Tag: Advocate K.M Nataraj

  • ಕೃಷಿ ಭೂಮಿಯಲ್ಲಿ ಡಿಕೆಶಿ ಚಿನ್ನ ಬೆಳೆದಿದ್ದಾರೆ – ಇಡಿ ವಕೀಲರಿಂದ ಸುದೀರ್ಘ ವಾದ

    ಕೃಷಿ ಭೂಮಿಯಲ್ಲಿ ಡಿಕೆಶಿ ಚಿನ್ನ ಬೆಳೆದಿದ್ದಾರೆ – ಇಡಿ ವಕೀಲರಿಂದ ಸುದೀರ್ಘ ವಾದ

    – ಒಂದೂವರೆ ಗಂಟೆ ಸುದೀರ್ಘ ವಾದ ಮಂಡಿಸಿದ ಕೆ.ಎಂ.ನಟರಾಜ್
    – ಕೊಲೆಗಾರನ ಜೊತೆ ಕೊಲೆ ಮಾಡಿಸಿದವನು ಮುಖ್ಯವಾಗುತ್ತಾನೆ
    – ನೋಟು ನಿಷೇಧ ವೇಳೆ ಭಾರೀ ಹಣ ಸಿಕ್ಕಿದೆ

    ನವದೆಹಲಿ: “ಕೃಷಿ ಭೂಮಿಯಲ್ಲಿ ಭತ್ತ ಬೆಳೆಯಬಹುದೇ ಹೊರತು ಚಿನ್ನ ಬೆಳೆಯಲು ಸಾಧ್ಯ ಇಲ್ಲ. ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಆದಾಯ ನೋಡಿದರೆ ಕೃಷಿ ಭೂಮಿಯಲ್ಲಿ ಚಿನ್ನ ಬೆಳೆದಂತಿದೆ”  ಇದು ಜಾರಿ ನಿರ್ದೇಶನಾಯಲದ ಪರ ವಕೀಲ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್ ಅವರ ವಾದದ ಪ್ರಮುಖ ಅಂಶ.

    ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿ ಕುರಿತು ರೋಸ್ ಅವೆನ್ಯೂ ನ್ಯಾಯಾಲಯ ಸಮುಚ್ಚಯದ ವಿಶೇಷ ನ್ಯಾಯಾಲಯದಲ್ಲಿ ಗುರುವಾರ ವಿಚಾರಣೆ ನಡೆಯಿತು. ಇಡಿ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್, ವಕೀಲ ಕೆ.ಎಂ ನಟರಾಜ್ ವಾದ ಮಂಡಿಸಿದರು. ಮಾಜಿ ಸಚಿವರ ಪರ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ತನಿಖಾಧಿಕಾರಿ ಸೌರಭ್ ಮೆಹ್ತಾ ಅವರು ವಿಚಾರಣೆ ವೇಳೆ ಇದ್ದರು.  ಇದನ್ನೂ ಓದಿ: ಡಿಕೆಶಿಗೆ ತಿಹಾರ್ ಜೈಲೇ ಗತಿ – ಶನಿವಾರಕ್ಕೆ ವಿಚಾರಣೆ ಮುಂದೂಡಿಕೆ 

    ಕೋರ್ಟ್ ಗೆ ನಿನ್ನೆ ಯಾಕೆ ಬರಲು ಸಾಧ್ಯವಾಗಲಿಲ್ಲ ಎಂಬುದಕ್ಕೆ ಕೆ.ಎಂ.ನಟರಾಜ್ ಅವರು ಮೊದಲು ಕಾರಣ ನೀಡಿದರು. ಬಳಿಕ ವಾದ ಮಂಡಿಸಿದ ಅವರು, ಡಿ.ಕೆ.ಶಿವಕುಮಾರ್ ಎಷ್ಟು ಹಣ ಘೋಷಿಸಿಕೊಂಡಿದ್ದರು ಎನ್ನುವುದು ಮುಖ್ಯ. ಅವರ ಬಳಿ ಇಷ್ಟು ಪ್ರಮಾಣದಲ್ಲಿ ಹಣ ಎಲ್ಲಿಂದ ಬಂತು? ಅವರು ಘೋಷಣೆ ಮಾಡಿಕೊಂಡಿದ್ದು ಅಪ್ರಸ್ತುತ. ಕೊಲೆಗೆ ಹಫ್ತಾ ಅಥವಾ ಸುಪಾರಿ ಕೊಟ್ಟರೆ ಕೊಲೆ ಮಾಡಿದವ ಮಾತ್ರ ಮುಖ್ಯ ಅಲ್ಲ, ಕೊಲೆ ಮಾಡಿಸಿದವನು ಮುಖ್ಯವಾಗುತ್ತಾನೆ. ಅದನ್ನು ಕೂಡ ತನಿಖೆ ಮಾಡಬೇಕು ಎಂದು ಕೋರ್ಟಿಗೆ ಮನವಿ ಮಾಡಿಕೊಂಡರು. ಇದನ್ನು ಓದಿ: ಡಿಕೆಶಿಗೆ ವಿವಿಐಪಿ ಟ್ರೀಟ್, ಚಿದಂಬರಂ ಪಕ್ಕದ ಸೆಲ್‍ನಲ್ಲೇ ಬಂಡೆ

    ಅಪರಾಧಗಳನ್ನು ಆಧರಿಸಿ ತನಿಖೆ ಕೈಗೊಳ್ಳಲಾಗುವ ಕ್ರಮಗಳ ಕಾಯ್ದೆ ಅಡಿ ಉಲ್ಲೇಖವಾಗಿದೆ. ಪಿಎಂಎಲ್‍ಎ ಕಾಯ್ದೆ ಅಡಿ ಪ್ರಕರಣದ ವಿಚಾರಣೆ ಹೈಕೋರ್ಟ್ ಅವಕಾಶ ನೀಡಿದೆ. ಹೀಗಾಗಿ ಊಹಾತ್ಮಕವಾಗಿ ವಿಚಾರಣೆ ನಡೆಸಬಹುದು. ಹಫ್ತಾ ಖಾತೆಯಲ್ಲಿಟ್ಟು ಟ್ಯಾಕ್ಸ್ ಕಟ್ಟಿದ್ದೇನೆ ಎಂದರೆ ಹೇಗೆ? ಅದು ಅಕ್ರಮ ಹಣ. ಹಫ್ತಾ ಹಣದ ಹರಿವಿನ ಬಗ್ಗೆ ತನಿಖೆ ಆಗಬೇಕು. ಅಪರಾಧಕ್ಕೆ ಪಿತೂರಿ ನಡೆಸಿದವನನ್ನು ತನಿಖೆಗೆ ಒಳಪಡಿಸಬಹದು. ಹಣಕಾಸು, ಆದಾಯ ತೆರಿಗೆ, ಕೊಲೆ, ಸುಲಿಗೆ ಸೇರಿದಂತೆ ಯಾವುದೇ ರೀತಿಯ ಅಪರಾಧ ಇದ್ದರೂ ಹಣ ವರ್ಗಾವಣೆ ಆಗಿದ್ದರೆ ಈ ಕಾಯ್ದೆ ಅಡಿ ಕ್ರಮ ಕೈಗೊಳ್ಳಬಹುದು ಎಂದು ತಿಳಿಸಿದರು. ಇದನ್ನೂ ಓದಿ: ಸ್ಯಾಂಡಲ್‍ವುಡ್‍ನಲ್ಲಿ ತೆರೆ ಕಾಣಲಿದೆ ಡಿಕೆಶಿ ಜೀವನಾಧಾರಿತ ಚಿತ್ರ?

    ಕಳಂಕಿತ ಹಣ ಸಂಪತ್ತಿಗೆ ಟ್ಯಾಕ್ಸ್ ಕಟ್ಟಿರಬಹುದು. ಆದರೂ ಅದು ಕೂಡ ಅಕ್ರಮ. ಡಿ.ಕೆ.ಶಿವಕುಮಾರ್ ಅವರು ಕೃಷಿಕ ಎಂದು ಹೇಳಿಕೊಂಡಿದ್ದಾರೆ. ದಾಖಲೆ ಸಂಗ್ರಹಿಸಿದಾಗ ಅಕ್ರಮ ನಡೆದಿರುವುದು ಗೊತ್ತಾಗಿದೆ. 1.3 ಕೋಟಿ ರೂ. ಆದಾಯ ಕೃಷಿಯಿಂದ ಬಂದಿದೆ ಎಂದು ಘೋಷಿಸಿಕೊಂಡಿದ್ದಾರೆ. 20 ವರ್ಷಗಳಲ್ಲಿ 1.3 ಕೋಟಿ ಘೋಷಣೆ ಮಾಡಿದ್ದಾರೆ ಎಂದು ವಾದ ಮಂಡಿಸಿದರು.

    ಯಾವುದೇ ವಕೀಲ ವೃತ್ತಿಗೆ ಸಂಬಂಧಿಸಿದಂತೆ ಪಡೆಯುವ ಶುಲ್ಕದ ಹಣವನ್ನು ತನ್ನ ಖಾತೆಗೆ ಹಾಕಿಸಿಕೊಳ್ಳಬಹುದು. ಆದರೆ ಆ ಆದಾಯಕ್ಕೆ ಆತ ತೆರಿಗೆ ನೀಡುತ್ತಾನೆ. ಆತನಿಗೆ ಶುಲ್ಕ ನೀಡುವ ವ್ಯಕ್ತಿ ಆ ಕುರಿತು ದಾಖಲೆ ನೀಡಲೇಬೇಕು. ಇಲ್ಲದಿದ್ದರೆ ವಕೀಲನೂ ಅಪರಾಧದಲ್ಲಿ ಭಾಗಿ ಆಗುತ್ತಾನೆ ಎಂದು ತಿಳಿಸಿದರು.

    ಕೆ.ಎಂ.ನಟರಾಜ್ ವಾದಕ್ಕೆ ಡಿಕೆ ಶಿವಕುಮಾರ್ ಅವರ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಬೆಳೆಯಿಂದ ಬಂದ ಹಣ ಅಲ್ಲ. ಭೂಮಿ ಬೆಲೆ ಏರಿಕೆ ಆಗಿದೆ. 800 ಕೋಟಿ ರೂ. ವಾಣಿಜ್ಯ ವ್ಯವಹಾರಗಳಿಂದ ಬಂದಿದೆ. ನೀವು ಬುಧವಾರ ವಾದ ಮಾಡುವಾಗ ಇರಲಿಲ್ಲ ಎಂದು ಹೇಳಿದರು. ಆಗ ನಟರಾಜ್ ಅವರು, ನಾನು ಈಗ ವಾದ ಆರಂಭಿಸಿದ್ದೇನೆ ಎಲ್ಲವನ್ನೂ ವಿವರಿಸಲು ಅವಕಾಶ ಕೊಡಿ ಎಂದು ನ್ಯಾಯಾಧೀಶರಲ್ಲಿ ಮನವಿ ಮಾಡಿಕೊಂಡರು. ಆಗ ನ್ಯಾಯಾಧೀಶರು ವಾದ ಮುಂದುವರಿಸುವಂತೆ ಸೂಚನೆ ನೀಡಿದರು.

    ಇಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಕೆಲವು ಪ್ರಮುಖ ದಾಖಲೆಗಳನ್ನು ನೀಡಿದರು. ಅವುಗಳನ್ನು ನ್ಯಾಯಾಧೀಶರು ಪರಿಶೀಲಿನೆ ಮಾಡಿದರು. ಪ್ರತಿಬಾರಿ ಆಸ್ತಿ ಘೋಷಣೆ ಸಂಶಯ ಮೂಡಿಸಿದೆ. ಅಪಾರ ಪ್ರಮಾಣದ ಆಸ್ತಿಯನ್ನು ನಗದಿನಲ್ಲಿ ಖರೀದಿಸಿದೆ ಇದು ಮೇಲ್ನೋಟಕ್ಕೆ ಅಪರಾಧ ಎನಿಸುತಿದೆ. ಗೌರಮ್ಮ ಗಿಫ್ಟ್ ಡಿಡ್ ಮಾಡಿದರಲ್ಲ ಎಂದು ನ್ಯಾಯಧಿಶರು ಪ್ರಶ್ನಿಸಿದರು.

    1991ರಿಂದ ಗೌರಮ್ಮ 38 ಆಸ್ತಿಗಳನ್ನು ಖರೀದಿಸಿದ್ದಾರೆ. ಕೆಲವು ಆಸ್ತಿ ಕೆಂಪೇಗೌಡರದ್ದೇ ಆದರೂ ಅದಕ್ಕೆ ಯಾವುದೇ ಆಸ್ತಿ ತೆರಿಗೆ ಕಟ್ಟಿಲ್ಲ. ಕೆಲವು ಆಸ್ತಿಯನ್ನು ಹಿಂದೂ ಅವಿಭಕ್ತ ಕುಟುಂಬ ಕಾಯ್ದೆಯಡಿ ಘೋಷಿಸಿಕೊಂಡಿಲ್ಲ. ಅವು ವರ್ಗಾವಣೆ ಆಗುತ್ತಾ ಬಂದಿವೆ. 54 ಆಸ್ತಿಗಳ ಮೇಲೆ ತನಿಖೆ ಆಗಬೇಕು. 1997ರ ಬಳಿಕ 57 ಆಸ್ತಿಗಳು ಸಹೋದರನ ಹೆಸರಿನಲ್ಲಿದೆ. 1995ರ ಬಳಿಕ 75 ಆಸ್ತಿ ಮಾಡಿದ್ದಾರೆ. ಡಿಕೆ ಶಿವಕುಮಾರ್ ಅವರು 2 ಖಾತೆಗಳಲ್ಲಿ 2 ಕೋಟಿ ರೂ. ಠೇವಣಿ ಇದೆ. ಒಮ್ಮೆಯೂ ಹಣ ಡ್ರಾ ಮಾಡಿಲ್ಲ ಎಂದು ನಟರಾಜ್ ವಾದ ಮಂಡಿಸಿದರು.

    ಈ ಮಧ್ಯೆ ಡಿ.ಕೆ.ಶಿವಕುಮಾರ್ ಪರ ವಕೀರ ಅಭಿಷೇಕ್ ಮನು ಸಿಂಘ್ವಿ ಕೋರ್ಟ್ ಹಾಲ್‍ಗೆ ಆಗಮಿಸಿದರು. ಇತ್ತ ವಾದ ಮುಂದುವರಿಸಿದ ನಟರಾಜ್ ಅವರು, ಮಾಜಿ ಸಚಿವರು 40 ಕೋಟಿ ರೂ. ಬ್ಯಾಂಕ್‍ಗಳಿಂದ ಸಾಲ ಪಡೆದಿದ್ದಾರೆ. ಮಗಳ ಹೆಸರಲ್ಲಿ ಸಾಲ ಇದೆ. ಬೇರೆ ಕಡೆಯಿಂದಲೂ ಸಾಲ ಪಡೆದಿದ್ದಾರೆ. ಮಗಳಿಗೆ ಗೊತ್ತಿಲ್ಲದವರಿಂದ ಸಾಲ ಪಡೆಯಲಾಗಿದೆ. 317 ಬ್ಯಾಂಕ್ ಖಾತೆ ದಾಖಲೆ ಇದೆ. ಅದನ್ನು ಕೋರ್ಟಿಗೆ ಸಲ್ಲಿಸುತ್ತೇವೆ ಎಂದು ದಾಖಲೆಗಳನ್ನು ಸಲ್ಲಿಸಿದರು.

    ನ್ಯಾಯಾಧೀಶರು ಬ್ಯಾಂಕ್ ಖಾತೆ ದಾಖಲೆಗಳನ್ನು ಪರಿಶೀಲನೆ ಮಾಡಿದರು. ಬಳಿಕ ವಾದ ಮುಂದುವರಿಸಿದ ನಟರಾಜ್ ಅವರು, ಇನ್ನಷ್ಟು ಮಹತ್ವದ ದಾಖಲೆಗಳನ್ನು ಕೋರ್ಟ್ ಸಲ್ಲಿಸುತ್ತೇವೆ. ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿಕೊಂಡರು.

    ಪಿಎಂಎಲ್‍ಎ ಕಾಯ್ದೆಯ ಮೂರನೇ ಸೆಕ್ಷನ್ ಅಡಿ ಯಾವುದು ಅಪರಾಧ ಯಾವುದೇ ಅಪರಾಧ ಅಲ್ಲ ಎನ್ನುವ ವಿವರಣೆ ಇದೆ. ಅಕ್ರಮ ಆಸ್ತಿ ಹೊಂದುವುದು ಅಪರಾಧ. ಸೆಕ್ಷನ್ 90 ಅಡಿ ಬಂಧಿಸುವ ಅಧಿಕಾರವಿದೆ. ಆರೋಪಿ ತಪ್ಪು ಮಾಡಿದ್ದು ಮೆಲ್ನೋಟಕ್ಕೆ ಸಾಬೀತಾಗುತ್ತಿದೆ. ಡಿಕೆ ಶಿವಕುಮಾರ್ ಅವರನ್ನ ಆರೆಸ್ಟ್ ಮಾಡಬಹುದು ಎಂದು ನಟರಾಜ್ ತಿಳಿಸಿದರು.

    ಆರೋಪಿ ತಪ್ಪು ಮಾಡಿಲ್ಲ ಎಂದೆನಿಸಿದರೆ ಕೋರ್ಟ್ ಜಾಮೀನು ನೀಡಬಹುದು ಎಂದು ಸೆಕ್ಷನ್ 45 ಹೇಳುತ್ತದೆ. ಇದು ನ್ಯಾಯಾಧೀಶರ ವಿವೇಚನೆಗೆ ಬಿಟ್ಟ ವಿಷಯ. ಆದರೆ ಅಪರಾಧದ ಆಳ-ಅಗಲವನ್ನು ಅರಿತು ಆದೇಶ ನೀಡಬೇಕು ಎಂದು ಕಾಯ್ದೆ ಹೇಳುತ್ತದೆ. ಸೆಕ್ಷನ್ 45ರ ಅಡಿ ದಾಖಲಿಸಿದ ಪ್ರಕರಣ ವಿವರಣೆ, ತನಿಖೆ ವೇಳೆ ಸಂಗ್ರಹಿಸಲಾದ ದಾಖಲೆಗಳನ್ನು ಪರಿಶೀಲಿಸಿದರೆ ಇಲ್ಲಿ ಆರ್ಥಿಕ ಅಪರಾಧ ನಡೆದಿರುವುದು ಸ್ಪಷ್ಟವಾಗುತ್ತದೆ. ತನ್ನಲ್ಲಿರುವ ಹಣ ಮತ್ತು ಆಸ್ತಿ ಕಳಂಕಿತ, ಅಕ್ರಮ ಅಲ್ಲ ಎಂದು ಆರೋಪಿ ಸಾಬೀತು ಪಡಿಸಿಕೊಳ್ಳಬೇಕು. ಆದಾಯದ ಮೂಲ ಬಹಿರಂಗಪಡಿಸದ ಕಾರಣ ಸೆಕ್ಷನ್ 24ರ ಅಡಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆಯೂ 2015ರಲ್ಲಿ ನೀಡಲಾದ ತೀರ್ಪಿನಲ್ಲಿ, ಜಾಮೀನು ನೀಡುವಾಗ ಈ ಸೆಕ್ಷನ್‍ನ ಪ್ರಕ್ರಿಯೆ ಪರಿಗಣಿಸುವಂತೆ ತಿಳಿಸಲಾಗಿದೆ ಎಂದು ಹಳೆಯ ಆದೇಶಗಳನ್ನು ನಟರಾಜ್ ಉಲ್ಲೇಖಿಸಿದರು.

    ನ್ಯಾಯಾಲಯ ದಾಖಲೆ ಪರಿಶೀಲಿಸಿ ಬಳಿಕ ಜಾಮೀನು ನೀಡಿ. ಜಾಮೀನು ನೀಡಲು ಅರ್ಹ ಎನಿಸಿದರೆ ನೀಡಿ ಎಂದು ನಟರಾಜ್ ವಾದ ಮಂಡಿಸುತ್ತಿದ್ದರು. ಆದರೆ ಅತ್ತ ಇಡಿ ಅಧಿಕಾರಿಗಳು ಬ್ಯಾಗ್‍ನಿಂದ ದಾಖಲೆ ತೆಗೆದು ನ್ಯಾಯಾಧೀಶರಿಗೆ ಕೊಡುತ್ತಿದ್ದರು. ಅಧಿಕಾರಿಗಳು ದೊಡ್ಡ ಬ್ಯಾಗ್‍ನಲ್ಲಿ ದಾಖಲೆ ತಂದಿದ್ದರು. ಹೀಗಾಗಿ ವಾದಕ್ಕೆ ತಕ್ಕಂತೆ ದಾಖಲೆ ನೀಡುತ್ತಾ ಹೋದರು.

    ನೋಟ್ ಬ್ಯಾನ್ ಆದಾಗ ಹಳೆಯ ಹಾಗೂ ಹೊಸ ನೋಟ್‍ಗಳು ಸಿಕ್ಕಿದೆ. ಇದಕ್ಕೆ ಉತ್ತರ ನೀಡಿಲ್ಲ. ಭಾರೀ ಪ್ರಮಾಣದ ಹಣ ವಶಪಡಿಸಿಕೊಂಡಿದ್ದೇವೆ. ಈ ಹಣಕ್ಕೆ ಮೂಲ ಹೇಳಿಲ್ಲ ಎಂದು ನಟರಾಜ್ ಕೋರ್ಟಿಗೆ ತಿಳಿಸಿದರು.

    ದಾಖಲೆ ರೂಪದಲ್ಲಿ ಸಾಕ್ಷಿಗಳಿವೆ. 41 ಲಕ್ಷ ರೂ. ಮಾತ್ರ ನನ್ನದು, ಬಾಕಿ ಹಣ ನನ್ನದಲ್ಲ ಎಂಬ ವಾದ ಆಧಾರ ರಹಿತ. ಐಟಿ ಜಾರ್ಜ್ ಶೀಟ್ ಮತ್ತು ನಮ್ಮ ತನಿಖೆಯಲ್ಲೂ 8.59 ಕೋಟಿ ಡಿಕೆ ಶಿವಕುಮಾರ್ ಅವರಿಗೆ ಸೇರಿದ್ದು ಎನ್ನುವುದಕ್ಕೆ ದಾಖಲೆಗಳಿವೆ. ಇದು ಅವರದ್ದೇ ಹಣ ಎಂಬುದು ಸ್ಪಷ್ಟವಾಗುತ್ತದೆ ಎಂದು ನಟರಾಜ್ ವಾದ ಮಂಡಿಸಿದರು. ಈ ವೇಳೆ ನ್ಯಾಯಧೀಶರು ದಾಖಲೆ ಪರಿಶೀಲಿಸುತ್ತಾ ವಾದ ಆಲಿಸುತ್ತಿದ್ದರು.

    ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 8ರ ಪ್ರಕಾರ ಕಲೆ ಹಾಕಿರುವ ದಾಖಲೆಗಳ ಪ್ರಕಾರವೂ ಜಾಮೀನು ನೀಡಕೂಡದು. ಅಪರಾಧದ ಉದ್ದೇಶವನ್ನು ಅರಿಯಬೇಕು ಎಂದು ನಟರಾಜ್ ಅವರು, ಜಾಮೀನು ಅರ್ಜಿ ನಿರಾಕರಿಸುವ ಕುರಿತು ವಾದ ಮಂಡನೆ ಮಾಡಿದರು. ಜೊತೆಗೆ ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್ ರೆಡ್ಡಿ ಹಾಗೂ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಪ್ರಕರಣವನ್ನು ಉಲ್ಲೇಖಿಸಿದರು.

    ಜಾಮೀನು ನಿರಾಕರಿಸುವ ಬಗ್ಗೆ ಸುದೀರ್ಘ 1 ಗಂಟೆ 40 ನಿಮಿಷಗಳ ಕಾಲ ನಟರಾಜ್ ಅವರು ವಾದ ಮಂಡನೆ ಮಾಡಿದರು. ಅಷ್ಟೇ ಅಲ್ಲದೆ ಮತ್ತೆ 30 ನಿಮಿಷ ವಾದ ಮಂಡನೆಗೆ ಅವಕಾಶ ಕೇಳಿದರು. ಮಂಗಳವಾರ ಒಂದು ಗಂಟೆ ಕೇಳಿದ್ದ ನಟರಾಜ್ ಅವರು ಒಂದೂವರೆ ಗಂಟೆ ವಾದ ಮಂಡಿಸಿದ್ದರು. ಹೀಗಾಗಿ ನ್ಯಾಯಾಧೀಶರು ಶನಿವಾರಕ್ಕೆ ವಿಚಾರಣೆ ಮೂಂದೂಡಿಕೆ ಮಾಡಿದರು.