Tag: AIADMK

  • ಮತದಾರರನ್ನ ಸೆಳೆಯಲು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೂಟಿ ಚಾಲನೆ

    ಮತದಾರರನ್ನ ಸೆಳೆಯಲು ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೂಟಿ ಚಾಲನೆ

    – ಬೆಂಬಲಿಗನ ಪ್ರಚಾರಕ್ಕೆ ಜನರು ಶಾಕ್

    ಚೆನ್ನೈ: ಎಐಎಡಿಎಂಕೆ ಅಭ್ಯರ್ಥಿ ಎಸ್.ಪಿ.ವೇಲುಮನಿ ಪರವಾಗಿ ಬೆಂಬಲಿಗನೋರ್ವ ಕಣ್ಣಿಗೆ ಬಟ್ಟೆಕಟ್ಟಿಕೊಂಡು ಸ್ಕೂಟಿ ಚಲಾಯಿಸಿ ಪ್ರಚಾರ ಮಾಡಿದ್ದಾರೆ. ವಿಚಿತ್ರ ಪ್ರಚಾರದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.

    ಯುಎಂಟಿ ರಾಜಾ ವಿಚಿತ್ರವಾಗಿ ಪ್ರಚಾರ ನಡೆಸಿದ ವೇಲುಮನಿ ಅವರ ಬೆಂಬಲಿಗ. ಕಣ್ಣಿಗೆ ಕಪ್ಪು ಬಣ್ಣದ ಪಟ್ಟಿ ಕಟ್ಟಿಕೊಂಡಿದ್ದರು. ನಂತರ ಮತ್ತೊಂದು ಕಪ್ಪು ಬಟ್ಟೆಯಿಂದ ಇಡೀ ಮುಖವನ್ನ ಮುಚ್ಚಿಕೊಂಡು ಜನಸಂದಣಿ ರಸ್ತೆಯಲ್ಲಿ ದ್ವಿಚಕ್ರ ವಾಹನ ಚಲಾಯಿಸಿದರು. ಈ ವೇಳೆ ರಾಜಾ ಅವರಿಗೆ ಪಕ್ಷದ ಕೆಲ ಮುಖಂಡರು ಸೇರಿದಂತೆ ಕಾರ್ಯಕರ್ತರು ಸಾಥ್ ನೀಡಿದರು. ಈ ರೀತಿ ಸ್ಕೂಟಿ ಚಲಾಯಿಸುವ ಮೂಲಕ ವೇಲುಮನಿ ಅವರ ಕೆಲಸವನ್ನ ಜನರಿಗೆ ತಿಳಿಸಲು ಮುಂದಾಗಿದ್ದರು.

    ಸ್ಕೂಟಿ ಚಾಲನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರಾಜಾ, ಮೊದಲಿಗೆ ಕಣ್ಣು ಬಿಟ್ಟುಕೊಂಡು ರಸ್ತೆಯಲ್ಲಿ ತಿರುಗಾಡೋದು ಕಷ್ಟವಾಗಿತ್ತು. ಆದ್ರೆ ಇಂದು ಕಣ್ಮುಚ್ಚಿ ಸ್ಕೂಟಿ ಚಲಾಯಿಸಬಹುದಾಗಿದೆ. ವೇಲುಮನಿ ತಮ್ಮ ಅವಧಿಯಲ್ಲಿ ಒಳ್ಳೆಯ ರಸ್ತೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನ ನೀಡಿದ್ದಾರೆ. ಹಾಗಾಗಿ ಕ್ಷೇತ್ರದ ಪ್ರತಿ ಮತದಾರರು ವೇಲುಮನಿ ಅವರಿಗೆ ವೋಟ್ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

    ತಮಿಳುನಾಡಿನಲ್ಲಿ ಚುನಾವಣೆ ಪ್ರಚಾರ ಅಖಾಡ ರಂಗೇರುತ್ತಿದೆ. ಅಭ್ಯರ್ಥಿಗಳು ಹೊಸ ಹೊಸ ಟೆಕ್ನಿಕ್ ಬಳಸಿ ಮತದಾರರನ್ನು ಸೆಳೆಯುತ್ತಿದ್ದಾರೆ. ಎರಡು ದಿನಗಳ ಹಿಂದೆ ಬಿಜೆಪಿ ನಾಯಕಿ, ನಟಿ ಖುಷ್ಬೂ ಸುಂದರ್ ಹೋಟೆಲ್ ನಲ್ಲಿ ದೋಸೆ ಹಾಕಿದ್ದರು. ಡಿಎಂಕೆ ಅಭ್ಯರ್ಥಿ ಬಟ್ಟೆ ತೊಳೆದಿದ್ದರು. ಮತ್ತೋರ್ವ ಕ್ಯಾಂಡಿಡೇಟ್ ನಡು ರಸ್ತೆಯಲ್ಲಿ ಮಾರ್ಷಲ್ ಆರ್ಟ್ಸ್ ಪ್ರದರ್ಶಿಸಿದ್ದರು.

  • ತಮಿಳುನಾಡು ರಾಜಕಾರಣದಲ್ಲಿ ಅದ್ಭುತ ನಡೆಯಲಿದೆ- ರಜನಿಕಾಂತ್

    ತಮಿಳುನಾಡು ರಾಜಕಾರಣದಲ್ಲಿ ಅದ್ಭುತ ನಡೆಯಲಿದೆ- ರಜನಿಕಾಂತ್

    – ಕಮಲ್ ಹಸನ್ ಮೈತ್ರಿ ಹೇಳಿಕೆಗೆ ರಜನಿ ಪ್ರತಿಕ್ರಿಯೆ

    ಚೆನ್ನೈ: 2021ರ ವಿಧಾನಸಭೆ ಚುನಾವಣೆ ವೇಳೆ ತಮಿಳುನಾಡು ರಾಜಕಾರಣದಲ್ಲಿ ಮಹಾ ಅದ್ಭುತ ನಡೆಯಲಿದೆ ಎಂದು ಸೂಪರ್ ಸ್ಟಾರ್ ರಜಿನಿಕಾಂತ್ ಅಚ್ಚರಿ ಹೇಳಿಕೆ ನೀಡಿದ್ದಾರೆ.

    ಚೆನ್ನೈನಲ್ಲಿ ಮಾತನಾಡಿದ ಅವರು, ಅಧ್ಯಾತ್ಮಿಕ ರಾಜಕಾರಣಕ್ಕೆ ತಮಿಳುನಾಡು ಜನತೆ ಮಣೆ ಹಾಕುತ್ತಾರೆ ಎಂಬ ವಿಶ್ವಾಸವಿದೆ. 2021ರ ಚುನಾವಣೆಯಲ್ಲಿ ಶೇ.100 ತಮಿಳು ಜನತೆ ರಾಜಕೀಯದಲ್ಲಿ ದೊಡ್ಡ ಅದ್ಭುತ ಸೃಷ್ಟಿಸಲಿದ್ದಾರೆ ಎಂದರು.

    ನೀವು ಹಾಗೂ ಕಮಲ್ ಹಾಸನ್ ಇಬ್ಬರೂ ಕೈ ಜೋಡಿಸಿದಲ್ಲಿ ಯಾರು ತಮಿಳುನಾಡಿನ ಮುಖ್ಯಮಂತ್ರಿಯಾಗುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದ ಕಾರ್ಯಕರ್ತರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ ನಂತರ ಇದನ್ನು ನಿರ್ಧರಿಸಲಾಗುವುದು. ಚುನಾವಣೆ ಸಮೀಪಿಸುತ್ತಿರುವಾಗ ಪರಿಸ್ಥಿತಿಯನ್ನು ಅವಲಂಬಿಸಿ ಸಿಎಂ ಆಯ್ಕೆ ಬಗ್ಗೆ ನಿರ್ಧರಿಸಲಾಗುವುದು ಎಂದು ತಿಳಿಸಿದರು.

    ತಮಿಳುನಾಡಿನ ಕಲ್ಯಾಣಕ್ಕಾಗಿ ಸುಪರ್‍ಸ್ಟಾರ್ ರಜನಿಕಾಂತ್ ಜೊತೆಗೆ ಕೈ ಜೋಡಿಸುವುದಾಗಿ ನಟ ಕಮಲ್ ಹಾಸನ್ ಹೇಳಿಕೆ ನೀಡಿದ ಕೆಲವೇ ಗಂಟೆಗಳ ನಂತರ ರಜನಿಕಾಂತ್ ಹೇಳಿಕೆ ಹೊರ ಬಿದ್ದಿದೆ. ಇಬ್ಬರೂ ಒಟ್ಟಿಗೆ ಸೇರುವ ಸಂದರ್ಭ ಎದುರಾದರೆ ಒಟ್ಟಿಗೆ ಸೇರುತ್ತೇವೆ ಎಂದು ಸ್ಪಷ್ಟಪಡಿಸಿದರು.

    2021ರಲ್ಲಿ ಅದ್ಭುತ ನಡೆಯಲಿದೆ ಎಂದು ರಜನಿಕಾಂತ್ ಯಾವ ಆಧಾರದ ಮೇಲೆ ಹೇಳುತ್ತಾರೆ ಎಂದುದೇ ಅರ್ಥವಾಗುತ್ತಿಲ್ಲ ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ರಜನಿಕಾಂತ್ ಹೇಳಿಕೆಗೆ ತಿರುಗೇಟು ನೀಡಿದರು. ಅಲ್ಲದೆ ಹಲವು ಎಐಎಡಿಎಂಕೆ ನಾಯಕರು ಈ ಕುರಿತು ಕಿಡಿಕಾರಿದ್ದು, ಇಬ್ಬರು ನಟರು ಒಟ್ಟುಗೂಡಿದರೆ ಅದ್ಭುತ, ಪವಾಡ ನಡೆಯುತ್ತದೆ ಎನ್ನುವುದೆಲ್ಲ ಭ್ರಮೆ ಎಂದು ಟೀಕಿಸಿದ್ದಾರೆ.

  • ಪ್ರಚಾರದ ವೇಳೆ ಹೃದಯಾಘಾತ: ನಟ, ಮಾಜಿ ಸಂಸದ ಜೆ.ಕೆ.ರಿತೇಶ್ ವಿಧಿವಶ

    ಪ್ರಚಾರದ ವೇಳೆ ಹೃದಯಾಘಾತ: ನಟ, ಮಾಜಿ ಸಂಸದ ಜೆ.ಕೆ.ರಿತೇಶ್ ವಿಧಿವಶ

    ಚೆನ್ನೈ: ತಮಿಳು ಭಾಷಾ ಸಿನಿಮಾ ನಟ, ಮಾಜಿ ಸಂಸದ, ಎಐಎಡಿಎಂಕೆ ನಾಯಕ ಜೆ.ಕೆ.ರಿತೇಶ್ (46) ಅವರು ಇಂದು ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

    ಜೆ.ಕೆ.ರಿತೇಶ್ ಅವರು ಗುರುವಾರ ತಮಿಳುನಾಡಿನ ರಾಮನಾಥಪುರಂನಲ್ಲಿ ಎಐಎಡಿಎಂಕೆ ಮೈತ್ರಿ ಪಕ್ಷ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ಭಾಗವಹಿಸಿದ್ದರು. ಆಗ ಹೃದಯಾಘಾತವಾಗಿದ್ದು, ತಕ್ಷಣವೇ ಅವರನ್ನು ಪಕ್ಷದ ನಾಯಕರು ಸಮೀಪದ ಆಸ್ಪತ್ರೆಗೆ ಸಾಗಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೃತಪಟ್ಟಿದ್ದಾರೆ.

    ಜೆ.ಕೆ.ರಿತೇಶ್ ಅವರು ಡಿಎಂಕೆ ಮೂಲಕ ರಾಜಕೀಯ ಪ್ರವೇಶ ಮಾಡಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಆಗ ಅವರು ಜಲಸಂಪನ್ಮೂಲ ಸಮಿತಿಯ ಸದಸ್ಯರಾಗಿದ್ದರು. ಆದರೆ 2014ರ ಏಪ್ರಿಲ್‍ನಲ್ಲಿ ಡಿಎಂಕೆ ಬಿಟ್ಟು ಎಐಎಡಿಎಂಕೆಗೆ ಸೇರ್ಪಡೆಯಾಗಿದ್ದರು.

    ಹಾಸ್ಯನಟ ಚಿನ್ನಿ ಜಯಂತ್ ನಿರ್ದೇಶನದ ‘ಕಾನಾಲ್ ನೀರ್’ ಸಿನಿಮಾದ ಮೂಲಕ ಜೆ.ಕೆ.ರಿತೇಶ್ ಅವರು 2007ರಲ್ಲಿ ಕಾಲಿವುಡ್ ಪ್ರವೇಶಿಸಿದ್ದರು. 2008ರಲ್ಲಿ ‘ನಾಯಗನ್’, 2010ರಲ್ಲಿ ‘ಪೆನ್ ಸಿಂಗಮ್’ ಸಿನಿಮಾಗಳಲ್ಲಿ ನಟಿಸಿದ್ದರು. ಕೊನೆಯದಾಗಿ ‘ಎಲ್‍ಕೆಜಿ’ ಯಲ್ಲಿ ಕಾಣಿಸಿಕೊಂಡಿದ್ದರು.

  • ಪ್ರಧಾನಿ ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ

    ಪ್ರಧಾನಿ ಮೋದಿ ನಮ್ಮ ಡ್ಯಾಡಿ: ತಮಿಳುನಾಡು ಸಚಿವ

    ಚೆನ್ನೈ: ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನ ಆಡಳಿತ ಪಕ್ಷ ಆಲ್ ಇಂಡಿಯಾ ಅಣ್ಣ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ)ಯ ಡ್ಯಾಡಿ (ತಂದೆ) ಎಂದು ಡೈರಿ ಅಭಿವೃದ್ಧಿ ಸಚಿವ ಕೆ.ಟಿ.ರಾಜೇಂತಿರ ಬಾಲಾಜಿ ಹೇಳಿದ್ದಾರೆ.

    ವಿರುದುನಗರ್ ಜಿಲ್ಲೆಯ ಶ್ರೀವಿಲ್ಲಿಪುತುರ್‍ನಲ್ಲಿ ಶುಕ್ರವಾರ ನಡೆದ ಪಕ್ಷದ ಸಭೆಯಲ್ಲಿ ಮಾತನಾಡಿದ ಅವರು, ಅಮ್ಮ (ಎಐಎಡಿಎಂಕೆ ನಾಯಕಿ ಜಯಲಲಿತಾ) ಅವರ ಮೃತರಾದ ಬಳಿಕ ಪ್ರಧಾನಿ ಮೋದಿ ಅವರು ಎಐಎಡಿಎಂಕೆಗೆ ತಂದೆಯಂತೆ ಮಾರ್ಗದರ್ಶನ ಮಾಡಿದ್ದಾರೆ ಎಂದು ಹೊಗಳಿದರು.

    ಪ್ರಧಾನಿ ನರೇಂದ್ರ ಮೋದಿ ನಮ್ಮ ತಂದೆ. ಜಯಲಲಿತಾ ಅವರನ್ನು ಕಳೆದುಕೊಂಡ ಬಳಿಕ ನಮಗೆ ಮಾರ್ಗದರ್ಶನ ಮತ್ತು ಬೆಂಬಲ ನೀಡುತ್ತಾ ಬಂದಿದ್ದಾರೆ. ಅವರು ಕೇವಲ ನಮಗಷ್ಟೇ ತಂದೆಯಲ್ಲ, ಇಡೀ ದೇಶಕ್ಕೆ ತಂದೆಯಾಗಿದ್ದಾರೆ. ಇದೇ ಕಾರಣಕ್ಕೆ ಎಐಎಡಿಎಂಕೆ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ತಿಳಿಸಿದರು.

    ಎಐಎಡಿಎಂಕೆ 2014ರ ಲೋಕಸಭಾ ಚುನಾವಣೆಯಲ್ಲಿ ತಮಿಳುನಾಡಿನ ಒಟ್ಟು 39 ಸೀಟುಗಳಲ್ಲಿ 37 ಸ್ಥಾನ ಪಡೆದಿತ್ತು. ಆದರೆ ಈ ಬಾರಿ ಎಐಎಡಿಎಂಕೆಯು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ 39 ಸೀಟುಗಳ ಪೈಕಿ, ಐದು ಸ್ಥಾನಗಳನ್ನು ಬಿಜೆಪಿಗೆ ನೀಡಲಾಗಿದೆ.

    ಎಐಎಡಿಎಂಕೆ ನಾಯಕಿ ಜಯಲಲಿತಾ ಅವರು 2014ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ “ತಮಿಳುನಾಡಿನ ಮಹಿಳೆಯೋ ಅಥವಾ ಗುಜರಾತಿನ ಮೋದಿಯೋ?” ಎಂಬ ಘೋಷವಾಕ್ಯದ ಭಾರೀ ಪ್ರಚಾರ ಮಾಡಿದ್ದರು. ಈ ಘೋಷಣೆ ಮೂಲಕ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರಿಗೆ ಟಾಂಗ್ ಕೊಟ್ಟಿದ್ದರು.

    ನನ್ನ ನೇತೃತ್ವದ ತಮಿಳುನಾಡು ಸರ್ಕಾರವು ಗುಜರಾತ್‍ನ ನರೇಂದ್ರ ಮೋದಿ ಸರ್ಕಾರಕ್ಕಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ತಮಿಳುನಾಡಿನ ಮಹಿಳೆ ಜನರಿಗೆ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಕಳೆದ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ವ್ಯಂಗ್ಯವಾಡಿದ್ದರು.

    ಇತ್ತ ಮಿಜೋರಾಂ ರಾಜ್ಯಪಾಲ ಸ್ಥಾನಕ್ಕೆ ಕುಮ್ಮನಂ ರಾಜಶೇಖರ್ ರಾಜೀನಾಮೆ ನೀಡಿದ್ದು, ಬಿಜೆಪಿಯ ಅಭ್ಯರ್ಥಿಯಾಗಿ ಕೇರಳದ ತಿರುವನಂತಪುರಂನಿಂದ ಸ್ಪರ್ಧಿಸುವ ಇಚ್ಛೇ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಶಿವಸೇನೆ ಬಳಿಕ ಎನ್‍ಡಿಎ ಒಕ್ಕೂಟ ಸೇರಿದ ಎಐಡಿಎಂಕೆ – ಲೋಕಸಮರಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್

    ಶಿವಸೇನೆ ಬಳಿಕ ಎನ್‍ಡಿಎ ಒಕ್ಕೂಟ ಸೇರಿದ ಎಐಡಿಎಂಕೆ – ಲೋಕಸಮರಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್

    ಚೆನ್ನೈ: 2019 ಲೋಕಸಮರ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈಗ ತನ್ನ ಎನ್‍ಡಿಎ ಮಿತ್ರಕೂಟವನ್ನು ವಿಸ್ತರಣೆಗೆ ವೇಗ ನೀಡಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಖಚಿತ ಪಡಿಸಿದ ಬೆನ್ನಲ್ಲೇ ಈಗ ದಕ್ಷಿಣದಲ್ಲೂ ಕ್ಷೇತ್ರ ಹಂಚಿಕೆ ಸೂತ್ರ ಜಾರಿಗೊಳಿಸಿದೆ. ಇದರ ಭಾಗವಾಗಿ ತಮಿಳುನಾಡಿನಲ್ಲಿ ಆಡಳಿತರೂಢ ಅಣ್ಣಾಡಿಎಂಕೆ ಜೊತೆ ಅಧಿಕೃತವಾಗಿ ಮೈತ್ರಿ ಮಾಡಿಕೊಂಡಿದೆ.

    ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎರಡು ಪಕ್ಷ ನಾಯಕರು ಮೈತ್ರಿಯಲ್ಲಿ ಚುನಾವಣೆ ಎದುರಿಸುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಎಐಎಡಿಎಂಕೆ ಮೈತ್ರಿ ಮಾಡಿಕೊಳ್ಳಲಿದೆ. ತಮಿಳುನಾಡಿನಲ್ಲಿ ಓ. ಪನ್ನೀರ್ ಸೆಲ್ವಂ ಹಾಗೂ ಪಳನಿಸ್ವಾಮಿ ನಾಯಕತ್ವಕ್ಕೆ ನಾವು ಬೆಂಬಲ ನೀಡಲಿದ್ದೆವೆ. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವಕ್ಕೆ ಎಐಎಡಿಎಂಕೆ ಬೆಂಬಲಿಸಲಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ತಿಳಿಸಿದರು.

    ಮೈತ್ರಿಯ ಅನ್ವಯ 39 ಕ್ಷೇತ್ರಗಳಲ್ಲಿ ಎಐಎಡಿಎಂಕೆ ಪಕ್ಷ 25, ಬಿಜೆಪಿ 5 ಹಾಗೂ ಪಿಎಂಕೆ 7 ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿವೆ ಎಂಬ ಬಗ್ಗೆ ಮಾಹಿತಿ ಲಭಿಸಿದೆ. ಸುದ್ದಿಗೋಷ್ಠಿಯಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ, ಉಪಮುಖ್ಯಮಂತ್ರಿ ಓ. ಪನ್ನೀರಸೆಲ್ವಂ ಹಾಗೂ ಕೇಂದ್ರ ಸಚಿವ ಪಿಯೂಶ್ ಗೋಯಲ್ ಭಾಗಿಯಾಗಿದ್ದರು.

    ಅಂದಹಾಗೇ ತಮಿಳುನಾಡಿನಲ್ಲಿ ಪುದುಚೇರಿ ಸೇರಿದಂತೆ 40 ಲೋಕಸಭೆ ಕ್ಷೇತ್ರಗಳಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಎರಡೂ ಪಕ್ಷಗಳ ನಡುವೆ ಮೈತ್ರಿ ಏರ್ಪಾಡಾಗಿದೆ. 2014 ಲೋಕಸಭಾ ಚುನಾವಣೆಯಲ್ಲಿ ಎಡಿಎಂಕೆ 37 ಸ್ಥಾನಗಳನ್ನು ಪಡೆದುಕೊಂಡಿದ್ದರೆ, ಬಿಜೆಪಿ 1 ಹಾಗೂ ಪಿಎಂಕೆ ಪಕ್ಷ 1 ಸ್ಥಾನ ಪಡೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 43ರ ಶಾಸಕನ ಜೊತೆ ಮದ್ವೆ ಫಿಕ್ಸ್: ವಿವಾಹಕ್ಕೂ ಮುನ್ನವೇ ಲವ್ವರ್ ಜೊತೆ ಕಾಲ್ಕಿತ್ತ 23ರ ವಧು

    43ರ ಶಾಸಕನ ಜೊತೆ ಮದ್ವೆ ಫಿಕ್ಸ್: ವಿವಾಹಕ್ಕೂ ಮುನ್ನವೇ ಲವ್ವರ್ ಜೊತೆ ಕಾಲ್ಕಿತ್ತ 23ರ ವಧು

    ಚೆನ್ನೈ: ತಮಿಳುನಾಡಿನ ಈರೋಡು ಜಿಲ್ಲೆಯಲ್ಲಿ 45 ರ ಹರೆಯದ ಶಾಸಕನ ಜೊತೆ ಮದುವೆ ನಿಶ್ಚಯವಾಗಿದ್ದ ವಧು ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ.

    ಹೌದು, 45 ವರ್ಷದ ತಮಿಳುನಾಡಿನ ಭವಾನಿಸಾಗರದ ಎಐಡಿಎಂಕೆ ಶಾಸಕನಾದ ಈಶ್ವರನ್ ಹಾಗೂ 23 ವರ್ಷದ ಎಂಸಿಎ ಪದವೀಧರೆ ಸಂಧ್ಯಾಳ ಜೊತೆ ವಿವಾಹ ನಿಶ್ಚಯವಾಗಿತ್ತು. ಅಲ್ಲದೇ ಇದೇ ತಿಂಗಳ 12 ರಂದು ಸತ್ಯಮಂಗಲದ ಬನ್ನಾರಿ ಅಮ್ಮನ್ ದೇವಸ್ಥಾನದಲ್ಲಿ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು. ಮದುವೆಗೆ ಎರಡು ಕುಟುಂಬಗಳು ಭರ್ಜರಿಯಾಗಿ ಸಿದ್ಧತೆ ನಡೆಸಿದ್ದರು. ಆದರೆ ಮದುವೆಗೆ ಇಷ್ಟವಿಲ್ಲದ ಯುವತಿ ಶನಿವಾರ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದಾಳೆ.

    ಎಂಸಿಎ ಪದವೀಧರೆಯಾದ ಸಂಧ್ಯಾಳಿಗೆ ಈ ಮದುವೆ ಇಷ್ಟವಿರಲಿಲ್ಲ. ಅಲ್ಲದೇ ಬೇರೊಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ತನ್ನ ತಾಯಿ ತಂಗಮಣಿಗೆ ಸಹೋದರಿ ಮನೆಗೆ ಹೋಗುತ್ತೇನೆಂದು ಹೇಳಿ ಹೊರಟಿದ್ದಾಳೆ. ಆದರೆ ಸಂಜೆಯಾದರೂ ತಂಗಿ ಮನೆಗೆ ಆಕೆ ಹೋಗಿರಲಿಲ್ಲ. ಕೂಡಲೇ ಆಕೆಯ ಮೊಬೈಲಿಗೆ ಕರೆ ಮಾಡಿದರೆ, ಫೋನ್ ಸ್ವಿಚ್ ಆಫ್ ಆಗಿತ್ತು. ಇದರಿಂದ ಅನುಮಾನಗೊಂಡ ಪೋಷಕರು ಕಡತೂರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಶಾಸಕನೊಂದಿಗೆ ಮದುವೆಗೆ ಸಂಧ್ಯಾಳಿಗೆ ಇಷ್ಟವಿರಲಿಲ್ಲ. ಅಲ್ಲದೇ ಆಕೆಯು ವಿಘ್ನೇಶ್ ಎಂಬಾತನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಆತನೊಂದಿಗೆ ಓಡಿ ಹೋಗಿದ್ದಾಳೆಂದು ದೂರಲ್ಲಿ ಉಲ್ಲೇಖಿಸಿದ್ದಾರೆ.

    45 ವರ್ಷಗಳ ನಂತರ ಮದುವೆಗೆ ಒಪ್ಪಿದ್ದ ಶಾಸಕನ ಬಾಳಲ್ಲಿ ಬಿರುಗಾಳಿ ಎದ್ದಿದ್ದು, ಕೇವಲ 11 ದಿನಗಳು ಬಾಕಿ ಇರುವಂತೆ ಯುವತಿ ನಾಪತ್ತೆಯಾದ ಹಿನ್ನೆಲೆಯಲ್ಲಿ ಮದುವೆ ಮುರಿದು ಬಿದ್ದಿದೆ. ಈ ಮದುವೆಗೆ ಮುಖ್ಯಮಂತ್ರಿ ಪಳನಿಸ್ವಾಮಿ, ಉಪ ಮುಖ್ಯಮಂತ್ರಿ ಪನ್ನೀರ ಸೆಲ್ವಂ ಹಾಗೂ ಸಭಾಪತಿ ಪಿ ಧನಪಾಲ್ ಸೇರಿದಂತೆ ಅನೇಕ ಗಣ್ಯರಿಗೆ ಆಹ್ವಾನವನ್ನು ನೀಡಲಾಗಿತ್ತು ಎಂದು ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಆರೋಗ್ಯದಲ್ಲಿ ಏರುಪೇರು!

    ಪರಪ್ಪನ ಅಗ್ರಹಾರದಲ್ಲಿರುವ ಶಶಿಕಲಾ ಆರೋಗ್ಯದಲ್ಲಿ ಏರುಪೇರು!

    ಬೆಂಗಳೂರು: ಪರಪ್ಪನ ಅಗ್ರಹಾರದಲ್ಲಿರುವ ವಿ.ಕೆ. ಶಶಿಕಲಾರವರ ಆರೋಗ್ಯದಲ್ಲಿ ಏರುಪೇರಾಗಿದ್ದು, ವೈದ್ಯರು ಜೈಲಿನಲ್ಲೇ ಚಿಕಿತ್ಸೆ ನೀಡುತ್ತಿದ್ದಾರೆ.

    ಪರಪ್ಪನ ಅಗ್ರಹಾರದಲ್ಲಿ ಖೈದಿಯಾಗಿರುವ ಶಶಿಕಲಾರವರ ಆರೋಗ್ಯದಲ್ಲಿ ಶುಕ್ರವಾರ ಬೆಳಗ್ಗೆ ಏರುಪೇರು ಕಂಡುಬಂದಿದೆ. ಪದೇ ಪದೇ ಅವರ ಬಿಪಿ ಹಾಗೂ ಶುಗರ್ ಪ್ರಮಾಣ ಹೆಚ್ಚಳವಾಗುತ್ತಿದ್ದು, ಹೀಗಾಗಿ ವೈದ್ಯರು ಜೈಲಿನಲ್ಲಿರುವ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರಿಸಿದ್ದಾರೆ ಎಂದು ಪರಪ್ಪನ ಅಗ್ರಹಾರ ಜೈಲಿನ ಮೂಲಗಳು ಮಾಹಿತಿ ನೀಡಿವೆ.

    ಶಶಿಕಲಾ ಕಳೆದ ಆರು ತಿಂಗಳ ಹಿಂದೆ ಅತಿಯಾದ ಶುಗರ್ ಕಾಣಿಸಿಕೊಂಡು ಚೆಂತರಿಸಿಕೊಂಡಿದ್ದರು. ಒಂದು ವೇಳೆ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬರದಿದ್ದರೆ, ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸುವ ಕುರಿತು ಜೈಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಕ್ರಿಯೆ

    ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಕ್ರಿಯೆ

    ಚೆನ್ನೈ: ಮಾಜಿ ಸಿಎಂ ಕರುಣಾನಿಧಿ ಅಂತ್ಯಕ್ರಿಯೆ ಸ್ಥಳಕ್ಕೆ ಸಂಬಂಧಿಸಿದಂತೆ ಮರೀನಾ ಬೀಚ್‍ನಲ್ಲಿಯೇ ಅಂತಿಮ ವಿಧಿ ವಿಧಾನಗಳನ್ನು ಸಲ್ಲಿಸಬಹುದು ಎಂದು ಮದ್ರಾಸ್ ಹೈಕೋಟ್ ತೀರ್ಪು ನೀಡಿದೆ.

    ಟ್ರಾಫಿಕ್ ರಾಮಸ್ವಾಮಿ ಸೇರಿದಂತೆ ಐವರು ಮರೀನಾ ಬೀಚ್‍ನಲ್ಲಿ ಅಂತ್ಯಕ್ರಿಯೆ ನಡೆಸಬಾರದು ಎಂದು ಕೋರ್ಟ್ ಗೆ ಅರ್ಜಿ (ಪಿಐಎಲ್) ಸಲ್ಲಿಸಿದ್ದರು. ಆದ್ರೆ ಇಂದು ಸಾಮಾಜಿಕ ಕಾರ್ಯಕರ್ತ ಟ್ರಾಫಿಕ್ ರಾಮಸ್ವಾಮಿ ಪರ ವಕೀಲರು ಮರೀನಾ ಬೀಚ್ ನಲ್ಲಿ ಅಂತ್ಯಕ್ರಿಯೆ ನಮ್ಮ ತಕರಾರು ಇಲ್ಲ ಎಂದು ವಾದ ಮಂಡಿಸಿದ್ದಾರೆ. ಕೂಡಲೇ ನ್ಯಾಯಾಧೀಶರು ಹಾಗಾದ್ರೆ ನಿಮ್ಮ ಪಿಐಎಲ್ ಅರ್ಜಿಯನ್ನು ಹಿಂಪಡೆದುಕೊಳ್ಳಬಹುದು ಅಲ್ವಾ ಎಂದು ಸೂಚಿಸಿದ್ದಾರೆ. ನ್ಯಾಯಾಧೀಶರ ಸಲಹೆಯಂತೆ ಟ್ರಾಫಿಕ್ ರಾಮಸ್ವಾಮಿ ತಮ್ಮ ಪಿಐಎಲ್ ಹಿಂಪಡೆಯಲು ನಿರ್ಧರಿಸಿದರು.

    ಮರೀನಾ ಬೀಚ್ ಗೆ ಸಂಬಂಧಿಸಿದ ಎಲ್ಲ ಪಿಐಎಲ್ ಅರ್ಜಿಗಳು ವಾಪಾಸ್ಸಾದ ಹಿನ್ನೆಲೆಯಲ್ಲಿ ಆಡಳಿತಾರೂಢ ಸರ್ಕಾರಕ್ಕೆ ಹಿನ್ನಡೆ ಆಗಿದೆ. ಕರುಣಾನಿಧಿ ಅವರ ಅಂತ್ಯಕ್ರಿಯೆಗೆ ಸಂಬಂಧಿಸಿದ ವಿವಾದಕ್ಕೆ ತೊಡಕಾಗಿದ್ದ ಎಲ್ಲ 5 ಅರ್ಜಿಗಳು ವಜಾಗೊಂಡಿವೆ.

    ಹಾಲಿ ಸಿಎಂ ಮತ್ತು ಮಾಜಿ ಸಿಎಂ ಇಬ್ಬರು ಒಂದೇ ಅಲ್ಲ. ಅಧಿಕಾರದಲ್ಲಿದ್ದ ಮುಖ್ಯಮಂತ್ರಿಗಳು ಸಾವನ್ನಪ್ಪಿದಾಗ ಮರೀನಾ ಬೀಚ್‍ನಲ್ಲಿಯೇ ಸ್ಥಳ ನೀಡಲಾಗಿತ್ತು. ಹಾಗಾಗಿ ಕರುಣಾನಿಧಿ ಅವರಿಗೆ ಮರೀನಾ ಬೀಚ್‍ನಲ್ಲಿಯೇ ಸ್ಥಳಾವಕಾಶ ನೀಡಲು ಸಾಧ್ಯವಿಲ್ಲ. ಬೇಕಾದ್ರೆ ಗಾಂಧಿ ಮಂಟಪದ ಬಳಿ 2 ಎಕರೆ ಸ್ಥಳ ನೀಡಲು ಸಿದ್ಧವಾಗಿದೆ ಎಂದು ಆಡಳಿತಾರೂಢ ಸರ್ಕಾರ ಪರ ವಕೀಲರು ವಾದ ಮಂಡಿಸಿದ್ದರು.

    ಸಾವಿನಲ್ಲೂ ದ್ವೇಷದ ರಾಜಕಾರಣ ಬೇಡ. ಕೋಟಿ ಕೋಟಿ ತಮಿಳುಗರ ಭಾವನೆಗಳಿಗೆ ಧಕ್ಕೆ ತರೋದು ಬೇಡ. ಕರುಣಾನಿಧಿ ಅವರ ಅಂತ್ಯಕ್ರಿಯೆಯ ಮರೀನಾ ಬೀಚ್ ನಲ್ಲಿ ನಡೆಸುವ ಸರ್ಕಾರ ಗೌರವ ಸಲ್ಲಿಸಬೇಕು. ಗಾಂಧಿ ಮಂಟಪದ ಬಳಿ ಅಂತ್ಯಕ್ರಿಯೆ ನಮ್ಮ ಆಯ್ಕೆ ಅಲ್ಲ. ಕರುಣಾನಿಧಿ ಸಾವಿನ ಬಳಿಕ ಒಂದು ವಾರ ಶೋಕಾಚರಣೆ ಮಾಡುತ್ತಿದ್ದೀರಿ. ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದೀರಿ. ಹಾಗಾದ್ರೆ ಸ್ಥಳ ಕೊಡುತ್ತಿಲ್ಲ ಯಾಕೆ ಎಂದು ಡಿಎಂಕೆ ಪರ ವಕೀಲರು ಪ್ರತಿವಾದ ಮಂಡಿಸಿದ್ದಾರೆ.

    ಕರುಣಾನಿಧಿಯವರ ಅಂತ್ಯಕ್ರಿಯೆಯನ್ನು ಮರೀನಾ ಬೀಚ್‍ನಲ್ಲಿ ಮಾಡಬೇಕೆಂದು ಕಾರ್ಯಕರ್ತರು ಮನವಿ ಮಾಡಿಕೊಂಡಿದ್ದರು. ಆದರೆ ಆಡಳಿತರೂಢ ಸರ್ಕಾರ ಕಾರ್ಯಕರ್ತರ ಮನವಿಯನ್ನು ತಿರಸ್ಕರಿಸಿತ್ತು. ಚೆನ್ನೈ ಮರೀನಾ ಬೀಚ್ ಪ್ರದೇಶ ಸೂಕ್ಷ್ಮ ವಲಯದಲ್ಲಿದೆ. ಹೀಗಾಗಿ ಈ ಜಾಗದಲ್ಲಿ ರಾಜಕೀಯ ನಾಯಕರ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡಬಾರದು ಎಂದು ಕೋರ್ಟ್ ನಲ್ಲಿ ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಅರ್ಜಿ ಇತ್ಯರ್ಥವಾಗದ ಕಾರಣ ತಮಿಳುನಾಡು ಸರ್ಕಾರ ಅನುಮತಿ ನೀಡಿಲ್ಲ. ಪ್ರಕರಣ ಕೋರ್ಟ್ ನಲ್ಲಿ ಇರುವ ಮರೀನಾ ಬೀಚ್ ಬದಲಾಗಿ ಗಿಂಡಿ ಪ್ರದೇಶದ ಗಾಂಧಿ ಮಂಟಪದ ಬಳಿ ಅಂತ್ಯಸಂಸ್ಕಾರಕ್ಕೆ ಸ್ಥಳವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.

    ಸರ್ಕಾರ ಅನುಮತಿ ನೀಡದ ಕಾರಣ ಡಿಎಂಕೆ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಮರೀನಾ ಬೀಚ್ ನಲ್ಲೇ ಅಂತ್ಯಸಂಸ್ಕಾರ ನಡೆಸಬೇಕೆಂದು ಪಟ್ಟುಹಿಡಿದಿದ್ದರು. ಏನು ಮಾಡಬೇಕೆಂದು ತಿಳಿಯದ ತಮಿಳುನಾಡು ಸರ್ಕಾರ ಈಗ ಕೇಂದ್ರದ ಮೊರೆ ಹೋಗಿದೆ. ಈ ಮಧ್ಯೆ ಡಿಎಂಕೆ ಪಕ್ಷ ಮರೀನಾ ಬೀಚ್ ಬಳಿ ಇರುವ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಅನುಮತಿ ನೀಡುವಂತೆ ಹೈಕೋರ್ಟ್ ನಲ್ಲಿ ತುರ್ತು ಅರ್ಜಿ ಸಲ್ಲಿಸಿತ್ತು.

    ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಕೋರ್ಟ್ ನಲ್ಲಿ ಸರ್ಕಾರದ ಪರ ವಾದವನ್ನು ಆಲಿಸಿತ್ತು. ಇಂದು ಬೆಳಗ್ಗೆ ಡಿಎಂಕೆ ಮತ್ತು ಪಿಐಎಲ್ ಅರ್ಜಿ ಸಲ್ಲಿಸಿದ ಪರ ವಕೀಲರು ಸಹ ವಾದವನ್ನು ಮಂಡಿಸಿದ್ದರು.

    ಮರೀನಾ ಬೀಚ್‍ನಲ್ಲಿಯೇ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿದ್ದು ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ.

  • ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರ ಮನವಿಯನ್ನು ತಿರಸ್ಕರಿಸಿದ ಸರ್ಕಾರ

    ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರ ಮನವಿಯನ್ನು ತಿರಸ್ಕರಿಸಿದ ಸರ್ಕಾರ

    ಚೆನ್ನೈ: ಮರೀನಾ ಬೀಚ್‍ನಲ್ಲಿ ಕರುಣಾನಿಧಿ ಅಂತ್ಯಸಂಸ್ಕಾರದ ಮನವಿಯನ್ನು ಆಡಳಿತರೂಢ ಎಐಎಡಿಎಂಕೆ ಸರ್ಕಾರ ತಿರಸ್ಕರಿಸಿದೆ.

    ಎಐಎಡಿಎಂಕೆ ಪಕ್ಷದ ನಿರ್ಧಾರದಿಂದಾಗಿ, ಈಗ ಯಾವ ಜಾಗದಲ್ಲಿ ಕರಣಾನಿಧಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ, ಎನ್ನುವ ಬಗ್ಗೆ ಸ್ವಲ್ಪ ಗೊಂದಲ ಏರ್ಪಟ್ಟಿದೆ.

    ಚೆನ್ನೈ ಮರೀನಾ ಬೀಚ್ ಪ್ರದೇಶ ಸೂಕ್ಷ್ಮ ವಲಯದಲ್ಲಿದೆ. ಹೀಗಾಗಿ ಈ ಜಾಗದಲ್ಲಿ ರಾಜಕೀಯ ನಾಯಕರ ಅಂತ್ಯ ಸಂಸ್ಕಾರಕ್ಕೆ ಅನುಮತಿ ನೀಡಬಾರದು ಎಂದು ಕೋರ್ಟ್ ನಲ್ಲಿ ಎರಡು ಪ್ರಕರಣಗಳ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದ ಅರ್ಜಿ ಇತ್ಯರ್ಥವಾಗದ ಕಾರಣ ತಮಿಳುನಾಡು ಸರ್ಕಾರ ಅನುಮತಿ ನೀಡಿಲ್ಲ. ಪ್ರಕರಣ ಕೋರ್ಟ್ ನಲ್ಲಿ ಇರುವ ಮರೀನಾ ಬೀಚ್ ಬದಲಾಗಿ ಗಿಂಡಿ ಪ್ರದೇಶದ ಗಾಂಧಿ ಮಂಟಪದ ಬಳಿ ಅಂತ್ಯಸಂಸ್ಕಾರಕ್ಕೆ ಸ್ಥಳವಕಾಶ ಮಾಡಿಕೊಡುವುದಾಗಿ ಮುಖ್ಯಮಂತ್ರಿ ಇ.ಕೆ.ಪಳನಿಸ್ವಾಮಿ ತಿಳಿಸಿದ್ದಾರೆ.

    ಸರ್ಕಾರ ಅನುಮತಿ ನೀಡದ ಕಾರಣ ಡಿಎಂಕೆ ಕಾರ್ಯಕರ್ತರು ಆಕ್ರೋಶಗೊಂಡಿದ್ದು, ಮರೀನಾ ಬೀಚ್ ನಲ್ಲೇ ಅಂತ್ಯಸಂಸ್ಕಾರ ನಡೆಸಬೇಕೆಂದು ಪಟ್ಟುಹಿಡಿದಿದ್ದಾರೆ.

    ಏನು ಮಾಡಬೇಕೆಂದು ತಿಳಿಯದ ತಮಿಳುನಾಡು ಸರ್ಕಾರ ಈಗ ಕೇಂದ್ರದ ಮೊರೆ ಹೋಗಿದೆ. ಈ ಮಧ್ಯೆ ಡಿಎಂಕೆ ಪಕ್ಷ ಮರೀನಾ ಬೀಚ್ ಬಳಿ ಇರುವ ಜಾಗದಲ್ಲಿ ಅಂತ್ಯಸಂಸ್ಕಾರ ನಡೆಸಲು ಅನುಮತಿ ನೀಡುವಂತೆ ಹೈಕೋರ್ಟ್ ನಲ್ಲಿ ತುರ್ತು ಅರ್ಜಿ ಸಲ್ಲಿಸಿದೆ.

    ಮರೀನಾ ಬೀಚ್‍ನಲ್ಲಿಯೇ ಎಐಎಡಿಎಂಕೆ ಸಂಸ್ಥಾಪಕ ಎಂ.ಜಿ.ರಾಮಚಂದ್ರನ್, ತಮಿಳುನಾಡಿನ ಮಾಜಿ ಸಿಎಂ ಜಯಲಲಿತಾ ಮತ್ತು ಡಿಎಂಕೆ ಸ್ಥಾಪಕ ಅಣ್ಣಾದೊರೈ ಅವರನ್ನು ಅಂತ್ಯಸಂಸ್ಕಾರ ಮಾಡಲಾಗಿದ್ದು ಅವರ ಸ್ಮಾರಕವನ್ನು ನಿರ್ಮಿಸಲಾಗಿದೆ.