Tag: Aerial Attack

  • ನಾವು ಬಾಲಕೋಟ್ ರೀತಿಯ ಇನ್ನೊಂದು ವೈಮಾನಿಕ ದಾಳಿಗೆ ಸಿದ್ಧ: ಐಎಎಫ್ ಮುಖ್ಯಸ್ಥ ಭದೌರಿಯಾ

    ನಾವು ಬಾಲಕೋಟ್ ರೀತಿಯ ಇನ್ನೊಂದು ವೈಮಾನಿಕ ದಾಳಿಗೆ ಸಿದ್ಧ: ಐಎಎಫ್ ಮುಖ್ಯಸ್ಥ ಭದೌರಿಯಾ

    ನವದೆಹಲಿ: ನಾವು ಬಾಲಕೋಟ್ ರೀತಿಯ ಇನ್ನೊಂದು ವೈಮಾನಿಕ ದಾಳಿಗೆ ಸಿದ್ಧವಿದ್ದೇವೆ ಎಂದು ಭಾರತೀಯ ವಾಯುಪಡೆ ನೂತನ ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ಖಡಕ್ ಎಚ್ಚರಿಕೆ ನೀಡಿದ್ದಾರೆ.

    ಬಿ.ಎಸ್ ಧನೋವಾ ಅವರು ಇಂದು ನಿವೃತ್ತಿ ಹೊಂದಿದ ಬಳಿಕ ಅಧಿಕಾರ ವಹಿಸಿಕೊಂಡ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಭದೌರಿಯಾ, ಭವಿಷ್ಯದಲ್ಲಿ ಬಾಲಕೋಟ್ ರೀತಿಯ ದಾಳಿಗೆ ಭಾರತೀಯ ವಾಯುಪಡೆ ಸಿದ್ಧವಿದೆ ಎಂದು ಹೇಳಿದರು.

    ಅಧಿಕಾರ ವಹಿಸಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಮುಂದಿನ ಸವಾಲಿಗೆ ತಯಾರಾಗಿದ್ದೇವೆ. ಯಾವುದೇ ಬೆದರಿಕೆಗೆ ಹೆದುರುವುದಿಲ್ಲ ಎಂದರು. ಇದೇ ವೇಳೆ ಫೆಬ್ರವರಿಯಲ್ಲಿ ನಡೆದ ಬಾಲಕೋಟ್ ವೈಮಾನಿಕ ದಾಳಿಯಲ್ಲಿ ನಾಶವಾಗಿದ್ದ ಜೈಶ್-ಇ-ಮೊಹಮ್ಮದ್ ಉಗ್ರರ ಸಂಘಟನೆಯ ಕ್ಯಾಪ್ ಮತ್ತೆ ಸಕ್ರಿಯವಾಗಿದೆ ಎಂಬ ವಿಚಾರದ ಬಗ್ಗೆ ಕೇಳಿದಾಗ, ನಮಗೆ ಈ ವಿಚಾರದ ಬಗ್ಗೆ ಮಾಹಿತಿ ಸಿಕ್ಕಿದೆ ಅಗತ್ಯವಿದ್ದಾಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಹೇಳಿದರು.

    ನನ್ನ ಮೊದಲ ಆದ್ಯತೆ ಬಜೆಟ್ ಅನ್ನು ಗಮನದಲ್ಲಿ ಇಟ್ಟುಕೊಂಡು ಎಲ್ಲ ಜೆಟ್‍ಗಳನ್ನು ಅಧುನೀಕರಣ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವುದು. ನಮ್ಮ ಕಾರ್ಯಾಚರಣೆಗಳಲ್ಲಿ ರಫೇಲ್ ವಿಮಾನ ಮುಖ್ಯ ಪಾತ್ರ ವಹಿಸಲಿದೆ. ಈ ಜೆಟ್ ಚೀನಾ ಮತ್ತು ಪಾಕಿಸ್ತಾನದ ನಿದ್ದೆಗೆಡಿಸಲಿದೆ ಎಂದು ಹೇಳಿದರು. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪರುಮಾಣು ದಾಳಿಯ ವಿಚಾರದ ಬಗ್ಗೆ ಮಾತನಾಡಿದ ಅವರು, ಅದು ಅವರ ತಿಳುವಳಿಕೆ ಬಿಟ್ಟದ್ದು, ನಮಗೆ ನಮ್ಮದೇ ಆದ ಯೋಜನೆಗಳಿವೆ. ನಾವು ಯಾವುದೇ ಸಾವಲನ್ನು ಯಾವುದೇ ಸಮಯದಲ್ಲಾದರು ಎದುರಿಸಲು ಸಿದ್ಧವಿದ್ದೇವೆ ಎಂದು ತಿಳಿಸಿದರು.

    https://twitter.com/IAF_MCC/status/1178533186931806209

    ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಹಳೆಯ ವಿದ್ಯಾರ್ಥಿಯಾದ ಏರ್ ಮಾರ್ಷಲ್ ಭದೌರಿಯಾ ಅವರನ್ನು ಜೂನ್ 1980 ರಲ್ಲಿ ಐಎಎಫ್‍ನ ಫೈಟರ್ ಸ್ಟ್ರೀಮ್‍ನಲ್ಲಿ ನಿಯೋಜನೆ ಮಾಡಲಾಯಿತು. ಅವರು 39 ವರ್ಷಗಳ ಸೇವೆಯಲ್ಲಿ ವಿವಿಧ ಕಮಾಂಡ್, ಸಿಬ್ಬಂದಿ ಮತ್ತು ಸೂಚನಾ ನೇಮಕಾತಿಗಳು ಕೆಲಸವನ್ನು ನಿರ್ವಹಿಸಿದ್ದಾರೆ. ಇಂದು ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

    ಭದೌರಿಯಾ ಅವರು ಪರಮ ವಿಶಿಷ್ಟ ಸೇವಾ ಮೆಡಲ್, ಅತಿ ವಿಶಿಷ್ಟ ಸೇವಾ ಮೆಡಲ್, ವಾಯು ಸೇನಾ ಮೆಡಲ್ ಪಡೆದಿದ್ದಾರೆ. ಎಡಿಸಿಯ ಸುಪ್ರೀಂ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಭಡೌರಿಯಾ ಅವರು ಈ ವರೆಗೆ 4,250 ಗಂಟೆಗೂ ಹೆಚ್ಚು ಕಾಲ ವಿಮಾನ ಹಾರಾಟ ನಡೆಸಿದ್ದಾರೆ. ಒಟ್ಟು 26 ವಿವಿಧ ಯುದ್ಧ ವಿಮಾನಗಳು ಹಾಗೂ ಸಾಗಣಿಕಾ ವಿಮಾನಗಳಲ್ಲಿ ಹಾರಾಟ ನಡೆಸಿದ್ದಾರೆ. ಅಲ್ಲದೆ, ಪ್ರಾಯೋಗಿಕ ಪರೀಕ್ಷಾ ಪೈಲೆಟ್, ಕ್ಯಾಟ್ `ಎ’ ಅರ್ಹ ಫ್ಲೈಯಿಂಗ್ ಇನ್‍ಸ್ಟ್ರಕ್ಟರ್ ಹಾಗೂ ಪೈಲೆಟ್ ಅಟ್ಯಾಕ್ ಇನ್‍ಸ್ಟ್ರಕ್ಟರ್ ಅನುಭವ ಹೊಂದಿದ್ದಾರೆ. ಈ ಹಿಂದೆ ಫ್ರೆಂಚ್ ವಾಯುಪಡೆಯ ಮಾಂಟ್-ಡಿ-ಮಾರ್ಸನ್ ವಾಯುನೆಲೆಯಲ್ಲಿ ರಫೇಲ್ ವಿಮಾನವನ್ನು ಸಹ ಭಡೌರಿಯಾ ಹಾರಿಸಿದ್ದರು. ಬೆಂಗಳೂರಿನ ಮಾಜಿ ಚೀಫ್ ಟ್ರೇನಿಂಗ್ ಕಮಾಂಡರ್ ಆಗಿಯೂ ಭದೌರಿಯಾ ಕರ್ತವ್ಯ ನಿರ್ವಹಿಸಿದ್ದರು.