Tag: Adam Gilchrist

  • ಯುವಿ 6,6,6,6,6,6 ಬಳಿಕ ಬ್ಯಾಟ್ ಪರಿಶೀಲಿಸಿದ್ದ ರೆಫರಿ

    ಯುವಿ 6,6,6,6,6,6 ಬಳಿಕ ಬ್ಯಾಟ್ ಪರಿಶೀಲಿಸಿದ್ದ ರೆಫರಿ

    ಮುಂಬೈ: ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್ ಕಂಡ ಅತ್ಯುತ್ತಮ ಸ್ಫೋಟಕ ಆಟಗಾರರಲ್ಲಿ ಒಬ್ಬರು. ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದುಕೊಡುವ ಸಾಮರ್ಥ್ಯ ಹೊಂದಿದ್ದ ಯುವಿ, ಟೀಂ ಇಂಡಿಯಾ 2007 ಟಿ20 ಮತ್ತು 2011ರ ಏಕದಿನ ವಿಶ್ವಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದು. ಸದ್ಯ ಲಾಕ್‍ಡೌನ್‍ನಿಂದ ಮನೆಯಲ್ಲೇ ಉಳಿದಿರುವ ಯುವಿ, ಕ್ರಿಕೆಟ್ ವೃತ್ತಿ ಜೀವನದ ಕುರಿತು ಕೆಲ ವಿಶೇಷ ಮಾಹಿತಿಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.

    ಸದಾ ಇತರೇ ಆಟಗಾರರೊಂದಿಗೆ ಹಾಸ್ಯಮಯವಾಗಿ ಕಾಣಿಸಿಕೊಳ್ಳುತ್ತಿದ್ದ ಯುವರಾಜ್ ಸಿಂಗ್, ಎದುರಾಳಿ ಬೌಲರ್ ಗಳನ್ನು ಅಷ್ಟೇ ಸುಲಲಿತಾಗಿ ದಂಡಿಸುತ್ತಿದ್ದರು. 2007ರಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಆಂಡ್ರ್ಯೂ ಫ್ಲಿಂಟಾಫ್ ಮಾತಿಗೆ ತಿರುಗೇಟು ನೀಡಿದ್ದ ಯುವರಾಜ್ ಸಿಂಗ್, ಸ್ಟುವರ್ಟ್ ಬ್ರಾಡ್ ಓವರಿನ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ನಡೆದ ಘಟನೆ ಬಳಿಕ ನಡೆದ ಕೆಲ ಆಸ್ತಕಿಕಾರ ಮಾಹಿತಿಯನ್ನು ಯುವಿ ತಿಳಿಸಿದ್ದಾರೆ.

    2007ರ ಸೆ.10 ರಂದು ನಡೆದಿದ್ದ ಪಂದ್ಯದ ಇನ್ನಿಂಗ್ಸ್ ನ 18 ಓವರ್ ಎಸೆದ ಫ್ಲಿಂಟಾಫ್ ಬೌಲಿಂಗ್‍ನಲ್ಲಿ ಯುವಿ 2 ಬೌಂಡರಿ ಸಿಡಿಸಿದ್ದರು. ಆದರೆ ಓವರಿನ ಅಂತಿಮ ಎಸೆತದಲ್ಲಿ ನಾನ್ ಸ್ಟ್ರೈಕ್‍ನಲ್ಲಿದ್ದ ಯುವರಾಜ್ ಸಿಂಗ್ ಅವರನ್ನು ಫ್ಲಿಂಟಾಫ್ ಮಾತಿನ ಚಾಟಿ ಬೀಸಿ ಕೆರಳಿಸಿದ್ದರು. ಆನ್‍ಫೀಲ್ಡ್ ನಲ್ಲೇ ಫ್ಲಿಂಟಾಫ್ ವಿರುದ್ಧ ತಿರುಗಿಬಿದಿದ್ದ ಯುವಿ ಬ್ಯಾಟ್ ತೋರಿಸಿ ಮುನ್ನುಗಿದ್ದರು. ಆದರೆ ಈ ವೇಳೆಗೆ ಇತರೇ ಆಟಗಾರರು, ಅಂಪೈರ್ ನಡುವೆ ಬಂದು ಇಬ್ಬರ ಜಗಳ ಬಿಡಿಸುವ ಕಾರ್ಯ ಮಾಡಿದರು.

    ಫ್ಲಿಂಟಾಫ್ ಮಾತಿನ ಚಾಟಿಯಿಂದ ಸಿಟ್ಟಿಗೆದ್ದ ಯುವಿ 19ನೇ ಓವರ್ ಎಸೆದ ಸ್ಟುವರ್ಟ್ ಬ್ರಾಡ್ ಬೌಲಿಂಗ್‍ನಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದರು. ಅಂದು ತಮಗೆ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವ ಯೋಚನೆ ಇರಲಿಲ್ಲ. ಆದರೆ ಫ್ಲಿಂಟಾಪ್ ತೋರಿದ ವರ್ತನೆಯಿಂದ ಕೋಪಗೊಂಡು ಎಲ್ಲಾ ಎಸೆತಗಳನ್ನು ಬೌಂಡರಿ ಗೆರೆದಾಡಿ ಹೊಡೆಯಲು ಯತ್ನಿಸಿದೆ. ಅಲ್ಲದೇ 6 ಸಿಕ್ಸರ್ ಸಿಡಿಸಿದ ಬಳಿಕ ಪಂದ್ಯದ ಹಲವು ಅಚ್ಚರಿಯ ಘಟನೆಗಳು ನಡೆದವು. ಆಸ್ಟ್ರೇಲಿಯಾ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ 30 ಎಸೆತಗಳಲ್ಲಿ 70 ರನ್ ಸಿಡಿಸಿದ ಬಳಿಕ ವಿಕೆಟ್ ಕೀಪರ್ ಆಡಮ್ ಗಿಲ್‍ಕ್ರಿಸ್ಟ್ ಬ್ಯಾಟ್ ಕುರಿತು ಸಂಶಯ ವ್ಯಕ್ತಪಡಿಸಿದ್ದರು ಎಂದು ಯುವಿ ಹೇಳಿದ್ದಾರೆ.

    ಅಂದು ತಮ್ಮ ಬಳಿಗೆ ಆಗಮಿಸಿದ್ದ ಆಸ್ಟ್ರೇಲಿಯಾ ತಂಡದ ಕೋಚ್, ನಿಮ್ಮ ಬ್ಯಾಟ್ ಹಿಂದೆ ಫೈಬರ್ ಇದೆಯೇ? ಅಲ್ಲದೇ ಅದು ಕಾನೂನು ಬದ್ಧವಾಗಿದೆಯಾ ಎಂದು ಪ್ರಶ್ನಿಸಿದ್ದರು. ಆಗ ಪಂದ್ಯದ ರೆಫರಿಗೆ ಬ್ಯಾಟ್ ಪರೀಕ್ಷಿಸಲು ತಿಳಿಸಿದ್ದೆ. ಗಿಲ್‍ಕ್ರಿಸ್ಟ್ ಕೂಡ ಘಟನೆ ಬಳಿಕ ಇಂತಹ ಬ್ಯಾಟ್‍ಗಳನ್ನು ಎಲ್ಲಿ? ಯಾರು? ತಯಾರಿಸಿಕೊಡುತ್ತಾರೆ ಎಂದು ತಮ್ಮ ಬಳಿ ಕೇಳಿದ್ದರು ಎಂದು ತಿಳಿಸಿದ್ದಾರೆ. 2007 ಹಾಗೂ 2011ರ ವಿಶ್ವಕಪ್‍ನಲ್ಲಿ ನಾನು ಆಡಿದ್ದ ಎರಡು ಬ್ಯಾಟ್‍ಗಳು ನನಗೆ ವಿಶೇಷ ಎಂದು ಯುವರಾಜ್ ತಿಳಿಸಿದ್ದಾರೆ.

  • 2009ರಲ್ಲಿ ಗಿಲ್ಲಿ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ: ಪ್ರಗ್ಯಾನ್ ಓಜಾ

    2009ರಲ್ಲಿ ಗಿಲ್ಲಿ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ: ಪ್ರಗ್ಯಾನ್ ಓಜಾ

    – ಐಪಿಎಲ್ 2ನೇ ಆವೃತ್ತಿಯ ಫೈನಲ್ ಕಥೆ ಬಿಚ್ಚಿಟ್ಟ ಓಜಾ

    ನವದೆಹಲಿ: 2009ರ ಐಪಿಎಲ್ ಸಮಯದಲ್ಲಿ ಅಂದು ಡೆಕ್ಕನ್ ಚಾರ್ಜರ್ಸ್ ತಂಡದ ನಾಯಕನಾಗಿದ್ದ ಆಸ್ಟ್ರೇಲಿಯಾದ ಮಾಜಿ ಆಟಗಾರ ಆಡಮ್ ಗಿಲ್‍ಕ್ರಿಸ್ಟ್ ಹೇಳಿದ ಮಾತನ್ನು ಮರೆಯಲು ಸಾಧ್ಯವಿಲ್ಲ ಎಂದು ಭಾರತದ ಮಾಜಿ ಆಟಗಾರ ಪ್ರಗ್ಯಾನ್ ಓಜಾ ಹೇಳಿದ್ದಾರೆ.

    ಐಪಿಎಲ್‍ನ ಮೊದಲ ಆವೃತ್ತಿಯಲ್ಲಿ ಅಂಕಪಟ್ಟಿಯ ಕೊನೆಯಲ್ಲಿ ಇದ್ದ ಡೆಕ್ಕನ್ ಚಾರ್ಜರ್ಸ್ ತಂಡ, ಐಪಿಎಲ್ ಎರಡನೇ ಅವೃತ್ತಿಯಲ್ಲಿ ಟ್ರೋಫಿ ಎತ್ತಿಹಿಡಿದು ಎಲ್ಲರನ್ನು ಹುಬ್ಬೇರುವಂತೆ ಮಾಡಿತ್ತು. ಬೆಂಗಳೂರು ತಂಡವನ್ನು ಬಗ್ಗುಬಡಿದ ಡೆಕ್ಕನ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಆದರೆ ಅಂದು ತಂಡ ಬಹಳ ಕಷ್ಟದ ಪರಿಸ್ಥಿತಿಯಲ್ಲಿ ಪಂದ್ಯಗಳನ್ನು ಆಡಿತ್ತು ಎಂದು ಅಂದು ತಂಡದಲ್ಲಿದ್ದ ಆಟಗಾರ ಪ್ರಗ್ಯಾನ್ ಓಜಾ ಹೇಳಿದ್ದಾರೆ.

    ಈ ವಿಚಾರವಾಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಓಜಾ, ನಮ್ಮ ತಂಡ ಐಪಿಎಲ್ ಒಂದನೇ ಅವೃತ್ತಿಯಲ್ಲಿ ಕೆಟ್ಟ ಪ್ರದರ್ಶನ ತೋರಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿತ್ತು. ಈ ಕಾರಣದಿಂದ ನಮ್ಮ ತಂಡಕ್ಕೆ ಸ್ಪಾನ್ಸರ್ ಮಾಡಲು ಯಾರು ಮುಂದೆ ಬಂದಿರಲಿಲ್ಲ. ನಮಗೆ ಆಡಲು ತಂಡದಲ್ಲಿ ಬಟ್ಟೆ ಮತ್ತು ಕಿಟ್‍ಗಳ ಬಹಳ ತೊಂದರೆಯಾಗಿತ್ತು. ಆದರೂ ನಾವು ಪಂದ್ಯಗಳನ್ನು ಆಡಲು ಸೌಥ್ ಆಫ್ರಿಕಾಗೆ ಹೋಗಿದ್ದವು ಎಂದು ಹೇಳಿದ್ದಾರೆ.

    ಅಂದು ಸೌಥ್ ಆಫ್ರಿಕಾ ತಲುಪಿದ ನಮಗೆ ತಂಡದ ನಾಯಕ ಆಡಮ್ ಗಿಲ್‍ಕ್ರಿಸ್ಟ್ ಒಂದು ಮಾತನ್ನು ಹೇಳಿದ್ದರು. ಆದನ್ನು ನಾವು ಎಂದಿಗೂ ಮರೆಯುವುದಿಲ್ಲ. ಅಂದು ನಮ್ಮ ಬಳಿ ಬಂದ ಗಿಲ್ಲಿ, ಒಂದು ಬಾರಿ ನಾವು ಚಾಂಪಿಯನ್ ಆದರೆ ಈಗ ತಂಡದಲ್ಲಿ ಇರುವ ತೊಂದರೆಗಳು ನಮಗೆ ಕಾಣಿಸುವುದಿಲ್ಲ. ಒಂದು ಬಾರಿ ಕಪ್ ಗೆದ್ದರೆ ಈ ಎಲ್ಲವೂ ಬದಲಾಗುತ್ತವೆ ಎಂದು ನಮ್ಮನ್ನು ಹುರಿದುಂಬಿಸಿದ್ದರು ಎಂದು ಓಜಾ ತಿಳಿಸಿದ್ದಾರೆ.

    2009ರಲ್ಲಿ ಸೌಥ್ ಅಫ್ರಿಕಾದಲ್ಲಿ ನಡೆದ ಐಪಿಎಲ್‍ನ ಎರಡನೇ ಆವೃತ್ತಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಉತ್ತಮ ಲಯದಲ್ಲಿ ಇತ್ತು. ಆಡಿದ 14 ಪಂದ್ಯಗಳಲ್ಲಿ 10 ಪಂದ್ಯಗಳನ್ನು ಗೆದ್ದಿದ್ದ ಗಿಲ್‍ಕ್ರಿಸ್ಟ್ ನೇತೃತ್ವದ ತಂಡ 20 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಇತ್ತು. ಅಂದು ತಂಡದಲ್ಲಿದ್ದ ಹರ್ಷಲ್ ಗಿಬ್ಸ್, ಆಂಡ್ರ್ಯೂ ಸೈಮಂಡ್ಸ್ ಮತ್ತು ಪ್ರಗ್ಯಾನ್ ಓಜಾ ಉತ್ತಮ ಲಯದಲ್ಲಿ ಇದ್ದರು.

    ಸರಣಿ ಉದ್ದಕ್ಕೂ ಅತ್ಯುತ್ತಮವಾಗಿ ಆಡಿಕೊಂಡು ಬಂದಿದ್ದ ಡೆಕ್ಕನ್‍ಗೆ ಸೆಮಿಪೈನಲ್‍ನಲ್ಲಿ ಡೆಲ್ಲಿ ತಂಡ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು 6 ವಿಕೆಟ್ ಅಂತರದಲ್ಲಿ ಗೆದ್ದ ಗಿಲ್ಲಿಪಡೆಗೆ ಫೈನಲ್‍ನಲ್ಲಿ ಬೆಂಗಳೂರು ತಂಡ ಎದುರಾಳಿಯಾಗಿತ್ತು. ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಕ್ಕನ್ ಗಿಬ್ಸ್ ಅವರ ಅರ್ಧಶತಕದ ಸಲುವಾಗಿ 143 ರನ್ ಗಳನ್ನು ಸೇರಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ಬೆಂಗಳೂರು ತಂಡ ಓಜಾ ಅವರ ಮಾರಕ ದಾಳಿಗೆ ನಲುಗಿ 137 ರನ್‍ಗೆ ಆಟ ಮುಗಿಸಿತ್ತು. ಈ ಮೂಲಕ 6 ರನ್‍ಗಳ ಅಂತರದಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಈ ಪಂದ್ಯದಲ್ಲಿ ಓಜಾ ಮೂರು ವಿಕೆಟ್ ಪಡೆದಿದ್ದರು.

  • ಹರ್ಭಜನ್ ನನಗೆ ಶಾಪದಂತೆ ಕಾಡಿದ್ದರು- ಗಿಲ್‍ಕ್ರಿಸ್ಟ್

    ಹರ್ಭಜನ್ ನನಗೆ ಶಾಪದಂತೆ ಕಾಡಿದ್ದರು- ಗಿಲ್‍ಕ್ರಿಸ್ಟ್

    ನವದೆಹಲಿ: ಟೀಂ ಇಂಡಿಯಾದ ಮಾಜಿ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ನನ್ನನ್ನು ಶಾಪದಂತೆ ಕಾಡಿದರು ಎಂದು ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‍ಮನ್, ವಿಕೆಟ್ ಕೀಪರ್ ಅಡಮ್ ಗಿಲ್‍ಕ್ರಿಸ್ಟ್ ಹೇಳಿದ್ದಾರೆ.

    ಆಡಮ್ ಗಿಲ್‍ಕ್ರಿಸ್ಟ್ ನವೆಂಬರ್ 14ರಂದು ತಮ್ಮ 48ನೇ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನಾ ದಿನವಾದ ಇಂದು ಆಸ್ಟ್ರೇಲಿಯಾ ಕ್ರಿಕೆಟ್ ವೆಬ್‍ಸೈಟ್‍ಗೆ ನೀಡಿದ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ಯಾವಾಗಲೂ ಎದುರಿಸಲು ತೊಂದರೆ ಅನುಭವಿಸುತ್ತಿದ್ದ ಬೌಲರ್ ಗಳಲ್ಲಿ ಹರ್ಭಜನ್ ಸಿಂಗ್ ಕೂಡ ಒಬ್ಬರು ಎಂದಿರುವ ಗಿಲ್‍ಕ್ರಿಸ್ಟ್ ಹರ್ಭಜನ್ ತಮ್ಮ ವೃತ್ತಿಜೀವನದ ಶಾಪವೆಂದು ಬಣ್ಣಿಸಿದ್ದಾರೆ.

    ಗಿಲ್‍ಕ್ರಿಸ್ಟ್ 2001ರಲ್ಲಿ ಭಾರತದ ವಿರುದ್ಧದ ಸರಣಿಯನ್ನು ನೆನಪಿಸಿಕೊಂಡು, ಆಸ್ಟ್ರೇಲಿಯಾ ತಂಡವು ಸತತ 15 ಟೆಸ್ಟ್ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತದ ವಿರುದ್ಧ ಆಡಲು ಮುಂದಾಗಿತ್ತು. ಮುಂಬೈನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಗೆದ್ದಿತ್ತು. ಆದರೆ ಮುಂದಿನ ಎರಡು ಟೆಸ್ಟ್ ಪಂದ್ಯಗಳಲ್ಲಿ ಕೆಟ್ಟ ರೀತಿಯಲ್ಲಿ ಸೋಲಬೇಕಾಯಿತು. ಇದಕ್ಕೆ ದೊಡ್ಡ ಕಾರಣ ಭಾರತದ ಮೊದಲ ಟೆಸ್ಟ್ ಹ್ಯಾಟ್ರಿಕ್ ಸೇರಿದಂತೆ ಮೂರು ಪಂದ್ಯಗಳಲ್ಲಿ 32 ವಿಕೆಟ್ ಪಡೆದ ಭಾರತದ ಸ್ಪಿನ್ನರ್ ಹರ್ಭಜನ್ ಸಿಂಗ್ ಎಂದು ತಿಳಿಸಿದ್ದಾರೆ.

    ಈಡನ್ ಗಾರ್ಡನ್‍ನಲ್ಲಿ 18 ವರ್ಷಗಳ ಹಿಂದೆ ನಡೆದ ಈ ಐತಿಹಾಸಿಕ ಟೆಸ್ಟ್ ಪಂದ್ಯವು ಅನೇಕ ವಿಶೇಷತೆ ಹೊಂದಿದೆ. ಮುಂಬೈನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಗಿಲ್‍ಕ್ರಿಸ್ಟ್ ಶತಕ ಬಾರಿಸಿದ್ದರು. ಆದರೆ ಮುಂದಿನ ಎರಡು ಪಂದ್ಯಗಳಲ್ಲಿ ಅವರು ವಿಶೇಷವಾದ ಸಾಧನೆ ಮಾಡಲು ಸಾಧ್ಯವಾಗಲಿಲ್ಲ. ಏಕೆಂದರೆ ಪ್ರತಿ ಬಾರಿಯೂ ಅವರು ಹರ್ಭಜನ್ ಸಿಂಗ್‍ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‍ಗೆ ತೆರಳುತ್ತಿದ್ದರು.

    ಆ ಟೆಸ್ಟ್ ಸರಣಿಯಲ್ಲಿ ಹರ್ಭಜನ್ ಸಿಂಗ್ ಕಾಡಿದರು. ಅಷ್ಟೇ ಅಲ್ಲದೆ ನನ್ನ ವೃತ್ತಿ ಜೀವನದುದ್ದಕ್ಕೂ ಹರ್ಭಜನ್ ನನಗೆ ಶಾಪವಾಗಿದರು. ನನ್ನ ದೃಷ್ಟಿಯಲ್ಲಿ, ಹರ್ಭಜನ್ ಸಿಂಗ್ ಮತ್ತು ಶ್ರೀಲಂಕಾದ ಮಾಜಿ ಸ್ಪಿನ್ನರ್ ಮುತ್ತಯ್ಯ ಮುರಳೀಧರನ್ ಅವರನ್ನು ಎದುರಿಸಲು ಹೆಚ್ಚು ಕಷ್ಟಪಟ್ಟಿದ್ದೇನೆ ಎಂದು ಗಿಲ್‍ಕ್ರಿಸ್ಟ್ ನೆನಪಿಸಿಕೊಂಡಿದ್ದಾರೆ.

    ಈಡನ್ ಗಾರ್ಡನ್ಸ್ ಟೆಸ್ಟ್ ವೇಳೆ ಆಸ್ಟ್ರೇಲಿಯಾ ತಂಡವು ಭಾರತದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಸಾಧಿಸಿತ್ತು. ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯವನ್ನು ಗೆದ್ದಿತ್ತು. ಹಾಗೆಯೇ ಈ ಪಂದ್ಯದಲ್ಲೂ ಅವರು ಭಾರತವನ್ನು ಸೋಲಿಸಲು ಮುಂದಾಗಿತ್ತು. ಮೊದಲ ಇನ್ನಿಂಗ್ಸ್‍ನಲ್ಲಿ ಆಸ್ಟ್ರೇಲಿಯಾ ತಂಡವು ನೀಡಿದ್ದ 445 ರನ್‍ಗಳ ಗುರಿ ಬೆನ್ನಟ್ಟಿದ್ದ ಸೌರವ್ ಗಂಗೂಲಿ ನೇತೃತ್ವದ ಭಾರತ ತಂಡವನ್ನು ಕೇವಲ 171 ರನ್ ಗಳಿಸಲು ಶಕ್ತವಾಗಿತ್ತು.

    ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಆರಂಭಿಕ ಜೋಡಿ ನಂತರ ವಿವಿಎಸ್ ಲಕ್ಷ್ಮಣ್ ಮತ್ತು ರಾಹುಲ್ ದ್ರಾವಿಡ್ ಅದ್ಭುತ ಬ್ಯಾಟಿಂಗ್ ಮಾಡಿದರು. ಇವರಿಬ್ಬರು ಎರಡನೇ ವಿಕೆಟಿಗೆ 376 ರನ್‍ಗಳ ದಾಖಲೆಯ ಜೊತೆಯಾಟವಾಡಿ ಭಾರತ ತಂಡಕ್ಕೆ ಐತಿಹಾಸಿಕ ಜಯ ತಂದುಕೊಟ್ಟಿದ್ದರು. ಲಕ್ಷ್ಮಣ್ 281 ರನ್ ಹೊಡೆಯುವ ಮೂಲಕ ಭಾರತದ ಪರ ಟೆಸ್ಟ್ ಕ್ರಿಕೆಟಿನಲ್ಲಿ ಅತಿ ಹೆಚ್ಚು ರನ್ ಹೊಡೆದ ಆಟಗಾರ ಎನ್ನುವ ದಾಖಲೆ ಬರೆದಿದ್ದರು. 2004ರಲ್ಲಿ ವೀರೇಂದ್ರ ಸೆಹ್ವಾಗ್ ಪಾಕಿಸ್ತಾನ ವಿರುದ್ಧ ಮುಲ್ತಾನಿನಲ್ಲಿ ನಡೆದ ಪಂದ್ಯದಲ್ಲಿ ತ್ರಿಶಕತ ಸಿಡಿಸಿ ವಿವಿಎಸ್ ಲಕ್ಷ್ಮಣ್ ದಾಖಲೆ ಮುರಿದಿದ್ದರು.

  • ‘ಶಾರ್ಟ್ ರನ್’ – ಧೋನಿ ತಪ್ಪಿಲ್ಲ: ಅಭಿಮಾನಿಯ ಡೌಟ್ ಕ್ಲಿಯರ್ ಮಾಡಿದ ಗಿಲ್‍ಕ್ರಿಸ್ಟ್

    ‘ಶಾರ್ಟ್ ರನ್’ – ಧೋನಿ ತಪ್ಪಿಲ್ಲ: ಅಭಿಮಾನಿಯ ಡೌಟ್ ಕ್ಲಿಯರ್ ಮಾಡಿದ ಗಿಲ್‍ಕ್ರಿಸ್ಟ್

    ಅಡಿಲೇಡ್: ಆಸ್ಟ್ರೇಲಿಯಾ ವಿರುದ್ಧದ 2ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಜಯ ಪಡೆದು ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ. ಆದರೆ ಪಂದ್ಯದ ವೇಳೆ ಧೋನಿ ರನ್ ಪೂರ್ಣಗೊಳಿಸದೇ ಇರುವುದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ಬೆನ್ನಲ್ಲೇ ಆಸೀಸ್ ಮಾಜಿ ಆಟಗಾರ, ವಿಕೆಟ್ ಕೀಪರ್ ಗಿಲ್‍ಕ್ರಿಸ್ಟ್ ಘಟನೆಯಲ್ಲಿ ಧೋನಿ ನಿಯಮವನ್ನು ಉಲ್ಲಂಘಿಸಿಲ್ಲ ಎಂದು ತಿಳಿಸಿದ್ದಾರೆ.

    ಧೋನಿ ಶಾರ್ಟ್ ರನ್ ಕುರಿತು ಅಭಿಮಾನಿಯೊಬ್ಬರು ಟ್ವೀಟ್ ಮಾಡಿ ಗಿಲ್‍ಕ್ರಿಸ್ಟ್ ಅಭಿಪ್ರಾಯವನ್ನು ಕೇಳಿದ್ದು, ಈ ಟ್ವೀಟ್‍ಗೆ ಗಿಲ್‍ಕ್ರಿಸ್ಟ್ ಪ್ರತಿಕ್ರಿಯೆ ನೀಡಿದ್ದಾರೆ. ಧೋನಿ ನಿಯಮಗಳ ವಿರುದ್ಧ ಏನೂ ಮಾಡಿಲ್ಲ. ಇದು ಸಾಮಾನ್ಯವಾಗಿ ಕಂಡುಬಾರದ ಸಂದರ್ಭ ಎಂದು ಹೇಳಿ ಧನ್ಯವಾದ ತಿಳಿಸಿದ್ದಾರೆ.

    ಧೋನಿ ಶಾರ್ಟ್ ರನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಗಿಲ್‍ಕ್ರಿಸ್ಟ್ ಅವರನ್ನು ಪ್ರಶ್ನಿಸಿರುವ ದರ್ಶಕ್ ಪಟೇಲ್ ಎಂಬವರು, ಪಂದ್ಯದಲ್ಲಿ ಬ್ಯಾಟ್ಸ್ ಮನ್ 2ನೇ ರನ್ ಅಥವಾ ಅದಕ್ಕಿಂತ ಹೆಚ್ಚಿನ ರನ್ ಪಡೆಯುವ ಸಂದರ್ಭದಲ್ಲಿ ಶಾರ್ಟ್ ರನ್ ಸಂಭವಿಸಿದರೆ ಮಾತ್ರ ಅದನ್ನು ಪರಿಗಣಿಸಲಾಗುತ್ತದೆ. ಒಮ್ಮೆ ಬ್ಯಾಟ್ಸ್ ಮನ್ ಮೊದಲ ರನ್ ಪೂರ್ಣಗೊಳಿಸಿದ ವೇಳೆ ಬಳಿಕ ಫೀಲ್ಡಿಂಗ್ ತಂಡ ಏನನ್ನು ಮಾಡಬಾರದು ಎಂದು ನಿರ್ಧರಿಸಿದರೆ ಅದು ರನ್ ಆಗುತ್ತದೆ ಅಲ್ಲವೇ? ಇದನ್ನು ಬಗೆಹರಿಸಿ ಎಂದು ಗಿಲ್‍ಕ್ರಿಸ್ಟ್ ಅವರಲ್ಲಿ ಕೇಳಿದ್ದರು.

    ನಡೆದಿದ್ದೇನು?
    ಅಡಿಲೇಡ್ ಏಕದಿನ ಪಂದ್ಯದ 45ನೇ ಓವರಿನಲ್ಲಿ ಧೋನಿ ಒಂದು ರನ್ ಪಡೆದು ಮುಂದಿನ ಓವರಿಗೆ ಬ್ಯಾಟಿಂಗ್ ಕಾಯ್ದುಕೊಳ್ಳಲು ನಿರ್ಧರಿಸಿದ್ದರು. ಆದರೆ ಈ ವೇಳೆ ರನ್ ಪೂರ್ಣಗೊಳಿಸದೆ ಕೆಲವೇ ಇಂಚುಗಳ ಅಂತರದಲ್ಲಿ ಮರಳಿ ಹಿಂದಕ್ಕೆ ತೆರಳಿದ್ದರು. ಧೋನಿ ಅವರ ಈ ಎಡವಟ್ಟನ್ನು ಅಂಪೈರ್ ಹಾಗೂ ಎದುರಾಳಿ ತಂಡದ ಆಟಗಾರರು ಕೂಡ ಗಮನಿಸಿರಲಿಲ್ಲ.

    ಪಂದ್ಯದ ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಹಲವರು, ತಂಡಕ್ಕೆ 18 ಎಸೆತಗಳಲ್ಲಿ 25ರನ್ ಬೇಕಿತ್ತು. ಒಂದೊಮ್ಮೆ ಧೋನಿ ಬ್ಯಾಟಿಂಗ್ ಸ್ಟ್ರೈಕ್ ಪಡೆಯದಿದ್ದರೆ, ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

    https://twitter.com/ALL_IN_ONE_MAN/status/1085528833183236096

    ನಿಯಮ ಏನು ಹೇಳುತ್ತೆ: ಮೆಲ್ಬರ್ನ್ ಕ್ರಿಕೆಟ್ ಕ್ಲಬ್(ಎಂಸಿಸಿ) ಕ್ರಿಕೆಟ್ ನಿಯಮವಾಳಿಯ (18.4.1) ಪ್ರಕಾರ ಆಟಗಾರ 2ನೇ ರನ್ ಪಡೆಯುವ ಅಥವಾ ಚೆಂಡು ಬೌಂಡರಿ ಗೆರೆದಾಟಿದೆ ಎಂದು ಭಾವಿಸಿ ರನ್ ಶಾಟ್ ರನ್ ಮಾಡಿದರೆ ಮಾತ್ರ ಅದನ್ನು ಅಂಪೈರ್ ಪರಿಗಣಿಸಬಹುದಾಗಿದೆ. ಆದರೆ ಧೋನಿ ಹಾಗೂ ದಿನೇಶ್ ಕಾರ್ತಿಕ್ ಇಬ್ಬರು 2ನೇ ರನ್ ಪಡೆಯಲು ಯತ್ನಿಸದಿರುವುದು ವಿಡಿಯೋದಲ್ಲಿ ಕಾಣಬಹುದಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv