Tag: Afzalpur

  • ಆಕ್ಸಿಜನ್ ಇಲ್ಲದೇ ಸತ್ತಿಲ್ಲ ಅಂದ್ರು ಉಮೇಶ್ ಜಾಧವ್ – ಮತ್ತೆ ಸುಳ್ಳು ಹೇಳಲು ಇಳಿದ ಸರ್ಕಾರ!

    ಆಕ್ಸಿಜನ್ ಇಲ್ಲದೇ ಸತ್ತಿಲ್ಲ ಅಂದ್ರು ಉಮೇಶ್ ಜಾಧವ್ – ಮತ್ತೆ ಸುಳ್ಳು ಹೇಳಲು ಇಳಿದ ಸರ್ಕಾರ!

    ಕಲಬುರಗಿ: ಮೃತರು ಆಕ್ಸಿಜನ್ ಇಲ್ಲದೇ ಸಾವನ್ನಪ್ಪಿಲ್ಲ. ಅಫಜಲಪುರ ತಾಲೂಕಾಸ್ಪತ್ರೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಬಿಜೆಪಿ ಸಂಸದ ಉಮೇಶ್ ಜಾಧವ್ ಸಮರ್ಥನೆಗೆ ಮುಂದಾಗಿದ್ದಾರೆ.

    ಆಕ್ಸಿಜನ್ ದುರಂತಕ್ಕೆ ತೇಪೆ ಹಚ್ಚೋಕೆ ಮುಂದಾಗಿರುವ ಮಾನ್ಯ ಸಂಸದರು, ಆಸ್ಪತ್ರೆಯಲ್ಲಿ ಆಮ್ಲಜನಕ, ರೆಮ್‍ಡಿಸಿವರ್ ಇಂಜೆಕ್ಷನ್ ಇದೆ. ಬೇಕಿದ್ರೆ ನನ್ನ ಜೊತೆ ಬನ್ನಿ, ನಾನು ತೋರಿಸುತ್ತೇನೆ ಎಂದು ಹೇಳಿದ್ದಾರೆ. ಮೃತರ ಕುಟುಂಬಸ್ಥರೇ ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿರುವ ಬಗ್ಗೆ ಹೇಳುತ್ತಿದ್ರೆ ಸರ್ಕಾರ ಮಾತ್ರ ನುಣಚಿಕೊಳ್ಳೋಕೆ ಪ್ರಯತ್ನಕ್ಕೆ ಮುಂದಾಗಿದೆ.

    ಇತ್ತ ಪಬ್ಲಿಕ್ ಟಿವಿ ವರದಿ ಬೆನ್ನಲ್ಲೇ ಅಫಜಲಪುರ ತಾಲೂಕು ಆಸ್ಪತ್ರೆಗೆ ಆಕ್ಸಿಜನ್ ಸಿಲಿಂಡರ್ ಪೂರೈಕೆ ಮಾಡಲಾಗಿದೆ. ಇನ್ನು ಜಿಲ್ಲೆಯಲ್ಲಿರೋ ಆಕ್ಸಿಜನ್ ಪ್ಲಾಂಟ್ ಗಳು ದಂಧೆಗೆ ಇಳಿದಿದ್ದು, ನೆರೆಯ ಮಹಾರಾಷ್ಟ್ರಕ್ಕೆ ಪ್ರಾಣವಾಯು ಸರಬರಾಜು ಮಾಡುತ್ತಿರುವ ದೃಶ್ಯಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಇದನ್ನೂ ಓದಿ: ಮೂರು ಗಂಟೆ ಆಕ್ಸಿಜನ್ ಇಲ್ಲದೇ ನರಳಿ ನರಳಿ ಪ್ರಾಣ ಬಿಟ್ಟ ನಾಲ್ವರು

    ಚಾಮರಾಜನಗರದಲ್ಲಿ 24 ಜನ ಸಾವನ್ನಪ್ಪಿದ್ರೂ ಆರೋಗ್ಯ ಸಚಿವರು ಆಕ್ಸಿಜನ್ ಇಲ್ಲದೇ ಮೂವರು ಮೃತರಾಗಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು. ಇದೀಗ ಡೆತ್ ರಿಪೋರ್ಟ್ ನಲ್ಲಿ 24 ಜನರು ಕೋವಿಡ್ ನಿಂದಲೇ ಸಾವನ್ನಪ್ಪಿದ್ದಾರೆ ಹೊರತು ಆಕ್ಸಿಜನ್ ಕೊರತೆಯಿಂದಲ್ಲ ಅಂತ ತನಿಖೆಗೂ ಅವಕಾಶ ನೀಡದೇ ತಮಗೆ ತಾವೇ ಕ್ಲೀನ್ ಚಿಟ್ ಪಡೆದುಕೊಂಡಿದೆ. ಇದನ್ನೂ ಓದಿ: ಆಕ್ಸಿಜನ್ ಇಲ್ಲದೆ ಮೂವರಷ್ಟೇ ಸಾವು ಅಂತ ಸಚಿವರಿಬ್ಬರ ಸಮರ್ಥನೆ

  • ಕಚೇರಿಯಲ್ಲಿ ಬೇರೆಯಾದ್ರೂ ಮನೆಯಲ್ಲಿ ಒಂದೇ ಪಕ್ಷ – ತಾ.ಪಂ. ಬಿಜೆಪಿ ಅಧ್ಯಕ್ಷೆ, ಕಾಂಗ್ರೆಸ್‌ ಉಪಾಧ್ಯಕ್ಷರ ಪ್ರೇಮ ಮೈತ್ರಿ

    ಕಚೇರಿಯಲ್ಲಿ ಬೇರೆಯಾದ್ರೂ ಮನೆಯಲ್ಲಿ ಒಂದೇ ಪಕ್ಷ – ತಾ.ಪಂ. ಬಿಜೆಪಿ ಅಧ್ಯಕ್ಷೆ, ಕಾಂಗ್ರೆಸ್‌ ಉಪಾಧ್ಯಕ್ಷರ ಪ್ರೇಮ ಮೈತ್ರಿ

    – ನಿಶ್ಚಿತಾರ್ಥ ಮಾಡಿದ ಬಳಿಕ ಗೊತ್ತಾಯ್ತು ಪ್ರೀತಿ
    – ಸರಳ ವಿವಾಹವಾದ ಜೋಡಿ

    ಕಲಬುರಗಿ:  ದೇಶದಲ್ಲಿ ರಾಜಕೀಯ ಹೆಚ್ಚಾಗುತ್ತಿದೆ. ಆತ ಕಾಂಗ್ರೆಸ್, ಈತ ಬಿಜೆಪಿ, ಮತ್ತೋರ್ವ ಮತ್ತೊಂದು ಪಾರ್ಟಿಯವನು ಅಂತ  ಪಕ್ಷದ ಜೊತೆ ಜನರನ್ನು ಗುರುತಿಸುವುದು ಸಾಮಾನ್ಯವಾಗಿದೆ. ಅದರಲ್ಲೂ ಕೂಡಾ ಪಕ್ಷದ ಕಾರ್ಯಕರ್ತರ ನಡುವೆ ಜಗಳಗಳು ಕೂಡಾ ಹೆಚ್ಚಾಗಿವೆ. ಆದರೆ ಇದೆಲ್ಲವನ್ನು ಮೀರಿಸುವ ಶಕ್ತಿಗೆ ಪ್ರೀತಿಗೆ ಇದ್ದು, ಆಗಾಗ ಇದು ಸಾಬೀತು ಕೂಡಾ ಆಗುತ್ತಿರುತ್ತದೆ. ಈ ರೀತಿ ಪಕ್ಷವನ್ನು ಮೀರಿ ಸ್ನೇಹ ಗೆದ್ದು ‘ಪ್ರೇಮ ಮೈತ್ರಿ’ಯೊಂದು ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನಲ್ಲಿ ಆಗಿದೆ.

    ಹೌದು. ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ತಮ್ಮ ರಾಜಕೀಯವನ್ನು ಮೀರಿ ವಿವಾಹ ಬಂಧನಕ್ಕೊಳಗಾಗಿದ್ದಾರೆ. ಜಿಲ್ಲೆಯ ಆಳಂದ ತಾಲೂಕಿನ ಜಿಡಗಾ ಮಠದಲ್ಲಿ ನಡೆದ ಸರಳ ವಿವಾಹದಲ್ಲಿ ನೂತನ ಜೀವನಕ್ಕೆ ಕಾಲಿಟ್ಟಿದ್ದಾರೆ.

    ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಮತ್ತು ತಾಲೂಕು ಪಂಚಾಯತ್ ಉಪಾಧ್ಯಕ್ಷ ಭೀಮಾಶಂಕರ್ ಹೊನ್ನಿಕೇರಿ ವಿವಾಹವಾಗುವ ಮೂಲಕ  ಪ್ರೀತಿ, ರಾಜಕೀಯ ಪಕ್ಷಕ್ಕಿಂತ ದೊಡ್ಡದು ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ.  ತಾಲೂಕು ಪಂಚಾಯತ್ ಅಧ್ಯಕ್ಷೆ ರುಕ್ಮಿಣಿ ಜಮಾದಾರ್ ಬಿಜೆಪಿಯಿಂದ ಗೆದ್ದು ಅಧ್ಯಕ್ಷರಾಗಿದ್ದರೆ, ಭೀಮಾಶಂಕರ್ ಹೊನ್ನಿಕೇರಿ ಕಾಂಗ್ರೆಸ್ಸಿನಿಂದ ಗೆದ್ದು ತಾಲೂಕು ಪಂಚಾಯತ್ ಉಪಾಧ್ಯಕ್ಷರಾಗಿದ್ದರು. ಆದರೆ ಈಗ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ ನಡುವೆ ವಿವಾಹ ಬಂಧನವಾಗಿದೆ. ತಾಲೂಕು ಪಂಚಾಯತ್ ನಲ್ಲಿ ಮೈತ್ರಿ ಇಲ್ಲದಿದ್ದರೂ ಜೀವನದ ಪಯಣದಲ್ಲಿ ಮೈತ್ರಿ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

    ತಾಲೂಕಿನ ಬೇರೆ ಬೇರೆ ಕ್ಷೇತ್ರಗಳಿಂದ ತಾಲೂಕು ಪಂಚಾಯತ್ ಸದಸ್ಯರಾಗಿದ್ದ ಇವರು ತಮ್ಮ ನಾಯಕರ ಆಶೀರ್ವಾದದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿದ್ದರು. ಹೀಗಾಗಿ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ತಾಲೂಕು ಪಂಚಾಯತ್ ಸಭೆಯಲ್ಲಿ ತಮ್ಮ ತಮ್ಮ ಪಕ್ಷಗಳನ್ನು ಪ್ರತಿನಿಧಿಸುತ್ತಿದ್ದ ಇವರಿಬ್ಬರ ನಡುವೆ ಸ್ನೇಹ ಹೆಚ್ಚಾಗಿತ್ತು. ಈ ಸ್ನೇಹ ಪ್ರೀತಿಯಾಗಿ ಪರಿವರ್ತನೆಯಾಗಿತ್ತು.

    ಇಬ್ಬರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದರಿಂದ ಎರಡು ಕುಟುಂಬದವರು ಮಾತನಾಡಿ ಮದುವೆಗೆ ಗ್ರೀನ್ ಸಿಗ್ನಲ್ ನೀಡಿದ್ದರು. ಇವರ ಮಧ್ಯೆ ಪ್ರೀತಿ ಇದೆ ಮದುವೆಯಾಗುತ್ತಾರೆ ಎಂಬ ವಿಚಾರ ತಾಲೂಕಿನ ಜನರಿಗೂ ತಿಳಿದಿರಲಿಲ್ಲ. ಆದರೆ ಕೆಲ ದಿನಗಳ ಹಿಂದೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಾಗಲೇ ಇಬ್ಬರ ಪ್ರೀತಿ ಗೊತ್ತಾಗಿತ್ತು.

    ಅಧ್ಯಕ್ಷೆ ಮತ್ತು ಉಪಾಧ್ಯಕ್ಷರ ಈ ಪ್ರೇಮ ಮೈತ್ರಿಯ ವಿವಾಹಕ್ಕೆ ರಾಜಕೀಯ ನಾಯಕರು ಕೂಡಾ ಶುಭ ಹಾರೈಸಿದ್ದಾರೆ. ಇನ್ನು ಮುಂದೆ ಕಚೇರಿಯಲ್ಲಿ ಪಕ್ಷ ಬೇರೆಯಾದರೂ ಮನೆಯಲ್ಲಿ ಮಾತ್ರ ಇಬ್ಬರದು ಒಂದೇ ಪಕ್ಷವಾಗಿದೆ.

  • ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು – ಬಾಯಿಗೆ ಪಿಸ್ತೂಲ್ ಇಟ್ಟು ಯುವಕನ ಹತ್ಯೆ

    ಭೀಮಾತೀರದಲ್ಲಿ ಮತ್ತೆ ಗುಂಡಿನ ಸದ್ದು – ಬಾಯಿಗೆ ಪಿಸ್ತೂಲ್ ಇಟ್ಟು ಯುವಕನ ಹತ್ಯೆ

    ಕಲಬುರಗಿ: ಭೀಮಾತೀರದಲ್ಲಿ ಮತ್ತೆ ಗುಂಡು ಸದ್ದು ಮಾಡಿದೆ. ಸಿನೀಮಿಯ ರೀತಿಯಲ್ಲಿ ಪಿಸ್ತೂಲ್ ಬಾಯಿಗಿಟ್ಟು ಫೈರಿಂಗ್ ಮಾಡಿರುವ ಭಯಾನಕ ಘಟನೆ ಅಫಜಲಪುರ ತಾಲೂಕಿನ ಕರ್ಜಗಿ ಗ್ರ‍ಾಮದಲ್ಲಿ ನಡೆದಿದೆ.

    ಜಿಲ್ಲೆಯ ಅಫಜಲಪುರದ ಕರಜಗಿ ಗ್ರಾಮದ ನಿವಾಸಿ ಸೈಬಣ್ಣ ನೀಲಕಂಠ ತಳವಾರ (28) ಗುಂಡಿನ ದಾಳಿಗೆ ಬಲಿಯಾದ ಯುವಕ. ಅದೇ ಗ್ರಾಮದ ರವಿ ತಳವಾರ ಅಲಿಯಾಸ್ ಅಭಯ್ ಕೊಲೆ ಮಾಡಿದ ಆರೋಪಿ.

    ಆರೋಪಿ ರವಿ ಸೋಮವಾರ ಸಂಜೆ ಸೈಬಣ್ಣನ ಬಾಯಿಗೆ ಪಿಸ್ತೂಲ್ ಇಟ್ಟು ಗುಂಡು ಹಾರಿಸಿದ್ದಾನೆ. ಪರಿಣಾಮ ಸೈಬಣ್ಣ ಗಂಭೀರವಾಗಿ ಗಾಯಗೊಂಡಿದ್ದ. ಇದನ್ನು ನೋಡಿದ ಸ್ಥಳೀಯರು ತಕ್ಷಣವೇ ಆತನನ್ನು ಬೈಕ್ ಮೂಲಕ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಿತ್ತು. ಹೀಗಾಗಿ ಜಿಲ್ಲಾಸ್ಪತ್ರಗೆ ರವಾನೆ ಮಾಡಲು ಮುಂದಾಗುತ್ತಿದ್ದಾಗ ಸೈಬಣ್ಣ ಸಾವನ್ನಪ್ಪಿದ್ದಾನೆ.

    ಹಳೆಯ ವೈಷಮ್ಯದಿಂದ ರವಿ ಸೈಬಣ್ಣನನ್ನು ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಆರೋಪಿಯು ಈ ಹಿಂದೆ ಅಕ್ರಮ ಪಿಸ್ತೂಲ್ ಮಾರಾಟ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಕ್ಕೆ ಸಿಪಿಐ ಮಹಾಂತೇಶ್ ಪಾಟೀಲ, ಪಿಎಸ್‍ಐ ಮಂಜುನಾಥ ಹೂಗಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಈ ಕುರಿತು ಅಫಜಲಪುರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ರವಿ ಘಟನಾ ಸ್ಥಳದಿಂದ ಪರಾರಿಯಾಗಿದ್ದು, ಆತನ ಬಂಧನಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ.

