Tag: Ahmedabad

  • ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕ – ಮದ್ವೆ ಮಾಡಿಸಿದ ಪೋಷಕರು

    ಟ್ರಾಫಿಕ್ ನಿಯಮ ಉಲ್ಲಂಘಿಸಿದ ಯುವಕ – ಮದ್ವೆ ಮಾಡಿಸಿದ ಪೋಷಕರು

    ಅಹಮಾದಾಬಾದ್: ಯುವಕನೊಬ್ಬ ಟ್ರಾಫಿಕ್ ನಿಯಮ ಉಲ್ಲಂಘಿಸಿರುವುದು, ಆತ ಪ್ರೀತಿಸುವ ಯುವತಿ ಜೊತೆಗೆ ಮದುವೆ ಆಗಲು ದಾರಿ ಮಾಡಿ ಕೊಟ್ಟಂತಾಗಿದೆ.

    ವತ್ಸಲ್ ಪಾರೇಕ್ ನಿಯಮ ಉಲ್ಲಂಘಿಸಿ ಮದುವೆಯಾದ ಯುವಕ. ವತ್ಸಲ್ ತನ್ನ ಪ್ರೇಯಸಿ ಜೊತೆ ಬೈಕಿನಲ್ಲಿ ಹೋಗುತ್ತಿದ್ದರು. ಈ ವೇಳೆ ಆತ ಟ್ರಾಫಿಕ್ ನಿಯಮವನ್ನು ಉಲ್ಲಂಘಿಸಿದ್ದಾನೆ. ಇದನ್ನು ಗಮನಿಸಿದ ಟ್ರಾಫಿಕ್ ಪೊಲೀಸರು ಶನಿವಾರ ವತ್ಸಲ್ ಮನೆಗೆ ಚಲನ್ ಜೊತೆ ಬಂದಿದ್ದಾರೆ. ಅಲ್ಲದೆ ಟ್ರಾಫಿಕ್ ಉಲ್ಲಂಘಿಸಿದ ಫೋಟೋ ಕೂಡ ಕಳುಹಿಸಿದ್ದಾರೆ.

    https://twitter.com/VatsalParekh14/status/1122154769764814848?ref_src=twsrc%5Etfw%7Ctwcamp%5Etweetembed%7Ctwterm%5E1122154769764814848&ref_url=https%3A%2F%2Fzeenews.india.com%2Fhindi%2Foff-beat%2Ftraffic-police-e-challan-haled-couple-to-get-married-to-his-girl-friend%2F521784

    ಈ ಫೋಟೋ ನೋಡಿದ ವತ್ಸಲ್ ಪೋಷಕರು ಈ ಯುವತಿ ಯಾರು ಎಂದು ಪ್ರಶ್ನಿಸಿದ್ದಾರೆ. ಆಗ ವತ್ಸಲ್ ತನ್ನ ಪ್ರೀತಿಯ ಬಗ್ಗೆ ಪೋಷಕರ ಬಳಿ ಹೇಳಿಕೊಂಡಿದ್ದಾನೆ. ಇವಳು ನನ್ನ ಪ್ರೇಯಸಿ. ನಾನು ಈಕೆಯನ್ನು ತುಂಬಾ ಇಷ್ಟಪಡುತ್ತೇನೆ ಹಾಗೂ ನಾನು ಇವಳನ್ನೇ ಮದುವೆ ಆಗುತ್ತೇನೆ ಎಂದು ಹೇಳಿದ್ದಾನೆ. ಮಗನ ಮಾತು ಕೇಳಿದ ಪೋಷಕರು ಯುವತಿ ಮನೆಯವರನ್ನು ಕರೆಸಿ ಮದುವೆ ಮಾತುಕತೆ ನಡೆಸಿದ್ದಾರೆ.

    ಇಬ್ಬರ ಕುಟುಂಬದವರು ಇವರ ಪ್ರೀತಿಯನ್ನು ಒಪ್ಪಿ ಮದುವೆ ಮಾಡಿಸಲು ನಿರ್ಧರಿಸಿದ್ದರು. ಈಗ ಇಬ್ಬರ ಮದುವೆಯಾಗಿದೆ. ಮದುವೆಯಾದ ನಂತರ ವತ್ಸಲ್ ಅಹಮಾದಾಬಾದ್ ಟ್ರಾಫಿಕ್ ಪೊಲೀಸರಿಗೆ ಟ್ವಿಟ್ಟರಿನಲ್ಲಿ ಅವರಿಗೆ ಟ್ಯಾಗ್ ಮಾಡಿ ಧನ್ಯವಾದ ತಿಳಿಸಿದ್ದಾನೆ.

    ವತ್ಸಲ್ ತನ್ನ ಟ್ವಿಟ್ಟರಿನಲ್ಲಿ, “ನನಗೆ ಮೇಲ್ ಮೂಲಕ ಮೆಮೋ ಸಿಕ್ತು. ಇದರಿಂದ ಒಂದು ಹಾಸ್ಯಾಸ್ಪದ ವಿಷಯ ನಡೆದಿದೆ. ಏನೆಂದರೆ ಮೆಮೋ ಜೊತೆಯಲ್ಲಿ ನನ್ನ ಹಾಗೂ ನನ್ನ ಪ್ರೇಯಸಿಯ ಫೋಟೋ ಇತ್ತು. ನನ್ನ ಪೋಷಕರಿಗೆ ಆಕೆಯ ಬಗ್ಗೆ ತಿಳಿದಿರಲಿಲ್ಲ. ಈ ಮೆಮೋ ಮೂಲಕ ಅವರಿಗೆ ಗೊತ್ತಾಗಿದೆ” ಎಂದು ಟ್ವೀಟ್ ಮಾಡಿದ್ದಾನೆ.

  • ಮಾಜಿ ಪ್ರೇಯಸಿಗೆ ಅಶ್ಲೀಲ ಫೋಟೋ ಕಳುಹಿಸಿದ ಯುವಕ ಅಂದರ್!

    ಮಾಜಿ ಪ್ರೇಯಸಿಗೆ ಅಶ್ಲೀಲ ಫೋಟೋ ಕಳುಹಿಸಿದ ಯುವಕ ಅಂದರ್!

    ಅಹಮದಾಬಾದ್: ಬ್ರೇಕಪ್ ಆದ ನಂತರ ಯುವಕನೊಬ್ಬ ತನ್ನ ಮಾಜಿ ಪ್ರೇಯಸಿಗೆ ಹಾಗೂ ಆಕೆಯ ಗೆಳತಿಗೆ ಅಶ್ಲೀಲ ಫೋಟೋ ಹಾಗೂ ಮೆಸೆಜ್‍ಗಳನ್ನು ಕಳುಹಿಸಿ ಪೊಲೀಸರ ಅತಿಥಿಯಾಗಿದ್ದಾನೆ.

    ತಮಿಳುನಾಡು ಮೂಲದ ಅಭಿಷೇಕ್ ಶರ್ಮಾ (23) ಬಂಧಿತ ಆರೋಪಿ. ಖಾಸಗಿ ಕಂಪನಿಯೊಂದರಲ್ಲಿ ಛಾಯಗ್ರಾಹಕನಾಗಿ ಕೆಲಸ ಮಾಡುತ್ತಿದ್ದ ಅಭಿಷೇಕ್ ತನ್ನ ಮಾಜಿ ಪ್ರೇಯಸಿಗೆ ಹಾಗೂ ಆಕೆಯ ಗೆಳತಿಗೆ ಅಶ್ಲೀಲ ಫೋಟೋ ಹಾಗೂ ಮೆಸೆಜ್‍ಗಳನ್ನು ಕಳುಹಿದ್ದಾನೆ. ಕಾಲೇಜಿಗೆ ಹೋಗುತ್ತಿದ್ದಾಗ ಅಭಿಷೇಕ್ ಹಾಗೂ ಯುವತಿ ಪ್ರೀತಿಸುತ್ತಿದ್ದರು. ಆದ್ರೆ ಕಾರಣಾಂತರ ಅವರಿಬ್ಬರ ಪ್ರೀತಿ ಮುರಿದು ಬಿದ್ದಿತ್ತು. ಆದ್ರೆ ಮಾಜಿ ಪ್ರೇಯಸಿ ಬೇರೊಬ್ಬರನ್ನ ಪ್ರೀತಿ ಮಾಡುತ್ತಿದ್ದಾಳೆ ಎಂದು ತಿಳಿದ ಬಳಿಕ ಸಹಿಸಲಾಗದೆ ಆರೋಪಿ ಈ ರೀತಿ ಮಾಡಿದ್ದಾನೆ.

    ಅಲ್ಲದೆ ಇಬ್ಬರು ಪ್ರೀತಿಸುತ್ತಿದ್ದ ಸಮಯದಲ್ಲಿ ಯುವತಿಗೆ ಗೊತ್ತಾಗದಂತೆ ಆಕೆಯ ಅಶ್ಲೀಲ ಫೋಟೋಗಳನ್ನು ಯುವಕ ತೆಗೆದಿಟ್ಟುಕೊಂಡಿದ್ದ. ಬ್ರೇಕಪ್ ಆದ ಬಳಿಕ ಯುವತಿಗೆ ಬುದ್ಧಿ ಕಲಿಸಬೇಕೆಂದು ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಹೆಸರಿನಲ್ಲಿ ಫೇಕ್ ಅಕೌಂಟ್ ತೆರೆದು ಅವಳ ಅಶ್ಲೀಲ ಫೋಟೋಗಳನ್ನು ಪೋಸ್ಟ್ ಮಾಡಿದ್ದಾನೆ. ಹಾಗೆಯೇ ಯುವತಿಗೂ ಆ ಫೋಟೋಗಳನ್ನು ಕಳುಹಿಸಿ ಹಿಂಸೆ ನೀಡಿದ್ದಾನೆ.

    ಈ ಬಗ್ಗೆ ನೊಂದ ಯುವತಿ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ತನಿಖೆ ನಡೆಸಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಬಳಿಕ ಆತನನ್ನು ವಿಚಾರಣೆ ನಡೆಸಿದ ವೇಳೆ ಸತ್ಯಾಂಶವನ್ನು ಯುವಕ ಬಾಯ್ಬಿಟ್ಟಿದ್ದಾನೆ.

    ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನ ವಿರುದ್ಧ ಈ ಪ್ರಕರಣಕ್ಕೆ ಸಂಬಂಧಿಸಿದ ಐಪಿಸಿ ಸೆಕ್ಷನ್ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿದ್ದಾರೆ.

  • ಪರೇಶ್ ರಾವಲ್ ಬದಲು ಎಚ್.ಎಸ್.ಪಟೇಲ್‍ಗೆ ಬಿಜೆಪಿ ಟಿಕೆಟ್

    ಪರೇಶ್ ರಾವಲ್ ಬದಲು ಎಚ್.ಎಸ್.ಪಟೇಲ್‍ಗೆ ಬಿಜೆಪಿ ಟಿಕೆಟ್

    ಗಾಂಧಿನಗರ: ನಟ, ಹಾಲಿ ಸಂಸದ ಪರೇಶ್ ರಾವಲ್ ಬದಲಾಗಿ ಹಸ್ಮುಖ್ ಎಸ್. ಪಟೇಲ್ ಅವರನ್ನು ಗುಜರಾತ್‍ನ ಅಹಮದಾಬಾದ್ ಪೂರ್ವ ಲೋಕಸಭಾ ಕ್ಷೇತ್ರದಿಂದ ಬಿಜೆಪಿಯು ಕಣಕ್ಕೆ ಇಳಿಸಿದೆ.

    ಹಸ್ಮುಖ್ ಎಸ್ ಪಟೇಲ್ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್ ಬುಧವಾರ ಘೋಷಣೆ ಮಾಡಿದೆ. ಎಚ್.ಎಸ್.ಪಟೇಲ್ ಅವರು ಗುಜರಾತ್‍ನ ಅಮ್ರಾವಾಡಿ ವಿಧಾನಸಭಾ ಕ್ಷೇತ್ರದಿಂದ ಅವರು 2012 ಹಾಗೂ 2017ರಲ್ಲಿ ಆಯ್ಕೆಯಾಗಿದ್ದರು.

    ಪರೇಶ್ ರಾವಲ್ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಜಯಗಳಿಸಿದ್ದರು. ಆದರೆ ಈ ಬಾರಿ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಅವರ ಬದಲಾಗಿ ಎಚ್.ಎಸ್.ಪಟೇಲ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ.

    ನಾನು ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಐದು ತಿಂಗಳ ಹಿಂದೆಯೇ ತಿಳಿಸಿದ್ದೆ. ಇದು ಪಕ್ಷದ ಅಂತಿಮ ನಿರ್ಧಾರ ಕೂಡ ಆಗಿದೆ ಎಂದು ಪರೇಶ್ ರಾವಲ್ ತಿಳಿಸಿದ್ದಾರೆ.

    ಈ ಹಿಂದೆ ಟ್ವೀಟ್ ಮೂಲಕ ಚುನಾವಣೆ ಬಗ್ಗೆ ಹೇಳಿಕೊಂಡಿದ್ದ ಪರೇಶ್ ಅವರು, ನಾನು ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತ. ಪ್ರಧಾನಿ ನರೇಂದ್ರ ಮೋದಿ ಅವರ ಗೆಲುವಿಗಾಗಿ ನಾನು ಶ್ರಮಿಸುತ್ತೇನೆ. ಆದರೆ ಪಕ್ಷ ಈ ಬಾರಿ ಟಿಕೆಟ್ ನೀಡಿದರೂ ಸ್ಪರ್ಧೆ ಮಾಡುವುದಿಲ್ಲ. ರಾಜಕೀಯ ಜೀವನದಲ್ಲಿ ನನಗೆ ಆಸಕ್ತಿಯಿಲ್ಲ ಎಂದು ತಿಳಿಸಿದ್ದರು.

  • ವಾಮಾಚಾರ: ಒಂದೇ ಕುಟುಂಬದ ಮೂವರು ಸಾಮೂಹಿಕ ಆತ್ಮಹತ್ಯೆ!

    ವಾಮಾಚಾರ: ಒಂದೇ ಕುಟುಂಬದ ಮೂವರು ಸಾಮೂಹಿಕ ಆತ್ಮಹತ್ಯೆ!

    ಗಾಂಧಿನಗರ: ವಾಮಾಚಾರಕ್ಕೆ ಒಳಗಾದ ಕುಟುಂಬವೊಂದರ 3 ಮಂದಿ ನೇಣು ಹಾಕಿಕೊಂಡು, ಬುಧವಾರ ಸಾಮೂಹಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುಜರಾತ್‍ನ ನರೋಡಾ ನಗರಲ್ಲಿ ನಡೆದಿದೆ.

    ಕುನಾಲ್ ತ್ರಿವೇದಿ (50), ಪತ್ನಿ ಕವಿತಾ ತ್ರಿವೇದಿ ಹಾಗೂ ದಂಪತಿಯ ಪುತ್ರಿ ಶ್ರೀನ್ ತ್ರಿವೇದಿ (16) ಆತ್ಮಹತ್ಯೆ ಮಾಡಿಕೊಂಡವರು. ನಮ್ಮ ಕುಟುಂಬವು ವಾಮಾಚಾರಕ್ಕೆ ಒಳಗಾಗಿದೆ. ಹೀಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದೇವೆ ಅಂತಾ ಕುನಾಲ್ ತ್ರಿವೇದಿ ಬರೆದಿರುವ ಮರಣ ಪತ್ರವು ದೊರೆತಿದೆ ಎಂದು ಇನ್ಸ್‍ಪೆಕ್ಟರ್ ಎಚ್.ಬಿ.ವಾಘೇಲಾ ತಿಳಿದ್ದಾರೆ.

    ತಮಗೆ ಯಾವುದೇ ಆರ್ಥಿಕ ತೊಂದರೆಯಿಲ್ಲ. ನಾವು ಮಧ್ಯಪ್ರದೇಶದ ವ್ಯಕ್ತಿಯೊಬ್ಬರಿಗೆ 14.5 ಲಕ್ಷ ರೂ. ನೀಡಿದ್ದೇವೆ ಎಂದು ಕುನಾಲ್ ಪತ್ರದಲ್ಲಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ನಮ್ಮ ಮನೆಯ ಮೇಲೆ ವಾಮಾಚಾರ ಮಾಡಲಾಗಿದೆ ಅಂತಾ ಕುಟುಂಬಸ್ಥರಿಗೆ ಹೇಳಿದ್ದೆ. ಆದರೆ ಯಾರೊಬ್ಬರೂ ನನ್ನ ಮಾತನ್ನು ನಂಬಿರಲಿಲ್ಲ. ಮದ್ಯ ಸೇವನೆಯಿಂದ ಹೀಗೆ ನಾನು ಹೇಳುತ್ತಿರುವೆ ಅಂತಾ ಕುಟುಂಬದವರು ಅಂದುಕೊಂಡಿದ್ದರು ಎಂದು ಕುನಾಲ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

    ವಾಮಾಚಾರದಿಂದಲೇ ಮದ್ಯ ಸೇವನೆ ಪ್ರಾರಂಭಿಸಿದ್ದು ಎಂದು ಕುನಾಲ್ ಹೇಳಿಕೊಂಡಿದ್ದಾರೆ. ಹೀಗಾಗಿ ಪ್ರಕರಣ ಮತ್ತಷ್ಟು ತಿರುವು ಪಡೆದುಕೊಂಡಿದೆ ಎಂದು ಇನ್ಸೆಪೆಕ್ಟರ್ ವಾಘೇಲಾ ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

  • ಈರುಳ್ಳಿ, ಬೆಳ್ಳುಳ್ಳಿ ತಿನ್ನಲು ಪತಿ ಕುಟುಂಬಸ್ಥರ ಒತ್ತಾಯ – ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

    ಈರುಳ್ಳಿ, ಬೆಳ್ಳುಳ್ಳಿ ತಿನ್ನಲು ಪತಿ ಕುಟುಂಬಸ್ಥರ ಒತ್ತಾಯ – ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ

    ಅಹಮದಾಬಾದ್: ಪತಿ ಮನೆಯಲ್ಲಿ ಈರುಳ್ಳಿ, ಬೆಳ್ಳುಳ್ಳಿಯಿಂದ ತಯಾರಿಸಿದ ಆಹಾರ ತಿನ್ನಲು ಒತ್ತಾಯ ಮಾಡಿದ್ದು, ನಿರಾಕರಿಸಿದಕ್ಕಾಗಿ ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಗುಜರಾತ್ ನ ಕಾದಿ ಟೌನ್ ನಿವಾಸಿಯಾದ 25 ವರ್ಷದ ಮಹಿಳೆ ಪತಿ ಹಾಗೂ ಕುಟುಂಬದ ವಿರುದ್ಧ ಜುಲೈ 10 ರಂದು ಗಾಂಧಿ ನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

    ತನ್ನ ಸಹೋದರನ ಸ್ನೇಹಿತನನ್ನು ಪ್ರೀತಿಸಿ 4 ವರ್ಷಗಳ ಹಿಂದೆ ಮದುವೆಯಾಗಿದ್ದಾಗಿದ್ದು, ಪತಿ ಟೀ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾನು ಖಾಸಗಿ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗಿ ತಿಳಿಸಿದ್ದಾರೆ. ಅಂದಹಾಗೇ ಮಹಿಳೆ ದೂರಿನಲ್ಲಿ ತಾನು ಪಾಟೇಲ್ ಸಮುದಾಯಕ್ಕೆ ಸೇರಿದ್ದಾಗಿ ತಿಳಿಸಿದ್ದು, ತಾನು ಸ್ವಾಮಿನಾರಾಯಣ್ ಪಂಥದ ಅನುಯಾಯಿ ಎಂದು ಹೇಳಿದ್ದಾರೆ. ಆಹಾರದಲ್ಲಿ ಈರುಳ್ಳಿ ಹಾಗೂ ಬೆಳ್ಳುಳ್ಳಿ ಸೇವನೆ ಮಾಡಿದರೆ ತನ್ನ ಧಾರ್ಮಿಕ ನಂಬಿಕೆಗೆ ತೊಂದರೆಯಾಗುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ದೂರಿನ ಹಿನ್ನೆಲೆಯಲ್ಲಿ ಪತಿಯ ವಿರುದ್ಧ ಹಲ್ಲೆ ಹಾಗೂ ಗೃಹ ಹಿಂಸೆ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

  • ಮಕ್ಕಳೊಂದಿಗೆ ಕಾಲುವೆಗೆ ಹಾರಿ ಪ್ರಾಣಬಿಟ್ಟ ದಂಪತಿ

    ಮಕ್ಕಳೊಂದಿಗೆ ಕಾಲುವೆಗೆ ಹಾರಿ ಪ್ರಾಣಬಿಟ್ಟ ದಂಪತಿ

    ಗಾಂಧಿನಗರ: ದಂಪತಿಗಳಿಬ್ಬರು ತಮ್ಮ ಎರಡು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಪ್ರಾಣ ಬಿಟ್ಟ ಘಟನೆ ಗಾಂಧಿನಗರದಲ್ಲಿ ನಡೆದಿದೆ.

    ಶನಿವಾರ ಗಾಂಧಿನಗರ ಜಿಲ್ಲೆಯ ಅದಾಲಜ್ ತಾಲೂಕಿನ ಜಾಮಿಯತ್ ಪುರ್ ಹಳ್ಳಿಯ ಪಕ್ಕದಲ್ಲಿನ ಕೆನಾಲ್ ವೊಂದಕ್ಕೆ ಮಧ್ಯರಾತ್ರಿ ದಂಪತಿ ತಮ್ಮೆರಡು ಮಕ್ಕಳೊಂದಿಗೆ ಹಾರಿ ಪ್ರಾಣಬಿಟ್ಟಿದ್ದಾರೆ. ಮೃತ ದೇಹಗಳನ್ನು ರವಿವಾರ ಬೆಳಿಗ್ಗೆ ಹೊರತೆಗೆಯಲಾಗಿದೆ ಎಂದು ಅದಾಲಜ್ ಪೊಲೀಸ್ ಠಾಣಾ ಅಧಿಕಾರಿಗಳು ತಿಳಿಸಿದ್ದಾರೆ.

    ಮೃತರು ಅಹಮದಾಬಾದಿನ ಲಪ್ಕಮನ್ ಹಳ್ಳಿಗೆ ಸೇರಿದವರು. ಮೃತ ಮಕ್ಕಳಲ್ಲಿ ಒಂದು ಮಗುವಿಗೆ 7 ವರ್ಷ ಎಂದು ಗುರುತಿಸಲಾಗಿದೆ. ಇನ್ನೊಂದು ಮಗುವಿನ ವಯಸ್ಸನ್ನು ಗುತಿಸಲಾಗಿಲ್ಲ. ಮೃತರು ಯಾರು ಎನ್ನುವ ಕುರಿತು ಯಾವುದೇ ಮಾಹಿತಿ ಪತ್ತೆಯಾಗಿಲ್ಲ. ಈ ಕುರಿತಂತೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದಾರೆ.

  • ಪತ್ನಿಗೆ ಗಡ್ಡ ಬಂದಿದ್ದಕ್ಕೆ ಪತಿಯಿಂದ ಡಿವೋರ್ಸ್ ಅರ್ಜಿ!

    ಪತ್ನಿಗೆ ಗಡ್ಡ ಬಂದಿದ್ದಕ್ಕೆ ಪತಿಯಿಂದ ಡಿವೋರ್ಸ್ ಅರ್ಜಿ!

    ಅಹಮದಾಬಾದ್: ಪತಿಯೊಬ್ಬ ತನ್ನ ಪತ್ನಿಗೆ ಗಡ್ಡ ಬೆಳೆದಿದೆ ಎಂದು ಹೇಳಿ ಗುಜರಾತ್‍ನ ಅಹಮದಾಬಾದ್‍ನಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾನೆ.

    ತನ್ನ ಪತ್ನಿಯ ಮುಖದಲ್ಲಿ ಗಡ್ಡ ಬೆಳೆಯುತ್ತಿದೆ ಹಾಗೂ ಆಕೆ ಪುರುಷರ ಧ್ವನಿಯಲ್ಲಿ ಮಾತನಾಡುತ್ತಾಳೆ ಎಂದು ಹೇಳಿ ಪತಿ ವಿಚ್ಛೇದನ ಅರ್ಜಿ ಹಾಕಿದ್ದನು. ಆದರೆ ಕೌಟುಂಬಿಕ ನ್ಯಾಯಾಲಯ ಆತನ ಅರ್ಜಿಯನ್ನು ತಿರಸ್ಕರಿಸಿದೆ.

    ಆರೋಪ ಏನು?
    ಪತ್ನಿಯ ಕುಟುಂಬದವರು ನನಗೆ ಮೋಸ ಮಾಡಿದ್ದಾರೆ. ಮದುವೆ ಮುಂಚೆ ಪತ್ನಿಯ ಮುಖದಲ್ಲಿ ಕೂದಲು ಇದ್ದಿದ್ದು ನನಗೆ ಗೊತ್ತಿರಲಿಲ್ಲ ಹಾಗೂ ಆಕೆ ಪುರುಷರ ಧ್ವನಿಯಲ್ಲಿ ಮಾತನಾಡುತ್ತಾಳೆ ಎಂದು ನನಗ ತಿಳಿದಿರಲಿಲ್ಲ ಎಂದು ಪತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದನು.

    ನಾನು ಮೊದಲು ಬಾರಿ ಭೇಟಿಯಾದಾಗ ಆಕೆ ದುಪ್ಪಟ್ಟಾ ಧರಿಸಿದ್ದಳು. ಆಗ ನನಗೆ ಆಕೆಯ ಮುಖ ನೋಡಲಿಲ್ಲ. ನಮ್ಮ ಸಂಪ್ರಾದಾಯದ ಪ್ರಕಾರ ಮದುವೆ ಮೊದಲು ಪತ್ನಿಯ ಮುಖವನ್ನು ನೋಡುವ ಹಾಗೇ ಇಲ್ಲ ಎಂದು ಪತಿ ಅರ್ಜಿಯಲ್ಲಿ ಮಾಹಿತಿ ನೀಡಿದ್ದ.

    ಪತ್ನಿ ಕೊಟ್ಟ ಉತ್ತರ ಏನು?
    ಪತಿಯ ಅರ್ಜಿಗೆ ಪತ್ನಿ ಪರ ವಕೀಲರು, ಹಾರ್ಮೋನ್ ಸಮಸ್ಯೆಯಿಂದ ನನ್ನ ಕಕ್ಷೀದಾರರ ಮುಖದ ಮೇಲೆ ಕೂದಲು ಬೆಳೆದಿದೆ. ಆದರೆ ಚಿಕಿತ್ಸೆ ಪಡೆದು ಈ ಗಡ್ಡವನ್ನು ತೆಗೆಯಿಸಬಹುದು. ಆದರೆ ಮನೆಯಿಂದ ಹೊರಹಾಕಲು ಪತಿ ಈ ಆರೋಪ ಮಾಡಿ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದರು.

    ಪತ್ನಿ ಕಡೆಯ ವಕೀಲರು ಅರ್ಜಿ ಸಲ್ಲಿಸಿದ ನಂತರ ಪತಿ ಕೋರ್ಟ್ ಕಡೆ ತಿರುಗಿಯೂ ನೋಡಿಲ್ಲ. ಮುಂದಿನ ವಿಚಾರಣೆಗೆ ಪತಿ ಕೋರ್ಟ್‍ಗೆ ಹಾಜರಾಗಲಿಲ್ಲ. ಹಾಗಾಗಿ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ.

  • ಪರೀಕ್ಷಾ ಕೇಂದ್ರದಲ್ಲಿ ಬರೋಬ್ಬರಿ 200 ಕೆಜಿ ನಕಲು ಚೀಟಿ ವಶ!

    ಪರೀಕ್ಷಾ ಕೇಂದ್ರದಲ್ಲಿ ಬರೋಬ್ಬರಿ 200 ಕೆಜಿ ನಕಲು ಚೀಟಿ ವಶ!

    ಅಹಮದಬಾದ್: ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದ ಕೇಂದ್ರದ ಮೇಲೆ ಅಧಿಕಾರಿಗಳು ನಡೆಸಿದ ವೇಳೆ ಸುಮಾರು 200 ಕೆಜಿ ತೂಕದ ನಕಲು ಚೀಟಿಗಳನ್ನು ವಶ ಪಡಿಸಿಕೊಂಡಿರುವ ಘಟನೆ ಜುನಾಗಢ್ ನ ವಂಥಾಲಿ ನಗರದಲ್ಲಿ ನಡೆದಿದೆ.

    ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಸ್ವಾಮಿ ನಾರಾಯಣ ಗುರುಕುಲ ಪರೀಕ್ಷಾ ಕೇಂದ್ರದ 15 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದು, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದ ಕಾರಣ ಕೆಲ ಪರೀಕ್ಷಾ ಕೇಂದ್ರದ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮಾರ್ಚ್ 31 ರವರೆಗೂ ಪರೀಕ್ಷೆಗಳು ನಡೆಯಲಿದ್ದು, ನಕಲು ಮಾಡುವುದನ್ನು ತಡೆಯಲು ಅಗತ್ಯ ಕ್ರಮಕೈಗೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ.

    ಕಳೆದ ತಿಂಗಳು ನಡೆದ 10ನೇ ತರಗತಿಯ ಪರೀಕ್ಷೆ ವೇಳೆ ಇದೇ ಪರೀಕ್ಷಾ ಕೇಂದ್ರ ಬಳಿ ವಿದ್ಯಾರ್ಥಿಗಳು ನಕಲು ಚೀಟಿಗಳನ್ನು ಬಳಕೆ ಮಾಡಿದ್ದರು. ಶಾಲೆಯ ಮುಂಭಾಗದ ರಸ್ತೆಯಲ್ಲಿ ಪರೀಕ್ಷೆ ನಡೆದ ಬಳಿಕ ಅವುಗಳನ್ನು ಎಸೆಯಲಾಗಿತ್ತು. ಮೈಕ್ರೋ ಜೆರಾಕ್ಸ್ ಬಳಸಿ ನಕಲಿ ಚೀಟಿ ತಯಾರಿಸಿದ್ದರು. ಈ ಕುರಿತು ತಮಗೇ ದೂರು ಬಂದ ಬಳಿಕ ಹೆಚ್ಚಿನ ನಿಗಾ ವಹಿಸಲಾಗಿತ್ತು ಎಂದು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳನ್ನು ನಕಲು ಮಾಡುವುದನ್ನು ಪತ್ತೆ ಹಚ್ಚಲು ಕಾಲೇಜಿ ಸಿಬ್ಬಂದಿಯಿಂದ ಮೆಗಾ ಪ್ಲಾನ್-ಕಾಲೇಜಿನ ನಡೆಗೆ ಎಲ್ಲಡೆ ಭಾರೀ ವಿರೋಧ!

    ಪರೀಕ್ಷೆಯ ನಕಲಿ ಮಾಡದಂತೆ ಮೊದಲೇ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿತ್ತು. ಅದ್ರು ಪರೀಕ್ಷೆ ನಡೆಯುವ ವೇಳೆ ವಿದ್ಯಾರ್ಥಿಗಳು ನಕಲು ಮಾಡಲು ಮುಂದಾಗಿದ್ದಾರೆ. ಈ ವೇಳೆ ದಾಳಿ ನಡೆಸಿ ನಕಲು ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. ವಿಜ್ಞಾನ ವಿಭಾಗದ ರಸಾಯನ ಶಾಸ್ತ್ರ ಪರೀಕ್ಷೆ ನಡೆಯುತ್ತಿದ್ದ ಸಾಮೂಹಿಕ ನಕಲು ಬೆಳಕಿಗೆ ಬಂದಿದೆ.

    ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದ ಎಲ್ಲಾ ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿರುವ ಅಧಿಕಾರಿಗಳು, ವಿದ್ಯಾರ್ಥಿಗಳಿಂದ ಒಟ್ಟಾರೆ 200 ಕೆಜಿ ತೂಕದ ಚೀಟಿಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

  • ಪತಿ ನಪುಂಸಕ, ವಂಶ ಬೆಳೆಯಲು ಮಾವ, ಮೈದುನನಿಂದಲೇ ಮಹಿಳೆಗೆ ಕಿರುಕುಳ!

    ಪತಿ ನಪುಂಸಕ, ವಂಶ ಬೆಳೆಯಲು ಮಾವ, ಮೈದುನನಿಂದಲೇ ಮಹಿಳೆಗೆ ಕಿರುಕುಳ!

    ಅಹಮದಾಬಾದ್: ಪತಿ ನಪುಂಸಕನಾದ ಹಿನ್ನೆಲೆಯಲ್ಲಿ ಮಾವನೇ ತನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಮಹಿಳೆಯೊಬ್ಬರು ಗುಜರಾತಿನ ಅಹಮದಾಬಾದ್ ಸರ್ದಾರ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ.

    ನನ್ನ ಪತಿ ನಪುಂಸಕ. ವಂಶ ಬೆಳೆಯಬೇಕೆಂದು ನನ್ನ ಮಾವ ಹಾಗೂ ನನ್ನ ಮೈದುನ ದೈಹಿಕ ಸಂಬಂಧ ಬೆಳೆಸುವಂತೆ ನನಗೆ ಒತ್ತಾಯಿಸುತ್ತಿದ್ದಾರೆ. ನನ್ನ ಅತ್ತೆ ಜೊತೆ ಸೇರಿ ನನ್ನ ಮಾವ ಹಾಗೂ ಮೈದುನ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಈ ಮಾತನ್ನು ನನ್ನ ಗಂಡನಿಗೆ ಹೇಳಿದಾಗ ಅವರು ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

    ನನ್ನ ಮದುವೆಯಾಗಿ 4 ವರ್ಷಗಳಾಗಿದ್ದು, ಸಂತಾನ ಪ್ರಾಪ್ತಿಯಾಗಲಿಲ್ಲ. ಈ ಕಾರಣಕ್ಕಾಗಿ ಮಾವ ಹಾಗೂ ಮೈದುನ ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಲು ಪ್ರಯತ್ನಿಸುತ್ತಿದ್ದರು ಎಂದು ನೊಂದ ಮಹಿಳೆ ತಿಳಿಸಿದ್ದಾರೆ.

    ಒಂದು ದಿನ ನನ್ನ ಮಾವ, ಮೈದುನ ಬಂದು ನನ್ನ ರೂಮಿಗೆ ನುಗ್ಗಿದ್ದಾರೆ. ನನ್ನ ಕೈ ಕಾಲು ಹಿಡಿದು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಅವರ ಜೊತೆ ದೈಹಿಕ ಸಂಪರ್ಕ ಬೆಳೆಸಲು ನಿರಾಕರಿಸಿದ್ದಾಗ ನನ್ನ ಮಾವ ಹಾಗೂ ನನ್ನ ಮೈದುನ ಸೇರಿ ನನ್ನ ಬೆರಳನ್ನೇ ಕತ್ತರಿಸಿದ್ದಾರೆ. ಅಷ್ಟೇ ಅಲ್ಲದೇ ನನ್ನ ತಲೆ ಕೂದಲನ್ನು ಸಹ ಕತ್ತರಿಸಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.

    ಈ ಕೃತ್ಯಕ್ಕೆ ನನ್ನ ಅತ್ತೆ ಕೂಡ ಸಾಥ್ ನೀಡಿದ್ದು, ಅವರು ನನಗೆ ಮಂಗಳಮುಖಿ ಎಂದು ಕರೆಯುತ್ತಾರೆ. ಈಗ ನನ್ನ ತಾಯಿಯನ್ನು ಕೊಲೆ ಮಾಡುವುದ್ದಾಗಿ ಬೆದರಿಕೆ ಹಾಕಿದ್ದಾರೆ. ಈ ವಿಷಯದ ಬಗ್ಗೆ ನನ್ನ ಪತಿಗೆ ಹೇಳಿದ್ದರೆ, ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ಹೆದರಿಸುತ್ತಾರೆ ಎಂದು ದೂರಿನಲ್ಲಿ ಸಂತ್ರಸ್ತೆ ಉಲ್ಲೇಖಿಸಿದ್ದಾರೆ.

    ಸದ್ಯ ಮಹಿಳೆ ಪತಿ ಮನೆಯವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ವಿಚಾರಣೆ ನಡೆಯುತ್ತಿದೆ.

  • ಪೋಲಿಸರ ವಿರುದ್ಧ ಸೇಡು- ಕಾಂಟ್ರೋಲ್ ರೂಮ್ ಗೆ 1,264 ಬಾರಿ ಕರೆ ಮಾಡಿದ ವ್ಯಕ್ತಿ

    ಪೋಲಿಸರ ವಿರುದ್ಧ ಸೇಡು- ಕಾಂಟ್ರೋಲ್ ರೂಮ್ ಗೆ 1,264 ಬಾರಿ ಕರೆ ಮಾಡಿದ ವ್ಯಕ್ತಿ

    ಅಹಮದಾಬಾದ್: ವ್ಯಕ್ತಿಯೊಬ್ಬ ಪೊಲೀಸ್ ಕಾಂಟ್ರೋಲ್ ರೂಮ್ ಗೆ ಸುಮಾರು 1,264 ಬಾರಿ ಕರೆ ಮಾಡಿ ನಿಂದಿಸಿರುವ ಘಟನೆ ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದೆ.

    ಈಶ್ವರ್ ಭೋಯ್(40) ಎಂಬಾತ ಈ ಕೃತ್ಯವೆಸಗಿದ್ದಾನೆ. ಭೂವಿವಾದವೊಂದಕ್ಕೆ ಸಂಬಂಧಿಸಿದಂತೆ ಪೊಲೀಸರು ಈತನನ್ನು ಹೊಡೆದಿದ್ದರಿಂದ ಅವರ ಮೇಲೆ ಸೇಡು ಹೊಂದಿದ್ದ. ಮೂರು ವರ್ಷಗಳ ಹಿಂದೆ ಸೆಕ್ಯೂರಿಟಿ ಗಾರ್ಡ್ ಕೆಲಸ ನಿರ್ವಹಿಸುತ್ತಿದ್ದ ಈಶ್ವರ್, 108 ತುರ್ತು ಸೇವೆಯ ನಂಬರ್‍ಗೆ ಕರೆ ಮಾಡಿ ನಿಂದಿಸುವ ಮೂಲಕ ವಿಕೃತ ಆನಂದ ಪಡೆಯುತ್ತಿದ್ದ. ಆಗ ಈಶ್ವರ್ ನನ್ನು ಪೊಲೀಸರು ಬಂಧಿಸಿದ್ದರು.

    ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆಯಾದ ಆರೋಪಿ ಈಶ್ವರ್, ಬಳಿಕ ಪೊಲೀಸ್ ಕಾಂಟ್ರೋಲ್ ರೂಮ್ ಗೆ ಫೋನ್ ಮಾಡಿ ನಿಂದಿಸಲು ಆರಂಭಿಸಿದ್ದ. ಈ ವೇಳೆ ಕಾಂಟ್ರೋಲ್ ರೂಮ್ ನ ಮಹಿಳಾ ಸಿಬ್ಬಂದಿ ಕರೆ ಸ್ವೀಕರಿಸಿದರೆ ಆರೋಪಿ ಮತ್ತಷ್ಟು ಜೋರಾಗಿ ನಿಂದಿಲು ಆರಂಭಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಮಹಿಳಾ ಪೊಲೀಸ್ ಸಿಬ್ಬಂದಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

    ಸೈಬರ್ ಕ್ರೈಂ ವಿಭಾಗದ ಪೊಲೀಸರ ಸಹಾಯ ಪಡೆದ ಅಧಿಕಾರಿಗಳು ಮೊಬೈಲ್ ನ ಐಎಂಇಐ ನಂಬರ್ ನಿಂದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಆರೋಪಿ ಈಶ್ವರ್ ಗೆ ಈಗಾಗಲೇ ಮದುವೆಯಾಗಿದ್ದು ಹೆಂಡತಿ ಬಿಟ್ಟು ಹೋಗಿದ್ದಾಳೆ. ಈತ ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.