Tag: agriculture

  • ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಪಾಟೀಲ್

    ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿ: ಶಿವಾನಂದ ಪಾಟೀಲ್

    ಬೆಂಗಳೂರು: ಬೆಂಬಲ ಬೆಲೆಯಲ್ಲಿ ಕಡಲೆಕಾಳು (Chickpea) ಖರೀದಿ ಮಾಡಲು ಒಂದು ವಾರದೊಳಗೆ ನೋಂದಣಿ ಪ್ರಕ್ರಿಯೆ ಆರಂಭಿಸಲಾಗುವುದು ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಎಸ್‌. ಪಾಟೀಲ್ (Shivananda Patil) ತಿಳಿಸಿದ್ದಾರೆ.

    ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರ ಬೆಂಬಲ ಬೆಲೆಯಲ್ಲಿ ಕಡಲೆಕಾಳು ಖರೀದಿಗೆ ಅನುಮತಿ ನೀಡಿದ್ದು, ಕ್ವಿಂಟಲ್‌ಗೆ 5,650 ರೂ. ಗಳಂತೆ ಖರೀದಿ ಮಾಡಲಾಗುವುದು. ನೋಂದಣಿಗೆ 80 ದಿನ ಹಾಗೂ ಖರೀದಿಗೆ 90 ದಿನ ನಿಗದಿಪಡಿಸಲಾಗಿದೆ ಎಂದು ಹೇಳಿದ್ದಾರೆ.

    ಕೇಂದ್ರ ಸರ್ಕಾರ ನಾಫೆಡ್‌ ಮತ್ತು ಎನ್‌ಸಿಸಿಎಫ್‌ ಸಂಸ್ಥೆಗಳನ್ನು ಹಾಗೂ ರಾಜ್ಯ ಸರ್ಕಾರ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಂಡಳಿ ಮತ್ತು ಕಲಬುರಗಿಯ ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿಯನ್ನು ಖರೀದಿ ಸಂಸ್ಥೆಗಳನ್ನಾಗಿ ನೇಮಕ ಮಾಡಲಾಗಿದೆ. ಈ ಮಂಡಳಿಗೆ ಕಡಲೆಕಾಳು ಖರೀದಿ ಮಾಡಬೇಕಾದ ಜಿಲ್ಲೆಗಳನ್ನು ಹಂಚಿಕೆ ಮಾಡಲಾಗಿದೆ. ರೈತರು ತಮ್ಮ ಸಮೀಪದ ಟಿ.ಎ.ಪಿ.ಸಿ.ಎಂ.ಎಸ್‌, ಎಫ್‌.ಪಿ.ಒ ಹಾಗೂ ಪಿ.ಎ.ಸಿ.ಎಸ್‌. ಗಳಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.

    ಧಾರವಾಡ, ಗದಗ, ಬೆಳಗಾವಿ, ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ್‌, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ಬಾಗಲಕೋಟೆ, ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

  • ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಎಪಿಎಂಸಿ ಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ- ಸಿದ್ದರಾಮಯ್ಯ

    ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಎಪಿಎಂಸಿ ಗಳಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ- ಸಿದ್ದರಾಮಯ್ಯ

    ಬೆಂಗಳೂರು: ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಎಪಿಎಂಸಿಗಳಲ್ಲಿ (APMC) ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡುವ ಬಗ್ಗೆ ನಿರ್ಧಾರ ಮಾಡುವುದಾಗಿ ಸಿಎಂ ಸಿದ್ದರಾಮಯ್ಯ (CM Siddaramaiah) ಘೋಷಣೆ ಮಾಡಿದ್ದಾರೆ.

    ಅರಮನೆ ಮೈದಾನದಲ್ಲಿ ನಡೆದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ ಸಾವಯವ ಮತ್ತು ಸಿರಿಧಾನ್ಯ 2025 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಪ್ರಧಾನವಾದ ಮಂಡ್ಯ ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ಒಂದು ಸಂಯೋಜಿತ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಲು ತೀರ್ಮಾನಿಸಲಾಗಿದ್ದು, ಇದರಿಂದ ಮಂಡ್ಯ, ಹಾಸನ, ಮೈಸೂರು ಚಾಮರಾಜನಗರ ಭಾಗದ ರೈತರಿಗೆ ಸಾವಯವ ಹಾಗೂ ಸಿರಿಧಾನ್ಯ ಕೃಷಿಗೆ ಮಾರ್ಗದರ್ಶನ ಹಾಗೂ ಪ್ರೋತ್ಸಾಹ ದೊರೆಯಲಿದೆ ಅಂತ ತಿಳಿಸಿದರು. ಇದೇ ವೇಳೆ ರೈತರ ಹಲವು ದಿನಗಳ ಬೇಡಿಕೆಯಾದ ಎಂಎಸ್‌ಪಿ (ಕನಿಷ್ಟ ಬೆಂಬಲ ಬೆಲೆ) ಯೋಜನೆಯನ್ನು ಜಾರಿಗೆ ತರಬೇಕೆಂದು ಕೇಂದ್ರಸರ್ಕಾರವನ್ನು ಒತ್ತಾಯಿಸಿದರು.

    ಭಾರತ ಕೃಷಿ ಪ್ರಧಾನ ದೇಶವಾಗಿದ್ದು, ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬಿಗಳಾಗಿದ್ದೇವೆ. ದೇಶಕ್ಕೆ ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ಆಹಾರದ ಕೊರತೆಯಿತ್ತು. ಆದರೆ ಈಗ ಹಲವಾರು ಆಹಾರಧಾನ್ಯಗಳನ್ನು ಭಾರತ ರಫ್ತು ಮಾಡುತ್ತಿರುವುದು ಹೆಮ್ಮೆಯ ವಿಷಯ. ವಿರಳ ಮಳೆಯಿರುವ ಪ್ರದೇಶಗಳಲ್ಲಿ ಹೆಚ್ಚಾಗಿ ಸಾವಯವ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತದೆ. ಕೃಷಿ ಕುಟುಂಬಕ್ಕೆ ಸೇರಿದ ತಮ್ಮ ಕುಟುಂಬದವರೂ ಕೂಡ ಸಿರಿಧಾನ್ಯಗಳ ಕೃಷಿ ಮಾಡುತ್ತಿದ್ದುದನ್ನು ಸ್ಮರಿಸಿದ ಮುಖ್ಯಮಂತ್ರಿಗಳು, ರಾಗಿ ತಿಂದವನು ನಿರೋಗಿ ಎಂಬಂತೆ, ಸಿರಿಧಾನ್ಯಗಳ ಸೇವೆನೆ ಆರೋಗ್ಯಕ್ಕೆ ಉತ್ತಮವಾಗಿದೆ ಎಂದು ತಿಳಿಸಿದರು.

    ಭಾರತದಲ್ಲಿ ಸಿರಿಧಾನ್ಯಗಳ ಉತ್ಪಾದನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚಿನ ಒತ್ತು ನೀಡಿದೆ. ಸಾವಯವ ಕೃಷಿ ವಿಸ್ತೀರ್ಣದಲ್ಲಿ ಭಾರತವು ವಿಶ್ವದಲ್ಲಿ 2ನೇ ಸ್ಥಾನ ಹಾಗೂ ಒಟ್ಟು ಸಾವಯವ ಉತ್ಪಾದಕರಲ್ಲಿ ಮೊದಲನೇ ಸ್ಥಾನದಲ್ಲಿದೆ. ವಿಶ್ವದಲ್ಲಿ ಅಂದಾಜು 903.61 ಲಕ್ಷ ಟನ್‌ಗಳಷ್ಟು ಸಿರಿಧಾನ್ಯಗಳ ಉತ್ಪಾದನೆಯಾಗುತ್ತಿದ್ದು, ಇದರಲ್ಲಿ ಶೇ.38.50 ರಷ್ಟು ಪಾಲು ನಮ್ಮ ಭಾರತ ದೇಶದ್ದಾಗಿದ್ದು, ವಿಶ್ವದ ಅತಿದೊಡ್ಡ ಸಿರಿಧಾನ್ಯ ಉತ್ಪಾದನೆಯಲ್ಲಿ ಮುಂಚೂಣಿ ರಾಷ್ಟ್ರವಾಗಿದೆ. ನಮ್ಮ ರಾಜ್ಯವು ಸಿರಿಧಾನ್ಯಗಳ ವಿಸ್ತೀರ್ಣ ಮತ್ತು ಉತ್ಪಾದನೆಯಲ್ಲಿ ದೇಶದಲ್ಲಿಯೇ 3ನೇ ಸ್ಥಾನದಲ್ಲಿರುತ್ತದೆ ಎಂದರು.

    ಭಾರತದ ಒಟ್ಟು ಸಾವಯವ ರಫ್ತು ಪ್ರಮಾಣವು 2.61 ಲಕ್ಷ ಟನ್ ಆಗಿದ್ದು, ಈ ಪೈಕಿ ಸಾವಯವದ ಆಹಾರ ರಫ್ತಿನಿಂದ ಸುಮಾರು 4,008 ಕೋಟಿ ರೂ.ಗಳಷ್ಟು ಆದಾಯವಾಗಿರುತ್ತದೆ. ಸಾವಯವ ಮತ್ತು ಸಿರಿಧಾನ್ಯಗಳಿಗೆ ವ್ಯವಸ್ಥಿತ ಮಾರುಕಟ್ಟೆ ಮತ್ತು ಸರಬರಾಜು ಸರಪಳಿಯನ್ನು ಕಲ್ಪಿಸುವ ಉದ್ದೇಶದೊಂದಿಗೆ ಪರಿಷ್ಕೃತ ಸಾವಯವ ಕೃಷಿ ನೀತಿಯನ್ನು ನಮ್ಮ ಸರ್ಕಾರವು 2017ರಲ್ಲಿ ಹೊರತಂದಿದೆ. ರಾಜ್ಯದ ರೈತರಲ್ಲಿ ಸಾವಯವ ಕೃಷಿ ಪದ್ಧತಿಯ ಬಗ್ಗೆ ಅರಿವು ಮೂಡಿಸಲು ಸಾವಯವ ಭಾಗ್ಯ ಯೋಜನೆಯನ್ನು 2013 ನೇ ಸಾಲಿನಲ್ಲಿ ಹೊರತಂದು ಹೋಬಳಿಮಟ್ಟದಲ್ಲಿ ಮಾದರಿ ಸಾವಯವ ಗ್ರಾಮಗಳನ್ನು ಸ್ಥಾಪಿಸಿ ರೈತರನ್ನು ಒಗ್ಗೂಡಿಸಿ ಉತ್ತೇಜಿಸಲಾಗಿದೆ ಎಂದರು.

