Tag: Ahmedabad

  • ನಿತ್ಯನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ ಪೊಲೀಸರು

    ಗಾಂಧಿನಗರ: ಯುವತಿಯರಿಗೆ ಚಿತ್ರ ಹಿಂಸೆ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನಿಗಾಗಿ ಗುಜರಾತ್ ಪೊಲೀಸರು ಶೋಧ ಕಾರ್ಯ ಪ್ರಾರಂಭಿಸಿದ್ದಾರೆ.

    ಬೆಂಗಳೂರಿನ ದಂಪತಿ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ನಿತ್ಯಾನಂದನಿಗಾಗಿ ಶೋಧ ಕಾರ್ಯ ಪ್ರಾರಂಭಿಸಿದ್ದು, ನಿತ್ಯಾನಂದನ ಆಶ್ರಮದ ಅಹಮದಾಬಾದ್ ಶಾಖೆಯಲ್ಲಿದ್ದ ಹೆಣ್ಣುಮಕ್ಕಳನ್ನು ಹಿಂಸಿಸುತ್ತಿದ್ದ ಎಂದು ದಂಪತಿ ದೂರು ನೀಡಿದ್ದಾರೆ. ಇದನ್ನೂ ಓದಿ: ಸ್ವ ಇಚ್ಛೆಯಿಂದ ಸನ್ಯಾಸತ್ವ ಸ್ವೀಕರಿಸಿದ್ದೇನೆ, ಇದು ನನ್ನ ಬದುಕು – ತಂದೆಗೆ ಮಗಳ ಖಡಕ್ ಉತ್ತರ

    ಅಹ್ಮದಾಬಾದ್ ಜಿಲ್ಲೆಯ ಹಿರಾಪುರ ಗ್ರಾಮದಲ್ಲಿರುವ ಶಾಲೆಯೊಂದರ ಆವರಣದಲ್ಲಿ ನಿತ್ಯಾನಂದನ ಆಶ್ರಮವಿದೆ. ಅಲ್ಲದೆ ಬೆಂಗಳೂರಿನ ಬಿಡದಿಯಲ್ಲಿ ಧ್ಯಾನಪೀಠಂ ಎಂಬ ಹೆಸರಿನ ವಿಶಾಲವಾದ ಆಶ್ರಮವನ್ನು ಸಹ ನಡೆಸುತ್ತಿದ್ದಾರೆ. 5 ವರ್ಷಗಳ ಅವಧಿಯಲ್ಲಿ ಶಿಷ್ಯೆ ಮೇಲೆಯೇ ಅತ್ಯಾಚಾರ ಎಸಗಿರುವ ಎಂಬ ಪ್ರಕರಣದಲ್ಲಿ ಆರೋಪಿಯಾಗಿರುವ ನಿತ್ಯಾನಂದ ಒಂದು ವರ್ಷದಿಂದಲೂ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿಲ್ಲ.

    ಸೆಪ್ಟೆಂಬರ್ 2018ರಲ್ಲಿ ನಿತ್ಯಾನಂದನ ಪಾಸ್‍ಪೋರ್ಟ್ ಅವಧಿ ಮುಗಿದ ಕಾರಣ ಅವರು ಅಕ್ರಮವಾಗಿ ದೇಶವನ್ನು ತೊರೆದಿರಬಹುದು ಎಂದು ಗುಜರಾತ್ ಪೊಲೀಸರು ಶಂಕಿಸಿದ್ದಾರೆ. ಸ್ವಯಂ ಘೋಷಿತ ದೇವ ಮಾನವನ ವಿರುದ್ಧ ಕ್ರಿಮಿನಲ್ ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಪಾಸ್‍ಪೋರ್ಟ್ ನವೀಕರಿಸುವ ಕುರಿತ ಅರ್ಜಿಯನ್ನು ತಿರಸ್ಕರಿಸಲಾಗಿದೆ. ಇದನ್ನೂ ಓದಿ: ಪಾಸ್‍ಪೋರ್ಟ್ ನವೀಕರಿಸದಿದ್ದರೂ ನಿತ್ಯಾನಂದ ಈಕ್ವೇಡಾರ್‌ಗೆ ಪರಾರಿ?

    ಪ್ರಕರಣದ ವಿಚಾರಣೆಗಾಗಿ ಡಿಸೆಂಬರ್ 9ರಂದು ನಿತ್ಯಾನಂದ ನ್ಯಾಯಾಲಯಕ್ಕೆ ಹಾಜರಾಗಬೇಕಿದೆ. ಕೋರ್ಟ್‍ನ ವಿಚಾರಣೆಯಿಂದ ಈಗಾಗಲೇ ನಿತ್ಯಾನಂದ ಹಲವು ಬಾರಿ ತಪ್ಪಿಸಿಕೊಂಡಿದ್ದು, ಇದೀಗ ಮತ್ತೆ ವಿವಾದ ಎದ್ದಿರುವುದರಿಂದಾಗಿ ಎಂದಿನಂತೆ ಈ ಬಾರಿಯೂ ಸಹ ವಿಚಾರಣೆಗೆ ಹಾಜರಾಗುವುದಿಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ.

    ಈತ ತನ್ನ ಅನುಯಾಯಿಗಳಿಂದ ದೇಣಿಗೆ ಸಂಗ್ರಹಿಸಲು ಹಾಗೂ ಗುಜರಾತ್‍ನ ಅಹಮದಾಬಾದ್‍ನಲ್ಲಿ ಆಶ್ರಮ ನಡೆಸಲು ಮಕ್ಕಳನ್ನು ಅಪಹರಿಸಿ ಬಂಧಿಸಿದ್ದಾನೆ ಎಂಬ ಆರೋಪದ ಮೇಲೆ ನವೆಂಬರ್ 19ರಂದು ನಿತ್ಯಾನಂದನ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಪಹರಣ, ಹಲ್ಲೆ, ಅಕ್ರಮ ಬಂಧನ ಆರೋಪದ ಮೇಲೆ ಈತನ ಇಬ್ಬರು ಶಿಷ್ಯೆಯರಾದ ಪ್ರಾಣಪ್ರಿಯ, ಪ್ರಿಯತತ್ವ ಅವರನ್ನು ಒಂದೇ ದಿನ ಬಂಧಿಸಲಾಗಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದ್ದು, ನಿತ್ಯಾನಂದನ ಆಶ್ರಮಕ್ಕೆ ಶಾಲೆಯ ಜಾಗವನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬುದರ ಕುರಿತು ಸಹ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

  • ತಾಯಿ ಮನೆ ಸೇರಿದ ಪತ್ನಿ- ನಡುರಸ್ತೆಯಲ್ಲೇ ಅತ್ತೆಯನ್ನು ಕೊಂದ ಅಳಿಯ

    ತಾಯಿ ಮನೆ ಸೇರಿದ ಪತ್ನಿ- ನಡುರಸ್ತೆಯಲ್ಲೇ ಅತ್ತೆಯನ್ನು ಕೊಂದ ಅಳಿಯ

    – ಪತ್ನಿಗೂ ಚಾಕು ಇರಿತ
    – ತನ್ನ ವಿರುದ್ಧ ದೂರು ನೀಡಿದ್ದಕ್ಕೆ ಕೊಲೆ

    ಅಹಮದಾಬಾದ್: ಪತಿ ಕಿರುಕುಳ ನೀಡುತ್ತಾನೆ ಎಂದು ಪತ್ನಿ ತನ್ನ ತಾಯಿ ಮನೆ ಸೇರಿದ್ದಳು ಹಾಗೂ ಪತಿ ವಿರುದ್ಧ ದೂರು ಕೂಡ ನೀಡಿದ್ದಳು. ಇದರಿಂದ ರೊಚ್ಚಿಗೆದ್ದ ಪತಿರಾಯ ನಡುರಸ್ತೆಯಲ್ಲಿಯೇ ಪತ್ನಿ ಮತ್ತು ಅತ್ತೆಗೆ ಚಾಕು ಇರಿದಿದ್ದು, ಸ್ಥಳದಲ್ಲೇ ಅತ್ತೆ ಸಾವನ್ನಪ್ಪಿರುವ ಘಟನೆ ಗುಜರಾತ್‍ನಲ್ಲಿ ನಡೆದಿದೆ.

    ಕಲುಪುರ್ ನಿವಾಸಿ ಶೈಲೇಶ್ ಠಾಕೋರ್(35) ಆರೋಪಿ. ಶೈಲೇಶ್ ಪತ್ನಿ ಹೇತಲ್ ಠಾಕೋರ್(27) ಅವರ ತಾಯಿ ಶಾಂತ ಠಾಕೋರ್(47) ಕೊಲೆಯಾದ ದುರ್ದೈವಿ. ಶೈಲೇಶ್ ಪ್ರತಿನಿತ್ಯ ನೀಡುತ್ತಿದ್ದ ಕಿರುಕುಳ, ಹಿಂಸೆ ತಾಳಲಾರದೆ ಹೇತಲ್ ಮನೆಬಿಟ್ಟು ತವರನ್ನು ಸೇರಿದ್ದಳು. ಈ ವೇಳೆ ಮಗಳ ಕಷ್ಟ ಕಂಡು ಕೋಪಗೊಂಡ ಶಾಂತ ಅವರು, ಎನ್‍ಜಿಒ ಒಂದರ ಸಹಾಯದಿಂದ ಶೈಲೇಶ್ ವಿರುದ್ಧ ಪೊಲೀಸರಿಗೆ ಅಳಿಯನ ದೂರು ನೀಡಿದ್ದರು. ಆದ್ದರಿಂದ ತಾಯಿ, ಮಗಳ ಮೇಲೆ ಶೈಲೇಶ್ ದ್ವೇಷವಿಟ್ಟುಕೊಂಡಿದ್ದನು. ಇದನ್ನೂ ಓದಿ: ಮದ್ವೆಗೆ ಒಪ್ಪಿಲ್ಲವೆಂದು ಯುವತಿಯ ಕತ್ತು ಸೀಳಿ ಪೊಲೀಸರ ಅತಿಥಿಯಾದ

    ಈ ಸಂಬಂಧ ಶನಿವಾರ ಕೋರ್ಟಿನಲ್ಲಿ ವಿಚಾರಣೆ ಇತ್ತು. ಹೀಗಾಗಿ ಶಾಂತ ಹಾಗೂ ಹೇತಲ್ ಕೋರ್ಟಿಗೆ ಹೋಗುವ ಮೊದಲು ಎನ್‍ಜಿಒಗೆ ತೆರೆಳುತ್ತಿದ್ದರು. ಈ ಬಗ್ಗೆ ತಿಳಿದ ಶೈಲೇಶ್ ಅವರು ಹೋಗುವ ರಸ್ತೆಯಲ್ಲಿ ಅಡಗಿ ಕುಳಿತಿದ್ದನು. ಶಾಂತ ಹಾಗೂ ಹೇತಲ್ ರಸ್ತೆಯಲ್ಲಿ ಬರುತ್ತಿದ್ದಾಗ ಶೈಲೇಶ್ ಏಕಾಏಕಿ ಅವರಿಬ್ಬರ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ. ಜೊತೆಗೆ ಇಬ್ಬರಿಗೂ ಚಾಕು ಇರಿದು ಅಲ್ಲಿಂದ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ:22 ವರ್ಷದ ಮಗಳಿಗೆ ವಿದ್ಯುತ್ ಶಾಕ್ ನೀಡಿ, ಕತ್ತು ಸೀಳಿದ ಪಾಪಿ ತಂದೆ

    ಈ ವೇಳೆ ಗಂಭೀರ ಗಾಯಗೊಂಡಿದ್ದ ಶಾಂತ ಸ್ಥಳದಲ್ಲೇ ಸಾವನ್ನಪ್ಪಿದ್ದು, ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಹೇತಲ್ ಅವರನ್ನು ಕಂಡು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ. ಸದ್ಯ ಹೇತಲ್ ಸ್ಥಿತಿ ಗಂಭೀರವಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಇದನ್ನೂ ಓದಿ:ಮದ್ವೆಯಾದ ಒಂದೇ ವಾರಕ್ಕೆ ಪತಿಯನ್ನು ಕೊಲ್ಲಲು ಯತ್ನಿಸಿದ ಪತ್ನಿ

    ಸದ್ಯ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಈ ಸಂಬಂಧ ವಿಚಾರಣೆ ಮುಂದುವರಿಸಿದ್ದಾರೆ.

  • ಕುಡಿದು ಸಿಕ್ಕಿಬಿದ್ರೆ ಕೊಡಿಸ್ಬೇಕು ಊರಿಗೆಲ್ಲಾ ಮಟನ್ ಪಾರ್ಟಿ

    ಕುಡಿದು ಸಿಕ್ಕಿಬಿದ್ರೆ ಕೊಡಿಸ್ಬೇಕು ಊರಿಗೆಲ್ಲಾ ಮಟನ್ ಪಾರ್ಟಿ

    – ಇಲ್ಲಿ ಕುಡುಕರಿಗೆ ಬೀಳುತ್ತೆ 2ರಿಂದ 5 ಸಾವಿರ ದಂಡ

    ಅಹಮದಾಬಾದ್: ಗುಜರಾತಿನ ಹಳ್ಳಿಯೊಂದರಲ್ಲಿ ಕುಡುಕರ ಕಾಟ ನಿಯಂತ್ರಿಸಲು ಗ್ರಾಮಸ್ಥರೇ ಹೊಸ ನಿಯಮ ಮಾಡಿಕೊಂಡಿದ್ದಾರೆ. ಈ ಗ್ರಾಮದಲ್ಲಿ ಯಾರಾದರೂ ಮದ್ಯ ಸೇವನೆ ಮಾಡಿ ಸಿಕ್ಕಿಬಿದ್ದರೆ ಇಡೀ ಊರಿಗೆ ಮಟನ್ ಪಾರ್ಟಿ ಕೊಡಿಸಬೇಕು.

    ಬನಸ್ಕಂತ ಜಿಲ್ಲೆಯ ಅಮೀರ್‍ಗಢ ತಾಲೂಕಿನ ಬುಡಕಟ್ಟು ಗ್ರಾಮ ಖತಿಸಿತರಾದಲ್ಲಿ ಹೀಗೊಂದು ವಿಚಿತ್ರ ನಿಯಮವಿದೆ. 2013-14ರಿಂದ ಈ ನಿಯಮವನ್ನು ಗ್ರಾಮದಲ್ಲಿ ಪಾಲಿಸಿಕೊಂಡ ಬರಲಾಗುತ್ತಿದೆ. ಈ ಗ್ರಾಮದಲ್ಲಿ ಕುಡುಕರ ಹಾವಳಿ ಹೆಚ್ಚಾಗಿತ್ತು. ಕಂಠಪೂರ್ತಿ ಕುಡಿದು ಮನೆಗೆ ಬಂದು ಪತ್ನಿ, ಮಕ್ಕಳಿಗೆ ಹೊಡೆದು ಹಿಂಸೆ ಕೊಡುವುದು ಈ ಗ್ರಾಮದ ಅನೇಕ ಪುರುಷರ ಚಾಳಿಯಾಗಿಬಿಟ್ಟಿತ್ತು. ಹೀಗಾಗಿ ಪ್ರತಿದಿನ ಗ್ರಾಮದಲ್ಲಿ ಜಗಳ, ಗಲಾಟೆ ನೋಡಿ ಬೇಸತ್ತಿದ್ದ ಊರ ಹಿರಿಯರು ಇದಕ್ಕೆ ಮುಕ್ತಿ ಕೊಡಲು ನಿರ್ಧರಿಸಿ ಹೊಸ ಉಪಾಯ ಮಾಡಿ ಯಶಸ್ಸು ಕಂಡಿದ್ದಾರೆ. ಸದ್ಯ ಈ ಗ್ರಾಮ ಕುಡುಕರಿಂದ ಮುಕ್ತವಾಗಿದೆ. ಇದನ್ನೂ ಓದಿ:ಪಂಚಾಯ್ತಿ ಕಟ್ಟೆ ನಡೆಸಿ ಗ್ರಾಮದಲ್ಲಿ ಮದ್ಯ ಬ್ಯಾನ್ ಮಾಡಿದ ಮಹಿಳೆಯರು

    ಕುಡಿದ ಮತ್ತಿನಲ್ಲಿ ಇತರರಿಗೆ ಹಿಂಸೆ ಕೊಡುವುದು, ಹತ್ಯೆ ಪ್ರಕರಣಗಳು ಗ್ರಾಮದಲ್ಲಿ ಹೆಚ್ಚಾಗುತಿತ್ತು. ಈ ಬಗ್ಗೆ ಅರಿತ ಖತಿಸಿತರಾದ ಹಿರಿಯರು 2013-14ರಲ್ಲಿ ಕುಡಿತ ಮುಕ್ತ ಗ್ರಾಮವನ್ನು ಮಾಡಲು ಪಣತೊಟ್ಟರು. ಗ್ರಾಮದಲ್ಲಿ ಯಾರಾದರೂ ಕುಡಿದು ಸಿಕ್ಕಿಬಿದ್ದರೆ ಅವರಿಗೆ 2 ಸಾವಿರ ರೂ. ದಂಡ, ಹಾಗೆಯೇ ಕುಡಿದು ಗಲಾಟೆ ಮಾಡಿದರೆ 5 ಸಾವಿರ ರೂ. ದಂಡ ಹಾಗೂ ಇವುಗಳ ಜೊತೆ ಮದ್ಯವ್ಯಸನಿಗಳು ಇಡೀ ಊರಿನ ಜನರಿಗೆಲ್ಲಾ ಬಾತಿಯೊಂದಿಗೆ(ಸ್ಥಳೀಯ ಆಹಾರ) ‘ಬೊಕ್ಡು’ ಅಥವಾ ಮಟನ್ ಊಟ ಹಾಕಿಸಬೇಕು ಎಂದು ನಿಯಮ ರೂಪಿಸಿದರು. ಗ್ರಾಮದಲ್ಲಿ ಏನಿಲ್ಲವೆಂದರೂ 750-800 ಮಂದಿ ವಾಸವಿದ್ದಾರೆ. ಹೀಗಾಗಿ ಇವರೆಲ್ಲರಿಗೂ ಬಾಡೂಟ ಹಾಕಿಸಲು ಸುಮಾರು 20 ಸಾವಿರ ರೂ. ಖರ್ಚಾಗುತ್ತದೆ ಎಂದು ಗ್ರಾಮದ ಸರಪಂಚ್ ಖಿಮ್ಜಿ ಡುಂಗೈಸಾ ತಿಳಿಸಿದ್ದಾರೆ.

    ಹಿರಿಯರ ಆದೇಶವನ್ನು ಈಗಲೂ ಗ್ರಾಮದಲ್ಲಿ ಪಾಲಿಸಲಾಗುತ್ತಿದೆ. ಈ ದಂಡದ ನಿಯಮ ಜಾರಿಗೆ ಬಂದ ಮೇಲೆ 3ರಿಂದ 4 ಮಂದಿ ಮಾತ್ರ ಕುಡಿದು ಸಿಕ್ಕಿ ಬಿದ್ದು, 20ರಿಂದ 30 ಸಾವಿರ ರೂ. ಖರ್ಚು ಮಾಡಿ ಊರವರಿಗೆ ಮಾಂಸದೂಟ ಹಾಕಿಸಿದ್ದಾರೆ. ಇದನ್ನು ಕಂಡು ಬೆಚ್ಚಿಬಿದ್ದ ಇತರೆ ಕುಡುಕರು ಮದ್ಯ ಸೇವಿಸುವುದನ್ನೇ ಬಿಟ್ಟುಬಿಟ್ಟಿದ್ದಾರೆ. ಹೀಗಾಗಿ ಇಲ್ಲಿ ಈಗ ಕುಡುಕರೇ ಇಲ್ಲ.

    2018ರಲ್ಲಿ ಓರ್ವ ವ್ಯಕ್ತಿ ಮಾತ್ರ ಗ್ರಾಮದಲ್ಲಿ ಕುಡಿದು ಸಿಕ್ಕಿಬಿದ್ದಿದ್ದನು, ಆತ ಕೂಡ ಬೇರೆ ಊರಿನವನಾಗಿದ್ದನು. 2019ರಲ್ಲಿ ಇಲ್ಲಿಯವರೆಗೆ ಯಾರೂ ಕೂಡ ಕುಡಿದು ಸಿಕ್ಕಿ ಹಾಕಿಕೊಂಡಿಲ್ಲ ಎಂದು ಗ್ರಾಮಸ್ಥರು ಖುಷಿಯಿಂದ ಹೇಳಿಕೊಂಡಿದ್ದಾರೆ.

  • ಕಿಸ್ ಮಾಡುವಾಗ ಬಾಯಲ್ಲಿ ಸಿಕ್ಕಿಕೊಂಡ ಪತ್ನಿಯ ನಾಲಿಗೆಯನ್ನೇ ಕತ್ತರಿಸಿದ ಪತಿ

    ಕಿಸ್ ಮಾಡುವಾಗ ಬಾಯಲ್ಲಿ ಸಿಕ್ಕಿಕೊಂಡ ಪತ್ನಿಯ ನಾಲಿಗೆಯನ್ನೇ ಕತ್ತರಿಸಿದ ಪತಿ

    ಅಹಮದಾಬಾದ್: ಕಿಸ್ ಮಾಡುವಾಗ ಬಾಯಲ್ಲಿ ಸಿಲುಕಿಕೊಂಡ ಪತ್ನಿಯ ನಾಲಿಗೆಯನ್ನೇ ಪತಿ ಕತ್ತರಿಸಿ ವಿಕೃತಿ ಮೆರೆದ ಘಟನೆ ಗುಜರಾತ್‍ನ ಜಾಹುಪ್ರ ಪ್ರದೇಶದಲ್ಲಿ ನಡೆದಿದೆ.

    ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಆರೋಪಿಯನ್ನು ಅಯ್ಯುಬ್ ಮನ್ಸೂರ್(46) ಎಂದು ಗುರುತಿಸಲಾಗಿದೆ. ಈತ ತನ್ನ ಪತ್ನಿಯ ನಾಲಿಗೆಯನ್ನು ಕತ್ತರಿಸಿ ಪರಾರಿಯಾಗಿದ್ದನು. ಆದರೆ ಈತನನ್ನು ವೆಜಲ್ಪುರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿಚಾರಣೆ ವೇಳೆ ಪತ್ನಿ ನಾಲಿಗೆ ಕತ್ತರಿಸಲು ಕಾರಣವೇನು ಎಂದು ಅಯ್ಯುಬ್ ಹೇಳಿದ್ದು, ಅದನ್ನು ಕೇಳಿ ಪೊಲೀಸರೇ ದಂಗಾಗಿದ್ದಾರೆ. ಇದನ್ನೂ ಓದಿ:ಲೈಂಗಿಕ ಕ್ರಿಯೆಗೆ ಒಪ್ಪದ್ದಕ್ಕೆ ಬೆಂಕಿ ಹಚ್ಚಿ ವಿವಾಹಿತೆಯ ಕೊಲೆ

    ಕಿಸ್ ಮಾಡುವಾಗ ನಮ್ಮಿಬ್ಬರ ನಾಲಿಗೆ ಸಿಕ್ಕಿ ಹಾಕಿಕೊಂಡಿತ್ತು. ಆಗ ಅದನ್ನು ಬಿಡಿಸಲು ಬೇರೆ ದಾರಿ ತೋಚದೆ ಪತ್ನಿಯ ನಾಲಿಗೆ ಕತ್ತರಿಸಿದೆ. ಆಗ ಆಕೆಯ ಬಾಯಿಂದ ಸುರಿಯುತ್ತಿದ್ದ ರಕ್ತ ನೋಡಿ ಭಯವಾಯ್ತು, ಅದಕ್ಕೆ ಆಕೆಯನ್ನು ರೂಮಿನಲ್ಲಿ ಕೂಡಿ ಹಾಕಿ ನಾನು ಮನೆ ಬಿಟ್ಟು ಓಡಿಹೋದೆ ಎಂದು ಅಯ್ಯುಬ್ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ:ಪೋರ್ನ್ ಸೈಟಿನಲ್ಲಿ ಪತ್ನಿಯ ಸೆಕ್ಸ್ ವಿಡಿಯೋ ಕಂಡು ಪತಿ ಶಾಕ್

    ಘಟನೆ ಬಳಿಕ ಸಂತ್ರಸ್ತ ಮಹಿಳೆಗೆ ನೆರೆಹೊರೆ ಅವರು ಸಹಾಯಕ್ಕೆ ಬಂದಿದ್ದು, ತಕ್ಷಣ ಆಕೆಯನ್ನು ಸರ್ದಾರ್ ವಲ್ಲಬಭಾಯಿ ಪಟೇಲ್ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ವೈದ್ಯರು ಹರಸಾಹಸ ಪಟ್ಟು ಮಹಿಳೆಯ ಕತ್ತರಿಸಲ್ಪಟ್ಟ ನಾಲಿಗೆ ಭಾಗವನ್ನು ಶಸ್ತ್ರಚಿಕಿತ್ಸೆ ಮಾಡಿ ಮರುಜೋಡನೆ ಮಾಡಿದ್ದಾರೆ. ಸದ್ಯ ಮಹಿಳೆಗೆ ಆಹಾರ ಸೇವನೆ ಮಾಡಲು ಕಷ್ಟವಾಗುತ್ತಿದ್ದು, ವೈದ್ಯರು ಕೇವಲ ದ್ರವ ಆಹಾರವನ್ನು ಮಾತ್ರ ಸೇವಿಸಲು ಸೂಚಿಸಿದ್ದಾರೆ.

    ಸಂತ್ರಸ್ತ ಮಹಿಳೆಯು ಅಯ್ಯುಬ್‍ನ ಮೂರನೇ ಪತ್ನಿಯಾಗಿದ್ದು, 2018ರಲ್ಲಿ ಆಕೆಯನ್ನು ಅಯ್ಯುಬ್ ವಿವಾಹವಾಗಿದ್ದನು. ಮದುವೆ ಆದಾಗಿನಿಂದಲೂ ಪತ್ನಿಗೆ ಆರೋಪಿ ಹೊಡಿದು, ಬಡಿದು ಕಿರುಕುಳ ನೀಡುತ್ತಿದ್ದ ಎಂದು ಸ್ವತಃ ಪತ್ನಿಯೇ ಆರೋಪಿಸಿದ್ದಾಳೆ.

    ಅಲ್ಲದೆ ಆರೋಪಿ ತನ್ನ ಮೊದಲ ಪತ್ನಿಯನ್ನು ಬೆಂಕಿ ಹಚ್ಚಿ ಸುಟ್ಟು ಕೊಲೆ ಮಾಡಿರುವ ಆರೋಪ ಎದುರಿಸುತ್ತಿದ್ದು, ಆತನ ಮೇಲೆ ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ. ಹಾಗೆಯೇ ಮೊದಲ ಪತ್ನಿ ಸಾವಿನ ಬಳಿಕ ಈ ಭೂಪ ಮತ್ತೊಂದು ಮದುವೆ ಆಗಿದ್ದನು. ಆದರೆ ಅಯ್ಯುಬ್‍ನ ಕಾಟ ತಾಳಲಾರದೆ ಆಕೆ ಅವನನ್ನು ಬಿಟ್ಟು ಹೋಗಿದ್ದಳು. ಆ ಬಳಿಕ ಆರೋಪಿ ಸಂತ್ರಸ್ತೆಯನ್ನು ವರಿಸಿದ್ದನು. ಸದ್ಯ ಆರೋಪಿಯನ್ನು ಸಾಬರ್ಮತಿ ಜೈಲಿನಲ್ಲಿ ಇರಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

  • ಮಹಾತ್ಮ ಗಾಂಧೀಜಿ ಸ್ಮರಣಾರ್ಥ 150 ರೂ. ಹೊಸ ನಾಣ್ಯ ಬಿಡುಗಡೆ

    ಮಹಾತ್ಮ ಗಾಂಧೀಜಿ ಸ್ಮರಣಾರ್ಥ 150 ರೂ. ಹೊಸ ನಾಣ್ಯ ಬಿಡುಗಡೆ

    ಅಹಮದಾಬಾದ್: ರಾಷ್ಟ್ರಪಿತ ಮಹಾತ್ಮ ಗಾಂಧೀಯವರ 150ನೇ ಜಯಂತೋತ್ಸವದ ಪ್ರಯುಕ್ತ ಪಿತಾಮಹನ ಸ್ಮರಣಾರ್ಥವಾಗಿ ಕೇಂದ್ರ ಸರ್ಕಾರ 150 ರೂಪಾಯಿ ಹೊಸ ನಾಣ್ಯವನ್ನು ಬುಧವಾರ ಬಿಡುಗಡೆ ಮಾಡಿದೆ.

    ಅಹಮದಾಬಾದ್‍ನಲ್ಲಿರುವ ಸಾಬರ್‍ಮತಿ ಆಶ್ರಮದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು 150 ರೂಪಾಯಿಯ ಹೊಸ ನಾಣ್ಯವನ್ನು ಬಿಡುಗಡೆ ಮಾಡಿದರು. ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ, ಇಡೀ ಪ್ರಪಂಚವೇ ಬಾಪು ಅವರ ಜಯಂತೋತ್ಸವವನ್ನು ಆಚರಿಸುತ್ತಿದೆ. ಕೆಲವು ದಿನಗಳ ಹಿಂದೆ ಗಾಂಧೀಜಿಯವರ 150ನೇ ಜಯಂತಿಯ ಸ್ಮರಣಾರ್ಥವಾಗಿ ಯುಎನ್ ಪೋಸ್ಟಲ್ ಸ್ಟಾಂಪ್ಸ್ ಗಳನ್ನು ಬಿಡುಗಡೆ ಮಾಡಿ ನಮನ ಸಲ್ಲಿಸಿತ್ತು. ಈಗ ನಾವು ಹೊಸ ನಾಣ್ಯ ಬಿಡುಗಡೆ ಮಾಡಿ ಗಾಂಧೀಜಿಗೆ ನಮನ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು.

    ಕೇವಲ ಶೌಚಾಲಯಗಳು ನಿರ್ಮಾಣವಾದರೆ ಸಾಲದು, ಅದರ ನಿಯಮಿತ ಬಳಕೆ ಅಗತ್ಯ ಎಂದು ಪ್ರತಿಪಾದಿಸುವ ಮೂಲಕ ಭಾರತವನ್ನು ಬಯಲು ಶೌಚ ಮುಕ್ತ ಎಂದು ಮೋದಿ ಘೋಷಿಸಿದರು. ಗಾಂಧೀಜಿ ಅವರ 150ನೇ ಜಯಂತೋತ್ಸವದ ಸಮಯದಲ್ಲಿ ದೇಶ ಈ ಸಾಧನೆ ಗೈದಿರೋದು ತೃಪ್ತಿ ನೀಡಿದೆ. ನಾವು ಗಾಂಧೀಜಿ ಅವರ ಸ್ವಚ್ಛ ಭಾರತದ ಕನಸನ್ನು ಸಾಕಾರಗೊಳಿಸಲು ಸಾಕ್ಷಿಯಾಗಿದ್ದೇವೆ. ಭಾರತವನ್ನು ಬಯಲು ಶೌಚ ಮುಕ್ತಗೊಳಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ತಿಳಿಸಿದರು.

    ಗ್ರಾಮೀಣ ಭಾರತ ಹಾಗೂ ಅದರ ಗ್ರಾಮಗಳು ತಮ್ಮ ಪ್ರದೇಶಗಳನ್ನು ಬಯಲು ಶೌಚ ಮುಕ್ತ ಎಂದು ಘೋಷಿಸಿಕೊಂಡಿವೆ. 2014 ರಲ್ಲಿ ಈ ಗುರಿಯನ್ನು ನಿಗದಿಪಡಿಸಲಾಗಿತ್ತು. ಇದಕ್ಕೆ ಸ್ವಯಂ ಪ್ರೇರಿತವಾಗಿ ನಡೆಯುತ್ತಿರುವ ಸ್ವಚ್ಛ ಭಾರತ ಅಭಿಯಾನ ಶಕ್ತಿ ಹಾಗೂ ಯಶಸ್ಸಿನ ಮೂಲವಾಗಿದೆ. ಕಳೆದ 60 ತಿಂಗಳುಗಳಲ್ಲಿ ಸರ್ಕಾರ 60 ಕೋಟಿ ಮಂದಿಗೆ ಶೌಚಾಲಯದ ವ್ಯವಸ್ಥೆ ಕಲ್ಪಿಸಿಕೊಟ್ಟಿದೆ. ಸುಮಾರು 11 ಕೋಟಿಗೂ ಅಧಿಕ ಶೌಚಾಲಯವನ್ನು ಕಟ್ಟಿಸಿಕೊಟ್ಟಿದೆ. ಇದು ಇಡೀ ವಿಶ್ವವನ್ನೇ ಅಚ್ಚರಿಗೊಳಿಸಿದೆ, ಜಗತ್ತಿನಾದ್ಯಂತ ಭಾರತವನ್ನು ಪ್ರಶಂಸಿಸಲಾಗುತ್ತಿದೆ ಎಂದು ಖುಷಿಯನ್ನು ಹಂಚಿಕೊಂಡರು.

    ಅಷ್ಟೇ ಅಲ್ಲದೇ ನಾವು ದೇಶವನ್ನು 2022ರ ಹೊತ್ತಿಗೆ ಏಕ-ಬಳಿಕೆ ಪ್ಲಾಸ್ಟಿಕ್‍ನಿಂದ ಮುಕ್ತಗೊಳಿಸುವ ಪಣತೊಟ್ಟಿದ್ದೇವೆ. ಸ್ವಚ್ಛ ಭಾರತ ಅಭಿಯಾಕ್ಕೆ ಒತ್ತು ಕೊಟ್ಟಂತೆ ಜನರು ಇದಕ್ಕೂ ಬೆಂಬಲ ನೀಡಬೇಕು. ನೈರ್ಮಲ್ಯ, ಪರಿಸರ ಮತ್ತು ಪ್ರಾಣಿಗಳ ಸಂರಕ್ಷಣೆ ಈ ಎಲ್ಲಾ ವಿಷಯಗಳು ಗಾಂಧೀಜಿ ಅವರಿಗೆ ಪ್ರಿಯವಾದವು. ಪರಿಸರಕ್ಕೆ ಪ್ಲಾಸ್ಟಿಕ್ ದೊಡ್ಡ ಅಪಾಯವಾಗಿದೆ. ಆದ್ದರಿಂದ, 2022ರ ವೇಳೆಗೆ ದೇಶದಿಂದ ಏಕ-ಬಳಕೆಯ ಪ್ಲಾಸ್ಟಿಕ್ ನಿರ್ಮೂಲನೆ ಮಾಡುವ ಗುರಿಯನ್ನು ನಾವು ಸಾಧಿಸಬೇಕಾಗಿದೆ ಎಂದು ಮೋದಿ ಕರೆ ಕೊಟ್ಟರು.

  • 370ನೇ ವಿಧಿ ರದ್ದು, ಹುತಾತ್ಮ ಸೈನಿಕರಿಗೆ ಸಲ್ಲಿಸಿದ ಗೌರವ: ಅಮಿತ್ ಶಾ

    370ನೇ ವಿಧಿ ರದ್ದು, ಹುತಾತ್ಮ ಸೈನಿಕರಿಗೆ ಸಲ್ಲಿಸಿದ ಗೌರವ: ಅಮಿತ್ ಶಾ

    ಅಹಮದಾಬಾದ್: 370ನೇ ವಿಧಿ ರದ್ದು ಮಾಡಿದ್ದು, ಪ್ರಧಾನಿ ಮೋದಿ ಅವರು ಭಾರತೀಯ ಹುತಾತ್ಮ ಸೈನಿಕರಿಗೆ ಸಲ್ಲಿಸಿದ ಗೌರವ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಹೇಳಿದ್ದಾರೆ.

    ಇಂದು ಅಹಮದಾಬಾದ್‍ನಲ್ಲಿ ನಡೆದ ಕ್ಷಿಪ್ರ ಕ್ರಿಯ ಪಡೆ (ಆರ್‍ಎಎಫ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿ ಮೋದಿ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಮಾಡಿ ರಾಷ್ಟ್ರವನ್ನು ಬಲಪಡಿಸಿದ್ದಾರೆ. ಇದು ಭಾರತೀಯ ಹುತಾತ್ಮ ಸೈನಿಕರಿಗೆ ಮೋದಿ ಸಲ್ಲಿಸಿದ ಗೌರವ ಎಂದು ತಿಳಿಸಿದರು.

    ಅಹಮದಾಬಾದ್‍ನಲ್ಲಿ ನಡೆದ ಆರ್‍ಎಎಫ್‍ನ 27 ರೈಸಿಂಗ್ ಡೇ ಕಾರ್ಯಕ್ರಮ ಉದ್ಘಾಟನೆ ಮಾಡಿದ ಅಮಿತ್ ಶಾ, ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಈ ಹಿಂದೆ ಇದ್ದ ಯಾವ ಸರ್ಕಾರವು ನಮ್ಮ ಸೈನಿಕರಿಗೆ ಈ ರೀತಿಯ ಗೌರವ ನೀಡಲು ಯೋಚಿಸಿರಲಿಲ್ಲ. ಆದರೆ ನಮ್ಮ ಸರ್ಕಾರ 370 ನೇ ವಿಧಿಯನ್ನು ತೆಗೆದು ಹಾಕುವ ಮೂಲಕ ನಮ್ಮ ಹುತಾತ್ಮ ಸೈನಿಕರಿಗೆ ಆ ಗೌರವನ್ನು ನೀಡಿದ್ದೇವೆ ಎಂದರು.

    ನಾವು 370 ನೇ ವಿಧಿ ರದ್ದು ಮಾಡುತ್ತೇವೆ ಎಂದು ಘೋಷಣೆ ಮಾಡಿದ್ದು, ನಾವು ದೇಶಕ್ಕಾಗಿ ಮಾಡಿದ ಮೊದಲ ಕೆಲಸ. ಇದರಿಂದ ಕಾಶ್ಮೀರ ಅಭಿವೃದ್ಧಿಯ ಹಾದಿಯಲ್ಲಿ ಸಾಗಲಿದೆ. ಈಗ ಕಾಶ್ಮೀರದಲ್ಲಿ ಯಾರಾದರೂ ಶಾಂತಿಯನ್ನು ಕದಡುವ ಕೆಲಸ ಮಾಡಿದರೆ ನಮ್ಮ ಭಾರತೀಯ ಸೈನಿಕರು ಅಲ್ಲಿ ಕಾವಲು ಕಾಯುತ್ತಿದ್ದಾರೆ ಎಂದು ನನೆಪಿನಲ್ಲಿ ಇಟ್ಟುಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.

  • ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ದರ 3 ಸಾವಿರ ರೂ.

    ಮುಂಬೈ-ಅಹ್ಮದಾಬಾದ್ ಬುಲೆಟ್ ಟ್ರೈನ್ ದರ 3 ಸಾವಿರ ರೂ.

    ಅಹ್ಮದಾಬಾದ್: ಬಹು ನಿರೀಕ್ಷಿತ ಬುಲೆಟ್ ರೈಲು ಯೋಜನೆಯ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು ಇದೀಗ ಹೈ ಸ್ಪೀಡ್ ರೈಲು ಪ್ರಯಾಣದ ಅಂದಾಜು ದರವನ್ನೂ ಸಹ ಪ್ರಕಟಿಸಲಾಗಿದೆ.

    ಮುಂಬೈ-ಅಹ್ಮದಾಬಾದ್ ನಡುವೆ ಸಂಚರಿಸಲಿರುವ ಹೈ ಸ್ಪೀಡ್ ರೈಲಿನ ದರ ಅಂದಾಜು 3 ಸಾವಿರ ರೂ. ಇರಲಿದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೇಲ್ ಕಾರ್ಪೋರೇಷನ್ ಲಿ.(ಎನ್‍ಎಚ್‍ಎಸ್‍ಆರ್‍ಸಿಎಲ್) ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

    ಮುಂಬೈ-ಅಹ್ಮದಾಬಾದ್ ಹೈ ಸ್ಪೀಡ್ ರೈಲು ಕಾರಿಡಾರ್ ಗೆ ಒಟ್ಟು 1,380 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಈಗಾಗಲೇ 622 ಹೆಕ್ಟೇರ್ (ಶೇ.45ರಷ್ಟು)ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದು, ಉಳಿದ ಭೂಮಿಯನ್ನು ಸಹ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಬುಲೆಟ್ ರೈಲು ಯೋಜನೆಗೆ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಒಟ್ಟು 1,380 ಹೆಕ್ಟೇರ್ ಭೂಮಿಯ ಅಗತ್ಯವಿದ್ದು, ಇದರಲ್ಲಿ ಖಾಸಗಿ, ಸರ್ಕಾರಿ, ಅರಣ್ಯ ಮತ್ತು ರೈಲ್ವೇ ಭೂಮಿ ಒಳಗೊಂಡಿದೆ. ಈವರೆಗೆ 622 ಹೆಕ್ಟೇರ್(ಶೇ.45) ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಡಿಸೆಂಬರ್ 2023ರ ಗಡುವು ಗಮನದಲ್ಲಿರಿಸಿಕೊಂಡು ಯೋಜನೆಯನ್ನು ಕಾರ್ಯಗತಗೊಳಿಸುತ್ತಿದ್ದೇವೆ ಎಂದು ಮಾಹಿತಿ ನೀಡಿದರು.

    ಕಾಮಗಾರಿ ಪೂರ್ಣಗೊಂಡ ನಂತರ ಪ್ರತಿ ದಿನ ಬುಲೆಟ್ ರೈಲು 70 ಟ್ರಿಪ್ ಸಂಚರಿಸಲಿದ್ದು, ಬೆಳಗ್ಗೆ 6ರಿಂದ ಮಧ್ಯರಾತ್ರಿ 12ರ ವರೆಗೆ ಕಾರ್ಯನಿರ್ವಹಿಸಲಿದೆ. ನಾಲ್ಕು ಪ್ರಮುಖ ಪ್ಯಾಕೇಜ್‍ಗಳಿಗೆ ಟೆಂಡರ್ ನೀಡಲಾಗಿದೆ. ಮಾರ್ಚ್ 2020ರೊಳಗೆ ನಿರ್ಮಾಣ ಕಾರ್ಯಗಳು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

    ಈ ಪ್ಯಾಕೇಜ್‍ಗಳಲ್ಲಿ ವಾಪಿ ಮತ್ತು ವಡೋದರಾ ನಡುವೆ 237 ಕಿ.ಮೀ. ಸೇತುವೆ ನಿರ್ಮಾಣ ಹಾಗೂ ವಡೋದರಾ ಮತ್ತು ಅಹ್ಮದಾಬಾದ್ ನಡುವೆ 87ಕಿ.ಮೀ. ಇನ್ನೊಂದು ಪ್ಯಾಕೇಜ್ ಗುರುತಿಸಲಾಗಿದೆ. ಈ ಯೋಜನೆಯನ್ನು ಒಟ್ಟು 27 ಪ್ಯಾಕೇಜ್‍ಗಳಾಗಿ ವಿಂಗಡಿಸಿದ್ದು, ಮಹಾರಾಷ್ಟ್ರದಲ್ಲಿ ಸಮುದ್ರದೊಳಗಿನ ಸುರಂಗ ಮಾರ್ಗ ಸೇರಿದಂತೆ ನಾಲ್ಕು ಪ್ರಮುಖ ಪ್ಯಾಕೇಜ್‍ಗಳಿಗೆ ಈಗಾಗಲೇ ಟೆಂಡರ್ ನೀಡಿದ್ದೇವೆ ಎಂದು ಖರೆ ವಿವರಿಸಿದರು.

    ಪ್ರಸ್ತುತ ಇಡೀ ಯೋಜನೆಯ ಅಂದಾಜು ವೆಚ್ಚ 1.08 ಲಕ್ಷ ಕೋಟಿ ರೂ.ಗಳಾಗಿದೆ. ಡಿಸೆಂಬರ್ 2022ರೊಳಗೆ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಭೂಸ್ವಾಧಿನದ ಕುರಿತು ಕೆಲವು ರೈತರಲ್ಲಿ ಅಸಮಾಧಾನ ಇರುವ ಕುರಿತು ಪ್ರತಿಕ್ರಿಯಿಸಿದ ಅವರು, ಯಾವುದೇ ರೈತರು ವಿರೋಧ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದರು.

    ಗುಜರಾತ್‍ನಲ್ಲಿ ಸ್ವಾಧೀನಪಡಿಸಿಕೊಳ್ಳಬೇಕಿದ್ದ ಸುಮಾರು 5,300 ಖಾಸಗಿ ಪ್ಲಾಟ್‍ಗಳಲ್ಲಿ ಈಗಾಗಲೇ 2,600 ಪ್ಲಾಟ್‍ಗಳನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ಗುಜರಾತ್‍ನ ರೈತರು ಇದಕ್ಕೆ ವಿರೋಧ ವ್ಯಕ್ತಪಡಿಸಿಲ್ಲ. ಅಲ್ಲದೆ, 4,000 ದೊಡ್ಡ ಮರಗಳನ್ನು ಕತ್ತರಿಸುವ ಬದಲು ಸ್ಥಳಾಂತರಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

    ನಗರದ ಪ್ರಸ್ತುತ ರೈಲ್ವೆ ನಿಲ್ದಾಣಗಳಲ್ಲೇ ಅಹ್ಮದಾಬಾದ್‍ನ ಹೈ ಸ್ಪೀಡ್ ರೈಲ್ವೆ ನಿಲ್ದಾಣದ ಕಾಮಗಾರಿಗಳು ಈಗಾಗಲೇ ಪ್ರಾರಂಭವಾಗಿವೆ. ಈಗಿರುವ ರೈಲ್ವೇ ಮಾರ್ಗಗಳ ಮೇಲೆಯೇ ಬುಲೆಟ್ ರೈಲು ನಿಲ್ದಾಣವನ್ನು ನಿರ್ಮಿಸಲಾಗುವುದು. ಅಹ್ಮದಾಬಾದ್-ಮುಂಬೈ ನಡುವೆ ಬುಲೆಟ್ ರೈಲು ಒಟ್ಟು 508 ಕಿ.ಮೀ. ಸಂಚರಿಸಲಿದ್ದು, 12 ನಿಲ್ದಾಣಗಳನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿದರು.

    2022ಕ್ಕೆ ಸ್ವತಂತ್ರ ಸಿಕ್ಕಿ 75 ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಆಗಸ್ಟ್ 15 ರಂದು ಯೋಜನೆ ಲೋಕಾರ್ಪಣೆ ಮಾಡಲು ಭಾರತ ಪ್ರಯತ್ನ ನಡೆಸುತ್ತಿದೆ. ಭಾರತ ಪಡೆದುಕೊಳ್ಳುವ ಸಾಲಕ್ಕೆ ಜಪಾನ್ 50 ವರ್ಷಕ್ಕೆ 0.1% ಬಡ್ಡಿ ವಿಧಿಸಿದೆ. ಮೇಕ್ ಇನ್ ಇಂಡಿಯಾ ಆಶಯದ ಸಫಲತೆಗೆ ಈ ಯೋಜನೆ ಬಹಳ ಮುಖ್ಯವಾಗಿದ್ದು ತ್ವರಿತಗತಿಯಲ್ಲಿ ಯೋಜನೆಯನ್ನು ಮುಗಿಸುವುದರಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದೆ. ಆದರೆ ರೈತರು ಈ ಯೋಜನೆ ವಿರುದ್ಧ ಕೋರ್ಟ್ ಮೊರೆ ಹೋದ ಹಿನ್ನೆಲೆಯಲ್ಲಿ ಕೆಲ ಸಮಯ ಅಡ್ಡಿಯಾಗಿತ್ತು.

    ಮುಂಬೈ ಅಹ್ಮದಾಬಾದ್ ಮಧ್ಯೆ 508.5 ಕಿ.ಮೀ ಅಂತರವಿದ್ದು ಗಂಟೆಗೆ 320 ಕಿ.ಮೀ ವೇಗದಲ್ಲಿ ರೈಲು ಸಂಚರಿಸಲಿದೆ. ಜಪಾನ್ ನೀಡುತ್ತಿರುವ 88 ಸಾವಿರ ಕೋಟಿ ರೂ. ಸಾಲವನ್ನು ಮರುಪಾವತಿ ಮಾಡಬೇಕಾದರೆ ಪ್ರತಿ ದಿನ 100 ಟ್ರಿಪ್ ರೈಲು ಸಂಚರಿಸಬೇಕು ಅಥವಾ ದಿನಕ್ಕೆ 88 ಸಾವಿರದಿಂದ 1.18 ಲಕ್ಷ ಪ್ರಯಾಣಿಕರು ಸಂಚರಿಸಬೇಕು ಎಂದು ಈ ಹಿಂದೆ ಈ ಯೋಜನೆ ಬಗ್ಗೆ ಅಧ್ಯಯನ ನಡೆಸಿದ್ದ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಹಮದಾಬಾದ್ ರೈಲ್ವೇ ಇಲಾಖೆಗೆ ವರದಿ ನೀಡಿತ್ತು. ಅಷ್ಟೇ ಅಲ್ಲದೇ 300 ಕಿ.ಮೀ ಪ್ರಯಾಣಕ್ಕೆ ಒಂದು ಟಿಕೆಟ್‍ಗೆ 1500 ರೂ ದರವನ್ನು ನಿಗದಿ ಮಾಡಬೇಕೆಂಬ ಅಂಶವನ್ನು ವರದಿಯಲ್ಲಿ ತಿಳಿಸಿತ್ತು.

  • ಕುತ್ತಿಗೆಯ ಶಸ್ತ್ರಚಿಕಿತ್ಸೆ ನಂತ್ರ ಆಸ್ಪತ್ರೆಯಿಂದ ಅಮಿತ್ ಶಾ ಡಿಸ್ಚಾರ್ಜ್

    ಕುತ್ತಿಗೆಯ ಶಸ್ತ್ರಚಿಕಿತ್ಸೆ ನಂತ್ರ ಆಸ್ಪತ್ರೆಯಿಂದ ಅಮಿತ್ ಶಾ ಡಿಸ್ಚಾರ್ಜ್

    ಅಹಮದಾಬಾದ್: ಇಂದು ಆರೋಗ್ಯ ತಪಾಸಣೆಗಾಗಿ ಅಹಮದಾಬಾದ್‍ನ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಡಿಸ್ಚಾರ್ಜ್ ಆಗಿದ್ದಾರೆ.

    ಇಂದು ಬೆಳಗ್ಗೆ 9 ಗಂಟೆಗೆ ಅಹಮದಾಬಾದ್‍ನ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದ ಅಮಿತ್ ಶಾ ಸಣ್ಣ ಪ್ರಮಾಣದಲ್ಲಿ ಕುತ್ತಿಗೆ ಭಾಗದಲ್ಲಿದ್ದ ಗುಳ್ಳೆಯನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆಸಿ ಸಂಜೆಯ ವೇಳೆಗೆ ಮನೆಗೆ ಮರಳಿದ್ದಾರೆ.

    ಈ ವಿಚಾರವಾಗಿ ಮಾಹಿತಿ ನೀಡಿರುವ ಬಿಜೆಪಿ ಪಕ್ಷದ ಮಾಧ್ಯಮ ಇಲಾಖೆ, ಅಮಿತ್ ಶಾ ಅವರು ಬೆಳಗ್ಗೆ 9 ಗಂಟೆಗೆ ಅಹಮದಾಬಾದ್ ಕೆಡಿ ಆಸ್ಪತ್ರೆಗೆ ದಾಖಲಾಗಿದ್ದರು. ಸಣ್ಣ ಪ್ರಮಾಣದ ಶಸ್ತ್ರಚಿಕಿತ್ಸೆಯ ನಂತರ ಸುಮಾರು ಮಧ್ಯಾಹ್ನ 12:30 ರ ವೇಳೆಗೆ ಅವರನ್ನು ಡಿಸ್ಚಾಜ್ ಮಾಡಲಾಗಿದೆ. ಈಗ ಅವರು ನಗರದ ಎಸ್‍ಜಿ ರಸ್ತೆಯಲ್ಲಿರುವ ಅವರ ನಿವಾಸಕ್ಕೆ ತೆರಳಿದ್ದಾರೆ ಎಂದು ತಿಳಿಸಿದೆ.

    ಕೌಟುಂಬಿಕ ಕಾರ್ಯಕ್ರಮದ ನಿಮಿತ್ತ ಅಹಮದಾಬಾದ್‍ಗೆ ಬಂದಿರುವ ಅಮಿತ್ ಶಾ, ನಾಳೆ ದೆಹಲಿಗೆ ಮರಳಿ ಪ್ರಯಾಣ ಬೆಳೆಸುವ ಸಾಧ್ಯತೆಯಿದೆ ಎಂದು ರಾಜ್ಯ ಬಿಜೆಪಿ ಘಟಕ ತಿಳಿಸಿದೆ.

  • ಪತಿ ಮೇಲಿನ ಕೋಪಕ್ಕೆ ಮಗನ ಕುತ್ತಿಗೆ ಸೀಳಿ, ಆತ್ಮಹತ್ಯೆಗೆ ಶರಣಾದ ಪತ್ನಿ

    ಪತಿ ಮೇಲಿನ ಕೋಪಕ್ಕೆ ಮಗನ ಕುತ್ತಿಗೆ ಸೀಳಿ, ಆತ್ಮಹತ್ಯೆಗೆ ಶರಣಾದ ಪತ್ನಿ

    ಅಹಮದಾಬಾದ್: ಪತಿ ಮೇಲಿನ ಕೋಪಕ್ಕೆ ಮಹಿಳೆಯೊಬ್ಬರು ಎರಡು ವರ್ಷದ ಮಗನ ಕುತ್ತಿಗೆ ಸೀಳಿ, ಕೊನೆಗೆ ತಾವೂ ನೇಣಿಗೆ ಶರಣಾದ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ

    ನೇಪಾಳ ಮೂಲದ ಶಾಂತಿಬೆನ್ ಸೋನಾರ್ ಆತ್ಮಹತ್ಯೆಗೆ ಶರಣಾದ ಮಹಿಳೆ. ತನ್ನ ಪತಿ ಹಾಗೂ ಮಗುವಿನೊಂದಿಗೆ ಅಹಮದಾಬಾದಿನಲ್ಲಿ ಮಹಿಳೆ ವಾಸವಿದ್ದರು. ನೇಪಾಳದಲ್ಲಿನ ತಮ್ಮ ಊರು ಕಂಚನ್‍ಪುರಕ್ಕೆ ಮರಳಿ ಕರೆದೊಯ್ಯುವುದಾಗಿ ಪತಿ ಯಾವಾಗಲೂ ಹೇಳುತ್ತಿದ್ದರು. ಆದರೆ ಇದು ಬರೀ ಮಾತಿಗೆ ಮಾತ್ರ ಸೀಮಿತವಾಗಿತ್ತೆ ಹೊರತು, ಊರಿಗೆ ಮರಳಿ ಕರೆದೊಯ್ಯಲಿಲ್ಲ.

    ಯಾವಾಗಲೂ ಬರೀ ಮಾತು, ಯಾವುದನ್ನು ಮಾಡಲ್ಲ ಎಂದು ಪತಿ ಮೇಲೆ ಮಹಿಳೆ ಕೋಪಗೊಂಡಿದ್ದರು. ಪದೇ ಪದೇ ಪತಿ ಸುಳ್ಳು ಮಾತನ್ನು ಕೊಡುತ್ತಾರೆ. ಸುಳ್ಳು ಹೇಳುತ್ತಾರೆ ಎಂಬ ಸಿಟ್ಟಿನಿಂದ ಪತ್ನಿ ಮನೆಯಲ್ಲಿ ತಮ್ಮ ಮಗನ ಕುತ್ತಿಗೆ ಸೀಳಿ, ತಾವೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

  • ಕಾರಿಗೆ ಸಗಣಿ ಲೇಪನ – ಮಾಲಕಿಯ ಉಪಾಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ

    ಕಾರಿಗೆ ಸಗಣಿ ಲೇಪನ – ಮಾಲಕಿಯ ಉಪಾಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ

    ಅಹಮದಾಬಾದ್: ಇತ್ತಿಚಿಗೆ ಸಾಮಾಜಿಕ ಜಾಲತಾಣದಲ್ಲಿ ಸಗಣಿ ಹಚ್ಚಿದ ಕಾರೊಂದು ಭಾರಿ ಸುದ್ದಿಯಾಗಿತ್ತು. ಈಗ ಆ ಕಾರಿನ ಮಾಲಕಿ ಸಿಕ್ಕಿದ್ದು, ಯಾಕೆ ಸಗಣಿ ಹಚ್ಚಿದ್ದೇನೆ ಎನ್ನುವ ವಿಚಾರವನ್ನು ಬಹಿರಂಗ ಮಾಡಿದ್ದಾರೆ.

    ಅಹಮದಾಬಾದ್‍ನ ಸೀಜಾಲ್ ಷಾ ತನ್ನ ಟೊಯೋಟಾ ಆಲ್ಟಿಸ್ ಕಾರಿನ ಎಲ್ಲಾ ಹೊರ ಭಾಗಗಳಿಗೂ ಸಗಣಿಯ ಲೇಪನ ಮಾಡಿದ್ದರು. ಇದನ್ನು ರೂಪೇಶ್ ಗೌರಂಗಾ ದಾಸ್ ಎಂಬುವವರು ಫೋಟೋ ತೆಗೆದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಜನರು ಬಿರು ಬಿಸಲಿನಿಂದ ಪಾರಾಗಲು ನಾನಾ ರೀತಿಯ ಸರ್ಕಸ್ ಮಾಡುತ್ತಿದ್ದಾರೆ. ಇದಕ್ಕೆ ಸೀಜಾಲ್ ಷಾ ತಮ್ಮ ಕಾರನ್ನು ತಂಪಾಗಿ ಇಡಲು ಹಸುವಿನ ಸಗಣಿಯನ್ನು ಕಾರಿನ ಹೊರಭಾಗಕ್ಕೆ ಲೇಪನ ಮಾಡಿದ್ದಾರೆ.

    ಈ ವಿಚಾರದ ಬಗ್ಗೆ ಮಾತನಾಡಿರುವ ಸೀಜಾಲ್ ಷಾ, “ಈ ರೀತಿ ಸಗಣಿ ಲೇಪನ ಮಾಡುವುದರಿಂದ ನನ್ನ ಕಾರು ತಂಪಾಗಿ ಇರುತ್ತದೆ. ಜೊತೆಗೆ ಪರಿಸರ ಮಾಲಿನ್ಯವನ್ನು ತಡೆಗಟ್ಟಲು ಸಹಾಯವಾಗುತ್ತದೆ. ಕಾರಿನಲ್ಲಿ ಎಸಿ ಬಳಸುವುದರಿಂದ ಹಾನಿಕಾರಕ ಅನಿಲಗಳು ಬಿಡುಗಡೆಯಾಗಿ ಪರಿಸರ ಮಾಲಿನ್ಯವಾಗುತ್ತದೆ. ಅದಕ್ಕೆ ನಾನು ಕಾರನ್ನು ಚಲಿಸುವಾಗ ಎಸಿಯನ್ನು ಹಾಕಿಕೊಳ್ಳುವುದಿಲ್ಲ” ಎಂದು ಹೇಳಿದ್ದಾರೆ.

    ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಾನು ನನ್ನ ಮನೆಯ ಗೋಡೆಗಳಿಗೆ ಮತ್ತು ನೆಲಗಳಿಗೆ ಸಗಣಿ ಹಾಕಿಸುತ್ತೇನೆ. ಮನೆಯಲ್ಲಿ ತಂಪಾದ ವಾತಾವರಣ ನಿರ್ಮಾಣವಾದ ಹಿನ್ನೆಲೆಯಲ್ಲಿ ಕಾರಿಗೂ ಲೇಪನ ಮಾಡಿದರೆ ಹೇಗೆ ಎಂದು ಆಲೋಚಿಸಿದೆ. ಈ ಕಾರಣಕ್ಕೆ ನಾನು ಕಾರಿಗೂ ಸಗಣಿ ಮಾಡಿದೆ ಎಂದು ತಿಳಿಸಿದ್ದಾರೆ.

    ಸಗಣಿ ಹಚ್ಚಿದ ಕಾರಿನ ಫೋಟೋ ವೈರಲ್ ಆಗಿದ್ದು ನೆಟ್ಟಿಗರು ಮಾಲಕಿಯ ಐಡಿಯಾಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.