Tag: Agricultural Fair

  • ನಾವು ತಿನ್ನುವ ಪ್ರತಿ ತುತ್ತಿನ ಹಿಂದೆ ರೈತನ ಶ್ರಮವಿದೆ: ಶಿವಣ್ಣ

    ನಾವು ತಿನ್ನುವ ಪ್ರತಿ ತುತ್ತಿನ ಹಿಂದೆ ರೈತನ ಶ್ರಮವಿದೆ: ಶಿವಣ್ಣ

    – ಕೃಷಿ ಮೇಳಕ್ಕೆ ಆಹ್ವಾನ ನೀಡಿದ ಹ್ಯಾಟ್ರಿಕ್ ಹೀರೊ

    ಬೆಂಗಳೂರು: ನಾವು ತಿನ್ನುವ ಪ್ರತಿ ತುತ್ತಿನ ಹಿಂದೆ ರೈತನ ಶ್ರಮವಿದೆ. ಎಲ್ಲ ರೈತರಿಗೆ ನನ್ನ ಸಲಾಂ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಹೇಳಿದ್ದಾರೆ.

    ಶಿವಣ್ಣ ಇಂದು ಬೆಳಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಒಂದು ವಿಡಿಯೋವನ್ನು ಹಾಕಿಕೊಂಡಿದ್ದು, ಈ ವಿಡಿಯೋದಲ್ಲಿ ರೈತರ ಬಗ್ಗೆ ಮಾತನಾಡಿದ್ದಾರೆ. ದಾವಣಗೆರೆಯಲ್ಲಿ ನಡೆಯುವ ಕೃಷಿ ಮೇಳಕ್ಕೆ ಎಲ್ಲರೂ ಬರಬೇಕು. ಜೊತೆಗೆ ನಾವು ತಿನ್ನುವ ಪ್ರತಿ ತುತ್ತಿನ ಹಿಂದೆ ರೈತನ ಶ್ರಮವಿದೆ. ಎಲ್ಲ ರೈತರಿಗೆ ನನ್ನ ಸಲಾಂ ಎಂದು ಬರೆದುಕೊಂಡಿದ್ದಾರೆ.

    ರಾಜ್ಯ ಮಟ್ಟದ ಚಂದ್ರ ಸ್ಮರಣೆ ಕೃಷಿ ಮೇಳ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹಿರೇಕಲ್ಮಠ ಗ್ರಾಮದಲ್ಲಿ ಮಾರ್ಚ್ 5, 6 ಹಾಗೂ 7 ರಂದು ನಡೆಯಲಿದೆ. ಈ ಕೃಷಿ ಮೇಳಕ್ಕೆ ನಾನು ಬರುತ್ತಿದ್ದೇನೆ. ನೀವು ಎಲ್ಲರೂ ಬರಬೇಕು ಈ ರೈತ ಸಮಾರಂಭವನ್ನು ಯಶಸ್ವಿ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

    ಶಿವಣ್ಣ ಅವರು ಸಾಲು ಸಾಲು ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಇತ್ತಿಚೇಗೆ ಅವರ ಅಭಿನಯದ ಆರ್‌ಡಿಕ್ಸ್ ಸಿನಿಮಾ ಸೆಟ್ಟೇರಿದೆ. ಕಳೆದ ತಿಂಗಳ ಫೆಬ್ರವರಿ 19 ರಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರದ ಮುಹೂರ್ತ ಕಾರ್ಯ ನಡೆಯಿತು. ಈ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನಿತ್ ರಾಜ್‍ಕುಮಾರ್ ಹಾಗೂ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.

    ಈ ಚಿತ್ರದ ಇನ್ನೊಂದು ವಿಶೇಷವೆಂದರೆ ಮೊದಲ ಬಾರಿಗೆ ತಮಿಳು ನಿರ್ದೇಶಕ ರವಿ ಅರಸು ಅವರು ಕನ್ನಡ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದು, ಸತ್ಯ ಜ್ಯೋತಿ ಫಿಲ್ಮ್ಸ್ ಬ್ಯಾನರ್ ಆಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ರವಿ ಅರಸು ಮತ್ತು ಶಿವಣ್ಣನ ಕಾಂಬಿನೇಷನ್ ನಿರೀಕ್ಷೆ ಹೆಚ್ಚು ಮಾಡುವಂತೆ ಮಾಡಿದ್ದು, ಅವರ ಅಭಿಮಾನಿಗಳು ಸಿನಿಮಾಗಾಗಿ ಕಾತುರದಿಂದ ಕಾಯುತ್ತಿದ್ದಾರೆ.

  • ಕೃಷಿ ಮೇಳಕ್ಕೆ ಲಕ್ಷಕ್ಕೂ ಹೆಚ್ಚು ಜನರ ಭೇಟಿ- ಗಮನ ಸೆಳೆದ ಪುಷ್ಪ ಮೇಳ

    ಕೃಷಿ ಮೇಳಕ್ಕೆ ಲಕ್ಷಕ್ಕೂ ಹೆಚ್ಚು ಜನರ ಭೇಟಿ- ಗಮನ ಸೆಳೆದ ಪುಷ್ಪ ಮೇಳ

    ಧಾರವಾಡ: ವಿದ್ಯಾಕಾಶಿ ಧಾರವಾಡದಲ್ಲಿ ರೈತರ ಜಾತ್ರೆಯ ಸಂಭ್ರಮ ಜೋರಾಗಿ ನಡೆದಿದೆ. ನಗರದ ಹೊರವಲಯದ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿರುವ ಕೃಷಿ ಮೇಳಕ್ಕೆ ಈ ಬಾರಿ ಮೊದಲ ದಿನವೇ ಒಂದು ಲಕ್ಷಕ್ಕೂ ಹೆಚ್ಚು ಜನರು ಭೇಟಿ ನೀಡಿದ್ದಾರೆ.

    ಈ ಬಾರಿಯ ಕೃಷಿ ಮೇಳದಲ್ಲಿ ವಿಶೇಷ ಆಕರ್ಷಣೆ ಎಂಬಂತೆ ಪುಷ್ಪ ಮೇಳ ಗಮನ ಸೆಳೆಯಿತು. ಜರ್ಬೇರಾ, ಲಿಲ್ಲಿ, ಗುಲಾಬಿ ಹೂವುಗಳು ಎಲ್ಲರನ್ನು ತಿರುಗಿ ನೋಡುವಂತೆ ಮಾಡಿದವು. ವಿವಿಧ ತಾಲೂಕು ಹಾಗೂ ಜಿಲ್ಲೆಗಳಿಂದ ಬಂದಿದ್ದ ರೈತರು ವಿವಿಧ ತಳಿ, ತಂತ್ರಜ್ಞಾನವನ್ನು ನೋಡುವುದರಲ್ಲಿ ಬ್ಯುಸಿಯಾಗಿದ್ದರೆ, ಇತ್ತ ಯುವಕ, ಯುವತಿಯರು, ಪುಷ್ಪ ಪ್ರದರ್ಶನದಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದರಲ್ಲಿ ನಿರತರಾಗಿದ್ದರು.

    ಕೃಷಿ ಮೇಳದ ಫ್ಲವರ್ ಶೋದಲ್ಲಿ ಹೂವಿನ ಲೋಕವೇ ಅನಾವರಣಗೊಂಡಿತ್ತು. ಕಣ್ಣಿಗೆ ತಂಪು, ಮನಕ್ಕೆ ಮುದ ನೀಡುವ ತರಹೇವಾರಿ ಪುಷ್ಪಗಳು ಫ್ಲವರ್ ಶೋದ ಹೈಲೈಟ್ ಆಗಿತ್ತು. ಸೌಂದರ್ಯ ಪುಷ್ಪಗಳ ಜೊತೆಗೆ ಅಲಂಕಾರಿಕ ಔಷಧಿ ಪುಷ್ಪಗಳು ಕೂಡಾ ಸುಗಂಧ ಹೊರಸೂಸುವ ಪುಷ್ಪಗಳೊಂದಿಗೆ ಸ್ಪರ್ಧೆಗೆ ಇಳಿದಂತೆ ಕಂಗೊಳಿಸಿದವು. ಜೊತೆಗೆ ಸಂಪಿಗೆ, ಸೇವಂತಿ, ದಾಸವಾಳ, ಚಕ್ರಮಣಿ, ಸರ್ಪಗಂಡ, ಬೃಂದ ರಾಜಾ ಹೂವುಗಳನ್ನ ಅಲಂಕರಿಸಿ ಇಡಲಾಗಿತ್ತು.

    ಒಂದು ಕಡೆ ಹೂವಿನ ಅಲಂಕಾರ ಇದ್ದರೆ, ಮತ್ತೊಂದೆಡೆ ಕಲ್ಲಗಂಡಿ ಹಣ್ಣಿನಲ್ಲಿ ದೇಶದ ಪ್ರಮುಖ ಗಣ್ಯರಾದ ಸಿದ್ಧಾರೂಢ ಶ್ರೀ, ಪೇಜಾವರಶ್ರೀ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ, ಸ್ವಾಮಿ ವಿವೇಕಾನಂದ, ಗಾಂಧೀಜಿ, ದ.ರಾ.ಬೇಂದ್ರೆ ಹಾಗೂ ಅಂಬೇಡ್ಕರ್ ಸೇರಿದಂತೆ ಇತರರ ಚಹರೆಯನ್ನು ಕೆತ್ತನೆ ಮಾಡಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿ ಸಹ ಉತ್ತರ ಕರ್ನಾಟಕದ ಜನತೆ ಕೃಷಿ ಮೇಳದಲ್ಲಿ ಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಂಡರು.