Tag: afghanistan

  • ಐಪಿಎಲ್‍ನಲ್ಲಿ ಮಿಂಚಿದ ರಶೀದ್ ಖಾನ್‍ಗೆ ಮೊದಲ ಮಣೆ ಹಾಕಿದ ಇಂಗ್ಲೆಂಡ್

    ಐಪಿಎಲ್‍ನಲ್ಲಿ ಮಿಂಚಿದ ರಶೀದ್ ಖಾನ್‍ಗೆ ಮೊದಲ ಮಣೆ ಹಾಕಿದ ಇಂಗ್ಲೆಂಡ್

    – ಇನ್ನೂ ಖರೀದಿಯಾಗಿಲ್ಲ ಗೇಲ್, ಮಾಲಿಂಗ, ಬ್ರಾವೋ

    ಲಂಡನ್: ಅಫ್ಘಾನಿಸ್ತಾನದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಮುಂದಿನ ವರ್ಷ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ‘ದಿ ಹಂಡ್ರೆಡ್’ ಟೂರ್ನಿಯ ಹರಾಜಿನಲ್ಲಿ ಮಾರಾಟವಾದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

    ದಿ ಹಂಡ್ರೆಡ್ ಟೂರ್ನಿಯಲ್ಲಿ ಒಟ್ಟು ಎಂಟು ತಂಡಗಳು ಭಾಗವಹಿಸಲಿವೆ. 21 ವರ್ಷದ ರಶೀದ್ ಖಾನ್ ಅಂತರಾಷ್ಟ್ರೀಯ ಟಿ-20 ಪಂದ್ಯಗಳಲ್ಲಿ 81 ವಿಕೆಟ್ ಪಡೆದಿದ್ದಾರೆ. ಅವರನ್ನು ಟ್ರೆಂಟ್ ರಾಕೆಟ್ಸ್ ಭಾನುವಾರ ಖರೀದಿಸಿದೆ. ಈ ಮೂಲಕ ರಶೀದ್ ಅವರೊಂದಿಗೆ ಇಂಗ್ಲೆಂಡ್ ಟೆಸ್ಟ್ ನಾಯಕ ಜೋ ರೂಟ್ ಆಡಲಿದ್ದಾರೆ.

    ಮತ್ತೊಂದೆಡೆ ಯಾವುದೇ ತಂಡಗಳು ಟಿ-20ಯ ಸ್ಟಾರ್ ಆಟಗಾರರಾದ ಕ್ರಿಸ್ ಗೇಲ್, ಲಸಿತ್ ಮಾಲಿಂಗ, ಡ್ವೇನ್ ಬ್ರಾವೋ, ಕಿರೋನ್ ಪೋಲಾರ್ಡ್, ಕಗಿಸೊ ರಬಾಡಾ ಅವರನ್ನು ಖರೀದಿಸಲು ಮುಂದಾಗಲಿಲ್ಲ. ಈ ಬೆಳವಣಿಗೆ ಭಾರೀ ಅಚ್ಚರಿಕೆ ಮೂಡಿಸಿದೆ.

    ವೆಸ್ಟ್ ಇಂಡೀಸ್‍ನ ಆಲ್‍ರೌಂಡರ್ ಆಂಡ್ರೆ ರಸ್ಸೆಲ್ ಅವರನ್ನು ನಾರ್ದರ್ನ್ ಬ್ರೇವ್ಸ್ ಮತ್ತು ಆಸ್ಟ್ರೇಲಿಯಾದ ಸೀಮಿತ ಓವರ್ ಗಳ ನಾಯಕ ಆರನ್ ಫಿಂಚ್ ಅವರನ್ನು ಉತ್ತರ ಸೂಪರ್ ಚಾರ್ಜರ್ಸ್ ಖರೀದಿಸಿದೆ. ಸೂಪರ್ ಚಾರ್ಜರ್ ಅಫ್ಘಾನಿಸ್ತಾನದ ಮುಜೀಬ್ ಉರ್ ರೆಹಮಾನ್‍ರನ್ನು ತಂಡಕ್ಕೆ ಸೇರಿಸಿಕೊಂಡಿದೆ. ವೇಲ್ಸ್ ಫೈರ್ ತಂಡವು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮತ್ತು ಮಿಚೆಲ್ ಸ್ಟಾರ್ಕ್ ಅವರಿಗೆ ಮಣೆ ಹಾಕಿದೆ.

    ಹರಾಜಿನಲ್ಲಿ ಒಟ್ಟು 570 ಆಟಗಾರರಿದ್ದಾರೆ:
    ಭಾನುವಾರ ಒಟ್ಟು 570 ಆಟಗಾರರು ಪ್ಲೇಯರ್ ಹರಾಜಿಗೆ ಸೇರಿಕೊಂಡಿದ್ದರು. ಅವರಲ್ಲಿ 239 ವಿದೇಶಿ ಮತ್ತು 331 ದೇಶೀಯ ಆಟಗಾರರಿದ್ದರು. ಮೊದಲ ಸುತ್ತಿನಲ್ಲಿ ಒಟ್ಟು 96 ಆಟಗಾರರನ್ನು ಖರೀದಿಸಲಾಗಿದೆ. ‘ದಿ ಹಂಡ್ರೆಡ್’ ಮಾದರಿಯನ್ನು ಮುಂದಿನ ವರ್ಷ ಜುಲೈನಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಇಂಗ್ಲೆಂಡ್ ಏಕದಿನ ತಂಡದ ಅನೇಕ ಆಟಗಾರರು ಎಂಟು ತಂಡಗಳನ್ನು ಸ್ಥಳೀಯ ಐಕಾನ್‍ಗಳಾಗಿ ಸೇರಿಕೊಂಡಿದ್ದಾರೆ.

  • ಅಫ್ಘಾನ್ Vs ಜಿಂಬಾಬ್ವೆ ಟಿ20- 7 ಎಸೆತಗಳಲ್ಲಿ 7 ಸಿಕ್ಸರ್ : ವಿಡಿಯೋ ವೈರಲ್

    ಅಫ್ಘಾನ್ Vs ಜಿಂಬಾಬ್ವೆ ಟಿ20- 7 ಎಸೆತಗಳಲ್ಲಿ 7 ಸಿಕ್ಸರ್ : ವಿಡಿಯೋ ವೈರಲ್

    ಢಾಕಾ: ಅಫ್ಘಾನಿಸ್ತಾನದ ಬ್ಯಾಟ್ಸ್‌ಮನ್‌ಗಳು ಏಳು ಎಸೆತಗಳಲ್ಲಿ ಏಳು ಸಿಕ್ಸರ್ ಸಿಡಿಸಿ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

    ಜಿಂಬಾಬ್ವೆ, ಬಾಂಗ್ಲಾದೇಶ ಹಾಗೂ ಅಫ್ಘಾನಿಸ್ತಾನ ನಡುವಣ ತ್ರಿಕೋನ ಟ್ವೆಂಟಿ-20 ಸರಣಿಯ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲಾ ಜಾದ್ರನ್ ಈ ಸಾಧನೆಯನ್ನು ಮಾಡಿದ್ದಾರೆ. ಅವರ ಸ್ಫೋಟಕ ಬ್ಯಾಟಿಂಗ್ ಸಹಾಯದಿಂದ ಅಫ್ಘಾನಿಸ್ತಾನ ತಂಡವು 28 ರನ್ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದೆ.

    ಅಫ್ಘಾನಿಸ್ತಾನ ಇನ್ನಿಂಗ್ಸ್ ನ 17 ಹಾಗೂ 18ನೇ ಓವರ್‍ನಲ್ಲಿ ಮೊಹಮ್ಮದ್ ನಬಿ ಹಾಗೂ ನಜಿಬುಲ್ಲಾ ಜಾದ್ರನ್ ಒಟ್ಟು ಏಳು ಸಿಕ್ಸರ್ ಸಿಡಿಸಿದ್ದಾರೆ. 16 ಓವರ್ ಗಳಲ್ಲಿ ಅಫ್ಘಾನಿಸ್ತಾನ ನಾಲ್ಕು ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿತ್ತು. ತೆಂದೈ ಚತಾರಾ ಅವರ 18ನೇ ಓವರ್ ನ ಮೊದಲೆರಡು ಎಸೆತಗಳಲ್ಲಿ ನಬಿ, ಜಾದ್ರನ್ ಜೋಡಿ ಸಿಂಗಲ್ ಕಲೆ ಹಾಕಿತು. ಆ ಬಳಿಕ ಸ್ಫೋಟಕ ಬ್ಯಾಟಿಂಗ್ ಆರಂಭಿಸಿದ ನಬಿ 17ನೇ ಓವರಿನ ಕೊನೆಯ ನಾಲ್ಕು ಎಸೆತಗಳನ್ನು ಸಿಕ್ಸರ್ ಬಾರಿಸಿದರು.

    ಮೊಹಮ್ಮದ್ ನಬಿಗೆ ಕೈಜೋಡಿಸಿದ ಜಾದ್ರನ್ 18ನೇ ಓವರ್‍ನ ಮೊದಲ ಮೂರು ಎಸೆತಗಳನ್ನು ಸಿಕ್ಸರ್ ಸಿಡಿಸಿದರು. ಈ ಪಂದ್ಯದಲ್ಲಿ ಆಲ್ ರೌಂಡರ್ ನಬಿ ಹಾಗೂ ಜಾದ್ರನ್ ಜೋಡಿಯ 69 ರನ್‍ಗಳ ಸಹಾಯದಿಂದ ಅಫ್ಘಾನಿಸ್ತಾನ ತಂಡವು ಐದು ವಿಕೆಟ್ ನಷ್ಟಕ್ಕೆ 197 ರನ್‍ಗಳ ಬೃಹತ್ ಮೊತ್ತ ದಾಖಲಿಸಿತು.

    ಆಲ್ ರೌಂಡರ್ ಮೊಹಮ್ಮದ್ ನಬಿ 18 ಎಸೆತಗಳಲ್ಲಿ 4 ಸಿಕ್ಸರ್ ಸೇರಿ 38 ರನ್ ಗಳಿಸಿದರೆ, ನಜಿಬುಲ್ಲಾ ಜಾದ್ರನ್ 30 ಎಸೆತಗಳನ್ನು ಎದುರಿಸಿ 5 ಬೌಂಡರಿ, 6 ಸಿಕ್ಸರ್ ಸಹಿತ 69 ರನ್‍ಗಳನ್ನು ಕಲೆಹಾಕಿದರು.

    ಬೃಹತ್ ಮೊತ್ತವನ್ನು ಪೇರಿಸಲು ಮುಂದಾದ ಜಿಂಬಾಬ್ವೆ ಬ್ಯಾಟ್ಸ್‍ಮನ್‍ಗಳನ್ನು ಅಫ್ಘಾನಿಸ್ತಾನದ ಬೌಲರ್ ಗಳು ಕಟ್ಟಿಹಾಕಿದರು. ಜಿಂಬಾಬ್ವೆ ಟೀಂ ನಾಯಕ ಬಿಆರ್‍ಎಂ ಟೈಲರ್ 16 ಎಸೆತಗಳಲ್ಲಿ 2 ಸಿಕ್ಸರ್, 3 ಬೌಂಡರಿ ಸೇರಿ 27 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ನಂತರದಲ್ಲಿ ಬಂದ ಬ್ಯಾಟ್ಸ್‍ಮನ್ ಗಳು ಒಬ್ಬರ ಹಿಂದೆ ಮತ್ತೊಬ್ಬರಂತೆ ಪೆವಿಲಿಯನ್‍ಗೆ ತೆರಳಿದರು. ಈ ಮಧ್ಯೆ ತಂಡಕ್ಕೆ ನೆರವಾದ ಆರ್.ಡಬ್ಲ್ಯೂ. ಚಕಬ್ವಾ 22 ಎಸೆತಗಳಲ್ಲಿ 42 ರನ್ ಸಿಡಿಸಿ ಸೋಲಿನ ಅಂತರವನ್ನು ಕಡಿಮೆ ಮಾಡಿದರು. ಈ ಮೂಲಕ ಜಿಂಬಾಬ್ವೆ ತಂಡವು ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ದಾಖಲಿಸಿ ಸೋಲು ಒಪ್ಪಿಕೊಂಡಿತು.

    ಅಫ್ಘಾನಿಸ್ತಾನ ಬೌಲರ್ ರಶೀದ್ ಖಾನ್ 4 ಓವರ್ ಬೌಲಿಂಗ್ ಮಾಡಿ ಕೇವಲ 29 ರನ್ ನೀಡಿ 2 ವಿಕೆಟ್ ಪಡೆದು ಮಿಂಚಿದರು. ನಜಿಬುಲ್ಲಾ ಜಾದ್ರನ್ ಪಂದ್ಯ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.

    https://youtu.be/Mk93mhF9xPo

  • ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದ ರಶೀದ್ ಖಾನ್

    ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲೆ ಬರೆದ ರಶೀದ್ ಖಾನ್

    ಢಾಕಾ: ಅಫ್ಘಾನಿಸ್ತಾನದ ಬೌಲರ್ ರಶೀದ್ ಖಾನ್ ತಂಡದ ನಾಯಕರಾಗಿ ಆಯ್ಕೆಯಾಗುವ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡದ ನಾಯಕತ್ವ ವಹಿಸಿಕೊಂಡ ಕಿರಿಯ ಆಟಗಾರ ಎಂಬ ದಾಖಲೆ ಬರೆದಿದ್ದಾರೆ.

    ಅಫ್ಘಾನ್ ತಂಡದ ಲೆಗ್ ಸ್ಪಿನ್ನರ್ ಆಗಿರುವ ರಶೀದ್ ಖಾನ್ ಬಾಂಗ್ಲಾದೇಶದ ವಿರುದ್ಧ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಬಾಂಗ್ಲಾದ ಚಿತ್ತಗಾಂಗ್ ನಲ್ಲಿರುವ ಝಹೂರ್ ಚೌಧರಿ ಕ್ರೀಡಾಂಗಣದಲ್ಲಿ ಟೆಸ್ಟ್ ಪಂದ್ಯ ನಡೆಯುತ್ತಿದೆ. 15 ವರ್ಷಗಳ ಹಿಂದೆ ಜಿಂಬಾಬ್ವೆ ತಂಡದ ತಟೇಂಡಾ ತೈಬು ನಿರ್ಮಿಸಿದ್ದ ದಾಖಲೆಯನ್ನು ರಶೀದ್ ಮುರಿದಿದ್ದಾರೆ.

    ತೈಬು ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡ ಸಂದರ್ಭದಲ್ಲಿ ಅವರಿಗೆ 20 ವರ್ಷ 358 ದಿನ ವಯಸ್ಸಾಗಿತ್ತು. ಈಗ ರಶೀದ್ ಖಾನ್ ಅವರಿಗೆ 20 ವರ್ಷ 350 ದಿನ ವಯಸ್ಸಾಗಿದೆ. ರಶೀದ್ ಖಾನ್ ತೈಬುಗಿಂತ 7 ದಿನಗಳ ಕಿಡಿಯ ನಾಯಕರಾಗಿ ದಾಖಲೆ ಬರೆದಿದ್ದಾರೆ.

    ಕಿರಿಯ ಟೆಸ್ಟ್ ನಾಯಕರ ಆಟಗಾರರ ಪಟ್ಟಿಯಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಮನ್ಸೂರ್ ಅಲಿ ಖಾನ್ ಪಟೌಡಿ 2ನೇ ಸ್ಥಾನದಲ್ಲಿದ್ದಾರೆ. ಭಾರತದ ಪರ ಪಟೌಡಿ ತಮ್ಮ 21 ವರ್ಷ 77 ದಿನ ವಯಸ್ಸಿನಲ್ಲಿ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು. ಉಳಿದಂತೆ ಪಾಕ್‍ನ ಯೂನಿಸ್ ಖಾನ್ 3ನೇ ಸ್ಥಾನದಲ್ಲಿದ್ದಾರೆ. 22 ವರ್ಷ 82 ದಿನ ವಯಸ್ಸಿನಲ್ಲಿ ಯೂನಿಸ್ ಟೆಸ್ಟ್ ತಂಡದ ನಾಯಕತ್ವ ವಹಿಸಿಕೊಂಡಿದ್ದರು.

  • ಅಫ್ಘಾನಿಸ್ತಾನದ ವಿವಾಹದಲ್ಲಿ ಆತ್ಮಾಹುತಿ ಬಾಂಬ್ – 63 ಸಾವು, 182 ಮಂದಿಗೆ ಗಾಯ

    ಅಫ್ಘಾನಿಸ್ತಾನದ ವಿವಾಹದಲ್ಲಿ ಆತ್ಮಾಹುತಿ ಬಾಂಬ್ – 63 ಸಾವು, 182 ಮಂದಿಗೆ ಗಾಯ

    ಕಾಬೂಲ್: ಅಫ್ಘಾನಿಸ್ತಾನದ ವಿವಾಹ ಮಂಟಪವೊಂದರಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, 63 ಮಂದಿ ಸಾವನ್ನಪ್ಪಿ ಸುಮಾರು 182 ಜನರು ಗಾಯಗೊಂಡಿದ್ದಾರೆ.

    ಈ ಘಟನೆ ಶನಿವಾರ ರಾತ್ರಿ ಅಫ್ಘಾನ್ ರಾಜಧಾನಿ ಕಾಬೂಲ್‍ನಲ್ಲಿ ನಡೆದಿದ್ದು, ತುಂಬಾ ಜನ ಸೇರಿದ್ದ ವಿವಾಹವೊಂದರ ಆರತಕ್ಷತೆಯ ಸಮಯದಲ್ಲಿ ಈ ಆತ್ಮಾಹುತಿ ಬಾಂಬ್ ದಾಳಿ ನಡೆದಿದೆ. ಈ ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರಸಂಘಟನೆ ನಿರಾಕರಿಸಿದ್ದು, ಇದುವರಿಗೂ ಈ ದಾಳಿಯ ಹೊಣೆಯನ್ನು ಯಾವ ಉಗ್ರ ಸಂಘಟನೆಯು ಹೊತ್ತುಕೊಂಡಿಲ್ಲ.

    ಹತ್ತು ದಿನಗಳ ಹಿಂದೆ, ಪಶ್ಚಿಮ ಕಾಬೂಲ್‍ನಲ್ಲಿ ಅಫ್ಘಾನಿಸ್ತಾನದ ಭದ್ರತಾ ಪಡೆಗಳನ್ನು ಗುರಿಯಾಗಿಸಿಕೊಂಡು ತಾಲಿಬಾನ್ ಉಗ್ರಸಂಘಟನೆ ನಡೆಸಿದ ಕಾರು ಬಾಂಬ್ ದಾಳಿಯಲ್ಲಿ 14 ಮಂದಿ ಸಾವನ್ನಪ್ಪಿ, 145 ಮಂದಿ ಗಾಯಗೊಂಡಿದ್ದರು.

    ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾದ ಚಿತ್ರಗಳಲ್ಲಿ ವಿವಾಹ ಮಂಟಪದಲ್ಲಿ ಉರುಳಿಬಿದ್ದ ಟೇಬಲ್ ಮತ್ತು ಕುರ್ಚಿಗಳ ನಡುವೆ ಬಾಂಬ್ ಸ್ಫೋಟದ ತೀವ್ರತೆ ಛಿದ್ರವಾಗಿರುವ ಮೃತದೇಹಗಳು ಕಂಡು ಬಂದಿವೆ. ಈ ಅತ್ಮಾಹುತಿ ಬಾಂಬ್ ದಾಳಿಯನ್ನು ಪುರುಷ ವ್ಯಕ್ತಿಯೊಬ್ಬ ಮಾಡಿದ್ದಾನೆ ಎಂದು ಕಾಬೂಲ್‍ನ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ತಾಲಿಬಾನ್ ಮತ್ತು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಲೆವಂಟ್ ಉಗ್ರಸಂಘಟನೆಗಳು ಸೇರಿದಂತೆ ಸುನ್ನಿ ಮುಸ್ಲಿಂ ಸಮುದಾಯದ ಸಶಸ್ತ್ರ ಗುಂಪುಗಳು ಹಲವಾರು ವರ್ಷಗಳಿಂದ ಅಫ್ಘಾನಿಸ್ತಾನ ಮತ್ತು ನೆರೆಯ ಪಾಕಿಸ್ತಾನದಲ್ಲಿರುವ ಶಿಯಾ ಹಜಾರಾ ಅಲ್ಪಸಂಖ್ಯಾತರ ಮೇಲೆ ಪದೇ ಪದೇ ಈ ರೀತಿಯ ದಾಳಿ ನಡೆಸುತ್ತಿವೆ.

    ಈ ದಾಳಿಯ ರೀತಿಯಲ್ಲೇ ಪಾಕಿಸ್ತಾನದ ಮಸೀದಿಯ ಮೇಲೆ ಕಳೆದ ಶುಕ್ರವಾರ ನಡೆದ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಾಯಕ ಹೈಬತುಲ್ಲಾ ಅಖುಂಡ್ಜಾಡಾನ ಸಹೋದರ ಸಾವನ್ನಪ್ಪಿದ್ದ. ಅವನ ಜೊತೆಗೆ ನಾಲ್ಕು ಜನರು ಸಾವನ್ನಪ್ಪಿದ್ದರು ಮತ್ತು ಸುಮಾರು 20 ಮಂದಿ ಗಾಯಗೊಂಡಿದ್ದರು. ಆದರೆ ಈ ಸ್ಫೋಟದ ಜವಾಬ್ದಾರಿಯನ್ನು ಕೂಡ ಯಾವ ಉಗ್ರ ಸಂಘಟನೆಯು ವಹಿಸಿಕೊಂಡಿಲ್ಲ.

    https://twitter.com/MuslimShirzad/status/1162804228353662976

  • ಅಫ್ಘಾನ್‍ನಲ್ಲಿ ತ್ರಿವಳಿ ಬಾಂಬ್ ಸ್ಫೋಟ- 12 ಸಾವು, 21ಕ್ಕೂ ಹೆಚ್ಚು ಮಂದಿಗೆ ಗಾಯ

    ಅಫ್ಘಾನ್‍ನಲ್ಲಿ ತ್ರಿವಳಿ ಬಾಂಬ್ ಸ್ಫೋಟ- 12 ಸಾವು, 21ಕ್ಕೂ ಹೆಚ್ಚು ಮಂದಿಗೆ ಗಾಯ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದ್ದು, ಕಾಬೂಲ್‍ನಲ್ಲಿ ಇಂದು ತ್ರಿವಳಿ ಬಾಂಬ್ ಸ್ಫೋಟಗೊಂಡ ಪರಿಣಾಮ 12 ಮಂದಿ ಸಾವನ್ನಪ್ಪಿದ್ದು, 21 ಮಂದಿ ಗಾಯಗೊಂಡಿದ್ದಾರೆ.

    ಸರ್ಕಾರಿ ನೌಕರರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಮೊದಲ ಬಾಂಬ್ ಸ್ಫೋಟ ಸಂಭವಿಸಿದೆ. ಈ ವೇಳೆ ಗಣಿ ಮತ್ತು ಪೆಟ್ರೋಲಿಯಂ ಸಚಿವಾಲಯದ 5 ಸಿಬ್ಬಂದಿ ಸಾವನ್ನಪ್ಪಿದ್ದು, 10 ಮಂದಿ ಗಾಯಗೊಂಡಿದ್ದಾರೆ. ಹಾಗೆಯೇ ಎರಡನೇ ಬಾಂಬ್ ಸ್ಫೋಟದಲ್ಲಿ 7 ಮಂದಿ ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

    ಮೊದಲು ಮಿನಿಬಸ್‍ಗೆ ಅಂಟಿಸಲಾದ ಮ್ಯಾಗ್ನೆಟಿಕ್ ಬಾಂಬ್ ಸ್ಫೋಟಗೊಂಡಿದೆ. ನಂತರ ಸ್ಥಳಕ್ಕೆ ಬಂದ ಆತ್ಮಾಹುತಿ ಬಾಂಬ್ ದಾಳಿಕೋರನಿಂದ ಎರಡನೇ ಬಾಂಬ್ ಸ್ಫೋಟಗೊಂಡಿದೆ. ಬಳಿಕ ಅಪರಿಚಿತ ಉಗ್ರರು ಕಾರನ್ನು ಸ್ಫೋಟಿಸಿದಾಗ ಮೂರನೇ ಸ್ಫೋಟ ಸಂಭವಿಸಿದೆ ಎಂದು ಕಾಬೂಲ್‍ನ ಆಂತರಿಕ ಸಚಿವಾಲಯದ ವಕ್ತಾರ ನಸ್ರತ್ ರಹೀಮಿ ಹೇಳಿದ್ದಾರೆ.

    ಈವರೆಗೆ ಸ್ಫೋಟಕ್ಕೆ ಒಟ್ಟು 12 ಮಂದಿ ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಏರುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗುತ್ತಿದೆ.

    ಈ ಮೂರು ದಾಳಿಗಳಲ್ಲಿ ಒಂದರ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿದೆ. ವಿದೇಶಿ ಪಡೆಗಳ ಮೇಲೆ ನಾವು ದಾಳಿ ನಡೆಸಲು ಬಾಂಬ್ ಸ್ಫೋಟಿಸಿದ್ದೇವೆ. ಉಳಿದ ಎರಡು ದಾಳಿಗೂ ನಮಗೂ ಸಂಬಂಧವಿಲ್ಲ ಎಂದು ತಾಲಿಬಾನ್ ತಿಳಿಸಿರುವುದಾಗಿ ಅಫ್ಘಾನ್ ಅಧ್ಯಕ್ಷರ ವಕ್ತಾರ ಸೇದಿಕ್ ಸಿದ್ದೀಕಿ ಟ್ವೀಟ್ ಮಾಡಿದ್ದಾರೆ. ಹಾಗೆಯೇ ಅಮಾಯಕರ ಸಾವಿಗೆ ಸಂತಾಪ ಸೂಚಿಸಿದ್ದಾರೆ.

    ಈ ದಾಳಿಯು ಕಾಬೂಲ್ ಹಾಗೂ ಅಫ್ಘಾನಿಸ್ತಾನದಲ್ಲಿ ಇರುವ ಉದ್ವಿಗ್ನ ಪರಿಸ್ಥಿತಿಯನ್ನು ಹೆಚ್ಚು ಮಾಡುವಂತಿದೆ. ತಾಲಿಬಾನ್ ಜೊತೆ ಅಮೆರಿಕ ಶಾಂತಿ ಒಪ್ಪಂದ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ. ಆದ್ರೆ ಉಗ್ರರು ಬಾಂಬ್ ದಾಳಿಗಳನ್ನು ಮಾಡಿ ಈ ಸಮರವನ್ನು ಉಲ್ಭಣಗೊಳಿಸುತ್ತಿದ್ದಾರೆ.

  • ತಾಲಿಬಾನ್ ಉಗ್ರರ ನೆಲೆ ಮೇಲೆ ಅಫ್ಘಾನಿಸ್ತಾನ ಏರ್ ಸ್ಟ್ರೈಕ್

    ತಾಲಿಬಾನ್ ಉಗ್ರರ ನೆಲೆ ಮೇಲೆ ಅಫ್ಘಾನಿಸ್ತಾನ ಏರ್ ಸ್ಟ್ರೈಕ್

    – 28 ಉಗ್ರರ ಬಲಿ

    ಕಾಬೂಲ್: ಅಫ್ಘಾನಿಸ್ತಾನದ ಫರಿಯಾಬ್ ಪ್ರ್ಯಾಂತದಲ್ಲಿರುವ ತಾಲಿಬಾನ್ ಉಗ್ರರ ನೆಲೆಯ ಮೇಲೆ ಅಫ್ಘಾನ ವಾಯುಸೇನೆ ಏರ್ ಸ್ಟ್ರೈಕ್ ನಡೆಸಿದೆ. ಈ ದಾಳಿಯಲ್ಲಿ 28 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

    ಅಫ್ಘಾನ್ ವಾಯುಸೇನೆಯ ಎ-29 ಯುದ್ಧ ವಿಮಾನ ಬಿಲೀರಬಗ ಜಿಲ್ಲೆಯ ಫೈರಿಬಿ ಪ್ರಾಂತ್ಯದಲ್ಲಿ ಬೀಡು ಬಿಟ್ಟಿದ್ದ ತಾಲಿಬಾನ್ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡಿತ್ತು. ತಾಲಿಬಾನ್ ಉಗ್ರರು ಅಫ್ಘಾನಿಸ್ತಾನ ಸೇನೆಯನ್ನು ಗುರಿಯಾಗಿಸಿ ದಾಳಿ ನಡೆಸಲು ಸಂಚು ರೂಪಿಸಿದ್ದರು. ಮಾಹಿತಿ ತಿಳಿದ ಸೇನೆ ಉಗ್ರರ ಶಿಬಿರಗಳನ್ನು ಧ್ವಂಸಗೊಳಿಸಿದೆ.

    ಕಳೆದ ಕೆಲ ವರ್ಷಗಳಿಂದ ಅಫ್ಘಾನಿಸ್ತಾನದ ಉತ್ತರ ಕ್ಷೇತ್ರದಲ್ಲಿ ಹಿಂಸಾಚಾರ ಹೆಚ್ಚಾಗಿತ್ತು. ಅಫ್ಘಾನ್ ಸೇನೆಯು ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಉಗ್ರವಾದವನ್ನು ಸಂಪೂರ್ಣ ಹತೋಟಿಗೆ ತರುವಲ್ಲಿ ಯಶಸ್ವಿಯಾಗಿದ್ದರಿಂದ ಉಗ್ರರು ಉತ್ತರ ಭಾಗದಲ್ಲಿ ಕಾಣಿಸಿಕೊಂಡಿದ್ದರು. ಏರ್ ಸ್ಟ್ರೈಕ್ ಬಳಿಕ ತಾಲಿಬಾನ್ ಯಾವುದೇ ರೀತಿಯ ಪ್ರತಿಕ್ರಿಯೆಯನ್ನು ನೀಡಿಲ್ಲ.

    ಶನಿವಾರ ನಡೆದ ಮಿಸೈಲ್ ದಾಳಿಯಲ್ಲಿ 24 ತಾಲಿಬಾನ್ ಉಗ್ರರು ಸಾವನ್ನಪ್ಪಿದ್ದರೆ, 17 ಮಂದಿ ಗಾಯಗೊಂಡಿದ್ದರು ಎಂದು ಅಫ್ಘಾನಿಸ್ತಾನ ಸೇನೆ ತಿಳಿಸಿತ್ತು.

  • ಏರ್ ಸ್ಟ್ರೈಕ್ ನಂತರ ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಉಗ್ರರು

    ಏರ್ ಸ್ಟ್ರೈಕ್ ನಂತರ ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಉಗ್ರರು

    ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ಮೇಲೆ ಭಾರತೀಯ ವಾಯು ಸೇನೆ ದಾಳಿ ನಡೆಸಿ, ತರಬೇತಿ ಕೇಂದ್ರಗಳನ್ನು ಧ್ವಂಸಗೊಳಿಸಿದ ನಂತರ ಜೈಷ್-ಎ-ಮೊಹಮ್ಮದ್(ಜೆಇಎಂ) ಹಾಗೂ ಲಷ್ಕರ್-ಎ-ತೈಯ್ಬಾ(ಎಲ್‍ಇಟಿ) ಸಂಘಟನೆಯ ಉಗ್ರರು ಅಫ್ಘಾನಿಸ್ಥಾನದಲ್ಲಿ ತರಬೇತಿ ಪಡೆಯುತ್ತಿರುವ ಕುರಿತು ಗುಪ್ತಚರ ದಳ ಮಾಹಿತಿ ನೀಡಿದೆ.

    ಅಫ್ಘಾನಿಸ್ಥಾನದಲ್ಲಿ ಉಗ್ರರು ತರಬೇತಿ ಪಡೆಯುತ್ತಿದ್ದಾರೆ ಎಂದು ಮಾಹಿತಿ ತಿಳಿದ ಬೆನ್ನಲ್ಲೇ ಭಾರತದ ಡಿಪ್ಲೊಮ್ಯಾಟಿಕ್ ಮಿಶನ್ಸ್ ಮತ್ತು ಕಾಬೂಲ್, ಕಂದಾಹರ್ ಪ್ರದೇಶದ ಸುತ್ತಮುತ್ತ ಹೈ ಅಲರ್ಟ್ ಘೋಷಿಸಲಾಗಿದೆ. ಜೈಷ್ ಹಾಗೂ ಎಲ್‍ಇಟಿ ಸಂಘಟನೆಯ ಉಗ್ರರು ಅಫ್ಘಾನಿಸ್ಥಾನದ ಕುನಾರ್, ನಂಗರ್‍ಹಾರ್, ನುರಿಸ್ಥಾನ್ ಹಾಗೂ ಕಂದಹಾರ್ ಪ್ರದೇಶದಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

    ಫೆ.14ರಂದು ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಬೆಂಗಾವಲು ವಾಹನದ ಮೇಲೆ ಜೈಷ್ ಸಂಘಟನೆಯ ಉಗ್ರನೊಬ್ಬ ಸ್ಫೋಟಕಗಳನ್ನು ತುಂಬಿದ್ದ ಮಾರುತಿ ಇಕೋ ಕಾರನ್ನು ಗುದ್ದಿಸಿ ದಾಳಿ ನಡೆಸಿದ್ದ. ಇದಕ್ಕೆ ಪ್ರತಿಯಾಗಿ ಭಾರತೀಯ ವಾಯು ಸೇನೆ ಮಿರಾಜ್ ಜೆಟ್‍ಗಳ ಮೂಲಕ ಬಾಲಾಕೋಟ್‍ನಲ್ಲಿದ್ದ ಜೈಷ್ ಉಗ್ರರ ಅಡಗುತಾಣಗಳ ಮೇಲೆ ಏರ್ ಸ್ಟ್ರೈಕ್ ಮಾಡಿತ್ತು.

    ಇದೀಗ ಜೈಷ್ ಹಾಗೂ ಎಲ್‍ಇಟಿ ಉಗ್ರ ಸಂಘಟನೆಗಳು ಅಫ್ಘಾನಿಸ್ಥಾನದ ತಾಲಿಬಾನ್ ಹಾಗೂ ಅಫ್ಘಾನ್ ಇನ್ಸರ್ಜೆಂಟ್ ಗ್ರೂಪ್, ಹಕ್ಕಾನಿ ನೆಟ್‍ವರ್ಕ್‍ನೊಂದಿಗೆ ಕೈ ಜೋಡಿಸಿವೆ. ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನ ಬೇರ್ಪಡಿಸುವ ಡುರಾಂಡ್ ರೇಖೆಯಾದ್ಯಂತ ಉಗ್ರರಿಗೆ ವಿಧ್ವಂಸಕ ಕೃತ್ಯಗಳನ್ನು ನಡೆಸುವ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಗುಪ್ತಚರ ದಳ ತಿಳಿಸಿದೆ.

    ಜುಲೈ 1, 2ರಂದು ಎಲ್‍ಇಟಿಯ 15 ನಾಯಕರು ಹಾಗೂ ಅವರಿಗೆ ಹಣದ ನೆರವು ನೀಡುವ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯನ್ನು ಭಾರತ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ.

    ಉಗ್ರರಿಗೆ ಹಣಕಾಸು ನೀಡುವ ಹಾಗೂ ಅಕ್ರಮ ಹಣ ವರ್ಗಾವಣೆ ಮಾಡುತ್ತಿರುವ ಜಾಲ ಹತ್ತಿಕ್ಕಿ, ಅಕ್ಟೋಬರ್ ಒಳಗಾಗಿ ಅವರ ವಿರುದ್ಧ ನಿರ್ದಿಷ್ಟ ಕ್ರಮ ಕೈಗೊಳ್ಳದೇ ಇದ್ದಲ್ಲಿ ಪಾಕಿಸ್ತಾನವನ್ನು ಕಪ್ಪು ಪಟ್ಟಿಗೆ ಸೇರಿಸಲಾಗುತ್ತದೆ ಎಂದು ಫೈನಾನ್ಶಿಯಲ್ ಆಕ್ಷನ್ ಟಾಸ್ಕ್ ಫ್ಲೋರ್ಸ್(ಎಫ್‍ಎಟಿಎಫ್) ಈಗಾಗಲೇ ಎಚ್ಚರಿಕೆ ನೀಡಿದೆ. ಇದನ್ನೂ ಓದಿ:  ಆರ್ಥಿಕವಾಗಿ ಕುಸಿದಿರುವ ಪಾಕಿಗೆ ಎಫ್‍ಎಟಿಎಫ್‍ನಿಂದ ಕೊನೆಯ ಎಚ್ಚರಿಕೆ

    ಫ್ಲೋರಿಡಾ ಒರ್ಲಾಂಡೋದಲ್ಲಿ ನಡೆದ ಉಗ್ರರ ಹಣಕಾಸು ವ್ಯವಸ್ಥೆಯ ಮೇಲಿನ ಕಣ್ಗಾವಲು ಸಂಸ್ಥೆಯಾದ ಹಣಕಾಸು ಕ್ರಮ ಕ್ರಿಯಾ ಪಡೆಯ (ಎಫ್‍ಎಟಿಎಫ್) ವಾರ್ಷಿಕ ಮಹಾಸಭೆಯಲ್ಲಿ ಉಗ್ರರನ್ನು ಹತ್ತಿಕ್ಕುವಲ್ಲಿ ಪಾಕಿಸ್ತಾನದ ವೈಫಲ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಲಾಗಿತ್ತು. ಸದ್ಯ ಈಗ ಎಫ್‍ಎಟಿಎಫ್ ಅಲ್ಲಿ ಪಾಕಿಸ್ತಾನ ಬೂದು ಬಣ್ಣದ ಪಟ್ಟಿಯಲ್ಲಿದೆ. ಆದರೆ ಉಗ್ರರಿಗೆ ಹಣ ನೀಡಿ ಸಹಾಯ ಮಾಡುತ್ತಿರುವ ಜಾಲದ ವಿರುದ್ಧ ಅಕ್ಟೋಬರ್ ಒಳಗೆ ಕ್ರಮ ಕೈಗೊಳ್ಳಲು ಪಾಕಿಸ್ಥಾನ ವಿಫಲವಾದರೆ ಎಫ್‍ಎಟಿಎಫ್‍ನ ಕಪ್ಪು ಪಟ್ಟೆಗೆ ಪಾಕ್ ಸೇರಲಿದೆ.

    ಈ ಹಿಂದೆ ಉಗ್ರರ ದಮನದ ಕ್ರಿಯಾ ಯೋಜನೆ ಸಿದ್ಧಪಡಿಸಿ ಕ್ರಮ ಕೈಗೊಳ್ಳಲು ಜನವರಿಯವರೆಗೂ ಪಾಕ್‍ಗೆ ಗಡುವು ನೀಡಲಾಗಿತ್ತು. ಆದರೆ ಅದನ್ನು ಪೂರೈಸುವಲ್ಲಿ ಪಾಕ್ ವಿಫಲವಾಗಿತ್ತು. ಅಷ್ಟೇ ಅಲ್ಲ, ಮೇ 2019ರೊಳಗೆ ಉಗ್ರರ ವಿರುದ್ಧ ಕ್ರಮ ತೆಗೆದುಕೊಳ್ಳಿ ಎಂದು ಗಡುವು ನೀಡಿತ್ತು. ಆದರೆ ಈ ಅವಕಾಶವನ್ನು ಕೂಡ ಉಪಯೋಗಿಸಿಕೊಳ್ಳುವಲ್ಲಿ ಪಾಕ್ ವಿಫಲವಾಗಿತ್ತು.

  • 27 ವರ್ಷ ಹಿಂದಿನ ಸಚಿನ್ ದಾಖಲೆ ಮುರಿದ ಅಫ್ಘಾನ್ ಆಟಗಾರ

    27 ವರ್ಷ ಹಿಂದಿನ ಸಚಿನ್ ದಾಖಲೆ ಮುರಿದ ಅಫ್ಘಾನ್ ಆಟಗಾರ

    ಲಂಡನ್: ವೆಸ್ಟ್ ಇಂಡೀಸ್ ವಿರುದ್ಧ ಪಂದ್ಯದಲ್ಲಿ ಅಫ್ಘಾನ್ ಕ್ರಿಕೆಟ್ ತಂಡ ಕಳೆದ ಪಂದ್ಯವನ್ನು ಸೋಲುಂಡರೂ ಪಂದ್ಯದಲ್ಲಿ ತಂಡದ ಆಟಗಾರ ಇಕ್ರಾಮ್ ಅಲಿ ಖಿಲ್ ಸಚಿನ್ ದಾಖಲೆಯನ್ನು ಮುರಿದಿದ್ದಾರೆ.

    1992 ರಲ್ಲಿ ಸಚಿನ್ ತಮ್ಮ 18 ವಯಸ್ಸಿನಲ್ಲಿ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಜಿಂಬಾಬ್ವೆ ವಿರುದ್ಧ 84 ರನ್ ಸಿಡಿಸಿ ದಾಖಲೆ ಬರೆದಿದದ್ದರು. 27 ವರ್ಷಗಳ ಬಳಿಕ ಈ ದಾಖಲೆಯನ್ನು ಮುರಿದಿರುವ ಅಫ್ಘಾನ್ ವಿಕೆಟ್ ಕೀಪರ್ ಖಿಲ್ 92 ಎಸೆತಗಳಲ್ಲಿ 86 ರನ್ ಸಿಡಿಸಿದ್ದಾರೆ.

    18 ವರ್ಷ 318 ದಿನದಲ್ಲಿ ಸಚಿನ್ 84 ರನ್ ಸಿಡಿಸಿದ್ದರೆ, 18 ವರ್ಷ 278 ದಿನದಲ್ಲಿ ಅಲಿ ಖಿನ್ ಈ ಸಾಧನೆ ಮಾಡಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಬಹು ದೊಡ್ಡ ದಾಖಲೆಯನ್ನು ಬರೆದಿದ್ದಾರೆ. ಅಫ್ಘಾನ್ ಆಟಗಾರ ಮೊಹಮ್ಮದ್ ಷೆಹಜಾದ್ ಗಾಯದ ಸಮಸ್ಯೆಯಿಂದ ಪಂದ್ಯಕ್ಕೆ ಅಲಭ್ಯರಾಗಿದ್ದ ಪರಿಣಾಮ ಖಿಲ್ ತಂಡದಲ್ಲಿ ಸ್ಥಾನ ಪಡೆದಿದ್ದರು.

    ಪಂದ್ಯದ ಬಳಿಕ ಐಸಿಸಿ ಸಂದರ್ಶನದಲ್ಲಿ ಮಾತನಾಡಿದ ಖಿಲ್, ಸಚಿನ್ ಅವರ ದಾಖಲೆಯನ್ನು ಮುರಿದಿರುವುದಕ್ಕೆ ನನಗೆ ಹಿಮ್ಮೆ ಎನಿಸಿಸುತ್ತಿದೆ. ಇದು ನನ್ನ ಸಂತಸವನ್ನು ಹೆಚ್ಚಿಸಿದೆ ಎಂದಿದ್ದಾರೆ. ಉಳಿದಂತೆ ಅಫ್ಘಾನಿಸ್ತಾನ ತಂಡ ವೆಸ್ಟ್ ವಿರುದ್ಧ ಸೋಲುವುದರೊಂದಿಗೆ ತನ್ನ ವಿಶ್ವಕಪ್ ಅಭಿಯಾನವನ್ನು ಕೊನೆಗೊಳಿಸಿದ್ದು, ಆಡಿದ 9 ಪಂದ್ಯಗಳನ್ನು ತಂಡ ಸೋತಿದೆ. ಆದರೆ ಟೂರ್ನಿಯಲ್ಲಿ ಅಘ್ಘಾನ್ ತಂಡ ಬಲಿಷ್ಠ ತಂಡಗಳಿಗೆ ಕಠಿಣ ಪೈಪೋಟಿ ನೀಡಿತ್ತು.

  • ಬಲೂಚಿಸ್ತಾನ ಪರ ಘೋಷಣೆ- ಕ್ರೀಡಾಂಗಣದಲ್ಲೇ ಬಡಿದಾಡಿಕೊಂಡ ಪಾಕ್, ಅಫ್ಘಾನ್ ಅಭಿಮಾನಿಗಳು

    ಬಲೂಚಿಸ್ತಾನ ಪರ ಘೋಷಣೆ- ಕ್ರೀಡಾಂಗಣದಲ್ಲೇ ಬಡಿದಾಡಿಕೊಂಡ ಪಾಕ್, ಅಫ್ಘಾನ್ ಅಭಿಮಾನಿಗಳು

    ಲಂಡನ್: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಹೊಡೆದಾಡಿಕೊಂಡಿರುವ ಘಟನೆ ನಿನ್ನೆ ಲೀಡ್ಸ್ ಪಂದ್ಯದ ವೇಳೆ ನಡೆದಿದೆ. ಪಂದ್ಯದಲ್ಲಿ ಪಾಕಿಸ್ತಾನ ರೋಚಕ ಗೆಲುವು ಪಡೆದರೂ ಇತ್ತಂಡದ ಅಭಿಮಾನಿಗಳು ಬಡಿದಾಡಿಕೊಂಡ ಘಟನೆ ಸಾಕಷ್ಟು ಸದ್ದು ಮಾಡುತ್ತಿದೆ.

    ಪಾಕ್ -ಅಫ್ಘಾನ್ ನಡುವಿನ ಪಂದ್ಯದ ಹಿನ್ನೆಲೆಯಲ್ಲಿ ಎರಡು ದೇಶದ ಅಭಿಮಾನಿಗಳು ಕ್ರೀಡಾಂಗಣದ ಬಳಿ ನೆರೆದಿದ್ದರು. ಈ ವೇಳೆ ಮೈದಾನದ ಮೇಲೆ ಹಾರಾಡ್ತಿದ್ದ ವಿಮಾನವೊಂದು ಪಾಕಿಸ್ತಾನದ ಭಾಗವಾಗಿರುವ ಬಲೂಚಿಸ್ತಾನಕ್ಕೆ ನ್ಯಾಯ ಸಿಗಲಿ ಎಂಬ ಘೋಷಣೆ ಇರುವ ಬ್ಯಾನರ್ ರನ್ನ ಪ್ರದರ್ಶಿಸಿತ್ತು. ಈ ವೇಳೆ ಮೈದಾನದ ಹೊರಗಿದ್ದ ಎರಡೂ ತಂಡಗಳ ಅಭಿಮಾನಿಗಳು ಕಿತ್ತಾಡಿಕೊಂಡಿದ್ದಾರೆ.

    https://twitter.com/SultanShah1/status/1144930955557085184

    ಅಭಿಮಾನಿಗಳು ಕಿತ್ತಾಡಿಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪಂದ್ಯದ ಮೊದಲ ಅವಧಿ ಮಾತ್ರವಲ್ಲದೇ 2ನೇ ಅವಧಿಯಲ್ಲೂ ಇತ್ತಂಡದ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ವಿಡಿಯೋದಲ್ಲಿ ಅಫ್ಘಾನಿಸ್ತಾನ ಅಭಿಮಾನಿ ಪಾಕ್ ಅಭಿಮಾನಿಗೆ ಹಿಗ್ಗಾಮುಗ್ಗಾ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ.

    https://twitter.com/anussaeed1/status/1144923425707843595

    ಇತ್ತ ಲೀಡ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡ ಅಫ್ಘಾನಿಸ್ತಾನ ವಿರುದ್ಧ ಮೂರು ವಿಕೆಟ್‍ಗಳ ರೋಚಕ ಜಯ ಗಳಿಸಿತ್ತು. ಮೊದಲು ಬ್ಯಾಟ್ ಮಾಡಿದ ಅಫ್ಘನ್ನರು 9 ವಿಕೆಟ್ ನಷ್ಟಕ್ಕೆ 227 ರನ್‍ಗಳನ್ನ ಗಳಿಸಿದ್ದರು. ರಹಮತ್ ಶಾ 35, ಅಸ್ಗರ್ ಅಫ್ಘನ್ 42, ನಬೀವುಲ್ಲಾ 42 ರನ್ ಗಳಿಸಿದ್ದರು. ಸುಲಭ ಗುರಿ ಬೆನ್ನತ್ತಿದ್ದ ಪಾಕಿಸ್ತಾನ 2 ಎಸೆತ ಬಾಕಿ ಇರುವಂತೆ 7 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ಇಮಾಮ್ ಉಲ್ ಹಕ್ 36, ಬಾಬರ್ ಅಜಂ 45, ಇಮಾದ್ ವಾಸೀಂ 49 ರನ್ ಗಳಿಸಿದರು. ಈ ಜಯದೊಂದಿಗೆ ಟೂರ್ನಿಯಲ್ಲಿ ಸೆಮಿಫೈನಲ್‍ಗೇರುವ ಪಾಕಿಸ್ತಾನದ ಆಸೆ ಜೀವಂತವಾಗಿ ಉಳಿದಿದೆ. ವಿಶ್ವಕಪ್ ಅಂಕಪಟ್ಟಿಯಲ್ಲಿ 8 ಪಂದ್ಯಗಳಿಂದ 9 ಅಂಕಗಳನ್ನು ಗಳಿಸಿರುವ ತಂಡ 4ನೇ ಸ್ಥಾನ ಪಡೆದಿದೆ.

     

  • ಅಂಪೈರ್‌ಗೆ ಕೈ ಮುಗಿದ ಕೊಹ್ಲಿಗೆ ಭಾರೀ ದಂಡ

    ಅಂಪೈರ್‌ಗೆ ಕೈ ಮುಗಿದ ಕೊಹ್ಲಿಗೆ ಭಾರೀ ದಂಡ

    ಸೌತಾಂಪ್ಟನ್: ಅಫಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾ 11 ರನ್ ಅಂತರದ ರೋಚಕ ಗೆಲುವು ದಾಖಲಿಸಿದೆ. ಆದರೆ ಈ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಆಕ್ರೋಶದಲ್ಲಿ ಅಂಪೈರ್‍ಗೆ ಕೈ ಮುಗಿದು ಅಶಿಸ್ತು ತೋರಿದ್ದಕ್ಕೆ ಭಾರೀ ದಂಡ ತೆತ್ತಿದ್ದಾರೆ.

    ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಹೆಚ್ಚು ಆಕ್ರಮಣಕಾರಿಯಾಗಿ ಕಾಣಿಸಿಕೊಂಡಿದ್ದರು ಮತ್ತು ಅಂಪೈರ್ ಜೊತೆ ವಾಗ್ವಾದ ಮಾಡಿದ್ದರು. ಅದ್ದರಿಂದ ಐಸಿಸಿ ನೀತಿ ಸಂಹಿತೆಯ ಉಲ್ಲಂಘನೆ ಮಾಡಿದ್ದಕ್ಕೆ ಪಂದ್ಯದ ಶೇ.25 ರಷ್ಟು ದಂಡ ವಿಧಿಸಲಾಗಿದೆ.

    ಪಂದ್ಯದ ಎರಡನೇ ಇನ್ನಿಂಗ್ಸ್ ನ ಅರಂಭದಲ್ಲಿ ಮೊಹಮ್ಮದ್ ಶಮಿ ಅಫ್ಘಾನ್ ಆರಂಭಿಕ ಆಟಗಾರ ಹಜರತುಲ್ಲಾ ಜಜೈ ವಿರುದ್ಧ ಎಲ್‍ಬಿ ಮನವಿಯನ್ನು ಅಂಪೈರ್ ಪುರಸ್ಕರಿಸಿರಲಿಲ್ಲ. ಈ ಸಮಯದಲ್ಲಿ ಕೊಹ್ಲಿ ಡಿಆರ್‍ಎಸ್ ನೆರವಿನಿಂದ ಮೇಲ್ಮನವಿ ಸಲ್ಲಿಸಿದ್ದರು. ರಿಪ್ಲೈ ವೇಳೆ ಬಾಲ್ ಲೆಗ್ ಸ್ಟಂಪ್‍ನಿಂದ ಹೊರಗೆ ಇದ್ದ ಕಾರಣ ಔಟ್ ನೀಡಲಿಲ್ಲ. ಪಂದ್ಯದ ಅರಂಭಿಕ ಹಂತದಲ್ಲೇ ಡಿಆರ್‍ಎಸ್‍ನನ್ನು ಕಳೆದುಕೊಂಡ ಕೊಹ್ಲಿ ಅಂಪೈರ್ ಜೊತೆ ಆಕ್ರಮಣಕಾರಿಯಾಗಿ ವರ್ತಿಸಿದ್ದರು.

    ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿ ಅವರ ಉತ್ತಮ ಬೌಲಿಂಗ್ ಪ್ರದರ್ಶನದಿಂದ ಭಾರತ 11 ರನ್ ಗಳಿಂದ ಈ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡಿತ್ತು. ಈ ಮೂಲಕ 2019ರ ವಿಶ್ವಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ನಾಲ್ಕನೇ ಜಯ ಸಾಧಿಸಿದೆ. ಟಾಸ್ ಗೆದ್ದ ಭಾರತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 224 ರನ್ ಗಳಿಸಿತ್ತು. 225 ರನ್ ಗಳ ಗುರಿಯನ್ನು ಪಡೆದ ಅಫ್ಘಾನಿಸ್ತಾನ 49.5 ಓವರ್ ಗಳಲ್ಲಿ 213 ರನ್ ಗಳಿಗೆ ಆಲೌಟ್ ಆಗಿ ಸೋಲನ್ನು ಒಪ್ಪಿಕೊಂಡಿತ್ತು.

    https://twitter.com/DoctorrSays/status/1142436031058178049

    ಕೊನೆಯ ಓವರ್ ನಲ್ಲಿ ಅಫ್ಘಾನಿಸ್ತಾನಕ್ಕೆ ಗೆಲ್ಲಲು 16 ರನ್ ಬೇಕಿತ್ತು. ಈ ಓವರ್ ನಲ್ಲಿ ಶಮಿ ಹ್ಯಾಟ್ರಿಕ್ ಸಾಧನೆ ಮಾಡಿದರು. ಈ ಮೂಲಕ ಈ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧನೆಗೈದ ಮೊದಲ ಬೌಲರ್ ಎನಿಸಿಕೊಂಡರು. 46ನೇ ಓವರ್ ನಲ್ಲಿ ಬುಮ್ರಾ 7 ರನ್ ನೀಡಿದರೆ, 49 ನೇ ಓವರ್ ನಲ್ಲಿ 5 ರನ್ ನೀಡಿ ರನ್ ವೇಗಕ್ಕೆ ಕಡಿವಾಣ ಹಾಕಿದರು. ಅಂತಿಮವಾಗಿ 10 ಓವರ್ ಎಸೆದ ಬುಮ್ರಾ 1 ಮೇಡನ್ ಓವರ್ 39 ರನ್ ನೀಡಿ 2 ವಿಕೆಟ್ ಪಡೆದು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.