Tag: Agriculture Market

  • ಹೂವನ್ನು 2ರೂಪಾಯಿಗೂ ಕೇಳುವವರಿಲ್ಲ – ರಸ್ತೆಗೆ ಎಸೆಯುತ್ತಿರುವ ರೈತರು

    ಹೂವನ್ನು 2ರೂಪಾಯಿಗೂ ಕೇಳುವವರಿಲ್ಲ – ರಸ್ತೆಗೆ ಎಸೆಯುತ್ತಿರುವ ರೈತರು

    ಧಾರವಾಡ: ಮಾರುಕಟ್ಟೆಯಲ್ಲಿ ಹೂವಿಗೆ ಬೆಲೆನೇ ಇಲ್ಲದಂತೆಯಾಗಿದೆ. ಹೂವನ್ನು 2ರೂಪಾಯಿಗೂ ಕೇಳೋರಿಲ್ಲ ಎಂದು ರೈತರು ಕಣ್ಣೀರು ಹಾಕುತ್ತಿರುವುದು ಧಾರವಾಡದ ಮಾರುಕಟ್ಟೆಯಲ್ಲಿ ಕಂಡುಬಂದಿದೆ.ಇದನ್ನೂ ಓದಿ: ಸುಳ್ಳು ಸುದ್ದಿಗಳಿಗೆ ಬ್ರೇಕ್ ಹಾಕಿದ ನಟಿ ಪ್ರೇಮಾ

    ಲಾಕ್‍ಡೌನ್ ಇರುವುದರಿಂದ ಇದ್ದ ಮದುವೆ ಕಾರ್ಯಗಳನ್ನು ರದ್ದು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಸೇವಂತಿಗೆ ಹೂವು ಬೆಳೆದ ರೈತರು ಕಂಗಾಲಾಗಿದ್ದು, ಸದ್ಯ 2 ರಿಂದ 4 ರೂಪಾಯಿಗೆ ಹೂವನ್ನ ತೆಗೆದುಕೊಳ್ಳುವವರಿಲ್ಲ. ಧಾರವಾಡ ಮಾರುಕಟ್ಟೆಗೆ ಹೂವು ತೆಗೆದುಕೊಂಡು ಹೋಗಿ ಮಾರಾಟವಾಗದೇ ರಸ್ತೆ ಬದಿಗೆ ಎಸೆದು ಬರುವಂತೆ ಆಗಿದೆ ಎಂದು ರೈತರು ತಮ್ಮ ಅಳಲನ್ನ ತೊಡಿಕೊಳ್ಳುತಿದ್ದಾರೆ. ಇದನ್ನೂ ಓದಿ:ಜ್ವರ ಕಡಿಮೆಯಾಗಿದ್ದು, ಆಸ್ಪತ್ರೆಯಲ್ಲಿಯೇ ಸಿದ್ದರಾಮಯ್ಯ ವಿಶ್ರಾಂತಿ

    ಸದ್ಯ ಹೂವು ಹೊಲದಲ್ಲೇ ಹಾಳಾಗಿ ಹೋಗುವುದನ್ನ ಬಿಡದೇ ಕೂಲಿ ಮಾಡುವವರಿಗೆ ಕಟಾವ್ ಮಾಡಲು ಹಚ್ಚಿದ್ದಾರೆ. ಆದರೆ ಕೂಲಿ ಹಾಗೂ ವಾಹನದ ಬಾಡಿಗೆ  ಮೈಮೇಲೆ ಬರುತ್ತಿದೆ ಎಂದು ಹೂವು ಬೆಳೆದ ರೈತರು ಹೇಳಿದ್ದಾರೆ. ಜಿಲ್ಲೆಯ ಕುರುಬಗಟ್ಟಿ, ಮಂಗಳಗಟ್ಟಿ, ಹುಬ್ಬಳ್ಳಿ ರಸ್ತೆ ಸೇರಿ ಹಲವು ಕಡೆ ರೈತರು ಹೂವನ್ನ ಬೆಳೆದಿದ್ದಾರೆ. ಕಳೆದ ವರ್ಷ ಇದೇ ರೀತಿ ಲಾಕ್‍ಡೌನ್ ಇರುವುದರಿಂದ  ಕಷ್ಟವಾಗಿತ್ತು. ಈ ಬಾರಿಯೂ   ಸಂಕಷ್ಟಕ್ಕೆ ಸಿಲುಕಿಸಿದೆ ಎಂದು ಹೇಳುತ್ತಾ ರೈತರು ಕಣ್ಣೀರು ಹಾಕುತ್ತಿದ್ದಾರೆ.

  • ಕೃಷಿ ಮಾರುಕಟ್ಟೆ ಶುಲ್ಕ ಇಳಿಕೆ- ಸಿಎಂಗೆ ಅಭಿನಂದಿಸಿದ ಎಪಿಎಂಸಿ ವರ್ತಕರು

    ಕೃಷಿ ಮಾರುಕಟ್ಟೆ ಶುಲ್ಕ ಇಳಿಕೆ- ಸಿಎಂಗೆ ಅಭಿನಂದಿಸಿದ ಎಪಿಎಂಸಿ ವರ್ತಕರು

    ಶಿವಮೊಗ್ಗ: ಕೃಷಿ ಮಾರುಕಟ್ಟೆ ಶುಲ್ಕವನ್ನು ಶೇ. 1 ರಿಂದ ಶೇ. 0.35 ಕ್ಕೆ ಇಳಿಸಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ ಅಡಿಕೆ ಟಾಸ್ಕ್ ಫೋರ್ಸ್ ಅಧ್ಯಕ್ಷ ಹಾಗೂ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಮತ್ತು ಸಂಸದ ಬಿ.ವೈ. ರಾಘವೇಂದ್ರ ಅಭಿನಂದನೆ ಸಲ್ಲಿಸಿದ್ದಾರೆ.

    ಶಿವಮೊಗ್ಗದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಪಿಎಂಸಿ ಸೆಸ್ ವಿಷಯಕ್ಕೆ ಸಂಬಂಧಿಸಿದಂತೆ ಕಳೆದ ಹಲವು ದಿನಗಳಿಂದ ಗೊಂದಲ ಉಂಟಾಗಿತ್ತು. ಎಪಿಎಂಸಿ ವರ್ತಕರು ತಮ್ಮ ವ್ಯಾಪಾರ ಬಂದ್ ಮಾಡಿ ಮುಷ್ಕರ ನಡೆಸುತ್ತಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್. ಈಶ್ವರಪ್ಪನವರ ಸಲಹೆಯಂತೆ ಸಂಸದರ ಜೊತೆಗೂಡಿ ಎಪಿಎಂಸಿ ವರ್ತಕರೊಡನೆ ಮುಖ್ಯಮಂತ್ರಿ ಅವರ ಬಳಿಗೆ ನಿಯೋಗ ತೆರಳಿದ್ದೇವು. ಈ ವೇಳೆ ಮುಖ್ಯಮಂತ್ರಿಗಳಿಗೆ ಮತ್ತು ಕೃಷಿ ಸಚಿವರಿಗೆ ಸೆಸ್ ಇಳಿಕೆ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಜು. 23 ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಮ್ಮ ಮನವಿಯನ್ನು ಮನ್ನಿಸಿದ ಸರ್ಕಾರ ಮಾರುಕಟ್ಟೆ ಶುಲ್ಕವನ್ನು ಶೇ.0.35ಕ್ಕೆ ಇಳಿಸಿದೆ. ಇದರಿಂದ ವ್ಯಾಪಾರಸ್ಥರಿಗೆ ಸಂತೋಷವಾಗಿದೆ ಎಂದಿದ್ದಾರೆ.

    ಕೇಂದ್ರ ಸರ್ಕಾರ ಎಪಿಎಂಸಿ ಕಾಯ್ದೆಯನ್ನು ಜಾರಿಗೆ ತಂದಿದ್ದು, ರೈತರಿಗೆ ಅನುಕೂಲವಾಗಲಿ ಎಂದು ರೈತರು ತಮ್ಮ ಉತ್ಪನ್ನಗಳನ್ನು ಮಾರುಕಟ್ಟೆ ಒಳಗೆ ಅಥವಾ ಮಾರುಕಟ್ಟೆಯ ಹೊರಗೆ ಮಾರಾಟ ಮಾಡುವುದರಿಂದ ದುಪ್ಪಟ್ಟು ಬೆಲೆ ಸಿಗಬಹುದು ಎಂದು ಜಾರಿಗೆ ತಂದಿತ್ತು. ಆದರೆ ಕೃಷಿ ಮಾರುಕಟ್ಟೆಗಳಲ್ಲಿ ಸೆಸ್ ಇಲ್ಲದಿದ್ದರೆ, ಅಥವಾ ಜಾಸ್ತಿ ಇದ್ದರೆ ರೈತರು ಮಾರುಕಟ್ಟೆ ಅಂಗಳಕ್ಕೆ ಬರುವುದಿಲ್ಲ ಎಂದು ಗಮನಿಸಿ ಈ ಶುಲ್ಕವನ್ನು ಕಡಿಮೆ ಮಾಡಲಾಗಿದೆ. ಇದರಿಂದ ಟೆಂಡರ್ ಗಳು ಹೆಚ್ಚಾಗಿ ರೈತರಿಗೂ ಕೂಡ ಒಳ್ಳೆಯ ಬೆಲೆ ಸಿಗುತ್ತದೆ.

    ಮಾರುಕಟ್ಟೆಗೂ ಕೂಡ ಆದಾಯ ಸಿಗುತ್ತದೆ ಎಂದಿದ್ದಾರೆ. ದೇಶದಲ್ಲಿಯೇ ಇದೊಂದು ಒಳ್ಳೆಯ ನಿರ್ಧಾರವಾಗಿದೆ. ಶಿವಮೊಗ್ಗ ಜಿಲ್ಲೆಯಿಂದಲೇ ಇದು ಆರಂಭವಾಗಿದೆ. ಈಗ ಸೋಮವಾರದಿಂದ ಎಪಿಎಂಸಿಗಳು ತಮ್ಮ ಮಾರಾಟವನ್ನು ಪುನಃ ಆರಂಭ ಮಾಡಲು ಸೂಚಿಸಲಾಗಿದೆ ಎಂದು ಶಾಸಕ ಜ್ಞಾನೇಂದ್ರ ಹೇಳಿದ್ದಾರೆ.

  • ದೆಹಲಿ ಅಗ್ನಿ ಅವಘಡ- 11 ಜನರ ಜೀವ ಉಳಿಸಿದ ಫೈರ್ ಮ್ಯಾನ್

    ದೆಹಲಿ ಅಗ್ನಿ ಅವಘಡ- 11 ಜನರ ಜೀವ ಉಳಿಸಿದ ಫೈರ್ ಮ್ಯಾನ್

    – ಗೃಹ ಸಚಿವರಾದಿಯಾಗಿ ಹಲವರಿಂದ ಮೆಚ್ಚುಗೆ

    ನವದೆಹಲಿ: ನಗರದ ಕೃಷಿ ಮಾರುಕಟ್ಟೆಯಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 43 ಜನ ಸಾವನ್ನಪ್ಪಿದ್ದು, ಈ ನಡುವೆಯೇ ಬೆಂಕಿಯ ಕೆನ್ನಾಲೆಯಿಂದ 11 ಜನರನ್ನು ರಕ್ಷಿಸುವ ಮೂಲಕ ಅಗ್ನಿ ಶಾಮಕ ದಳದ ಸಿಬ್ಬಂದಿಯೊಬ್ಬರು ಹೀರೋ ಆಗಿದ್ದಾರೆ.

    ಬೆಂಕಿ ಹೊತ್ತಿಕೊಂಡ ಕಟ್ಟಡಕ್ಕೆ ಮೊದಲು ಪ್ರವೇಶಿಸಿ ರಕ್ಷಣಾ ಕಾರ್ಯ ನಡೆಸಿ, ಅಗ್ನಿಶಾಮಕ ಸಿಬ್ಬಂದಿ ರಾಜೇಶ್ ಶುಕ್ಲಾ ತಮ್ಮ ಶಕ್ತಿ ಮೀರಿ ಕಾರ್ಯನಿರ್ವಹಿಸುವ ಮೂಲಕ 11 ಜನರನ್ನು ರಕ್ಷಿಸಿದ್ದಾರೆ. ಇದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

    ಉತ್ತರ ದೆಹಲಿಯ ಅನಾಜ್ ಮಂಡಿಯ ಫ್ಯಾಕ್ಟರಿಯಲ್ಲಿ ದುರಂತ ಸಂಭವಿಸಿದ್ದು, ಬೃಹತ್ ಬೆಂಕಿಯನ್ನು ಕಂಡು ರಕ್ಷಣಾ ಕಾರ್ಯಕ್ಕೆ ಇಳಿಯಲು ಬಹುತೇಕ ಅಗ್ನಿಶಾಮಕ ಸಿಬ್ಬಂದಿ ಆರಂಭದಲ್ಲಿ ಹಿಂದೇಟು ಹಾಕಿದ್ದರು. ಆದರೆ ಯಾವುದನ್ನೂ ಲೆಕ್ಕಿಸದೆ ಬೆಂಕಿ ಹೊತ್ತಿಕೊಂಡ ಕಟ್ಟಡಕ್ಕೆ ಪ್ರವೇಶಿಸಿ ರಾಜೇಶ್ ಶುಕ್ಲಾ ರಕ್ಷಣಾ ಕಾರ್ಯಚರಣೆ ನಡೆಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಶುಕ್ಲಾ ಸೇರಿದಂತೆ ಅನೇಕ ಅಗ್ನಿಶಾಮಕ ಸಿಬ್ಬಂದಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.

    11 ಜನರನ್ನು ರಕ್ಷಿಸಿದ ಹೀರೋ ಶುಕ್ಲಾ ಅವರಿಗೂ ಸಹ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡ ಸಿಬ್ಬಂದಿಯ ಆರೋಗ್ಯ ವಿಚಾರಿಸಲು ದೆಹಲಿಯ ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ಎಲ್‍ಎನ್‍ಜೆಪಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಈ ವೇಳೆ ಸಿಬ್ಬಂದಿಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ಶುಕ್ಲಾ ಅವರು ಮೊದಲು ಕಟ್ಟಡದೊಳಗೆ ಪ್ರವೇಶಿಸಿ 11 ಜನರನ್ನು ರಕ್ಷಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರೇ ನಿಜವಾದ ಹೀರೋ ಎಂದು ಸಂಬೋಧಿಸಿದ್ದಾರೆ.

    ಗೃಹ ಸಚಿವ ಸತ್ಯೇಂದ್ರ ಜೈನ್ ಅವರು ಶುಕ್ಲಾ ಅವರ ಫೋಟೋವನ್ನು ಟ್ವೀಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು, ಅಗ್ನಿ ಶಾಮಕ ಸಿಬ್ಬಂದಿ ರಾಜೇಶ್ ಶುಕ್ಲಾ ನಿಜವಾದ ಹೀರೋ. ಬೆಂಕಿ ವ್ಯಾಪಿಸಿದ ಕಟ್ಟಡದೊಳಗೆ ಮೊದಲು ಪ್ರವೇಶಿಸಿ ಕಾರ್ಯಾಚರಣೆ ಪ್ರಾರಂಭಿಸುವ ಮೂಲಕ 11 ಜೀವಗಳನ್ನು ಉಳಿಸಿದ್ದಾರೆ. ಅವರಿಗೆ ಗಂಭೀರ ಗಾಯಗಳಾಗುವವರೆಗೂ ಪ್ರಯತ್ನ ಬಿಡದೆ ಕಾರ್ಯಾಚರಣೆ ನಡೆಸಿದ್ದಾರೆ. ಈ ಧೈರ್ಯಶಾಲಿ ನಾಯಕನಿಗೊಂದು ಸೆಲ್ಯೂಟ್ ಎಂದು ಬರೆದುಕೊಂಡಿದ್ದಾರೆ.

    ಕೃಷಿ ಮಾರುಕಟ್ಟೆಯ ಆವರಣದಲ್ಲಿರುವ ಕಟ್ಟಡಕ್ಕೆ ಬೆಳಗ್ಗೆ 5.22ರ ಸುಮಾರಿಗೆ ಬೆಂಕಿ ಹೊತ್ತಿಕೊಂಡಿದ್ದು, ಘಟನೆಯಲ್ಲಿ 43 ಜನ ಸಾವನ್ನಪ್ಪಿದ್ದಾರೆ. ಫ್ಯಾಕ್ಟರಿಯೊಳಗೆ ಕಾರ್ಮಿಕರು ಮಲಗಿದ್ದ ವೇಳೆ ಬೆಂಕಿ ಹೊತ್ತಿಕೊಂಡಿದ್ದರಿಂದ ತುಂಬಾ ಸಾವು ನೋವು ಸಂಭವಿಸಿದೆ. ಶಾರ್ಟ್ ಸಕ್ರ್ಯೂಟಿನಿಂದ ಅವಘಡ ಸಂಭವಿಸಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

    ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಅವಘಡ ಸಂಬಂಧ ತನಿಖೆ ನಡೆಸುವುದಾಗಿ ಸಿಎಂ ಭರವಸೆ ನೀಡಿದ್ದು, ವಾರದೊಳಗೆ ಸಂಪೂರ್ಣ ವರದಿ ನೀಡುವಂತೆ ಸೂಚಿಸಿದ್ದಾರೆ.

    ದುರ್ಘಟನೆ ನಡೆದ ವಿಚಾರ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಸಿಎಂ, ಮೃತಪಟ್ಟ ಪ್ರತಿಯೊಬ್ಬ ಕಾರ್ಮಿಕನ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಹಾಗೂ ಗಾಯಗೊಂಡವರ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಲಿದೆ ಎಂದು ಭರವಸೆ ನೀಡಿದ್ದಾರೆ.

    ಘಟನೆ ನಡೆದ ಬಳಿಕ ಅರವಿಂದ್ ಕೇಜ್ರಿವಾಲ್ ಸೇರಿದಂತೆ, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ ಹಾಗೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಸಂತಾಪ ಸೂಚಿಸಿದ್ದಾರೆ.