Tag: adhar card

  • ಆಧಾರ್ ಕಾರ್ಡ್ ತೋರಿಸದಿದ್ದಕ್ಕೆ ಚಿಕಿತ್ಸೆ ನಿರಾಕರಣೆ ಆರೋಪ- ಕಾರ್ಗಿಲ್ ಹುತಾತ್ಮರ ಪತ್ನಿ ಸಾವು

    ಆಧಾರ್ ಕಾರ್ಡ್ ತೋರಿಸದಿದ್ದಕ್ಕೆ ಚಿಕಿತ್ಸೆ ನಿರಾಕರಣೆ ಆರೋಪ- ಕಾರ್ಗಿಲ್ ಹುತಾತ್ಮರ ಪತ್ನಿ ಸಾವು

    ಸೋನಿಪತ್: ಆಧಾರ ಕಾರ್ಡ್ ತೋರಿಸದಿದ್ದರಿಂದ ವೈದ್ಯರು ಸೂಕ್ತ ಸಮಯಕ್ಕೆ ಚಿಕಿತ್ಸೆ ನಿರಾಕರಿಸಿದ ಪರಿಣಾಮ ಕಾರ್ಗಿಲ್ ಹುತಾತ್ಮ ಯೋಧರ ಪತ್ನಿಯೊಬ್ಬರು ಮೃತಪಟ್ಟ ಶುಕ್ರವಾರ ಹರಿಯಾಣದ ಸೋನಿಪತ್ ನಲ್ಲಿ ನಡೆದಿದೆ.

    ಯೋಧರ ಪತ್ನಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಪರಿಣಾಮ ಕುಟಂಬದವರು ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದರು.

    ಗಂಭೀರ ಸ್ಥಿತಿಯಲ್ಲಿದ್ದ ನನ್ನ ತಾಯಿಯನ್ನು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಬಂದೆ. ಈ ವೇಳೆ ಆಸ್ಪತ್ರೆ ವೈದ್ಯರು ಆಧಾರ್ ಕಾರ್ಡ್ ತೋರಿಸುವಂತೆ ಹೇಳಿದ್ರು. ಆದರೆ ಆ ಸಂದರ್ಭದಲ್ಲಿ ನನ್ನ ಬಳಿ ಆಧಾರ್ ಕಾರ್ಡ್ ಇರಲಿಲ್ಲ. ಹೀಗಾಗಿ ಮೊಬೈಲ್ ನಲ್ಲಿದ್ದ ಆಧಾರ್ ಕಾರ್ಡ್ ಫೋಟೋ ತೋರಿಸಿದೆ. ಈ ವೇಳೆ ವೈದ್ಯರು ಒರಿಜನಲ್ ದಾಖಲೆಗಳನ್ನು ತಂದು ತೋರಿಸೋವರೆಗೆ ಚಿಕಿತ್ಸೆ ನೀಡುವುದಿಲ್ಲ ಎಂದು ಹೇಳಿದ್ರು. ನನಗೆ ಒಂದು ಗಂಟೆ ಸಮಯಾವಕಾಶ ಕೊಡಿ. ಮನೆಗೆ ಹೋಗಿ ಆಧಾರ್ ಕಾರ್ಡ್ ತಂದು ತೋರಿಸುತ್ತೇನೆ. ಈ ಮೊದಲು ನೀವು ಚಿಕಿತ್ಸೆ ಆರಂಭಿಸಿ ಎಂದೆ, ಆದ್ರೆ ಅವರು ಒಪ್ಪಲಿಲ್ಲ ಅಂತ ಮೃತ ಮಹಿಳೆಯ ಮಗ ಪವನ್ ಕುಮಾರ್ ಹೇಳಿದ್ದಾರೆ.

    ಆಸ್ಪತ್ರೆಯ ಮ್ಯಾನೇಜ್‍ಮೆಂಟ್ ಈ ಆರೋಪವನ್ನು ತಳ್ಳಿಹಾಕಿದೆ. ಆದ್ರೆ ಡಾಕ್ಯುಮೆಂಟೇಷನ್‍ಗಾಗಿ ಆಧಾರ್ ಕಾರ್ಡ್ ಅಗತ್ಯ ಎಂಬುದನ್ನ ಒಪ್ಪಿಕೊಂಡಿದೆ.

    ಈ ಕುರಿತು ಆಸ್ಪತ್ರೆ ವೈದ್ಯರು ಮಾಧ್ಯಮದ ಜೊತೆ ಪ್ರತಿಕ್ರಿಯಿಸಿ, ನಾವು ಅವರಿಗೆ ಚಿಕಿತ್ಸೆ ನೀಡಲು ನಿರಾಕರಿಸಿಲ್ಲ. ಅವರು ರೋಗಿಯನ್ನ ಅಡ್ಮಿಟ್ ಮಾಡುವ ಮೊದಲೇ ಕರೆದುಕೊಂಡು ಹೋದರು. ನಮ್ಮ ಬಳಿ ಸಿಸಿಟಿವಿ ದೃಶ್ಯಗಳಿವೆ. ವಾರ್ಡ್ ಬಾಯ್ ಅವರನ್ನು ಎಮರ್ಜೆನ್ಸಿ ವಾರ್ಡ್‍ಗೆ ಕರೆದುಕೊಂಡು ಹೋಗಿದ್ದ. ಆದ್ರೆ ಕುಟುಂಬಸ್ಥರು ತಾವಾಗೇ ರೋಗಿಯನ್ನ ಕರೆದುಕೊಂಡು ಹೋದ್ರು ಎಂದು ಹೇಳಿದ್ದಾರೆ.

    ಆಧಾರ್ ಕಾರ್ಡ್ ಗಾಗಿ ಇಲ್ಲಿಯವರೆಗೆ ನಾವು ಯಾವುದೇ ಚಿಕಿತ್ಸೆ ನಿರಾಕರಿಸಿಲ್ಲ. ಚಿಕಿತ್ಸೆಗೆ ಆಧಾರ್ ಕಾರ್ಡ್ ಬೇಕಿಲ್ಲ. ಆದ್ರೆ ಡಾಕ್ಯುಮೆಂಟೇಷನ್‍ಗಾಗಿ ಆಧಾರ್ ಕಾರ್ಡ್ ಬೇಕೆ ಬೇಕು ಅಂತ ಹೇಳಿದ್ದಾರೆ.

  • ಕರ್ನಾಟಕದಲ್ಲಿ ದೇವರ ದರ್ಶನಕ್ಕೆ ಆಧಾರ್ ಕಡ್ಡಾಯ!

    ಕರ್ನಾಟಕದಲ್ಲಿ ದೇವರ ದರ್ಶನಕ್ಕೆ ಆಧಾರ್ ಕಡ್ಡಾಯ!

    ಬೆಂಗಳೂರು: ಉತ್ತರಾಖಂಡ್‍ನ ಬದ್ರಿನಾಥ್, ಕೇದಾರ್‍ನಾಥ್, ಗಂಗೋತ್ರಿ ಮತ್ತು ಯಮುನೋತ್ರಿ ತೀರ್ಥ ಯಾತ್ರೆಗೆ ಹೋಗುವ ಯಾತ್ರಿಗಳಿಗೆ ಕರ್ನಾಟಕ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಯಾತ್ರಿಗಳಿಗೆಂದು ನೀಡಲಾಗುವ 20,000 ರೂ. ಸಹಾಯಧನದ ದುರ್ಬಳಕೆ ಆಗದೇ ಇರಲು ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.

