Tag: afghanistan

  • ರಶೀದ್ ಖಾನ್ ಸ್ಪಿನ್ ಮೋಡಿ: ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ 45 ರನ್ ಜಯ

    ರಶೀದ್ ಖಾನ್ ಸ್ಪಿನ್ ಮೋಡಿ: ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನಕ್ಕೆ 45 ರನ್ ಜಯ

    ಡೆಹ್ರಾಡೂನ್: ಸ್ಪಿನ್ ಸೆನ್ಸೇಶನ್ ರಶೀದ್ ಖಾನ್ ಅಮೋಘ ಬೌಲಿಂಗ್ ನೆರವಿನಿಂದ ಅಫ್ಘಾನಿಸ್ತಾನ ತಂಡವು, ಪ್ರವಾಸಿ ಬಾಂಗ್ಲಾದೇಶ ವಿರುದ್ಧದ ಮೂರು ಟಿ20 ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ 45 ರನ್‍ಗಳಿಂದ ಗೆದ್ದು ಬೀಗಿದೆ.

    ಡೆಹ್ರಾಡೂನ್‍ನ ರಾಜೀವ್ ಗಾಂಧಿ ಕ್ರಿಕೆಟ್ ಮೈದಾನವನ್ನು ತವರು ಮೈದಾನವನ್ನಾಗಿ ಆಯ್ಕೆ ಮಾಡಿದ್ದ ಬಳಿಕ ತಾನಾಡಿದ ಮೊದಲ ಪಂದ್ಯದಲ್ಲೇ ಅಫ್ಘಾನಿಸ್ತಾನ ಅನುಭವಿ ಬಾಂಗ್ಲಾದೇಶಕ್ಕೆ ಬಿಗ್ ಶಾಕ್ ನೀಡಿತು.

    25 ಸಾವಿರ ಅಭಿಮಾನಿಗಳಿಂದ ಭರ್ತಿಯಾಗಿದ್ದ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿಸಲ್ಪಟ್ಟ ಅಫ್ಘಾನಿಸ್ತಾನ ತಂಡ 20 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 167 ರನ್ ಪೇರಿಸಿತ್ತು. 168 ರನ್ ಚೇಸಿಂಗ್ ವೇಳೆ ಬಾಂಗ್ಲಾದೇಶ, ರಶೀದ್ ಖಾನ್ ಹಾಗೂ ಶಪೂರ್ ಝದ್ರಾನ್ ಮಾರಕ ದಾಳಿಯನ್ನು ಎದುರಿಸಲಾಗದೇ 19 ಓವರ್ ಗಳಲ್ಲಿ 122 ರನ್ ಪೇರಿಸಲಷ್ಟೇ ಶಕ್ತವಾಯಿತು. ಆ ಮೂಲಕ 45 ರನ್‍ಗಳಿಂದ ಅಸ್ಗರ್ ಬಳಗಕ್ಕೆ ಶರಣಾಯಿತು.

    3 ಓವರ್ ಗಳ ಬಿಗು ಬೌಲಿಂಗ್ ದಾಳಿಯಲ್ಲಿ ಕೇವಲ 13 ರನ್ ಬಿಟ್ಟುಕೊಟ್ಟ ಖಾನ್, ಮೂರು ಪ್ರಮುಖ ವಿಕೆಟ್‍ಗಳನ್ನು ಕಿತ್ತು, ಬಾಂಗ್ಲಾ ಪಾಲಿಗೆ ವಿಲನ್ ಆದರು. ಆ ಮೂಲಕ ಟಿ20 ಕ್ರಿಕೆಟ್‍ನಲ್ಲಿ, ಶ್ರೀಲಂಕಾದ ಅಜಂತಾ ಮೆಂಡಿಸ್ ಬಳಿಕ 50 ವಿಕೆಟ್ ಕಬಳಿಸಿದ ಎರಡನೇ ಅತ್ಯಂತ ಕಿರಿಯ ಬೌಲರ್ ಎಂಬ ಕೀರ್ತಿಗೂ ರಶೀದ್ ಖಾನ್ ಪಾತ್ರರಾದರು.

    ತಾನೆಸೆದ ಪ್ರಥಮ ಓವರ್ ನ ಮೊದಲೆರೆಡು ಎಸೆತಗಳಲ್ಲಿ ಖಾನ್, ಅನುಭವಿ ಬ್ಯಾಟ್ಸ್ ಮನ್, ವಿಕೆಟ್ ಕೀಪರ್ ಮುಷ್ಫಿಕುರ್ ರಹ್ಮಾನ್ ಹಾಗೂ ಶಬ್ಬೀರ್ ರಹ್ಮಾನ್ ವಿಕೆಟ್ ಪಡೆದು ತಂಡಕ್ಕೆ ಬ್ರೇಕ್ ನೀಡಿದರು. ರಶೀದ್ ಖಾನ್‍ಗೆ ಉತ್ತಮ ಸಾಥ್ ನೀಡಿದ ಶಪೂರ್ ಝದ್ರ್ರಾನ್ 40 ರನ್ ನೀಡಿ 3 ವಿಕೆಟ್ ಕಬಳಿಸಿದರು.

    ಬಾಂಗ್ಲಾ ಪರ ಲಿಟಾನ್ ದಾಸ್ 30 (20 ಎಸೆತ), ಮುಷ್ಫಿಕರ್ ರಹ್ಮಾನ್ 20 (17), ಮೊಹಮ್ಮದುಲ್ಲ 29 (25), ಶಕೀಬ್ ಅಲ್ ಹಸನ್ 15 (15) ರನ್ ಗಳಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್‍ಮನ್‍ಗಳು 15 ರನ್ ಗೆರೆ ದಾಟಲಿಲ್ಲ. ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ್ದ ಅಫ್ಘಾನಿಸ್ತಾನ ಪರ, ಮೊಹಮ್ಮದ್ ಶಹಜಾದ್ 40 (37 ಎಸೆತ), ಉಸ್ಮಾನ್ ಘನಿ 26 (24), ಅಸ್ಗರ್ ಸ್ತಾನಿಕ್ ಝೈಯ್ 25 (24), ಸಮೀಉಲ್ಲಾ ಶೆನ್ವಾರಿ 36 (18) ಹಾಗೂ ಶಫೀಖುಲ್ಲಾ 24 (8) ರನ್ ಗಳಿಸುವ ಮೂಲಕ ತಂಡ ಸ್ಪರ್ಧಾತ್ಮಕ ಮೊತ್ತ ಕಲೆಹಾಕುವಲ್ಲಿ ನೆರವಾದರು. ಬಾಂಗ್ಲಾ ಪರ ಅಬ್ದುಲ್ ಹಸನ್ 40 ರನ್ ನೀಡಿ 2 ವಿಕೆಟ್ ಪಡೆದರೆ, ಮೊಹಮದುಲ್ಲ 1 ರನ್ನಿಗೆ 2 ವಿಕೆಟ್ ಪಡೆದರು.

  • ಅಫ್ಘಾನ್ ಪ್ರಧಾನಿ ಬಳಿಕ ಹೆಚ್ಚು ಪ್ರಸಿದ್ಧಿ ಪಡೆದಿದ್ದೇನೆ – ರಶೀದ್ ಖಾನ್

    ಅಫ್ಘಾನ್ ಪ್ರಧಾನಿ ಬಳಿಕ ಹೆಚ್ಚು ಪ್ರಸಿದ್ಧಿ ಪಡೆದಿದ್ದೇನೆ – ರಶೀದ್ ಖಾನ್

    ಮುಂಬೈ: 2018 ರ ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆ ಗಳಿಸಿರುವ ರಶೀದ್ ಖಾನ್, ತನ್ನ ದೇಶದ ಪ್ರಧಾನಿಯ ಬಳಿಕ ತಾನು ಹೆಚ್ಚು ಪ್ರಸಿದ್ಧಿ ಪಡೆದಿರುವುದಾಗಿ ಹೇಳಿದ್ದಾರೆ.

    ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಪರ ಅತ್ಯುತ್ತಮ ಆಲೌಂಡರ್ ಪ್ರದರ್ಶನ ನೀಡಿದ ರಶೀದ್ ತಂಡ ಫೈನಲ್ ತಲುಪಲು ಕಾರಣರಾಗಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ ಸಹ ವಿಶ್ವದ ಉತ್ತಮ ಟಿ20 ಬೌಲರ್ ಎಂದು ಹೊಗಳಿಕೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಖಾನ್ ಮೊದಲು ಸಚಿನ್ ರ ಹೊಗಳಿಕೆ ಟ್ವೀಟ್ ನೋಡಿದ ವೇಳೆ ನಂಬಲು ಸಾಧ್ಯವಾಗಲಿಲ್ಲ ಎಂದು ತಿಳಿಸಿದ್ದಾರೆ.

    ಸಚಿನ್ ವಿಶ್ವದಲ್ಲೇ ಹೆಚ್ಚು ಅಭಿಮಾನಿಗಳನ್ನು ಪಡೆದ ಆಟಗಾರರು. ಅವರ ಟ್ವೀಟನ್ನು ಅಫ್ಘಾನ್ ನ ಎಲ್ಲರೂ ನೋಡಿರುತ್ತಾರೆ. ಸಚಿನ್ ರ ಹೊಗಳಿಕೆ ತನ್ನಂತಹ ಹಲವು ಯುವ ಆಟಗಾರರಿಗೆ ಹೆಚ್ಚು ಪ್ರೇರಣೆ ನೀಡುತ್ತದೆ ಎಂದು ಹೇಳಿದ್ದಾರೆ.

    ಈ ಬಾರಿಯ ಐಪಿಎಲ್ ನಲ್ಲಿ 21 ವಿಕೆಟ್ ಪಡೆದಿರುವ ಖಾನ್ ಟೂರ್ನಿಯಲ್ಲಿ ಅತೀ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಎಂಬ ಹೆಗ್ಗಳಿಕೆ ಪಡೆದರು. ವಿಶೇಷವಾಗಿ ಟೂರ್ನಿಯಲ್ಲಿ ಧೋನಿ, ಎಬಿ ಡಿವಿಲಿಯರ್ಸ್, ವಿರಾಟ್ ಕೊಹ್ಲಿ ವಿಕೆಟ್ ಪಡೆದಿರುವುದು ಹೆಚ್ಚು ಹೆಮ್ಮೆ ಎನಿಸುತ್ತದೆ. ಈ ಮೂರು ವಿಕೆಟ್ ಗಳು ತನ್ನ ವೃತ್ತಿ ಜೀವನದ ಪ್ರಮುಖ ಸಾಧನೆ ಎಂದು ತಿಳಿಯುತ್ತೇನೆ ಎಂದು ಹೇಳಿದ್ದಾರೆ.

    ಮುಂದಿನ ಜೂನ್ ನಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಟೆಸ್ಟ್ ಪಂದ್ಯದ ಮೂಲಕ ಅಫ್ಘಾನ್ ತಂಡ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಗೆ ಪಾದಾರ್ಪಣೆ ಮಾಡಲಿದೆ. ಈ ಪಂದ್ಯ ಅತ್ಯಂತ ಮಹತ್ವದಾಗಿದ್ದು, ಇಡೀ ದೇಶವೇ ಎದುರು ನೋಡುತ್ತಿದೆ. ಈ ಪಂದ್ಯಕ್ಕೆ ಆಯ್ಕೆ ಆಗಿರುವ ಎಲ್ಲರು ಲಕ್ಕಿ ಆಟಗಾರರಾಗಿದ್ದು, ಈ ಮೂಲಕ ಇತಿಹಾಸ ಬರೆಯಲಿದ್ದೇವೆ. ಎಲ್ಲಕ್ಕಿಂತ ಹೆಚ್ಚಾಗಿ ನಾವು ಟೀಂ ಇಂಡಿಯಾ ವಿರುದ್ಧ ಆಡುತ್ತಿದ್ದೇವೆ ಎಂಬುವುದೆ ಹೆಮ್ಮೆ ಸಂಗತಿ ಎಂದು ತಿಳಿಸಿದ್ದಾರೆ.

    ಈ ವೇಳೆ ಭಾರತ ಸ್ಟಾರ್ ಆಟಗಾರರು ಪಡೆಯುವ ಸೌಲಭ್ಯಗಳನ್ನು ಪಡೆದಿರುವ ಕುರಿತ ಪ್ರಶ್ನೆಗೆ ಉತ್ತರಿಸಿ ತಾನು ಅಫ್ಘಾನ್ ದೇಶದ ಪ್ರಧಾನಿ ಬಳಿಕ ಹೆಚ್ಚು ಪ್ರಸಿದ್ಧಿ ಪಡೆದಿದ್ದೇನೆ ಎಂದು ಉತ್ತರಿಸಿದ್ದಾರೆ. ಸದ್ಯ ಅಫ್ಘಾನ್ ನಂತಹ ದೇಶದ ಯುವ ಜನತೆಗೆ ರಶೀದ್ ಖಾನ್ ಈಗ ಸ್ಫೂರ್ತಿಯಾಗಿದ್ದಾರೆ.

  • ಭಾರತೀಯರಿಗೆ  ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ಭಾರತೀಯರಿಗೆ ಧನ್ಯವಾದ ಸಲ್ಲಿಸಿದ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ

    ನವದೆಹಲಿ: ಅಫ್ಘಾನಿಸ್ತಾನದ ಅಧ್ಯಕ್ಷರಾದ ಅಶ್ರಫ್ ಘನಿ ಟ್ವೀಟ್ ಮಾಡುವ ಮೂಲಕ ಭಾರತೀಯರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಶುಕ್ರವಾರ ಈಡನ್ ಗಾರ್ಡನ್ ನಲ್ಲಿ ನಡೆದ ಎಲಿಮಿನೇಟರ್ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಆಲ್‍ರೌಂಡರ್ ಪ್ರದರ್ಶನ ತೋರುವ ಮೂಲಕ ರಶೀದ್ ಖಾನ್ ಕ್ರೀಡಾಂಗಣದಲ್ಲಿ ಮಿಂಚಿದ್ರು.

    ತನ್ನ ಮಾತೃ ತಂಡ ಸನ್‍ರೈಸರ್ಸ್ ಹೈದರಾಬಾದ್ ಗೆಲುವುಗಾಗಿ ರಶೀದ್ ಖಾನ್‍ಗೆ ಆಲ್‍ರೌಂಡರ್ ಪ್ರರ್ದಶನ ತೋರಿದ್ದಾರೆ. ಮೂಲತಃ ರಶೀದ್ ಖಾನ್ ಅಫ್ಘಾನಿಸ್ತಾನದ ಆಟಗಾರ. ಹೀಗಾಗಿ ಅಲ್ಲಿನ ರಾಷ್ಟ್ರಾಧ್ಯಕ್ಷ ಅಶ್ರಫ್ ಘನಿ ಅವರು ತಮ್ಮ ದೇಶದ ಪ್ರತಿಭೆಗೆ ಅವಕಾಶ ನೀಡಿದ್ದಕ್ಕಾಗಿ ಭಾರತಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

    ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎಲಿಮಿನೇಟರ್ ಹಂತದಲ್ಲಿ ಸನ್‍ರೈಸರ್ಸ್ ಹೈದರಾಬಾದ್ ತಂಡವು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಎದುರು 14 ರನ್ ಅಂತರದಲ್ಲಿ ಗೆಲವು ಸಾಧಿಸಿದೆ.

    ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್‍ರೈಸರ್ಸ್ ತಂಡದ 20 ಓವರ್‍ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಕಲೆ ಹಾಕಿತ್ತು. ರಶೀದ್ ಖಾನ್ ಅವರು ಔಟ್ ಆಗದೆ 10 ಎಸೆತದಲ್ಲಿ 4 ಸಿಕ್ಸ್, 2 ಬೌಂಡರಿ ಮೂಲಕ 34 ರನ್ ಕಲೆ ಹಾಕುವ ಮೂಲಕ ತಂಡದ ಬೃಹತ್ ಮೊತ್ತಗೆ ಸಹಾಯವಾದರು. ಅವರ ಅಮೋಘ ಬ್ಯಾಟಿಂಗ್ ಶೈಲಿ ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.

    ಬೃಹತ್ ಮೊತ್ತವನ್ನು ಬೆನ್ನಟ್ಟಿ ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತ ತಂಡವನ್ನು 20 ಓವರ್‍ಗಳಲ್ಲಿ 160 ರನ್‍ಗೆ ಕಟ್ಟಿ ಹಾಕಲು ಹೈದರಾಬಾದ್ ತಂಡದ ಬೌಲರ್‍ಗಳು ಯಶಸ್ವಿಯಾದರು. ರಶೀದ್ ಖಾನ್ ಬೌಲಿಂಗ್‍ನಲ್ಲಿಯೂ ಮಿಂಚಿದ್ದಾರೆ. ಒಟ್ಟು 4 ಓವರ್ ಬೌಲ್ ಮಾಡಿದ ಅವರು ಕೇವಲ 19 ರನ್ ನೀಡಿ 4 ವಿಕೆಟ್ ಪಡೆದಿದ್ರು ತಂಡದ ಗೆಲುವಿಗೆ ಕಾರಣರಾದ್ರು.

    ಅಫ್ಘಾನಿಸ್ತಾನ ಜಲಾಲಾಬಾದ್‍ನ 19 ವರ್ಷದ ಆಟಗಾಗರಾಗಿರುವ ರಶೀದ್ ಖಾನ್ ಬಗ್ಗೆ ಅಲ್ಲಿನ ರಾಷ್ಟ್ರಾಧ್ಯಕ್ಷರು ಆಶ್ರಫ್ ಘನಿ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ನಮ್ಮ ಹೀರೋ ರಶೀದ್ ಖಾನ್ ಕುರಿತು ಅಫ್ಘಾನಿಸ್ತಾನ ಹೆಮ್ಮೆ ಪಡುತ್ತದೆ. ಅಲ್ಲದೇ ನಮ್ಮ ನೆಲದ ಪ್ರತಿಭೆಗೆ ವೇದಿಕೆ ಒದಗಿಸಿಕೊಟ್ಟ ನನ್ನ ಭಾರತೀಯ ಸಹೋದರರಿಗೂ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಟ್ವೀಟ್ ಮಾಡಿದ್ದು, ಅದನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಟ್ಯಾಗ್ ಮಾಡಿದ್ದಾರೆ.

  • ಕ್ರಿಕೆಟ್  ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ 8 ಮಂದಿ ಸಾವು

    ಕ್ರಿಕೆಟ್ ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ 8 ಮಂದಿ ಸಾವು

    ಕಾಬೂಲ್: ಕ್ರಿಕೆಟ್ ಪಂದ್ಯಾವಳಿ ವೇಳೆ ಸರಣಿ ಬಾಂಬ್ ಸ್ಫೋಟ ಸಂಭವಿಸಿದ ಪರಿಣಾಮ 8 ಜನ ಮೃತಪಟ್ಟಿರುವ ಘಟನೆ ಅಫ್ಘಾನಿಸ್ತಾನದ ಪೂರ್ವ ನಂಗರ್ ಹಾರ್‍ನಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

    ಪವಿತ್ರ ರಮ್ಜಾನ್ ತಿಂಗಳ ನಿಮಿತ್ತ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ವೇಳೆ ದುಷ್ಕರ್ಮಿಗಳು ಸರಣಿ ಬಾಂಬ್ ಸ್ಪೋಟ ನಡೆಸಿದ್ದಾರೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, ಸುಮಾರು 45ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ ಎಂದು ನಗರ್ ಹಾರ್ ಪ್ರಾಂತೀಯ ರಾಜ್ಯಪಾಲರ ವಕ್ತಾರ ಅತ್ತಹುಲ್ಲಾ ಖೋಗ್ಯಾನಿ ಮಾಹಿತಿ ನೀಡಿದ್ದಾರೆ.

    ಬಾಂಬ್ ಸ್ಪೋಟದ ಹೊಣೆಯನ್ನು ಯಾವುದೇ ಉಗ್ರ ಸಂಘಟನೆ ಹೊತ್ತುಕೊಂಡಿಲ್ಲ. ಆದರೆ, ಪೂರ್ವ ಅಫ್ಘಾನಿಸ್ಥಾನ ಭಾಗದಲ್ಲಿ ತಾಲಿಬಾನ್ ಹಾಗೂ ಐಸಿಸ್ ಭಯೋತ್ಪಾದಕರು ಸಕ್ರಿಯರಾಗಿದ್ದಾರೆ. ಹೀಗಾಗಿ ಅವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲಾಗುತ್ತಿದೆ ಎಂದು ಖೋಗ್ಯಾನಿ ತಿಳಿಸಿದ್ದಾರೆ.

  • ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಬಾರಿಸಬಲ್ಲೆ ಎಂದ ಅಫ್ಘಾನ್ ಕ್ರಿಕೆಟಿಗ!

    ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಬಾರಿಸಬಲ್ಲೆ ಎಂದ ಅಫ್ಘಾನ್ ಕ್ರಿಕೆಟಿಗ!

    ನವದೆಹಲಿ: ಕ್ರಿಕೆಟ್ ಲೋಕದಲ್ಲಿ ಕಿಂಗ್ ಆಗಿ ಮೆರೆಯುತ್ತಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳಿರಬಹುದು. ಆದರೆ ವಿರಾಟ್ ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಗಳನ್ನು ನಾನು ಬಾರಿಸಬಲ್ಲೆ ಎಂದು ಕ್ರಿಕೆಟ್ ಶಿಶು ಅಫ್ಘಾನಿಸ್ತಾನದ ವಿಕೆಟ್ ಕೀಪರ್ – ಬ್ಯಾಟ್ಸ್‍ಮನ್ ಮೊಹಮ್ಮದ್ ಶಹಝಾದ್ ಹೇಳಿದ್ದಾರೆ.

    ಇತ್ತೀಚೆಗಷ್ಟೇ ಟೆಸ್ಟ್ ಆಡುವ ರಾಷ್ಟ್ರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಅಫ್ಘಾನಿಸ್ತಾನ, ಮುಂದಿನ ತಿಂಗಳು ಬೆಂಗಳೂರಿನಲ್ಲಿ ನಡೆಯಲಿರುವ ತನ್ನ ಚೊಚ್ಚಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸಲಿದೆ. ಇದಕ್ಕಾಗಿ ಭಾರತದಲ್ಲಿಯೇ ಅಭ್ಯಾಸ ನಡೆಸುತ್ತಿರುವ ಶಹಝಾದ್ ಫಿಟ್ನೆಸ್ ವಿಚಾರದಲ್ಲಿ ಮಾತ್ರ ಯಾವುದೇ ರಾಜಿಯಾಗುವುದಿಲ್ಲ ಎಂದಿದ್ದಾರೆ.

    ಫಿಟ್ನೆಸ್ ಕಾಯ್ದುಕೊಳ್ಳಲು ಪ್ರಯತ್ನಿಸುತ್ತೇನೆ ಆದರೆ ಆಹಾರದ ವಿಷಯದಲ್ಲಿ ಯಾವುದೇ ರಾಜಿಯಿಲ್ಲ ಎಂದಿರುವ 30 ವರ್ಷದ ಶಹಝಾದ್ 90 ಕೆಜಿ ದೇಹತೂಕ ಹೊಂದಿದ್ದಾರೆ. ತನ್ನ ದೇಹಗಾತ್ರದಿಂದಾಗಿ ಎಲ್ಲಡೆಯಿಂದ ಟೀಕೆ ಕೇಳಿ ಬರುತ್ತಿದ್ದರೂ ತಲೆಕೆಡಿಸಿಕೊಳ್ಳದ ಶೆಹಝಾದ್, ಫಿಟ್ನೆಸ್ ಕಾಯ್ದುಕೊಳ್ಳಲು ಕೊಹ್ಲಿ ಪಾಲಿಸುವ ಶೈಲಿಯನ್ನು ನನ್ನಿಂದ ನಿರೀಕ್ಷಿಸಬೇಡಿ. ಆದರೆ ಕೊಹ್ಲಿಗಿಂತಲೂ ದೊಡ್ಡ ಸಿಕ್ಸರ್ ಗಳನ್ನು ನಾನು ಬಾರಿಸಬಲ್ಲೆ ಎಂದು ಸಂದರ್ಶನದಲ್ಲಿ ಹೇಳಿದ್ದಾರೆ.

    ಈ ವೇಳೆ ಮಹೇಂದ್ರ ಸಿಂಗ್ ಧೋನಿ ತನ್ನ ಆಪ್ತ ಸ್ನೇಹಿತ ಎಂದಿರುವ ಶಹಝಾದ್, ಧೋನಿ ಅವರ ಕೊಠಡಿಯ ಬಾಗಿಲು ಎಲ್ಲರಿಗೂ ತೆರದಿರುತ್ತದೆ ಎಂದಿದ್ದಾರೆ. ಸುರೇಶ್ ರೈನಾ ಹಾಗೂ ಶಿಖರ್ ಧವನ್ ಜೊತೆ ಸಮಯ ಕಳೆಯುವುದನ್ನು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

    ಕಳೆದ ಕೆಲ ದಿನಗಳ ಹಿಂದೆ ಧೋನಿಯ ಹೆಲಿಕಾಪ್ಟರ್ ಹೊಡೆತವನ್ನು ಅನುಕರಿಸಿ ಸುದ್ದಿಯಾಗಿದ್ದ ಬಿಗ್ ಹಿಟ್ಟರ್ ಶಹಝಾದ್, ಅಫ್ಘಾನಿಸ್ತಾನದ ಪರ ಟಿ-20 ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಜೊತೆಗೆ ಏಕದಿನ ಕ್ರಿಕೆಟ್‍ನಲ್ಲಿ ಮುಹಮ್ಮದ್ ನಬಿ ಬಳಿಕ ಅತಿಹೆಚ್ಚು ರನ್ ಗಳಿಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

    ವಿಶ್ವಕಪ್ ಅರ್ಹತಾ ಟೂರ್ನಿಯ ಫೈನಲ್ ಪಂದ್ಯದಲ್ಲಿ ಮ್ಯಾನ್ ಆಫ್ ದ ಮ್ಯಾಚ್ ಪ್ರಶಸ್ತಿ ಗೆದ್ದಿದ್ದ ಶಹಝಾದ್, ದೇಹ ತೂಕ ಇಳಿಸಲು ಹೋಗಿ ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದು ಒಂದು ವರ್ಷ ಅಮಾನತು ಶಿಕ್ಷೆಗೆ ಗುರಿಯಾಗಿ ಇತ್ತೀಚಿಗಷ್ಟೇ ತಂಡಕ್ಕೆ ಮರಳಿದ್ದರು.

  • ಬೆಂಗ್ಳೂರಿನ ಟೆಸ್ಟ್ ವೇಳೆ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಕೊಹ್ಲಿ!

    ಬೆಂಗ್ಳೂರಿನ ಟೆಸ್ಟ್ ವೇಳೆ ಕೌಂಟಿ ಕ್ರಿಕೆಟ್ ಆಡಲಿದ್ದಾರೆ ಕೊಹ್ಲಿ!

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಇಂಗ್ಲೆಂಡ್ ನಲ್ಲಿ ಕೌಂಟಿ ಕ್ರಿಕೆಟ್ ಆಡುವುದು ಖಚಿತವಾಗಿದ್ದು, ಈ ಕುರಿತು Surrey ತಂಡದ ತನ್ನ ಟ್ವಿಟ್ಟರ್ ಖಾತೆಯಲ್ಲಿ ಕೊಹ್ಲಿಗೆ ಸ್ವಾಗತ ಕೋರಿ ಟ್ವೀಟ್ ಮಾಡಿದೆ.

    ಕೌಂಟಿ ಕ್ರಿಕೆಟ್ ನಲ್ಲಿ ಕೊಹ್ಲಿ ಭಾಗವಹಿಸುತ್ತಿರುವ ಕುರಿತು ಹೆಮ್ಮೆ ವ್ಯಕ್ತಪಡಿಸಿರುವ Surrey  ಕ್ಲಬ್, ವಿಶ್ವದ ಶ್ರೇಷ್ಠ ಬ್ಯಾಟ್ಸ್ ಮನ್ ನಮ್ಮ ತಂಡದಲ್ಲಿ ಆಡಲಿದ್ದಾರೆ ಎಂಬುದು ಸಂತಸದ ವಿಷಯ. ಜೂನ್ ತಿಂಗಳು ಪೂರ್ತಿ ಕೊಹ್ಲಿ ಅವರು ಕೌಂಟಿ ಕ್ರಿಕೆಟ್‍ನಲ್ಲಿ ಭಾಗವಹಿಸಲಿದ್ದಾರೆ ಎಂದು ಕ್ಲಬ್ ತಿಳಿಸಿದೆ.

    ಕೌಂಟಿ ಕ್ರಿಕೆಟ್‍ನ ಭವಿಷ್ಯದ ಕುರಿತು ಪ್ರಶ್ನಿಸುತ್ತಿದ್ದ ವೇಳೆ ಕೊಹ್ಲಿಯಂತಹ ಆಟಗಾರರು ತಂಡದ ಪರ ಆಡುತ್ತಿರುವುದು ಉತ್ತಮ ಬೆಳವಣಿಗೆ. ಇದು ದೇಶಿಯ ಕ್ರಿಕೆಟ್‍ಗೆ ಪ್ರೇರಣೆ ನೀಡಲಿದೆ. ಅಲ್ಲದೇ ನಮ್ಮ ತಂಡದಲ್ಲಿ ಕೊಹ್ಲಿ ಆಡುವುದರಿಂದ ಅವರಿಂದ ಅನೇಕ ಸಲಹೆಗಳನ್ನು ಪಡೆದುಕೊಳ್ಳಲು ಆಟಗಾರರಿಗೆ ಅನುಕೂಲವಾಗುತ್ತದೆ ಎಂದು Surrey ತಂಡದ ನಿರ್ದೇಶಕ ಅಲೆಕ್ಸ್ ಸ್ಟಿವರ್ಟ್ ಹೇಳಿದ್ದಾರೆ.

    ಮುಂಬರುವ ಇಂಗ್ಲೆಂಡ್ ನಡುವಿನ ಟೂರ್ನಿಗೆ ಸಿದ್ಧತೆ ನಡೆಸಿಕೊಳ್ಳುವ ಉದ್ದೇಶದಿಂದ ವಿರಾಟ್ ಕೊಹ್ಲಿ ಕೌಟಿ ಕ್ರಿಕೆಟ್‍ನಲ್ಲಿ ಆಡುತ್ತಿದ್ದು, Surrey ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಹ್ಲಿ, ಕೌಂಟಿ ಕ್ರಿಕೆಟ್ ನಲ್ಲಿ ಆಡಬೇಕೆನ್ನುವುದು ನನ್ನ ಕನಸಾಗಿತ್ತು. ಇದನ್ನು Surrey ಕ್ಲಬ್ ನನಸಾಗಿಸಿದೆ. ಇದಕ್ಕಾಗಿ ತಂಡದ ನಿರ್ದೇಶಕ ಅಲೆಕ್ ಸ್ಟಿವರ್ಟ್ ಹಾಗೂ ಅದರ ಆಡಳಿತ ಮಂಡಳಿಗೆ ಕೃತಜ್ಞನಾಗಿದ್ದೇನೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

    ಕಳೆದ ಬಾರಿ ಇಂಗ್ಲೆಂಡ್ ವಿರುದ್ಧ ನಡೆದ ಪೂರ್ಣಾವಧಿಯ ಟೂರ್ನಿಯಲ್ಲಿ ಭಾಗವಹಿಸಿದ್ದ ವಿರಾಟ್ ಕೊಹ್ಲಿ ಸರಣಿಯಲ್ಲಿ ಸ್ವಿಂಗ್ ಬೌಲಿಂಗ್ ಎದುರಿಸಲು ಕಷ್ಟಪಟ್ಟಿದ್ದರು. ಅದರಲ್ಲೂ ಟೆಸ್ಟ್ ಮಾದರಿಯಲ್ಲಿ ಅವರ ಪ್ರದರ್ಶನ ಉತ್ತಮವಾಗಿರಲಿಲ್ಲ. ಹೀಗಾಗಿ ಇಂಗ್ಲೆಂಡ್ ವಿರುದ್ಧ ಉತ್ತಮ ಪ್ರದರ್ಶನ ನೀಡಲು ಕೌಂಟಿ ಕ್ರಿಕೆಟ್ ಪರ ಆಡಲು ಕೊಹ್ಲಿ ಸಹಿ ಹಾಕಿದ್ದಾರೆ.

    ಕೊಹ್ಲಿ ಕೌಂಟಿ ಕ್ರಿಕೆಟ್ ನಲ್ಲಿ ಭಾಗವಹಿಸುವುದರಿಂದ ಇಂಗ್ಲೆಂಡ್ ಟೂರ್ನಿಗೂ ಮೊದಲು ಅಫ್ಘಾನಿಸ್ತಾನದ ವಿರುದ್ಧ ಬೆಂಗಳೂರಿನಲ್ಲಿ ಜೂನ್ 14 ರಿಂದ 18 ವರೆಗೆ ನಡೆಯುವ ಏಕೈಕ ಟೆಸ್ಟ್ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ.

  • ಐಸಿಸಿ ವಿಶ್ವಕಪ್ ಗೆ ಅರ್ಹತೆ ಪಡೆದ  ಅಫ್ಘಾನಿಸ್ತಾನ- 2019ರ ವಿಶ್ವಕಪ್ ತಂಡಗಳ ಪಟ್ಟಿ ಇಂತಿದೆ

    ಐಸಿಸಿ ವಿಶ್ವಕಪ್ ಗೆ ಅರ್ಹತೆ ಪಡೆದ ಅಫ್ಘಾನಿಸ್ತಾನ- 2019ರ ವಿಶ್ವಕಪ್ ತಂಡಗಳ ಪಟ್ಟಿ ಇಂತಿದೆ

    ನವದೆಹಲಿ: 2019ರ ಐಸಿಸಿ ವಿಶ್ವಕಪ್ ಅರ್ಹತಾ ಟೂರ್ನಿಯ ಸೂಪರ್ ಸಿಕ್ಸ್ ನಿರ್ಣಾಯಕ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಅಪ್ಘಾನಿಸ್ತಾನ ಗೆಲುವು ಪಡೆದಿದೆ. ಈ ಮೂಲಕ ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ನಡೆಯುವ 2019 ರ ವಿಶ್ವಪಕ್‍ಗೆ ಅಫ್ಘಾನಿಸ್ತಾನ ಅರ್ಹತೆ ಪಡೆದುಕೊಂಡಿದೆ.

     ಅಫ್ಘಾನಿಸ್ತಾನ ತಂಡ ಗೆಲುವು ಪಡೆಯುತ್ತಿದಂತೆ ಆಟಗಾರರ ಸಂತೋಷ ಮೇರೆ ಮೀರಿದ್ದು, ಡ್ರೆಸಿಂಗ್ ರೂಮ್ ನಲ್ಲಿ ಆಟಗಾರರು ಕುಣಿದು ಕುಪ್ಪಳಿಸಿದ್ದಾರೆ. ಅ ಅಫ್ಘಾನ್ ಗೆಲುವಿನೊಂದಿಗೆ 2019 ರ ಟೂರ್ನಿಯಲ್ಲಿ ಭಾಗವಹಿಸುವ 10 ತಂಡಗಳ ಪಟ್ಟಿ ಖಚಿತವಾಗಿದೆ.

    ಒಂದು ಹಂತದಲ್ಲಿ ಅಫ್ಘಾನ್ ಅರ್ಹತಾ ಟೂರ್ನಿಯಲ್ಲಿ ತೇರ್ಗಡೆ ಹೊಂದುವುದು ಬಹುತೇಕ ಕಠಿಣವಾಗಿತ್ತು. ಟೂರ್ನಿಯ ಆರಂಭದ ಮೂರು ಪಂದ್ಯಗಳಲ್ಲಿ ಅಫ್ಘಾನ್ ತಂಡ ಸೋಲು ಕಂಡಿತ್ತು. ಆದರೆ ಕೊನೆಯ ಹಂತದಲ್ಲಿ ಅಮೋಘ ಪ್ರದರ್ಶನ ನೀಡಿ ವಿಶ್ವಕಪ್ ಗೆ ಅರ್ಹತೆ ಪಡೆಯಿತು. ವಿಶ್ವಕಪ್ ಟೂರ್ನಿಗೆ ಆಯ್ಕೆ ಆಗುತ್ತಿದಂತೆ ಅಫ್ಘಾನಿಸ್ತಾನ ಆಟಗಾರರು ಡ್ರೆಸಿಂಗ್ ರೂಮ್‍ನಲ್ಲಿ `ವಿ ಆರ್ ಇನ್’ ಎಂದು ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಈ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    2019ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ, ಆಸ್ಟ್ರೇಲಿಯಾ, ಶ್ರೀಲಂಕಾ, ಇಂಗ್ಲೆಂಡ್, ಬಾಂಗ್ಲಾದೇಶ, ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಪಾಕಿಸ್ತಾನ, ವೆಸ್ಟ್ ಇಂಡೀಸ್ ಹಾಗೂ ಅಫ್ಘಾನಿಸ್ತಾನ ತಂಡಗಳು ಪ್ರಶಸ್ತಿಗಾಗಿ ಸೆಣಸಲಿವೆ. 2019 ರ ಟೂರ್ನಿ ಮೇ 30ರಿಂದ ಜುಲೈ 14ರ ವರೆಗೆ ನಡೆಯಲಿದೆ.

  • ಮಡಿಲಲ್ಲಿ ಮಗುವನ್ನ ಮಲಗಿಸಿಕೊಂಡು ಹಾಲುಣಿಸುತ್ತಲೇ ಪರೀಕ್ಷೆ ಬರೆದ ಮಹಿಳೆ- ಫೋಟೋ ವೈರಲ್

    ಮಡಿಲಲ್ಲಿ ಮಗುವನ್ನ ಮಲಗಿಸಿಕೊಂಡು ಹಾಲುಣಿಸುತ್ತಲೇ ಪರೀಕ್ಷೆ ಬರೆದ ಮಹಿಳೆ- ಫೋಟೋ ವೈರಲ್

    ಕಾಬುಲ್: ಮಹಿಳೆಯೊಬ್ಬರು ತನ್ನ ಮಗುವನ್ನ ಮಡಿಲಲ್ಲಿ ಮಲಗಿಸಿಕೊಂಡೇ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆ ಬರೆದ ಫೋಟೋವೊಂದು ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

    25 ವರ್ಷದ ಮಹಿಳೆ ಜಹಾನ್ ತಾಬ್, ಅಫ್ಘಾನಿಸ್ತಾನದ ಡೇಕುಂಡಿ ಪ್ರಾಂತ್ಯದಲ್ಲಿರೋ ಖಾಸಗಿ ವಿಶ್ವವಿದ್ಯಾಲಯದಲ್ಲಿ ನೆಲದ ಮೇಲೆ ಕುಳಿತು ಪರೀಕ್ಷೆ ಬರೆಯುತ್ತಿರುವುದರ ಫೋಟೋ ತೆಗೆಯಲಾಗಿತ್ತು. ಜಹಾನ್ ಅವರು ನಿಲ್ಲಿ ನಗರದಲ್ಲಿರೋ ನಾಸಿರ್‍ಖೊಸ್ರಾ ಉನ್ನತ ಶಿಕ್ಷಣ ಸಂಸ್ಥೆಯಲ್ಲಿ ಸಮಾಜ ವಿಜ್ಞಾನ ಕೋರ್ಸ್‍ಗೆ ಪ್ರವೇಶಾತಿ ಪಡೆಯಲು ಕಾನ್ಕೋರ್ ಎಕ್ಸಾಂ ಎಂಬ ಪ್ರವೇಶಾತಿ ಪರೀಕ್ಷೆ ಬರೆಯುತ್ತಿದ್ದರು. ಈ ವೇಳೆ ಅವರ 2 ತಿಂಗಳ ಮಗು ಅಳಲು ಶುರುಮಾಡಿತ್ತು.

    ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಯಾಹ್ಯಾ ಇರ್ಫಾನ್ ಈ ಬಗ್ಗೆ ಹೇಳಿಕೆ ನೀಡಿದ್ದು, ಮಹಿಳೆ ಡೆಸ್ಕ್‍ನಿಂದ ಎದ್ದು ನೆಲದ ಮೇಲೆ ಕುಳಿತುಕೊಂಡು ಮಗುವಿಗೆ ಹಾಲುಣಿಸುತ್ತಲೇ ಪರೀಕ್ಷೆ ಬರೆಯೋದನ್ನ ಮುಂದುವರೆಸಿದ್ರು ಎಂದು ಹೇಳಿದ್ದಾರೆ.

    ಇಫಾರ್ನ್, ಮಡಿಲಲ್ಲಿ ಮಗುವನ್ನ ಮಲಗಿಸಿಕೊಂಡು ಪರೀಕ್ಷೆ ಬರೆಯುತ್ತಿದ್ದ ಮಹಿಳೆಯ ಫೋಟೋ ತೆಗೆದಿದ್ದು, ಅದನ್ನ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದರು. ನಂತರ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಸಾವಿರಾರು ಬಾರಿ ಶೇರ್ ಆಗಿದೆ.

    ಮಹಿಳೆಯ ಫೋಟೋ ಹಾಗೂ ಅದು ನೀಡುತ್ತಿರುವ ಸಂದೇಶವನ್ನ ಸಾಮಾಜಿಕ ಜಾಲತಾಣದಲ್ಲಿ ಜನ ಮೆಚ್ಚಿದ್ದಾರೆ. ಅಫ್ಘಾನ್ ಮಹಿಳೆಯರನ್ನು ತಡೆಯಲು ಸಾಧ್ಯವಿಲ್ಲ ಎಂಬ ಟ್ವೀಟ್ ಕೂಡ ವೈರಲ್ ಆಗಿದೆ. ಇನ್ನೂ ಕೆಲವರು ಜಹಾನ್ ಅವರನ್ನು ಸ್ಫೂರ್ತಿದಾಯಕ ಮಹಿಳೆ ಎಂದು ಕರೆದಿದ್ದಾರೆ.

    ಮೂರು ಮಕ್ಕಳ ತಾಯಿಯಾಗಿರುವ ಜಹಾನ್ ಪರೀಕ್ಷೆಗಾಗಿ 6 ಗಂಟೆಗಳ ಕಾಲ ಪ್ರಯಾಣ ಮಾಡಿ ನಿಲ್ಲಿ ನಗರವನ್ನು ತಲುಪಿದ್ದರು. ಜಹಾನ್ ಬರೆದ ಪ್ರವೇಶಾತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರಾದ್ರೂ ಫೀಸ್ ಭರಿಸುವ ಶಕ್ತಿ ಇಲ್ಲ ಎಂದು ಚಿಂತೆಯಲ್ಲಿದ್ದಾರೆ. ರೈತರೊಬ್ಬರನ್ನ ಮದುವೆಯಾಗಿರೋ ಜಹಾನ್ ತನ್ನ ವಿದ್ಯಾಭ್ಯಾಸ ಮುಂದುವರಿಸಬೇಕೆಂಬ ಇಚ್ಛೆ ಹೊಂದಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

    ದಿ ಅಫ್ಘಾನ್ ಯೂತ್ ಅಸೋಸಿಯೇಷನ್ ಎಂಬ ಬ್ರಿಟಿಷ್ ಸಂಸ್ಥೆ ಜಹಾನ್ ಅವರ ವಿದ್ಯಾಭ್ಯಾಸಕ್ಕಾಗಿ ಹಣಸಹಾಯ ಮಾಡುವಂತೆ ಅಭಿಯಾನ ಶುರು ಮಾಡಿದೆ.

    https://www.facebook.com/yahia.erfan/posts/1456479687797039

  • ಅಫ್ಘಾನ್ ವಿರುದ್ಧ ದಾಳಿ ನಡೆಸಲು ಕತ್ತೆ ಬಾಂಬ್ ಬಳಸಿದ ಉಗ್ರರು

    ಅಫ್ಘಾನ್ ವಿರುದ್ಧ ದಾಳಿ ನಡೆಸಲು ಕತ್ತೆ ಬಾಂಬ್ ಬಳಸಿದ ಉಗ್ರರು

    ಕಾಬೂಲ್: ಇದುವರೆಗೆ ಮಾನವ ಬಾಂಬ್, ಕಾರ್ ಬಾಂಬ್ ಬಳಸಿ ದಾಳಿ ನಡೆಸುತ್ತಿದ್ದ ಉಗ್ರರು ಪ್ರಸ್ತುತ ಕತ್ತೆ ಬಾಂಬ್ ಬಳಕೆ ಮಾಡಲು ಆರಂಭಿಸಿದ್ದಾರೆ.

    ಅಫ್ಘಾನಿಸ್ತಾನ ಕುನಾರ್ ಪ್ರದೇಶದಲ್ಲಿ ತಲಿಬಾನ್ ಉಗ್ರರು ಈ ಹೊಸ ಕತ್ತೆ ಬಾಂಬ್ ಬಳಿಸಿದ್ದು, ಈ ದಾಳಿಯಲ್ಲಿ ಇಬ್ಬರು ರಕ್ಷಣಾ ಪಡೆಯ ಯೋಧರು ಗಾಯಗೊಂಡಿದ್ದಾರೆ.

    ಕತ್ತೆಗೆ ಭಾರೀ ಪ್ರಮಾಣದ ಸ್ಫೋಟಕಗಳನ್ನು ತುಂಬಿ ರಕ್ಷಣಾ ಪಡೆ ವಾಹನ ಚಲಿಸುವ ದಾರಿ ಅಡ್ಡವಾಗಿ ಕಳುಹಿಸಿ ನಂತರ ಅವುಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ಸ್ಫೋಟಿಸಿದ ವಿಚಾರ ಈಗ ಬೆಳಕಿಗೆ ಬಂದಿದೆ.

    ಕಡಿಮೆ ಮೊತ್ತಕ್ಕೆ ಖರೀದಿ ಮಾಡಿದ ಕತ್ತೆಗಳನ್ನು ಕೃತ್ಯಕ್ಕೆ ಬಳಕೆ ಮಾಡಲಾಗಿದೆ. ಕಡಿಮೆ ಹಣಕ್ಕೆ ಖರೀದಿ ಮಾಡಿ ಈ ಕೃತ್ಯಕ್ಕೆ ಬಳಕೆ ಮಾಡಲಾಗುತ್ತಿದೆ. ಈ ತಂತ್ರವನ್ನು ಇಸ್ರೇಲ್ ನಲ್ಲಿ ಈಗಾಗಲೇ ಉಗ್ರರು ಬಳಕೆ ಮಾಡಿ ರಕ್ಷಣಾ ಪಡೆಯ ವಿರುದ್ಧ ದಾಳಿ ನಡೆಸಿದ್ದರು.

    ಇದೇ ಮೊದಲಲ್ಲ: ಅಫ್ಘಾನಿಸ್ತಾನದಲ್ಲಿ ಉಗ್ರರು ಈ ರೀತಿ ಕತ್ತೆಗಳನ್ನು ಬಳಕೆ ಮಾಡುತ್ತಿರುವುದು ಇದೇ ಮೊದಲ್ಲ. ಈ ಹಿಂದೆ 2009 ಮತ್ತು 2014 ರಲ್ಲಿ ಕತ್ತೆಗಳನ್ನು ಬಳಸಿ ದಾಳಿ ನಡೆಸಲು ಯತ್ನಿಸಿದ್ದರು. ಆದರೆ ಈ ವೇಳೆ ರಕ್ಷಣಾ ಪಡೆಯತ್ತ ಬರುತ್ತಿದ್ದ ಕತ್ತೆಗಳನ್ನು ಶೂಟ್ ಮಾಡಿ ಸಾಯಿಸುವ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿತ್ತು.

  • ಅಂಡರ್-19 ವಿಶ್ವಕಪ್ ಫೈನಲ್ ಗೆ ಆಸ್ಟ್ರೇಲಿಯಾ

    ಅಂಡರ್-19 ವಿಶ್ವಕಪ್ ಫೈನಲ್ ಗೆ ಆಸ್ಟ್ರೇಲಿಯಾ

    ಕ್ರೈಸ್ಟ್ ಚರ್ಚ್ : ಪ್ರಬಲ ಅಫ್ಘಾನಿಸ್ತಾನದ ಸವಾಲನ್ನು ದಿಟ್ಟವಾಗಿ ಮೆಟ್ಟಿನಿಂತ ಆಸ್ಟ್ರೇಲಿಯಾ ತಂಡ ಅಂಡರ್-19 ವಿಶ್ವಕಪ್ ಟೂರ್ನಿಯ ಫೈನಲ್‍ಗೆ ಲಗ್ಗೆ ಇಟ್ಟಿದೆ. ಹೇಗ್ಲಿ ಓವಲ್ ಮೈದಾನದಲ್ಲಿ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನಿರಾಯಾಸವಾಗಿ ಅಫ್ಘನ್ನರನ್ನು ಮಣಿಸಿ ಪ್ರಶಸ್ತಿ ಪಂದ್ಯಕ್ಕೆ ಮುನ್ನಡೆದಿದೆ.

    ಟಾಸ್ ಗೆದ್ದು ಬ್ಯಾಟಿಂಗ್‍ಗೆ ಇಳಿದ ನವೀಮ್ ಉಲ್ ಹಖ್ ನೇತ್ರತ್ವದ ಅಫ್ಘಾನಿಸ್ತಾನ ಆಸೀಸ್ ಬಿಗು ಬೌಲಿಂಗ್ ದಾಳಿ ಎದುರು ಪೆವಿಲಿಯನ್ ಪರೇಡ್ ನಡೆಸಿತು. 7 ಮಂದಿ ಬ್ಯಾಟ್ಸ್‍ಮನ್ ಗಳು ಎರಡಂಕಿಯ ಮೊತ್ತವನ್ನೂ ದಾಟಲಾಗದೆ ಪೆವಿಲಿಯನ್ ಸೇರಿದರು.

    ನಾಯಕ ನವೀಮ್ ಕೊಡುಗೆ ಕೇವಲ 8 ರನ್. ಆದರೆ ಒಂದು ಕಡೆ ಬ್ಯಾಟ್ಸ್‍ಮನ್ ಗಳು ಕ್ರೀಸ್ ಗೆ ಬಂದಷ್ಟೇ ವೇಗದಲ್ಲಿ ಮರಳುತ್ತಿದ್ದರೂ ಮತ್ತೊಂದು ಕಡೆಯಲ್ಲಿ ಬಂಡೆಯಂತೆ ನಿಂತ ವಿಕೆಟ್ ಕೀಪರ್ ಇಕ್ರಾಮ್ ಅಲಿ ಆಸ್ಟ್ರೇಲಿಯಾ ಬೌಲರ್‍ಗಳ ಬೆವರಿಳಿಸಿದರು. 119 ಎಸೆತಗಳನ್ನು ಎದುರಿಸಿದ ಅಲಿ, 8 ಬೌಂಡರಿಗಳ ನೆರವಿನೊಂದಿಗೆ 80 ರನ್ ಗಳಿಸಿ ಅಫ್ಘಾನಿಸ್ತಾನದ ಮಾನ ಕಾಪಾಡಿದರು.

    ಮೂರನೇ ಕ್ರಮಾಂಕದಲ್ಲಿ ಕ್ರೀಸ್ ಗೆ ಇಳಿದ ಅಲಿ, ಧೃತಿಗೆಡದೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ತಂಡದ ಮೊತ್ತ 150ರ ಗಡಿ ದಾಟಿಸಿದರು. ಅಲಿ ವಿಕೆಟ್ ಪತನವಾಗುತ್ತಲೇ ಆಸೀಸ್ ಹಾದಿ ಸುಗಮವಾಯಿತು. ಅಂತಿಮವಾಗಿ 48 ಓವರ್‍ಗಳಲ್ಲಿ ಅಫ್ಘಾನಿಸ್ತಾನ 181 ರನ್‍ಗಳಿಗೆ ಆಲೌಟ್ ಆಯಿತು.

    ಆಸ್ಟ್ರೇಲಿಯಾ ಪರ ಬಿಗು ಬೌಲಿಂಗ್ ದಾಳಿ ಸಂಘಟಿಸಿದ ಜೊನಾಥನ್ ಮರ್ಲೋ 10 ಓವರ್‍ಗಳಲ್ಲಿ ಕೇವಲ 24ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು. ಇದರಲ್ಲಿ 2 ಓವರ್ ಮೇಡನ್ ಆಗಿತ್ತು. ಉಳಿದಂತೆ ಕಾಕ್ ಇವಾನ್ಸ್ 2 ಹಾಗೂ ನಾಲ್ಬರು ಬೌಲರ್‍ಗಳು ತಲಾ 1 ವಿಕೆಟ್ ಪಡೆದರು.

    ಸುಲಭ ಗುರಿಯನ್ನು ಬೆನ್ನಟ್ಟುವ ವೇಳೆ ಆಸ್ಟ್ರೇಲಿಯಾ ಯಾವುದೇ ಹಂತದಲ್ಲೂ ಆಕ್ರಮಣಕಾರಿ ಆಟಕ್ಕೆ ಮುಂದಾಗಲಿಲ್ಲ. ಇನ್ನಿಂಗ್ಸ್ ಆರಂಭಿಸಿದ ಜಾಕ್ ಎಡ್ವರ್ಡ್ 65 ಎಸೆತಗಳ ಮುಂದೆ 8 ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಗಳ ನೆರವಿನೊಂದಿಗೆ 72 ರನ್ ಗಳಿಸಿ ಖೈಸ್ ಅಹ್ಮದ್ ಗೆ ವಿಕೆಟ್ ಒಪ್ಪಿಸಿದರು. ನಾಯಕ ಜೇಸನ್ ಸಂಘ 26 ರನ್‍ಗಳಿಗೆ ವಾಪಸ್ಸಾದರು. ಬೌಲಿಂಗ್ ನಲ್ಲಿ ಮಿಂಚಿದ್ದ ಮೆರ್ಲೋ 17 ರನ್ ಗಳಿಸಿದರು. ಆದರೆ 5ನೇ ವಿಕೆಟ್ ಗೆ ಜೊತೆಯಾದ ಪರಂ ಉಪ್ಪಳ ಹಾಗೂ ಮೆಕ್’ಸ್ವೀನಿ ತಂಡಕ್ಕೆ ಹೆಚ್ಚಿನ ಹಾನಿಯಾಗದಂತೆ ಎಚ್ಚರಿಕೆಯಿಂದ ಬ್ಯಾಟಿಂಗ್ ನಡೆಸಿ 53 ರನ್‍ಗಳ ಜೊತೆಯಾಟದ ಮೂಲಕ ತಂಡವನ್ನು ಜಯದ ಗಡಿ ದಾಟಿಸಿದರು.

    ಉಪ್ಪಳ್ 32 ರನ್ ಗಳಿಸಿದರೆ, ಮೆಕ್’ಸ್ವೀನಿ 22 ರನ್‍ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ 37.3 ಓವರ್‍ಗಳಲ್ಲಿ 4 ವಿಕೆಟ್ ನಷ್ಟದಲ್ಲಿ ಗೆಲುವಿನ ಗುರಿ ತಲುಪಿದ ಆಸ್ಟ್ರೇಲಿಯಾ, ಶನಿವಾರದಂದು ನಡೆಯುವ ಫೈನಲ್’ಗೆ ಟಿಕೆಟ್ ಪಡೆಯಿತು. ನಾಳೆ ನಡೆಯಲಿರುವ ಮತ್ತೊಂದು ಸೆಮಿಫೈನಲ್ ನಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.