Tag: Aditi Singh

  • ಕಾಂಗ್ರೆಸ್ ನಾಯಕಿಯಿಂದ ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ದೇಣಿಗೆ!

    ಕಾಂಗ್ರೆಸ್ ನಾಯಕಿಯಿಂದ ರಾಮಮಂದಿರ ನಿರ್ಮಾಣಕ್ಕೆ 51 ಲಕ್ಷ ದೇಣಿಗೆ!

    ಲಕ್ನೋ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಜನ ದೇಣಿಗೆ ನೀಡುತ್ತಿದ್ದಾರೆ. ಅಂತೆಯೇ ಇದೀಗ ಕಾಂಗ್ರೆಸ್ ನಾಯಕಿಯೊಬ್ಬರು ಭಾರೀ ಮೊತ್ತದ ದೇಣಿಗೆ ನೀಡಿ ಸುದ್ದಿಯಾಗಿದ್ದಾರೆ.

    ಹೌದು. ಉತ್ತರ ಪ್ರದೇಶದ ರಾಯ್ ಬರೇಲಿ ಕಾಂಗ್ರೆಸ್ ಶಾಸಕಿ ಆದಿತಿ ಸಿಂಗ್ ಅವರು ರಾಮ ಮಂದಿರ ನಿರ್ಮಾಣಕ್ಕೆ 51 ಲಕ್ಷ ಹಣವನ್ನು ದೇಣಿಗೆಯಾಗಿ ನೀಡಿದ್ದಾರೆ. ಈ ಹಣವನ್ನು ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಜ್ ಅವರಿಗೆ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ದೇಣಿಗೆಯಾಗಿ ನೀಡುವುದಾಗಿ ಅವರು ತಿಳಿಸಿದ್ದಾರೆ.

    ಶಾಸಕಿ ಆದಿತಿ ಸಿಂಗ್ ಅವರು ಹಲವು ಸನ್ನಿವೇಶಗಳಲ್ಲಿ ಕಾಂಗ್ರೆಸ್ ವಿರುದ್ಧವೇ ಗುಡುಗಿದ್ದರು. ಈ ಹಿಂದೆ ಸೋನಿಯಾ ಗಾಂಧಿಯವರನ್ನೇ ಅದಿತಿ ಅವರು ತರಾಟೆಗೆ ತೆಗೆದುಕೊಂಡಿದ್ದರು. ರಾಯ್ ಬರೇಲಿಗೆಯಿಂದ ಈ ಹಿಂದೆ ಗೆದ್ದಿದ್ದ ಸೋನಿಯಾ ಗಾಂಧಿ ಐದು ವರ್ಷಗಳ ಅವಧಿಯಲ್ಲಿ ಕೇವಲ ಎರಡು ಬಾರಿ ಮಾತ್ರ ರಾಯಬರೇಲಿಗೆ ಆಗಮಿಸಿದ್ದರು ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.

    ಗೋರಕ್ಷ್ ಪೀಠದ ಪೀಠಾಧೀಶ್ವರಾಗಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ರಾಮ ದೇವಾಲಯ ನಿರ್ಮಾಣಕ್ಕಾಗಿ 1.01 ಕೋಟಿ ರೂ. ಚೆಕ್ ಅನ್ನು ಚಂಪತ್ ರಾಯ್ ಅವರಿಗೆ ಹಸ್ತಾಂತರಿಸಿದ್ದರು. ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೇಣಿಗೆ ಅಭಿಯಾನ ಆರಂಭಿಸಿದ ಬೆನ್ನಲ್ಲೇ ಕೋವಿಂದ್ ಅವರು 5 ಲಕ್ಷ ರೂ. ನೀಡುವುದಾಗಿ ಘೋಷಿಸಿದ್ದರು. ಅವರು ದೇಶದ ಮೊದಲ ಪ್ರಜೆ. ಹೀಗಾಗಿ ನಾವು ಈ ಅಭಿಯಾನವನ್ನು ಆರಂಭಿಸುವ ಮೊದಲು ಅವರ ಬಳಿಯೇ ತೆರಳಿದ್ದೆವು. ಈ ವೇಳೆ ಅವರು 5,01,000 ರೂ.ಗಳನ್ನು ನೀಡಿದ್ದಾರೆ ಎಂದು ವಿಎಚ್‍ಪಿಯ ಅಲೋಕ್ ಕುಮಾರ್ ತಿಳಿಸಿದ್ದರು. ಈ ಬೃಹತ್ ಅಭಿಯಾನ ಫೆಬ್ರವರಿ 27ರ ವರೆಗೆ ನಡೆಯಲಿದೆ.

  • ಕಾಂಗ್ರೆಸ್ ಶಾಸಕಿ ಜೊತೆ ರಾಹುಲ್ ಗಾಂಧಿ ಮದ್ವೆ ಫಿಕ್ಸ್!

    ಕಾಂಗ್ರೆಸ್ ಶಾಸಕಿ ಜೊತೆ ರಾಹುಲ್ ಗಾಂಧಿ ಮದ್ವೆ ಫಿಕ್ಸ್!

    ನವದೆಹಲಿ: 2018 ರ ಕರ್ನಾಟಕ ವಿಧಾನಸಭೆ ಚುನಾವಣೆಯ ದಿನಗಳಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಯ್ ಬರೇಲಿ ಶಾಸಕಿ ಅದಿತಿ ಸಿಂಗ್ ಜೊತೆ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಇದೇ ಮೇ ತಿಂಗಳಲ್ಲಿ ಮದುವೆಯ ದಿನಾಂಕವನ್ನು ಘೋಷಿಸಲಾಗಿದೆ ಎಂದು ಅದಿತಿ ಸಿಂಗ್ ಜೊತೆಗಿನ ರಾಹುಲ್ ಗಾಂಧಿಯ ಕೆಲವು ಫೋಟೋಗಳನ್ನು ಅಪ್ಲೋಡ್ ಮಾಡಲಾಗಿತ್ತು. ಆ ಫೋಟೋಗಳು ಸಖತ್ ವೈರಲ್ ಆಗಿದ್ದವು. ಮೊದಲು ರಾಯ್ ಬರೇಲಿನಲ್ಲಿರುವ ವಾಟ್ಸಪ್ ಗುಂಪುಗಳಲ್ಲಿ ಈ ರೀತಿಯ ಸುಳ್ಳು ವದಂತಿ ಹಬ್ಬಿದೆ ಎಂದು ಸುದ್ದಿ ಮೂಲಗಳಿಂದ ತಿಳಿದು ಬಂದಿದೆ.

    ಫೋಟೋಗಳು ವೈರಲ್ ಆದ ಬಳಿಕ ಅದಿತಿ ಅವರು ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿ, ಹರಿದಾಡುತ್ತಿರುವ ಮಾಹಿತಿಯೆಲ್ಲ ಸುಳ್ಳು ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಈ ಬಗ್ಗೆ ಸ್ಪಷ್ಟನೆಯನ್ನು ಕೂಡ ನೀಡಿದ್ದಾರೆ. “ರಾಹುಲ್ ತನ್ನ `ರಾಖಿ’ ಸಹೋದರ. ಇಂತಹ ವದಂತಿಗಳಿಂದ ನನಗೆ ಬೇಸರವಾಗಿದೆ. ರಾಹುಲ್ ಜಿಗೆ ನಾನು ರಾಖಿ ಕಟ್ಟಿದ್ದೇನೆ. ಆದ್ದರಿಂದ ಅವರು ನನಗೆ ಸಹೋದರನೆಂದು ನಾನು ಸ್ಪಷ್ಟಪಡಿಸುತ್ತೇನೆ. ಸಾಮಾಜಿಕ ಜಾಲತಾಣಗಳಲ್ಲಿ ಹಬ್ಬಿರುವ ಇಂತಹ ವದಂತಿಗಳಿಂದ ನಾನು ದುಃಖಿತಳಾಗಿದ್ದೇನೆ” ಎಂದು ಸಿಂಗ್ ಹೇಳಿದ್ದಾರೆ.

    ಶನಿವಾರ ಫೇಸ್ ಬುಕ್, ಟ್ವಿಟ್ಟರ್ ಮತ್ತು ವ್ಯಾಟ್ಸಪ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಅದಿತಿ ಸಿಂಗ್ ಅವರ ನಕಲಿ ಫೋಟೋವನ್ನು ಸೃಷ್ಟಿಸಿ ಅದನ್ನು ರಾಹುಲ್ ಗಾಂಧಿ ತಾಯಿ ಮತ್ತು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ನಿಂತಿರುವ ರೀತಿ ಎಡಿಟ್ ಮಾಡಲಾಗಿತ್ತು.

    ಅದಿತಿ ಸಿಂಗ್ ಯಾರು?: ಯುವ ರಾಯ್ ಬರೇಲಿ ಶಾಸಕಿ ಪ್ರಿಯಾಂಕಾ ಗಾಂಧಿಯವರ ಹತ್ತಿರದವರು ಎಂದು ಹೇಳಲಾಗಿದೆ. ಇವರು ಯುಎಸ್‍ಎ ಯ ಡ್ಯೂಕ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ಸ್ಟಡೀಸ್ ವ್ಯಾಸಂಗ ಮಾಡಿದ್ದಾರೆ. 29 ವರ್ಷದ ಅದಿತಿ ಅವರು ಅಖಿಲೇಶ್ ಸಿಂಗ್ ಅವರ ಮಗಳಾಗಿದ್ದಾರೆ. ಅಖಿಲೇಶ್ ಅವರು ರಾಯ್ ಬರೇಲಿಯಿಂದ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, 90,000 ಕ್ಕಿಂತ ಹೆಚ್ಚು ಮತಗಳ ಅಂತರದಿಂದ ತಮ್ಮ ಮೊದಲ ಚುನಾವಣೆಯಲ್ಲಿ ಜಯಗಳಿಸಿದ್ದರು.