ನವದೆಹಲಿ: ಗುಜರಾತ್ ಹಾಗೂ ಜಮ್ಮು-ಕಾಶ್ಮೀರದಲ್ಲಿ ಇಂದು ಕೊರೊನಾ ಸೋಂಕಿತರು ಮೃತಟ್ಟಿದ್ದಾರೆ. ಈ ಮೂಲಕ ದೇಶದಲ್ಲಿ ಸಾವಿನ ಸಂಖ್ಯೆ 24ಕ್ಕೆ ಏರಿಕೆ ಕಂಡಿದೆ.
ಗುಜರಾತ್‍ನ ಅಹಮದಾಬಾದ್‍ನಲ್ಲಿ 45 ವರ್ಷದ ಕೊರೊನಾ ಸೋಂಕಿತ ಮೃತಪಟ್ಟಿದ್ದಾರೆ. ಅವರು ಮಧುಮೇಹದಿಂದ ಬಳಲುತ್ತಿದ್ದರು. ಈ ಮೂಲಕ ಗುಜರಾತ್‍ನಿಂದ ಒಟ್ಟು ಐದು ಸಾವುಗಳು ವರದಿಯಾಗಿವೆ ಎಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
A 45-year-old #COVID19 patient died today in Ahmedabad. He was suffering from diabetes. A total of five deaths have been reported from Gujarat (cumulative figures till today): Health & Family Welfare Department, Gujarat Government
ಶ್ರೀನಗರ ಸರ್ಕಾರಿ ಆಸ್ಪತ್ರೆಯಲ್ಲಿ 52 ವರ್ಷದ ಕೊರೊನಾ ಸೋಂಕಿತ ವ್ಯಕ್ತಿ ಸಾವನ್ನಪ್ಪಿದ್ದಾರೆ. ಇಲ್ಲಿವರೆಗೂ ಜಮ್ಮು-ಕಾಶ್ಮೀರದಲ್ಲಿ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ.
ದೇಶಾದ್ಯಂತ ಘೋಷಣೆಯಾದ ಲಾಕ್‍ಡೌನ್ 5ಕ್ಕೆ ಕಾಲಿಟ್ಟಿದೆ. ಆದರೂ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿದೆ. ಕೇಂದ್ರ ಆರೋಗ್ಯ ಸಚಿವಾಲಯ ಪ್ರಕಾರ, ಭಾನುವಾರ ಬೆಳಗ್ಗೆ 10 ಗಂಟೆ ವೇಳೆ ದೇಶದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 979ಕ್ಕೆ ಏರಿದೆ. ಈ ಪೈಕಿ 86 ಜನರು ಗುಣಮುಖರಾಗಿದ್ದರೆ, 25 ಮಂದಿ ಪ್ರಾಣಬಿಟ್ಟಿದ್ದಾರೆ. ಆದರೆ ಇದೇ ಸಮಯದಲ್ಲಿ ಕೋವಿದ್-19 ಇಂಡಿಯಾ ವೆಬ್‍ಸೈಟ್ ಪ್ರಕಾರ, ದೇಶದಲ್ಲಿ 1,024 ಜನ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದರಲ್ಲಿ 915 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, 85 ಜನರು ಗುಣಮುಖರಾಗಿದ್ದಾರೆ. ಉಳಿದಂತೆ 24 ಜನರು ಮೃತಪಟ್ಟಿದ್ದಾರೆ.
ಮಹಾರಾಷ್ಟ್ರದಲ್ಲಿ ಇಂದು ಒಂದೇ ದಿನದಲ್ಲಿ 7 ಕೊರೊನಾ ಹೊಸ ಪ್ರಕರಣಗಳು ವರದಿಯಾಗಿವೆ. ಈ ಪೈಕಿ ಮುಂಬೈನಲ್ಲಿ 4, ಪುಣೆ, ಸಾಂಗ್ಲಿ, ನಾಗ್ಪುರದಲ್ಲಿ ತಲಾ 1 ಒಂದು ಪ್ರಕರಣಗಳು ಪತ್ತೆಯಾಗಿದೆ. ಇದರಿಂದಾಗಿ ಮಹಾರಾಷ್ಟ್ರದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 193ಕ್ಕೆ ಏರಿಕೆ ಕಂಡಿದೆ.
Total number of #Coronavirus cases in the country rises to 979(including 86 cured/discharged and 25 deaths): Union Health Ministry pic.twitter.com/U6WV7BjCbb
ಅಹಮದಾಬಾದ್: ಕೊರೊನಾ ವೈರಸ್ ಹಿನ್ನೆಲೆ ದೇಶದಲ್ಲಿ ಲಾಕ್‍ಡೌನ್ ಘೋಷಿಸಿದ್ದರಿಂದ ಗುಜರಾತ್‍ನಲ್ಲಿ ಕೆಲಸ ಮಾಡುತ್ತಿದ್ದ ರಾಜಸ್ಥಾನದ ಸಾವಿರಾರು ಕಾರ್ಮಿಕರಿಗೆ ಜೀವನೋಪಾಯದ ಬಿಕ್ಕಟ್ಟು ಉಂಟಾಗಿದೆ.
ಗುಜರಾತ್‍ನ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ಬಸ್, ರೈಲು ಸಂಚಾರ ಸ್ಥಗಿತಗೊಂಡಿದ್ದರಿಂದ ಕಾಲ್ನಡಿಗೆಯಲ್ಲೇ ತಮ್ಮ ಮನೆಗಳಿಗೆ ತೆರಳಿದ್ದಾರೆ. ಕೆಲವರು ಪತ್ನಿ ಮತ್ತು ಮಕ್ಕಳೊಂದಿಗೆ ಸೈಕಲ್‍ಗಳಲ್ಲಿ ಹೋಗುತ್ತಿದ್ದಾರೆ. ಕೆಲವರಂತೂ ಸಿಕ್ಕ ಸಿಕ್ಕ ಲಾರಿ ಏರಿ ತಮ್ಮೂರಿಗೆ ತೆರಳುತ್ತಿದ್ದಾರೆ.
ಲಾಕ್‍ಡೌನ್‍ನಿಂದಾಗಿ ಗುಜರಾತ್‍ನಲ್ಲಿ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಕಾರ್ಖಾನೆಗಳು ಸ್ತಬ್ಧವಾಗಿವೆ. ಪರಿಣಾಮ ಕಾರ್ಮಿಕರು ಭಾರೀ ಕಷ್ಟಕ್ಕೆ ಸಿಲುಕಿ, ತಮ್ಮೂರಿಗೆ ಮರಳುತ್ತಿದ್ದಾರೆ.
ಕೆಲಸವಿಲ್ಲ, ಹಣವಿಲ್ಲ:
ನಾನು ನನ್ನ ಸಹೋದರನೊಂದಿಗೆ ಅಹಮದಾಬಾದ್‍ನ ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದೇವು. ನಮ್ಮ ಕುಟುಂಬ ಒಟ್ಟಿಗೆ ಇದೆ. ಆದರೆ ಲಾಕ್‍ಡೌನ್‍ನಿಂದಾಗಿ ಕೆಲಸವಿಲ್ಲದಿದ್ದರೆ ಹಣವಿಲ್ಲ ಎಂದು ಗುತ್ತಿಗೆದಾರ ಹೇಳಿದರು. ಹೀಗಾಗಿ ಜೀವನ ನಡೆಸುವುದು ಕಷ್ಟವಾಗಿ ಊರಿಗೆ ಮರಳುತ್ತಿದ್ದೇವೆ ಎಂದು ರಾಜಸ್ಥಾನದ ವ್ಯಕ್ತಿಯೊಬ್ಬರು ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಪ್ರತಿ ತಿಂಗಳು 9ರಿಂದ 10 ಸಾವಿರ ರೂ. ಗಳಿಸುತ್ತೇವೆ. ಇಂತಹ ಪರಿಸ್ಥಿತಿಯಲ್ಲಿ ಇಲ್ಲೇ ಉಳಿದರೆ ಇಲ್ಲಿಯವರೆಗೂ ಗಳಿಸಿದ ಹಣ ಖರ್ಚಾಗುತ್ತದೆ. ಕೊರೊನಾ ನಮ್ಮ ಜೀವನೋಪಾಯದ ಮೇಲೆ ಭಾರೀ ಹೊಡೆತ ಕೊಟ್ಟಿದೆ ಎಂದು ಗೂಳೆ ಹೊರಟ ಜನರು ಕಣ್ಣೀರಿಟ್ಟಿದ್ದಾರೆ.
ರಾಜಸ್ಥಾನದ ಕೆಲವರು ಚಹಾ ಅಂಗಡಿಗಳು ಮತ್ತು ಆಹಾರ ಮಳಿಗೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ತಮ್ಮ ಗ್ರಾಮಗಳಿಗೆ ಹೋಗುತ್ತಿರುವ ಜನರಿಗೆ ಮಾರ್ಗ ಮಧ್ಯದಲ್ಲಿ ಪೊಲೀಸರು ಆಹಾರ ಹಾಗೂ ಪಾನೀಯ ವಿತರಿಸಿ ಮಾನವೀಯತೆ ಮೆರೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಹಮದಾಬಾದ್: ಸ್ವಯಂ ಘೋಷಿತ ದೇವ ಮಾನವ ನಿತ್ಯಾನಂದನ ವಿರುದ್ಧ ಅಹಮದಾಬಾದ್ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದು, ಆಶ್ರಮದಲ್ಲಿನ ಮಕ್ಕಳನ್ನೂ ವಿಚಾರಣೆಗೊಳಪಡಿಸಿದ್ದರು. ಆದರೆ ಇದನ್ನೇ ಅಸ್ತ್ರವಾಗಿ ಬಳಸಿಕೊಂಡ ನಿತ್ಯಾನಂದನ ಶಿಷ್ಯ, ತನಿಖಾಧಿಕಾರಿಗಳು ಆಶ್ರಮದ ಮಕ್ಕಳಿಗೆ ಅಶ್ಲೀಲ ವಿಡಿಯೋ ತೋರಿಸಿ, ಭಾವನಾತ್ಮಕವಾಗಿ ಬೆದರಿಸಿ ತಮಗೆ ಬೇಕಾದಂತೆ ಹೇಳಿಕೆ ಪಡೆದಿದ್ದಾರೆ ಎಂದು ಆರೋಪಿಸಿದ್ದಾನೆ.
ವಿಶೇಷ ನ್ಯಾಯಾಲಯದ ಆದೇಶದ ಮೇರೆಗೆ ಮಾರ್ಚ್ 6ರಂದು ಮಕ್ಕಳ ಕಲ್ಯಾಣ ಸಮಿತಿ(ಸಿಡಬ್ಲ್ಯುಸಿ)ಯ ಸದಸ್ಯರೂ ಸೇರಿದಂತೆ 14 ಜನ ಅಧಿಕಾರಿಗಳ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಅಹಮದಾಬಾದ್‍ನ ಹೊರವಲಯದಲ್ಲಿರುವ ಗುರುಕುಲ ಹಾಗೂ ಆಶ್ರಮದಲ್ಲಿ ನಿತ್ಯಾನಂದನ ಅನುಯಾಯಿಗಿದ್ದ ಗಿರೀಶ್ ತುರ್ಲಪತಿ ಸಲ್ಲಿಸಿದ್ದ ದೂರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಅಧಿಕಾರಿಗಳ ವಿರುದ್ಧ ಪೊಕ್ಸೊ ಕಾಯ್ದೆ, ಐಪಿಸಿ ಸೆಕ್ಷನ್ಸ್ ಹಾಗೂ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆದೇಶಿಸಿದೆ. ಅದರಂತೆ ಅಹಮದಾಬಾದ್ ಜಿಲ್ಲೆಯ ವಿವೇಕಾನಂದ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಈ ಮೂಲಕ ಇನ್‍ಸ್ಪೆಕ್ಟರ್ ಆರ್.ಬಿ.ರಾಣಾ, ಡಿಎಸ್‍ಪಿ ಕೆ.ಟಿ.ಕರಿಮಾರಿಯಾ, ರಿಯಾಜ್ ಸರ್ವಾಯಿಯಾ, ಎಸ್.ಎಚ್.ಶಾರದಾ, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ದಿಲೀಪ್ ಮೇರ್, ಸಿಡಬ್ಲ್ಯುಸಿ ಅಧ್ಯಕ್ಷರು ಹಾಗೂ ಸದಸ್ಯರ ಆರೋಪಿ ಸ್ಥಾನದಲ್ಲಿದ್ದಾರೆ.
ವಿಚಾರಣೆ ನಡೆಸಿದ್ದಕ್ಕಾಗಿ ನಿತ್ಯಾನಂದನ ಶಿಷ್ಯ ತುರ್ಲಪತಿ ಪೊಲೀಸರು ಹಾಗೂ ಸಿಡಬ್ಲ್ಯುಸಿ ಸದಸ್ಯರ ವಿರುದ್ಧವೇ ಕೇಸ್ ಹಾಕಿದ್ದಾರೆ. ವಿವೇಕಾನಂದ ನಗರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಆರ್.ಬಿ.ರಾಣಾ ಹಾಗೂ ಸಿಡಬ್ಲ್ಯುಸಿ ಸದಸ್ಯರು ಸೇರಿದಂತೆ ಪೊಲೀಸ್ ಅಧಿಕಾರಿಗಳು ಆಶ್ರಮದ ಅಪ್ರಾಪ್ತರಿಗೆ ಅಸಭ್ಯ ಪ್ರಶ್ನೆಗಳನ್ನು ಕೇಳಿದ್ದಾರೆ. ಅಲ್ಲದೆ ತನಿಖಾಧಿಕಾರಿಗಳು ಮಕ್ಕಳಿಗೆ ಮಾನಸಿಕವಾಗಿ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪೊಲೀಸ್ ಅಧಿಕಾರಿಗಳು ಹಾಗೂ ಸಿಡಬ್ಲ್ಯುಸಿ ಸದಸ್ಯರು ಮಕ್ಕಳಿಂದ ಅನುಕೂಲಕರ ಹೇಳಿಕೆ ಪಡೆಯಲು ಮಕ್ಕಳನ್ನು ಭಾವನಾತ್ಮಕವಾಗಿ ಬ್ಲ್ಯಾಕ್‍ಮೇಲ್ ಮಾಡಲು ಪ್ರಯತ್ನಿಸಿದರು. ಅಲ್ಲದೆ ಅವರಿಗೆ ಪೋರ್ನ್ ವಿಡಿಯೋ ಹಾಗೂ ಫೋಟೋಗಳನ್ನು ತೋರಿಸಿದ್ದಾರೆ. ಈ ಮೂಲಕ ಮಕ್ಕಳಿಗೆ ಮಾನಸಿಕ ಹಿಮಸೆ ನಿಡಿದ್ದಾರೆ ಎಂದು ತುರ್ಲಪತಿ ಆರೋಪಿಸಿದ್ದಾರೆ.
ಕೋರ್ಟ್ ಆದೇಶದ ಮೇರೆಗೆ ಮಾರ್ಚ್ 6ರಂದು ಪೊಲೀಸ್ ಅಧಿಕಾರಿಗಳು ಸೇರಿ ಒಟ್ಟು 14 ಜನರ ವಿರುದ್ಧ ಎಫ್‍ಐಆರ್ ದಾಖಲಿಸಿದ್ದೇವೆ. ಈವರೆಗೆ ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದೇವೆ. ಮುಂದಿನ ತನಿಖೆಯನ್ನು ನಡೆಸುತ್ತಿದ್ದೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಕಳೆದ ವರ್ಷ ನವೆಂಬರ್‍ನಲ್ಲಿ ಇದೇ ಪೊಲೀಸ್ ಠಾಣೆಯಲ್ಲಿ ಮೂವರು ಮಕ್ಕಳನ್ನು ಅಪಹರಿಸಿ ಬಂಧಿಸಿರುವ ಕುರಿತು ನಿತ್ಯಾನಂದನ ವಿರುದ್ಧ ಪ್ರಕರಣ ದಾಖಲಾಗಿತ್ತು. ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಹುಡುಗನನ್ನು ಅಪಹರಿಸಲಾಗಿದೆ ಎಂದು ದೂರು ದಾಖಲಾಗಿತ್ತು. ಅಲ್ಲದೆ ಇತ್ತೀಚೆಗೆ ಮಕ್ಕಳನ್ನು ಒತ್ತಾಯಪೂರ್ವಕವಾಗಿ ಬಂಧನದಲ್ಲಿಟ್ಟುಕೊಂಡಿದ್ದ ನಿತ್ಯಾನಂದ ದೇಶದಿಂದ ಪರಾರಿಯಾಗಿದ್ದಾನೆ. ಹೀಗಾಗಿ ನಿತ್ಯಾನಂದನ ಕುರಿತು ಮಾಹಿತಿ ಕೋರಿ ಇಂಟರ್‍ಪೋಲ್ ಬ್ಲ್ಯೂ ಕಾರ್ನರ್ ನೋಟಿಸ್ ಜಾರಿ ಮಾಡಿದೆ.
ಗಾಂಧಿನಗರ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಗುಜರಾತ್‍ನ ಅಹಮದಾಬಾದ್‍ಗೆ ಆಗಮಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಭದ್ರತೆಗಾಗಿ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರು ಮಗುವಿನೊಂದಿಗೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಟ್ರಂಪ್ ಕಾರ್ಯಕ್ರಮಕ್ಕೆ ಭದ್ರತೆ ನೀಡಲು ಫೆಬ್ರವರಿ 19ರಂದು ಅಹಮದಾಬಾದ್‍ಗೆ ಹೋಗುವಂತೆ ಸಂಗೀತಾ ಪರ್ಮಾರ್ ಅವರಿಗೆ ಆದೇಶಿಸಲಾಗಿತ್ತು. ಆದೇಶದ ಪಡೆದ ಸಂಗೀತಾ ಅವರು, ತಮ್ಮ ಒಂದು ವರ್ಷದ ಮಗು ಅನಾರೋಗ್ಯದಿಂದ ಬಳಲುತ್ತಿದೆ ಎಂದು ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಕೊನೆಯಲ್ಲಿ ಜವಾಬ್ದಾರಿಯನ್ನು ವಹಿಸಿಕೊಂಡು ಫೆಬ್ರವರಿ 18ರಂದು ರಾತ್ರಿ ಮಗನೊಂದಿಗೆ ಅಹಮದಾಬಾದ್ ತಲುಪಿದ್ದರು.
ಸಂಗೀತಾ ಅವರವನ್ನು ರಾಯಚಂದ್ ನಗರ ರಸ್ತೆಯಲ್ಲಿ ನಿಯೋಜನೆ ಮಾಡಲಾಗಿದೆ. ಹೀಗಾಗಿ ಅವರು ಬಸ್ ನಿಲ್ದಾಣವೊಂದರಲ್ಲಿ ಸೀರೆಯಿಂದ ಮಗುವಿಗೆ ಜೋಳಿಗೆ ಕಟ್ಟಿದ್ದಾರೆ. ಅದರಲ್ಲಿ ಮಗುವನ್ನು ಮಲಗಿಸಿ ಪಾಲನೆಯ ಜೊತೆಗೆ ಕರ್ತವ್ಯವನ್ನೂ ನಿರ್ವಹಿಸುತ್ತಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಂಗೀತಾ ಅವರು, ನಾನು ಅಹಮದಾಬಾದ್‍ಗೆ ಬಂದಾಗ ಮಗವನ್ನು ನಿಯೋಜನಾ ಸ್ಥಳದಿಂದ 24 ಕಿ.ಮೀ ದೂರದಲ್ಲಿರುವ ಸಾಕೇತ್ ಗ್ರಾಮದಲ್ಲಿ ಸಂಬಂಧಿಕರೊಂದಿಗೆ ಬಿಟ್ಟಿದ್ದೆ. ಆದರೆ ಮಗು ತುಂಬಾ ಅಳುತ್ತಿತ್ತು. ಹೀಗಾಗಿ ಒಂದು ದಿನದ ಬಳಿಕ ಮಗವನ್ನು ತೆಗದುಕೊಂಡು ಬಂದೆ. ಬಳಿಕ ನಾನು ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಮಗುವನ್ನು ತೆಗದುಕೊಂಡು ಬರಲು ಆರಂಭಿಸಿದೆ. ನಾನು ಬೆಳಗ್ಗೆ 8 ಗಂಟೆಗೆ ಇಲ್ಲಿಗೆ ಬಂದು ರಾತ್ರಿ 9 ಗಂಟೆಗೆ ಹೊರಡುತ್ತೇನೆ. ಎರಡೂ ಜವಾಬ್ದಾರಿಗಳನ್ನು ಸರಿಯಾಗಿ ಪೂರೈಸಲು ಪ್ರಯತ್ನಿಸುತ್ತಿದ್ದೇನೆ. ಆದರೆ ಕೆಲವೊಮ್ಮೆ ಮಗುವಿಗೆ ಹಾಲುಣಿಸಲು ಕಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
Sangita Parmer, a police constable is performing her duties at Visat, Ahmadabad, with her 1 year old son. She says, "It is difficult but it is my responsibility to fulfill both duties of a mother & a constable. He is not well therefore I have to bring and breastfeed him".#Gujaratpic.twitter.com/ccOAeLZfY3
ಗಾಂಧಿನಗರ: ಸರ್ದಾರ್ ವಲ್ಲಭ್‍ಭಾಯಿ ಪಟೇಲ್ ಅವರ ಪ್ರತಿಮೆಯಿಂದ ವಿಶ್ವದ ಗಮನವನ್ನು ತನ್ನತ್ತ ಸೆಳೆದಿದ್ದ ಗುಜರಾತ್ ಇದೀಗ ಕ್ರಿಕೆಟ್ ಸ್ಟೇಡಿಯಂ ಮೂಲಕ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮೈಲಿಗಲ್ಲು ನೆಟ್ಟಿದೆ. ಗುಜರಾತ್‍ನ ಅಹಮದಾಬಾದ್‍ದಿಂದ ಸ್ವಲ್ಪ ದೂರದ ಮೊಟೆರಾದಲ್ಲಿರುವ ಸರ್ದಾರ್ ಪಟೇಲ್ ಕ್ರೀಡಾಂಗಣ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ಹೊರ ಹೊಮ್ಮಲಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸಮ್ಮುಖದಲ್ಲಿ ಫೆಬ್ರವರಿ 24ರಂದು ಸರ್ದಾರ್ ಪಟೇಲ್ ಸ್ಟೇಡಿಯಂ ಉದ್ಘಾಟನೆಯಾಗಲಿದೆ. ಜೊತೆಗೆ ಇಲ್ಲಿಯೇ ಟ್ರಂಪ್ ಅವರು ಸಾರ್ಜಜನಿಕ ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕೂ ಅಧಿಕ ಜನರು ಸೇರುವ ಸಾಧ್ಯತೆ ಇದೆ.
ಸ್ಟೇಡಿಯಂ ವಿಶೇಷತೆ:
ಅಹಮದಾಬಾದ್ ಸ್ಟೇಡಿಯಂನಲ್ಲಿ 1982ರಿಂದ 2015ರ ವರೆಗೂ 49,000 ಆಸನಗಳ ವ್ಯವಸ್ಥೆ ಇತ್ತು. 2016ರ ಡಿಸೆಂಬರ್ ನಿಂದ ಕಾಮಗಾರಿ ಆರಂಭಗೊಂಡು ಸುಮರು 700 ಕೋಟಿ ರೂ. ವೆಚ್ಚದಲ್ಲಿ ಎಲ್ ಆಂಡ್ ಟಿ ಕಂಪನಿ ಗುತ್ತಿಗೆ ಪಡೆದು ಸ್ಟೇಡಿಯಂ ನಿರ್ಮಿಸಿದೆ. 1.10 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸುವ ಮೂಲಕ ವಿಶ್ವದ ಅತೀ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಇರುವ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಹೊಂದಿದೆ. ಮೆಲ್ಬರ್ನ್ ಸ್ಟೇಡಿಯಂನಲ್ಲಿ 1.04 ಲಕ್ಷ ಆಸನಗಳ ವ್ಯವಸ್ಥೆಯಿದೆ. ಈ ದಾಖಲೆಯನ್ನು ಗುಜರಾತ್ ಕ್ರಿಕೆಟ್ ಮಂಡಳಿ ಮುರಿಯುವ ನಿಟ್ಟಿನಲ್ಲಿ ಹಳೆಯ ಮೊಟೆರಾ ಕ್ರಿಕೆಟ್ ಕ್ರೀಡಾಂಗಣವನ್ನು ಮೇಲ್ದರ್ಜೆಗೆ ಏರಿಸಿ 1.10 ಲಕ್ಷ ಆಸನಗಳ ವ್ಯವಸ್ಥೆ ಕಲ್ಪಿಸಲಾಗಿದೆ.
ಸರ್ದಾರ್ ಪಟೇಲ್ ಕ್ರೀಡಾಂಗಣ ಕೇವಲ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಷ್ಟೇ ಅಲ್ಲದೆ ವಿಶ್ವದ ಎರಡನೇ ದೊಡ್ಡ ಮೈದಾನ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಉತ್ತರ ಕೊರಿಯಾದ ರುಂಗ್ರಾಡೊ ಮೆ ಡೆ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಮೈದಾನ ಎಂಬ ಖ್ಯಾತಿ ಹೊಂದಿದ್ದು, ಈ ಕ್ರೀಡಾಂಗಣದಲ್ಲಿ 1.50 ಲಕ್ಷ ಪ್ರೇಕ್ಷಕರು ಕುಳಿತುಕೊಂಡು ಪಂದ್ಯ ನೋಡಬಹುದು.
ಆಸ್ಟ್ರೇಲಿಯಾದ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಅನ್ನು ವಿನ್ಯಾಸಗೊಳಿಸಿದ ತಂಡವೇ ಈ ಸ್ಟೇಡಿಯಂ ನಿರ್ಮಾಣದ ಉಸ್ತುವಾರಿ ವಹಿಸಿಕೊಂಡಿದೆ. 64 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ 1.10 ಲಕ್ಷ ಜನರು ಕುಳಿತು ಕ್ರಿಕೆಟ್ ಪಂದ್ಯ ವೀಕ್ಷಿಸಬಹುದು. ಜೊತೆಗೆ ಕ್ರೀಡಾಂಗಣದಲ್ಲಿ 76 ಕಾರ್ಪೊರೇಟ್ ಬಾಕ್ಸ್ ಗಳು, ನಾಲ್ಕು ಡ್ರೆಸ್ಸಿಂಗ್ ರೂಮ್‍ಗಳು ಮತ್ತು ಮೂರು ಅಭ್ಯಾಸ ಮೈದಾನಗಳಿವೆ.
ಮೂರು ಮಾದರಿಯ ಪಿಚ್:
ಸರ್ದಾರ್ ಪಟೇಲ್ ಸ್ಟೇಡಿಯಂನಲ್ಲಿ ಕೆಂಪು ಮತ್ತು ಕಪ್ಪು ಮಣ್ಣು ಬಳಸಿ ಮೂರು ಮಾದರಿಯ ಪಿಚ್‍ಗಳನ್ನು ಸಿದ್ಧಗೊಳಿಸಲಾಗಿದೆ. ಅವುಗಳ ಪೈಕಿ ಕೆಲವನ್ನು ಸಂಪೂರ್ಣ ಕಪ್ಪು ಮಣ್ಣಿನಿಂದ, ಇನ್ನೂ ಕೆಲವನ್ನು ಕೆಂಪು ಮಣ್ಣಿನಿಂದ ಹಾಗೂ ಮತ್ತೆ ಕೆಲವನ್ನು ಎರಡೂ ಮಣ್ಣುಗಳ ಮಿಶ್ರಣದಿಂದ ಸಿದ್ಧಪಡಿಸಲಾಗಿದೆ. ಸಾಧಾರಣವಾಗಿ ಮೈದಾನದ ನಾಲ್ಕು ಭಾಗಗಳಲ್ಲಿ ಫ್ಲಡ್ ಲೈಟ್ ಹಾಕಲಾಗುತ್ತದೆ, ಆದರೆ ಈ ಸ್ಟೇಡಿಯಂನಲ್ಲಿ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ. ದೇಶದಲ್ಲಿ ಮೊದಲ ಬಾರಿಗೆ ಸ್ಟೇಡಿಯಂಗೆ ಎಲ್‍ಇಡಿ ದೀಪಗಳನ್ನು ಹಾಕಲಾಗಿದ್ದು 30 ಮೀಟರ್ ದೂರದವರೆಗಿನ ಪ್ರದೇಶಗಳನ್ನು ದೀಪಗಳು ಕವರ್ ಮಾಡಲಿದೆ.
ಸಬ್ ಏರ್ ಸಿಸ್ಟಂ:
ಮಳೆ ಬಂದು ಸ್ಟೇಡಿಯಂನಲ್ಲಿ ನೀರು ನಿಂತು ಪಂದ್ಯ ರದ್ದಾಗುವ ಸಾಧ್ಯತೆ ಇರುತ್ತದೆ. ಆದರೆ ಇಂತಹ ಸಮಸ್ಯೆಗೆ ಸರ್ದಾರ್ ಪಟೇಲ್ ಮೈದಾನಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಮೈದಾನವನ್ನು ಒಣಗಿಸುವ ಸಬ್ ಏರ್ ಸಿಸ್ಟಂ ತಂತ್ರಜ್ಞಾನ ಅಳವಡಿಸಲಾಗಿದೆ. ಮಳೆ ನಿಂತ ಅರ್ಧ ಗಂಟೆಗೆ ಮೈದಾನ ಒಣಗುತ್ತದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲೂ ಸಬ್ ಏರ್ ಸಿಸ್ಟಂ ಅಳವಡಿಸಲಾಗಿದೆ.
ಒಳಾಂಗಣ ಕ್ರಿಕೆಟ್ ಅಕಾಡೆಮಿ ಮತ್ತು ಒಲಿಂಪಿಕ್ ಮಾನದಂಡಗಳ ಪ್ರಕಾರ ಈಜುಕೊಳ, ಸ್ಕ್ವ್ಯಾಷ್ ಏರಿಯಾ ಹಾಗೂ ಟೇಬಲ್ ಟೆನಿಸ್ ಏರಿಯಾಗಳು ಕೂಡ ಸರ್ದಾರ್ ಪಟೇಲ್ ಮೈದಾನದಲ್ಲಿವೆ. ಜೊತೆಗೆ ಮೈದಾನದಲ್ಲಿ 3 ಡಿ ಥಿಯೇಟರ್ ವ್ಯವಸ್ಥೆ ಮಾಡಲಾಗುತ್ತಿದ್ದು, ಅದರೊಂದಿಗೆ ಎಲ್‍ಇಡಿ ದೀಪಗಳನ್ನು ಅಳವಡಿಸಲಾಗಿದೆ.
ಪಾರ್ಕಿಂಗ್ ವ್ಯವಸ್ಥೆ:
ಪಂದ್ಯ ವೀಕ್ಷಣೆಗೆ ಬರುವ ಜನರ ಬೈಕ್ ಹಾಗೂ ಕಾರ್ ಪಾರ್ಕಿಂಗ್ ವಿಶಾಲ ಜಾಗ ಒದಗಿಸಲಾಗಿದೆ. ಇಲ್ಲಿ 3,000 ಕಾರು ಹಾಗೂ 10,000 ಬೈಕ್‍ಗಳ ಪಾರ್ಕಿಂಗ್ ವ್ಯವಸ್ಥೆ ಇದೆ. ಜೊತೆಗೆ ಮೈದಾನಕ್ಕೆ ಸಂಪರ್ಕ ಕಲ್ಪಿಸಲು 300 ಮೀಟರ್ ದೂರದಲ್ಲೇ ಮೆಟ್ರೋ ನಿಲ್ದಾಣವನ್ನು ಸಹ ನಿರ್ಮಿಸಲಾಗುತ್ತಿದೆ. ಮೆಟ್ರೋ ನಿಲ್ದಾಣದಿಂದ ನೇರವಾಗಿ ಕ್ರೀಡಾಂಗಣಕ್ಕೆ ಸಂಪರ್ಕ ಕಲ್ಪಿಸಲು ಸ್ಕೈವಾಕ್ ನಿರ್ಮಾಣವಾಗಲಿದೆ.
ಅಷ್ಟೇ ಅಲ್ಲದೆ ಮಾರ್ಚ್ ಅಥವಾ ಏಪ್ರಿಲ್‍ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆಸಲು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಯೋಜನೆ ಹಾಕಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಐತಿಹಾಸಿಕ ಡೇ-ನೈಟ್ ಟೆಸ್ಟ್ ಪಂದ್ಯ ನಡೆಯಲಿದೆ. ಆದರೆ ಯಾವ ದೇಶದ ಜೊತೆಗೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಇದಕ್ಕೂ ಮುನ್ನವೇ ಐಪಿಎಲ್ ಪಂದ್ಯದೊಂದಿಗೆ ಸರ್ದಾರ್ ಪಟೇಲ್ ಸ್ಟೇಡಿಯಂ ಲೋಕಾರ್ಪಣೆಗೊಳ್ಳಲಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಐಪಿಎಲ್‍ನಲ್ಲಿ ನೌಕೌಟ್ ಪಂದ್ಯಗಳು ಬಿಸಿಸಿಐ ಲೆಕ್ಕಚಾರದಂತೆ ನಡೆಯುತ್ತದೆ. ಈ ಪಂದ್ಯಗಳ ಟಿಕೆಟ್ ಮೂಲಕ ಬರುವ ಹಣ ಕೂಡ ಭಾರತೀಯ ಕ್ರಿಕೆಟ್ ಮಂಡಳಿಗೆ ಸೇರುತ್ತದೆ. ಹೀಗಾಗಿ ಫೈನಲ್ ಬಿಸಿಸಿಐ ಸೂಚನೆಯಂತೆ ಮೊಟೆರಾದ ಸರ್ದಾರ್ ಪಟೇಲ್ ಕ್ರೀಡಾಂಗಣದಲ್ಲಿ ನಡೆಯುವ ಸಾಧ್ಯತೆ ಇದೆ. ಈಗಾಗಲೇ ಶೇ.90 ರಷ್ಟು ಕೆಲಸಗಳು ಮುಗಿದಿದ್ದು ಮಾರ್ಚ್ ಕೊನೆಯ ವೇಳೆಗೆ ಬಾ ಎಲ್ಲ ಕೆಲಸ ಪೂರ್ಣಗೊಳ್ಳಲಿದೆ ಎಂದು ವರದಿಯಾಗಿದೆ.
ವಿಶ್ವದ 5 ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳು: ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
ದೇಶ- ಆಸ್ಟ್ರೇಲಿಯಾ
ಆಸನಗಳು- 1,00,024
ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಂ
ಈಡನ್ ಗಾರ್ಡನ್ಸ್
ದೇಶ- ಭಾರತ (ಕೊಲ್ಕತ್ತಾ)
ಆಸನಗಳು- 66,349
ಭಾರತದ ಅತಿ ದೊಡ್ಡ ಕ್ರಿಕೆಟ್ ಮೈದಾನ
ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ
ದೇಶ- ಭಾರತ (ಚತ್ತೀಸ್‍ಗಢ್)
ಆಸನಗಳು- 65,000
ಈಡನ್ ಗಾರ್ಡನ್ಸ್
ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
ದೇಶ- ಭಾರತ (ಹೈದರಾಬಾದ್),
ಆಸನಗಳು- 60,000
ಗ್ರೀನ್ ಫೀಲ್ಡ್ ಇಂಟರ್ ನ್ಯಾಷನಲ್ ಸ್ಟೇಡಿಯಂ
ದೇಶ- ಭಾರತ (ತಿರುವನಂತಪುರಂ)
ಆಸನಗಳು- 55,000.
ವಿಶೇಷತೆ: ಕ್ರಿಕೆಟ್ ಪಂದ್ಯಗಳನ್ನು ಹೊರತುಪಡಿಸಿ ಫುಟ್ಬಾಲ್ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.
ನವದೆಹಲಿ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗುಜರಾತ್‍ಗೆ ಇದೇ 24ರಂದು ಆಗಮಿಸಲಿದ್ದಾರೆ. ಬಳಿಕ ಅವರು ತಮ್ಮ ‘ದಿ ಬೀಸ್ಟ್’ ಕಾರಿನಲ್ಲಿ ಅಹಮದಾಬಾದ್‍ನ ಸರ್ದಾರ್ ಪಟೇಲ್ ಸ್ಟೇಡಿಯಂಗೆ ತೆರಳಲಿದ್ದಾರೆ. ಭದ್ರತೆ ದೃಷ್ಟಿಯಿಂದ ಟ್ರಂಪ್ ಆಗಮನಕ್ಕೂ ಮುನ್ನವೇ ದಿ ಬೀಸ್ಟ್ ಕಾರು ಗುಜರಾತ್ ಸೇರಿದೆ. ಈ ಕಾರು ಅನೇಕ ವಿಶೇಷತೆಗಳನ್ನು ಹೊಂದಿದೆ.
ಟ್ರಂಪ್ ಅವರು ವಿಶೇಷ ವಿಮಾನ ಏರ್‍ಫೋರ್ಸ್-1 ಫೆಬ್ರವರಿ 24ರಂದು ಬೆಳಗ್ಗೆ 11.55 ಕ್ಕೆ ಅಹಮದಾಬಾದ್‍ನ ಸರ್ದಾರ್ ವಲ್ಲಭಭಾಯ್ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲಿದೆ. ಈ ವೇಳೆ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಲಿದ್ದಾರೆ. ಅಲ್ಲಿಂದ ಟ್ರಂಪ್ ಮತ್ತು ಮೋದಿ ಸಬರಮತಿ ಆಶ್ರಮಕ್ಕೆ ತೆರಳಲಿದ್ದು, 25 ನಿಮಿಷಗಳ ಕಾಲ ಅಲ್ಲಿಯೇ ಇರಲಿದ್ದಾರೆ. ಉಭಯ ನಾಯಕರು ‘ಇಂಡಿಯಾ ರೋಡ್ ಶೋ’ ಪ್ರದರ್ಶನ ನೀಡಿ ಮಧ್ಯಾಹ್ನ 1:15 ಕ್ಕೆ ಮೊಟೆರಾ ಕ್ರೀಡಾಂಗಣ ತಲುಪಲಿದ್ದಾರೆ.
ಮೊಟೆರಾ ಕ್ರೀಡಾಂಗಣದಲ್ಲಿ ಟ್ರಂಪ್ ಮತ್ತು ಮೋದಿಯವರ ‘ನಮಸ್ತೆ ಟ್ರಂಪ್’ ಕಾರ್ಯಕ್ರಮಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರನ್ನು ಆಹ್ವಾನಿಸಲಾಗಿದೆ. ಅವರು ಸುಮಾರು 150 ನಿಮಿಷಗಳ ಕಾಲ ಅಹಮದಾಬಾದ್‍ನಲ್ಲಿ ಇರಲಿದ್ದಾರೆ. ಇದರ ನಂತರ ಉಭಯ ನಾಯಕರು ಮಧ್ಯಾಹ್ನ 3:30ಕ್ಕೆ ದೆಹಲಿಗೆ ತೆರಳಲಿದ್ದಾರೆ. ಇದಕ್ಕಾಗಿ ಅಮೆರಿಕ ಮತ್ತು ಭಾರತದ ಭದ್ರತಾ ಸಂಸ್ಥೆಗಳು ಸಿದ್ಧತೆಗಳನ್ನು ಪ್ರಾರಂಭಿಸಿವೆ.
ಅಮೆರಿಕ ವಾಯುಪಡೆಯ ಸರಕು ವಿಮಾನ ಹಕ್ರ್ಯುಲಸ್ ಭಾನುವಾರ ಬೆಳಗ್ಗೆ ಅಹಮದಾಬಾದ್‍ಗೆ ಆಗಮಿಸಿದೆ. ಇದು ಟ್ರಂಪ್ ಅವರ ಭದ್ರತಾ ಕಾರು, ಸ್ನೈಪರ್ ಗಳು, ಪತ್ತೇದಾರಿ ಕ್ಯಾಮೆರಾಗಳು ಮತ್ತು ಅಗ್ನಿ ಸುರಕ್ಷತಾ ವ್ಯವಸ್ಥೆಗಳನ್ನು ಹೊತ್ತು ತಂದಿವೆ.
ಅಮೆರಿಕದಿಂದ ಟ್ರಂಪ್ ಅವರ ವಿಶೇಷ ಭದ್ರತಾ ಪಡೆ ಕೂಡ ಅಹಮದಾಬಾದ್ ತಲುಪಿದೆ. ಹೈಟೆಕ್ ಸುರಕ್ಷತಾ ಸಾಧನಗಳನ್ನು ಸಹ ಪರಿಚಯಿಸಲಾಗಿದೆ. ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಅಮೆರಿಕ ತಂಡ ಭಾನುವಾರ ಸ್ಥಳೀಯ ಅಧಿಕಾರಿಗಳನ್ನು ಭೇಟಿ ಮಾಡಿತ್ತು. ಅಧ್ಯಕ್ಷ ಟ್ರಂಪ್ ಅವರ ಭದ್ರತೆಗೆ 65 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 200 ಇನ್ಸ್‍ಪೆಕ್ಟರ್‍ಗಳು, 800 ಸಬ್ ಇನ್ಸ್‍ಪೆಕ್ಟರ್‍ಗಳು ಮತ್ತು 12,000 ನಗರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುವುದು. ಎನ್‍ಎಸ್‍ಜಿ, ಸೆಂಟ್ರಲ್ ಫೋರ್ಸ್, ಎಸ್‍ಪಿಜಿ, ಎಲ್‍ಆರ್‍ಡಿ, ಎಸ್‍ಆರ್‍ಪಿಎಫ್ ಮತ್ತು ಸಿಆರ್‍ಪಿಎಫ್ ಸೇರಿದಂತೆ ಒಟ್ಟು 25 ಸಾವಿರ ಸೈನಿಕರನ್ನು ಅವರ ರಕ್ಷಣೆಯಲ್ಲಿ ನಿಯೋಜಿಸಲಾಗುವುದು. ಫೆಬ್ರವರಿ 19ರಿಂದ ಎಲ್ಲಾ ಭದ್ರತಾ ಪಡೆಗಳು ತಮ್ಮ ಕಾರ್ಯ ಆರಂಭಿಸಲಿವೆ. ದಿ ಬೀಸ್ಟ್ ಅಷ್ಟೇ ಅಲ್ಲದೆ ವೈದ್ಯಕೀಯ ಸೌಲಭ್ಯ, ಭದ್ರತೆ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸು ಕಾರುಗಳು ಕೂಡ ಬಂದು ಅಹಮದಾಬಾದ್ ಸೇರಿವೆ.
ಟ್ರಂಪ್ ಕಾರಿನ ವಿಶೇಷತೆ:
ಅಮೆರಿಕದ ಅಧ್ಯಕ್ಷರು ಪ್ರವಾಸದ ವೇಳೆ ಏರ್ ಫೋರ್ಸ್ ಒನ್ ವಿಮಾನವನ್ನು ಬಳಕೆ ಮಾಡುತ್ತಾರೆ. ರಸ್ತೆಯಲ್ಲಿ ಸಂಚಾರದ ವೇಳೆ ಭಾರೀ ಭದ್ರತೆ ಉದ್ದೇಶದಿಂದ ದಿ ಬೀಸ್ಟ್ ಕಾರನ್ನು ವಿನ್ಯಾಸಗೊಳಿಸಲಾಗಿದೆ. ಈ ಕಾರನ್ನು ‘ಕ್ಯಾಡಿಲಾಕ್’, ‘ಲಿಮೋಸಿನ್ ಒನ್’, ‘ಫಸ್ಟ್ ಕಾರು’ ಎಂದು ಕರೆಯಲಾಗುತ್ತದೆ.
‘ಕ್ಯಾಡಿಲಾಕ್’ ಕಂಪನಿ ಈ ವಿಶೇಷ ಕಾರನ್ನು ತಯಾರಿಸಿದೆ. ಕಸ್ಟಮೈಸ್ಡ್ ಕಾರು(ಏನೇನು ವಿಶೇಷತೆಗಳು, ಆಯ್ಕೆಗಳು ಬೇಕೋ ಅವುಗಳನ್ನು ಸೇರಿಸಿ ಪ್ರತ್ಯೇಕವಾಗಿ ನಿರ್ಮಾಣವಾಗುವ ಕಾರು) ಶಸ್ತ್ರಸಜ್ಜಿತ, ಬಹಳ ಸ್ಥಳಾವಕಾಶವುಳ್ಳ, ಐಷಾರಾಮಿ ಮಾದರಿ ಕಾರು ಇದಾಗಿದೆ. 2018ರ ಸೆಪ್ಟೆಂಬರ್ 24ರಿಂದ ಈಗಿನ ಕಾರನ್ನು ಬಳಕೆ ಮಾಡಲಾಗುತ್ತಿದೆ. ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಅವರು ‘ಕ್ಯಾಡಿಲಾಕ್ ಒನ್’ ಕಾರು ಬಳಸುತ್ತಿದ್ದರು. ಡೊನಾಲ್ಡ್ ಟ್ರಂಪ್ ಸಹ ಕೆಲಕಾಲ ಅದೇ ಕಾರು ಬಳಸುತ್ತಿದ್ದರು. ಆದರೆ 2018ರಿಂದ ಟ್ರಂಪ್ ದಿ ಬೀಸ್ಟ್ ಕಾರನ್ನು ಬಳಸಲು ಆರಂಭಿಸಿದರು.
ಇಡೀ ಕಾರು ಗುಂಡು ನಿರೋಧಕ ವ್ಯವಸ್ಥೆ ಹೊಂದಿದ್ದು, ಐದು ಇಂಚು ದಪ್ಪದ ಮಿಲಿಟರಿ ಗ್ರೇಡ್‍ನ ಲೋಹವನ್ನು ಕಾರಿನ ಬಾಡಿಗೆ ಬಳಸಲಾಗಿದೆ. ಸ್ಟೀಲ್, ಟೈಟಾನಿಯಂ, ಅಲ್ಯುಮಿನಿಯಂ ಮತ್ತು ಸೆರಾಮಿಕ್ಸ್ ಅನ್ನು ಮಿಶ್ರಮಾಡಿ ವಿಶಿಷ್ಟ ಲೋಹ ಸಿದ್ಧಪಡಿಸಲಾಗಿದೆ. ಬೋಯಿಂಗ್ 757 ವಿಮಾನದಲ್ಲಿ ಬಳಸುವಂತಹ 8 ಇಂಚು ದಪ್ಪದ ಬಾಗಿಲುಗಳಿರುತ್ತವೆ. ಬಾಗಿಲು ಹಾಕಿಕೊಂಡಾಗ ಕಾರು 100% ರಾಸಾಯನಿಕ ಆಯುಧ ನಿರೋಧಕ ವ್ಯವಸ್ಥೆ ಹೊಂದಿರುತ್ತದೆ.
ಕಿಟಕಿಗಳು ಐದು ಪದರಗಳ ಗಾಜು ಮತ್ತು ಪಾಲಿಕಾರ್ಬೊನೇಟ್ ಶೀಟ್‍ಗಳನ್ನು ಹೊಂದಿವೆ. ಆದರೆ ಅವುಗಳನ್ನು ಯಾವ ಕಾರಣಕ್ಕೂ ತೆರೆಯುವುದು ಸಾಧ್ಯವಿಲ್ಲ. ತುರ್ತು ಸಂದರ್ಭಗಳಲ್ಲಿ ಚಾಲಕನ ಬಾಗಿಲಿನ ಕಿಟಕಿಯ ಗಾಜುಗಳನ್ನು ಮಾತ್ರ 3 ಇಂಚಿನಷ್ಟು ಮಾತ್ರ ಕೆಳಕ್ಕೆ ಇಳಿಸಬಹುದು. ದಿ ಬೀಸ್ಟ್ ಕಾರಿಗೆ ಪಂಕ್ಚರ್ ನಿರೋಧಕ ಬಲಿಷ್ಠ ಟಯರ್ ಗಳನ್ನು ಅಳವಡಿಸಿರುವುದು ವಿಶೇಷ. ಒಂದು ವೇಳೆ ಟಯರ್ ಸ್ಫೋಟಗೊಂಡರೂ ಕಾರು ಚಲಿಸುವಂತಹ ಮಾದರಿಯಲ್ಲಿ ಸ್ಟೀಲ್ ರಿಮ್‍ಗಳನ್ನು ವಿನ್ಯಾಸಗೊಳಿಸಲಾಗಿದೆ.
ಚಾಲಕನಿಗೆ ಅತ್ಯಾಧುನಿಕ ಸಂವಹನಾ ವ್ಯವಸ್ಥೆ ಮತ್ತು ಜಿಪಿಎಸ್ ಟ್ರ್ಯಾಕಿಂಗ್ ವ್ಯವಸ್ಥೆ ಇರುತ್ತದೆ. ತುರ್ತು ಸಂದರ್ಭದಲ್ಲಿ ಮಿಲಿಟರಿ ಆಪರೇಷನ್ ಸಹ ಮಾಡುವ ಸಾಮಥ್ರ್ಯ ಈ ಕಾರಿಗೆ ಇದೆ. ಕಾರಿನ ಮುಂಭಾಗದಲ್ಲಿ ರಾಕೆಟ್ ಗ್ರೆನೇಡ್ ಲಾಂಚರ್, ಟಿಯರ್ ಗ್ಯಾಸ್ ಫಿರಂಗಿ, ರಾತ್ರಿ ವೇಳೆಯೂ ಸ್ಪಷ್ಟವಾಗಿ ಕಾರ್ಯನಿರ್ವಹಿಸುವ ಕ್ಯಾಮೆರಾಗಳು ಇರುತ್ತವೆ. ವಿರೋಧಿಗಳು ದಾಳಿ ನಡೆಸಿದರೆ ಬೆಂಕಿ ಹೊಗೆ ಗ್ರೆನೇಡ್ ಸಹ ಇದರಲ್ಲಿ ಇದೆ.
ಅಮೆರಿಕ ಅಧ್ಯಕ್ಷರಷ್ಟೇ ಅಲ್ಲದೆ ಇನ್ನೂ ನಾಲ್ವರು ಕಾರಿನಲ್ಲಿ ಕುಳಿತುಕೊಳ್ಳಬಹುದು. ಅಧ್ಯಕ್ಷರಿಗೆ ಗಾಜಿನ ಕ್ಯಾಬಿನ್ ಇರುತ್ತದೆ. ಪ್ಯಾನಿಕ್ ಬಟನ್, ತುರ್ತು ಪರಿಸ್ಥಿತಿಗಳಲ್ಲಿ ಬಳಸಲು ಪ್ರತಿಯೊಬ್ಬರಿಗೂ ಪ್ರತ್ಯೇಕ ಆಮ್ಲಜನಕ ಪೂರೈಕೆ ವ್ಯವಸ್ಥೆ ಇರುತ್ತದೆ. ಅಧ್ಯಕ್ಷರ ರಕ್ತದ ಮಾದರಿ ಸಹ ಇರುತ್ತದೆ. ದೇಶದ ಉಪಾಧ್ಯಕ್ಷರು ಮತ್ತು ಪೆಂಟಗನ್ ಜತೆಗೆ ಅಧ್ಯಕ್ಷರಿಗೆ ನೇರವಾಗಿ ಸಂಪರ್ಕ ಕಲ್ಪಿಸುವ ಸಂವಹನ ವ್ಯವಸ್ಥೆ ಇರುತ್ತದೆ.
ಅಮೆರಿಕ ಅಧ್ಯಕ್ಷರ ಕಾರು ಚಾಲಕನಿಗೆ ಅಮೆರಿಕ ಸೇನೆಯು ಅತ್ಯಂತ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಎದೆಗುಂದದೆ ಚಾಲನೆ ಮಾಡುವ ತರಬೇತಿಯನ್ನು ನೀಡಲಾಗಿರುತ್ತದೆ. ತುರ್ತು ಪರಿಸ್ಥಿತಿಗಳಲ್ಲಿ ತಪ್ಪಿಸಿಕೊಳ್ಳುವ, ಎದುರಾಳಿಗಳ ದಿಕ್ಕುತಪ್ಪಿಸುವ ಮತ್ತು 180 ಡಿಗ್ರಿಯಲ್ಲಿ ಕಾರು ತಿರುಗಿಸುವ ತರಬೇತಿಯನ್ನೂ ನೀಡಲಾಗಿರುತ್ತದೆ. ಒಂದು ವೇಳೆ ಅಗ್ನಿ ಅನಾಹುತವಾದರೂ ಅಗ್ನಿ ನಂದಿಸುವ ವ್ಯವಸ್ಥೆ ಸಹ ಕಾರಿನಲ್ಲಿದೆ.
ಮೈಲೇಜ್ ಎಷ್ಟು ನೀಡುತ್ತೆ?
9 ಟನ್ ತೂಕದ ಕಾರು ಪ್ರತಿ ಗಂಟೆಗೆ 97 ಕಿ.ಮೀ ಸಂಚರಿಸುತ್ತದೆ. ಒಂದು ಯುಎಸ್ ಗ್ಯಾಲನ್(3.7 ಲೀಟರ್) ಇಂಧನಕ್ಕೆ 12 ಕಿ.ಮೀ ಸಂಚರಿಸುವ ಸಾಮಥ್ರ್ಯವನ್ನು ಕಾರು ಹೊಂದಿದೆ. ಬೀಸ್ಟ್ ಕಾರಿನ ಜೊತೆ ಇತರ ಶಸ್ತ್ರ ಸಜ್ಜಿತ ಕಾರುಗಳು ಸಂಚರಿಸುತ್ತವೆ. ಈ ಎಲ್ಲ ಕಾರು ಸಾಗಾಣಿಕಾ ವಿಮಾನದಲ್ಲಿ ವಿದೇಶಕ್ಕೆ ತೆರಳುತ್ತವೆ.
ಬೆಂಗಳೂರು: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಗುಜರಾತಿನ ಅಹಮದಾಬಾದಿನಲ್ಲಿರುವ ಬೀದಿ ಬದಿಯ ವ್ಯಾಪಾರಿಗಳ ತಳ್ಳು ಗಾಡಿಯನ್ನು ಜೆಸಿಬಿ ಮೂಲಕ ಧ್ವಂಸಗೊಳಿಸಲಾಗುತ್ತಿದೆ ಎನ್ನುವ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಫೇಸ್‍ಬುಕ್ ಮತ್ತು ವಾಟ್ಸಪ್ ನಲ್ಲಿ ಈ ವಿಡಿಯೋ ವೈರಲ್ ಆಗಿದೆ. ಆದರೆ ಇದೊಂದು ಸುಳ್ಳು ವಿಡಿಯೋ ಆಗಿದ್ದು ಒಡಿಶಾದ ರಾಜಧಾನಿ ಭುವನೇಶ್ವರದಲ್ಲಿ ಮಹಾನಗರ ಪಾಲಿಕೆ ರಸ್ತೆ ತೆರವು ಕಾರ್ಯಾಚರಣೆಯ ದೃಶ್ಯಕ್ಕೆ ಸುಳ್ಳು ಮಾಹಿತಿ ನೀಡಿ ವಿಡಿಯೋ ಹರಿ ಬಿಡಲಾಗುತ್ತಿದೆ.
ಈ ವಿಡಿಯೋವನ್ನು ಒಡಿಶಾದಲ್ಲಿರುವ ವಾಹಿನಿಯೊಂದು 2020ರ ಜನವರಿ 24 ರಂದು ಅಪ್ಲೋಡ್ ಮಾಡಿದೆ. ವಿಶೇಷ ಏನೆಂದರೆ ಉತ್ತರ ಪ್ರದೇಶದಲ್ಲಿ ನಡೆದ ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲೂ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಈಗ ವಿಡಿಯೋ ಯೂಟ್ಯೂಬ್ ನಲ್ಲಿ ರೋಸ್ ನ್ಯೂಸ್ ಟಿವಿ ಹೆಸರಿನಲ್ಲಿರುವ ಯೂಟ್ಯೂಬ್ ಖಾತೆಯಲ್ಲಿ ಅಪ್ಲೋಡ್ ಆಗಿದೆ. ಈ ವಿಡಿಯೋಗೆ ಟ್ರಂಪ್ ಅಹಮದಾಬಾದಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಬೀದಿ ವ್ಯಾಪಾರಿಗಳನ್ನು ಬಲವಂತವಾಗಿ ತೆರವುಗೊಳಿಸಲಾಗುತ್ತಿದೆ ಎಂದು ಶೀರ್ಷಿಕೆ ನೀಡಲಾಗಿದೆ.
ಡೊನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳುತ್ತಾರೆ ಎಂಬ ಸುದ್ದಿ ಬರುತ್ತಿದ್ದರೂ ಫೆ.11ರಂದು ಶ್ವೇತಭವನ ಟ್ವೀಟ್ ಮಾಡುವ ಮೂಲಕ ಅಧಿಕೃತವಾಗಿ ಖಚಿತಗೊಂಡಿತ್ತು. ಶ್ವೇತಭವನ ಪ್ರಕಟ ಮಾಡುವ ಮೊದಲೇ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.
ಅಹಮದಾಬಾದ್: ಪ್ರೇಮಿಗಳ ದಿನದೊಂದು ಶಾಲಾ ಕಾಲೇಜುಗಳಿಗೆ ಹೋಗದೆ ಪಾರ್ಕ್ ಹಾಗೂ ರೋಡಿನಲ್ಲಿ ತಿರುಗುತ್ತಿದ್ದ ಯುವತಿ ಮತ್ತು ಯುವಕರನ್ನು ಭಜರಂಗದಳದ ಕಾರ್ಯಕರ್ತರು ಓಡಿಸಿಕೊಂಡು ಹೋಗಿರುವ ಘಟನೆ ಗುಜುರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.
ಅಹಮದಾಬಾದ್ ರಿವರ್ ಫ್ರಂಟ್‍ನಲ್ಲಿ ಕುಳಿತಿದ್ದ ಯುವಕ-ಯುವತಿಯರನ್ನು ಭಜರಂಗದಳದ ಕಾರ್ಯಕರ್ತರು ಹೆದರಿಸಿ ಓಡಿಸಿದ್ದಾರೆ. ಮೂರು ಗುಂಪುಗಳಾಗಿ ಕೇಸರಿ ಶಾಲು ಮತ್ತು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಬೈಕಿನಲ್ಲಿ ಬಂದ ಕಾರ್ಯಕರ್ತರು ವಾಡಜ್ ಮತ್ತು ಉಸ್ಮಾನ್‍ಪುರದಲ್ಲಿ ರಿವರ್ ಫ್ರಂಟ್‍ನಲ್ಲಿ ಕುಳಿತಿದ್ದ ಪ್ರೇಮಿಗಳನ್ನು ಓಡಿಸಿದ್ದಾರೆ.
Mitron, you cannot fall in love as per the Gujarat model
Bajrang Dal thugs are seen here chasing couples away in Ahmedabad on #ValentinesDay
Remember, Terrorist Gopal Sharma was also from the Bajrang Dal.
ಈ ವಿಚಾರವಾಗಿ ಮಾತನಾಡಿರುವ ಭಜರಂಗದಳದ ಉಪಾಧ್ಯಕ್ಷ ನಿಕುಂಜ್ ಪರೇಖ್, ನಮ್ಮ ಭಾರತೀಯ ಸಂಸ್ಕೃತಿಯ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವ ಬೀರಲು ನಾವು ಬಿಡುವುದಿಲ್ಲ. ಈ ಪ್ರೇಮಿಗಳ ದಿನಾಚರಣೆ ಎಂಬುದು ಪಾಶ್ಚಿಮಾತ್ಯ ಸಂಸ್ಕøತಿಯಾಗಿದೆ. ಅದೂ ಅಲ್ಲದೇ ಇದು ಲವ್ ಜಿಹಾದ್ ಜಾಸ್ತಿ ಆಗಲು ಕಾರಣವಾಗಿದೆ. ಈ ಕಾರಣಕ್ಕೆ ನಾವು ಇದನ್ನು ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಪ್ರೇಮಿಗಳ ದಿನಾಚರಣೆಯ ನಂತರ ಹಿಂದೂ ಹುಡುಗಿಯರು ಬೇರೆ ಧರ್ಮದ ಹುಡುಗರ ಜೊತೆ ಓಡಿಹೋಗಿ ಮದುವೆಯಾಗುವ ಪ್ರಕರಣಗಳು ಜಾಸ್ತಿಯಾಗಿವೆ. ಈ ಕಾರಣದಿಂದಲೇ ಭಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧ ಮಾಡುತ್ತಿದೆ ಎಂದು ನಿಕುಂಜ್ ಪರೇಖ್ ತಿಳಿಸಿದ್ದಾರೆ.
ಭಜರಂಗದಳದ ಈ ಕೆಲಸದ ವಿರುದ್ಧ ಯುವಕರು ಆಕ್ರೋಶ ವ್ತಕ್ತಪಡಿಸಿದ್ದು, ಎಲ್ಲರಿಗೂ ಅವರ ವೈಯಕ್ತಿಕ ಜೀವನದಲ್ಲಿ ಅವರಿಗೆ ಬೇಕಾದುದ್ದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಆದರೆ ಸಂಸ್ಕೃತಿ ಎಂಬ ಹೆಸರಿನಲ್ಲಿ ಇವರು ಈ ರೀತಿ ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಕೆಲ ಯುವಕರ ಕಿಡಿಕಾರಿದ್ದಾರೆ.
– ಹೌಡಿ ಮೋದಿ ಮಾದರಿಯಲ್ಲೇ ‘ಕೇಮ್ ಚೋ ಟ್ರಂಪ್’
– 60, 70 ಸಾವಿರ ಜನ ಭಾಗವಹಿಸುವ ಸಾಧ್ಯತೆ
– 1.10 ಲಕ್ಷ ಆಸನಗಳಿರುವ ಅಹಮದಾಬಾದ್‍ನ ಸ್ಟೇಡಿಯಂಲ್ಲಿ ಟ್ರಂಪ್ ಮಾತು
ಗಾಂಧಿನಗರ: ‘ಹೌಡಿ ಮೋದಿ’ ಕಾರ್ಯಕ್ರಮದ ಮಾದರಿಯಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ವೇದಿಕೆ ಕಲ್ಪಿಸಿಕೊಡಲು ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸಿದ್ದಾರೆ.
ಅಮೆರಿಕದ ಅನಿವಾಸಿ ಭಾರತೀಯರು ಹೂಸ್ಟನ್‍ನಲ್ಲಿ ಆಯೋಜಿಸಿದ್ದ ‘ಹೌಡಿ ಮೋದಿ’ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗವಹಿಸಿದ್ದರು. ಅಲ್ಲಿನ ಅನಿವಾಸಿ ಭಾರತೀಯರ ಜೊತೆಗೆ ಕೆಲ ವಿಚಾರಗಳನ್ನು ಹಂಚಿಕೊಳ್ಳಲು ಪ್ರಧಾನಿ ಮೋದಿ ಅವರಿಗೆ ಸಹಾಯಕವಾಗಿತ್ತು. ಹೀಗಾಗಿ ಭಾರತಕ್ಕೆ ಆಗಮಿಸುತ್ತಿರುವ ಟ್ರಂಪ್ ಅವರಿಗೆ ಇಂತಹದ್ದೇ ವೇದಿಕೆ ಕಲ್ಪಿಸಿಕೊಡಲು ‘ಕೇಮ್ ಚೋ ಟ್ರಂಪ್’ ಸಾರ್ವಜನಿಕ ಸಭೆಗೆ ಭಾರೀ ಸಿದ್ಧತೆ ನಡೆದಿದೆ.
ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಫೆಬ್ರವರಿ 24 ಹಾಗೂ 25 ರಂದು ಎರಡು ದಿನಗಳ ಭಾರತ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಅಮೆರಿಕ ಫಸ್ಟ್ ಲೇಡಿ ಮೆಲಾನಿಯಾ ಟ್ರಂಪ್ ಕೂಡ ಭಾರತಕ್ಕೆ ಆಗಮಿಸುತ್ತಿದ್ದಾರೆ. ನವದೆಹಲಿಗೆ ಆಗಮಿಸಲಿರುವ ಡೊನಾಲ್ಡ್ ಟ್ರಂಪ್ ಅವರು ಫೆಬ್ರವರಿ 25 ರಂದು ಗುಜರಾತ್‍ನ ಅಹಮದಾಬಾದ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಜಂಟಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಡೊನಾಲ್ಡ್ ಟ್ರಂಪ್, ಅಮೆರಿಕದ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ನಾನು ಭಾರತಕ್ಕೆ ಭೇಟಿ ನೀಡುತ್ತಿದ್ದೇನೆ. ಅಹಮದಾಬಾದ್‍ನಲ್ಲಿ ನಡೆಯಲಿರುವ ಪ್ರಧಾನಿ ಮೋದಿ ಜೊತೆಗಿನ ಜಂಟಿ ಸಾರ್ವಜನಿಕ ಸಭೆಯಲ್ಲಿ 50 ರಿಂದ 70 ಸಾವಿರ ಜನರನ್ನು ಸೇರಿಸುವುದಾಗಿ ಭಾರತದ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಈ ಪ್ರವಾಸವನ್ನು ಕುತೂಹಲದಿಂದ ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಮಹಾನ್ ವ್ಯಕ್ತಿ. ಈ ತಿಂಗಳ ಕೊನೆಯ ವಾರದಲ್ಲಿ ನಾನು ಭಾರತದ ಪ್ರವಾಸ ಕೈಗೊಳ್ಳುತ್ತಿದ್ದೇನೆ. ಪ್ರವಾಸಕ್ಕೆ ಕುತೂಹಲದಿಂದ ಕಾಯುತ್ತಿರುವೆ ಎಂದು ಹೇಳಿದ್ದಾರೆ.
ಅಹಮದಾಬಾದ್ ಸ್ಟೇಡಿಯಂ ಯಾಕೆ?
ಅಹಮದಾಬಾದ್ ಕ್ರೀಡಾಂಗಣ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿದೆ. ಇದು 1.10 ಲಕ್ಷ ಆಸನಗಳ ವ್ಯವಸ್ಥೆಗಳನ್ನು ಹೊಂದಿದೆ. ಹೀಗಾಗಿ ಇಲ್ಲಿ 60ರಿಂದ 50 ಸಾವಿರ ಜನರು ಸೇರಲಿದ್ದಾರೆ.
ಅಹಮದಾಬಾದ್ ಸ್ಟೇಡಿಯಂನಲ್ಲಿ 1982ರಿಂದ 2015ರ ವರೆಗೂ 49,000 ಆಸನಗಳ ವ್ಯವಸ್ಥೆ ಇತ್ತು. ಕಳೆದ ಐದು ವರ್ಷಗಳಿಂದ ಅದನ್ನು ದುರಸ್ತಿಗೊಳಿಸಿ ವಿಶ್ವದ ಅತ್ಯಂತ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಆಗಿ ಮಾಡಲಾಗಿದೆ. ಡೊನಾಲ್ಡ್ ಟ್ರಂಪ್ ಸಮ್ಮುಖದಲ್ಲಿ ಈ ಸ್ಟೇಡಿಯಂ ಉದ್ಘಾಟನೆಯಾಗಲಿದೆ.
ಗಾಂಧಿನಗರ: 16 ಲಕ್ಷ ರೂ. ತೆರಿಗೆ ಉಳಿಸಲು ಹೋಗಿ ಕಾರು ಮಾಲೀಕನೋರ್ವ 27.68 ಲಕ್ಷ ರೂ. ದಂಡ ಪಾವತಿಸಿದ ಪ್ರಸಂಗವೊಂದು ಗುಜರಾಜ್‍ನ ಅಹಮದಾಬಾದ್ ನಗರದಲ್ಲಿ ನಡೆದಿದೆ.
ಅಹಮದಾಬಾದ್‍ನ ರಂಜಿತ್ ದೇಸಾಯಿ ಎಂಬವರು 16 ಲಕ್ಷ ರೂ.ಗಳ ತೆರಿಗೆ ಉಳಿಸಲು ಜಾರ್ಖಂಡ್‍ನಲ್ಲಿ 2.18 ಕೋಟಿ ರೂ.ಗೆ ಪೋರ್ಷೆ -911 ಕಾರನ್ನು ಖರೀದಿಸಿ ಅಲ್ಲಿಂದ ಪಾಸ್ ಪಡೆದರು. ಆದರೆ ಟ್ರಾಫಿಕ್ ಪೊಲೀಸರು ಕಾರನ್ನು ನವೆಂಬರ್ 29 ರಂದು ಅಹಮದಾಬಾದ್ ಹೆಲ್ಮೆಟ್ ಸರ್ಕಲ್‍ನಲ್ಲಿ ತಡೆದು ಪರಿಶೀಲನೆ ನಡೆಸಿದ್ದರು. ಈ ವೇಳೆ ರಂಜಿತ್ ದೇಸಾಯಿ ಯಾವುದೇ ದಾಖಲೆಗಳನ್ನು ಹಾಗೂ ನಂಬರ್ ಪ್ಲೇಟ್ ಅನ್ನು ಹೊಂದಿರಲಿಲ್ಲ. ಇದರಿಂದಾಗಿ ಪೊಲೀಸರು ಕಾರನ್ನು ತಮ್ಮ ವಶಕ್ಕೆ ಪಡೆದಿದ್ದರು.
ಕಾರಿನ ಮಾಲೀಕ ರಂಜಿತ್ ದೇಸಾಯಿ ಅವರಿಂದ ದಂಡವನ್ನು ವಸೂಲಿ ಮಾಡುವ ಪ್ರಕ್ರಿಯೆ ನವೆಂಬರ್‍ನಲ್ಲಿ ಪ್ರಾರಂಭವಾಯಿತು. ಈ ಪ್ರಕರಣ ನಡೆದ ಸುಮಾರು ಒಂದೂವರೆ ತಿಂಗಳ ನಂತರ ಇತ್ಯರ್ಥವಾಗಿರಲಿಲ್ಲ. ಹೀಗಾಗಿ ದಂಡದ ಮೊತ್ತ, ತೆರಿಗೆ ಮತ್ತು ದಂಡ ಬಡ್ಡಿ ಸೇರಿದಂತೆ ಒಟ್ಟು 27.68 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಅಹಮದಾಬಾದ್ ಪೊಲೀಸರು ತಿಳಿಸಿದ್ದಾರೆ.
ದಂಡದ ಮೊತ್ತ?:
ದಂಡ ಮೊತ್ತ 4 ಲಕ್ಷ ರೂ. ಆಗಿದ್ದು, ರಸ್ತೆ ತೆರಿಗೆಗೆ 16 ಲಕ್ಷ ರೂ. ಸಂಗ್ರಹಿಸಲಾಗಿದೆ. ಇದಲ್ಲದೆ ದಂಡದ ಬಡ್ಡಿಯನ್ನು ನವೆಂಬರ್ ನಲ್ಲಿ ಆರಂಭಿಸಲಾಗಿದ್ದು, ಅದರ ಮೊತ್ತವು 7.68 ಲಕ್ಷ ರೂ. ಆಗಿದೆ. ಈ ಎಲ್ಲ ಮೊತ್ತ ಸೇರಿ ಒಟ್ಟು 27.68 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ ಎಂದು ಸಂಚಾರ ಡಿಸಿಪಿ ಅಜಿತ್ ರಾಜನ್ ತಿಳಿಸಿದ್ದಾರೆ.