Tag: afghanistan

  • ಏಕದಿನ ವಿಶ್ವಕಪ್‌ ಸೋಲಿನ ಸೇಡು – ಬಲಿಷ್ಠ ಆಸೀಸ್‌ ವಿರುದ್ಧ ಅಫ್ಘಾನ್‌ಗೆ ಐತಿಹಾಸಿಕ ಗೆಲುವು!

    ಏಕದಿನ ವಿಶ್ವಕಪ್‌ ಸೋಲಿನ ಸೇಡು – ಬಲಿಷ್ಠ ಆಸೀಸ್‌ ವಿರುದ್ಧ ಅಫ್ಘಾನ್‌ಗೆ ಐತಿಹಾಸಿಕ ಗೆಲುವು!

    ಕಿಂಗ್‌ಸ್ಟೌನ್: 2023ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಸೆಮಿ ಫೈನಲ್‌ ಪ್ರವೇಶಿಸುವ ಕನಸನ್ನು ಭಗ್ನಗೊಳಿಸಿದ್ದ ಆಸ್ಟ್ರೇಲಿಯಾ (Australia) ತಂಡವನ್ನು ಹೀನಾಯವಾಗಿ ಸೋಲಿಸಿ ಅಫ್ಘಾನಿಸ್ತಾನ ತಂಡ ಸೇಡು ತೀರಿಸಿಕೊಂಡಿದೆ. ಅಲ್ಲದೇ ಇದು ಆಸೀಸ್​ ವಿರುದ್ಧ ಅಫ್ಘಾನಿಸ್ತಾನಕ್ಕೆ  (Afghanistan) ಒಲಿದ ಮೊದಲ ಗೆಲುವಾಗಿದೆ.

    ಭಾನುವಾರ (ಇಂದು) ನಡೆದ ಟಿ20 ವಿಶ್ವಕಪ್ (T20 World Cup 2024)​ ಟೂರ್ನಿಯ ಸೂಪರ್​-8 ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾ ತಂಡವನ್ನು ಅಫ್ಘಾನಿಸ್ತಾನ 21 ರನ್‌ಗಳ ಅಂತರದಿಂದ ಮಣಿಸಿದೆ. ಈ ಗೆಲುವಿನೊಂದಿಗೆ ಸೆಮಿಫೈನಲ್‌ ಕನಸನ್ನೂ ಜೀವಂತವಾಗಿರಿಸಿಕೊಂಡಿದೆ. ಮುಂದಿನ ಪಂದ್ಯ ಭಾರತ-ಆಸೀಸ್‌ ನಡುವಿನ ಪಂದ್ಯವು ಅಫ್ಘಾನ್‌ ಪಾಲಿಗೆ ನಾಕೌಟ್‌ ಪಂದ್ಯವಾಗುವ ಸಾಧ್ಯತೆಗಳೂ ಇವೆ.

    ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್ ಮಾಡಿದ ಅಫ್ಘಾನಿಸ್ತಾನ ತಂಡ 20 ಓವರ್‌ಗಳಲ್ಲಿ 6 ವಿಕೆಟ್​ಗೆ 148‌ ರನ್‌ ಬಾರಿಸಿ, ಆಸೀಸ್‌ಗೆ ಸ್ಪರ್ಧಾತ್ಮಕ 149 ರನ್‌ ಗುರಿ ನೀಡಿತ್ತು. ಈ ಗುರಿ ಬೆನ್ನಟ್ಟಿದ ಆಸೀಸ್‌ ಗ್ಲೆನ್​ ಮ್ಯಾಕ್ಸ್​ವೆಲ್​ ಅವರ ಅರ್ಧಶತಕದ ಹೊರತಾಗಿಯೂ 127 ರನ್​ಗೆ ಸರ್ವಪತನ ಕಂಡು ಹೀನಾಯ ಸೋಲಿಗೆ ತುತ್ತಾಯಿತು.

    ಸುಲಭ ಗೆಲುವು ಸಾಧಿಸುವ ಉತ್ಸಾಹದಲ್ಲಿದ್ದ ಆಸೀಸ್‌ಗೆ ಆರಂಭದಲ್ಲೇ ಅಫ್ಘಾನ್‌ ಬೌಲರ್‌ಗಳು ಆಘಾತ ನೀಡಿದರು. ಸ್ಫೋಟಕ ಬ್ಯಾರ್‌ಗಳಾದ ಟ್ರಾವಿಸ್‌ ಹೆಡ್‌ (0), ಡೇವಿಡ್‌ ವಾರ್ನರ್‌ (3 ರನ್‌) ಅವರನ್ನು ಪೆವಿಲಿಯನ್‌ಗೆ ಮರಳಿಸಿದರು. ಈ‌ ಬೆನ್ನಲ್ಲೇ ನಾಯಕ ಮಿಚೆಲ್‌‌ ಮಾರ್ಷ್‌ ಸಹ 12 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರು.

    ಒಂದೆಡೆ ವಿಕೆಟ್​ ಬೀಳುತ್ತಿದ್ದರು ಮತ್ತೊಂದು ತುದಿಯಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​ ಮಾತ್ರ ಬಿರುಸಿನ ಬ್ಯಾಟಿಂಗ್​ ನಡೆಸಿ ತಂಡದ ಗೆಲುವಿಗಾಗಿ ಶಕ್ತಿ ಮೀರಿ ಪ್ರಯತ್ನಪಟ್ಟರು. ಅವರ ಬ್ಯಾಟಿಂಗ್​ ಗಮನಿಸುವಾಗ ಕಳೆದ ವರ್ಷದ ಏಕದಿನ ವಿಶ್ವಕಪ್​ ಟೂರ್ನಿಯ ಪಂದ್ಯ ಮತ್ತೆ ಮರುಕಳಿಸುವಂತೆ ಭಾಸವಾಯಿತು. ಏಕದಿನ ವಿಶ್ವಕಪ್​ನಲ್ಲಿ ಅಫ್ಘಾನ್​ ವಿರುದ್ಧ ಮ್ಯಾಕ್ಸ್​ವೆಲ್​ ಏಕಾಂಗಿಯಾಗಿ ಅಜೇಯ ದ್ವಿಶತಕ ಬಾರಿಸಿ ಆಸೀಸ್​ಗೆ ಸ್ಮರಣೀಯ ಗೆಲುವು ತಂದುಕೊಟ್ಟಿದ್ದರು. ಪ್ರಸ್ತುತ ಇನ್ನಿಂಗ್ಸ್‌ನಲ್ಲೂ ಮ್ಯಾಕ್ಸಿ 41 ಎಸೆತಗಳಲ್ಲಿ 59 ರನ್‌ (3 ಸಿಕ್ಸರ್‌, 6 ಬೌಂಡರಿ) ಗಳಿಸಿ ಮಿಂಚಿದ್ದರು. ಆದ್ರೆ ಅಗ್ರ, ಮಧ್ಯಮ ಹಾಗೂ ಕೊನೇ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದ ಆಸೀಸ್‌ ಹೀನಾಯ ಸೋಲಿಗೆ ತುತ್ತಾಯಿತು.

    ಅಫ್ಘಾನ್‌ ಪರ ಗುಲ್ಬದಿನ್ ನೈಬ್​ 2 ಓವರ್​ಗೆ 20 ರನ್​ ನೀಡಿ 4 ವಿಕೆಟ್​ ಕಿತ್ತರು. ನವೀನ್​ ಉಲ್​ ಹಕ್ 3 ವಿಕೆಟ್​, ನಾಯಕ ರಶೀದ್​ ಖಾನ್, ಒಮರ್ಝೈ, ಮೊಹಮ್ಮದ್​ ನಬಿ ತಲಾ ಒಂದೊಂದು ವಿಕೆಟ್​ ಪೆಡೆದರು.

    ಇದಕ್ಕೂ ಮುನ್ನ ಬ್ಯಾಟಿಂಗ್​ ನಡೆಸಿದ ಅಫಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ 60 ರನ್‌ (4 ಸಿಕ್ಸರ್‌, 4 ಬೌಂಡರಿ) ಮತ್ತು ಇಬ್ರಾಹಿಂ ಜದ್ರಾನ್ 51 ರನ್‌ (48 ಎಸೆತ, 6 ಬೌಂಡರಿ) ಅವರ ಅಮೋಘ ಅರ್ಧಶತಕದ ಆಟದಿಂದ ಅಫ್ಘಾನ್‌ ಸ್ಪರ್ಧಾತ್ಮಕ ರನ್‌ ಗಳಿಸಿತ್ತು. ಈ ಜೋಡಿ ವಿಕೆಟ್​ ಪತನದ ಬಳಿಕ ಬಂದ ಆಟಗಾರರು ನಿರೀಕ್ಷಿತ ಬ್ಯಾಟಿಂಗ್​ ನಡೆಸುವಲ್ಲಿ ವಿಫಲರಾದರು. ಅಂತಿಮವಾಗಿ 6 ವಿಕೆಟ್‌ಗೆ 148 ರನ್‌ ಗಳಿಸಿದ್ದರು.

  • ಅಫ್ಘಾನ್‌ ವಿರುದ್ಧ ಭಾರತಕ್ಕೆ 47 ರನ್‌ಗಳ ಸೂಪರ್‌ ಜಯ – ಹಿಟ್‌ಮ್ಯಾನ್‌ ವಿಶೇಷ ಸಾಧನೆ!

    ಅಫ್ಘಾನ್‌ ವಿರುದ್ಧ ಭಾರತಕ್ಕೆ 47 ರನ್‌ಗಳ ಸೂಪರ್‌ ಜಯ – ಹಿಟ್‌ಮ್ಯಾನ್‌ ವಿಶೇಷ ಸಾಧನೆ!

    ಬಾರ್ಬಡೋಸ್‌: ಸೂರ್ಯಕುಮಾರ್‌ ಯಾದವ್ (Suryakumar Yadav) ಸ್ಫೋಟಕ ಅರ್ಧಶತಕ, ಜಸ್‌ಪ್ರೀತ್‌ ಬುಮ್ರಾ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಭಾರತ, 2024ರ ಐಸಿಸಿ ಟಿ20 ವಿಶ್ವಕಪ್‌ (T20 World Cup) ಟೂರ್ನಿಯ ಸೂಪರ್‌-8ರ ಸುತ್ತಿನಲ್ಲಿ ಅಫ್ಘಾನಿಸ್ತಾನದ ವಿರುದ್ಧ 47 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಅಂತಿಮ 8ರ ಘಟ್ಟದಲ್ಲಿ ಟೀಂ ಇಂಡಿಯಾ (Team India) ಶುಭಾರಂಭ ಕಂಡಿದೆ.

    ಈ ಗೆಲುವಿನೊಂದಿಗೆ ನಾಯಕ ರೋಹಿತ್‌ ಶರ್ಮಾ (Rohit Sharma) ಅವರ ಹೆಗಲಿಗೆ ಮತ್ತೊಂದು ವಿಶೇಷ ಸಾಧನೆಯೂ ಸೇರ್ಪಡೆಯಾಗಿದೆ. ನಿಯಮಿತ ಓವರ್‌ಗಳ ಐಸಿಸಿ ಪಂದ್ಯಗಳಲ್ಲಿ ಅತಿಹೆಚ್ಚು ಗೆಲುವು ಸಾಧಿಸಿದ ಟೀಂ ಇಂಡಿಯಾ ನಾಯಕ ಸಹ ಎನಿಸಿಕೊಂಡಿದ್ದಾರೆ. 21 ಪಂದ್ಯಗಳ ಪೈಕಿ ರೋಹಿತ್‌ ನಾಯಕತ್ವದಲ್ಲಿ ಭಾರತ 18ರಲ್ಲಿ ಗೆಲುವು ಸಾಧಿಸಿದ್ದು, ಕೇವಲ 3 ಪಂದ್ಯಗಳಲ್ಲಿ ಸೋಲು ಕಂಡಿದೆ.

    ಗುರುವಾರ ಇಲ್ಲಿನ ಬಾರ್ಬಡೋಸ್‌ನ ಕೆನ್ಸಿಂಗ್ಟನ್‌ ಓವಲ್ ಕ್ರೀಡಾಂಗಣದಲ್ಲಿ ಭಾರತ ನೀಡಿದ್ದ 182 ರನ್‌ಗಳ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ ತಂಡ, ಬುಮ್ರಾ ಹಾಗೂ ಅರ್ಷ್‌ದೀಪ್‌ ಸಿಂಗ್‌ ಮಾರಕ ಬೌಲಿಂಗ್‌ ದಾಳಿಗೆ ನಲುಗಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಆ ಮೂಲಕ 20 ಓವರ್‌ಗಳನ್ನು ಪೂರ್ಣಗೊಳಿಸಿದರೂ 134 ರನ್‌ಗಳಿಗೆ ಆಲ್‌ಔಟ್‌ ಆಯಿತು. ಇದನ್ನೂ ಓದಿ: 17 ಆಟಗಾರರು, 60 ಐಷಾರಾಮಿ ರೂಮ್‌ – ಜಾಲಿ ಮೂಡಿನಲ್ಲಿ ಪಾಕ್‌ ಕ್ರಿಕೆಟಿಗರು!

    ಚೇಸಿಂಗ್‌ ಆರಂಭಿಸಿದ ಅಫ್ಘಾನ್‌ ತಂಡ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಅಝಮತ್‌ವುಲ್ಲಾ ಒಮರ್ಜಾಯ್‌ (26 ರನ್‌) ಅವರನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್‌ ವೈಯಕ್ತಿಕ 20 ರನ್‌ಗಳ ಗಡಿಯನ್ನು ದಾಟುವಲ್ಲಿ ವಿಫಲರಾದರು. ರಹಮಾನುಲ್ಲಾ ಗುರ್ಬಝ್‌ (11 ರನ್‌), ಹಝಮತ್‌ವುಲ್ಲಾ ಝಝೈ (2 ರನ್‌), ಇಬ್ರಾಹಿಂ ಝರ್ಡಾನ್‌ (8 ರನ್‌) ವಿಫಲರಾದರು. ಇನ್ನು ಮಧ್ಯಮ ಕ್ರಮಾಕದಲ್ಲಿ ಗುಲ್ಬದ್ದಿನ್‌ ನೈಬ್ (17 ರನ್‌), ನಝಿಬುಲ್ಲಾ ಝರ್ಡಾನ್ (19 ರನ್‌) ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಂತು ಆಡಲಿಲ್ಲ. ಈಗಾಗಿ ಅಫ್ಘಾನ್‌ ತಂಡ ಸೋಲು ಕಂಡಿತು.

    ಭಾರತದ ಪರ ಮಾರಕ ದಾಳಿ ನಡೆಸಿದ ಜಸ್‌ಪ್ರೀತ್‌ ಬುಮ್ರಾ 4 ಓವರ್‌ಗಳಿಗೆ ಕೇವಲ 7 ರನ್‌ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಕಬಳಿಸಿದರು. ಅರ್ಷದೀಪ್ ಸಿಂಗ್‌ 4 ಓವರ್‌ಗಳಿಗೆ 36 ರನ್‌ ನೀಡಿ 3 ವಿಕೆಟ್‌ಗಳನ್ನು ಪಡೆದರು. ಇದನ್ನೂ ಓದಿ: ಇದು ನಿನ್ನ ಭಾರತವಲ್ಲ- ಅಭಿಮಾನಿ ಮೇಲೆ ಹಲ್ಲೆಗೆ ಮುಂದಾದ ಪಾಕ್ ವೇಗಿ

    181 ರನ್‌ಗಳನ್ನು ಕಲೆ ಹಾಕಿದ ಭಾರತ
    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ್ದ ಭಾರತ ತಂಡ, 20 ಓವರ್‌ಗಳಿಗೆ 8 ವಿಕೆಟ್‌ ನಷ್ಟಕ್ಕೆ 181 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಅಫ್ಘಾನಿಸ್ತಾನ ತಂಡಕ್ಕೆ 182 ರನ್‌ಗಳ ಗುರಿ ನೀಡಿತ್ತು. ಭಾರತದ ಪರ ಸೂರ್ಯಕುಮಾರ್‌ 53 ರನ್‌, ಹಾರ್ದಿಕ್‌ ಪಾಂಡ್ಯ 32 ರನ್‌ ಗಳಿಸಿದ್ದರು.

    ಎಂದಿನಂತೆ ಭಾರತದ ಪರ ಇನಿಂಗ್ಸ್ ಆರಂಭಿಸಿದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ಮತ್ತೆ ವೈಫಲ್ಯ ಅನುಭವಿಸಿದರು. ರೋಹಿತ್ ಶರ್ಮಾ 8 ರನ್‌ ಗಳಿಸಿ ವಿಕೆಟ್‌ ಒಪ್ಪಿಸಿದರೆ, 24 ರನ್‌ ಗಳಿಸಿ ಉತ್ತಮ ಆರಂಭ ಪಡೆದಿದ್ದ ವಿರಾಟ್‌ ಕೊಹ್ಲಿ, ರಶೀದ್‌ ಖಾನ್‌ ಎಸೆತದಲ್ಲಿ ಬೌಂಡರಿ ಲೈನ್‌ ಕ್ಯಾಚ್‌ ನೀಡಿ ಔಟ್‌ ಆದರು. ನಂತರ 20 ರನ್‌ ಗಳಿಸಿದ್ದ ರಿಷಭ್‌ ಪಂತ್ ಕೂಡ ರಶೀದ್‌ ಖಾನ್‌ ಬೌಲಿಂಗ್‌ನಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

    ಸೂರ್ಯ ಅರ್ಧಶತಕ:
    4ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದಿದ್ದ ಸೂರ್ಯಕುಮಾರ್‌ ಯಾದವ್‌ ಅವರು ಸ್ಫೋಟಕ ಪ್ರದರ್ಶನ ತೋರಿದರು. 28 ಎಸೆತಗಳಲ್ಲಿ 3 ಸಿಕ್ಸರ್‌ ಹಾಗೂ 5 ಬೌಂಡರಿಗಳೊಂದಿಗೆ 53 ರನ್‌ ಸಿಡಿಸಿದರು. ಮತ್ತೊಂದು ಕಡೆ ಸೂರ್ಯ ಜೊತೆಗೆ ಬ್ಯಾಟ್‌ ಮಾಡಿದ ಹಾರ್ದಿಕ್ ಪಾಂಡ್ಯ, 24 ಎಸೆತಗಳಲ್ಲಿ 32 ರನ್‌ಗಳನ್ನು ಗಳಿಸಿದರು.

    ಅಫ್ಘಾನಿಸ್ತಾನ ಪರ ಅತ್ಯುತ್ತಮ ಬೌಲ್‌ ಮಾಡಿದ ನಾಯಕ ರಶೀದ್‌ ಖಾನ್ 4 ಓವರ್‌ಗಳಲ್ಲಿ ಕೇವಲ 26 ರನ್‌ ನೀಡಿ ಪ್ರಮುಖ 3 ವಿಕೆಟ್‌ಗಳನ್ನು ಪಡೆದರು. ವೇಗಿ ಫಝಲಕ್ ಫಾರೂಕಿ 4 ಓವರ್‌ಗಳಿಗೆ 33 ರನ್‌ ನೀಡಿ 3 ವಿಕೆಟ್‌ಗಳನ್ನು ಕಿತ್ತರು.

  • ಟಿ20 ವಿಶ್ವಕಪ್- ಅಫ್ಘಾನಿಸ್ತಾನಕ್ಕೆ 182 ರನ್ ಗುರಿ ಕೊಟ್ಟ ಟೀಂ ಇಂಡಿಯಾ

    ಟಿ20 ವಿಶ್ವಕಪ್- ಅಫ್ಘಾನಿಸ್ತಾನಕ್ಕೆ 182 ರನ್ ಗುರಿ ಕೊಟ್ಟ ಟೀಂ ಇಂಡಿಯಾ

    ಬ್ರಿಡ್ಜ್‍ಟೌನ್: ವಿಶ್ವಕಪ್ ಟಿ20, ಸೂಪರ್ 8 ಹಂತದಲ್ಲಿ ಟೀಂ ಇಂಡಿಯಾ ಹಾಗೂ ಅಫ್ಘಾನಿಸ್ತಾನ ನಡುವೆ ಹಣಾಹಣಿ ನಡೆಯಿತು. ಈ ಪಂದ್ಯದಲ್ಲಿ ಆರಂಭಿಕ ಆಘಾತ ಹೊರತಾಗಿಯೂ ಸೂರ್ಯ ಕುಮಾರ್ ಬಾರಿಸಿದ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ ಅಫ್ಘಾನಿಸ್ತಾನ ತಂಡಕ್ಕೆ ಸವಾಲಿನ ಗುರಿ ನೀಡಿದೆ.

    ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೂರನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಔಟಾದರು. 13 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಫಜಲ್‍ಹಕ್ ಫಾರೂಕಿಗೆ ವಿಕೆಟ್ ಒಪ್ಪಿಸಿದರು.

    ಇನ್ನೂ ರೋಹಿತ್ ವಿಕೆಟ್ ಪತನದ ಬೆನ್ನಲ್ಲೇ ಕ್ರೀಸ್‍ಗಿಳಿದ ರಿಷಭ್ ಪಂತ್ ಕೇವಲ 11 ಎಸೆತಗಳಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಕೇವಲ 10 ರನ್ ಗಳಿಸಿದರು.

    90 ರನ್‍ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ 5ನೇ ವಿಕೆಟ್‍ಗೆ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 60 ರನ್‍ಗಳ ಅಮೂಲ್ಯ ಜೊತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ರನ್‍ಗಳ ಕೊಡುಗೆ ಕೊಟ್ಟರು.

    ಕೇವಲ 28 ಎಸೆತಗಳನ್ನು ಎದುರಿಸಿದ ಸೂರ್ಯ ಕುಮಾರ್ 5 ಬೌಂಡರಿ ಹಾಗೂ 3 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 53 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 24 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 32 ರನ್ ಬಾರಿಸಿ ನವೀನ್ ಉಲ್ ಹಕ್‍ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ 12 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.

    ಆಫ್ಘಾನಿಸ್ತಾನ ಪರ ನಾಯಕ ರಶೀದ್ ಖಾನ್ ಹಾಗೂ ಫಜಲ್‍ಹಕ್ ಫಾರೂಕಿ ತಲಾ 3 ವಿಕೆಟ್ ಪಡೆದರೆ, ನವೀನ್ ಉಲ್ ಹಕ್ ಒಂದು ವಿಕೆಟ್ ಉರುಳಿಸಿದರು.

  • T20 World Cup 2024: ಅಫ್ಘಾನಿಸ್ತಾನದ ಬೌಲಿಂಗ್‌ ಕೋಚ್‌ ಆಗಿ ಡ್ವೇನ್‌ ಬ್ರಾವೋ ನೇಮಕ

    T20 World Cup 2024: ಅಫ್ಘಾನಿಸ್ತಾನದ ಬೌಲಿಂಗ್‌ ಕೋಚ್‌ ಆಗಿ ಡ್ವೇನ್‌ ಬ್ರಾವೋ ನೇಮಕ

    ಕಾಬೂಲ್‌: ಮುಂಬರುವ ಐಸಿಸಿ ಟಿ20 ವಿಶ್ವಕಪ್‌ (T20 World Cup 2024) ಟೂರ್ನಿಗಾಗಿ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ (Dwayne Bravo) ಅವರನ್ನ ಅಫ್ಘಾನಿಸ್ತಾನ ಕ್ರಿಕೆಟ್‌ ತಂಡವು ಬೌಲಿಂಗ್‌ ಕೋಚ್‌ ಆಗಿ ನೇಮಿಸಿಕೊಂಡಿದೆ.

    ಮುಂದಿನ ಜೂನ್‌ ತಿಂಗಳಲ್ಲಿ ಅಮೆರಿಕ ಮತ್ತು ವೆಸ್ಟ್‌ ಇಂಡೀಸ್‌ (USA and West Indies) ಆತಿಥ್ಯದಲ್ಲಿ ವಿಶ್ವಕಪ್‌ ಟೂರ್ನಿ ನಡೆಯಲಿದೆ. 40 ವರ್ಷದ ವೆಸ್ಟ್‌ ಇಂಡೀಸ್‌ ತಂಡದ ಮಾಜಿ ಆಲ್‌ರೌಂಡರ್‌ ಡ್ವೇನ್‌ ಬ್ರಾವೋ 295 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 6,423 ರನ್‌ ಗಳಿಸಿದ್ದು, 363 ವಿಕೆಟ್‌ಗಳನ್ನೂ ಕಬಳಿಸಿದ್ದಾರೆ. 573 T20 ಪಂದ್ಯಗಳಲ್ಲಿ 6,500 ರನ್‌ಗಳೊಂದಿಗೆ ಒಟ್ಟು 625 ವಿಕೆಟ್‌ ಉರುಳಿಸಿದ್ದಾರೆ. ಇದರೊಂದಿಗೆ 100 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳು, ಲಿಸ್ಟ್‌-ಎ ನಲ್ಲಿ 227 ಪಂದ್ಯಗಳನ್ನಾಡಿರುವ ಅನುಭವ ಹೊಂದಿದ್ದಾರೆ. ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ 161 ಪಂದ್ಯಗಳನ್ನೂ ಆಡಿದ್ದಾರೆ.

    ಬ್ರಾವೋ 2021ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ನಂತರ ಡ್ವೇನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಇದನ್ನೂ ಓದಿ: 2024ರ ಐಪಿಎಲ್‌ಗೆ ವಿದಾಯ; ಅಭಿಮಾನಿಗಳೊಂದಿಗೆ ಸಿಹಿ-ಕಹಿ ನೆನಪು ಹಂಚಿಕೊಂಡ ಆರ್‌ಸಿಬಿ!

    ವಿಶ್ವಕಪ್‌ ಟೂರ್ನಿ ಎಲ್ಲಿ? ಯಾವಾಗ?
    ಜೂನ್‌ 1 ರಿಂದ ಜೂನ್‌ 29ರ ವರೆಗೆ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, ಜೂನ್‌ 9ರಂದು ನ್ಯೂಯಾರ್ಕ್‌ನಲ್ಲಿ ಭಾರತ ಮತ್ತು ಪಾಕ್‌ ತಂಡಗಳು ಮುಖಾಮುಖಿಯಾಗಲಿವೆ. ಈ ಬಾರಿ 16 ರಿಂದ 20ಕ್ಕೆ ತಂಡಗಳ ಸಂಖ್ಯೆಯನ್ನು ಹೆಚ್ಚಿಸಿದ್ದು, ಒಟ್ಟು 4 ಗುಂಪುಗಳಲ್ಲಿ 20 ತಂಡಗಳು ಕಣಕ್ಕಿಳಿಯಲಿವೆ. ಅಲ್ಲದೇ ಸೂಪರ್‌-12 ಹಂತವನ್ನು ಸೂಪರ್‌-8ಗೆ ಇಳಿಸಲಾಗಿದೆ. ಸೂಪರ್‌-8 ಗುಂಪಿನಲ್ಲಿ ಅಗ್ರಸ್ಥಾನ ಪಡೆದ 4 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಜೂನ್‌ 1 ರಿಂದ 18ರ ವರೆಗೆ ಗುಂಪು ಹಂತದ ಪಂದ್ಯಗಳು ನಡೆಯಲಿದೆ. ಜೂನ್‌ 19 ರಿಂದ 24ರ ವರೆಗೆ ಸೂಪರ್‌-8 ಪಂದ್ಯಗಳು, ಜೂನ್‌ 26 ಮತ್ತು ಜೂನ್‌ 27 ರಂದು ಸೆಮಿಫೈನಲ್‌ ಪಂದ್ಯಗಳು ನಡಯೆಲಿದ್ದು, ಜೂನ್‌ 29ರಂದು ಬಾರ್ಬಡೋಸ್ ಮೈದಾನದಲ್ಲಿ ಫೈನಲ್‌ ಪಂದ್ಯ ನಡೆಯಲಿದೆ. ಇದನ್ನೂ ಓದಿ: ಕೋಚ್‌ ಹುದ್ದೆಗೆ ಆಸ್ಟ್ರೇಲಿಯಾದ ಯಾವುದೇ ಆಟಗಾರರನ್ನು ಬಿಸಿಸಿಐ ಸಂಪರ್ಕಿಸಿಲ್ಲ: ಜಯ್‌ಶಾ

    ಯಾವ ಗುಂಪಿನಲ್ಲಿ-ಯಾವ ತಂಡಗಳು?
    ಗುಂಪು-ಎ:
    ಭಾರತ, ಪಾಕಿಸ್ತಾನ, ಐರ್ಲೆಂಡ್‌, ಕೆನಡಾ, ಯುಎಸ್‌ಎ

    ಗ್ರೂಪ್‌-ಬಿ:
    ಇಂಗ್ಲೆಂಡ್‌, ಆಸ್ಟ್ರೇಲಿಯಾ, ನಮೀಬಿಯಾ, ಸ್ಕಾಟ್‌ಲೆಂಡ್‌, ಒಮನ್‌

    ಗ್ರೂಪ್‌-ಸಿ:
    ನ್ಯೂಜಿಲೆಂಡ್‌, ವೆಸ್ಟ್‌ ಇಂಡೀಸ್‌, ಅಫ್ಘಾನಿಸ್ತಾನ, ಉಗಾಂಡ, ಪಪುವಾ ನ್ಯೂ ಗಿನಿಯಾ

    ಗ್ರೂಪ್‌-ಡಿ:
    ದಕ್ಷಿಣ ಆಫ್ರಿಕಾ, ಶ್ರೀಲಂಕಾ, ಬಾಂಗ್ಲಾದೇಶ, ನೆದರ್ಲೆಂಡ್ಸ್‌, ನೇಪಾಳ

  • ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ – 330 ಜನರ ದುರ್ಮರಣ

    ಅಫ್ಘಾನಿಸ್ತಾನದಲ್ಲಿ ಭೀಕರ ಪ್ರವಾಹ – 330 ಜನರ ದುರ್ಮರಣ

    ಕಾಬೂಲ್: ಉತ್ತರ ಅಫ್ಘಾನಿಸ್ತಾನದಲ್ಲಿ (Afghanistan) ಸುರಿಯುತ್ತಿರುವ ಧಾರಾಕಾರ ಮಳೆಯ (Rain) ಪರಿಣಾಮ ಉಂಟಾದ ಹಠಾತ್ ಪ್ರವಾಹದಿಂದ (Flood) ಕನಿಷ್ಠ 330ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ 100ಕ್ಕೂ ಹೆಚ್ಚು ಜನ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

    ಪ್ರವಾಹದಿಂದ ಸುಮಾರು 1,000ಕ್ಕೂ ಹೆಚ್ಚು ಮನೆಗಳು ನೆಲಸಮವಾಗಿವೆ. ಇದರಿಂದ ಸಾವಿನ ಸಂಖ್ಯೆ ಹೆಚ್ಚಳವಾಗಿದೆ. ಪ್ರವಾಹದಿಂದಾಗಿ ಹಲವಾರು ಜನ ಗಾಯಗೊಂಡಿದ್ದಾರೆ. ಅಲ್ಲದೇ ಇನ್ನೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಪಿಒಕೆ ನಿವಾಸಿಗಳ ಮೇಲೆ ಪಾಕ್ ದಬ್ಬಾಳಿಕೆ – ಪ್ರತಿಭಟನಾಕಾರರ ಮೇಲೆ ಗುಂಡಿನ ದಾಳಿ

    ಪ್ರವಾಹದಲ್ಲಿ ಸಾವಿಗೀಡಾದ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು ಎಂದು ಪ್ರಾಂತೀಯ ವಿಪತ್ತು ನಿರ್ವಹಣಾ ಇಲಾಖೆಯ ನಿರ್ದೇಶಕ ಹೆದಯತುಲ್ಲಾ ಹಮ್ದರ್ದ್ ತಿಳಿಸಿದ್ದಾರೆ.

    ಪ್ರವಾಹ ಪೀಡಿತ ಪ್ರದೇಶಗಳಿಂದ ವಾಯುಪಡೆ ಜನರನ್ನು ಸ್ಥಳಾಂತರಿಸುತ್ತಿದೆ. ಗಾಯಗೊಂಡ ನೂರಾರು ಕ್ಕೂ ಹೆಚ್ಚು ಜನರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಮೋದಿಗೆ ಮತ್ತೊಂದು ಯುದ್ಧದಲ್ಲಿ ಸೋಲು: ಕೇಜ್ರಿವಾಲ್‌ ಜೈಲಿಂದ ಹೊರಬಂದಿದ್ದಕ್ಕೆ ಪಾಕ್‌ ನಾಯಕ ಸಂತಸ

  • ಹಿಂದೂ, ಸಿಖ್ ಅಲ್ಪಸಂಖ್ಯಾತರಿಗೆ ಖಾಸಗಿ ಭೂಮಿ ಹಕ್ಕು – ಅಫ್ಘಾನ್ ನಿರ್ಧಾರವನ್ನು ಸ್ವಾಗತಿಸಿದ ಭಾರತ

    ಹಿಂದೂ, ಸಿಖ್ ಅಲ್ಪಸಂಖ್ಯಾತರಿಗೆ ಖಾಸಗಿ ಭೂಮಿ ಹಕ್ಕು – ಅಫ್ಘಾನ್ ನಿರ್ಧಾರವನ್ನು ಸ್ವಾಗತಿಸಿದ ಭಾರತ

    ನವದೆಹಲಿ: ಅಫ್ಘಾನಿಸ್ತಾನದ (Afghanistan) ಹಿಂದೂಗಳು ಮತ್ತು ಸಿಖ್ (Hindus and Sikhs) ಅಲ್ಪಸಂಖ್ಯಾತರಿಗೆ ಖಾಸಗಿ ಭೂಮಿ ಹಕ್ಕುಗಳನ್ನು ಮರುಸ್ಥಾಪಿಸುವ ತಾಲಿಬಾನ್ (Taliban) ಸರ್ಕಾರದ ಕ್ರಮವನ್ನು ಭಾರತ (India) ಸಕಾರಾತ್ಮಕ ನಡೆ ಎಂದು ಬಣ್ಣಿಸಿದೆ.

    ತಾಲಿಬಾನ್ ಆಡಳಿತವು ಹಿಂದೂ ಮತ್ತು ಸಿಖ್ ಸಮುದಾಯಗಳ ಆಸ್ತಿ ಹಕ್ಕುಗಳನ್ನು ಮರುಸ್ಥಾಪಿಸಲು ಕ್ರಮಗಳನ್ನು ಕೈಗೊಂಡಿದೆ. ನಾವು ಈ ಬಗ್ಗೆ ವರದಿಗಳನ್ನು ನೋಡಿದ್ದೇವೆ. ತಾಲಿಬಾನ್ ಸರ್ಕಾರ ಅಫ್ಘಾನ್ ಹಿಂದೂ ಮತ್ತು ಸಿಖ್ ಸಮುದಾಯಕ್ಕೆ ಸೇರಿದ ತಮ್ಮ ನಾಗರಿಕರಿಗೆ ಆಸ್ತಿ ಹಕ್ಕುಗಳನ್ನು ಮರುಸ್ಥಾಪಿಸಲು ನಿರ್ಧರಿಸಿದ್ದರೆ ಇದನ್ನು ಸಕಾರಾತ್ಮಕ ಬೆಳವಣಿಗೆ ಎಂದು ನಾವು ಪರಿಗಣಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿದ್ದಾರೆ.

    ಹಿಂದಿನ ಅವಧಿಯಲ್ಲಿ ಸೇನಾಧಿಕಾರಿಗಳು ವಶಪಡಿಸಿಕೊಂಡ ಖಾಸಗಿ ಭೂಮಿಯನ್ನು ಮಾಲೀಕರಿಗೆ ಹಿಂದಿರುಗಿಸುವುದನ್ನು ಖಚಿತಪಡಿಸಿಕೊಳ್ಳಲು ಆಯೋಗವನ್ನು ಸ್ಥಾಪಿಸಿದೆ ಎಂದು ವರದಿಯಾಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇರಾನ್‍ನ ವಿಭಾಗದ ಮುಖ್ಯಸ್ಥರಾಗಿರುವ ಜೆ.ಪಿ ಸಿಂಗ್, ಕಳೆದ ತಿಂಗಳು ತಾಲಿಬಾನ್‍ನ ವಿದೇಶಾಂಗ ಸಚಿವ ಅಮೀರ್ ಖಾನ್ ಮುಟ್ಟಾಕಿ ಅವರೊಂದಿಗೆ ಮಾತುಕತೆ ನಡೆಸಿದ್ದರು. ಅವರ ಭೇಟಿಯ ಬಳಿಕ ಈ ಬೆಳವಣಿಗೆ ನಡೆದಿದೆ.

    ಭಾರತವು ಅಫ್ಘಾನ್ ಮಣ್ಣನ್ನು ಯಾವುದೇ ದೇಶದ ವಿರುದ್ಧ, ಯಾವುದೇ ಭಯೋತ್ಪಾದಕ ಚಟುವಟಿಕೆಗಳಿಗೆ ಬಳಸಬಾರದು ಎಂದು ಒತ್ತಾಯಿಸುತ್ತಿದೆ. ದೇಶದಲ್ಲಿ ತೆರೆದುಕೊಳ್ಳುತ್ತಿರುವ ಮಾನವೀಯ ಬಿಕ್ಕಟ್ಟನ್ನು ಪರಿಹರಿಸಲು ಅಫ್ಘಾನಿಸ್ತಾನಕ್ಕೆ ಅಡೆತಡೆಯಿಲ್ಲದ ಮಾನವೀಯ ನೆರವು ನೀಡಲು ಭಾರತವು ಸಹಾಯ ಮಾಡುತ್ತಿದೆ.

    ಜೂನ್ 2022 ರಲ್ಲಿ ಅಫ್ಘಾನ್ ರಾಜಧಾನಿಯಲ್ಲಿರುವ ತನ್ನ ರಾಯಭಾರ ಕಚೇರಿಯಲ್ಲಿ ಅಧಿಕಾರಿಗಳ ತಂಡವನ್ನು ನಿಯೋಜಿಸುವ ಮೂಲಕ ಭಾರತವು ಕಾಬೂಲ್‍ನಲ್ಲಿ (Kabul) ತನ್ನ ರಾಜತಾಂತ್ರಿಕ ಉಪಸ್ಥಿತಿಯನ್ನು ಮರುಸ್ಥಾಪಿಸಿತು. ಇದಕ್ಕೂ ಮೊದಲು 2021ರ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರವನ್ನು ವಹಿಸಿಕೊಂಡ ನಂತರ ಅವರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಭಾರತ, ತನ್ನ ಅಧಿಕಾರಿಗಳನ್ನು ರಾಯಭಾರ ಕಚೇರಿಯಿಂದ ಹಿಂಪಡೆದಿತ್ತು.

  • ಅಫ್ಘಾನಿಸ್ತಾನದಲ್ಲಿ 4.5 ತೀವ್ರತೆಯ ಭೂಕಂಪನ

    ಅಫ್ಘಾನಿಸ್ತಾನದಲ್ಲಿ 4.5 ತೀವ್ರತೆಯ ಭೂಕಂಪನ

    ಕಾಬೂಲ್:‌ ಅಫ್ಘಾನಿಸ್ತಾನದಲ್ಲಿ (Afghanistan) ಇಂದು ಸಂಜೆ 07:59 ಕ್ಕೆ ಪ್ರಬಲ ಭೂಕಂಪನದ (Earthquake) ಅನುಭವವಾಗಿದೆ. ರಿಕ್ಟರ್​ಮಾಪಕದಲ್ಲಿ 4.5 ರಷ್ಟು ತೀವ್ರತೆ ದಾಖಲಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

    ಭೂಕಂಪದ ಕೇಂದ್ರಬಿಂದು ಅಫ್ಘಾನಿಸ್ತಾನದಲ್ಲಿದೆ. ಭಾರತ ಮತ್ತು ಪಾಕಿಸ್ತಾನ ಸೇರಿದಂತೆ ತಜಕಿಸ್ತಾನದ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪದ ತೀವ್ರತೆ 4.5 ಆಗಿದ್ದರಿಂದ ಜನರು ಭಯಭೀತರಾಗಿದ್ದರು. ಏಕಾಏಕಿ ಭೂಮಿ ಕಂಪಿಸಿದ ಕಾರಣ ಜನರು ಮನೆಯಿಂದ ಹೊರಗೆ ಓಡಲಾರಂಭಿಸಿದರು. ಅಲ್ಲದೇ ಮತ್ತೆ ಭೂಕಂಪನದ ಭೀತಿಯ ನಡುವೆಯೇ ಜನರು ರಸ್ತೆಯಲ್ಲಿ ಬಹಳ ಹೊತ್ತು ತಿರುಗಾಡುತ್ತಿರುವುದು ಕಂಡು ಬಂತು.

    ಕಳೆದ ಅಕ್ಟೋಬರ್‌ನಲ್ಲಿಯೂ ಅಫ್ಘಾನಿಸ್ತಾನದಲ್ಲಿ ಭೂಕಂಪನ ಉಂಟಾಗಿತ್ತು. ಈ ವೇಳೆ ಸಾವು-ನೋವುಗಳು ಸಂಭವಿಸಿತ್ತು. ಸುಮಾರು 2,000 ಮಂದಿ ಸಾವನ್ನಪ್ಪಿದ್ದರು. ವಿಶ್ವ ಆರೋಗ್ಯ ಸಂಸ್ಥೆ ಲೆಕ್ಕಾಚಾರಗಳ ಪ್ರಕಾರ, ಅಫ್ಘಾನಿಸ್ತಾನದಲ್ಲಿ ಸುಮಾರು 600 ಮನೆಗಳು ಸಂಪೂರ್ಣ ಹಾನಿಗೀಡಾಗಿವೆ. ಹೆರಾತ್ ಪ್ರಾಂತ್ಯವೊಂದರಲ್ಲೇ 12 ಗ್ರಾಮಗಳು ನಾಮಾವಶೇಷವಾಗಿವೆ. ಈ ಗ್ರಾಮಗಳಲ್ಲಿ ಇದ್ದ 4,200 ಮಂದಿ ನಿರಾಶ್ರಿತರಾಗಿದ್ದರು.

  • ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಇಬ್ಬರ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ

    ಕ್ರೀಡಾಂಗಣದಲ್ಲಿ ಸಾರ್ವಜನಿಕವಾಗಿ ಇಬ್ಬರ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ

    ಕಾಬೂಲ್:‌ ಹತ್ಯೆ ಪ್ರಕರಣದಲ್ಲಿ ದೋಷಿ ಎಂದು ಸಾಬೀತಾದ ಇಬ್ಬರನ್ನು ಸಾರ್ಜಜನಿಕವಾಗಿ ಕ್ರೀಡಾಂಗಣದಲ್ಲಿ ತಲೆಗೆ 15 ಬಾರಿ ಗುಂಡಿಟ್ಟು ಮರಣದಂಡನೆ ಶಿಕ್ಷೆ ನೀಡಿದ ಘಟನೆ ಅಫ್ಘಾನಿಸ್ತಾನದಲ್ಲಿ (Afghanistan) ನಡೆದಿದೆ.

    ಸಯ್ಯದ್ ಜಮಾಲ್ ಮತ್ತು ಗುಲ್ ಖಾನ್ ಶಿಕ್ಷೆಗೆ ಗುರಿಯಾದವರು. ಸೆಪ್ಟೆಂಬರ್ 2017 ಮತ್ತು ಜನವರಿ 202ರಲ್ಲಿ ನಡೆದ 2 ಪ್ರತ್ಯೇಕ ಕೊಲೆ ಪ್ರಕರಣದಲ್ಲಿ ಇವರಿಬ್ಬರನ್ನು ದೋಷಿ ಎಂದು ತಾಲಿಬಾನ್ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ತಾಲಿಬಾನ್‌ ನಾಯಕ ಹೈಬತುಲ್ಲಾ ಅಖುಂದ್‌ಜಾದಾ ಇಬ್ಬರಿಗೆ ಮರಣದಂಡನೆ ಶಿಕ್ಷೆ ವಿಧಿಸುವಂತೆ ಆದೇಶ ನೀಡಿದ್ದರು.

    ಇಬ್ಬರು ಅಪರಾಧಿಗಳನ್ನು ಗುರುವಾರ ಮಧ್ಯಾಹ್ನ 12 ಗಂಟೆಗೆ ಘಜ್ನಿ ನಗರದ ಅಲಿ ಲಲಾ ಪ್ರದೇಶದಲ್ಲಿರುವ ಫುಟ್ಬಾಲ್ ಕ್ರೀಡಾಂಗಣಕ್ಕೆ ಕರೆ ತರಲಾಯಿತು. ಈ ವೇಳೆ ಕ್ರೀಡಾಂಗಣದ ಸುತ್ತ ಸಾವಿರಾರು ಮಂದಿ ಜಮಾಯಿಸಿದ್ದರು. ಒಬ್ಬನ ತಲೆಗೆ 8, ಮತ್ತೊಬ್ಬನ ತಲೆಗೆ 7 ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಲಾಯಿತು. ಇದನ್ನೂ ಓದಿ: ಹಡಗು ಡಿಕ್ಕಿಯಾಗಿ ಕುಸಿದ ಸೇತುವೆ- ಬಸ್‌ ನದಿಗೆ ಉರುಳಿ ಇಬ್ಬರ ದುರ್ಮರಣ

    ಕುಟುಂಬಸ್ಥರ ಮನವಿಗೆ ಡೋಂಟ್‌ ಕೇರ್:‌ ಮರಣದಂಡನೆ ಶಿಕ್ಷೆ ನೀಡುವುದಕ್ಕೂ ಮುನ್ನ ಅಪರಾಧಿಗಳ ಕುಟುಂಬಸ್ಥರು ಬಂದು ವಿನಾಯ್ತಿ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ಇದಕ್ಕೆ ಕ್ಯಾರೇ ಎನ್ನದೇ ಗುಂಡು ಹಾರಿಸಿ ಕೊಲ್ಲಲಾಯಿತು. ಒಟ್ಟಿನಲ್ಲಿ ಈ ಮೂಲಕ ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿದ್ದ ತಾಲಿಬಾನ್‌ನ (Taliban) ಷರಿಯಾ ವ್ಯವಸ್ಥೆ ಮತ್ತೊಮ್ಮೆ ಮುನ್ನೆಲೆಗೆ ಬಂದಂತಾಗಿದೆ.

  • 95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ – ವಿಶ್ವದಾಖಲೆ ನಿರ್ಮಿಸಿದ ರಿಂಕು-ರೋಹಿತ್‌ ಜೊತೆಯಾಟ

    95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ – ವಿಶ್ವದಾಖಲೆ ನಿರ್ಮಿಸಿದ ರಿಂಕು-ರೋಹಿತ್‌ ಜೊತೆಯಾಟ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನ (Afghanistan) ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಹಾಗೂ ರಿಂಕು ಸಿಂಗ್‌ 190 ರನ್‌ಗಳ ಜೊತೆಯಾಟ ಆಡುವ ಮೂಲಕ ವಿಶ್ವದಾಖಲೆ ನಿರ್ಮಿಸಿದ್ದಾರೆ.

    4.3 ಓವರ್‌ಗಳಲ್ಲಿ 22 ರನ್‌ಗಳಿಸಿದ್ದ ಭಾರತ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿತ್ತು. ಅಲ್ಲದೇ ಮೊದಲ 10 ಓವರ್‌ಗಳಲ್ಲಿ 61 ರನ್‌ಗಳನ್ನಷ್ಟೇ ಗಳಿಸಿತ್ತು. ಇದರಿಂದ ಭಾರತ 150 ರನ್‌ ಗಳಿಸುವುದೂ ಕಷ್ಟವಾಗಿತ್ತು. ಬಳಿಕ ಸ್ಫೋಟಕ ಇನ್ನಿಂಗ್ಸ್‌ ಕಟ್ಟಿದ್ದ ರೋಹಿತ್‌-ರಿಂಕು (Rohit – Rinku) 95 ಎಸೆತಗಳಲ್ಲಿ ಬರೋಬ್ಬರಿ 190 ರನ್‌ಗಳ ಜೊತೆಯಾಟವಾಡಿದರು. ಈ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್‌ಗಳ ಜೊತೆಯಾಟವಾಡಿದ (Highest Partnership) ಹಾಗೂ 5ನೇ ವಿಕೆಟ್‌ಗೆ ಅತಿಹೆಚ್ಚು ರನ್‌ಗಳ ಜೊತೆಯಾಟ ನೀಡಿದ ದಾಖಲೆ ನಿರ್ಮಿಸಿದರು. ಇದನ್ನೂ ಓದಿ: ನೂತನ ಸಾಯಿಕೃಷ್ಣನ್ ಸ್ಟೇಡಿಯಂ ಲೋಕಾರ್ಪಣೆ; ಸತ್ಯಸಾಯಿ ಗ್ರಾಮದಲ್ಲಿ ಸಚಿನ್-ಯುವಿ ತಂಡಗಳ ನಡುವೆ ಕ್ರಿಕೆಟ್ ಕಾಳಗ

    T20I ಪಂದ್ಯವೊಂದರಲ್ಲಿ ವೈಯಕ್ತಿಕವಾಗಿ ಅತಿಹೆಚ್ಚು ರನ್‌ ಗಳಿಸಿದವರು:
    * ಶುಭಮನ್ ಗಿಲ್ 126 ರನ್‌ – VS ನ್ಯೂಜಿಲೆಂಡ್‌
    * ಋತುರಾಜ್‌ ಗಾಯಕ್ವಾಡ್‌ 123 ರನ್‌ – VS ಆಸ್ಟ್ರೇಲಿಯಾ
    * ವಿರಾಟ್‌ ಕೊಹ್ಲಿ 122 ರನ್‌ – VS ಅಫ್ಘಾನಿಸ್ತಾನ
    * ರೋಹಿತ್‌ ಶರ್ಮಾ 121 ರನ್‌ – VS ಅಫ್ಘಾನಿಸ್ತಾನ

    T20I ಕ್ರಿಕೆಟ್ ನಲ್ಲಿ 5ನೇ ವಿಕೆಟ್‌ಗೆ ಅತಿಹೆಚ್ಚು ರನ್‌ಗಳ ಜೊತೆಯಾಟ
    * 190* ರನ್- ರೋಹಿತ್ ಶರ್ಮಾ- ರಿಂಕು ಸಿಂಗ್- ಭಾರತ VS ಅಫಘಾನಿಸ್ತಾನ-2024
    * 145 ರನ್- ಕುಶಾಲ್ ಮಲ್ಲ- ಡಿ.ಎಸ್ ಏರ್ರೇ- ನೇಪಾಳ VS ಹಾಂಗ್ ಕಾಂಗ್-2023
    * 121* ರನ್ – ಮಾರ್ಕ್ ಚಾಪ್ಮನ್- ಜೇಮ್ಸ್ ನಿಶಮ್- ನ್ಯೂಜಿಲೆಂಡ್ VS ಪಾಕಿಸ್ತಾನ-2023
    * 119* ರನ್- ಶೋಯೆಬ್ ಮಲ್ಲಿಕ್- ಮಿಸ್ಬಾ ಉಲ್ ಹಕ್- ಪಾಕಿಸ್ತಾನ VS ಆಸ್ಟ್ರೇಲಿಯಾ-2007
    * 119* ರನ್-ಕರ್ಟಿಸ್ ಕ್ಯಾಂಫರ್ – ಜಾರ್ಜ್ ಡಾಕ್ರೆಲ್- ಐರ್ಲೆಂಡ್ VS ಸ್ಕಾಟ್ಲೆಂಡ್-2022

    ಟಿ20 ಕ್ರಿಕೆಟ್ ನಲ್ಲಿ ಯಾವುದೇ ವಿಕೆಟ್ ಗೆ ಗರಿಷ್ಠ ಜೊತೆಯಾಟ
    * 190 ರನ್- ರೋಹಿತ್ ಶರ್ಮಾ – ರಿಂಕು ಸಿಂಗ್ – ಅಫಘಾನಿಸ್ತಾನ ವಿರುದ್ಧ- 2024
    * 176 ರನ್ – ಸಂಜು ಸ್ಯಾಮ್ಸನ್ – ದೀಪಕ್ ಹೂಡ – ಐರ್ಲೆಂಡ್ ವಿರುದ್ಧ- 2022
    * 165 ರನ್ – ರೋಹಿತ್ ಶರ್ಮಾ – ಕೆಎಲ್ ರಾಹುಲ್ – ಶ್ರೀಲಂಕಾ ವಿರುದ್ಧ- 2017
    * 165 – ಯಶಸ್ವಿ ಜೈಸ್ವಾಲ್ – ಶುಭ್ಮನ್ ಗಿಲ್ – ವೆಸ್ಟ್ ಇಂಡೀಸ್ ವಿರುದ್ಧ- 2023

    ಒಂದೇ ಓವರ್‌ನಲ್ಲಿ 36 ರನ್‌ ಚಚ್ಚಿದ ರಿಂಕು-ರೋಹಿತ್‌:
    ಪಂದ್ಯದ 19ನೇ ಓವರ್ ಅಂತ್ಯಕ್ಕೆ ಟೀಂ ಇಂಡಿಯಾ 4 ವಿಕೆಟ್ ನಷ್ಟಕ್ಕೆ 176 ಕಲೆ ಹಾಕಿತ್ತು. ಆದ್ರೆ 20ನೇ ಓವರ್‌ನಲ್ಲಿ ರೋಹಿತ್ ಶರ್ಮಾ ಹಾಗೂ ರಿಂಕು ಸಿಂಗ್ ಪೈಪೋಟಿಗೆ ಬಿದ್ದಂತೆ ಬ್ಯಾಟ್ ಬೀಸಿದರು. ಕರೀಮ್ ಜನ್ನತ್ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ರೋಹಿತ್‌ ಒಂದು ಬೌಂಡರಿ, ನೋಬಾಲ್‌ ಸೇರಿ ಎರಡು ಸಿಕ್ಸರ್, ಒಂದು ರನ್‌ ಸಿಡಿಸಿದರೇ, ಇನ್ನಿಂಗ್ಸ್‌ನ ಕೊನೆಯ 3 ಎಸೆತಗಳಲ್ಲಿ ರಿಂಕು ಸಿಂಗ್ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿ 36 ರನ್ ಕಲೆಹಾಕಿದರು. ಇದರೊಂದಿಗೆ ತಂಡದ ಮೊತ್ತವನ್ನು 212 ರನ್‌ಗಳಿಗೆ ಏರಿಸಿದರು. ಇದನ್ನೂ ಓದಿ: ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್‌ ಶರ್ಮಾ 

  • ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್‌ ಶರ್ಮಾ

    ನಾಯಕನಾಗಿ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ – ನಂ.1 ಪಟ್ಟಕ್ಕೇರಿದ ರೋಹಿತ್‌ ಶರ್ಮಾ

    ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಫ್ಘಾನಿಸ್ತಾನದ (Afghanistan) ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ (Rohit Sharma) ಶತಕ ಸಿಡಿಸುವ ಜೊತೆಗೆ ಸಿಕ್ಸರ್‌ಗಳಿಂದಲೇ ಹೊಸ ದಾಖಲೆ ಬರೆದಿದ್ದಾರೆ.

    ಇನ್ನಿಂಗ್ಸ್‌ನಲ್ಲಿ 69 ಎಸೆತಗಳಲ್ಲಿ ಸ್ಫೋಟಕ 121 ರನ್‌ ಚಚ್ಚಿದ ಹಿಟ್‌ಮ್ಯಾನ್‌ 11 ಬೌಂಡರಿ, 8 ಸಿಕ್ಸರ್‌ಗಳನ್ನೂ ಸಿಡಿಸಿದ್ರು. ಅಲ್ಲದೇ 2 ಸೂಪರ್‌ ಓವರ್‌ಗಳಲ್ಲಿ 3 ಸಿಕ್ಸರ್‌ ಸಿಡಿಸಿದ್ರು. ಈ ಮೂಲಕ ತಂಡವೊಂದರ ನಾಯಕನಾಗಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದ ನಂ.1 ಆಟಗಾರ ಎನಿಸಿಕೊಂಡರು. ಇದನ್ನೂ ಓದಿ: ಬೆಂಗ್ಳೂರಲ್ಲಿ 2 ಸೂಪರ್ ಓವರ್ ಥ್ರಿಲ್ಲರ್ – ಟೀಂ ಇಂಡಿಯಾಗೆ ರೋಚಕ ಗೆಲುವು

    ಅಫ್ಘಾನಿಸ್ತಾನ ವಿರುದ್ಧ ನಡೆದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಹಿಟ್‌ಮ್ಯಾನ್‌ ಸೊನ್ನೆ ಸುತ್ತಿದ್ದರು. ಅಂತಿಮ ಪಂದ್ಯದ ಮೊದಲ 10 ಓವರ್‌ಗಳವರೆಗೂ ತಾಳ್ಮೆಯ ಆಟವಾಡಿದ್ದ ಹಿಟ್‌ಮ್ಯಾನ್‌ 10 ಓವರ್‌ಗಳ ನಂತರ ಸ್ಫೋಟಕ ಇನ್ನಿಂಗ್ಸ್‌ಗೆ ಮುಂದಾದರು. ಸಿಕ್ಸರ್‌, ಬೌಂಡರಿ ಸಿಡಿಸುವ ಮೂಲಕ ಅಫ್ಘಾನ್‌ ಬೌಲರ್‌ಗಳ ಬೆವರಿಳಿಸಿದರು. ಜೊತೆಗೆ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದರು. ಇದನ್ನೂ ಓದಿ: ರೋಹಿತ್ ಶತಕ, ರಿಂಕು ಹಾಫ್ ಸೆಂಚುರಿ, ವಿರಾಟ್ ಕೊಹ್ಲಿ 0- ಆಫ್ಘನ್‍ಗೆ 213 ರನ್ ಟಾರ್ಗೆಟ್

    ನಾಕಯಕನಾಗಿ ಅತಿಹೆಚ್ಚು ಸಿಕ್ಸರ್‌ ಸಿಡಿಸಿದವರು ಇವರೇ..
    ರೋಹಿತ್ ಶರ್ಮಾ (ಭಾರತ) – 90 ಸಿಕ್ಸರ್,
    ಇಯಾನ್ ಮಾರ್ಗನ್ (ಇಂಗ್ಲೆಂಡ್) – 86 ಸಿಕ್ಸರ್,
    ಆರನ್ ಫಿಂಚ್ (ಆಸ್ಟ್ರೇಲಿಯಾ) – 82 ಸಿಕ್ಸರ್,
    ವಿರಾಟ್ ಕೊಹ್ಲಿ (ಭಾರತ) – 59 ಸಿಕ್ಸರ್

    5 ಶತಕ ಸಿಡಿಸಿದ ವಿಶ್ವದ ನಂ.1 ಆಟಗಾರ:
    ಅಫ್ಘಾನ್‌ ವಿರುದ್ಧ ಅಂತಿಮ ಟಿ20 ಪಂದ್ಯದಲ್ಲಿ 64 ಎಸೆತಗಳಲ್ಲೇ ಸೆಂಚುರಿ ಬಾರಿಸಿದ ರೋಹಿತ್ ಶರ್ಮಾ 4 ಅಂತಾರಾಷ್ಟ್ರೀಯ ಶತಕಗಳನ್ನು ಸಿಡಿಸಿದ್ದ ಮಿಸ್ಟರ್‌ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಅವರನ್ನು ಹಿಂದಿಕ್ಕಿ ಹೊಸ ಮೈಲಿಗಲ್ಲು ಸಾಧಿಸಿದರು. ನಿಗದಿತ 20 ಓವರ್‌ ಮುಗಿದಾಗ ರೋಹಿತ್‌ ಒಟ್ಟು 69 ಎಸೆತಗಳಲ್ಲಿ 11 ಬೌಂಡರಿ ಹಾಗೂ 8 ಸಿಕ್ಸರ್‌ ನೆರವಿನೊಂದಿಗೆ 121 ರನ್‌ ಗಳಿಸಿ ಅಜೇಯರಾಗಿ ಉಳಿದರು. ಇದನ್ನೂ ಓದಿ: ಕ್ಲೀನ್‌ ಸ್ವೀಪ್‌ ಉತ್ಸಾಹದಲ್ಲಿ ಭಾರತ – ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಪಂದ್ಯ ವೀಕ್ಷಿಸುವ ಕ್ರಿಕೆಟ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್

    ಟಾಪ್‌ 5 T20 ಶತಕ ಬಾರಿಸಿದವರು:
    1) ರೋಹಿತ್ ಶರ್ಮಾ (ಭಾರತ) – 5
    2) ಸೂರ್ಯಕುಮಾರ್ ಯಾದವ್ (ಭಾರತ) – 4
    3) ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ) – 4
    4) ಸಬಾವೂನ್ ಡೇವಿಜಿ (ಜೆಕ್ ರಿಪಬ್ಲಿಕ್)- 3
    5) ಕಾಲಿನ್ ಮುನ್ರೊ (ನ್ಯೂಜಿಲೆಂಡ್) – 3

    ಭಾರತಕ್ಕೆ ಸೂಪರ್‌ ಸೂಪರ ಜಯ: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಅಭಿಮಾನಿಗಳಿಗೆ ಬುಧವಾರ ರಾತ್ರಿ ಹಬ್ಬವೋ ಹಬ್ಬ. ಎರಡು ಸೂಪರ್ ಓವರ್ ಗಳನ್ನು ಕಂಡ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಅಫ್ಘಾನಿಸ್ತಾನ (IND Vs AFG) ವಿರುದ್ಧದ 3ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಸಾಧಿಸಿ, ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿಕೊಂಡಿತು.