Tag: Advertising

  • ಕೊರೊನಾದಿಂದ ಹೆಚ್ಚಾಯ್ತು ಐಪಿಎಲ್ ಜಾಹೀರಾತು ದರ – 10 ಸೆಕೆಂಡ್‍ಗೆ ಎಷ್ಟು ಹಣ ಕೊಡ್ಬೇಕು?

    ಕೊರೊನಾದಿಂದ ಹೆಚ್ಚಾಯ್ತು ಐಪಿಎಲ್ ಜಾಹೀರಾತು ದರ – 10 ಸೆಕೆಂಡ್‍ಗೆ ಎಷ್ಟು ಹಣ ಕೊಡ್ಬೇಕು?

    ಮುಂಬೈ: ಮುಂದಿನ ತಿಂಗಳಿನಿಂದ ಪ್ರಪಂಚದ ದುಬಾರಿ ಕ್ರಿಕೆಟ್ ಲೀಗ್ ಐಪಿಎಲ್ ಸೆಟ್ಟೇರಲು ಸಜ್ಜಾಗಿದೆ. ಇದರ ಜೊತೆಗೆ ಐಪಿಎಲ್ ಅನ್ನು ಪ್ರಸಾರ ಮಾಡುತ್ತಿರುವ ಸ್ಟಾರ್ ಸ್ಪೋರ್ಟ್ಸ್ ವಾಹಿನಿ ತನ್ನ ಜಾಹೀರಾತು ದರವನ್ನು ನಿಗದಿ ಮಾಡಿದೆ.

    ಈ ಬಾರಿಯ ಐಪಿಎಲ್ ಸೆಪ್ಟಂಬರ್ 19ರಿಂದ ಯುಎಇಯಲ್ಲಿ ಆರಂಭವಾಗಲಿದ್ದು, ಮೊದಲ ಬಾರಿಗೆ ಜನರೇ ಇಲ್ಲದೇ ಖಾಲಿ ಮೈದಾನದಲ್ಲಿ ಐಪಿಎಲ್ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. ಹೀಗಾಗಿ ಜನರು ಐಪಿಎಲ್ ಅನ್ನು ಈ ಬಾರಿ ಟಿವಿಯಲ್ಲಿ ನೋಡಬೇಕಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಸ್ಟಾರ್ ಕಂಪನಿ 10 ಸೆಕೆಂಡ್ ಇರುವ ಜಾಹೀರಾತಿಗೆ 12.5 ಲಕ್ಷ ರೂ. ಪಡೆಯಲು ಮುಂದಾಗಿದೆ.

    2019ರ ಐಪಿಎಲ್ ವೇಳೆ 10 ಸೆಕೆಂಡ್ ಇರುವ ಜಾಹೀರಾತಿಗೆ 10 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿತ್ತು. ಆದರೆ ಈ ಮೊತ್ತವನ್ನು ಈ ಬಾರಿ ಶೇ.20ರಷ್ಟು ಜಾಸ್ತಿ ಮಾಡಿರುವ ಸ್ಟಾರ್ ವಾಹಿನಿ, ಈ ಬಾರಿ 12.5 ಲಕ್ಷ ಪಡೆಯಲು ಮುಂದಾಗಿದೆ. ಜೊತೆಗೆ ಕೊರೊನಾ ಕಾರಣದಿಂದ ಜನರು ಮನರಂಜನೆಯಿಂದ ವಂಚಿತರಾಗಿದ್ದು, ಈ ಬಾರಿಯ ಐಪಿಎಲ್‍ಗಾಗಿ ಕಾಯುತ್ತಿದ್ದಾರೆ. ಹೆಚ್ಚು ಜನ ವೀಕ್ಷಣೆ ಮಾಡಲಿದ್ದಾರೆ ಎಂದು ವಾಹಿನಿ ಅಂದಾಜಿಸಿದೆ.

    ಜಾಹೀರಾತು ವೆಚ್ಚವನ್ನು ಜಾಸ್ತಿ ಮಾಡಿರುವುದನ್ನು ಸಮರ್ಥನೆ ಮಾಡಿಕೊಂಡಿರುವ ವಾಹಿನಿ, ಭಾರತ ಮತ್ತು ಪಾಕಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯಗಳ ಸಮಯದಲ್ಲಿ 10 ಸೆಕೆಂಡ್‍ಗಳ ಜಾಹೀರಾತಿಗೆ 25 ಲಕ್ಷ ರೂ. ಮತ್ತು ವಿಶ್ವಕಪ್‍ನ ಇತರ ಪಂದ್ಯಗಳಿಗೆ 16 ರಿಂದ 18 ಲಕ್ಷ ರೂ. ಪಡೆದುಕೊಳ್ಳುತ್ತೇವೆ. ಇದಕ್ಕೆ ಹೋಲಿಸಿಕೊಂಡರೆ ಐಪಿಎಲ್ ಜಾಹೀರಾತಿಗೆ ನಿಗದಿ ಮಾಡಿದ ಹಣ ದುಬಾರಿಯಲ್ಲ ಎಂದು ತಿಳಿಸಿದೆ. ಇದನ್ನು ಓದಿ: ಭಾರೀ ಮೊತ್ತಕ್ಕೆ ಐಪಿಎಲ್ ಪ್ರಾಯೋಜಕತ್ವ ಪಡೆದ ಡ್ರೀಮ್ 11 ಕಂಪನಿ

    ಈ ಬಾರಿಯ ಐಪಿಎಲ್ ಅನ್ನು ಮನೆಯಲ್ಲೇ ಕುಳಿತು ಜಾಸ್ತಿ ಜನ ವೀಕ್ಷಣೆ ಮಾಡುತ್ತಾರೆ ಎಂದು ಅಂದಾಜಿಸಲಾಗಿದೆ. ಜೊತೆಗೆ ಐಪಿಎಲ್ ಫೈನಲ್ ಪಂದ್ಯಗಳು ದೀಪಾವಳಿ ಸಮಯದಲ್ಲಿ ಬರುವ ಕಾರಣ ಹೆಚ್ಚು ಜನರು ಐಪಿಎಲ್ ಅನ್ನು ನೋಡುತ್ತಾರೆ ಎಂಬ ಕಾರಣಕ್ಕೆ ವಾಹಿನಿ ತನ್ನ ಜಾಹೀರಾತು ದರವನ್ನು ಏರಿಸಿದೆ. ಮುಂದಿನ 10 ದಿನದ ಒಳಗೆ ಜಾಹೀರಾತಿಗೆ ಸಂಬಂಧಪಟ್ಟ ಡೀಲ್ಸ್ ಗಳು ಮುಕ್ತಾಯವಾಗಲಿವೆ.

    ಐಪಿಎಲ್ ಅನ್ನು ಸೆಪ್ಟೆಂಬರ್ 19ರಿಂದ ನವೆಂಬರ್ 10ರವರೆಗೆ ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನ ಮಾಡಿದೆ. 60 ಪಂದ್ಯ, 51 ದಿನ ಯಾವುದೇ ಪಂದ್ಯಗಳ ಕಡಿತವಿಲ್ಲದೇ ಸಂಪೂರ್ಣ ಟೂರ್ನಿ ನಡೆಯಲಿದೆ. ಈಗಾಗಲೇ ತಂಡಗಳು ಟೂರ್ನಿಗಾಗಿ ಸಿದ್ಧತೆ ನಡೆಸಿದ್ದು, ಕೊರೊನಾ ಪರೀಕ್ಷೆಯ ನಂತರ ಯುಎಇಗೆ ಹಾರಲು ರೆಡಿಯಾಗಿವೆ.

    ಸ್ಟಾರ್ ವಾಹಿನಿ ಎರಡು ರೀತಿಯಲ್ಲಿ ಐಪಿಎಲ್‍ನಿಂದ ಆದಾಯಗಳಿಸುತ್ತದೆ. ಹಾಟ್‍ಸ್ಟಾರ್ ಅಪ್ಲಿಕೇಶನ್‍ನಲ್ಲಿ ಬರುವ ಆನ್‍ಲೈನ್ ಜಾಹೀರಾತು ಬೇರೆ ಬೇರೆ ಆಗಿರುತ್ತದೆ. ಅಷ್ಟೇ ಅಲ್ಲದೇ ಲೈವ್ ಸ್ಕೋರ್, ಚಾಟ್ ಸಮಯದಲ್ಲಿ ಜಾಹೀರಾತುಗಳನ್ನು ಪ್ರದರ್ಶನ ಮಾಡುತ್ತದೆ. 2019ರ ಐಪಿಎಲ್‍ನ್ನು ದೇಶದಲ್ಲಿ 42 ಕೋಟಿ ಜನ ವೀಕ್ಷಣೆ ಮಾಡಿದ್ದರು. ಟಿವಿ ವೀಕ್ಷಣೆಯ ಶೇ.51 ರಷ್ಟು ವೀಕ್ಷಕರು ಈ ಅವಧಿಯಲ್ಲಿ ಐಪಿಎಲ್ ವೀಕ್ಷಿಸಿದ್ದರು.

    ಬಿಡ್‌ ಗೆದಿದ್ದ ಸ್ಟಾರ್‌ ಇಂಡಿಯಾ:
    2018ರಿಂದ 2022ರವರೆಗಿನ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಜಾಗತಿಕ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿದೆ. 2017ರಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ 16,347 ಕೋಟಿ ರೂ. ನೀಡಿ ಟಿವಿ ಮತ್ತು ಡಿಜಿಟಲ್ ಮೀಡಿಯಾದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.

    ಭಾರತದಲ್ಲಿ ಪ್ರಸಾರದ ಹಕ್ಕಿಗಾಗಿ ಸೋನಿ ಪಿಕ್ಚರ್ಚ್ 11,050 ಕೋಟಿ ರೂ. ಹಣವನ್ನು ಬಿಡ್ ಮಾಡಿದ್ದರೆ ಸ್ಟಾರ್ ಇಂಡಿಯಾ 6,196.94 ಕೋಟಿ ರೂ. ಹಣವನ್ನು ಭಾರತದ ಪ್ರಸಾರಕ್ಕೆ ಬಿಡ್ ಮಾಡಿತ್ತು. ಆದರೆ ಸೋನಿ ಪಿಕ್ಚರ್ಸ್ ಇತರ ಹಕ್ಕು ಗಳಿಗೆ ಬಿಡ್ ಮಾಡದ ಕಾರಣ ಅಂತಿಮವಾಗಿ ಐಪಿಎಲ್ ಪ್ರಸಾರದ ಹಕ್ಕನ್ನು ಸ್ಟಾರ್ ಇಂಡಿಯಾ ಪಡೆದುಕೊಂಡಿತ್ತು.

    ಈ ಬಿಡ್ ಪ್ರಕ್ರಿಯೆಯಲ್ಲಿ ಯುಪ್ ಟಿವಿ, ಗಲ್ಫ್ ಡಿಟಿಎಚ್ ಒಎಸ್‍ಎನ್, ಪರ್‍ಫಾರ್ಮ್ ಮೀಡಿಯಾ, ಏರ್‌ಟೆಲ್‌ , ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್, ಅಮೆಜಾನ್, ಇಎಸ್‍ಪಿಎನ್ ಡಿಜಿಟಲ್ ಮೀಡಿಯಾಗಳು ಭಾಗವಹಿಸಿತ್ತು. ಭಾರತದಲ್ಲಿ ಡಿಜಿಟಲ್ ಪ್ರಸಾರದ ಹಕ್ಕಿಗೆ ಏರ್‌ಟೆಲ್, ರಿಲಯನ್ಸ್ ಜಿಯೋ, ಟೈಮ್ಸ್ ಇಂಟರ್ ನೆಟ್, ಫೇಸ್‍ಬುಕ್ ಬಿಡ್ ಮಾಡಿತ್ತು.

    ಹಕ್ಕು ಇಷ್ಟೊಂದು ಮೊತ್ತಕ್ಕೆ ಹರಾಜು ಆದ ಕಾರಣ ಐಪಿಎಲ್ ಪ್ರತಿ ಪಂದ್ಯದ ಟಿವಿ ಶುಲ್ಕ 2018ರಿಂದ ಹೆಚ್ಚಾಗಲಿದೆ. ಈ ಹಿಂದೆ ಒಂದು ಪಂದ್ಯಕ್ಕೆ 15 ಕೋಟಿ ರೂ. ಆಗಿದ್ದರೆ, ಇನ್ನು ಮುಂದೆ ಈ ಮೌಲ್ಯ ಮೂರು ಪಟ್ಟು ಹೆಚ್ಚಾಗಬಹುದು ಎಂದು ಅಂದಾಜಿಸಲಾಗಿದೆ. ಪ್ರಸ್ತುತ ಈಗ ಭಾರತದ ಒಂದು ಏಕದಿನ ಪಂದ್ಯಕ್ಕೆ ಟಿವಿ ಶುಲ್ಕ 45 ಕೋಟಿ ರೂ. ಇದ್ದರೆ, ಐಪಿಎಲ್ ನಲ್ಲಿ 55 ಕೋಟಿ ರೂ.ಗೆ ಏರಿಕೆಯಾಗಬಹುದು ಎಂದು ಕ್ರಿಕೆಟ್ ಸಂಖ್ಯಾಶಾಸ್ತ್ರಜ್ಞ ಮೋಹನ್ ದಾಸ್ ಮೆನನ್ ಹೇಳಿದ್ದರು.

  • 15 ಸಾವಿರ ಮೊಬೈಲ್ ಜಾಹೀರಾತಿಗೆ 7 ಕೋಟಿ ಪಡೆದ ಸಲ್ಮಾನ್

    15 ಸಾವಿರ ಮೊಬೈಲ್ ಜಾಹೀರಾತಿಗೆ 7 ಕೋಟಿ ಪಡೆದ ಸಲ್ಮಾನ್

    ಮುಂಬೈ: ಬಾಲಿವುಡ್ ಭಾಯ್‍ಜಾನ್, ಸುಲ್ತಾನ್ ಸಲ್ಮಾನ್ ಖಾನ್ 15 ಸಾವಿರ ರೂ. ಬೆಲೆಯ ಸ್ಮಾರ್ಟ್ ಫೋನ್ ಜಾಹೀರಾತಿಗಾಗಿ 7 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ವರದಿಯಾಗಿದೆ.

    ಸ್ಟಾರ್ ನಟರು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವುದು ಸಹಜ. ಕೆಲ ಉತ್ಪನ್ನಗಳಿಗೆ ರಾಯಭಾರಿಯಾಗಿಯೂ ಕೆಲಸ ಮಾಡುತ್ತಾರೆ. ಕಂಪನಿಗಳು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಸ್ಟಾರ್ ನಟರನ್ನು ಜಾಹೀರಾತುಗಳಿಗೆ ಬಳಸಿಕೊಳ್ಳುತ್ತಾರೆ. ಸ್ಟಾರ್ ನಟರ ಮೂಲಕ ಉತ್ಪನ್ನಗಳಿಗೆ ಪ್ರಚಾರ ನೀಡಿದ್ರೆ ಮಾರುಕಟ್ಟೆಯಲ್ಲಿ ಕ್ಲಿಕ್ ಆಗುತ್ತೆ ಎಂಬ ಲೆಕ್ಕಾಚಾರಗಳಿರುತ್ತವೆ. ಇದೀಗ ರಿಯಲ್ ಮಿ 6 ಪ್ರೊ ಸ್ಮಾರ್ಟ್ ಫೋನ್ ಜಾಹೀರಾತಿನಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕಾಗಿ ಸಲ್ಮಾನ್ ಖಾನ್ ಬರೋಬ್ಬರಿ 7 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.

    ಈಗಾಗಲೇ ಜಾಹೀರಾತಿನ ಚಿತ್ರೀಕರಣ ಅಂತಿಮಗೊಂಡಿದೆ. ಕಂಪನಿ 14,999 ರೂ. ಬೆಲೆ ಸ್ಮಾರ್ಟ್ ಫೋನ್ ಪ್ರಚಾರಕ್ಕಾಗಿ 7 ಕೋಟಿ ರೂ.ಯನ್ನ ನೀಡಿದೆ. ಜಾಹೀರಾತಿನ ಕೆಲ ಫೋಟೋಗಳು ಸಹ ರಿವೀಲ್ ಆಗಿವೆ.

    ಕಂಪನಿಯ ಜೊತೆಗಿನ ಒಪ್ಪಂದದ ಬಳಿಕ ಪ್ರತಿಕ್ರಿಯಿಸಿರುವ ಸಲ್ಮಾನ್ ಖಾನ್, ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಸ್ಮಾರ್ಟ್ ಫೋನ್ ಬ್ರ್ಯಾಂಡ್‍ನಲ್ಲಿ ನಾನು ಸಹ ಒಬ್ಬನಾಗಿರೋದಕ್ಕೆ ಖುಷಿಯಾಗುತ್ತಿದೆ. ರಿಯಲ್ ಮಿ 6 ಸೀರೀಜ್ ಸ್ಟೈಲಿಶ್ ಆಗಿದ್ದು ಗ್ರಾಹಕರಿಗೆ ಇಷ್ಟವಾಗಲಿದೆ ಎಂದು ಹೇಳಿದ್ದಾರೆ.

    ನಮ್ಮ ಉತ್ಪನ್ನ ಗ್ರಾಹಕರಿಗೆ ತಲುಪಿಸಲು ಸಲ್ಮಾನ್ ಖಾನ್ ನಮಗೆ ಸಹಾಯವಾಗಲಿದ್ದಾರೆ. ಅವರ ಜನಪ್ರಿಯತೆ ನಮ್ಮ ಸ್ಮಾರ್ಟ್ ಫೋನ್‍ನನ್ನು ಜನರಿಗೆ ತಲುಪಿಸುತ್ತದೆ. ದೇಶದ ಪ್ರತಿ ವರ್ಗದ ಜನ ಸಲ್ಮಾನ್ ಅವರನ್ನ ಇಷ್ಟಪಡುತ್ತಾರೆ. ಸಲ್ಮಾನ್ ಖಾನ್ ನಮ್ಮನ್ನು ಗ್ರಾಹಕರ ಬಳಿಗೆ ತಲುಪಿಸುವ ಸೇತುವೆ ಆಗ್ತಾರೆ ಎಂದು ರಿಯಲ್ ಮಿ ಕಂಪನಿಯ ಸಿಇಓ ಮಾಧವ್ ಸೇಠ್ ತಿಳಿಸಿದ್ದಾರೆ.

  • ದೆಹಲಿ ವಿಧಾನಸಭೆ ಚುನಾವಣೆ – ಪ್ರಚಾರಕ್ಕೆ ಖರ್ಚು ಮಾಡ್ತಿರುವುದು ಎಷ್ಟು ಗೊತ್ತಾ?

    ದೆಹಲಿ ವಿಧಾನಸಭೆ ಚುನಾವಣೆ – ಪ್ರಚಾರಕ್ಕೆ ಖರ್ಚು ಮಾಡ್ತಿರುವುದು ಎಷ್ಟು ಗೊತ್ತಾ?

    ನವದೆಹಲಿ: ದೆಹಲಿ ಚುನಾವಣೆ ರಂಗೇರುತ್ತಿದೆ. ಆಡಳಿತರೂಢ ಪಕ್ಷ ಆಮ್ ಅದ್ಮಿ ಸೇರಿದಂತೆ ಕಾಂಗ್ರೆಸ್, ಬಿಜೆಪಿ ಪಕ್ಷಗಳು ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದೆ. ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಿರುವ ಈ ಮೂರು ಪಕ್ಷಗಳು ಚುನಾವಣಾ ಪ್ರಚಾರಕ್ಕಾಗಿ 150-170 ಕೋಟಿ ವರೆಗೂ ಹಣ ಖರ್ಚು ಮಾಡುತ್ತಿದೆ ಎಂದು ವರದಿಯೊಂದು ಹೇಳಿದೆ.

    ಈ ಬಾರಿ ದೊಡ್ಡ ಪ್ರಚಾರಗಳಿಗಿಂತ ಹೆಚ್ಚಾಗಿ ಮನೆ ಮನೆ ಪ್ರಚಾರ, ಕರಪತ್ರ ಮುದ್ರಣ, ಸೋಶಿಯಲ್ ಮೀಡಿಯಾಕ್ಕೆ ಹೆಚ್ಚು ಹಣ ಖರ್ಚು ಮಾಡಲಾಗುತ್ತಿದೆ ಎಂದು ವರದಿ ತಿಳಿಸಿದೆ. ದೊಡ್ಡ ದೊಡ್ಡ ಜಾಹೀರಾತು ಸಂಸ್ಥೆಗಳಿಗೆ ಈ ಬಾರಿ ಮಣೆ ಹಾಕದೇ ಮಧ್ಯಮ ಗಾತ್ರದ ಜಾಹೀರಾತು ಏಜೆನ್ಸಿಗಳಿಗೆ ಈ ಬಾರಿ ಚುನಾವಣಾ ಪ್ರಚಾರ ಕಾರ್ಯಗಳ ಜವಾಬ್ದಾರಿ ವಹಿಸಲಾಗಿದೆ.

    ಈ ಮಧ್ಯಮ ಜಾಹೀರಾತು ಸಂಸ್ಥೆಗಳ ಮೂಲಕ ಹೊರಾಂಗಣ ಜಾಹೀರಾತು, ಫ್ಲೆಕ್ಸ್, ಹೊರ್ಡಿಂಗ್ಸ್ ಕಟೌಟ್‍ಗಳ ತಯಾರಿಕೆಗೆ ಆದ್ಯತೆ ನೀಡಿದೆ. ರಾಜಕೀಯ ಜಾಹೀರಾತಿನ ಮೇಲೆ ನಿರ್ಬಂಧಗಳ ಹೊರತಾಗಿಯೂ, ಟ್ವಿಟ್ಟರ್, ವಾಟ್ಸಪ್ ಗ್ರೂಪ್ಸ್, ಫೇಸ್‍ಬುಕ್, ಬ್ಲಾಗ್‍ಗಳು, ಟಿಕ್‍ಟಾಕ್ ಮತ್ತು ಪರೋಕ್ಷ ಜಾಹೀರಾತುಗಳನ್ನು ವ್ಯಾಪಕವಾಗಿ ದೆಹಲಿ ಚುನಾವಣೆಯಲ್ಲಿ ಬಳಸಲಾಗುತ್ತಿದ್ದು ಇದಕ್ಕೆ ಖರ್ಚು ಮಾಡಿರುವ ಹಣದ ಲೆಕ್ಕ ಹಾಕಲು ಸಾಧ್ಯವಾಗಿಲ್ಲ.

  • ಅನಧಿಕೃತ ಹೂಡಿಕೆ ಬಗ್ಗೆ ಚಿತ್ರ ಮಂದಿರದಲ್ಲಿ ವಿಡಿಯೋ ಜಾಹೀರಾತಿಗೆ ಸೂಚನೆ

    ಅನಧಿಕೃತ ಹೂಡಿಕೆ ಬಗ್ಗೆ ಚಿತ್ರ ಮಂದಿರದಲ್ಲಿ ವಿಡಿಯೋ ಜಾಹೀರಾತಿಗೆ ಸೂಚನೆ

    ಧಾರವಾಡ: ಅನಧಿಕೃತ ಹೂಡಿಕೆಗಳ ಕುರಿತು ಚಲನಚಿತ್ರ ಮಂದಿರಗಳಲ್ಲಿ ಸಾರ್ವಜನಿಕರಿಗೆ ಅರಿವು ಮೂಡಿಸಲು ಚಲನಚಿತ್ರ ಮಂದಿರಗಳಲ್ಲಿ ವಿವಿಧ ವಿಡಿಯೋ ಜಾಹೀರಾತುಗಳನ್ನು ಪ್ರದರ್ಶಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸುತ್ತೋಲೆ ಹೊರಡಿಸಿದ್ದಾರೆ.

    ವಿವಿಧ ಅನಧಿಕೃತ ಕಂಪನಿಗಳ ಆಮಿಷಕ್ಕೆ ಮರುಳಾಗಿ ಹಣ ಕಳೆದುಕೊಳ್ಳುತ್ತಿರುವ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದ 15 ಸೆಕೆಂಡುಗಳ ಸಾರ್ವಜನಿಕ ಹಿತಾಸಕ್ತಿ ಸರ್ಕಾರಿ ವಿಡಿಯೋ ಜಾಹೀರಾತುಗಳನ್ನು ಉಚಿತವಾಗಿ ಧಾರವಾಡ ಜಿಲ್ಲೆಯ ಎಲ್ಲ ಚಲನಚಿತ್ರ ಮಂದಿರಗಳ ಮಾಲೀಕರು ಪ್ರತಿ ಚಲನಚಿತ್ರ ಪ್ರದರ್ಶಿಸುವ ಆರಂಭದಲ್ಲಿ ಹಾಗೂ ವಿರಾಮ ಸಂದರ್ಭದಲ್ಲಿ ಪ್ರದರ್ಶಿಸಲು ಸುತ್ತೋಲೆ ಮೂಲಕ ನಿರ್ದೇಶಿಸಲಾಗಿದೆ.

    ಕರ್ನಾಟಕ ಚಲನಚಿತ್ರ ನಿಯಂತ್ರಣ ಕಾಯ್ದೆ 1964ರ ನಿಯಮ 12ರ ಅನ್ವಯ ಈ ನಿರ್ದೇಶನವನ್ನು ಕಡ್ಡಾಯವಾಗಿ ಪಾಲಿಸುವಂತೆ ಸರ್ಕಾರಿ ವಿಡಿಯೋ ಜಾಹೀರಾತುಗಳನ್ನು ಪ್ರದರ್ಶಿಸಲು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚಿಸಿದ್ದಾರೆ.

  • ಮೊದಲ ಬಾರಿ ಟ್ರೈನ್ ಏರಿ ಬಂದು ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ಶ್ರೀಮನ್ನಾರಾಯಣ

    ಮೊದಲ ಬಾರಿ ಟ್ರೈನ್ ಏರಿ ಬಂದು ಕನ್ನಡದಲ್ಲಿ ಇತಿಹಾಸ ನಿರ್ಮಿಸಿದ ಶ್ರೀಮನ್ನಾರಾಯಣ

    ಬೆಂಗಳೂರು: ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು ಹಿಂದಿ ಸೇರಿದಂತೆ 5 ಭಾಷೆಗಳಲ್ಲಿ ಬೆಳ್ಳಿ ತೆರೆಗೆ ಬರಲು ಅವನೇ ಶ್ರೀಮನ್ನಾರಾಯಣ ಸಿದ್ಧನಾಗಿದ್ದಾನೆ.

    ರಕ್ಷಿತ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿ ಮೂಡಿ ಬಂದಿರುವ ಈ ವರ್ಷದ ಅತ್ಯಂತ ನಿರೀಕ್ಷೆಗಳನ್ನ ಹುಟ್ಟುಹಾಕಿರೋ ಸಿನಿಮಾ ಈ ವರ್ಷದ ಕೊನೆಯ ವಾರ ನಿಮ್ಮನ್ನೆಲ್ಲ ರಂಜಿಸಲು ಸಿದ್ಧವಾಗಿದೆ. ಸಿನಿಮಾ ಟ್ರೈಲರ್, ಹಾಡುಗಳು ಈಗಾಗಲೇ ಭಾರೀ ಸದ್ದು ಮಾಡುತ್ತಿದೆ.

    ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾಗಳು ಹೊಸತನದಿಂದ ಇರೋದು ಎಲ್ಲರಿಗೂ ಗೊತ್ತಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಹೆಸರಿನಲ್ಲೇ ವಿಭಿನ್ನವಾಗಿದ್ದು ಸಿನಿಮಾ ಕೂಡ ವಿಭಿನ್ನವಾಗಿರೋತ್ತೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿಬಂದಿದೆ. ಕೇವಲ ಸಿನಿಮಾ ಮಾತ್ರ ಅಲ್ಲ ಈ ಸಿನಿಮಾದ ಜಾಹೀರಾತು ಸಹ ವಿಭಿನ್ನತೆಯಿಂದ ಕೂಡಿದೆ.

    ಹೌದು ಟ್ರೈನ್ ಬೋಗಿಗಳ ಮೇಲೆ ಅವನೇ ಶ್ರೀಮನ್ನಾರಾಯಣ ಪೋಸ್ಟರ್‍ಗಳು ಸಂಚಲನ ಮೂಡಿಸಿದೆ. ಕನ್ನಡದ ಚಿತ್ರವೊಂದು ಹೀಗೆ ರೈಲ್ವೇ ಬೋಗಿಯ ಮೇಲೆ ಜಾಹೀರಾತು ನೀಡುತ್ತಿರೋದು ಇದೇ ಮೊದಲು. ಸಿನಿಮಾ ಹೆಸರಿನ ಮೂಲಕವೇ ಸದ್ದು ಮಾಡಿತ್ತು. ಈಗ ವಿಭಿನ್ನವಾಗಿ ಸಿನಿಮಾ ಪ್ರಚಾರ ಮಾಡುತ್ತಿರೋದು ಸಹ ಸಿನಿ ಪ್ರಿಯರಲ್ಲಿ ಸಿನಿಮಾದ ಬಗ್ಗೆ ಕುತೂಹಲ ಮೂಡುವಂತೆ ಮಾಡಿದೆ.

  • ಇದೇ 16ರಂದು ಗುಡುಗು ಬರ್ತಿದೆ – ಯಶ್ ಗುಡ್‍ನ್ಯೂಸ್

    ಇದೇ 16ರಂದು ಗುಡುಗು ಬರ್ತಿದೆ – ಯಶ್ ಗುಡ್‍ನ್ಯೂಸ್

    ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಜಾಹೀರಾತಿಗೆ ಖಡಕ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದರು. ಆ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಜಾಹೀರಾತಿಗೆ ಸಂಬಂಧಪಟ್ಟಂತೆ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ನಟ ಯಶ್ ಅವರು ಟ್ವಿಟ್ಟರ್ ಮೂಲಕ ವಿಡಿಯೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಟ್ಟಿದ್ದಾರೆ. “ಇದೇ ಸೆಪ್ಟೆಂಬರ್ 16 ರಂದು ಬಿಯರ್ಡ್ ಅವರ ಗುರುಡು ಬರುತ್ತಿದೆ. ಚಂಡಮಾರುತದೊಂದಿಗೆ ಹೋರಾಡಲು ಸಿದ್ಧವಾಗಿ” ಎಂದು ವಿಡಿಯೋದಲ್ಲಿ ಪದಗಳ ಮೂಲಕ ತಿಳಿಸಿದ್ದಾರೆ.

    ವಿಡಿಯೋದಲ್ಲಿ ಯಶ್ ಬಾಲಿವುಡ್ ಸಿನಿಮಾದ ಸೂಪರ್ ಹೀರೋ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಯಶ್ ಲುಕ್ ನಿಧಾನವಾಗಿ ಬಂದಿದ್ದು, ಅದ್ಭುತವಾಗಿ ಮೂಡಿಬಂದಿದೆ. ಯಶ್ ಅವರ ರಗಡ್ ಲುಕ್‍ಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ. ವಿಡಿಯೋ ಕೇವಲ 25 ಸೆಕೆಂಡ್‍ಗಳಿದ್ದು, ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 7 ಸಾವಿರಕ್ಕೂ ಅಧಿಕ ವೀವ್ಸ್ ಕಂಡಿದೆ.

    ಇದೇ ಜಾಹೀರಾತಿಗೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು. ಕೆಜಿಎಫ್-2 ಸಿನಿಮಾದ ಫಸ್ಟ್ ಲುಕ್ ಎಂಬಿತ್ಯಾದಿ ಮಾತುಗಳು ಕೇಳಿ ಬಂದಿದ್ದವು. ಕೊನೆಯ ಯಶ್ ಇದೊಂದು ಜಾಹೀರಾತಿನ ಫೋಟೋ ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಯಶ್ ‘ಕೆಜಿಎಫ್-2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರತಂಡ ಯಶ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿಲ್ಲ. ಮೊದಲ ಬಾರಿಗೆ ‘ಕೆಜಿಎಫ್-2’ ಚಿತ್ರದ ಮೂಲಕ ಕನ್ನಡದ ಅಂಗಳಕ್ಕೆ ಬಾಲಿವುಡ್ ಮುನ್ನಾಬಾಯ್ ಸಂಜಯ್ ದತ್ ಪಾದರ್ಪಣೆ ಮಾಡಿದ್ದಾರೆ. ಸಂಜಯ್ ದತ್ತ್ ಬರ್ತ್ ಡೇ ದಿನ ಅಧೀರನ ಫಸ್ಟ್ ಲುಕ್ ಬಿಡುಗಡೆಯಾಗಿತ್ತು.

  • 10 ಕೋಟಿ ಆಫರ್ ತಿರಸ್ಕರಿಸಿದ ಶಿಲ್ಪಾ ಶೆಟ್ಟಿ

    10 ಕೋಟಿ ಆಫರ್ ತಿರಸ್ಕರಿಸಿದ ಶಿಲ್ಪಾ ಶೆಟ್ಟಿ

    ಮುಂಬೈ: ನಟಿ ಶಿಲ್ಪಾ ಶೆಟ್ಟಿ ಅವರು ಸದಾ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳುವುದರಲ್ಲಿ ಬ್ಯುಸಿಯಾಗಿರುತ್ತಾರೆ. ಇದೀಗ 13 ವರ್ಷಗಳ ನಂತರ ಬೆಳ್ಳಿತೆರೆಗೆ ಕಮ್‍ಬ್ಯಾಕ್ ಮಾಡುತ್ತಿದ್ದಾರೆ. ಆದರೆ ಈ ನಡುವೆ ಅವರು ಬರೋಬ್ಬರಿ 10 ಕೋಟಿ ರೂ. ಆಫರ್‌ವೊಂದನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದು ಬಂದಿದೆ.

    ನಟಿ ಶಿಲ್ಪಾ ಶೆಟ್ಟಿಗೆ ಅವರನ್ನು ಆಯುರ್ವೇದಿಕ್ ಕಂಪನಿಯೊಂದು ಸ್ಲಿಮ್ಮಿಂಗ್ ಮಾತ್ರೆ (ಸ್ಲಿಮ್ ಆಗಲು ಮಾತ್ರೆ) ಬಗ್ಗೆ ಜಾಹೀರಾತು ಮಾಡುವಂತೆ ಸಂಪರ್ಕಿಸಿತ್ತು. ಜೊತೆಗೆ ಇದಕ್ಕಾಗಿ ಅವರಿಗೆ 10 ಕೋಟಿ ಆಫರ್ ನೀಡಿತ್ತು. ಆದರೆ ಈ ಅವಕಾಶವನ್ನ ಶಿಲ್ಪಾ ಶೆಟ್ಟಿ ತಿರಸ್ಕರಿಸಿದ್ದಾರೆ. ಈ ಬಗ್ಗೆ ಸ್ವತಃ ಶಿಲ್ಪಾ ಶೆಟ್ಟಿ ಅವರೇ ಸಂದರ್ಶನವೊಂದಲ್ಲಿ ಮಾತನಾಡಿದ್ದಾರೆ.

    “ಸ್ಲಿಮ್ ಮಾತ್ರೆ ಬಗ್ಗೆ ಜಾಹೀರಾತು ನೀಡುವಂತೆ ಕಂಪನಿಯೊಂದು ನನ್ನನ್ನು ಸಂಪರ್ಕಿಸಿತ್ತು. ನಾನು ನೈಸರ್ಗಿಕ ಸೌಂದರ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತೇನೆ. ಹೀಗಾಗಿ ವೈಜ್ಞಾನಿಕವಾಗಿ ಕೆಲವನ್ನ ಪ್ರೋತ್ಸಾಹಿಸುವುದಿಲ್ಲ. ಆರೋಗ್ಯಕರ ಆಹಾರ ಮತ್ತು ವ್ಯಾಯಮದಿಂದ ಸೌಂದರ್ಯ ಸಾಧ್ಯ. ಆದರೆ ನನಗೆ ನಂಬಿಕೆ, ಭರವಸೆ ಇಲ್ಲದ ವಿಚಾರದ ಬಗ್ಗೆ ನಾನು ಪ್ರಚಾರ ಮಾಡುವುದು ಸರಿಯಿರಲ್ಲ” ಎಂದು ಶಿಲ್ಪಾ ಶೆಟ್ಟಿ ಅವರು ರಿಜೆಕ್ಟ್ ಮಾಡಿದ್ದಾರೆ.

    ಈ ಹಿಂದೆ ನಟಿ ಸಾಯಿ ಪಲ್ಲವಿ ಅವರು ಕೂಡ 2 ಕೋಟಿಯ ಫೇಸ್ ಕ್ರೀಮ್ ಜಾಹೀರಾತನ್ನು ರಿಜೆಕ್ಟ್ ಮಾಡಿದ್ದರು. ಶಿಲ್ಪಾ ಶೆಟ್ಟಿ ಅವರು 2007ರ ನಂತರ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ ‘ನಿಕಮ್ಮಾ’ ಸಿನಿಮಾದ ಮೂಲಕ ಮತ್ತೆ ತಮ್ಮ ಸಿನಿ ಪಯಣವನ್ನು ಮುಂದುವರಿಸುತ್ತಿದ್ದಾರೆ.

  • ಪಾಕ್ ಜಾಹೀರಾತಿಗೆ ತಿರುಗೇಟು ಕೊಟ್ಟ ಭಾರತದ ಯೂಟ್ಯೂಬ್ ಸ್ಟಾರ್ಸ್!

    ಪಾಕ್ ಜಾಹೀರಾತಿಗೆ ತಿರುಗೇಟು ಕೊಟ್ಟ ಭಾರತದ ಯೂಟ್ಯೂಬ್ ಸ್ಟಾರ್ಸ್!

    ನವದೆಹಲಿ: ವಿಶ್ವಕಪ್ ಟೂರ್ನಿಯ ಭಾಗವಾಗಿ ನಾಳೆ ನಡೆಯಲಿರುವ ಟೀಂ ಇಂಡಿಯಾ ಹಾಗೂ ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯ ಭಾರೀ ಕುತೂಹಲವನ್ನು ಮೂಡಿಸಿದೆ.

    ಸಾಮಾಜಿಕ ಜಾಲತಾಣದಲ್ಲಿ ಪಂದ್ಯದ ಕುರಿತ ಹೊಸ ಹೊಸ ಮಿಮ್ಸ್ ಹರಿದಾಡುತ್ತಿದ್ದು, ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಜಾಹೀರಾತಿಗೆ ಭಾರತದ ಯೂಟ್ಯೂಬ್ ಸ್ಟಾರ್ಸ್ ತಿರುಗೇಟು ನೀಡಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.

    https://twitter.com/hvgoenka/status/1139545650347929600

    ಐಎಎಫ್ ವಿಂಗ್ ಕಮಾಂಡರ್ ಅಭಿನಂದನ್ ಹೋಲುವಂತಹ ವ್ಯಕ್ತಿಯನ್ನು ಜಾಹೀರಾತಿನಲ್ಲಿ ಬಳಕೆ ಮಾಡಿದ್ದ ಪಾಕ್ ಮಾಧ್ಯಮ ವಿರುದ್ಧ ಭಾರತೀಯ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದರು. ಸದ್ಯ ವಿ ಸೆವೆನ್ ಪಿಕ್ಚರ್ಸ್ ಎಂಬ ಯೂಟ್ಯೂಬ್ ಚಾನೆಲ್ ವಿಡಿಯೋ ಬಿಡುಗಡೆ ಮಾಡಿದೆ.

    ವಿಡಿಯೋದಲ್ಲಿ ಭಾರತೀಯ ಅಭಿಮಾನಿ ಸಲೂನ್‍ನಲ್ಲಿ ಯುವರಾಜ್ ಸಿಂಗ್ ವಿಡಿಯೋ ನೋಡತ್ತಾ ಕುಳಿತ್ತಿರುತ್ತಾರೆ. ಈ ವೇಳೆ ಆಗಮಿಸುವ ಪಾಕ್ ಅಭಿಮಾನಿ ಗಿಫ್ಟ್ ಎಂದು ರುಮಾಲ್ (ಕರ್ಚಿಫ್)ನ್ನು ನೀಡಿ ಜೂನ್ 16 ರಂದು ಪಾಕ್ ಗೆಲ್ಲುವ ಬಳಿಕ ನಿಮಗೆ ಬೇಕಾಗುತ್ತದೆ ಎಂದು ಕಾಲೆಳೆಯುತ್ತಾರೆ. ಇದಕ್ಕೆ ಸೈಲೆಂಟ್ ಆಗಿಯೇ ತಿರುಗೇಟು ನೀಡುವ ಭಾರತೀಯ ಅಭಿಮಾನಿ ಅಭಿನಂದನ್ ರೀತಿಯೇ ಪಾಕ್ ಅಭಿಮಾನಿಗೆ ಶೇವ್ ಮಾಡಿಸುತ್ತಾನೆ. ಪಾಕ್ ಅಭಿಮಾನಿ ನೀಡಿದ್ದ ಕರ್ಚಿಫ್ ಗಿಫ್ಟನ್ನು ಆತನಿಗೆ ಮರಳಿ ನೀಡಿರುವ ಭಾರತೀಯ ಅಭಿಮಾನಿ, ನಿಮ್ಮಿಂದ ವಿಶ್ವಕಪ್ ಗೆಲ್ಲಲು ಸಾಧ್ಯವಿಲ್ಲ. ಅಭಿನಂದನ್ ಕುಡಿದು ಬಿಟ್ಟ ಟೀ ಕಪ್ ಪಡೆಯಲು ಮಾತ್ರ ಸಾಧ್ಯ ಎಂದು ಹೇಳಿ ಟಾಂಗ್ ನೀಡುತ್ತಾನೆ.

    ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಅಭಿಮಾನಿಗಳು ತಮ್ಮದೇ ಪ್ರತಿಕ್ರಿಯೆ ನೀಡಿ ಉತ್ತರಿಸುತ್ತಿದ್ದಾರೆ. ವಿಡಿಯೋ ಅಂತ್ಯದಲ್ಲಿ ಸಿಗುವ ಟ್ವಿಸ್ಟ್ ಬಗ್ಗೆ ಹಲವರು ಮೆಚ್ಚುಗೆ ಸೂಚಿಸಿದ್ದಾರೆ.

  • ಇಂಡೋ-ಪಾಕ್ ವಿಶ್ವಕಪ್ ಪಂದ್ಯ – ಅಭಿನಂದನ್‍ರನ್ನ ಎಳೆದುತಂದು ಜಾಹೀರಾತು ಬಿಟ್ಟ ಪಾಕ್

    ಇಂಡೋ-ಪಾಕ್ ವಿಶ್ವಕಪ್ ಪಂದ್ಯ – ಅಭಿನಂದನ್‍ರನ್ನ ಎಳೆದುತಂದು ಜಾಹೀರಾತು ಬಿಟ್ಟ ಪಾಕ್

    ಇಸ್ಲಾಮಾಬಾದ್: ಬಾಲಾಕೋಟ್ ಏರ್ ಸ್ಟ್ರೈಕ್ ಬಳಿಕ ಯುದ್ಧ ಭೀತಿಯನ್ನ ಎದುರಿಸಿದ್ದ ಪಾಕಿಸ್ತಾನ ಸದ್ಯ ಏರ್ ಸ್ಟ್ರೈಕ್ ಬಳಿಕ ಪಾಕ್ ಸೈನಿಕರಿಗೆ ಸೆರೆಯಾಗಿದ್ದ ವಿಂಗ್‍ಕಮಾಂಡ್ ಅಭಿನಂದನ್ ಅವರನ್ನ ಮುಂದಿಟ್ಟು ಭಾರತದ ಕಾಲೆಳೆದಿದೆ.

    ಭಾರತದೊಂದಿಗೆ ಮೇಲ್ನೋಟಕ್ಕೆ ಸ್ನೇಹ ಸಂಬಂಧಕ್ಕೆ ಸಿದ್ಧ ಎಂದು ತೋರ್ಪಡಿಸಿಕೊಂಡು ತನ್ನ ಕುತಂತ್ರಿ ಬುದ್ಧಿಯನ್ನ ಪಾಕಿಸ್ತಾನ ಮುಂದುವರಿಸುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗ ಆನ್‍ಲೈನ್ ಸ್ಟ್ರೀಮಿಂಗ್ ಅಪ್ಲಿಕೇಶನ್ ಜಾಜ್ ಟಿವಿ ಪಾಕಿಸ್ತಾನ ಈ ಬಾರಿ ವಿಶ್ವಕಪ್ ಕುರಿತ ಪಂದ್ಯದ ಜಾಹೀರಾತಿನಲ್ಲಿ ಅಭಿನಂದನ್‍ರನ್ನ ಎಳೆದುತಂದಿದೆ. ಜೂನ್ 16 ರಂದು ಭಾರತ ಹಾಗೂ ಪಾಕಿಸ್ತಾನ ನಡುವೆ ಪಂದ್ಯ ನಡೆಯಲಿದ್ದು, ಈ ಪಂದ್ಯಕ್ಕೆ ಈಗಾಗಲೇ ಜಾಹೀರಾತು ನೀಡಲು ಆರಂಭಿಸಿದೆ.

    ಪಾಕ್ ಜಾಹೀರಾತಿನಲ್ಲಿ ವಿಂಗ್‍ಕಮಾಂಡರ್ ಅಭಿನಂದನ್ ಅವರನ್ನು ಹೋಲುವ ವ್ಯಕ್ತಿಯನ್ನ ತೋರಿಸಿರುವ ಪಾಕಿಸ್ತಾನ ಮಾಧ್ಯಮ, ತಂಡದ ಆಡುವ 11ರ ಬಳಗದ ಬಗ್ಗೆ ಪ್ರಶ್ನೆ ಮಾಡಿದೆ. ಈ ವೇಳೆ ಟೀ ಕುಡಿಯುತ್ತ ಆತ ಅಭಿನಂದನ್ ಅವರು ಹೇಳಿದಂತೆ ಮಾಹಿತಿ ನೀಡಲು ನಿರಾಕರಿಸುತ್ತಾರೆ. ಅಂತಿಮವಾಗಿ ಆತನನ್ನು ಕಳುಹಿಸಲು ಒಪ್ಪಿ ತೆರಳಲು ಸೂಚಿಸುತ್ತದೆ. ಆದರೆ ಈ ವೇಳೆ ಕಪ್ ವಾಪಸ್ ನೀಡುವಂತೆ ಹೇಳಿ ಕಾಲೆಳೆಯುವ ಪ್ರಯತ್ನ ನಡೆಸಿದೆ.

    ಪಾಕಿಸ್ತಾನ ಮಾಧ್ಯಮದ ಈ ಜಾಹೀರಾತಿಗೆ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗುತ್ತಿದ್ದು, ಪಾಕ್‍ಗೆ ತಿರುಗೇಟು ನೀಡಿ ಭಾರತ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಜೂನ್ 16 ರಂದು ನಡೆಯಲಿರುವ ಪಾಕಿಸ್ತಾನದ ವಿರುದ್ಧದ ಪಂದ್ಯ ಇಡೀ ವಿಶ್ವದ ಗಮನ ಸೆಳೆದಿದೆ. ಪುಲ್ವಾಮಾ ದಾಳಿಯ ಬಳಿಕ ಹಲವು ಭಾರತೀಯರು ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಭಾರತ ಭಾಗವಹಿಸಬಾರದು, ವಿಶ್ವಕಪ್ ಟೂರ್ನಿಯಿಂದಲೇ ಭಯೋತ್ಪಾದನೆಗೆ ಪೋಷಣೆ ಮಾಡುತ್ತಿರುವ ರಾಷ್ಟ್ರವನ್ನು ವಿಶ್ವಕಪ್ ಟೂರ್ನಿಯಿಂದ ಹೊರ ಹಾಕಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

  • ಆಸ್ಟ್ರೇಲಿಯಾ ಕ್ರಿಕೆಟಿಗನ ವಿರುದ್ಧ ಸಿಡಿದ ಕೊಹ್ಲಿ ಫ್ಯಾನ್ಸ್!

    ಆಸ್ಟ್ರೇಲಿಯಾ ಕ್ರಿಕೆಟಿಗನ ವಿರುದ್ಧ ಸಿಡಿದ ಕೊಹ್ಲಿ ಫ್ಯಾನ್ಸ್!

    ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಆಟಗಾರ ಬ್ರಾಡ್ ಹಾಡ್ಜ್ ಮಾಡಿದ ಟ್ವೀಟ್‍ಗೆ ಟೀಂ ಇಂಡಿಯಾ ಕ್ಯಾಪ್ಟನ್ ವಿರಾಟ್ ಕೊಹ್ಲಿ ಅಭಿಮಾನಿಗಳು ಸಿಡಿದೆದ್ದಿದ್ದಾರೆ.

    ವಿರಾಟ್ ಕೊಹ್ಲಿ ಮತ್ತು ಯುವ ಆಟಗಾರ ರಿಷಬ್ ಪಂತ್ ಹಿಮಾಲಯ ಕಂಪನಿಗೆ ಬ್ರಾಂಡ್ ಅಂಬಾಸಿಡರ್‍ಗಳಾಗಿ ಅಯ್ಕೆಯಾಗಿದ್ದು. ಆ ಕಂಪನಿಯ ಉತ್ಪನ್ನ ಪುರಷರ ಫೇಸ್ ಕ್ರೀಮ್ ಪ್ರಚಾರ ಮಾಡುವ ಜಾಹೀರಾತಿನಲ್ಲಿ ಅಭಿನಯಿಸಿದ್ದಾರೆ. ಈ ವಿಡಿಯೋವನ್ನು ಕೊಹ್ಲಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.

    ಈ ವಿಡಿಯೋವನ್ನು ನೋಡಿದ ಬ್ರಾಡ್ ಹಾಡ್ಜ್, “ಅದ್ಭುತವಾಗಿದೆ ಜನರು ಹಣಕ್ಕಾಗಿ ಏನ್ ಬೇಕಾದರು ಮಾಡುತ್ತಾರೆ” ಎಂದು ಕಮೆಂಟ್ ಮಾಡಿ ಕೊಹ್ಲಿ ಅಭಿಮಾನಿಗಳ ಕೋಪಕ್ಕೆ ಗುರಿಯಾಗಿದ್ದಾರೆ. ಈ ರೀತಿ ಕಮೆಂಟ್ ಮಾಡೋದು ಎಷ್ಟು ಸರಿ ಎಂದು ಕೊಹ್ಲಿ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

    ಟ್ವೀಟ್‍ಗೆ ಎಲ್ಲಡೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಬ್ರಾಡ್ ಹಾಡ್ಜ್ ಮರು ಟ್ವೀಟ್ ಮಾಡಿದ್ದಾರೆ. ನಾನು ತಮಾಷೆಗೆಂದು ಆ ರೀತಿಯಲ್ಲಿ ಹೇಳಿದ್ದು. ಅದರಲ್ಲಿ ಏನ್ ತಪ್ಪಿದೆ. ನಾನು ಕೂಡ ಕ್ರಿಕೆಟಿಗ ನಾನು ಈ ತರಹದ ಕೆಲಸವನ್ನು ಮಾಡುತ್ತೇನೆ. ಈ ಮಾತಿನಲ್ಲಿ ಏನೂ ವಿಭಿನ್ನವಾಗಿದೆ ನನಗೆ ಗೊತ್ತಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ವಿವಾದವನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ.

    ಕಳೆದ ಕೆಲ ವಾರದಲ್ಲಿ ಕೊಹ್ಲಿ ಹಲವಾರು ಜಾಹೀರಾತು ಯೋಜನೆಗೆ ಸಹಿ ಹಾಕಿದ್ದಾರೆ. ಇದೇ ತಿಂಗಳು ಮೇ 30ರಿಂದ ಇಂಗ್ಲೆಂಡ್‍ನಲ್ಲಿ ನಡೆಯವ ವಿಶ್ವಕಪ್ ಟೂರ್ನಿಯಲ್ಲಿ ಭಾರತವನ್ನು ವಿರಾಟ್ ಕೊಹ್ಲಿ ಮುನ್ನಡೆಸಲಿದ್ದಾರೆ.