Tag: Agriculture VV

  • ಭತ್ತದ ಕಣಜ ಗಂಗಾವತಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ

    ಭತ್ತದ ಕಣಜ ಗಂಗಾವತಿಯಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಸ್ತಾವನೆ

    ಕೊಪ್ಪಳ: ರಾಜ್ಯದ ಭತ್ತದ ಕಣಜವೆಂದೇ ಹೆಸರಾದ ಗಂಗಾವತಿ ತಾಲೂಕಿನಲ್ಲಿ ಕೃಷಿ ಕಾಲೇಜು ಆರಂಭಿಸುವಂತೆ ರಾಯಚೂರು ಕೃಷಿ ವಿವಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದೆ.

    ಅತಿ ಹೆಚ್ಚು ರೈಸ್ ಮಿಲ್, ಗುಣಮಟ್ಟದ ಅಕ್ಕಿ ಬೆಳೆದು ದೇಶ, ವಿದೇಶಕ್ಕೆ ರಫ್ತು ಮಾಡುವ ಮೂಲಕ ತನ್ನದೇ ಆದ ವಿಶಿಷ್ಟ ಸ್ಥಾನವನ್ನು ಗಂಗಾವತಿ ಹೊಂದಿದೆ. ಇಲ್ಲಿನ ಕೃಷಿ ವಿಸ್ತರಣಾ ಕೇಂದ್ರ 1956ರಲ್ಲಿಯೇ ಸ್ಥಾಪನೆಯಾಗುವ ಮೂಲಕ ಗಂಗಾವತಿ, ಕಾರಟಗಿ, ಮುನಿರಾಬಾದ್, ಬಳ್ಳಾರಿ ಜಿಲ್ಲೆಯ ಶಿರಗುಪ್ಪ, ಹೊಸಪೇಟೆ, ಕಂಪ್ಲಿ, ಕುರಗೋಡು, ರಾಯಚೂರು ಜಿಲ್ಲೆಯ ಮಸ್ಕಿ, ಸಿಂಧನೂರು ಭಾಗದ ರೈತರಿಗೆ ವಿವಿಧ ರೀತಿಯಲ್ಲಿ ನೆರವಾಗುವ ಮೂಲಕ ಕೃಷಿ ಕ್ಷೇತ್ರದಲ್ಲಿ ತನ್ನದೇ ಆದ ಹೆಗ್ಗಳಿಕೆಯನ್ನು ಹೊಂದಿದೆ.

    ಇಲ್ಲಿ ಕೃಷಿ ಕಾಲೇಜು ಸ್ಥಾಪಿಸಿದರೆ ಈ ಭಾಗದ ರೈತರ ಮತ್ತು ಅವರ ಅವಲಂಬಿತರಿಗೆ ಇನ್ನೂ ಹೆಚ್ಚಿನ ಸಹಾಯ ದೊರೆಯುವ ಆಶಯದೊಂದಿದೆ ಕಾಲೇಜು ಆರಂಭಕ್ಕೆ ಮನವಿ ಮಾಡಲಾಗಿದೆ. ಇಲ್ಲಿ 284 ಎಕರೆ ಪ್ರದೇಶದಲ್ಲಿ ಕೃಷಿ ಸಂಶೋಧನಾ ಕೇಂದ್ರವಿದ್ದು, ಇಲ್ಲಿಯೇ ಕಾಲೇಜು ಆರಂಭಿಸಿದರೆ ಸೂಕ್ತ ಎನ್ನಲಾಗುತ್ತದೆ. ಕಾಲೇಜಿಗೆ 112 ಕೋಟಿ ಅನುದಾನಕ್ಕೆ ಮನವಿ ಮಾಡಲಾಗಿದೆ.

    ಈ ಹಿಂದೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಇಲ್ಲಿ ಕೃಷಿ ಕಾಲೇಜಿಗೆ 46.50 ಕೋಟಿ ಹಣ ಮಂಜೂರು ಮಾಡಿದ್ದರು. ಅಲ್ಲದೆ ಶಾಸಕ ಪರಣ್ಣ ಮುನವಳ್ಳಿ ಕೂಡ ಕಾಲೇಜು ನಿರ್ಮಾಣಕ್ಕೆ ಶೀಘ್ರ ಶಂಕುಸ್ಥಾಪನೆ ನೆರೆವೇರಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ನಂತರ ಬಂದ ಸರ್ಕಾರಗಳು ಈ ಪ್ರಸ್ತಾವಕ್ಕೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೇ ಸುಮ್ಮನಿದ್ದರಿಂದ ಕಾಲೇಜು ಸ್ಥಾಪನೆ ಕನಸಾಗಿಯೇ ಉಳಿದಿತ್ತು.

    ಈಗ ಮತ್ತೆ ಸರ್ಕಾರಕ್ಕೆ ಹೊಸ ಪ್ರಸ್ತಾವನೆಯನ್ನು ಸಲ್ಲಿಸಲಾಗಿದ್ದು, ಶೀಘ್ರ ಕಾಲೇಜು ಆರಂಭಿಸಬೇಕು ಎಂದು ಈ ಭಾಗದ ಜನರು ಬೇಡಿಕೆ ಇಟ್ಟಿದ್ದಾರೆ. ಈ ಭಾಗದಲ್ಲಿ ಭತ್ತ, ಸಜ್ಜೆ, ರಾಗಿ, ಶೇಂಗಾ, ಮುಸುಕಿನಜೋಳ, ಕಬ್ಬು, ಹತ್ತಿ ಬೆಳೆದು ರೈತರು ಸಾಧನೆ ಮಾಡಿದ್ದಾರೆ. ಹೊಸ ಪ್ರಯೋಗಗಳನ್ನು ಪ್ರಗತಿಪರ ರೈತರು ಮಾಡಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ.

    ಕೃಷಿ ಕ್ಷೇತ್ರ ಬಗ್ಗೆ ಅಪಾರ ದೇಶೀ ಜ್ಞಾನ ಹೊಂದಿರುವ ಇಲ್ಲಿನ ರೈತರಿಗೆ ಕೃಷಿ ಕಾಲೇಜು ಆರಂಭಿಸುವುದರಿಂದ ಅವಕಾಶಗಳು ಸೃಷ್ಟಿಯಾಗುತ್ತವೆ. ಅಲ್ಲದೆ ಆಧುನಿಕ, ವೈಜ್ಞಾನಿಕ ಕೃಷಿಗೆ ಹೇರಳ ಮಾನವ ಸಂಪನ್ಮೂಲವನ್ನು ತಯಾರಿಸುವ ಹೊಣೆ ಕಾಲೇಜಿನ ಮೂಲಕ ಆಗುತ್ತದೆ ಎಂಬ ಭರವಸೆಯನ್ನು ಇಲ್ಲಿನ ರೈತರು ಹೊಂದಿದ್ದಾರೆ.

  • ಕಡಿಯದೇ ಕ್ರೇನ್‌ನಿಂದ ಮರಗಳ ಸ್ಥಳಾಂತರ – ಪರಿಸರ ಉಳಿಸಿದ ಕೃಷಿ ವಿವಿ

    ಕಡಿಯದೇ ಕ್ರೇನ್‌ನಿಂದ ಮರಗಳ ಸ್ಥಳಾಂತರ – ಪರಿಸರ ಉಳಿಸಿದ ಕೃಷಿ ವಿವಿ

    ಶಿವಮೊಗ್ಗ: ವಿಶೇಷ ಯಂತ್ರಗಳನ್ನು ಬಳಸಿ ಮರಗಳನ್ನು ಒಂದೆಡೆಯಿಂದ ಬೇರೆಡೆಗೆ ಸ್ಥಳಾಂತರಿಸುವ ದೃಶ್ಯಗಳನ್ನು ನೋಡಿರುತ್ತೀರ. ಆದರೆ ಕ್ರೇನ್, ಜೆಸಿಬಿ ಮೂಲಕ ಕೂಡ ಮರಗಳನ್ನು ಸ್ಥಳಾಂತರ ಮಾಡಬಹುದು ಎಂದು ಶಿವಮೊಗ್ಗದ ಕೃಷಿ ವಿವಿ ತೋರಿಸಿಕೊಟ್ಟಿದೆ.

    ಹೌದು ಜಿಲ್ಲೆಯ ಸಾಗರ ತಾಲೂಕು ಆನಂದಪುರ ಸಮೀಪದ ಇರುವಕ್ಕಿ ಗ್ರಾಮದಲ್ಲಿರುವ ಕೃಷಿ ವಿವಿ ಆವರಣದಲ್ಲಿರುವ ಬೀಟೆ ಮರಗಳನ್ನು ಇದೇ ಮಾದರಿಯಲ್ಲಿ ಬೇರೆಡೆಗೆ ಶಿಫ್ಟ್ ಮಾಡಲಾಗಿದೆ. ವಿದೇಶಗಳಲ್ಲಿ ಪರಿಸರ ಉಳಿಸುವ ನಿಟ್ಟಿನಲ್ಲಿ ಮರಗಳ ಮಾರಣ ಹೋಮ ಮಾಡದೇ, ದೊಡ್ಡ ದೊಡ್ಡ ಮರಗಳನ್ನೇ ವಿಶೇಷ ಯಂತ್ರಗಳನ್ನು ಬಳಸಿ ಬೇರೆಡೆಗೆ ಸ್ಥಳಾಂತರಿಸುವ ದೃಶ್ಯಗಳನ್ನ ಆಗಾಗ ವಿಡಿಯೋಗಳಲ್ಲಿ ನೋಡಿದ್ದೀವಿ. ಇದಕ್ಕಾಗಿಯೇ ವಿಶೇಷ ಯಂತ್ರಗಳನ್ನು ಅಲ್ಲಿ ಅಲ್ಲಿ ಬಳಸಲಾಗುತ್ತದೆ. ಆದರೆ ಮಲೆನಾಡಿನಲ್ಲಿ ಅಂತಹ ಯಂತ್ರಗಳು ಇಲ್ಲದೆಯೂ, ಮರಗಳನ್ನು ಶಿಫ್ಟ್ ಮಾಡಬಹುದು ಎಂದು ತೋರಿಸಿಕೊಡಲಾಗಿದೆ.

    ಅರಣ್ಯ ಇಲಾಖೆ ಅನುಮತಿ ಪಡೆದು ವಿವಿ ಆವರಣದಲ್ಲಿರುವ ಬೀಟೆ ಮರಗಳನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರಿಸಲಾಗಿದ್ದು, ಇದಕ್ಕೆ ವಿಶೇಷ ಯಂತ್ರವೇನು ಬಳಸಲಾಗಿಲ್ಲ. ಬದಲಾಗಿ ಕ್ರೇನ್ ಮತ್ತು ಜೆಸಿಬಿ ಮೂಲಕ ಇದ್ದ ಮರಗಳನ್ನ ಹಾಗೆಯೇ ಕಿತ್ತು ಬೇರೆಡೆಗೆ ನೆಡಲಾಗಿದೆ.

    ಕೃಷಿ ವಿವಿಗಾಗಿ ಜಾಗದ ಅವಶ್ಯಕತೆ ಈ ಬೀಟೆ ಮರಗಳನ್ನು ಕಟಾವು ಮಾಡಲೇ ಬೇಕಿತ್ತು. ಸುಮಾರು 50 ಮರಗಳ ಕಟಾವು ಮಾಡಬೇಕಾಗಿತ್ತು. ಇವೆಲ್ಲವೂ ಇದೀಗ ಕಟಾವಿನ ಬದಲಾಗಿ ಪರಿಸರ ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಬೆರೆಡೆಗೆ ಮರಗಳನ್ನು ಶಿಫ್ಟ್ ಮಾಡಲಾಗುತ್ತಿದೆ. ಈ ಮೂಲಕ ಶಿವಮೊಗ್ಗ ಕೃಷಿ ವಿವಿ ಕಟ್ಟಡ ನಿರ್ಮಾಣಕ್ಕಾಗಿ ಮರಗಳನ್ನು ಉರುಳಿಸುವ ಬದಲಾಗಿ ಅವುಗಳನ್ನು ಉಳಿಸಿ ಬದಲಾವಣೆ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ.