Tag: Agriculture Fair

  • ರಾಜ್ಯಮಟ್ಟದ ಕೃಷಿ ಮೇಳಕ್ಕೆ ಮಂಗಳೂರಿನ ಕೊಲ್ನಾಡು ಸಜ್ಜು

    ರಾಜ್ಯಮಟ್ಟದ ಕೃಷಿ ಮೇಳಕ್ಕೆ ಮಂಗಳೂರಿನ ಕೊಲ್ನಾಡು ಸಜ್ಜು

    ಮಂಗಳೂರು: ನಗರದ ಹೊರವಲಯದ ಮೂಲ್ಕಿಯ ಕೊಲ್ನಾಡು ಎನ್ನುವ ಪುಟ್ಟ ಊರು ರಾಜ್ಯಮಟ್ಟದ ಕೃಷಿ ಮೇಳಕ್ಕೆ ಮದುವಣಗಿತ್ತಿಯಂತೆ ಸಜ್ಜಾಗಿದೆ. ಮಾರ್ಚ್ 11ರಿಂದ 13ರವರೆಗೆ ಕೃಷಿ ಸಿರಿ-2022 ಜರುಗಲಿದ್ದು ತುಳುನಾಡಿನ ಆಚಾರ ವಿಚಾರ, ಕಲೆ, ಜಾನಪದ ಸಂಸ್ಕೃತಿ, ಕೃಷಿ ಬದುಕಿನ ಅಳಿವು ಉಳಿವಿನ ಬಗ್ಗೆ ಕೃಷಿ ಮೇಳ ಬೆಳಕು ಚೆಲ್ಲಲಿದೆ.

    ಮೂರು ದಿನಗಳ ಕಾಲ ಕೃಷಿ ಹಾಗೂ ಕೃಷಿಕರ ಜೀವನದ ಕುರಿತು ಚರ್ಚೆ, ಗೋಷ್ಠಿ ಹಾಗೂ ಸಂವಾದಗಳು ಜರುಗಲಿದ್ದು ಇದಕ್ಕಾಗಿ ವಿಶಾಲ ಮೈದಾನದಲ್ಲಿ ಸಂಘಟಕರು ಸೂಕ್ತ ವ್ಯವಸ್ಥೆ ಕಲ್ಪಿಸಿದ್ದಾರೆ.

    ನಿತ್ಯ 10,000 ಜನ ಆಗಮಿಸುವ ನಿರೀಕ್ಷೆ:
    ಕೊಲ್ನಾಡಿನಲ್ಲಿ ಜರುಗಲಿರುವ ಕೃಷಿ ಮೇಳ ಹತ್ತು ಹಲವು ವಿಷಯಗಳಿಗೆ ಪ್ರಾಮುಖ್ಯತೆ ಪಡೆದುಕೊಂಡಿದೆ. ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಮಾತ್ರವಲ್ಲದೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಮಂದಿ ಕೃಷಿಕರು, ಕೃಷಿ ಪ್ರೇಮಿಗಳು ಆಗಮಿಸಲಿದ್ದಾರೆ. ಸಂಘಟಕರ ಪ್ರಕಾರ ದಿನಕ್ಕೆ 10,000 ಮಂದಿ ಆಗಮಿಸುವ ನಿರೀಕ್ಷೆಯಿದ್ದು ಇದಕ್ಕಾಗಿ ವಿಶಾಲವಾದ ವೇದಿಕೆ, ಆಸನ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನೂ ಓದಿ: ಆಕಸ್ಮಿಕವಾಗಿ ಹೊತ್ತಿ ಉರಿದ ಮನೆ – ರೈತ ಕುಟುಂಬ ಕಂಗಾಲು

    ಶುಕ್ರವಾರ ಬೆಳಗ್ಗೆ 10ರಿಂದ 11 ಗಂಟೆಯವರೆಗೆ ಯುವ ಜನರಿಗಾಗಿ ಆಧುನಿಕ ಕೃಷಿ ವಿಚಾರಗೋಷ್ಠಿ ನಡೆಯಲಿದ್ದು, ಬಂಟ್ವಾಳ ಶಾಸಕ ಪ್ರಗತಿಪರ ಕೃಷಿಕ ರಾಜೇಶ್ ನಾಯ್ಕ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. ಬೆಳಗ್ಗೆ 11:30-12:30ರವರೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ರೈತರಿಗೆ ಸೌಲಭ್ಯ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು ತೋಟಗಾರಿಕಾ ಇಲಾಖೆ ಹಿರಿಯ ಸಹನಿರ್ದೇಶಕ ಪ್ರವೀಣ್ ಕೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ.

    ಶನಿವಾರ ಮಾರ್ಚ್ 12ರಂದು ಬೆಳಗ್ಗೆ 10 ರಿಂದ 11ರ ವರೆಗೆ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ವಿಚಾರಗೋಷ್ಠಿ ನಡೆಯಲಿದ್ದು ಕೃಷಿ ವಿವಿ ಹಾಸನ ಇದರ ನಿವೃತ್ತ ಪ್ರಾಧ್ಯಾಪಕ ಎಎ ಫಝಲ್ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. ಬೆಳಗ್ಗೆ 11:30ರಿಂದ 12:30ರ ವರೆಗೆ ಕಾಲಮಾನ ಅಧರಿತ ಕೃಷಿ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದ್ದು ಪ್ರಗತಿಪರ ಕೃಷಿಕ ಶಿವಪ್ರಸಾದ್ ಓರ್ಮುಡಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3ರಿಂದ 4ಗಂಟೆಯವರೆಗೆ ವಿಷಮುಕ್ತ ಆಹಾರದ ಕುರಿತು ವಿಚಾರಗೋಷ್ಠಿ ನಡೆಯಲಿದ್ದು ಆಡ್ಡೂರು ಕೃಷ್ಣ ರಾವ್ ಪಾಲ್ಗೊಳ್ಳಲಿದ್ದಾರೆ.

    ದಿನಾಂಕ 13ರಂದು ಬೆಳಗ್ಗೆ 10ರಿಂದ 11ರ ವರೆಗೆ ಜಲಸಂರಕ್ಷಣೆ ವಿಷಯದಲ್ಲಿ ವಿಚಾರಗೋಷ್ಠಿ ಜರುಗಲಿದ್ದು ಡಾ. ಜಗದೀಶ್ ಬಾಳ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಲಿದ್ದಾರೆ. ಬೆಳಗ್ಗೆ 11:30ರಿಂದ ಮನೆಯಲ್ಲಿಯೇ ಕೈತೋಟ ಹಾಗೂ ಸಾವಯವ ಗೊಬ್ಬರ ತಯಾರಿ ವಿಚಾರಗೋಷ್ಠಿ ಜರುಗಲಿದ್ದು ರಾಮಕೃಷ್ಣ ಮಠದ ಏಕಗಮ್ಯಾನಂದ ಸ್ವಾಮೀಜಿ ಪಾಲ್ಗೊಳ್ಳಲಿದ್ದಾರೆ. ಮಧ್ಯಾಹ್ನ 3ರಿಂದ 4ರವರೆಗೆ ಕೃಷಿ ಮತ್ತು ಅರೋಗ್ಯ ವಿಚಾರಗೋಷ್ಠಿ ನಡೆಯಲಿದ್ದು ವೈದ್ಯ ಅಣ್ಣಯ್ಯ ಕುಲಾಲ್ ಉಳ್ತುರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಜಪಾನ್ ಯೋಧರನ್ನು ಬೀಳ್ಕೊಟ್ಟ ಭಾರತೀಯ ಸೇನೆ

    ಸಾಂಸ್ಕೃತಿಕ ಕಾರ್ಯಕ್ರಮ, ಭರಪೂರ ಮನೋರಂಜನೆ:
    ಕೃಷಿ ಮೇಳದಲ್ಲಿ ಕೃಷಿ ಕುರಿತ ಮಾಹಿತಿ, ಗೋಷ್ಠಿ, ಸಂವಾದದ ಜೊತೆಗೆ ಮೇಳಕ್ಕೆ ಬರುವವರಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಮಕ್ಕಳು, ಮಹಿಳೆಯರಿಗೆ ಮನೋರಂಜನೆ ವ್ಯವಸ್ಥೆ ಮಾಡಲಾಗಿದೆ. 200ಕ್ಕೂ ಹೆಚ್ಚು ಮಳಿಗೆಗಳನ್ನು ಇದಕ್ಕಾಗಿ ವ್ಯವಸ್ಥೆ ಮಾಡಲಾಗಿದ್ದು ಜಾನುವಾರು ಜಾತ್ರೆ, ಕುಕ್ಕುಟ ಮೇಳ, ಚಿಣ್ಣರಿಗೆ ಮನೋರಂಜನೆಗಾಗಿ ಜಾಯಿಂಟ್ ವೀಲ್ ಮತ್ತಿತರ ಆಟದ ವ್ಯವಸ್ಥೆ, ಶುಚಿ ರುಚಿಯಾದ ಸಾಂಪ್ರದಾಯಿಕ ಆಹಾರ ಖಾದ್ಯಗಳ ಫುಡ್ ಕೌಂಟರ್, ಫಲಪುಷ್ಪ ಪ್ರದರ್ಶನ, ಔಷಧಿ ಗಿಡಗಳ ವನಸಿರಿ, ಸಾಂಪ್ರದಾಯಿಕ ಸೆಲ್ಫಿ ಕಾರ್ನರ್ ಎಲ್ಲವನ್ನೂ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.

    ಶುಕ್ರವಾರ ಮಧ್ಯಾಹ್ನ 1 ಗಂಟೆಯಿಂದ ಕಲ್ಲಡ್ಕ ವಿಠಲ ನಾಯಕ್ ಮತ್ತು ತಂಡದಿಂದ ಗೀತಾ ಸಾಹಿತ್ಯ ಸಂಭ್ರಮ, ಸಂಜೆ 4:30ರಿಂದ ರಿದಂ ಸುರತ್ಕಲ್ ತಂಡದಿಂದ ರೈತರ ಅಳಿವು ಉಳಿವು, ಸಂಜೆ 7:30ರಿಂದ ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದಿಂದ ನೃತ್ಯ ವೈಭವ, ರಾತ್ರಿ 9:30ರಿಂದ ಕಲಾಕುಂಭ ಸಾಂಸ್ಕೃತಿಕ ವೇದಿಕೆ ಕುಳಾಯಿ ಇವರಿಂದ ತುಳುನಾಡ ಸಂಸ್ಕೃತಿ ಕಾರ್ಯಕ್ರಮ ಜರುಗಲಿದೆ.

    ಮಾರ್ಚ್ 12ರಂದು ಬೆಳಗ್ಗೆ 9ರಿಂದ 10:30ರವರೆಗೆ ಹುಭಾಶಿಕ ಕೊರಗರ ಯುವ ವೇದಿಕೆ ಬಾರ್ಕೂರು ಇವರಿಂದ ಕೊರಗರ ಡೋಲು ಕುಣಿತ ಹಾಗೂ ಜಾನಪದ ಕಲಾ ವೈವಿಧ್ಯ, ಮಧ್ಯಾಹ್ನ 1 ಗಂಟೆಯಿಂದ ಸನಾತನ ನಾಟ್ಯಾಲಯ ಮಂಗಳೂರು ಇವರಿಂದ ಪುಣ್ಯಭೂಮಿ ಭಾರತ, ಸಂಜೆ 7:30ರಿಂದ ಕಲಾಶ್ರೀ ಕುಡ್ಲ ತಂಡದಿಂದ ಕುಸಲ್ದ ಕುರ್ಲರಿ, ರಾತ್ರಿ 8:30ರಿಂದ ಲಕುಮಿ ತಂಡದ ಲೇಲೆ ಪಾಡಡೆ ತುಳು ನಾಟಕ ಪ್ರದರ್ಶನಗೊಳ್ಳಲಿದೆ.

    ಭಾನುವಾರ ಬೆಳಗ್ಗೆ 9ರಿಂದ ತುಳು ವರ್ಲ್ಡ್ ಕಾಸರಗೋಡು ಇದರ ಸದಸ್ಯರಿಂದ ಪಾಡ್ದನ ಮೇಳ, ಯಕ್ಷಾಭಿನಯ ಬಳಗ ಇವರಿಂದ ಬಡಗುತಿಟ್ಟು ಯಕ್ಷನೃತ್ಯ ಮತ್ತು ರಕ್ಷಿತ್ ಪಡ್ರೆ ಸಾರಥ್ಯದಲ್ಲಿ ಕೃಷ್ಣಂ ವಂದೇ ಜಗದ್ಗುರುಂ ಯಕ್ಷ ನೃತ್ಯ ಹಾಗೂ ರಾತ್ರಿ 7:30ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಇವರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ ಜರುಗಲಿದೆ. ಇದನ್ನೂ ಓದಿ: ಡಿಕೆಶಿ ವಿಮಾನ ಇಳಿಸಲು ರಾಜ್ಯಗಳೇ ಇಲ್ಲ: ಸುನೀಲ್ ಕುಮಾರ್

    ಆಕರ್ಷಿಸುತ್ತಿರುವ ಪಾರಂಪರಿಕ ಗ್ರಾಮ:
    ಕೃಷಿ ಮೇಳದಲ್ಲಿ ತುಳುನಾಡಿನ ಕೃಷಿ ಹಿನ್ನೆಲೆಯ ಜನರ ಬದುಕನ್ನು ಸಾದರಪಡಿಸುವ ಪಾರಂಪರಿಕ ಗ್ರಾಮ ಜನರನ್ನು ಆಕರ್ಷಿಸುತ್ತಿದೆ. ಮಂಗಳೂರು ವಿಶ್ವವಿದ್ಯಾನಿಲಯ ಪ್ರಾಯೋಜಿತ ಪಾರಂಪರಿಕ ಗ್ರಾಮದಲ್ಲಿ ಕೃಷಿಕರ ಮನೆಗಳು, ಪರಿಸರವನ್ನು ಕಲಾವಿದರ ಕೈಚಳಕದಲ್ಲಿ ಪಡಿಮೂಡಿಸಲಾಗಿದೆ.

    ವಿನಯ ಕೃಷಿ ಬೆಳೆಗಾರರ ಸಂಘ ಕೊಲ್ನಾಡು ಮೂಲ್ಕಿ ಹಾಗೂ ಪ್ರಣವ ಸೌಹಾರ್ದ ಸಹಕಾರಿ ನಿಯಮಿತ ಮಂಗಳೂರು ಜಂಟಿಯಾಗಿ ಕೃಷಿ ಮೇಳ ಆಯೋಜನೆ ಮಾಡಿದ್ದು ಹತ್ತಾರು ಸಾಮಾಜಿಕ ಸಂಘಟನೆಗಳು ಕಾರ್ಯಕ್ರಮದ ಯಶಸ್ಸಿಗೆ ಅಹರ್ನಿಶಿ ದುಡಿಯುತ್ತಿವೆ. ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ಸನ್ಮಾನ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಕೃಷಿ ಬದುಕು ಮತ್ತು ಅದರಾಚೆಗಿನ ಕೃಷಿಕರ ಸಂಕಷ್ಟಗಳ ಬಗ್ಗೆ ಕೃಷಿ ಸಿರಿ-2022ರಲ್ಲಿ ಗಂಭೀರ ಚಿಂತನೆ ನಡೆಯುವ ಜೊತೆಯಲ್ಲಿ ತುಳುನಾಡಿನ ಅಳಿದುಳಿದ ಕೃಷಿ ಚಟುವಟಿಕೆಗಳು ಗರಿಗೆದರಿದರೆ ಸಮ್ಮೇಳನ ಸಾರ್ಥಕ್ಯ ಪಡೆಯಲಿದೆ.

    ಎಲ್ಲಿಂದ ಎಷ್ಟು ದೂರ?:
    ರಾಜ್ಯಮಟ್ಟದ ಕೃಷಿ ಮೇಳ ನಡೆಯುವ ಕೊಲ್ನಾಡು ಮೂಲ್ಕಿ ಪಟ್ಟಣದಿಂದ 2.5 ಕಿ.ಮೀ ದೂರದಲ್ಲಿದೆ. ಸುರತ್ಕಲ್ ನಿಂದ 13 ಕಿ. ಮೀ, ಮಂಗಳೂರಿನಿಂದ 24 ಕಿ.ಮೀ ಹಾಗೂ ಉಡುಪಿಯಿಂದ 31 ಕಿ.ಮೀ ದೂರದಲ್ಲಿದೆ. ಹತ್ತಿರದ ಪೇಟೆ ಮೂಲ್ಕಿ, ಹತ್ತಿರದ ರೈಲು ನಿಲ್ದಾಣ ಮೂಲ್ಕಿ ಹಾಗೂ ಎಕ್ಸ್ ಪ್ರೆಸ್ ಬಸ್ ನಿಲ್ದಾಣ ಕೊಲ್ನಾಡು ಕಾಲ್ನಡಿಗೆ ದೂರದಲ್ಲಿದೆ. ಕೊಲ್ನಾಡು ತಲುಪಲು ಮಂಗಳೂರು, ಉಡುಪಿ ಕಡೆಯಿಂದ ಸಾಕಷ್ಟು ಸಂಖ್ಯೆಯ ಖಾಸಗಿ ಸರ್ವಿಸ್ ಹಾಗೂ ಎಕ್ಸ್ ಪ್ರೆಸ್ ಬಸ್ ಸೇವೆ ಲಭ್ಯವಿದೆ.

  • ಎತ್ತಿನಗಾಡಿಯಲ್ಲಿ ಬಂದ ನೂತನ ಸಚಿವ ಸುಧಾಕರ್

    ಎತ್ತಿನಗಾಡಿಯಲ್ಲಿ ಬಂದ ನೂತನ ಸಚಿವ ಸುಧಾಕರ್

    – ಜಿಲ್ಲಾ ಉಸ್ತುವಾರಿ ಸಚಿವರು ಶೀಘ್ರದಲ್ಲೇ ನೇಮಕ

    ಚಿಕ್ಕಬಳ್ಳಾಪುರ: ಇತ್ತೀಚೆಗೆ ತಾನೇ ಖಾತೆ ಹಂಚಿಕೆಯಾಗಿದ್ದು, ಶೀಘ್ರದಲ್ಲೇ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಆಗಲಿದೆ ಅಂತ ಚಿಕ್ಕಬಳ್ಳಾಪುರದಲ್ಲಿ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಡಾ ಕೆ.ಸುಧಾಕರ್ ಹೇಳಿದರು.

    ಕೃಷಿಮೇಳ 2020 ಸಿರಿಧಾನ್ಯ ಮೇಳ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಸಚಿವ ಸುಧಾಕರ್, ಬಜೆಟ್ ಮಂಡನೆಗಾಗಿ ವಿಧಾನಸಭೆ ಅಧಿವೇಶನ ಇರುವ ಕಾರಣ ರಾಜ್ಯಪಾಲರ ಭಾಷಣ ಇರುತ್ತದೆ. ಹೀಗಾಗಿ ಮುಖ್ಯಮಂತ್ರಿಗಳು ಆ ಕಾರ್ಯದಲ್ಲಿ ಸ್ವಲ್ಪ ಬ್ಯುಸಿ ಇರಬಹುದು. ಹೀಗಾಗಿ ಅದಷ್ಟು ಶೀಘ್ರದಲ್ಲೇ ನೂತನ ಜಿಲ್ಲಾ ಉಸ್ತುವಾರಿ ಸಚಿವರುಗಳ ನೇಮಕ ಆಗುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ತಮ್ಮ ಸ್ವಂತ ಜಿಲ್ಲೆ ಚಿಕ್ಕಬಳ್ಳಾಪುರ ಆಗಿರುವ ಕಾರಣ ಚಿಕ್ಕಬಳ್ಳಾಪುರ ಜಿಲ್ಲೆಯನ್ನು ಭೌಗೋಳಿಕವಾಗಿ ಹಾಗೂ ಜಿಲ್ಲೆಯ ಎಲ್ಲಾ ಸಮಸ್ಯೆಗಳ ಬಗ್ಗೆ ಸ್ಪಷ್ಟ ಅರಿವು ಕಾರಣ ತಮಗೆ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ನೀಡಿದರೇ ಒಳ್ಳೆಯದಾಗುತ್ತದೆ. ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಿಗೆ ಸಹಕಾರಿಯಾಗಲಿದೆ ಅಂತ ಜಿಲ್ಲೆಯ ಉಸ್ತುವಾರಿ ಮಂತ್ರಿ ಸ್ಥಾನದ ಇಂಗಿತ ವ್ಯಕ್ತಪಡಿಸಿದರು. ಇದಕ್ಕೂ ಮೊದಲು ವೇದಿಕೆ ಭಾಷಣದಲ್ಲಿ ಮಾತನಾಡುವ ವೇಳೆ ತಾವೇ ಜಿಲ್ಲೆಯ ಉಸ್ತುವಾರಿ ಸಚಿವರಾಗಲಿದ್ದು, ಮುಂದಿನ ದಿನಗಳಲ್ಲಿ ಯಾವುದೇ ತಾರತಮ್ಯ ಮಾಡದೇ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಸಮಾನ ಅಭಿವೃದ್ಧಿ ಮಾಡುವುದಾಗಿ ತಿಳಿಸಿದರು.

    ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಲಾಗಿರುವ ಕೃಷಿಮೇಳ 2020 ರ ಸಿರಿಧಾನ್ಯಮೇಳ ಹಾಗೂ ಫಲಪುಷ್ಪಪ್ರದರ್ಶನಕ್ಕೆ ಎತ್ತಿನಗಾಡಿಯಲ್ಲಿ ಬರುವ ಮೂಲಕ ಗಮನ ಸೆಳೆದರು. ನಗರದ ಸರ್ ಎಂ ವಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಕೃಷಿಮೇಳಕ್ಕೆ ಬಿಬಿ ರಸ್ತೆಯಿಂದ ಸರಿ ಸುಮಾರು ಅರ್ಧ ಕಿಲೋಮೀಟರ್ ದೂರದ ಕ್ರೀಡಾಂಗಣಕ್ಕೆ ಎತ್ತಿನಬಂಡಿಯಲ್ಲೇ ಬಂದ ಸಚಿವರು ಆಕರ್ಷಣೀಯ ಕೇಂದ್ರವಾಗಿದ್ದರು.

    ಕ್ರೀಡಾಂಗಣದಲ್ಲಿ ನಿರ್ಮಿಸಿಲಾಗಿದ್ದ ನರೇಗಾ ಕಾಮಗಾರಿಗಳ ಪ್ರಾತಕ್ಷಿತೆ ಹಾಗೂ ಫಲಪುಷ್ಪ ಪ್ರದರ್ಶನಕ್ಕೆ ಟೇಪ್ ಕಟ್ ಮಾಡಿ ಚಾಲನೆ ನೀಡಿದ ಸಚಿವರು, ಗುಲಾಬಿ ಹೂಗಳಿಂದ ಅರಳಿ ನಿಂತಿದ್ದ ಹಂಪಿ ಕಲ್ಲಿನ ರಥದ ಎದುರು ಫೋಟೋ ತೆಗೆಸಿಕೊಂಡು ಗುಲಾಬಿ ಹೂಗಳ ಹಂಪಿಯ ಕಲ್ಲಿನ ರಥಧಾಕೃತಿಗೆ ಸಂತಸ ವ್ಯಕ್ತಪಡಿಸಿದರು. ತದನಂತರ ರೈತರ ಉಪಯೋಗಕ್ಕೆ ಬರುವ ವಿವಿಧ ಅಂಗಡಿ ಮಳಿಗೆಗಳನ್ನು ಕೃಷಿ ಮೇಳದಲ್ಲಿ ಆರಂಭಿಸಲಾಗಿದ್ದು, ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಣೆ ಮಾಡಿದರು.

    ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಚಿವರು ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸಂಸದ ಬಚ್ಚೇಗೌಡ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷ ನರಸಿಂಹಯ್ಯ ಸೇರಿದಂತೆ ಜಿಲ್ಲೆಯ ಎಲ್ಲಾ ಅಧಿಕಾರಿ ಸಿಬ್ಬಂದಿ ಸೇರಿದಂತೆ ರೈತ ಸಂಘಟನೆಗಳ ಮುಖಂಡರು ಹಾಗೂ ರೈತರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಮಾತನಾಡಿ ಸಿರಿಧಾನ್ಯಗಳಿಗೆ ಮಾರುಕಟ್ಟೆ ವೃದ್ಧಿಯಾಗಿದ್ದು, ಅತಿ ಕಡಿಮೆ ನೀರಿನಲ್ಲೂ ಅಂದರೆ ಮಳೆಗಾಲದಲ್ಲೂ ಸಹ ಬೆಳೆಯಬಹುದಾದ ಸಿರಿಧಾನ್ಯಗಳನ್ನ ಉತ್ಪಾದನೆಗೆ ರೈತರು ಮುಂದಾಗಬೇಕು, ರಸಗೊಬ್ಬರಗಳ ಬಳಕೆಯನ್ನ ಕಡಿಮೆ ಮಾಡಿ ಸಾವಯುವ ಪದ್ದತಿಯಲ್ಲಿ ಬೇಸಾಯ ಮಾಡುವತ್ತ ಮರಳಿ ರೈತರು ಬರಬೇಕಿದೆ ಅಂತ ಮನವಿ ಮಾಡಿಕೊಂಡರು.

  • ಕೊಟ್ಟಿದ್ದು 10 ನಿಮಿಷ, ಆದ್ರೆ 3 ನಿಮಿಷದಲ್ಲಿ ತಿಂದು ಮುಗಿಸಿದ್ರು

    ಕೊಟ್ಟಿದ್ದು 10 ನಿಮಿಷ, ಆದ್ರೆ 3 ನಿಮಿಷದಲ್ಲಿ ತಿಂದು ಮುಗಿಸಿದ್ರು

    ಚಿಕ್ಕಬಳ್ಳಾಪುರ: ಕೃಷಿ ಮೇಳದಲ್ಲಿ ಆಯೋಜನೆಗೊಂಡಿದ್ದ ರಾಗಿ ಮುದ್ದೆ ತಿನ್ನುವ ಸ್ಪರ್ಧೆ ಇಂದು ಎಲ್ಲರಿಗೂ ಮನರಂಜನೆ ಒದಗಿಸಿದೆ.

    ಸ್ಪರ್ಧೆಯಲ್ಲಿ ಮುದ್ದೆ ತಿನ್ನಲು 10 ನಿಮಿಷ ಸಮಯ ನೀಡಲಾಗಿತ್ತು. ಆದರೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಜನರು ಮೂರೇ ನಿಮಿಷದಲ್ಲಿ ಮುದ್ದೆಗಳನ್ನು ತಿಂದು ಬೀಗಿದ್ದಾರೆ. ಈ ವೇಳೆ ಸ್ಪರ್ಧೆಯನ್ನು ಮೂರು ನಿಮಿಷಗಳಿಗೆ ಕಡಿತಗೊಳಿಸಲಾಗಿತ್ತು.

    ಶಿಡ್ಲಘಟ್ಟ ತಾಲೂಕಿನ ಕಾಕಚಚೊಕ್ಕಂಡಹಳ್ಳಿ ಗ್ರಾಮದ ನಾಗೇಶ್ ಕುಮಾರ್ 7 ಮುದ್ದೆಗಳನ್ನು ತಿನ್ನುವ ಮೂಲಕ ಮೊದಲ ಸ್ಥಾನ ಪಡೆದುಕೊಂಡರು. ಉಳಿದಂತೆ ತುಳಸಿ ರಾಮೇಗೌಡ, ಶಿವಪ್ಪ, ಕರಗಪ್ಪ 5 ಮುದ್ದೆಗಳನ್ನ ತಿನ್ನುವ ಮೂಲಕ ನಂತರದ ಸ್ಥಾನಗಳನ್ನು ಪಡೆದುಕೊಂಡರು.

    ಇದೇ ವೇಳೆ 50 ಕೆ.ಜಿ ಮೂಟೆ ಎತ್ತುವ ಸ್ಪರ್ಧೆಯನ್ನು ರೈತರಿಗೆ ಆಯೋಜಿಸಲಾಗಿತ್ತು. ಇದರಲ್ಲಿ 22 ಜನ ರೈತರು ಭಾಗವಹಿಸಿದ್ದು, ಕೆಜಿಎಫ್ ನ ತುಳಸಿರಾಮೇಗೌಡ ಮೊದಲ ಸ್ಥಾನಪಡೆದುಕೊಂಡರೆ, ಮನು ದ್ವಿತೀಯ, ಆಂಜನೇಯರೆಡ್ಡಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಒಟ್ಟಾರೆ ಮೇಳದಲ್ಲಿ ಮೂಟೆ ಹೊರುವ ಹಾಗೂ ಮುದ್ದೇ ತಿನ್ನುವ ಸ್ಪರ್ಧೆಗಳು ಎಲ್ಲರ ಗಮನ ಸೆಳೆದವು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಚಿಕ್ಕಬಳ್ಳಾಪುರ: ಕಣ್ಮನ ಸೆಳೆಯೋ ಫಲ ಪುಷ್ಪ ಪ್ರದರ್ಶನ- ಫೋಟೋಗಳಲ್ಲಿ ನೋಡಿ

    ಚಿಕ್ಕಬಳ್ಳಾಪುರ: ಕಣ್ಮನ ಸೆಳೆಯೋ ಫಲ ಪುಷ್ಪ ಪ್ರದರ್ಶನ- ಫೋಟೋಗಳಲ್ಲಿ ನೋಡಿ

    -ಬಣ್ಣ ಬಣ್ಣದ ಗುಲಾಬಿಗಳಲ್ಲಿ ಅರಳಿ ನಿಂತ ಭೋಗನಂಧೀಶ್ವರ ದೇಗುಲ

    ಚಿಕ್ಕಬಳ್ಳಾಪುರ: ತೋಟಗಾರಿಕೆ ಮತ್ತು ವಾಣಿಜ್ಯ ಬೆಳೆಗಳನ್ನು ಬೆಳೆಯೊದ್ರಲ್ಲಿ ಜಿಲ್ಲೆಯ ರೈತರು ಫೇಮಸ್. ನಗರದ ಹೊರ ವಲಯದಲ್ಲಿ ಜಿಲ್ಲಾಡಳಿತ ಹಾಗೂ ನಂದಿ ಉದ್ಯಾನ ಕಲಾ ಸಂಘದಿಂದ ಫಲಪುಷ್ಪ, ತೋಟಗಾರಿಕೆ ಹಾಗೂ ಕೃಷಿ ಮೇಳ ಆಯೋಜಿಸಲಾಗಿದೆ.

    ಇಂದಿನಿಂದ ಮೂರು ದಿನಗಳ ಕಾಲ ಈ ಫಲ-ಪುಷ್ಪ ಪ್ರದರ್ಶನ ನಡೆಯಲಿದೆ. ಮೇಳದಲ್ಲಿ ಸುಂದರ ಹೂಗಳ ರಾಶಿ ಒಂದಡೆಯಾದ್ರೆ, ಮತ್ತೊಂದೆಡೆ ಅಡುಗೆಗೆ ಬಳಸುವ ವಿವಿಧ ತರಕಾರಿಗಳ ಕಲರ್ ಕಲರ್ ಚಿತ್ತಾರ ಎಲ್ಲರನ್ನು ತನ್ನತ್ತ ಸೆಳೆಯುತ್ತಿವೆ.

    ಬಣ್ಣ ಬಣ್ಣದ ಗುಲಾಬಿಗಳಿಂದ ಇತಿಹಾಸ ಪ್ರಸಿದ್ಧ ಶ್ರೀ ಬೋಗನಂದೀಶ್ವರ ದೇವಾಲಯ ನಿರ್ಮಾಣ ಮಾಡಲಾಗಿದೆ. ಮರಳಿನ ಕಲಾಕೃತಿಯಲ್ಲಿ ವಿಶ್ವ ವಿಖ್ಯಾತ ಸರ್ ಎಂ. ವಿಶ್ವೇಶ್ವರಯ್ಯ ಅವರ ಚಿತ್ರಣ ಮೂಡಿಬಂದಿದೆ. ಪ್ರತಿ ವರ್ಷದಂತೆ ಈ ಬಾರಿ ಕೂಡ ಫಲ-ಪುಷ್ಪ, ತೋಟಗಾರಿಕೆ ಹಾಗೂ ಕೃಷಿ ಮೇಳವನ್ನ ಆಯೋಜಿಸಲಾಗಿದೆ.

    ತರಕಾರಿಗಳಲ್ಲಿ ಮೂಡಿ ಬಂದಿರುವ ಮೊಸಳೆ, ನವಿಲು ಹೀಗೆ ಹತ್ತು ಹಲವು ಪ್ರಾಣಿಗಳ ಕಲಾಕೃತಿಗಳು ಕಣ್ಣಿಗೆ ಮುದ ನೀಡುತ್ತಿದೆ. ಇನ್ನೂ ಮೇಳದಲ್ಲಿ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿ ಪ್ರಯೋಜನ ಪಡೆದುಕೊಂಡಿದ್ದು ಮೇಳದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿದ್ದಾರೆ. ಕೃಷಿ ಮೇಳದಲ್ಲಿ ರೈತರಿಗೆ ಬೇಕಾದ ಉಪಯುಕ್ತ ಮಾಹಿತಿ ಸಿಕ್ಕಿದ್ದು, ರೈತರಿಗೆ ಸಂತಸದ ಜೊತೆ ಲಾಭದಾಯಕವೂ ಆಗಿದೆ.