  • ಖರ್ಗೆ ಒಬ್ಬೊಬ್ಬರನ್ನು ಮುಗಿಸುತ್ತಿದ್ದಾರೆ, `ಕೈ’ ನಿಂದ ಹೊರ ಬಂದ್ರೆ ಈಡಿಗ ಶಕ್ತಿ ತೋರಿಸ್ತೀನಿ: ಗುತ್ತೇದಾರ್ ಗುಡುಗು

    ಖರ್ಗೆ ಒಬ್ಬೊಬ್ಬರನ್ನು ಮುಗಿಸುತ್ತಿದ್ದಾರೆ, `ಕೈ’ ನಿಂದ ಹೊರ ಬಂದ್ರೆ ಈಡಿಗ ಶಕ್ತಿ ತೋರಿಸ್ತೀನಿ: ಗುತ್ತೇದಾರ್ ಗುಡುಗು

    ಕಲಬುರಗಿ: ಬಿಜೆಪಿಗೆ ಸೇರ್ಪಡೆಯಾಗಲಿರುವ ಅಫಜಲಪುರದ ಕೈ ಶಾಸಕ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಪ್ರಿಯಾಂಕ ಖರ್ಗೆ ವಿರುದ್ಧ ಕಿಡಿಕಾರುತ್ತಿರುವ ಆಡಿಯೋ ಈಗ ಲಭ್ಯವಾಗಿದೆ.

    ವಿಧಾನಸಭಾ ಚುನಾವಣೆಯಲ್ಲಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ಸೋಲಿಸುವುದಾಗಿ ಗುತ್ತೇದಾರ್ ಆಡಿಯೋದಲ್ಲಿ ಗುಡುಗಿದ್ದಾರೆ.

    ಆಡಿಯೋದಲ್ಲಿ ಏನಿದೆ?
    ಕಲಬುರಗಿಯಲ್ಲಿ ಖರ್ಗೆ ಒಬ್ಬೊಬರನ್ನು ಮುಗಿಸುತ್ತಾ ಬರುತ್ತಿದ್ದಾರೆ. ಯಾಕೆಂದರೆ ಆತನ ಮನೆಯಲ್ಲಿ ಆತನಿಗೆ ಶೂ ಹಾಕುವಂತಹ ಶರಣಪ್ರಕಾಶ ಪಾಟೀಲ್ ನಂತಹ ವ್ಯಕ್ತಿಗಳು ಬೇಕು. ಸಿಎಂ ವಿವೇಚನಾ ಖೋಟಾದಲ್ಲಿ ನನ್ನ ಕ್ಷೇತ್ರಕ್ಕೆ 25 ಕೋಟಿ ರೂ. ನೀಡುವುದಾಗಿ ಹೇಳಿ ನಂತರ ಕೇವಲ 5 ಕೋಟಿ ರೂ. ನೀಡಿ ವಂಚಿಸಿದ್ದಾರೆ. ಕಾಂಗ್ರೆಸ್ ನವರು ಈ ಹಿಂದೆ ನನ್ನನ್ನು ಕಾಡಿಸಿದ್ದಾರೆ. ನಾನು ಕಾಂಗ್ರೆಸ್ ನಿಂದ ಹೊರಬಂದರೆ ಈಡಿಗ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಡುತ್ತೇನೆ. ದಲಿತರಿಗೆ ಖರ್ಗೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿ ಗುತ್ತೇದಾರ್ ಆಡಿಯೋದಲ್ಲಿ ಕಿಡಿಕಾರಿದ್ದಾರೆ.

    1985, 1989, 1994, 1999, 2008, 2013 ರಲ್ಲಿ ಮಾಲೀಕಯ್ಯ ಗುತ್ತೇದಾರ್ ಅಫಜಲಪುರ ಕ್ಷೇತ್ರದಿಂದ ಆಯ್ಕೆ ಆಗಿದ್ದಾರೆ. 2013ರಲ್ಲಿ ಗುತ್ತೇದಾರ್ 5,238 ಮತಗಳ ಅಂತರದಿಂದ ಜಯಗಳಿಸಿದ್ದರು. ಗುತ್ತೇದಾರ್ 38,093 ಮತಗಳನ್ನು ಪಡೆದಿದ್ದರೆ, ಕೆಜೆಪಿಯಿಂದ ಸ್ಪರ್ಧಿಸಿದ್ದ ಎಂವೈ ಪಟೀಲ್ 32,855 ಮತಗಳನ್ನು ಪಡೆದಿದ್ದರು.