Tag: Adyar Maidan

  • ಮಂಗ್ಳೂರು ಪ್ರತಿಭಟನೆ ಭದ್ರತೆಗೆ 11 ಮಂದಿ ಅಡಿಷನಲ್ ಎಸ್‍ಪಿ, 25 ಡಿವೈಎಸ್‍ಪಿಗಳ ನಿಯೋಜನೆ

    ಮಂಗ್ಳೂರು ಪ್ರತಿಭಟನೆ ಭದ್ರತೆಗೆ 11 ಮಂದಿ ಅಡಿಷನಲ್ ಎಸ್‍ಪಿ, 25 ಡಿವೈಎಸ್‍ಪಿಗಳ ನಿಯೋಜನೆ

    ಮಂಗಳೂರು: ಪೌರತ್ವ ಕಾಯ್ದೆ ಹಾಗೂ ರಾಷ್ಟ್ರೀಯ ಪೌರತ್ವ ನೋಂದಾಣಿ ವಿರೋಧಿಸಿ ಮಂಗಳೂರಿನಲ್ಲಿ ಅಡ್ಯಾರ್ ಮೈದಾನದಲ್ಲಿ ಇಂದು ಬೃಹತ್ ಪ್ರತಿಭಟನೆಗೆ ನಡೆಯಲಿದ್ದು, ಪ್ರತಿಭಟನೆಯ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯಿಂದ ಹೆಚ್ಚಿನ ಬಂದೋಬಸ್ತ್ ಕೈಗೊಳ್ಳಲಾಗಿದೆ.

    ಮಂಗಳೂರಿಗೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಪೊಲೀಸರ ರವಾನೆಯಾಗಿದ್ದು, ರಾಜ್ಯದ ಎಲ್ಲಾ ವಲಯ ಐಜಿಪಿಗಳಿಗೆ ಡಿಜಿ ಕಚೇರಿಯಿಂದ ಸೂಚನೆ ನೀಡಲಾಗಿದೆ. ರಾಜ್ಯದ 7 ವಲಯಗಳಿಂದ ಅಂದಾಜು 2 ಸಾವಿರ ಸಿಬ್ಬಂದಿಗಳು ಹಾಗೂ ಇನ್ನುಳಿದ 6 ಕಮಿಷನರೇಟ್ ವ್ಯಾಪ್ತಿಯಿಂದಲೂ ಸಿಬ್ಬಂದಿಯನ್ನು ಕರೆಯಿಸಿಕೊಳ್ಳಲಾಗಿದೆ.

    ಭದ್ರತೆಗಾಗಿ 11 ಮಂದಿ ಅಡಿಷನಲ್ ಎಸ್‍ಪಿಗಳು, 25 ಡಿವೈಎಸ್‍ಪಿ, 85 ಇನ್ಸ್‍ಪೆಕ್ಟರ್ ಗಳು, 200 ಪಿಎಸ್‍ಐಗಳು ಈಗಾಗಲೇ ಬಂದೋಬಸ್ತ್ ಗಾಗಿ ನಿಯೋಜನೆಗೊಂಡಿದೆ. ಮಂಗಳೂರು ಪೊಲೀಸ್ ಆಯುಕ್ತರಿಗೂ ವಿಶೇಷ ಸೂಚನೆ ನೀಡಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಲು ಸೂಚನೆ ನೀಡಿದ್ದಾರೆ.

    ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯದ ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಮರ್ ಕುಮಾರ್ ಪಾಂಡೆ, ನಗರದಲ್ಲಿ ನಡೆಯಲಿರುವ ಮುಸ್ಲಿಂ ಸಂಘಟನೆಗಳ ಬೃಹತ್ ಪ್ರತಿಭಟನಾ ಸಮಾವೇಶಕ್ಕೆ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. ಸಮಾವೇಶ ನಡೆಯುವ ನಗರದ ಹೊರವಲಯದ ಅಡ್ಯಾರ್ ಮೈದಾನಕ್ಕೆ ಭೇಟಿ ನೀಡಿದ ಅವರು, ಭದ್ರತಾ ವ್ಯವಸ್ಥೆಯ ಬಗ್ಗೆ ಪರಿಶೀಲನೆ ನಡೆಸಿ, ಮಂಗಳೂರು ಪೊಲೀಸ್ ಕಮಿಷನರ್ ಡಾ.ಪಿ.ಎಸ್.ಹರ್ಷಾ ಅವರಿಂದ ಬಂದೋಬಸ್ತ್ ನ ಮಾಹಿತಿ ಪಡೆದರು. ಮೈದಾನದ ಪಾರ್ಕಿಂಗ್, ವೇದಿಕೆ, ಭದ್ರತೆ ಬಗ್ಗೆ ಪರಿಶೀಲನೆ ನಡೆಸಿದ್ದೇನೆ. ಹೆಚ್ಚುವರಿ ಭದ್ರತೆಗಾಗಿ ಕೇಂದ್ರ ಅರೆಸೇನಾ ಪಡೆಗಳನ್ನು ಕರೆಸಿಕೊಳ್ಳಲಾಗಿದೆ. ಜಿಲ್ಲೆಯ ಮಾತ್ರವಲ್ಲದೇ ರಾಜ್ಯದ ಹೆಚ್ಚಿನ ಜಿಲ್ಲೆಯ ಪೊಲೀಸರನ್ನು ಕರೆಸಿಕೊಂಡಿದ್ದೇವೆ. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ ಎಂದಿದ್ದಾರೆ.