     

    ರಾಜ್ಯದ ಸಿರಿಧಾನ್ಯ ಕ್ಷೇತ್ರವನ್ನು ವಿಸ್ತರಿಸುವ ನಿಟ್ಟಿನಲ್ಲಿ “ರೈತ ಸಿರಿ” ಯೋಜನೆಯಡಿ ಪ್ರಮುಖ ಸಿರಿಧಾನ್ಯಗಳಾದ ಊದಲು, ನವಣೆ, ಹಾರಕ, ಕೊರಲೆ, ಸಾಮೆ ಮತ್ತು ಬರಗು ಬೆಳೆಗಳನ್ನು ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ ಗೆ 10,000 ರೂ.ಗಳಂತೆ ಗರಿಷ್ಠ 2 ಹೆಕ್ಟೇರ್ ಗಳಿಗೆ ಪ್ರೋತ್ಸಾಹಧನವನ್ನು ಪಾವತಿಸಲಾಗುತ್ತಿದೆ. ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಸೂಕ್ತ ಮಾರುಕಟ್ಟೆ ಹಾಗೂ ಉತ್ತಮ ಧಾರಣೆ ದೊರಕಿಸಿಕೊಡಲು ರಾಜ್ಯದ ಸಾವಯವ ಕೃಷಿಕರ ಸಂಘಗಳನ್ನು ಒಗ್ಗೂಡಿಸಿ 15 ಪ್ರಾಂತೀಯ ಸಾವಯವ ಒಕ್ಕೂಟಗಳನ್ನು ರಚಿಸಲಾಗಿದೆ. ಸಾವಯವ ಹಾಗೂ ಸಿರಿಧಾನ್ಯಗಳ ಕೃಷಿಗೆ ಸಂಬಂಧಿಸಿದ ಸಂಶೋಧನಾ ಕೇಂದ್ರಗಳನ್ನು ರಾಜ್ಯದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿದೆ. ಸಿರಿಧಾನ್ಯಗಳ ಉತ್ತೇಜನದಲ್ಲಿ ಕರ್ನಾಟಕ ಸರ್ಕಾರವು ಕೈಗೊಂಡಿರುವ ವಿಶೇಷ ಪ್ರಯತ್ನಗಳನ್ನು ಗುರುತಿಸಿ ಕೇಂದ್ರ ಸರ್ಕಾರವು ಪ್ರಶಂಸನಾ ಪತ್ರ ವನ್ನು ಕರ್ನಾಟಕ ಸರ್ಕಾರದ ಕೃಷಿ ಇಲಾಖೆಗೆ ನೀಡಿರುತ್ತದೆ ಎಂದರು.

    ಮುಂದಿನ ಆರ್ಥಿಕ ವರ್ಷದಿಂದ ರಾಜ್ಯದ ಸಾವಯವ ಉತ್ಪನ್ನಗಳ ಮಾರಾಟಕ್ಕೆ ಎಪಿಎಂಸಿಗಳಲ್ಲಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು. ಕರ್ನಾಟಕ ಸರ್ಕಾರ ಸಿರಿಧಾನ್ಯಗಳ ಕೃಷಿ, ಮಾರುಕಟ್ಟೆ ಹಾಗೂ ಇತರೆ ಸೌಲಭ್ಯಗಳನ್ನು ನೀಡುವ ಮೂಲಕ ಸಿರಿಧಾನ್ಯ ಕೃಷಿಯ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲು ಬದ್ಧವಾಗಿದೆ ಅಂತ ತಿಳಿಸಿದರು. ಕಾರ್ಯಕ್ರಮ ದಲ್ಲಿ ಡಿಸಿಎಂ ಡಿಕೆಶಿವಕುಮಾರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿ ಹಲವರು ಭಾಗಿಯಾಗಿದ್ದರು.

     

  • ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರದಿಂದ ಸಮ್ಮತಿ

    ರಾಜ್ಯದಲ್ಲಿ ಕೃಷಿ ಬಲವರ್ಧನೆ ನೆರವಿಗೆ ಸಚಿವ ಚಲುವರಾಯಸ್ವಾಮಿ ಮನವಿ: ಕೇಂದ್ರದಿಂದ ಸಮ್ಮತಿ

    ಬೆಂಗಳೂರು: ರಾಜ್ಯದ ಕೃಷಿ (Agriculture) ಕ್ಷೇತ್ರದ ಬಲವರ್ಧನೆ ಹಾಗೂ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಪೂರಕವಾಗಿ ಬೇಕಾಗಿರುವ ವಿವಿಧ ಸಹಾಯ ಮತ್ತು ಆರ್ಥಿಕ ಸಹಕಾರವನ್ನು ಶೀಘ್ರ ಒದಗಿಸುವಂತೆ ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿ (N Chaluvarayaswamy) ಕೇಂದ್ರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ನೆರವಿನ ಭರವಸೆಯನ್ನೂ ಸಹ ಪಡೆದಿದ್ದಾರೆ.

    ಬೆಂಗಳೂರಿನ (Bengaluru) ಕುಮಾರಕೃಪಾ ಅತಿಥಿ ಗೃಹದಲ್ಲಿ ಕಂದಾಯ ಸಚಿವರಾದ ಕೃಷ್ಣಭೈರೇಗೌಡ, ಗ್ರಾಮೀಣಾಭಿವೃದ್ಧಿ ಸಚಿವರಾದ ಪ್ರಿಯಾಂಕ್‌ ಖರ್ಗೆ ಅವರೊಂದಿಗೆ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು, ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರನ್ನು ಭೇಟಿ ಮಾಡಿ, ಮನವಿ ಅರ್ಪಿಸಿ ಚಲುವರಾಯಸ್ವಾಮಿರವರು ರಾಜ್ಯದ ಬೇಡಿಕೆಗಳನ್ನು ಮಂಡಿಸಿದರು. ಇದನ್ನೂ ಓದಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೋಲ್ಕತ್ತಾ ಟ್ರೈನಿ ವೈದ್ಯೆ ರೇಪ್‌ ಕೇಸ್‌ – ಸಂಜಯ್‌ ರಾಯ್‌ ದೋಷಿ

    ರಾಜ್ಯದಲ್ಲಿ ಕೃಷಿ ಇಲಾಖೆ ಶೇ.99 ರಷ್ಟು ಆರ್ಥಿಕ ಹಾಗೂ ಭೌತಿಕ ಗುರಿ ಸಾಧನೆ ಮಾಡಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳಲ್ಲೂ ಶೇ.124ರಷ್ಟು ಅನುದಾನ ಬಳಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ‌ ಬಾರಿಯೂ ಇದೇ ರೀತಿ ಹಣಕಾಸಿನ ನೆರವು ಒದಗಿಸಬೇಕೆಂದು ಸಚಿವರು ಕೋರಿದರು. ಕೇಂದ್ರ ಕೃಷಿ ಸಚಿವರು ಇದಕ್ಕೆ ಮುಕ್ತ ಮನಸ್ಸಿನ ಸಮ್ಮತಿ ಸೂಚಿಸಿದರು.

    ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಿಂದ ರೈತರಿಗೆ ಕೃಷಿ ಯಾಂತ್ರಿಕರಣಕ್ಕೆ ಹೆಚ್ಚಿನ ಅನುಕೂಲವಾಗುತ್ತಿದ್ದು, ಈ ಭಾರಿ ಇನ್ನಷ್ಟು ಅಧಿಕ ಆರ್ಥಿಕ ನೆರವು ಒದಗಿಸುವಂತೆ ಮನವಿ ಮಾಡಿದ ಅವರು ಆನೇಕಲ್ ತಾಲ್ಲೂಕಿನ, ಕಾಚನಾಯಕನಹಳ್ಳಿ ಗ್ರಾಮದಲ್ಲಿ ಗುರುತಿಸಲಾಗಿರುವ 20 ಎಕರೆ ಪ್ರದೇಶದಲ್ಲಿ ಫೆಸ್ಟಿಸೈಡ್ಸ್ ಫಾರ್ಮುಲೇಷನ್ ಟೆಕ್ನಾಲಜಿ ಸಂಸ್ಥೆ ಪ್ರಾರಂಭಕ್ಕೆ ಅನುಮೋದನೆ ಒದಗಿಸುವಂತೆ ಕೋರಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಅಪ್ಪಂದಿರ ಮನೆಯಿಂದ ಈ ಸರ್ಕಾರ ಅನುದಾನ ಕೊಡ್ತಿಲ್ಲ – ಪ್ರಿಯಾಂಕ್ ಖರ್ಗೆ ವಿರುದ್ಧ ಅಶೋಕ್ ಕಿಡಿ

    ಸಾವಯವ, ಸಿರಿಧಾನ್ಯ ಉತ್ಪಾದನೆ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿ ಮತ್ತು ಮಾರಾಟದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು ಇದನ್ನು ಇನ್ನಷ್ಟು ಉತ್ತಮಪಡಿಸಲು ಕೇಂದ್ರ ಸರ್ಕಾರದ ನೆರವು ಮತ್ತು ಪ್ರೋತ್ಸಾಹದ ಅಗತ್ಯವಿದೆ ಎಂದಿರುವ ಅವರು ಜ.23 ರಿಂದ 25ರ ವರೆಗೆ ನಗರದ ಅರಮನೆ ಮೈದಾನದಲ್ಲಿ ಅಂತಾರಾಷ್ಟ್ರೀಯ ಸಾವಯವ ಸಿರಿಧಾನ್ಯ ಮೇಳದಲ್ಲಿ ಭಾಗವಹಿಸುವಂತೆ ಶಿವರಾಜ್ ಸಿಂಗ್ ಚೌಹಾಣ್‌ ರನ್ನ ಅಹ್ವಾನಿಸಿದರು.

    ಹಿಂಗಾರು ಜೋಳಕ್ಕೆ ನೀಡಲಾಗುತ್ತಿರುವ ಬೆಂಬಲ ಬೆಲೆ ಸೌಲಭ್ಯವನ್ನು ಮುಂಗಾರಿನಿಂದಲೇ ಅನುಷ್ಠಾನಗೊಳಿಸಲು ನಿರ್ದೇಶನ ನೀಡಬೇಕು. ರಾಗಿ, ಜೋಳದಂತೆ ಇತರೆ ಸಿರಿಧಾನ್ಯಗಳನ್ನ (ತೃಣ ಧಾನ್ಯಗಳು) ಕನಿಷ್ಠ ಬೆಂಬಲ ಬೆಲೆ ಯೋಜನೆ ವ್ಯಾಪ್ತಿಗೆ ಸೇರ್ಪಡೆಗೊಳಿಸಬೇಕೆಂದು ಚಲುವರಾಯಸ್ವಾಮಿ ಅವರು ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದರು.

    ಈ ಹಿಂದೆ ಜಾರಿಗೆ ಬಂದ ಆತ್ಮ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಳ್ಳುತ್ತಿದೆ. ಆದರೆ ರಾಜ್ಯದಲ್ಲಿ ನಂತರ ಹೆಚ್ಚುವರಿಯಾಗಿ 59 ತಾಲ್ಲೂಕುಗಳು ರಚನೆಯಾಗಿರುವುದರಿಂದ ಹೊಸದಾಗಿ 177 ಸಹಾಯಕ ತಾಂತ್ರಿಕ ನಿರ್ವಾಹಕರು ಅಗತ್ಯವಿದ್ದು ಅದಕ್ಕೆ ಮಂಜೂರಾತಿಯೊಂದಿಗೆ ಅನುದಾನ ಒದಗಿಸುವಂತೆ ಚಲುವರಾಯಸ್ವಾಮಿ ಕೋರಿದರು. ಇದನ್ನೂ ಓದಿ: ಭಾರತೀಯ ಆಟೋ ಕ್ಷೇತ್ರಕ್ಕೆ ಹಸಿರು ಬಲ – ಕೇಂದ್ರದ ಒತ್ತಾಸೆಯಿಂದ ಇವಿ ವಾಹನ ಮಾರಾಟ ಹೆಚ್ಚಳ: ಹೆಚ್‌ಡಿಕೆ

    ಗುಣಮಟ್ಟ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಹಾಲಿ ಇರುವ ವಿವಿಧ ಕಾಯ್ದೆಗಳಿಗೆ ತಿದ್ದುಪಡಿ ತರುವುದು, ಬೀಜ ಕಾಯ್ದೆಯಡಿ ದಂಡ ಮತ್ತು ಪರವಾನಿಗೆ ಶುಲ್ಕ ಹೆಚ್ಚಳ ಕುರಿತು ರಾಷ್ಟ್ರೀಯ ಆಹಾರ ಸುರಕ್ಷತಾ ಕಾಯ್ದೆ ಪಿಎಂಕೆಎಸ್‌ವೈ – ಪಿಡಿಎಂಸಿ ವ್ಯವಸ್ಥೆಗಳ ಸುಧಾರಣೆಗಳ ಬಗ್ಗೆ ಚಲುವರಾಯಸ್ವಾಮಿರವರು ಕೇಂದ್ರ ಸಚಿವರ ಗಮನ ಸೆಳೆದರು.

    ಅಲ್ಲದೇ ಜಲಾನಯನ ಅಭಿವೃದ್ಧಿ ಇಲಾಖೆಯ ವ್ಯಾಪ್ತಿಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದ್ದು, ಈಗಾಗಲೇ ವಿಶ್ವಬ್ಯಾಂಕ್ ನೆರವಿನೊಂದಿಗೆ 567.98 ರೂ. ಕೋಟಿಗಳ ವೆಚ್ಚದಲ್ಲಿ ಯೋಜನೆ ಜಾರಿಗೊಳಿಸಿದೆ. ರಾಜ್ಯದಲ್ಲಿ ಇನ್ನೂ 59.69 ಹೆಕ್ಟೇರ್ ಪ್ರದೇಶವನ್ನು ಜಲಾನಯನ ಅಭಿವೃದ್ಧಿ ಯೋಜನೆಯ ವ್ಯಾಪ್ತಿಗೆ ಸೇರಿಸಬೇಕಾಗಿದ್ದು, ಹೊಸದಾಗಿ 92 ಯೋಜನೆಗಳ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸಿದ್ದು, ಅನುಮೋದನೆ ಮತ್ತು ಅನುದಾನ ಒದಗಿಸುವಂತೆ ಮನವಿ ಮಾಡಿದರು. ಇದನ್ನೂ ಓದಿ: 60 ಜನ ಕಾಂಗ್ರೆಸ್‌ನವರು ನಮ್ಮೊಟ್ಟಿಗೆ ಬರಲು ರೆಡಿಯಾಗಿದ್ದರು – ಯತ್ನಾಳ್ ಬಾಂಬ್

    ಕರ್ನಾಟಕದ ಕೃಷಿ ಸಚಿವರು, ಕಂದಾಯ ಸಚಿವರು ಮತ್ತು ಗ್ರಾಮೀಣಾಭಿವೃದ್ಧಿ ಸಚಿವರ ಅಭಿಪ್ರಾಯ, ಮನವಿಗಳನ್ನು ಸ್ವೀಕರಿಸಿ ಚರ್ಚೆ ನಡೆಸಿದ ನಂತರ ಮಾತನಾಡಿದ ಕೇಂದ್ರ ಕೃಷಿ, ರೈತ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರು ಶಿವರಾಜ್ ಸಿಂಗ್ ಚೌಹಾಣ್ ಅವರು ರಾಜ್ಯದ ಅಭಿವೃಧ್ಧಿಯ ದೃಷ್ಟಿಯಿಂದ ಒಟ್ಟಾಗಿ ಕಾರ್ಯನಿರ್ವಹಿಸೋಣ, ರಾಜ್ಯಕ್ಕೆ ಬೇಕಾದ ಎಲ್ಲಾ ರೀತಿಯ ನೆರವನ್ನು ಒದಗಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

    ಆರ್ಥಿಕ ವರ್ಷ ಕೊನೆಯಾಗುತ್ತಿದ್ದು, ಒದಗಿಸುವ ಅನುದಾನವನ್ನು ಸಂಪೂರ್ಣವಾಗಿ ವೆಚ್ಚ ಮಾಡಿ ಹಣ ಸದ್ಭಳಕೆ ಪ್ರಮಾಣ ಪತ್ರವನ್ನು ನೀಡಿದ ಕೂಡಲೇ ಕೃಷಿ ಹಾಗೂ ಇತರೆ ಇಲಾಖೆಗಳಿಗೆ ಹೆಚ್ಚುವರಿ ಅನುದಾನ ಒದಗಿಸಲಾಗುವುದು ಆತ್ಮ ಯೋಜನೆಯಡಿ ಅಗತ್ಯ ಪ್ರಮಾಣದ ಸಿಬ್ಬಂದಿಯನ್ನು ಸಹ ಒದಗಿಸಲಾಗುವುದು ಎಂದು ಶಿವರಾಜ್ ಸಿಂಗ್ ಚೌಹಾಣ್‌ ಅವರು ಹೇಳಿದರು.

    ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರ ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೂ ಸಹ ಈ ಸಭೆಯಲ್ಲಿ ಭಾಗವಹಿಸಿದ್ದರು.

  • ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ದಲ್ಲಾಳಿಗಳಿಗೆ ಭತ್ತ ಮಾರಾಟ – ಖರೀದಿ ಕೇಂದ್ರ ತೆರೆಯದ್ದಕ್ಕೆ ಅಶೋಕ್‌ ಆಕ್ರೋಶ

    ಬೆಂಬಲ ಬೆಲೆಗಿಂತಲೂ ಕಡಿಮೆ ದರಕ್ಕೆ ದಲ್ಲಾಳಿಗಳಿಗೆ ಭತ್ತ ಮಾರಾಟ – ಖರೀದಿ ಕೇಂದ್ರ ತೆರೆಯದ್ದಕ್ಕೆ ಅಶೋಕ್‌ ಆಕ್ರೋಶ

    – ಕರ್ನಾಟಕದಲ್ಲಿರೋದು ದರಿದ್ರ ಸರ್ಕಾರ
    – ಕೃಷಿ ಸಚಿವರ ತವರು ಜಿಲ್ಲೆಯ ರೈತರಿಗೆ ಅನ್ಯಾಯ

    ಬೆಂಗಳೂರು: ಮಂಡ್ಯದಲ್ಲಿ (Mandya) ಭತ್ತದ ಖರೀದಿ ಕೇಂದ್ರಗಳು ತೆರೆಯದ ಸರ್ಕಾರದ ವಿರುದ್ದ ವಿಪಕ್ಷ ನಾಯಕ ಅಶೋಕ್ (Ashok) ಕಿಡಿಕಾರಿದ್ದಾರೆ. ಎಕ್ಸ್‌ನಲ್ಲಿ ಸರ್ಕಾರದ ವಿರುದ್ದ ಕಿಡಿಕಾರಿದ ಅಶೋಕ್ ಕಾಂಗ್ರೆಸ್ (Congress) ಸರ್ಕಾರ ದರಿದ್ರ ಸರ್ಕಾರ ಅಂತ ವಾಗ್ದಾಳಿ ನಡೆಸಿದ್ದಾರೆ.

    ಅಶೋಕ್ ಪೋಸ್ಟ್‌ನಲ್ಲಿ ಏನಿದೆ?
    ಈ ದರಿದ್ರ ಕಾಂಗ್ರೆಸ್ ಸರ್ಕಾರದಲ್ಲಿ ಒಬ್ಬರು ಕುರ್ಚಿ ಉಳಿಸಿಕೊಳ್ಳಲು ತಂತ್ರ ಹೆಣೆಯುತ್ತಿದ್ದರೆ, ಇನ್ನೊಬ್ಬರು ಕುರ್ಚಿ ಕಿತ್ತುಕೊಳ್ಳಲು ಕತ್ತಿ ಮಸಿಯುತ್ತಿದ್ದಾರೆ. ಇವರಿಬ್ಬರ ನಡುವೆ ಆತಂತ್ರವಾಗಿರುವ ಮಂತ್ರಿಗಳು ಅವರವರ ಅಸ್ತಿತ್ವ ಉಳಿಸಿಕೊಳ್ಳಲು ಡಿನ್ನರ್ ಮೀಟಿಂಗ್, ಸೀಕ್ರೆಟ್ ಸಭೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಇವೆಲ್ಲದರ ನಡುವೆ ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದು ರೈತರ ಕಷ್ಟ ಕೇಳಲು ಸರ್ಕಾರವೇ ಇಲ್ಲದಂತಾಗಿದೆ.

    ಮಂಡ್ಯದಲ್ಲಿ ಭತ್ತ ಖರೀದಿ ಕೇಂದ್ರಗಳು ಆರಂಭವಾಗದ ಕಾರಣ ರೈತರು ಬೆಂಬಲ ಬೆಲೆಗಿಂತ ಕಡಿಮೆ ದರಕ್ಕೆ ಭತ್ತದ ದಲ್ಲಾಳಿಗಳಿಗೆ ಮಾರಾಟ ಮಾಡುವ ಅನಿವಾರ್ಯತೆ ಎದುರಾಗಿದೆ. ಕ್ವಿಂಟಾಲ್ ಭತ್ತಕ್ಕೆ 3,000 ರೂ. ಬೆಂಬಲ ಬೆಲೆ ನಿಗದಿಯಾಗಿದ್ದರೂ ಸರ್ಕಾರ ಭತ್ತ ಖರೀದಿ ಕೇಂದ್ರಗಳು ತೆರೆಯದ ಕಾರಣ ದಲ್ಲಾಳಿಗಳಿಗೆ 1,800 ರೂ. – 2,000 ರೂ. ಮಾರಿ ನಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಸಚಿವ ಚೆಲುವರಾಯಸ್ವಾಮಿ ಅವರ ತವರು ಜಿಲ್ಲೆಯಲ್ಲೇ ಈ ಗತಿ ಆದರೆ ಇನ್ನು ಬೇರೆ ಜಿಲ್ಲೆಗಳ ಗತಿ ಏನಾಗಿರಬಹುದು ಎನ್ನುವುದನ್ನ ಹೇಳಬೇಕಿಲ್ಲ. ಇದನ್ನೂ ಓದಿ: ತಂದೆಯನ್ನೇ ಹತ್ಯೆಗೈದು ಹೃದಯಾಘಾತದ ಕತೆಕಟ್ಟಿದ್ದ ಮಗ ಅರೆಸ್ಟ್

    ಕಲ್ಯಾಣ ಕರ್ನಾಟಕದ ಪ್ರಮುಖ ವಾಣಿಜ್ಯ ಬೆಳೆಯಾದ ತೊಗರಿ ಬೆಲೆ ದಿನದಿಂದ ದಿನಕ್ಕೆ ಇಳಿಕೆ ಕಾಣುತ್ತಿದ್ದು, ಸರಕಾರ ಯಾವಾಗ ತೊಗರಿ ಖರೀದಿ ಕೇಂದ್ರ ತೆರೆಯಲಿದೆ ಎಂದು ರೈತರು ಕಾತರದಿಂದ ಎದುರು ನೋಡುತ್ತಿದ್ದಾರೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ಈ ಬಾರಿ ತೇವಾಂಶ ಕಡಿಮೆಯಿಂದ 1.82 ಲಕ್ಷ ಹೆಕ್ಟೇರ್‌ ತೊಗರಿ ಬೆಳೆ ಹಾನಿಯಾಗಿದೆ ಎಂದು ಸರಕಾರಿ ದಾಖಲೆಗಳೇ ಹೇಳುತ್ತವೆ. ಆದರೆ ಇದುವರೆಗೂ ರಾಜ್ಯ ಸರಕಾರ ಪರಿಹಾರದ ಮಾತೇ ಆಡಿಲ್ಲ. ಜಿಲ್ಲೆಯ ಉಸ್ತುವಾರಿ ಸಚಿವರು ಕೂಡ ಚಕಾರ ಎತ್ತುತ್ತಿಲ್ಲ. ಒಟ್ಟಿನಲ್ಲಿ ಈ ರೈತ ವಿರೋಧಿ ಸಿಎಂ ಸಿದ್ದರಾಮಯ್ಯ ಸರ್ಕಾರ ತೊಲಗುವವರೆಗೂ ನಾಡಿನ ಅನ್ನದಾತರಿಗೆ ನೆಮ್ಮದಿಯಿಲ್ಲ ಅಂತ ಅಶೋಕ್ ಕಿಡಿಕಾರಿದ್ದಾರೆ‌.

     

  • ಇನ್ನೂ ಹೂ ಬಿಡದ ಗಿಡಗಳು – ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

    ಇನ್ನೂ ಹೂ ಬಿಡದ ಗಿಡಗಳು – ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

    – ಪ್ರತಿ ವರ್ಷ ಡಿಸೆಂಬರ್‌ ಮೊದಲ ವಾರದಲ್ಲಿ ಹೂ ಬಿಡುತ್ತಿದ್ದ ಗಿಡಗಳು
    – ಎಲೆ ಹಾಗೂ ಕಾಂಡದಲ್ಲಿ ಕಪ್ಪು ಮಚ್ಚೆ ರೋಗ

    ಗದಗ: ಇತ್ತೀಚೆಗೆ ಸುರಿದ ಅಕಾಲಿಕ ಮಳೆ (Rain), ವಿಪರೀತ ಚಳಿ ಸೇರಿದಂತೆ ಪ್ರಕೃತಿ ವಿಕೋಪದಿಂದ, ಹಣ್ಣಿನ ರಾಜ ಮಾವು (Mango) ಬೆಳೆಗೆ ಅನೇಕ ರೋಗಗಳ ಕಾಣಿಸಿಕೊಂಡಿದೆ. ಇದರಿಂದಾಗಿ ರೈತರಿಗೆ (Farmer) ಇಳುವರಿ ಕೊರತೆಯಾಗುವ ಆತಂಕ ಎದುರಾಗಿದೆ.

    ಡಿಸೆಂಬರ್ ತಿಂಗಳು ಮುಗಿಯುತ್ತಾ ಬಂದರೂ ಇಲ್ಲಿಯವರೆಗೆ ಮಾವು ಹೂವು ಬಿಟ್ಟಿಲ್ಲ. ಅಲ್ಲದೇ ಮಾವು ಗಿಡದಲ್ಲಿ ಕಪ್ಪು ಮಚ್ಚೆ ರೋಗ ಹೆಚ್ಚಾಗಿ ಕಂಡು ಬರುತ್ತಿದೆ. ಎಲೆ ಹಾಗೂ ಕಾಂಡದಲ್ಲಿ ರೋಗ ಕಂಡು ಬರುತ್ತಿರುವುದರಿಂದ ಇಳುವರಿ ಕಡಿಮೆಯಾಗಲಿದೆ.

    ಗದಗ ಜಿಲ್ಲಾದ್ಯಂತ 600 ರಿಂದ 700 ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದೆ. ರಾಜಾ, ಆಪೂಸಾ, ಕಲ್ಮಿ, ಗಿರಿ, ಗೋಲ್ಡ್ ಮ್ಯಾಂಗೊ, ಗೋವಾ ಮ್ಯಾಂಗೊ ಸೇರಿದಂತೆ ಅನೇಕ ಜಾತಿಯ ಮಾವುಗಳನ್ನು ಬೆಳೆಯಾಗುತ್ತದೆ. ಕೆಂಪು ಮಣ್ಣಿನ ಪ್ರದೇಶದಲ್ಲಿ ಹೆಚ್ಚಾಗಿ ಈ ಮಾವನ್ನು ಬೆಳೆಯುದರಿಂದ ಗದಗ, ಮುಂಡರಗಿ, ಲಕ್ಷ್ಮೇಶ್ವರ, ಗಜೇಂದ್ರಗಡ ಹಾಗೂ ಶಿರಹಟ್ಟಿ ತಾಲೂಕಿನಲ್ಲಿ ಹೆಚ್ಚಾಗಿ ಮಾವು ಬೆಳೆ ಬೆಳೆಯಲಾಗಿದೆ.

    ಶಿಲೀಂಧ್ರ ಕಣಗಳು ಗಾಳಿಯ ಸಹಾಯದಿಂದ ಒಂದು ಗಿಡದಿಂದ ಇನ್ನೊಂದು ಗಿಡಕ್ಕೆ ಹಾರಾಡುತ್ತಾ ಹೋಗುತ್ತಿರುತ್ತದೆ. ಇದರಿಂದಾಗಿ ಎಲ್ಲಾ ಮಾವಿನ ಗಿಡಗಳಲ್ಲಿ ರೋಗ ಕಾಣಿಸಿಕೊಂಡಿದೆ. ಪ್ರತಿ ವರ್ಷ ನವೆಂಬರ್ ತಿಂಗಳ ಕೊನೆಯ ವಾರ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಮಾವಿನ ಗಿಡಗಳು ಹೂವು ಬಿಡುತ್ತಿದ್ದವು. ಈ ವರ್ಷ ಡಿಸೆಂಬರ್ ಕೊನೆಗೊಳ್ಳುತ್ತಿದ್ದರೂ ಹೂವು ಬಿಟ್ಟಿಲ್ಲ. ತೋಟಗಾರಿಕೆ ಇಲಾಖೆಯ ತಜ್ಞರು ಜನವರಿ ಎರಡನೇ ವಾರ ಹೂವು ಬಿಡುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ. ಜನವರಿ ತಿಂಗಳು ಹೆಚ್ಚಾಗಿ ಇಬ್ಬನಿ ಬೀಳುವುದರಿಂದ ಇಳುವರಿ ಕಡಿಮೆಯಾಗಿ ರೋಗಗಳು ಹೆಚ್ಚಾಗುವ ಸಾಧ್ಯತೆಯಿದೆ.

    ಇಳುವರಿ ಕುಂಠಿತವಾಗುವ ಸೂಚನೆ ಸಿಕ್ಕಿದ ಬೆನ್ನಲ್ಲೇ ಈಗಿನಿಂದಲೇ ಮಾವು ಬೆಳೆಗಳನ್ನು ರಕ್ಷಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ. ಮಾವಿಗೆ ಬೂದು ರೋಗ ಮತ್ತು ಜಿಗಿ ಹುಳುಗಳ ಬಾಧೆ ಕಂಡುಬಂದರೆ ಕಾಯಿ ಕಚ್ಚುವಿಕೆ ಕಡಿಮೆಯಾಗಿ ಮಿಡಿ ಗಾತ್ರದ ಕಾಯಿಗಳು ಉದುರುತ್ತಿವೆ. ಮುಂಜಾಗ್ರತಾ ಕ್ರಮವಾಗಿ ಬೆಳೆಗಾರರು ಔಷಧಗಳನ್ನು ಸಿಂಪಡಣೆ ಮಾಡುತ್ತಿದ್ದಾರೆ. ಮಾವು ತೋಟಗಳಲ್ಲಿ ಹೂವು ಬಿಡುವುದು ತಡವಾಗಿದ್ದು, ರೈತರು ಮಾವಿನ ಬೆಳೆಗೆ ಮ್ಯಾಂಗೋ ಸ್ಪೆಷಲ್‌ (ಲಘು ಪೋಷಕಾಂಶಗಳ ಮಿಶ್ರಣ) ಪೊಟ್ಯಾಶಿಯಂ ನೈಟ್ರೇಟ್, ಗೊಬ್ಬರವನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸುತ್ತಿದ್ದಾರೆ. ಇದರ ಜೊತೆ ಸೋಪಿನ ದ್ರಾವಣ, ನಿಂಬೆ ಹಣ್ಣಿನ ರಸ ಬೆರೆಸಿ ಸಿಂಪಡಿಸುತ್ತಿದ್ದಾರೆ. ಹೀಗೆ ಮಾಡುವುದರಿಂದ ಮಾವಿನ ಮರಗಳಲ್ಲಿ ಒಮ್ಮೆಲೇ ಹೂವು ಬಿಡಲು ಸಹಾಯವಾಗುತ್ತವೆ ಎನ್ನುತ್ತಾರೆ ಕೃಷಿ ತಜ್ಞರು.

    ಈಗಾಗಲೇ ಮಾವು ರೋಗ ನಿಯಂತ್ರಣದ ಕುರಿತು ಕೃಷಿ ವಿಜ್ಞಾನ ಕೇಂದ್ರದಿಂದ ಕಾರ್ಯಕ್ರಮ ಹಾಗೂ ರೈತರಿಗೆ ತರಬೇತಿ ಮಾಡಲಾಗಿದೆ. ಪ್ರತಿ ವರ್ಷ 3 ರಿಂದ 4 ತಿಂಗಳಿಗೊಮ್ಮೆ ಮಾವು ಬೆಳೆಗಾರರಿಗೆ ತರಬೇತಿ ಮಾಡಲಾಗುತ್ತದೆ ಅಂತಿದ್ದಾರೆ ಗದಗ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಶಶಿಕಾಂತ ಕೋಟಿಮನಿ. ಒಟ್ಟಿನಲ್ಲಿ ಈ ಬಾರಿ ಪ್ರಕೃತಿ ವಿಕೋಪದಿಂದ ಮಾವು ಬೆಳಗಾರರು ಈ ಬಾರಿ ಸಾಕಷ್ಟು ಸಂಕಷ್ಟ ಎದುರಿಸುವ ಸಾಧ್ಯತೆ ಇದೆ.

     

  • ಗ್ಯಾರಂಟಿ ಎಫೆಕ್ಟ್ – ಮಹಿಳಾ ಕಾರ್ಮಿಕರು ಸಿಗದೇ ರೈತರ ಪರದಾಟ

    ಗ್ಯಾರಂಟಿ ಎಫೆಕ್ಟ್ – ಮಹಿಳಾ ಕಾರ್ಮಿಕರು ಸಿಗದೇ ರೈತರ ಪರದಾಟ

    – ರಾಗಿ ಕಟಾವು ಯಂತ್ರಗಳಿಗೆ ಭಾರೀ ಬೇಡಿಕೆ
    – ಹಳ್ಳಿಗಳಲ್ಲಿ ಕೂಲಿ ಕೆಲಸಕ್ಕೆ ಬರುತ್ತಿಲ್ಲ ಮಹಿಳೆಯರು

    ಚಿಕ್ಕಬಳ್ಳಾಪುರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಮಹಿಳೆಯರಂತೂ ಪುಲ್ ಖುಷಿಯಾಗಿದ್ದಾರೆ. ಆದರೆ ಇದೇ ಗ್ಯಾರಂಟಿ ಈಗ ಇನ್ನೊಂದು ಕಡೆದ ರೈತರ ಸಮಸ್ಯೆಗಳಿಗೂ ಕಾರಣವಾಗುತ್ತಿದೆ.

    ಈಗ ಹಳ್ಳಿಗಾಡಿನಲ್ಲಿ ರಾಗಿ ಕಟಾವು ಮಾಡಿ ಮನೆ ತುಂಬಿಸಿಕೊಳ್ಳುವ ಸಮಯ. ಆದರೆ ಗ್ಯಾರಂಟಿ ಯೋಜನೆಗಳ ಪರಿಣಾಮದಿಂದ ಗ್ರಾಮೀಣ ಭಾಗದಲ್ಲಿ ಕೃಷಿ ಕಾಯಕ ಮಾಡಲು ಕೂಲಿಯಾಳುಗಳು ಸಿಗುತ್ತಿಲ್ಲ ಎಂದು ರೈತರು ನೋವು ತೋಡಿಕೊಂಡಿದ್ದಾರೆ.

    ರಾಗಿ ಕಟಾವು ಮಾಡುವ ಸಮಯದಲ್ಲಿ ಇಲ್ಲಿಯವರೆಗೆ ಕಾರ್ಮಿಕರ ಸಮಸ್ಯೆ ಆಗುತ್ತಿರಲಿಲ್ಲ. ಆದರೆ ಈ ಬಾರಿ ಬಹಳಷ್ಟು ಸಮಸ್ಯೆ ಆಗುತ್ತಿದೆ. ಹೀಗಾಗಿ ಈ ಬಾರಿ ರಾಗಿ ಕಟಾವಿಗೆ ದುಬಾರಿ ಯಂತ್ರದ ಮೊರೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಭತ್ತ ಕತ್ತರಿಸುವ ಯಂತ್ರಗಳನ್ನು ತರಿಸಿ, ಅರೆಬರೆ ಫಸಲನ್ನು ಮನೆಗೆ ತುಂಬಿಸಿಕೊಳ್ಳುತ್ತಿದ್ದೇವೆ ಎಂದು ರೈತರಾದ ನರಸಿಂಹಮೂರ್ತಿ ಹೇಳಿದ್ದಾರೆ. ಇದನ್ನೂ ಓದಿ: 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?

    ಚಂಡಮಾರುತದಿಂದ ಜಡಿ ಮಳೆ ಆಗುತ್ತಿದ್ದು ರಾಗಿ ಕಟಾವಿಗೆ ಕೊಡಬಾರದ ಕಾಟ ಕೊಡುತ್ತಿದೆ. ಕಾರ್ಮಿಕರಿದ್ದರೆ ಸರಿಯಾದ ಸಮಯದಲ್ಲಿ ಫಸಲು ತೆಗೆಯಬಹುದಿತ್ತು. ಆದರೆ ಕಾರ್ಮಿಕರು ಸಿಗದ ಕಾರಣ ಬಂದ ಬೆಳೆ ಹಾಳಾಗದೇ ಇರಲು ರೈತರು ಈಗ ಕಟಾವು ಯಂತ್ರಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಈಗ ಕಟಾವು ಯಂತ್ರಗಳಿಗೆ ಭಾರೀ ಬೇಡಿಕೆ ಬಂದಿದೆ.

    ಮಹಿಳೆಯರಿಗೆ ತಿಂಗಳಿಗೆ 2 ಸಾವಿರ ರೂ. ಬರುತ್ತಿದೆ. ರಾಜ್ಯಾದ್ಯಂತ ಬಸ್ಸಿನಲ್ಲಿ ಉಚಿತವಾಗಿ ಓಡಾಡಬಹುದು. ಸರ್ಕಾರಿಂದಲೇ ಅಕ್ಕಿ ಸಹ ಉಚಿತವಾಗಿ ಸಿಗುತ್ತಿದೆ. ವಿದ್ಯುತ್‌ ಬಿಲ್‌ ಸಹ ಪಾವತಿಸುವ ಅಗತ್ಯವಿಲ್ಲ. ಈ ಕಾರಣದಿಂದ ಈಗ ಗ್ರಾಮೀಣ ಭಾಗದಲ್ಲಿ ಕೆಲಸಕ್ಕೆ ಜನ ಸಿಗುತ್ತಿಲ್ಲ ಎಂದು ರೈತರಾದ ಅಶ್ವತ್ಥಪ್ಪ ಬೇಸರ ತೋಡಿಕೊಂಡಿದ್ದಾರೆ.

    ರಾಗಿ ಕಟಾವು ಮಾಡುವ ಯಂತ್ರಕ್ಕೆ ಭಾರೀ ಬೇಡಿಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತ ರಾಗಿ ಕಟಾವು ಯಂತ್ರಗಳಿಗೆ ಒಂದು ಗಂಟೆಗೆ 2,700 ರೂ. ದರ ನಿಗದಿಮಾಡಿದೆ. ದರ ನಿಗದಿಯಾಗಿದ್ದರೂ ಬೇಡಿಕೆ ಜಾಸ್ತಿ ಇರುವ ಹಿನ್ನೆಲೆಯಲ್ಲಿ ಯಂತ್ರಗಳ ಮಾಲೀಕರು ರೈತರ ಬಳಿ ಹೆಚ್ಚು ಹಣ ಪಡೆದು ರಾಗಿ ಕಟಾವು ಮಾಡಿಕೊಡುತ್ತಿದ್ದಾರೆ ಎಂಬ ದೂರುಗಳು ಸಹ ಬರುತ್ತಿವೆ.

  • ಕೃಷಿ ಕೂಡ ಉದ್ಯಮವೇ, ಉದ್ಯಮಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ನೀಡಿ: ಡಿಕೆಶಿ

    ಕೃಷಿ ಕೂಡ ಉದ್ಯಮವೇ, ಉದ್ಯಮಿಗಳಾಗಿ ಹತ್ತಾರು ಜನರಿಗೆ ಉದ್ಯೋಗ ನೀಡಿ: ಡಿಕೆಶಿ

    -ಇಲ್ಲಿರುವ ಮಕ್ಕಳಲ್ಲಿ ಯಾರಾದರೂ ಒಬ್ಬರು ಮುಂದೆ ಡಿಕೆ ಶಿವಕುಮಾರ್ ಆಗಬೇಕು

    ರಾಮನಗರ: ಕೃಷಿ (Agriculture) ಕೂಡ ಈಗ ಒಂದು ಉದ್ಯಮವೇ. ಉದ್ಯೋಗಿಗಳಾಗುವುದಕ್ಕಿಂತ ಹತ್ತಾರು ಜನರಿಗೆ ಉದ್ಯೋಗ ನೀಡುವ ಉದ್ದಿಮೆದಾರರಾಗುವುದು ನಿಮ್ಮ ಗುರಿಯಾಗಬೇಕು ಎಂದು ಕಾಲೇಜು ವಿದ್ಯಾರ್ಥಿಗಳಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಸಲಹೆ ನೀಡಿದರು.

    ಕನಕಪುರದ (Kanakapura) ಕರಿಯಪ್ಪ ಕೃಷಿ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯಲ್ಲಿ ಹಾಲು ಹಾಗೂ ರೇಷ್ಮೆ ಉತ್ಪಾದನೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಇದರ ಜೊತೆಗೆ ಬೆಂಗಳೂರಿನ ಸುತ್ತಮುತ್ತಲ ಪ್ರದೇಶದಲ್ಲಿ ಹೂವಿನ ಬೆಳೆ ಹಾಕುವುದರಿಂದ ಆರ್ಥಿಕವಾಗಿ ಪ್ರಗತಿ ಸಾಧಿಸಬಹುದು. ನೀವು ಕೇವಲ ಎಂಜಿನಿಯರ್ ಆಗುವುದಷ್ಟೇ ನಿಮ್ಮ ಗುರಿಯಾಗುವುದು ಬೇಡ. ನೀವೇ ಹತ್ತಾರು ಜನರಿಗೆ ಉದ್ಯೋಗ ಸೃಷ್ಟಿಸುವಂತೆ ನೀವು ಬೆಳೆಯಬೇಕು. ಸ್ವಯಂ ಉದ್ಯೋಗವೇ ಶ್ರೇಷ್ಠ ಉದ್ಯೋಗವಾಗಿದೆ. ಆ ನಿಟ್ಟಿನಲ್ಲಿ ನೀವು ಗಮನಹರಿಸಿ ಎಂದರು. ಇದನ್ನೂ ಓದಿ: ನಿಯಂತ್ರಣ ತಪ್ಪಿ ಕಾಲುವೆಗೆ ಬಿದ್ದ ಬೈಕ್ – ಅಂಜನಾದ್ರಿ ಬೆಟ್ಟಕ್ಕೆ ಹೊರಟಿದ್ದ ಸವಾರ ಸಾವು

    ಈಗಿನ ಕಾಲದಲ್ಲಿ ಯಾವುದೇ ಶಿಕ್ಷಕರು ತಾವು ಮಕ್ಕಳಿಗಿಂತ ಬುದ್ಧಿವಂತರು ಎಂದು ಭಾವಿಸಿದರೆ ಅದು ತಪ್ಪು. ಇನ್ನು ಮುಂದೆ ಶಾಲಾ ಕಾಲೇಜುಗಳಲ್ಲಿ ಯಾವುದೇ ಕಾರ್ಯಕ್ರಮವಾದರೂ ಶಿಕ್ಷಕರು ವೇದಿಕೆ ಮೇಲೆ ಇರಬಾರದು. ಇಡೀ ಕಾರ್ಯಕ್ರಮವನ್ನು ಮಕ್ಕಳೇ ನಡೆಸಬೇಕು. ಅವರೇ ಸ್ವಾಗತ ಭಾಷಣ ಮಾಡಬೇಕು. ಇದರಿಂದ ಅವರಲ್ಲಿನ ಪ್ರತಿಭೆ ಅನಾವರಣವಾಗುತ್ತದೆ. ಅವರಲ್ಲಿ ನಾಯಕತ್ವ ಗುಣ ಬೆಳೆಯುತ್ತದೆ. ನಾಯಕರನ್ನು ಬೆಳೆಸುವವನೇ ನಿಜವಾದ ನಾಯಕ. ಮಕ್ಕಳಿಗೆ ಉತ್ತೇಜನ ನೀಡಬೇಕು ಎಂದು ಹೇಳಿದರು. ಇದನ್ನೂ ಓದಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು – ಭಾನುವಾರ ಕ್ಷೇತ್ರದ ಮತದಾರರಿಗೆ ಕೃತಜ್ಞತಾ ಸಮಾವೇಶ

    ಇಲ್ಲಿರುವ ಮಕ್ಕಳಲ್ಲಿ ಯಾರಾದರೂ ಒಬ್ಬರು ಮುಂದೆ ಡಿ.ಕೆ. ಶಿವಕುಮಾರ್ ಆಗಬೇಕು. ನಾನು ಕೂಡ ಶಿಕ್ಷಣ ಸಂಸ್ಥೆ ನಡೆಸಿದ್ದೇನೆ. ಈಗ ನನ್ನ ಮಕ್ಕಳಿಗೆ ಜವಾಬ್ದಾರಿ ವಹಿಸಿದ್ದೇನೆ. ಈ ಕಾಲೇಜಿಗೆ ಬೆಂಗಳೂರು ದಕ್ಷಿಣ ಕೃಷಿ ಕಾಲೇಜು ಎಂದು ಹೆಸರಿಡಲು ಬಯಸಿದ್ದೆ. ಆದರೆ ನೀವು ಈ ಶಾಲೆಯ ಸಂಸ್ಥಾಪಕರಾದ ಕರಿಯಪ್ಪನವರ ಹೆಸರು ಇಟ್ಟಿದ್ದೀರಿ. ಅವರ ಹೆಸರಾಗಿರುವುದರಿಂದ ಇದು ಹಾಗೇ ಇರಲಿ. ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು ಎಂಬುದು ನಿಮ್ಮೆಲ್ಲರ ತಲೆಯಲ್ಲಿರಲಿ. ನಿಮ್ಮ ತಂದೆ ತಾಯಿ ಒಂದಿಂಚೂ ಜಾಗವನ್ನು ಮಾರಲು ಬಿಡಬೇಡಿ. ಮುಂದೆ ಈ ಭೂಮಿಗೆ ಯಾವ ಬೆಲೆ ಬರಲಿದೆ ಎಂದು ನಿಮಗೆ ಊಹೆಯೂ ಇಲ್ಲ. ಚೆಲುವರಾಯಸ್ವಾಮಿ ಅವರು ತಮ್ಮ ಸಚಿವಾಲಯದಿಂದ ಈ ಕೃಷಿ ಕಾಲೇಜು ನೀಡಿ ನಿಮ್ಮೆಲ್ಲರಿಗೂ ನೆರವು ನೀಡಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಗುರಿ: ಶೈಲೇಂದ್ರ ಬೆಲ್ದಾಳೆ

  • ಬಾಗಲಕೋಟೆ| ಈರುಳ್ಳಿ ಬೆಳೆ ನಾಶವಾಗುತ್ತಿದ್ದರೂ ಯಾವೊಬ್ಬ ಅಧಿಕಾರಿ ಬಂದಿಲ್ಲ: ರೈತರ ಬೇಸರ

    ಬಾಗಲಕೋಟೆ| ಈರುಳ್ಳಿ ಬೆಳೆ ನಾಶವಾಗುತ್ತಿದ್ದರೂ ಯಾವೊಬ್ಬ ಅಧಿಕಾರಿ ಬಂದಿಲ್ಲ: ರೈತರ ಬೇಸರ

    ಬಾಗಲಕೋಟೆ: ವರುಣಾರ್ಭಟಕ್ಕೆ ಬಾಗಲಕೋಟೆ (Bagalkot) ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ, ಮಳೆಯ (Rain) ಅವಾಂತರಕ್ಕೆ ತೋಟಗಾರಿಕಾ ಬೆಳೆ ಈರುಳ್ಳಿ ಅಪಾರ ಪ್ರಮಾಣದಲ್ಲಿ ನಾಶವಾಗಿರುವುದು ಜಿಲ್ಲೆಯ ರೈತರಿಗೆ ಸಂಕಷ್ಟವನ್ನು ತಂದೊಡ್ಡಿದೆ.

    31,000 ಹೆಕ್ಟರ್ ಪ್ರದೇಶದಲ್ಲಿ ಬೆಳೆಯಲಾಗಿರುವ ಈರುಳ್ಳಿ (Onion) ಸದ್ಯ ಮಳೆನೀರಿಗೆ ಅರ್ಧ ಕೊಚ್ಚಿ ಹೋಗಿದ್ದರೆ ಇನ್ನರ್ಧ ಹೊಲದಲ್ಲೇ ಉಳಿದು ಕೊಳೆಯುತ್ತಿದೆ.

    ಅಕ್ಟೋಬರ್ 16,ರಿಂದ ಶುರುವಾಗಿರುವ ಮಳೆಗೆ ಸದ್ಯ ಪ್ರಥಮಿಕ ವರದಿಯ ಪ್ರಕಾರ ಈಗಾಗಲೇ 692 ಕೃಷಿ (Agriculture) ಬೆಳೆ ನಾಶವಾಗಿದ್ದರೆ, 131 ತೋಟಗಾರಿಕಾ ಬೆಳೆಗಳು ಹಾನಿಗೊಳಗಾಗಿವೆ. ಇಲ್ಲಿಯವರೆಗೆ ಸುಮಾರು 69 ಮಿಲಿ ಮೀಟರ್ ಮಳೆಯಾಗಿದೆ. ಅದರಲ್ಲಿ ಬಹುಮುಖ್ಯವಾಗಿ ಈರುಳ್ಳಿಯನ್ನೇ ನಂಬಿ ಬದುಕುವ ಅಂದ್ರೆ ಅದು ಬಾಗಲಕೋಟೆ ತಾಲೂಕಿನ ಬೆನಕಟ್ಟಿ ಗ್ರಾಮ. ಈ ಗ್ರಾಮದ ರೈತರ ಪರಿಸ್ಥಿತಿ ಇನ್ನೂ ಭಿನ್ನವಾಗಿದೆ. ಇದನ್ನೂ ಓದಿ: ಬಾಗಲಕೋಟೆ| ಮಳೆ ಅವಾಂತರಕ್ಕೆ ಕೊಳೆತು ಹೋಗುತ್ತಿದೆ ಈರುಳ್ಳಿ – ರೈತರ ಕಣ್ಣೀರು

    ಈ ಗ್ರಾಮದಲ್ಲಿ ಸುಮಾರು 4400 ಎಕರೆ ಪ್ರದೇಶದ ಜಮೀನುಗಳನ್ನು ಹೊಂದಿರುವ ರೈತರು, ಬಹುಪಾಲು ಈರುಳ್ಳಿಯನ್ನೇ ಪ್ರಮುಖ ಬೆಳೆಯಾಗಿ ಬೆಳೆದಿದ್ದಾರೆ. ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಈ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೀಡಾದ್ದಾರೆ.

    ಹೊಲದಲ್ಲಿ ಬೆಳೆದ ಈರುಳ್ಳಿಗಳು ನೀರಿನ ರಭಸಕ್ಕೆ ಕೊಚ್ಚಿ ಮೋರಿಯನ್ನು ಸೇರಿದರೆ ಕಟಾವು ಮಾಡಿದ ಈರುಳ್ಳಿ ಕೊಳೆತು ಹೋಗುತ್ತಿದೆ. ಇನ್ನರ್ಧ ಈರುಳ್ಳಿಯನ್ನು ಮಳೆ ಹಾಳೆಯಿಂದ ರಕ್ಷಣೆ ಮಾಡಿ ಮಾರುಕಟ್ಟೆಗೆ ಸಾಗಿಸಬೇಕು ಅಂದರೆ ಮಳೆಯ ಅಡ್ಡಿಯಾಗಿದೆ. ಹೀಗಾಗಿ ಕಟಾವ್ ಆದ ಈರುಳ್ಳಿಯನ್ನೂ ಮಾರುಕಟ್ಟೆ ಸಾಗಿಸಲು ಆಗದೇ ರೈತರು ಪರಿತಪಿಸುವಂತಾಗಿದೆ.

    ಈ ಬಾರಿ ಮಾರುಕಟ್ಟೆಯಲ್ಲಿ ಈರುಳ್ಳಿ ಉತ್ತಮ ಬೆಲೆ ಇದೆ, ಆದರೂ ಮಳೆಗೆ ಈರುಳ್ಳಿ ಹಾಳಾಗುತ್ತಿದೆ. ಹೀಗಾಗಿ ನಮಗೆ ಕೈಗೆ ಬಂದು ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತ ಪರಿಸ್ಥಿತಿ ನಿರ್ಮಾಣವಾಗಿದೆ ಎನ್ನುತ್ತಾರೆ ರೈತರು.

    ಈ ಗ್ರಾಮದ ಶೇ.80ರಷ್ಟು ಬಹುಪಾಲು ರೈತರು ಈರುಳ್ಳಿಯನ್ನೇ ನಂಬಿ ಬದುಕುತ್ತಾರೆ. ಹೀಗಾಗಿ ಈ ಗ್ರಾಮಕ್ಕೆ ಈರುಳ್ಳಿ ಗ್ರಾಮ ಎಂಬ ಹೆಸರುವಾಸಿಯಾಗಿದೆ. ಕಾರಣ ಈ ಬೆಳೆ ಸುಮಾರು ನಾಲ್ಕೈದು ತಿಂಗಳಲ್ಲಿ ಬರುತ್ತದೆ. ಹಿಂಗಾರು ಅವಧಿಯಲ್ಲಿ ಎರಡನೇಯ ಬೆಳೆಯನ್ನು ನಾವು ಹಾಕಬಹುದು ಎನ್ನುವ ಕಾರಣಕ್ಕೆ ಈ ಗ್ರಾಮದ ರೈತರು ಈರುಳ್ಳಿಯನ್ನೇ ನಂಬಿ ಬದುಕುತ್ತಾ ಬಂದಿದ್ದಾರೆ. ಕಳೆದ ಮೂರು ನಾಲ್ಕು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆ ಈ ರೈತರ ಬಾಳಿಗೆ ಕೊಳ್ಳಿ ಇಟ್ಟಿದೆ. ಸಂಪೂರ್ಣವಾಗಿ ಈರುಳ್ಳಿ ಹಾಳಾಗಿರುವಂಥ ದೃಶ್ಯಗಳು ಅಲ್ಲಲ್ಲಿ ಸಹಜವಾಗಿ ಕಂಡುಬರುತ್ತಿದೆ.

    ಇಷ್ಟೆಲ್ಲಾ ಅನಾಹುತವಾದರೂ ತೋಟಗಾರಿಕಾ ಇಲಾಖೆ ಅಥವಾ ಕೃಷಿ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಬಂದು ಭೇಟಿ ನೀಡಿಲ್ಲ ಎನ್ನುತ್ತಾರೆ ರೈತರು. ಇನ್ನು ಮಳೆ ಆವಾಂತರಕ್ಕೆ ಸಿಕ್ಕು ಹಾಳಾಗಿರುವ ಈರುಳ್ಳಿಗೆ ಸರ್ಕಾರದಿಂದ ಕೊಡುವ ಬೆಳೆ ಹಾನಿ ಪರಿಹಾರ ಯಾವುದಕ್ಕೂ ಸಾಲಲ್ಲ. ನಾವು ಎಕರೆ ಈರುಳ್ಳಿ ಬೆಳೆಯಲು 50 ಸಾವಿರದವರೆಗೆ ಖರ್ಚು ಮಾಡಿರುತ್ತೇವೆ. ಆದರೆ ಸರ್ಕಾರದವರು ಹೆಕ್ಟೆರ್‌ಗೆ ಮೂರೋ, ನಾಲ್ಕು ಸಾವಿರ ಪರಿಹಾರ ಕೊಟ್ಟು ಸುಮ್ಮನೆ ಆಗುತ್ತಾರೆ. ಹೀಗಾಗಿ ಈ ಬಾರಿ ನಮ್ಮ ಪರಿಸ್ಥಿತಿ ದೇವರಿಗೆ ಗೊತ್ತು ಅನ್ನುವಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸುತ್ತಾರೆ.

     

  • ಹಣ್ಣುಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್ – ಏನಿದು ಕ್ಲೀನ್ ಪ್ಲಾಂಟ್ ಪ್ರೋಗ್ರಾಂ?

    ಹಣ್ಣುಗಳ ಉತ್ಪಾದನೆ ಹೆಚ್ಚಿಸಲು ಕೇಂದ್ರದ ಮಾಸ್ಟರ್ ಪ್ಲ್ಯಾನ್ – ಏನಿದು ಕ್ಲೀನ್ ಪ್ಲಾಂಟ್ ಪ್ರೋಗ್ರಾಂ?

    ಭಾರತದಲ್ಲಿ ತೋಟಗಾರಿಕೆ ಬೆಳೆಗಳ ಇಳುವರಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ಕ್ಲೀನ್ ಪ್ಲಾಂಟ್ ಯೋಜನೆಗೆ (CPP) ಕೇಂದ್ರ ಸಚಿವ ಸಂಪುಟ (Union Cabinet) ಅನುಮೋದನೆ ನೀಡಿದೆ. ಈ ಯೋಜನೆ ರಾಷ್ಟ್ರದಾದ್ಯಂತ ಹಣ್ಣಿನ ಬೆಳೆಗಳ ಗುಣಮಟ್ಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.

