Tag: Ahmad Siddi Bappa

  • 8 ವರ್ಷವಾದ್ರೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆ – ಭಟ್ಕಳದ ಸಿದ್ದಿಬಪ್ಪನಿಂದ ಜಾಮೀನಿಗೆ ಅರ್ಜಿ

    8 ವರ್ಷವಾದ್ರೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ, ಇದು ಮಾನವ ಹಕ್ಕುಗಳ ಉಲ್ಲಂಘನೆ – ಭಟ್ಕಳದ ಸಿದ್ದಿಬಪ್ಪನಿಂದ ಜಾಮೀನಿಗೆ ಅರ್ಜಿ

    – ಉಗ್ರರ ಜೊತೆ ಸಂಪರ್ಕ ಆರೋಪ
    – ದುಬೈಯಲ್ಲಿ ಎನ್‍ಐಎಯಿಂದ ಬಂಧನ

    ಕಾರವಾರ: ತನ್ನ ವಿರುದ್ಧ ರಾಷ್ಟ್ರೀಯ ತನಿಖಾ ದಳ(ಎನ್‍ಐಎ) ಇನ್ನೂ ಆರೋಪಪಟ್ಟಿ ಸಲ್ಲಿಸದ ಹಿನ್ನೆಲೆಯಲ್ಲಿ ಭಟ್ಕಳದ ಅಬ್ದುಲ್ ವಾಹಿದ್ ಸಿದ್ದಿಬಪ್ಪ ಜಾಮೀನು ಮಂಜೂರು ಕೋರಿ ದೆಹಲಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ.

    ಉಗ್ರಗಾಮಿ ಚಟುವಟಿಕೆಯ ಆರೋಪದಡಿ 2012ರಲ್ಲಿ ದುಬೈನಲ್ಲಿ ವಾಹಿದ್ ಸಿದ್ದಿಬಪ್ಪನನ್ನು ಎನ್‍ಐಎ ಬಂಧಿಸಿದೆ. ಕಳೆದ ಎಂಟು ವರ್ಷಗಳಿಂದ 100ಕ್ಕೂ ಹೆಚ್ಚು ಬಾರಿ ಕೋರ್ಟ್ ವಿಚಾರಣೆ ನಡೆದಿದ್ದರೂ ಇನ್ನೂ ಚಾರ್ಜ್‍ಶೀಟ್ ಸಲ್ಲಿಕೆಯಾಗಿಲ್ಲ. ಹೀಗಾಗಿ ಜಾಮೀನು ಅರ್ಜಿ ಸಲ್ಲಿಸಿದ್ದು ಮೇ 6 ರಂದು ವಿಚಾರಣೆಗೆ ಬರಲಿದೆ.

    ಆರೋಪ ಏನು?
    2012ರ ಸೆಪ್ಟೆಂಬರ್ 10 ರಂದು ವಿದ್ವಂಸಕ ಕೃತ್ಯ, ಇಂಡಿಯನ್ ಮುಜಾಹಿದ್ದೀನ್ ಭಯೋತ್ಪಾದಕ ಚಟುವಟಿಕೆ, ಭಯೋತ್ಪಾದಕ ರಿಯಾಜ್ ಭಟ್ಕಳ್ ನೊಂದಿಗೆ ಸಂಪರ್ಕ, ಹವಾಲ ಹಣ ವಹಿವಾಟು, ಬೆಂಗಳೂರು, ಮುಂಬೈ ಬಾಂಬ್ ಸ್ಫೋಟ ಸೇರಿದಂತೆ ಹಲವು ಆರೋಪದಲ್ಲಿ ಈತನನ್ನು ಬಂಧಿಸಿ ಕೇಸ್ ದಾಖಲಿಸಿತ್ತು.

    ಮೊದಲ ಹಂತದಲ್ಲಿ ಐದು ಜನರ ವಿರುದ್ಧ ತನಿಖೆ ನಡೆಸಿದ ಎನ್‍ಐಎ 4 ಜನರ ಮೇಲೆ ಸಪ್ಲಿಮೆಂಟ್ ಚಾರ್ಜ್‍ಶೀಟ್ ಹಾಕಿತು. ನಂತರ 20 ಜನರ ಮೇಲೆ ಚಾರ್ಜ್ ಶೀಟ್ ಹಾಕಿತ್ತು. ನಂತರ ಮೂರನೇ ಸಪ್ಲಿಮೆಂಟರಿ ಚಾರ್ಜ್ ಶೀಟ್ ಅನ್ನು 2016ರ ನವೆಂಬರ್ 15 ರಂದು ವಾಹಿದ್ ಸಿದ್ದಿಬಪ್ಪ ವಿರುದ್ಧ ಸಲ್ಲಿಕೆ ಮಾಡಿ ಮೂರನೇ ಆರೋಪಿಯಾಗಿ ಸೇರಿಸಿತು.

    2013ರ ಡಿಸೆಂಬರ್ 28 ರಂದು ಮೊದಲು ಜಾರ್ಜ್ ಶೀಟ್ ಸಲ್ಲಿಸಿದ ಪ್ರಕರಣದ ವಿಚಾರಣೆ ನಡೆದಿತ್ತು. ಆದರೆ ಎನ್‍ಐಎ ತನಿಖಾ ತಂಡ ಈತನ ವಿರುದ್ಧ ಸಾಕ್ಷಿ ನೀಡಲು 100 ದಿನಾಂಕಗಳನ್ನು ತೆಗೆದುಕೊಂಡರೂ ಯಾವುದೇ ಆರೋಪ ಪಟ್ಟಿ ಸಲ್ಲಿಕೆ ಮಾಡಿರಲಿಲ್ಲ.

    ಈ ನಡುವೆ ಸಿದ್ದಿಬಪ್ಪ ಎರಡು ಬಾರಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಎರಡೂ ಬಾರಿಯೂ ಅರ್ಜಿ ತಿರಸ್ಕೃತಗೊಂಡಿತ್ತು. ಈಗ ಮತ್ತೊಮ್ಮೆ ಜಾಮೀನು ಅರ್ಜಿ ಸಲ್ಲಿಸಿದ್ದು, ಮೇ 6 ರಂದು ವಿಚಾರಣೆಗೆ ಬರಲಿದೆ.

    ದೆಹಲಿಯ ತಿಹಾರ್ ಜೈಲಿನಲ್ಲಿ ಎಂಟು ವರ್ಷಗಳಿಂದ ಇದ್ದೇನೆ. ವಿರುದ್ಧ ಯಾವುದೇ ಆರೋಪ ಪಟ್ಟಿ ಸಲ್ಲಿಕೆಯಾಗಿಲ್ಲ. ತನಿಖೆ ನಡೆಸುವಲ್ಲಿ ವಿಳಂಬ ಮಾಡಲಾಗುತ್ತಿದ್ದು, ಇದರಿಂದ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಆದಷ್ಟು ಬೇಗ ತನಿಖೆ ನಡೆಸಿ ತೀರ್ಪು ನೀಡಿ ಇಲ್ಲವೇ ನನಗೆ ಮಧ್ಯಂತರ ಜಾಮೀನು ನೀಡುವಂತೆ ಅಬ್ದುಲ್ ವಾಹಿದ್ ಸಿದ್ದಿಬಪ್ಪ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದಾನೆ.