Tag: agriculture department

  • ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಮಂಡ್ಯದ ಅರ್ಪಿತ ಸಾಧನೆ

    ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆ – ಮಂಡ್ಯದ ಅರ್ಪಿತ ಸಾಧನೆ

    ಮಂಡ್ಯ: ಮಲ್ಲೇಷಿಯಾದಲ್ಲಿ ನಡೆದ ಏಷ್ಯಾ ಪ್ಯಾನಿಕ್ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ (International Yoga Competition) ಮಂಡ್ಯದ ಜೆ.ಕೆ ಅರ್ಪಿತ 3ನೇ ಸ್ಥಾನ ಪಡೆದಿದ್ದಾರೆ.

    ಮಂಡ್ಯ (Mandya) ತಾಲ್ಲೂಕಿನ ಜವನಹಳ್ಳಿ ಗ್ರಾಮದ ಕುಮಾರ್ ಎಂಬುವರ ಪುತ್ರಿ ಅರ್ಪಿತಾ ಅಕ್ಟೋಬರ್ 14ರಂದು ನಡೆದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆಯುವ ಮೂಲಕ ಮಂಡ್ಯಕ್ಕೆ ಕೀರ್ತಿ ತಂದಿದ್ದಾರೆ.

    ಪ್ರಸ್ತುತ ಹಾಸನ ಜಿಲ್ಲೆಯ ಶ್ರವಣಬೆಳಗೋಳದಲ್ಲಿ ಕೃಷಿ ಇಲಾಖೆಯ ಸಹಾಯಕ ತಾಂತ್ರಿಕ ವ್ಯವಸ್ಥಾಪಕಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಅರ್ಪಿತಾ, ಕಳೆದ ಜೂನ್‌ನಲ್ಲಿ ಶಿವಮೊಗ್ಗದ ಸಾಗರದಲ್ಲಿ ನಡೆದ ರಾಜ್ಯ ಯೋಗಾಸನ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ 4ನೇ ಸ್ಥಾನ ಹಾಗೂ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಡಬ್ಲ್ಯೂಎಫ್ ಯೋಗಾಸನ ಸ್ಪರ್ಧೆಯಲ್ಲಿ 3ನೇ ಸ್ಥಾನ ಪಡೆದಿದ್ದರು. ಬಳಿಕ ಕೇರಳದ ಎರ್ನಾಕಲಂನಲ್ಲಿ ನಡೆದ ರಾಷ್ಟ್ರ ಮಟ್ಟದ ಯೋಗಾಸನ ಚಾಂಪಿಯನ್ ಶಿಫ್ ಸ್ಪರ್ಧೆಯಲ್ಲಿ ಭಾಗಿಯಾಗಿ ಉತ್ತಮ ಸಾಧನೆ ಮಾಡುವ ಮೂಲಕ ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಗೆ ಆಯ್ಕೆಯಾಗಿದ್ದರು.  

    ಈವರೆಗೆ ಎರಡು ರಾಜ್ಯಮಟ್ಟದ ಹಾಗೂ ಎರಡು ರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿಜೇತರಾಗುವ ಜೊತೆಗೆ ಇದೀಗ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲೂ 3ನೇ ಬಹುಮಾನ ಪಡೆಯುವ ಮೂಲಕ ದೇಶ ಹಾಗೂ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

  • ದುಪ್ಪಟ್ಟು ಬೆಲೆಗೆ ಗೊಬ್ಬರ ಮಾರುತ್ತಿದ್ದ ಅಂಗಡಿ ಮೇಲೆ ಅಧಿಕಾರಿಗಳ ದಾಳಿ – ಮಾಲೀಕನಿಗೆ ನೋಟಿಸ್

    ದುಪ್ಪಟ್ಟು ಬೆಲೆಗೆ ಗೊಬ್ಬರ ಮಾರುತ್ತಿದ್ದ ಅಂಗಡಿ ಮೇಲೆ ಅಧಿಕಾರಿಗಳ ದಾಳಿ – ಮಾಲೀಕನಿಗೆ ನೋಟಿಸ್

    ಕಲಬುರಗಿ: ಸದ್ಯ ರಾಜ್ಯದಲ್ಲಿ ಉತ್ತಮ ಮಳೆ ಹಿನ್ನೆಲೆ ಬಿತ್ತನೆ ಕಾರ್ಯ ಸಹ ಜೋರಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡು ಕಲಬುರಗಿ (Kalaburagi) ಜಿಲ್ಲೆಯ ರೈತರಿಂದ ದುಪ್ಪಟ್ಟು ಹಣ ಪಡೆದು ಗೊಬ್ಬರ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿ, ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

    ಜಿಲ್ಲೆಯಲ್ಲಿ ಈ ಬಾರಿ ಉತ್ತಮ ಮಳೆ ಹಿನ್ನೆಲೆ ಲಕ್ಷಾಂತರ ಹೆಕ್ಟೇರ್ ಪ್ರದೇಶದಲ್ಲಿ ವಿವಿಧ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಅದನ್ನೇ ಬಂಡವಾಳ ಮಾಡಿಕೊಂಡು ಅಫಜಲಪುರ ತಾಲೂಕಿನ ಗಾಣಗಾಪುರದ ಶ್ರೀ ರೇವಣಸಿದ್ದೇಶ್ವರ ಅಗ್ರೋ ಏಜೆನ್ಸಿಯ ಗೊಬ್ಬರದ ಅಂಗಡಿ ಮಾಲೀಕ, ಗೊಬ್ಬರ ಹಾಗೂ ಇತರೆ ವಸ್ತುಗಳನ್ನು ಎಂಆರ್‌ಪಿ ದರಕ್ಕಿಂತ ಎರಡು ಪಟ್ಟು ಜಾಸ್ತಿ ಬೆಲೆಗೆ ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು ಅಥಾರಿಟಿ ಹೆಸರು ಬದಲಾವಣೆ?

    ಅಲ್ಲದೆ ರೈತರು ಗೊಬ್ಬರದ ಬಿಲ್ ಕೇಳಿದ್ರೆ ನಕಲಿ ಬಿಲ್ ನೀಡುತ್ತಿದ್ದಾರೆ. ಸದ್ಯ ರೈತ ಹಾಗೂ ಅಂಗಡಿ ಮಾಲೀಕರ ವೀಡಿಯೋ ವೈರಲ್ ಆಗುತ್ತಿದ್ದಂತೆ ಕೃಷಿ ಇಲಾಖೆ ಅಧಿಕಾರಿಗಳು ಅಂಗಡಿ ಮೇಲೆ ದಾಳಿ ನಡೆಸಿ ಅಂಗಡಿ ಮಾಲೀಕನಿಗೆ ನೋಟಿಸ್ ನೀಡಿದ್ದಾರೆ.

    ಒಂದೆಡೆ ಅಫಜಲಪುರದಲ್ಲಿ ಗೊಬ್ಬರ, ಯೂರಿಯಾ ಹಾಗೂ ಕ್ರಿಮಿನಾಶಕ ಔಷಧಿ ದುಪ್ಪಟ್ಟು ಬೆಲೆಗೆ ಮಾರಾಟವಾದ್ರೆ, ಇತ್ತ ಜೇವರ್ಗಿ ಹಾಗು ಯಡ್ರಾಮಿ ತಾಲೂಕಿನ ಕೆಲ ಗೊಬ್ಬರದ ಅಂಗಡಿ ಮಾಲೀಕರು 2 ವರ್ಷದ ಹಿಂದಿನ ಅವಧಿ ಮುಗಿದ ಕ್ರಿಮಿನಾಶಕಗಳನ್ನು ರೈತರಿಗೆ ಮಾರಾಟ ಮಾಡುತ್ತಿದ್ದಾರೆ. ಈ ರೀತಿಯಾಗಿ ರೈತರಿಗೆ ವಂಚಿಸುತ್ತಿರುವ ಫರ್ಟಿಲೈಸರ್ ಅಂಗಡಿಗಳ ಪರಿಶೀಲನೆ ನಡೆಸಿ, ಅಧಿಕಾರಿಗಳು ಅವಧಿ ಮುಗಿದ ಕ್ರಿಮಿನಾಶಕಗಳನ್ನು ವಶಕ್ಕೆ ಪಡೆದು ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಸಿರು ಸೇನೆ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.

  • ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಯ ತಾಳಿ, ಅಮ್ಮನ ಒಡವೆ ಅಡವಿಟ್ಟು 20 ಲಕ್ಷ ಲಂಚ – APMC ವಿರುದ್ಧ ಭ್ರಷ್ಟಾಚಾರದ ಆರೋಪ

    ಮದ್ವೆಯಾದ ಹತ್ತೇ ದಿನಕ್ಕೆ ಪತ್ನಿಯ ತಾಳಿ, ಅಮ್ಮನ ಒಡವೆ ಅಡವಿಟ್ಟು 20 ಲಕ್ಷ ಲಂಚ – APMC ವಿರುದ್ಧ ಭ್ರಷ್ಟಾಚಾರದ ಆರೋಪ

    – ಮಳಿಗೆ ಮಂಜೂರಿಗೆ ದುಡ್ಡಿಗೆ ಡಿಮ್ಯಾಂಡ್ ಮಾಡಿದ್ದ ಎಪಿಎಂಸಿ ಕಾರ್ಯದರ್ಶಿ

    ಬೆಂಗಳೂರು: ರಾಜ್ಯದಲ್ಲಿ ವಸತಿ ಇಲಾಖೆ ಬಳಿಕ ಇದೀಗ ಮತ್ತೊಂದು ಭ್ರಷ್ಟಾಚಾರದ (Corruption) ಆರೋಪ ಕೇಳಿಬಂದಿದೆ.

    ಹೌದು, ವಸತಿ ಇಲಾಖೆಯ ಮನೆ ಹಂಚಿಕೆಯಲ್ಲಿ `ಮನಿ ಕೊಟ್ರೆ ಮನೆ’ ಎಂಬ ಭ್ರಷ್ಟಾಚಾರದ ಆರೋಪ ಬಳಿಕ ಇದೀಗ ಎಪಿಎಂಸಿಯಲ್ಲಿ ಮಳಿಗೆ ಹಸ್ತಾಂತರಕ್ಕೆ ಲಂಚ ಪಡೆದಿರುವುದು ಬೆಳಕಿಗೆ ಬಂದಿದೆ. ಹಣ ಕೊಟ್ಟರೂ ಮಳಿಗೆ ಹಸ್ತಾಂತರಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.ಇದನ್ನೂ ಓದಿ: ಮಾಜಿ ಡಿಸಿಎಂ ಈಶ್ವರಪ್ಪ, ಪುತ್ರ, ಸೊಸೆ ವಿರುದ್ಧ ಎಫ್‌ಐಆರ್

    ಈ ಕುರಿತು ವಂಚನೆಗೊಳಗಾದ ಚಂದ್ರಶೇಖರ್ `ಪಬ್ಲಿಕ್ ಟಿವಿ’ (PUBLiC TV) ಜೊತೆ ಮಾತನಾಡಿ, ದಾಸನಪುರ ಮಳಿಗೆ ಮಂಜೂರಾಗಲು ಅರ್ಜಿ ಸಲ್ಲಿಸಿದ್ದೆ. ಅರ್ಜಿ ಸಲ್ಲಿಸಿದ್ದರೂ ಮಳಿಗೆ ಹಸ್ತಾಂತರವಾಗಿರಲಿಲ್ಲ. ಹಾಗಾಗಿ ಇದನ್ನು ಕೇಳಲು ಎಪಿಎಂಸಿ ಕಾರ್ಯದರ್ಶಿಯ ಬಳಿ ಹೋದಾಗ 20 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಬಳಿಕ ಮದುವೆಯಾಗಿ ಹತ್ತೇ ದಿನ ಆಗಿದ್ದರೂ ನನ್ನ ಹೆಂಡತಿಯ ಮಾಂಗಲ್ಯ ಹಾಗೂ ಅಮ್ಮನ ಒಡವೆಗಳನ್ನು ಅಡವಿಟ್ಟು ದುಡ್ಡು ಹೊಂದಿಸಿ, ಲಂಚ ನೀಡಿದ್ದೇನೆ. ಆದರೂ ಕೂಡ ಮಳಿಗೆ ಹಸ್ತಾಂತರ ಆಗಿರಲಿಲ್ಲ. ಬಳಿಕ ಕಾರ್ಯದರ್ಶಿಗೆ ಹಣ ವಾಪಾಸ್ ಕೇಳಿದ್ರೂ ಕೊಟ್ಟಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

    ಸದ್ಯ ಈ ಕುರಿತು ಚಂದ್ರಶೇಖರ್ ಅವರು ಸಚಿವ ಶಿವಾನಂದ ಪಾಟೀಲ್‌ಗೆ ಪತ್ರ ಬರೆದು ಭ್ರಷ್ಟಾಚಾರದ ತನಿಖೆ ಮಾಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಸರ್ಕಾರಕ್ಕೆ ಅನೇಕ ವರ್ತಕರು ದೂರು ನೀಡಿದ್ದರು. ಸರ್ಕಾರ ಅಧಿಕಾರಿಗಳ ವಿರುದ್ಧ ಯಾವುದೇ ರೀತಿಯ ಕ್ರಮ ಜರುಗಿಸಿರಲಿಲ್ಲ. ಇದೀಗ ಚಂದ್ರಶೇಖರ್ ಸ್ವತಃ ದೂರು ನೀಡಿದ್ದು, ಬೇರೆ ವರ್ತಕರಿಗೂ ಇದೇ ರೀತಿ ಮಾನಸಿಕ ಕಿರುಕುಳ ನೀಡಲಾಗುತ್ತಿದೆ. ದುಡ್ಡಿಗೆ ಡಿಮ್ಯಾಂಡ್ ಮಾಡುತ್ತಿದ್ದಾರೆ. ಈ ಅವ್ಯವಹಾರದ ಬಗ್ಗೆ ಸಿಐಡಿ ತನಿಖೆ ಮಾಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.ಇದನ್ನೂ ಓದಿ: ಶರಾವತಿ ಹಿನ್ನೀರಿನ ನಡುವೆ ಕೆಟ್ಟು ನಿಂತ ಲಾಂಚ್ – ತಪ್ಪಿದ ಅನಾಹುತ

  • ಸಿಸಿಟಿವಿ ಎದುರಲ್ಲೇ ಲಂಚ ಸ್ವೀಕಾರ ಆರೋಪ – ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಸಸ್ಪೆಂಡ್

    ಸಿಸಿಟಿವಿ ಎದುರಲ್ಲೇ ಲಂಚ ಸ್ವೀಕಾರ ಆರೋಪ – ಕೃಷಿ ಇಲಾಖೆ ಸಹಾಯಕ ನಿರ್ದೇಶಕಿ ಸವಿತಾ ಸಸ್ಪೆಂಡ್

    ಕಲಬುರಗಿ: ಸಿಸಿಟಿವಿ ಕ್ಯಾಮೆರಾ ಎದುರಲ್ಲೇ ಕಲಬುರಗಿ ಕೃಷಿ ಮಾರಾಟ ಇಲಾಖೆಯ (Agricultural Marketing Department) ಸಹಾಯಕ ನಿರ್ದೇಶಕಿ ಸವಿತಾ ನಾಯಕ ಲಂಚ ಸ್ವೀಕರಿಸಿದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಇಲಾಖೆಯ ನಿರ್ದೇಶಕ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ.

    ಎಪಿಎಂಸಿಗೆ ಬರುತ್ತಿದ್ದ ವರ್ತಕರಿಂದ ಲಂಚ ಸ್ವೀಕರಿಸುತ್ತಿದ್ದ ದೃಶ್ಯಾವಳಿ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಈ ಕುರಿತು ಮಹಾಂತಗೌಡ ಎಂಬುವವರು ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಮಾಡಿದ್ದ ಹಿನ್ನೆಲೆಯಲ್ಲಿ ಲಂಚ ಸ್ವೀಕಾರ ಆರೋಪದ ಕುರಿತು ವ್ಯಾಪಕ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಜೇವರ್ಗಿ ಪಟ್ಟಣದಲ್ಲಿ ವರ್ತಕರಿಂದ ಲಂಚ ಸ್ವೀಕರಿಸುತ್ತಿರುವುದು ಪತ್ತೆಯಾಗಿತ್ತು ಎನ್ನಲಾಗಿದೆ.

    ಕಚೇರಿ ಸಮಯ ಮುಗಿದ ಬಳಿಕ ಜೀಪ್‍ನಲ್ಲಿ ಬಂದು ಸಹಾಯಕ ನಿರ್ದೇಶಕಿ ಲಂಚ ಸ್ವೀಕರಿಸಿದ್ದರು ಎಂದು ಹೇಳಲಾಗಿದ್ದು, 5 ಲಕ್ಷ ರೂ. ಲಂಚ ಸ್ವೀಕರಿಸಿದ್ದಾರೆ ಎಂದು ರೈತಪರ ಸಂಘಟನೆಯೊಂದು ಆರೋಪ ಮಾಡಿತ್ತು. ಎಪಿಎಂಸಿ ಯಾರ್ಡ್‍ನಿಂದ ಹೊರಹೊಗುವ ಪ್ರತಿ ವಾಹನಕ್ಕೂ ವರ್ತಕರು ತೆರಿಗೆ ಪಾವತಿಸಬೇಕಾಗುತ್ತದೆ. ಹೀಗಿರುವಾಗ, ಒಂದು ವಾಹನದ ತೆರಿಗೆ ಪಾವತಿಸಿ ಉಳಿದ ವಾಹನಗಳಿಗೆ ಪಾವತಿಸದೇ ಕೆಲವು ವರ್ತಕರು ತೆರಿಗೆ ವಂಚಿಸುತ್ತಿದ್ದರು ಎನ್ನಲಾಗಿದ್ದು, ಇಂತಹ ವರ್ತಕರಿಂದ ನಾಯಕ ಲಂಚ ಸ್ವೀಕರಿಸುತ್ತಿದ್ದರು ಎಂಬ ದೂರುಗಳು ಕೇಳಿಬಂದಿವೆ.

    ಇನ್ನೂ ಅಮಾನತು ಆದೇಶದ ಜೊತೆಗೆ, ಸವಿತಾ ನಾಯಕ್‌ ಅವರ ವಿರುದ್ಧ ಇಲಾಖಾ ವಿಚಾರಣೆ ಬಾಕಿ ಇರಿಸಿ, ಸಕ್ಷಮ ಪ್ರಾಧಿಕಾರಿಗಳ ಲಿಖಿತ ಅನುಮತಿ ಇಲ್ಲದೆ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸಹ ಆದೇಶದಲ್ಲಿ ನಿರ್ದೇಶಕ ಶಿವಾನಂದ ಕಟ್ಟಪ್ಪಣೆ ಮಾಡಿದ್ದಾರೆ.

    ಬೆಳಕಿಗೆ ಬಂದದ್ದು ಹೇಗೆ?
    ಕಲಬುರಗಿ ಜಿಲ್ಲೆಯ ಜೇವರ್ಗಿ, ಅಫಜಲಪುರ, ಚಿತ್ತಾಪುರ, ಯಡ್ರಾಮಿ, ಸೇಡಂ, ಚಿಂಚೋಳಿ ತಾಲೂಕಿನ ವರ್ತಕರು ಮತ್ತು ಹತ್ತಿ ಮಾರಾಟಗಾರರು ಹಾಗೂ ವ್ಯಾಪಾರಿಗಳಿಂದ ಸಹಾಯಕ ನಿರ್ದೇಶಕಿ ಸವಿತಾ ನಾಯಕ ಲಂಚ ಪಡೆದಿದ್ದರು ಎಂಬ ದೂರುಗಳ ಹಿನ್ನೆಲೆಯಲ್ಲಿ ಆರ್‌ಟಿಐ ಅಡಿ ಮನವಿ ಸಲ್ಲಿಸಿ ಪಡೆದಿದ್ದ ಸಿಸಿಟಿವಿ ದೃಶ್ಯಾವಳಿ ತುಣುಕುಗಳನ್ನು ಮಹಾಂತಗೌಡ ಎಂಬುವರು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ಕುರಿತು ದಿನಪತ್ರಿಕೆಯೊಂದರಲ್ಲಿ ವರದಿ ಪ್ರಕಟಗೊಂಡಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ನಿರ್ದೇಶಕ ಶಿವಾನಂದ ಕಾಪಶಿ ಅಮಾನತು ಆದೇಶ ಹೊರಡಿಸಿದ್ದಾರೆ.

  • ಹೆಚ್ಚುವರಿ ಹೆಸರುಕಾಳು ಖರೀದಿಗೆ ಕೇಂದ್ರ ಸರ್ಕಾರದ ಅನುಮತಿ: ಜೋಶಿ

    ಹೆಚ್ಚುವರಿ ಹೆಸರುಕಾಳು ಖರೀದಿಗೆ ಕೇಂದ್ರ ಸರ್ಕಾರದ ಅನುಮತಿ: ಜೋಶಿ

    ನವದೆಹಲಿ: ರಾಜ್ಯದಲ್ಲಿ ಬೆಂಬಲ ಬೆಲೆಯೊಂದಿಗೆ ಹೆಚ್ಚುವರಿ ಹೆಸರು ಕಾಳು (Moong) ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಹೇಳಿದ್ದಾರೆ.

    ಈ ಸಂಬಂಧ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ರೈತರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚುವರಿ ಖರೀದಿಗೆ ಅನುಮತಿ ನೀಡಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆ ಕೊಟ್ಟು ತನಿಖೆ ಎದುರಿಸಬೇಕಾಗಿತ್ತು: ಛಲವಾದಿ ಕಿಡಿ

    ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಈಗಾಗಲೇ 22,215 ಮೆಟ್ರಿಕ್ ಟನ್ ಹೆಸರುಕಾಳು ಖರೀದಿಸಿದೆ. ರಾಜ್ಯದಲ್ಲಿ ಹೆಸರು ಕಾಳು ಹೆಚ್ಚುವರಿಯಾಗಿ ಬೆಳೆದಿರುವ ಹಿನ್ನೆಲೆ ಸರ್ಕಾರದಿಂದ ಖರೀದಿಗೆ ರೈತರು ಮನವಿ ಮಾಡಿದ್ದರು. ಈ ಹಿನ್ನೆಲೆ 16,105 ಮೆಟ್ರಿಕ್ ಟನ್ ಹೆಚ್ಚುವರಿಯಾಗಿ ಖರೀದಿಸಲು ಕೃಷಿ ಸಚಿವರ ಜೊತೆಗೆ ಮಾತುಕತೆ ನಡೆಸಲಾಗಿತ್ತು. ಇದನ್ನೂ ಓದಿ: ಜಾಗತಿಕ ಶಾಂತಿಗಾಗಿ ಒಟ್ಟಾಗಿ ಕೆಲಸ ಮಾಡೋಣ – ಟ್ರಂಪ್‌ಗೆ ಮೋದಿ ಅಭಿನಂದನೆ

    ಮನವಿ ಮೇರೆಗೆ ಕೃಷಿ ಸಚಿವಾಲಯವೂ ಅನುಮತಿ ನೀಡಿದ್ದು, ಸರ್ಕಾರದ ಈ ನಿರ್ಧಾರದಿಂದಾಗಿ ಈ ಬಾರಿ ಒಟ್ಟು 38,320 ಮೆಟ್ರಿಕ್ ಟನ್ ಬೆಂಬಲ ಬೆಲೆ ಅಡಿಯಲ್ಲಿ ಖರೀದಿಗೆ ಅನುಮತಿ ನೀಡಿದಂತಾಗಲಿದೆ. ಶೀಘ್ರದಲ್ಲಿ ಎಫ್‌ಎಕ್ಯೂ ಗುಣಮಟ್ಟದಲ್ಲಿ ಕೇಂದ್ರದ ಸಂಸ್ಥೆಗಳು ಹೆಸರು ಕಾಳು ಖರೀದಿ ಮಾಡಲಿದೆ ಎಂದು ವಿವರಿಸಿದರು. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆ; ಟ್ರಂಪ್‌ಗೆ ಐತಿಹಾಸಿಕ ಗೆಲುವು

  • ಕೃಷಿ ಇಲಾಖೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೇಡ್ – 2 ಆಮೆಗಳು ಪತ್ತೆ

    ಕೃಷಿ ಇಲಾಖೆ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ರೇಡ್ – 2 ಆಮೆಗಳು ಪತ್ತೆ

    ಬಾಗಲಕೋಟೆ: ಇಲ್ಲಿನ ಕೃಷಿ ಇಲಾಖೆ ಅಧಿಕಾರಿಗಳ (Agriculture Department) ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳಿಂದ ದಾಳಿ ನಡೆದಿದ್ದು, ಎರಡು ಸಾಕು ಆಮೆಗಳು (Tortoise) ಪತ್ತೆಯಾಗಿವೆ.

    ಬಾಗಲಕೋಟೆಯ ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಹಾಗೂ ಸಹಾಯಕ ನಿರ್ದೇಶಕ ಕೃಷ್ಣಾ ಶಿರೂರು ಅವರ ಮನೆಗಳ ಮೇಲೆ ಲೋಕಾಯುಕ್ತ (Karnataka Lokayukta) ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ನಾನು ಜೈಲಿಗೆ ಹೋಗೋವಾಗ ದುಡ್ಡು ಹೊಡೆದು ಹೋದೆ ಅಂತ ಜೊತೆಯಲ್ಲಿದ್ದವರೇ ಹೇಳಿದ್ರು: ಡಿಕೆಶಿ

    ವಿದ್ಯಾಗಿರಿಯ ಅಕ್ಕಿಮರಡಿ ಬಡಾವಣೆಯಲ್ಲಿರುವ ಚೇತನಾ ಪಾಟೀಲ್ ಹಾಗೂ ವಿದ್ಯಾಗಿರಿಯ 18ನೇ ಕ್ರಾಸ್‌ನಲ್ಲಿರುವ ಕೃಷ್ಣಾ ಶಿರೂರು ಅವರ ಮನೆಗಳ ಮೇಲೆ ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ ನೇತೃತ್ವದ ತಂಡ ದಾಳಿ ನಡೆಸಿದೆ. ಇದನ್ನೂ ಓದಿ: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಬೆಳ್ಳಂಬೆಳಗ್ಗೆ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್‌

    ಈ ವೇಳೆ ಚೇತನಾ ಪಾಟೀಲ್ ಅವರ ಮನೆಯಲ್ಲಿ 2 ಸಾಕು ಆಮೆಗಳು ಪತ್ತೆಯಾಗಿವೆ. ಆಮೆಗಳನ್ನ ಮನೆಯಲ್ಲಿ ಸಾಕಿದ್ದೇಕೆ ಎಂಬ ಕುತೂಹಲ ವ್ಯಕ್ತಪಡಿಸಿರುವ ಅಧಿಕಾರಿಗಳು ಅರಣ್ಯ ಇಲಾಖೆ ಅಧಿಕಾರಿಗಳನ್ನೂ ಕರೆಸಿ ಪರಿಶೀಲಿಸಲಾಗುತ್ತಿದೆ. ಇದೇ ವೇಳೆ ಆಸ್ತಿಗೆ ಸಂಬಂಧಿಸಿದ ಮಹತ್ವದ ದಾಖಲೆಗಳು ಪತ್ತೆಯಾಗಿವೆ. ಬಾಗಲಕೋಟೆ ವಿದ್ಯಾಗಿರಿಯ ಅಕ್ಕಿಮರಡಿ ಬಡಾವಣೆಯಲ್ಲಿರುವ ಮನೆಯಲ್ಲಿ ಶೋಧ ಮುಂದುವರಿದಿದ್ದು, ಅಧಿಕಾರಿಗಳು ಮಾಹಿತಿ ಕಲೆಹಾಕುತ್ತಿದ್ದಾರೆ.

    ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಬುಧವಾರ ಬೆಳ್ಳಂಬೆಳಗ್ಗೆ ಸರ್ಕಾರಿ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್‌ ನೀಡಿದ್ದಾರೆ. ಬೆಂಗಳೂರಿನ ಕೆಆರ್‌ಪುರಂ ತಹಶೀಲ್ದಾರ್‌ ಅಜಿತ್‌ ರೈ ಮನೆ ಸೇರಿ 10 ಕಡೆ ಲೋಕಾಯುಕ್ತ ದಾಳಿ ನಡೆಸಿತು. ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮನೆ, ಕಚೇರಿ ಸೇರಿದಂತೆ 10 ಕಡೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮನೆಯಲ್ಲಿದ್ದ 40 ಲಕ್ಷ ರೂ. ನಗದು ಸೇರಿದಂತೆ ಅನೇಕ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೂ ಹಲವೆಡೆ ದಾಳಿ ನಡೆದಿದ್ದು, ಅಧಿಕಾರಿಗಳಿಂದ ಶೋಧ ಮುಂದುವರಿದಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]

  • ಕೃಷಿ ಕೊಟ್ಟರೆ ಖುಷಿಯಿಂದ ಮಾಡ್ತೇನೆ ಅಂದಿದ್ದು ಅದೇ ಖಾತೆ ಸಿಕ್ಕಿದೆ: ಬಿ.ಸಿ ಪಾಟೀಲ್

    ಕೃಷಿ ಕೊಟ್ಟರೆ ಖುಷಿಯಿಂದ ಮಾಡ್ತೇನೆ ಅಂದಿದ್ದು ಅದೇ ಖಾತೆ ಸಿಕ್ಕಿದೆ: ಬಿ.ಸಿ ಪಾಟೀಲ್

    – ನಾನು ರೈತನ ಮಗ

    ಹಾವೇರಿ: ಕೃಷಿ ಇಲಾಖೆ ಯಾವತ್ತೂ ಮುಳ್ಳಿನ ಹಾಸಿಗೆ ಅಂತಾ ಗೊತ್ತಿದ್ದೆ, ಕೃಷಿ ಇಲಾಖೆ ಕೇಳಿದ್ದೆ ನಾನು ರೈತನ ಮಗನಾಗಿ ರೈತರ ಕಣ್ಣೀರು ಒರೆಸುವ ಅವಕಾಶ ಮತ್ತೊಮ್ಮೆ ಸಿಕ್ಕಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸಂತಸ ವ್ಯಕ್ತಪಡಿಸಿದ್ದಾರೆ.

    ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿ.ಸಿ ಪಾಟೀಲ್, ನಾವು ರೈತರ ಮಕ್ಕಳಾಗಿ ರೈತರ ಕಣ್ಣೀರು ಒರೆಸದೆ, ರೈತರ ಸಮಸ್ಯೆಗೆ ಸ್ಪಂದಿಸದೇ ಓಡಿ ಹೋದರೆ ರೈತರನ್ನುನೋಡಿಕೊಳ್ಳುವವರು ಯಾರು? ಕೃಷಿ ಕೊಟ್ಟರೆ ಖುಷಿಯಿಂದ ಖಾತೆ ನಿರ್ವಹಿಸುತ್ತೇನೆ ಎಂದು ಮುಖ್ಯಮಂತ್ರಿ ಅವರೊಂದಿಗೆ ಹೇಳಿದ್ದೆ ಎಂದರು. ಇದನ್ನೂ ಓದಿ: ಅಡ್ಜೆಸ್ಟ್‌ಮೆಂಟ್ ರಾಜಕಾರಣ ಮಾಡೋದು ಬೇಡ: ಶಾಸಕ ಪ್ರೀತಂ ಗೌಡ

    ಈ ಹಿಂದೆಯೂ ಕೃಷಿ ಸಚಿವನಾಗಿದ್ದೆ ಈಗಲೂ ಕೃಷಿ ಖಾತೆ ಸಿಕ್ಕಿದೆ. ಕೃಷಿ ಇಲಾಖೆಯಲ್ಲಿ ಅರ್ಧಕ್ಕೆ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸಲು ಅನುಕೂಲ ಆಗುತ್ತದೆ. ಕೃಷಿ ಖಾತೆ ಸಿಕ್ಕಿರೋದು ಖುಷಿಯಾಗಿದೆ. ಕೃಷಿಯಲ್ಲಿ ಹೊಸ ಹೊಸ ತಾಂತ್ರಿಕ ವ್ಯವಸ್ಥೆ ತಂದು ರೈತಪರವಾಗಿ ಕೆಲಸ ಮಾಡಲು ಸಜ್ಜಾಗಿದ್ದೇನೆ. ಖಾತೆ ಹಂಚಿಕೆ ವಿಚಾರದಲ್ಲಿ ಕೆಲವರ ಅಸಮಾಧಾನ ಬಗ್ಗೆ ನನಗೆ ಮಾಹಿತಿ ಇಲ್ಲ. ಮುಂದೆ ಏನಾಗುತ್ತೆ ನೋಡೋಣ ಎಂದರು.

  • ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    ರೈತರಿಗಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ: ಬಿ.ಸಿ ಪಾಟೀಲ್

    – ಆನ್‍ಲೈನ್ ದ್ರಾಕ್ಷಿ ಮಾರಾಟಕ್ಕೆ ಕ್ರಮ
    – ಪರಿಸ್ಥಿತಿಯ ದುರ್ಲಾಭ ಪಡೆದರೆ ಕಠಿಣ ಕ್ರಮ

    ವಿಜಯಪುರ: ರೈತ ಸಮುದಾಯಕ್ಕಾಗುವ ತೊಂದರೆ ಇಡೀ ದೇಶಕ್ಕಾಗುವ ತೊಂದರೆಯಿದ್ದಂತೆ. ಹೀಗಾಗಿ ರೈತರಿಗೆ ಅನುಕೂಲವಾಗಲೆಂದು ಕೃಷಿ ಉತ್ಪನ್ನಗಳ ಸುಲಲಿತ ಮಾರಾಟಕ್ಕೆ ಅಂತರಾಜ್ಯ ನಿರ್ಬಂಧಗಳನ್ನು ಸಹ ತೆಗೆದುಹಾಕಲಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ಸ್ಪಷ್ಟಪಡಿಸಿದ್ದಾರೆ.

    ವಿಜಯಪುರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೃಷಿ ಸಚಿವರು ಕೊರೊನಾ ಹಿನ್ನಲೆಯಲ್ಲಿ ರೈತ ಮತ್ತು ಕೃಷಿ ಚಟುವಟಿಕೆಗಳ ಕುರಿತು ಜಿಲ್ಲಾ ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆ, ಪೊಲೀಸ್ ಸೇರಿದಂತೆ ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ವಿಜಯಪುರ ಜಿಲ್ಲಾ ಕೃಷಿ ಚಟುವಟಿಕೆಗಳ ಪ್ರಗತಿ ಪರಿಶೀಲನೆ ನಡೆಸಿ ರೈತರು, ಅಧಿಕಾರಿಗಳಿಂದ ಮಾಹಿತಿ ಪಡೆದರು.

    ಈ ಸಂದರ್ಭದಲ್ಲಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕರು, ಜಿಲ್ಲೆಯಲ್ಲಿ ಪ್ರಸ್ತುತ ಯಾವುದೇ ಕೃಷಿ ಚಟುವಟಿಕೆ ನಡೆಯುತ್ತಿಲ್ಲ. ಈ ಚಟುವಟಿಕೆಗಳು ಜೂನ್ ನಂತರ ಪ್ರಾರಂಭವಾಗಲಿದ್ದು, ಅದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿತ್ತನೆಬೀಜ, ರಸಗೊಬ್ಬರ, ಕೀಟನಾಶಕ ಮತ್ತು ಕೃಷಿ ಯಂತ್ರೋಪಕರಣಗಳಿಗೆ ಕೊರತೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದರು. ಜಿಲ್ಲೆಯ ದ್ರಾಕ್ಷಿ ಬೆಳೆಗಾರರು ಆನ್‍ಲೈನ್ ಟ್ರೆಡಿಂಗ್ ಕೊರತೆಗಳ ಬಗ್ಗೆ ಸಚಿವರ ಗಮನ ಸೆಳೆದರು. ರೈತರು, ಅಧಿಕಾರಿಗಳು ಮತ್ತು ಜಿಲ್ಲೆಯ ಶಾಸಕರಿಂದ ಅಗತ್ಯ ಮಾಹಿತಿ ಪಡೆದ ನಂತರ ಕೃಷಿ ಸಚಿವ ಬಿ.ಸಿ. ಪಾಟೀಲ್ ಮಾತನಾಡಿ ಸೂಕ್ತ ನಿರ್ದೇಶನಗಳನ್ನು ನೀಡಿದರು.

    ವಿಜಯಪುರ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಎಲ್ಲಾ ಇಲಾಖೆಗಳ ಸಭೆ ನಡೆಸಿದ್ದೇನೆ. ಈ ಸಭೆಯ ಮುಖ್ಯ ಉದ್ದೇಶ ರೈತರಿಗೆ ಅನುಕೂಲ ಕಲ್ಪಿಸುವುದಾಗಿದೆ. ವಿಜಯಪುರ ಜಿಲ್ಲೆಗೆ ಬೇಕಾದ ಎಲ್ಲಾ ಬೀಜ, ಗೊಬ್ಬರ ವ್ಯವಸ್ಥೆ ಆಗಿದೆ. ಕಡಲೇ ಖರೀದಿಗೆ ಕೇಂದ್ರಗಳನ್ನು ತೆರೆಯಬೇಕು. ಇಲ್ಲದಿದ್ದರೆ ಬೆಳೆಗಾರರಿಗೆ ನಷ್ಟವುಂಟಾಗುತ್ತದೆ. ಸಾರಿಗೆ ಸಮಸ್ಯೆಯೂ ಉಂಟಾಗುತ್ತದೆ. ಆದ್ದರಿಂದ ಖರೀದಿ ಕೇಂದ್ರ ತೆರೆಯಲು ತಕ್ಷಣ ಕ್ರಮ ಕೈಗೊಳ್ಳುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ವ್ಯಾಪಕ ಪ್ರಚಾರವೂ ಅಗತ್ಯವಿದ್ದು, ಮುದ್ರಣ ಮತ್ತು ದೃಶ್ಯ ಮಾಧ್ಯಮಗಳ ನೆರವು ಪಡೆಯುವಂತೆ ಸಲಹೆ ನೀಡಿದರು.

    ದ್ರಾಕ್ಷಿ ಬೆಳೆಗಾರರು ಗಮನ ಸೆಳೆದ ವಿಷಯಕ್ಕೆ ಸಂಬಂಧಿಸಿ ಮಾತನಾಡಿದ ಅವರು, ದ್ರಾಕ್ಷಿ ಆನ್‍ಲೈನ್ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಯಾವುದೇ ತೊಡಕುಗಳಿದ್ದರೂ ನಿವಾರಿಸಲು ಜಿಲ್ಲಾಧಿಕಾರಿಗೆ ಕೃಷಿ ಸಚಿವರು ಸೂಚನೆ ನೀಡಿದರು. ಜಿಲ್ಲೆಯಲ್ಲಿ ಕಲ್ಲಂಗಡಿ ಬೆಳೆ ಉತ್ತಮವಾಗಿ ಬಂದಿದೆ. ಆದರೆ ಕಿಡಿಗೇಡಿಗಳು ಕಲ್ಲಂಗಡಿ ತಿಂದರೆ ರೋಗ ಬರುತ್ತದೆ ಎಂದು ವದಂತಿ ಹಬ್ಬಿಸಿದ್ದಾರೆ. ಇದು ಸುಳ್ಳು, ಹೀಗೆ ವದಂತಿ ಹಬ್ಬಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಬಿ.ಸಿ ಪಾಟೀಲ್ ಎಚ್ಚರಿಕೆ ನೀಡಿದರು.

