Tag: Against

  • ವ್ಯಾಲೆಂಟೈನ್ಸ್ ಡೇ ಆಚರಿಸಲು ಬಿಡಲ್ಲ, ಪ್ರೇಮಿಗಳು ಕಂಡ್ರೆ ಮದ್ವೆ ಮಾಡಿಸ್ತೀವಿ – ಕ್ರಾಂತಿ ಸೇನೆ ಎಚ್ಚರಿಕೆ

    ವ್ಯಾಲೆಂಟೈನ್ಸ್ ಡೇ ಆಚರಿಸಲು ಬಿಡಲ್ಲ, ಪ್ರೇಮಿಗಳು ಕಂಡ್ರೆ ಮದ್ವೆ ಮಾಡಿಸ್ತೀವಿ – ಕ್ರಾಂತಿ ಸೇನೆ ಎಚ್ಚರಿಕೆ

    ಹುಬ್ಬಳ್ಳಿ: ನಮ್ಮ ದೇಶ ಹಾಗೂ ಸಂಸ್ಕೃತಿಗೆ ವಿರುದ್ಧವಾಗಿರುವ ಫೆಬ್ರವರಿ 14ರ ಪ್ರೇಮಿಗಳ ದಿನಾಚರಣೆಯನ್ನು ಆಚರಿಸಲು ಬಿಡುವುದಿಲ್ಲ ಎಂದು ಕ್ರಾಂತಿ ಸೇನೆ ರಾಜ್ಯಾಧ್ಯಕ್ಷ ವಿಠ್ಠಲ ಪವಾರ ಎಚ್ವರಿಕೆ ನೀಡಿದ್ದಾರೆ.

    ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು ಪ್ರೇಮಿಗಳ ದಿನದ ನೆಪದಲ್ಲಿ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪ್ರೇಮಿಗಳ ದಿನಾಚರಣೆ ಭಾರತೀಯ ಸಂಸ್ಕೃತಿ ವಿರೋಧಿಯಾಗಿದೆ ಎಂದು ಹೇಳಿದರು.

    ನಮ್ಮ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ಮಾರು ಹೋಗಬಾರದು ಎಂದ ಅವರು ಪ್ರೇಮಿ ದಿನಾಚರಣೆ ನೆಪದಲ್ಲಿ ಪಾರ್ಕ್, ರೆಸಾರ್ಟ್, ಹೋಟೆಲ್ ಹಾಗೂ ಲಾಡ್ಜ್ ಗಳಲ್ಲಿ ಪಾರ್ಟಿಗಳನ್ನು ಆಯೋಜನೆ ಮಾಡಲಾಗುತ್ತಿದೆ. ಅಂತವುಗಳು ಕಂಡು ಬಂದರೆ ದಾಳಿ ಮಾಡಲಾಗುವುದು ಎಂದು ಎಚ್ಚರಿಕೆಯನ್ನ ನೀಡಿದರು.

    ಪೊಲೀಸ್ ಇಲಾಖೆ ಇಂತಹಗಳಿಗೆ ಅವಕಾಶ ನೀಡಬಾರದು ಎಂದು ವಿಠಲ್ ಮನವಿ ಮಾಡಿಕೊಂಡಿದ್ದಾರೆ. ಒಂದು ವೇಳೆ ಸಾರ್ವಜನಿಕ ಸ್ಥಳದಲ್ಲಿ ಪ್ರೇಮಿಗಳು ಅಸಭ್ಯವಾಗಿ ವರ್ತಿಸುವುದು ಕಂಡು ಬಂದರೆ ಅವರ ಪೋಷಕರಿಗೆ ಮಾಹಿತಿ ನೀಡಿ ಮದುವೆ ಮಾಡಿಸುವುದಾಗಿ ಎಚ್ಚರಿಕೆ ನೀಡಿದರು.

     

  • ಪದ್ಮಾವತ್ ಚಿತ್ರದ ನಂತರ ‘ಮಣಿಕರ್ಣಿಕಾ’ ಸಿನಿಮಾ ಶೂಟಿಂಗ್‍ಗೆ ವಿರೋಧ

    ಪದ್ಮಾವತ್ ಚಿತ್ರದ ನಂತರ ‘ಮಣಿಕರ್ಣಿಕಾ’ ಸಿನಿಮಾ ಶೂಟಿಂಗ್‍ಗೆ ವಿರೋಧ

    ಜೈಪುರ್: ಪದ್ಮಾವತ್ ಚಿತ್ರದ ಬಳಿಕ ಇದೀಗ ಕಂಗನಾ ಅಭಿನಯದ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಸಿನಿಮಾಗೆ ವಿರೋಧ ವ್ಯಕ್ತವಾಗಿದೆ. ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನ ಆಧಾರಿತ ಚಿತ್ರ ಇದಾಗಿದ್ದು, ಚಿತ್ರದಲ್ಲಿ ಇತಿಹಾಸ ತಿರುಚಲಾಗ್ತಿದೆ ಎಂದು ರಾಜಸ್ಥಾನದ ಬ್ರಾಹ್ಮಣ ಮಹಾಸಭಾ ಆರೋಪಿಸಿದೆ.

    ಪದ್ಮಾವತ್ ಚಿತ್ರ ತೀವ್ರ ವಿರೋಧದ ನಂತರ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಆದರೆ ಈಗ ಕಂಗನಾ ರಣಾವತ್ ನಟನೆಯ ಮಣಿಕರ್ಣಿಕಾ ಚಿತ್ರಕ್ಕೆ ವಿರೋಧ ವ್ಯಕ್ತವಾಗಿದೆ. ಬ್ರಾಹ್ಮಣ ಮಹಾಸಭೆ ಅಧ್ಯಕ್ಷ ಪಂಡಿತ್ ಸುರೇಶ್ ಮಿಶ್ರಾ ಸುದ್ದಿಗೋಷ್ಠಿ ನಡೆಸಿ ಈ ಚಿತ್ರದ ಚಿತ್ರೀಕರಣ ಶೀಘ್ರವೇ ನಿಲ್ಲಿಸಬೇಕು ಎಂದು ರಾಜಸ್ಥಾನ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ.

    ಚಿತ್ರದಲ್ಲಿ ಇತಿಹಾಸ ತಿರುಚಲಾಗುತ್ತಿದೆ. ಚಿತ್ರತಂಡ ಈ ಚಿತ್ರದಲ್ಲಿ ಇತಿಹಾಸ ತಿರುಚಿಲ್ಲ ಎಂದು ಹೇಳಿದ ಮೇಲೆ ಈ ಚಿತ್ರದ ಚಿತ್ರೀಕರಣಕ್ಕೆ ಅನುಮತಿ ನೀಡಬೇಕು. ಸರ್ಕಾರ ಮೂರು ದಿನಗಳ ಒಳಗಡೆ ನಮ್ಮ ಮನವಿ ಒಪ್ಪಿಕೊಳ್ಳಲಿಲ್ಲ ಎಂದರೆ ಪ್ರತಿಭಟನೆ ಮಾಡುತ್ತೇವೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ರಾಜಸ್ಥಾನದ ರಾಜ್ಯಪಾಲ ಕಲ್ಯಾಣ್ ಸಿಂಗ್ ಹಾಗೂ ಗೃಹ ಮಂತ್ರಿ ಗೂಲಾಬ್ ಚಂದ್ ಕಟಾರಿಯಾ ಭೇಟಿ ಮಾಡಿ ಅವರು ಮಧ್ಯಸ್ಥಿಕೆ ವಹಿಸಿಕೊಳ್ಳಲು ಕೇಳಿಕೊಳ್ಳುತ್ತೇನೆ ಎಂದು ಸುರೇಶ್ ಮಿಶ್ರಾ ರಾಜಸ್ಥಾನ ಸರ್ಕಾರದಲ್ಲಿ ಕೇಳಿಕೊಂಡಿದ್ದಾರೆ.

    ಏನಿದು ಆರೋಪ?: ಚಿತ್ರದಲ್ಲಿ ಲಕ್ಷ್ಮೀಬಾಯಿ ಬ್ರಿಟಿಷ್ ಇಂಡಿಯಾ ಕಂಪೆನಿಯ ಅಧಿಕಾರಿಯೊಂದಿಗೆ ಪ್ರೇಮ ಸಂಬಂಧ ಹೊಂದಿದ್ದರು ಎಂದು ತೋರಿಸಲಾಗುತ್ತಿದೆ. ಜಯಶ್ರೀ ಮಿಶ್ರಾ ರಾಣಿ ಲಕ್ಷ್ಮೀಬಾಯಿ ಬಗ್ಗೆ ಬರೆದಿರುವ ವಿವಾದಾತ್ಮಕ ಪುಸ್ತಕದಿಂದ ಪ್ರೇರಣೆಯಾಗಿ ಸಿನಿಮಾ ತಯಾರಾಗುತ್ತಿದ್ದು, ಚಿತ್ರದ ನಿರ್ಮಾಪಕರಾದ ಕಮಲ್ ಜೈನ್ ಅವರಿಗೆ ಪತ್ರ ಬರೆದು ಚಿತ್ರಕ್ಕೆ ಸಂಬಂಧಪಟ್ಟಂತೆ ಎಲ್ಲಾ ಮಾಹಿತಿಗಳನ್ನು ಕೇಳಿದ್ದೇನೆ. ಈ ಚಿತ್ರ ಪದ್ಮಾವತ್ ಚಿತ್ರದ ರೀತಿ ದೊಡ್ಡ ಸಮಸ್ಯೆ ಆಗಬಾರದೆಂದು ಸರ್ಕಾರ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಸುರೇಶ್ ಮಿಶ್ರಾ ತಿಳಿಸಿದ್ದಾರೆ.

    ಸದ್ಯ ‘ಮಣಿಕರ್ಣಿಕಾ- ದಿ ಕ್ವೀನ್ ಆಫ್ ಝಾನ್ಸಿ’ ಚಿತ್ರದ ಚಿತ್ರೀಕರಣ ರಾಜಸ್ಥಾನದ ಕೆಲವು ಪ್ರದೇಶಗಳಲ್ಲಿ ಚಿತ್ರಿಕರಣವಾಗುತ್ತಿದ್ದು, ಕಳೆದ ವರ್ಷ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಿಂದ ರಾಜಸ್ಥಾನದ ಜುನ್‍ಜುನ್ ಹಾಗೂ ಜೈಪುರ್ ನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಕಂಗನಾ ರಣಾವತ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದು, ಒಟ್ಟು 125 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಈ ವರ್ಷದಲ್ಲೇ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.

    ಈ ಹಿಂದೆ ಪದ್ಮಾವತ್ ಚಿತ್ರದಲ್ಲಿ ರಾಜಪೂತ ರಾಣಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ನಡುವಿನ ಪ್ರೇಮ ಪ್ರಸಂಗವಿದೆ ಹಾಗೂ ಇತಿಹಾಸವನ್ನು ತಿರುಚಲಾಗಿದೆ ಎಂದು ಆರೋಪಿಸಿ ಚಿತ್ರದ ಬಿಡುಗಡೆಗೆ ದೇಶ್ಯಾದ್ಯಂತ ಕರ್ಣಿಸೇನಾ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಡಿಸೆಂಬರ್ 28ರಂದು ಸೆನ್ಸಾರ್ ಬೋರ್ಡ್ ಚಿತ್ರಕ್ಕೆ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವಂತೆ ಸೂಚಿಸಿ ಯು/ಎ ಸರ್ಟಿಫಿಕೇಟ್ ನೀಡಿತ್ತು. ಸಿನಿಮಾದ ನಿರ್ದೇಶಕ ಮತ್ತು ನಿರ್ಮಾಪಕರು ಟೈಟಲ್ ಸೇರಿದಂತೆ ಕೆಲವು ಬದಲಾವಣೆಗಳಿಗೆ ಒಪ್ಪಿಗೆ ಸೂಚಿಸಿದ ಬಳಿಕವೇ ಬಿಡುಗಡೆಗೆ ಅನುಮತಿ ನೀಡಲಾಗಿತ್ತು.

  • ವಿವಾಹವಾದ ಪ್ರೇಮ ಪಕ್ಷಿಗಳಿಗೆ ಜೀವ ಭಯ – ರಕ್ಷಣೆ ಕೋರಿ ಎಸ್ಪಿ ಮೊರೆ ಹೋದ ನವ ಜೋಡಿ

    ವಿವಾಹವಾದ ಪ್ರೇಮ ಪಕ್ಷಿಗಳಿಗೆ ಜೀವ ಭಯ – ರಕ್ಷಣೆ ಕೋರಿ ಎಸ್ಪಿ ಮೊರೆ ಹೋದ ನವ ಜೋಡಿ

    ತುಮಕೂರು: ಈ ಯುವ ಜೋಡಿಗಳದ್ದು ಧರ್ಮ ಮೀರಿದ್ದ ಪ್ರೀತಿ. ಇವರಿಬ್ಬರ ಅನುರಾಗಕ್ಕೆ ಹಿಂದೂ-ಮುಸ್ಲಿಂ ಎಂಬ ಧರ್ಮದ ಬೇಧ ಬಂದಿಲ್ಲ. ಅದನ್ನೂ ಮೀರಿ ಮದುವೆಯಾಗಿದ್ದಾರೆ. ಆದರೆ ಈ ಯುವ ಜೋಡಿಗೆ ಈಗ ಜೀವ ಭಯವಿದೆಯಂತೆ. ಹಾಗಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊರೆ ಹೋಗಿದ್ದಾರೆ.

    ಪ್ರೀತಿ ಜಾತಿ ಧರ್ಮ, ಮತ-ಪಂಥವನ್ನೂ ಮೀರಿದ್ದು ಎನ್ನುವುದು ಸಾರ್ವಕಾಲಿಕ ಮಾತು. ಇದೇ ರೀತಿ ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ಬಾಣಸಂದ್ರದ ಶಿವಶಂಕರ್ ಹಾಗೂ ಮುಸ್ಲಿಂ ಯುವತಿ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಅಕ್ಕಪಕ್ಕದ ಮನೆಯವರಾದ ಈ ಯುವ ಜೋಡಿ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದರು.

    ಕಳೆದ ಸೋಮವಾರ ಹಿಂದೂ ಸಂಪ್ರದಾಯದಂತೆ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ. ಮದುವೆಯಾದ ವಿಚಾರ ತಿಳಿಯುತ್ತಿದ್ದಂತೆಯೇ ಯುವತಿಯ ಸಂಬಂಧಿಕರು ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಭೀತರಾದ ಶಿವಶಂಕರ್ ಹಾಗೂ ಯುವತಿ ರಕ್ಷಣೆ ಕೋರಿ ಎಸ್ ಪಿ ಮೊರೆ ಹೋಗಿದ್ದಾರೆ.

    ಇನ್ನೂ ಶಿವಶಂಕರ್ ಸಾರಿಗೆ ಇಲಾಖೆಯ ಡಿಪೋದಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದು, ಯುವತಿ ಮಾಲ್  ವೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇಬ್ಬರ ಮದುವೆಗೆ ಶಿವಶಂಕರ್ ತಂದೆ-ತಾಯಿ ಒಪ್ಪಿಕೊಂಡು ಅನ್ಯಧರ್ಮಿಯ ಸೊಸೆಯನ್ನು ಮನೆತುಂಬಿಸಿಕೊಂಡಿದ್ದಾರೆ.

    ಆದರೆ ಯುವತಿ ತಂದೆ- ತಾಯಿ ಈ ಪ್ರೇಮವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿ ವಿಲನ್ ಆಗಿದ್ದಾರೆ. ಹಾಗಾಗಿ ದಿಕ್ಕು ತೋಚದ ನವ ಜೋಡಿ ರಕ್ಷಣೆಗಾಗಿ ಪೊಲೀಸ್ ಇಲಾಖೆ ಮೊರೆ ಹೋಗಿದೆ. ಶಿವಶಂಕರ್ ಮತ್ತು ಯುವತಿಯ ಧರ್ಮ ಬೇಧ ಮೀರಿ ಮದುವೆಯಾಗಿದ್ದಾರೆ. ಭಯದಲ್ಲಿ ಬದುಕುತ್ತಿರೋ ಈ ದಂಪತಿಗೆ ಪೊಲೀಸರು ರಕ್ಷಣೆ ನೀಡಬೇಕಿದೆ.