Tag: adichunchanagiri mutt

  • ಬಿಜಿಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟಿಸಿದ ಅಮಿತ್ ಶಾ – ಶ್ರೀಗಳ ಸೇವೆಗೆ ಶ್ಲಾಘನೆ

    ಬಿಜಿಎಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಉದ್ಘಾಟಿಸಿದ ಅಮಿತ್ ಶಾ – ಶ್ರೀಗಳ ಸೇವೆಗೆ ಶ್ಲಾಘನೆ

    ಬೆಂಗಳೂರು: ಆದಿಚುಂಚನಗಿರಿ ಮಠದ (Adichunchanagiri Mutt) ಹಿರಿಯ ಶ್ರೀಗಳ ಸೇವಾ ಕೈಂಕರ್ಯ ಪರಂಪರೆಯನ್ನು ನಿರ್ಮಲಾನಂದನಾಥ ಶ್ರೀಗಳು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ ಎಂದು, ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಶ್ಲಾಘಿಸಿದ್ದಾರೆ.‌

    ನೆಲಮಂಗಲ (Nelamangala) ಬಳಿಯ ನಗರೂರಿನಲ್ಲಿ ಶ್ರೀ ಆದಿಚುಂಚನಗಿರಿ ವಿಶ್ವ ವಿದ್ಯಾಲಯದ ಅಡಿಯಲ್ಲಿ ಬಿಜಿಎಸ್ ಎಂಸಿಎಚ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು (BGS Medical College and Hospital) ಉದ್ಘಾಟನೆ ಮಾಡಿ ಅವರು ಮಾತನಾಡಿದರು. 200 ಕೋಟಿ ರೂ. ವೆಚ್ಚದಲ್ಲಿ ಆದಿಚುಂಚನಗಿರಿ ಸಂಸ್ಥಾನ ನೂತನ ಕಾಲೇಜು ಮತ್ತು ಆಸ್ಪತ್ರೆ ನಿರ್ಮಿಸಿದೆ. 1000 ಬೆಡ್ ‌ಉಳ್ಳ ಸೂಪರ್‌ಸ್ಪೆಷಾಲಿಟಿ ಆಸ್ರತ್ರೆಯನ್ನು ನಿರ್ಮಾಣ ಮಾಡಲಾಗಿದೆ. ಬಡವರಿಗೆ ಉಚಿತವಾಗಿ ಹಾಗೂ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿರುವುದು ಮತ್ತಷ್ಟು ಸಂತೋಷ. ಇನ್ನೂ ಅನೇಕ ಸೇವಾ ಕಾರ್ಯಗಳನ್ನು ಬಿಜಿಎಸ್ ಟ್ರಸ್ಟ್ ಕೈಗೊಂಡಿದೆ ಎಂದಿದ್ದಾರೆ. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ಅಮಿತ್ ಶಾ – ತಡರಾತ್ರಿ ರೆಬೆಲ್ ನಾಯಕ ಸಭೆ

    ಶ್ರೀಗಳು, ಕಳೆದ ಅನೇಕ ವರ್ಷಗಳಿಂದ ಈ ಪುಣ್ಯ ಕಾರ್ಯಗಳನ್ನು ಮುಂದುವರಿಸಿಕೊಂಡು ಬಂದಿದ್ದಾರೆ‌. ಶ್ರೀ ನಿರ್ಮಲಾನಂದನಾಥ ಸ್ವಾಮಿಜಿಗಳಿಗೆ ಹೃದಯಪೂರ್ವಕ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು. ಇದೇ ವೇಳೆ, ಮಹಾನ್ ಭಾಷೆ ಕನ್ನಡದಲ್ಲಿ ಮಾತನಾಡಲು ನನಗೆ ಆಗದೇ ಇರುವುದಕ್ಕೆ ನಿಮ್ಮೆಲ್ಲರ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.

    ನಿರ್ಮಲಾನಂದನಾಥ ಶ್ರೀಗಳು ಮಾತನಾಡಿ, ನೆಲಮಂಗಲ ಭಾಗಕ್ಕೆ ಈ ಆಸ್ಪತ್ರೆ ಎಷ್ಟು ಅಗತ್ಯವೆಂಬುದನ್ನು ಹೇಳಿದರು. ಅಮಿತ್ ಶಾ ಹಾಗೂ ಹೆಚ್‌,ಡಿ ಕುಮಾರಸ್ವಾಮಿಯವರ ಕಾರ್ಯಬದ್ಧತೆಯನ್ನು ಕೊಂಡಾಡಿದರು.

    ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ವಿಪಕ್ಷ ನಾಯಕ ಆರ್ ಅಶೋಕ್, ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಮಾದಾರ ಚನ್ನಯ್ಯ ಸ್ವಾಮೀಜಿ, ಸಂಸದ ಡಾ.ಕೆ.ಸುಧಾಕರ್, ಯಲಹಂಕ ಶಾಸಕ ವಿಶ್ವನಾಥ್, ನೆಲಮಂಗಲ ಶಾಸಕ ಶ್ರೀನಿವಾಸ್ ಮತ್ತಿತರರು ಉಪಸ್ಥಿತರಿದ್ದರು. ಇದನ್ನೂ ಓದಿ: ಆರನೇ ಬಾರಿಗೆ ಆಕ್ಸಿಯಮ್ ಮಿಷನ್ 4 ಮುಂದೂಡಿಕೆ- ಶುಭಾಂಶು ಅಂತರಿಕ್ಷ ಯಾನ ಮತ್ತೆ ವಿಳಂಬ

  • ಶೂದ್ರ ಅಂದ್ರೆ ಸೂಳೆಮಕ್ಕಳು ಎಂದರ್ಥ ಅಂತ ಮನುಸ್ಮೃತಿಯಲ್ಲಿದೆ – ಕೆ. ಎಸ್ ಭಗವಾನ್

    ಶೂದ್ರ ಅಂದ್ರೆ ಸೂಳೆಮಕ್ಕಳು ಎಂದರ್ಥ ಅಂತ ಮನುಸ್ಮೃತಿಯಲ್ಲಿದೆ – ಕೆ. ಎಸ್ ಭಗವಾನ್

    ಮಂಡ್ಯ: ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ ಕೆ.ಎಸ್ ಭಗವಾನ್ ಮನುಸ್ಮೃತಿ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ನೀಡಿ ರಾಮ ಹಾಗೂ ರಾಮ ಮಂದಿರ ನಿರ್ಮಾಣದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ಆದಿಚುಂಚನಗಿರಿ ಮಠಕ್ಕೆ ಆಗಮಿಸಿದ್ದ ಕೆ.ಎಸ್ ಭಗವಾನ್, ಹಿಂದೂ ಧರ್ಮ ಉಳಿಬೇಕು ಅಂದ್ರೆ ಮೊದಲು ಶೂದ್ರ ಎಂಬ ಪದವನ್ನು ಮನುಸ್ಮೃತಿಯಿಂದ ತೆಗೆದು ಹಾಕಬೇಕು. ಶೂದ್ರ ಅಂದ್ರೆ ಬರೀ ಗುಲಾಮ ಅಂತಷ್ಟೇ ಅರ್ಥವಲ್ಲ. ಮನುಸ್ಮೃತಿಯಲ್ಲಿ ಶೂದ್ರ ಎಂದರೆ ಸೂಳೆಮಕ್ಕಳು ಎಂದರ್ಥ. ಅಂತಹ ಅಸಭ್ಯ ಪದ ನಮಗೆ ಬೇಕಾ? ಅದು ನಮಗೆ ಗೌರವ ತರುತ್ತಿದೆಯಾ? ಅಂತಹ ಮನುಸ್ಮೃತಿಯನ್ನು ಬಿಜೆಪಿಯವರು ತರುತ್ತೇನೆ ಅಂತಾರೆ, ಅದನ್ನು ಒಪ್ಪಿಕೊಳ್ತೀರಾ ಎಂದು ಪ್ರಶ್ನಿಸಿದ್ದಾರೆ.

    ಕಳೆದ ಎರಡು ವರ್ಷಗಳಿಂದ ನಾನು ವಾಲ್ಮೀಕಿ ರಾಮಾಯಣ ಅಧ್ಯಯನ ಮಾಡಿ `ರಾಮ ಮಂದಿರ ಏಕೆ ಬೇಡ’ ಎಂಬ ಪುಸ್ತಕವನ್ನು ಬರೆದಿದ್ದೇನೆ. ಅದನ್ನು ಓದಿದರೇ, ರಾಮ ಜನಸಾಮಾನ್ಯರಿಗೆ ವಿರುದ್ಧವಾಗಿದ್ದ ಎಂಬುದು ನಮಗೆ ಗೊತ್ತಾಗುತ್ತೆ. ರಾಮ ಚತುರ್ವರ್ಣದ ಪ್ರತಿನಿಧಿಯಾಗಿ ಅದನ್ನು ಉದ್ಧಾರ ಮಾಡಲು ರಾಮಾಯಣದಲ್ಲಿ ಗುರುತಿಸಿಕೊಂಡ. ಅವನು ನಿಜವಾದ ಮನುಷ್ಯನಲ್ಲ, ದೇವರಂತೂ ಅಲ್ಲವೇ ಅಲ್ಲ. ರಾಮನನ್ನು ದೇವರು ಎಂದು ವಾಲ್ಮೀಕಿ ರಾಮಾಯಣದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ದೇವರು ಅಂತಾ ಯಾರಿಗೆ ಅನುಕೂಲವಾಯ್ತೋ, ಅಂತ ಪುರೋಹಿತರು ರಾಮ, ಕೃಷ್ಣನನ್ನು ದೇವರೆಂದು ಮಾಡಿಕೊಂಡಿದ್ದಾರೆ ಎಂದು ರಾಮನ ವಿರುದ್ಧ ಕಿಡಿಕಾರಿದರು.

    ಈ ದೇಶದಲ್ಲಿ ಶೇ.95 ರಷ್ಟು ಶೂದ್ರರಿದ್ದಾರೆ. ಅವರನ್ನೆಲ್ಲಾ ನೀವು ಗುಲಾಮರು, ಸೂಳೆಮಕ್ಕಳು ಎಂದರೆ ಒಪ್ಪುತ್ತೀರಾ? ಮನುಸ್ಮೃತಿಯ 8ನೇ ಅಧ್ಯಾಯ 415ನೇ ಶ್ಲೋಕದಲ್ಲಿ ಈ ವಿಚಾರವಿದೆ. ಜನರು ಇದನ್ನೆಲ್ಲ ತಿಳಿಯಬೇಕು ಎಂದು ಹೇಳುತ್ತಿದ್ದೇನೆ. ನನಗೆ ಗುಂಡಿಕ್ಕಿದರೂ ಇದನ್ನೆಲ್ಲ ತಿಳಿಸಿಯೇ ತಿಳಿಸುತ್ತೇನೆ. ನಾನು ಹೇಳುವುದು ವಿವಾದವಾದರು ಪರವಾಗಿಲ್ಲ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಆದಿಚುಂಚನಗಿರಿ ಮಠಕ್ಕೆ ಪ್ರೊ.ಕೆ.ಎಸ್ ಭಗವಾನ್ ಭೇಟಿ

    ಆದಿಚುಂಚನಗಿರಿ ಮಠಕ್ಕೆ ಪ್ರೊ.ಕೆ.ಎಸ್ ಭಗವಾನ್ ಭೇಟಿ

    ಮಂಡ್ಯ: ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಪ್ರೊ.ಕೆ.ಎಸ್ ಭಗವಾನ್ ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆ ವಿಚಾರದಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ ಎಂದು ಕಿಡಿಕಾರಿದ್ದಾರೆ.

    ಟಿಪ್ಪು ಓರ್ವ ಜಾತ್ಯಾತೀತ ರಾಜ. ಟಿಪ್ಪು ಜಯಂತಿಗೆ ವಿರೋಧ ಮಾಡುವುದು ಸರಿಯಲ್ಲ. ತನ್ನ ಆಳ್ವಿಕೆಯಲ್ಲಿ ಎಲ್ಲಾ ಸಮುದಾಯವನ್ನು ಟಿಪ್ಪು ಸಮನಾಗಿ ಕಂಡಿದ್ದಾನೆ. ಆತ ಯಾವ ಸಮುದಾಯಕ್ಕೂ ತೊಂದರೆ ಕೊಟ್ಟವನಲ್ಲ. ಆದರೆ ರಾಜಕೀಯಕ್ಕಾಗಿ ಟಿಪ್ಪು ಜಯಂತಿಯನ್ನು ಬಿಜೆಪಿ ಬಳಸಿಕೊಳ್ಳುತ್ತಿದೆ ಎಂದು ಭಗವಾನ್ ತಮ್ಮ ಅಸಮಧಾನವನ್ನು ಹೊರಹಾಕಿದ್ದಾರೆ.

    ಟಿಪ್ಪು ಸುಲ್ತಾನ್ ಸಾಧನೆ ಅಪಾರ, ಆತ ಮೈಸೂರು ರಾಜರಿಗಿಂತ ಮೊದಲೇ ಕೆ.ಆರ್.ಎಸ್ ಅಣೆಕಟ್ಟೆ ಕಟ್ಟಲು ಚಿಂತಿಸಿದ್ದ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪು ಸಾಯದಿದ್ದರೆ ಅಂದೇ ಅಣೆಕಟ್ಟೆ ನಿರ್ಮಾಣವಾಗ್ತಿತ್ತು. ಆಗ ಕರ್ನಾಟಕ ಹಾಗೂ ತಮಿಳುನಾಡಿನ ನಡುವೆ ನೀರಿನ ಸಮಸ್ಯೆಯೇ ಇರುತ್ತಿರಲಿಲ್ಲ. ಯಾಕೆಂದರೆ ಟಿಪ್ಪು ಸುಲ್ತಾನ್ ಆಳ್ವಿಕೆ ಸಮಯದಲ್ಲಿ ಆತನ ಕೈಕೆಳಗೆ ತಮಿಳುನಾಡು ಸೇರಿದಂತೆ ದಕ್ಷಿಣ ಭಾರತದ ಹಲವು ರಾಜ್ಯಗಳಿತ್ತು ಎಂದು ತಿಳಿಸಿದರು.

    ನಾನು ಬಾಲಗಂಗಾಧರ ನಾಥ ಸ್ವಾಮೀಜಿ ಬಗ್ಗೆ ಅಪಾರ ಅಭಿಮಾನ ಹೊಂದಿದ್ದೇನೆ. ಅದಕ್ಕಾಗಿಯೇ ಈಗಲೂ ಮಠದವರ ಜೊತೆ ಉತ್ತಮ ಒಡನಾಟ ಇದೆ, ಹಾಗಾಗಿ ಎಡಪಂಥೀಯ ವಿಚಾರವಾದಿಯಾಗಿದ್ದರೂ ಮಠಕ್ಕೆ ಬಂದಿದ್ದೇನೆ. ಆದರೆ ದೇವಾಲಯಕ್ಕೆ ನಾನು ಭೇಟಿ ನೀಡುವುದಿಲ್ಲ ಎಂದು ಹೇಳಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ರೆ ದೇವರು ಮೆಚ್ಚಲ್ಲ: ಆದಿಚುಂಚನಗಿರಿ ಶ್ರೀ

    ಕುಮಾರಸ್ವಾಮಿ ಸರ್ಕಾರವನ್ನು ಬೀಳಿಸಿದ್ರೆ ದೇವರು ಮೆಚ್ಚಲ್ಲ: ಆದಿಚುಂಚನಗಿರಿ ಶ್ರೀ

    ಶಿವಮೊಗ್ಗ: ಸಿಎಂ ಎಚ್‍ಡಿ ಕುಮಾರಸ್ವಾಮಿ ದೈವಾನುಗ್ರಹದಿಂದ ಸಿಎಂ ಆಗಿದ್ದಾರೆ. ಅವರ ಸರ್ಕಾರವನ್ನು ಬೀಳಿಸಿದರೆ ದೇವರು ಮೆಚ್ಚಲ್ಲ ಎಂದು ಆದಿಚುಂಚನಗಿರಿ ಮಠದ ಪೀಠದ್ಯಕ್ಷ ಡಾ. ನಿರ್ಮಲಾನಂದ ಶ್ರೀ ಹೇಳಿದ್ದಾರೆ.

    ಮಲೆನಾಡು ಸೊಸೈಟಿ ರಜತ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಶ್ರೀಗಳು, ಒಂದು ವೇಳೆ ರಾಜ್ಯ ಸರ್ಕಾರವನ್ನು ಕೆಡವಿದರೆ ಅದು ದೇವರಿಗೆ ದ್ರೋಹ ಬಗೆದಂತೆ. 37 ಶಾಸಕರನ್ನ ಹೊಂದಿರುವ ಕುಮಾರಸ್ವಾಮಿ ದೈವಾನುಗ್ರಹದಿಂದ ಸಿಎಂ ಆಗಿದ್ದಾರೆ. ದೈವಾನುಗ್ರಹದಿಂದ ಮಾತ್ರ ಕುಮಾರಸ್ವಾಮಿ ಸಿಎಂ ಆಗಲು ಸಾಧ್ಯವಾಗಿದೆ ಎಂದು ಹೇಳಿದರು.

    ರಾಜಕಾರಣದ ಕುರಿತು ಮಾತನಾಡಲು ನನಗೆ ಇಷ್ಟವಿಲ್ಲ ಆದರೆ ಕೆಲ ಅಂಶಗಳನ್ನು ತಿಳಿಸುತ್ತೆನೆ. ಸಿಎಂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇವಲ 37 ಶಾಸಕರನ್ನು ಹೊಂದಿರುವ ವ್ಯಕ್ತಿ ಸರ್ಕಾರ ಮಾಡುವುದು ಸಾಮಾನ್ಯ ಕೆಲಸವಲ್ಲ. ಅವರಿಗೆ ದೈವದ ಶಕ್ತಿ ಇದೆ. ಅವರ ಕಾರ್ಯ ನಮಗೇ ಅಚ್ಚರಿ ಮೂಡಿಸಿದೆ ಎಂದು ತಿಳಿಸಿದರು.

    ಇದೇ ವೇಳೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್‍ಡಿ ದೇವೇಗೌಡ ಅವರು, ಕೇವಲ 37 ಜನ ಶಾಸಕರನ್ನು ಇಟ್ಟುಕೊಂಡು ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವಂತ ಸ್ಥೈರ್ಯ ತೋರಿದ್ದಾರೆ. ಇದನ್ನು ಕುಮಾರಸ್ವಾಮಿ ಬಗ್ಗೆ ವಾತ್ಸಲ್ಯದಿಂದ ಹೇಳುತ್ತಿಲ್ಲ, ಅವರು ರೈತರ ಸಮಸ್ಯೆಗಳನ್ನು ಬಗೆಹರಿಸಲು ಕಾರ್ಯನಿರ್ವಹಿಸುತ್ತಿರುವುದನ್ನು ಕಂಡು ಹೇಳುತ್ತಿದ್ದೇನೆ. ಆದರೆ ರಾಜ್ಯದ ಒಂದು ಸಮುದಾಯ ಸರ್ಕಾರ ಹೋಗಲಿ ಎಂದು ನಿರಂತರವಾಗಿ ಪ್ರಯತ್ನಿಸುತ್ತಿದೆ. ಆದರೆ ಸರ್ಕಾರ ಬೀಳಿಸಲು ಮಹೂರ್ತ ಫಿಕ್ಸ್ ಮಾಡಿದವರು ನಿರಾಶರಾಗಲಿದ್ದಾರೆ. ಮೈತ್ರಿ ಸರ್ಕಾರಲ್ಲಿ ಸಣ್ಣ ಪುಟ್ಟ ದೋಷಗಳಿವೆ ಆದರೆ, ಸರ್ಕಾರ ಬೀಳುವುದಿಲ್ಲ ಎಂದು ಭವಿಷ್ಯ ನುಡಿದರು.

  • ‘ಕೊಡಗಿಗೆ ನಮ್ಮ ಕೊಡುಗೆ’ ಆದಿಚುಂಚನಗಿರಿ ಮಠದಿಂದ ಪಾದಯಾತ್ರೆ

    ‘ಕೊಡಗಿಗೆ ನಮ್ಮ ಕೊಡುಗೆ’ ಆದಿಚುಂಚನಗಿರಿ ಮಠದಿಂದ ಪಾದಯಾತ್ರೆ

    ಬೆಂಗಳೂರು: ಮಹಾಮಳೆಯಿಂದ ತತ್ತರಿಸಿದ್ದ ಕೊಡಗು ನೆರೆ ಸಂತ್ರಸ್ತರ ನೆರವಿಗೆ ನಗರದಲ್ಲಿ ಇಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ದೇಣಿಗೆ ಸಂಗ್ರಹ ಮಾಡಲಾಯಿತು. ಮಠದ ನಿರ್ಮಲಾನಂದ ಸ್ವಾಮೀಜಿ ಜೊತೆಗೆ ಹಲವು ರಾಜಕಾರಣಿಗಳು, ಗಣ್ಯರು, ಉದ್ಯಮಿಗಳು ಹಾಗೂ ವಿದ್ಯಾರ್ಥಿಗಳು ಹೆಜ್ಜೆ ಹಾಕಿ ದೇಣಿಗೆ ಸಂಗ್ರಹಿಸಿದರು.

    ‘ಕೊಡಗಿಗೆ ನಮ್ಮ ಕೊಡುಗೆ’ ಎಂಬ ಹೆಸರಿನಲ್ಲಿ ಆರಂಭವಾದ ಪಾದಯಾತ್ರೆ ವಿಜಯನಗರ ಶಾಖಾ ಮಠದಿಂದ ಹಂಪಿನಗರದ ವರೆಗೂ ಬರೋಬ್ಬರಿ 4 ಕಿಮೀ ಪಾದಯಾತ್ರೆ ನಡೆಯಿತು. ಈ ವೇಳೆ ಮಾಜಿ ಸಚಿವ ವಿ.ಸೋಮಣ್ಣ 20 ಲಕ್ಷ ರೂ. ವಿಜಯನಗರ ಶಾಸಕ ಎಂ.ಕೃಷ್ಣಪ್ಪ 25 ಲಕ್ಷ ರೂ. ಶಾಸಕ ಗೋಪಾಲಯ್ಯ 2 ಲಕ್ಷ ರೂ. ಹಾಗೂ ನಮ್ಮವರು ಎಂಬ ತಂಡದಿಂದ 1 ಕೋಟಿ ರೂ. ದೇಣಿಗೆ ಸೇರಿದಂತೆ ಭಾರೀ ಮೊತ್ತದ ದೇಣಿಗೆ ಸಂಗ್ರಹ ಮಾಡಲಾಯಿತು.

    ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ನಿರ್ಮಲಾನಂದ ಸ್ವಾಮೀಜಿ, ನಮ್ಮ ತ್ಯಾಗದಿಂದ ಮತ್ತೊಬ್ಬರಿಗೆ ಸಹಾಯ ಮಾಡಬೇಕೆಂಬ ಮನೋಭಾವ ಬೆಳೆಸಿಕೊಳ್ಳಬೇಕು. ಅಲ್ಲದೇ ಪ್ರಕೃತಿ ಮಾತೆಯ ರಕ್ಷಣೆಗೆ ಮುಂದಾಗಬೇಕು ಎಂದು ಕರೆ ನೀಡಿದರು.

    ಕೊಡಗಿನ ಜನರ ಕಷ್ಟಕ್ಕೆ ಬೆಂಗಳೂರಿಗರ ಮನ ಮಿಡಿದಿದ್ದು, ಕೋಟಿಗಟ್ಟಲೇ ಹಣವನ್ನು ದಾನಿಗಳು ಇಂದು ಮಠದ ಪರಿಹಾರ ನಿಧಿಗೆ ನೀಡಿದ್ದಾರೆ. ಮಠದಿಂದ ಕೊಡಗಿಗೆ ಶಾಶ್ವತ ಪರಿಹಾರ ಕಲ್ಪಿಸುವ ಬಗ್ಗೆ ಆದಿಚುಂಚನಗಿರಿ ಮಠ ಯೋಜನೆ ತಯಾರಿಸಿ ದೇಣಿಗೆ ಹಣವನ್ನು ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಸ್ವಾಮೀಜಿ ತಿಳಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸುವುದಾಗಿ ಹೇಳಿಕೆ ನೀಡಿದ್ದ ಸಿಎಂ ಕುಮಾರಸ್ವಾಮಿ ಅವರು ಅನಿವಾರ್ಯ ಕಾರಣಗಳಿಂದ ಗೈರು ಹಾಜರಿ ಆಗಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv