Tag: Agriculture Act

  • ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ

    ರೈತ ವಿರೋಧಿ ಕೃಷಿ ಕಾಯ್ದೆ ಹಿಂಪಡೆಯಲು ಆಗ್ರಹ

    ರಾಯಚೂರು: ರೈತರಿಗೆ ಮಾರಕವಾದ ಕೃಷಿ ಕಾಯ್ದೆಗಳನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಅಂತ ಆಗ್ರಹಿಸಿ ರಾಯಚೂರಿನಲ್ಲಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿ ಹೋರಾಟಗಾರರು ರಾಯಚೂರು ನಗರ ಶಾಸಕ ಡಾ.ಶಿವರಾಜ್ ಪಾಟೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ.

    ರೈತರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಶ್ವಾಸ ದ್ರೋಹ ಮಾಡಿದ ವರ್ಷಾಚರಣೆ ಅಂಗವಾಗಿ ಸಂಯುಕ್ತ ಹೋರಾಟ ಕರ್ನಾಟಕ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಕಾಯ್ದೆಗಳನ್ನು ಹಿಂಪಡೆಯುವಲ್ಲಿ ದ್ವಂದ್ವ ನಿಲುವು ಪ್ರದರ್ಶಿಸುತ್ತಿವೆ ಅಂತ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ತಪ್ಪು ಮಾಡಿದ್ದರೆ ಶಿಕ್ಷಿಸು, ಇಲ್ಲವೇ ರಕ್ಷಿಸು – ಮನೆದೇವರ ಮೊರೆಹೋದ ಈಶ್ವರಪ್ಪ

    ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆ ನೀಡಬೇಕು. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಅಗತ್ಯ ವಸ್ತುಗಳ ಬೆಲೆ ನಿಯಂತ್ರಿಸಬೇಕು ಮತ್ತು ಕೋಮು ಭಾವನೆ ಕೆರಳಿಸುತ್ತಿರುವ ಸಂಘಟನೆಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈ ಗೊಳ್ಳಬೇಕೆಂದು ಮುಖ್ಯಮಂತ್ರಿಗೆ ಒತ್ತಾಯಿಸಿ ಶಾಸಕ ಡಾ.ಶಿವರಾಜ್ ಪಾಟೀಲ್‍ಗೆ ಮನವಿ ಸಲ್ಲಿಸಿದರು. ಇದನ್ನೂ ಓದಿ: ಕುಂಭಾಭಿಷೇಕಕ್ಕೆ ಮಸೀದಿಯಿಂದ ಫ್ಲೆಕ್ಸ್- ಸಮಾನತೆ ಸಾರಿದ ಕಾಫಿನಾಡ ಮುಸ್ಲಿಮರು

  • ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಸಿಎಂ ಭರವಸೆ ನೀಡಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್

    ಕೃಷಿ ಕಾಯ್ದೆ ಹಿಂಪಡೆಯುವುದಾಗಿ ಸಿಎಂ ಭರವಸೆ ನೀಡಿದ್ದಾರೆ: ಕೋಡಿಹಳ್ಳಿ ಚಂದ್ರಶೇಖರ್

    ಶಿವಮೊಗ್ಗ: ರೈತ ಸಂಬಂಧಿಸಿದ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭರವಸೆ ನೀಡಿರುವುದಾಗಿ ರೈತ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

    ಬೆಳಗಾವಿ ಅಧಿವೆಶನದ ವೇಳೆ ಕೃಷಿ ಕಾಯ್ದೆ ಹಿಂಪಡೆಯುವಂತೆ ರಾಜ್ಯದ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟನೆ ನಡೆಸಿದ್ದರು. ಸದ್ಯ ಈ ಸಂಬಂಧಿ ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್ ಅವರು, ಮುಖ್ಯಮಂತ್ರಿ ಅವರು ರೈತರ ಜೊತೆ ಚರ್ಚೆ ಮಾಡಿದ್ದಾರೆ. ಬೆಳಗಾವಿ ಅಧಿವೇಶನ ಅವಧಿ ಕಡಿಮೆ ಸಮಯ ಇದೆ. ಇನ್ನು 20-25 ದಿನದಲ್ಲಿ ಮತ್ತೆ ಬೆಂಗಳೂರಿನಲ್ಲಿ ಅಧಿವೇಶನ ನಡೆಸುತ್ತೇವೆ. ಆ ಸಂದರ್ಭದಲ್ಲಿ ರೈತ ಸಂಬಂಧಿಸಿದ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆ ಎಂಬ ಭರವಸೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕಾಯ್ದೆ ಹಿಂಪಡೆದಿದೆ. ಹೀಗಾಗಿ ನಾವು ಕೂಡಾ ವಾಪಸ್ ಪಡೆಯುತ್ತೇವೆ ಎಂದಿರುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸುವರ್ಣಸೌಧ ಮುತ್ತಿಗೆ ಯತ್ನ ವಿಫಲ – ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರು ಪೊಲೀಸರ ವಶಕ್ಕೆ

    ದೆಹಲಿಯ ಹೋರಾಟಕ್ಕೂ ಮೀರಿದ ಹೋರಾಟ ನಡೆಸಲು ರಾಜ್ಯದ ರೈತರು ಸಿದ್ದರಿದ್ದಾರೆ. ಸರ್ಕಾರದ ನಡೆಯನ್ನು ನೋಡಿ ತೀರ್ಮಾನ ಕೈಗೊಳ್ಳುತ್ತೇವೆ. ಬೆಳೆಹಾನಿ ಪರಿಹಾರ ನೀಡುವ ವಿಚಾರದ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ದೇವೆ. ಆದರೆ ಮುಖ್ಯಮಂತ್ರಿ ಅವರು ಖುರ್ಚಿಯ ಸುತ್ತಾ ಬ್ಯುಸಿ ಆಗಿದ್ದಾರೆ. ಪ್ರಾಕೃತಿಕವಾಗಿ ಬಹಳ ದೊಡ್ಡ ನಷ್ಟ ಆಗಿದೆ. ಸರ್ಕಾರ ಘೋಷಣೆ ಮಾಡಿದ ಪರಿಹಾರ ಇನ್ನೂ ತಲುಪಿಲ್ಲ. ಸರ್ಕಾರಕ್ಕೆ ಇಚ್ಚಾಶಕ್ತಿ ಇಲ್ಲದ ಕಾರಣ ರೈತರ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ. ರೈತರಿಗೆ ಓಬಿರಾಯನ ಕಾಲದ ಪರಿಹಾರ ನೀಡುತ್ತಿದ್ದಾರೆ. ಎಂಎಲ್‍ಎ ವೇತನ, ಎಂಪಿ ವೇತನ, ಅಧಿಕಾರಿಗಳ ವೇತನ ಎಷ್ಟು ಬಾರಿ ಹೆಚ್ಚಳ ಆಯಿತು. ರೈತರಿಗೆ ಪರಿಹಾರ ಕೊಡಲು ಚೌಕಾಸಿ ಮಾಡುತ್ತಿದ್ದಾರೆ. ಓಬಿರಾಯನ ಕಾಲದ ಪರಿಹಾರ ನಿಲ್ಲಿಸಿ, ಬದಲಾವಣೆ ಮಾಡಿ. ವೈಜ್ಞಾನಿಕವಾದ ರೀತಿಯಲ್ಲಿ ಪರಿಹಾರ ಕೊಡಿ ಎಂದು ಕಿಡಿಕಾರಿದ್ದಾರೆ.

    ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ಎಂಇಎಸ್ ಪುಂಡಾಟಿಕೆಯನ್ನು ಇಡೀ ರಾಜ್ಯದ ತುಂಬಾ ಚರ್ಚೆ ಮಾಡಬೇಕಿತ್ತಾ. ಯಾರೂ ಪುಂಡರು ಇದ್ದಾರೆ ಅವರನ್ನು ಒದ್ದು ಒಳಗೆ ಹಾಕಬೇಕು. ರೌಡಿಶೀಟ್ ಓಪನ್ ಮಾಡಬೇಕು, ಗಡಿಪಾರು ಮಾಡಬೇಕು. ಅದೇ ದೊಡ್ಡ ಸುದ್ದಿ ಏನು. ಕನ್ನಡ ಬಾವುಟ ಸುಟ್ಟು ಹಾಕುವುದಿರಲಿ, ಮಹಾತ್ಮರ ಪುತ್ಥಳಿ ಧ್ವಂಸ ಮಾಡಿದರೇ ನೋಡಿಕೊಂಡು ಸುಮ್ಮನಿರಬೇಕಾ. ಯಾರೇ ಇದ್ದರೂ ಅಂತಹವರ ವಿರುದ್ಧ ಕ್ರಮ ಕೈಗೊಂಡು, ರಾಜ್ಯದಿಂದ ಕುತ್ತಿಗೆ ಹಿಡಿದು ಹೊರಗೆ ತಳ್ಳಿ. ಗಡಿ ಭಾಗದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಓಟ್ ಇದ್ದಾವೆ. ಕೆಲವರು ಮಾತನಾಡುತ್ತಾರೆ, ಇನ್ನೂ ಕೆಲವರು ಹಾಗೆ ಸುಮ್ಮನಿರುತ್ತಾರೆ. ರಾಜಕೀಯ ಲಾಭದ ನಿರೀಕ್ಷೆ ಇಟ್ಟುಕೊಂಡು ಮಾತನಾಡುತ್ತಾರೆ. ರಾಜ್ಯದ ಹಿತಾಸಕ್ತಿ ಬಂದಾಗ, ನಮ್ಮ ಎಲ್ಲಾ ಧ್ವನಿ, ತೀರ್ಮಾನ ಒಂದೇ ಆಗಿರಬೇಕು. ಎಂಇಎಸ್ ಕೈವಾಡ ಇದೆ, ಇಲ್ಲ ಎಂಬ ಪ್ರಶ್ನೆಯೇ ಬೇಡ. ಯಾರು ಕಿಡಿಗೇಡಿಗಳು ಇದ್ದಾರೆ ಅವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪ್ರತಿ ಮನೆಯಲ್ಲೂ ತಲ್ವಾರ್ ಇಟ್ಟುಕೊಂಡು ಗೋವು ರಕ್ಷಣೆ ಮಾಡಿ: ಸಾಧ್ವಿ ಸರಸ್ವತಿ

  • ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ರೈತರ ಹೋರಾಟಕ್ಕೆ ಇಂದಿಗೆ ಒಂದು ವರ್ಷ – ಸಿಂಘು, ಟಿಕ್ರಿ ಗಡಿಯಲ್ಲಿ ಅನ್ನದಾತರ ಮಹಾಪಂಚಾಯತ್

    ನವದೆಹಲಿ: ಕೇಂದ್ರ ಸರ್ಕಾರದ ರೈತ-ಜನ ವಿರೋಧಿ ಕಾಯ್ದೆಗಳು ಹಾಗೂ ನೀತಿಯನ್ನು ವಿರೋಧಿಸಿ ನವದೆಹಲಿಯಲ್ಲಿ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಇಂದಿಗೆ ಒಂದು ವರ್ಷ.

    ಕಳೆದ ವರ್ಷ ಅಂದರೆ 2020ರ ಸೆಪ್ಟೆಂಬರ್ 17ರಂದು ಪ್ರಧಾನಿ ಮೋದಿ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಜಾರಿಗೆ ತಂದಿತ್ತು. ಆದರೆ ಈ ಕೃಷಿ ಕಾಯ್ದೆಗಳ ವಿರುದ್ಧ ನವೆಂಬರ್ 26ರಂದು ರೈತರು ಬೃಹತ್ ಹೋರಾಟ ಆರಂಭಿಸಿದ್ದರು. ಸದ್ಯ ರೈತರು ಹೋರಾಟ ಆರಂಭಿಸಿ ಇಂದಿಗೆ 1 ವರ್ಷ ಪೂರ್ಣಗೊಂಡಿದೆ. ಈ ಹಿನ್ನೆಲೆಯಲ್ಲಿ ಇಂದು ದೆಹಲಿ ಸಂಪರ್ಕಿಸುವ ಸಿಂಘು ಮತ್ತು ಟಿಕ್ರಿ ಗಡಿಯಲ್ಲಿ ರೈತರ ಮಹಾ ಪಂಚಾಯತ್ ನಡೆಯಲಿದೆ. ಹೀಗಾಗಿ ಪಂಜಾಬ್ ಮತ್ತು ಹರಿಯಾಣದಿಂದ ರೈತರು ದೆಹಲಿ ಗಡಿಗಳತ್ತ ರೈಲು, ರಸ್ತೆ ಮಾರ್ಗವಾಗಿ ಬರುತ್ತಿದ್ದಾರೆ. ಇದನ್ನೂ ಓದಿ: ಕೃಷಿ ಕಾಯ್ದೆ ವಾಪಸ್ ಪಡೆದ ಮೋದಿ ಸರ್ಕಾರ

    ನವೆಂಬರ್ 19ರಂದು ರಾಷ್ಟ್ರೀಯ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ರೈತರ ಆರ್ಥಿಕ, ಸಾಮಾಜಿಕ ಸ್ಥಿತಿ ಸುಧಾರಿಸಲು ಪ್ರಯತ್ನ ಮಾಡಲಾಗುತ್ತಿದ್ದು, 3 ಕಾಯ್ದೆ ಜಾರಿಗೆ ತಂದಿದ್ದೆವು. ಸಣ್ಣ ರೈತರ ಒಳಿತಿಗಾಗಿಯೇ ಕೃಷಿ ಕಾಯ್ದೆ ಜಾರಿಗೆ ತಂದಿದ್ದೆವು. ಈ 3 ಕಾನೂನುಗಳು ಸಂಪೂರ್ಣವಾಗಿ ರೈತರ ಪರವಾಗಿದ್ದವು. ರೈತರ ಹಿತ ದೃಷ್ಟಿಯಲ್ಲಿಟ್ಟುಕೊಂಡೇ ಕಾಯ್ದೆ ಜಾರಿ ಮಾಡಲಾಗಿತ್ತು. ಯೋಜನೆ ಬಗ್ಗೆ ರೈತರಿಗೆ ತಿಳಿಸುವಲ್ಲಿ ಸಾಕಷ್ಟು ಯತ್ನಿಸಿದ್ದೇವೆ. ಆದರೆ ಕೆಲವು ರೈತರು ಕಾಯ್ದೆಯನ್ನು ಅವರ ಸಲಹೆ ಒಪ್ಪಿಕೊಂಡಿದ್ದರೂ ವಿರೋಧಿಸುತ್ತಿದ್ದಾರೆ. ರೈತರ ನಿರಂತರ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ಮೂರು ಕೃಷಿ ಕಾಯ್ದೆ ವಾಪಸ್ ಪಡೆಯಲು ನಿರ್ಧರಿಸಿದೆ ಎಂದು ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವುದಾಗಿ ಘೋಷಿಸಿದರು.

    ಆದರೆ ಸಂಸತ್ತಿನಲ್ಲಿ ಅಧಿಕೃತವಾಗಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು, ಎಲ್ಲಾ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆ ಕಾನೂನುಬದ್ಧಗೊಳಿಸಬೇಕು, ವಿದ್ಯುತ್ ಕ್ಷೇತ್ರ ಖಾಸಗೀಕರಣ ನಿರ್ಧಾರ ಕೈಬಿಡುವಂತೆ ಒಳಗೊಂಡಂತೆ ಆರು ಬೇಡಿಕೆಗಳ ಈಡೇರಿಕೆವರೆಗೆ ಹೋರಾಟ ಮುಂದುವೆರಿಯಲಿದೆ ಎಂದು ರೈತ ಒಕ್ಕೂಟಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ನೀಡಿವೆ. ಇದನ್ನೂ ಓದಿ: ಆಫ್ರಿಕಾದಲ್ಲಿ ರೂಪಾಂತರ ಕೋವಿಡ್ ತಳಿ ಪತ್ತೆ – ಕಟ್ಟೆಚ್ಚರಕ್ಕೆ ಎಲ್ಲ ರಾಜ್ಯಗಳಿಗೆ ಕೇಂದ್ರದಿಂದ ಸೂಚನೆ

  • ಏಳುನೂರು ಜನ ರೈತರ ಪ್ರಾಣ ತೆಗೆದು ಈಗ ವಾಪಸ್ ಪಡೆದಿದ್ದೇವೆ ಅಂತಿದ್ದಾರೆ: ಶಿವಲಿಂಗೇಗೌಡ

    ಏಳುನೂರು ಜನ ರೈತರ ಪ್ರಾಣ ತೆಗೆದು ಈಗ ವಾಪಸ್ ಪಡೆದಿದ್ದೇವೆ ಅಂತಿದ್ದಾರೆ: ಶಿವಲಿಂಗೇಗೌಡ

    ಹಾಸನ: ದೇಶದ ರೈತರು ಪ್ರಧಾನಿ ನರೇಂದ್ರ ಮೋದಿಯವರನ್ನು ಹೆದರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೂರು ಕೃಷಿ ಕಾಯ್ದೆ ಹಿಂಪಡೆದಿದ್ದು ಅವರಿಗೆ ಇದು ಎಚ್ಚರಿಕೆ ಗಂಟೆ ಆಗಿದೆ ಎಂದು ಶಾಸಕ ಕೆ.ಎಮ್.ಶಿವಲಿಂಗೇಗೌಡ ತಿಳಿಸಿದ್ದಾರೆ.

    PM MODI

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ದೇಶದಲ್ಲಿ ರೈತರನ್ನು ಬಿಟ್ಟು ಯಾರು ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂಬ ಎಚ್ಚರಿಕೆ ನೀಡಿದ್ದಾರೆ. ಈ ಕೃಷಿ ಕಾಯ್ದೆಯನ್ನು ಹಲವು ತಿಂಗಳುಗಳ ಹಿಂದೆಯೇ ಹಿಂಪಡೆಯಬೇಕಾಗಿತ್ತು. ಆದರೆ ಇದುವರೆಗೂ ರೈತರ ಬಲಿ ಪಡೆದಿರುವ ಬಿಜೆಪಿ ಸರ್ಕಾರ ರೈತ ವಿರೋಧಿ ಕೆಲಸ ಮಾಡಿದೆ. ಇದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಜನರ ಕಲಿಸಲಿದ್ದಾರೆ ಎಂದರು.

    ಕೃಷಿ ಕಾಯ್ದೆ ಹಿಂಪಡೆಯುವಂತೆ ಹಲವು ತಿಂಗಳಿಂದ ಹೋರಾಟ ನಡೆಸುತ್ತಿರುವ ರೈತರನ್ನು ನರಮೇಧ ಮಾಡಿದ ಬಿಜೆಪಿ ಸರ್ಕಾರ, ಇದುವರೆಗೆ ಸುಮಾರು 700 ಜನ ರೈತರ ಪ್ರಾಣವನ್ನು ತೆಗೆದು ಕರಾಳ ಶಾಸನ ವಾಪಸ್ ಪಡೆದಿದ್ದಾರೆ. ವಿಳಂಬ ನೀತಿಯೇ ಬಿಜೆಪಿ ಸರ್ಕಾರಕ್ಕೆ ನಾಚಿಕೆಯಾಗಲ್ವಾ ಎಂದು ಕಿಡಿಕಾರಿದರು.  ಇದನ್ನೂ ಓದಿ: ಹೋರಾಟದಿಂದ ಮೃತಪಟ್ಟ ರೈತರಿಗೆ 25 ಲಕ್ಷ ರೂಪಾಯಿ ಪರಿಹಾರ ಕೊಡಿ: ಸಿದ್ದರಾಮಯ್ಯ

    ಇದೀಗ ನರೇಂದ್ರ ಮೋದಿ ಬಿಜೆಪಿಯವರಿಗೆ ಬುದ್ಧಿ ಬಂದಿದ್ದು ಉತ್ತರ ಭಾರತದಲ್ಲಿ ಚುನಾವಣೆ ಬಂದಿದೆ ಎಂದು ಕರಾಳ ಶಾಸನ ವಾಪಸ್ ಪಡೆದಿದ್ದೀರಿ. ರೈತರನ್ನು ಏನೆಂದುಕೊಂಡಿದ್ದೀರಿ. ಅದರ ಪರಿಣಾಮ ಮುಂದಿನ ದಿನಗಳಲ್ಲಿ ಎದುರಿಸುತ್ತೀರಿ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಂಧ್ರದ ಕಡಪಾದಲ್ಲಿ ಪ್ರವಾಹ – ಮೂವರು ಸಾವು, 30 ಮಂದಿ ನಾಪತ್ತೆ

    ಕಾಯ್ದೆ ಹಿಂಪಡೆದಿರುವುದು ಸ್ವಾಗತಾರ್ಹ ಆದರೆ ಇಷ್ಟು ದಿನ ಏನು ಮಾಡುತ್ತಿದ್ದೀರಿ. ನೀವು ರೈತರ ನರಮೇಧ ಮಾಡಿದ್ದೀರಿ ನಮ್ಮದು ರೈತರ ಪರವಾದ ಸರ್ಕಾರ ಈ ಕಾಯ್ದೆ ವಿರುದ್ಧ ನಾವು ಕೂಡ ಹೋರಾಟ ಮಾಡಿದ್ದೇವೆ ಎಂದು ಜೆಡಿಎಸ್ ಪಕ್ಷ ಈ ಹಿಂದೆ ನಡೆಸಿದ ಹೋರಾಟವನ್ನು ಶಿವಲಿಂಗೇಗೌಡರು ಸಮರ್ಥಿಸಿಕೊಂಡರು.

  • ಬಿಜೆಪಿ ಶಾಸಕನ ಬಟ್ಟೆ ಹರಿದು ಹಲ್ಲೆ – ಸಿಎಂ ಅಮರೀಂದರ್ ಸಿಂಗ್ ಖಂಡನೆ

    ಬಿಜೆಪಿ ಶಾಸಕನ ಬಟ್ಟೆ ಹರಿದು ಹಲ್ಲೆ – ಸಿಎಂ ಅಮರೀಂದರ್ ಸಿಂಗ್ ಖಂಡನೆ

    ಚಂಡೀಗಢ: ಮುಕ್ತಸರ್ ಜಿಲ್ಲೆಯ ಮಾಲೌಟ್‍ನಲ್ಲಿ ಶನಿವಾರ ಪ್ರತಿಭಟನೆ ನಡೆಸುತ್ತಿದ್ದ ರೈತರು ಪಂಜಾಬ್‍ನ ಬಿಜೆಪಿ ಶಾಸಕ ಅರುಣ್ ನಾರಂಗ್ ಬಟ್ಟೆ ಹರಿದು ಹೋಗುವಂತೆ ಹಲ್ಲೆ ನಡೆಸಿದ್ದಾರೆ.

    ಸ್ಥಳೀಯ ನಾಯಕರೊಂದಿಗೆ ಸುದ್ದಿಗೋಷ್ಠಿಗೆಂದು ಅಬೋಹರ್ ಶಾಸಕ ಅರುಣ್ ನಾರಂಗ್ ಮಾಲೌಟ್‍ಗೆ ಆಗಮಿಸಿದ್ದ ವೇಳೆ, ರೈತರು ಶಾಸಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಅಲ್ಲದೆ ಅವರ ವಾಹನದ ಮೇಲೆ ಕಪ್ಪು ಮಸಿ ಎಸೆದಿದ್ದಾರೆ. ಬಳಿಕ ಪೊಲೀಸರು ಅರುಣ್ ನಾರಂಗ್‍ರನ್ನು ರಕ್ಷಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ.

    ಈ ವಿಚಾರವಾಗಿ ಮಾತನಾಡಿದ ಉಪ ಪೊಲೀಸ್ ವರಿಷ್ಠಾಧಿಕಾರಿ ಜಸ್ಪಾಲ್ ಸಿಂಗ್, ರೈತರು ಬಿಜೆಪಿ ಶಾಸಕ ಅರುಣ್ ನಾರಂಗ್‍ರವರಿಗೆ ಸುದ್ದಿಗೋಷ್ಠಿ ನಡೆಸಲು ಬಿಡಲಿಲ್ಲ ಎಂದು ಹೇಳಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವೀಡಿಯೋದಲ್ಲಿ ಬಟ್ಟೆ ಹರಿದು ಹೋಗಿದ್ದ ಶಾಸಕರನ್ನು ಪೊಲೀಸರು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಕರೆದಯ್ಯುತ್ತಿವುದನ್ನು ಕಾಣಬಹುದಾಗಿದೆ. ಸದ್ಯ ಘಟನೆ ಕುರಿತಂತೆ 7 ಮಂದಿ ಹೆಸರಿನಲ್ಲಿ ಹಾಗೂ 200-250 ಅಪರಿಚಿತ ವ್ಯಕ್ತಿಗಳ ವಿರುದ್ಧ ಸಾರ್ವಜನಿಕ ಸೇವೆಗೆ ಅಡ್ಡಿ, ಕೊಲೆ, ಹಲ್ಲೆ, ಜೀವ ಬೆದರಿಕೆ ಮತ್ತು ಗಲಭೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

    ಘಟನೆ ಕುರಿತಂತೆ ಮಾತನಾಡಿದ ಶಾಸಕ ಅರುಣ್ ನಾರಂಗ್, ಸುದ್ದಿಗೋಷ್ಠಿಗೆಂದು ನಾನು ಮಾಲೌಟ್‍ಗೆ ಹೋಗಿದ್ದೆ. ಈ ವೇಳೆ ಪ್ರತಿಭಟನಕಾರರು ನನಗೆ ಮಾತನಾಡಲು ಅವಕಾಶ ಮಾಡಿಕೊಡಲಿಲ್ಲ. ನನ್ನನ್ನು ಸುತ್ತುವರೆದರು. ನನ್ನ ಮೇಲೆ ಕೆಲವರು ಹಲ್ಲೆ ಮಾಡಿ ಹಿಂಸಾಕೃತ್ಯವನ್ನು ಎಸಗಿದರು ಎಂದು ಹೆಳಿದರು.

    ಈ ವಿಚಾರವಾಗಿ ಯಾರ ಮೇಲೆ ದೂರು ನೀಡಿದ್ದೀರಾ ಎಂಬ ಪ್ರಶ್ನೆಗೆ ಈ ಬಗ್ಗೆ ನಾನು ಪಕ್ಷದ ನಾಯಕರೊಂದಿಗೆ ಮಾತನಾಡುತ್ತೇನೆ ಎಂದರು.

    ಸದ್ಯ ಶಾಸಕರ ಮೇಲಿನ ಹಲ್ಲೆಯನ್ನು ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಖಂಡಿಸಿದ್ದು, ಶಾಂತಿಯತೆಯನ್ನು ಹಾಳು ಮಾಡಲು ಪ್ರಯತ್ನಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನಾ ನಿರತ ರೈತರು ಹಿಂಸೆ ಮಾರ್ಗದತ್ತ ತೆರಳಬಾರದು ಹಾಗೂ ನೂತನ ಕೃಷಿ ಕಾಯಿದೆ ವಿಚಾರವಾಗಿ ಉಂಟಾಗುತ್ತಿರುವ ಸಮಸ್ಯೆಯನ್ನು ಬಗೆಹರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

  • ರೈಲು ರೋಕೋಗೆ ಪೊಲಿಸರ ತಡೆ – ವಿಜಯಪುರ ನಿಲ್ದಾಣದಲ್ಲಿ ರೈತರ ಪ್ರತಿಭಟನೆ

    ರೈಲು ರೋಕೋಗೆ ಪೊಲಿಸರ ತಡೆ – ವಿಜಯಪುರ ನಿಲ್ದಾಣದಲ್ಲಿ ರೈತರ ಪ್ರತಿಭಟನೆ

    ವಿಜಯಪುರ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯಲ್ಲಿ ನಡೆಯುತ್ತಿರುವ ರೈತ ಸಂಘಟನೆಗಳ ಹೋರಾಟಕ್ಕೆ ಬೆಂಬಲಿಸಿ ವಿಜಯಪುರದಲ್ಲಿ ಪ್ರಗತಿಪರ ಸಂಘಟನೆಗಳು ‘ರೈಲು ರೋಕೋ’ಗೆ ಇಂದು ಮುಂದಾಗಿದ್ದರು.

    ಈ ವೇಳೆ ರೈಲ್ವೆ ಪೊಲೀಸರು ‘ರೈಲು ರೋಕೋ’ ಚಳುವಳಿಗೆ ಅಡ್ಡಿಪಡಿಸಿದ್ದಾರೆ. ಇದರಿಂದ ಕೇಂದ್ರ ರೈಲ್ವೆ ನಿಲ್ದಾಣದ ಎದುರೇ ಪ್ರತಿಭಟನೆಗೆ ಸಂಘಟನೆಗಳು ಮುಂದಾದವು.

    ರೈಲ್ವೆ ನಿಲ್ದಾಣದ ಎದುರು ರೈತ ಗೀತೆ ಹಾಡುವುದರ ಮೂಲಕ ಹೋರಾಟಗಾರು ಪ್ರತಿಭಟನೆ ಮಾಡಿದರು. ಅಲ್ಲದೆ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.

    ಸದ್ಯ ಸ್ಥಳದಲ್ಲಿ ಒಂದು ಡಿಎಆರ್ ತುಕಡಿ, ಓರ್ವ ಸಿಪಿಐ, ಮೂವರು ಪಿಎಸ್‍ಐ ಹಾಗೂ ಮೂವತ್ತಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜನೆ ಮಾಡಲಾಗಿದೆ.

  • ರೈತರ ಪವಿತ್ರ ಹೋರಾಟ ಆಂದೋಲನ ಜೀವಿಗಳಿಂದ ಅಪವಿತ್ರ ಆಗ್ತಿದೆ: ಪ್ರಧಾನಿ ಮೋದಿ

    ರೈತರ ಪವಿತ್ರ ಹೋರಾಟ ಆಂದೋಲನ ಜೀವಿಗಳಿಂದ ಅಪವಿತ್ರ ಆಗ್ತಿದೆ: ಪ್ರಧಾನಿ ಮೋದಿ

    – ಆಂದೋಲನ ಜೀವಿಗಳಿಂದ ದೇಶವನ್ನ ರಕ್ಷಿಸಬೇಕಿದೆ

    ನವದೆಹಲಿ: ರೈತರ ಪವಿತ್ರ ಹೋರಾಟವನ್ನ ಆಂದೋಲನ ಜೀವಿಗಳು ಅಪವಿತ್ರ ಮಾಡುತ್ತಿದ್ದಾರೆ. ಹಾಗಾಗಿ ಇಂತಹ ಆಂದೋಲನ ಜೀವಿಗಳಿಂದ ದೇಶವನ್ನ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಹೇಳಿದ್ದಾರೆ. ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಸಲ್ಲಿಸುವ ವೇಳೆ ಪ್ರಧಾನಿಗಳು ಸರ್ಕಾರದ ನೂತನ ಕೃಷಿ ಕಾಯ್ದೆಗಳನ್ನ ಸಮರ್ಥಿಸಿಕೊಂಡು ಆಂದೋಲನ ಜೀವಿಗಳಿಗೆ ಗುದ್ದು ನೀಡಿದರು.

    ರೈತರ ಆಂದೋಲನಗಳು ಪವಿತ್ರ ಮತ್ತು ದೇಶದಲ್ಲಿ ಅದಕ್ಕೆ ಮಹತ್ವ ನೀಡಲಾಗುತ್ತಿದೆ. ಆದ್ರೆ ಕೆಲ ಆಂದೋಲನ ಜೀವಿಗಳ ತಮ್ಮ ವೈಯಕ್ತಿಯ ಲಾಭಕ್ಕಾಗಿ ಹೋರಾಟವನ್ನ ಅಪವಿತ್ರಗೊಳಿಸಲು ಹೊರಟಿದ್ದಾರೆ. ದಂಗೆಕೋರರು, ಸಂಪ್ರದಾಯವಾದಿಗಳು, ನಕ್ಸಲವಾದಿಗಳು ಜೈಲಿನಲ್ಲಿ ಬಂಧಿಗಳಾಗಿದ್ದಾರೆ. ಇಂತಹವರನ್ನ ಬಿಡುಗಡೆಗೊಳಿಸುವಂತೆ ಆಗ್ರಹಿಸುವುದು ಎಷ್ಟು ಸರಿ ಎಂದು ಪ್ರಧಾನಿಗಳು ಪ್ರಶ್ನಿಸಿದ್ರು.

    ಇಂದು ವಿಪಕ್ಷಗಳ ಚರ್ಚೆ ವಿಷಯಗಳ ಬದಲಾಗಿವೆ. ನಾವು ವಿಪಕ್ಷದಲ್ಲಿದ್ದಾಗ ಭ್ರಷ್ಟಾಚಾರ ಮತ್ತು ದೇಶದ ಅಭಿವೃದ್ಧಿಗಾಗಿ ಸರ್ಕಾರವನ್ನ ಪ್ರಶ್ನೆ ಮಾಡಲಾಗುತ್ತಿತ್ತು. ಇವತ್ತಿನ ವಿಪಕ್ಷಗಳು ಅಭಿವೃದ್ಧಿ ವಿಷಯದಲ್ಲಿ ಚರ್ಚೆ ನಡೆಸುವ ಆಸಕ್ತಿಯನ್ನ ಕಳೆದುಕೊಂಡಿವೆ. ಅಭಿವೃದ್ಧಿ ಬಗ್ಗೆ ಪ್ರಶ್ನಿಸಿದ್ರೆ ಉತ್ತರಿಸಲು ನಾವೆಲ್ಲರೂ ಕಾತುರರಾಗಿದ್ದೇವೆ ಎಂದು ವಿಪಕ್ಷಗಳಿಗೆ ತಮ್ಮ ಮಾತುಗಳಿಂದಲೇ ಚಾಟಿ ಬೀಸಿದರು.

    ಹೊಸ ಕಾನೂನುಗಳಿಂದ ರೈತರಿಗೆ ಲಾಭವೇ ಹೊರತು, ನಷ್ಟವಲ್ಲ. ಯಾವ ರೈತರು ಹಣ ಕೊಡಿ ಎಂದು ಕೇಳಿರಲಿಲ್ಲ. ನಾವು ಕಿಸಾನ್ ಸಮ್ಮಾನ್ ಯೋಜನೆ ಮೂಲಕ ಹಣ ಕೊಡುತ್ತಿದ್ದೇವೆ. ಕೃಷಿ ಕಾಯ್ದೆಗಳು ಆಯ್ಕೆಯಷ್ಟೇ, ಕಡ್ಡಾಯವಲ್ಲ ಅಂತಾ ಸ್ಪಷ್ಟಪಡಿಸಿದ್ರು. ಕಾಂಗ್ರೆಸ್ಸಿಗರು ಮತ್ತು ಇತರೆ ಪಕ್ಷಗಳ ನಾಯಕರು ಸುಳ್ಳು ಹಬ್ಬಿಸುವ ಮೂಲಕ ರೈತರಲ್ಲಿ ಅಭದ್ರತೆ ಉಂಟು ಮಾಡುತ್ತಿದ್ದಾರೆ. ಕೃಷಿ ಕಾಯ್ದೆಗಳ ಉಪಯೋಗದ ಬಗ್ಗೆ ಮಾತಾಡಿ ಅಂದ್ರೆ ಕಾಂಗ್ರೆಸ್ಸಿಗರು ಅದರ ಬಣ್ಣದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ರು.

    ರೈತ ಹೋರಾಟದ ಹಿಂದೆ ಆಂದೋಲನಜೀವಿಗಳಿದ್ದಾರೆ ಎಂದು ಪ್ರಧಾನಿ ಮೋದಿ ಆರೋಪಿಸಿದ್ರು. ಮೋದಿ ಮಾತುಗಳನ್ನು ಆಕ್ಷೇಪಿಸಿ ವಿಪಕ್ಷಗಳು ಗದ್ದಲ ಎಬ್ಬಿಸಿ ಪ್ರತಿಭಟನೆ ಮಾಡಿದ್ವು. ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿದರು. ಆದ್ರೆ ಕಾಂಗ್ರೆಸ್ ಪಕ್ಷವೇ ಒಂದು ಗೊಂದಲದ ಪಕ್ಷ, ಅದೂ ಉದ್ಧಾರವಾಗಲ್ಲ. ದೇಶವನ್ನು ಉದ್ಧಾರ ಮಾಡಲು ಬಿಡಲ್ಲ ಎಂದು ಪ್ರಧಾನಿ ತಿರುಗೇಟು ಕೊಟ್ಟರು. ಈ ಹೇಳಿಕೆ ಖಂಡಿಸಿ ಕಾಂಗ್ರೆಸ್ ಸಂಸದರು ಸಭಾತ್ಯಾಗ ಮಾಡಿದರು.

  • ಪ್ರಧಾನಿಗೆ ಬಡವರ ಮೇಲಿನ ಕಾಳಜಿಯೇ ನೂತನ ಕಾಯ್ದೆಗಳ ಜಾರಿಗೆ ಸಾಕ್ಷಿ: ನಳಿನ್

    ಪ್ರಧಾನಿಗೆ ಬಡವರ ಮೇಲಿನ ಕಾಳಜಿಯೇ ನೂತನ ಕಾಯ್ದೆಗಳ ಜಾರಿಗೆ ಸಾಕ್ಷಿ: ನಳಿನ್

    ಮಂಗಳೂರು: ರಾಜ್ಯಸಭೆಯಲ್ಲಿ ನಿನ್ನೆ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ)ಗಳ ಆಧುನೀಕರಣ, ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‍ಪಿ) ಮುಂದುವರಿಕೆ, 80 ಕೋಟಿ ಬಡವರಿಗೆ ಕಡಿಮೆ ದರದಲ್ಲಿ ಪಡಿತರ ವಿತರಣೆ ಮುಂದುವರಿಯುವುದು ಎಂದು ಹೇಳಿದ್ದಾರೆ. ಇದು ಅವರಿಗೆ ಬಡವರ ಮೇಲೆ ಇರುವ ಕಳಕಳಿಗೆ ಸ್ಪಷ್ಟ ಉದಾಹರಣೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೃಷಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಈ ಕಾಯ್ದೆಗಳ ಅನುಷ್ಠಾನ ಅನಿವಾರ್ಯ ಎಂಬುದನ್ನು ಪ್ರತಿಭಟನಾಕಾರರಿಗೆ ಅರ್ಥ ಮಾಡಿಸಿ, ದೇಶವನ್ನು ಮುಂದಕ್ಕೆ ಕೊಂಡೊಯ್ಯಬೇಕಾಗಿದೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳ ಸಹಕಾರ ಬೇಕಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಸಣ್ಣ ರೈತರ ಪರಿಸ್ಥಿತಿ ಸುಧಾರಣೆಗಾಗಿ ರಸಗೊಬ್ಬರ ಸರಿಯಾಗಿ ದೊರೆಯುವಂತೆ ನೋಡಿಕೊಳ್ಳಲಾಗಿದೆ. ದಾಖಲೆಯ ಉತ್ಪಾದನೆಯೂ ನಮ್ಮದಾಗಿದೆ. ರೈತರಿಂದ ಉತ್ಪನ್ನಗಳ ದಾಖಲೆ ಪ್ರಮಾಣದ ಖರೀದಿಯೂ ನಡೆದಿದೆ ಎಂದು ಪ್ರಧಾನಿಯವರು ತಿಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಮಾತುಗಳನ್ನು ಪುನರುಚ್ಚರಿಸಿದರು.

    ಫಸಲ್ ಬಿಮಾ ಯೋಜನೆಯಡಿ ರೈತರಿಗೆ 90,000 ಕೋಟಿ ರೂಪಾಯಿ ನೀಡಲಾಗಿದೆ. ಪ್ರತಿ ರೈತರಿಗೆ ಕ್ರೆಡಿಟ್ ಕಾರ್ಡ್ ನೀಡುತ್ತಿರುವುದು, ಮೀನುಗಾರರಿಗೂ ಇಂಥ ಸೌಲಭ್ಯಗಳ ವಿಸ್ತರಣೆ ಕುರಿತು ಪ್ರಧಾನಿ ಮೋದಿ ತಿಳಿಸಿದ್ದಾರೆ. ಕೃಷಿ ಮಾರುಕಟ್ಟೆಯ ನ್ಯೂನತೆಗಳನ್ನು ನಿವಾರಿಸುವ ದೃಷ್ಟಿಯಿಂದ ಹಿಂದಿನ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು ಇದೇ ಮಾದರಿಯ ಕೃಷಿ ಸುಧಾರಣೆಗಳನ್ನು ಜಾರಿಗೊಳಿಸುವ ಭರವಸೆ ನೀಡಿದ್ದುದನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ. ಹಾಗೆಯೇ ನೇತಾಜಿಯವರ ತತ್ವ ಹಾಗೂ ಆದರ್ಶಗಳನ್ನು ನಾವು ಮರೆಯುತ್ತಿರುವ ಕುರಿತು ಬೇಸರ ವ್ಯಕ್ತಪಡಿಸಿದ ಪ್ರಧಾನಿಗಳು, ಜಲ, ಭೂಮಿ, ಆಕಾಶ, ಬಾಹ್ಯಾಕಾಶ ಸೇರಿದಂತೆ ಸರ್ವ ಕ್ಷೇತ್ರಗಳಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಶಕ್ತಿಯನ್ನು ಭಾರತ ಹೊಂದಿದೆ ಎಂದು ಹೇಳುವ ಅವರನ್ನು ನೆನಪಿಸಿಕೊಂಡಿದ್ದಾಗಿಯೂ ಕಟೀಲ್ ತಿಳಿಸಿದ್ದಾರೆ.

    ಸರ್ಜಿಕಲ್ ದಾಳಿ ವೇಳೆ ದೇಶದ ಸಾಮಥ್ರ್ಯ ಸಾಬೀತಾಗಿದೆ. ಭಾರತದ ರಾಷ್ಟ್ರೀಯತೆಯು ಸಂಕುಚಿತತೆಯನ್ನು ಹೊಂದಿಲ್ಲ. ಸ್ವಾರ್ಥ ಅಥವಾ ಆಕ್ರಮಣಕಾರಿಯಾಗಿಲ್ಲ. ಆದ್ದರಿಂದ ನಮ್ಮ ರಾಷ್ಟ್ರೀಯತೆಯ ಮೇಲೆ ನಡೆಯುತ್ತಿರುವ ದಾಳಿಯ ವಿರುದ್ಧ ಪ್ರತ್ಯುತ್ತರ ನೀಡುವುದು ಅವಶ್ಯಕ. ದೇಶದ ವಿದೇಶಿ ವಿನಿಮಯ ಸಂಗ್ರಹವು ಗರಿಷ್ಠ ಮಟ್ಟದಲ್ಲಿದೆ. ಮೊಬೈಲ್ ಉತ್ಪಾದನೆ ಹಾಗೂ ಇಂಟರ್‍ನೆಟ್ ಬಳಕೆ ವಿಚಾರದಲ್ಲೂ ಜಾಗತಿಕವಾಗಿ ಎರಡನೇ ಸ್ಥಾನದಲ್ಲಿ ಇರುವುದನ್ನು ಪ್ರಧಾನಿಗಳು ಜನತೆಗೆ ವಿವರಿಸಿದ್ದಾರೆ ಎಂದು ಹೇಳಿದ್ದಾಗಿ ರಾಜ್ಯಾಧ್ಯಕ್ಷರು ಹೇಳಿದ್ದಾರೆ.

  • ಇಂದು ದೇಶಾದ್ಯಂತ ಹಸಿರು ಸೇನೆ ಕಹಳೆ – ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ

    ಇಂದು ದೇಶಾದ್ಯಂತ ಹಸಿರು ಸೇನೆ ಕಹಳೆ – ಕೃಷಿ ಕಾಯ್ದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ ತಡೆ

    ಬೆಂಗಳೂರು: ಕೃಷಿ ಕಾಯ್ದೆಗಳ ರದ್ದತಿಗೆ ಆಗ್ರಹಿಸಿ ರೈತ ಹೋರಾಟ ಮತ್ತಷ್ಟು ತೀವ್ರ ಸ್ವರೂಪ ಪಡೆದಿದೆ. ದೆಹಲಿಯ ಗಡಿಗಳತ್ತ ದೊಡ್ಡ ಮಟ್ಟದಲ್ಲಿ ರೈತರು ಬಂದು ಸೇರುವುದು ಹೆಚ್ಚಾಗುತ್ತಲೇ ಇದೆ. ಇದರಿಂದ ಉತ್ತೇಜಿತರಾದಂತಿರುವ ರೈತ ಮುಖಂಡರು, ಮತ್ತೊಮ್ಮೆ ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದಾರೆ. ದೆಹಲಿ ಪರೇಡ್ ಬಳಿಕ ಇದೀಗ ‘ಚಕ್ಕಾ ಜಾಮ್’ಗೆ ಕರೆ ನೀಡಿದ್ದಾರೆ.

    ಇಂದು ದೆಹಲಿ ಹೊರತುಪಡಿಸಿ ಇಡೀ ದೇಶಾದ್ಯಂತ ಮೂರು ಗಂಟೆ ಕಾಲ ರಾಷ್ಟ್ರೀಯ ಹೆದ್ದರಿ ಬಂದ್‍ಗೆ ಕರೆ ನೀಡಿದ್ದಾರೆ. ಸಾರ್ವಜನಿಕರಿಗೆ ತೊಂದರೆ ಆಗದ ರೀತಿಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೂ ಹೈವೇ ಬಂದ್ ನಡೆಸಲು ಭಾರತ್ ಕಿಸಾನ್ ಯೂನಿಯನ್ ಮುಂದಾಳು ರಾಕೇಶ್ ಟಿಕಾಯತ್ ಮನವಿ ಮಾಡಿಕೊಂಡಿದ್ದಾರೆ. ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕರ್ನಾಟಕ ಅನ್ನದಾತರ ಬೆಂಬಲ ಸಿಕ್ಕಿದೆ. ದೆಹಲಿಯ ಗಡಿಗಳಿಗೆ ರಾಜ್ಯದ ಹಲವು ಜಿಲ್ಲೆಗಳಿಂದ ರೈತರು ಆಗಮಿಸಿದ್ದು, ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ. ಗಣರಾಜ್ಯೋತ್ಸವದ ಬಳಿಕ ಇಂದು ದೊಡ್ಡ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಎಲ್ಲಾ ಕಡೆ ಭದ್ರತೆ ಹೆಚ್ಚಿಸಿದೆ. ಹೈ ಅಲರ್ಟ್ ಘೋಷಿಸಿದೆ.

    ರಾಜ್ಯದಲ್ಲಿಯೂ ಇಂದು ರಾಷ್ಟ್ರೀಯ ಹೆದ್ದಾರಿ ಬಂದ್‍ಗೆ ರೈತರು ಸಿದ್ಧತೆ ನಡೆಸಿದ್ದಾರೆ. ಪ್ರಮುಖ ರೈತ ಮುಖಂಡರು ಬೆಂಗಳೂರಿನಲ್ಲಿಯೇ ಹೋರಾಟ ಮಾಡಲು ನಿರ್ಧಾರ ಮಾಡಿದ್ದಾರೆ. ಇದರಿಂದ ಬೆಂಗಳೂರಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಳ್ಳೋ ಸಾಧ್ಯತೆ ಇದೆ. ಮಧ್ಯಾಹ್ನದ ನಂತರ ಊರಿಗೆ ಹೊರಡುವ ಜನರಿಗೆ ಇದರಿಂದ ಸಮಸ್ಯೆ ಎದುರಾಗಲಿದೆ. ಬೆಂಗಳೂರು ಸಂಪರ್ಕಿಸುವ ಎಲ್ಲಾ ಹೈವೇಗಳನ್ನು ಬಂದ್ ಮಾಡಲು ರೈತರು ಸಜ್ಜಾಗಿದ್ದಾರೆ. ಏರ್ ಪೋರ್ಟ್ ರೋಡ್ ಜಾಮ್ ಆಗೋ ಸಂಭವ ಇದೆ.

    ದೆಹಲಿ ಮಾದರಿಯಲ್ಲೇ ರಾಜ್ಯದಲ್ಲೂ ಜಿಲ್ಲಾ ಮಟ್ಟಗಳಲ್ಲಿ ರಸ್ತೆ ತಡೆ ನಡೆಸುವಂತೆ ಕೋಡಿಹಳ್ಳಿ ಚಂದ್ರಶೇಖರ್ ಘಾಜೀಪುರ್ ಗಡಿಯಿಂದ ಕರೆ ಕೊಟ್ಟಿದ್ದಾರೆ. ಆದರೆ ಬೆಂಗಳೂರಲ್ಲಿ ಪ್ರತಿಭಟನೆ ನಡೆಸಲು ಮತ್ತು ಹೈವೇ ಬಂದ್ ನಡೆಸೋದಕ್ಕೆ ರೈತರು ಯಾವುದೇ ಅನುಮತಿ ಪಡೆದುಕೊಂಡಿಲ್ಲ. ಇದು ದೇಶವ್ಯಾಪಿ ನಡೆಯೋ ಪ್ರತಿಭಟನೆ. ಹೀಗಾಗಿ ಹೈವೇ ಬಂದ್‍ಗೆ ಅನುಮತಿ ಕೇಳಲ್ಲ. ಇದಕ್ಕೆ ಖಾಕಿ ಅಡ್ಡಿಪಡಿಸಿದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಕುರುಬೂರು ಶಾಂತಕುಮಾರ್ ಎಚ್ಚರಿಕೆ ನೀಡಿದ್ದಾರೆ.

  • ಸರ್ಕಾರದ ವಿರುದ್ಧ ಗದಗನಲ್ಲಿ ಅನ್ನದಾತರ ಆಕ್ರೋಶ

    ಸರ್ಕಾರದ ವಿರುದ್ಧ ಗದಗನಲ್ಲಿ ಅನ್ನದಾತರ ಆಕ್ರೋಶ

    ಗದಗ: ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ, ರೈತರ ಬೆಳೆಗೆ ಬೆಂಬಲ ಬೆಲೆ ಹಾಗೂ ಖರೀದಿ ಕೇಂದ್ರಕ್ಕಾಗಿ ಆಗ್ರಹಿಸಿ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ರೈತರು ಪ್ರತಿಭಟನೆ ಮಾಡಿದ್ದಾರೆ.

    ನೂರಾರು ರೈತರು ಟ್ರ್ಯಾಕ್ಟರ್  ರ‍್ಯಾಲಿ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದರು. ದೆಹಲಿ ರೈತರ ಪ್ರತಿಭಟನೆಗೆ ಬೆಂಬಲ ನೀಡುವ ಮೂಲಕ ಪಟ್ಟಣದ ಕೋಟೆ ಆಂಜನೇಯ ದೇವಸ್ಥಾನದಿಂದ ತಹಶೀಲ್ದಾರ್ ಕಚೇರಿವರೆಗೂ ಬೃಹತ್ ಪ್ರತಿಭಟನಾ  ರ‍್ಯಾಲಿ ನಡೆಸಿದರು.

    ಸರ್ಕಾರ ಕೃಷಿ ಕಾಯ್ದೆ ಹಿಂಪಡೆಯಬೇಕು, ರೈತರ ಬೇಡಿಕೆಗಳನ್ನು ಈಡೇರಿಸಬೇಕು. ರೈತರ ಬೆಳೆಗಳಿಗೆ ಖರೀದಿ ಕೇಂದ್ರ ಸ್ಥಾಪಿಸುವುದರ ಜೊತೆಗೆ ಎಲ್ಲಾ ಬೆಳೆಗೆ ಬೆಂಬಲ ಬೆಲೆ ನೀಡುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸಿದರು. ಮುಂಡರಗಿಯ ಕೊಪ್ಪಳ ಸರ್ಕಲ್ ನಲ್ಲಿ ರಸ್ತೆತಡೆ ಮಾಡಿ ಮಾನವ ಸರಪಳಿ ನಿರ್ಮಿಸಿದರು.

    ತಹಶೀಲ್ದಾರ ಕಚೇರಿ ಎದುರು ಸಹ ಅರಭಾವಿ-ಚಳ್ಳಕೇರಿ ರಾಜ್ಯ ಹೆದ್ದಾರಿ ಬಂದ್ ಮಾಡಿ, ರಸ್ತೆ ಮಧ್ಯ ಕುಳಿತ ಆಕ್ರೋಶ ವ್ಯಕ್ತಪಡಿಸಿದರು. ಈ ಹೋರಾಟಕ್ಕೆ ಅನೇಕ ರೈತಪರ, ಕನ್ನಡಪರ ಹಾಗೂ ದಲಿತ ಸಂಘಟನೆಗಳ ಕಾರ್ಯಕರ್ತರು ಸಾಥ್ ನೀಡಿದರು. ಸರ್ಕಾರ ರೈತರ ಹೋರಾಟಕ್ಕೆ ಸ್ಪಂದಿಸದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ರೈತರು ಎಚ್ಚರಿಕೆ ನೀಡಿದ್ದಾರೆ.