Tag: ahemadabad

  • ಪರೀಕ್ಷೆಯಲ್ಲಿ ಕಾಪಿ ಮಾಡಲು ಬಿಡಲಿಲ್ಲವೆಂದು ಥಳಿಸಿ, ಬೆದರಿಸಿದ ವಿದ್ಯಾರ್ಥಿ

    ಪರೀಕ್ಷೆಯಲ್ಲಿ ಕಾಪಿ ಮಾಡಲು ಬಿಡಲಿಲ್ಲವೆಂದು ಥಳಿಸಿ, ಬೆದರಿಸಿದ ವಿದ್ಯಾರ್ಥಿ

    – 10ನೇ ತರಗತಿ ವಿದ್ಯಾರ್ಥಿಯಿಂದ ಚಾಕು ಇರಿತದ ಬೆದರಿಕೆ

    ಅಹಮದಾಬಾದ್: ತನಗೆ ಪರೀಕ್ಷೆಯಲ್ಲಿ ಕಾಪಿ ಮಾಡಲು ಬಿಡದ ವಿದ್ಯಾರ್ಥಿಗೆ ಮತ್ತೊಬ್ಬ ವಿದ್ಯಾರ್ಥಿ ಚಾಕು ಇರಿಯುವುದಾಗಿ ಬೆದರಿಕೆ ಹಾಕಿದ ಪ್ರಸಂಗವೊಂದು ಅಹಮಾದಾಬಾದ್ ನಲ್ಲಿ ನಡೆದಿದೆ.

    ಈ ಘಟನೆ ಶನಿವಾರ ನಡೆದಿದೆ. ಕೃಷ್ಣನಗರದ ಪರೀಕ್ಷಾ ಕೇಂದ್ರದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಬೋರ್ಡ್ ಎಕ್ಸಾಂ ನಡೆಯುತ್ತಿದೆ. ಈ ವೇಳೆ ವಿದ್ಯಾರ್ಥಿ ಮತ್ತೊಬ್ಬ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾನೆ. ಘಟನೆ ಸಂಬಂಧ ಪೊಲೀಸರು ಐಪಿಸಿ ಸೆಕ್ಷನ್ 323 (ಹಲ್ಲೆ) ಹಾಗೂ 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸಂತ್ರಸ್ತ ಬಾಲಕನ ತಂದೆ ದೂರು ನೀಡಿದ್ದು, ದೂರಿನಲ್ಲಿ ನನ್ನ ಮಗ ಬೆಳಗ್ಗೆ 10 ಗಂಟೆಗೆ ಪರೀಕ್ಷೆ ಬರೆಯಲು ಹೋಗಿದ್ದಾನೆ. ಈ ವೇಳೆ ಆತನಿಗೆ ವಿದ್ಯಾರ್ಥಿಯೊಬ್ಬ ಬೆದರಿಕೆ ಹಾಕಿದ್ದಾನೆ ಎಂದು ತಿಳಿಸಿದ್ದಾರೆ.

    ಬಾಲಕ ಪರೀಕ್ಷೆ ಬರೆಯಲು ಎಕ್ಸಾಂ ಹಾಲ್ ಗೆ ತೆರಳಿ ತನ್ನ ಸೀಟಿನಲ್ಲಿ ಕುಳಿತಿದ್ದಾನೆ. ಈತನ ಪಕ್ಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಬಂದು ಕುಳಿತುಕೊಂಡಿದ್ದಾನೆ. ಅಲ್ಲದೆ ತನಗೆ ನಿನ್ನ ಉತ್ತರ ಪತ್ರಿಕೆ ನಕಲಿ ಮಾಡಲು ತೋರಿಸುವಂತೆ ಹೇಳಿದ್ದಾನೆ. ಆದರೆ ಇದನ್ನು ಸಂತ್ರಸ್ತ ವಿದ್ಯಾರ್ಥಿ ನಿರಾಕರಿಸಿದ್ದಾನೆ. ಇದರಿಂದ ಸಿಟ್ಟುಗೊಂಡ ವಿದ್ಯಾರ್ಥಿ ಸಂತ್ರಸ್ತ ವಿದ್ಯಾರ್ಥಿ ನಿನ್ನನ್ನು ನೋಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಘಟನೆ ಬಳಿಕ ಸಂತ್ರಸ್ತ ವಿದ್ಯಾರ್ಥಿ ಕೂಡಲೇ ಕ್ಲಾಸ್ ಸೂಪರ್ ವೈಸರ್ ಬಳಿ ನಡೆದ ಘಟನೆಯನ್ನು ವಿರಿಸಿದ್ದಾನೆ. ಪರೀಕ್ಷೆ ಮುಗಿದ ಬಳಿಕ ಸಂತ್ರಸ್ತ ವಿದ್ಯಾರ್ಥಿ ಶಾಲೆಯಿಂದ ಹೊರಬಂದು ಮಠದ ಮುಂದೆ ನಿಂತಿದ್ದನು. ಈ ವೇಳೆ ಅಲ್ಲಿಗೆ ಬಂದ ವಿದ್ಯಾರ್ಥಿ ಸಂತ್ರಸ್ತ ವಿದ್ಯಾರ್ಥಿಗೆ ಹಿಗ್ಗಾಮುಗ್ಗ ಥಳಿಸಿ, ನೂಕಿ ತನ್ನ ಪಾಕೆಟ್ ನಲ್ಲಿದ್ದ ಚಾಕು ತೆಗೆದು ಬೆದರಿಸಿದ್ದಾನೆ.

    ವಿದ್ಯಾರ್ಥಿ ಚಾಕು ತೆಗೆಯುತ್ತಿದ್ದಂತೆಯೇ ಭಯಗೊಂಡ ಸಂತ್ರಸ್ತ ವಿದ್ಯಾರ್ಥಿ ಅಲ್ಲಿಂದ ಓಡಿ ತನ್ನ ತಂದೆಗೆ ತಿಳಿಸಿದ್ದಾನೆ. ಮಗನ ಮಾತನ್ನು ಆಲಿಸಿದ ತಂದೆ ಕೂಡಲೇ ಪೊಲೀಸರ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ವಿದ್ಯಾರ್ಥಿ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಆರೋಪಿ ಅಪ್ರಾಪ್ತನಾಗಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳುವಾಗಿ ಕೃಷ್ಣನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ವಿ.ಆರ್ ಚೌಧರಿ ತಿಳಿಸಿದ್ದಾರೆ.

  • 10ರ ಮಗಳನ್ನು 37 ವರ್ಷದವನಿಗೆ 50 ಸಾವಿರಕ್ಕೆ ಮಾರಿದ ತಂದೆ

    10ರ ಮಗಳನ್ನು 37 ವರ್ಷದವನಿಗೆ 50 ಸಾವಿರಕ್ಕೆ ಮಾರಿದ ತಂದೆ

    ಅಹಮದಾಬಾದ್: ಕೆಲಸವಿಲ್ಲವೆಂದು ಜೀವನ ನಿರ್ವಹಣೆಗಾಗಿ ಪಾಪಿ ತಂದೆಯೊಬ್ಬ ತನ್ನ 10 ವರ್ಷದ ಮಗಳನ್ನೇ 50 ಸಾವಿರಕ್ಕೆ ಮಾರಿದ ಅಮಾನವೀಯ ಘಟನೆಯೊಂದು ಅಹಮದಾಬಾದ್ ನಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

    ಪ್ರಕರಣ ಸಂಬಂಧ ಗುಜರಾತಿನ ಸಾಮಾಜಿಕ ನ್ಯಾಯ ಇಲಾಖೆ ತನಿಖೆ ನಡೆಸಿದ ವೇಳೆ ತಂದೆಯ ಕೃತ್ಯ ಬಯಲಾಗಿದೆ. ಮದುವೆಯಾದ ವ್ಯಕ್ತಿಯನ್ನು ಗೋವಿಂದ್ ಥ್ಯಾಕೂರ್ ಹಾಗೂ ಏಜೆಂಟಾಗಿ ಕೆಲಸ ಮಾಡಿದ್ದಾತನನ್ನು ಜಗ್ಮಲಗ ಗಮರ್ ಎಂದು ಗುರುತಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಆರೋಪಿ ತಂದೆ, ಗೋವಿಂದ್, ಏಜೆಂಟ್ ಸೇರಿದಂತೆ ಮತ್ತಿತರ ಮೂವರ ವಿರುದ್ಧವೂ ಕ್ರಮ ಕೈಗೊಳ್ಳಲಾಗಿದೆ.

    ಬನಸ್ಕಂತ ಜಿಲ್ಲೆಯ ನಿವಾಸಿಯಾಗಿರುವ ವ್ಯಕ್ತಿ ತನ್ನ ಮಗಳನ್ನು 37 ವರ್ಷದವನಿಗೆ ಇದೇ ವರ್ಷದ ಆಗಸ್ಟ್ ತಿಂಗಳಲ್ಲಿ ಮದುವೆ ಮಾಡಿಕೊಟ್ಟಿದ್ದಾನೆ. ಮದುವೆಯ ಮೂಲಕ ತನ್ನ ಮಗಳನ್ನು 50 ಸಾವಿರಕ್ಕೆ ಮಾರಾಟ ಮಾಡಿದ್ದಾನೆ. ಸ್ಥಳೀಯ ಏಜೆಂಟ್ ಮೂಲಕ ತನ್ನ ಮಗಳನ್ನು ಮಾರಾಟ ಮಾಡಲು ಒತ್ತಡ ಹೇರಿದ್ದನು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವರದಿಗಳ ಪ್ರಕಾರ, ಮಹಿಳಾ ಕೈಂ ಬ್ರ್ಯಾಂಚ್ ನವರು ಬಾಲಕಿಯನ್ನು ಅಸರ್ವಾ ಮನೆಯಿಂದ ಮಂಗಳವಾರ ರಕ್ಷಿಸಿದ್ದಾರೆ. ಸದ್ಯ ಆಕೆಯನ್ನು ಒಧವ್ ನಲ್ಲಿರುವ ಮಹಿಳಾ ರಕ್ಷಣಾ ಕೇಂದ್ರದಲ್ಲಿ ಇರಿಸಲಾಗಿದೆ.

    ಬಾಲಕಿಯ ತಂದೆ ಬಡವನಾಗಿದ್ದು, ಜೀವನ ನಿರ್ವಹಣೆ ಮಾಡಲು ಹಣಕ್ಕಾಗಿ ಪರದಾಡುತ್ತಿದ್ದನು. ಈ ವೇಳೆ ಗ್ರಾಮದಲ್ಲಿರುವ ಏಜೆಂಟ್ ವೊಬ್ಬ ಹಣದ ಆಮಿಷ ಒಡ್ಡಿದ್ದಾನೆ. ನಿನ್ನ ಮಗಳನ್ನು ನಾನು ಹೇಳಿದ ವ್ಯಕ್ತಿಗೆ ಮದುವೆ ಮಾಡಿಕೊಟ್ಟರೆ 50 ಸಾವಿರ ಸಿಗುತ್ತದೆ ಎಂದು ಹೇಳಿದ್ದಾನೆ ಎಂಬುದಾಗಿ ಬಾಲ್ಯವಿವಾಹ ತಡೆಯ ಅಧಿಕಾರಿ ಮನೀಶ್ ಜೋಶಿ ತಿಳಿಸಿದ್ದಾರೆ.

    ಘಟನೆ ಸಂಬಂಧ ಹಡದ್ ಠಾಣೆಯ ಪೊಲೀಸರು ಬಾಲ್ಯ ವಿವಾಹ ತಡೆ ಕಾಯ್ದೆ ಅಡಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಮದುವೆಯ ವಿಡಿಯೋ ಕೂಡ ಮಾಡಲಾಗಿದ್ದು, ಈ ವಿಡಿಯೋವನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ. ವಿಡಿಯೋದಲ್ಲಿ 37 ವರ್ಷದ ಗೋವಿಂದ್ ಥ್ಯಾಕೂರ್ ಭಾರತೀಯ ಸಂಪ್ರದಾಯದಂತೆ ವಿವಾಹವಾಗಿದ್ದಾನೆ. ಪೊಲೀಸರಿಗೆ ಹಸ್ತಾಂತರವಾದ ವಿಡಿಯೋವನ್ನು ಬಾಲಕಿಯ ತಂದೆಗೆ ತೋರಿಸಿದಾಗ ಆತ ತನ್ನ ಅಪ್ರಾಪ್ತ ಮಗಳನ್ನು ಗುರುತಿಸಿದ್ದಾನೆ. ಅಲ್ಲದೆ ತಾನೇ ಮಗಳನ್ನು ಆಗಸ್ಟ್ ನಲ್ಲಿ ಗೋವಿಂದನಿಗೆ ಮದುವೆ ಮಾಡಿಕೊಟ್ಟಿರುವುದಾಗಿ ಒಪ್ಪಿಕೊಂಡಿದ್ದಾನೆ.

    ಆರೋಪಿ ಗೋವಿಂದ್ ತನ್ನ ನಿವಾಸ ಅಹಮದಾಬಾದ್ ನಲ್ಲಿರುವ ಅಸರ್ವಾದಲ್ಲಿ ಬಾಲಕಿ ಮೇಲೆ ಕಳೆದ 2 ತಿಂಗಳಿನಿಂದ ಅತ್ಯಾಚಾರವೆಸಗಿದ್ದಾನೆ. ಈ ಸಂಬಂಧ ಅತ್ಯಾಚಾರ ಆರೋಪದಡಿ ಗೋವಿಂದ್ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಲ್ಲದೆ ಬಾಲಕಿ ತಂದೆ, ಏಜೆಂಟ್ ಹಾಗೂ ಮೂವರ ವಿರುದ್ಧವೂ ಕ್ರಮಕೈಗೊಳ್ಳಲಾಗಿದೆ.

    ಇತ್ತ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅಲ್ಲದೆ ಅಗತ್ಯ ಬಿದ್ದರೆ ಕೌನ್ಸಿಲಿಂಗ್ ಕೂಡ ನಡೆಸಲಾಗುವುದು. ಬಾಲಕಿಯ ತಂದೆ ಮದ್ಯವ್ಯಸನಿಯಾಗಿದ್ದು, ಸರಿಸುಮಾರು ಒಂದು ತಿಂಗಳಿನಿಂದ ಕೆಲಸಕ್ಕೂ ಹೋಗುತ್ತಿರಲಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

  • ಬಿಸಿಲಿನಿಂದ ಪಾರಾಗಲು ಕಾರಿಗೆ ಸೆಗಣಿ ಸಾರಿದ ಮಾಲೀಕ!

    ಬಿಸಿಲಿನಿಂದ ಪಾರಾಗಲು ಕಾರಿಗೆ ಸೆಗಣಿ ಸಾರಿದ ಮಾಲೀಕ!

    ಅಹಮದಾಬಾದ್: ಈ ಬಾರಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಜನ ಬಿರು ಬಿಸಿಲಿನಿಂದ ಪಾರಾಗಲು ನಾನಾ ರೀತಿ ಸರ್ಕಸ್ ಮಾಡುತ್ತಿದ್ದಾರೆ. ಹೀಗಿಯೇ ಅಹಮ್ಮದಾಬಾದ್ ನಲ್ಲಿ ಕಾರು ಮಾಲೀಕರೊಬ್ಬರು ತನ್ನ ಕಾರಿಗೆ ಸೆಗಣಿ ಸಾರುವ ಮೂಲಕ ಕೂಲ್ ಕೂಲ್ ಆಗಿರಲು ಹೊಸ ಐಡಿಯಾ ಹುಡುಕಿದ್ದಾರೆ.

    ಈ ವಿಚಾರವನ್ನು ರೂಪೇಶ್ ಗೌರಂಗಾ ದಾಸ್ ಎಂಬವರು ತಮ್ಮ ಫೇಸ್‍ಬುಕ್ ನಲ್ಲಿ ಫೋಟೋ ಹಾಕಿ, ಇದೊಂದು ಒಳ್ಳೆಯ ಉಪಾಯವಾಗಿದ್ದು, ಇಂತಹದ್ದನ್ನು ನಾನು ಎಲ್ಲೂ ಕಂಡಿಲ್ಲ, ಕಾಣಲೂ ಸಾಧ್ಯವಿಲ್ಲ ಎಂದು ಬರೆದುಕೊಂಡಿದ್ದಾರೆ.

    ಅಲ್ಲದೆ ಈ ಫೋಟೋವನ್ನು ನಾನು ಅಹಮ್ಮದಾಬಾದ್‍ನಲ್ಲಿ ತೆಗೆದಿದ್ದೇನೆ. ಅಲ್ಲಿ 45 ಡಿಗ್ರಿ ಸೆಲ್ಸಿಯಸ್ ತಾಪಮಾನವಿದ್ದು, ಹೀಗಾಗಿ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಮಾಲೀಕ ಸೆಗಣಿಯನ್ನು ತನ್ನ ಕಾರಿಗೆ ಸಾರಿದ್ದಾರೆ. ಈ ಮೂಲಕ ಕೂಲ್ ಆಗಿರಲು ಪ್ರಯತ್ನಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಗೋಡೆಗೆ ಸೆಗಣಿ ಪೇಂಟ್ – ವಿಶಿಷ್ಠ ಯೋಜನೆಗೆ ಕೈ ಹಾಕಿದ್ರು ಪುತ್ತೂರಿನ ಶಶಿಶೇಖರ ಭಟ್

    ಕೇಂದ್ರ ಮುಂಬೈ ನೊಂದಾಯಿತ ಕಾರು ಇದಾಗಿದ್ದು, ರಾಮ್‍ನಿಕ್ ಲಾಲ್ ಶಾ ಕಾರು ಮಾಲೀಕ ಎಂಬುದಾಗಿ ತಿಳಿದುಬಂದಿದೆ. ರೂಪೇಶ್ ಕಾರು ಫೋಟೋ ಹಾಕುತ್ತಿದ್ದಂತೆಯೇ ಜನ ಹಲವು ಪ್ರಶ್ನೆಗಳು ಮುಂದಿಟ್ಟಿದ್ದಾರೆ. ಅಲ್ಲದೆ ಕೆಲವರು ಟೀಕಿಸಿ ಅಪಹಾಸ್ಯವನ್ನೂ ಮಾಡಿದ್ದಾರೆ.

    ಗ್ರಾಮೀಣ ಭಾರತದಲ್ಲಿ ಮನೆಯಂಗಳಕ್ಕೆ ಈಗಲೂ ಸಗಣಿ ಸಾರುತ್ತಿದ್ದಾರೆ. ಈ ಮೂಲಕ ಮನೆ ಹಾಗೂ ಸುತ್ತಲುತ್ತಲು ಸ್ವಚ್ಛಗೊಳಿಸುವ ಪರಿಪಾಠವಿದೆ. ಇದರಿಂದ ಮನೆ ತಂಪಾಗಿರುತ್ತದೆ ಎಂಬುದನ್ನು ಗ್ರಾಮೀಣ ಜನರು ಅನುಭವದಿಂದ ಕಂಡುಕೊಂಡಿದ್ದಾರೆ. ಇದನ್ನೇ ಗಮನದಲ್ಲಿಟ್ಟುಕೊಂಡು ಕಾರು ಮಾಲೀಕ ತಮ್ಮ ಕಾರಿಗೂ ಸಗಣಿ ಮೆತ್ತಿಸಿಕೊಂಡಿದ್ದಾರೆ. ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

  • ಪತ್ನಿಯ ಕೊಲೆ ಮಾಡಿ ಪ್ರಿಯತಮೆಗೆ ‘ವ್ಯಾಲೆಂಟೈನ್ ಗಿಫ್ಟ್’ – 15 ವರ್ಷದ ಬಳಿಕ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಕಿರಾತಕ

    ಪತ್ನಿಯ ಕೊಲೆ ಮಾಡಿ ಪ್ರಿಯತಮೆಗೆ ‘ವ್ಯಾಲೆಂಟೈನ್ ಗಿಫ್ಟ್’ – 15 ವರ್ಷದ ಬಳಿಕ ಬೆಂಗಳೂರಿನಲ್ಲಿ ಸೆರೆ ಸಿಕ್ಕ ಕಿರಾತಕ

    – ಊನವಾಗಿದ್ದ ಕೈಬೆರಳು ಸಾಕ್ಷ್ಯ ಹೇಳಿತ್ತು
    – ಗಿಫ್ಟ್ ಪಡೆದಾಕೆ ಈತನಿಗೆ ಕೈಕೊಟ್ಟಳು

    ಬೆಂಗಳೂರು/ಅಹಮದಾಬಾದ್: ಪ್ರಿಯತಮೆಯನ್ನು ಸಂಗಾತಿಯಾಗಿಸಲು ಪತ್ನಿಯನ್ನೇ ಕೊಂದಿದ್ದ ಕಿರಾತಕ ಪತಿರಾಯನೊಬ್ಬ 15 ವರ್ಷದ ಬಳಿಕ ಬೆಂಗಳೂರಿನಲ್ಲಿ ಅರೆಸ್ಟ್ ಆಗಿದ್ದಾನೆ. ಅಹಮದಾಬಾದ್ ಹಾಗೂ ಬೆಂಗಳೂರು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಸಿಕ್ಕಿಹಾಕಿಕೊಂಡಿದ್ದು, ಈಗ ಕಂಬಿ ಎಣಿಸುತ್ತಿದ್ದಾನೆ. ಬೆಂಗಳೂರಿನ ಪ್ರಮುಖ ಐಟಿ ಕಂಪೆನಿಯೊಂದರಲ್ಲಿ ತನ್ನ ಗೆಳೆಯನ ಹೆಸರಿನಲ್ಲಿ ಕೆಲಸ ಗಿಟ್ಟಿಸಿಕೊಂಡು ಸೀನಿಯರ್ ಮ್ಯಾನೇಜರ್ ಆಗಿದ್ದ ತರುಣ್ ಜಿನರಾಜ್ (42) ಎಂಬಾತನನ್ನು ಅಹಮದಾಬಾದ್ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.

    ಕೇರಳದ ತ್ರಿಶೂರ್ ಜಿಲ್ಲೆಯ ವಿಯ್ಯೂರ್ ನಿವಾಸಿ ಒ.ಕೆ.ಕೃಷ್ಣನ್ ಹಾಗೂ ಯಾಮಿನಿ ದಂಪತಿಯ ಪುತ್ರಿ ಹಾಗೂ ಬ್ಯಾಂಕ್ ಉದ್ಯೋಗಿಯಾಗಿದ್ದ ಸಜಿನಿ (26) 2003ರ ಫೆಬ್ರವರಿ 14ರಂದು ಅಹಮದಾಬಾದ್‍ನಲ್ಲಿರುವ ಮನೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅಂದಿಗೆ ಸಜಿನಿ ಹಾಗೂ ತರುಣ್ ಮದುವೆಯಾಗಿ ಕೇವಲ 4 ತಿಂಗಳಷ್ಟೇ ಆಗಿತ್ತು. ತನ್ನ ಸ್ವಂತ ಪತ್ನಿಯನ್ನು ದುಪಟ್ಟಾ ಬಳಸಿ ಕತ್ತು ಹಿಸುಕಿ ಸಾಯಿಸಿ ಎಲ್ಲಾ ಸಾಕ್ಷ್ಯಗಳನ್ನು ನಾಶ ಮಾಡಿ ನಾಟಕವಾಡಿದ್ದ. ಆದರೆ ಐಪಿಎಸ್ ಅಧಿಕಾರಿ ದೀಪನ್ ಭದ್ರ ನೇತೃತ್ವದಲ್ಲಿ ನಡೆದ ತನಿಖೆಯಲ್ಲಿ 15 ವರ್ಷಗಳ ಬಳಿಕ ಸತ್ಯ ಬೆಳಕಿಗೆ ಬಂದಿದೆ.

    ಲವ್ವರ್‍ಗೆ ವ್ಯಾಲೆಂಟೈನ್ ಗಿಫ್ಟ್!
    ಬಾಸ್ಕೆಟ್ ಬಾಲ್ ತರಬೇತಿದಾರನಾಗಿದ್ದ ತರುಣ್ ಮತ್ತೊಬ್ಬ ಯುವತಿಯನ್ನು ಪ್ರೀತಿಸುತ್ತಿದ್ದ. ಆಕೆಗೆ ವ್ಯಾಲೆಂಟೈನ್ ಗಿಫ್ಟ್ ರೂಪದಲ್ಲಿ ಸಜಿನಿಯನ್ನು ಕೊಂದಿದ್ದ ತರುಣ್, 2003ರ ಫೆಬ್ರವರಿ 14ರಂದು ತನ್ನ ಪ್ರಿಯತಮೆಗೆ ಫೋನ್ ಮಾಡಿ ‘ನಿನಗೊಂದು ಗಿಫ್ಟ್’ ಇದೆ ಎಂದು ಹೇಳಿ ಪತ್ನಿಯನ್ನು ಕೊಲೆ ಮಾಡಿದ್ದನ್ನು ಹೇಳಿದ್ದ. ಆದರೆ ತಕ್ಷಣ ಎಚ್ಚೆತ್ತ ಆಕೆ ಕೊಲೆಗಾರನ ಜೊತೆ ನಾನು ಜೀವನ ಮಾಡಲ್ಲ ಎಂದು ಹೇಳಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಪತ್ನಿಯನ್ನು ಕೊಲೆ ಮಾಡಿದ ಪ್ರಕರಣವನ್ನು ಮುಚ್ಚಿಹಾಕಲು ಆತ ಮನೆ ದರೋಡೆ ಮಾಡಲು ಬಂದವರು ಕೃತ್ಯವೆಸಗಿದ್ದಾರೆ ಎಂದು ಬಿಂಬಿಸಲು ಮನೆಯಲ್ಲಿದ್ದ ವಸ್ತುಗಳನ್ನೆಲ್ಲಾ ಚೆಲ್ಲಾಪಿಲ್ಲಿಯಾಗಿ ಎಸೆದಿದ್ದ.

    ಇದಾದ ಬಳಿಕ ಈತ ತನ್ನ ಸೋದರ ಅರುಣ್ ಮನೆಗೆ ಬಂದು ಎಲ್ಲರನ್ನೂ ರಾತ್ರಿ ಊಟಕ್ಕೆ ಕರೆದೊಯ್ದಿದ್ದ. ಆದರೆ ಊಟ ಮುಗಿಸಿ ಮನೆಗೆ ವಾಪಸ್ ಹೋದ ತರುಣ್, ನಾನು ಮನೆಗೆ ಬಂದಾಗ ಸಜಿನಿ ಸಾವನ್ನಪ್ಪಿದ್ದಳು ಎಂದು ಸಂಬಂಧಿಕರಿಗೆ ಫೋನ್ ಮಾಡಿ ಕತೆ ಹೇಳಿದ್ದ.

    ತರುಣ್ ತಪ್ಪಿಸಿಕೊಂಡಿದ್ದೇಗೆ..?
    ಪತ್ನಿ ಸಾವನ್ನಪ್ಪಿದ ಬಳಿಕ ಖತರ್ನಾಕ್ ನಾಟಕ ಮಾಡಿದ ತರುಣ್ ತನ್ನ ಮನೆಯಲ್ಲಿ ಪ್ರಜ್ಞಾಹೀನನಾದಂತೆ ವರ್ತಿಸಿದ್ದಾನೆ. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸುತ್ತಾರೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತರುಣ್‍ಗೆ ಪೊಲೀಸರು ಫೋನ್ ಮಾಡಿ ಡಿಸ್ಚಾರ್ಜ್ ಆದ ಬಳಿಕ ವಿಚಾರಣೆಗೆ ಹಾಜರಾಗುವಂತೆ ಹೇಳಿದ್ದಾರೆ. ಯಾವಾಗ ತಾನು ಪೊಲೀಸರ ಕೈಯಲ್ಲಿ ಸಿಕ್ಕಿಬೀಳುತ್ತೇನೆ ಎಂದು ಖಚಿತವಾಯಿತೋ ಮೀಸೆ ಹಾಗೂ ತಲೆಕೂದಲು ಕಟ್ ಮಾಡಿಸಿ ನೇರವಾಗಿ ಸೂರತ್‍ಗೆ ಆಗಮಿಸುತ್ತಾನೆ. ಅಲ್ಲಿಂದ ತನ್ನ ಗೆಳೆಯ ಹಾಗೂ ಸೋದರನಿಗೆ ಫೋನ್ ಮಾಡಿದ ತರುಣ್ ನಾನು ದೂರದೂರಿಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾನೆ. ಬಳಿಕ ನೇರವಾಗಿ ಬೆಂಗಳೂರಿಗೆ ಆಗಮಿಸುತ್ತಾನೆ. ಬೆಂಗಳೂರಿನಲ್ಲಿದ್ದ ಆತ ಇಲ್ಲಿಂದಲೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ದೆಹಲಿಯಲ್ಲಿ ಉದ್ಯೋಗ ಪಡೆಯುತ್ತಾನೆ. ಐದು ವರ್ಷದ ಬಳಿಕ ದೆಹಲಿಯ ಅದೇ ಕಂಪೆನಿಯ ಪುಣೆ ಶಾಖೆಗೆ ವರ್ಗವಾಗುತ್ತಾನೆ. ಅಲ್ಲಿ 2009ರಲ್ಲಿ ಸಹೋದ್ಯೋಗಿ ನಿಶಾ ಜೊತೆ ಲವ್ ಆಗುತ್ತೆ. ಅದೇ ವರ್ಷ ಇಬ್ಬರೂ ಮದುವೆಯಾಗುತ್ತಾರೆ.

    ಅಲ್ಲಿಂದ ಮುಂದೆ ಆತ ಬೆಂಗಳೂರಿನ ಐಟಿ ಕಂಪೆನಿಗೆ ಆಗಮಿಸುತ್ತಾನೆ. ಈ ಕಂಪೆನಿಯಲ್ಲಿ ಸೀನಿಯರ್ ಮ್ಯಾನೇಜರ್ ಹುದ್ದೆಯಲ್ಲಿದ್ದ ಈತ ಪ್ರತಿವರ್ಷ 22 ಲಕ್ಷ ವೇತನ ಪಡೆಯುತ್ತಿದ್ದ. ಯಲಹಂಕದಲ್ಲಿ ಫ್ಲ್ಯಾಟೊಂದರಲ್ಲಿ ವಾಸವಾಗಿದ್ದ ತರುಣ್-ನಿಶಾ ದಂಪತಿಗೆ 7 ಹಾಗೂ 6 ವಯಸ್ಸಿನ ಇಬ್ಬರು ಮಕ್ಕಳಿದ್ದಾರೆ.

    ತರುಣ್ ಪ್ರವೀಣ್ ಆದ ಕತೆ!
    ಕಾಲೇಜಿನಲ್ಲಿ ಜ್ಯೂನಿಯರ್ ಆಗಿದ್ದ ಪ್ರವೀಣ್ ಭಾಟ್ಲೆ ತರುಣ್ ಗೆಳೆಯನಾಗಿದ್ದ. ನಿನಗೆ ಕೆಲಸ ಕೊಡಿಸ್ತೀನಿ ಎಂದು ಪ್ರವೀಣನ ಎಲ್ಲಾ ಅಸಲಿ ಮಾರ್ಕ್ಸ್ ಕಾರ್ಡ್ ಮುಂತಾದ ದಾಖಲೆಗಳನ್ನು ತೆಗೆದುಕೊಂಡಿದ್ದ ತರುಣ್ ಕೊನೆಗೆ ತಾನೇ ಪ್ರವೀಣ್ ಭಾಟ್ಲೆ ಆಗಿ ಕೆಲಸಕ್ಕೆ ಸೇರಿದ್ದ. ಈತನ ಈ ವಂಚನೆ ಯಾವ ಮಟ್ಟದಲ್ಲಿತ್ತು ಎಂದರೆ ತನ್ನ ಪತ್ನಿ ನಿಶಾಗೂ ಈತ ನಿಜ ಹೇಳಿರಲಿಲ್ಲ. ಕಾರು ಅಪಘಾತದಲ್ಲಿ ನಾನು ಅಪ್ಪ-ಅಮ್ಮ, ಸೋದರನನ್ನು ಕಳೆದುಕೊಂಡೆ ಎಂದು ಸುಳ್ಳು ಹೇಳಿ ಆಕೆಯನ್ನು ಮದುವೆಯಾಗಿದ್ದ. ಇದಾದ ಕೆಲ ಸಮಯದ ಬಳಿಕ ಧ್ಯಾನ ಕೇಂದ್ರವೊಂದಕ್ಕೆ ಅಪ್ಪ-ಅಮ್ಮನನ್ನು ಕರೆಸಿ ಪತ್ನಿ ಜೊತೆ ಅವರನ್ನು ಭೇಟಿಯಾಗಲು ಹೋಗಿದ್ದ. ಆದರೆ ಮಗನನ್ನು ಹಲವು ವರ್ಷಗಳ ಬಳಿಕ ನೋಡಿದ ಅಪ್ಪನಿಗೆ ಹೃದಯಾಘಾತವಾಗಿ ಅಲ್ಲೇ ಸಾವನ್ನಪ್ಪುತ್ತಾರೆ. ಜನ ಸೇರುತ್ತಿರುವುದು ಖಚಿತವಾಗುತ್ತಿದ್ದಂತೆಯೇ ಅಪ್ಪನ ಮೃತದೇಹವನ್ನು ಅಮ್ಮನ ಬಳಿ ಬಿಟ್ಟು ಪತ್ನಿ ಜೊತೆ ಅಲ್ಲಿಂದ ಎಸ್ಕೇಪ್ ಆಗಿದ್ದ ತರುಣ್ ಅಲಿಯಾಸ್ ಪ್ರವೀಣ್. ಆದರೆ ಈ ಎಲ್ಲದರ ನಡುವೆ ಮಗನನ್ನು ಸಂಪರ್ಕಿಸಲೆಂದೇ ತರುಣ್ ಅಮ್ಮ ಒಂದು ಫೋನ್ ಇಟ್ಟುಕೊಂಡಿದ್ದರು. ಆ ಒಂದು ಫೋನ್ ಮುಂದೆ ತರುಣ್‍ಗೆ ಉರುಳಾಗಿದ್ದು ಮಾತ್ರ ದುರಂತ.

    9 ವರ್ಷ ಬಳಿಕ ಕೇಸ್ ರಿಓಪನ್!
    ಪುತ್ರಿ ಸಾವನ್ನಪಿದ ದುಃಖದಲ್ಲಿದ್ದ ಸಜಿನಿ ತಂದೆ ಕೃಷ್ಣ ಹಾಗೂ ಅವರ ಸಹೋದರಿಯ ಪತಿ ಪಿ.ಕೆ.ಶಶಿಧರ್ ನಿರಂತರವಾಗಿ ಈ ಪ್ರಕರಣದ ಹಿಂದೆ ಬಿದ್ದಿದ್ದರು. ಹೀಗಾಗಿ ಮುಚ್ಚಿಹೋಗಿದ್ದ ಸಜಿನಿ ಕೊಲೆ ಪ್ರಕರಣ 2012ರಲ್ಲಿ ರಿಓಪನ್ ಆಯ್ತು. ಅಲ್ಲದೇ ಮಲಯಾಳಿಯೇ ಆಗಿದ್ದ ಐಪಿಎಸ್ ಅಧಿಕಾರಿ ದೀಪನ್ ಪ್ರಭುವಿಗೆ ತನಿಖೆಯ ಜವಾಬ್ದಾರಿಯನ್ನು ವಹಿಸಲಾಗಿತ್ತು. ಪ್ರತಿ ವರ್ಷ ಫೆಬ್ರವರಿ 14ರ ವ್ಯಾಲೆಂಟೈನ್ ಡೇಯಂದು ಸಜಿನಿ ಫೋಟೋ ಹಾಕಿ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ಪೋಷಕರು ಆಕೆಯನ್ನು ಸ್ಮರಿಸುತ್ತಿದ್ದರು.

    ಸುಳ್ಳಾಗಲಿಲ್ಲ ಲೆಕ್ಕಾಚಾರ!
    ಕೇಸ್ ವಿಚಾರಣೆ ಪುನಾರಂಭಿಸಿದ ಪೊಲೀಸರು ತರುಣ್ ತಾಯಿ ಅನ್ನಮ್ಮ ಅವರಿಗೆ ಬರುತ್ತಿದ್ದ ಫೋನ್ ಕರೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದರು. ಅನ್ನಮ್ಮ ಫೋನ್ ಗೆ ಬರುತ್ತಿದ್ದ ಎಲ್ಲಾ ಕರೆಗಳನ್ನು 6 ವರ್ಷಗಳ ಕಾಲ ಪೊಲೀಸರು ಪರಿಶೀಲನೆ ಮಾಡುತ್ತಲೇ ಇದ್ದರು. ಅಹಮದಾಬಾದ್ ನ ಬೋಪಾಲದಲ್ಲಿದ್ದ ಅನ್ನಮ್ಮ ಹಾಗೂ ಸೋದರ ಅರುಣ್ ನಿವಾಸದ ಮೇಲೆ ಕಣ್ಣಿಟ್ಟಿದ್ದರು. ತನಿಖೆಯ ತೀವ್ರತೆ ಎಷ್ಟಿತ್ತೆಂದರೆ ಇವರಿದ್ದ ಇದೇ ಫ್ಲ್ಯಾಟ್ ನಲ್ಲಿ ಪೊಲೀಸರು ಗಸ್ತಿನಲ್ಲಿ ಮೂರು ವರ್ಷ ವಾಸವಾಗಿದ್ದರು. ಈ ವೇಳೆ ಪೊಲೀಸರಿಗೆ ತರುಣ್ ದಕ್ಷಿಣ ಭಾರತದಲ್ಲಿದ್ದಾನೆ ಎಂಬ ವಿಚಾರ ಖಚಿತವಾಗಿತ್ತು. ಹೀಗಾಗಿ ಪೊಲೀಸರು ಅನ್ನಮ್ಮ ಅವರ ಪ್ರಯಾಣದ ಹಿಂದೆ ಬಿದ್ದಿದ್ದರು.

    ಬೆಂಗಳೂರಿನಲ್ಲಿ ಇವರು ಹೋಗುತ್ತಿದ್ದ ಮನೆಯಲ್ಲಿದ್ದದ್ದು ನಿಶಾ. ಆಕೆಗೆ ಇಬ್ಬರು ಮಕ್ಕಳಿದ್ದಾರೆ. ಪತಿಯ ಹೆಸರು ಪ್ರವೀಣ್ ಎಂದು ಗೊತ್ತಾಗಿತ್ತು. ಆದರೆ ಇದೇ ಪ್ರವೀಣ್ ತರುಣ್ ಎನ್ನುವುದು ಮಾತ್ರ ಅಷ್ಟು ಸುಲಭದಲ್ಲಿ ಗೊತ್ತಾಗಲಿಲ್ಲ. ನಿಶಾ ನಮ್ಮ ಸಂಬಂಧಿಯ ಮಗಳು ಎಂದಷ್ಟೇ ಅನ್ನಮ್ಮ ಪೊಲೀಸರ ಬಳಿ ಹೇಳಿದ್ದರು. ಹೀಗಿರುವಾಗಲೇ ಒಂದು ದಿನ ಅನ್ನಮ್ಮ ಮೊಬೈಲಿಗೆ ಬೆಂಗಳೂರಿನ ಐಟಿ ಕಂಪೆನಿಯೊಂದರಿಂದ ಕಾಲ್ ಬಂದಿತ್ತು. ಕರೆ ಮಾಡಿದ್ದು ಪ್ರವೀಣ್ ಎಂಬುದನ್ನೂ ಪೊಲೀಸರು ಪತ್ತೆ ಹಚ್ಚಿದ್ದರು. ಈ ಮೂಲಕ ಪೊಲೀಸರಿಗೆ ಪ್ರವೀಣ್ ತರುಣ್ ಎಂಬ ಸಂಶಯ ಬಲವಾಯಿತು. ತರುಣ್ ಫೋಟೋವನ್ನು ಆತನ ಸಹೋದ್ಯೋಗಿಗಳು ದೃಢೀಕರಿಸಿದ್ದರು. ಆದರೆ ನಿಜವಾದ ಪ್ರವೀಣ್ ಭಾಟ್ಲೆ ಉತ್ತರ ಭಾರತದಲ್ಲಿ ಅಧ್ಯಾಪಕನಾಗಿ ಕೆಲಸ ಮಾಡುತ್ತಿದ್ದಾನೆಂದೂ ಗೊತ್ತಾಯಿತು.

    ಉಂಗುರ ಬೆರಳು ಸತ್ಯ ಬಿಚ್ಚಿಟ್ಟಿತು!
    ತರುಣ್ ಬಲೆಗೆ ಬಿದ್ದ ವಿಚಾರವನ್ನು ಪೊಲೀಸ್ ಅಧಿಕಾರಿ ದೀಪನ್ ಪ್ರಭು ಹೇಳಿದ್ದು ಹೀಗೆ: ‘ಪಿ.ಟಿ. ಮೇಷ್ಟ್ರಾಗಿದ್ದ ವೇಳೆ ತರುಣ್ ಬಲಗೈ ಉಂಗುರ ಬೆರಳಿಗೆ ಗಾಯವಾಗಿತ್ತು. ಇದರಿಂದ ಆತನ ಬೆರಳು ಊನವಾಗಿತ್ತು. ಇದೇ ಬೆರಳು ತರುಣ್ ಬಗೆಗಿನ ಸತ್ಯ ಬಿಚ್ಚಿಡಬೇಕಿತ್ತು. ಇನ್ಸ್‍ಪೆಕ್ಟರ್ ಕಿರಣ್ ಚೌಧರಿ ಮಫ್ತಿಯಲ್ಲಿ ತರುಣ್ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಐಟಿ ಕಂಪೆನಿಯ ಕಚೇರಿಗೆ ತೆರಳಿ ಅವರನ್ನು ಹೊರಗೆ ಕರೆಸಿದರು. ತರುಣ್ ಬರ್ತಿದ್ದಂಗೆ ಹ್ಯಾಂಡ್ ಶೇಕ್ ಕೊಟ್ರು. ಈ ವೇಳೆ ಆತನ ಕೈಬೆರಳು ಊನವಾಗಿರೋದು ಗೊತ್ತಾಯಿತು. ತಕ್ಷಣ ತರುಣ್ ಅಲ್ವಾ ಎಂದು ಚೌಧರಿ ಪ್ರಶ್ನಿಸಿದರು. ಒಂದು ಕ್ಷಣ ಬೆಚ್ಚಿಬಿದ್ದಂತಾದ ತರುಣ್ ಸಾವರಿಸಿಕೊಂಡು ಹೌದು ಎಂದು ಉತ್ತರಿಸಿದ್ದ. ಹಾಗಾದ್ರೆ ಬನ್ನಿ ಹೋಗೋಣ ಎಂದು ಹೇಳಿದ್ರು ಚೌಧರಿ, ಏನೂ ಮಾತಾಡದೇ ತರುಣ್ ಜೊತೆಗೆ ಬಂದ. ಹೀಗೆ 15 ವರ್ಷಗಳ ಬಳಿಕ ಆತ ಅರೆಸ್ಟ್ ಆಗಿದ್ದ ಎಂದು ಮಾತು ಮುಗಿಸಿದರು ದೀಪನ್ ಪ್ರಭು.

    ಇಷ್ಟೆಲ್ಲಾ ಆದ ಬಳಿಕ ಎಲ್ಲಾ ಸತ್ಯವನ್ನು ಬಾಯ್ಬಿಟ್ಟ ತರುಣ್ ಪೊಲೀಸರಿಗೆ ಕೇಳಿದ್ದು ಒಂದೇ ಪ್ರಶ್ನೆ. ‘ಎಲ್ಲಾ ಸರಿ ಸಾರ್, ನಾನಿಲ್ಲಿದ್ದೇನೆ ಎಂದು ನಿಮಗೆ ಹೇಳಿಕೊಟ್ಟಿದ್ದು ಯಾರು…?’

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಐಷರಾಮಿ ಬಸ್ಸಿಗೆ ಹಿಂದಿನಿಂದ ಕಂಟೈನರ್ ಡಿಕ್ಕಿ- ಇಬ್ಬರ ದುರ್ಮರಣ, ನಾಲ್ವರಿಗೆ ಗಾಯ

    ಐಷರಾಮಿ ಬಸ್ಸಿಗೆ ಹಿಂದಿನಿಂದ ಕಂಟೈನರ್ ಡಿಕ್ಕಿ- ಇಬ್ಬರ ದುರ್ಮರಣ, ನಾಲ್ವರಿಗೆ ಗಾಯ

    ಮುಂಬೈ: ಕಂಟೈನರ್ ಮತ್ತು ಲಕ್ಸುರಿ ಬಸ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ನಡೆದಿದೆ.

    ಮುಂಬೈ-ಅಹಮಾದಾಬಾದ್ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಧಾನು ಎಂಬ ಪ್ರದೇಶದಲ್ಲಿ ಈ ಘಟನೆ ಬೆಳಗ್ಗೆ 7.30ರ ಸುಮಾರಿಗೆ ನಡೆದಿದೆ.

    ಹೆದ್ದಾರಿಯ ಮೊದಲ ಓಣಿಯಲ್ಲಿ ಬಸ್ ಸಂಚರಿಸುತ್ತಿತ್ತು. ಈ ವೇಳೆ ಬಸ್ಸಿನ ಚಕ್ರದಲ್ಲಿ ವ್ಯತ್ಯಾಸವಾಗುತ್ತಿರುವುದು ಚಾಲಕನ ಗಮನಕ್ಕೆ ಬಂದಿದೆ. ಹೀಗಾಗಿ ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾನೆ. ಈ ವೇಳೆ ವೇಗವಾಗಿ ಬರುತ್ತಿದ್ದ ಕಂಟೈನರ್ ಬಸ್ ಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ ಅಂತ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

    ಘಟನೆಯಿಂದಾಗಿ ಬಸ್ ಕ್ಲೀನರ್ ಹಾಗೂ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು ಕಂಟೈನರ್ ನಲ್ಲಿದ್ದವರು ಸೇರಿ ಒಟ್ಟು ನಾಲ್ವರಿಗೆ ಗಾಯಗಳಾಗಿದ್ದು, ಇದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಅಂತ ವರದಿಯಾಗಿದೆ.

    ಘಟನೆಯಿಂದ ಕೆಲಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡಿದ್ದಾರೆ. ಇನ್ನು ಮೃತರ ಗುರುತು ಪತ್ತೆಯಾಗಿಲ್ಲ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂಬುದಾಗಿ ವರದಿಯಾಗಿದೆ.

  • ಕುದುರೆಯೇರಿ ಸವಾರಿ ಹೊರಟಿದ್ದ ದಲಿತ ಯುವಕನ ಬರ್ಬರ ಹತ್ಯೆ!

    ಕುದುರೆಯೇರಿ ಸವಾರಿ ಹೊರಟಿದ್ದ ದಲಿತ ಯುವಕನ ಬರ್ಬರ ಹತ್ಯೆ!

    ಅಹಮದಾಬಾದ್: ಕುದುರೆ ಏರಿ ಸವಾರಿ ಹೊರಟಿದ್ದ ದಲಿತ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆಗೈದ ಆಘತಕಾರಿ ಘಟನೆಯೊಂದು ಗುಜರಾತಿನ ಭಾವ್ ನಗರ್ ಜಿಲ್ಲೆಯಲ್ಲಿ ನಡೆದಿದೆ.

    21 ವರ್ಷದ ಪ್ರದೀಪ್ ರಾಥೋಡ್ ಮೃತ ದುರ್ದೈವಿ ಯುವಕ. ಘಟನೆಗೆ ಸಂಬಂಧಿಸಿದಂತೆ ಗುರುವಾರ ಸಂಜೆ ಭಾವ್ ನಗರ್ ಜಿಲ್ಲೆಯ ಉಮ್ರಾಲ ತಾಲೂಕಿನ ಟಿಂಬಿ ಗ್ರಾಮದಲ್ಲಿ ಮೂವರು ಶಂಕಿತರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಎಎಂ ಸೈಯದ್ ತಿಳಿಸಿದ್ದಾರೆ.

    ಪ್ರಕರಣ ಸಂಬಂಧಿಸಿದಂತೆ ಈಗಾಗಲೇ ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ. ಅಲ್ಲದೇ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಪ್ರದೀಪ್ ಶವಪತ್ತೆಯಾದ ಪ್ರದೇಶದಲ್ಲಿ ಸಾವಿಗೂ ಮುನ್ನ ಕುದುರೆ ಮೇಲೆ ಕುಳಿತು ಸವಾರಿ ನಡೆಸುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಘಟನೆ ಸಂಬಂಧ ಹಳೆ ದ್ವೇಷ ಹಾಗೂ ಪ್ರೀತಿ-ಪ್ರೇಮ ಹೀಗೆ ವಿವಿಧ ರೀತಿಯಲ್ಲಿ ತನಿಖೆ ನಡೆಸಲಾಗುವುದು ಅಂತ ಅವರು ತಿಳಿಸಿದ್ದಾರೆ.

    ಮಗನನ್ನು ಕಳೆದುಕೊಂಡ ತಂದೆ ಕುಲ್ ಭಾಯ್ ರಾಥೋಡ್ ಉಮ್ರಾಲ್ ಪೊಲೀಸರಿಗೆ ದೂರು ನೀಡಿದ್ದು, ನನ್ನ ಮಗ ಇತ್ತೀಚೆಗೆ ಕುದುರೆಯೊಂದನ್ನು ಖರೀದಿಸಿದ್ದನು. ಆ ಬಳಿಕ ಕೆಲ ಮೇಲ್ವರ್ಗದ ಜನ ಮಗನ ವಿರುದ್ಧ ಸೇಡು ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದರು. ಅಲ್ಲದೇ ಕುದುರೆ ಮಾರದಿದ್ದರೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

    ಗುರುವಾರ ಮಗ ತನ್ನ ಕುದುರೆಯೊಂದಿಗೆ ಫಾರ್ಮ್ ಹೌಸ್ ಹೋಗಿದ್ದನು. ಬಳಿಕ ಸಂಜೆ ಅಲ್ಲಿಂದ ಕರೆ ಮಾಡಿ ರಾತ್ರಿಯ ಊಟಕ್ಕೆ ಮನೆಗೆ ಬರುತ್ತೇನೆ ಅಂತ ಹೇಳಿದ್ದನು. ಆದ್ರೆ ರಾತ್ರಿಯಾದ್ರೂ ಆತ ಮನೆಗೆ ಬರಲಿಲ್ಲ. ಹೀಗಾಗಿ ನಾವು ಆತನ ಹುಡುಕಾಟ ಶುರುಮಾಡಿದೆವು. ಈ ವೇಳೆ ಆತ ಫಾರ್ಮ್ ಹೌಸ್ ಗೆ ಹೋಗೋ ಮಾರ್ಗದ ಬದಿಯಲ್ಲೆ ಕೊಲೆಯಾಗಿ ಹೋಗಿದ್ದನು. ಕುದುರೆಯೊಂದಿಗೆ ತನ್ನ ಮನೆಗೆ ವಾಪಾಸ್ಸಾಗುತ್ತಿದ್ದ ಸಂದರ್ಭದಲ್ಲಿ ಕೆಲ ರಜಪೂತ ವ್ಯಕ್ತಿಗಳು ಹರಿತವಾದ ಆಯುಧಗಳನ್ನು ಬಳಸಿ ನನ್ನ ಮಗನನ್ನು ಕೊಲೆ ಮಾಡಿದ್ದಾರೆ ಅಂತ ಪ್ರದೀಪ್ ತಂದೆ ತಮ್ಮ ದುಃಖ ತೋಡಿಕೊಂಡಿದ್ದಾರೆ.

    ಘಟನೆಗೆ ಕಾರಣವಾದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವೆಂದಲ್ಲಿ ಮನಗ ಶವಸಂಸ್ಕಾರ ಮಾಡುವುದಿಲ್ಲ ಎಂದು ಪ್ರದೀಪ್ ಪೋಷಕರು ಹಾಗೂ ಕುಟುಂಬಸ್ಥರು ಆಗ್ರಹಿಸಿದ್ದಾರೆ.

  • ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಮೊದಲ ಪ್ರಯತ್ನದಲ್ಲಿ ಬಿಜೆಪಿಗೆ ಸೋಲುಣಿಸಿದ ಅಲ್ಪೇಶ್ ಠಾಕೂರ್, ಜಿಗ್ನೇಶ್ ಮೇವಾನಿ

    ಗಾಂಧಿನಗರ: ಗುಜರಾತ್ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧಿಸಿದ್ದ ಯುವ ನಾಯಕರಾದ ಅಲ್ಪೇಶ್ ಠಾಕೂರ್ ಮತ್ತು ಜಿಗ್ನೇಶ್ ಮೇವಾನಿ ಜಯಗಳಿಸಿದ್ದಾರೆ.

    ರಾಧನ್ ಪುರ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕಾಂಗ್ರೆಸ್‍ನ ಅಲ್ಪೇಶ್ ಠಾಕೂರ್ ಮತ್ತು ವಡಗಾಮ್ ಕ್ಷೇತ್ರದಲ್ಲಿ ಕಾಂಗ್ರೆಸ್ ಬೆಂಬಲದೊಂದಿಗೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿಗ್ನೇಶ್ ಮೇವಾನಿ ಅವರು ನಿರೀಕ್ಷೆಗೂ ಮೀರಿ ಅಭೂತಪೂರ್ವ ಜಯವನ್ನು ತಮ್ಮದಾಗಿಸಿಕೊಂಡಿದ್ದಾರೆ.

    ಜಿಗ್ನೇಶ್ ಮೇವಾನಿ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ 19,696 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜಿಗ್ನೇಶ್ ಮೇವಾನಿ 95,497 ಮತಗಳನ್ನು ಪಡೆದರೆ, ಬಿಜೆಪಿಯ ಚಕ್ರವರ್ತಿ ವಿಜಯ್ ಕುಮಾರ್ ಹರ್ಖಾಭಾಯ್ ಅವರು 75,801 ಮತಗಳನ್ನು ಪಡೆದಿದ್ದಾರೆ.

    ಮೋದಿ ತೈವಾನ್ ಹಣಬೆ ತಿಂದು ಬೆಳ್ಳಗಾಗಿದ್ದಾರೆ ಅಂತ ಹೇಳಿಕೆ ಕೋಡೋ ಮೂಲಕ ಸುದ್ದಿಯಾಗಿದ್ದ ಅಲ್ಪೇಶ್ ಅವರು ರಾಧನ್ ಪುರ್ ಕ್ಷೇತ್ರದಲ್ಲಿ 14,857 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅಲ್ಪೇಶ್ ಠಾಕೂರ್ 85,777 ಮತ ಹಾಗೂ ಬಿಜೆಪಿಯ ಸೋಲಂಕಿ ಲಾವಿಂಗ್ಜಿ ಮುಲ್ವಿಜಿ ಠಾಕೂರ್ ಅವರು ಅವರನ್ನು 70,920 ಮತಗಳನ್ನು ಪಡೆದಿದ್ದಾರೆ.

  • ವಿಡಿಯೋ: ನೀರಲ್ಲಿ ಕೊಚ್ಚಿ ಹೋಗ್ತಿದ್ದ ಕುರಿಗಳನ್ನು ಸಾರ್ವಜನಿಕರು ರಕ್ಷಿಸಿದ್ದು ಹೀಗೆ

    ವಿಡಿಯೋ: ನೀರಲ್ಲಿ ಕೊಚ್ಚಿ ಹೋಗ್ತಿದ್ದ ಕುರಿಗಳನ್ನು ಸಾರ್ವಜನಿಕರು ರಕ್ಷಿಸಿದ್ದು ಹೀಗೆ

    ಜೈಪುರ್: ರಾಜಸ್ಥಾನದ ಗ್ರಾಮವೊಂದರಲ್ಲಿ ಏಕಾಏಕಿ ನೀರಿನಲ್ಲಿ ಕೊಚ್ಚಿಹೋಗ್ತಿದ್ದ ಕುರಿಗಳ ಹಿಂಡನ್ನು ಜನರು ಹರಸಾಹಸಪಟ್ಟು ರಕ್ಷಣೆ ಮಾಡಿದ್ದಾರೆ.

    ಈ ದೃಶ್ಯವನ್ನು ಸಾರ್ವಜನಿಕರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ನದಿ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವ ಕುರಿಗಳು ತಮ್ಮ ಪ್ರಾಣ ರಕ್ಷಣೆಗಾಗಿ ಈಜಾಡಿಕೊಂಡು ದಡ ಸೇರಲು ಪ್ರಯತ್ನಪಡುವ ದೃಶ್ಯ ಮನಕಲಕುವಂತಿದೆ.

    ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋಗುತ್ತಿರುವ ಕುರಿಗಳನ್ನು ಸಾರ್ವಜನಿಕರು ಕಾಪಾಡಿದ್ದಾರೆ.

    ಇತ್ತೀಚೆಗಷ್ಟೇ ಗುಜರಾತ್ ನಲ್ಲಿ ಪ್ರವಾಹದ ನೀರಿನಿಂದ ಪಾರಾಗಲು ವ್ಯಕ್ತಿ ವಿದ್ಯುತ್ ಕಂಬವೇರಿ ಕುಳಿತಿದ್ದರು. ಪ್ರವಾಹ ಪೀಡಿತ ಗುಜರಾತ್ ನಲ್ಲಿ ರಕ್ಷಣಾ ಕಾರ್ಯಚರಣೆಯ ವೇಳೆ ಭಾರತೀಯ ವಾಯು ಪಡೆಯು ಈ ವ್ಯಕ್ತಿಯನ್ನು ರಕ್ಷಿಸಿತ್ತು. ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

    https://www.youtube.com/watch?time_continue=21&v=868YnE0XZM0

  • ಇನ್ಶುರೆನ್ಸ್ ಹಣಕ್ಕಾಗಿ ದತ್ತು ಪಡೆದ ಮಗನನ್ನೇ ಕೊಂದ್ರು?

    ಇನ್ಶುರೆನ್ಸ್ ಹಣಕ್ಕಾಗಿ ದತ್ತು ಪಡೆದ ಮಗನನ್ನೇ ಕೊಂದ್ರು?

    ಅಹಮ್ಮದಾಬಾದ್: ಇನ್ಶುರೆನ್ಸ್ ಹಣಕ್ಕಾಗಿ ದತ್ತು ಪಡೆದ ಮಗನನ್ನೇ ಹತ್ಯೆ ಮಾಡಿದ ಆರೋಪದ ಮೇಲೆ ಎನ್‍ಆರ್‍ಐ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ.

    ಸದ್ಯ ಲಂಡನ್‍ನಲ್ಲಿ ನೆಲೆಸಿರೋ 28 ವರ್ಷದ ಆರತಿ ಲೋಕನಾಥ್ ಹಾಗೂ 53 ವರ್ಷದ ಕನ್ವಾಲ್ಜಿತ್ ಸಿನ್ಹ ರಾಯ್ಜಾಡಾ ಈ ಆರೋಪವನ್ನು ಎದುರಿಸುತ್ತಿದ್ದು, ದಂಪತಿ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. 13 ವರ್ಷದ ಗೋಪಾಲ್ ಎಂಬ ಬಾಲಕನ ಹತ್ಯೆಯಲ್ಲಿ ಈ ದಂಪತಿಯ ಕೈವಾಡವಿದೆ ಅಂತಾ ಕೆಶೋದ್ ಪೊಲೀಸ್ ಇನ್ಸ್ ಪೆಕ್ಟರ್ ಅಶೋಕ್ ತಿಲ್ವಾ ಹೇಳಿದ್ದಾರೆ.

    ಏನಿದು ಪ್ರಕರಣ?: ಆರತಿ ಹಾಗೂ ಕನ್ವಲ್ಜಿತ್ ಸಿನ್ಹಾ ದಂಪತಿ ನಿತೀಶ್ ಮುಂಡ್ ಎಂಬಾತನ ಜೊತೆ ಪಿತೂರಿ ನಡೆಸಿ ಗೋಪಾಲ್‍ನನ್ನು ದತ್ತು ಪಡೆದಿದ್ದರು. ಬಳಿಕ ಗೋಪಾಲ್ ಹೆಸರಲ್ಲಿ 1.20 ಕೋಟಿ ರೂಪಾಯಿ ಇನ್ಶುರೆನ್ಸ್ ಮಾಡಿಸಲಾಗಿತ್ತು. ಮೊದಲು ಲಂಡನ್‍ನಲ್ಲೇ ವಾಸವಿದ್ದ ನಿತೀಶ್ ವೀಸಾ ಅವಧಿ ಮುಗಿದ ಬಳಿಕ ಅಹಮದಾಬಾದ್‍ಗೆ ಮರಳಿದ್ದ. ಆದ್ರೆ ಈತ ಹಾಗೂ ದಂಪತಿ ಜೊತೆಗೂಡಿ 2015ರಲ್ಲೇ ಗೋಪಾಲ್‍ನನ್ನು ಕೊಂದು ಇನ್ಶುರೆನ್ಸ್ ಹಣವನ್ನು ಲಪಟಾಯಿಸಲು ಸ್ಕೆಚ್ ಹಾಕಿದ್ರು ಎಂದು ತಿಲ್ವಾ ಹೇಳಿದ್ದಾರೆ.

    2017ರ ಫೆಬ್ರವರಿ 8ರಂದು ಗೋಪಾಲ್, ನಿತೀಶ್, ಹರ್ಸುಖ್ ಪಟೇಲ್ ಹಾಗೂ ಮಹದೇವ್ ಎಂಬವರ ಜೊತೆ ರಾಜ್‍ಕೋಟ್‍ನಿಂದ ಮಲಿಯಾದ ತನ್ನ ಮನೆಗೆ ಹಿಂದುರುಗುತ್ತಿದ್ದ ಸಂದರ್ಭದಲ್ಲಿ ಎರಡು ಬೈಕ್‍ನಲ್ಲಿ ಬಂದ ಅಪರಿಚಿತರು ಜುನಾಗಢ್ ಜಿಲ್ಲೆಯ ಕೆಶೋದ್ ಬಳಿ ಗೋಪಾಲ್‍ಗೆ ಚಾಕುವಿನಿಂದ ಇರಿದಿದ್ದರು. ಪರಿಣಾಮ ಆತ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಗೋಪಾಲ್ ಮೃತಪಟ್ಟಿದ್ದ.

    ಗೋಪಾಲ್ ನಿತೀಶ್‍ನೊಂದಿಗೆ ವಾಸವಿದ್ದ. ಬಾಲಕನ ಹತ್ಯೆಗಾಗಿ ಈ ಹಿಂದೆಯೇ ಸಂಚು ಹೂಡಿದ್ದ ನಿತೀಶ್ ಇಬ್ಬರಿಗೆ ತಲಾ 5 ಲಕ್ಷ ರೂಪಾಯಿ ಹಣ ನೀಡಿ ಸುಫಾರಿ ಕೊಟ್ಟಿದ್ದ. ಸೋಮವಾರದಂದು ನಿತೀಶ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಗೋಪಾಲ್ ಹತ್ಯೆಯಲ್ಲಿ ಎನ್‍ಆರ್‍ಐ ದಂಪತಿಯ ಕೈವಾಡವಿರುವ ಕುರಿತು ಬೆಳಕಿಗೆ ಬಂದಿದೆ. ಸದ್ಯ ಲಂಡನ್‍ನಲ್ಲಿರುವ ಎನ್‍ಆರ್‍ಐ ದಂಪತಿಯನ್ನು ಬಂಧಿಸಲು ತಯಾರಿ ನಡೆಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಅಶೋಕ್ ತಿಲ್ವಾ ತಿಳಿಸಿದ್ದಾರೆ.