Tag: adichunchanagiri Sri

  • ಸ್ವಾಮೀಜಿ ಕಾರ್ಯಕ್ರಮಕ್ಕೆ ಹೆಚ್‍ಡಿಕೆ ಹೋಗಿ ಬರೋದ್ರೊಳಗೆ ಆಪರೇಷನ್ ಮುಗಿದು ಹೋಗಿತ್ತು: ಡಿಕೆಶಿ

    ಸ್ವಾಮೀಜಿ ಕಾರ್ಯಕ್ರಮಕ್ಕೆ ಹೆಚ್‍ಡಿಕೆ ಹೋಗಿ ಬರೋದ್ರೊಳಗೆ ಆಪರೇಷನ್ ಮುಗಿದು ಹೋಗಿತ್ತು: ಡಿಕೆಶಿ

    – ಆದಿಚುಂಚನಗಿರಿ ಶ್ರೀಗಳನ್ನು ರಾಜಕೀಯಕ್ಕೆ ಎಳೆದು ತರಲ್ಲ, ಅವರ ಬಗ್ಗೆ ಗೌರವವಿದೆ

    ಬೆಂಗಳೂರು: ಪಾಪ ಕುಮಾರಸ್ವಾಮಿಯವರು (H.D Kumaraswamy) ಸ್ವಾಮೀಜಿಯವರ (Adichunchanagiri Sri) ಕಾರ್ಯಕ್ರಮಕ್ಕೆ ಹೋಗಿದ್ದರು. ಅವರು ವಾಪಸ್ ಬರುವಷ್ಟರಲ್ಲಿ ಆಪರೇಷನ್ ಮುಗಿದು ಹೋಗಿತ್ತು ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (D.K Shivakumar) ವ್ಯಂಗ್ಯವಾಡಿದ್ದಾರೆ.

    ನಗರದಲ್ಲಿ (Bengaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ವಾಮೀಜಿಯವರಿಗೂ ಒಕ್ಕಲಿಗ ಒಬ್ಬ ಸಿಎಂ ಆಗಿದ್ದಾನೆ ಎಂದು ಅಭಿಮಾನ ಇತ್ತು. ನಮಗೂ ಅಭಿಮಾನ, ನಿಮಗೂ ಅಭಿಮಾನ ಅಲ್ವಾ? ಅದಕ್ಕೆ ಯಾರು ಸರ್ಕಾರ ತೆಗೆದರೋ ಅವರನ್ನೇ ಜೊತೆಗೆ ಹಾಕಿಕೊಂಡು ಓಡಾಡಿದ್ರೆ ಹೇಗೆ ಎಂದು ಹೆಚ್‍ಡಿಕೆಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಲೋಕಸಭಾ ಚುನಾವಣೆ 2024- ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ನಾಳೆ ನಾಮಪತ್ರ ಸಲ್ಲಿಕೆ

    ಚೆಲುವರಾಯಸ್ವಾಮಿ ಹಾಗೂ ಕೃಷ್ಣ ಭೈರೇಗೌಡರು ಸಹ ಸ್ವಾಮೀಜಿ ಬಳಿ ಹೋಗಿ ಆಶೀರ್ವಾದ ಪಡೆದುಕೊಂಡರು. ಹಿರಿಯರ ಆಶೀರ್ವಾದ ಬೇಕಲ್ಲ, ಅದರಲ್ಲಿ ತಪ್ಪೇನಿಲ್ಲ. ಕುಮಾರಸ್ವಾಮಿ ಆಶೀರ್ವಾದ ಕೇಳಿದ್ರಲ್ಲಿ ತಪ್ಪಿಲ್ಲ. ಮಂಜುನಾಥ್ ಆಶೀರ್ವಾದ ಕೇಳಿದರೂ ತಪ್ಪು ಎಂದು ನಾನು ಹೇಳಲ್ಲ. ಬೆನ್ನಿಗೆ ಚೂರಿ ಹಾಕಿದ್ರಲ್ಲ ಅವರನ್ನು ಕರೆದುಕೊಂಡು ಹೋದ್ರೆ, ಯಾರು ಸರ್ಕಾರ ತೆಗೆದ್ರಲ್ಲ ಅವರನ್ನೆಲ್ಲ ಕರೆದುಕೊಂಡು ಹೋದ್ರೆ, ಸಮಾಜಕ್ಕೆ ಏನೆಂದು ಉತ್ತರ ಕೊಡ್ತಾರೆ ಎಂದು ಕುಟುಕಿದ್ದಾರೆ.

    ಎಸ್.ಟಿ ಸೋಮಶೇಖರ್ ಸ್ಥಳೀಯ ವಿಚಾರಗಳ ಮೇಲೆ ನಿಂತಿದ್ದಾರೆ. ಅವರನ್ನು ನಾನು ಇದುವರೆಗೆ ಕಾಂಗ್ರೆಸ್‍ಗೆ ಸೇರಿಸಿಕೊಂಡಿಲ್ಲ. ಯಾರು ಸರ್ಕಾರ ಬೀಳಿಸುವಾಗ ಕಾಂಗ್ರೆಸ್‍ನಿಂದ ಶಾಸಕರನ್ನು ಕಳಿಸಿದ್ದು ಎಂದು ಅಶ್ವತ್ಥ ನಾರಾಯಣ ಅವರೇ ಹೇಳಲಿ. ಇಲ್ಲಿ ನಾನು ಸ್ವಾಮೀಜಿಗಳನ್ನು ಎಳೆದು ತರುತ್ತಿಲ್ಲ. ಆದಿಚುಂಚನಗಿರಿ ಶ್ರೀಗಳ ಬಗ್ಗೆ ನನಗೆ ಗೌರವವಿದೆ. ನಾನು ಸ್ವಾಮೀಜಿಗಳನ್ನು ರಾಜಕೀಯಕ್ಕೆ ಎಳೆದು ತರುತ್ತಿಲ್ಲ. ಅವರು ಉತ್ತರ ಕೊಡಲಿ ಎಂದು ಕೇಳುತ್ತಿಲ್ಲ. ಒಕ್ಕಲಿಗರ ಸರ್ಕಾರ ಎಂದು ಅಭಿಮಾನ ಇದ್ದೇ ಇರುತ್ತದೆ. ಅವರವರ ಜಾತಿ ಅವರವರ ಧರ್ಮ ಯಾರನ್ನೂ ಬಿಡುವುದಿಲ್ಲ ಎಂದಿದ್ದಾರೆ.

    ಹುಟ್ಟುವಾಗ ಜಾತಿ ಇರದೇ ಇರಬಹುದು, ಸಾಯುವಾಗ ಜಾತಿ ಬಂದೇ ಬರುತ್ತದೆ. ನಾವ್ಯಾರೂ ಜಾತಿ ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ನಮ್ಮ ಅಪ್ಪ-ಅಮ್ಮ, ಧರ್ಮ ಜಾತಿ ಬಂದೇ ಬರುತ್ತದೆ. ನಾಮಕರಣ ಮಾಡುವುದೂ ಒಂದು ಧರ್ಮವೇ, ಕಿವಿ ಚುಚ್ಚುವುದೂ ಒಂದು ಧರ್ಮವೇ, ಮೂಗು ಚುಚ್ಚುವುದೂ ಒಂದು ಧರ್ಮವೇ. ಒಕ್ಕಲಿಗರು ಯಾರೂ ದಡ್ಡರಲ್ಲ, ಯಾವ ಜಾತಿಯವರೂ ದಡ್ಡರಲ್ಲ. ವೀರಶೈವ ಇರಬಹುದು, ಎಸ್.ಸಿ, ಎಸ್.ಟಿ ಇರಬಹುದು ಯಾವುದೇ ಜಾತಿಯವರೂ ದಡ್ಡರಲ್ಲ. ಅವರವರ ಲಾಭ ಏನೂ ಎಂದು ನೋಡ್ತಾರೆ. ದೇಶಕ್ಕೆ ರಾಜ್ಯಕ್ಕೆ ನನಗೆ ಏನು ಒಳ್ಳೆಯದಾಗುತ್ತದೆ ಎಂದು ನೋಡ್ತಾರೆ. ಭಾವನೆ ನೋಡುವುದಿಲ್ಲ, ಬದುಕು ಕಟ್ಟಿಕೊಳ್ಳುವವರು ಕಾಂಗ್ರೆಸ್ ಬೆಂಬಲಿಸುತ್ತಾರೆ ಎಂದು ಅವರು ಹೇಳಿದ್ದಾರೆ.

    ರಾಹುಲ್ ಗಾಂಧಿ ಹೆಸರಲ್ಲಿ ಕಾಂಗ್ರೆಸ್‍ನವರು ಮತ ಕೇಳ್ತಿಲ್ಲ ಎಂಬ ಬಿಎಸ್‍ವೈ ಹೇಳಿಕೆ ವಿಚಾರಕ್ಕೆ, ಮೋದಿನೇ ಅವರ ಹೆಸರಲ್ಲಿ ಮತ ಕೇಳಿಲ್ಲ, ಶಿವಮೊಗ್ಗಕ್ಕೆ ಬಂದಾಗ ರಾಘವೇಂದ್ರ ಯಡಿಯೂರಪ್ಪ ಹೆಸರಲ್ಲಿ ಮತ ಕೇಳಿದ್ದು, ಅಲ್ಲಿನ ಎಂಪಿ ಮೋದಿ ಹೆಸರಲ್ಲಿ ಮತ ಕೇಳ್ತಿದ್ದಾರೆ. ಮೋದಿ ಅಲೆ ಹೊರಟೋಗಿದೆ. ಗಾಳಿ ಎಲ್ಲಾದ್ರು ಇದೆಯಾ ನೋಡಿ. ಜೆಡಿಎಸ್ ಪಕ್ಷವನ್ನು ಬಿಜೆಪಿಯವರು ಮುಗಿಸ್ತಿದ್ದಾರೆ. ಜೆಡಿಎಸ್ ಈಗ ಎಲ್ಲಿದೆ? ಜೆಡಿಎಸ್‍ಗೆ ಮುಕ್ತಿ ಕೊಟ್ಟಿದ್ದಾರೆ. ಪಕ್ಷ ವಿಸರ್ಜನೆ ಮಾಡುವ ಹಂತದಲ್ಲಿದ್ದಾರೆ. ಆ ಪಕ್ಷ ಇರಬೇಕು ಎಂಬುದ ನನ್ನ ಅಭಿಪ್ರಾಯ ಎಂದಿದ್ದಾರೆ. ಇದನ್ನೂ ಓದಿ: 6 ವರ್ಷಗಳ ಹಿಂದೆಯೇ ಎಫ್‌ಸಿ ಮುಗಿದಿದ್ದ ಶಾಲಾ ಬಸ್‌ ಪಲ್ಟಿ – 6 ಮಕ್ಕಳ ದಾರುಣ ಸಾವು!

  • ಪುನೀತ್ ರಾಜ್ ಕುಮಾರ್ ಕುಟುಂಬಕ್ಕೆ ಆದಿಚುಂಚನಗಿರಿ ಶ್ರೀಗಳಿಂದ ಸಾಂತ್ವನ

    ಪುನೀತ್ ರಾಜ್ ಕುಮಾರ್ ಕುಟುಂಬಕ್ಕೆ ಆದಿಚುಂಚನಗಿರಿ ಶ್ರೀಗಳಿಂದ ಸಾಂತ್ವನ

    – ಮಠಕ್ಕೆ ಬಂದು ಪೂಜೆ ಮಾಡುವಂತೆ ಹೇಳಿದ ಶ್ರೀಗಳು
    – ಶ್ರೀಗಳಿಗೆ ಸುಧಾಕರ್ ಸಾಥ್

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ದಿ. ಪುನೀತ್ ರಾಜ್ ಕುಮಾರ್ ಅವರ ಕುಟುಂಬವನ್ನು ಭೇಟಿಯಾಗಿ ಆದಿಚುಂಚನಗಿರಿ ಶ್ರೀಗಳು ಸಾಂತ್ವನ ಹೇಳಿದ್ದಾರೆ.

    ಇಂದು ಪುನೀತ್ ರಾಜ್‍ಕುಮಾರ್ ನಿವಾಸಕ್ಕೆ ಆಗಮಿಸಿದ ಆದಿಚುಂಚನಗಿರಿ ಶ್ರೀಗಳು ಅಪ್ಪು ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬಿದರು. ಬಳಿಕ ಮಾತನಾಡಿದ ಅವರು, ಕನ್ನಡ ಕಲಾ ಕ್ಷೇತ್ರಕ್ಕೆ ಪುನೀತ್ ರಾಜ್‍ಕುಮಾರ್ ಅವರು ನೀಡಿದ ಕೊಡುಗೆ ಅಪಾರ. ಮೊದೊಲಿನಿಂದಲೂ ರಾಜ್‍ಕುಮಾರ್ ಕುಟುಂಬಕ್ಕೆ ಮತ್ತು ಮಠಕ್ಕೆ ಅವಿನಾಭಾವ ಸಂಬಂಧ ಇದೆ ಎಂದರು.

    ರಾಜ್‍ಕುಮಾರ್ ಕುಟುಂಬದ ಕುಡಿ ಪುನೀತ್ ಅವರು ಚಿಕ್ಕ ವಯಸ್ಸಿನಿಂದ ಕಲೆಗೆ ಜೀವನ ಮುಡುಪಾಗಿಟ್ಟಿದ್ದರು. ಅವರ ಅಕಾಲಿಕ ನಿಧನದಿಂದಾಗಿ ಕುಟುಂಬ ಕಂಗೆಟ್ಟಿದೆ. ಅವರ ಅಗಲಿಕೆಯ ನೋವು ಭರಿಸಲು ಕಷ್ಟ. ಆದರೂ ಪ್ರತಿ ಕಷ್ಟದಲ್ಲೂ ಅಪ್ಪು ಕುಟುಂಬದ ಜೊತೆ ಮಠ ಇರುತ್ತದೆ ಎಂದು ತಿಳಿಸಿದರು.

    ಅಪ್ಪು ಕುಟುಂಬಕ್ಕೆ ಮತ್ತು ಕನ್ನಡ ನಾಡಿಗೆ ಅಪ್ಪು ಅಗಲಿಕೆ ಭರಿಸುವ ಶಕ್ತಿ ದೇವರು ನೀಡಲಿ ಅಂತ ಕೇಳಿಕೊಳ್ತೀವಿ ಎಂದು ಹೇಳಿದ ಅವರು ಕುಟುಂಬಕ್ಕೆ ಆಶೀರ್ವಾದ ನೀಡಿದರು. ಇದನ್ನೂ ಓದಿ: ಆಂಧ್ರಪ್ರದೇಶ ಪ್ರವಾಹ – ತಲಾ 25 ಲಕ್ಷ ದೇಣಿಗೆ ನೀಡಿದ ಚಿರಂಜೀವಿ, ರಾಮ್‍ಚರಣ್

    ಶ್ರೀಗಳಿಗೆ ಆರೋಗ್ಯ ಸಚಿವ ಸುಧಾಕರ್ ಸಾಥ್ ನೀಡಿದ್ದರು. ಈ ವೇಳೆ ಮಾತನಾಡಿದ ಸಚಿವ ಸುಧಾಕರ್ ಶ್ರೀಗಳು, ಇಂದು ಪುನೀತ್ ನಿವಾಸಕ್ಕೆ ಭೇಟಿ ಆಗಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಪುನೀತ್ ನಿಧನರಾಗಿ ಒಂದು ತಿಂಗಳು ಕಳೆದಿದೆ. ನೈತಿಕ ಸ್ಫೂರ್ತಿ ಮತ್ತು ವಿಶೇಷ ಆಶೀರ್ವಾದ ನೀಡಲು ಇಂದು ಶ್ರೀಗಳು ಬಂದಿದ್ದಾರೆ ಎಂದು ಹೇಳಿದರು.

    ಅಶ್ವಿನಿ ಅವರಿಗೆ ವಿಶೇಷ ಆಶೀರ್ವಾದ ನೀಡಿದ್ದಾರೆ. ಶೀಘ್ರದಲ್ಲಿ ದೇವಸ್ಥಾನಕ್ಕೆ ಬಂದು ಪೂಜೆ ಮಾಡಿಸಿ ಅಂತ ಶ್ರೀಗಳು ಅವರ ಕುಟುಂಬಕ್ಕೆ ತಿಳಿಸಿದ್ದಾರೆ. ಶ್ರೀಗಳು ಬಂದಿರೋದು ಅವರ ಕುಟುಂಬಕ್ಕೆ ಸಮಾಧಾನ ತಂದಿದೆ. ಪುನೀತ್ ಕುಟುಂಬದ ಜೊತೆ ಮಠ, ಸ್ವಾಮೀಜಿಗಳು, ಲಕ್ಷಾಂತರ ಭಕ್ತರು ಸದಾ ಇರುತ್ತಾರೆ ಎಂದರು.

    ಈ ಸಂದರ್ಭದಲ್ಲಿ ರಾಘವೇಂದ್ರ ರಾಜ್‍ಕುಮಾರ್ ಹಾಜರಿದ್ದರು. ಇದನ್ನೂ ಓದಿ:ಹಿರಿಯ ನಟ ಶಿವರಾಮ್ ಆರೋಗ್ಯ ಗಂಭೀರ

  • ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ರೆ ದೇವರು ಮೆಚ್ಚಲ್ಲ: ಆದಿಚುಂಚನಗಿರಿ ಶ್ರೀ

    ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ರೆ ದೇವರು ಮೆಚ್ಚಲ್ಲ: ಆದಿಚುಂಚನಗಿರಿ ಶ್ರೀ

    ಶಿವಮೊಗ್ಗ: ಸಿಎಂ ಎಚ್‍ಡಿ ಕುಮಾರಸ್ವಾಮಿ ದೈವಾನುಗ್ರಹದಿಂದ ಸಿಎಂ ಆಗಿದ್ದಾರೆ. ಅವರ ಸರ್ಕಾರವನ್ನು ಬೀಳಿಸಿದರೆ ದೇವರು ಮೆಚ್ಚಲ್ಲ ಎಂದು ಆದಿಚುಂಚನಗಿರಿ ಮಠದ ಪೀಠದ್ಯಕ್ಷ ಡಾ. ನಿರ್ಮಲಾನಂದ ಶ್ರೀ ಹೇಳಿದ್ದಾರೆ.

    ಮಲೆನಾಡು ಸೊಸೈಟಿ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀಗಳು, ಒಂದು ವೇಳೆ ರಾಜ್ಯ ಸರ್ಕಾರವನ್ನು ಕೆಡವಿದರೆ ಅದು ದೇವರಿಗೆ ದ್ರೋಹ ಬಗೆದಂತೆ. 37 ಶಾಸಕರನ್ನ ಹೊಂದಿರುವ ಕುಮಾರಸ್ವಾಮಿ ದೈವಾನುಗ್ರಹದಿಂದ ಸಿಎಂ ಆಗಿದ್ದಾರೆ. ದೈವಾನುಗ್ರಹದಿಂದ ಮಾತ್ರ ಕುಮಾರಸ್ವಾಮಿ ಸಿಎಂ ಆಗಲು ಸಾಧ್ಯವಾಗಿದೆ ಎಂದು ಹೇಳಿದರು.

    ರಾಜಕಾರಣದ ಕುರಿತು ಮಾತನಾಡಲು ನನಗೆ ಇಷ್ಟವಿಲ್ಲ ಆದರೆ ಕೆಲ ಅಂಶಗಳನ್ನು ತಿಳಿಸುತ್ತೆನೆ. ಸಿಎಂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 37 ಶಾಸಕರನ್ನು ಹೊಂದಿರುವ ವ್ಯಕ್ತಿ ಸರ್ಕಾರ ಮಾಡುವುದು ಸಾಮಾನ್ಯ ಕೆಲಸವಲ್ಲ. ಅವರಿಗೆ ದೈವದ ಶಕ್ತಿ ಇದೆ. ಅವರ ಕಾರ್ಯ ನಮಗೇ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದರು.

    ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು, ಕೇವಲ 37 ಜನ ಶಾಸಕರನ್ನು ಇಟ್ಟುಕೊಂಡು ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವಂತ ಸ್ಥೈರ್ಯ ತೋರಿದ್ದಾರೆ. ಇದನ್ನು ಕುಮಾರಸ್ವಾಮಿ ಬಗ್ಗೆ ವಾತ್ಸಲ್ಯದಿಂದ ಹೇಳುತ್ತಿಲ್ಲ, ಅವರು ರೈತರ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು ಹೇಳುತ್ತಿದ್ದೇನೆ. ಆದರೆ ರಾಜ್ಯದ ಒಂದು ಸಮುದಾಯ ಸರ್ಕಾರ ಹೋಗಲಿ ಎಂದು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಸರ್ಕಾರ ಬೀಳಿಸಲು ಮಹೂರ್ತ ಫಿಕ್ಸ್ ಮಾಡಿದವರು ನಿರಾಶರಾಗಲಿದ್ದಾರೆ. ಮೈತ್ರಿ ಸರ್ಕಾರಲ್ಲಿ ಸಣ್ಣ ಪುಟ್ಟ ದೋಷಗಳಿವೆ ಆದರೆ, ಸರ್ಕಾರ ಬೀಳುವುದಿಲ್ಲ ಎಂದು ಭವಿಷ್ಯ ನುಡಿದರು.