    ಫೆಬ್ರವರಿ 2023 ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರ ಮಧ್ಯಂತರ ಬಜೆಟ್ (Interim Budget) ಭಾಷಣದಲ್ಲಿ ಈ ಯೋಜನೆಯನ್ನು ಘೋಷಿಸಿದ್ದರು. ಈ ಕಾರ್ಯಕ್ರಮಕ್ಕಾಗಿ ಕೃಷಿ ಸಚಿವಾಲಯ (Ministry of Agriculture) 1,765 ಕೋಟಿ ರೂ. ಹಣವನ್ನು ಮೀಸಲಿಟ್ಟಿದೆ. ಇದರಲ್ಲಿ ಅರ್ಧದಷ್ಟು ಭಾಗವನ್ನು ಮಿಷನ್ ಫಾರ್ ಇಂಟಿಗ್ರೇಟೆಡ್ ಡೆವಲಪ್ ಆಫ್ ಹಾರ್ಟಿಕಲ್ಚರ್ (MIDH) ನ ಬಜೆಟ್‌ನಿಂದ ಪಡೆಯಲಾಗಿದೆ. ಈ ಯೋಜನೆಗೆ ಬೇಕಾದ ಉಳಿದ ಅರ್ಧ ಹಣವನ್ನು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್‌ನಿಂದ (ADB) ಸಾಲದ ರೂಪದಲ್ಲಿ ಪಡೆಯಲಾಗುತ್ತದೆ. 

    CPP ಯೋಜನೆ ಎಂದರೇನು? 

    ತೋಟಗಾರಿಕೆ ಬೆಳೆಗಳ ಇಳುವರಿ ಮತ್ತು ಉತ್ಪಾದಕತೆಯನ್ನು ಹೆಚ್ಚಿಸುವ ಸಲುವಾಗಿ ಕೇಂದ್ರ ಸರ್ಕಾರ ಹಾಕಿಕೊಂಡ ಯೋಜನೆ ಇದಾಗಿದೆ. ಈ ಯೋಜನೆ ಮೂಲಕ ಉತ್ತಮ ಸಸಿಗಳನ್ನು ರೈತರಿಗೆ ಒದಗಿಸಿ ಹಣ್ಣಿನ ಉತ್ಪಾದನೆಯನ್ನು ಹೆಚ್ಚಿಸುವ ಗುರಿಯನ್ನು ಕೇಂದ್ರ ಹೊಂದಿದೆ. 

    CPP ಯೋಜನೆಯ ಮುಖ್ಯ ಉದ್ದೇಶವೇನು? 

    ಬೆಳೆಗಳ ಇಳುವರಿಯನ್ನು ಹೆಚ್ಚಿಸಲು ಮತ್ತು ಆದಾಯ ಹೆಚ್ಚಿಸಲು ಆರೋಗ್ಯವಂತ ಉತ್ತಮ ಗುಣಮಟ್ಟದ ಸಸ್ಯಗಳನ್ನು ರೈತರಿಗೆ ಒದಗಿಸುವುದು ಈ ಯೋಜನೆಯ ಮೂಲ ಉದ್ದೇಶವಾಗಿದೆ. 

    ಇದಕ್ಕಾಗಿ ಸರ್ಕಾರ ಕೈಗೊಳ್ಳಲಿರುವ ಯೋಜನೆಗಳೇನು? 

     9 ಕ್ಲೀನ್ ಪ್ಲಾಂಟ್ ಸೆಂಟರ್‌ಗಳ (CPCs) ಅಭಿವೃದ್ಧಿ ಮಾಡುವುದು. ಇದು ರೋಗ ಸಸಿಗಳನ್ನು ರೈತರಿಗೆ ಒದಗಿಸಲು ಅನುಕೂಲವಾಗಲಿದೆ. 

     CPC ಯಿಂದ ಪಡೆದ ಮೂಲ ಸಸ್ಯಗಳನ್ನು ನರ್ಸರಿಗಳಲ್ಲಿ ಬೆಳೆಸಿ, ಹೆಚ್ಚಿನ ಸಸ್ಯಗಳ ಅಭಿವೃದ್ಧಿಪಡಿಸಿ ರೈತರಿಗೆ ವಿತರಿಸಲಾಗುತ್ತದೆ. 

     ಸಸಿಗಳ ಮಾರಾಟದ ಸಂಪೂರ್ಣ ಹೊಣೆಗಾರಿಕೆ ಮತ್ತು ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ಸಮಿತಿ ರಚನೆ. 

    CPPಯ ಅವಶ್ಯಕತೆ ಏನು?

    ಚೀನಾದ ನಂತರ ಭಾರತವು ವಿಶ್ವದ ಎರಡನೇ ಅತಿದೊಡ್ಡ ಹಣ್ಣುಗಳು ಮತ್ತು ತರಕಾರಿಗಳನ್ನು ಉತ್ಪಾದಿಸುವ ದೇಶವಾಗಿದೆ. 2013-14 ರಿಂದ 2023-24ರವರೆಗೆ, ತೋಟಗಾರಿಕೆ ಬೆಳೆಗಳ ವ್ಯಾಪ್ತಿಯು 2.4 ಕೋಟಿ ಹೆಕ್ಟೇರ್‌ಗಳಿಂದ 2.86 ಕೋಟಿ ಹೆಕ್ಟೇರ್‌ಗಳಿಗೆ ಏರಿದೆ. ಉತ್ಪಾದನೆಯು 27.74 ಕೋಟಿ ಮೆಟ್ರಿಕ್ ಟನ್‌ಗಳಿಂದ (ಎಂಟಿ) 35.2 ಕೋಟಿ ಮೆಟ್ರಿಕ್‌ ಟನ್‌ಗೆ ಏರಿದೆ. 2023-24ರ ಹಣಕಾಸು ವರ್ಷದಲ್ಲಿ ಭಾರತವು 1.15 ಶತಕೋಟಿ ಡಾಲರ್‌ ಮೌಲ್ಯದ ತಾಜಾ ಹಣ್ಣುಗಳನ್ನು ರಫ್ತು ಮಾಡಿದೆ. ಉತ್ಪಾದನೆ ಹೆಚ್ಚಿಸುವ ಗುರಿ ಹಾಗೂ ರಫ್ತನ್ನು ಹೆಚ್ಚಿಸುವ ಉದ್ದೇಶದಿಂದ ಸಿಪಿಪಿ ಯೋಜನೆ ಬಹಳ ಪ್ರಾಮುಖ್ಯತೆ ಪಡೆದಿದೆ. 

    ವಿದೇಶಗಳಿಂದ ಭಾರತ ಯಾವೆಲ್ಲ ಹಣ್ಣಿನ ಸಸಿಗಳನ್ನು ಆಮದು ಮಾಡಿಕೊಂಡಿದೆ? 

    ಮೂಲಗಳ ಪ್ರಕಾರ 2018-20 ರ ನಡುವೆ, EXIM ಸಮಿತಿಯು 2018 ರಲ್ಲಿ 21.44 ಲಕ್ಷ ಸೇಬಿನ ಗಿಡಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿತು, ಇದು 2020 ರಲ್ಲಿ 49.57 ಲಕ್ಷಕ್ಕೆ ಏರಿತು. 2018 ರಲ್ಲಿ ಕೇವಲ 1,000 ಆವಕಾಡೊಗಳನ್ನು ಆಮದು ಮಾಡಿಕೊಳ್ಳಲು ಅನುಮತಿ ನೀಡಿತ್ತು.  ಇದು 2020 ರಲ್ಲಿ 26,500 ಕ್ಕೆ ಏರಿತು. ಹಾಗೆಯೇ, ಬ್ಲೂಬೆರ್ರಿ ಸಸ್ಯಗಳ ಆಮದು 2020 ರಲ್ಲಿ 4.35 ಲಕ್ಷಕ್ಕೆ ಏರಿಕೆ ಕಂಡಿದೆ. 

    ಪ್ರಸ್ತುತ ಸಸ್ಯಗಳನ್ನು ಆಮದು ಮಾಡಿಕೊಳ್ಳುವ ಪ್ರಕ್ರಿಯೆಗೆ ತೊಡಕಾಗಿದೆ, ಆಮದು ಮಾಡಿದ ಸಸ್ಯಗಳನ್ನು ಎರಡು ವರ್ಷಗಳ ಕಾಲ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತಿದೆ. CPC ಗಳು ಈ ಅವಧಿಯನ್ನು ಆರು ತಿಂಗಳ ಕಡಿತಗೊಳಿಸುತ್ತವೆ ಮತ್ತು ಭಾರತದಲ್ಲಿ ತೋಟಗಾರಿಕಾ ಬೆಳೆಗಳಿಗೆ ಆರೋಗ್ಯವಂತ ಸಸಿಗಳನ್ನು ಒದಗಿಸಲು ಇದು ಅನುಕೂಲವಾಗಲಿದೆ.

    ಕ್ಲೀನ್ ಪ್ಲಾಂಟ್ ಪ್ರೋಗ್ರಾಂ (CPP) ನ ಪ್ರಮುಖ ಪ್ರಯೋಜನಗಳೇನು?

    ರೈತರು: ಸಿಪಿಪಿ ವೈರಸ್-ಮುಕ್ತ, ಉತ್ತಮ ಗುಣಮಟ್ಟದ ಸಸಿಗಳನ್ನು ಒದಗಿಸುತ್ತದೆ. ಇದು ಹೆಚ್ಚಿನ ಇಳುವರಿ ಮತ್ತು ಆದಾಯಕ್ಕೆ ಕಾರಣವಾಗುತ್ತದೆ. 

    ನರ್ಸರಿಗಳು: ಸುವ್ಯವಸ್ಥಿತ ನರ್ಸರಿಗಳನ್ನು ಉತ್ತೇಜಿಸುವ ಮೂಲಕ, ಉತ್ತಮ ಸಸಿಗಳ ಅಭಿವೃದ್ಧಿಗೆ ಸಹಾಯವಾಗಲಿದೆ. 

    ಗ್ರಾಹಕರು: ಹಣ್ಣುಗಳ ರುಚಿ, ಆಕಾರ ಮತ್ತು ಪೌಷ್ಟಿಕಾಂಶ ಹೆಚ್ಚಾಗುವುದರಿಂದ ಗ್ರಾಹಕರನ್ನು ಸೆಳೆಯಲಿದೆ. 

    ರಫ್ತು: ಉತ್ತಮ ಗುಣಮಟ್ಟದ ಹಣ್ಣುಗಳ ಉತ್ಪಾದನೆ ಭಾರತವು ಪ್ರಮುಖ ಜಾಗತಿಕ ರಫ್ತುದಾರನಾಗಿ ಬೆಳೆಯಲು ಸಹಾಯಕವಾಗಲಿದೆ. ಅಂತರರಾಷ್ಟ್ರೀಯ ಹಣ್ಣಿನ ವ್ಯಾಪಾರದಲ್ಲಿ ತನ್ನ ಪಾಲನ್ನು ಈ ಯೋಜನೆ ಹೆಚ್ಚಿಸಲಿದೆ.

    ಇಷ್ಟೇ ಅಲ್ಲದೇ, ಸಣ್ಣ ಹಿಡುವಳಿದಾರರನ್ನು, ರೈತ ಮಹಿಳೆಯರನ್ನು ಈ ಯೋಜನೆ ತಲುಪುವಂತೆ ಕಾರ್ಯಗತಗೊಳಿಸಲು ಸರ್ಕಾರ ಮುಂದಾಗಿದೆ. ಸರ್ಕಾರ ರೈತರಿಗೆ ಸೂಕ್ತ ತರಬೇತಿ ಹಾಗೂ ತಂತ್ರಜ್ಞಾನಗಳ ಪರಿಚಯ ಮಾಡಿಸಲು ಅಗತ್ಯ ಕ್ರಮಕೈಗೊಳ್ಳಲಿದೆ.  

    CPP ಯ ಪ್ರಮುಖ ಅಂಶಗಳು

    ಕ್ಲೀನ್ ಪ್ಲಾಂಟ್ ಸೆಂಟರ್‌ಗಳು (CPC ಗಳು): ಸುಧಾರಿತ ರೋಗನಿರ್ಣಯದ ಚಿಕಿತ್ಸಕಗಳು ಮತ್ತು ಅಂಗಾಂಶ ಕೃಷಿ ಪ್ರಯೋಗಾಲಯಗಳೊಂದಿಗೆ ಸುಸಜ್ಜಿತವಾದ ಒಂಬತ್ತು ವಿಶ್ವದರ್ಜೆಯ ಅತ್ಯಾಧುನಿಕ CPC ಗಳನ್ನು ಭಾರತದಾದ್ಯಂತ ಸ್ಥಾಪಿಸಲಾಗುತ್ತದೆ. 

    ಇವುಗಳಲ್ಲಿ ದ್ರಾಕ್ಷಿ (NRC, ಪುಣೆ), ಸಮಶೀತೋಷ್ಣ ಹಣ್ಣುಗಳು – ಸೇಬು, ಬಾದಾಮಿ, ವಾಲ್‌ನಟ್ಸ್ ಇತ್ಯಾದಿ (CITH, ಶ್ರೀನಗರ & ಮುಕ್ತೇಶ್ವರ), ಸಿಟ್ರಸ್ ಹಣ್ಣುಗಳು (CCRI, ನಾಗ್ಪುರ್ & CIAH, ಬಿಕಾನೇರ್), ಮಾವು / ಪೇರಲೆ / ಆವಕಾಡೊ (IIHR, ಬೆಂಗಳೂರು); ಮಾವು / ಪೇರಲೆ / ಲಿಚಿ (CISH, ಲಕ್ನೋ), ದಾಳಿಂಬೆ (NRC, ಶೋಲಾಪುರ), ಮತ್ತು ಪೂರ್ವ ಭಾರತದಲ್ಲಿ ಉಷ್ಣವಲಯದ/ಉಪ ಉಷ್ಣವಲಯದ ಹಣ್ಣಿನ ಸಸಿಗಳನ್ನು ಈ ಕೇಂದ್ರಗಳಲ್ಲಿ ಬೆಳೆಸಲಾಗುತ್ತದೆ.  

    ಪ್ರಮಾಣೀಕರಣ ಮತ್ತು ಕಾನೂನು ಚೌಕಟ್ಟು: ಬೀಜಗಳ ಕಾಯಿದೆ 1966 ರ ಅಡಿಯಲ್ಲಿ ದೃಢವಾದ ಪ್ರಮಾಣೀಕರಣ ವ್ಯವಸ್ಥೆಯನ್ನು ಅಳವಡಿಸುವುದು. 

    ಮೂಲಸೌಕರ್ಯಗಳ ಅಭಿವೃದ್ಧಿ: ಮೂಲಸೌಕರ್ಯಗಳ ಅಭಿವೃದ್ಧಿಗಾಗಿ ದೊಡ್ಡ ಪ್ರಮಾಣದ ನರ್ಸರಿಗಳಿಗೆ ಬೆಂಬಲವನ್ನು ಒದಗಿಸುವುದು. ಈ ಮೂಲಕ ಉತ್ತಮ ಸಸಿಗಳ ಸಂಖ್ಯೆಯನ್ನು ಹೆಚ್ಚಿಸುವುದು. 

    ಈ ಕಾರ್ಯಕ್ರಮವು ಭಾರತವನ್ನು ಪ್ರಮುಖ ಜಾಗತಿಕ ಹಣ್ಣುಗಳ ರಫ್ತುದಾರನಾಗಿ ಮಾಡುವಲ್ಲಿ ನಿರ್ಣಾಯಕ ಪಾತ್ರವಹಿಸಲಿದೆ. ಈ ಕಾರ್ಯಕ್ರಮವನ್ನು ರಾಷ್ಟ್ರೀಯ ತೋಟಗಾರಿಕಾ ಮಂಡಳಿಯು ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR) ಸಹಯೋಗದೊಂದಿಗೆ ಕಾರ್ಯಗತಗೊಳಿಸುತ್ತದೆ. CPC ಗಳು ಅಮೆರಿಕ, ಇಸ್ರೇಲ್ ಮತ್ತು ನೆದರ್‌ಲ್ಯಾಂಡ್ಸ್‌ನಂತಹ ದೇಶಗಳಲ್ಲಿನ ಯಶಸ್ವಿ ಯೋಜನೆಯಾಗಿದೆ. 

  • ಮಾವಿಗೆ ಬಿಸಿಲಿನ ಶಾಪ – ಬರೋಬ್ಬರಿ 400 ಕೋಟಿ ಮೌಲ್ಯದ ಮಾವು ನಷ್ಟ

    ಮಾವಿಗೆ ಬಿಸಿಲಿನ ಶಾಪ – ಬರೋಬ್ಬರಿ 400 ಕೋಟಿ ಮೌಲ್ಯದ ಮಾವು ನಷ್ಟ

    ರಾಮನಗರ: ಭೀಕರ ಬರಗಾಲದಿಂದ ಹಣ್ಣುಗಳ ರಾಜ ಎನಿಸಿಕೊಂಡಿರುವ ಮಾವು (Mangoes) ಬೆಳೆ ಸಂಪೂರ್ಣ ನೆಲ ಕಚ್ಚಿದ್ದು, ರೈತರಿಗೆ ಸಂಕಷ್ಟ ಎದುರಾಗಿದೆ. ಜಿಲ್ಲೆಯಲ್ಲಿ ಬರೋಬ್ಬರಿ 400ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಿದೆ. ಇತ್ತ ಹಾಕಿದ ಬಂಡವಾಳವೂ ಇಲ್ಲದೇ, ಹತ್ತಾರು ವರ್ಷಗಳಿಂದ ಬೆಳೆದಿದ್ದ ಮರಗಳೂ ಉಳಿಯದೇ ರೈತರ ಬದುಕು ಶೋಚನೀಯ ಸ್ಥಿತಿಗೆ ತಲುಪಿದೆ.

    ರೇಷ್ಮೆನಗರಿ ಎಂದು ಬಿರುದು ಪಡೆದ ರಾಮನಗರ (Ramanagar) ಹಣ್ಣಿನ ರಾಜ ಮಾವು ಬೆಳೆಯುವಲ್ಲೂ ಹೆಸರು ಮಾಡಿದೆ. ರಾಜ್ಯದಲ್ಲಿ ಮಾವಿನ ಸೀಸನ್ ಶುರುವಾಗೋದು ಇಲ್ಲಿಂದಲೇ. ಅತ್ಯಂತ ಉತ್ಕೃಷ್ಟ ಹಾಗೂ ವಿವಿಧ ತಳಿಯ ಮಾವನ್ನು ವಿದೇಶಕ್ಕೆ ರಫ್ತು ಮಾಡುವ ಇತಿಹಾಸ ಈ ಜಿಲ್ಲೆಗಿದೆ. ಈ ಬಾರಿ ಮಾವು ಬೆಳೆಯ ಇತಿಹಾಸದಲ್ಲೇ ಕಂಡು ಕೇಳರಿಯದ ಬರದಿಂದ ಮಾವು ಬೆಳೆ ನೆಲಕಚ್ಚಿದೆ. ಇದನ್ನೂ ಓದಿ: ಇಂಡಿಯಾ ಒಕ್ಕೂಟ ಗೆದ್ದರೇ ಮರುದಿನವೇ ಜೈಲಿನಿಂದ ಹೊರಬರುವೆ: ಕೇಜ್ರಿವಾಲ್

    ಸೀಸನ್‍ನಲ್ಲಿ ಸುಮಾರು 2 ಲಕ್ಷದ 50 ಸಾವಿರ ಮೆಟ್ರಿಕ್ ಟನ್ ಮಾವು ಉತ್ಪಾದನೆ ಆಗುತ್ತಿದ್ದ ಮಾವು ಈ ಬಾರಿ ಕೆಲವೇ ಕೆಲವು ಟನ್‍ಗಳಿಗೆ ಮಾತ್ರ ಸೀಮಿತವಾಗಿದೆ. ಮಾವು ಬೆಳೆದ ರೈತರ ಲೆಕ್ಕಾಚಾರ ಸಂಪೂರ್ಣ ಉಲ್ಟಾ ಆಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

    ತಾಪಮಾನ ಏರಿಕೆಯಿಂದಾಗಿ ಮರದಲ್ಲಿ ಕಾಯಿಗಟ್ಟ ಬೇಕಿದ್ದ ಹೂಗಳು, ಸಣ್ಣ ಕಾಯಿಗಳು ಬಿಸಿಲಿನ ಝಳಕ್ಕೆ ಉದುರಿ ಹೋಗುತ್ತಿವೆ. ಜೊತೆಗೆ ಕೀಟಗಳ ಸಮಸ್ಯೆ ಸಹ ಮಾವಿಗೆ ಆವರಿಸಿದೆ.

    ಜಿಲ್ಲೆಯಲ್ಲಿ ಒಟ್ಟು 30 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಜಮೀನಿನಲ್ಲಿ ಮಾವು ಬೆಳೆಯಲಾಗುತ್ತಿದೆ. ಫೆಬ್ರವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳಿನಲ್ಲಿನ ತೀವ್ರ ತಾಪಮಾನದಿಂದ ಹೂಗಳೆಲ್ಲ ಉದುರಿ 90% ಇಳುವರಿ ಕುಸಿದಿದ್ದು 10% ರಷ್ಟು ಮಾತ್ರ ಇಳುವರಿಯಾಗಿದೆ. ಅದೂ ಕೂಡಾ ಬಿಸಿಲಿಗೆ ಒಣಗಿ ಗುಣಮಟ್ಟ ಕಳೆದುಕೊಂಡಿದ್ದು, ಮಾರುಕಟ್ಟೆಯಲ್ಲೂ ಕೊಂಡುಕೊಳ್ಳುವವರಿಲ್ಲದೇ ಬೇಡಿಕೆ ಕುಸಿತ ಕಂಡಿದೆ. ಈ ಬಗ್ಗೆ ಸಮೀಕ್ಷೆ ಮಾಡಿರುವ ಜಿಲ್ಲಾಡಳಿತ 400ಕೋಟಿ ರೂ. ಮೌಲ್ಯದ ಮಾವು ಬೆಳೆ ನಾಶ ಆಗಿರುವ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

    ಇನ್ನೂ ಮಾವು ಬೆಳೆಗೆ ವಿಮೆ ನೀಡಲು ವಿಮಾ ಕಂಪನಿಗಳು ಹಿಂದೇಟು ಹಾಕಿವೆ. ಉಷ್ಣಾಂಶದಿಂದ ಬೆಳೆ ನಾಶವಾಗಿರೋದಕ್ಕೆ ವಿಮೆ ಅನ್ವಯವಾಗುವುದಿಲ್ಲ ಎಂದು ಹೇಳುತ್ತಿರುವುದು ಮಾವು ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಕೂಡಲೇ ಸರ್ಕಾರ ಈ ಬಗ್ಗೆ ಗಮನಹರಿಸಿ ರೈತರಿಗೆ ಸೂಕ್ತ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಂತ್ರಸ್ತೆಯ ಅಪಹರಣ ಕೇಸ್- ಹೆಚ್‌ಡಿ ರೇವಣ್ಣಗೆ ಜಾಮೀನು ಮಂಜೂರು