Tag: Adichunchanagiri Swamiji

  • ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

    ಉರಿಗೌಡ- ನಂಜೇಗೌಡ ಚಿತ್ರ: ಚುಂಚಶ್ರೀ ಭೇಟಿಯಾಗಲಿರುವ ಮುನಿರತ್ನ

    ರಾಜ್ಯ ರಾಜಕೀಯದಲ್ಲಿ ವಿವಾದಿತ ಪಾತ್ರಗಳಾಗಿ ಚರ್ಚೆಯಲ್ಲಿರುವ ಉರಿಗೌಡ-ನಂಜೇಗೌಡ (Urigowda -Nanjegowda) ಅವರುಗಳನ್ನು ಆಧರಿಸಿದ ಸಿನಿಮಾ ಮಾಡಲು ನಿರ್ಮಾಪಕ, ಹಾಲಿ ಸಚಿವ ಮುನಿರತ್ನ (Munirathna) ಅವರು ಇದೀಗ ಸಿನಿಮಾದ ಮುಹೂರ್ತ ದಿನಾಂಕವನ್ನೂ ಘೋಷಿಸಿದ್ದರು. ಮೇ 18ರಂದು ಉರಿಗೌಡ-ನಂಜೇಗೌಡ ಸಿನಿಮಾ ಮುಹೂರ್ತ ಎಂದು ಅನೌನ್ಸ್ ಮಾಡಿದ್ದರು. ಈ ಬೆನ್ನಲ್ಲೇ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನ ಮುನಿರತ್ನ ಭೇಟಿಯಾಗಲಿದ್ದಾರೆ.

    ಚಿತ್ರಕ್ಕೆ `ಉರಿಗೌಡ-ನಂಜೇಗೌಡ (1750-1799 ಐತಿಹಾಸಿಕ ಘಟನೆಗಳನ್ನು ಆಧರಿಸಿದ ಸತ್ಯಕಥೆ) ಎಂಬ ಶೀರ್ಷಿಕೆಯನ್ನಿಡಲಾಗಿದೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಮುನಿರತ್ನ ಚಿತ್ರದ ಪೋಸ್ಟರ್ ಸಹ ಹಂಚಿಕೊಂಡಿದ್ದಾರೆ. ವೃಷಬಾದ್ರಿ ಪ್ರೊಡಕ್ಷನ್ ನಿರ್ಮಾಣದ ಐತಿಹಾಸಿಕ ಸತ್ಯ ಘಟನೆಗಳ ಆಧಾರಿತ ʻಉರಿಗೌಡ ನಂಜೇಗೌಡʼ ಚಿತ್ರದ ಮುಹೂರ್ತ ಮೇ 18ರಂದು ಕಂಠೀರವ ಸ್ಟುಡಿಯೋದಲ್ಲಿ ನಡೆಯಲಿದೆ. ಡಾ.ಸಿ.ಎನ್ ಅಶ್ವಥ್ ನಾರಾಯಣ್ ಅವರ ಚಿತ್ರಕಥೆ ಇರುವ ಈ ಚಿತ್ರವನ್ನು ಆರ್.ಎಸ್.ಗೌಡ ನಿರ್ದೇಶನ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

    ಉರಿಗೌಡ-ನಂಜೇಗೌಡ ಕುರಿತ ಸಿನಿಮಾ ವಿಚಾರಕ್ಕೆ ಸಂಬಂಧಿಸಿದಂತೆ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಮಾ.20ರಂದು ಮುನಿರತ್ನ ಅವರು ಭೇಟಿಯಾಗುತ್ತಿದ್ದಾರೆ. ಸಿನಿಮಾದ ಬಗ್ಗೆ ಮಹತ್ವದ ಚರ್ಚೆ ಮಾಡಲಿದ್ದಾರೆ. ಶ್ರೀಗಳ ಸಲಹೆ ಪಡೆದು ಮುಂದುವರೆಯಲು ನಿರ್ಧರಿಸಿದ್ದಾರೆ. ಇದನ್ನೂ ಓದಿ: ವಿವಾದದ ನಡುವೆಯೂ `ಉರಿಗೌಡ – ನಂಜೇಗೌಡ’ ಚಿತ್ರೀಕರಣಕ್ಕೆ ಮುಹೂರ್ತ ಫಿಕ್ಸ್!

    ಇನ್ನೂ ಈಗಾಗಲೇ ಅಶೋಕ್ -ಅಶ್ವಥ್ ನಾರಾಯಣ ಅವರು ಉರಿಗೌಡ-ನಂಜೇಗೌಡರ ಇತಿಹಾಸ ಬಗ್ಗೆ ಮಾತಾಡಿದ್ದಾರೆ. ನಾನು ಒಬ್ಬ ನಿರ್ಮಾಪಕನಾಗಿ ಅವರ ಚಿತ್ರ ಮಾಡೋಣ ಎಂದು ನಿರ್ಧರಿಸಿದ್ದೇನೆ. ಇದಕ್ಕೆ ಸಂಬಂಧಿಸಿದಂತೆ ಆದಿಚುಂಚನಗಿರಿ ಶ್ರೀಗಳು ಚರ್ಚೆ ಮಾಡಲು ನನ್ನನ್ನು ಕರೆಸಿದ್ದಾರೆ. ನಾಳೆ (ಮಾ.20) ಬೆಳಿಗ್ಗೆ ಶ್ರೀಗಳ ಭೇಟಿ ಮಾಡ್ತಿದೀನಿ. ಇತಿಹಾಸದ ಬಗ್ಗೆ ಮಾತಾಡೋರು ಅದಕ್ಕೆ ಜಾತಿ ಬಣ್ಣ ಕೊಡಬಾರದು. ಸಿನಿಮಾ ಈಗ ಚರ್ಚೆಯಲ್ಲಿದೆ. ಶ್ರೀಗಳನ್ನು ಭೇಟಿ ಮಾಡೋವರೆಗೂ ಚಿತ್ರದ ಬಗ್ಗೆ ಹೆಚ್ಚಾಗೇನೂ ಮಾತಾಡಲ್ಲ ಎಂದು ನಿರ್ಮಾಪಕ ಮುನಿರತ್ನ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

  • ನಾನು ಅನುಮಾನದ ನಡೆ ಅನುಸರಿಸಲು ಸಾಧ್ಯವೇ, ಖಂಡಿತ ಇಲ್ಲ – ಎಚ್‍ಡಿಕೆ

    ನಾನು ಅನುಮಾನದ ನಡೆ ಅನುಸರಿಸಲು ಸಾಧ್ಯವೇ, ಖಂಡಿತ ಇಲ್ಲ – ಎಚ್‍ಡಿಕೆ

    ಬೆಂಗಳೂರು: ನನ್ನ ಅವಧಿಯಲ್ಲಿ ಆದಿ ಚುಂಚನಗಿರಿ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ನಡೆದಿತ್ತು ಎಂಬ ರಾಜಕೀಯ ನಾಯಕರ ಹೇಳಿಕೆ ನನ್ನ ಹೃದಯದಲ್ಲಿ ಸಹಿಸಲಾಗದ ನೋವುಂಟು ಮಾಡಿದೆ ಎಂದು ಮಾಜಿ ಸಿಎಂ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

    ಈ ಸಂಬಂಧ ಸರಣಿ ಟ್ವೀಟ್ ಮಾಡಿ ತನ್ನ ಮೇಲೆ ಬಂದಿರುವ ಆರೋಪಗಳಿಗೆ ಕುಮಾರಸ್ವಾಮಿ ಉತ್ತರ ನೀಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ನನ್ನ ಅಧಿಕಾರವಧಿಯಲ್ಲಿ ಆದಿ ಚುಂಚನಗಿರಿ ಸ್ವಾಮೀಜಿಗಳ ಫೋನ್ ಟ್ಯಾಪಿಂಗ್ ನಡೆದಿತ್ತು ಎಂಬ ವರದಿಗಳು, ಅದಕ್ಕೆ ಸಂಬಂಧಿಸಿದಂತೆ ರಾಜಕೀಯ ನಾಯಕರ ಹೇಳಿಕೆಗಳು ನನ್ನ ಹೃದಯದಲ್ಲಿ ಸಹಿಸಲಾಗದ ನೋವುಂಟು ಮಾಡಿವೆ. ಎಲ್ಲಕ್ಕೂ ಮಿಗಿಲಾಗಿ ಸ್ವಾಮೀಜಿಗಳಲ್ಲಿ ಮೂಡಿರಬಹುದಾದ ಬೇಸರ ನನ್ನ ನೋವನ್ನು ಹೆಚ್ಚಿಸಿದೆ.

    ಈ ಪ್ರಕರಣದಲ್ಲಿ ಅನಗತ್ಯವಾಗಿ ನನ್ನ ಹೆಸರು ಪ್ರಸ್ತಾಪಿಸಲಾಗಿದೆ. ಸಂಭವಿಸದ ತಪ್ಪೊಂದಕ್ಕೆ ಅಶೋಕ್ ಅವರು ಎಲ್ಲರಿಗಿಂತಲೂ ಮುಂದೆ ಹೋಗಿ ಕ್ಷಮೆ ಕೇಳಿದ್ದಾರೆ. ಇದರಿಂದ ಅವರಿಗೇನು ಲಾಭವೋ ಗೊತ್ತಿಲ್ಲ. ಅವರ ಆತುರಕ್ಕೆ ಮರುಕವಿದೆ. ಅದೇ ಹೊತ್ತಲ್ಲೇ ಶ್ರೀಗಳಿಗಾಗುತ್ತಿರುವ ಬೇಸರಕ್ಕೆ ಅತೀವ ನೋವಿದೆ.

    ನಿರ್ಮಲಾನಂದರು ನನಗೆ ನೈತಿಕ ಬಲವಾಗಿದ್ದವರು, ತಮ್ಮ ಸಾಮಾಜಿಕ ಕಾರ್ಯಗಳ ನೆರಳಲ್ಲಿ ನನಗೆ ಮಾರ್ಗದರ್ಶನ ಮಾಡಿದವರು, ನನಗಾಗಿ ಕಾಲಭೈರವನಲ್ಲಿ ಪ್ರಾರ್ಥಿಸಿದವರು. ಅವರ ವಿಚಾರದಲ್ಲಿ ನಾನು ಅನುಮಾನದ ನಡೆ ಅನುಸರಿಸಲು ಸಾಧ್ಯವೇ? ಖಂಡಿತ ಇಲ್ಲ.

    ವಿಜಯೇಂದ್ರ ಕಿಡಿ:
    ಸ್ವಾರ್ಥ, ಅಧಿಕಾರಕ್ಕಾಗಿ ಎಷ್ಟು ಕೀಳುಮಟ್ಟಕ್ಕೆ ಇಳಿಯಬಹುದು ಎನ್ನುವುದರಲ್ಲಿ ಕುಮಾರಸ್ವಾಮಿಯವರಿಗೆ ಸರಿಸಾಟಿಯಿಲ್ಲ. ಇಡೀ ದೇಶವೇ ಗೌರವಿಸುವ ಶ್ರೀಗಳ ಫೋನ್ ಕದ್ದಾಲಿಸಿದ್ದು ಮಾತ್ರವಲ್ಲದೆ, ಸ್ಮಗ್ಲರ್ ಗಳ ಪಟ್ಟಿಯಲ್ಲಿ ಸೇರಿಸಿ, ಅಕ್ಷಮ್ಯ ಅಪರಾಧ ಎಸಗಿದ್ದಾರೆ. ಅವರಲ್ಲಿ ಸ್ವಲ್ಪವಾದರೂ ನೈತಿಕತೆ ಉಳಿದಿದ್ದರೆ ಮೊದಲು ಗುರುಗಳ ಕ್ಷಮೆ ಕೇಳಲಿ ಎಂದು ಸಿಎಂ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.