Tag: afghanistan

  • ಅಫ್ಘಾನಿಸ್ತಾನ ಭೂಕಂಪ – ಸಾವಿನ ಸಂಖ್ಯೆ 800ಕ್ಕೆ ಏರಿಕೆ: 2000ಕ್ಕೂ ಹೆಚ್ಚು ಜನರಿಗೆ ಗಾಯ

    ಅಫ್ಘಾನಿಸ್ತಾನ ಭೂಕಂಪ – ಸಾವಿನ ಸಂಖ್ಯೆ 800ಕ್ಕೆ ಏರಿಕೆ: 2000ಕ್ಕೂ ಹೆಚ್ಚು ಜನರಿಗೆ ಗಾಯ

    -ಮಾನವೀಯ ದೃಷ್ಟಿಯಿಂದ ಸಹಾಯ ಮಾಡಲು ಸಿದ್ಧ ಎಂದ ಮೋದಿ

    ಕಾಬೂಲ್: ಅಫ್ಘಾನಿಸ್ತಾನದಲ್ಲಿ (Afghanistan) ಸಂಭವಿಸಿದ 6.0 ತೀವ್ರತೆಯ ಪ್ರಬಲ ಭೂಕಂಪದಿಂದಾಗಿ ಈವರೆಗೆ 800 ಮಂದಿ ಬಲಿಯಾಗಿದ್ದು, 2000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

    ಭಾನುವಾರ ಮಧ್ಯರಾತ್ರಿ (ಆ.31) ಜಲಾಲಾಬಾದ್‌ನ ಪೂರ್ವ ಈಶಾನ್ಯಕ್ಕೆ ಸುಮಾರು 27 ಕಿ.ಮೀ ದೂರದಲ್ಲಿ 6.0 ತೀವ್ರತೆಯ ಭೂಕಂಪ ದಾಖಲಾಗಿದೆ. ಪೂರ್ವ ಅಫ್ಘಾನಿಸ್ತಾನದಾದ್ಯಂತ ಮೊದಲು ಭೂಕಂಪ ಸಂಭವಿಸಿದ ನಂತರ 30 ನಿಮಿಷಗಳ ಅವಧಿಯಲ್ಲಿಯೇ ಮತ್ತೆ ಮೂರರಿಂದ ನಾಲ್ಕು ಕಂಪನಗಳು ಸಂಭವಿಸಿವೆ. ಅವುಗಳ ತೀವ್ರತೆ 4 ರಿಂದ 5ರವರೆಗೆ ಇತ್ತು ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

    ಈ ಕುರಿತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ಪ್ರಕಾರ, ಸ್ಥಳೀಯ ಕಾಲಮಾನ ರಾತ್ರಿ 11:47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಆಗ್ನೇಯ ಅಫ್ಘಾನಿಸ್ತಾನದಲ್ಲಿ 160 ಕಿ.ಮೀ ಆಳದಲ್ಲಿ 34.50ಓ ಅಕ್ಷಾಂಶ ಮತ್ತು 70.81ಇ ರೇಖಾಂಶದಲ್ಲಿದೆ ಎಂದು ತಿಳಿಸಿದೆ.

    ಭೂಕಂಪದಿಂದಾಗಿ ಕುನಾರ್ ಪ್ರಾಂತ್ಯದ ಮೂರು ಗ್ರಾಮಗಳು ಸಂಪೂರ್ಣವಾಗಿ ನೆಲಸಮವಾಗಿದ್ದು, ನುರ್ಗಲ್, ಚಾವ್ಕೇ ಮತ್ತು ವಾಟಪುರ್ ಜಿಲ್ಲೆಗಳಲ್ಲಿ ತೀವ್ರ ಹಾನಿಯಾಗಿದೆ. ಜೊತೆಗೆ ಹಲವರು ಮನೆಯ ಛಾವಣಿ ಅಡಿಯಲ್ಲಿಯೇ ಸಿಲುಕಿ ಸಾವನ್ನಪ್ಪಿದ್ದಾರೆ. ಸದ್ಯ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರದೇಶದ ಗಡಿಯಲ್ಲಿ ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿವೆ. ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ದೆಹಲಿಯ ಎನ್‌ಸಿಆರ್ ಮತ್ತು ಇತರ ನಗರಗಳ ನಿವಾಸಿಗಳು ಕಂಪನದ ಅನುಭವವಾಗಿ ಭಯದಿಂದ ಮನೆಯಿಂದ ಹೊರಗೆ ಓಡಿದ್ದಾರೆ ಎಂದು ವರದಿಯಾಗಿದೆ.

    ಇನ್ನೂ ಈ ಸಂಬಂಧ ಪ್ರಧಾನಿ ಮೋದಿ ಅಫ್ಘಾನಿಸ್ತಾನಕ್ಕೆ ಅಗತ್ಯ ನೆರವು ಕೊಡ್ತೇವೆ ಎಂದು ಹೇಳಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸಂಭವಿಸಿದ ಭೂಕಂಪದಿಂದ ಉಂಟಾದ ಜೀವಹಾನಿಯಿಂದ ತೀವ್ರ ದುಃಖಿತನಾಗಿದ್ದೇನೆ. ಇಂತಹ ಸಮಯದಲ್ಲಿ ಮೃತರ ಕುಟುಂಬಸ್ಥರಿಗಾಗಿ ನಾವು ಪಾರ್ಥಿಸುತ್ತೇವೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ. ಮಾನವೀಯ ದೃಷ್ಟಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ಸಹಾಯ ಮಾಡಲು ಸಿದ್ಧವಿದ್ದೇನೆ ಎಂದು ತಿಳಿಸಿದ್ದಾರೆ. ಇದರ ಬೆನ್ನಲ್ಲೇ 15 ಟನ್ ಪರಿಹಾರ ಸಾಮಾಗ್ರಿ ತೆರಳಿದೆ.ಇದನ್ನೂ ಓದಿ: ಭಯೋತ್ಪಾದನೆ ವಿಚಾರದಲ್ಲಿ ಡಬಲ್ ಸ್ಟ್ಯಾಂಡರ್ಡ್‌ ಸರಿಯಲ್ಲ: ಪಾಕ್ ಪ್ರಧಾನಿ ಮುಂದೆಯೇ ಪಹಲ್ಗಾಮ್ ದಾಳಿ ವಿಚಾರ ಪ್ರಸ್ತಾಪಿಸಿದ ಮೋದಿ

     

  • ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

    ಅಫ್ಘಾನಿಸ್ತಾನದಲ್ಲಿ ಪ್ರಬಲ ಭೂಕಂಪ – 622 ಮಂದಿ ಸಾವು, 500ಕ್ಕೂ ಹೆಚ್ಚು ಜನರಿಗೆ ಗಾಯ

    • ಭೂಕಂಪದ ತೀವ್ರತೆಗೆ 3 ಹಳ್ಳಿಗಳು ಸಂಪೂರ್ಣ ನಾಶ

    ಕಾಬುಲ್‌: ಅಫ್ಘಾನಿಸ್ತಾನದಲ್ಲಿ (Afghanistan) ಭಾನುವಾರ ರಾತ್ರಿ (ಆ.31) ಸಂಭವಿಸಿದ 6.0 ತೀವ್ರತೆಯ ಭೂಕಂಪದಲ್ಲಿ (Earthquake) ಕನಿಷ್ಠ 622 ಮಂದಿ ಸಾವನ್ನಪ್ಪಿದ್ದು, 500ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ.

    ಸ್ಥಳೀಯ ಕಾಲಮಾನ ರಾತ್ರಿ 11:47ಕ್ಕೆ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದುವು ಆಗ್ನೇಯ ಅಫ್ಘಾನಿಸ್ತಾನದಲ್ಲಿ 160 ಕಿ.ಮೀ ಆಳ, 34.50N ಅಕ್ಷಾಂಶ ಮತ್ತು 70.81E ರೇಖಾಂಶದಲ್ಲಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ತಿಳಿಸಿದೆ. ಇದನ್ನೂ ಓದಿ: ಸುನಾಮಿ ಎಂದರೇನು? ಭೂಕಂಪಕ್ಕೂ ಇದಕ್ಕೂ ಏನು ಸಂಬಂಧ?

    ಭೂಕಂಪದಿಂದ ಕುನಾರ್ ಪ್ರಾಂತ್ಯದ ಮೂರು ಹಳ್ಳಿಗಳು ಸಂಪೂರ್ಣವಾಗಿ ನೆಲಸಮಗೊಂಡಿವೆ. ಇನ್ನೂ ಹಲವಾರು ಹಳ್ಳಿಗಳಲ್ಲಿ ಭಾರೀ ಹಾನಿ ಸಂಭವಿಸಿದೆ. ಒಂದೇ ಗ್ರಾಮದಲ್ಲಿ 30 ಮಂದಿ ಸಾವಿಗೀಡಾಗಿದ್ದಾರೆ. ಸಾವುನೋವುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಫ್ಘಾನ್ ಆರೋಗ್ಯ ಸಚಿವಾಲಯ ವಕ್ತಾರ ಶರಫತ್ ಜಮಾನ್ ತಿಳಿಸಿದ್ದಾರೆ.

    ತೀವ್ರ ಹಾನಿಗೊಳಗಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿಯವರೆಗೆ ಬೇರೆ ದೇಶಗಳು ರಕ್ಷಣಾ ಅಥವಾ ಪರಿಹಾರ ಕಾರ್ಯಗಳಿಗೆ ಬೆಂಬಲ ನೀಡಲು ಮುಂದೆ ಬಂದಿಲ್ಲ ಎಂದು ಅಫ್ಘಾನಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

    ಪಾಕಿಸ್ತಾನ ಮತ್ತು ಉತ್ತರ ಭಾರತದ ಕೆಲವು ಪ್ರದೇಶಗಳಲ್ಲಿಯೂ ಭೂಕಂಪದ ಅನುಭವವಾಗಿದೆ. ದೆಹಲಿ ಎನ್‌ಸಿಆರ್ ಮತ್ತು ಇತರ ನಗರಗಳ ನಿವಾಸಿಗಳು ಕಂಪನದ ಅನುಭವದಿಂದ ಭಯದಿಂದ ಕಟ್ಟಡಗಳಿಂದ ಹೊರಗೆ ಓಡಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಹಿಮಾಚಲ ಪ್ರದೇಶ | ನಿರಂತರ ಹಿಮಸ್ಫೋಟದ ನಡುವೆಯೂ ಚಂಬಾದಲ್ಲಿ ಎರಡು ಬಾರಿ ಭೂಕಂಪನ

  • ನೀರಿಗಾಗಿ ಹಾಹಾಕಾರ – ಇನ್ನು 5ವರ್ಷ ಮಾತ್ರ ಬಾಕಿ.. ಈ ನಗರದಲ್ಲಿ ನೀರೇ ಇರಲ್ಲ!

    ನೀರಿಗಾಗಿ ಹಾಹಾಕಾರ – ಇನ್ನು 5ವರ್ಷ ಮಾತ್ರ ಬಾಕಿ.. ಈ ನಗರದಲ್ಲಿ ನೀರೇ ಇರಲ್ಲ!

    ಫ್ಘಾನಿಸ್ತಾನದ (Afghanistan) ರಾಜಧಾನಿ ಕಾಬೂಲ್​ನಲ್ಲಿ (Kabul) ನೀರಿನ ತೀವ್ರ ಸಂಕಷ್ಟ ಎಂದುರಾಗಿದೆ. ಕೇವಲ 5 ವರ್ಷಗಳಲ್ಲಿ ಈ ಮಹಾನಗರ ನೀರಿಲ್ಲದೇ (Water) ಒಣಗಿ ಹೋಗುವ ಸಾಧ್ಯತೆ ಇದೆ ಎಂದು ಅಂತಾರಾಷ್ಟ್ರೀಯ ಸಂಸ್ಥೆ ಮರ್ಸಿ ಕಾರ್ಪ್ಸ್ ಎಚ್ಚರಿಕೆಯ ವರದಿಯನ್ನು ನೀಡಿದೆ.

    ನೀರಿನ ಸಮಸ್ಯೆಯಿಂದಾಗಿ ಜನ ತಳ್ಳುವ ಗಾಡಿಗಳಲ್ಲಿ ನೀರು ಸಂಗ್ರಹಿಸಲು ಕಿಲೋ ಮೀಟರ್‌ಗಟ್ಟಲೇ ಅಲೆಯಬೇಕಾಗಿದೆ. ಕಾಬೂಲ್​ನಲ್ಲಿರುವ ತೋಟಗಳು, ಮರಗಳೆಲ್ಲಾ ಒಣಗಿ ಹೋಗುತ್ತಿವೆ. ಈಗಾಗಲೇ ನಗರದ ಅರ್ಧದಷ್ಟು ಬೋರ್‌ವೆಲ್‌ಗಳು ನೀರಿಲ್ಲದೆ ಬತ್ತಿ ಹೋಗಿವೆ. ನೀರಿನ ಕೊರತೆ ಆ ದೇಶಕ್ಕೆ ಮಾರಕವಾಗಿ ಕಾಡುತ್ತಿದೆ.

    ನೀರಿನ ಕೊರತೆ ಉಂಟಾಗಿದ್ದು ಯಾಕೆ? 

    ಅಫ್ಘಾನಿಸ್ಥಾನದಲ್ಲಿ ಹವಾಮಾನ ವೈಪರೀತ್ಯ ಹೆಚ್ಚಾಗಿದೆ. ಅದರ ಜೊತೆಗೆ ಜನ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. 2001ರಲ್ಲಿ ಕಾಬೂಲ್​​ನಲ್ಲಿ 1 ಮಿಲಿಯನ್‌ಗಿಂತಲೂ ಕಡಿಮೆ ಜನರಿದ್ದರು. ಆದರೆ ಆ ಸಂಖ್ಯೆ ಈಗ 7 ಪಟ್ಟು ಹೆಚ್ಚಾಗಿದೆ! ಇದರಿಂದ ನೀರಿನ ಬಳಕೆ ಕೂಡ ಹೆಚ್ಚಾಗಿದೆ. ಇಲ್ಲಿನ ನೀರನ್ನೂ ಪ್ರತಿದಿನದ ದಿನಸಿ ಸಾಮಾನುಗಳಂತೆ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಆ ಮಟ್ಟದಲ್ಲಿ ನೀರಿನ ಬರ ಎದುರಾಗಿದೆ.

    ಕಾಬೂಲ್​ ನಗರದಲ್ಲಿ 80% ಅಂತರ್ಜಲ ಇದೆ. ಆದರೆ​ ಆ ನೀರು  ಕಲುಷಿತಗೊಂಡಿದೆ. ಇಲ್ಲಿ ಹೆಚ್ಚಿನ ಮಟ್ಟದಲ್ಲಿ ಒಳಚರಂಡಿ, ಲವಣಾಂಶ ಮತ್ತು ಆರ್ಸೆನಿಕ್ ಸೇರಿರುವ ನೀರು ಸೇರಿಕೊಂಡಿದೆ. ಇದು ಕುಡಿಯಲು ಹಾಗೂ ಕೃಷಿಗೆ ಬಳಸಲು ಯೋಗ್ಯವಾಗಿಲ್ಲ. ಈಗಾಗಲೇ ಕಾಬೂಲ್​ನ ಜನ ನೀರಿನ ಸಮಸ್ಯೆಯಿಂದ ವಲಸೆ ಹೋಗುತ್ತಿದ್ದಾರೆ. 

    ನೀರಿಗಾಗಿ ಪಂಜ್‌ಶೀರ್ ನದಿ ಪೈಪ್‌ಲೈನ್

    ಪಂಜ್‌ಶೀರ್ ನದಿ ಪೈಪ್‌ಲೈನ್ ಯೋಜನೆ ಮೂಲಕ ಕಾಬೂಲ್‌ಗೆ ನೀರು ತರಲು ಪ್ರಯತ್ನಿಸಲಾಗುತ್ತಿದೆ. ಈ ಯೋಜನೆಯ ಕಾಮಗಾರಿ ಇನ್ನೂ ನಡೆಯುತ್ತಿದೆ. ಈ ಯೋಜನೆ ಪೂರ್ತಿಯಾದರೆ ನಗರದ ಅಂತರ್ಜಲ ಮಟ್ಟ  ಹೆಚ್ಚಾಗುವ ಸಾಧ್ಯತೆ ಕೂಡ ಇದೆ. ಈ ಯೋಜನೆಯ ಪೂರ್ತಿಗೊಳಿಸಲು ಬಜೆಟ್​ ಅನುಮೋದನೆಗಾಗಿ ಕಾಯಲಾಗುತ್ತಿದೆ.

    ಕಾರ್ಪ್ಸ್ ವರದಿಯಲ್ಲಿ ಏನಿದೆ?

    ಕಾಬೂಲ್‌ನಲ್ಲಿ ಪ್ರತೀ ವರ್ಷ ಬಳಸುವ ನೀರಿನ ಪ್ರಮಾಣವು ಪ್ರಕೃತಿಯಿಂದ ಮರುಪೂರಣಗೊಳ್ಳುವುದಕ್ಕಿಂತ 44 ಮಿಲಿಯನ್ ಘನ ಮೀಟರ್ ಹೆಚ್ಚಾಗಿದೆ. ಇದರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದಿದ್ದರೆ, ಕಾಬೂಲ್ ತೀವ್ರ ನೀರಿನ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಕಳೆದ ದಶಕದಲ್ಲಿ, ಕಾಬೂಲ್‌ನ ಅಂತರ್ಜಲ ಮಟ್ಟವು 25 ರಿಂದ 30 ಮೀಟರ್‌ಗಳಷ್ಟು (82 ರಿಂದ 98 ಅಡಿ) ಕುಸಿದಿದೆ. ವರ್ಷಕ್ಕೆ 44 ಮಿಲಿಯನ್ ಘನ ಮೀಟರ್‌ಗಳಷ್ಟು ನೀರನ್ನು ಹೊರತೆಗೆಯುತ್ತಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಇದು ಮುಂದುವರಿದರೆ, 2030 ರ ವೇಳೆಗೆ ಕಾಬೂಲ್‌ನ ಅಂತರ್ಜಲ ಮಟ್ಟ ಮತ್ತಷ್ಟು ಕುಸಿದು ನೀರೇ ಇಲ್ಲದ ನಗರವಾಗುತ್ತದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

    ನೀರಿಲ್ಲದೆ ಕಾಬೂಲ್‌ನ ಜನರು ತಮ್ಮ ಮನೆಗಳನ್ನು ತೊರೆಯಬೇಕಾಗುತ್ತದೆ. ಈಗ ಕ್ರಮ ಕೈಗೊಳ್ಳದಿದ್ದರೆ, ದೇಶಾದ್ಯಂತ ವ್ಯಾಪಕ ವಲಸೆ ಮತ್ತು ಬಿಕ್ಕಟ್ಟು ಉಂಟಾಗುತ್ತದೆ. ಕಾಬೂಲ್‌ನ ಕುಡಿಯುವ ನೀರಿನ ಪ್ರಮುಖ ಮೂಲವಾಗಿದ್ದ ಭೂಗತ ಕೊಳವೆಬಾವಿಗಳಲ್ಲಿ ಅರ್ಧದಷ್ಟು ಈಗಾಗಲೇ ಬತ್ತಿಹೋಗಿವೆ. 2001 ರಿಂದ ಕಾಬೂಲ್‌ನ ಜನಸಂಖ್ಯೆ 7 ಪಟ್ಟು ಹೆಚ್ಚಾಗಿದೆ. ಇದರಿಂದ ನೀರಿನ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಪಂಜ್‌ಶೀರ್ ನದಿಯಿಂದ ನೀರಿನ ಪೈಪ್‌ಲೈನ್ ಯೋಜನೆಯು ಕಾಬೂಲ್‌ನ ಸುಮಾರು 20 ಲಕ್ಷ ಜನರಿಗೆ ನೀರನ್ನು ಒದಗಿಸಬಹುದು. ಆದರೆ ಇದಕ್ಕೆ ಭಾರೀ ಹಣ ಖರ್ಚುಮಾಡಬೇಕಿದೆ.

    ಹಲವು ವರ್ಷಗಳಿಂದ ಮಳೆ ಕೊರತೆ 

    ಕಾಬೂಲ್‌ನಲ್ಲಿ ಕಳೆದ ಕೆಲವು ವರ್ಷಗಳಿಂದ ಮಳೆ ತೀವ್ರವಾಗಿ ಕಡಿಮೆಯಾಗಿದೆ. ಅಂತರ್ಜಲವು ಮುಖ್ಯವಾಗಿ ಹಿಂದೂ ಕುಶ್ ಪರ್ವತಗಳಿಂದ ಬರುವ ಹಿಮ ಕರಗುವಿಕೆ ಮತ್ತು ಹಿಮನದಿಗಳಿಂದ ಮರುಪೂರಣಗೊಳ್ಳುತ್ತದೆ. ಆದರೆ ಅಕ್ಟೋಬರ್ 2023 ರಿಂದ ಜನವರಿ 2024 ರವರೆಗೆ, ಅಫ್ಘಾನಿಸ್ತಾನವು ತನ್ನ ಸಾಮಾನ್ಯ ಚಳಿಗಾಲದ ಮಳೆಯ ಕೇವಲ 45 ರಿಂದ 60% ಮಾತ್ರ ಪಡೆದಿದೆ. ಇದರ ಪರಿಣಾಮವಾಗಿ, ಭವಿಷ್ಯದಲ್ಲಿ ನೀರಿನ ಸಮಸ್ಯೆ ತೀವ್ರಗೊಳ್ಳುವ ಸಾಧ್ಯತೆಯಿದೆ.

    ಈ ಬಿಕ್ಕಟ್ಟಿನ ಪರಿಣಾಮವಾಗಿ, ಕನಿಷ್ಠ 30 ಲಕ್ಷ ಜನರು ತಮ್ಮ ಮನೆಗಳನ್ನು ತೊರೆದು ಸ್ಥಳಾಂತರಗೊಳ್ಳಬೇಕಾಗಬಹುದು. ಯುನಿಸೆಫ್ ನೀಡಿರುವ ಮಾಹಿತಿ ಪ್ರಕಾರ, 50% ಬಾವಿಗಳು ಬತ್ತಿ ಹೋಗಿವೆ. ಇವು ನಗರದ ಹೆಚ್ಚಿನ ಜನರಿಗೆ ಕುಡಿಯುವ ನೀರಿನ ಮೂಲವಾಗಿದ್ದವು. ಈಗ ಜನರು ನೀರಿಗಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.  

  • ಅಫ್ಘಾನಿಸ್ತಾನ ಅಭಿವೃದ್ಧಿಗೆ ನೆರವು ನೀಡಿ: ಎಸ್‌ಸಿಒ ಸಭೆಯಲ್ಲಿ ಜೈಶಂಕರ್‌ ಒತ್ತಾಯ

    ಅಫ್ಘಾನಿಸ್ತಾನ ಅಭಿವೃದ್ಧಿಗೆ ನೆರವು ನೀಡಿ: ಎಸ್‌ಸಿಒ ಸಭೆಯಲ್ಲಿ ಜೈಶಂಕರ್‌ ಒತ್ತಾಯ

    ಬೀಜಿಂಗ್:‌ ಅಫ್ಘಾನಿಸ್ತಾನಕ್ಕೆ (Afghanistan) ಹೆಚ್ಚಿನ ಅಭಿವೃದ್ಧಿ ನೆರವು ನೀಡಲು ಸಹಕರಿಸುವಂತೆ ಎಸ್‌ಸಿಒ (ಶಾಂಘೈ ಸಹಕಾರ ಸಂಸ್ಥೆ) ಸದಸ್ಯ ರಾಷ್ಟ್ರಗಳಿಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್‌ (Jaishankar) ಕರೆ ನೀಡಿದ್ದಾರೆ.

    ಟಿಯಾಂಜಿನ್‌ನಲ್ಲಿ ನಡೆದ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಮಾತನಾಡಿದ ಜೈಶಂಕರ್, ಪ್ರಾದೇಶಿಕ ಶಾಂತಿಗೆ ಭಾರತದ ದೀರ್ಘಕಾಲದ ಬದ್ಧತೆ ಮತ್ತು ಅಫ್ಘಾನ್ ಜನರ ಯೋಗಕ್ಷೇಮವನ್ನು ಪುನರುಚ್ಚರಿಸಿದ್ದಾರೆ. ಇದನ್ನೂ ಓದಿ: ನಗುಮುಖದಲ್ಲಿ ಕ್ಯಾಪ್ಸುಲ್‌ನಿಂದ ಹೊರಬಂದು ಕೈಬೀಸಿದ ಶುಭಾಂಶು ಶುಕ್ಲಾ

    ಇಂದು ಜಗತ್ತು ಬಹು-ಧ್ರುವೀಯತೆಯತ್ತ ಸಾಗುತ್ತಿದೆ. ಇದು ರಾಷ್ಟ್ರೀಯ ಸಾಮರ್ಥ್ಯಗಳ ಪುನರ್ವಿತರಣೆಯ ವಿಷಯದಲ್ಲಿ ಮಾತ್ರವಲ್ಲ, SCO ನಂತಹ ಪರಿಣಾಮಕಾರಿ ಗುಂಪುಗಳ ಹೊರಹೊಮ್ಮುವಿಕೆಯಲ್ಲೂ ಇದೆ. ವಿಶ್ವ ವ್ಯವಹಾರಗಳನ್ನು ರೂಪಿಸುವಲ್ಲಿ ನಮ್ಮ ಕೊಡುಗೆಯ ಸಾಮರ್ಥ್ಯವು ಸ್ವಾಭಾವಿಕವಾಗಿ ನಾವು ಹಂಚಿಕೆಯ ಕಾರ್ಯಸೂಚಿಯಲ್ಲಿ ಎಷ್ಟು ಚೆನ್ನಾಗಿ ಒಟ್ಟಿಗೆ ಬರುತ್ತೇವೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಅಂದರೆ ಎಲ್ಲರನ್ನೂ ಮಂಡಳಿಯಲ್ಲಿ ತೆಗೆದುಕೊಳ್ಳುವುದು ಎಂದು ತಿಳಿಸಿದ್ದಾರೆ.

    2020 ರಲ್ಲಿ ಗಾಲ್ವಾನ್ ಕಣಿವೆ ಘರ್ಷಣೆಯ ನಂತರ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಗಾಗಿ ಜೈಶಂಕರ್ ಚೀನಾಕ್ಕೆ ಅಧಿಕೃತ ಭೇಟಿ ನೀಡಿದ ಸಂದರ್ಭದಲ್ಲಿ ಹೇಳಿಕೆಗಳು ಬಂದಿವೆ. ಸಿಂಗಾಪುರ ಭೇಟಿ ನಂತರ ಜೈಶಂಕರ್‌ ಬೀಜಿಂಗ್‌ಗೆ ಆಗಮಿಸಿದರು. ಇದನ್ನೂ ಓದಿ: ಕೇರಳ ನರ್ಸ್ ನಿಮಿಷಾ ಪ್ರಿಯಾಗೆ ಮರಣದಂಡನೆ ಮುಂದೂಡಿಕೆ

    ಇದಕ್ಕೂ ಮುನ್ನ ಜೈಶಂಕರ್, ಇತರ SCO ವಿದೇಶಾಂಗ ಮಂತ್ರಿಗಳೊಂದಿಗೆ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದರು. ಜೂನ್‌ನಲ್ಲಿ SCO ಸಂಬಂಧಿತ ಕಾರ್ಯಕ್ರಮಗಳಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ (NSA) ಅಜಿತ್ ದೋವಲ್ ಅವರು ಚೀನಾಕ್ಕೆ ಭೇಟಿ ನೀಡಿದ್ದರು.

    ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಕೂಡ ಮುಂದಿನ ತಿಂಗಳು ಭಾರತಕ್ಕೆ ಭೇಟಿ ನೀಡಿ ಎನ್ಎಸ್ಎ ಅಜಿತ್ ದೋವಲ್ ಅವರನ್ನು ಭೇಟಿ ಮಾಡುವ ನಿರೀಕ್ಷೆಯಿದೆ. ಈ ಸಭೆಯು ವಿಶೇಷ ಪ್ರತಿನಿಧಿಗಳ (ಎಸ್ಆರ್) ಸಂವಾದ ಕಾರ್ಯವಿಧಾನದ ಭಾಗವಾಗಿದ್ದು, ಉಭಯ ದೇಶಗಳ ನಡುವಿನ ದೀರ್ಘಕಾಲದ ಗಡಿ ವಿವಾದವನ್ನು ಪರಿಹರಿಸುವ ಗುರಿಯನ್ನು ಹೊಂದಿದೆ.

  • ಅಫ್ಘಾನ್‍ನಿಂದ ಭಾರತಕ್ಕೆ ಸರಕು ಸಾಗಾಟ – ಪಾಕ್‍ನಿಂದ ಅನುಮತಿ

    ಅಫ್ಘಾನ್‍ನಿಂದ ಭಾರತಕ್ಕೆ ಸರಕು ಸಾಗಾಟ – ಪಾಕ್‍ನಿಂದ ಅನುಮತಿ

    ನವದೆಹಲಿ: ಭಾರತಕ್ಕೆ (India) ಸರಕು ಸಾಗಿಸಲು ಅಫ್ಘಾನಿಸ್ತಾನಕ್ಕೆ (Afghanistan) ಪಾಕಿಸ್ತಾನ (Pakistan) ಅನುಮತಿ ನೀಡಿದೆ. ವಾಘಾ – ಅಟ್ಟಾರಿ ಗಡಿಯ (Wagah- Attari Border) ಮೂಲಕ ಸರಕು ಸಾಗಾಟಕ್ಕೆ ಅನುಮತಿ ನೀಡಲಾಗಿದೆ. ಪಾಕಿಸ್ತಾನದ ವಿದೇಶಾಂಗ ಸಚಿವಾಲಯದಿಂದ ಅಫ್ಘಾನಿಸ್ತಾನ ರಾಯಬಾರಿ ಕಚೇರಿಗೆ ಈ ಬಗ್ಗೆ ಪತ್ರ ಬರೆದಿದೆ. 150 ಅಫ್ಘಾನ್ ಟ್ರಕ್‍ಗಳಿಗೆ ವಾಘಾ ಗಡಿಯ ಮೂಲಕ ಭಾರತ ಪ್ರವೇಶಿಸಲು ಅನುಮತಿ ಸಿಕ್ಕಿದೆ.

    ಕಾಶ್ಮೀರದ ಪಹಲ್ಗಾಮ್‍ನಲ್ಲಿ ಉಗ್ರರ ದಾಳಿ ನಡೆದ ಬಳಿಕ ಭಾರತ ಹಾಗೂ ಪಾಕ್ ನಡುವೆ ಉದ್ವಿಗ್ನತೆ ತೀವ್ರಗೊಂಡಿತ್ತು. ಇದಾದ ಬಳಿಕ ವಾಘಾ ಗಡಿಯನ್ನು ಎರಡೂ ದೇಶಗಳು ಬಂದ್ ಮಾಡಿದ್ದವು. ಇದರಿಂದ ಭಾರತಕ್ಕೆ ಅಫ್ಘಾನಿಸ್ತಾನದಿಂದ ಬರುತ್ತಿದ್ದ ಸರಕುಗಳು ನಿಂತಿದ್ದವು. ಸರಕು ಸಾಗಾಟ ಮಾಡಲು ಅನುಮತಿ ನೀಡುವಂತೆ ಅಫ್ಘಾನಿಸ್ತಾನ ಪಾಕಿಸ್ತಾನಕ್ಕೆ ಮನವಿ ಮಾಡಿತ್ತು. ಈ ಮನವಿ ಮೇರೆಗೆ ಪಾಕ್ ಅನುಮತಿ ನೀಡಿದೆ.

    ಏ.22 ರಂದು ಜಮ್ಮು ಮತ್ತು ಕಾಶ್ಮೀರದ (Jammu and Kashmir) ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ 26 ಮಂದಿ ಸಾವನ್ನಪ್ಪಿದ್ದರು. ಕರ್ನಾಟಕ ಮೂಲದ ಇಬ್ಬರು ಸಾವಿಗೀಡಾಗಿದ್ದರು.

    ಈ ದಾಳಿಯ ಬೆನ್ನಲ್ಲೇ ಪ್ರತೀಕಾರ ತೀರಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿರುವ ಭಾರತ ಈಗಾಗಲೇ ಪಾಕ್‌ ಜೊತೆಗಿನ ರಾಜತಾಂತ್ರಿಕ ಸಂಬಂಧವನ್ನು ಕಡಿದುಕೊಂಡಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಉನ್ನತಮಟ್ಟದ ಸಭೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ 1960ರ ಸೆಪ್ಟೆಂಬರ್‌ 19ರಂದು ಸಹಿ ಹಾಕಲಾಗಿದ್ದ ಸಿಂಧೂ ನದಿ ನೀರು ಒಪ್ಪಂದವನ್ನು ತಡೆಹಿಡಿಯಲಾಗಿತ್ತು. ಇದರೊಂದಿಗೆ ಪಾಕಿಸ್ತಾನಕ್ಕೆ ನೀರು ಸರಬರಾಜು ಮಾಡುತ್ತಿದ್ದ ಸಿಂಧೂ ನದಿ ಮತ್ತು ಝೀಲಂ, ಚೆನಾಬ್, ರಾವಿ, ಬಿಯಾಸ್ ಮತ್ತು ಸಟ್ಲೇಜ್‌ ನದಿಗಳಿಂದ ನೀರು ಸರಬರಾಜು ನಿಲ್ಲಿಸುವ ತೀರ್ಮಾನಕ್ಕೆ ಬರಲಾಗಿದೆ. ಜೊತೆಗೆ ಅಟ್ಟಾರಿ-ವಾಘಾ ಗಡಿ ಮುಚ್ಚಲು ಭಾರತ ಆದೇಶಿಸಿತ್ತು.

    ಅಷ್ಟೇ ಅಲ್ಲದೇ ಸಾರ್ಕ್ ವೀಸಾ ವಿನಾಯಿತಿ ಯೋಜನೆ (SVES) ವೀಸಾಗಳ ಅಡಿಯಲ್ಲಿ ಪಾಕಿಸ್ತಾನಿ ಪ್ರಜೆಗಳು ಭಾರತಕ್ಕೆ ಪ್ರಯಾಣಿಸಲು ನೀಡಿದ ಅನುಮತಿಯನ್ನು ತಡೆಹಿಡಿಯಲಾಗುತ್ತಿದೆ. ಈ ಹಿಂದೆ ನೀಡಿದ್ದ ಯಾವುದೇ SVES ವೀಸಾಗಳನ್ನು ರದ್ದುಗೊಳಿಸಿ, ಭಾರತ ತೊರೆಯುವಂತೆ ಸೂಚಿಸಲಾಗಿತ್ತು. ಇದಕ್ಕೆ ತಕ್ಕಂತೆ ಪಾಕ್ ಸಹ ಪ್ರತಿ ತಂತ್ರಗಳನ್ನು ರೂಪಿಸಿತ್ತು.

  • ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ – ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ

    ಅಫ್ಘಾನಿಸ್ತಾನದಲ್ಲಿ 5.6 ತೀವ್ರತೆಯ ಭೂಕಂಪ – ದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ

    ಕಾಬೂಲ್‌/ನವದೆಹಲಿ: ಅಫ್ಘಾನಿಸ್ತಾನದಲ್ಲಿ (Afghanistan) 5.6 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್-ಮೆಡಿಟರೇನಿಯನ್ ಸೀಸ್ಮಾಲಾಜಿಕಲ್ ಸೆಂಟರ್ (EMSC) ವರದಿ ಮಾಡಿದೆ.

    ಬಾಗ್ಲಾನ್‌ನಿಂದ ಪೂರ್ವಕ್ಕೆ 164 ಕಿಮೀ ದೂರದಲ್ಲಿ ಹಾಗೂ ಭೂಮಿಯ‌ ಮೇಲ್ಮೈನಿಂದ 121 ಕಿಮೀ ಆಳದಲ್ಲಿ ಕೇಂದ್ರಬಿಂದು ಪತ್ತೆಯಾಗಿದೆ. ಇಎಂಎಸ್‌ಸಿ ಮೊದಲು ಭೂಕಂಪದ (Earthquake) ತೀವ್ರತೆಯನ್ನು 6.4 ತೀವ್ರತೆ ಎಂದು ವರೆದಿ ಮಾಡಿತ್ತು. ಬಳಿಕ ಪರಿಷ್ಕರಿಸಿ 5.6 ಎಂದು ಉಲ್ಲೇಖಿಸಿದೆ. ಇದರ ಪರಿಣಾಮ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶ ಸೇರಿದಂತೆ ಭಾರತದ ಕೆಲವು ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಇದನ್ನೂ ಓದಿ:  ಬೆಂಗ್ಳೂರಿಗೆ ಸೆಡ್ಡು ಹೊಡೆಯಲು ಆಂಧ್ರ ಸರ್ಕಾರದಿಂದ ಭಾರೀ ಆಫರ್ – ಟಿಸಿಎಸ್‌ಗೆ 99 ಪೈಸೆಗೆ 21 ಎಕ್ರೆ ಭೂಮಿ

    ಸದ್ಯ ಹೆಚ್ಚಿನ ಹಾನಿಯಾಗಲಿ, ಸಾವುನೋವುಗಳಾಗಲಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಇದನ್ನೂ ಓದಿ: National Herald Case| ಫಸ್ಟ್‌ ಟೈಂ ರಾಹುಲ್‌, ಸೋನಿಯಾ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆ

    ದೆಹಲಿಯಲ್ಲಿ ಭೂಮಿ ಕಂಪಿಸಿದ ಅನುಭವ ಉಂಟಾಗಿದ್ದು, ಹಲವರು ಇದರ ವಿಡಿಯೋವನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಕೆಲವರು ಮೆಮ್ಸ್‌ಗಳನ್ನು ಹಂಚಿಕೊಳ್ಳುವ ಮೂಲಕ ವ್ಯಂಗ್ಯ ಮಾಡಿರುವುದು ಕಂಡುಬಂದಿದೆ. ಇದನ್ನೂ ಓದಿ: ಗಲಭೆಕೋರರಿಗೆ ದಂಡವೇ ಒಳ್ಳೆ ಚಿಕಿತ್ಸೆ: ಬಂಗಾಳ ಹಿಂಸಾಚಾರಕ್ಕೆ ಯೋಗಿ ಆದಿತ್ಯನಾಥ್‌ ಕಿಡಿ

  • ತಾಲಿಬಾನ್ ನಾಡಲ್ಲಿ ಕೂದಲು ಕತ್ತರಿಸಿದ್ರೂ ಶಿಕ್ಷೆ

    ತಾಲಿಬಾನ್ ನಾಡಲ್ಲಿ ಕೂದಲು ಕತ್ತರಿಸಿದ್ರೂ ಶಿಕ್ಷೆ

    – ರಂಜಾನ್ ಮಾಸದಲ್ಲಿ ಮಸೀದಿಗಳಿಗೆ ಸರಿಯಾಗಿ ಹೋಗದಿದ್ರೆ ಬಂಧನ

    ಕಾಬೂಲ್: ಆಫ್ಘಾನಿಸ್ತಾನದಲ್ಲಿ ತಾಲಿಬಾನ್ (Taliban) ಅರಾಜಕತೆಯ ಪರ್ವ ಮುಂದುವರೆದಿದೆ. ರಂಜಾನ್ ಮಾಸದಲ್ಲಿ ಮಸೀದಿಗಳಿಗೆ ಸರಿಯಾಗಿ ಹೋಗದ, ಸರಿಯಾಗಿ ಹೇರ್‌ಕಟ್ ಮಾಡಿಸಿಕೊಳ್ಳದವರನ್ನು ತಾಲಿಬಾನ್ ನೈತಿಕ ವಿಭಾಗದ ಪೊಲೀಸರು ಅರೆಸ್ಟ್ ಮಾಡುತ್ತಿದ್ದಾರೆ

    ತಾಲಿಬಾನ್ ನಿಯಮಗಳ ಅನುಸಾರ ಹೇರ್‌ಕಟ್ ಮಾಡದ ಕ್ಷೌರಿಕರನ್ನು ಸಹ ಕಂಬಿ ಹಿಂದೆ ಕಳಿಸುತ್ತಿದ್ದಾರೆ. ಇಂತಹ ಬಂಧನಗಳಿಗೆ ಯಾವುದೇ ರೀತಿಯ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಅನುಸರಿಸುತ್ತಿಲ್ಲ. ಇದನ್ನೂ ಓದಿ: 27ನೇ ವಯಸ್ಸಿಗೆ ಬದುಕು ಮುಗಿಸಿದ ‘ಆಸ್ಟ್ರೇಲಿಯಾದ ನೆಕ್ಸ್ಟ್ ಟಾಪ್ ಮಾಡೆಲ್’ ಮಾಜಿ ಸ್ಪರ್ಧಿ

    ಎಲ್ಲಾ ಏಕಪಕ್ಷೀಯವಾಗಿ ನಡೆಯುತ್ತಿದೆ. ಇಂತಹ ಕ್ರಮಗಳಿಂದ ಸಣ್ಣ ವ್ಯಾಪಾರಿಗಳು, ಶಿಕ್ಷಣ ಸಂಸ್ಥೆಗಳು, ಸಲೂನ್‌ಗಳು, ಟೈಲರ್‌ಗಳು, ರೆಸ್ಟೋರೆಂಟ್, ಮದುವೆ ಬಾಣಸಿಗರಿಗೆ ಕೆಲಸ ಸಿಕ್ಕದಂತಾಗಿದೆ. ಆರ್ಥಿಕ ಸಮಸ್ಯೆಗಳು ಜನರನ್ನು ಹೈರಾಣು ಮಾಡುತ್ತಿವೆ ಎಂದು ವಿಶ್ವಸಂಸ್ಥೆ ವರದಿ ತಿಳಿಸಿದೆ. ಇದನ್ನೂ ಓದಿ: ಟ್ರಂಪ್‌ Vs ಕ್ಸಿ ಜಿನ್‌ಪಿಂಗ್‌ – ಈಗ ಅಮೆರಿಕದ ವಸ್ತುಗಳಿಗೆ 125% ತೆರಿಗೆ ಹಾಕಿದ ಚೀನಾ

  • ಪಂದ್ಯಕ್ಕೆ ಮಳೆ ಅಡ್ಡಿ| ಆಸ್ಟ್ರೇಲಿಯಾ ಸೆಮಿಗೆ ಹೋದ್ರೂ ಅಫ್ಘಾನ್‌ಗೆ ಇನ್ನೂ ಇದೆ ಚಾನ್ಸ್‌!

    ಪಂದ್ಯಕ್ಕೆ ಮಳೆ ಅಡ್ಡಿ| ಆಸ್ಟ್ರೇಲಿಯಾ ಸೆಮಿಗೆ ಹೋದ್ರೂ ಅಫ್ಘಾನ್‌ಗೆ ಇನ್ನೂ ಇದೆ ಚಾನ್ಸ್‌!

    ಲಾಹೋರ್‌: ಚಾಂಪಿಯನ್ಸ್‌ ಟ್ರೋಫಿ (Champions Trophy) ಲೀಗ್‌ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದ್ದರಿಂದ ಆಸ್ಟ್ರೇಲಿಯಾ (Australia) ಸೆಮಿಫೈನಲ್‌ ಪ್ರವೇಶಿಸಿದೆ. ಅಫ್ಘಾನಿಸ್ತಾನದ (Afghanistan) ಸೆಮಿ ಭವಿಷ್ಯ ಇಂಗ್ಲೆಂಡ್‌ (England) ಕೈಯಲ್ಲಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 50 ಓವರ್‌ಗಳಲ್ಲಿ 273 ರನ್‌ಗಳಿಗೆ ಆಲೌಟ್‌ ಆಯ್ತು. ನಂತರ ಆಸ್ಟ್ರೇಲಿಯಾ ಬ್ಯಾಟ್‌ ಮಾಡುವ ವೇಳೆ ಜೋರಾಗಿ ಮಳೆ ಸುರಿಯಲು ಆರಂಭಿಸಿತ್ತು. ಮಳೆಯಿಂದ ಪಂದ್ಯ ಸ್ಥಗಿತಗೊಂಡಾಗ ಆಸ್ಟ್ರೇಲಿಯಾ 12.5 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 109 ರನ್‌ ಗಳಿಸಿತ್ತು.

     

    ನಿರಂತರ ಮಳೆ (Rain) ಸುರಿದ ಹಿನ್ನೆಲೆಯಲ್ಲಿ ಕೊನೆಗೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಅಂತಿಮವಾಗಿ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಯಿತು.

    ಸದ್ಯ ಈಗ ಬಿ ಗ್ರೂಪ್‌ನಲ್ಲಿ ಆಸ್ಟ್ರೇಲಿಯಾ 4 ಅಂಕದೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ದಕ್ಷಿಣ ಆಫ್ರಿಕಾ 3 ಅಂಕದೊಂದಿಗೆ ಎರಡನೇ ಸ್ಥಾನ 3 ಅಂಕ ಪಡೆದಿರುವ ಅಫ್ಘಾನಿಸ್ತಾನ ಮೂರನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿದ್ದರೂ ಅಫ್ಘಾನಿಸ್ತಾನ ಸೆಮಿಗೆ ಹೋಗುವ ಅವಕಾಶ ಈಗಲೂ ಇದೆ.

    ಸೆಮಿ ಅವಕಾಶ ಹೇಗೆ?
    ಸದ್ಯ ಈಗ ದಕ್ಷಿಣ ಆಫ್ರಿಕಾ (South Africa) 2.140 ರನ್‌ ರೇಟ್‌ ಹೊಂದಿದ್ದರೆ ಅಫ್ಘಾನಿಸ್ತಾನ -0.990 ರನ್‌ ರೇಟ್‌ ಹೊಂದಿದೆ. ಮಾರ್ಚ್‌ 1 ಶನಿವಾರ ಕರಾಚಿಯಲ್ಲಿ ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಪಂದ್ಯ ನಡೆಯಲಿದೆ.

    ಈ ಪಂದ್ಯದಲ್ಲಿ ಇಂಗ್ಲೆಂಡ್‌ ಜಯಗಳಿಸುವುದು ಮಾತ್ರವಲ್ಲ ಭಾರೀ ಅಂತರದಿಂದ ಗೆಲ್ಲಬೇಕಾಗುತ್ತದೆ. ಒಂದು ವೇಳೆ ಮೊದಲು ಬ್ಯಾಟ್‌ ಮಾಡಿದರೆ ಇಂಗ್ಲೆಂಡ್‌ ಕನಿಷ್ಟ 207 ರನ್‌ಗಳ ಅಂತರದಿಂದ ಜಯಗಳಿಸಬೇಕಾಗುತ್ತದೆ. ಒಂದು ವೇಳೆ ಚೇಸಿಂಗ್‌ ಮಾಡಿದರೆ ಇಂಗ್ಲೆಂಡ್‌ ಗುರಿಯನ್ನು 11.1 ಓವರ್‌ಗಳಲ್ಲಿ ಹೊಡೆಯಬೇಕಾಗುತ್ತದೆ.

    ಈ ಪಂದ್ಯಕ್ಕೆ ಮಳೆ ಅಡ್ಡಿ ಪಡಿಸಿದರೆ ಆಫ್ರಿಕಾಗೆ 1 ಅಂಕ ಸಿಗುತ್ತದೆ. ನೆಟ್‌ ರನ್‌ ರೇಟ್‌ ಉತ್ತಮವಾಗಿರುವ ಕಾರಣ ಅಫ್ರಿಕಾ 4 ಅಂಕಗಳೊಂದಿಗೆ ಮೊದಲ ಸ್ಥಾನಕ್ಕೆ ಏರುತ್ತದೆ. ಭಾನುವಾರ ಭಾರತ ಮತ್ತು ನ್ಯೂಜಿಲೆಂಡ್‌ ಮಧ್ಯೆ ಕೊನೆಯ ಲೀಗ್‌ ಪಂದ್ಯ ನಡೆಯಲಿದ್ದು ಈ ಪಂದ್ಯದಲ್ಲಿ ಸೋತವರ ಜೊತೆ ಸೆಮಿಫೈನಲ್‌ ಆಡಲಿದೆ.

     

  • ಅಫ್ಘಾನಿಸ್ತಾನಕ್ಕೆ ರೋಚಕ 8 ರನ್‌ಗಳ ಜಯ – ಚಾಂಪಿಯನ್ಸ್‌ ಟ್ರೋಫಿಯಿಂದ ಇಂಗ್ಲೆಂಡ್‌ ಔಟ್‌

    ಅಫ್ಘಾನಿಸ್ತಾನಕ್ಕೆ ರೋಚಕ 8 ರನ್‌ಗಳ ಜಯ – ಚಾಂಪಿಯನ್ಸ್‌ ಟ್ರೋಫಿಯಿಂದ ಇಂಗ್ಲೆಂಡ್‌ ಔಟ್‌

    – ಜದ್ರಾನ್‌ ಸ್ಫೋಟಕ ಶತಕ, ಕೊನೆಯಲ್ಲಿ ಬೌಲರ್‌ಗಳ ಕಮಾಲ್‌

    ಲಾಹೋರ್‌: ಇಬ್ರಾಹಿಂ ಜದ್ರಾನ್ ಅವರ ಸ್ಫೋಟಕ ಶತಕ, ಕೊನೆಯಲ್ಲಿ ಬೌಲರ್‌ಗಳ ಬಿಗಿಯಾದ ಬೌಲಿಂಗ್‌ನಿಂದ ಇಂಗ್ಲೆಂಡ್‌ ವಿರುದ್ಧ ಅಫ್ಘಾನಿಸ್ತಾನ 8 ರನ್‌ಗಳ ರೋಚಕ ಜಯ ಸಾಧಿಸಿದೆ. ರೋಚಕ ಕಾದಾಟದಲ್ಲಿ ಸೋತ ಇಂಗ್ಲೆಂಡ್‌ ಐಸಿಸಿ ಚಾಂಪಿಯನ್ಸ್‌ ಟ್ರೋಫಿ  ಟೂರ್ನಿಯಿಂದ ನಿರ್ಗಮಿಸಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನ 7 ವಿಕೆಟ್‌ ನಷ್ಟಕ್ಕೆ 325 ರನ್‌ ಗಳಿಸಿತು. ಸವಾಲಿನ ಮೊತ್ತವನ್ನು ಬೆನ್ನಟ್ಟಿದ ಇಂಗ್ಲೆಂಡ್‌ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡರೂ ಕೊನೆಯವರೆಗೂ  ಜಯಗಳಿಸಲು ಹೋರಾಡಿತು. ಅಂತಿಮವಾಗಿ 49.5 ಓವರ್‌ಗಳಲ್ಲಿ 317 ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಸೋಲೊಪ್ಪಿಕೊಂಡಿತು.  ಇದನ್ನೂ ಓದಿ: ಬೆಂಕಿ ಬ್ಯಾಟಿಂಗ್‌ಗೆ ದಾಖಲೆಗಳು ಭಗ್ನ – ಇತಿಹಾಸ ನಿರ್ಮಿಸಿದ ಇಬ್ರಾಹಿಂ ಜದ್ರಾನ್

    ಬಿ ಗುಂಪಿನಲ್ಲಿ ಮೊದಲ ಜಯದೊಂದಿಗೆ ಅಫ್ಘಾನಿಸ್ತಾನ ಈಗ 2 ಅಂಕ ಸಂಪಾದಿಸಿದೆ. ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಮಳೆಯಿಂದ ರದ್ದಾಗಿರುವ ಕಾರಣ ಎರಡು ತಂಡಗಳಿಗೆ ಒಂದೊಂದು ಅಂಕವನ್ನು ನೀಡಲಾಗಿದೆ. ಹೀಗಾಗಿ ಈ ಎರಡು ತಂಡಗಳು 3 ಅಂಕ ಸಂಪಾದಿಸಿದ್ದರೂ ರನ್‌ ರೇಟ್‌ ಚೆನ್ನಾಗಿರುವ ಕಾರಣ ದಕ್ಷಿಣ ಆಫ್ರಿಕಾ ಮೊದಲ ಸ್ಥಾನದಲ್ಲಿದೆ.

    ಮುಂದೆ ಆಫ್ಘಾನಿಸ್ತಾನ ಆಸ್ಟ್ರೇಲಿಯಾವನ್ನು ಎದುರಿಸಲಿದ್ದರೆ ದಕ್ಷಿಣ ಆಫ್ರಿಕಾ ಇಂಗ್ಲೆಂಡ್‌ ವಿರುದ್ಧ ಆಡಲಿದೆ. ಹೀಗಾಗಿ ಮೂರು ತಂಡಗಳಿಗೆ ಜಯ ಮುಖ್ಯ. ಒಂದು ವೇಳೆ ಮುಂದೆ ನಡೆಯಲಿರುವ ಎರಡೂ ಪಂದ್ಯ ಮಳೆಯಿಂದ ರದ್ದಾದರೆ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ಸೆಮಿ ಫೈನಲ್‌ ಪ್ರವೇಶಲಿದೆ ಅಫ್ಘಾನಿಸ್ತಾನದ ಕನಸು ಭಗ್ನವಾಗಲಿದೆ.

    ಆರಂಭದಲ್ಲೇ ಆಘಾತ:  30 ರನ್‌ಗಳಿಸುವಷ್ಟರಲ್ಲೇ 2 ವಿಕೆಟ್‌ ಕಳೆದುಕೊಂಡಿದ್ದರೆ 133 ರನ್‌ಗಳಿಸುವಷ್ಟರಲ್ಲಿ ಇಂಗ್ಲೆಂಡ್‌ 4 ವಿಕೆಟ್‌ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಜೋ ರೂಟ್‌ಗೆ ನಾಯಕ ಜೋಸ್‌ ಬಟ್ಲರ್‌ ಸಾಥ್‌ ನೀಡಿದರು. ಇವರಿಬ್ಬರು 5ನೇ ವಿಕೆಟಿಗೆ 91 ಎಸೆತಗಳಲ್ಲಿ 83 ರನ್‌ ಜೊತೆಯಾಟವಾಡಿ ಇನ್ನಿಂಗ್ಸ್‌ ಕಟ್ಟಿದರು.

    ಜೋಸ್‌ ಬಟ್ಲರ್‌ 38 ರನ್‌ (42 ಎಸೆತ, 2 ಸಿಕ್ಸರ್‌) ಸಿಡಿಸಿ ಔಟಾದರೆ ತಂಡದ ಮೊತ್ತ 287 ರನ್‌ ಆದಾಗ 120 ರನ್‌ (111 ಎಸೆತ, 11 ಬೌಂಡರಿ, 1 ಸಿಕ್ಸ್‌) ಹೊಡೆದಿದ್ದ ಜೋ ರೂಟ್‌ ಕ್ಯಾಚ್‌ ನೀಡಿ ನಿರ್ಗಮಿಸಿದರು. ಜೋ ರೂಟ್‌ ಔಟಾದರೂ ಜೇಮೀ ಓವರ್ಟನ್ ಬ್ಯಾಟ್‌ ಬೀಸುತ್ತಿದ್ದರು.

    ಯಾವಾಗ ಜೇಮೀ ಓವರ್ಟನ್ 32 ರನ್‌(28 ಎಸೆತ, , 3 ಬೌಂಡರಿ) ಔಟಾದರೋ ಬೆನ್ನಲ್ಲೇ 14 ರನ್‌ ಗಳಿಸಿದ್ದ ಜೋಫ್ರಾ ಆರ್ಚರ್ ವಿಕೆಟ್‌ ಒಪ್ಪಿಸಿದರು. ಅಂತಿಮವಾಗಿ 317 ರನ್‌ಗಳಿಗೆ ಇಂಗ್ಲೆಂಡ್‌ ಸರ್ವಪತನ ಕಂಡಿತು.

    ಟಾಸ್‌ ಗೆದ್ದು ಮೊದಲು ಬ್ಯಾಟ್ ಆರಂಭಿಸಿದ್ದ ಆಫ್ಘಾನಿಸ್ತಾನ ಆರಂಭದಲ್ಲೇ ವಿಕೆಟ್‌ ಕಳೆದುಕೊಂಡಿತ್ತು. 37 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 40 ರನ್‌(67 ಎಸೆತ), ಅಜ್ಮತುಲ್ಲಾ ಒಮರ್ಜಾಯ್ 41 ರನ್‌ (31 ಎಸೆತ, 1 ಬೌಂಡರಿ, 3 ಸಿಕ್ಸರ್‌), ಮೊಹಮ್ಮದ್ ನಬಿ 40 ರನ್‌ (24 ಎಸೆತ, 2 ಬೌಂಡರಿ, 3 ಸಿಕ್ಸರ್‌) ಸಿಡಿಸಿದ ಪರಿಣಾಮ ತಂಡ 300 ರನ್‌ಗಳ ಗಡಿ ದಾಟಿತು. ಜದ್ರಾನ್‌ ಮತ್ತು ನಬಿ 55 ಎಸೆತಗಳಲ್ಲಿ 111 ರನ್‌ ಜೊತೆಯಾಟವಾಡಿ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದರು.

    177 ರನ್‌ (146 ಎಸೆತ, 12 ಬೌಂಡರಿ, 6 ಸಿಕ್ಸರ್‌) ಹೊಡೆದ ಜದ್ರಾನ್‌ 50ನೇ ಓವರಿನ ಮೊದಲ ಎಸೆತದಲ್ಲಿ ಔಟಾದರು. 65 ಎಸೆತದಲ್ಲಿ ಅರ್ಧಶತಕ ಹೊಡೆದ ಜದ್ರಾನ್‌ 106 ಎಸೆತಗಳಲ್ಲಿ ಶತಕ ಭಾರಿಸಿದರು. 134 ಎಸೆತಗಳಲ್ಲಿ 150 ರನ್‌ ಚಚ್ಚಿದರು.

  • ಬೆಂಕಿ ಬ್ಯಾಟಿಂಗ್‌ಗೆ ದಾಖಲೆಗಳು ಭಗ್ನ –  ಇತಿಹಾಸ ನಿರ್ಮಿಸಿದ ಇಬ್ರಾಹಿಂ ಜದ್ರಾನ್

    ಬೆಂಕಿ ಬ್ಯಾಟಿಂಗ್‌ಗೆ ದಾಖಲೆಗಳು ಭಗ್ನ – ಇತಿಹಾಸ ನಿರ್ಮಿಸಿದ ಇಬ್ರಾಹಿಂ ಜದ್ರಾನ್

    ಲಾಹೋರ್‌: ಅಫ್ಘಾನಿಸ್ತಾನ (Afghanistan) ಬ್ಯಾಟ್ಸ್‌ಮನ್‌, ಆರಂಭಿಕ ಆಟಗಾರ ಇಬ್ರಾಹಿಂ ಜದ್ರಾನ್ (Ibrahim Zadran) ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ (ICC Champions Trophy) ವಿಶ್ವ ದಾಖಲೆ ಬರೆದಿದ್ದಾರೆ. ಇಂಗ್ಲೆಂಡ್‌ (England) ವಿರುದ್ಧ 177 ರನ್‌ ಹೊಡೆಯುವ ಮೂಲಕ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಅತಿ ಹೆಚ್ಚು ರನ್‌ ಹೊಡೆದ ಆಟಗಾರ ಎಂಬ ಹೆಗ್ಗಳಿಕೆಗೆ ಜದ್ರಾನ್‌ ಪಾತ್ರವಾಗಿದ್ದಾರೆ.

    177 ರನ್‌ (146 ಎಸೆತ, 12 ಬೌಂಡರಿ, 6 ಸಿಕ್ಸರ್‌) ಹೊಡೆದ ಜದ್ರಾನ್‌ 50ನೇ ಓವರಿನ ಮೊದಲ ಎಸೆತದಲ್ಲಿ ಔಟಾದರು. 65 ಎಸೆತದಲ್ಲಿ ಅರ್ಧಶತಕ ಹೊಡೆದ ಜದ್ರಾನ್‌ 106 ಎಸೆತಗಳಲ್ಲಿ ಶತಕ ಭಾರಿಸಿದರು. 134 ಎಸೆತಗಳಲ್ಲಿ 150 ರನ್‌ ಚಚ್ಚಿದರು.

    ಅತಿ ಹೆಚ್ಚು ರನ್‌ ದಾಖಲೆ
    ಇಬ್ರಾಹಿಂ ಜದ್ರಾನ್‌ ಮೊದಲ ಸ್ಥಾನದಲ್ಲಿದ್ದರೆ ಇಂಗ್ಲೆಂಡಿನ ಬೆನ್ ಡಕೆಟ್ ಎರಡನೇ ಸ್ಥಾನದಲ್ಲಿ ಇದ್ದಾರೆ. ಈ ಟೂರ್ನಿಯಲ್ಲೇ ಆಸ್ಟ್ರೇಲಿಯಾದ ವಿರುದ್ಧ 143 ಎಸೆತಗಳಲ್ಲಿ 165 ರನ್‌ ಹೊಡೆದಿದ್ದರು. ಮೂರನೇ ಸ್ಥಾನದಲ್ಲಿ ನ್ಯೂಜಿಲೆಂಡಿನ ನಥನ್‌ ಆಸ್ಟ್ಲೆ, ನಾಲ್ಕನೇ ಸ್ಥಾನದಲ್ಲಿ ಜಿಂಬಾಬ್ವೆಯ ಆಂಡಿ ಫ್ಲವರ್‌, ಐದನೇ ಸ್ಥಾನದಲ್ಲಿ ಭಾರತದ ಸೌರವ್‌ ಗಂಗೂಲಿ ಇದ್ದಾರೆ.

    ಇಬ್ಲಾಹಿಂ ಜದ್ರಾನ್ – ಅಫ್ಘಾನಿಸ್ತಾನ – 177 ರನ್,  2025
    ಬೆನ್‌ ಡಕೆಟ್‌ – ಇಂಗ್ಲೆಂಡ್‌ – 165 ರನ್‌ (143 ಎಸೆತ) – 2025
    ನಾಥನ್ ಆಸ್ಟಲ್ – ನ್ಯೂಜಿಲೆಂಡ್‌ – 145 ರನ್‌ (151 ಎಸೆತ) – 2004
    ಆಂಡಿ ಫ್ಲವರ್‌ – ಜಿಂಬಾಬ್ವೆ – 145 ರನ್‌ (164 ಎಸೆತ) – 2002
    ಸೌರವ್‌ ಗಂಗೂಲಿ – ಭಾರತ – 141 ರನ್‌ (142 ಎಸೆತ) – 2000
    ಸಚಿನ್‌ ತೆಂಡೂಲ್ಕರ್‌- ಭಾರತ – 141 ರನ್‌ (128 ಎಸೆತ) – 1998

     

    ಟಾಸ್‌ ಗೆದ್ದು ಮೊದಲು ಬ್ಯಾಟ್‌ ಬೀಸಿದ ಆಫ್ಘಾನಿಸ್ಥಾನ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 325 ರನ್‌ ಹೊಡೆದಿದೆ. 37 ರನ್‌ಗಳಿಗೆ ಮೂರು ವಿಕೆಟ್‌ ಕಳೆದುಕೊಂಡಿದ್ದರೂ ನಾಯಕ ಹಶ್ಮತುಲ್ಲಾ ಶಾಹಿದಿ 40 ರನ್‌(67 ಎಸೆತ), ಅಜ್ಮತುಲ್ಲಾ ಒಮರ್ಜಾಯ್ 41 ರನ್‌ (31 ಎಸೆತ, 1 ಬೌಂಡರಿ, 3 ಸಿಕ್ಸರ್‌), ಮೊಹಮ್ಮದ್ ನಬಿ 40 ರನ್‌ (24 ಎಸೆತ, 2 ಬೌಂಡರಿ, 3 ಸಿಕ್ಸರ್‌) ಸಿಡಿಸಿದ ಪರಿಣಾಮ ತಂಡ 300 ರನ್‌ಗಳ ಗಡಿ ದಾಟಿತು. ಜದ್ರಾನ್‌ ಮತ್ತು ನಬಿ 55 ಎಸೆತಗಳಲ್ಲಿ 111 ರನ್‌ ಜೊತೆಯಾಟವಾಡಿ ಇಂಗ್ಲೆಂಡ್‌ ಬೌಲರ್‌ಗಳ ಬೆವರಿಳಿಸಿದರು. ಕೊನೆಯ  9 ಓವರ್‌ಗಳಲ್ಲಿ ಅಫ್ಘಾನಿಸ್ತಾನ 108 ರನ್‌ ಹೊಡೆದಿತ್ತು.

    ಯಾವ ಓವರ್‌ ಎಷ್ಟು ರನ್‌?
    42ನೇ ಓವರ್ – 10 ರನ್‌ಗಳು
    43ನೇ ಓವರ್ – 9 ರನ್‌ಗಳು
    44ನೇ ಓವರ್ – 20 ರನ್‌ಗಳು
    45ನೇ ಓವರ್ – 10 ರನ್‌ಗಳು
    46ನೇ ಓವರ್ – 10 ರನ್‌ಗಳು
    47ನೇ ಓವರ್ – 23 ರನ್‌ಗಳು
    48ನೇ ಓವರ್ – 10 ರನ್‌ಗಳು
    49ನೇ ಓವರ್ – 14 ರನ್‌ಗಳು
    50ನೇ ಓವರ್ – 2 ರನ್‌ಗಳು