    ಆಗಸ್ಟ್ 17 ರಂದು ಚಾರ್ ಧಾಮ್ ಯಾತ್ರಿಗಳಿಗೆ ನೀಡಲಾಗುವ ಸಬ್ಸಿಡಿ ಬಗ್ಗೆ ಮಾರ್ಗಸೂಚಿಯನ್ನು ಸರ್ಕಾರ ಬಿಡುಗಡೆಗೊಳಿಸಿದ್ದು, ಮಾರ್ಗಸೂಚಿಯಲ್ಲಿ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿರುವ ಅಂಶವನ್ನು ಸೇರಿಸಲಾಗಿದೆ.

    ಪ್ರತಿ ವರ್ಷ 1000-1500 ರಾಜ್ಯದ ನಿವಾಸಿಗಳು ಸಬ್ಸಿಡಿ ಪಡೆದುಕೊಳುತ್ತಿದ್ದಾರೆ. ಆದರೆ ಈ ವರ್ಷ ಯಾತ್ರಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ. ಸಬ್ಸಿಡಿಯ ಹಣವನ್ನು ದುರ್ಬಳಕೆಯನ್ನು ತಡೆಗಟ್ಟಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗಿದೆ ಎಂದು ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿ ಹೇಳಿದ್ದಾರೆ.

    2014ರಲ್ಲಿ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಮಧ್ಯಮ ವರ್ಗ ಮತ್ತು ಬಡವರಿಗೆ ಸಹಾಯವಾಗಲೆಂದು ಈ ಸಬ್ಸಿಡಿಯನ್ನು ತಂದಿತ್ತು. ಈ ಹಿಂದೆ ಬಿಜೆಪಿ ಸರ್ಕಾರ ಮಾನಸ ಸರೋವರ ಯಾತ್ರಿಗಳಿಗೆ 30,000 ಸಬ್ಸಿಡಿಯನ್ನು ಘೋಷಿಸಿತ್ತು.

    ಇದನ್ನೂ ಓದಿ: ಜಸ್ಟ್ 1 ನಿಮಿಷದಲ್ಲಿ ಪಾನ್ ಕಾರ್ಡ್ ಗೆ ಆಧಾರ್ ನಂಬರ್ ಸೇರಿಸುವುದು ಹೇಗೆ?

  • ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ದಿದ್ರೆ ಸಿಮ್ ಸಿಗಲ್ಲ!

    ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ದಿದ್ರೆ ಸಿಮ್ ಸಿಗಲ್ಲ!

    ನವದೆಹಲಿ: ನಿಮ್ಮ ಬಳಿ ಆಧಾರ್ ಕಾರ್ಡ್ ಇಲ್ಲವೆಂದಲ್ಲಿ ಇನ್ನು ಮುಂದೆ ಮೊಬೈಲ್ ಸಿಮ್ ಕಾರ್ಡ್ ಸಿಗಲ್ಲ.

    ಹೌದು. ಈಗಾಗಲೇ ಆದಾಯ ತೆರಿಗೆ ಲೆಕ್ಕಪತ್ರ(ಐಟಿ ರಿಟರ್ನ್ಸ್) ಸಲ್ಲಿಸುವ ವೇಳೆ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ಸಲ್ಲಿಸಬೇಕೆಂದು ಹೇಳಿರುವ ಕೇಂದ್ರ ಸರ್ಕಾರ ಇದೀಗ ಮೊಬೈಲ್ ಸಿಮ್ ಪಡೆಯಲು ಕೂಡ ಆಧಾರ್ ಕಾರ್ಡ್ ಕಡ್ಡಾಯ ಮಾಡಲು ಮುಂದಾಗಿದೆ.

    ಈ ಸಂಬಂಧ ಟೆಲಿಕಾಂ ಇಲಾಖೆ ಎಲ್ಲಾ ಟೆಲಿಕಾಂ ಕಂಪೆನಿಗಳಿಗೂ ನೋಟಿಸ್ ಕಳುಹಿಸಿದ್ದು, ಮೊಬೈಲ್ ಚಂದಾದಾರರ ಸಿಮ್ ಕಾರ್ಡ್‍ಗಳು ಅವರ ಆಧಾರ್ ನಂಬರ್ ಜೊತೆ ಲಿಂಕ್ ಆಗಿದೆಯೋ ಅಥವಾ ಇಲ್ಲವೋ ಎಂಬುವುದನ್ನು ಖಚಿತಪಡಿಸಿಕೊಳ್ಳಲು ಸೂಚಿಸಿದೆ. ಮಾತ್ರವಲ್ಲದೇ ಈ ಪ್ರಕ್ರಿಯೆ ವರ್ಷದೊಳಗೆ ಪೂರ್ಣಗೊಳಿಸಬೇಕು ಅಂತಾ ಇಲಾಖೆ ತಿಳಿಸಿದೆ.

    ಈ ಹಿನ್ನೆಲೆಯಲ್ಲಿ ಟೆಲಿಕಾಂ ಕಂಪನಿಗಳು ಪ್ರಿಪೇಯ್ಡ್ ಮತ್ತು ಪೋಸ್ಟ್ ಪೇಯ್ಡ್ ಎಲ್ಲಾ ಗ್ರಾಹಕರ ದಾಖಲೆಗಳನ್ನು ಆಧಾರ್ ಕಾರ್ಡ್ ಇ- ನಿಮ್ಮ ಗ್ರಾಹಕರನ್ನು ಅರಿಯಿರಿ(ಕೆವೈಸಿ) ಮೂಲಕ ಮರುಪರಿಶೀಲನೆ ಮಾಡಲಿವೆ.

    ಟೆಲಿಕಾಂ ಕಂಪನಿಗಳು ಗ್ರಾಹಕರಿಗೆ ವೆರಿಫಿಕೇಶನ್ ಕೋಡ್ ನ್ನು ಕಳುಹಿಸಲಿವೆ. ಭವಿಷ್ಯದಲ್ಲಿ ವ್ಯಕ್ತಿಯ ಗುರುತು ಪತ್ತೆಗೆ ಆಧಾರ್ ಕಾರ್ಡ್ ಏಕೈಕ ಸಾಧನವಾಗಲಿದೆ ಅಂತಾ ಲೋಕಸಭೆಯಲ್ಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದರು.

    ಪಾನ್ ಕಾರ್ಡ್, ಐಟಿ ರಿಟರ್ನ್ಸ್ ಗೂ ಆಧಾರ್ ಕಡ್ಡಾಯ: ಕಳೆದ ಮಂಗಳವಾರವಷ್ಟೇ ಸಂಸತ್ತಿನಲ್ಲಿ ಚರ್ಚೆಯಾದ ಹಣಕಾಸು ಮಸೂದೆಯಲ್ಲಿ ತಿದ್ದುಪಡಿ ತಂದು ಆಧಾರ್ ಕಡ್ಡಾಯ ಎಂಬ ಅಂಶವನ್ನು ಕೇಂದ್ರ ಸರ್ಕಾರ ಸೇರಿಸಿತ್ತು. ಜುಲೈ 1ರಿಂದ ಈ ನಿಯಮ ಜಾರಿಗೆ ಬರಲಿದೆ ಅಂತಾ ಹೇಳಲಾಗಿದೆ.

    ದೇಶದಲ್ಲಿ ಮೊದಲ ಬಾರಿಗೆ ರಿಲಯನ್ಸ್ ಜಿಯೋ ಕಂಪೆನಿ ಆಧಾರ್ ಕಾರ್ಡ್ ಮೂಲಕ ಗ್ರಾಹಕರಿಗೆ ಸಿಮ್ ಕಾರ್ಡನ್ನು ಕೆಲವೇ ನಿಮಿಷಗಳಲ್ಲಿ ವಿತರಣೆ ಮಾಡಿತ್ತು. ಗ್ರಾಹಕರು ಬೆರಳಚ್ಚು ಓತ್ತಿದಾಗಲೇ ಆಧಾರ್ ದಾಖಲೆಗಳು ಸ್ಕ್ರೀನ್‍ನಲ್ಲಿ ಕಾಣುತಿತ್ತು.