Tag: Adichunchanagiri Math

  • ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಮುನಿರತ್ನ, ರಾಜೇಶ್ ಗೌಡ

    ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಮುನಿರತ್ನ, ರಾಜೇಶ್ ಗೌಡ

    ಬೆಂಗಳೂರು: ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬೆನ್ನಲ್ಲೇ ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ, ಶಿರಾ ಕ್ಷೇತ್ರದ ಶಾಸಕ ರಾಜೇಶ್ ಗೌಡ ಅವರು ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದಿದ್ದಾರೆ.

    ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಇಬ್ಬರು ಸಚಿವರು, ಶ್ರೀ ಕ್ಷೇತ್ರ ಆದಿಚುಂಚನಗಿರಿಯ ಶ್ರೀ ಡಾ.ನಿರ್ಮಾಲನಂದನಾಥ ಸ್ವಾಮೀಜಿಗಳ ಆರ್ಶೀವಾದ ಪಡೆದಿದ್ದಾರೆ. ಇದೇ ವೇಳೆ ಕಂದಾಯ ಸಚಿವ ಆರ್.ಅಶೋಕ್, ಸಚಿವ ಗೋಪಾಲಯ್ಯ ಹಾಗೂ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯ ಜಿ.ಹೆಚ್.ರಾಮಚಂದ್ರ ಉಪಸ್ಥಿತರಿದ್ದರು. ಮುನಿರತ್ನ ಅವರು ಭೇಟಿ ನೀಡುತ್ತಿದ್ದಂತೆ ಶಿರಾ ಕ್ಷೇತ್ರದ ನೂತನ ಶಾಸಕ ರಾಜೇಶಗೌಡ ಸಹ ಮಠಕ್ಕೆ ಭೇಟಿ ನೀಡಿದರು.

    ಆರ್‍ಆರ್ ನಗರ ಶಾಸಕ ಮುನಿರತ್ನ ಅವರು 57,936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಗಿಂದ ಎರಡು ಪಟ್ಟು ಮತ ಪಡೆದು ಗೆಲುವು ಕಂಡಿದ್ದಾರೆ. ಶಿರಾ ಶಾಸಕ ರಾಜೇಶ್ ಗೌಡ ಅವರು ಸಹ ಸುಮಾರು 11 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  • ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಬೆಳೆಸಿದ್ದ ಮರಗಳ ಸ್ಥಳಾಂತರ

    ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಬೆಳೆಸಿದ್ದ ಮರಗಳ ಸ್ಥಳಾಂತರ

    – ಆದಿಚುಂಚನಗಿರಿ ಶ್ರೀಗಳ ಪರಿಸರ ಕಾಳಜಿಗೆ ಪ್ರಶಂಸೆ

    ಮಂಡ್ಯ: ಆಧುನೀಕರಣ ಹಾಗೂ ಅಭಿವೃದ್ಧಿಯ ಹೆಸರಿನಲ್ಲಿ ರಾಜ್ಯ ಹಾಗೂ ದೇಶದಲ್ಲಿ ಲಕ್ಷಾಂತರ ಮರಗಳ ಮಾರಣಹೋಮ ನಡೆಯುತ್ತಿದೆ. ಇದರಿಂದ ಪರಿಸರ ನಾಶವಾಗುವುದರ ಜೊತೆಗೆ ಮಾನವನ ಆರೋಗ್ಯವೂ ಸಹ ಕ್ಷೀಣಿಸುತ್ತಿದೆ. ಈ ನಿಟ್ಟಿನಲ್ಲಿ ಮರಗಳನ್ನು ಕಡಿಯದೇ ಅಭಿವೃದ್ಧಿ ಮಾಡುವುದು ಹೇಗೆ ಎಂದು ಆದಿಚುಂಚನಗಿರಿಯ ಶ್ರೀಗಳು ನಿರೂಪಿಸಿದ್ದಾರೆ.

    ರಸ್ತೆಗಳ ಅಭಿವೃದ್ಧಿ, ಕಟ್ಟಡಗಳ ನಿರ್ಮಾಣ ಹಾಗೂ ಆಧುನಿಕತೆಯ ಹೆಸರನ್ನು ಹೇಳಿಕೊಂಡು ಸರ್ಕಾರ ಹಾಗೂ ಖಾಸಗಿಯವರು ಲಕ್ಷಾಂತರ ಮರಗಳನ್ನು ಮಾರಣ ಹೋಮ ಮಾಡಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಪ್ರಕೃತಿಯಲ್ಲಿ ಮರಗಳ ಸಂಖ್ಯೆಯೂ ಸಹ ಕಡಿಮೆಯಾಗುತ್ತಿದೆ. ಆದರೆ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿಗಳು ಮರಗಳನ್ನು ಕಡಿಯದೆ ಅಭಿವೃದ್ಧಿ ಮಾಡುವುದು ಹೇಗೆ ಎಂದು ಸಮಾಜಕ್ಕೆ ತಿಳಿಸಲು ಮುಂದಾಗಿದ್ದಾರೆ.

    ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ಮರ ಕಡಿಯದೆ ಅವುಗಳನ್ನು ಸಂರಕ್ಷಣೆ ಮಾಡುವ ಮೂಲಕ ಸಾಮಾಜಕ್ಕೆ ಮಾದರಿಯಾಗುತ್ತಿದ್ದಾರೆ. ಬಿಜಿ ನಗರದ ಆದಿಚುಂಚನಗಿರಿ ಮೆಡಿಕಲ್ ಕಾಲೇಜು ಎದುರು ಇದೀಗ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಶ್ರೀಗಳು ಮುಂದಾಗಿದ್ದಾರೆ. ಆದರೆ ಆಸ್ಪತ್ರೆ ನಿರ್ಮಾಣ ಮಾಡುವ ಜಾಗದಲ್ಲಿ 250 ಕ್ಕೂ ಹೆಚ್ಚು ಬೆಳೆದು ನಿಂತಿರುವ ಮರಗಳು ಇವೆ. ಈ ಮರಗಳನ್ನು ಏನು ಮಾಡುವುದು ಎಂದು ಯೋಚನೆ ಮಾಡುವಾಗ ಶ್ರೀಗಳಿಗೆ ಹೊಳೆದಿರುವುದು ಮರಗಳನ್ನು ಸ್ಥಳಾಂತರ ಮಾಡುವ ಪ್ಲಾನ್.

    ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಬಡವರಿಗೆ ಉಪಯೋಗವಾಗಬೇಕು ಎಂದು ಆಸ್ಪತ್ರೆಯನ್ನು ನಿರ್ಮಾಣ ಮಾಡಲು ಶ್ರೀಗಳು ಮುಂದಾಗಿದ್ದು, ಅಲ್ಲಿ ಬೆಳೆದು ನಿಂತಿರುವ ಮರಗಳ ಜೀವವನ್ನು ಕಾಪಾಡಿದ್ದಾರೆ. ಈ ಮರಗಳನ್ನು ಭೈರವೈಕ್ಯ ಬಾಲಗಂಗಾಧರನಾಥ ಶ್ರೀಗಳು ನೆಟ್ಟು ಪೋಷಣೆ ಮಾಡಿದ್ದರು. ಆದ್ದರಿಂದ ಈ ಮರಗಳನ್ನು ಕಡಿಯುವುದು ಬೇಡಾ, ಈ ಮರಗಳನ್ನು ಸ್ಥಳಾಂತರ ಮಾಡೋಣ ಎಂದು ಹೇಳಿದ್ದಾರೆ. ಹೀಗಾಗಿ ಆಧುನಿಕ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡಿರು ಶ್ರೀಗಳು, ಯಂತ್ರದ ಸಹಾಯದಿಂದ ಮರಕ್ಕೆ ಪೆಟ್ಟು ಆಗದಂತೆ ಇಡೀ ಮರವನ್ನು ಬೇರು ಸಹಿತ ಕಿತ್ತು ಎರಡು ಎಕರೆ ಪ್ರದೇಶದಲ್ಲಿ ಪ್ಲಾಂಟ್ ಮಾಡಿಸುತ್ತಿದ್ದಾರೆ.

    ಆದಿಚುಂಚನಗಿರಿ ಶ್ರೀಗಳ ಈ ಪರಿಸರ ಕಾಳಜಿಗೆ ಎಲ್ಲರೂ ಸಹ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಈಗಲಾದರೂ ಸರ್ಕಾರ ಹಾಗೂ ಖಾಸಗಿ ಅವರು ಮರಗಳ ಮಾರಣಹೋಮ ಮಾಡದೇ ಶ್ರೀಗಳ ಹಾದಿ ತುಳಿದು ಪರಿಸರ ರಕ್ಷಣೆಗೆ ಮುಂದಾಗಬೇಕಿದೆ.

  • ಅಧಿಕಾರ ಉಳಿಸಿಕೊಳ್ಳುವುದಕ್ಕೆ ಶ್ರೀಗಳನ್ನು ಬಳಸಿಕೊಳ್ಳಲ್ಲ- ಸಿಎಂ ಕುಮಾರಸ್ವಾಮಿ

    ಅಧಿಕಾರ ಉಳಿಸಿಕೊಳ್ಳುವುದಕ್ಕೆ ಶ್ರೀಗಳನ್ನು ಬಳಸಿಕೊಳ್ಳಲ್ಲ- ಸಿಎಂ ಕುಮಾರಸ್ವಾಮಿ

    ಮಂಡ್ಯ: ನನ್ನ ವೈಯಕ್ತಿಕ ವಿಚಾರ ಹಾಗೂ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಶ್ರೀಗಳನ್ನು ಬಳಸಿಕೊಳ್ಳಲ್ಲ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಆದಿಚುಂಚನಗಿರಿ ಮಠದಲ್ಲಿ ಆಯೋಜಿಸಿದ್ದ ಬಾಲಗಂಗಾಧರ ಶ್ರೀಗಳ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಸಿಎಂ ಭಾಗವಹಿಸಿದ್ದರು. ಸರ್ಕಾರ ಬೀಳಲು ಹೊರಟಿರುವ ಬಿಜೆಪಿ ಶಾಸಕರಿಗೆ ನಿರ್ಮಲಾನಂದನಾಥ ಸ್ವಾಮೀಜಿ ತರಾಟೆ ತೆಗೆದುಕೊಂಡಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಮಾಧ್ಯಮಗಳು ರಾಜಕೀಯವಾಗಿ ನನ್ನ ಬಗ್ಗೆ ಹಾಗೂ ಸರ್ಕಾರದ ಕುರಿತು ಅನೇಕ ವರದಿ ಪ್ರಕಟಿಸಲಿ. ಆದರೆ ಇದರಲ್ಲಿ ನಿರ್ಮಲಾನಂದ ಶ್ರೀಗಳ ಹೆಸರನ್ನು ಪ್ರಸ್ತಾಪಿಸಬೇಡಿ. ಹೀಗೆ ಮಾಡುವುದರಿಂದ ಶ್ರೀಗಳಿಗೆ ಹಾಗೂ ಮಠಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಕೇಳಿಕೊಂಡರು.

    ಸಮಾಜಕ್ಕೆ ಶ್ರೀಮಠ ಅನೇಕ ಕೊಡುಗೆಗಳನ್ನು ಕೊಟ್ಟಿದೆ. ನಿರ್ಮಲಾನಂದ ಶ್ರೀಗಳ ಹೆಸರನ್ನು ಯಾರೂ ರಾಜಕೀಯಕ್ಕೆ ಬಳಸಿಕೊಳ್ಳಬೇಡಿ. ಒಂದು ಸಮಾಜದ ವ್ಯಕ್ತಿಗೋಸ್ಕರ ಶ್ರೀಗಳು ಯಾವತ್ತೂ ವಕಾಲತ್ತು ವಹಿಸಲ್ಲ. ನಾನು ಶಾಶ್ವತವಾಗಿ ಸಿಎಂ ಕುರ್ಚಿಯಲ್ಲಿ ಇರಲ್ಲ. ಭಗವಂತ ಎಷ್ಟು ದಿನ ಸಿಎಂ ಆಗಿರಬೇಕೆಂದು ಬರೆದುಬಿಟ್ಟಿದ್ದಾನೆ ಅಂತ ಗೊತ್ತಿಲ್ಲ. ಅಧಿಕಾರ ಕಳೆದುಕೊಳ್ಳುತ್ತೇನೆ ಎಂದು ಯಾವತ್ತೂ ಕುಗ್ಗಿಲ್ಲ ಎಂದು ಹೇಳಿದರು.

    ಗುರುಹಿರಿಯರ ಆಶೀರ್ವಾದ ಇರುವವರೆಗೂ ಕಲ್ಲುಬಂಡೆಯಾಗಿಯೇ ಮುಂದುವರಿಯುತ್ತೇನೆ. ನನ್ನನ್ನು ಯಾರೂ ಏನೂ ಮಾಡಲು ಆಗಲ್ಲ ಎಂದು ಸಿಎಂ ಕುಮಾರಸ್ವಾಮಿ, ಪರೋಕ್ಷವಾಗಿ ಬಿಜೆಪಿ ನಾಯಕರಿಗೆ ಟಾಂಗ್ ಕೊಟ್ಟರು.

    ಮಂಡ್ಯ ಜಿಲ್ಲೆಯ ಜನತೆ ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದಾರೆ. ಹೀಗಾಗಿ ಅವರ ಕಷ್ಟವನ್ನು ಬಗೆ ಹರಿಸಬೇಕು. ಈ ನಿಟ್ಟಿನಲ್ಲಿ ಮಂಡ್ಯದಲ್ಲಿ ಹೊಸ ಎಥನಾಲ್ ಕಾರ್ಖಾನೆ ನಿರ್ಮಾಣ ಮಾಡುವ ಯೋಜನೆ ರೂಪಿಸಲಾಗಿದೆ ಎಂದ ಅವರು, ತೆಂಗು ಬೆಳೆಗಾರರಿಗೆ ಬೆಳೆ ಕೈಕೊಟ್ಟರೆ ಎಕರೆಗೆ 20 ಸಾವಿರ ರೂ. ಪರಿಹಾರ ಕೊಡುತ್ತೇವೆ. ಬೀದಿ ವ್ಯಾಪಾರಿಗಳಿಗೆ ಬಡ್ಡಿ ರಹಿತ 10 ಸಾವಿರ ರೂ. ಸಾಲ ಕೊಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv