ನವದೆಹಲಿ: ದೇವಸ್ಥಾನ ನಿರ್ವಹಣೆ ವಿಚಾರದಲ್ಲಿ ಕರ್ನಾಟಕದ ಧರ್ಮಸ್ಥಳದ ಆಡಳಿತ ನೋಡಿ ಕಲಿಯಿರಿ ಎಂದು ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ಆಡಳಿತ ಮಂಡಳಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ.
ದೇವಸ್ಥಾನದಲ್ಲಿ ದೇವಾಳದ ಸಿಬ್ಬಂದಿಯಿಂದ ಭಕ್ತರ ಮೇಲೆ ಆಗುತ್ತಿರುವ ಶೋಷಣೆಯ ವಿರುದ್ಧವಾಗಿ ಮೃಣಾಲಿನಿ ಪಧಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ ಆದರ್ಶ ಗೋಯಲ್ ಮತ್ತು ನ್ಯಾ ಅಶೋಕ್ ಭೂಷಣ್ ಅವರಿದ್ದ ಪೀಠ ದೇವಸ್ಥಾನದ ಆಡಳಿತ ಮಂಡಳಿಗೆ ಹಲವು ನಿರ್ದೇಶನಗಳನ್ನು ನೀಡಿದೆ.
ಕರ್ನಾಟಕದ ಧರ್ಮಸ್ಥಳ ದೇವಸ್ಥಾನ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದ ವೈಷ್ಣವ ದೇವಿ, ಆಂಧ್ರಪ್ರದೇಶದ ತಿರುಪತಿ ದೇವಸ್ಥಾನದ ನಿರ್ವಹಣೆ ವ್ಯವಸ್ಥೆಯನ್ನು ಅಧ್ಯಯನ ನಡೆಸುವಂತೆ ಒಡಿಶಾ ಸರ್ಕಾರಕ್ಕೆ ಪೀಠ ನಿರ್ದೇಶನ ನೀಡಿದೆ.
ದೇವಸ್ಥಾನದ ಸುತ್ತಲಿನ ಪರಿಸರ ಹಾಳಾಗಿದ್ದು ದೇವಾಲಯಕ್ಕೆ ಸೇರಿದ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ. ಅಷ್ಟೇ ಅಲ್ಲದೇ ದೇವರ ಸೇವಾ ಕಾರ್ಯಗಳು ಸಂಪೂರ್ಣ ವಾಣಿಜ್ಯೀಕರಣಗೊಂಡಿದೆ ಎಂದು ಅರ್ಜಿಯಲ್ಲಿ ದೂರುದಾರರು ಉಲ್ಲೇಖಿಸಿದ್ದರು.
ಲಕ್ಷಾಂತರ ಭಕ್ತರು ಪ್ರತಿ ವರ್ಷ ದೇವಸ್ಥಾನಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿ ದಾನವನ್ನು ಅರ್ಪಣೆ ಮಾಡುತ್ತಾರೆ. ಹಾಗಾಗಿ ಭಕ್ತರ ಸೇವಾದರ್ಶನಕ್ಕೆ ಮುಕ್ತ ಅವಕಾಶ ಮಾಡಿಕೊಡುವುದು ಹಾಗೂ ದೇವಸ್ಥಾನದ ವಾತಾವರಣವನ್ನು ಸರಿಯಾಗಿ ಇಟ್ಟುಕೊಳ್ಳುವುದು ಆಡಳಿತ ಮಂಡಳಿಯ ಕರ್ತವ್ಯವಾಗಿದೆ ಎಂದು ಪೀಠ ತಿಳಿಸಿದೆ.
ದೇವಸ್ಥಾನದಲ್ಲಿ ಭಕ್ತರು ಎದುರಿಸುತ್ತಿರುವ ಸಮಸ್ಯೆಗಳು, ಶೋಷಣೆಗಳು ಹಾಗೂ ಆಡಳಿತ ಮಂಡಳಿಯಲ್ಲಿರುವ ನ್ಯೂನತೆಗಳನ್ನು ಜೂನ್ 30 ರೊಳಗೆ ಮಧ್ಯಂತರ ವರದಿ ಮಾಡುವಂತೆ ಪೂರಿ ಜಿಲ್ಲಾ ನ್ಯಾಯಾಧೀಶರಿಗೆ ಪೀಠ ಆದೇಶಿಸಿದೆ.
1954 ರ ಶ್ರೀ ಜಗನ್ನಾಥ ದೇವಸ್ಥಾನದ ಕಾಯ್ದೆ ಪ್ರಕಾರ ಭಕ್ತರು ನೇರವಾಗಿ ಸಿಬ್ಬಂದಿಗೆ ಹಣವನ್ನು ನೀಡಿ ಸೇವೆ ಮಾಡುವಂತಿಲ್ಲ. ಹಣ ಹಾಕುವುದಿದ್ದರೆ ಹುಂಡಿಯಲ್ಲಿ ಹಾಕಬೇಕು ಅಥವಾ ಸೇವಾ ಕೌಂಟರ್ ನಲ್ಲಿ ಹಣವನ್ನು ಪಾವತಿಸಿ ಸೇವೆ ಮಾಡಬೇಕು.
ದೇವಸ್ಥಾನದಲ್ಲಿ ನಡೆಯುತ್ತಿರುವ ಆಚರಣೆಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾರ್ಪಾಡು ಅವಶ್ಯಕತೆ ಇದ್ದಲ್ಲಿ ಸೂಚಿಸುವಂತೆ ಕೇಂದ್ರಕ್ಕೆ ಪೀಠ ತಿಳಿಸಿದೆ. ಹಿರಿಯ ನ್ಯಾಯವಾದಿ ಗೋಪಾಲ ಸುಬ್ರಮಣಿಯಮ್ ಅವರನ್ನು ಅಮಿಕಸ್ ಕ್ಯೂರಿಯಾಗಿ ಪೀಠ ನೇಮಿಸಿದೆ. ಎಲ್ಲಾ ವರದಿಗಳನ್ನು ನೋಡಿ ಅಭಿಪ್ರಾಯವನ್ನು ತಿಳಿಸುವಂತೆ ಸೂಚಿಸಿದೆ.
ಬೆಂಗಳೂರು: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಅಲೆಯನ್ಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದ್ದು, ಸದ್ಯ ವಿವಿ ಆಡಳಿತ ಮಂಡಳಿ ನಡುವಿನ ಕಿತ್ತಾಟ ಬೀದಿಗೆ ಬಂದಿದೆ.
ಬೆಂಗಳೂರು ಹೊರವಲಯ ಆನೇಕಲ್ ಪಟ್ಟಣದ ಅಲೆಯನ್ಸ್ ವಿವಿ ಕುಲಪತಿ ಮಧುಕರ್ ಅಂಗೂರ್ ಬೆಂಬಲಿಗರ ಮೇಲೆ ವಿವಿ ಆಡಳಿತ ಮಂಡಳಿ ಸದಸ್ಯರಾಗಿರುವ ಶೈಲಜಾ ಚಬ್ಬಿ ಪರ ಬೌನ್ಸರ್ ಗಳಿಂದ ಹಲ್ಲೆ ಮಾಡಲಾಗಿದೆ. ವಿವಿಯಲ್ಲಿನ ಪ್ರಮುಖ ಸಮಸ್ಯೆಗೆ ಕಾರಣ ಆಡಳಿತ ಸದಸ್ಯರು ಮತ್ತು ಶೈಲಜಾ ಚಬ್ಬಿ ಅವರ ಅಧಿಕಾರ ದಾಹ ಎಂದು ಆರೋಪಿಸಲಾಗಿದೆ. ಇಬ್ಬರ ನಡುವೆ ಕಳೆದ ಎರಡು ವರ್ಷಗಳಿಂದ ಕಿತ್ತಾಟ ನಡೆಯುತ್ತಿದ್ದು ವಿವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಸಂಕಷ್ಟಗಳು ಹೆಚ್ಚಾಗಿವೆ.
ಅಲೆಯನ್ಸ್ ವಿವಿ ಕುಲಪತಿಯಾಗಿ ಮಧುಕರ್ ಅಂಗೂರ್ ಜವಾಬ್ದಾರಿ ತೆಗೆದುಕೊಂಡ ಮೇಲೆ ವಿವಿ ವಾತಾವರಣ ಪ್ರಶಾಂತವಾಗಿತ್ತು. ಆದರೆ ಶುಕ್ರವಾರ ಮಧುಕರ್ ಸಹೋದರಿ ಶೈಲಜ ಚಬ್ಬಿ ಹಾಗೂ ಸುದೀರ್ ಅಂಗೂರ್ ಅಕ್ರಮವಾಗಿ ವಿವಿ ಅವರಣಕ್ಕೆ ಬೌನ್ಸರ್ ಗಳನ್ನು ಕಳುಹಿಸಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ, ವಿದ್ಯಾರ್ಥಿನಿಯರ ಜೊತೆ ಅಸಭ್ಯವಾಗಿ ವರ್ತಿಸಿದ್ದಾರೆ.
ಇಷ್ಟೆಲ್ಲಾ ಘಟನೆಗಳು ನಡೆಯುತ್ತಿದ್ದರೂ ಪೊಲೀಸರು ಕಂಡು ಕಾಣದಂತೆ ಸುಮ್ಮನಿರುವುದರಿಂದ ವಿದ್ಯಾರ್ಥಿಗಳು ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಇನ್ನು ವಿವಿ ಸಿಬ್ಬಂದಿಯ ಮೇಲೆ ಹಲ್ಲೆ ಮಾಡುತ್ತಿರುವ ಕುರಿತು ಸುದ್ದಿ ಮಾಡಲು ಹೋದ ಮಾಧ್ಯಮ ಪ್ರತಿನಿಧಿಗಳಿಗೂ ಬೆದರಿಕೆ ಹಾಕಿ ಚಿತ್ರೀಕರಣ ಮಾಡದಂತೆ ತಾಕೀತು ಮಾಡಿದ್ದಾರೆ.
ಕಾರವಾರ: ಮುಜರಾಯಿ ಆಡಳಿತಕ್ಕೆ ಒಳಪಟ್ಟ ದೇವಸ್ಥಾನಗಳಲ್ಲಿ ರಾಜ್ಯಸರ್ಕಾರ ವ್ಯವಸ್ಥಾಪನಾ ಸಮಿತಿ ರಚನೆ ಮಾಡಲು ಮುಂದಾಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ. ಉತ್ತರ ಕನ್ನಡ ಜಿಲ್ಲೆಯ ದೇವಸ್ಥಾನಗಳಿಗೆ ವ್ಯವಸ್ಥಾಪನಾ ಸಮಿತಿ ರಚನೆ ಪ್ರಕ್ರಿಯೆ ಚುರುಕು ಗೊಂಡಿದೆ. ಈ ಹಿನ್ನೆಲೆಯಲ್ಲಿ ಇದನ್ನು ವಿರೋಧಿಸಿ ಸ್ವರ್ಣವಲ್ಲಿ ಮಠದ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಬುಧವಾರ ಪ್ರತಿಭಟನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.
ವಿವಾದ ಏನು?
ಈ ಹಿಂದೆ ಮುಜರಾಯಿ ಇಲಾಖೆಯ ಕಾಯ್ದೆಯು ಕರ್ನಾಟಕದಲ್ಲಿ ಒಂದೊಂದು ಭಾಗಕ್ಕೆ ಅದರದೇ ಆದ ಕಾಯ್ದೆಯನ್ನು ಮಾಡಲಾಗಿತ್ತು. ಇದರಂತೆ ರಾಜ್ಯದಲ್ಲಿ ಮದ್ರಾಸ್, ಕೊಡಗು, ಮೈಸೂರು, ಹೈದರಾಬಾದ್, ಮುಂಬೈ ಕರ್ನಾಟಕ ದತ್ತಿ ನಿಯಮಗಳು ಜಾರಿಯಲ್ಲಿದ್ದು. ಒಂದೊಂದು ಭಾಗಕ್ಕೆ ಅದರದೇ ಆದ ಹಕ್ಕುಗಳು ಜಾರಿಯಲ್ಲಿದ್ದ ಕಾರಣ ಹಲವು ಆಡಳಿತಾತ್ಮಕ ಸಮಸ್ಯೆಗಳು ಎದುರಾಗಿತ್ತು. ಈ ತೊಂದರೆಯನ್ನು ನೀಗಿಸಲು ಏಕರೂಪ ಶಾಸನ ಜಾರಿಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತ್ತು. ಇದರಂತೆ 1997 ಮತ್ತು ನಿಯಮಗಳು 20002 ಎಂಬ ಏಕರೂಪ ಮುಜರಾಯಿ ಕಾಯ್ದೆಯನ್ನು 2003ರ ಮೇ 1 ರಂದು ಜಾರಿಗೆ ತಂದಿದೆ. ಆದರೇ ಇದನ್ನು ಪ್ರಶ್ನಿಸಿ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯಗಳ ಮಹಾ ಮಂಡಳಿ ಧಾರವಾಡ ಕೋರ್ಟ ನಲ್ಲಿ ದಾವೇ ಹೂಡಿ ಈ ಕಾಯ್ದೆ ರದ್ದಾಗುವಂತಾಯ್ತು. ಇನ್ನು ಅಂದಿನ ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳಾದ ರಾಮಜೋಯಿಸ್ ನೇತೃತ್ವದಲ್ಲಿ ಸಮಿತಿ ರಚಿಸಿ ಕಾಯ್ದೆಯನ್ನು ಜಾರಿಗೊಳಿಸಿತ್ತು.
ಇನ್ನು ಈ ಬಗ್ಗೆ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ ಕಾಯ್ದೆ ರದ್ದಾಗುವಂತೆ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯದ ಮಹಾಮಂಡಳಿಗಳು ಪ್ರಯತ್ನಿಸಿದ್ದವು, ಆದರೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಿ ತಡೆಯಾಜ್ಞೆ ಪಡೆದಿದೆ. ಅಲ್ಲದೇ ಕಾಯ್ದೆಯ ಕಾಲಂ 25, 29 ರ ಅಡಿಯಲ್ಲಿ ದೇವಸ್ಥಾನದ ಆಡಳಿತ ಸುಗಮವಾಗಿ ನಡೆಯಲು ಸಮಿತಿ ರಚನೆಗೆ ಅನುವು ಮಾಡಿಕೊಟ್ಟಿದೆ.
ಈ ಕಾಯ್ದೆಯನ್ನು ಸದುಪಯೋಗ ಪಡಿಸಿಕೊಂಡ ಅಂದಿನ ಬಿಜೆಪಿ ಸರ್ಕಾರ ಉಡುಪಿಯ ಕೃಷ್ಣ ದೇವಸ್ಥಾನ, ಗೋಕರ್ಣದ ಮಹಾಭಲೇಶ್ವರ ದೇವಸ್ಥಾನ ಮುಜರಾಯಿ ಇಲಾಖೆಯಿಂದ ಕೈ ತಪ್ಪುವಂತೆ ಮಾಡಿತ್ತು. ಪ್ರಸ್ತುತ ಸಿಎಂ ಸಿದ್ಧರಾಮಯ್ಯ ನವರ ಸರ್ಕಾರ ಇದೇ ನಿಟ್ಟಿನಲ್ಲಿ ಮುಂದುವರೆದಿದ್ದು ದೇವಸ್ಥಾನದ ಆಡಳಿತ ಸುಗಮವಾಗಿ ನಡೆಯಲು ಮೂರು ವರ್ಷ ಅಧಿಕಾರಾವಧಿಯ 9 ಜನರ ಸಮಿತಿ ರಚನೆಗೆ ಮುಂದಾಗಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.
ಸಮಿತಿ ಹೇಗೆ ರಚನೆಯಾಗುತ್ತೆ..?
ವ್ಯವಸ್ಥಾಪನಾ ಸಮಿತಿ ರಚನೆಯಲ್ಲಿ ಒಂದು ಎಸ್‍ಸಿ, ಎಸ್‍ಟಿ, ಪ್ರತಿನಿಧಿ, 1 ಮಹಿಳೆ, ದೇವಸ್ಥಾನದ ಅರ್ಚಕ ಸೇರಿದಂತೆ ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಅವಕಾಶ ಮಾಡಿಕೊಟ್ಟಿದೆ. ಈ ಸಮಿತಿಯನ್ನು ಜಿಲ್ಲಾಧಿಕಾರಿ, ಜಿಲ್ಲಾ ಧಾರ್ಮಿಕ ನ್ಯಾಯ ಸಮಿತಿಯ ಸದಸ್ಯರೊಳಗೊಂಡ ನಿರ್ದೇಶಿತ ಸದಸ್ಯರು ನೇರ ಸಂದರ್ಶನದಲ್ಲಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಿದ್ದಾರೆ. ಈ ಸಮಿತಿಯು ದೇವಸ್ಥಾನದ ಆಡಳಿತ, ಅಭಿವೃದ್ಧಿ, ಕೆಲಸಗಾರರ ನೇಮಕ ಮುಂತಾದ ಅಧಿಕಾರವನ್ನು ಹೊಂದಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 622 ಮುಜರಾಯಿ ದೇವಸ್ಥಾನಗಳಲ್ಲಿ 10 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ 113 ಸಿ ಮತ್ತು ಬಿ ಹಂತದ ಧಾರ್ಮಿಕ ಪರಿಷತ್ ಗೆ ಒಳಪಟ್ಟ ದೇವಸ್ಥಾನಗಳಿಗೆ 9 ಜನ ಸದಸ್ಯರಿರುವ ಸಮಿತಿಯನ್ನು ರಚಿಸುವ ಪ್ರಕ್ರಿಯೆಯಲ್ಲಿದೆ. ಇದರಲ್ಲಿ 30 ದೇವಸ್ಥಾನಗಳಿಗೆ ಸಮಿತಿ ಸದಸ್ಯತ್ವಕ್ಕಾಗಿ ಸಾರ್ವಜನಿಕರಿಂದ ಅರ್ಜಿ ಬಂದಿದ್ದು ಉಳಿದ 83 ದೇವಸ್ಥಾನಗಳಿಗೆ ಯಾರೊಬ್ಬರೂ ಅರ್ಜಿ ಸಲ್ಲಿಸಿಲ್ಲ. ಇನ್ನು ಬಿ ವರ್ಗದ 9 ದೇವಸ್ಥಾನಗಳಲ್ಲಿ 5 ದೇವಸ್ಥಾನಗಳಿಗೆ ಸಮಿತಿ ರಚಿಸಲಾಗಿದ್ದು ಉಳಿದ 4 ದೇವಸ್ಥಾನದ ಆಡಳಿತವರ್ಗ ಕೋರ್ಟ್ ಮೆಟ್ಟಿಲೇರಿದೆ.
ಪರ, ವಿರೋಧ ಯಾಕೆ..?
ದೇವಸ್ಥಾನಗಳಲ್ಲಿ ನಡೆಯುವ ಭ್ರಷ್ಟಾಚಾರ ತಡೆಯಲು ಈ ಸಮಿತಿ ರಚನೆಯಾಗಿದ್ದರೂ ಈ ಸಮಿತಿಯಲ್ಲಿ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಹಿಂದೂಗಳ ಧಾರ್ಮಿಕ ಹಕ್ಕಿಗೆ ತೊಂದರೆಯಾಗುತ್ತಿದ್ದು, ಸಮಿತಿ ರಚನೆಯಿಂದ ದೇವಸ್ಥಾನಕ್ಕೆ ಬರುವ ಹಣ ಕೂಡ ದುರುಪಯೋಗವಾಗಬಹುದು ಎಂಬುದು ಕೆಲವರ ವಾದವಾಗಿದೆ. ಜಿಲ್ಲೆಯ ಹಲವು ದೇವಸ್ಥಾನದಲ್ಲಿ ಈ ಹಿಂದೆ ವಂಶಪಾರಂಪರ್ಯವಾಗಿ ಆಡಳಿತ ಮಾಡುತ್ತಿದ್ದ ಕೆಲವರು ದೇವಸ್ಥಾನದ ಹಕ್ಕಿನ ಜಾಗವನ್ನೇ ಮಾರಿ ತಮ್ಮ ಸ್ವಂತಕ್ಕೆ ಬಳಸಿಕೊಂಡ ನಿದರ್ಶನಗಳಿದ್ದು ಇದನ್ನು ತಪ್ಪಿಸಲು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಇಂತಹ ಘಟನೆಗಳು ಜರುಗಿದ್ದರಿಂದಾಗಿ ತಕ್ಷಣದಲ್ಲಿ ಸಮಿತಿ ರಚಿಸಲು ಕ್ರಮ ಕೈಗೊಂಡಿದೆ. ಶೀಘ್ರದಲ್ಲಿ ಸಮಿತಿ ರಚಿಸುತ್ತಿರುವುದರಿಂದ ಜಿಲ್ಲಾ ಹಿಂದೂ ಧಾರ್ಮಿಕ ದೇವಾಲಯದ ಮಹಾ ಮಂಡಲಿ ಬುಧವಾರ ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಪ್ರತಿಭಟನಾ ಸಭೆ ನಡೆಸಿ ಮುಂದೆ ಕಾನೂನಿನ ಹೋರಾಟಕ್ಕೆ ಸಜ್ಜಾಗಿದೆ.
ವ್ಯವಸ್ಥಾಪನಾ ಸಮಿತಿ ರಚನೆಯಿಂದ ದೇವಾಲಯಗಳಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಾಗುವುದರ ಜೊತೆಗೆ ಹಿಂದು ಧಾರ್ಮಿಕ ಹಕ್ಕಿಗೆ ಚ್ಯುತಿ ಬರುತ್ತದೆ.
ಈಗಾಗಲೇ ಸುಪ್ರೀಂ ಕೋರ್ಟ ನಲ್ಲಿ ದಾವೆ ಇರುವುದರಿಂದ ಒಂದು ವೇಳೆ ಕೋರ್ಟ್ ಸರ್ಕಾರದ ಪರವಾಗಿ ಆದೇಶ ನೀಡಿದರೆ, ಗೋಕರ್ಣದ ಮಹಾಬಲೇಶ್ವರ ದೇವಸ್ಥಾನಗಳು ಮುಜರಾಯಿ ಕೈ ಸೇರುವುದರಲ್ಲಿ ಅನುಮಾನವಿಲ್ಲ ಎಂಬುದು ಧಾರ್ಮಿಕ ಮುಖಂಡರ ವಾದ. ಆದರೆ ಸರ್ಕಾರ ಭ್ರಷ್ಟಾಚಾರ ರಹಿತ ಉತ್ತಮ ಆಡಳಿತ ನೀಡಲು ಈ ಸಮಿತಿ ಅಗತ್ಯವಿದೆ ಎಂದು ಹೇಳಿದೆ.