತ್ರೆಗೆ ದಾಖಲಾಗಿದ್ದು ತಜ್ಞ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡುತ್ತಿದೆ. ಇದನ್ನು ಓದಿ: ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಇವರೆಗೂ ಜೈಪುರದಲ್ಲಿ 17 ಎಚ್1ಎನ್1 ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಉಳಿದಂತೆ 13 ಜನರ ರಕ್ತದ ಮಾದರಿಗಳಲ್ಲಿ ಪಾಸಿಟಿವ್ ರಿಪೋರ್ಟ್ ಬಂದಿದೆ. ಅಲ್ಲದೇ ರಾಜ್ಯದಲ್ಲಿ 935 ಶಂಕಿತ ವ್ಯಕ್ತಿಗಳ ರಕ್ತ ಪರೀಕ್ಷೆ ಮಾಡಲಾಗಿದ್ದು, ಕಳೆದ 15 ದಿನಗಳಿಂದ ಎಚ್1ಎನ್1 ಸೋಂಕಿನಿಂದ 39 ಮಂದಿ ರಾಜಸ್ಥಾನದಲ್ಲಿ ಸಾವನ್ನಪ್ಪಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಸ್ವಗೃಹದಲ್ಲಿ ಅಟಲ್‍ಜಿ ಪಾರ್ಥಿವ ಶರೀರ – ಸಂಜೆ 4 ಗಂಟೆಗೆ ಅಂತ್ಯಕ್ರಿಯೆ

    ಸ್ವಗೃಹದಲ್ಲಿ ಅಟಲ್‍ಜಿ ಪಾರ್ಥಿವ ಶರೀರ – ಸಂಜೆ 4 ಗಂಟೆಗೆ ಅಂತ್ಯಕ್ರಿಯೆ

    ನವದೆಹಲಿ: ಅಜಾತಶತ್ರು, ಮಾಜಿ ಪ್ರಧಾನಿ ವಾಜಪೇಯಿ ಅಗಲಿಕೆಯೊಂದಿಗೆ ದೇಶದಲ್ಲಿ ಒಂದು ಯುಗಾಂತ್ಯವಾಗಿದೆ. ಈ ಮಹಾನ್ ನಾಯಕನ ಅಂತಿಮ ದರ್ಶನಕ್ಕೆ ಇದೀಗ ಗಣ್ಯರ ದಂಡೇ ಹರಿದು ಬರ್ತಿದೆ.

    ಬೆಳಗ್ಗೆ 9 ಗಂಟೆವರೆಗೆ ದೆಹಲಿಯ 6ಎ ಕೃಷ್ಣಮೆನನ್ ಮಾರ್ಗ್‍ನಲ್ಲಿರುವ ವಾಜಪೇಯಿ ನಿವಾಸದಲ್ಲಿಯೇ ದರ್ಶನಕ್ಕೆ ಇಡಲಾಗುತ್ತೆ. ಈ ವೇಳೆ ಬಂಧು ಮಿತ್ರರಿಗೆ ಮತ್ತು ಗಣ್ಯರಿಗೆ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ನಂತರ 9 ಗಂಟೆಗೆ ಕೃಷ್ಣಮೆನನ್ ಮಾರ್ಗ್‍ನ ನಿವಾಸದಿಂದ ಪಾರ್ಥಿವ ಶರೀರದ ಮೆರವಣಿಗೆ ಹೊರಡಲಿದ್ದು, 5 ಕಿಲೋಮೀಟರ್ ದೂರದ ಬಿಜೆಪಿ ಮುಖ್ಯ ಕಚೇರಿಗೆ ತಲುಪಲಿದೆ.

    ಅಲ್ಲಿ 2 ಗಂಟೆವರೆಗೆ ಸಾರ್ವಜನಿಕರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತೆ. ಬಳಿಕ 9 ಕಿಲೋಮೀಟರ್ ದೂರದ ಯುಮುನಾ ನದಿ ದಂಡೆಯಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದವರೆಗೆ ಅಂತಿಮ ಯಾತ್ರೆ ನಡೆಯಲಿದ್ದು, ಬಳಿಕ ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನಡೆಯಲಿದೆ.

    ಲಾಲ್ ಬಹದ್ದೂರ್ ಶಾಸ್ತ್ರಿಯವರ ಸ್ಮಾರಕವಿರುವ ವಿಜಯ್‍ಘಾಟ್ ಮತ್ತು ಶಾಂತಿವನದ ಪಕ್ಕದಲ್ಲೇ ಅಟಲ್ ಸ್ಮಾರಕ ನಿರ್ಮಾಣಕ್ಕೆ ನಗರಾಭಿವೃದ್ಧಿ ಇಲಾಖೆ 1.5 ಎಕರೆ ಜಮೀನು ಮೀಸಲಿರಿಸಿದೆ. ಅಜಾತ ಶತ್ರುವಿನ ನಿಧನಕ್ಕೆ ಇಡೀ ದೇಶವೇ ಕಣ್ಣೀರು ಹಾಕುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ – ಏಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

    ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರ – ಏಮ್ಸ್ ಆಸ್ಪತ್ರೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆ

    ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕಳೆದ 24 ಗಂಟೆಗಳಲ್ಲಿ ವಾಜಪೇಯಿ ಆರೋಗ್ಯ ಇನ್ನಷ್ಟು ಕ್ಷೀಣಿಸಿದೆ ಎಂದು ಏಮ್ಸ್ ಆಸ್ಪತ್ರೆ ತಿಳಿಸಿದೆ.

    ವಾಜಪೇಯಿ ಆರೋಗ್ಯ ತೀವ್ರವಾಗಿ ಹದಗೆಟ್ಟಿದ್ದು ಇದೀಗ ನಿರ್ಣಾಯಕ ಅಹಂತ ತಲುಪಿದೆ. ಸದ್ಯ ಅವರಿಗೆ ಆಮ್ಲಜನಕದ ಬೆಂಬಲ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ಮಧುಮೇಹ, ಮೂತ್ರದ ಸೋಂಕು ಸೇರಿ ವಿವಿಧ ರೀತಿಯ ಅನಾರೋಗ್ಯದ ಕಾರಣ ಕಳೆದ ಜೂನ್ 11ರಂದು ವಾಜಪೇಯಿ ಏಮ್ಸ್ ಗೆ ದಾಖಲಾಗಿದ್ದರು. ವಾಜಪೇಯಿ ಆರೋಗ್ಯ ಏರುಪೇರು ಹಿನ್ನೆಲೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಏಮ್ಸ್ ಆಸ್ಪತ್ರೆಗೆ ಭೇಟಿ ನೀಡಿ, ಆರೋಗ್ಯ ವಿಚಾರಿಸಿದ್ರು. ಇದಕ್ಕೂ ಮೊದಲು ಪ್ರಧಾನಿ ಮೋದಿ ಸೇರಿ ಹಲವು ನಾಯಕರು ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಇದನ್ನೂ ಓದಿ: ಮಾಜಿ ಪ್ರಧಾನಿ ವಾಜಪೇಯಿ ಏಮ್ಸ್ ಆಸ್ಪತ್ರೆಗೆ ದಾಖಲು

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಮೋದಿ ಕಾರಣ: ಲಾಲೂ ಕಿಡಿ

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲು ಮೋದಿ ಕಾರಣ: ಲಾಲೂ ಕಿಡಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಿಬಿಐ ಜೊತೆ ಸಂಚು ನಡೆಸಿ ನನ್ನನ್ನು ಆಸ್ಪತ್ರೆಯಿಂದ ಹೊರಗೆ ಹಾಕಿಸಿದ್ದಾರೆ ಎಂದು ಲಾಲು ಪ್ರಸಾದ್ ಯಾದವ್ ಗಂಭೀರ ಆರೋಪ ಮಾಡಿದ್ದಾರೆ.

    ಇದು ಅನ್ಯಾಯ, ನನ್ನ ಆರೋಗ್ಯ ಕ್ಷೀಣಿಸಲಿ ಎಂದು ನನ್ನನ್ನು ಸರಿಯಾದ ವ್ಯವಸ್ಥೆ ಇಲ್ಲದ ಆಸ್ಪತ್ರೆಗೆ ಪುನಃ ಕಳುಹಿಸುತ್ತಿದ್ದಾರೆ. ನನ್ನ ಕಷ್ಟದ ಸಮಯ ಎದುರಿಸುತ್ತೇನೆ ಎಂದು ಲಾಲೂ ಪ್ರಸಾದ್ ಯಾದವ್ ಪ್ರತಿಕ್ರಿಯಿಸಿ ಒಲ್ಲದ ಮನಸ್ಸಿನಿಂದ ಏಮ್ಸ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

    ನನ್ನ ಕಾಯಿಲೆಗೆ ಚಿಕಿತ್ಸೆ ಕೊಡುವುದಕ್ಕೆ ರಾಂಚಿ ಆಸ್ಪತ್ರೆಯಲ್ಲಿ ಸುಸಜ್ಜಿತ ವ್ಯವಸ್ಥೆ ಇಲ್ಲ ಹಾಗಾಗಿ ರಾಂಚಿ ಆಸ್ಪತ್ರೆಗೆ ವಾಪಸ್ ಕಳುಹಿಸದಂತೆ ಲಾಲು ಏಮ್ಸ್ ಆಸ್ಪತ್ರೆಯವರಿಗೆ ಪತ್ರ ಬರೆದಿದ್ದರು.

    ರೋಗಿಗೆ ಸಮಾಧಾನ ಕೊಡುವಂತಹ ಚಿಕಿತ್ಸೆಯನ್ನು ಬೇಕಾದ ಕಡೆ ತೆಗೆದುಕೊಳ್ಳುವ ಹಕ್ಕು ಇದೆ. ಏಮ್ಸ್ ಒಳ್ಳೆಯ ಆಸ್ಪತ್ರೆಯಾಗಿದ್ದು ಯಾವ ಕಾರಣಕ್ಕೆ ಮತ್ತೆ ರಾಂಚಿ ಆಸ್ಪತ್ರೆಗೆ ಕಳುಹಿಸುವ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದನ್ನು ತಿಳಿಸಬೇಕಿದೆ ಎಂದು ಲಾಲೂ ಪ್ರಶ್ನೆ ಮಾಡಿದ್ದಾರೆ.

    ನಿಮ್ಮ ನಿರ್ಧಾರದಿಂದ ನನ್ನ ಆರೋಗ್ಯಕ್ಕೆ ಮುಂದೆ ಅಪಾಯ ಸಂಭವಿಸಿದಲ್ಲಿ ನಿಮ್ಮನ್ನೇ ಹೊಣೆ ಮಾಡಲಾಗುವುದು ಎಂದು ಏಮ್ಸ್ ನಿರ್ದೇಶಕ ರಣದೀಪ್ ಗಲೇರಿಯಾ ಅವರಿಗೆ ಲಾಲು ಪ್ರಸಾದ್ ಪತ್ರವನ್ನು ಬರೆದಿದ್ದಾರೆ.

    ಮೇವು ಹಗರಣ ಪ್ರಕರಣದಲ್ಲಿ ದೋಷಿಯಾಗಿರುವ ಲಾಲೂ ಡಿಸೆಂಬರ್ 23 ರಿಂದ ರಾಂಚಿಯ ಬಿರ್ಸಾ ಮುಂಡಾ ಜೈಲ್ ನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಮಾರ್ಚ್ 17 ರಂದು ಹೃದಯ ಮತ್ತು ಕಿಡ್ನಿ ಸಮಸ್ಯೆಯಿಂದಾಗಿ ರಾಂಚಿಯ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ಲಾಲು ದಾಖಲಾಗಿದ್ದರು. ರಾಂಚಿಯಿಂದ ಹೆಚ್ಚಿನ ಚಿಕಿತ್ಸೆ ಪಡೆಯಲು ದೆಹಲಿಯ ಏಮ್ಸ್ ಅಸ್ಪತ್ರೆಗೆ ಲಾಲೂ ಪ್ರಸಾದ್ ಯಾದವ್ ದಾಖಲಾಗಿದ್ದರು.

    ಲಾಲೂ ಚಿಕಿತ್ಸೆಗೆ ನೀಡಿದ ಏಮ್ಸ್ ಆಸ್ಪತ್ರೆ, ಈಗ ಆರೋಗ್ಯ ಸುಧಾರಣೆಯಾದ ಹಿನ್ನೆಲೆಯಲ್ಲಿ ರಾಂಚಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸುವಂತೆ ಶಿಫಾರಸ್ಸು ಮಾಡುತ್ತೇವೆ. ರಾಂಚಿಗೆ ರೈಲಿನಲ್ಲಿ ಪ್ರಯಾಣಿಸ ಬಹುದಾಗಿದೆ ಎಂದು ಹೇಳಿಕೆ ನೀಡಿದೆ.

    ಇದೇ ವೇಳೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಏಮ್ಸ್ ಆಸ್ಪತ್ರೆಗೆ ಭೇಟಿಕೊಟ್ಟು ಲಾಲೂ ಪ್ರಸಾದ್ ಅವರ ಆರೋಗ್ಯ ವಿಚಾರ ಮಾಡಿದ್ದಾರೆ.