Tag: Aero India

  • ಮಹಾ ಕುಂಭದಿಂದ ಸಂಸ್ಕೃತಿ, ಏರ್‌ಶೋನಿಂದ ರಕ್ಷಣಾ ಬಲಿಷ್ಠತೆಯನ್ನ ಭಾರತ ಜಗತ್ತಿಗೇ ಸಾರಿದೆ: ರಾಜನಾಥ್‌ ಸಿಂಗ್‌

    ಮಹಾ ಕುಂಭದಿಂದ ಸಂಸ್ಕೃತಿ, ಏರ್‌ಶೋನಿಂದ ರಕ್ಷಣಾ ಬಲಿಷ್ಠತೆಯನ್ನ ಭಾರತ ಜಗತ್ತಿಗೇ ಸಾರಿದೆ: ರಾಜನಾಥ್‌ ಸಿಂಗ್‌

    – ಮೊದಲ ದಿನವೇ ಸ್ವದೇಶಿ ಯುದ್ಧ ವಿಮಾನಗಳ ಆರ್ಭಟ ಜೋರು

    ಬೆಂಗಳೂರು: ಮೈನವಿರೇಳಿಸುವ, ನೋಡುಗರ ಹೃದಯ ಬಡಿತ ಹೆಚ್ಚಿಸುವ ವೈಮಾನಿಕ ಕಸರತ್ತು, ವೈಮಾನಿಕ ಹಾಗೂ ಬಾಹ್ಯಾಕಾಶ ಉದ್ದಿಮೆ, ಉದ್ಯಮಿಗಳ ಮುಖಾಮುಖಿಗೆ ವೇದಿಕೆಯಾಗಲಿರುವ ದೇಶದ 15ನೇ ಆವೃತ್ತಿಯ ವೈಮಾನಿಕ ಪ್ರದರ್ಶನ ʻಏರೋ ಇಂಡಿಯಾ 2025ʼಕ್ಕೆ (Aero India 2025) ಚಾಲನೆ ಸಿಕ್ಕಿದೆ.

    ಯಲಹಂಕ ವಾಯುನೆಲೆಯಲ್ಲಿ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ (Rajnath singh) ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ದೇಶ – ವಿದೇಶಗಳ ಪ್ರಮುಖ ನಾಯಕರು, ರಕ್ಷಣಾ ವಿಭಾಗದ ಅಧಿಕಾರಿಗಳು ಏರ್ ಶೋನಲ್ಲಿ (Aero India Air Show) ಭಾಗಿಯಾಗಿದ್ದರು. ಡಿಸಿಎಂ ಡಿ.ಕೆ ಶಿವಕುಮಾರ್‌ ಸಹ ಉಪಸ್ಥಿತರಿದ್ದರು. ಇದನ್ನೂ ಓದಿ: ಮದುವೆಯಲ್ಲಿ ಡಾನ್ಸ್‌ ಮಾಡುತ್ತಿದ್ದಾಗಲೇ ಹೃದಯ ಸ್ತಂಭನ – ವೇದಿಕೆಯಲ್ಲೇ ಎಂಬಿಎ ಪದವೀಧರೆ ಸಾವು

    ಏರ್‌ ಶೋಗೆ ಚಾಲನೆ ನೀಡಿದ ಬಳಿಕ ಕಾರ್ಯಕ್ರಮ ಉದ್ದೇಶಿಸಿ ರಾಜನಾಥ್‌ ಸಿಂಗ್‌ ಮಾತನಾಡಿದರು. ಏರ್‌ ಶೋ ಮೂಲಕ ಮತ್ತೊಂದು ಕುಂಭ ಶುರುವಾದಂತಿದೆ. ಪ್ರಯಾಗ್‌ರಾಜ್‌ನ ಮಹಾ ಕುಂಭ ಮೇಳ ಸಂಸ್ಕೃತಿ ಬಗ್ಗೆ ತೋರಿಸಿದ್ರೆ, ಏರ್‌ ಶೋ ಭಾರತದ ರಕ್ಷಣಾ ಬಲಿಷ್ಠತೆಯನ್ನ ಜಗತ್ತಿಗೆ ಸಾರುತ್ತಿದೆ. ಅಲ್ಲದೇ ಅಭಿವೃದ್ಧಿ, ಉತ್ಪಾದನೆಯ ಬಗ್ಗೆ ಭಾರತ ಕೇಂದ್ರೀಕೃತವಾಗಿದೆ. ಏರ್ ಶೋ ರಾಷ್ಟ್ರ-ರಾಷ್ಟ್ರಗಳ ಮಧ್ಯೆ ಸಂಬಂಧ – ಬಾಂಧವ್ಯಗಳನ್ನ ಅಭಿವೃದ್ಧಿಗೊಳಿಸುತ್ತದೆ ಎಂದು ನುಡಿದರು.

    ದೇಶ-ವಿದೇಶಗಳ ವಾಯುಪಡೆಯ ಅಧಿಕಾರಿಗಳು ಇಲ್ಲಿದ್ದಾರೆ. ಭಾರತದ ಜೊತೆ ಈ ಅಧಿಕಾರಿಗಳ ಸಹಭಾಗಿತ್ವ ಮುಖ್ಯವಾಗಿದೆ. ಈ ಸಂಬಂಧ ವೃದ್ಧಿಯಾದ್ರೆ ಜಗತ್ತಿನಲ್ಲಿ ಬಲಿಷ್ಠರಾಗುತ್ತೇವೆ. ಡಿಜಿಟಲ್, ಸ್ಟಾರ್ಟ್ ಆಪ್, ಕೈಗಾರಿಕೋದ್ಯಮ, ನವೋಧ್ಯಮದಲ್ಲಿ ಭಾರತ ಪ್ರಗತಿ ಹೊಂದುತ್ತಿದೆ. ಅದರಂತೆ ರಕ್ಷಣಾ ವಲಯ ಬಲಿಷ್ಠವಾಗುತ್ತಿದೆ ಎಂದು ಶ್ಲಾಘಿಸಿದರು. ಇದನ್ನೂ ಓದಿ: ದೇಶದ ವಿವಿಧ ನಗರಗಳ ಮೆಟ್ರೋ ದರಕ್ಕಿಂತಲೂ ಬೆಂಗಳೂರು ಮೆಟ್ರೋ ದರವೇ ದುಬಾರಿ!

    ಹೆಚ್‌ಎಎಲ್‌ ಬಗ್ಗೆ ಮೆಚ್ಚುಗೆ:
    ಇದೇ ವೇಳೆ ಬೆಂಗಳೂರಿನ ಹೆಚ್‌ಎಎಲ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ರಾಜನಾಥ್‌ ಸಿಂಗ್‌, ಗುಜರಾತ್ ನಲ್ಲಿ ರಕ್ಷಣಾ ವ್ಯವಸ್ಥೆಗೆ ಸಂಬಂಧಿಸಿದ ಉತ್ಪಾದನಾ ಘಟಕ ಆರಂಭವಾಗಿದೆ. ಬೆಂಗಳೂರನ್ನ ಸಿಲಿಕಾನ್ ವ್ಯಾಲಿ ಎನ್ನಬಹುದು. ಯುದ್ಧ ವಿಮಾನಗಳು, ಡ್ರೋನ್ಸ್, ರಡಾರ್ ಸೇರಿ ರಕ್ಷಣಾ ಉತ್ಪಾದನೆಯಲ್ಲಿ ಭಾರತ ಪ್ರಗತಿ ಸಾಧಿಸುತ್ತಿದೆ. 400ಕ್ಕೂ ಹೆಚ್ಚು ದೇಶಿಯ ರಕ್ಷಣಾ ವ್ಯವಸ್ಥೆಗೆ ಸಂಬಂಧಪಟ್ಟ ಖಾಸಗಿ ಕಂಪನಿಗಳು ಪ್ರದರ್ಶಕರು ಭಾಗಿಯಾಗಿದ್ದಾರೆ. ಮುಂದಿನ 2 ವರ್ಷಗಳಲ್ಲಿ ಮತ್ತಷ್ಟು ಅಭಿವೃದ್ಧಿ ಸಾಧಿಸಲಿದ್ದೇವೆ. ಡಿಫೆನ್ಸ್ ರಪ್ತು 21,000 ಕೋಟಿಗೂ ಹೆಚ್ಚಾಗಿದೆ. ಅಲ್ಲದೇ ಮುಂದುವರೆದ ರಾಷ್ಟ್ರಗಳಲ್ಲಿ ರಕ್ಷಣಾ ಉತ್ಪನ್ನಗಳ ಪಾಲುದಾರಿಕೆಯಲ್ಲಿ ಭಾರತ ಭಾಗಿಯಾಗಿದೆ ಎಂದು ಶ್ಲಾಘಿಸಿದ್ರು.

    ಬಾನಂಗಳ ಬೆಳಗಿದ ʻತೇಜಸ್‌ʼ:
    ವೇದಿಕೆ ಕಾರ್ಯಕ್ರಮದ ಬಳಿಕ ಮೊದಲ ದಿನವೇ ಸ್ವದೇಶಿ ಯುದ್ಧ ವಿಮಾನಗಳು ತಮ್ಮ ಸಾಮರ್ಥ್ಯ ಪ್ರದರ್ಶನಕ್ಕಿಳಿದಿವೆ. ಮೊದಲ ದಿನವೇ ತೇಜಸ್ ಎಂಕೆ1ಎ, ಹೆಚ್‌ಎಎಲ್ ನಿರ್ಮಾಣದ ಹಿಂದೂಸ್ತಾನ್ ಟರ್ಬೋ ಟ್ರೈನರ್-40 ಘರ್ಜಿಸಿವೆ. ಇದರೊಂದಿಗೆ ʻನೂರು ಕೋಟಿ ಅವಕಾಶಗಳಿಗೆ ರಹದಾರಿʼ ಪರಿಕಲ್ಪನೆಯಡಿ ದೇಶಿಯ ವಸ್ತುಗಳ ಪ್ರದರ್ಶನ ಶುರುವಾಗಿವೆ. ಇದನ್ನೂ ಓದಿ: Bengaluru | ಏರ್‌ ಶೋ ಹಿನ್ನೆಲೆ ಟ್ರಾಫಿಕ್ ಜಾಮ್ ಬಿಸಿ – ಕಿಲೋಮೀಟರ್‌ಗಟ್ಟಲೆ ನಿಂತ ವಾಹನಗಳು

  • Aeroindia 2025| ಯಲಹಂಕ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಸಿ: ಬಿಬಿಎಂಪಿ

    Aeroindia 2025| ಯಲಹಂಕ ವ್ಯಾಪ್ತಿಯ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಸಿ: ಬಿಬಿಎಂಪಿ

    ಬೆಂಗಳೂರು: ಏರ್‌ ಶೋ (Air Show) ಹಿನ್ನೆಲೆಯಲ್ಲಿ ಯಲಹಂಕ ವಾಯುಸೇನಾ ನೆಲೆಯ (Yelahanka Air Force Station) ಸುತ್ತಮುತ್ತ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳ ಮೇಲೆ ಕ್ರೇನ್ (Crane) ಎತ್ತರವನ್ನು ತಗ್ಗಿಸುವಂತೆ ಬಿಬಿಎಂಪಿ (BBMP) ಸುತ್ತೋಲೆ ಪ್ರಕಟಿಸಿದೆ.

    ಕಾರ್ಯಕ್ರಮದಲ್ಲಿ ಹಲವು ಯುದ್ಧ ವಿಮಾನಗಳು ಭಾಗಿಯಾಗಿ ಕಸರತ್ತು ನಡೆಸುವ ಹಿನ್ನೆಲೆಯಲ್ಲಿ ಬಿಬಿಎಂಪಿ (BBMP) ಈಗ ಸುತ್ತೋಲೆ ಪ್ರಕಟಿಸಿ ಬಹುಮಹಡಿ ಕಟ್ಟಡಗಳ ಸಂಸ್ಥೆಗಳ/ ಅಭಿವೃದ್ಧಿದಾರರಿಗೆ ಸೂಚನೆ ನೀಡಿದೆ.

    ಸುತ್ತೋಲೆಯಲ್ಲಿ ಏನಿದೆ?
    ಅಂತರಾಷ್ಟ್ರೀಯ ಮಟ್ಟದ ಏರ್ ಇಂಡಿಯಾ ನಡೆಯಲಿರುವ ಹಿನ್ನೆಲೆಯಲ್ಲಿ ಫೆ.1 ರಿಂದ ಫೆ.14ರವರೆಗೆ ಯಲಹಂಕ ವಾಯುಸೇನಾ ನೆಲೆಯಿಂದ 10 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದಲ್ಲಿರುವ ಬೃಹತ್ ಕಟ್ಟಡಗಳಲ್ಲಿ ಉಪಯೋಗಿಸುವ ಕ್ರೇನ್‌ಗಳ ಎತ್ತರವನ್ನು ತಗ್ಗಿಸಬೇಕು ಹಾಗೂ ಕ್ರೇನ್ ಚಟುವಟಿಕೆಯನ್ನು ನಿಲ್ಲಿಸಬೇಕು. ಇದನ್ನೂ ಓದಿ: ಫೆ.10 ರಿಂದ ಬೆಂಗಳೂರಿನಲ್ಲಿ `ಏರೋ ಇಂಡಿಯಾ 2025′ – ಏಷ್ಯಾದ ಅತಿದೊಡ್ಡ ಏರ್‌ ಶೋ!

    ವಾಯುಸೇನಾ ನೆಲೆಯಿಂದ 10 ಕಿ.ಮೀ ಅಂತರದಲ್ಲಿ ನಿರ್ಮಾಣ ಹಂತದಲ್ಲಿರುವ ಎಲ್ಲಾ ಬೃಹತ್ ಕಟ್ಟಡಗಳು, ಮೇಲಿನ ನಿಯಮಗಳನ್ನು ಉಲ್ಲಂಘಿಸಿದಲ್ಲಿ ಬಿಬಿಎಂಪಿ ಕಾಯ್ದೆ 2020 ಮತ್ತು ಭಾರತೀಯ ಏರ್‌ಕ್ರಾಪ್ಟ್ 1937ರ ರೂಲ್‌ 91 ರಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

    ಯಲಹಂಕದ ವಾಯುನೆಲೆಯಲ್ಲಿ ಫೆಬ್ರವರಿ 10 ರಿಂದ 14 ರವರೆಗೆ ಏರೋ ಇಂಡಿಯಾ-2025 (Aeroindia 2025)ವೈಮಾನಿಕ ಪ್ರದರ್ಶನ ನಡೆಯಲಿದ್ದು ಫೆ.13, 14 ರಂದು ಸಾರ್ವಜನಿಕರ ವೀಕ್ಷಣೆಗೆ ಅವಕಾಶವಿದೆ.

     

  • ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಬೆಂಗಳೂರಿನಲ್ಲಿ ಎಫ್‌16 ಯುದ್ಧ ವಿಮಾನ ಹಾರಿಸಿದ್ದ ರತನ್‌ ಟಾಟಾ

    ಸಾಹಸ ಪ್ರೇಮಿಯಾಗಿದ್ದ ರತನ್‌ ಟಾಟಾ (Ratan Tata) ಅವರು ಬೆಂಗಳೂರಿನಲ್ಲಿ (Bengaluru) ಅಮೆರಿಕದ ಎಫ್‌ 16 ಫಾಲ್ಕನ್‌ (F-16 Fighting Falcon) ಯುದ್ಧ ವಿಮಾನವನ್ನು ಹಾರಿಸಿದ್ದರು. ಅದು 69ರ ವಯಸ್ಸಿನಲ್ಲಿ ಎನ್ನುವುದು ವಿಶೇಷ.

    2007ರಲ್ಲಿ ನಡೆದ ಏರೋ ಇಂಡಿಯಾ (Aero India) ವೈಮಾನಿಕ ಪ್ರದರ್ಶನಲ್ಲಿ ಅಮೆರಿಕದ ಲಾಕ್‌ಹಿಡ್‌ ಮಾರ್ಟಿನ್‌ ಕಂಪನಿ ನಿರ್ಮಿಸಿದ 400 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎಫ್‌-16 ಯುದ್ಧ ವಿಮಾನ ಭಾಗಿಯಾಗಿತ್ತು. ಈ ಯುದ್ಧ ವಿಮಾನವನ್ನು ರತನ್‌ ಟಾಟಾ ಹಾರಿಸಿದ್ದರು. ಈ ಮೂಲಕ ಎಫ್‌-16 ಹಾರಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇದನ್ನೂ ಓದಿ: ಹೋಗಿ ಬಾ ನನ್ನ ಗೆಳೆಯ – ರತನ್ ಟಾಟಾ ನಿಧನಕ್ಕೆ ಸ್ನೇಹಿತೆ ಸಿಮಿ ಭಾವುಕ ಪೋಸ್ಟ್​


    ರತನ್‌ ಟಾಟಾ ಅವರು ಜೆಟ್‌, ಹೆಲಿಕಾಪ್ಟರ್‌ ಹಾರಿಸಲು ಪರವಾನಗಿ ಹೊಂದಿದ್ದರು. ಸಹ ಪೈಲೆಟ್‌ ಮಾರ್ಗದರ್ಶನದಲ್ಲಿ ಟಾಟಾ ಅವರು ಸುಮಾರು 40 ನಿಮಿಷ ವಿಮಾನ ಹಾರಿಸಿದರು. ಹಾರಾಟದ ಅವಧಿಯಲ್ಲಿ ಎಫ್‌16 ವಿಮಾನ ಪ್ರತಿ ಗಂಟೆಗೆ 2000 ಕಿ.ಮೀ ವೇಗದಲ್ಲಿ ಸಂಚರಿಸಿತ್ತು. ಇದನ್ನೂ ಓದಿ: ಭಾರತೀಯನಾಗಿರುವುದೇ ಅದೃಷ್ಟ, ಭಾರತ ರತ್ನ ಅಭಿಯಾನವನ್ನು ನಿಲ್ಲಿಸಿ ಎಂದಿದ್ದ ರತನ್‌ ಟಾಟಾ

    ಲ್ಯಾಂಡಿಂಗ್‌ ನಂತರ ಟಾಟಾ ಅವರನ್ನು ಲಾಕ್‌ಹೀಡ್ ಮಾರ್ಟಿನ್ ಅಧಿಕಾರಿಗಳು ರತನ್‌ ಟಾಟಾ ಅವರನ್ನು ಸ್ವಾಗತಿಸಿ F-16 ನ ಚಿಕ್ಕ ಪ್ರತಿಕೃತಿಯನ್ನು ನೀಡಿದರು. ಈ ಸಮಯದಲ್ಲಿ ಅಮೆರಿಕದ ರಕ್ಷಣಾ ದೈತ್ಯ ಲಾಕ್‌ಹಿಡ್‌ ಮಾರ್ಟಿನ್‌ ಭಾರತದೊಂದಿಗೆ ಶತಕೋಟಿ ಡಾಲರ್‌ಗಳ ಪ್ರಮುಖ ರಕ್ಷಣಾ ಒಪ್ಪಂದಕ್ಕಾಗಿ ಸ್ಪರ್ಧಿಸುತ್ತಿತ್ತು.

    ಈ ಪ್ರಯಾಣದ ನಂತರ ಇದೊಂದು ಅದ್ಭುತ ಅನುಭವ ಎಂದು ರತನ್‌ ಟಾಟಾ ಬಣ್ಣಿಸಿದ್ದರು. ಫೈಟರ್‌ ಜೆಟ್‌ ಹಾರಿಸಿದ ಸುಮಾರು 10 ವರ್ಷದ ನಂತರ ಲಾಕ್‌ಹಿಟ್‌ ಮಾರ್ಟಿನ್‌ ಕಂಪನಿಯ ಜೊತೆ ಭಾರತದಲ್ಲಿ F-16 ಬ್ಲಾಕ್ 70 ಅನ್ನು ಉತ್ಪಾದಿಸಲು ಮಹತ್ವದ ಒಪ್ಪಂದಕ್ಕೆ ರತನ್‌ ಟಾಟಾ ಸಹಿ ಹಾಕಿದರು.

     

  • ಏರೋ ಇಂಡಿಯಾದಲ್ಲಿ ಭಾಗಿಯಾಗಲಿದೆ ಅಮೆರಿಕದ ಅತಿ ದೊಡ್ಡ ನಿಯೋಗ

    ಏರೋ ಇಂಡಿಯಾದಲ್ಲಿ ಭಾಗಿಯಾಗಲಿದೆ ಅಮೆರಿಕದ ಅತಿ ದೊಡ್ಡ ನಿಯೋಗ

    ಬೆಂಗಳೂರು: ಫೆಬ್ರುವರಿ 12ರಿಂದ 17ರವರೆಗೆ ಬೆಂಗಳೂರಿನ (Bengaluru) ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ಏರೋ ಇಂಡಿಯಾ-2023 (Aero India 2023) ಪ್ರದರ್ಶನದಲ್ಲಿ ಭಾರತದಲ್ಲಿನ ಯು.ಎಸ್‌. ಮಿಷನ್‌ನ ಚಾರ್ಜೆ ಡಿ ಅಫೇರ್ಸ್‌ ರಾಯಭಾರಿ ಎಲಿಜಬೆತ್‌ ಜೋನ್ಸ್‌ ಅವರು ಈವರೆಗಿನ ಅಮೆರಿಕದ ಅತಿ ದೊಡ್ಡ ನಿಯೋಗವನ್ನು (U.S.A Delegation) ಮುನ್ನಡೆಸಿ ಪಾಲ್ಗೊಳ್ಳಲಿದ್ದಾರೆ.

    ಅಮೆರಿಕ (America) ವೈಮಾನಿಕ ಉದ್ಯಮ ಹಾಗೂ ಸೇನಾಪಡೆಯ ವಿಶ್ವ ದರ್ಜೆಯ ಉಪಕರಣಗಳು, ತರಬೇತಿ, ತಾಕತ್ತು ಹಾಗೂ ಜಂಟಿ ಅಭ್ಯಾಸದ ಸಾಮರ್ಥ್ಯಗಳನ್ನು ಪ್ರದರ್ಶಿಸುವ ನಿಟ್ಟಿನಲ್ಲಿ ಅಮೆರಿಕದ ಅತಿ ದೊಡ್ಡ ನಿಯೋಗವನ್ನು ಮುನ್ನಡೆಸಲು ನನಗೆ ಹೆಮ್ಮೆಯೆನಿಸುತ್ತಿದೆ. ಭಾರತ ತನ್ನ ಸೇನಾ ಸಾಮರ್ಥ್ಯವನ್ನು ಆಧುನೀಕರಣಗೊಳಿಸುತ್ತಿರುವ ಸಮಯದಲ್ಲಿ ನಾವು ಐಚ್ಛಿಕ ಪಾಲುದಾರರಾಗಲು ಬಯಸುತ್ತೇವೆ. ಉಭಯ ದೇಶಗಳಿಗೂ ಲಾಭದಾಯಕವಾಗುವ ಜಂಟಿ ಉತ್ಪಾದನೆ ಹಾಗೂ ಜಂಟಿ ಅಭಿವೃದ್ಧಿಯ ಪಾಲುದಾರಿಕೆಯತ್ತ ನಾವು ಹೆಚ್ಚಿನ ಗಮನ ನೀಡುತ್ತಿದ್ದೇವೆ. ಸುರಕ್ಷಿತವಾದ, ಸಮೃದ್ಧಿಯಾದ, ಅತ್ಯಂತ ಮುಕ್ತವಾದ ಹಾಗೂ ಸ್ವತಂತ್ರ ʻಇಂಡೋ -ಪೆಸಿಫಿಕ್‌ʼ ಪ್ರಾಂತ್ಯಕ್ಕಾಗಿ ನಾವು ಭಾರತವನ್ನು ಅತ್ಯಂತ ಪ್ರಮುಖ ಪಾಲುದಾರ ದೇಶವಾಗಿ ಪರಿಗಣಿಸುತ್ತೇವೆ ಎಂದು ಅಂಬಾಸಡರ್‌ ಜೋನ್ಸ್‌ ತಿಳಿಸಿದ್ದಾರೆ.

    ಅಮೆರಿಕದ ಸೇನಾ ಪಡೆಯ ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ಅತ್ಯಾಧುನಿಕ ವಿಮಾನಗಳು ಏರೋ ಇಂಡಿಯಾ-2023 ರಲ್ಲಿ ಭಾಗಿಯಾಗಲಿವೆ. ಇದನ್ನೂ ಓದಿ: 500 ವಿಮಾನ ಖರೀದಿಗೆ ಆರ್ಡರ್‌ – ವಿಶ್ವ ದಾಖಲೆ ಬರೆದ ಏರ್‌ ಇಂಡಿಯಾ

    ಅಮೆರಿಕದ ಪ್ರಮುಖ ಸೇನಾ ಕಂಪನಿಗಳಾದ ಏರೋ ಮೆಟಲ್ಸ್‌ ಅಲಯನ್ಸ್‌, ಆಸ್ಟ್ರೋನಾಟಿಕ್ಸ್‌ ಕಾರ್ಪೋರೇಷನ್‌ ಆಫ್‌ ಅಮೆರಿಕ, ಬೋಯಿಂಗ್‌, ಜಿಇ ಏರೋಸ್ಪೇಸ್‌, ಜನರಲ್‌ ಅಟಾಮಿಕ್ಸ್‌ ಏರೋನಾಟಿಕಲ್‌ ಸಿಸ್ಟಮ್ಸ್‌ ಇಂಕ್‌, ಹೈ ಟೆಕ್‌ ಇಂಪೋರ್ಟ್‌ ಎಕ್ಸ್‌ಪೋರ್ಟ್‌ ಕಾರ್ಪೋರೇಷನ್‌, ಜೋನಲ್‌ ಲ್ಯಾಬೋರೆಟರೀಸ್‌, ಲಾಕ್‌ಹೀಡ್‌ ಮಾರ್ಟಿನ್‌, ಪ್ರಾಟ್‌ ಅಂಡ್‌ ವೈಟ್ನೆ ಮತ್ತು ಟಿಡಬ್ಲ್ಯೂ ಮೆಟಲ್ಸ್‌ ಇವುಗಳ ವಿಮಾನಗಳು ಏರೋ ಇಂಡಿಯಾ 2023ರ ʻಯುಎಸ್‌ಎ ಪಾರ್ಟನರ್‌ಶಿಪ್‌ ಪೆವಿಲಿಯನ್‌ʼನ ಪ್ರದರ್ಶನದಲ್ಲಿ ಭಾಗಿಯಾಗಲಿವೆ. ‌

    ಭಾರತದ ಅತಿದೊಡ್ಡ ವೈಮಾನಿಕ ಪ್ರದರ್ಶನಕ್ಕೆ ದ್ವಿಪಕ್ಷೀಯ ಬೆಂಬಲ ನೀಡುವ ದಿಸೆಯಲ್ಲಿ ಅಮೆರಿಕದ ವಾಯುಪಡೆಯ ಏಳು ಸದಸ್ಯರ ಬ್ಯಾಂಡ್‌ ʻಫೈನಲ್‌ ಅಪ್ರೋಚ್‌ʼ ಫೆಬ್ರುವರಿ 16ರಂದು ಏರೋ ಇಂಡಿಯಾದಲ್ಲಿ ಸಾರ್ವಜನಿಕರಿಗಾಗಿ ಹಾಗೂ ಇಡೀ ವಾರ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ದೇಶಿಯ ಯುದ್ಧ ವಿಮಾನ ತೇಜಸ್ ಏರಿದ ಪಿವಿ ಸಿಂಧು

    ದೇಶಿಯ ಯುದ್ಧ ವಿಮಾನ ತೇಜಸ್ ಏರಿದ ಪಿವಿ ಸಿಂಧು

    ಬೆಂಗಳೂರು: ಏರೋ ಇಂಡಿಯಾ 2019 ಪ್ರಯುಕ್ತ ಇಂದು ಶನಿವಾರ ನಡೆದ ಪ್ರದರ್ಶನದಲ್ಲಿ ಬ್ಯಾಡ್ಮಿಂಟನ್ ಸ್ಟಾರ್ ಪಿವಿ ಸಿಂಧು ಅವರು ತೇಜಸ್ ನಲ್ಲಿ ಹಾರಾಟ ನಡೆಸಿದರು. ಈ ಮೂಲಕ ಮೇಡ್ ಇನ್ ಇಂಡಿಯಾ ಯೋಜನೆ ಮೂಲಕ ನಿರ್ಮಿಸಲಾಗಿದ್ದ ತೇಜಸ್ ವಿಮಾನಕ್ಕೆ ಮಹಿಳಾ ಕೋ ಪೈಲಟ್ ಎಂಬ ಹೆಗ್ಗಳಿಕೆ ಪಡೆದರು.

    ಸುಮಾರು 25 ನಿಮಿಷ ಆಗಸದಲ್ಲಿ ವಿಮಾನದಲ್ಲಿ ಸುತ್ತಾಡಿದ ಸಿಂಧು ರೋಮಾಂಚನಗೊಂಡಿದ್ದರು. ವಿಮಾನ ಹಾರಾಟ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಂಧು, ತೇಜಸ್ ನಿಜವಾದ ಹೀರೋ ಆಗಿದ್ದು, ಹಾರಾಟ ನಡೆಸಲು ನನಗೆ ಅವಕಾಶ ಲಭಿಸಿದ್ದು ಸೌಭಾಗ್ಯ ಎಂದು ಹೇಳಿದ್ದಾರೆ.

    ಕ್ರೀಡಾಪಟುಗಳಲ್ಲಿ ಮೊದಲ ಬಾರಿಗೆ ವಿಮಾನ ಹಾರಾಟ ನಡೆಸಿದ ಗೌರಕ್ಕೆ ಸಿಂಧು ಪಾತ್ರರಾಗಿದ್ದು, ಇದಕ್ಕೆ ಅವಕಾಶ ನೀಡಿದ ಡಿಆರ್‍ಡಿಒ ಗೆ ಋಣಿಯಾಗಿದ್ದೇನೆ ಎಂದು ಸಿಂಧು ಹೇಳಿದ್ದಾರೆ. ವಿಂಗ್ ಕಮಾಂಡರ್ ಸಿದ್ದಾರ್ಥ್ ಅವರೊಂದಿಗೆ ಸಿಂಧು ವಿಮಾನ ಹಾರಾಟ ನಡೆಸಿದ್ದರು.

    ಮೇಡ್ ಇನ್ ಇಂಡಿಯಾ ಯೋಜನೆಯ ಭಾಗವಾಗಿ ರಾಜ್ಯ ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಸಂಸ್ಥೆ ತೇಜಸ್ ವಿಮಾನವನ್ನು ನಿರ್ಮಿಸಿದೆ. ತೇಜಸ್ ಮಲ್ಟಿರೋಲ್ ಲೈಟ್ ಫೈಟರ್ ಜೇಟ್ ಆಗಿದ್ದು, ಪ್ರಥಮ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ ಎಂಬ ಹೆಗ್ಗಳಿಕೆಯನ್ನು ತೇಜಸ್ ಪಡೆದಿದೆ. ಏರ್ ಶೋ ಭಾಗವಾಗಿ ಭಾರತ ಭೂಸೇನಾ ಮುಖ್ಯಸ್ಥರಾದ ಬಿಪಿನ್ ರಾವತ್ ಕೂಡ ತೇಜಸ್ ವಿಮಾನದಲ್ಲಿ ಹಾರಾಟ ನಡೆಸಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಬೆಂಗಳೂರಿಗೆ ಬಂದಿಳಿಯಿತು ರಫೇಲ್ ವಿಮಾನಗಳು – ವಿಶೇಷತೆ ಏನು? ವಿಡಿಯೋ ನೋಡಿ

    ಬೆಂಗಳೂರಿಗೆ ಬಂದಿಳಿಯಿತು ರಫೇಲ್ ವಿಮಾನಗಳು – ವಿಶೇಷತೆ ಏನು? ವಿಡಿಯೋ ನೋಡಿ

    ಬೆಂಗಳೂರು: ಸದ್ಯ ದೇಶದ ರಾಜಕೀಯ ವಲಯದಲ್ಲಿ ಭಾರೀ ಸದ್ದು ಮಾಡುತ್ತಿರುವ ರಫೇಲ್ ವಿಮಾನ ಭಾರತದಲ್ಲಿ ಲ್ಯಾಂಡ್ ಆಗಿದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನಕ್ಕೆ ಫ್ರಾನ್ಸಿನ ಡಸಾಲ್ಟ್ ಕಂಪನಿಯ 3 ರಫೇಲ್ ವಿಮಾನಗಳು ಯಲಹಂಕ ವಾಯುನೆಲೆಗೆ ಆಗಮಿಸಿವೆ.

    ಮೂರು ವಿಮಾನಗಳ ಪೈಕಿ 2 ವಿಮಾನಗಳು ವೈಮಾನಿಕ ಪ್ರದರ್ಶನ ನೀಡಿದರೆ ಒಂದು ವೀಕ್ಷಣೆಗೆ ಇರಿಸಲಾಗುತ್ತದೆ. ಹಾರಾಟ ಪ್ರದರ್ಶನ ನೀಡಲಿರುವ ವಿಮಾನಗಳ ಅಧಿಕೃತ ಪೂರ್ವಸಿದ್ಧತೆಯ ಹಾರಾಟ ಗುರುವಾರದಿಂದ ಆರಂಭವಾಗಲಿದೆ. 12ನೇ ಆವೃತ್ತಿಯ ಏರೋ ಇಂಡಿಯಾ ವೈಮಾನ ನಿಕ ಪ್ರದರ್ಶನ ಫೆ.20 ರಿಂದ ಫೆ.24ರವರೆಗೆ ನಡೆಯಲಿದೆ. ಇದನ್ನೂ ಓದಿ: ರಫೇಲ್ ಡೀಲ್ – ಯಾವುದು ಅಗ್ಗ? ಯಾವುದು ದುಬಾರಿ?

    ಇದುವರೆಗೆ ದೇಶ- ವಿದೇಶಗಳ 365 ಕಂಪನಿಗಳು ಪ್ರದರ್ಶನದಲ್ಲಿ ಭಾಗವಹಿಸಲು ನೋಂದಣಿ ಮಾಡಿಕೊಂಡಿದ್ದು, ಆಕಾಶದಲ್ಲಿ ಪ್ರದರ್ಶನ ನೀಡಲು 31 ವಿಮಾನಗಳು ಒಪ್ಪಿಗೆ ನೀಡಿವೆ. 22 ವಿಮಾನಗಳನ್ನು ಪ್ರದರ್ಶನಕ್ಕಿಡಲಾಗುತ್ತಿದ್ದು, ದೇಶೀಯ ಸಾರಂಗ್, ಸೂರ್ಯಕಿರಣ್ ವಿಮಾನಗಳು ಭಾಗವಹಿಸಲಿವೆ.

    ರಫೇಲ್ ವಿಶೇಷತೆ ಏನು?
    ಎರಡು ಎಂಜಿನ್, ಎರಡು ಸೀಟ್ ಗಳನ್ನು ಹೊಂದಿರುವ ವಿಮಾನ ಗಂಟೆಗೆ ಗರಿಷ್ಟ 2 ಸಾವಿರ ಕಿ.ಮೀ ವೇಗದಲ್ಲಿ ಹಾರಾಟ ನಡೆಸಬಲ್ಲದು. 9,500 ಕೆಜಿ ತೂಕದ ಈ ವಿಮಾನ 9,500 ಕೆಜಿ ತೂಕದ ಶಸ್ರ್ತಾಸ್ತ್ರಗಳನ್ನು ಹೊತ್ತುಕೊಂಡು ಹೋಗುವ ಸಾಮರ್ಥ್ಯವನ್ನು ಹೊಂದಿದೆ. ಈ ವಿಮಾನ ಇಳಿಯಲು ಮತ್ತು ಹಾರಾಟಕ್ಕೆ 400 ಮೀಟರ್ ಉದ್ದದ ರನ್‍ವೇ ಅಗತ್ಯವಿಲ್ಲ.

    ವೈರಿಗಳನ್ನು ಗುರುತಿಸಲು ರಫೇಲ್ ವಿಮಾನದಲ್ಲಿ ಸ್ಪೆಕ್ಟ್ರಾ ಸಿಸ್ಟಂ ಇದೆ. ಥೇಲ್ಸ್ ಗ್ರೂಪ್ ಈ ಸ್ಪೆಕ್ಟ್ರಾ ಸಿಸ್ಟಂ ಅನ್ನು ಅಭಿವೃದ್ಧಿ ಪಡಿಸಿದೆ. ರೇಡಿಯೋ ಫಿಕ್ವೆನ್ಸಿ, ರೇಡಾರ್ ವಾರ್ನಿಂಗ್ ರಿಸೀವರ್, ಲೇಸರ್ ವಾರ್ನಿಂಗ್, ಮಿಸೈಲ್ ವಾರ್ನಿಂಗ್, ರೇಡಾರ್ ಜಾಮರ್ ಗಳನ್ನು ಸ್ಪೆಕ್ಟ್ರಾ ಸಿಸ್ಟಂ ನಲ್ಲಿರುವ ಸೆನ್ಸರ್ ಗಳು ಗ್ರಹಿಸುತ್ತವೆ. 1800 ಕಿ.ಮಿ ವ್ಯಾಪ್ತಿ ವಿರೋಧಿಗಳ ಕಾರ್ಯ ಚಟುವಟಿಕೆಯನ್ನು ಗ್ರಹಿಸುವ ಸಾಮರ್ಥ್ಯ ಹೊಂದಿದೆ. ಈ ಕಾರಣಕ್ಕಾಗಿಯೇ ರಫೇಲ್ ವಿಮಾನ ಬೇರೆ ಯುದ್ಧ ವಿಮಾನಗಳಿಗಿಂತ ಭಿನ್ನವಾಗಿ ಗುರುತಿಸಿಕೊಂಡಿದೆ.

    ಡಸಾಲ್ಟ್ ಕಂಪನಿ 1986ರಲ್ಲಿ ಮೊದಲ ರಫೇಲ್ ವಿಮಾನವನ್ನು ನಿರ್ಮಿಸಿದ್ದು, ಭಾರತ ಅಲ್ಲದೇ ಈಜಿಪ್ಟ್, ಕತಾರ್ ದೇಶಗಳು ರಫೇಲ್ ಖರೀದಿ ಸಂಬಂಧ ಡಸಾಲ್ಟ್ ಕಂಪನಿಯ ಜೊತೆ ಮಾತುಕತೆ ನಡೆಸಿವೆ. ಇದನ್ನೂ ಓದಿ: ಪ್ರಧಾನಿ ಮೋದಿಗೆ ಅತಿ ದೊಡ್ಡ ಗೆಲುವು: ಸುಪ್ರೀಂ ತೀರ್ಪಿನಲ್ಲಿರುವ ಪ್ರಮುಖ ಅಂಶಗಳು ಏನು?

    ಯಾವ ದೇಶ ಏನು ಬೇಡಿಕೆ ಇಡುತ್ತದೋ ಆ ಬೇಡಿಕೆಗೆ ಅನುಗುಣವಾಗಿ ಡಸಾಲ್ಟ್ ಕಂಪನಿ ರಫೇಲ್ ವಿಮಾನವನ್ನು ಅಭಿವೃದ್ಧಿ ಪಡಿಸುತ್ತದೆ. ಲೋ ಬ್ಯಾಂಡ್ ಜಾಮರ್, 10 ಗಂಟೆಗಳ ಹಾರಾಟ ಮಾಹಿತಿ ಸಂಗ್ರಹ, ಇಸ್ರೇಲಿ ಹೆಲ್ಮೆಟ್ ಮೌಂಟೆಡ್ ಡಿಸ್ಪ್ಲೇ, ರೆಡಾರ್ ವಾರ್ನಿಂಗ್ ಇನ್ಫ್ರಾರೆಡ್ ಶೋಧ ಮತ್ತು ಟ್ರ್ಯಾಕಿಂಗ್ ಸೇರಿದಂತೆ ಹಲವು ಅತ್ಯಾಧುನಿಕ ಉಪಕರಣಗಳ ಹಾಗೂ ಸೌಲಭ್ಯಗಳನ್ನು  ಅಳವಡಿಸಬೇಕೆಂದು ಭಾರತ ಬೇಡಿಕೆ ಇಟ್ಟಿದ್ದು, ಈ ಬೇಡಿಕೆಗೆ ಅನುಗುಣವಾಗಿ ರಫೇಲ್ ವಿಮಾನ ತಯಾರಾಗುತ್ತಿದೆ.

  • ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸಿದ್ರು ಸಿಎಂ ಎಚ್‍ಡಿಕೆ

    ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸಿದ್ರು ಸಿಎಂ ಎಚ್‍ಡಿಕೆ

    ಬೆಂಗಳೂರು: ಏರೋ ಇಂಡಿಯಾ ಪ್ರದರ್ಶನ ಈ ಬಾರಿ ಬೆಂಗಳೂರಿನಲ್ಲೇ ನಡೆಯುವುದು ಅಧಿಕೃತವಾಗಿದ್ದು, ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಕ್ಷಣಾ ಸಚಿವಾಲಯಕ್ಕೆ ವಂದನೆಗಳನ್ನು ಸಲ್ಲಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಸಿಎಂ, ಏರೋ ಇಂಡಿಯಾ ಪ್ರದರ್ಶನ ಈ ಬಾರಿಯೂ ಬೆಂಗಳೂರಿನಲ್ಲಿಯೇ ಜರುಗಲಿದೆ. ಇದು ನನಗೆ ತುಂಬಾ ಸಂತೋಷ ತಂದಿದೆ. ಬೆಂಗಳೂರಿನಿಂದ ಬೇರೆಡೆಗೆ ಸ್ಥಳಾಂತರಿಸಲಾಗುವುದು ಎನ್ನುವ ವಿಷಯ ಆತಂಕ ತಂದಿತ್ತು. ಪ್ರತಿಷ್ಠಿತ ಏರ್ ಶೋ ಇಲ್ಲಿಯೇ ಮುಂದುವರಿಸುತ್ತಿರುವುದಕ್ಕಾಗಿ ರಕ್ಷಣಾ ಸಚಿವಾಲಯಕ್ಕೆ ವಂದನೆ ಸಲ್ಲಿಸುತ್ತೇನೆ ಅಂತ ಹೇಳಿದ್ದಾರೆ.

    2019ರ ಏರೋ ಇಂಡಿಯಾ ಏರ್ ಶೋ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಲಕ್ನೋದಲ್ಲಿ ಏರ್ ಶೋ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರದ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಲಕ್ನೋದಲ್ಲಿ ನಡೆಸಲು ಸಿದ್ಧತೆ ನಡೆಸಿದೆ ಎನ್ನುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬೆಂಗಳೂರಿಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಆಗಮಿಸಿದ್ದ ವೇಳೆ ಈ ಪ್ರಶ್ನೆ ಕೇಳಿದ್ದಕ್ಕೆ ವಿವಿಧ ರಾಜ್ಯಗಳು ಏರ್ ಶೋ ನಡೆಸುವಂತೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿಸಿದರೇ ಹೊರತು ಬೆಂಗಳೂರಿನಲ್ಲೇ ನಡೆಯಲಿದೆ ಎನ್ನುವುದನ್ನು ತಿಳಿಸಿರಲಿಲ್ಲ. ಈ ಎಲ್ಲ ಕಾರಣದಿಂದ ಏರ್ ಶೋ ಬೆಂಗಳೂರಿನಲ್ಲಿ ನಡೆಯುತ್ತಾ ಎನ್ನುವ ಅನುಮಾನ ಎದ್ದಿತ್ತು.

    2019ರ ಫೆಬ್ರವರಿ 20-24ರ ವರೆಗೆ ಮೆಗಾ ಏರ್ ಶೋ ನಡೆಸಲು ಸಿದ್ಧತೆ ನಡೆದಿದೆ. 1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಆಯೋಜನೆಯಾಗುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಈಗ ಅಧಿಕೃತ, ಬೆಂಗ್ಳೂರಿನಲ್ಲೇ 2019ರ ಏರ್ ಶೋ!

    ಈಗ ಅಧಿಕೃತ, ಬೆಂಗ್ಳೂರಿನಲ್ಲೇ 2019ರ ಏರ್ ಶೋ!

    ನವದೆಹಲಿ: 2019ರ ಏರೋ ಇಂಡಿಯಾ ಏರ್ ಶೋ ಕಾರ್ಯಕ್ರಮ ಬೆಂಗಳೂರಿನಲ್ಲಿ ನಡೆಸಲು ಕೇಂದ್ರ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಈ ಮೂಲಕ ಉತ್ತರ ಪ್ರದೇಶದ ಲಕ್ನೋಗೆ ಏರ್ ಶೋ ಸ್ಥಳಾಂತರವಾಗಲಿದೆ ಎನ್ನುವ ಸುದ್ದಿಗೆ ಪೂರ್ಣವಿರಾಮ ಬಿದ್ದಿದೆ.

    ಲಕ್ನೋದಲ್ಲಿ ಏರ್ ಶೋ ನಡೆಸುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೇಂದ್ರದ ಮೇಲೆ ಒತ್ತಡ ಹಾಕಿದ್ದರು. ಹೀಗಾಗಿ ಕೇಂದ್ರ ಸರ್ಕಾರ ಲಕ್ನೋದಲ್ಲಿ ನಡೆಸಲು ಸಿದ್ಧತೆ ನಡೆಸಿದೆ ಎನ್ನುವ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗಿತ್ತು.

    ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಕನ್ನಡಿಗರು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬೆಂಗಳೂರು ನಗರದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಭೂಮಿಯನ್ನು ವರ್ಗಾಯಿಸುವ ಕುರಿತು ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 4 ರಂದು ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಏರ್ ಶೋ ನಡೆಸಲು ವಿವಿಧ ರಾಜ್ಯಗಳಿಂದ ಪ್ರಸ್ತಾಪ ಬಂದಿದೆ. ಆದರೆ ಅಂತಿಮವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಈ ಎಲ್ಲ ಕಾರಣದಿಂದ ಏರ್ ಶೋ ಬೆಂಗಳೂರಿನಲ್ಲಿ ನಡೆಯುತ್ತಾ ಎನ್ನುವ ಅನುಮಾನ ಎದ್ದಿತ್ತು.

    ಕೇಂದ್ರ ಸರ್ಕಾರ 2019ರ ಫೆಬ್ರವರಿ 20-24ರ ವರೆಗೆ ಮೆಗಾ ಏರ್ ಶೋ ನಡೆಸಲು ಸಿದ್ಧತೆ ನಡೆಸಿದೆ.. 1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ಆಯೋಜನೆಯಾಗುತ್ತಿದೆ.

    ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಏರ್ ಶೋವನ್ನು ಗೋವಾದಲ್ಲಿ ನಡೆಸಲು ಉತ್ಸುಕರಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಕನ್ನಡಿಗರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಮನೋಹರ್ ಪರಿಕ್ಕರ್ ಅವರೇ ಗೋವಾದಲ್ಲಿ ಏರ್ ಶೋ ನಡೆಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿ ವಿಚಾರವನ್ನು ತಣ್ಣಗೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಏರ್ ಶೋ ಲಕ್ನೋಗೆ ಶಿಫ್ಟ್ ಆಗುತ್ತಾ? ಯಾರು ಏನು ಹೇಳಿದ್ರು?

    ಏರ್ ಶೋ ಲಕ್ನೋಗೆ ಶಿಫ್ಟ್ ಆಗುತ್ತಾ? ಯಾರು ಏನು ಹೇಳಿದ್ರು?

    ಬೆಂಗಳೂರು: ಕರ್ನಾಟಕದಲ್ಲಿ ನಡೆಯುತ್ತಿದ್ದ ಏರ್ ಶೋ ಉತ್ತರಪ್ರದೇಶದ ಲಕ್ನೋಗೆ ಶಿಫ್ಟ್ ಆಗಿದೆ. ಅಧಿಕೃತವಾಗಿ ರಕ್ಷಣಾ ಸಚಿವಾಲಯದಿಂದ ಘೋಷಣೆಯಾಗದೇ ಇದ್ದರೂ ಶೋ ಲಕ್ನೋಗೆ ಶಿಫ್ಟ್ ಆಗುವುದು ಬಹುತೇಕ ಖಚಿತವಾಗಿದೆ.

    1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯುತಿತ್ತು. 2019ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರ್ ಶೋ ನಡೆಸಲು ಈಗಾಗಲೇ ಸಮಯ ನಿಗದಿಯಾಗಿದೆ. ಆದರೆ ಈಗ ಬಂದಿರುವ ಮಾಹಿತಿ ಪ್ರಕಾರ ಲಕ್ನೋದಲ್ಲಿರುವ ಭಕ್ಷಿ ಕಾ ತಲಾಬ್ ವಾಯುನೆಲೆಯಲ್ಲಿ ಅಕ್ಟೋಬರ್ 27 ನವೆಂಬರ್ 4ರ ಮಧ್ಯೆ ನಡೆಸಲು ಸಿದ್ಧತೆ ನಡೆಸುತ್ತಿದೆ.

    ಸ್ಥಳಾಂತರಕ್ಕೆ ಕಾರಣವೇನು?
    ಈ ವರ್ಷದ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಎರಡು ರಕ್ಷಣಾ ಕಾರಿಡರ್ ಸ್ಥಾಪನೆ ಮಾಡುವುದಾಗಿ ಘೋಷಿಸಿತ್ತು. ಒಂದು ತಮಿಳುನಾಡಿನಲ್ಲಿ ನಿರ್ಮಾಣವಾಗಲಿದ್ದರೆ ಇನ್ನೊಂದು ಉತ್ತರ ಪ್ರದೇಶದಲ್ಲಿ ಆಲಿಘರ್ ನಲ್ಲಿ ನಿರ್ಮಾಣವಾಗುತ್ತಿದೆ. ಮೇಕ್ ಇನ್ ಇಂಡಿಯಾದ ಅಡಿಯಲ್ಲಿ ಜಾಗತಿಕ ಮಟ್ಟದ ಮಿಲಿಟರಿ ಉಪಕರಣಗಳನ್ನು ತಯಾರಿಸಲು ರಕ್ಷಣಾ ಕಾರಿಡರ್ ಸ್ಥಾಪಿಸಲಾಗುತ್ತಿದೆ. ಶನಿವಾರ ರಕ್ಷಣಾ ಸಚಿವೆ ನಿರ್ಮಲಾ ಸೀತರಾಮನ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಆಲಿಘರ್ ಕಾರಿಡರ್ ಅನ್ನು ಉದ್ಘಾಟಿಸಿದ್ದರು. ಈ ರಕ್ಷಣಾ ಕಾರಿಡರ್ ಜನಪ್ರಿಯತೆಯನ್ನು ಹೆಚ್ಚಿಸುವ ಉದ್ದೇಶದಿಂದ ವೈಮಾನಿಕ ಪ್ರದರ್ಶನವನ್ನು ಲಕ್ನೋಗೆ ಸ್ಥಳಾಂತರಿಸಲು ಕೇಂದ್ರ ಸರ್ಕಾರ ಮುಂದಾಗಿದೆ ಎನ್ನಲಾಗಿದೆ. ವಿಶೇಷ ಏನೆಂದರೆ ಈ ಕಾರ್ಯಕ್ರಮದಲ್ಲೇ ಯೋಗಿ ಆದಿತ್ಯನಾಥ್ ಅವರು ಏರೋ ಇಂಡಿಯಾವನ್ನು ಉತ್ತರ ಪ್ರದೇಶದಲ್ಲಿ ನಡೆಸುವಂತೆ ರಕ್ಷಣಾ ಸಚಿವರಿಗೆ ಮನವಿ ಮಾಡಿದ್ದರು. ಉತ್ತರ ಪ್ರದೇಶ ರಕ್ಷಣಾ ಕಾರಿಡರ್ ನಲ್ಲಿ ಎಚ್‍ಎಎಲ್ 1,200 ಕೋಟಿ ರೂ. ಹೂಡಿಕೆ ಮಾಡುವುದಾಗಿ ಈಗಾಗಲೇ ಘೋಷಿಸಿದೆ.

    ಅಧಿಕೃತ ಘೋಷಣೆಯಾಗಿಲ್ಲ:
    ಬೆಂಗಳೂರು ನಗರದಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ರಕ್ಷಣಾ ಇಲಾಖೆಯ ಭೂಮಿಯನ್ನು ವರ್ಗಾಯಿಸುವ ಕುರಿತು ರಕ್ಷಣಾ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಆಗಸ್ಟ್ 4 ರಂದು ಬೆಂಗಳೂರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗೆ, ಏರ್ ಶೋ ನಡೆಸಲು ವಿವಿಧ ರಾಜ್ಯಗಳಿಂದ ಪ್ರಸ್ತಾಪ ಬಂದಿದೆ. ಆದರೆ ಅಂತಿಮವಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದರು.

    ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಏರ್ ಶೋವನ್ನು ಗೋವಾದಲ್ಲಿ ನಡೆಸಲು ಉತ್ಸುಕರಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾದ ಬಳಿಕ ಕನ್ನಡಿಗರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಮನೋಹರ್ ಪರಿಕ್ಕರ್ ಅವರೇ ಗೋವಾದಲ್ಲಿ ಏರ್ ಶೋ ನಡೆಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿ ವಿಚಾರವನ್ನು ತಣ್ಣಗೆ ಮಾಡಿದ್ದರು.

    ಕೈ ನಾಯಕರ ವಿರೋಧ:
    ಏರ್ ಶೋ ಬೆಂಗಳೂರಿನಿಂದ ಲಕ್ನೋಗೆ ಶಿಫ್ಟ್ ಆಗುತ್ತಿರುವ ಬಗ್ಗೆ ಕಾಂಗ್ರೆಸ್ ನಾಯಕರು ಈಗಾಗಲೇ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪರಮೇಶ್ವರ್ ಟ್ವೀಟ್ ಮಾಡಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.

    ಸಿದ್ದರಾಮಯ್ಯನವರು ಟ್ವೀಟ್ ಮಾಡಿ, ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಹಿತಾಸಕ್ತಿಯನ್ನು ತೋರಿಸಬೇಕಿತ್ತು. ಆದರೆ ಅವರು ರಾಜ್ಯದ ಹಿತಾಸಕ್ತಿಯನ್ನು ಬಿಟ್ಟಿದ್ದಾರೆ. ಬಿಜೆಪಿ ಆಳ್ವಿಕೆ ಅವಧಿಯಲ್ಲಿ ಹಲವಾರು ರಕ್ಷಣಾ ಯೋಜನೆಗಳು ಬೆಂಗಳೂರಿನಿಂದ ಕೈ ತಪ್ಪುತ್ತಿದೆ ಎಂದು ಬರೆದು ಕಿಡಿಕಾರಿದ್ದಾರೆ.

    ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, 21 ವರ್ಷಗಳಿಂದ ನಡೆಯುತ್ತಿದ್ದ ವೈಮಾನಿಕ ಪ್ರದರ್ಶನವನ್ನು ಕೇಂದ್ರ ಸರ್ಕಾರ ಏಕಾಏಕಿ ಉತ್ತರಪ್ರದೇಶದ ಲಕ್ನೋಗೆ ಸ್ಥಳಾಂತರಿಸುವುದಕ್ಕೆ ನಮಗೆ ತೀವ್ರ ಅಸಮಾಧಾನವಾಗಿದೆ. ಅಲ್ಲದೇ ಈ ಮೊದಲು ಖುದ್ದು ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ರವರ ಜೊತೆ ವೈಮಾನಿಕ ಪ್ರದರ್ಶನ ಸ್ಥಳಾಂತರಗೊಳ್ಳದಂತೆ ಮಾತುಕತೆ ನಡೆಸಿದ್ದರು ಎಂದು ತಿಳಿಸಿದರು.

    ಬಿಜೆಪಿ ಮಾಜಿ ಸಿಎಂಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಹಾಗೂ ಕೇಂದ್ರ ಸಚಿವರಾದ ಅನಂತಕುಮಾರ್ ರವರು ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಕೂಡಲೇ ಗಮನಹರಿಸಬೇಕು. ಕೇಂದ್ರ ಸಚಿವರು ಹಾಗೂ ಬಿಜೆಪಿ ಮುಖಂಡರು ಏರ್ ಶೋ ಕರ್ನಾಟಕಕ್ಕೆ ಮರಳಿ ಬರುವಂತೆ ಆಗ್ರಹಿಸಬೇಕು. ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಏರ್ ಶೋ ನಡೆಯುತ್ತ ಬಂದಿತ್ತು, 2019ರ ಫೆಬ್ರವರಿಯಲ್ಲಿ ನಡೆಯಬೇಕಿದ್ದ ವೈಮಾನಿಕ ಪ್ರದರ್ಶನಕ್ಕೆ ಬೆಂಗಳೂರಿನಲ್ಲಿ ವ್ಯಾಪಕ ವ್ಯವಸ್ಥೆಯನ್ನು ಸಹ ಈಗಾಗಲೇ ಕಲ್ಪಿಸಲಾಗಿತ್ತು. ಆದರೆ ಕೇಂದ್ರ ಸರ್ಕಾರ ದಿಢೀರ್ ನಿರ್ಧಾರದಿಂದ ತೀವ್ರ ಬೇಸರವಾಗಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಬೆಂಗ್ಳೂರಿನಲ್ಲಿ ನಡೆಯುತ್ತಿದ್ದ ಏರ್ ಶೋ ಲಕ್ನೋಗೆ ಶಿಫ್ಟ್!

    ಬೆಂಗ್ಳೂರಿನಲ್ಲಿ ನಡೆಯುತ್ತಿದ್ದ ಏರ್ ಶೋ ಲಕ್ನೋಗೆ ಶಿಫ್ಟ್!

    ಬೆಂಗಳೂರು: ಪ್ರತಿ ಎರಡು ವರ್ಷಕೊಮ್ಮೆ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಏರ್ ಶೋ ಉತ್ತರ ಪ್ರದೇಶ ಲಕ್ನೋಗೆ ಸ್ಥಳಾಂತರವಾಗುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕೃತವಾಗಿ ನಿರ್ಧಾರ ಪ್ರಕಟವಾಗದೇ ಇದ್ದರೂ ಲಕ್ನೋಗೆ ಸ್ಥಳಾಂತರ ಮಾಡಲು ಸಿದ್ಧತೆ ನಡೆಯುತ್ತಿದೆ ಎಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ.

    1996ರಿಂದ ಪ್ರತಿ ಎರಡು ವರ್ಷಕ್ಕೊಮ್ಮೆ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಏರ್ ಶೋ ನಡೆಯುತಿತ್ತು. ಆದರೆ 2019ರಲ್ಲಿ ನಡೆಯಲಿರುವ ಏರ್ ಶೋವನ್ನು ಲಕ್ನೋದಲ್ಲಿ ನಡೆಸಲು ಕೇಂದ್ರ ಸರ್ಕಾರ ಮತ್ತು ರಕ್ಷಣಾ ಇಲಾಖೆ ಸಿದ್ಧತೆ ನಡೆಸುತ್ತಿದೆ.

    ಸ್ಥಳಾಂತರಗೊಳ್ಳುತ್ತಿರುವ ವಿಚಾರ ವಾಯುಸೇನೆ ಆಧಿಕಾರಿಗಳಿಗೆ ಆಶ್ಚರ್ಯ ಮೂಡಿಸಿದೆ. ಲಕ್ನೋದಲ್ಲಿರುವ ಭಕ್ಷಿ ಕ ತಲಾಬ್ ವಾಯುನೆಲೆ ಸಣ್ಣದಾಗಿದ್ದು, ಇಷ್ಟು ದೊಡ್ಡ ಮಟ್ಟದ ಶೋವನ್ನು ಹೇಗೆ ಆಯೋಜನೆ ಮಾಡಲಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ಪ್ರಶ್ನಿಸಿದ್ದಾರೆ ಎಂದು ವರದಿಯಾಗಿದೆ.

    ಯಾವ ಕಾರಣಕ್ಕಾಗಿ ಏರ್ ಶೋ ಸ್ಥಳಾಂತರವಾಗುತ್ತದೆ ಎನ್ನುವುದು ತಿಳಿದು ಬಂದಿಲ್ಲ. ಏರ್ ಶೋ ಸ್ಥಳಾಂತರವಾಗುತ್ತಿರುವ ವಿಚಾರ ತಿಳಿದು ಸಾಮಾಜಿಕ ಜಾಲತಾಣದಲ್ಲಿ ಕೇಂದ್ರದ ವಿರುದ್ಧ ಕನ್ನಡಿಗರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ.

    ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾದ ನಿರ್ಮಲಾ ಸೀತಾರಾಮನ್ ಮಾಡಿದ್ದು ಸರಿಯೇ? ಬೆಂಗಳೂರಿನಿಂದ ಲಕ್ನೋಗೆ ಏರ್ ಶೋ ಸ್ಥಳಾಂತರ ಮಾಡುತ್ತಿರೋದು ನ್ಯಾಯಯುತವೇ? ನಾಡು-ನುಡಿ ರಕ್ಷಣೆಗೆ ನಿಲ್ಲಬೇಕಾದ ನಿರ್ಮಲಾ ಸೀತಾರಾಮನ್ ಒತ್ತಡಕ್ಕೆ ಮಣಿದ್ರಾ? ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ ಒತ್ತಡಕ್ಕೆ ಕೇಂದ್ರ ತಲೆ ಬಾಗುತ್ತಿದ್ಯಾ? ರಾಜ್ಯದ ಸಂಸದರು, ಕೇಂದ್ರ ಸಚಿವರುಗಳ ಮೌನ ಸರಿಯೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

    ಈ ಹಿಂದೆ ರಕ್ಷಣಾ ಸಚಿವರಾಗಿದ್ದ ಮನೋಹರ್ ಪರಿಕ್ಕರ್ ಅವರು ಏರ್ ಶೋವನ್ನು ಗೋವಾದಲ್ಲಿ ನಡೆಸಲು ಉತ್ಸುಕರಾಗಿದ್ದರು. ಈ ವಿಚಾರ ಮಾಧ್ಯಮಗಳಲ್ಲಿ ಪ್ರಕಟವಾಗದ ಬಳಿಕ ಕನ್ನಡಿಗರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದರು. ಬಳಿಕ ಈ ಮನೋಹರ್ ಪರಿಕ್ಕರ್ ಅವರೇ ಗೋವಾದಲ್ಲಿ ಏರ್ ಶೋ ನಡೆಯುವ ಯಾವುದೇ ಪ್ರಸ್ತಾಪವಿಲ್ಲ ಎಂದು ಹೇಳಿ ವಿಚಾರವನ್ನು ತಣ್ಣಗೆ ಮಾಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews