Tag: Aditya Rao

  • ಮಂಗ್ಳೂರು ಏರ್‌ಪೋರ್ಟಿನಲ್ಲಿ ಇಟ್ಟಿದ್ದ ಬ್ಯಾಗ್‍ನಲ್ಲಿದ್ದಿದ್ದು ನಿಜವಾದ ಸ್ಫೋಟಕ!

    ಮಂಗ್ಳೂರು ಏರ್‌ಪೋರ್ಟಿನಲ್ಲಿ ಇಟ್ಟಿದ್ದ ಬ್ಯಾಗ್‍ನಲ್ಲಿದ್ದಿದ್ದು ನಿಜವಾದ ಸ್ಫೋಟಕ!

    – ಆದಿತ್ಯರಾವ್ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಕೆ

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರೋಪಿ ಆದಿತ್ಯರಾವ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

    ಮಂಗಳೂರಿನ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಆರೋಪಿ ಆದಿತ್ಯರಾವ್ ವಿರುದ್ಧ ಸ್ಥಳೀಯ ಪೋಲಿಸರ ವಿಶೇಷ ತನಿಖಾ ತಂಡ 700 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿದೆ. ಚಾರ್ಜ್‍ಶೀಟ್‍ನಲ್ಲಿ ಹಲವು ಪ್ರಮುಖ ಅಂಶಗಳನ್ನು ಉಲ್ಲೇಖ ಮಾಡಲಾಗಿದ್ದು, ಆರೋಪಿ ಇಟ್ಟಿದ್ದ ಬ್ಯಾಗ್ ನಲ್ಲಿ ಇದ್ದದ್ದು ನಿಜವಾದ ಸ್ಫೋಟಕವಾಗಿದೆ. ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಆದಿತ್ಯರಾವ್ ಬಾಂಬ್ ಇಟ್ಟಿದ್ದ ಎಂದು ತಿಳಿಸಲಾಗಿದೆ.

    ಅಲ್ಲದೆ ಅಮೋನಿಯಂ ನೈಟ್ರೇಟ್, ಸ್ಫೋಟದ ತೀವ್ರತೆ ಹೆಚ್ಚಿಸಲು ಕಬ್ಬಿಣದ ಮೊಳೆ ಅಳವಡಿಸಲಾಗಿತ್ತು. ಉದ್ದೇಶಪೂರ್ವಕವಾಗಿ ಒಂದು ವೈಯರ್ ಸಂಪರ್ಕಿಸದೆ ಆರೋಪಿ ಹಾಗೆಯೇ ಬಿಟ್ಟಿದ್ದ. ಇದು ನಿಜವಾದ ಸ್ಫೋಟಕ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಲ್ಲೂ ಸಾಬೀತಾಗಿದೆ. ಆರೋಪಿ ವಿರುದ್ಧ ಯು.ಎ.ಪಿ.ಎ ಅಡಿ ಪ್ರಕರಣ ದಾಖಲಿಸಿ ಈ ಆರೋಪ ಪಟ್ಟಿಯನ್ನು ಸಲ್ಲಿಸಲಾಗಿದೆ.

    ಏನಿದು ಪ್ರಕರಣ?:
    2020ರ ಜನವರಿ 20ರಂದು ಮಂಗಳೂರು ಏರ್ ಪೋರ್ಟ್‍ನಲ್ಲಿ ಬಾಂಬ್ ಪತ್ತೆಯಾಗಿದ್ದು, ಈ ವಿಚಾರ ದೇಶಾದ್ಯಂತ ಭಾರೀ ಸುದ್ದಿಯಾಗಿತ್ತು. ಈ ಬೆನ್ನಲ್ಲೆ ಎಲ್ಲಾ ವಿಮಾನ ನಿಲ್ಧಾನದಲ್ಲೂ ಹೈಅಲರ್ಟ್ ಘೋಷಣೆ ಮಾಡಲಾಗಿತ್ತು. ಈ ಬೆನ್ನಲ್ಲೇ ಆರೋಪಿ ಆದಿತ್ಯರಾವ್ ನಢರವಾಗಿ ಬೆಂಗಳೂರಿಗೆ ಬಂದು ಪೊಲೀಸ್ ಮಹಾನಿರ್ದೇಶಕಿ ನೀಲಮಣಿರಾಜು ಅವರ ಕಚೇರಿಗೆ ತೆರಳಿ ಶರಣಾಗಿದ್ದನು. ಅಲ್ಲದೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಾನೇ ಬಾಂಬ್ ಇಟ್ಟಿರುವುದಾಗಿ ಬಾಯ್ಬಿಟ್ಟಿದ್ದನು.

  • ಕೆಲಸ ಮಾಡಿದಲ್ಲೆಲ್ಲಾ ಪ್ರತಿನಿತ್ಯ ಜಿಮ್ ಮಾಡ್ತಿದ್ದ ಬಾಂಬರ್ ಆದಿತ್ಯ

    ಕೆಲಸ ಮಾಡಿದಲ್ಲೆಲ್ಲಾ ಪ್ರತಿನಿತ್ಯ ಜಿಮ್ ಮಾಡ್ತಿದ್ದ ಬಾಂಬರ್ ಆದಿತ್ಯ

    – ಜಿಮ್ ಪರಿಕರಗಳು, ಬಾರ್‌ನ ಡಿವಿಆರ್ ಪೊಲೀಸ್ ವಶಕ್ಕೆ

    ಉಡುಪಿ: ಮಂಗಳೂರು ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟಿದ್ದ ಬಾಂಬರ್, ಸೈಕೋ ಕ್ರಿಮಿನಲ್ ಆದಿತ್ಯ ಓರ್ವ ಜಿಮ್ಮರ್ ಆಗಿದ್ದನು. ಏರ್‌ಪೋರ್ಟ್‌ನಲ್ಲಿ ಬಾಂಬ್ ಇಡುವ ಹಿಂದಿನ ಎರಡು ದಿನ ಉಡುಪಿಯ ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲ್‍ನಲ್ಲಿ ಕೆಲಸ ಮಾಡಿದ್ದ ಈತ ಅಲ್ಲಿ ದುಬಾರಿ ಜಿಮ್ ಪರಿಕರಗಳನ್ನುಗಳನ್ನು ಬಿಟ್ಟು ಹೋಗಿದ್ದನು. ಅದನ್ನು ಸದ್ಯ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

    ಪುಶ್ ಅಪ್ ಮಷೀನ್ ಮತ್ತು ಡಂಬಲ್ಸ್ ಅನ್ನು ಕಾರ್ಕಳ ಪೊಲೀಸ್ ಠಾಣೆಗೆ ಹಸ್ತಾಂತರ ಮಾಡಲಾಗಿದೆ. ಕಿಂಗ್ಸ್ ಕೋರ್ಟ್ ಹೋಟೆಲ್ ಮಾಲೀಕ ಅಶೋಕ್ ಶೆಟ್ಟಿ ಕಾರ್ಕಳ ಪೊಲೀಸರಿಗೆ ಡಂಬಲ್ಸ್ ಹಸ್ತಾಂತರ ಮಾಡಿದ್ದಾರೆ. ಈ ನಡುವೆ ಆದಿತ್ಯ ರಾವ್‍ನ ಎರಡು ದಿನದ ಚಲನವಲನಗಳಿರುವ ದೃಶ್ಯಾವಳಿಗಳು ಹೋಟೆಲ್‍ನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಆದಿತ್ಯ ರಾವ್ ಪ್ರಕರಣದ ತನಿಖೆಯಲ್ಲಿ ಈ ವಿಡಿಯೋ ಮಹತ್ವವಾಗಿದ್ದು, ಸಿಸಿಟಿವಿಯ ಡಿವಿಆರ್‌ನ್ನು ಮಂಗಳೂರು ಎಸಿಪಿ ಬೆಳ್ಳಿಯಪ್ಪ ವಶಪಡಿಸಿಕೊಂಡಿದ್ದಾರೆ.

    ಕೆಲಸ ಮಾಡಿದಲ್ಲೆಲ್ಲಾ ಪ್ರತಿನಿತ್ಯ ಜಿಮ್:
    ಆದಿತ್ಯ ಬಂಧನಕ್ಕೊಳಗಾದರೂ ಆತನ ಅವತಾರಗಳು, ಕಥೆಗಳು ಒಂದೊಂದೇ ಹೊರ ಬರುತ್ತಿವೆ. ಅವನೊಬ್ಬ ಕಿಕ್ ಬಾಕ್ಸರ್, ಕರಾಟೆ ಪಟು ಆಗಿದ್ದು, ಆರೋಗ್ಯದ ಬಗ್ಗೆ ಸಿಕ್ಕಾಪಟ್ಟೆ ಗಮನ ಕೊಡುತ್ತಿದ್ದನು. ಬಾಂಬ್ ಇಡುವ ಕ್ರಿಮಿನಲ್ ಆದರೂ ತನ್ನ ಆರೋಗ್ಯ ಚೆನ್ನಾಗಿಯೇ ಕಾಪಾಡಿಕೊಂಡಿದ್ದನು.

    ಬ್ಯಾಗಿನೊಳಗೆ ಸದಾಕಾಲ ತನ್ನ ಜೊತೆಗೆ ಡಂಬಲ್ಸ್ ಕೊಂಡೊಯ್ಯುತ್ತಿದ್ದ ಆದಿತ್ಯ, ಮಂಗಳೂರಿನ ಏರ್‌ಪೋರ್ಟ್‌ನಲ್ಲಿ ಬಾಂಬ್ ಇಟ್ಟ ಹಿಂದಿನ ದಿನವೂ ದೈಹಿಕ ವ್ಯಾಯಾಮ ಮಾಡಿರುವುದು ಬೆಳಕಿಗೆ ಬಂದಿದೆ. ಬಾಂಬ್ ಹೊತ್ತ ಬ್ಯಾಗ್‍ನ ಜೊತೆಗೆ ಆದಿತ್ಯ ಡಂಬಲ್ಸ್ ಕೂಡಾ ಹೊತ್ತು ತಂದಿದ್ದನು. ಕಾರ್ಕಳದ ಕಿಂಗ್ಸ್ ಕೋರ್ಟ್ ಹೋಟೆಲಿನಲ್ಲಿ ಎರಡು ದಿನದ ಹಿಂದೆ ಅಂದರೆ ಜನವರಿ 18 ಈತ ಕೆಲಸಕ್ಕೆ ಸೇರಿದ್ದನು. ಕೆಲಸ ಮುಗಿದ ಬಳಿಕ ರಾತ್ರಿ ಅಲ್ಲೇ ತಂಗುತ್ತಿದ್ದ ಆದಿತ್ಯ ಬೆಳಗ್ಗೆ 4 ಗಂಟೆಗೆ ಎದ್ದು ಡಂಬಲ್ಸ್ ನಲ್ಲಿ ದೈಹಿಕ ಕಸರತ್ತು ನಡೆಸ್ತಿದ್ದನು ಎಂಬ ಮಾಹಿತಿ ಲಭ್ಯವಾಗಿದೆ.

    ಬಾಂಬ್ ಇಡಲು ಸೋಮವಾರ ಹೋಟೆಲ್ ಬಿಟ್ಟು ತೆರಳುವಾಗ ನೀಲಿ ಬಣ್ಣದ ಡಂಬಲ್ಸ್ ಗಳನ್ನು ಹೋಟೆಲ್‍ನಲ್ಲೇ ಬಿಟ್ಟು ಹೋಗಿದ್ದು, ಆ ಡಂಬಲ್ಸ್ ಮತ್ತು ಪುಶಪ್ ಸಾಧನ ಹೋಟೆಲ್ ಸಿಬ್ಬಂದಿಗಳ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಹೀಗಾಗಿ ಅದನ್ನು ಜೋಪಾನ ಮಾಡಿ ಇಡಲಾಗಿತ್ತು. ಈಗ ಆ ಎರಡೂ ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

  • ಮಿಣಿ ಮಿಣಿ ಪದ ಟ್ರೋಲ್, ಕನ್ನಡ- ಗ್ರಾಮೀಣ ಕರ್ನಾಟಕಕ್ಕೆ ಅಪಮಾನ: ಹೆಚ್‍ಡಿಕೆ

    ಮಿಣಿ ಮಿಣಿ ಪದ ಟ್ರೋಲ್, ಕನ್ನಡ- ಗ್ರಾಮೀಣ ಕರ್ನಾಟಕಕ್ಕೆ ಅಪಮಾನ: ಹೆಚ್‍ಡಿಕೆ

    -ಆದಿತ್ಯ ‘ರಾವ್’ ಉಗ್ರನ ಬೆನ್ನಿಗೆ ಬಿಜೆಪಿ ನಿಂತಿದೆ

    ಬೆಂಗಳೂರು: ಹೊಳೆಯುವ ಪದಾರ್ಥಕ್ಕೆ ಗ್ರಾಮೀಣ ಭಾಗದಲ್ಲಿ ಮಿಣಿ ಮಿಣಿ ಎಂಬ ಪದ ಬಳಕೆ ಮಾಡಲಾಗುತ್ತದೆ. ಆ ಪದವನ್ನು ಟ್ರೋಲ್ ಮಾಡುವ ಮೂಲಕ ಕನ್ನಡ ಮತ್ತು ಗ್ರಾಮೀಣ ಕರ್ನಾಟಕಕ್ಕೆ ಅಪಮಾನ ಮಾಡಿದಂತೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟ್ವಿಟ್ಟರ್ ನಲ್ಲಿ ಕಿಡಿಕಾರಿದ್ದಾರೆ.

    ದೇಶದಲ್ಲಿ ಇಂದು ನಡೆಯುತ್ತಿರುವುದು ಕುಟಿಲ ರಾಜಕಾರಣ. ಅದರ ಭಾಗವೇ ಕೊಂಕು, ಟ್ರೋಲ್ ಗಳು. ಒಬ್ಬ ನಾಯಕನ ವಿರುದ್ಧ ಎದುರು ನಿಂತು ಹೋರಾಡಲಾಗದ ಹೇಡಿಗಳು ಗೇಲಿ, ಅಪಹಾಸ್ಯದ ತಂತ್ರದ ಮೂಲಕ ನಾಯಕನ ಹನನಕ್ಕೆ ನಿಲ್ಲುತ್ತಾರೆ. ಮಿಣಿ ಮಿಣಿ ಎಂಬ ಶಬ್ಧ ಇಟ್ಟುಕೊಂಡು ಬಿಜೆಪಿ ಮಾಡುತ್ತಿರುವುದು ಅದೇ ಹೇಡಿಗಳ ಕೆಲಸ.

    ನಾನು ಹಿಂದೆಯೇ ಹೇಳಿದಂತೆ, ಪಾಕಿಸ್ತಾನ, ನಾಜಿ ಜೀನ್ ಹೊಂದಿರುವ ಬಿಜೆಪಿಗೆ ಕನ್ನಡದ ಮೂಲ ನಿವಾಸಿ ಸಮುದಾಯದ ನಾಯಕರನ್ನು ಕಂಡರೆ ಉರಿ. ಅದಕ್ಕೇ ಈ ಮಣ್ಣಿನ ಮೂಲ ನಿವಾಸಿ ಸಮುದಾಯದ ಪ್ರತಿನಿಧಿಯಾದ ನನ್ನನ್ನು ಹಣಿಯಲು ಪ್ರಯತ್ನಿಸುತ್ತಿದೆ. ಎದುರಲ್ಲಿ ನಿಂತು ಹೋರಾಡಲಾಗದೇ ಗೇಲಿ ಮೂಲಕ ಹಣಿಯಲು ನಿಂತಿದೆ ಬಿಜೆಪಿ. ಇದನ್ನೂ ಓದಿ: ಮಿಣಿ ಮಿಣಿ ಪೌಡರ್ ಹೇಳಿಕೆ ವೈರಲ್- ಹೆಚ್‍ಡಿಕೆ ಮೊದಲ ಪ್ರತಿಕ್ರಿಯೆ

    ನಾನು ಸುಳ್ಳಾಡಿಲ್ಲ, ನಿಂದನಾತ್ಮಕ ಪದ ಬಳಸಿಲ್ಲ. ಪತ್ರಿಕೆಯೊಂದರ ವರದಿ ಓದಿ ಸತ್ಯ ಮಾತಾಡಿದ್ದೇನೆ. ಆದಿತ್ಯ ‘ರಾವ್’ ಎಂಬ ಉಗ್ರನ ರಕ್ಷಣೆಗೆ ನಿಂತಿರುವ ಬಿಜೆಪಿ ನನ್ನ ಸತ್ಯದ ಮಾತನ್ನೇ ಗೇಲಿ ಮಾಡುತ್ತಿದೆ. ಬಿಜೆಪಿ ಸತ್ಯ, ಧರ್ಮಗಳ ವಿರೋಧಿ. ಗ್ರಾಮೀಣ ಕನ್ನಡದಲ್ಲಿ ಹೊಳೆಯುವ ಪದಾರ್ಥಕ್ಕೆ ಮಿಣಿಮಿಣಿ ಎನ್ನಲಾಗುತ್ತದೆ. ಅದು ಶುದ್ಧ ಕನ್ನಡ, ಗ್ರಾಮೀಣ ಪದ. ಅದನ್ನೇ ಅಪಮಾನಕ್ಕೆ ಬಳಸಿಕೊಳ್ಳಲಾಗುತ್ತಿದೆ ಎಂದರೆ ಅದು ಕನ್ನಡಕ್ಕೆ, ಗ್ರಾಮೀಣ ಕರ್ನಾಟಕಕ್ಕೆ ಮಾಡಿದ ಅಪಮಾನ. ಎಷ್ಟೇ ಆಗಲಿ ಬಿಜೆಪಿಗರ ಜೀನ್ ಪಾಕಿಸ್ತಾನದ್ದಲ್ಲವೇ. ಅದಕ್ಕೇ ಅವರಿಗೆ ಕನ್ನಡದ ಪದಗಳು ತಾತ್ಸಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  • ಏರ್ ಪೋರ್ಟಲ್ಲಿ ಬಾಂಬ್, ಲಾಕರ್‌ನಲ್ಲಿ ಸೈನೈಡ್ ಬಚ್ಚಿಟ್ಟ ಆದಿತ್ಯ ರಾವ್

    ಏರ್ ಪೋರ್ಟಲ್ಲಿ ಬಾಂಬ್, ಲಾಕರ್‌ನಲ್ಲಿ ಸೈನೈಡ್ ಬಚ್ಚಿಟ್ಟ ಆದಿತ್ಯ ರಾವ್

    ಉಡುಪಿ: ಬಾಂಬರ್ ಆದಿತ್ಯನ ತನಿಖಾ ಪುರಾಣದಲ್ಲಿ ಅಗೆದಷ್ಟು ವಿಷಯಗಳು ಸಿಗ್ತಾಯಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆದಿತ್ಯನ ವಿಚಾರಣೆ ಇಂದು ತವರು ಜಿಲ್ಲೆಗೆ ಶಿಫ್ಟ್ ಆಗಿದೆ. ಮಂಗಳೂರು ಏರ್ ಪೋರ್ಟಿನಲ್ಲಿ ಬಾಂಬ್ ಇಟ್ಟು ಸೀದಾ ಬಂದದ್ದು ವಡಭಾಂಡೇಶ್ವರದ ಬಲರಾಮ ದೇವರ ಸನ್ನಿಧಿಗೆ ಅಂತ ಆದಿತ್ಯ ಬಾಯಿ ಬಿಟ್ಟಿದ್ದಾನೆ. ಖತರ್ನಾಕ್ ಆದಿತ್ಯ ಪುರಾಣಕ್ಕೆ ಸೈನೈಡ್ ಈಗ ತಗ್ಲಾಕೊಂಡಿದೆ.

    ಮಂಗಳೂರು ಏರ್ಪೋರ್ಟಿಗೆ ಬಾಂಬ್ ಇಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿಯಲ್ಲಿ ಸೈಕೋ ಬಾಂಬರ್ ತನಿಖೆ ಶುರುವಾಗಿದೆ. ತನಿಖೆ ವೇಳೆ ಮಾಹಿತಿಗಳನ್ನು ಬಹಿರಂಗ ಮಾಡಿರುವ ಆದಿತ್ಯ, ಹಲವು ಬ್ಯಾಂಕಿನಲ್ಲಿ ಲಾಕರ್ ಗಳನ್ನು ಪಡೆದಿರುವ ಮಾಹಿತಿ ನೀಡಿದ್ದಾನೆ. ತನಿಖಾಧಿಕಾರಿ ಬೆಳ್ಳಿಯಪ್ಪ ಆರೋಪಿಯನ್ನು ಕಡಿಯಾಳಿಯ ಕರ್ಣಾಟಕ ಬ್ಯಾಂಕಿಗೆ ಕರೆತಂದಿದ್ದಾರೆ. ಲಾಕರ್ ನಲ್ಲಿ ಕೆಲ ವಸ್ತುಗಳನ್ನು ಇಟ್ಟ ಬಗ್ಗೆ ಆದಿತ್ಯ ಹೇಳಿದ್ದ. 4ನೇ ಶನಿವಾರ ಬ್ಯಾಂಕ್ ರಜೆ ಇದ್ದರೂ ಬಾಗಿಲು ತೆರೆಸಿ ತನಿಖೆ ಮಾಡಲಾಯ್ತು.

    ಲಾಕರ್ ತೆರೆದಾಗ ಬೆಚ್ಚಿಬಿದ್ದ ಪೊಲೀಸರು:
    ಸೈಕೋ ಬಾಂಬರ್ ಆದಿತ್ಯ ತನಿಖೆ ಮಾಡುತ್ತಾ ಲಾಕರ್ ನಲ್ಲಿ ಆದಿತ್ಯ ಇಟ್ಟದ್ದ ಬಾಕ್ಸ್ ಗಳನ್ನು ತೆರೆದು ನೋಡಿದಾಗ ಚಿನ್ನದ ಆಭರಣ ಇಡುವ ಬಾಕ್ಸ್ ಪತ್ತೆಯಾಗಿದೆ. ಬಾಕ್ಸ್ ಒಳಗೆ ಅನುಮಾನಾಸ್ಪದ ಪುಡಿ ಪತ್ತೆಯಾಗಿದೆ. ಎಫ್ ಎಸ್ ಎಲ್ ತಜ್ಞರಿಗೆ ಪೊಲೀಸರು ಅದನ್ನು ಒಪ್ಪಿಸಲಿದ್ದಾರೆ.

    ಮಂಗಳೂರಿನ ಚಿನ್ನದಂಗಡಿಯಿಂದ ಖರೀದಿಸಿದ್ನಂತೆ ಸೈನೈಡ್:
    ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬ್ಯಾಂಕ್ ಲಾಕರ್ ನಿಂದ ಅನುಮಾನಾಸ್ಪದ ವಸ್ತುಗಳು, ದಾಖಲೆಗಳು, ಸರ್ಟಿಫಿಕೇಟ್ ಗಳನ್ನು ವಶಕ್ಕೆ ಪಡೆದಿದೆ. ವಿಮಾನ ನಿಲ್ದಾಣದಲ್ಲಿ ಸ್ಫೋಟಿಸಲು ವರ್ಷದ ಹಿಂದೆಯಿಂದ ತಯಾರಿ ಮಾಡಿದ್ನಾ ಎಂಬ ಬಗ್ಗೆ ಸಂಶಯ ಶುರುವಾಗಿದೆ. ಯಾಕಂದರೆ ಆದಿತ್ಯ ಲಾಕರ್ ಓಪನ್ ಮಾಡಿ ವರ್ಷ ಒಂದೂವರೆ ಕಳೆದಿದೆ. ಇದನ್ನೂ ಓದಿ: ಮಂಗ್ಳೂರು ಬಾಂಬರ್ ಆದಿತ್ಯ ರಾವ್‌ನನ್ನು ಎನ್‍ಐಎ ವಶಕ್ಕೆ ಪಡೆಯುತ್ತಾ..?

    ಹುಸಿ ಬಾಂಬ್ ಕರೆ ಮಾಡಿದ್ದೇ ಉಡುಪಿಯ ಮಲ್ಪೆಯಿಂದ:
    ಆರೋಪಿ ಆದಿತ್ಯನನ್ನು ಉಡುಪಿಯಿಂದ ಮಲ್ಪೆಗೆ ಶಿಫ್ಟ್ ಮಾಡಲಾಯ್ತು. ಇಲ್ಲಿನ ವಡಭಾಂಡೇಶ್ವರ ದೇವಸ್ಥಾನದ ಬಳಿ ಮಹಜರಿಗೆ ಕರೆತರಲಾಯ್ತು. ಮಂಗಳೂರು ಏರ್ ಪೋರ್ಟ್ ಬಳಿ ಬಾಂಬ್ ಇಟ್ಟ ಆದಿತ್ಯ ಸೀದಾ ಮಲ್ಪೆಗೆ ಬಂದಿದ್ದಾನೆ. ಇಲ್ಲಿನ ಪೆಟ್ಟಿಗೆ ಅಂಗಡಿಯೊಂದರ ಬಳಿ ಕುಳಿತು ಇಂಡಿಗೋ ವಿಮಾನದಲ್ಲಿ ಮತ್ತೊಂದು ಬ್ಯಾಗ್ ಬಾಂಬ್ ಇಟ್ಟಿದ್ದೇನೆಂದು ಹೇಳಿ ಸಿಮ್ ಕಾರ್ಡ್ ಬಿಸಾಕಿ ಕಾಲ್ಕಿತ್ತಿದ್ದಾನೆ. ಇದನ್ನು ಮಹಜರು ವೇಳೆ ಆದಿತ್ಯನೇ ಒಪ್ಪಿಕೊಂಡಿದ್ದಾನೆ.

    ಏರ್ ಪೋರ್ಟ್ ಟರ್ಮಿನಲ್ ಮ್ಯಾನೇಜರ್‍ಗೆ ಆದಿತ್ಯ ಕರೆ ಮಾಡಿದ ನಂತರ ಕಾರ್ಕಳ ಮೂಲದ ಜಿಂ ಮಾಸ್ಟರ್ ಗೆ ಫೋನ್ ಮಾಡಿ ಕಾರ್ಕಳಕ್ಕೆ ಹೊರಟಿದ್ದಾನೆ. ಈ ಎಲ್ಲಾ ಫೋನ್ ಕರೆಗಳು ಮಲ್ಪೆ ಫೋನ್ ಟವರಲ್ಲಿ ದಾಖಲಾಗಿದೆ.

    ಆದಿತ್ಯ ರಾವ್ ಏರ್ ಪೋರ್ಟ್ ಬಾಂಬಿಗೆ ಫೈನಲ್ ಟಚ್ ಕೊಟ್ಟ ಕಾರ್ಕಳದ ಕಿಂಗ್ಸ್ ಬಾರಿನಲ್ಲಿ ಆದಿತ್ಯನ ಚಟುವಟಿಕೆಗಳ ಮಹಜರು ನಡೆಯಿತು. ಬಾರ್ ಮಾಲೀಕರು- ಸಿಬ್ಬಂದಿ ಜೊತೆ ಪೊಲೀಸರು ಮಾಹಿತಿ ಪಡೆದರು. ಏರ್ ಪೋರ್ಟ್ ಅಧಿಕಾರಿಗಳ ಕೋಪದಲ್ಲಿ ಬಾಂಬ್ ಫಿಕ್ಸ್ ಮಾಡಿದ ಆದಿತ್ಯ, ಮಾನಸಿಕವಾಗಿ ಕುಗ್ಗಿದ್ದಾಗ ಸೈನೈಡ್ ಜಗಿದು ಸಾಯಲು ರೆಡಿ ಮಾಡಿಕೊಂಡಿದ್ದ ಎಂಬೂದು ಗೊತ್ತಾಗುತ್ತಿದೆ. ಆದಿತ್ಯನ ಪುರಾಣದಲ್ಲಿ ಇನ್ನೆಷ್ಟು ಅಧ್ಯಾಯಗಳಿವೆ ಎಂಬೂದು ಸದ್ಯದ ಕುತೂಹಲ.

  • ಮಂಗ್ಳೂರು ಬಾಂಬರ್ ಆದಿತ್ಯ ರಾವ್‌ನನ್ನು ಎನ್‍ಐಎ ವಶಕ್ಕೆ ಪಡೆಯುತ್ತಾ..?

    ಮಂಗ್ಳೂರು ಬಾಂಬರ್ ಆದಿತ್ಯ ರಾವ್‌ನನ್ನು ಎನ್‍ಐಎ ವಶಕ್ಕೆ ಪಡೆಯುತ್ತಾ..?

    – ಕೇಂದ್ರಕ್ಕೆ ವರದಿ ಸಲ್ಲಿಸಿದ ತನಿಖಾ ತಂಡ
    – ಸ್ಥಳ ಮಹಜರು ವೇಳೆ ಸತ್ಯ ಬಾಯ್ಬಿಟ್ಟ ಆದಿತ್ಯ

    ಮಂಗಳೂರು: ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿತವಾಗಿರುವ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಬಗ್ಗೆ ಮಂಗಳೂರು ಪೊಲೀಸರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

    ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ ಆದಿತ್ಯ ರಾವ್ ಬಗ್ಗೆ ಕೇಂದ್ರಕ್ಕೆ ವರದಿ ರವಾನೆಯಾಗಿದೆ. ಪೊಲೀಸರ ಪ್ರಾಥಮಿಕ ವರದಿಯನ್ನು ಕೇಂದ್ರ ಗೃಹ ಇಲಾಖೆ ಪರಿಶೀಲಿಸಲಿದ್ದು, ಎನ್‍ಐಎ ತನಿಖೆ ಅಗತ್ಯವಿದೆಯೇ ಅನ್ನುವ ಬಗ್ಗೆ ನಿರ್ಧರಿಸಲಿದೆ.

    ಬಾಂಬರ್ ಆದಿತ್ಯನನ್ನು ಪೊಲೀಸರು ಮಂಗಳೂರು ವಿಮಾನ ನಿಲ್ದಾಣಕ್ಕೆ ಕೊಂಡೊಯ್ದು ಸ್ಥಳ ಮಹಜರು ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ಆರೋಪಿ ಆದಿತ್ಯನನ್ನು ವಿಚಾರಣೆ ನಡೆಸಿದ ಪೊಲೀಸರು, ಸಮಗ್ರ ವರದಿಯನ್ನು ರೆಡಿ ಮಾಡಿದ್ದರು. ಬಾಂಬ್ ತಯಾರಿಕೆ, ಅದಕ್ಕೆ ಬಳಸಿದ ವಸ್ತುಗಳು, ಏರ್ ಪೋರ್ಟ್ ಅಧಿಕಾರಿಗಳು ಟಾರ್ಗೆಟ್ ಆಗಿರುವುದು ಇತ್ಯಾದಿ ವಿಚಾರಗಳ ಬಗ್ಗೆ ಆರೋಪಿ ನೀಡಿದ್ದ ಮಾಹಿತಿಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಇಡೀ ಪ್ರಕರಣದ ಕುರಿತ ವರದಿಯನ್ನು ರಾಜ್ಯ ಸರ್ಕಾರಕ್ಕೆ ಅಧಿಕಾರಿಗಳು ಸಲ್ಲಿಕೆ ಮಾಡಿದ್ದಾರೆ. ಇದನ್ನೂ ಓದಿ: ಚೆನ್ನೈನಿಂದ ರಾಸಾಯನಿಕ ತರಿಸಿದ್ದ ಬಾಂಬರ್- ಸ್ಫೋಟಕ ವಿಚಾರ ಬಾಯ್ಬಿಟ್ಟ ಆದಿತ್ಯ

    ತನಿಖಾಧಿಕಾರಿ ಮಂಗಳೂರು ಉತ್ತರ ಎಸಿಪಿ ಕೆ.ಯು ಬೆಳ್ಳಿಯಪ್ಪ ರೆಡಿ ಮಾಡಿದ್ದ ವಿಚಾರಣಾ ವರದಿ ರಾಜ್ಯ ಗೃಹ ಇಲಾಖೆಗೆ ಸಲ್ಲಿಕೆಯಾಗಿದ್ದು ಅಲ್ಲಿಂದ ಕೇಂದ್ರ ಸರ್ಕಾರಕ್ಕೆ ರವಾನೆಯಾಗಿದೆ. ಆರೋಪಿ ನೀಡಿರುವ ಮಾಹಿತಿ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಇನ್ನಷ್ಟು ತನಿಖೆ ಅಗತ್ಯವಿದ್ದರೆ ವಿಚಾರಣೆಗೆ ಪ್ರತ್ಯೇಕ ತಂಡವನ್ನು ಕಳಿಸಿಕೊಡುವ ಸಾಧ್ಯತೆಯಿದೆ.

    ಅಗತ್ಯ ಕಂಡು ಬಂದಲ್ಲಿ ಭಯೋತ್ಪಾದಕ ಕೃತ್ಯಗಳ ಬಗ್ಗೆ ತನಿಖೆ ನಡೆಸುವ ರಾಷ್ಟ್ರೀಯ ತನಿಖಾ ದಳ ಆರೋಪಿಯನ್ನು ವಶಕ್ಕೆ ಪಡೆಯುವ ಸಾಧ್ಯತೆಯೂ ಇದೆ. ಹೀಗಾಗಿ ಮಂಗಳೂರು ಪೊಲೀಸರು ನೀಡಿರುವ ರಿಪೋರ್ಟ್ ಮಹತ್ವದ್ದಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತೆಗೆದುಕೊಳ್ಳುವ ನಿರ್ಣಯದ ಮೇಲೆ ಪ್ರಕರಣ ಯಾವ ರೀತಿಯ ತಿರುವು ಪಡೆಯುತ್ತೆ ಅನ್ನೋದು ನಿರ್ಧಾರವಾಗಲಿದೆ. ಇದನ್ನೂ ಓದಿ: ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು

    ಭಯೋತ್ಪಾದಕರಿಗೆ ಬಳಸುವಂತಹ ಕಠಿಣ ಕಾನೂನುಗಳನ್ನು ಪೊಲೀಸರು ದಾಖಲು ಮಾಡಿರುವ ಹಿನ್ನೆಲೆಯಲ್ಲಿ ಕೇಂದ್ರ ತಂಡಗಳು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಹೆಚ್ಚಿದೆ. ಇದೇ ವೇಳೆ ಆರೋಪಿಯನ್ನು ಮಂಗಳೂರು ವಿಮಾನ ನಿಲ್ದಾಣ ಸೇರಿದಂತೆ ವಿವಿಧ ಕಡೆಗಳಲ್ಲಿ ಕೊಂಡೊಯ್ದು ಪೊಲೀಸರು ಸ್ಥಳ ಮಹಜರು ನಡೆಸಿದ್ದಾರೆ. ಜೀವಂತ ಬಾಂಬ್ ಪತ್ತೆ ವಿಚಾರ ಇಡೀ ದೇಶದ ಗಮನ ಸೆಳೆದ ಪ್ರಕರಣವಾಗಿದ್ದು ಸಹಜವಾಗೇ ಆದಿತ್ಯ ರಾವ್ ಹೈಪ್ರೊಫೈಲ್ ಆರೋಪಿಯಾಗಿ ಬದಲಾಗಿದ್ದಾನೆ.

    ಆರೋಪಿ ಉತ್ತರದಿಂದ ಅಚ್ಚರಿಗೊಂಡ ಪೊಲೀಸರು:
    ಪೊಲೀಸರು ಸ್ಥಳ ಮಹಜರು ನಡೆಸಿದ ವೇಳೆ ತೀರಾ ಸಹಜವಾಗಿ ಆರೋಪಿ ಉತ್ತರ ನೀಡುತ್ತಿದ್ದುದು ಪೊಲೀಸರನ್ನೇ ಅಚ್ಚರಿಗೊಳಿಸಿತ್ತು. ಬಾಂಬ್ ಇದ್ದ ಬ್ಯಾಗ್ ಇಟ್ಟಿದ್ದ ಟಿಕೆಟ್ ಕೌಂಟರ್ ಬಳಿಯ ಕುರ್ಚಿಯನ್ನು ತೋರಿಸಿ ಹೇಳಿಕೆ ದಾಖಲಿಸಿಕೊಂಡಿದ್ದಾನೆ. ಪೊಲೀಸರ ಜೊತೆ ತುಳುವಿನಲ್ಲಿಯೇ ಸಂಭಾಷಣೆ ನಡೆಸುತ್ತಾ ಆಟೋ ಇಳಿದು ಎಸ್ಕಲೇಟರ್ ಮೂಲಕ ಮೇಲಿಂದ ಹತ್ತಿ ಬಂದಿದ್ದನ್ನು ತೋರಿಸಿದ್ದಾನೆ. ಮುಖಕ್ಕೆ ಮಾಸ್ಕ್ ಹಾಕಿದ್ದರೂ, ಯಾವುದನ್ನೂ ಆಲಕ್ಷಿಸದೆ ಪೊಲೀಸರ ಪ್ರಶ್ನೆಗಳಿಗೆ ಉತ್ತರ ನೀಡಿದ್ದನು. ಬಳಿಕ ಏರ್ ಪೋರ್ಟ್ ಬಳಿಯಿಂದ ಆಟೋ ಮೂಲಕ ಕೆಂಜಾರು ಬಸ್ ನಿಲ್ದಾಣಕ್ಕೆ ತೆರಳಿ ಅಲ್ಲಿನ ಸೆಲೂನ್ ಬಳಿಯಿದ್ದ ಬ್ಯಾಗ್ ತೆಗೆದುಕೊಂಡಿದ್ದನ್ನೂ ಉಲ್ಲೇಖಿಸಿದ್ದಾನೆ. ಇದನ್ನೂ ಓದಿ: ಕುಟುಂಬದಿಂದಲೇ ಹೊರ ಹಾಕಿದ್ದೇವೆ, 2 ವರ್ಷದಿಂದ ಸಂಪರ್ಕ ಇಲ್ಲ – ಅಕ್ಷತ್ ರಾವ್

    ಪೊಲೀಸರು ಈಗಾಗಲೇ ಆರೋಪಿಯನ್ನು ಹತ್ತು ದಿನಗಳ ಕಸ್ಟಡಿಗೆ ಪಡೆದಿದ್ದು ತನಿಖೆಯನ್ನು ಚೆನ್ನೈಗೆ ವಿಸ್ತರಿಸಲಿದ್ದಾರೆ. ಚೆನ್ನೈನಿಂದ ಬಾಂಬ್ ತಯಾರಿಕೆಗೆ ಬೇಕಾದ ಸಾಮಾಗ್ರಿಗಳನ್ನು ಖರೀದಿಸಿದ್ದು, ಆ ಬಗ್ಗೆ ಪೊಲೀಸರು ಅಲ್ಲಿಗೆ ಕೊಂಡೊಯ್ದು ವಿಚಾರಣೆ ನಡೆಸಲಿದ್ದಾರೆ. ಒಟ್ಟಿನಲ್ಲಿ ಆದಿತ್ಯ ರಾವ್ ಸಂಪೂರ್ಣ ಜಾತಕ ಈಗ ಪೊಲೀಸರ ಕೈಸೇರಿದ್ದು, ಇನ್ನು ಯಾವ ರೀತಿಯ ತನಿಖೆಗೆ ಒಳಪಡಲಿದ್ದಾನೆ ಅನ್ನೋದು ಕುತೂಹಲ ಅಷ್ಟೇ. ಇದನ್ನೂ ಓದಿ: ಮಂಗ್ಳೂರು ಸ್ಫೋಟ ಪ್ರಕರಣ- ಪಬ್ಲಿಕ್ ಟಿವಿಗೆ ಶಂಕಿತ ಉಗ್ರನ ವಿಡಿಯೋಗಳು ಲಭ್ಯ

  • ಬಾಂಬರ್ ಆದಿತ್ಯ ರಾವ್ ಚಿತ್ರದಲ್ಲಿ ನಾಯಕರಾಗಲಿದ್ದಾರೆ ಜೋಗಿ ಪ್ರೇಮ್

    ಬಾಂಬರ್ ಆದಿತ್ಯ ರಾವ್ ಚಿತ್ರದಲ್ಲಿ ನಾಯಕರಾಗಲಿದ್ದಾರೆ ಜೋಗಿ ಪ್ರೇಮ್

    ಬೆಂಗಳೂರು: ಮಂಗಳೂರು ಏರ್‌ಪೋರ್ಟ್‌ನಲ್ಲಿ ಪತ್ತೆಯಾಗಿದ್ದ ಬಾಂಬ್ ಪ್ರಕರಣ ಜನರ ಮನಸ್ಸಿನಲ್ಲಿ ಆತಂಕವನ್ನು ಸೃಷ್ಟಿ ಮಾಡಿತ್ತು. ಇದೀಗ ಪೊಲೀಸರು ಬಾಂಬರ್ ಆದಿತ್ಯ ರಾವ್‍ನನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಚಂದನವನದಲ್ಲಿ ಮಂಗಳೂರು ಬಾಂಬ್ ಪ್ರಕರಣವನ್ನು ತೆರೆ ಮೇಲೆ ತರಲು ಕೆಲಸಗಳು ಶುರುವಾಗಿವೆ.

    ಈಗಾಗಲೇ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ‘1st ರ‌್ಯಾಂಕ್ ಟೆರರಿಸ್ಟ್ ಆದಿತ್ಯ’ ಎಂಬ ಹೆಸರಲ್ಲಿ ಟೈಟಲ್ ರಿಜಿಸ್ಟರ್ ಆಗಿದೆ. ಇದೀಗ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ್ ಈ ಪ್ರಕರಣವನ್ನು ಸಿನಿಮಾ ಮಾಡುವುದಕ್ಕೆ ಮುಂದಾಗಿದ್ದಾರೆ. ವಿಶೇಷ ಎಂದರೆ ಈ ಚಿತ್ರದಲ್ಲಿ ನಿರ್ದೇಶಕ ಪ್ರೇಮ್ ನಾಯಕನಟರಾಗಿ ಕಾಣಿಸಿಕೊಳ್ಳಲಿದ್ದಾರೆ.

    ಚಂದ್ರಚೂಡ್ ಅವರು ಈ ಚಿತ್ರಕ್ಕೆ ‘I am ಕಲ್ಕಿ’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ. ಪ್ರೇಮ್ ಕೆಲ ವರ್ಷಗಳ ಹಿಂದೆ ಶಿವಣ್ಣ ಮತ್ತು ಸುದೀಪ್ ಕಾಂಬಿನೇಷನ್‍ನಲ್ಲಿ ‘ಕಲ್ಕಿ’ ಚಿತ್ರವನ್ನು ಶುರು ಮಾಡಿದ್ದರು. ಆದರೆ ಆ ಸಿನಿಮಾ ಸೆಟ್ಟೇರಿಲ್ಲ. ಇದೀಗ ಚಂದ್ರಚೂಡ್ ಮಂಗಳೂರು ಬಾಂಬ್ ಪ್ರಕರಣದ ಚಿತ್ರಕ್ಕೆ ಇದೇ ಹೆಸರನ್ನು ಇಟ್ಟಿದ್ದಾರೆ.

    ಈ ಬಗ್ಗೆ ಮಾತನಾಡಿದ ಚಂದ್ರಚೂಡ್, ನಾವು ಬಾಂಬ್ ವಿಚಾರವನ್ನೇ ಇಟ್ಟುಕೊಂಡು ಸಿನಿಮಾ ಮಾಡಲು ತಯಾರಿ ಮಾಡುತ್ತಿದ್ದೆವು. ಆದರೆ ಯಾವ ಕಥೆಯೂ ಕೂಡ ಫೈನಲ್ ಆಗಿರಲ್ಲಿ. ಇದೇ ವೇಳೆ ಆದಿತ್ಯ ರಾವ್ ಘಟನೆ ನಡೆಯಿತು. ಹೀಗಾಗಿ ಈ ಕಥೆಗೆ ಸೂಕ್ತವಾಗುತ್ತದೆ ಎಂದು ಮಂಗಳೂರು ಬಾಂಬ್ ಪ್ರಕರಣದ ದೃಶ್ಯ ಈ ಚಿತ್ರದಲ್ಲಿ ಇರಲಿದೆ. ಇದೊಂದು ಕ್ರೈಂ ಥ್ರಿಲ್ಲರ್ ಚಿತ್ರವಾಗಿದೆ ಎಂದು ತಿಳಿಸಿದ್ದಾರೆ.

    ಸುರೇಶ್ ಈ ಸಿನಿಮಾಗೆ ಬಂಡವಾಳ ಹೂಡುತ್ತಿದ್ದು, ಚಂದ್ರಚೂಡ್ ಅವರು ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನದದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಈ ಸಿನಿಮಾವನ್ನು ಕನ್ನಡ ಮತ್ತು ತಮಿಳು ಎರಡು ಭಾಷೆಗಳಲ್ಲಿ ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

    ಪ್ರೇಮ್ ಈ ಸಿನಿಮಾದಲ್ಲಿ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಸಿನಿಮಾದ ಕಥೆ ಕೇಳಿದ ತಕ್ಷಣ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಸದ್ಯಕ್ಕೆ ಪ್ರೇಮ್ ಅವರು ‘ಏಕ್ ಲವ್ ಯಾ’ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ಹೀಗಾಗಿ ಚಿತ್ರತಂಡ ಮುಖ್ಯವಾಗಿರುವ ಆದಿತ್ಯ ರಾವ್ ಪಾತ್ರವನ್ನು ಯಾರು ಮಾಡಬೇಕು ಅನ್ನೋದನ್ನು ಚರ್ಚಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎಂದು ತಿಳಿದು ಬಂದಿದೆ.

  • ಚೆನ್ನೈನಿಂದ ರಾಸಾಯನಿಕ ತರಿಸಿದ್ದ ಬಾಂಬರ್- ಸ್ಫೋಟಕ ವಿಚಾರ ಬಾಯ್ಬಿಟ್ಟ ಆದಿತ್ಯ

    ಚೆನ್ನೈನಿಂದ ರಾಸಾಯನಿಕ ತರಿಸಿದ್ದ ಬಾಂಬರ್- ಸ್ಫೋಟಕ ವಿಚಾರ ಬಾಯ್ಬಿಟ್ಟ ಆದಿತ್ಯ

    – ಕೋರ್ಟ್ ವಿಚಾರಣೆಯಲ್ಲಿ ತಲೆ ಬಗ್ಗಿಸಿ ನಿಂತಿದ್ದ ಬಾಂಬರ್
    – ಆದಿತ್ಯನನ್ನು ಕುತೂಹಲದಿಂದ ನೋಡಿದ ಜನ
    – ನ್ಯಾಯಾಧೀಶರ ಎದುರು ತಪ್ಪೊಪ್ಪಿಕೊಂಡ ಬಾಂಬರ್

    ಮಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್‍ನನ್ನು ಪೊಲೀಸರು ವಿಚಾರಣೆ ನಡೆಸಿ, ಕೋರ್ಟ್ ಗೆ ಹಾಜರು ಪಡಿಸಿದ್ದಾರೆ. ಈ ವೇಳೆ ಆರೋಪಿಯು ಅನೇಕ ಸ್ಫೋಟಕ ವಿಚಾರಗಳನ್ನು ಬಾಯ್ಬಿಟ್ಟಿದ್ದಾನೆ.

    ಮಂಗಳೂರು ಪೊಲೀಸ್ ಆಯುಕ್ತ ಡಾ.ಪಿ.ಎಸ್.ಹರ್ಷ ಅವರ ನೇತೃತ್ವದಲ್ಲಿ ಬಾಂಬರ್ ಆದಿತ್ಯರಾವ್‍ನನ್ನು ತಡರಾತ್ರಿ ತಡರಾತ್ರಿ 2 ಗಂಟೆಯವರೆಗೂ ಪೊಲೀಸರು ವಿಚಾರಣೆ ನಡೆಸಿದರು. ಈ ವೇಳೆ ಆರೋಪಿಯು ಸ್ಫೋಟಕ ರಹಸ್ಯ ಬಹಿರಂಗ ಪಡಿಸಿದ್ದಾನೆ. ಸರಿಯಾದ ಕೆಲಸವಿಲ್ಲದೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದೆ. ಆಗ ಯೂಟ್ಯೂಬ್‍ನಲ್ಲಿ ಉಗ್ರರ ವಿಡಿಯೋ ನೋಡಿ ಪ್ರಭಾವಿತನಾಗಿದ್ದೆ. ಬಳಿಕ ವಿಮಾನಯಾನ ಇಲಾಖೆ ವಿರುದ್ಧ ಪ್ರತೀಕಾರಕ್ಕಾಗಿಯೇ ವಿಧ್ವಂಸಕ ಕೃತ್ಯ ಎಸಗಿರುವುದಾಗಿ ಆದಿತ್ಯರಾವ್ ಹೇಳಿಕೊಂಡಿದ್ದಾನೆ.

    ಯೂಟ್ಯೂಬ್ ವಿಡಿಯೋ ನೋಡಿಕೊಂಡು ಬಾಂಬ್ ತಯಾರಿಕೆಗಾಗಿ ಎರಡು ತಿಂಗಳಿನಿಂದ ಪೂರ್ವಸಿದ್ಧತೆ ನಡೆಸಿದ್ದೆ. ಸಮಾಜದ ವ್ಯವಸ್ಥೆ ಬಗ್ಗೆ ನನಗೆ ಆಕ್ರೋಶವಿತ್ತು. ಹೀಗಾಗಿಯೇ ಬಾಂಬ್ ದಾಳಿ ನಡೆಸಿದೆ ಎಂದು ಆದಿತ್ಯರಾವ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.

    ಮತ್ತೊಂದು ಪ್ರಕರಣ ದಾಖಲು:
    ಮಂಗಳೂರಿನಿಂದ ಹೈದ್ರಾಬಾದ್‍ಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬಾಂಬ್ ಇರಿಸಿದ್ದೀನೆ ಎಂದು ಆದಿತ್ಯರಾವ್ ಹುಸಿ ಕರೆ ಮಾಡಿದ್ದ. ಈ ಸಂಬಂಧ ಏರ್‍ಪೋರ್ಟ್ ಸಿಬ್ಬಂದಿ ಅಬ್ದುಲ್ ಹಮೀದ್ ದೂರು ನೀಡಿದ್ದರು. ಈ ಆಧಾರದ ಮೇಲೆ ಆರೋಪಿ ಆದಿತ್ಯನ ವಿರುದ್ಧ ಬಚ್ಪೆ ಪೊಲೀಸ್ ಠಾಣೆಯಲ್ಲಿ ಮತ್ತೊಂದು ಎಫ್‍ಐಆರ್ ದಾಖಲಾಗಿದೆ.

    ಸ್ಪೆಷಲ್ ಸೆಲ್‍ನಲ್ಲಿ ಇರಿಸಿದ್ದ ಬಾಂಬರ್ ಆದಿತ್ಯಾರಾವ್‍ಗೆ ಭದ್ರತೆ ನೀಡಲು ಮುಲ್ಕಿ ಪಿಎಸ್‍ಐ ಶೀತಲ್ ಕುಮಾರ್, ಬಜ್ಪೆ ಪಿಎಸ್‍ಐ ಪುನೀತ್ ಕುಮಾರ್ ಹಾಗೂ 10 ಪೇದೆಗಳನ್ನು ನಿಯೋಜಿಸಲಾಗಿತ್ತು. ಠಾಣೆಯಲ್ಲಿದ್ದ ಆದಿತ್ಯ ಆಗಾಗ್ಗೆ ಎದ್ದು ಮತ್ತೆ ಮಲಗುತ್ತಿದ್ದ.

    ಬಾಂಬರ್ ಆದಿತ್ಯನನ್ನು ಇಂದು ಬೆಳಗ್ಗೆ ಹಾಗೂ ಮಧ್ಯಾಹ್ನ ಅಂತಿಮ ಹಂತದ ವಿಚಾರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ಮೂರು ಗಂಟೆಗೆ ಮಂಗಳೂರು 6ನೇ ಜೆಎಂಎಫ್‍ಸಿ ಕೋರ್ಟ್‍ಗೆ ಹಾಜರುಪಡಿಸಿದರು. ಈ ವೇಳೆ ನ್ಯಾಯಾಲಯದಲ್ಲಿ ಭಾರೀ ಭಧ್ರತೆ ಕಲ್ಪಿಸಲಾಗಿತ್ತು. ಆರೋಪಿಯನ್ನ ನೋಡಲು ಕುತೂಹಲದಿಂದ ನೂರಾರು ಜನರು ಕೋರ್ಟ್ ಆವರಣದಲ್ಲಿ ಜಮಾಯಿಸಿದರು. ವಿಶೇಷವೆಂದರೆ ಸಾರ್ವಜನಿಕರಿಗಿಂತ ಜಾಸ್ತಿ ವಕೀಲರು ಆರೋಪಿಯನ್ನು ನೋಡಲು ಸೇರಿದ್ದರು.

    ಜೆಎಮ್‍ಎಫ್‍ಸಿ 6 ಕೋರ್ಟ್ ನ್ಯಾಯಾಧೀಶ ಕಿಶೋರ್ ಕುಮಾರ್ ಕೆ.ಎನ್ ಅವರ ಮುಂದೆ ಆದಿತ್ಯರಾವ್‍ನನ್ನು ಪೊಲೀಸರು ಹಾಜರುಪಡಿಸಿದರು. ಈ ವೇಳೆ 15 ದಿನ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದರು.

    ಆದಿತ್ಯ ರಾವ್ ಕೋರ್ಟ್ ವಿಚಾರಣೆ ವೇಳೆ ಯಾವುದೇ ಭಾವನೆ ವ್ಯಕ್ತಪಡಿಸದೆ, ಕೈಕಟ್ಟಿ ತಲೆ ತಲೆ ಬಗ್ಗಿಸಿ ನಿಂತಿದ್ದ. ಆಗ ನ್ಯಾಯಾಧೀಶರು, ಪೊಲೀಸರು ನಿನಗೆ ಕಿರುಕುಳ ನೀಡಿದ್ದಾರಾ? ಕಸ್ಟಡಿಯಲ್ಲಿ ನಿನಗೆ ಹೊಡೆದಿದ್ದಾರಾ? ನಿನ್ನನ್ನು ಪೊಲೀಸರು ಅರೆಸ್ಟ್ ಮಾಡಿದ್ದು ಯಾವಾಗ ಎಂದು ಪ್ರಶ್ನಿಸಿದರು.

    ಬಳಿಕ 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಧೀಶರು, ಆರೋಗ್ಯ ಸರಿ ಇದೆಯಾ ಎಂದು ಆದಿತ್ಯ ರಾವ್‍ನನ್ನಿ ಕೇಳಿದರು. ಆಗ ಆರೋಪಿಯು ಸರಿ ಇದೆ ಸರ್ ಎಂದು ಉತ್ತರಿಸಿದ. ಆಗ ನ್ಯಾಯಾಧೀಶರು ಏನಾದರೂ ಹೇಳಲಿಕ್ಕೆ ಇದೆಯಾ ಎಂದು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಆರೋಪಿ ಏನು ಇಲ್ಲ ಸರ್. ನಾನು ಮಾಡಿದ್ದೆಲ್ಲಾ ತಪ್ಪು ಎಂದು ಒಪ್ಪಿಕೊಂಡ.

    ಸರ್ಕಾರದ ಪರ ಸರ್ಕಾರಿ ವಕೀಲ ನಾರಾಯಣ ಹರಿ ವಕಾಲತು ವಹಿಸಿದ್ದಾರೆ. ಹೀಗಾಗಿ ನಿನ್ನ ಪರ ಯಾರಾದರು ವಕಾಲತ್ತು ವಹಿಸ್ತಾರಾ ಎಂದು ನ್ಯಾಯಾಧೀಶರು ಆರೋಪಿಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಬಾಂಬರ್, ಇಲ್ಲ ಸರ್. ಯಾರೂ ಇಲ್ಲ ಎಂದು ತಿಳಿಸಿದ.

    ಬಾಂಬರ್ ಆದಿತ್ಯ ರಾವ್ ಚೆನ್ನೈಗೆ:
    ಆರೋಪಿ ಆದಿತ್ಯ ರಾವ್ ಚೆನ್ನೈನಿಂದ ಜಿಲೆಟಿನ್, ಡಿಟೋನೇಟರ್ ತರಿಸಿದ್ದ. ಹೀಗಾಗಿ ಆ ಜಾಲವನ್ನು ಪತ್ತೆ ಹಚ್ಚುವುದಕ್ಕಾಗಿ ಆರೋಪಿಯನ್ನು 15 ದಿನ ಕಸ್ಟಡಿಗೆ ಒಪ್ಪಿಸುವಂತೆ ಪೊಲೀಸರು ಕೋರ್ಟ್ ಗೆ ಮನವಿ ಮಾಡಿಕೊಂಡರು. ಆದರೆ ನ್ಯಾಯಾಧೀಶರು, 10 ದಿನದೊಳಗೆ ಮಾಹಿತಿ ಸಂಗ್ರಹಿಸಲು ಸೂಚನೆ ನೀಡಿದರು.

  • ರಾಜ್ಯಕ್ಕೆ ಅಯೋಗ್ಯ, ನಾಲಾಯಕ್ ಸಿಎಂ ಮಾಡಿದ್ವಾ ಅಂತ ಜನ ಮಾತನಾಡ್ತಿದ್ದಾರೆ: ಎಚ್‍ಡಿಕೆ ವಿರುದ್ಧ ಮುತಾಲಿಕ್ ಕಿಡಿ

    ರಾಜ್ಯಕ್ಕೆ ಅಯೋಗ್ಯ, ನಾಲಾಯಕ್ ಸಿಎಂ ಮಾಡಿದ್ವಾ ಅಂತ ಜನ ಮಾತನಾಡ್ತಿದ್ದಾರೆ: ಎಚ್‍ಡಿಕೆ ವಿರುದ್ಧ ಮುತಾಲಿಕ್ ಕಿಡಿ

    – ಉಗ್ರ ಯಾವುದೇ ಸಮುದಾಯಕ್ಕೆ ಸೇರಿದ್ದರೂ ಆತ ಉಗ್ರನೇ

    ಕೊಪ್ಪಳ: ಉಗ್ರ ಯಾವುದೇ ಸಮುದಾಯಕ್ಕೆ ಸೇರಿದ್ದರೂ ಅವನು ಉಗ್ರನೇ. ಅವನನ್ನು ಸಮರ್ಥಿಸಿಕೊಳ್ಳುವುದು, ರಕ್ಷಣೆಗೆ ಪರೋಕ್ಷವಾಗಿ ಬೆಂಬಲಿಸುವುದು, ರಾಜಕೀಯ ಮಾಡುವುದು ಹೇಯ ಕೃತ್ಯ. ಕರ್ನಾಟಕಕ್ಕೆ ನಾಲಾಯಕ್, ಅಯೋಗ್ಯನನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ವಾ ಎಂದು ಜನ ಮಾತನಾಡುತ್ತಿದ್ದಾರೆ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.

    ಗಂಗಾವತಿ ತಾಲೂಕಿನ ಅಂಜನಾದ್ರಿಗೆ ಆಗಮಿಸಿದ್ದ ಮುತಾಲಿಕ್ ಅವರು ಎಚ್‍ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದರು. ಈ ವಿಚಾರದಲ್ಲಿ ರಾಜಕೀಯ ಮಾಡ್ತಿರೋದು ಹೇಯ ಕೃತ್ಯ. ಅದು ಆದಿತ್ಯ ರಾವ್ ಇರಬಹುದು, ಅಬ್ದುಲ್ ಇರಬಹುದು. ಇದರಲ್ಲಿ ರಾಜಕಾರಣ ಮಾಡಬಾರದು. ಯಾರೇ ತಪ್ಪು ಮಾಡಿದರೂ ಅವರಿಗೆ ಕಾನೂನು ಶಿಕ್ಷೆಯಾಗುತ್ತೆ ಎಂದು ಹೇಳಿದರು. ಇದನ್ನೂ ಓದಿ: ಏರ್‌ಪೋರ್ಟ್‌ ಬಳಿ ಬಾಂಬ್ ಇಡಲು ಸಿಸಿಟಿವಿ ಆಫ್ ಮಾಡಿಸಿದ್ರಾ?: ಎಚ್‍ಡಿಕೆ

    ಪೊಲೀಸ್ ಇಲಾಖೆ ವಿರುದ್ಧ ಕುಮಾರಸ್ವಾಮಿ ಹೇಳಿಕೆಯನ್ನು ಖಂಡಿಸಿದ ಮುತಾಲಿಕ್, ಎಚ್‍ಡಿಕೆ ಮಾತನಾಡಿರೋದು ಬಹಳ ಅಸಹ್ಯವಾಗಿದೆ. ಕರ್ನಾಟಕಕ್ಕೆ ನಾಲಾಯಕ್, ಅಯೋಗ್ಯನನ್ನ ಮುಖ್ಯಮಂತ್ರಿಯನ್ನಾಗಿ ಮಾಡಿದ್ವಾ ಎಂದು ಜನ ಮಾತನಾಡುತ್ತಿದ್ದಾರೆ. ಈ ರೀತಿ ಹೇಳಿಕೆ ಕುಮಾರಸ್ವಾಮಿ ಅವರಿಗೆ ಶೋಭೆ ತರುವುದಿಲ್ಲ ಎಂದರು. ಇದನ್ನೂ ಓದಿ: ಆದಿತ್ಯ ಶರಣಾಗಿರೋದು ನಾಟಕ, ಬೆಂಗ್ಳೂರಿಗೆ ಬಂದಿದ್ದು ಹೇಗೆ – ಎಚ್‍ಡಿಕೆ ಪ್ರಶ್ನೆ

    ಹಿಂದಿನ ಸರ್ಕಾರಗಳು ಭಯೋತ್ಪಾದಕರನ್ನ ಪೋಷಣೆ ಮಾಡ್ತಿವೆ. ಆದರೆ ಬಿಜೆಪಿ ಸರ್ಕಾರ ಭಯೋತ್ಪಾದಕರನ್ನ ಒದ್ದು ಒಳಗೆ ಹಾಕ್ತಿದೆ. ಪ್ರಧಾನಿ ಮೋದಿ ಅವರ ಕೆಲಸಕ್ಕೆ ವಿರೋಧ ಮಾಡೋದು ವಿಪಕ್ಷಗಳ ನಿರ್ಲಕ್ಷ್ಯದ ಕೆಲಸ ಎಂದು ಮಾತಿನ ಚಾಟಿ ಬೀಸಿದರು.

    ಪೌರತ್ವ ಕಾಯ್ದೆ ವಿಚಾರದಲ್ಲಿ ಕಾಂಗ್ರೆಸ್ ನೀಚ ರಾಜಕಾರಣ ಮಾಡುತ್ತಿದೆ. ಹೋರಾಟಕ್ಕೆ ಮುಸ್ಲಿಂರನ್ನು ಎತ್ತಿ ಕಟ್ಟಿ ಕಾಂಗ್ರೆಸ್ ಕುಮ್ಮಕ್ಕು ಕೊಡುತ್ತಿದೆ. ಕಾಂಗ್ರೆಸ್ ರಾಜಕೀಯ ನೆಲೆಗಾಗಿ ಪೌರತ್ವ ವಿರೋಧಿಸ್ತಿದೆ ಎಂದು ಮುತಾಲಿಕ್ ಆರೋಪಿಸಿದರು.

  • ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು

    ಮಂಗಳೂರು ಬಾಂಬರ್ ಮೇಲೆ ಮತ್ತೊಂದು ಕೇಸ್ ದಾಖಲು

    ಮಂಗಳೂರು: ಬಜ್ಪೆ ವಿಮಾನ ನಿಲ್ದಾಣದಲ್ಲಿ ಬಾಂಬ್ ಇರಿಸಿದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿ ಆದಿತ್ಯ ರಾವ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ.

    ಬಜ್ಪೆ ವಿಮಾನ ನಿಲ್ದಾಣದ ಸಿಬ್ಬಂದಿ ಅಬ್ದುಲ್ ಹಮೀದ್ ನೀಡಿದ ದೂರಿನ ಹಿನ್ನೆಲೆಯಲ್ಲಿ ಆದಿತ್ಯ ರಾವ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.

    ಜ.20ರ ಮಧ್ಯಾಹ್ನ 2.30ಕ್ಕೆ ಆದಿತ್ಯರಾವ್ ಇಂಡಿಗೋ ಮ್ಯಾನೇಜರ್ ಅವರಿಗೆ, ಹೈದರಾಬಾದಿಗೆ ತೆರಳುತ್ತಿರುವ ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಬೆದರಿಕೆ ಕರೆ ಮಾಡಿದ್ದ. ಬೆದರಿಕೆ ಕರೆ ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು. ಇದನ್ನೂ ಓದಿ: ಬಾಂಬರ್ ಆದಿತ್ಯರಾವ್ ಮಾಸ್ಟರ್ ಪ್ಲಾನ್ ಕೇಳಿ ದಂಗಾದ ಬೆಂಗಳೂರು ಪೊಲೀಸರು

    ಮಧ್ಯಾಹ್ನ 2.15ಕ್ಕೆ ಹೈದರಾಬಾದ್‍ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದ ಇಂಡಿಗೋ ವಿಮಾನ ಮರಳಿ ಮಧ್ಯಾಹ್ನ 3 ಗಂಟೆಗೆ ಹೈದರಾಬಾದ್‍ಗೆ ತೆರಳಬೇಕಿತ್ತು. ಚೆಕ್ ಇನ್ ಆಗಿ ಎಲ್ಲ ಪ್ರಯಾಣಿಕರನ್ನು ವಿಮಾನದ ಒಳಗಡೆ ಕಳುಹಿಸಲಾಗಿತ್ತು.

    ವಿಮಾನ ಟೇಕಾಫ್ ಆಗಲು ಸಿದ್ಧತೆ ನಡೆಯುತ್ತಿದ್ದಾಗ ಇಂಡಿಗೋ ಕಚೇರಿಗೆ ದೂರವಾಣಿ ಕರೆ ಬಂದಿತ್ತು. ಹೈದರಾಬಾದ್‍ಗೆ ತೆರಳುವ ಇಂಡಿಗೋ ವಿಮಾನದಲ್ಲಿ ಬಾಂಬ್ ಇಡಲಾಗಿದೆ ಎಂದು ಆಗಂತುಕನೊಬ್ಬ ಕರೆ ಮಾಡಿ ಬೆದರಿಸಿದ್ದ.

    ಬೆದರಿಕೆ ಕರೆ ಬಂದ ಬಗ್ಗೆ ಸಿಬ್ಬಂದಿ ನಿಲ್ದಾಣದ ಭದ್ರತಾ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಕೂಡಲೇ ಜಾಗೃತರಾದ ನಿಲ್ದಾಣದ ಭದ್ರತಾ ಸಿಬ್ಬಂದಿ ಇಂಡಿಗೋ ವಿಮಾನ ಸಂಚಾರಕ್ಕೆ ತಡೆ ನೀಡಿ ಎಲ್ಲ ಪ್ರಯಾಣಿಕರನ್ನು ಮರಳಿ ಟರ್ಮಿನಲ್‍ಗೆ ಕರೆತಂದಿದ್ದರು.

    ವಿಮಾನದಲ್ಲಿದ್ದ ಪ್ರತಿಯೊಂದು ಬ್ಯಾಗ್‍ನ್ನು ಹೊರತೆಗೆದು ಕೂಲಂಕಷವಾಗಿ ತಪಾಸಣೆ ಮಾಡಲಾಯಿತು. ಸಂಜೆ 4 ಗಂಟೆಗೆ ಆರಂಭಗೊಂಡ ತಪಾಸಣೆ ರಾತ್ರಿ 7.30ರವರೆಗೂ ನಡೆದಿತ್ತು. ತಪಾಸಣೆ ಪೂರ್ಣಗೊಂಡ ಬಳಿಕ ಇದೊಂದು ಹುಸಿ ಕರೆ ಎಂಬ ತೀರ್ಮಾನಕ್ಕೆ ಭದ್ರತಾ ಸಿಬ್ಬಂದಿ ಬಂದ ನಂತರ ಇಂಡಿಗೋ ವಿಮಾನ ಹೈದರಾಬಾದಿಗೆ ಪ್ರಯಾಣ ಬೆಳೆಸಿತ್ತು.

  • ಆದಿತ್ಯ ರಾವ್ ಹುಸಿ ಬಾಂಬರ್, ಎಚ್‍ಡಿಕೆ ನಿಯಂತ್ರಣ ಕಳೆದುಕೊಂಡಿದ್ದಾರೆ: ಡಿಸಿಎಂ

    ಆದಿತ್ಯ ರಾವ್ ಹುಸಿ ಬಾಂಬರ್, ಎಚ್‍ಡಿಕೆ ನಿಯಂತ್ರಣ ಕಳೆದುಕೊಂಡಿದ್ದಾರೆ: ಡಿಸಿಎಂ

    ತುಮಕೂರು: ಮಂಗಳೂರು ಸೈಕೋ ಬಾಂಬರ್ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆತ ಹುಸಿ ಬಾಂಬ್ ಹವ್ಯಾಸಿ ಎಂಬುದು ಗೊತ್ತಾಗಿದೆ ಎಂದು ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ ಹೇಳಿಕೆ ನೀಡಿದ್ದಾರೆ.

    ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸವಾಲು, ಸಮಸ್ಯೆ, ಆತಂಕ ನಮಗೆ ಗೊತ್ತಿದೆ. ಸಾವು ನೋವು ಸಂಭವಿಸಿದ ನಂತರ ಕ್ರಮ ಕೈಗೊಳ್ಳುವುದಕ್ಕಿಂತ ಈಗಲೇ ಕ್ರಮ ತೆಗೆದುಕೊಳ್ಳುವುದು ಒಳ್ಳೆಯದು. ಆರೋಪಿಯನ್ನು ಬಂಧಿಸಿದರೂ ಇದು ಪೊಲೀಸರ ರಿಹರ್ಸಲ್ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡುವುದು ಸರಿಯಲ್ಲ. ಈ ರೀತಿಯ ಹೇಳಿಕೆಗಳು ಅವರ ಸ್ಥಾನಕ್ಕೆ ಗೌರವ ತರುವಂತಹದಲ್ಲ. ಅವರೂ ರಾಜ್ಯವನ್ನು ಆಳಿದವರು, ಇತ್ತಿಚೆಗೆ ನಿಯಂತ್ರಣ ಕಳಕೊಂಡು ಏನೇನೋ ಮಾತನಾಡುತಿದ್ದಾರೆ ಎಂದು ಲೇವಡಿ ಮಾಡಿದರು.

    ಯಾವುದೋ ಒಂದು ಧರ್ಮದ ಮೇಲೆ ಗೂಬೆ ಕೂರಿಸುವುದನ್ನು ಮೊದಲು ನಿಲ್ಲಿಸಲಿ, ದ್ವೇಷ, ಮತ್ಸರ, ವೈನಸ್ಸು ಬೆಳೆಯುತ್ತ ಹೋದರೆ ಸಮಾಜಕ್ಕೆ ಮಾರಕವಾಗುತ್ತದೆ. ವಿರೋಧ ಪಕ್ಷಗಳು ಸಮಾಜ ಒಡೆದು ಬೆಂಕಿ ಹತ್ತಿಸುವ ಕೆಲಸ ಮಾಡುತಿವೆ. ಇದನ್ನು ಬಿಟ್ಟು ಉತ್ತಮ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.

    ಸಿಎಎ ವಿರೋಧಿಸುವವರಿಗೆ ಮನುಷ್ಯತ್ವ ಇಲ್ಲ. ಮುಸ್ಲಿಮರನ್ನು ದೇಶದಿಂದ ಓಡಿಸುತ್ತಾರೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಇಂತಹ ಸುಳ್ಳನ್ನು ಹೇಳಲು ಅವರಿಗೆ ಹೇಗೆ ಮನಸ್ಸು ಬರುತ್ತದೋ ಗೊತ್ತಿಲ್ಲ. ಅವರಿಗೆ ಮನುಷ್ಯತ್ವ ಬೇಡವೇ ಎಂದು ಪ್ರಶ್ನಿಸಿದರು.

    ಮುಖ್ಯಮಂತ್ರಿಗಳು ವಿದೇಶದಿಂದ ಬಂದ ನಂತರ ಸಂಪುಟ ವಿಸ್ತರಣೆ ಆಗಲಿದೆ. ಡಿಸಿಎಂ ಹುದ್ದೆ ಕುರಿತು ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ. ಮುಖ್ಯಮಂತ್ರಿಗಳ ನಿರ್ಧಾರಕ್ಕೆ ನಾವು ಬದ್ಧ ಎಂದರು.