Tag: Aiden Markram

  • IPL 2023: ಕಳೆ ಹೆಚ್ಚಿಸಿದ ಗ್ರೀನ್‌ – ಮುಂಬೈಗೆ ಹ್ಯಾಟ್ರಿಕ್‌ ಜಯ

    IPL 2023: ಕಳೆ ಹೆಚ್ಚಿಸಿದ ಗ್ರೀನ್‌ – ಮುಂಬೈಗೆ ಹ್ಯಾಟ್ರಿಕ್‌ ಜಯ

    ಹೈದರಾಬಾದ್‌: ಕ್ಯಾಮರೂನ್‌ ಗ್ರೀನ್‌ ಭರ್ಜರಿ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಮುಂಬೈ ಇಂಡಿಯನ್ಸ್‌, ಸನ್‌ ರೈಸರ್ಸ್‌ ಹೈದರಾಬಾದ್‌ ವಿರುದ್ಧ 14 ರನ್‌ ಗಳ ಜಯ ಸಾಧಿಸಿದೆ. ಈ ಮೂಲಕ 16ನೇ ಐಪಿಎಲ್‌ನಲ್ಲಿ ಹ್ಯಾಟ್ರಿಕ್‌ ಜಯ ಸಾಧಿಸಿದೆ.

    ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಮುಂಬೈ ಇಂಡಿಯನ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 192 ರನ್‌ ಗಳಿಸಿತು. 193 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ತಂಡ 19.5 ಓವರ್‌ಗಳಲ್ಲೇ 178 ರನ್‌ ಗಳಿಗೆ ಸರ್ವಪತನಕಂಡಿತು.

    ಆರಂಭಿಕರಾಗಿ ಕಣಕ್ಕಿಳಿದ ಹ್ಯಾರಿ ಬ್ರೂಕ್‌ ಹಾಗೂ ಮಯಾಂಕ್‌ ಅಗರ್ವಾಲ್‌ ಜೋಡಿ ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲವಾಯಿತು.  ಬ್ರೂಕ್‌ 9 ರನ್‌ ಗಳಿಸಿ ಔಟಾಗುತ್ತಿದ್ದಂತೆ, 3ನೇ ಕ್ರಮಾಂಕದಲ್ಲಿ ಬಂದ ರಾಹುಲ್‌ ತ್ರಿಪಾಠಿ ಸಹ 7 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ನಡುವೆ ಮಯಾಂಕ್‌ ಅಗರ್ವಾಲ್‌, ನಾಯಕ ಏಡನ್‌ ಮಾರ್ಕ್ರಮ್‌ 46 ರನ್‌ಗಳ (36 ಎಸೆತ) ಜೊತೆಯಾಟ ನೀಡುವ ಮೂಲಕ ತಂಡಕ್ಕೆ ಚೇತರಿಕೆ ನೀಡಿದರು. ಈ ಜೋಡಿಯ ವಿಕೆಟ್‌ ಬಿದ್ದ ನಂತರ ಹೆನ್ರಿಕ್ ಕ್ಲಾಸೆನ್ ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿದು 16 ಎಸೆತಗಳಲ್ಲಿ ಸ್ಫೋಟಕ 36 ರನ್‌ (2 ಸಿಕ್ಸರ್‌, 4 ಬೌಂಡರಿ) ಚಚ್ಚಿದರು.

    ಕೊನೆಯಲ್ಲಿ ಸ್ಫೋಟಕ ಬ್ಯಾಟಿಂಗ್‌ ಮುಂದುವರಿಸಿದ್ದ ಮಾರ್ಕೊ ಜಾನ್ಸೆನ್ 13 ರನ್‌ (6 ಎಸೆತ, 3 ಬೌಂಡರಿ) ಗಳಿಸಿ ಔಟಾದರೆ, ವಾಷಿಂಗ್ಟನ್‌ ಸುಂದರ್‌ 10 ರನ್‌ (6 ಎಸೆತ, 2 ಬೌಂಡರಿ) ಗಳಿಸಿ ಪೆವಿಲಿಯನ್‌ ಸೇರಿದರು. ಕೊನೆಯಲ್ಲಿ ಅಬ್ದುಲ್‌ ಸಮದ್‌ 9 ರನ್‌, ಭುವನೇಶ್ವರ್‌ ಕುಮಾರ್‌, ಮಯಾಂಕ್‌ ಮಾರ್ಕಂಡೆ ತಲಾ 2 ರನ್‌ ಗಳಿಸಿದರು. ಅಗ್ರಕ್ರಮಾಂಕದ ಬ್ಯಾಟ್ಸ್‌ಮ್ಯಾನ್‌ಗಳ ವೈಫಲ್ಯದಿಂದ ಹೈದರಾಬಾದ್‌ ತಂಡ ಸೋಲನುಭವಿಸಲು ಕಾರಣವಾಯಿತು.

    ಮುಂಬೈ ಪರ ಜೇಸನ್ ಬೆಹ್ರೆನ್ಡಾರ್ಫ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ ತಲಾ 2 ವಿಕೆಟ್‌ ಕಿತ್ತರೆ, ಕ್ಯಾಮರೂನ್‌ ಗ್ರೀನ್‌ ಹಾಗೂ ಅರ್ಜುನ್‌ ತೆಂಡೂಲ್ಕರ್‌ ತಲಾ 1 ವಿಕೆಟ್‌ ಪಡೆದು ಮಿಂಚಿದರು.

    ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ತಂಡ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದು ಬೃಹತ್ ಮೊತ್ತ ಕಲೆಹಾಕಿತು. ಮುಂಬೈ ಇಂಡಿಯನ್ಸ್ ತಂಡದ ಪರವಾಗಿ ನಾಯಕ ರೋಹಿತ್ ಶರ್ಮಾ ಉತ್ತಮ ಆರಂಭದ ಭರವಸೆ ನೀಡಿದರಾದರೂ 28 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ನಂತರ ಇಶಾನ್ ಕಿಶನ್ ಹಾಗೂ ಕ್ಯಾಮರೂನ್ ಗ್ರೀನ್ ಜೋಡಿ ಅದ್ಭುತ ಜೊತೆಯಾಟ ನೀಡಿ ಮಿಂಚಿದರು.

    ಇಶಾನ್ ಕಿಶನ್ 38 ರನ್‌ (31 ಎಸೆತ, 3 ಬೌಂಡರಿ, 2 ಸಿಕ್ಸರ್‌) ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಸೂರ್ಯಕುಮಾರ್ ಯಾದವ್ ಮತ್ತೆ ಕೇವಲ 7 ರನ್‌ ಗಳಿಸಿ ನಿರಾಸೆ ಅನುಭವಿಸಿದರು. ನಂತರ ಕ್ಯಾಮರೂನ್ ಗ್ರೀನ್‌ಗೆ ಜೊತೆಯಾದ ತಿಲಕ್ ವರ್ಮಾ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ 28 ಎಸೆತಗಳಲ್ಲಿ 56 ರನ್‌ ಸಿಡಿಸುವ ಮೂಲಕ ರನ್ ವೇಗ ಹೆಚ್ಚಿಸುವಲ್ಲಿ ಯಶಸ್ವಿಯಾದರು.

    ತಿಲಕ್ ವರ್ಮಾ ಕೇವಲ 17 ಎಸೆತಗಳಲ್ಲಿ 37 ರನ್‌ಗಳಿಸಿ (4 ಸಿಕ್ಸರ್‌, 2 ಬೌಂಡರಿ) ಮುಂಬೈ ಪರ ಮತ್ತೊಮ್ಮೆ ಉತ್ತಮ ಪ್ರದರ್ಶನ ನೀಡಿದರೆ, ಕೊನೆಯವರೆಗೂ ಕ್ರೀಸ್‌ನಲ್ಲಿದ್ದ ಗ್ರೀನ್ 40 ಎಸೆತಗಳಲ್ಲಿ 64 ರನ್ (40 ಎಸೆತ, 4 ಬೌಂಡರಿ, 2 ಸಿಕ್ಸರ್‌) ಬಾರಿಸಿದರು. ಟಿಮ್ ಡೇವಿಡ್ 16 ರನ್‌ ಗಳಿಸಿದರು. ಅಂತಿಮವಾಗಿ ಮುಂಬೈ ಈ ಪಂದ್ಯದಲ್ಲಿ 5 ವಿಕೆಟ್‌ ಕಳೆದುಕೊಂಡು 192 ರನ್‌ ಗಳಿಸಿತ್ತು.

  • IPL 2023: ಪಂಜಾಬ್‌ಗೆ ಪಂಚ್‌ ಕೊಟ್ಟ ಸನ್‌ ರೈಸರ್ಸ್‌ – ಹೈದರಾಬಾದ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    IPL 2023: ಪಂಜಾಬ್‌ಗೆ ಪಂಚ್‌ ಕೊಟ್ಟ ಸನ್‌ ರೈಸರ್ಸ್‌ – ಹೈದರಾಬಾದ್‌ಗೆ 8 ವಿಕೆಟ್‌ಗಳ ಭರ್ಜರಿ ಜಯ

    ಹೈದರಾಬಾದ್‌: ರಾಹುಲ್‌ ತ್ರಿಪಾಠಿ ಭರ್ಜರಿ ಅರ್ಧ ಶತಕದ ಬ್ಯಾಟಿಂಗ್‌ ಹಾಗೂ ಶಿಸ್ತುಬದ್ಧ ಬೌಲಿಂಗ್‌ ದಾಳಿ ನೆರವಿನಿಂದ ಸನ್‌ ರೈಸರ್ಸ್‌ ಹೈದರಾಬಾದ್‌ ತಂಡವು ಕಿಂಗ್ಸ್‌ ಪಂಜಾಬ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.

    ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 143 ರನ್‌ ಗಳಿಸಿತು. 144 ರನ್‌ಗಳ ಗುರಿ ಬೆನ್ನತ್ತಿದ್ದ ಹೈದರಾಬಾದ್‌ ತಂಡ 17.1 ಓವರ್‌ಗಳಲ್ಲೇ 2 ವಿಕೆಟ್‌ ನಷ್ಟಕ್ಕೆ 145 ರನ್‌ ಗಳಿಸಿ ಗೆಲುವು ಸಾಧಿಸಿತು. ಇದನ್ನೂ ಓದಿ: IPL 2023: ಮೋದಿ ಕ್ರೀಡಾಂಗಣದಲ್ಲಿ ಹ್ಯಾಟ್ರಿಕ್‌ ಸಾಧನೆ ಮಾಡಿದ ರಶೀದ್‌ ಖಾನ್‌

    ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಹೈದರಾಬಾದ್‌ ತಂಡಕ್ಕೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಆರಂಭಿಕರಾದ ಹ್ಯಾರಿ ಬ್ರೂಕ್‌ 13 ರನ್‌, ಮಯಾಂಕ್‌ ಅಗರ್ವಾಲ್‌ 21 ರನ್‌ ಗಳಿಸಿ ಔಟಾಗಿದ್ದರು. ಮೊದಲ 6 ಓವರ್‌ಗಳಲ್ಲಿ 1 ವಿಕೆಟ್‌ ಕಳೆದುಕೊಂಡು ಕೇವಲ 34 ರನ್‌ ಗಳಿಸಿತ್ತು. ನಂತರ 3ನೇ ವಿಕೆಟ್‌ಗೆ ಜೊತೆಯಾದ ರಾಹುಲ್‌ ತ್ರಿಪಾಠಿ ಹಾಗೂ ನಾಯಕ ಏಡನ್‌ ಮಾರ್ಕಮ್ ಮುರಿಯದ 3ನೇ ವಿಕೆಟ್‌ಗೆ 52 ಎಸೆತಗಳಲ್ಲಿ 100 ರನ್‌ಗಳ ಜೊತೆಯಾಟವಾಡಿದರು.

    ರಾಹುಲ್‌ ತ್ರಿಪಾಠಿ 48 ಎಸೆತಗಳಲ್ಲಿ 74 ರನ್‌ (10 ಬೌಂಡರಿ, 3 ಸಿಕ್ಸರ್‌) ಸಿಡಿಸಿದರೆ, ಮಾರ್ಕಮ್‌ 37 ರನ್‌ (21 ಎಸೆತ, 6 ರನ್‌) ಗಳಿಸಿ ತಂಡದ ಗೆಲುವಿಗೆ ಆಸರೆಯಾದರು. ಕಿಂಗ್ಸ್‌ ಪಂಜಾಬ್‌ ಪರ ಅರ್ಷ್‌ದೀಪ್‌ ಸಿಂಗ್‌ ಹಾಗೂ ರಾಹುಲ್‌ ಚಹಾರ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: IPL 2023: ಕೊನೆಯ ಓವರ್‌ನಲ್ಲಿ 6, 6, 6, 6, 6 -‌ KKRಗೆ 3 ವಿಕೆಟ್‌ಗಳ ರೋಚಕ ಜಯ

    ಇನ್ನೂ ಮೊದಲು ಬ್ಯಾಟಿಂಗ್‌ ಮಾಡಿದ ಕಿಂಗ್ಸ್‌ ಪಂಜಾಬ್‌ ಪರ ಏಕಾಂಗಿ ಹೋರಾಟ ನಡೆಸಿದ ಶಿಖರ್ ಧವನ್ 1 ರನ್‌ನಿಂದ ಶತಕವಂಚಿತರಾದರು. 66 ಎಸೆತಗಳಲ್ಲಿ ಅಜೇಯ 99 ರನ್ ಗಳಿಸಿದ ಶಿಖರ್ ತಂಡ ಮೊತ್ತ 140ರ ಗಡಿದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಸ್ಯಾಮ್‌ ಕರ್ರನ್‌ 22 ರನ್‌ ಗಳಿಸಿದ್ದು ಬಿಟ್ಟರೆ, ಉಳಿದ ಯಾರೊಬ್ಬರೂ ಎರಡಂಕಿಯ ಮೊತ್ತ ಗಳಿಸದ ಕಾರಣ ಪಂಜಾಬ್‌ ಅಲ್ಪಮೊತ್ತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.

    ಹೈದರಾಬಾದ್‌ ಪರ ಮಿಂಚಿನ ಬೌಲಿಂಗ್‌ ದಾಳಿ ನಡೆಸಿದ ಮಯಾಂಕ್‌ ಮಾರ್ಕಂಡೆ, 4 ವಿಕೆಟ್‌ ಕಿತ್ತರೆ, ಉಮ್ರಾನ್‌ ಮಲಿಕ್‌, ಮಾರ್ಕೊ ಜಾನ್ಸೆನ್‌ ತಲಾ 2 ವಿಕೆಟ್‌ ಹಾಗೂ ಭುವನೇಶ್ವರ್‌ ಕುಮಾರ್‌ ಒಂದು ವಿಕೆಟ್‌ ಕಿತ್ತರು.

  • IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    IPL 2023: ಬೌಲರ್‌ಗಳ ಬಿಗಿ ಹಿಡಿತದಲ್ಲಿ ಹೈದರಾಬಾದ್‌ ಒದ್ದಾಟ – ಲಕ್ನೋಗೆ 5 ವಿಕೆಟ್‌ಗಳ ಜಯ

    ಲಕ್ನೋ: ಬಿಗಿ ಹಿಡಿತದ ಬೌಲಿಂಗ್‌ ಹಾಗೂ ಕೆ.ಎಲ್‌.ರಾಹುಲ್‌ (KL Rahul), ಕೃನಾಲ್‌ ಪಾಂಡ್ಯ (Krunal Pandya) ಜವಾಬ್ದಾರಿಯುತ ಬ್ಯಾಟಿಂಗ್‌ ನೆರವಿನಿಂದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ 5 ವಿಕೆಟ್‌ಗಳ ಜಯ ಸಾಧಿಸಿದ್ದು, 16ನೇ ಆವೃತ್ತಿಯ ಐಪಿಎಲ್‌ನಲ್ಲಿ 2ನೇ ಗೆಲುವು ದಾಖಲಿಸಿದೆ.

    ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಏಡೆನ್ ಮಾರ್ಕ್ರಮ್ ನಾಯಕತ್ವದ ಸನ್‌ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಂಡು 121 ರನ್ ಗಳಿಸಿತು. 122 ರನ್‌ ಗಳ ಅಲ್ಪಮೊತ್ತದ ಗುರಿ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ (Lacknow Super Gaints) ತಂಡವು 16 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 127 ರನ್‌ ಗಳಿಸಿ ಜಯ ಸಾಧಿಸಿತು. ಇದನ್ನೂ ಓದಿ:  ರಿಕ್ವೆಸ್ಟ್‌ ಮಾಡಿ ಕೊಹ್ಲಿ ಕೈಹಿಡಿದು ಡಾನ್ಸ್‌ ಮಾಡಿಸಿದ ಬಾದ್‌ ಷಾ – ಚಾಂಪಿಯನ್ಸ್‌ ಆಗೋಣ ಎಂದ ಜೂಹಿ ಚಾವ್ಲಾ

    ಚೇಸಿಂಗ್‌ ಆರಂಭಿಸಿದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡರೂ ರನ್‌ ಕಲೆಹಾಕುತ್ತಾ ಸಾಗಿತು. ಆರಂಭಿಕರಾಗಿ ಕಣಕ್ಕಿಳಿದ ಕೇಲ್‌ ಮೇಯರ್ಸ್‌ 13 ರನ್‌ ಗಳಿಸಿ ಔಟಾಗುತ್ತಿದ್ದಂತೆ ದೀಪಕ್‌ 7 ರನ್‌ ಗಳಿಸಿ ವಿಕೆಟ್‌ ಕೈಚೆಲ್ಲಿದರು. 3ನೇ ವಿಕೆಟ್‌ಗೆ ಜೊತೆಯಾದ ಕೃನಾಲ್‌ ಪಾಂಡ್ಯ ಹಾಗೂ ಆರಂಭಿಕ ಕೆ.ಎಲ್‌. ರಾಹುಲ್‌ ಉತ್ತಮ ಜೊತೆಯಾಟವಾಡಿ ಚೇತರಿಕೆ ನೀಡಿದರು. 38 ಎಸೆತಗಳಲ್ಲಿ ಈ ಜೋಡಿ 55 ರನ್‌ ಕಲೆಹಾಕಿತು. ಈ ವೇಳೆ ಕೃನಾಲ್‌ ಪಾಂಡ್ಯ 23 ಎಸೆತಗಳಲ್ಲಿ 34 ರನ್‌ (4 ಬೌಂಡರಿ, 1 ಸಿಕ್ಸರ್)‌ ಗಳಿಸಿದರು. ಇನ್ನೂ 36 ಎಸೆತಗಳಲ್ಲಿ ಗೆಲುವಿಗೆ 8 ರನ್‌ಗಳ ಅಗತ್ಯವಿದ್ದಾಗಲೇ ರಾಹುಲ್‌ 35 ರನ್‌ (30 ಎಸೆತ, 4 ಬೌಂಡರಿ) ಗಳಿಸಿ ಹೊರನಡೆದರು. ಕೊನೆಯಲ್ಲಿ ಮಾರ್ಕಸ್‌ ಸ್ಟೋಯ್ನಿಸ್‌ 10 ರನ್‌, ನಿಕೊಲಸ್‌ ಪೂರನ್‌ ಅಜೇಯ 11 ರನ್‌ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.

    ಹೈದರಾಬಾದ್‌ ತಂಡದ ಪರ ಆದಿಲ್‌ ರಶೀದ್‌ 2 ವಿಕೆಟ್‌ ಪಡೆದರೆ, ಭುವನೇಶ್ವರ್‌ ಕುಮಾರ್‌, ಫಜಲ್ಹಕ್ ಫಾರೂಕಿ, ಹಾಗೂ ಉಮ್ರಾನ್‌ ಮಲಿಕ್‌ ತಲಾ ಒಂದೊಂದು ವಿಕೆಟ್‌ ಪಡೆದರು. ಇದನ್ನೂ ಓದಿ: ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಸೋದೇಕೆ ಗೊತ್ತಾ – ಚಿಯರ್‌ ಗರ್ಲ್ಸ್‌ ಸಂಭಾವನೆ ಕೇಳಿದ್ರೆ ಶಾಕ್‌ ಆಗ್ತೀರಾ

    ಸನ್‌ರೈಸರ್ಸ್ ಹೈದರಾಬಾದ್ ತಂಡ ಪರ ಬ್ಯಾಟಿಂಗ್ ಆರಂಭಿಸಿದ ಮಯಾಂಕ್ ಅಗರ್ವಾಲ್ (Mayank Agarwal) ಮತ್ತು ಅನ್ಮೋಲ್‌ಪ್ರಿತ್ ಸಿಂಗ್ ಉತ್ತಮ ಆರಂಭ ನೀಡುವಲ್ಲಿ ವಿಫಲರಾದರು. 2.5 ಓವರ್‌ಗಳಲ್ಲಿ ತಂಡದ ಮೊತ್ತ 21 ರನ್‌ಗಳಾಗಿದ್ದಾಗಲೇ 8 ರನ್ ಗಳಿಸಿ ಆಡುತ್ತಿದ್ದ ಮಯಾಂಕ್ ಅಗರ್ವಾಲ್ ಸುಲಭ ಕ್ಯಾಚ್‌ ನೀಡಿ ವಿಕೆಟ್ ಒಪ್ಪಿಸಿದರು. ನಂತರ ಬಂದ ರಾಹುಲ್ ತ್ರಿಪಾಠಿ (Rahul Tripathi) ನಿಧಾನಗತಿಯ ಬ್ಯಾಟಿಂಗ್‌ ನಡೆಸಿ 41 ಎಸೆತಗಳಲ್ಲಿ 4 ಬೌಂಡರಿಗಳೊಂದಿಗೆ 35 ರನ್ ಗಳಿಸಿದರು. ಈ ವೇಳೆ ಅನ್ಮೋಲ್‌ಪ್ರಿತ್ ಸಿಂಗ್ 26 ಎಸೆತಗಳಲ್ಲಿ 31 ರನ್ (3 ಬೌಂಡರಿ, 1 ಸಿಕ್ಸರ್)‌ ಗಳಿಸಿ ಔಟಾದರು.

    4ನೇ ವಿಕೆಟ್‌ಗೆ ಕ್ರೀಸ್‌ಗಿಳಿದ ನಾಯಕ ಏಡೆನ್ ಮಾರ್ಕ್ರಮ್ ಮೊದಲ ಎಸೆತದಲ್ಲೇ ಕೃನಾಲ್ ಪಾಂಡ್ಯ ಸ್ಪಿನ್‌ ದಾಳಿಗೆ ತುತ್ತಾದರು. ನಂತರ ಹ್ಯಾರಿ ಬ್ರೂಕ್ 3 ರನ್, ವಾಷಿಂಗ್ಟನ್ ಸುಂದರ್ 28 ಎಸೆತಗಳಲ್ಲಿ 16 ರನ್, ಅಬ್ದುಲ್ ಸಮದ್ 10 ಎಸೆತಗಳಲ್ಲಿ 21 ರನ್, ಆದಿಲ್ ರಶೀದ್ 4 ರನ್ ಗಳಿಸಿದರು.

    ಬೌಲಿಂಗ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕೃನಾಲ್ ಪಾಂಡ್ಯ 4 ಓವರ್‌ಗಳಲ್ಲಿ 18 ರನ್ ನೀಡಿ 3 ವಿಕೆಟ್ ಕಿತ್ತರೆ, ಅಮಿತ್ ಮಿಶ್ರಾ 4 ಓವರ್‌ಗಳಲ್ಲಿ 23 ರನ್ ನೀಡಿ 2 ವಿಕೆಟ್ ಪಡೆದರು. ಉಳಿದಂತೆ ಯಶ್ ಠಾಕೂರ್ ಮತ್ತು ರವಿ ಬಿಷ್ಣೋಯಿ ತಲಾ ಒಂದೊಂದು ವಿಕೆಟ್ ಪಡೆದು ಮಿಂಚಿದರು.