Tag: agra

  • ಕುಸಿದು ಬಿತ್ತು ತಾಜ್‍ಮಹಲ್ ಕಂಬ

    ಕುಸಿದು ಬಿತ್ತು ತಾಜ್‍ಮಹಲ್ ಕಂಬ

    ಲಕ್ನೋ: ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶ ರಾಜ್ಯದಲ್ಲಿ ಮಳೆಯಾಗುತ್ತಿದೆ. ಸತತ ಮಳೆಯಿಂದಾಗಿ ವಿಶ್ವವಿಖ್ಯಾತ ತಾಜ್‍ಮಹಲ್ ನ ಕಂಬವೊಂದು ಕುಸಿದು ಬಿದ್ದಿದೆ.

    ಇಂದು ಬೆಳಗಿನ ಜಾವ ತಾಜ್‍ಮಹಲ್ ನ ದಕ್ಷಿಣ ಭಾಗದಲ್ಲಿಯ ಕಂಬ ಬಿದ್ದಿದೆ. ಘಟನೆ ವೇಳೆ ಯಾರು ಇಲ್ಲದಿದ್ದರಿಂದ ಅವಘಡವೊಂದು ತಪ್ಪಿದೆ.

    ಆಗ್ರಾದ 50 ಕಿ.ಮೀ. ದೂರದ ಮಥುರಾ ಜಿಲ್ಲೆಯಲ್ಲಿ ಮಳೆಯಿಂದಾಗಿ ಮನೆಯೊಂದರ ಚಾವಣಿ ಕುಸಿದು ಬಿದ್ದ ಪರಿಣಾಂ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ. ಮಕ್ಕಳ ಪೋಷಕರು ದಿನಗೂಲಿ ಕಾರ್ಮಿಕರಾಗಿದ್ದು, ಕೆಲಸಕ್ಕೆ ಹೋದ ವೇಳೆ ಘಟನೆ ಸಂಭವಿಸಿದೆ.

    ಉತ್ತರ ಪ್ರದೇಶ ರಾಜ್ಯದ ನಂದಗಾಂವ್, ವೃಂದಾವನ, ಕೋಸಿ ಕಲ್ಯಾಣ್‍ಗಳಲ್ಲಿ ಜನರ ಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.

     

  • ಟಿಕೆಟ್ ಇಲ್ಲದೆ ಪ್ರಯಾಣಿಸಿದ 45 ದಿನಗಳ ನಾಯಿಮರಿಗೆ ದಂಡ!

    ಟಿಕೆಟ್ ಇಲ್ಲದೆ ಪ್ರಯಾಣಿಸಿದ 45 ದಿನಗಳ ನಾಯಿಮರಿಗೆ ದಂಡ!

    ಆಗ್ರಾ: ರೈಲಿನ ಜನರಲ್ ಬೋಗಿಗೆ ಟಿಸಿ ಬರುವುದಿಲ್ಲ ಎಂಬ ಉದಾಸೀನದಿಂದ ಟಿಕೆಟ್ ಇಲ್ಲದೆ ಪ್ರಯಾಣಿಸುವವರೇ ಹೆಚ್ಚು. ಕೆಲವೊಮ್ಮೆ ಗ್ರಹಚಾರ ಕೆಟ್ಟಾಗ ಟಿಸಿಗೆ ಸಿಕ್ಕಿಬಿದ್ದು ಪ್ರಯಾಣಿಕರು ದಂಡ ಕಟ್ಟೋದು ತಪ್ಪಿದ್ದಲ್ಲ. ಆದರೆ ಇಲ್ಲೊಬ್ಬರು ಟಿಸಿ ನಾಯಿಗೂ ದಂಡ ಹಾಕಿದ್ದಾರೆ.

    ರೈಲಿನಲ್ಲಿ ತನ್ನೊಂದಿಗೆ 45 ದಿನಗಳ ನಾಯಿಮರಿಯನ್ನ ಕೊಂಡೊಯ್ಯುತ್ತಿದ್ದ ವ್ಯಕ್ತಿಗೆ ಟಿಸಿ ದಂಡ ವಿಧಿಸಿದ್ದಾರೆ. ದೆಹಲಿಯಿಂದ ಹೈದರಾಬಾದ್‍ಗೆ ಆ ವ್ಯಕ್ತಿ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಆತ ತನಗೆ ಮಾತ್ರ ಟಿಕೆಟ್ ತೆಗೆದುಕೊಂಡು ನಾಯಿಗೆ ಟಿಕೆಟ್ ತೆಗೆದುಕೊಂಡಿರಲಿಲ್ಲ. ಈ ವೇಳೆ ಆಗ್ರಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ಟಿಸಿ ಶಿವಕುಮಾರ್ ಎಂಬುವರು ಬಂದಿದ್ದು, ವ್ಯಕ್ತಿ ಸಿಕ್ಕಿ ಬಿದ್ದಿದ್ದಾರೆ. ಆಗ ಟಿಸಿ ಶಿವಕುಮಾರ್ ನಾಯಿಯ ಟಿಕೆಟ್ ಇಲ್ಲದಿರೋದಕ್ಕೆ ರೂಲ್ಸ್ ಪ್ರಕಾರ ದಂಡ ಹಾಕಿ, ನಾಯಿ ಮಾಲೀಕನಿಂದ ದಂಡ ವಸೂಲಿ ಮಾಡಿದ್ದಾರೆ.


    ಆಗ್ರಾ ಕಂಟೋನ್ಮೆಂಟ್ ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ ಪಿ)ಗೆ ಕಂಟ್ರೋಲ್ ರೂಮ್ ನಿಂದ ಕರೆ ಮಾಡಿ ದಕ್ಷಿಣ ಎಕ್ಸ್ ಪ್ರೆಸ್ ನಲ್ಲಿ ಒಬ್ಬ ವ್ಯಕ್ತಿ ನಾಯಿಯ ಜೊತೆ ಪ್ರಯಾಣಿಸುತ್ತಿದ್ದ ಬಗ್ಗೆ ಮಾಹಿತಿ ನೀಡಿದ್ದರು. ಆ ರೈಲು ಶನಿವಾರ ಮಧ್ಯರಾತ್ರಿ ಸುಮಾರು 2 ಗಂಟೆಗೆ ಆಗ್ರಾ ತಲುಪಿದ್ದು, ಅಲ್ಲಿ ಪೊಲೀಸರು ನಾಯಿ ಮತ್ತು ಆ ವ್ಯಕ್ತಿಯನ್ನು ವಶಕ್ಕೆ ಪಡೆದು, ರೈಲ್ವೆ ನಿಲ್ದಾಣದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.

    ಹೈದರಾಬಾದ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರು ಈ ನಾಯಿಯನ್ನ 33,000 ರೂ. ಕೊಟ್ಟು ಹರಿಯಾಣದಿಂದ ಖರೀದಿಸಿದ್ದರು. ಆದರೆ ನಾಯಿಯ ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸಲು ಮರೆತಿದ್ದರು ಎಂದು ಪೊಲೀಸರು ತಿಳಿಸಿದರು. ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕೆ 27.30 ರೂ. ಜಿಎಸ್‍ಟಿ ಸೇರಿದಂತೆ 575 ರೂ. ದಂಡ ವಿಧಿಸಲಾಗಿದೆ. ನಾಯಿಯ ಮಾಲೀಕ ಸಾಮಾನ್ಯ ಟಿಕೆಟ್ ಹೊಂದಿದ್ದರಿಂದ, ಅವರಿಗೆ ದಂಡ ವಿಧಿಸಿಲ್ಲ. ಇದೇ ಮೊದಲ ಬಾರಿಗೆ ಸಾಕುಪ್ರಾಣಿಗಾಗಿ ದಂಡ ವಿಧಿಸಿ ರಶೀದಿ ನೀಡಲಾಗಿದೆ ಎಂದು ರೈಲು ನಿಲ್ದಾಣದ ಅಧಿಕಾರಿ ಅಶ್ವಿನಿ ಕೌಶಿಕ್ ತಿಳಿಸಿದ್ದಾರೆ.

    ನಂತರ ನಾಯಿ ಮಾಲೀಕರು ಆಂಧ್ರಪ್ರದೇಶ ಎಕ್ಸ್ ಪ್ರೆಸ್ ನಲ್ಲಿ ನಾಯಿಮರಿಗಾಗಿ ಎಸಿ ಟೈರ್ ನಲ್ಲಿ ಟಿಕೆಟ್ ಪಡೆದಿದ್ದಾರೆ. ರೈಲ್ವೆ ಮೂಲಗಳು ದೃಢಪಡಿಸಿದ ಪ್ರಕಾರ ಎ2 ಕೋಚ್, ಬರ್ತ್ 21 ಅನ್ನು ನಾಯಿಮರಿಗಾಗಿ ಬುಕ್ ಮಾಡಲಾಗಿದೆ.

    ಸಾಕುಪ್ರಾಣಿಗಳನ್ನ ರೈಲಿನಲ್ಲಿ ಕೊಂಡೊಯ್ಯುವಾಗ ಟಿಕೆಟ್ ಪಡೆಯಬೇಕು. ಎಸಿ ಫಸ್ಟ್ ಕ್ಲಾಸ್‍ನಲ್ಲಿ ಮಾತ್ರ, ಅದರಲ್ಲೂ ಇತರೆ ಪ್ರಯಾಣಿಕರ ಸಮ್ಮತಿ ಇದ್ದರೆ ಮಾತ್ರ ನಾಯಿಯನ್ನ ಜೊತೆಯಲ್ಲಿ ಕೊಂಡೊಯ್ಯಬಹುದು. ಇಲ್ಲವಾದ್ರೆ ಅದನ್ನ ಬೋಗಿಯ ಬ್ರೇಕ್ ವ್ಯಾನ್‍ಗೆ ಕಳಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

    ಪ್ರಯಾಣಿಕ ತನ್ನ ಸಾಕು ಪ್ರಾಣಿಯ ರೈಲು ಪ್ರಯಾಣಕ್ಕಾಗಿ ಟಿಕೆಟ್ ಖರೀದಿಸದೆ ಸಿಕ್ಕಿಬಿದ್ದರೆ ಟಿಕೆಟ್ ದರದ 6 ಪಟ್ಟು ದಂಡ ಹಾಕಲಾಗುತ್ತದೆ. ದೆಹಲಿ ಮತ್ತು ಆಗ್ರಾ ನಡುವೆ ಸಾಕುಪ್ರಾಣಿಯ ಪ್ರಯಾಣದ ಟಿಕೆಟ್ ದರ 90 ರೂ. ಆಗಿರುವುದರಿಂದ ಟಿಸಿ 575 ರೂ. ದಂಡ ವಿಧಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

  • ತಾಜ್ ಮಹಲ್ ನಲ್ಲಿ ನಮಾಜ್ ನಿಷೇಧಿಸಿ ಇಲ್ಲವೇ ಪ್ರಾರ್ಥನೆಗೆ ಹಿಂದೂಗಳಿಗೂ ಅವಕಾಶ ಕೊಡಿ: ಆರ್‍ಎಸ್‍ಎಸ್ ಅಂಗಸಂಸ್ಥೆ

    ತಾಜ್ ಮಹಲ್ ನಲ್ಲಿ ನಮಾಜ್ ನಿಷೇಧಿಸಿ ಇಲ್ಲವೇ ಪ್ರಾರ್ಥನೆಗೆ ಹಿಂದೂಗಳಿಗೂ ಅವಕಾಶ ಕೊಡಿ: ಆರ್‍ಎಸ್‍ಎಸ್ ಅಂಗಸಂಸ್ಥೆ

    ನವದೆಹಲಿ: ಆಗ್ರಾದಲ್ಲಿರೋ ಪುರಾತನ ಹಾಗೂ ಪ್ರಸಿದ್ಧ ಸ್ಮಾರಕ ತಾಜ್ ಮಹಲ್ ನಲ್ಲಿ ಶುಕ್ರವಾರ ನಡೆಯೋ ನಮಾಜನ್ನು ನಿಷೇಧಿಸಬೇಕು ಅಂತ ಆರ್‍ಎಸ್‍ಎಸ್ ಅಂಗಸಂಸ್ಥೆಯೊಂದು ಇದೀಗ ಆಗ್ರಹಿಸಿದ್ದು ವಿವಾದಕ್ಕೆ ಕಾರಣವಾಗಿದೆ.

    ತಾಜ್ ಮಹಲ್ ಒಂದು ರಾಷ್ಟ್ರೀಯ ಪರಂಪರೆಯ ಧ್ಯೋತಕವಾಗಿದೆ. ಮುಸ್ಲಿಮರು ಇದನ್ನು ಧಾರ್ಮಿಕ ಸ್ಥಳವನ್ನಾಗಿ ಮಾಡಿದ್ದಾರೆ. ಆದ್ರೆ ಇದು ಒಂದು ಪಾರಂಪರಿಕ ಸ್ಥಳವವಾಗಿ ಉಳಿಯೋಕೆ ಅಲ್ಲಿ ಮಾಡುವ ನಮಾಜ್ ಅನ್ನು ರದ್ದುಗೊಳಿಸಬೇಕು. ಇಲ್ಲವೆಂದಲ್ಲಿ ಹಿಂದೂಗಳಿಗೂ ಅಲ್ಲಿ ಶಿವನ ಪ್ರಾರ್ಥನೆ ಮಾಡಲು ಅವಕಾಶ ಕೊಡಿ ಅಂತ ಅಖಿಲ ಭಾರತೀಯ ಇತಿಹಾಸ್ ಸಂಕಲನ ಸಮಿತಿಯ ಸಂಘಟನಾ ಕಾರ್ಯದರ್ಶಿ ಡಾ. ಬಾಲ್ಮುಕುಂದ್ ಪಾಂಡೆ ಆಗ್ರಹಿಸಿದ್ದಾರೆ.

    ಟಿವಿ ವಾಹಿನಿಯಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲಿ ಪಾಂಡೆ ಅವರು, ಇಷ್ಟು ದಿನ ತಾಜ್ ಮಹಲ್ ನಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಲಾಗಿತ್ತು. ಆದ್ರೆ ಇನ್ಮುಂದೆ ಈ ಅವಕಾಶವನ್ನು ಹಿಂತೆಗೆದುಕೊಳ್ಳಬೇಕು. ಒಂದು ವೇಳೆ ನಮಾಜ್ ನಿಲ್ಲಿಸಲು ಸಾಧ್ಯವಾಗದಿದ್ದರೆ, ಹಿಂದೂಗಳಿಗೂ ಶಿವನ ಪ್ರಾರ್ಥನೆ ಮಾಡಲು ಅವಕಾಶ ಮಾಡಿಕೊಡಿ ಎಂದು ಹೇಳಿದ್ದಾರೆ.

    ತಾಜ್ ಮಹಲಿನಲ್ಲಿ ಪ್ರತೀ ಶುಕ್ರವಾರ ನಮಾಜ್ ನಡೆಯುತ್ತದೆ. ಆ ವಾರದಂದು ಪ್ರವಾಸಿಗರಿಗೆ ಇಲ್ಲಿ ಪ್ರವೇಶವಿರುವುದಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ಹಿಂದೂ ಯುವ ವಾಹಿನಿಯ ಕಾರ್ಯಕರ್ತರು ತಾಜ್ ಮಹಲ್ ನ ಒಳಗೆ ಶಿವ ಚಾಲಿಸ ಮಂತ್ರ ಪಠಿಸಲು ಯತ್ನಿಸಿದ್ದರು. ಈ ವೇಳೆ ಅಲ್ಲಿಯ ಭದ್ರತಾ ಸಿಬ್ಬಂದಿ ಇದನ್ನು ತಡೆದಿದ್ದರು.

    ಇತ್ತೀಚೆಗಷ್ಟೇ ಬಿಜೆಪಿ ಶಾಸಕ ಸರ್ಧಾನಾ ಅವರು ತಾಜ್ ಮಹಲನ್ನು ದ್ರೋಹಿಗಳು ನಿರ್ಮಿಸಿದ್ದಾರೆ ಅಂತ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಆದ್ರೆ ಇದು ಅವರ ವೈಯಕ್ತಿಕ ಅಭಿಪ್ರಾಯವಾಗಿದೆ ಅಂತ ಬಿಜೆಪಿ ಹೇಳಿತ್ತು.

    ಗುರುವಾರ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಾಜ್ ಮಹಲ್‍ಗೆ ಭೇಟಿ ನೀಡಿ ಪೊರಕೆ ಹಿಡಿದು ಸ್ವಚ್ಛ ಮಾಡುವ ಮೂಲಕ ವಿವಾದವನ್ನು ತಣ್ಣಗೆ ಮಾಡುವ ಪ್ರಯತ್ನ ಮಾಡಿದ್ದರು. ಇದಕ್ಕೂ ಮೊದಲು ಯೋಗಿ ಆದಿತ್ಯಾನಾಥ್, ತಾಜ್‍ಮಹಲ್ ನಿರ್ಮಾಣದ ಹಿಂದೆ ಸಾವಿರಾರು ಭಾರತೀಯರ ಶ್ರಮ ಮತ್ತು ಬೆವರು ಇದೆ. ಪ್ರಾವಸೋದ್ಯಮದ ನಿಟ್ಟಿನಲ್ಲಿ ತಾಜ್ ಮಹಲನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿಕೆ ನೀಡಿದ್ದರು.

    ಮೊಘಲರ ದೊರೆ ಶಾಜಹಾನ್ ಅವರು 17ನೇ ಶತಮಾನದಲ್ಲಿ ಆಗ್ರಾದ ಬಳಿ ತನ್ನ ಪತ್ನಿ ಮುಮ್ತಾಜ್ ಗಾಗಿ ಕಟ್ಟಿಸಿದ ಸಮಾಧಿಯೇ ತಾಜ್ ಮಹಲ್. ಈ ಆವರಣದಲ್ಲಿ ಒಂದು ಮಸೀದಿಯೂ ಇದೆ. ಆದರೆ, ಕೆಲ ಇತಿಹಾಸಕಾರರ ಪ್ರಕಾರ ತಾಜ್ ಮಹಲ್ ಹಿಂದೆ ಶಿವನ ದೇವಾಲಯವಾಗಿತ್ತು ಎನ್ನಲಾಗಿದೆ. ಹಿಂದೂ ದೇಗುಲವನ್ನು ಒಡೆದು ಅಲ್ಲಿ ತಾಜ್ ಮಹಲ್ ನಿರ್ಮಿಸಲಾಗಿದೆ. ಈ ಕಟ್ಟಡದಲ್ಲಿ ಈಗಲೂ ಶಿವಲಿಂಗವಿದೆ ಎಂಬ ವಾದವಿದೆ.

  • ದೇವಸ್ಥಾನದಲ್ಲೇ ಮಹಿಳೆ ಮೇಲೆ ಗ್ಯಾಂಗ್‍ರೇಪ್- ವಾಚ್‍ಮನ್ ಬಂಧನ

    ದೇವಸ್ಥಾನದಲ್ಲೇ ಮಹಿಳೆ ಮೇಲೆ ಗ್ಯಾಂಗ್‍ರೇಪ್- ವಾಚ್‍ಮನ್ ಬಂಧನ

    ಆಗ್ರ: ಮಥುರಾ ಜಿಲ್ಲೆಯ ಬರ್ಸಾನಾದಲ್ಲಿರುವ ಪ್ರಸಿದ್ಧ ರಾಧ ರಾಣಿ ದೇವಾಲಯದಲ್ಲಿ 45 ವರ್ಷದ ಮಹಿಳೆಯೊಬ್ಬರ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಆರೋಪ ಕೇಳಿಬಂದಿದೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಶಂಕಿತ ಆರೋಪಿಗಳಲ್ಲಿ ಒಬ್ಬನಾದ ದೇವಸ್ಥಾನದ ವಾಚ್‍ಮನ್‍ನನ್ನು ಪೊಲೀಸರು ಬಂಧಿಸಿದ್ದಾರೆ.

    ದೇವಸ್ಥಾನದ ವಾಚ್‍ಮನ್ ಹಾಗೂ ಅಡುಗೆ ಕೆಲಸ ಮಾಡುವ ನೌಕರ ಸೇರಿ ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ದೇವಸ್ಥಾನದ ಕಾವಲುಗಾರ ಕನ್ಹೈಯ್ಯ ಯಾದವ್‍ನನ್ನು ಬಂಧಿಸಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ರಾಜೇಂದರ್ ಠಾಕೂರ್‍ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

    ಸೆಪ್ಟೆಂಬರ್ 11ರ ರಾತ್ರಿ ಮಹಿಳೆ ದೇವಾಲಯದಲ್ಲಿ ಮಲಗಿದ್ದಾಗ ಈ ಇಬ್ಬರು ಆರೋಪಿಗಳು ಬಂದು ಆಕೆಯನ್ನು ಬಲವಂತವಾಗಿ ದೇವಸ್ಥಾನದ ನಿರ್ಜನ ಸ್ಥಳಕ್ಕೆ ಕರೆದೊಯ್ಡು ಅತ್ಯಾಚಾರ ಎಸಗಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಸಂತ್ರಸ್ತೆ ಬಳಿಕ ಬರ್ಸಾನಾ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದು, ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿರಲಿಲ್ಲ. ಆದರೆ ಮಹಿಳೆಯ ಭಾಷೆ ಸಮಸ್ಯೆ ಇದ್ದಿದ್ದರಿಂದ ಠಾಣೆಯ ಪೊಲೀಸರಿಗೆ ಆಕೆ ಹೇಳಿದ್ದು ಅರ್ಥವಾಗದೆ ಈ ರೀತಿ ಆಗಿರಬಹುದು ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಸಂತ್ರಸ್ತೆಯ ಹೇಳಿಕೆಯನ್ನು ರೆಕಾರ್ಡ್ ಮಾಡಿಕೊಳ್ಳಲು ಭಾಷಾಂತಕಾರರ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಲಿದ್ದಾರೆ.

    ಮಥುರಾದ ಎಸ್‍ಎಸ್‍ಪಿ ಸ್ವಾಪ್ನಿಲ್ ಮಂಗೈನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಇಬ್ಬರು ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಚಾರ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ. ಆರೋಪಿ ರಾಜೇಂದ್ರನನ್ನು ಪತ್ತೆ ಮಾಡಿದ್ದೇವೆ ಎಂದಿದ್ದಾರೆ.

    ಅಲ್ಲದೆ ಸಂತ್ರಸ್ತೆ ಪೊಲೀಸರ ವಿರುದ್ಧ ಮಾಡಿರುವ ಆರೋಪದ ಬಗ್ಗೆಯೂ ತನಿಖೆ ನಡೆಸುವಂತೆ ಆದೇಶಿಸಲಾಗಿದೆ. ಆಕೆಯ ಆರೋಪ ನಿಜವೆಂದು ತಿಳಿದುಬಂದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

    ಸದ್ಯ ಸಂತ್ರಸ್ತೆಯನ್ನು ದೇವಸ್ಥಾನದ ಇನ್ನಿತರೆ ಭಕ್ತರು ನೋಡಿಕೊಳ್ಳುತ್ತಿದ್ದಾರೆ. ಆಕೆಯ ಗಂಡ ಹಾಗೂ ಮಗು ಕೆಲವು ವರ್ಷಗಳ ಹಿಂದೆ ಸಾವನ್ನಪ್ಪಿದ್ದಾರೆ. ಆರೋಪಿಗಳಿಬ್ಬರನ್ನೂ ದೇವಸ್ಥಾನದ ಆಡಳಿತ ಮಂಡಳಿ ಕೆಲಸದಿಂದ ವಜಾ ಮಾಡಿದೆ ಎಂದು ದೇವಸ್ಥಾನದ ಅಧಿಕಾರಿಯೊಬ್ಬರು ಹೇಳಿದ್ದಾರೆ.