    ಕಲ್ಲಂಗಡಿ, ಸೌತೆಕಾಯಿ ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಈ ಬಗ್ಗೆ ವೈದ್ಯರು ಹೇಳಿಕೆ ನೀಡಿದ್ದಾರೆ. ಅವರಿಂದ ಮಾಹಿತಿಗಳನ್ನು ಪಡೆಯಲಾಗಿದೆ. ಆದ್ದರಿಂದ ಭೀತಿಯಿಲ್ಲದೇ ಈ ಹಣ್ಣುಗಳ ಸೇವನೆ ಮಾಡುವಂತೆ ಸಚವರು ಸಲಹೆ ನೀಡಿದರು. ಕಲ್ಲಂಗಡಿ ತಿಂದರೆ ಕೊರೊನಾ ಬರುತ್ತೆ ಅಂತ ಅಪಪ್ರಚಾರ ಮಾಡಲಾಗಿದೆ. ಹಾಗಾಗಿ ಕಲ್ಲಂಗಡಿ ಮಾರಾಟ ಆಗುತ್ತಿಲ್ಲ ಎಂದು ದೂರುಗಳು ಬಂದಿವೆ. ಒಂದು ಮೂಲದ ಪ್ರಕಾರ, ಕಲ್ಲಂಗಡಿ ಹಾಗೂ ಸವತೆಕಾಯಿ ತಿಂದರೆ ಮನುಷ್ಯನ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಹೀಗಾಗಿ ಯಾರೂ ಭಯಪಡಬಾರದು. ರೈತರಿಗೆ ಯಾರೇ ಅಧಿಕಾರಿಗಳು ತೊಂದರೆ ಮಾಡಿದಲ್ಲಿ ಅಂಥವರ ಮೇಲೆ ಹಿಂದುಮುಂದು ನೋಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದೇನೆ. ಹಾಪ್ ಕಾಮ್ಸ್ ನಲ್ಲಿ ತರಕಾರಿ, ಹಣ್ಣು, ಮೊಟ್ಟೆ ಮಾರಾಟಕ್ಕೆ ಸೂಚಿಸಲಾಗಿದೆ. ರೈತರೆಲ್ಲ ಹೆದರಬಾರದು, ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿ ಕೆಲಸ ಮಾಡಬೇಡಿ ಎಂದು ಮನವಿ ಮಾಡಿದರು.

    ಹಾಗೆಯೇ ಯಾರಾದರೂ ಪರಿಸ್ಥಿತಿಯ ದುರ್ಲಾಭ ಪಡೆದುಕೊಳ್ಳುವುದಾಗಲೀ, ಪಡೆದುಕೊಂಡಿದ್ದಾಗಲಿ ತಮ್ಮ ಗಮನಕ್ಕೆ ಬಂದರೆ ಅವರು ಯಾರೇ ಆಗಲಿ ಅವರ ವಿರುದ್ಧ ಕಠಿಣ ಕ್ರಮಜರುಗಿಸ ಬೇಕಾಗುತ್ತದೆ ಎಂದು ಕೃಷಿ ಸಚಿವರು ಖಡಕ್ ಎಚ್ಚರಿಕೆ ನೀಡಿದರು.

    ತಾವು ಹಾಗೂ ಸರ್ಕಾರ ರೈತರ ಜೊತೆಗೆ ಇದ್ದೇವೆ. ರೈತರು ಹತಾಶರಾಗಬಾರದು. ಕೊರೊನಾ ಹಾವಳಿ ಆದಷ್ಟು ಬೇಗ ಕಡಿಮೆಯಾಗಲಿದೆ, ನಾವೆಲ್ಲರೂ ಇದರಿಂದ ಪಾರಾಗುತ್ತೇವೆ. ಕೊರೊನಾ ಎಂಬ ಸಾಮಾಜಿಕ ಕುತ್ತು ಆದಷ್ಟು ಬೇಗ ನಿವಾರಣೆಯಾಗಲಿದೆ. ಕೊರೊನಾ ಕಂಟಕದಿಂದ ಪಾರಾಗಿ ಜನರನ್ನು ಬದುಕಿಸಿಕೊಳ್ಳುವ ಕೆಲಸ ಸರ್ಕಾರ ಮಾಡುತ್ತಿದೆ ಎಂದರು. ಹಾಗೆಯೇ ರಾಜ್ಯದ ಸಹಕಾರ ಸಚಿವರು 1200 ಕೋಟಿ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಕೃಷಿಗೆ ಸಂಬಂಧಿಸಿದ ಸೊಸೈಟಿಗಳ ಚಟುವಟಿಕೆಗೆ ಯಾವುದೇ ತೊಂದರೆಯೂ ಇಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

    ಅಲ್ಲದೇ ಜಿಲ್ಲಾಧಿಕಾರಿಗಳ ಕಾರ್ಯಾಲಯ ಮುಂಭಾಗದಲ್ಲಿ ರೈತರಿಂದ ನೇರವಾಗಿ ಗ್ರಾಹಕರ ಮನೆಬಾಗಿಲಿಗೆ ತಾಜಾ ಹಣ್ಣು ಮತ್ತು ತರಕಾರಿ ಮಾರಾಟ ಸೇವೆಗೆ ಕೃಷಿ ಸಚಿವರು ಚಾಲನೆ ನೀಡಿದರು. ಶಾಸಕರಾದ ಶಿವಾನಂದ್ ಪಾಟೀಲ್, ಅರುಣ್ ಶಾಪುರ್, ಬಸನಗೌಡ ಪಾಟೀಲ್ ಯತ್ನಾಳ, ಈಶ್ವಂತ್ ರಾಯ್, ದೇವಾನಂದ್ ಚೌಹಣ್, ಮುರುಗೇಶ್ ನಿರಾಣಿ ಸೇರಿದಂತೆ ಇಲಾಖಾಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

  • 3.72 ಲಕ್ಷ ರೂ. ಲಂಚಕ್ಕೆ ಬೇಡಿಕೆ- ಎಸಿಬಿ ಬಲೆಗೆ ಬಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

    3.72 ಲಕ್ಷ ರೂ. ಲಂಚಕ್ಕೆ ಬೇಡಿಕೆ- ಎಸಿಬಿ ಬಲೆಗೆ ಬಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ

    ಚಿಕ್ಕಬಳ್ಳಾಪುರ: ಒಂದಲ್ಲ ಎರಡಲ್ಲಾ ಬರೋಬ್ಬರಿ 3.72 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದಿದ್ದಾರೆ.

    ಬಾಗೇಪಲ್ಲಿ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಶೇಖರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ದೂರುದಾರ ಬಾಗೇಪಲ್ಲಿ ಪಟ್ಟಣದ ಗರುಡಾದ್ರಿ ಡ್ರಿಪ್ ಇರಿಗೇಷನ್ ಎಂಟರ್‌ಪ್ರೈಸರ್ಸ್‌ ಮಾಲೀಕ ಲಕ್ಷ್ಮೀನರಸಿಂಹಯ್ಯ ಅವರ ಬಳಿ ಚಂದ್ರಶೇಖರ್ 3,72000 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.

    ಲಕ್ಷ್ಮೀನರಸಿಂಹಯ್ಯ ರೈತರ ಜಮೀನುಗಳಿಗೆ ಸರ್ಕಾರಿ ಸಬ್ಸಿಡಿ ಸೌಲಭ್ಯದ ಡ್ರಿಪ್ ಸಿಸ್ಟಂ ಅಳವಡಿಕೆ ಯೋಜನೆ ಅಡಿ ಹನಿ ನೀರಾವರಿ ಪದ್ಧತಿ ಅನುಷ್ಠಾನಗೊಳಿಸಿದ್ದರು. ಇದರ ಮೊತ್ತ ಸರಿ ಸುಮಾರು 16 ಲಕ್ಷ ರೂಪಾಯಿಗಳಾಗಿದ್ದು, ಆ ಹಣ ಕೃಷಿ ಇಲಾಖೆಯಿಂದ ಬಿಡುಗಡೆ ಆಗಬೇಕಿತ್ತು. ಹೀಗಾಗಿ ಹಣ ಬಿಡುಗಡೆಗೆ ಸಹಿ ಹಾಕಲು ಸಹಾಯಕ ನಿರ್ದೇಶಕ ಚಂದ್ರಶೇಖರ್ ಒಟ್ಟು ಮೊತ್ತದಲ್ಲಿ ಶೇ. 22ರಷ್ಟು ಕಮೀಷನ್ ಕೊಡಬೇಕು ಎಂದು ಹೇಳಿದ್ದ. ಅದರಂತೆ ಮೊದಲು 50,000 ರೂಪಾಯಿ ಮುಂಗಡ ಹಣ ಕೊಟ್ಟಿದ್ದ ಲಕ್ಷ್ಮೀನರಸಿಂಹಯ್ಯ ಎರಡನೇ ಕಂತಿನ 50,000 ರೂಪಾಯಿ ಹಣ ಕೊಡುವಾಗ ಎಸಿಬಿ ಅಧಿಕಾರಿಗಳು ಖಚಿತ ಮಾಹಿತಿ ಪಡೆದು ದಾಳಿ ನಡೆಸಿದ್ದಾರೆ.

    ಬಾಗೇಪಲ್ಲಿ ಪಟ್ಟಣದ ನ್ಯಾಷನಲ್ ಕಾಲೇಜು ಬಳಿ ಕಾರಿನಲ್ಲಿ ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಚಂದ್ರಶೇಖರ್ ಅವರನ್ನು ಎಸಿಬಿ ಅಧಿಕಾರಿಗಳು ಹಿಡಿದಿದ್ದಾರೆ. ಎಸಿಬಿ ಡಿವೈಎಸ್‍ಪಿ ವೆಂಕಟೇಶ್ ನಾಯುಡು ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಎಸಿಬಿ ಇನ್ಸ್‍ಪೆಕ್ಟರ್ ಲಕ್ಷ್ಮಿದೇವಮ್ಮ ಸೇರಿ ಕೆಲ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

  • ಮಾಹಿತಿ ಕೇಳಲು ಹೋದ ರೈತರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅಧಿಕಾರಿ

    ಮಾಹಿತಿ ಕೇಳಲು ಹೋದ ರೈತರಿಗೆ ಅವಾಚ್ಯ ಪದಗಳಿಂದ ನಿಂದಿಸಿದ ಅಧಿಕಾರಿ

    ಕಲಬುರಗಿ: ಕೃಷಿ ಹೊಂಡದ ಮಾಹಿತಿ ಕೇಳಲು ಹೋದ ರೈತರಿಗೆ ಅಧಿಕಾರಿಯೋರ್ವ ಅವಾಚ್ಯ ಪದಗಳಿಂದ ನಿಂದಿಸಿದ ಘಟನೆ ಜಿಲ್ಲೆಯ ಅಫಜಲಪುರ್ ತಾಲೂಕಿನ ಕೃಷಿ ಇಲಾಖೆಯಲ್ಲಿ ನಡೆದಿದೆ.

    ತಾಲೂಕಿನ ಚಿಂಚೋಳಿ ಗ್ರಾಮದ ರೈತರು ನಾವು ದಾಖಲಾತಿ ನೀಡಿದ್ದರೂ ನಮ್ಮ ಜಮೀನಿನಲ್ಲಿ ಮಾತ್ರ ಯಾಕೆ ಕೃಷಿ ಹೊಂಡ ನಿರ್ಮಿಸಿಲ್ಲ ಅಂತಾ ಅಧಿಕಾರಿಯನ್ನು ಪ್ರಶ್ನಿಸಿದ್ದಾರೆ. ಇದರಿಂದ ಕೊಪಗೊಂಡ ಅಧಿಕಾರಿ ನಿಮ್ಮ ಫಾರಂ ರಿಜಕ್ಟ್ ಮಾಡಿ ಹರಿದು ಹಾಕಿದ್ದೇನೆ. ಸಿಒಡಿ-ಸಿಬಿಐ ಅಲ್ಲದೇ ಯಾರಿಗಾದರೂ ಕರೆದುಕೊಂಡು ಬನ್ನಿ ನಾನು ನೋಡ್ಕೊತೀನಿ ಅಂತ ಅವಾಚ್ಯ ಶಬ್ಧಗಳಿಂದ ರೈತರಿಗೆ ನಿಂದಿಸಿದ್ದಾನೆ.

    ಅಧಿಕಾರಿ ಅಸಭ್ಯ ವರ್ತನೆಗೆ ರೈತರು ಬೇಸತ್ತು ನಾವು ನಿಮ್ಮ ಮೇಲೆ ಯಾವ ತನಿಖೆಗೂ ಹಾಕಲ್ಲ, ಹಾಗೆ ಮಾಡೋದಾಗಿದ್ರೆ ನಿಮ್ಮ ಬಳಿ ಯಾಕೆ ಬರುತ್ತಿದ್ದೇವು? ಅಧಿಕಾರಿಗಳೇ ಹೀಗೆ ಹೇಳಿದರೆ ರೈತರು ಏನು ಮಾಡಬೇಕು ಎಂದು ಕೇಳಿದ್ದಾರೆ. ಅದಕ್ಕೆ ಕೋಪಗೊಂಡ ಅಧಿಕಾರಿ ಏನಾದರೂ ಮಾಡಿಕೊಳ್ಳಿ ನಾನು ಯಾರಿಗೂ ಹೆದರೋದಿಲ್ಲ ಎನ್ನುವ ರೀತಿ ಉತ್ತರ ನೀಡಿ ರೈತರಿಗೆ ಬಾಯಿಗೆ ಬಂದ ಹಾಗೆ ಬೈದಿದ್ದಾನೆ.

    ಈ ಘಟನೆಯನ್ನು ಸ್ಥಳದಲ್ಲಿದ್ದವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲದೆ ಅಧಿಕಾರಿಯ ದರ್ಪದ ವರ್ತನೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv