Tag: agra

  • ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದ ಪ್ರಯಾಣಿಕನ ಜೀವ ಉಳಿಸಿದ ಟ್ಯಾಕ್ಸಿ ಡ್ರೈವರ್

    ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದ ಪ್ರಯಾಣಿಕನ ಜೀವ ಉಳಿಸಿದ ಟ್ಯಾಕ್ಸಿ ಡ್ರೈವರ್

    ಆಗ್ರಾ: ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿ ಕಾಲುಜಾರಿ ಚಕ್ರಕ್ಕೆ ಸಿಲುಕುತ್ತಿದ್ದ ಪ್ರಯಾಣಿಕನನ್ನು ಟ್ಯಾಕ್ಸಿ ಚಾಲಕರೊಬ್ಬರು ಕಾಪಾಡಿ ಜೀವ ಉಳಿಸಿದ ಘಟನೆ ಉತ್ತರ ಪ್ರದೇಶದ ಆಗ್ರಾದ ಕಂಟೋನ್ಮೆಂಟ್ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

    ಗುರುವಾರ ಮಧ್ಯಾಹ್ನ ಸುಮಾರು 12 ಗಂಟೆ ಹೊತ್ತಿಗೆ ಈ ಘಟನೆ ನಡೆದಿದೆ. ಸುರೇಶ್(34) ಎಂಬ ಪ್ರಯಾಣಿಕರನ್ನು ರಾಜೇಶ್ ಶರ್ಮಾ ಎಂಬ ಟ್ಯಾಕ್ಸಿ ಚಾಲಕ ಬಚಾವ್ ಮಾಡಿದ್ದಾರೆ.

    ಮಂಗಳ ಲಕ್ಷದ್ವೀಪ ಎಕ್ಸ್ ಪ್ರೆಸ್ ರೈಲು ಆಗ್ರಾ ನಿಲ್ದಾಣದಿಂದ ಹೊರಟ ಸಮಯಕ್ಕೆ ಸುರೇಶ್ ಚಲಿಸುತ್ತಿದ್ದ ರೈಲನ್ನು ಹತ್ತಲು ಹೋಗಿದ್ದಾರೆ. ಈ ವೇಳೆ ಹತ್ತುವ ಗಡಿಬಿಡಿಯಲ್ಲಿ ಅವರ ಕಾಲು ಜಾರಿ ಇನ್ನೇನು ರೈಲಿನ ಚಕ್ರಕ್ಕೆ ಸಿಲುಕುತ್ತಿದ್ದರು. ಆದ್ರೆ ಸರಿಯಾದ ಸಮಯಕ್ಕೆ ರೈಲಿನೊಳಗಿದ್ದ ಟ್ಯಾಕ್ಸಿ ಚಾಲಕ ಸುರೇಶ್ ಅವರ ಕೈ ಹಿಡಿದು ಪ್ರಾಣ ಕಾಪಾಡಿದ್ದಾರೆ.

    ಬಳಿಕ ನಿಲ್ದಾಣದಲ್ಲಿದ್ದ ಇತರ ಪ್ರಯಾಣಿಕರು ಸಹಾಯ ಮಾಡಿ ತಕ್ಷಣ ಸುರೇಶ್ ಅವರನ್ನು ಎಳೆದುಕೊಂಡಿದ್ದಾರೆ. ಈ ದೃಶ್ಯವನ್ನು ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಟ್ಯಾಕ್ಸಿ ಚಾಲಕನ ಕೆಲಸಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

    https://www.youtube.com/watch?v=qloTC2fA-bw

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಗಾಂಧೀಜಿ ಭಾವಚಿತ್ರಕ್ಕೆ ಗುಂಡಿಟ್ಟು ಗೋಡ್ಸೆ ಅಮರ್ ರಹೇ ಎಂದ ಹಿಂದೂ ಮಹಾಸಭಾ ನಾಯಕಿ!

    ಗಾಂಧೀಜಿ ಭಾವಚಿತ್ರಕ್ಕೆ ಗುಂಡಿಟ್ಟು ಗೋಡ್ಸೆ ಅಮರ್ ರಹೇ ಎಂದ ಹಿಂದೂ ಮಹಾಸಭಾ ನಾಯಕಿ!

    ಆಗ್ರಾ: ಹಿಂದೂ ಮಹಾಸಭಾ ಸಂಘಟನೆಯ ರಾಷ್ಟ್ರೀಯ ಕಾರ್ಯದರ್ಶಿ ಪೂಜಾ ಶಕುನ್ ಪಾಂಡೆ ಮಹಾತ್ಮ ಗಾಂಧೀಜಿ ಭಾವಚಿತ್ರಕ್ಕೆ ಅಟಿಕೆ ಗನ್ ಮೂಲಕ ಗುಂಡಿಟ್ಟಿದ್ದು, ಈ ಮೂಲಕ ಗಾಂಧೀಜಿ ಅವರು ಸಾವನ್ನಪ್ಪಿದ ದಿನದಂದು ಸಂಭ್ರಮಿಸಿದ್ದಾರೆ.

    ಗಾಂಧೀಜಿ ಅವರ ಸಾವನ್ನಪ್ಪಿದ ದಿನವನ್ನು ಶೌರ್ಯ ದಿನ ಎಂದು ಆಚರಣೆ ಮಾಡಿ ಸಂಭ್ರಮಿಸಿದ ಹಿಂದೂ ಮಹಾಸಭಾ ಸಂಘಟನೆಯ ಕಾರ್ಯಕರ್ತರು ಎಲ್ಲರಿಗೂ ಸಿಹಿ ನೀಡಿ ಸಂತಸ ಹಂಚಿಕೊಂಡಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪಾಂಡೆ, ನಾನು ಇಂದು ಹೊಸ ಸಾಂಪ್ರದಾಯಕ್ಕೆ ನಾಂದಿ ಹಾಡಿದ್ದು, ದಸರಾ ದಿನದಂದು ರಾವಣನನ್ನು ಸುಟ್ಟು ಸಂಭ್ರಮ ಪಡುವಂತೆ, ಇಂದು ಕೂಡ ನಡೆಸಲಾಯಿತು ಎಂದು ತಿಳಿಸಿದ್ದಾರೆ. ಅಲ್ಲದೇ ಇದೇ ವೇಳೆ ನಾಥೂರಾಮ್ ಗೋಡ್ಸೆಯ ಭಾವಚಿತ್ರಕ್ಕೆ ಮಾಲಾರ್ಪಣೆ ಕೂಡ ಮಾಡಿ `ಗೋಡ್ಸೆ ಅಮರ್ ರಹೇ’ ಎಂದು ಘೋಷಣೆ ಕೂಗಿದ್ದಾರೆ.

    1948 ಜನವರಿ 30 ರಂದು ನಾಥೂರಾವ್ ಗೋಡ್ಸೆ ಮಹಾತ್ಮ ಗಾಂಧೀಜಿ ಅವರಿಗೆ ಗುಂಡಿಟ್ಟಂತೆ ಪೂಜ ಶಕುನ್ ಪಾಂಡೆ ಕೂಡ ಘಟನೆಯನ್ನ ಅನುಕರಣೆ ಮಾಡಿದರು. ಕೇಸರಿ ಬಟ್ಟೆಯನ್ನು ಧರಿಸಿ ಗಾಂಧೀಜಿ ಅವರ ಭಾವಚಿತ್ರಕ್ಕೆ ಶೂಟ್ ಮಾಡುತ್ತಿರುವ ದೃಶ್ಯ ಕಾಣಬಹುದಾಗಿದೆ. ದೇಶಾದ್ಯಂತ ಗಾಂಧೀಜಿ ಅವರ 71ನೇ ಹುತಾತ್ಮ ದಿನಾಚರಣೆಯ ಸಂದರ್ಭದಲ್ಲಿ ಹಿಂದೂ ಮಹಾಸಭಾ ದೇಶ ವಿಭಜನೆ ಆಗಲು ಗಾಂಧೀಜಿಯೇ ಎಂದು ಆರೋಪಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

  • ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

    ಶಾಲೆಯಿಂದ ಮರಳುತ್ತಿದ್ದ ವಿದ್ಯಾರ್ಥಿನಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!

    – ಪಿಎಸ್‍ಐ ಕನಸು ಕಂಡಿದ್ದ ಬಾಲಕಿ ಕನಸಾಗಿಯೇ ಉಳಿಯಿತು

    ಲಕ್ನೋ: ಶಾಲೆ ಮುಗಿಸಿ ಮನೆಗೆ ಮರಳುತ್ತಿದ್ದ 15 ವರ್ಷದ ವಿದ್ಯಾರ್ಥಿನಿಯನ್ನು ತಡೆದು ಬೆಂಕಿ ಹಚ್ಚಿದ ಅಮಾನವೀಯ ಘಟನೆ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ನುಮೀಲ್ ಗ್ರಾಮದಲ್ಲಿ ನಡೆದಿದ್ದು, ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

    ನುಮೀಲ್ ಗ್ರಾಮದ ಸಂಜಾಲಿ ಮೃತ ವಿದ್ಯಾರ್ಥಿನಿ. ಸಂಜಾಲಿಯು ಅಶಾರ್ಫಿ ದೇವಿ ಚಿಡ್ಡಾ ಸಿಂಗ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಘಟನೆ ನಡೆದು ನಾಲ್ಕು ದಿನಗಳು ಕಳೆದರೂ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿಲ್ಲ ಎಂದು ವರದಿಯಾಗಿದೆ.

    ಘಟನೆಯ ವಿವರ:
    ವಿದ್ಯಾರ್ಥಿನಿ ಸಂಜಾಲಿ ಎಂದಿನಂತೆ ಮಂಗಳವಾರ ಶಾಲೆ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದಳು. ಈ ವೇಳೆ ಆಕೆಯನ್ನು ಅಡ್ಡಗಟ್ಟಿದ ಇಬ್ಬರು ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಸುಟ್ಟು ಬಿದ್ದಿದ್ದ ಸಂಜಾಲಿಯನ್ನು ನೋಡಿದ ಕೆಲ ಸ್ಥಳೀಯರು ಆಗ್ರಾದ ಎಸ್‍ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರಿಂದ ದೆಹಲಿಯ ಸಫ್ದರ್‍ಜಂಗ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ.

    ಸಂಜಾಲಿ ಸಾವಿನಿಂದಾಗಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಯಾವ ಕಾರಣಕ್ಕೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎನ್ನುವುದು ನಮಗೆ ಗೊತ್ತಿಲ್ಲ. ದಲಿತರಾಗಿರುವ ನಾವು ನೆರೆಹೊರೆಯವರ ಜೊತೆಗೆ ಜಗಳವಾಡಿಕೊಂಡಿಲ್ಲ, ಯಾರೊಬ್ಬರೊಂದಿಗೂ ವೈರತ್ವ ಹೊಂದಿಲ್ಲ. ನಮ್ಮ ಮಗಳನ್ನು ಕೊಲೆಗೈದ ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೋಷಕರು ಒತ್ತಾಯಿಸಿದ್ದಾರೆ.

    ಐಪಿಎಸ್ ಅಧಿಕಾರಿಯಾಗಬೇಕು ಅಂತ ಸಂಜಾಲಿ ಕನಸು ಕಂಡಿದ್ದಳು. ಆದರೆ ದುಷ್ಕರ್ಮಿಗಳು ಆಕೆಯನ್ನು ಬಲಿಪಡೆದು ಕನಸನ್ನು ಕೊಂದು ಹಾಕಿದರು ಎಂದು ಪೋಷಕರು ಮೃತ ಮಗಳನ್ನು ನೆನೆದು ಕಣ್ಣಿರು ಇಟ್ಟಿದ್ದಾರೆ.

    ಉತ್ತರ ಪ್ರದೇಶ ಸರ್ಕಾರವು ಮೃತಳ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಕುರಿತು ಪ್ರಕರಣ ದಾಖಲಿಸಿದ್ದು, ತನಿಖೆಯನ್ನು ಚುರುಕುಗೊಳಿಸಲಾಗಿದೆ. ಸದ್ಯದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಆಗ್ರಾ ಪೊಲೀಸರು ತಿಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • 12 ದಿನದ ಹಸುಗೂಸನ್ನ ತಾಯಿಯ ಕೈಯಿಂದ ಕಿತ್ತುಕೊಂಡು ಕೊಂದ ಕೋತಿ

    12 ದಿನದ ಹಸುಗೂಸನ್ನ ತಾಯಿಯ ಕೈಯಿಂದ ಕಿತ್ತುಕೊಂಡು ಕೊಂದ ಕೋತಿ

    ಲಕ್ನೋ: 12 ದಿನದ ಹಸುಗೂಸನ್ನ ಕೋತಿಯೊಂದು ತಾಯಿಯಿಂದ ಕಿತ್ತುಕೊಂಡು ಕೊಂದಿರುವ ಘಟನೆ ಆಗ್ರಾದ ಕಚ್ಚಾರಾ ಥೋಕ್ ಕಾಲೋನಿಯಲ್ಲಿ ಸೋಮವಾರ ರಾತ್ರಿ ನಡೆದಿದೆ.

    ಸೋಮವಾರ ಸಂಜೆ ತಾಯಿ ನೇಹಾ ಮಗುವಿಗೆ ಹಾಲುಣಿಸುತ್ತಿದ್ದರು. ಮನೆಯ ಮುಖ್ಯ ದ್ವಾರದಿಂದ ಕೋತಿ ಮನೆಗೆ ನುಗ್ಗಿದೆ, ಮಗುವಿಗೆ ಹಾಲು ಕುಡಿಸುತ್ತಿದ್ದ ತಾಯಿಯ ಬಳಿ ಹೋಗಿ ಮಗುವಿನ ಕತ್ತನ್ನ ಹಿಡಿದುಕೊಂಡು ಅಲ್ಲಿಂದ ಪರಾರಿಯಾಗಿದೆ ಎಂದು ಮೃತ ಮಗುವಿನ ತಂದೆ ಯೋಗೇಶ್ ಹೇಳಿದ್ದಾರೆ.

    “ತಾಯಿ ನೇಹಾಳಿಗೆ ಏನಾಗುತ್ತಿದೆ ಎಂದು ಅರಿವಾಗುತ್ತಿದ್ದಂತೆ ಕೋತಿ ನಮ್ಮ ಮಗನನ್ನು ಕಿತ್ತುಕೊಂಡು ಹೋಗಿದೆ. ನೆರೆ ಮನೆಯವರೆಲ್ಲರು ಮಂಗವನ್ನ ಬೆನ್ನಟ್ಟಿ ಹೋದಾಗ ನಮ್ಮ ಮಗನನನ್ನು ನೆರೆ ಮನೆಯ ಟೆರೆಸ್ ಮೇಲೆ ಬಿಟ್ಟು ಹೋಗಿದೆ. ಮಗ ಆರುಶ್ ದೇಹದಿಂದ ರಕ್ತ ಹರಿಯುತ್ತಿತ್ತು. ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೂ ವೈದ್ಯರು ತೀವ್ರ ಗಾಯವಾದ ಹಿನ್ನಲೆಯಲ್ಲಿ ಮಗು ಮೃತ ಪಟ್ಟಿದೆ ಎಂಬುದಾಗಿ ತಿಳಿಸಿದರು” ಎಂದು ಯೋಗೇಶ್ ಹೇಳಿದ್ದಾರೆ.

    ಸ್ಥಳಿಯರ ಪ್ರಕಾರ, ಈ ಕೋತಿಯೂ ನೇಹಾ ಮತ್ತು ಯೋಗೇಶ್ ಅವರ ಮಗುವನ್ನ ಕಿತ್ತುಕೊಳ್ಳುವ 15 ನಿಮಿಷಗಳ ಹಿಂದೆ 14 ವರ್ಷದ ಬಾಲಕಿಯ ಮೇಲೆಯೂ ಆಕ್ರಮಣ ಮಾಡಿದೆ. ಬಾಲಕಿಯು ಸಣ್ಣ-ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಹೇಳಿದ್ದಾರೆ. ವೃತ್ತಿಯಲ್ಲಿ ಆಟೋ ಡ್ರೈವರ್ ಆಗಿದ್ದ ಯೋಗೇಶ್ ಅವರಿಗೆ 12 ದಿನದ ಆರುಶ್ ಒಬ್ಬನೇ ಮಗನಾಗಿದ್ದು, ಮದುವೆಯಾಗಿ 2 ವರ್ಷದ ನಂತರ ಆರುಶ್ ಜನಿಸಿದ್ದ.

    ಈ ವಿಚಾರವಾಗಿ ಮಾಧ್ಯಮಗಳ ಜೊತೆ ಮಾತನಾಡಿದ ರಂಕಾಟ ಪೊಲೀಸ್ ಠಾಣೆಯ ಎಸ್‍ಐ ಅಟ್ಬಿರ್ ಸಿಂಗ್, ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗ ಕಳಿಸಿದ್ದು, ಅವರ ಕುಂಟುಬಕ್ಕೆ ಆದಷ್ಟು ಬೇಗ ಮೃತ ದೇಹವನ್ನು ಹಸ್ತಾಂತರ ಮಾಡಲಾಗುವುದು. ಮಗುವಿನ ತಲೆಗೆ ತೀವ್ರ ಗಾಯವಾಗಿರುವುದನ್ನ ನಾವು ನೋಡಿದ್ದೇವೆ ಎಂದು ಹೇಳಿದ್ದಾರೆ.

    ಎರಡು ತಿಂಗಳ ಹಿಂದೆ, ಕೋತಿ ಇದೇ ರೀತಿಯ ಇನ್ನೊಂದು ಮಗುವಿನ ಮೇಲೆ ಆಕ್ರಮಣ ಮಾಡಿತ್ತು. ಘಟನೆಯಲ್ಲಿ ಸಣ್ಣ-ಪುಟ್ಟ ಗಾಯಗಳಿಂದ ಮಗು ಪ್ರಾಣಾಪಾಯದಿಂದ ಪಾರಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

    ಹಳ್ಳಿಯ ಜನರಿಗೆ ತೀವ್ರ ತಲೆ ನೋವಾಗಿರುವ ಈ ಮಂಗಳ ಕಾಟವೂ ಅತಿರೇಕಕ್ಕೇರಿದ್ದು, ರಸ್ತೆಯಲ್ಲಿ ಬೈಕ್ ಓಡಿಸುತ್ತಿದ್ದ ಯುವಕನ ಮೇಲೆ ಮಂಗಗಳ ಗುಂಪೊಂದು ದಾಳಿ ಮಾಡಿದೆ. ಯುವಕ ತನ್ನ ಬೈಕ್ ನಿಯಂತ್ರಣ ಕಳೆದುಕೊಂಡು ಡಿವೈಡರ್ ಗೆ ಹೊಡೆದು ಸಾವನ್ನಪ್ಪಿದ್ದಾನೆ. ಈ ಮಂಗಗಳ ಕಾಟದಿಂದ ಪರಿಹಾರ ನೀಡಿ ಎಂದು ಸ್ಥಳೀಯರು ಪೊಲೀಸರಲ್ಲಿ ಬೇಡಿಕೆ ಇಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ನಿಮ್ಮ ಸಂಪುಟದ ಮುಸ್ಲಿಂ ಸಚಿವರ ಹೆಸರನ್ನೂ ಬದಲಾಯಿಸ್ತಿರಾ: ಯೋಗಿ ಆದಿತ್ಯನಾಥ್ ಗೆ ಸಚಿವರಿಂದಲೇ ಪ್ರಶ್ನೆ

    ನಿಮ್ಮ ಸಂಪುಟದ ಮುಸ್ಲಿಂ ಸಚಿವರ ಹೆಸರನ್ನೂ ಬದಲಾಯಿಸ್ತಿರಾ: ಯೋಗಿ ಆದಿತ್ಯನಾಥ್ ಗೆ ಸಚಿವರಿಂದಲೇ ಪ್ರಶ್ನೆ

    ನವದೆಹಲಿ: ದೇಶದ ಪ್ರಮುಖ ನಗರಗಳ ಹೆಸರನ್ನು ಬದಲಾಯಿಸಲು ಬಿಜೆಪಿಯವರು ಮುಂದಾಗುತ್ತಿದ್ದಾರೆ. ಈ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೈತ್ರಿ ಪಕ್ಷದ ಸಚಿವ ಓಂ ಪ್ರಕಾಶ್ ರಾಜ್‍ಭಾರ್ ಕಿಡಿಕಾರಿದ್ದಾರೆ.

    ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮೊಘಲರು ಅನೇಕ ಪಟ್ಟಣಗಳ ಹೆಸರನ್ನು ಬದಲಾಯಸಿದ್ದಾರೆ ಎನ್ನುವುದು ಬಿಜೆಪಿಯವರ ವಾದವಾಗಿದೆ. ಈಗ ಅವುಗಳಿಗೆ ಪೂರ್ವದ ಹೆಸರನ್ನು ಇಡುತ್ತಿದ್ದೇವೆ ಎನ್ನುತ್ತಿದ್ದಾರೆ. ಹಾಗಾದರೆ ಅವರು ರಾಷ್ಟ್ರೀಯ ಬಿಜೆಪಿ ವಕ್ತಾರ ಶಾನವಾಜ್ ಹುಸೇನ್, ಕೇಂದ್ರ ಸಚಿವ ಮುಕ್ತರ್ ಅಬ್ಬಾಸ್ ನಕ್ವಿ, ಉತ್ತರ ಪ್ರದೇಶದ ಸಚಿವ ಮೋಸಿನ್ ರಾಜ್ ಅವರ ಹೆಸರನ್ನು ಬದಲಾಯಿಸುತ್ತಾರಾ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.

    ಹಿಂದುಳಿದ ಹಾಗೂ ತುಳಿತಕ್ಕೆ ಒಳಗಾದ ಜನರಿಂದ ಮತ ಗಿಟ್ಟಿಸಿಕೊಳ್ಳಲು ಹೀಗೆ ಮಾಡಲಾಗುತ್ತಿದೆ. ಮುಸ್ಲಿಂ ರಾಜ ಮನೆತನಗಳು ಕೊಡುಗೆ ನೀಡಿದಷ್ಟು ಉಳಿದವರು ನೀಡಿಲ್ಲ. ನಾವು ಓಡಾಡುವ ಜಿ.ಟಿ.ರಸ್ತೆ, ಕೆಂಪುಕೋಟೆ, ತಾಜ್ ಮಹಲ್ ನಿರ್ಮಿಸಿದ್ದು ಯಾರು ಎಂದು ಪ್ರಶ್ನಿಸಿ ಕುಟುಕಿದ್ದಾರೆ.

    ಅಲಹಾಬಾದ್ ಅನ್ನು ಪ್ರಯಾಗರಾಜ್ ಎಂದು, ಫೈಜಿಯಾಬಾದ್ ಅನ್ನು ಶ್ರೀ ಅಯ್ಯೋಧ್ಯ ಅಂತಾ ಹೆಸರು ಬದಲಾಯಿಸಲಾಗುತ್ತಿದೆ. ಇದೇ ರೀತಿ, ಅಹಮದಾಬಾದ್, ಔರಂಗಾಬಾದ್, ಹೈದರಾಬಾದ್ ಮತ್ತು ಆಗ್ರಾ ನಗರಗಳ ಹೆಸರು ಬದಲಾಯಿಸಲು ಬೇಡಿಕೆಗಳು ಕೇಳಿಬಂದಿದ್ದು, ಇದಕ್ಕೆ ಬಿಜೆಪಿ ನಾಯಕರು ಸಾಥ್ ನೀಡುತ್ತಿದ್ದಾರೆ ಎಂದು ಗುಡುಗಿದರು.

    ಆಗ್ರಾ ನಗರವನ್ನು ಅಗ್ರವನ ಅಂತಾ ಮರು ನಾಮಕರಣ ಮಾಡಬೇಕು ಎಂದು ಬಿಜೆಪಿ ಶಾಸಕ ಜಗನ್ ಪ್ರಸಾದ್ ಗರ್ಗ್ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ. ಅಗ್ರವನ ಮಹಾಭಾರತದ ಹೆಸರು. ಅದನ್ನು ಮೊಗಲ್ ಅರಸ ಅಕ್ಬರ್ ಬಲಾಯಿಸಿ ಆಗ್ರಾ ಎಂದು ಕರೆಯುವಂತೆ ಸೂಚಿಸಿದ. ಹೀಗಾಗಿ ಆಗ್ರಾ ನಗರಕ್ಕೆ ಮೂಲ ಹೆಸರನ್ನು ಇಡಬೇಕು ಅಂತಾ ಪತ್ರದಲ್ಲಿ ಜಗನ್ ಪ್ರಸಾದ್ ಗರ್ಗ್ ತಿಳಿಸಿದ್ದಾರೆ ಎಂದು ಸಚಿವರು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಟೀಂ ಇಂಡಿಯಾ ಬೌಲರ್ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದ 6 ಮಂದಿ ಅರೆಸ್ಟ್

    ಟೀಂ ಇಂಡಿಯಾ ಬೌಲರ್ ಮನೆಯಲ್ಲಿ ದರೋಡೆಗೆ ಯತ್ನಿಸಿದ್ದ 6 ಮಂದಿ ಅರೆಸ್ಟ್

    ಆಗ್ರಾ: ಟೀಂ ಇಂಡಿಯಾ ಯುವ ವೇಗಿ ದೀಪಕ್ ಚಹಾರ್ ಮನೆಯಲ್ಲಿ 6 ಮಂದಿ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿ ಪೊಲೀಸರಿಗೆ ಸಿಕ್ಕಿ ಬಿದ್ದಿರುವ ಘಟನೆ ಆಗ್ರಾದ ಮನಸರೋವರ ಕಾಲೋನಿಯಲ್ಲಿ ನಡೆದಿದೆ.

    ವೇಗಿ ಚಹಾರ್ ಅವರ ತಾಯಿ ಒಬ್ಬರೇ ಮನೆಯಲ್ಲಿ ಇದ್ದ ವೇಳೆ ಘಟನೆ ನಡೆದಿದ್ದು, ದರೋಡೆಕೋರರು ಮನೆಯ ಬಾಗಿಲು ತೆರೆಯಲು ಯತ್ನಿಸಿದ ವೇಳೆ ಎಚ್ಚತ್ತ ಅವರು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಈ ಕುರಿತು ಮಾಹಿತಿ ಪಡೆದ ಶಾಹಜಂಗ್ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

    ರೂಪ್ ಕಿಶೋರ್, ರಾಜ್‍ಕುಮಾರ್, ವಿಜಯ್ ಕುಶ್ವಾಹ, ದಶರಥ್, ದೀನ್‍ದಯಾಳ್ ಮತ್ತು ರಾಕೇಶ್ ಬಂಧಿತ ಆರೋಪಿಗಳಿದ್ದಾರೆ. 6 ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ 412 ಅನ್ವಯ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ದರೋಡೆ ಮಾಡಲು ಯತ್ನಿಸುವ ಮುನ್ನ ಆರೋಪಿಗಳು ಸಿಸಿಟಿವಿ ಕೇಬಲ್ ಕೂಡ ಕತ್ತರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 2 ಪಿಸ್ತೂಲ್, ಆಟೋ ರಿಕ್ಷಾ, 5 ಕಂಪ್ಯೂಟರ್ ಮಾನಿಟರ್ಸ್ ಹಾಗೂ ಇತರೇ ಮನೆಗಳಲ್ಲಿ ಕಳ್ಳತನ ಮಾಡಿದ್ದ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಆರೋಪಿಗಳು ಈಗಾಗಲೇ ಈ ಪ್ರದೇಶದಲ್ಲಿ 9 ಕಳ್ಳತನ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

    ಅಂದಹಾಗೇ ಚಹರ್ 2018 ರ ಏಷ್ಯಾಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ಟೀಂ ಇಂಡಿಯಾ ಪರ ಪಾರ್ದಾಪಣೆ ಮಾಡಿದ್ದರು. ಅಫ್ಘಾನಿಸ್ತಾನದ ವಿರುದ್ಧದ ಮೊದಲ ಪಂದ್ಯವಾಡಿದ ಚಹರ್ ಅಂತರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಮೊದಲ ವಿಕೆಟ್ ಪಡೆದ ಸಾಧನೆ ಮಾಡಿದ್ದರು. ಈ ಪಂದ್ಯವನ್ನು ಟೀಂ ಇಂಡಿಯಾ 37 ರನ್ ಅಂತರದಲ್ಲಿ ಗೆದ್ದಿತ್ತು. ಚಹರ್ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಭಾಗವಹಿಸಿದ್ದರು.

    ವಿಂಡೀಸ್ ವಿರುದ್ಧದ ಮೊದಲ 2 ಏಕದಿನ ಪಂದ್ಯಗಳಿಗೆ ಆಯ್ಕೆ ಆಗಿದ್ದ ಶಾರ್ದೂಲ್ ಠಾಕೂರ್ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗೆ ಉಳಿದಿದ್ದು, ಉಮೇಶ್ ಯಾದವ್ ಈ ಸ್ಥಾನದಲ್ಲಿ ಏಕದಿನ ಕ್ರಿಕೆಟ್‍ಗೆ ಕಮ್ ಬ್ಯಾಕ್ ಮಾಡಿದ್ದು, ಚಹರ್ ತಂಡಕ್ಕೆ ಆಯ್ಕೆ ಆಗುವುದರಲ್ಲಿ ವಿಫಲರಾಗಿದ್ದಾರೆ. ಇದರೊಂದಿಗೆ ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ ತಂಡಕ್ಕೆ ಆಯ್ಕೆ ಆಗಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕೊಟ್ಟ ಭರವಸೆ ನೆನಪಿಸಲು ಮೋದಿ ಭೇಟಿಗಾಗಿ 1,350 ಕಿ.ಮೀ ನಡೆದ ಯುವಕ!

    ಕೊಟ್ಟ ಭರವಸೆ ನೆನಪಿಸಲು ಮೋದಿ ಭೇಟಿಗಾಗಿ 1,350 ಕಿ.ಮೀ ನಡೆದ ಯುವಕ!

    ಲಕ್ನೋ: ಮೋದಿ ಕೊಟ್ಟ ಮಾತನ್ನು ನೆನಪಿಸುವುದಕ್ಕೆ ಒಡಿಶಾ ಮೂಲದ ಯುವಕ ಸುಮಾರು 1,350 ಕಿ.ಮೀ ಪಾದಯಾತ್ರೆ ಕ್ರಮಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಆಗ್ರಾದಲ್ಲಿ ನಡೆದಿದೆ.

    ಒಡಿಶಾ ರಾಜ್ಯದ ರೂರ್ಕೆಲಾ ಜಿಲ್ಲೆಯ ಗ್ರಾಮದ 30 ವರ್ಷದ ಮುಕ್ತಿಕಾಂತ್ ಬಿಸ್ವಾಲ್ ಅಸ್ವಸ್ಥಗೊಂಡ ಯುವಕ. 2015ರಲ್ಲಿ ಪ್ರಧಾನಿ ಮೋದಿಯವರು ರೂರ್ಕೆಲಾ ಜಿಲ್ಲೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಜಿಲ್ಲೆಯ ಇಸ್ಫಾತ್ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವ ಹಾಗೂ ಬ್ರಹ್ಮಣಿ ಸೇತುವೆಯನ್ನು ಪೂರ್ಣಗೊಳಿಸುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಈ ಭರವಸೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಕೊಟ್ಟ ಮಾತನ್ನು ನೆನಪಿಸಲು ಪ್ರಧಾನಿಯವರನ್ನು ಭೇಟಿ ಮಾಡುವ ನಿರ್ಧಾರ ತೆಗೆದುಕೊಂಡು ಪಾದಯಾತ್ರೆ ಆರಂಭಿಸಿದ್ದಾರೆ.

    ಪಾದಯಾತ್ರೆ ವೇಳೆ ಸುಮಾರು 1,350 ಕಿ.ಮೀಗಳನ್ನು ಕ್ರಮಿಸಿ, ಆಗ್ರಾ ಮಾರ್ಗವಾಗಿ ಹೋಗುವಾಗ ಬಿಸಿಲಿನ ಝಳಕ್ಕೆ ತೀವ್ರ ಅಸ್ವಸ್ಥನಾಗಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳೀಯರು ಈತನನ್ನು ಆಗ್ರಾದ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

    ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮುಕ್ತಿಕಾಂತ್ ಬಿಸ್ವಾಲ್, ಮೋದಿಯವರು ಒಡಿಶಾಗೆ ಭೇಟಿ ನೀಡಿದ್ದಾಗ ರೂರ್ಕೆಲಾ ಆಸ್ಪತ್ರೆ ಅಭಿವೃದ್ಧಿ ಹಾಗೂ ಬ್ರಹ್ಮಣಿ ಸೇತುವೆ ಪೂರ್ಣಗೊಳಿಸುವ ಮಾತನ್ನು ನೀಡಿದ್ದರು. ಇಲ್ಲಿಯವರೆಗೂ ಮೋದಿಯವರು ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ, ಹೀಗಾಗಿ ಅವರು ಕೊಟ್ಟ ಮಾತನ್ನು ನೆನಪಿಸುವುದಕ್ಕಾಗಿ ನಾನು ಪಾದಯಾತ್ರೆ ಕೈಗೊಂಡಿದ್ದೇನೆ ಎಂದು ತಿಳಿಸಿದರು.

    ನಮ್ಮ ಗ್ರಾಮದಲ್ಲಿ ಜನರು ವೈದ್ಯಕೀಯ ಸೇವೆಗಳಿಂದ ವಂಚಿತರಾಗಿದ್ದು, ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿದೆ. ಅನೇಕ ಖಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ದೊರೆಯದೆ ಜನ ನರಳುತ್ತಿರುವ ವಿಚಾರ ನನಗೆ ಸಾವಿರಾರು ಕಿ.ಮೀ. ಕ್ರಮಿಸಲು ಪ್ರೇರೆಪಿಸಿದೆ. ನಮ್ಮ ರಾಷ್ಟ್ರ ಧ್ವಜವು ನನಗೆ ಸ್ಫೂರ್ತಿ ನೀಡಿದ್ದು, ನನ್ನ ಪಾದಯಾತ್ರೆಯಲ್ಲಿ ಧ್ವಜವನ್ನು ಹಿಡಿದೇ ಕ್ರಮಿಸಿದ್ದೇನೆ ಎಂದು ಈ ವೇಳೆ ತಿಳಿಸಿದ್ದಾರೆ.

    ಶೀಘ್ರವೇ ಗುಣಮುಖನಾಗಿ ದೆಹಲಿಗೆ ಪ್ರಯಾಣ ಬೆಳೆಸುತ್ತೇನೆ. ಮೋದಿಯವರನ್ನು ಭೇಟಿ ಮಾಡಿ ಆಸ್ಪತ್ರೆಯ ಅಭಿವೃದ್ಧಿ ಹಾಗೂ ಬ್ರಹ್ಮಣಿ ಸೇತುವೆಯನ್ನು ಪೂರ್ಣಗೊಳಿಸುವಂತೆ ಮನವಿ ಸಲ್ಲಿಸುತ್ತೇನೆ ಎಂದು ಮುಕ್ತಿಕಾಂತ್ ಬಿಸ್ವಾಲ್ ಹೇಳಿದ್ದಾರೆ.

  • ಕಾಮಗಾರಿ ವೇಳೆ ಕಾರ್ಮಿಕರ ನಿರ್ಲಕ್ಷ್ಯ: ನಾಯಿಯ ಮೇಲೆಯೇ ರಸ್ತೆ ನಿರ್ಮಾಣ!

    ಕಾಮಗಾರಿ ವೇಳೆ ಕಾರ್ಮಿಕರ ನಿರ್ಲಕ್ಷ್ಯ: ನಾಯಿಯ ಮೇಲೆಯೇ ರಸ್ತೆ ನಿರ್ಮಾಣ!

    ಲಕ್ನೋ: ರಸ್ತೆ ಬದಿ ಮಲಗಿದ್ದ ನಾಯಿಯ ದೇಹದ ಮೇಲೆಯೇ ರಸ್ತೆ ನಿರ್ಮಾಣ ಮಾಡಿದ ಘಟನೆ ಉತ್ತರಪ್ರದೇಶದ ಆಗ್ರಾ ನಗರದಲ್ಲಿ ನಡೆದಿದೆ.

    ಆಗ್ರಾದ ಪತೇಹಾಬಾದ್‍ನ ರಸ್ತೆಗಳಿಗೆ ಮಂಗಳವಾರ ರಾತ್ರಿ ಡಾಂಬರೀಕರಣ ಕಾಮಗಾರಿ ನಡೆಸುತ್ತಿದ್ದರು. ಈ ವೇಳೆ ರಸ್ತೆ ಬದಿ ಮಲಗಿದ್ದ ನಾಯಿಯ ಮೇಲೆಯೇ ಬಿಸಿ ಟಾರ್ ಅನ್ನು ಹಾಕಿಕೊಂಡು ಹೋಗಿದ್ದಾರೆ. ಇಂದು ಬೆಳಗ್ಗೆ ಸಾರ್ವಜನಿಕರಿಗೆ ನಾಯಿಯ ಪರಿಸ್ಥಿತಿಯನ್ನು ನೋಡಿ ಕಾಮಗಾರಿ ಕಂಪನಿಯ ನಿರ್ಲಕ್ಷ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆ ವೇಳೆ ನಾಯಿ ಅರಚಿದ್ದರೂ ಗಮನಿಸದೆ, ರಸ್ತೆ ನಿರ್ಮಾಣ ಮಾಡಿಕೊಂಡು ಹೋಗಿದ್ದಾರೆ.

    ಸಾಮಾಜಿಕ ಕಾರ್ಯಕರ್ತ ಗೋವಿಂದ ಪರಶಾರ್ ಎಂಬುವರು ಮಾತನಾಡಿ, ಕಾಲಿನ ಮೇಲೆ ರಸ್ತೆ ನಿರ್ಮಾಣವಾಗಿದ್ದರಿಂದ ನೋವಿನಿಂದ ನಾಯಿ ಸಾವನ್ನಪ್ಪಿದೆ ಎಂದು ಬೇಸರ ವ್ಯಕ್ತಪಡಿಸಿದರು. ನಾಯಿಯ ದೇಹವನ್ನು ಜೆಸಿಬಿಯಿಂದ ತೆಗೆಸಿ ಅಂತ್ಯಸಂಸ್ಕಾರ ಮಾಡುವ ತೀರ್ಮಾನ ತೆಗೆದುಕೊಂಡಿದ್ದೇನೆ. ಅಲ್ಲದೇ ರಸ್ತೆ ನಿರ್ಮಾಣ ಮಾಡಿದ ಕೆಲಸದವರು ಈ ಘಟನೆ ಕುರಿತು ಪಾಠ ಕಲಿಯಬೇಕು. ಇಂತಹ ಘಟನೆಗಳು ಮರುಕಳಿಸಿಬಾರದು ಈ ಬಗ್ಗೆ ಕಾಮಗಾರಿ ಕಂಪನಿಗೆ ದೂರು ನೀಡುವುದಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.

    ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಅನೇಕ ಸಂಘ-ಸಂಸ್ಥೆಗಳು ಸ್ಥಳಕ್ಕಾಗಿಮಿಸಿ ಕಾಮಗಾರಿ ನಡೆಸಿದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಮಾತನಾಡಿದ ಓರ್ವ ಕಾರ್ಮಿಕ ರಾತ್ರಿ ಕಾಮಗಾರಿ ನಡೆಯುವ ವೇಳೆ ಕತ್ತಲಿದ್ದರಿಂದ ಯಾವುದೇ ನಾಯಿ ಕಾಣಿಸಿಲ್ಲವೆಂದು ಹೇಳಿಕೆ ನೀಡಿದ್ದಾನೆ.

    ಘಟನೆ ಕುರಿತು ಮಾತನಾಡಿದ ಸಾರ್ವಜನಿಕ ಕಾಮಗಾರಿ ಎಂಜಿನೀಯರ್ ನರೇಶ್ ಕುಮಾರ್ ಆರ್ ಪಿ ಅವರು ಇನ್ಫ್ರಾವೆಂಚೂರ್ ಕಂಪನಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಲಾಗುತ್ತದೆ ಎಂದು ತಿಳಿಸಿದರು.

  • ವ್ಯಕ್ತಿಯ ಮೇಲೆ ದಾಳಿ – 1.4 ಲಕ್ಷ ರೂ. ದೋಚಿತು ವಾನರಪಡೆ!

    ವ್ಯಕ್ತಿಯ ಮೇಲೆ ದಾಳಿ – 1.4 ಲಕ್ಷ ರೂ. ದೋಚಿತು ವಾನರಪಡೆ!

    ಆಗ್ರಾ: ಬ್ಯಾಂಕಿಗೆ ಹಣ ಜಮಾ ಮಾಡಲು ಹೋದ ವ್ಯಕ್ತಿಯ ಮೇಲೆ ಕೋತಿಗಳು ದಾಳಿ ಮಾಡಿ ಹಣದ ಬ್ಯಾಗ್ ಅನ್ನು ಕಿತ್ತುಕೊಂಡು ಪರಾರಿಯಾದ ಘಟನೆ ಉತ್ತರಪ್ರದೇಶದ ನೈಕಿ ಮಂಡಿ ಪ್ರದೇಶದಲ್ಲಿ ನಡೆದಿದೆ.

    ಸೋಮವಾರ ಬೆಳಿಗ್ಗೆ ಬನ್ಸಾಲಿ ಎಂಬುವರು ತಮ್ಮ ಪುತ್ರಿಯೊಡನೆ ನೈಕಿ ಮಂಡಿ ಪ್ರದೇಶದ ಇಂಡಿಯನ್ ಬ್ಯಾಂಕ್‍ಗೆ 2 ಲಕ್ಷ ರೂಪಾಯಿಯನ್ನು ಜಮಾ ಮಾಡಲು ಬಂದಿದ್ದಾರೆ. ಇವರು ಬ್ಯಾಂಕ್ ಹತ್ತಿರ ಬರುತ್ತಿದ್ದಂತೆ ಅಲ್ಲಿದ್ದ ಕೋತಿಗಳು ಇವರ ಮೇಲೆ ದಾಳಿ ಮಾಡಿ ಹಣದ ಬ್ಯಾಗ್ ಅನ್ನು ಕಿತ್ತುಕೊಂಡು ಅದರಲ್ಲಿದ್ದ ಸುಮಾರು 60 ಸಾವಿರ ಹಣವನ್ನು ಎಸೆದು ಉಳಿದ ಹಣದ ಸಮೇತ ಬ್ಯಾಗ್ ಅನ್ನು ತೆಗೆದುಕೊಂಡು ಸ್ಥಳದಿಂದ ಪರಾರಿಯಾಗಿವೆ.

    ಹಣ ಕಳೆದುಕೊಂಡ ಬನ್ಸಾಲಿಯವರು ಕೂಡಲೇ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ಪೊಲೀಸರು ವಿಚಾರಣೆ ನಡೆಸಿದಾಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಸುಳಿವು ಸಿಕ್ಕಿಲ್ಲ ಹಾಗೂ ಯಾವ ಪ್ರಕರಣ ಅಡಿಯಲ್ಲಿ ದೂರು ದಾಖಲು ಮಾಡಬೇಕೆಂದು ತಿಳಿಯದೆ ಅವರನ್ನು ಕಳುಹಿಸಿದ್ದಾರೆ.

    ಬನ್ಸಾಲಿಯವರು ಉನ್ನತ ಪೊಲೀಸ್ ಅಧಿಕಾರಿಗಳ ಬಳಿ ಹೋಗಿ ತಮ್ಮ ಸಮಸ್ಯೆಯನ್ನು ಹೇಳಿಕೊಂಡು, ಸ್ಥಳೀಯ ಪೊಲೀಸರು ಯಾವ ರೀತಿ ಪ್ರಕರಣ ದಾಖಲು ಮಾಡಿಕೊಳ್ಳಬೇಕೆಂದು ತಿಳಿಯದೆ ಗೊಂದಲಕ್ಕೆ ಬಿದ್ದಿದ್ದಾರೆ. ತಾವುಗಳು ಭಾರತೀಯ ದಂಡ ಸಂಹಿತೆಯ ಪ್ರಕಾರ ಸರಿಯಾದ ಕ್ರಮವನ್ನು ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.

    ಆಗ್ರಾ ನಗರ, ತಾಜ್‍ಮಹಲ್ ಸುತ್ತಮುತ್ತ ಮಂಗಗಳ ಹಾವಳಿ ದಿನೇದಿನೇ ಹೆಚ್ಚಾಗುತ್ತಿದ್ದು, ಪ್ರವಾಸಿಗರ ಮೇಲೆ ದಾಳಿ ಮಾಡಿ ಅವರ ಬಳಿ ಇರುವ ವಸ್ತುಗಳನ್ನು ಕಿತ್ತುಕೊಂಡು ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಈ ಕುರಿತಂತೆ ಪುರಾತತ್ವ ಇಲಾಖೆಯ ಭುವನ್ ವಿಕ್ರಮ್‍ರವರು ಮಹಾನಗರ ಪಾಲಿಕೆಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲವೆಂದು ಹೇಳಿದ್ದಾರೆ.

    ಈ ಕುರಿತಂತೆ ಆಗ್ರಾ ಮಹಾನಗರ ಪಾಲಿಕೆಯು ಈ ಬಗ್ಗೆ ಕ್ರಮ ಕೈಗೊಂಡು ಶೀಘ್ರವೇ ಮಂಗಗಳನ್ನು ಸ್ಥಳಾಂತರಿಸುವುದಾಗಿ ಹೇಳಿಕೆ ನೀಡಿದೆ.

  • 5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿಯಿತು!

    5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿಯಿತು!

    (ಸಾಂದರ್ಭಿಕ ಚಿತ್ರ)

    ಆಗ್ರಾ: 5 ವರ್ಷದ ಬಾಲಕನ ಆಟಕ್ಕೆ 60 ಮನೆಗಳು ಹೊತ್ತಿ ಉರಿದಿರುವ ಘಟನೆ ಉತ್ತರ ಪ್ರದೇಶದ ಆಗ್ರ ಸಮೀಪದ ಝಾಂಡಿ ಕಿ ಮಾಡಿಯಾ ಹಳ್ಳಿಯಲ್ಲಿ ನಡೆದಿದೆ.

    ಬೆಂಕಿ ಕಡ್ಡಿಗಳ ಜೊತೆ ಆಟವಾಡುತ್ತಿದ್ದ ಬಾಲಕ ಕಡ್ಡಿಯನ್ನು ಹೊತ್ತಿಸಿ ತಮ್ಮ ಗುಡಿಸಿಲಿನ ಮೇಲೆ ಅಚಾನಕ್ ಆಗಿ ಹಾಕಿದ್ದಾನೆ. ಗುಡಿಸಿಲಿಗೆ ಬೆಂಕಿ ಹೊತ್ತಿಕೊಂಡು ಸುತ್ತ ಇರುವ ಗುಡಿಸಿಲುಗಳಿಗೂ ಪಸರಿಸಿದೆ. ಇದರಿಂದಾಗಿ ಎಲ್ಲಾ 60 ಗುಡಿಸಲುಗಳು ಬೆಂಕಿಗೆ ಆಹುತಿಯಾಗಿವೆ.

    ಅಮ್ರಿತ್ ಪುರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಗಂಗಾ ನದಿಯ ಬಳಿ ಹಳ್ಳಿ ಇದೆ. ಹಳ್ಳಿಗೆ ಸಂಪರ್ಕ ಸಾಧಿಸಲು ಕಷ್ಟವಿರುವುದರಿಂದ ಸ್ಥಳಕ್ಕೆ ಒಂದು ಅಗ್ನಿಶಾಮಕ ವಾಹನ ತಲುಪಲು ಸಾಧ್ಯವಾಗಿದೆ. ಕೇವಲ ಒಂದು ಅಗ್ನಿಶಾಮಕ ವಾಹನ ಬೆಂಕಿಯನ್ನು ಆರಿಸುವ ಕಾರ್ಯಾಚರಣೆಯಲ್ಲಿ ತೊಡಗಿದ್ದರಿಂದ ಸಂಪೂರ್ಣ 60 ಗುಡಿಸಲುಗಳು ಸುಟ್ಟು ಹೋಗಿವೆ ಎನ್ನಲಾಗಿದೆ. ಘಟನೆಯಿಂದ ಯಾವುದೇ ಜೀವ ಹಾನಿಯಾಗಿಲ್ಲ. ನಂದಿಸಲು ಅಗ್ನಿಶಾಮಕ ದಳದವರು ಸುಮಾರು 2 ಗಂಟೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

    ಜಿಲ್ಲಾಧಿಕಾರಿ ಮೋನಿಕಾ ರಾಣಿ, ತಹಶೀಲ್ದಾರ್ ರಾಜೀವ್ ನಿಗಮ್, ಎಸ್ ಹೆಚ್ ಒ ರಾಮ್ ಪ್ರಕಾಶ್ ಸ್ಥಳಕ್ಕೆ ಭೇಟಿ ನೀಡಿ ಪರಿಹಾರದ ಬಗ್ಗೆ ಭರವಸೆ ನೀಡಿದ್ದಾರೆ.

    ಬೆಂಕಿ ಸಂಪೂರ್ಣ ಹಳ್ಳಿಯನ್ನು ಆಹುತಿ ತೆಗೆದುಕೊಂಡಿದೆ. ಮನೆಗಳನ್ನು ಹುಲ್ಲು ಮತ್ತು ಪ್ಲಾಸ್ಟಿಕ್ ಗಳಿಂದ ಕಟ್ಟಲಾಗಿತ್ತು. ಹತ್ತಿರದಲ್ಲೇ ಇರುವ ಸರ್ಕಾರಿ ಶಾಲೆಗೆ ಎಲ್ಲರನ್ನೂ ಸ್ಥಳಾಂತರಿಸಲಾಗಿದ್ದು ನೀರು ಮತ್ತು ಆಹಾರವನ್ನು ಒದಗಿಸಲಾಗಿದೆ ಎಂದು ರಾಮ್ ಪ್ರಕಾಶ್ ಹೇಳಿದ್ದಾರೆ.

    ಬಾಲಕನ ಅಚಾತುರ್ಯದಿಂದ ಬೆಂಕಿ ಹತ್ತಿಕೊಂಡಿದೆ. ಘಟನೆ ನಡೆದಾಗ ಮನೆಯಲ್ಲಿ ತಂದೆ ತಾಯಿ ಇಬ್ಬರೂ ಇರಲಿಲ್ಲ. ಹಾಗಾಗಿ ಬಾಲಕನ ಇಲ್ಲ ಪೋಷಕರ ವಿರುದ್ಧ ದೂರ ದಾಖಲಿಸಿಕೊಂಡಿಲ್ಲ ಎಂದು ತಿಳಿಸಿದರು.