Tag: AIIMPLB

  • ಅಯೋಧ್ಯೆ ತೀರ್ಪು ಸಮಾಧಾನ ತಂದಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

    ಅಯೋಧ್ಯೆ ತೀರ್ಪು ಸಮಾಧಾನ ತಂದಿಲ್ಲ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ

    ನವದೆಹಲಿ: ನಾವು ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸುತ್ತೇವೆ. ಆದ್ರೆ ಈ ತೀರ್ಪು ನಮಗೆ ಸಮಾಧಾನ ತಂದಿಲ್ಲ. 5 ಮಂದಿ ನ್ಯಾಯಾಧೀಶರು ನೀಡಿದ ಸಂವಿಧಾನ ಪೀಠದ ತೀರ್ಪು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಚಿಂತಿಸಲಾಗುತ್ತದೆ ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ತಿಳಿಸಿದೆ.

    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುನ್ನಿ ವಕ್ಫ್ ಬೋರ್ಡ್ ಪರ ವಕೀಲರಾದ ಜಫ್ರಯಾಬ್ ಗಿಲಾನಿ, ನ್ಯಾಯಾಧೀಶರು ಸಂಕ್ಷಿಪ್ತವಾಗಿ ತೀರ್ಪನ್ನು ಓದಿದ್ದರಿಂದ ಸಂಪೂರ್ಣ ಪ್ರತಿಯನ್ನು ಪಡೆದುಕೊಂಡು ಓದಿ ಮುಂದಿನ ನಿರ್ಧಾರವನ್ನು ಶೀಘ್ರದಲ್ಲಿಯೇ ತಿಳಿಸಲಾಗುವುದು. ಇದು ನ್ಯಾಯವಾದ ತೀರ್ಪು ಎಂದು ಒಪ್ಪಿಕೊಳ್ಳಲು ಆಗುತ್ತಿಲ್ಲ. ಷರಿಯಾ ಕಾನೂನಿನ ಪ್ರಕಾರ ಮಸೀದಿಯನ್ನು ಯಾರಿಗೂ ಕೊಡುಗೆಯಾಗಿ ನೀಡಲು ಬರಲ್ಲ. ಆದರೂ ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ವಿವಾದಿತ ಜಮೀನಿನ ಹಕ್ಕು ರಾಮಲಲ್ಲಾಗೆ ನೀಡಿದೆ. ಸುಪ್ರೀಂಕೋರ್ಟ್ ಅದೇ ಮಸೀದಿಯಲ್ಲಿ ನಮಾಜ್ ಮಾಡಿದ್ದರು ಎಂಬುದನ್ನು ತನ್ನ ಆದೇಶದಲ್ಲಿ ಹೇಳುತ್ತದೆ ಎಂದು ತಿಳಿಸಿದರು.

    ನ್ಯಾಯಾಲಯ ನೀಡಿದ ಐತಿಹಾಸಿಕ ತೀಪನ್ನು ಎಲ್ಲರೂ ಸ್ವಾಗತಿಸಬೇಕಿದೆ. ಎಲ್ಲರೂ ಶಾಂತಿ ಕಾಪಾಡಿಕೊಳ್ಳಬೇಕು. ಕಾನೂನಿನ ಪ್ರಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಭೆ ನಡೆಸಲಾಗುತ್ತದೆ. ವಿವಾದಿತ ಪ್ರದೇಶದಲ್ಲಿ ನಮಾಜ್ ಮಾಡಲಾಗಿದೆ ಎಂದು ಹೇಳಿದರೂ ಆ ಸ್ಥಳವನ್ನು ಬೇರೆಯವರಿಗೆ ನೀಡಲಾಗಿದೆ. ತೀರ್ಪಿನ ಕೆಲ ಅಂಶಗಳ ಬಗ್ಗೆ ಮಾತ್ರ ನಮಗೆ ಅಸಮಾಧಾನವಿದೆ. ಅದೇ ಸ್ಥಳದಲ್ಲಿ ಹಿಂದೂಗಳು ಪೂಜೆ ಮಾಡಿರುವ ಸಾಕ್ಷ್ಯವನ್ನು ಒಪ್ಪಿಕೊಳ್ಳುವ ಸುಪ್ರೀಂಕೋರ್ಟ್ ನಮಾಜ್ ಮಾಡಿರುವುದನ್ನು ಒಪ್ಪಿಕೊಂಡಿಲ್ಲ. ಈ ರೀತಿಯ ಕೆಲವೊಂದು ಅಂಶಗಳ ಬಗ್ಗೆ ಸಣ್ಣ ಗೊಂದಲಗಳಿವೆ. ತೀರ್ಪಿನ ಪ್ರತಿಯನ್ನು ಓದಿದಾಗಲೇ ಎಲ್ಲವೂ ಬಗೆಹರಿಯಲಿದೆ ಎಂದು ತಿಳಿಸಿದರು.

    ತೀರ್ಪಿನ ಪ್ರಮುಖ ಅಂಶಗಳು:
    ಮುಸ್ಲಿಮರಿಗೆ 5 ಎಕ್ರೆ ಪರ್ಯಾಯ ಭೂಮಿ ನೀಡಬೇಕು. ದೇವಸ್ಥಾನ ನಿರ್ಮಾಣಕ್ಕೆ 3 ತಿಂಗಳಲ್ಲಿ ಸಮಿತಿ ರಚಿಸಬೇಕು. ರಾಮ ಮಂದಿರ ನಿರ್ಮಾಣ ಹೊಣೆ ಕೇಂದ್ರ ಸರ್ಕಾರಕ್ಕೆ ಸೇರಿದ್ದು, ದೇವಸ್ಥಾನ ನಿರ್ಮಾಣಕ್ಕೆ ಟ್ರಸ್ಟ್ ಸ್ಥಾಪಿಸಬೇಕು. ವಿವಾದಿತ 2.77 ಎಕರೆಯಲ್ಲಿ ಕೇವಲ ರಾಮಲಲ್ಲಾಗಷ್ಟೇ ಅಧಿಕಾರವಿದೆ.

    ಬಾಬ್ರಿ ಮಸೀದಿ ಭೂಮಿ ಮಾಲೀಕತ್ವ ಶಿಯಾ ವಕ್ಫ್ ಬೋರ್ಡಿಗೆ ಒಳಪಟ್ಟಿದ್ದಲ್ಲ ಮತ್ತು ಹಕ್ಕಿಲ್ಲ. ಬಾಬರ್ ಕಮಾಂಡರ್ ಮೀರ್ ಬಾಕಿ ಬಾಬ್ರಿ ಮಸೀದಿ ನಿರ್ಮಿಸಿದ್ದಾನೆ. ಜನರ ಧಾರ್ಮಿಕ ನಂಬಿಕೆಗಳನ್ನು ಗೌರವಿಸ್ತೇವೆ. ಪೂಜೆ ಮಾಡುವವರ ಹಕ್ಕನ್ನು ಮಾನ್ಯ ಮಾಡಿದ್ದೇವೆ.

    ಹಿಂದೂ ದೇವಾಲಯ ನಾಶದ ಬಗ್ಗೆ ಸಾಕ್ಷ್ಯ ಇಲ್ಲ. 2ನೇ ಶತಮಾನದಲ್ಲಿ ದೇವಸ್ಥಾನ ಇದ್ದ ಬಗ್ಗೆ ಸಾಕ್ಷಿ ಇದೆ. ಕೇವಲ ಪುರಾತತ್ವ ಸಾಕ್ಷ್ಯವನ್ನಷ್ಟೇ ಅವಲಂಬಿಸಲು ಸಾಧ್ಯವಿಲ್ಲ. ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದ ಎನ್ನುವ ನಂಬಿಕೆ ಅವಿವಾದಿತ.

    ರಾಮನ ಮೂರ್ತಿ ಇಟ್ಟ ವಿಚಾರದಲ್ಲಿ ಸುನ್ನಿ ವಕ್ಫ್ ಬೋರ್ಡ್ ವಾದವನ್ನು ಮಾನ್ಯ ಮಾಡುತ್ತೇವೆ. 1949ರಲ್ಲಿ ರಾಮನ ಮೂರ್ತಿ ಇಡಲಾಗಿತ್ತು. 1856ರವರೆಗೆ ನಮಾಜ್ ಮಾಡಲಾಗಿತ್ತು ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ.

    ಮಸೀದಿಯ ಕೆಳಗಡೆ ಹಿಂದೂ ರಚನೆ ಇದೆ ಅಂತ ನಂಬಲು ಸಾಧ್ಯವಿಲ್ಲ. ವಿವಾದಿತ ಜಾಗದಲ್ಲಿ ಹಿಂದೂ-ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿದ್ದರು. ಬ್ರಿಟೀಷರು ಆ ಜಾಗವನ್ನು ಪ್ರತ್ಯೇಕಿಸಿ ಬೇಲಿ ಹಾಕಿಸಿದ್ದರು. ಮಸೀದಿಯ ಒಳಗೆ ಮುಸ್ಲಿಮರು, ಆವರಣದಲ್ಲಿ ಹಿಂದೂಗಳು ಪ್ರಾರ್ಥನೆ ಮಾಡುತ್ತಿದ್ದರು.

    ಮಸೀದಿಯ ಒಳಭಾಗದ ಬಗ್ಗೆಯೂ ವಿವಾದವಿದೆ. ಭೂ ಮಾಲೀಕತ್ವ ನಂಬಿಕೆ ಮೇಲೆ ಆಗುವುದಿಲ್ಲ. ಬಾಬ್ರಿ ಮಸೀದಿ ಧ್ವಂಸ ಮಾಡಿದ್ದು ಪ್ರಾರ್ಥನೆ ಹಕ್ಕಿನ ಉಲ್ಲಂಘನೆ. ಅಲಹಾಬಾದ್ ಕೋರ್ಟ್ ಮೂವರು ಅರ್ಜಿದಾರರಿಗೆ ಸಮಾನವಾಗಿ ಮೂರು ಭಾಗವಾಗಿ ಹಂಚಿಕೆ ಮಾಡಿ ತೀರ್ಪು ನೀಡಿದ್ದು ತಪ್ಪು. ಸಂವಿಧಾನದ ಮುಂದೆ ಎಲ್ಲಾ ಧರ್ಮಗಳೂ ಒಂದೇ. ಜಡ್ಜ್ ಗಳಿಗೆ ಎಲ್ಲಾ ಧರ್ಮಗಳು ಒಂದೇ. ನಿರ್ಮೋಹಿ ಅಖಾಡದ ಅರ್ಜಿಯನ್ನು ನಾವು ಪರಿಗಣಿಸುವುದಿಲ್ಲ. ಆದರೆ ಕೇಂದ್ರ ಸರ್ಕಾರ ದೇವಾಲಯ ನಿರ್ಮಾಣ ಮಾಡುವ ಟ್ರಸ್ಟ್ ನಲ್ಲಿ ನಿರ್ಮೋಹಿ ಅಖಾಡಕ್ಕೆ ಪ್ರತಿನಿಧ್ಯ ನೀಡಬೇಕು.